ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ ಸೀರೆಯ ಸೆರಗಿನ ಮರೆಯಿಂದ ತನಗೆ ಕಂಡ ಅವಳ ದುಂಡಗಿನ ಬೆತ್ತಲೆ ಮೊಲೆಗಳು ನೆನಪಿಗೆ ಬಂದು, ಅವು ತನ್ನ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿಯೋ ಇಲ್ಲವೇ ತಾನು ಅವಳೆಡೆಗೆ ನೋಡುತ್ತಿದ್ದೇನೆ ಎಂಬ ಅರಿವು ಇದ್ದೂ ಬೇಕೆಂದೇ ತೋರಿಸಿದವುಗಳೋ ಎಂದುಕೊಳ್ಳುತ್ತ ಮೂಗಿನ ಹೊರಳೆಗಳನ್ನು ಅರಳಿಸಿದ. ಥತ್! ತನಗೇನಂತೆ, ತಾನು ಯಾರು-ದೇವಿ ಯಾರು! ಈ ಯಕಶ್ಚಿತಯಕಶ್ಚಿತ್ ಕೆಲಸದ ಹುಡುಗಿಯ ದೆಸೆಯಿಂದ ತಾನೇಕೆ ತನ್ನ ಮನಸ್ಸಿನ ಶಾಂತಿಯನ್ನು ಕೆಡಿಸಿಕೊಳ್ಳಬೇಕು? ಅವಳು ಬೇಕೆಂದೇ ತೋರಿಸಿರಬಹುದಾದರೂ ನಾಲ್ಕು ದಿನಗಳ ಮಾತಿಗೆಂದು ಈ ಹಳ್ಳಿಯ ಮನೆಗೆ ಬಂದ ತಾನು ಅವುಗಳ ಗೊಡವೆಗೆ ಹೋಗುವುದು ಅಷ್ಟರೊಳಗೇ ಇದೆ! ಥತ್ ಎಂದು ಇನ್ನೊಮ್ಮೆ ಎಂದುಕೊಂಡವನೇ ಮಂಚದ ಮೇಲೆ ಅಂಗಾತ ಬಿದ್ದಲ್ಲೇ ಕಣ್ಣು ತೆರೆದ. ತಲೆಯಲ್ಲಿ ಬಂದುದರ ವಿಚಾರ ಮರೆಯಲೆಂಬಂತೆ ಮಾಡಿನ ಹಂಚುಗಳ ಮೇಲೆ ಕಣ್ಣು ಹಾಯಿಸಿದ. ಕಟಕಟೆಯ ದಡಿಯ ಮೇಲಿಟ್ಟ ಕಾಚಿನ ಬುರುಡೆಯ ದೀಪ ಹಂಚುಗಳ ಮೇಲೆ ಚೆಲ್ಲಿದ ಅರ್ಧಚಕ್ರಾಕಾರದ ಬೆಳಕಿನಲ್ಲಿ ಏನನ್ನೋ ಹುಡುಕುವವನಂತೆ ಕಣ್ಣರಳಿಸಿ ನೋಡಿದ. ಹೆದರಿದ: ಇರಬಹುದೆ? ತನಗೆ ಮಧ್ಯಾಹ್ನ ಬಾಲ ಕಂಡಂತಾದ ಜಾಗದಲ್ಲೇ ಏನೋ ಹಳದಿ-ಕಪ್ಪು ಬಣ್ಣದ್ದು…?…ಅಲ್ಲ…ಅಲ್ಲ…ಬರಿಯ ಭ್ರಮೆ. ಮಧ್ಯಾಹ್ನ, ಅರೆನಿದ್ದೆಯಲ್ಲಿದ್ದವನ ಕಿವಿಗೆ ದೇವಿ ಹೆದರಿದ ದನಿಯಲ್ಲಿ “ಅಮ್ಮಾ ಆ ದಿನ ಇಲ್ಲಿ ಬಂದದ್ದೇ ಈವತ್ತು ಕೊಟ್ಟಿಗೆಯ ಮಾಡಿನ ರೀಪುಗಳಲ್ಲಿ ಕಂಡಂತಾಯ್ತು. ಹೊಟ್ಟೆ ಬಾಲಗಳಷ್ಟೇ ಕಣ್ಣಿಗೆ ಬಿದ್ದುವು. ತನ್ನ ಹೆಜ್ಜೆಯ ಸುಳಿವು ಹತ್ತಿದ ಕೂಡಲೇ ಸರ್ ಸರ್ರೆಂದು ಹರಿದು ಹೋಗುತ್ತ ಒಮ್ಮೆ ಪುಸ್ ಎಂದು ಸದ್ದೂ ಮಾಡಿತು” ಎಂದು ಚಿಕ್ಕಮ್ಮನಿಗೆ ಹೇಳಿದ್ದು ಕೇಳಿಸಿ ಎಚ್ಚರಾದವನು ಮಾಡಿನ ಹಂಚುಗಳಲ್ಲಿ ನೋಡಿದ ಹಲ್ಲಿಯ ಬಾಲಕ್ಕೋ ಇಲಿಯ ಬಾಲಕ್ಕೋ ಇಲ್ಲದ ಅರ್ಥ ಹಚ್ಚಿ ಹೆದರಿರಬೇಕು ತಾನು! ಇಲ್ಲದಿದ್ದರೂ ಈ ಹಿತ್ತಿಲಲ್ಲಿ ಹಾವಿನ ಹಾವಳಿ ಬಹಳ ಇದೆಯಂತೆ: ಆಗ ಪುರುಷೋತ್ತಮ ಹೇಳಿರಲಿಲ್ಲವೆ? ಪುರುಷೋತ್ತಮ, ಅವನ ತಾಯಿ ಇದಕ್ಕೆಲ್ಲ ಹಚ್ಚಿದ ಅರ್ಥ ಸರಿಯಾದದ್ದೇ? ನಂಬಲು ಒಲ್ಲದವನಂತೆ ತಲೆ ಕೊಡವಿದ: ಚಿಕ್ಕಪ್ಪ ದೇವಿಯರ ನಡುವೆ ಅವರು ಕಲ್ಪಿಸಿಕೊಂಡಂತಹ ಸಂಬಂಧ ಇರುವುದು ಶಕ್ಯವೇ? ಅದೂ ಧಡಿಧಡೀ ಕಣ್ಣೆದುರಿಗೇ ತನ್ನ ಗಂಡ ಇನ್ನೊಬ್ಬಳೊಂದಿಗೆ-ಅದೂ ದೇವಿಯಂತಹ ಕೆಲಸದಾಕೆಯೊಂದಿಗೆ… ಚೇಛೇ ಛೇ! ಇಂತಹದರಲ್ಲಿ ಪುರುಷೋತ್ತಮನ ತಲೆ ಸುಪೀಕ ಎನ್ನುವುದು ಸುಳ್ಳಲ್ಲ; ಹೇಳ್ತಾ ಹೇಳ್ತಾ ಕೆಲಸದ ಹುಡುಗಿಯಾದರೇನಂತೆ! ಹ್ಯಾಗೆ ಇದ್ದಾಳೆ ಹೇಳು-ಕೈಚಿಟಿಕಿ ಹೊಡೆದರೆ ಚಿಮ್ಮುವಷ್ಟು ಮದ ತುಂಬಿದೆಯಲ್ಲವೇ ಮೈಯಲ್ಲಿ? ಎಂದು ಕಣ್ಣು ಮಿಟುಕಿಸಿ ಬಾಯಿ ಚಪ್ಪರಿಸಿದ ಹಾಳಾದವ. ಅವನ ತಾಯಿಯೋ-ಇನ್ನೊಂದು ಅವತಾರ! ದಿನವೂ ಭಟ್ಟರಿಂದ ಅನ್ನದ ನೈವೇದ್ಯ, ಪೂಜೆ ಪಡೆಯುತ್ತಿದ್ದ ದೇವರಿದ್ದ ಮನೆಯಲ್ಲಿ ನಡೆದ ಭ್ರಷ್ಟಾಚಾರದಿಂದಲೇ ಮನೆಯಲ್ಲಿ ತಿರುತಿರುಗಿ ಹಾವು ಹೋಗುತ್ತದಂತೆ. ಎಂತೆಂತಹ ಮಂತ್ರವಾದಿಗೂ ಬಗ್ಗುವುದಿಲ್ಲವಂತೆ. ಮುರ್ಕುಂಡೀ ದೇವಸ್ಥಾನದ ಗುನಗನಲ್ಲಿ, ಮ್ಹಾಂಕಾಳಮ್ಮನ ಗುಡಿಯ ಭಟ್ಟರಲ್ಲಿ ಕೇಳಿದಾಗ ಭ್ರಷ್ಟಾಚಾರದ್ದೇ ಹೇಳಿಕೆಯಾಯಿತಂತೆ (‘ಹಗಲಿಗೂ ಕತ್ತಲೆಯೆಂದು ದೇವರ ಕೋಣೆಯಲ್ಲೇ…ಥೂ ಥೂ ಹೇಳಲಿಕ್ಕೂ ಓಕರಿಕೆ ಬರ್ತದೆ ನೋಡ್…!’)…ಎಲ್ಲ ಚಾಡಿಖೋರರ ಕಲ್ಪನೆಯ ದಿವ್ಯಕತೆಗಳು. ಚಿಕ್ಕಮ್ಮನ ಆರೋಗ್ಯ ಮಾತ್ರ ತೀರ ಕೆಟ್ಟಿದೆ ಎನ್ನುವುದು ಸುಳ್ಳಲ್ಲ, ಹೊಟ್ಟೆಯಲ್ಲಿ ಹೊಕ್ಕುಳದ ಸುತ್ತಲೂ ಸದಾ ಉರಿಯುವ ನೋವು ಎಂದಳಲ್ಲ, ಬೆಳಿಗ್ಗೆ. ಕ್ಯಾನ್ಸರ್ ಗೀನ್ಸರ್ ಇರಬಹುದೇ? ಅಂತಹುದೇನಾದರೂ ಇದ್ದರೆ… ಛೇ, ಛೇ, ಇರಲಾರದು… ತನ್ನ ಇಲ್ಲದ ವಿಚಾರಗಳಿಗಾಗಿ ತನ್ನನ್ನೇ ಹಳಿದುಕೊಂಡ. ತನ್ನದು ಇಲ್ಲದ ಭಯ, ಭ್ರಮೆ ಎಂದುಕೊಂಡ. ತಾನು ಬಂದಂದಿನಿಂದಲೂ ಗಂಡಹೆಂಡಿರಿಬ್ಬರೂ ಎಷ್ಟೊಂದು ಗೆಲುವಾಗಿದ್ದಾರೆ. ಮಧ್ಯಾಹ್ನ ಊಟಕ್ಕೆಂದು ಚಿಕ್ಕಪ್ಪ ಅಂಗಡಿಯಿಂದ ಮನೆಗೆ ಬಂದಾಗಂತೂ ಹರಟೆ ಹೊಡೆಯುತ್ತ ತನ್ನನ್ನೂ ಚಿಕ್ಕಮ್ಮನನ್ನೂ ಎಷ್ಟುಂದುಎಷ್ಟೊಂದು ನಗಿಸಿರಲಿಲ್ಲ! ಆದರೂ ಚಿಕ್ಕಮ್ಮ ತುಂಬ ಕೃಶಳಾಗಿದ್ದು ನಿಜ. ನಕ್ಕರೂ ಗುಣಿ ಹೊಕ್ಕ ಕಣ್ಣುಗಳಲ್ಲಿ ಎಂತಹುದೋ ಹೆದರಿಕೆ ಇದ್ದಂತೆ ಇಲ್ಲವೇ? ಸಪೂರಾದ ಕೈಕಾಲುಗಳು, ಹೊಂಡಬಿದ್ದ ಗಲ್ಲ, ತುಸು ಬಗ್ಗಿದ ಬೆನ್ನು-ಏಕೋ ಅವಳನ್ನು ನೋಡಿದರೇ ಪಾಪ ಎನ್ನಿಸುತ್ತದೆ. ಮುಂಬಯಿಗೆ ಹೋದಮೇಲೆ ಅಪ್ಪ-ಅಮ್ಮರಿಗೆ ಹೇಳಬೇಕು. ಶಕ್ಯವಾದರೆ ಒಮ್ಮೆ ಮುಂಬಯಿಗೂ ಕರೆಯಿಸಿ ಅಲ್ಲಿಯ ಡಾಕ್ಟರರಿಗೆ ತೋರಿಸಬೇಕು…. ಚಿಕ್ಕಮ್ಮನ ಅನಾರೋಗ್ಯದ ವಿಚಾರ ಹುಟ್ಟಿಸಿದ ಅಸ್ವಸ್ಥತೆಯನ್ನು ಕಳೆಯಲೆಂಬಂತೆ, ಪುರುಷೋತ್ತಮ ದೇವಿಯ ಬಗ್ಗೆ ಹೇಳಿದ್ದನ್ನು ಮೆಲುಕುಹಾಕುತ್ತಾ ಕವುಚಿ ಮಲಗಿದ: ರಂಡೆ ಎಳ್ಳಷ್ಟೂ ನಾಚಿಕೆ ಇಲ್ಲದವಳಂತೆ. ಐದು ವರ್ಷಗಳ ಹಿಂದೆಯೇ ಲಗ್ನವಾಗಿತ್ತಂತೆ. ಲಗ್ನವಾದ ಕೆಲ ದಿನಗಳಲ್ಲೇ ಗಂಡ ಊರು ಬಿಟ್ಟು ಓಡಿ ಹೋದನಂತೆ. ಮೈಯ ಮೂಲೆಮೂಲೆಯಲ್ಲಿ ಮುಸುಮುಸು ಎನ್ನುತ್ತಿದ್ದ ಇವಳ ಪ್ರಾಯದ ಸೊಕ್ಕಿಗೆ ನಾಲಾಯಕನಾದವನಂತೆ…ಅದರಿಂದ ತನಗೇನಂತೆ! ಎಂತಂದುಕೊಂಡು ತಿರುಗಿ ಅಂಗಾತನಾದ. ಗೋಡೆಯ ಬದಿಗೆ ಮಾಡಿನ ಪಕಾಸುಗಳಿಂದ, ಹಗ್ಗದ ಜೋಲು-ಬುಟ್ಟಿಗಳಲ್ಲಿ ತೂಗುಬಿಟ್ಟ ಮೊಗೆಕಾಯಿಗಳ ಮೇಲೆ ಕಣ್ಣೂರಿದ. ಕಣ್ಣು ಮುಚ್ಚಿದ. ಮಗ್ಗುಲು ಸರಿದ: ಇಲ್ಲ, ನಿಜಕ್ಕೂ ಅವಳ ಆರೋಗ್ಯದಲ್ಲೇ ಎಂತಹುದೋ ಮಾದಕಶಕ್ತಿ ಇದೆ ಎನ್ನುವುದನ್ನು ಅವಳ ಮೇಲೇ ಉಪಕಾರ ಮಾಡುವವನಂತೆ ಒಪ್ಪಿಕೊಂಡು ತನಗೆ ಇದೀಗ ನೆನಪಿಗೆ ಬಂದುದನ್ನು ಸಮರ್ಥಿಸಿಕೊಂಡ: ಮಧ್ಯಾಹ್ನ, ಸ್ನಾನಕ್ಕೆಂದು ಬಚ್ಚಲು ಮನೆ ಹೊಕ್ಕಾಗ ಕದ ಅಡ್ಡಮಾಡಿಕೊಂಡು, ಮಸುಕುಮಸುಕು ಬೆಳಕನ್ನು ಒಳಗೆ ಬಿಡುತ್ತಿದ್ದ ಕಿಡಕಿಯೊಳಗಿಂದ ಹೊರಗೆ ನೋಡುತ್ತಿದ್ದಾಗ, ಕಿಡಕಿಯಿಂದ ತುಸು ದೂರದಲ್ಲಿ ತೆಂಗಿನಮರದ ಬುಡದಲ್ಲಿಯ ಕಲ್ಲುಮರಗಿಯಲ್ಲಿ ಅರಿವೆ ಒಗೆಯುತ್ತಿದ್ದ ದೇವಿ, ಒಗೆಯುವಾಗ ಒದ್ದೆಯಾಗಬಾರದೆಂದು ಸೀರೆಯನ್ನು ಮೇಲಕ್ಕೆತ್ತಿ ಗಂಡುಗಚ್ಚೆ ಹೊಡೆದದ್ದರಿಂದ ಬೆತ್ತಲೆಗೊಂಡ ಅವಳ ದುಂಡಗಿನ ನುಣುಪುನುಣುಪಾದ ತೊಡೆಗಳು ಕಣ್ಣಿಗೆ ಬಿದ್ದು, ಎದೆ ಝಲ್ಲೆಂದು ನಡುಗಿ, ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವೂ ಇಲ್ಲದವನಂತೆ, ಬಚ್ಚಲುಮನೆಯೊಳಗಿಂದ ಮಬ್ಬುಗತ್ತಲೆಯಲ್ಲಿ ನಿಂತ ತಾನು ಏನು ಹೊರಗಿನ ಬೆಳಕಿನಲ್ಲಿದ್ದ ದೇವಿಗೆ ಕಾಣಿಸಲಿಕ್ಕಿಲ್ಲ ಎಂಬ ಧೈರ್ಯದಿಂದಲೋ, ಕಂಡರೂ ಪರಿವೆ ಇಲ್ಲವೆಂಬಂಥ ಎಚ್ಚರಗೇಡಿತನದಿಂದಲೋ ಜಳಕ ಮಾಡುವುದನ್ನೂ ಮರೆತು ಕಿಡಕಿಯ ಹತ್ತಿರ ಸರಿದು ಕಿಡಕಿಯ ಸರಳುಗಳಿಗೆ ಹಣೆ ಆನಿಸಿ ನಿಂತಿದ್ದ. ಇವನು ಬಚ್ಚಲು ಮನೆ ಸೇರಿದ್ದರ ಸುಳುವು ಹತ್ತಿದಂತಿದ್ದ ದೇವಿ(ಸ್ನಾನಕ್ಕೆ ಬರಲು ಹೇಳಿದವಳೇ ಅವಳಲ್ಲವೆ!)ಒಗೆಯುವ ಕಲ್ಲಿನಿಂದ ಎದ್ದು ಕಿಡಕಿಯ ಹೊರಗಿನ ಬಾಳೆಯ ಹಿಂಡಿನವರೆಗೂ ಬಂದು-ಹಾಗೇಕೆ ನೋಡುತ್ತೀರಾ ಎನ್ನುವ ಧಾಟಿಯಲ್ಲಿ- “ಹಂಡೆಗೆ ನೀರು-ಗೀರು ಬೇಕಾಗಿತ್ತರಾ ಒಡೆಯಾ?” ಎಂದು ಕೇಳಿದಾಗಿನ ಅವಳ ಮೈಯ ವೈಯಾರದ ನೆನಪಾಗಿ…ಥೂ ಥೂಥೂ ತನಗಿಂದಾದುದಾದರೂ ಏನು? ನಾಲ್ಕು ದಿನಗಳ ಮಾತಿಗೆಂದು ಚಿಕ್ಕಪ್ಪನ ಮನೆಗೆ ಬಂದ ತಾನು ಎಲ್ಲವನ್ನೂ ಬಿಟ್ಟು ಅವರ ಮನೆಯ ಕೆಲಸದಾಕೆಯ ತಪ್ಪಿ ಕಣ್ಣಿಗೆ ಬಿದ್ದ ಮೊಲೆ ತೊಡೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೇನಲ್ಲ ಎಂದುಕೊಂಡವನೇ ಹಾಸಿಗೆಯಲ್ಲಿ ಎದ್ದೇ ಕುಳಿತ. ಯಾರ ಮೇಲಿನದೋ ಸಿಟ್ಟಿನಿಂದೆಂಬಂತೆ ವಿಚಾರಮಾಡುವ ಮೊದಲೇ ಪೂ ಎಂದು ದೀಪ ಆರಿಸಿಬಿಟ್ಟ. ಸುತ್ತಲೂ ಒಮ್ಮೆಲೆ ನೆಲೆಸಿದ ದಟ್ಟ ಕತ್ತಲೆಯನ್ನು ಕಂಡದ್ದೇ ತನ್ನ ಹುಚ್ಚುತನವನ್ನು ನೆನೆದು ಹೆದರಿದ, ಆದರೂ, ಜತೆಗಿಟ್ಟುಕೊಂಡ-ಮುಂಬಯಿಯಿಂದ ತಂದ-ಬ್ಯಾಟರಿಯ ನೆನಪಾಗಿ ಧೈರ್ಯ ಬಂತು. ಬ್ಯಾಟರಿಯ ಚಕ್ರ-ಚಕ್ರಾಕಾರದ ಬೆಳಕನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಬಿಟ್ಟು ನೋಡಿದ, ಕೆಳಗೆ, ಚಿಕ್ಕಮ್ಮ, ಚಿಕ್ಕಪ್ಪ, ದೇವಿ ಕೂಡ(?)ಎಲ್ಲ ನಿದ್ದೆ ಹೋಗಿರಬೇಕು. ಎಲ್ಲವೂ ಸ್ತಬ್ದ, ನಿಶ್ಯಬ್ದ. ಕಟಕಟೆಯ ಹೊರಗೆ, ನಕ್ಷತ್ರಗಳ ಬೆಳಕಿನಲ್ಲಿ ನೆರಳುನೆರಳಾಗಿ ತೋರುವ ಹಿತ್ತಿಲುಗಳಲ್ಲಿ ಹುಡುಕಿ ನೋಡಿದರೂ ಎಲ್ಲೂ ಬೆಳಕು ತೋರಲಿಲ್ಲ. ದೂರದ ಒಕ್ಕಲಕೇರಿಯೊಂದರಿಂದ ಗುಮ್ಮಟೆಗಳ ದನಿ ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಈ ಬದಿಯ ಕೇರಿಯಲ್ಲೆಲ್ಲೋ ನಾಯಿ ಬೊಗಳಿತು: ಉತ್ತುಮಿಯ ಹಿತ್ತಿಲಲ್ಲಿ ಯಾರೋ ಹೊಕ್ಕಿರಬೇಕು ಎಂದುಕೊಂಡ. (ಈ ಹಳ್ಳಿಯಲ್ಲಿ ಉತ್ತುಮಿಯೊಬ್ಬಳೇ ಸೂಳೆಯೆ?) ‘ಅಬ್ಬ ರಾತ್ರಿಯಾದದ್ದೇ ತಿಳಿಯಲಿಲ್ಲವಲ್ಲ!
ತುಂಬ ಸೆಖೆಯಲ್ಲವೆ.ಗಾಳಿ ಎಲ್ಲಿ ಬೇಪತ್ತೆಯಾಯಿತೋ ಎನ್ನುತ್ತ ಅಂಗಾತ ಮಲಗಿದ. ಹೊತ್ತು ಸರಿದಂತೆ ಮೇಲಿನ ಮಾಡಿನಲ್ಲಿ ಕಂಡ ಬಾಲದ ನೆನಪಾಗಿ, ಬಾಲವಿದ್ದ ಉದ್ದನ್ನ ಜೀವವೊಂದು ಮಾಡಿನಿಂದ ಎದೆಯಮೇಲೇ ತೂಗುತ್ತಿದ್ದುದರ ಅನುಭವವಾಗಿ, ಹಾಸಿಗೆಯಲ್ಲಿ ಎದ್ದೇ ಕುಳಿತ. ಬ್ಯಾಟರಿಯ ಸ್ವಿಚ್ಚನ್ನೊತ್ತಿದ: ಏನೂ ಇರಲಿಲ್ಲ. ಸಾಯಲಿ. ಮಂಚವನ್ನೇ ಇಲ್ಲಿಂದ ಸರಿಸಿದರೆ ಹೇಗೆ? ಕೆಳಗೆ ಯಾರೋ ಗುಟ್ಟಾಗಿ ಕೆಮ್ಮಿದ ದನಿ, ಬಳೆಗಳ ಕಿಂಕಿಣ: ದೇವಿಯಲ್ಲವೇ? ಸತ್ತವಳಿಗೆ ಎಚ್ಚರವಿದೆಯೇನೋ, ತನಗಿನ್ನೂ ಎಚ್ಚರವಿದ್ದುದರ ಸುಳುವು ಹತ್ತಿಲ್ಲ ತಾನೇ! ಮಂಚ ಸರಿಸಿದರೆ ಸದ್ದಾಗಿ ಪೂರ ಎಚ್ಚರಗೊಳ್ಳುವಳೇನೋ. ದಪ್ಪ ದಪ್ಪ ಹಲಗೆಯ ಹಳೇ ಕಾಲದ ಮಂಚವನ್ನು ತನ್ನೊಬ್ಬನಿಂದ ಸರಿಸಲು ಆಗಬೇಕಲ್ಲ ಮೇಲಾಗಿ! ಹಳೇ ಕಾಲದ ಮನೆಯ ಈ ಅವಾಢವ್ಯವಾದ ಮಾಳಿಗೆ ಇಡೀದರ ಮೇಲೆ ತಾನೊಬ್ಬನೇ ಎಂಬುದರ ಅರಿವು ಬಂದದ್ದೇ ಸಣ್ಣಗೆ ನಡುಗಿದ. ದೇವಿ ಎದ್ದು ಮೇಲೆ ಬಂದರೆ! ಈ ಹಾಳು ಮಾಳಿಗೆಗೆ ಕದಗಳೂ ಇಲ್ಲ ಬೇರೆ. ಬಂದವಳೇ ತನ್ನ ಹಾಸಿಗೆ ಸೇರಿಬಿಟ್ಟರೆ?…ಸತ್ತವಳು ಕೆಮ್ಮುವುದೂ ನಿಂತಿತಲ್ಲ. ಓ! ಕೆಲಹೊತ್ತಿನ ಮೊದಲಷ್ಟೇ ಚಿಕ್ಕಪ್ಪನ ಕೋಣೆಯ ಕದ ತೆರೆದ ಸದ್ದು ಕೇಳಿಸಿರಲಿಲ್ಲವೇ?…ಹಾಳಾದವಳು ಅದಾಗಲೇ ಅವನಿದ್ದಲ್ಲಿಗೇ ಹೋದಳೇನೋ…ಥೂ ಥೂ ಥೂ…ಪುರುಷೋತ್ತಮ ಹೇಳಿದ್ದೇ ನಿಜವಿರಬಹುದೇ?…ಹೋಗಲಿ, ಹೋಗಿ ಸಾಯಲಿ, ತನಗೇನಂತೆ ಎಂದು ತಡಪಡಿಸುತ್ತ ತಿರುಗಿ ಹಾಸಿಗೆಯಲ್ಲೊರಗಿದ. ಒರಗಿ, ತನಗೆ ಇದೀಗ ಬಂದ ಸಿಟ್ಟಿನ ಬಗ್ಗೆ ತಾನೇ ಅಚ್ಚರಿಪಟ್ಟು, ಹಾಗಿರಲಾರದು-ಪುರುಷೋತ್ತಮನ ಮಾತು ನಿಜವಿರಲಾರದು ಎಂದುಕೊಂಡ.
ಮಾಡಿನಲ್ಲಿ ಸರಸರವೆಂದು ಸದ್ದೇ? ಸರಕ್ಕನೆ ಬ್ಯಾಟರಿಗೆ ಕೈಹಾಕಿ ಬೆಳಕು ತೂರಿದ. ಏನಾದರೂ ಕಾಣಿಸುತ್ತಿದೆಯೇ? ಅದೇನದು? ಅಲ್ಲಿ ಆ ಪಕಾಸಿನ ಮರೆಯಲ್ಲಿ? ಸಾಯಲಿ, ಇಲ್ಲಿಂದ ಏಳುವುದೇ ಒಳ್ಳೆಯದೇನೋ. ಹಾಸಿಗೆಯನ್ನೇ ಇಲ್ಲಿಂದ ಎತ್ತಿ ಒಯ್ದು ಹಾಲಿನ ಮಧ್ಯದಲ್ಲಿ ಹಾಕಿ ಮಲಗಿದರೆ ಹೇಗೆ? ಎಂದವನೇ ಎದ್ದ. ಅಬ್ಬ ಎಂತಹ ಸೆಕೆ. ಹಾಸಿಗೆ ಇಲ್ಲದೇನೇ ತಂಪು ನೆಲದ ಮೇಲೆ ಮಲಗಿದರೆ? ಬೇಡ, ಕೆಟ್ಟ ಹಾವಿನ ಭಯ ಬೇರೆ ಎನ್ನುತ್ತ ಕತ್ತಲೆಯಲ್ಲೇ ಹಾಸಿಗೆಯ ಸುರುಳಿ ಸುತ್ತಹತ್ತಿದ.
*
*
*
ದನಗಳ ಕೊಟ್ಟಿಗೆಯಲ್ಲಿ ಹಾವು ಕಂಡು ಹೆದರಿದ ದೇವಿಯ ಮಾತುಗಳು ನೆನಪಿಗೆ ಬಂದು ಮಲಗುವ ಕೋಣೆಯ ಕದ ಮುಚ್ಚುವ ಧೈರ್ಯವಾಗದೇ ಅವನ್ನು ತೆರೆದಿಟ್ಟೆ ಚಿಕ್ಕಮ್ಮ ಹಾಸಿಗೆಗೆ ಬಂದಲುಬಂದಳು. ಹಾಸಿಗೆಗೆ ಬೆನ್ನು ತಾಗಿಸಿದ್ದೇ ಇನ್ನೇನನ್ನೋ ನೆನೆದು ನಡುಗಿದಳು. ಮಧ್ಯಾಹ್ನ ಊಟವಾದ ಮೇಲೆ ತಿರುಗಿ ಅಂಗಡಿಗೆ ಹೊರಡುವಾಗ ಗಂಡ, ತನ್ನನ್ನು ಅಡುಗೆಮನೆಯಲ್ಲೊಬ್ಬಳೇ ಇದ್ದಾಗ ಸಂಧಿಸಿ, ಇವತ್ತು ಒಳ್ಳೇ ಖುಷಿಯಲ್ಲಿ ಇದ್ದಂತೆ ತೋರುತ್ತಿದೆಯಲ್ಲ; ಜೀವದಲ್ಲಿ ಈಗ ಹರುಷವೆನಿಸುತ್ತದೆಯೇ? ಎಂದು ಕೇಳುತ್ತ ಕಣ್ಣು ಮಿಟುಕಿಸಿದ್ದರ ನೆನಪು ಈಗ ಹಠಾತ್ತನೆ ಬಂದು ಗಡಗಡ ನಡುಗಿ, ಅಯ್ಯೋ ದೇವರೇ ಅವರು ಇವತ್ತು ನನ್ನ ಹತ್ತಿರ ಬಂದರೆ ನಾನು ಸತ್ತೇಹೋಗುತ್ತೇನೆ. ಎಂದುಕೊಂಡಳು. ಪಾಪ! ಹುಡುಗ ಅಪರೂಪಕ್ಕೆ ಊರಿಗೆ ಬಂದಾಗಲೂ ಹಾಸಿಗೆ ಹಿಡಿದು ಮಲಗಿರಬೇಕೇ ಎಂದುಕೊಂಡು ಗೆಲುವು ನಟಿಸಿ ಓಡಾಡಿದ್ದನ್ನೇ ಇವರು ತಪ್ಪು ತಿಳಿದರಲ್ಲ. ಹೊಟ್ಟೆಯಲ್ಲಿಂದ ವಿಪರೀತ ನೋವು…..ಮತ್ತೆ ಜ್ವರ ಬರುವಂತೆ ತೋರುತ್ತದೆ. ಅಂತಹಳನ್ನುಅಂತಹವಳನ್ನು…ಚಿಕ್ಕಮ್ಮನ ಮೈಮೇಲೆ ಮುಳ್ಳು ನಿಂತವು. ಗಂಡ ಆಚೆಯ ಕೋಣೆಯಲ್ಲಿ ಅಂಗಡಿಯಲ್ಲಿ ಲೆಕ್ಕ ಬರೆಯುತ್ತ ಕುಳಿತಿದ್ದ…ತನ್ನ ಬಳೆಗಳ ಸದ್ದನ್ನು ಅಪಾರ್ಥಮಾಡಿ ಸಣ್ಣಗೆ ಕೆಮ್ಮಿದರೆ? ‘ಬಂದೆ ಎಂದಂತೆ ಕೇಳಿಸಿತೆ? ಚಿಕ್ಕಮ್ಮ ನಡುಗುವ ಹೆಜ್ಜೆ ಇಡುತ್ತ, ಅರಿವಿಲ್ಲದೇನೇ ಕೋಣೆಯ ಕದ ಮುಚ್ಚಿ ಅಗಳಿ ಇಟ್ಟಳು…ದೇವಿಗೂ ಹೇಳಿದ್ದೇನೆ. ಇದು ಪಾಪವೇ ದೇವರೇ? ರೋಗದಿಂದ ಹಣ್ಣಾದ ನನ್ನನ್ನೇ ಕೂಡಬೇಕೆನ್ನುವುದು ಯಾವ ನ್ಯಾಯ. ನನ್ನ ಆರೋಗ್ಯ ಸರಿಯಾಗಿದ್ದಾಗ ಬೇಕಾದಷ್ಟು ಸುಖ ಕೊಡಲಿಲ್ಲವೇ? ಬೇರೆ ಮದುವೆಯಾಗಿ ಎಂದೆ. ಆ ಮಾತನಾಡಬೇಡ ಎನ್ನುತ್ತಾರೆ.(ಇನ್ನೊಂದು ಮದುವೆಯಾಗುವ ವಯಸ್ಸೇ ಇದು! ಕಾಯದೆಯ ಮಾತು ಬೇರೆ) ನನ್ನ ಮೇಲೆ ಅಷ್ಟು ಪ್ರೀತಿಯಂತೆ. ಬರೇ ದೇಹ ಸುಖಕ್ಕೆಂದಾದರೆ ಬೇರೆ ಯಾರನ್ನಾದರೂ…ನನ್ನ ಸೂಚನೆಗೇ ಕೆರಳಿ ಹಾರಾಡಿರಲಿಲ್ಲವೇ ಇದನ್ನು ಹೇಳಿದ ದಿನ! “ನನ್ನ ಮೇಲೆ ನನಗೆ ಅಷ್ಟೂ ತಾಬೆಯಿಲ್ಲ ಎಂದು ಬಗೆದೆಯಾ. ಇನ್ನು ನಿನ್ನ ದೇಹಕ್ಕೆ ಮುಟ್ಟಿದರೆ ಆಣೆ” ಎಂದರು. ಹೇಳಿದ ಎಂಟು ದಿನ ಮಾತ್ರ ದೂರ ಉಳಿದರು. ಮತ್ತೆ ಯಥಾಸ್ಥಿತಿ. ಮಕ್ಕಳು ಮನೆಯಲ್ಲಿದ್ದಾಗ ಅವರಾದರೂ ನನ್ನ ರಕ್ಷಣೆಗೆ ಉಪಯೋಗ ಬೀಳುತ್ತಿದ್ದರು. ಈಗ ಇಬ್ಬರೂ ಶಿಕ್ಷಣಕ್ಕೆಂದು ಮನೆಯಿಂದ ದೂರ…ನಾನೇ ಕೊನೆಗೆ ದೇವಿಯನ್ನು ಕೆಲಸದ ನೆವಮಾಡಿ ಮನೆಯಲ್ಲಿಟ್ಟುಕೊಂಡೆ. ಪಾಪ-ಪುಣ್ಯಗಳ ಪರಿವೆ ಇಲ್ಲದೇನೆ-ನಾಚಿಕೆ ಬಿಟ್ಟೇ, ದೇವಿಗೆ ಎಲ್ಲ ಹೇಳಿದೆ. ಆದರೇಕೋ ಅವಳೆಂದರೆ ಅವರಿಗೆ ಹೆದರಿಕೆ, ಲೆಕ್ಕ ಬರೆಯುವಾಗಲೂ ಕೋಣೆಯ ಕದಕ್ಕೆ ಅಗಳಿ ಇತ್ತೇ ಕೂತಿರುತ್ತಾರೆ.
ತಿರುಗಿ ಕೆಮ್ಮಿದ ಸದ್ದೇ? ದೇವಿಯ ಬಳೆಗಳ ಸದ್ದಲ್ಲವೇ? ಇವರ ಕೋಣೆಯ ಬದಿಗೇ ಹಾಸಿಗೆ ಹಾಕುತ್ತಿದ್ದುದನ್ನು ನೋಡಿದ್ದೆ. ತುಸು ಹೊತ್ತು ಅವಳಾದರೂ ಎಚ್ಚರವಿದ್ದರೆ ಅವರು ಕೋಣೆಯ ಹೊರಗೆ ಬರಲು ಅಳುಕಬಹುದಿತ್ತೇನೋ…ಚಿಕ್ಕಮ್ಮ ಕೋಣೆಯೊಳಗಿನ ದೀಪ ಆರಿಸಿದಳು. ಎಲ್ಲವೂ ಸ್ತಬ್ದ, ನಿಶ್ಯಬ್ದ. ಮಂಚದ ಬುಡಕ್ಕೆ ಏನೋ ಸದ್ದು. ಇಲ್ಲಿ ಇದ್ದೀತೇ? ಅದೆ! ಪುಸ್ ಎಂದಂತೆ ಕೇಳಿಸಿತಲ್ಲವೇ? ತಾನು ಆಗ ಗಂಡನ ಭಯದಿಂದ ಕೋಣೆಯ ಕದ ಮುಚ್ಚಿ ಅಗಳಿ ಇಟ್ಟುದುದರ ನೆನಪು ಬಂದಾಗಂತೂ ಚಿಕ್ಕಮ್ಮನಿಗೆ ಕೋಣೆಯೊಳಗಿನ ಕತ್ತಲೆ ಭಯಾನಕವಾಗಹತ್ತಿತು. ಹೊತ್ತುಹೋದಂತೆ ಮಂಚದಡಿಯಲ್ಲಿ ಪುಸ್ ಎಂದದ್ದು, ಉದ್ದುದ್ದ ಜೋಡುನಾಲಗೆ ಚಾಚುತ್ತ ಮೆಲ್ಲಗೆ ಮಂಚದ ಕಾಲಿನ ಮೇಲೆ ಹತ್ತಿ ಹತ್ತಿರ ಹತ್ತಿರ ಬರುತ್ತಿದ್ದ ಭಾಸವಾಗಿ, ಕೋಣೆಯ ಕದ ಮುಚ್ಚಿ ದೀಪ ಆರಿಸಿ ಮಲಗುವುದು ಶಕ್ಯವೇ ಇಲ್ಲವೆನಿಸಿ ಭಡಕ್ಕನೆ ಎದ್ದು ಕುಳಿತಳು. ಅದೆ! ಗಂಡನ ಕೋಣೆಯಲ್ಲಿಯ ಸದ್ದೇನೋ. ಬಾಗಿಲು ತೆರೆದು ಇತ್ತಲೇ ಬರುವರೇನೋ. ನನ್ನನ್ನು ಪೂರ ತಪ್ಪೇ ತಿಳಿಯುವರೇನೋ. ಬೇಡ ಇಲ್ಲಿ ಮಲಗುವುದೇ ಬೇಡ, ಅಲ್ಲೇ ಹೋಗ್ತೇನೆ, ಅಲ್ಲಿಗೆ ಹೋಗುವುದೇ ಒಳ್ಳೆಯದೇನೋ. ಸಂಜೆ ಅದೇ ವಿಚಾರ ಬಂದಿತ್ತು. ಹೇಗೆ ಮರೆತೇ ಹೋಯಿತೋ. ಅಲ್ಲಿ ಹೋದರಾದರೂ ಅವರಿಗೆ ತನ್ನ ಖುಷಿಗೆ ಮಾಡಿದ ಅಪಾರ್ಥದ ಅರಿವಾಗಬಹುದೇನೋ. ಬದುಕಬಹುದೇನೋ….
ಚಿಕ್ಕಮ್ಮ ಭಡಕ್ಕನೆ ಹಾಸಿಗೆಯಿಂದ ಎದ್ದಳು. ಕತ್ತಲೆಯಲ್ಲೇ ಕೋಣೆಯ ಕದ ತೆರೆದಳು ಹೊರಗೆ ನಡೆದಳು.
*
*
*
ಹೆಂಡತಿಯ ಕೋಣೆಯ ಕದ ತೆರೆದ ಸದ್ದು ಕೇಳಿಸಿ ‘ಬಂದೆ’ ಎನ್ನುತ್ತ ಲೆಕ್ಕದ ಪುಸ್ತಕಗಳನ್ನು ಮುಚ್ಚಿಟ್ಟು, ದೀಪ ಆರಿಸಿ, ಕೋಣೆಯ ಕದ ತೆರೆದು, ನಡುವಿನ ಹಾಲಿನಲ್ಲಿ ಕಾಲಿಟ್ಟದ್ದೇ ಮನೆಯೆಲ್ಲ ಕತ್ತಲೆಯಲ್ಲಿ ಮುಳುಗಿದ್ದನ್ನು ಕಂಡು, ಚಿಕ್ಕಪ್ಪನಿಗೆ ಒಂದು ಕ್ಷಣ ಎದೆ ಧಸ್ ಎಂದಿತು. ಅಬ್ಬ ರಾತ್ರಿ ಸರಿದದ್ದೇ ತಿಳಿಯಲಿಲ್ಲವಲ್ಲ, ಹಾಳು ಲೆಕ್ಕ ಬರೆಯುವ ಗೊಂದಲದಲ್ಲಿ, ಎಷ್ಟೊಂದು ಹಾದಿ ನೋಡಿದಳೋ ಎಂದುಕೊಳ್ಳುತ್ತ ಹೆಂಡತಿಯ ಕೋಣೆ ಸೇರಿ, ಕದ ಮುಚ್ಚುವಾಗ ಒಳಜಗಲಿಯಮೇಲೆ ಮಲಗಿದ ದೇವಿಯ ಬಳೆಗಳ ಸದ್ದು ಕೇಳಿಸಿದರೂ ಅತ್ತ ಲಕ್ಷ್ಯ ಕೊಡದೇ ಅಗಳಿ ಇಟ್ಟು, ಇಷ್ಟು ಬೇಗ ದೀಪ ಆರಿಸಿಬಿಟ್ಟೆಯಾ ಎಂದು ಕೇಳುತ್ತ ಹಾಸಿಗೆಯನ್ನು ಸಮೀಪಿಸಿ, ಹಾಸಿಗೆಯಲ್ಲಿ ಬಳಸಿ ನೋಡಿದಾಗ ಹೆಂಡತಿ ಹಾಸಿಗೆಯಲ್ಲಿ ಇಲ್ಲದ್ದು ಗಮನಕ್ಕೆ ಬಂದು ಥೂ ಎಂದಿನದೇ ಹಾಡು ಎಂದುಕೊಳ್ಳುತ್ತ ತಲೆ ಕೆಡಿಸಿಕೊಂಡರು. ಆಗಿನಿಂದಲೂ ಇಲ್ಲದ ಆಸೆ ತೋರಿಸಿ ಈಗ ಹೇಳದೇ ಕೇಳದೇ ಹಾಳಾದವಳು ಪಾರ್ವತಿಯ ಮನೆಗೆ ಹೋಗಿರಬೇಕು ಮಲಗಲಿಕ್ಕೆ. ಆ ಹಾಳು ಬೋಳಿಗೂ ತಲೆಯಿಲ್ಲ. ಲಗ್ನವಾದ ಹೆಂಗಸು ಗಂಡನೊಂದಿಗೆ ಮಲಗದೇನೇ ಹೀಗೆ ಥತ್. ರೋಗವಂತೆ! ಹೊಟ್ಟೆನೋವಂತೆ ಮಣ್ಣಂತೆ ಮಸಣವಂತೆ! ಎಲ್ಲ ಠಕ್ಕು, ಎಂದುಕೊಳ್ಳುತ್ತ ಕಿಡಿಕಿಡಿಯಾದರು. ಬೇರೆ ಯಾರೊಡನೆಯಾದರೂ ಮಲಗಬಹುದಂತೆ, ಇದು ಶಕ್ಯವೆ?-ಇವಳಿಗಿದನ್ನು ಹೇಳಲು ಬಾಯಾದರೂ ಹೇಗೆ ಬಂತೋ ಅಂತೇನೆ. ಹಿರಿಯರು ದೇವರು ಮೆಚ್ಚುವ ಕೆಲಸವೇ ಇದು? ಯಾವ ಗರತಿಯು ಅನ್ನುವ ಮಾತೇ ಇದು? ನಾನೆಂದರೆ ಅಷ್ಟೊಂದು ಲಂಪಟನೆ? ಇಪ್ಪತ್ತು ವರ್ಷಗಳ ದಾಂಪತ್ಯದಲ್ಲಿ ಒಮ್ಮೆಯಾದರೂ ಇವಳಿಗೆ ಎರಡು ಬಗೆದಿದ್ದೇನೆಯೇ? ಇಪ್ಪತ್ತು ವರ್ಷ ಒಂದೇ ದೇಹಕ್ಕೆ ಹೊಂದಿಕೊಂಡಿದ್ದ ಮನಸ್ಸು ಒಮ್ಮೆಲೇ ಹೀಗೆ….ಆದರೂ ಒಮ್ಮೆ ಹೋಗಿದ್ದೆ ಉತ್ತುಮಿಯ ಮನೆಗೆ, ಮನಸ್ಸು ಗಟ್ಟಿಮಾಡಿ-ಹೀಗೇ ಬಯಸಿ ಬಂದಾಗ ಇವಳು ಹಾಸಿಗೆ ಬಿಟ್ಟು ಪಾರ್ವತಿಯ ಮನೆಗೆಓಡಿಹೋದ ಒಂದು ರಾತ್ರಿ, ಇವಳ ಮೇಲಿನ ಸಿಟ್ಟಿನಿಂದ, ಜಿದ್ದಿನಿಂದ. (ಒಳಗೆಲ್ಲೋ, ಒಮ್ಮೆ ಹೋಗಿಯೇ ನೋಡಿದರೇನಂತೆ ಇನ್ನೊಬ್ಬ ಹೆಣ್ಣಿನ ದೇಹ ಹೇಗಿರುತ್ತದೆಯೋ ಎಂದು, ಎಂದೆನಿಸಿರಲಿಲ್ಲವೆ?) ಉತ್ತುಮಿಯ ದಣಪೆಯಲ್ಲೇ ಧತ್ ಎಂದು ಕಣ್ಣಿಗೆ ಬಿದ್ದವನು ಅವಳ ದರಿದ್ರ ತಮ್ಮ ಸಂಕಪ್ಪ. ಎಲ್ಲಿಗೆ ಬಂದಿರಿ ದೇವರೂ ಎಂದು ಕೇಳಿದವನೇ ದನಪೆಯ ಕಲ್ಲಿನಿಂದ ಭಡಕ್ಕನೆ ಕೆಳಗೆ ಧುಮುಕಿ ನಿಂತಿದ್ದನಲ್ಲ! ಅವನು ‘ದೇವರೂ’ ಎಂದು ಕರೆದದ್ದು ಕೇಳಿದ್ದೆ ಅವನ ಪ್ರಶ್ನೆಗೆ ಉತ್ತರ ಕೊಡುವ ಮೊದಲೇ, ಅವನು ನನ್ನ ಬಗ್ಗೆ ಏನು ತಿಳಿಯುವನೋ ಎಂಬುದನ್ನು ಕೂಡ ಲೆಕ್ಕಿಸದೇ ಭರಭರನೆ ಮನೆಗೆ ಹಿಂತಿರುಗಿದ್ದೆ. ನಾನು ಬಹು ದೊಡ್ಡ ಮನುಷ್ಯ ಎಂದು ಗೌರವ ಇಟ್ಟುಕೊಂಡ, ಕಣ್ಣ ಮುಂದೆ ಆಡಿ, ಓಡಿ ದೊಡ್ಡವಳಾದ ಉತ್ತುಮಿಯ ಜತೆ…ಥೂ ಥೂ ನನಗೆ ಹೇಗಾದರೂ ಬುದ್ಧಿ ಬಂತೋ. ಇದಕ್ಕೆಲ್ಲ ಕಾರಣವಾದ ತಮ್ಮ ಹೆಂಡತಿಯ ಮೇಲೆ ಈಗ-ಅದೆಲ್ಲದರ ನೆನಪಿನಿಂದಲೇ ಚಿಕ್ಕಪ್ಪನಿಗೆ ಇನ್ನೊಮ್ಮೆ ಸಿಟ್ಟು ಬಂದಿತು…ಹೊರಗೆಲ್ಲೋ ಬಳೆಗಳ ಸದ್ದು, ಒಳಜಗಲಿಯ ಮೇಲೆ ದೇವಿ ಇದ್ದುದರ ನೆನಪು ಬಂದು ಅರೇ! ಆಗಿನಿಂದಲೂ ಅವಳನ್ನು ಹೇಗೆ ಮರೆತೆನೋ ಅನ್ನಿಸಿತು. ಇವಳನ್ನು ಮನೆಯಲ್ಲಿ ತಂದಿಟ್ಟುಕೊಂಡದ್ದು ಯಾಕೆಂದು ಗೊತ್ತಿಲ್ಲವೇ? ಊರಲ್ಲೆಲ್ಲ ನನ್ನ ಮಾನ ಹಾಳು. ನಾನು ಇವಳನ್ನು ಇಟ್ಟುಕೊಂಡಿದ್ದೇನಂತೆ. ಒಮ್ಮೊಮ್ಮೆ ಅವಳ ವಯ್ಯಾರ, ಮರುಕ ನೋಡಿ ಮನಸ್ಸು ಚಂಚಲವಾದಾಗ….ಆದರೂ ಎಂತಹುದೋ ಹೆದರಿಕೆ, ಇಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ಮಾಡದೇ ಇದ್ದುದನ್ನು ಈಗ…. ಹೆಂಡತಿಯ ಒಪ್ಪಿಗೆಯಿಂದ ಹ್! ಎಂದು ಹಾಸಿಗೆಯಲ್ಲಿ ಎದ್ದೇ ಕುಳಿತರು ಚಿಕ್ಕಪ್ಪ, ಹೆಂಡತಿ ಆಗ ಒಮ್ಮೆಲೇ ಕೋಣೆ ಬಿಟ್ಟು ಹೊರಗೆ ಹೋದುದರ ಸರಿಯಾದ ಅರ್ಥ ಈಗ ಆಯಿತೆನ್ನುವವರಂತೆ ಕುಳಿತಲ್ಲೇ ನಡುಗಿದರು. ದೇವಿ ಈ ಮನೆಗೆ ಬಂದ ಮೆಲೆಮೇಲೆ ಇವಳು ಪಾರ್ವತಿಯ ಮನೆಗೆ ಹೀಗೆ ಹೊರಟುಹೋದದ್ದು ಇದೇ ಮೊದಲು! ಈಗ ತಿಳಿಯಿತು. ಬೆಳಗಿನಿಂದಲೂ ದೇವಿ ನಡೆಸಿದ ಒನಪು ವಯ್ಯಾರಗಳ ಅರ್ಥ ಈಗಾಯಿತು. ಇದೆಲ್ಲ ಇವರದೇ ಕಾರಸ್ಥಾನ. ಕತ್ತಲೆ ತುಂಬಿದ ಮನೆಯಲ್ಲಿ ಮಾಳಿಗೆಯ ಕೆಳಗೆ ನಾವಿಬ್ಬರೇ, ನಾನಿಲ್ಲಿ; ಹೊರಗೆ ಒಳಜಗಲಿಯಲ್ಲಿ ಈ ಕಳ್ಳ ಹಾದರಗಿತ್ತಿ! ಗಂಡ ಊರುಬಿಟ್ಟು ಓಡಿಹೋದಮೇಲೆ (ಅವನೊಬ್ಬ ಮಳ್ಳ ಹನುಮ!) ನಾಡೂ ಮಾಸ್ಕೇರಿಯ ಆದೇವಪ್ಪ ಇವಳನ್ನು ಇಟ್ಟುಕೊಂಡಿದ್ದಾನೆ ಎಂದು ಕೇಳಿದ್ದೆ. ಅವನನ್ನು ಬಿಟ್ಟು ಇಲ್ಲಿ ಯಾಕೆ….ದೇವಿಯ ವಿಚಾರದಿಂದಲೋ ಏನೋ ಚಿಕ್ಕಪ್ಪನಿಗೆ ತೊಡೆಗಳಲ್ಲೇ ನಡುಕ ಬಂದಂತಾಯಿತು. ಥೂ! ಈ ಕಳ್ಳ ಹಾದರಗಿತ್ತಿ ಮೆಲ್ಲನೆ ಎದ್ದು ಇಲ್ಲಿ ಬಂದುಬಿಟ್ಟರೆ…ಬಂದು ಕದ ಬಡಿದೇ ಬಿಟ್ಟರೆ….ನಾ ತಪ್ಪಿ ಕದ ತೆರೆದೇ ಬಿಟ್ಟರೆ….ಇಷ್ಟು ವರ್ಷ ಮಾಡದೇ ಇದ್ದುದನ್ನು ಈಗ… ಎಲ್ಲರನ್ನು ಬಿಟ್ಟು ಈ….ಅಂಗಡಿಯ ಗಲ್ಲೆಯ ಮೇಲೆ ಕೂತಾಗ ಕೊಟ್ಟಿಗೆಯಲ್ಲಿ ಹಾವು ನೋಡಿದ್ದನ್ನು ಹೇಳುವ ನೆವಮಾಡಿ…ಬಂದಿದ್ದಳಲ್ಲ. ಓಹ್! ಎಂದರು ಚಿಕ್ಕಪ್ಪ-ಬೇರೆ ಏನೋ ನೆನಪಾದಂತೆ. ಅರೆ! ಆಗಿನಿಂದ ಹೇಗೆ ಮರೆತೇಹೋಯಿತೋ! ಆಗ ಮೂಲೆಯಲ್ಲಿ ಸರಸರವೆಂದ ಸದ್ದಾದಗಲೂಸರಸರವೆಂದು ಸದ್ದಾದಾಗಲೂ ಹೇಗೆ ನೆನಪಾಗಲಿಲ್ಲವೋ. ಹೀಗೆ ಕದ ಮುಚ್ಚಿ ದೀಪ ತೆಗೆದು ಒಬ್ಬನೆ ಮಲಗುವುದು ಶಕ್ಯವಿಲ್ಲಪ್ಪ ಎಂದುಕೊಂಡು ಹಿಂದು ಮುಂದಿನ ವಿಚಾರ ಮಾಡದೇ ಕೋಣೆಯ ಕದ ತೆರೆದರು. ಒಳ ಜಗಲಿಯಲ್ಲಿ ದೇವಿ ಮಗ್ಗಲು ಸರಿಯುತ್ತ ಏನೋ ಅಂದಂತೆನಿಸಿತು. ಒಡೆಯಾ ಅಂದಳೇ? ಕೋಣೆ ತೆರೆದುದನ್ನು ತಪ್ಪು ತಿಳಿದಳೇ? ಎದ್ದು ಬರುವಳೇ? ಕತ್ತಲೆ ತುಂಬಿದ ನನ್ನ ಕೋಣೆಗೆ ನುಗ್ಗಿ….ಬೇಡಪ್ಪ ಬೇಡ. ದೇವರು ಮೆಚ್ಚುವ ಕೆಲಸ ಅಲ್ಲವಿದು. ಅಲ್ಲ ಅಲ್ಲ ಅಲ್ಲ ಎಂದುಕೊಂಡು( ಯಾರೋ ಹೌದೂ ಹೌದೂ ಹೌದೂ ಎನ್ನುವವರನ್ನು ಪ್ರತಿಭಟಿಸುವವರಂತೆ!)ಸಯಲೀಸಾಯಲೀ ಇಲ್ಲಿ ಮಲಗುವುದೇ ಬೇಡ. ಅಲ್ಲೇ ಹೋಗುತ್ತೇನೆ. ಅಲ್ಲೇ ಮಲಗ್ತೇನೆ ಎಂದು ಕಳ್ಳಹೆಜ್ಜೆ ಇಡುತ್ತ ತುಂಬಿದ ಕತ್ತಲೆಯಲ್ಲೇ ಕೋಣೆಯ ಹೊರಗೆ ನಡೆದರು.
*
*
*
ಅರೆನಿದ್ದೆಯಲ್ಲಿ ಎಚ್ಚರಗೊಂಡವಳ ಹಾಗೆ ದೇವಿ ಭಡಕ್ಕನೆ ಹಾಸಿಗೆಯಲ್ಲಿ ಎದ್ದು ಕುಳಿತಳು. ಸುತ್ತಲೂ ಕಣ್ತೆರೆದು ನೋಡಿದಳು. ಎಲ್ಲೆಲ್ಲೂ ಕತ್ತಲೆ. ಎಲ್ಲವೂ ಸ್ತಬ್ದ, ನಿಶ್ಯಬ್ದ, ಅಯ್ಯೋ ತನ್ನ ಹಾಳು ಎಚ್ಚರಗೇಡಿತನವೇ! ಹಾಳು ನಿದ್ದೆಯೆ! ಎಷ್ಟು ರಾತ್ರಿಯಾಯಿತೋ ಏನೋ, ತಾನು ಬರುವ ಹಾದಿ ನೋಡಿ ನೋಡಿ ಬೇಜಾರುಪಟ್ಟು ಮಲಕೊಂಡರೋ ಏನೋ!ಥೂ ಥೂ! ದೊಡ್ಡ ಒಡೆದೀರು ಅಮ್ಮನೋರಿಗೆ ನಿದ್ದೆ ಹತ್ತುತ್ತಲೇ ಎದ್ದು ಹೋಗೋಣಾಂತ ಮಾಡಿದ್ದೆ. ಅಮ್ಮನೋರಿಗೆ ಇನ್ನೂ ಎಚ್ಚರವಿರಬೇಕು ಎಂತ ತಿರುಗಿ ಅಡ್ಡವಾದಲ್ಲೇ ಪೂರ ನಿದ್ದೆ ಹತ್ತಿಬಿಡಬೇಕೆ?….ದೂರವೆಲ್ಲೋ ನಾಯಿ ಬೊಗಳಿದ್ದು, ಅದರ ಹಿಂದೆಯೇ ಯಾರೋ ಸುಮ್ಮನೆ ಬಾಯಿ ಮುಚ್ಚಿ ಬಿದ್ದಿರು ಎಂದದ್ದು ಕೇಳಿಸಿತು. ಅರೆ! ನಮ್ಮ ಸಂಕಪ್ಪಣ್ಣನ ದನಿಯಲ್ಲವೆ: ಉತ್ತುಮಿಯ ಮನೆಯಲ್ಲಿನ್ನೂ ಎಚ್ಚರವಿದ್ದಾರೆ. ರಾತ್ರಿ ಬಹಳ ಆಗಿಲ್ಲ ಹಾಗಾದರೆ! ತನಗೆ ಅಡ್ಡವಾದಲ್ಲೇ ತುಸು ಜೊಂಪು ಹತ್ತಿರಬೇಕು, ಅಷ್ಟೇ, ಓಹ್ ಸುಳ್ಳೇ ಹೆದರಿದೆ. ಈಗಲೂ ಹೊತ್ತಾಗಿಲ್ಲ ಹಾಗಾದರೆ, ಇನ್ನೂ ಎಚ್ಚರವಿರಬಹುದು ಹಾಗಾದರೆ. ತನ್ನ ಹಾದಿಯನ್ನೇ ಕಾಯುತ್ತಿರಬಹುದು ತನ್ನ ಸಣ್ಣ ಒಡೇದಿರು ಎಂದುಕೊಳ್ಳುವಾಗ ದೇವಿಯ ಮೈ ನವರಿಗೊಳಗಾಯಿತುನವಿರಿಗೊಳಗಾಯಿತು. ಏನೋ ನೆನಪಾದವಳಂತೆ ಸರಕ್ಕನೆ ರಟ್ಟೆಯನ್ನು ಮೂಗಿಗೆತ್ತಿ ಮೂಸಿ ನೋಡಿದಳು. ಹುಚ್ಚುಮುಂಡೇದು! ತನ್ನ ಬೆವರಿನ ವಾಸನೆ ತನಗೇ ಬಂದೀತೆ?-ದೇವಿ ಮನಸ್ಸಿನಲ್ಲೇ ನಕ್ಕಳು. ಆಗ ಮೂರು ಸಂಜೆಯ ಹೊತ್ತಿಗೆ ತಾನು ಸ್ನಾನ ಮಾಡುತ್ತಿದ್ದುದನ್ನು ಒಡತಿ ನೋಡಿ ಇಷ್ಟು ಹೊತ್ತು ಮಾಡಿ ಯಾಕೆ ಜಳಕ ಮಾಡ್ತೀಯೇ ದೇವೀ? ನೆಗಡೀ-ಗಿಗಡೀ ಆದೀತು ಎಂದಾಗ, ಮೈಯೆಲ್ಲ ಬೆವರಿನಿಂದ ಜಿಗುಟು ಜಿಗುಟು ಆಗಿದೆ ನೋಡಿ ಅಮ್ಮಾ. ಅಬ್ಬಾ ಎಂಥಾ ಸೆಕೆ ನೋಡಿ ಎಂದಾಗ ಒಡತಿಗೆ ಅರ್ಥ ಆಯ್ತೋ ಇಲ್ಲವೋ ಎಂದುಕೊಳ್ಳುತ್ತ ಕತ್ತಲೆಯಲ್ಲಿ ಕುಳಿತಲ್ಲೇ ನಾಚಿದಳು. ಆಗ ತಾನು ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದಾಗ ತನ್ನನ್ನು ನೋಡ್ತಾ ನೋಡ್ತಾ ತನ್ನ “ಇವು” ಕಣ್ಣಿಗೆ ಬಿದ್ದಾಗ ನಾಚಿದಾಗಲೇ(ನಾಚಿದಾಗ ಎಷ್ಟು ಚೆಂದ ಕಾಣ್ತಾರೆ ಅವರು!)ತನಗೆ ಗೊತ್ತಾಗಿತ್ತು. ನಾಣಿಗೆ ಮನೆಯ ಕಿಟಿಕಿಯೊಳಗಿನಿಂದ ಹಣಕಿ ನೋಡುವಾಗ, ನೋಡಿದ್ದು ತನಗೆ ತಿಳಿಯಿತು ಎಂತ ತಿಳಿದ ಕೂಡಲೇ ಹ್ಯಾಗೆ ನಾಚಿದರು! ಆಮೇಲೆ ಇಡೀ ದಿನ ತನ್ನ ಕಡೆ ನೋಡೋಕೂ ನಾಚ್ತಿದ್ರು. ದೀಪ ಹಚ್ಚುವ ಹೊತ್ತಿಗೆ ಮಾತ್ರ ಅದೇ ಜಳಕಮಾಡಿ, ಒಗೆದ ಸೀರೆ ಉಟ್ಟು ಬಂದ ತನ್ನನ್ನು ಮಿಕಿ ಮಿಕಿ ನೋಡುವಾಗ (ಅವರ ಕಣ್ಣುಗಳೇ ಚೆಂದ!) ತಾನು ನಾಚಿ, “ಅದೇನರಾ ಕೈಯೊಳಗೆ ಹಿಡಿದದ್ದು” ಎಂದು ಕೇಳಿದಾಗ ಕೈಯೊಳಗಿನ ಜಿಗಿಜಿಗಿಸುವ ನಳಿಗೆಯಿಂದ ತನ್ನ ಕಣ್ಣುಗಳ ಮೇಲೆ ಜಿಗ್ ಎಂದು ಬೆಳಕು ಬಿಟ್ಟು ತನ್ನನ್ನು ನಗಿಸಿದರಲ್ಲ ಆವಾಗಲೇ ತನಗೆ ತಿಳಿದಿತ್ತು. ಊಟವಾದ ಮೇಲೆ ಎಲ್ಲರೂ ಹಾಸಿಗೆಯಲ್ಲಿ ಒರಗಿದಾಗ ಮಾಳಿಗೆಯ ಮಾಡಿನ ಮೇಲೆ ಜಿಗ್ ಜಿಗ್ ಎಂದು ಬೆಳಕು ಬಿಟ್ಟದ್ದು ತನಗೆ ಯಾಕೆಂದು ಗೊತ್ತಿಲ್ಲವೇ ಎನ್ನುತ್ತ ಹಾಸಿಗೆಯಲ್ಲಿ ಎದ್ದೇ ನಿಂತಳು. ಒಳಗಿನ ಹಾಲಿನ ಆಚೆ ನಿಂತ ದೊಡ್ಡ ಒಡೆಯ ಒಡತಿಯರ ಕೋಣೆಗಳ ಕಡೆ ಕಣ್ಣು ಹಾಯಿಸುತ್ತ ಇವರದೂ ಒಂದು ವಿಚಿತ್ರವಪ್ಪ-ಎಲ್ಲೂ ಕೇಳಿಯೂ ಗೊತ್ತಿಲ್ಲದಂಥದ್ದು ಎನ್ನುತ್ತ- ಈಗ ಅದರ ವಿಚಾರವೂ ಬೇಡ ಎನ್ನುವವಳಂತೆ ಕಳ್ಳ ಹೆಜ್ಜೆ ಇಡುತ್ತ ಮಾಳಿಗೆಯ ಮೆಟ್ಟಿಲು ಏರಿದಳು, ಮೆಲ್ಲನೆ-ಒಂದೊಂದಾಗಿ.
*
*
*
ನಿದ್ದೆ ಎಚ್ಚರಗಳ ಗಡಿಸೀಮೆಯಲ್ಲಿದ್ದ ಅವನ ಕಿವಿಗೆ ‘ಒಡೆಯ’ ಎಂದು ಕರೆದಂತೆ, ಬಳೆಗಳ ಸದ್ದಾದಂತೆ, ಮಾಡಿನಲ್ಲೇ ಏನೋ ಚಿಂವ್ ಚಿಂವ್ ಎಂದು ಓಡಿದ್ದರ ಹಿಂದೆಯೇ ಏನೋ ಸರಸರ್ರೆನ್ನುತ್ತ ಪುಸ್ ಎಂದಂತೆ, ಮೊದಲಿನ ಸದ್ದೇ ಇನ್ನೊಂದಾದಂತೆ, ಇವೆರಡೂ ಒಂದಾದಂತೆ ಕೇಳಿಸಿ, ಕೇಳಿಸಿದ್ದಾದರೂ ಹೌದೋ ಅಲ್ಲವೋ ಎನ್ನುವ, ನಿದ್ದೆಯೋ ಎಚ್ಚರವೋ ಯಾವುದೂ ತಿಳಿಯದ ಸ್ಥಿತಿಯಲ್ಲಿ ಅವನು ಭಡಕ್ಕನೆ ಹಾಸಿಗೆಯಲ್ಲಿ ಎದ್ದು ಕುಳಿತು ಕೈಯಲ್ಲಿ ಹಿಡಿದೇ ಮಲಗಿದ ಬ್ಯಾಟರಿಯ ಕಣ್ಣು ಕುಕ್ಕಿಸುವ ಶುಭ್ರ ಬೆಳಕಿನ ಚಕ್ರವನ್ನು ಮೇಲಿನ ಹಂಚುಗಳ ಮೇಲೆ ತೂರಿ ಹೌಹಾರಿದವನ ಹಾಗೆ ‘ಹಾವು!’ ಎಂದ. “ಎಲ್ಲಿ? ಎಲ್ಲಿ?” ಎಂದಿತು ಮಾಳಿಗೆಯ ಬಲಗಡೆಯ ಮೂಲೆಯಲ್ಲಿಂದ…ಅವನ ಚಿಕ್ಕಮ್ಮನ ಹೆದರಿದ ದನಿ! “ಹೌದೆ ಹೌದೆ” ಎಂದು ಕೇಳಿತು ಎಡಬದಿಯ ಮೂಲೆಯಲ್ಲಿಂದ ಚಿಕ್ಕಪ್ಪನ ದನಿ!! ಕಾಲಬದಿಗೆ ಅದೇನು ಬಳೆಗಳ ಸದ್ದು? ದೇವಿಯೇ? ಅರೆ! ಎಂದ. ಬ್ಯಾಟರಿಯ ಸ್ವಿಚ್ಚನ್ನೊತ್ತಿಯೇ ಹಿಡಿದು ಕುಳಿತ. ಹಂಚುಗಳ ಮೇಲೆ ಮೂಡಿದ ಬೆಳಕಿನ ವರ್ತುಲದಲ್ಲಿ ಕಂಡಿರಬಹುದಾದ ಹಾವಿಗಿಂತ ಹೆಚ್ಚಾಗಿ ತನ್ನ ಸುತ್ತಲೂ ಕತ್ತಲೆಯಲ್ಲೇ ಸದ್ದಿಲ್ಲದೇ ಬಂದು ನೆರೆದ ಚಿಕ್ಕಮ್ಮ, ಚಿಕ್ಕಪ್ಪ, ದೇವಿಯರು ಅವನನ್ನು ಹೆದರಿಸಿದರು. ಚಿಕ್ಕಮ್ಮ ಚಿಕ್ಕಪ್ಪ ಹಾಸಿಗೆ ಇಲ್ಲದೇನೆ ಬರಿ ನೆಲದ ಮೇಲೆ ಮಲಗಿದ್ದರೇನೋ; ಈಗ ಎದ್ದು ಕೂತು ತನ್ನೆಡೆಗೆ ನೋಡುತ್ತಿದ್ದರು. ದೇವಿ ಹೌಹಾರಿದವಳ ಹಾಗೆ ನೋಡುತ್ತ ತನ್ನ ಕಾಲಬದಿಯ ಮಾಳಿಗೆಯ ಪ್ರವೇಶದ್ವಾರದ ಬಳಿಯಲ್ಲಿ ನಿಂತೇ ಇದ್ದಳು. ಅರೆ! ಇವರೆಲ್ಲ ಇಲ್ಲಿ ಯಾಕೆ? ಹೇಗೆ? ಏನೂ ತಿಳಿಯದೆ ತಲ್ಲಣಿಸಿದ. ತಾವಿದ್ದ ಪರಿಸ್ಥಿತಿಯ ಅರಿವು ಬಂದಂತೆ, ಚಿಕ್ಕಮ್ಮ “ದೀಪ ಹಾಗೇ ಹಿಡಿದಿರು ಮಗೂ, ಇದೊಂದು ತಿರುತಿರುಗಿ ಯಾಕೆ ಮನೆ ಹೊಕ್ಕುತ್ತದೆಯೋ. ಆಗ ನಮ್ಮ ಕೋಣಿಯಲ್ಲಿ ಮಂಚದ ಕೆಳಗೆ ಹರಿದಾಡಿದ್ದು ಕೇಳಿ ಹೆದರಿ ಇಲ್ಲಿ ಬಂದೆವು. ಈಗ ಇಲ್ಲೇ ಬಂತೇನೋ” ಎಂದಳು. ಹೆಂಡತಿಯ ಪ್ರಸಂಗಾವಧಾನವನ್ನು ಮೆಚ್ಚಿ, “ಹೌದಪ್ಪಾ ನಾವು ಮೇಲೆ ಬಂದಾಗ ನಿನಗೆ ಚಲೋ ನಿದ್ದೆಹತ್ತಿತ್ತು., ನಿನ್ನ ನಿದ್ದೆ ಹಾಳಾಗದಿರಲಿ ಎಂದು ಸದ್ದು ಮಾಡದೇ ಕತ್ತಲೆಯಲ್ಲೇ ಇಲ್ಲಿ ಬಂದು ಮಲಗಿದೆವು” ಎಂದರು ಚಿಕ್ಕಪ್ಪ. “ನಾಳೆ ಆ ಮಂತ್ರವಾದಿಗೆ ಇನ್ನೊಮ್ಮೆ ಹೇಳಿಕಳಿಸುತ್ತೇನೆ” ಎಂದರು. ದೇವಿಯೂ ನಡುಗುವ ದನಿಯಲ್ಲಿ “ನೀವಿಬ್ಬರೂ ಮೇಲೆ ಬರುತ್ತಲೇ ಅದು ನನ್ನ ಹಾಸಿಗೆಯ ಹತ್ತಿರ ಬಂದು ಪುಸ್ ಎಂದ ಹಾಗಾಯ್ತು ಒಡೆಯಾ. ಹೆದರಿ ನಾನೂ ಮೇಲೆ ಓಡಿ ಬಂದೆ” ಎಂದಳು. ಅವರೆಲ್ಲರ ದನಿಯಲ್ಲಿಯ, ಮೋರೆಯ ಮೇಲಿನ ಭೀತಿ ಕಂಡು ತಾನೂ ಹೆದರಿದ. ಬೆಳಕು ಬಿದ್ದ ಮಾಡಿನ ಹಂಚುಗಳಲ್ಲಿ ಏನೋ ಕಂಡಂತಾಗಿ, “ಹಾಗಾದರೆ, ಈಗ ಕೆಳಗೇ ಹೋಗುವುದು ಒಳ್ಳೆಯದೇನೋ, ಅದು ಇಲ್ಲೇ ಎಲ್ಲೋ ಮಾಡಿನಲ್ಲೇ ಹರಿದಾಡುತ್ತಿರಬೇಕು” ಎಂದಾಗ ಎಲ್ಲರೂ ಆ ಮಾತಿಗೆ ಒಪ್ಪಿ ಅವಸರವಸರವಾಗಿ ಕೆಳಗೆ ನಡೆದರು. ನಡುವಿನ ಹಾಲಿನಲ್ಲಿ ಮನೆಯಲ್ಲಿಯ ಎರಡೂ ಕಂದೀಲುಗಳನ್ನು ರಾತ್ರಿಯಿಡೀ ಹೊತ್ತಿಸಿಟ್ಟು ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಒರಗಿ ನಿದ್ದೆಯ ಶಾಸ್ತ್ರಮಾಡುತ್ತ ಬೆಳಗಾಗುವುದನ್ನೇ ಇದಿರು ನೋಡಹತ್ತಿದರು.
ಬೆಳಗಾಗುತ್ತಲೇ, ಇನ್ನೂ ಉರುಯುತ್ತಿದ್ದಉರಿಯುತ್ತಿದ್ದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ, ತಂಬಿಗೆ ಹಿಡಿದು ಗುಂದೆಗೆ ಹೋಗಿ ಹಿಂತಿರುಗಿ ಬರುವಾಗ ಹಾದಿಯಲ್ಲಿ ಹತ್ತುವ ಪುರುಷೋತ್ತಮನ ಮನೆ ಹೊಕ್ಕು, ಅವನನ್ನು ಮಾತನಾಡಿಸಿ, ತಿರುಗಿ ಚಿಕ್ಕಪ್ಪನ ಮನೆ ಸೇರುವ ಹೊತ್ತಿಗೆ, ಅವನ ರಜೆಯ ಕಾರ್ಯಕ್ರಮದಲ್ಲಿ ದೊಡ್ಡ ಬದಲಾಗಿತ್ತು. ಚಹ ಕುಡಿಯುವ ಹೊತ್ತಿಗೆ, “ಚಿಕ್ಕಮ್ಮಾ, ಪುರುಷೋತ್ತಮ ಈಗ ಕುಮಟೆಗೆ ಹೋಗುತ್ತಾನಂತೆ. ನಾನೂ ಈವತ್ತೇ ಅಕ್ಕನ ಮನೆಗೆ ಹೋಗುತ್ತೇನೆ ಆಗದೆ? ಹೇಗಾದರೂ ಪುರುಷೋತ್ತಮ ಜತೆ ಸಿಗುತ್ತಾನಲ್ಲ,” ಎಂದ ಮನೆಯಲ್ಲಿ ಹೊಕ್ಕ ಹಾವಿಗೆ ಪಾಪ, ಹುಡುಗ ಹೆದರಿದ್ದಾನೆ ಎಂಬುದನ್ನರಿತ ಚಿಕ್ಕಮ್ಮ ಹಾಗೆ ಮನೆಯಲ್ಲಿ ಹಾವು ಇದ್ದಾಗ ಅವನನ್ನು ನಿಲ್ಲಿಸಿಕೊಳ್ಳುವುದೂ ಸರಿಯಲ್ಲವೇನೋ ಎಂದು ಬಗೆದು ನಿಲ್ಲೆಂದು ಒತ್ತಾಯ ಪಡಿಸದೇ, “ಇನ್ನೆರಡು ದಿನ ನಿಂತರಾಗುತ್ತಿತ್ತು” ಎಂದಳು. ತಮ್ಮವೇ ಆದ ಯೋಚನೆಗಳ ಗುಂಗಿನಲ್ಲಿದ್ದ ಚಿಕ್ಕಪ್ಪ ಮಾತನಾಡಲಿಲ್ಲ. ಚಹ ಕುಡಿದು, ಉಡುಪು ಮಾಡಿ ಹೊರಡಲನುವಾದಾಗ ದಣಪೆಯವರೆಗೂ ಮುಟ್ಟಿಸಲು ಬಂದ ಚಿಕ್ಕಮ್ಮ-ಚಿಕ್ಕಪ್ಪರ ಮೋರೆಗಳ ಮೇಲೆ ಮೂಡಿದ ಭಾವನೆಗಳನ್ನು ತಿಳಿಸಲು ಪ್ರಯತ್ನಿಸಿ, ಆಗದೇ, ದಣಪೆ ತಲುಪಿದ್ದೇ ಏನಾದರೂ ಮಾತನಾಡಬೇಕು ಎನ್ನುವ ಇಚ್ಛೆಯಿದಿಯೆಂಬಂತೆಇಚ್ಛೆಯಿದೆಯೆಂಬಂತೆ, “ಆ ಮಂತ್ರವಾದಿಯನ್ನು ಆದಷ್ಟು ಬೇಗ ಕರೆಸಿ ಆ ಹಾವನ್ನು ತೆಗೆಯಿಸಿರಿ,” ಎಂದ.
“ಮಂತ್ರವಾದಿಯನ್ನು ಎಷ್ಟು ಸಲ ಕರೆಸಿದ್ದಾಯಿತು. ಏನೂ ಉಪಯೋಗವಿಲ್ಲ.” ಎಂದಳು ಚಿಕ್ಕಮ್ಮ. ಅವಳ ದನಿಯಲ್ಲಿ ಚಿಂತೆ ಇತ್ತೇ?
“ಹಾಗಾದರೆ ಆ ಮನವೇಲನಿಗೆ ಹೇಳಿ, ಇಲ್ಲವೇ ಬಂದೂಕ ಇದ್ದ ಶಂಕರರಾಯರಿಗೆ ಹೇಳಿ ಕೊಲ್ಲಿಸಿದರಾಗದೇ?”
“ಬಿಡ್ತು ಬಿಡ್ತು. ಹಾಗೆಲ್ಲ ಮಾತನಾಡಬಾರದಪ್ಪ, ಹಾವನ್ನು ಕೊಲ್ಲುವುದು ಬ್ರಹ್ಮಹತ್ಯೆಯಷ್ಟು ಪಾಪ” ಎಂದರು ಚಿಕ್ಕಪ್ಪ, ತೀವ್ರ ಅಸಮಧಾನದಅಸಮಾಧಾನದ ದನಿಯಲ್ಲಿ.
ಅದಾಗಲೇ ಅವರನ್ನು ಬೀಳ್ಕೊಟ್ಟು ಓಣಿಯಲ್ಲಿ ಕಾಲಿರಿಸಿದ ಅವನು ಚಿಕ್ಕಪ್ಪನ ಮಾತುಗಳನ್ನು ಮೆಲುಕುಹಾಕುತ್ತ ಓಣಿಯ ತುದಿಯನ್ನು ಸಮೀಪಿಸುತ್ತಿದ್ದಾಗ, ಮನೆಯಿಂದ ಹೊರಬಿದ್ದದ್ದೇ, ಅಂಗಳದಲ್ಲಿ ಕಂಡ ದೇವಿಯ ಮೋರೆ ಕಣ್ಣ ಮುಂದೆ ನಿಂತಂತಾಗಿ, ಅವಳು ತನ್ನ ಕಡೆಗೆ ನೋಡಿದ ನೋಟದಲ್ಲಿ ತನ್ನ ಹತ್ತಿರ ಏನನ್ನೋ ಮಾತನಾಡುವ ಬಯಕೆ ಇದ್ದಂತಿರಲಿಲ್ಲವೇ ಎಂದುಕೊಳ್ಳುತ್ತ, ಓಣೆಯಓಣಿಯ ಕೊನೆಯಲ್ಲಿ ರಾಜರಸ್ತೆಗೆ ಹೊರಳಿ ಕಾಣದಾದ.
*****
(೧೯೬೫)
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ