ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ ಮನೆಗೆ ಹೋಗಿ ಬರುತ್ತೇನೆ,” ಎಂದು ಹೇಳಿ, ಅವಳ ಉತ್ತರದ್ದಾಗಲೀ ಬರವಿನದ್ದಾಗಲೀ ಹಾದಿ ಕಾಯದೆ, ಕೈಯಲ್ಲೆತ್ತಿಕೊಂಡ ಉದ್ದನ್ನ ಬಿದಿರಿನ ದೊಣ್ಣೆಯನ್ನೂರುತ್ತ ಮೆಲ್ಲನೆ ಜಗಲಿಯ ಮೆಟ್ಟಿಲಿಳಿದು ಅಂಗಳಕ್ಕೆ ಬಂದದ್ದೇ, ಹೊರಗೆ ಹೊತ್ತಿಗೆ ಮೊದಲೇ ಕವಿದ ಕತ್ತಲೆ ನೋಡಿ, ಆಕಾಶದತ್ತ ಕಣ್ಣೆತ್ತಿ, ‘ಅರೆ ಅಲ್ಲಾ’ ಎನ್ನುತ್ತಿರುವಾಗ ದೂರ ಹುಣಿಸೆಮರಗಳ ತೋಪಿನಾಚೆಯ ಗುಡ್ಡಗಳ ನೆತ್ತಿಯಲ್ಲಿ ಸದ್ದೂ ಕೇಳಿಸಿದಂತಾಗಿ, ಈ ಅಡ್ಡತಿಂಗಳಲ್ಲಿ ಮಳೆ ಬರುವಂತಿದೆಯಲ್ಲಾ ಎಂದುಕೊಂಡರೂ ಅದರ ಪರಿವೆಯೇ ಇಲ್ಲದವರಂತೆ ಅಂಗಳ ದಾಟಿ ಓಣಿಯತ್ತ ಸಾಗಿದ್ದರು.
ತುಂಬ ಮುದುಕರಾದ ಬುಡಣಸಾಬರ ವಯಸ್ಸು ಆ ಹಳ್ಳಿಯಲ್ಲಿ ಸರಿಯಾಗಿ ಯಾರಿಗೂ ಸ್ವತಃ ಬುಡಣಸಾಬರಿಗೂ-ಗೊತ್ತಿರಲಿಲ್ಲವಾದರೂ ಎಲ್ಲರ ಆದರ ಪ್ರೀತಿಗಳಿಗೆ ಪಾತ್ರರಾದ ಈ ಹಿರಿಯರು ಆ ಭಾಗದಲ್ಲೇ ತೀರ ಹಳೆಯರೆಂಬುದು ಎಲ್ಲರೂ ಒಪ್ಪಿದ ಮಾತು. ಅಂಗೈ ಮುಚ್ಚುವಷ್ಟು ನೀಳವಾದ ಕೈಗಳುಳ್ಳ, ಪಾದಗಳವರೆಗೂ ಮುಟ್ಟುವಷ್ಟು ಉದ್ದವಾದ ಕಪ್ಪು ನಿಲುವಂಗಿ; ಅದರ ಮೇಲೆ ಹೊಕ್ಕಳದವರೆಗೂ ಹವ್ವನೆ ಹರಡಿ ಬಿದ್ದ ನರೆತ ತಲೆ ಮೀಸೆ ಗಡ್ಡಗಳಿಂದ ಇಳಿದ ಬೆಳ್ಳಗಿನ ಕೂದಲು; ನೆಡೆಯುವಾಗ ಆರು ಪೂಟು ಎತ್ತರವಾದ ಇವರ ಕೈಯಲ್ಲಿ ಇವರಿಗಿಂತಲೂ ಒಂದು ಮುಷ್ಟಿ ಎತ್ತರವಾದ ಬಿದಿರಿನ ಬೆತ್ತ. ಪುರಾಣಕಾಲದ ಋಷಿಗಳಂತೆ, ಮಂತ್ರವಾದಿಯಂತೆ, ಪವಾಡಪುರುಷರಂತೆ-ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ-ಕಂಡ ಬುಡಣಸಾಬರಿಗೆ ಆ ಹಳ್ಳಿಯಲ್ಲಿ ಇದ್ದ ಹತ್ತಿರದ ಬಳಗವೆಂದರೆ ಹಳ್ಳಿಯ ಪೂರ್ವದ ತುದಿಯಲ್ಲಿರುತ್ತಿದ್ದ ಮೊಮ್ಮಗ ಕಾಸೀಮ ಹಾಗೂ ಹಲ್ಳಿಯ ಇನ್ನೊಂದು ತುದಿಯಲ್ಲಿರುತ್ತಿದ್ದ ಮೊಮ್ಮಗಳು, ಫಾತೀಮಾ. ರಾತ್ರಿಯ ಊಟ ಮುಗಿಸಿದ್ದೇ ಕಾಸೀಮನ ಮನೆಯಿಂದ ಹೊರಬಿದ್ದವರು ಫಾತಿಮಾಳ ಮನೆಯನ್ನು ಸೇರಿ, ರಾತ್ರಿಯನ್ನು ಅಲ್ಲೇ ಕಳೆದು ಮರುದಿನ ಬೆಳಕು ಹರಿಯುವ ಮೊದಲೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಪ್ರಾರ್ಥನೆಯಾದದ್ದೇ ತಿರುಗಿ ಕಾಸಿಮನ ಮನೆಗೆ ಹೊರಡುತ್ತಿದ್ದರು. ದಿನವೂ ತಪ್ಪದೇ ಸಂಜೆ ಬೆಳಿಗ್ಗೆ, ಪೂರ್ವದಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ನಡೆಯುತ್ತಿದ್ದ ಈ ವೃದ್ಧ ಸಂಚಾರಗಳು ಆ ಹಳ್ಳಿಯಲ್ಲಿ ಪ್ರಸಿದ್ಧವಾಗಿದ್ದವು.
ಮುದಿ ಹೆಜ್ಜೆಗಳನ್ನಿಡುತ್ತ ಹಿತ್ತಿಲ ದಣಪೆ ದಾಟಿದ ಬುಡಣಸಾಬರು ಬಡಕೂಬೇಣವನ್ನು ಕಳೆದು, ರಸ್ತೆ ಸೇರಿ, ಪೇಟೆಗೆ ಬರುವ ಹೊತ್ತಿಗೆ ಅಂಗಡಿಗಳಲ್ಲೆಲ್ಲ ದೀಪ ಹಚ್ಚುವ ಅವಸರ ಕಂಡು ಬಂದಿತು. ದೊಡ್ಡ ಅಂಗಡಿಯ ಮಹದೇವಶೆಟ್ಟಿ ಹೊಸತಾಗಿ ತಂದ ಗ್ಯಾಸಬತ್ತಿಯನ್ನು ಪಂಪು ಹೊಡೆದುಹೊಡೆದು ಬೆಳಗಿಸುತ್ತಿದ್ದಂತೆ, ಮಳೆ ಬರುವ ಲಕ್ಷಣ ಕಂಡರೂ ಹಾಯಾಗಿ ಮನೆಯಲ್ಲಿ ಕೂಡುವುದನ್ನು ಬಿಟ್ಟು ಹೊರಗೆ ಬಿದ್ದ ಬುಡಣಸಾಬರನ್ನು ಕಂಡು, “ಮೊಮ್ಮಗಳ ಮನೆಗೆ ಹೊರಟಂತಿದೆ ಬುಡಣಸಾಬರು. ಮಳೆ ಬರುತ್ತಿದೆಯೊ ಏನೋ, ಕೊಡೆಯಿಲ್ಲದೇ ಹೊರಟು ಬಿಟ್ಟಿರಲ್ಲಾ” ಎಂದಾಗ, ಬರಿಯೆ ನಕ್ಕ ಬುಡಣಸಾಬರ ಬೆಳ್ಳಗಿನ ಗಡ್ಡ ಮೀಸೆಗಳ ನಡುವೆ ಮಿಂಚಿದ, ಇನ್ನೂ ಗಟ್ಟಿಯಾಗೇ ಉಳಿದ ಹಲ್ಲುಗಳ ಸಾಲುಗಳಿಂದ ಸುಖಪಟ್ಟು, ಆಗಲೇ ಭುಗ್ ಎಂದು ಶುಭ್ರವಾಗಿ ಹೊತ್ತಿಕೊಂಡ ಗ್ಯಾಸ್ ಬತ್ತಿಯನ್ನೆತ್ತಿ ಅಂಗಡಿಯ ಮಾಡಿಗೆ ತೂಗುಹಾಕುತ್ತಿದ್ದಾಗ, ಬುಡಣಸಾಬರು ಮುಂದೆ ನಡೆದರು. ಪೇಟೆಯನ್ನು ಹಿಂದೆ ಹಾಕಿ, ದೇವಕೀ ದೇಗುಲದತ್ತ ಹೊರಳುವಾಗ ರಸ್ತೆಯ ಮುರುಕಿಯಲ್ಲಿ ನಿಂತ, ಗೋಡೆಗಳ ಮೇಲೆಲ್ಲ ಸಣ್ಣ ಬೆಟ್ಟಗಳಂತಹ ಒರಲೆಯ ಹುತ್ತಗಳನ್ನು ಬೆಳೆಯಿಸಿಕೊಂಡ ಆ ಹಳೆಮನೆಯ ಮುದುಕ ಸದಾಶಿವರಾಯರು ಎಂದಿನಂತೆಯೇ ದಣಪೆಯ ಕಲ್ಲಿನ ಮೇಲೆ ಕೂತಿರದಿದ್ದುದನ್ನು ಕಂಡು, ಮುದುಕ ಮಳೆಗೆ ಹೆದರಿರಬೇಕು ಎಂದುಕೊಂಡು, ಮುಂದೆ ಸಾಗಿ, ಗುಡಿ ತಲುಪುವುದರೊಳಗೆ ಒಂದೆರಡು ಮಳೆಯ ಹನಿಗಳು ಮೈಮೇಲೆ ಉದುರಿದಂತಾದರೂ ಹೆಜ್ಜೆಯ ವೇಗವನ್ನು ಹೆಚ್ಚಿಸದೇ, ಗುಡಿಯಿದ್ದ ಹಿತ್ತಿಲ ಮೂಲೆಯಲ್ಲಿ ನಾಗಸಂಪಿಗೆ ಮರದ ಮರೆಯಲ್ಲಿದ್ದ ಬಾವಿಯಿಂದ ಪೂಜೆಗಾಗಿ ನೀರು ಸೇದುತ್ತಿದ್ದ ಗುನಗನ ಬೆನ್ನ ಬದಿಯನ್ನು ನೋಡುತ್ತ ನಿಂತವರು, ತಾವು ನಿಂತದ್ದಾದರೂ ಯಾಕೆ ಎಂದು ತಾವೇ ಆಶ್ಚರ್ಯಪಟ್ಟವರಂತೆ ಗುನಗ ತಮ್ಮತ್ತ ತಿರುಗುವ ಕ್ಷಣವನ್ನು ಕಾಯದೆ, ಮತ್ತೆ ಮುಂದೆ ನಡೆದರು. ಶಂಕರರಾಯರ ಹಿತ್ತಲು, ಪಟೆಲರ ಹಿತ್ತಲುಗಳನ್ನು ದಾಟಿ, ಮಸುಕುಮಸುಕಾದ ಹಳದಿ ಬಣ್ಣದ ಬೆಳಕನ್ನು ತೂರುವ ಕಾಚಿನ ಬುರುಡೆಯ ದೀಪ ತೂಗುತ್ತಿದ್ದ ಏಕನಾಥ ಶೆಟ್ಟಿಯ ಅಂಗಡಿಗೆ ಬರುವುದರೊಳಗೆ ಗುಡುಗಿನ ದೊಡ್ಡ ಸದ್ದೂ ಕೇಳಿಸಿದಾಗ, ನಡಿಗೆಯ ವೇಗವನ್ನು ತುಸು ಹೆಚ್ಚಿಸಿ, ಮೊಮ್ಮಗಳ ಮನೆಯ ಕಡೆ ಹೊರಳುವ ಓಣಿಯ ಬಾಯಲ್ಲಿ ನಿಂತ ನರಸಿಂಹನ ಅಂಗಡಿಗೆ ಬರುವಷ್ಟರಲ್ಲಿ ಉಬ್ಬಸ ಹತ್ತಿದಂತಾಗಿ, ತಡೆದು, ಅಂಗಡಿಯತ್ತ ನೋಡುತ್ತ, ಅಂಗಡಿಯಲ್ಲಿ ದೀಪವಿಲ್ಲದ್ದನ್ನು ಕಂಡು, ಇದು ಹೇಗೆ ಎಂದುಕೊಂಡು ಕಣ್ಣರಳಿಸಿ, ಹುಡುಗ ಈವತ್ತು ಅಂಗಡಿಯನ್ನು ಇಷ್ಟು ಬೇಗ ಹೇಗೆ ಮುಚ್ಚಿದ? ಎಂದೂ ಹೀಗೆ ಮಾಡಿದವನಲ್ಲ ಎಂದು ಕ್ಷಣಹೊತ್ತು ಅಸ್ವಸ್ಥಗೊಂಡು ಓಣಿಯಲ್ಲಿ ಕಾಲಿರಿಸುವ ಹೊತ್ತಿಗೆ ಎರಡೂ ಬದಿಯ ಹಿತ್ತಲುಗಳಲ್ಲಿ ದಟ್ಟವಾಗಿ ಬೆಳೆದು ನಿಂತ ಎತ್ತರವಾದ ಮರಗಳಿಂದಾಗಿ, ಆಕಾಶದಲ್ಲಿ ಕವಿದ ಮೋಡಗಳಿಂದಾಗಿ ಓಣಿಯಲ್ಲಿ ಮುತ್ತಿ ನಿಂತ ಕತ್ತಲೆಯಲ್ಲಿ ಏನೇನೂ ಕಾಣಿಸದಂತಾಗಿ, ದಾರಿ ತಪ್ಪಿದೆವೋ ಎಂದುಕೊಳ್ಳುವಷ್ಟರಲ್ಲಿ ‘ಸಳ್’ ಎಂದು ಮಿಂಚಿದ ಸಿಡಿಲಿನ ಧಾರೆ ಹಾವಿನಂತೆ ಬಳುಕಿ, ಹೆಡೆಬಿಚ್ಚಿ, ಕಣ್ಣು ಕುಕ್ಕಿಸುವ ಬೆಳಕನ್ನು ಕೆಳಗೆ ತನ್ನಂತೆಯೇ ಅಂಕುಡೊಂಕಾಗಿ ಹರಿದ ಚಿರಪರಿಚಿತವಾದ ದಾರಿಯ ಮೇಲೆ ಕ್ಷಣಕಾಲ ಚೆಲ್ಲಿ ಕಣ್ಣುಮುಚ್ಚಿತು;ದೂರ, ಮನವೇಲನ ದಣಪೆಯ ಇದಿರು, ಗದ್ದೆಗೆ ಗೊಬ್ಬರ ಸಾಗಿಸಲು ಉಪಯೋಗಿಸುತ್ತಿದ್ದ ಹರಕುಮುರುಕು ಚಕ್ಕಡಿಯೊಂದು ದಿಕ್ಕಿಲ್ಲದೆ ಬಿದ್ದಿತ್ತು. ಅದಕ್ಕೂ ಮುಂದೆ, ಉತ್ತುಮಿಯ ಹಿತ್ತಿಲ ದಣಪೆಯೊಳಗಿಂದ ಹೊರಬಿದ್ದ ಕರ್ರಗಿನ ನಾಯಿಯೊಂದು ಮಿಂಚಿಗೆ ಹೆದರಿ, ಬಾಲವನ್ನು ಕುಂಡೆಯಲ್ಲಿ ಸಿಕ್ಕಿಸಿ, ಪರಮೇಶ್ವರಿಯ ಮನೆಯತ್ತ ಓಡುತ್ತಿದ್ದುದೂ ಕಣ್ಣಿಗೆ ಬಿತ್ತು. ಅದಕ್ಕೂ ಆಚೆ, ಕೈತಾನನ ಮನೆಯವರೆಗೂ ಕ್ಷಣಕಾಲ ಕಾಣಿಸಿಕೊಂಡು ಮತ್ತೆ ಕತ್ತಲೆಯಲ್ಲಡಗಿ, ಹೊಂಚು ಹಾಕಿದ ಹಾಗೆ ತೆಪ್ಪಗೆ ಬಿದ್ದ ಸೀರಾದ ಓಣಿಯಲ್ಲಿ ಇನ್ನೊಂದು ನರಪ್ರಾಣಿ ಇರಲಿಲ್ಲ: ಬುಡಣಸಾಬರ ಮೈಮೇಲೆ ಮುಳ್ಳು ನಿಂತವು. ಎಂದೋ ಯಾವಾಗಲೋ ಸತ್ತುಹೋದ ಗೆಳೆಯರು, ಮಕ್ಕಳು, ಹಿರಿಯರು ಯಾರುಯಾರೆಲ್ಲ ನೆನಪಿಗೆ ಬಂದು ತಲ್ಲನಗೊಂಡು ಅದೀರ ಹೆಜ್ಜೆ ಇಡುತ್ತ ಮನವೇಲನ ಹಿತ್ತಲ ದಣಪೆ ತಲುಪುವುದರೊಲಗೆ, ಬೆನ್ನ ಹಿಂದುಗಡೆಯಲ್ಲಿ ಯಾರೊ ‘ಅಲಲ ಲಲಲ ಕೀ ಹಾ’ ಎಂದು ಒಳಗಿನ ಹುರುಪಿಗಿಂತ ಹೆಚ್ಚಾಗಿ ಕತ್ತಲೆಯಲ್ಲಿ ಹೋಗುವಾಗ ಪಟ್ಟ ಭೀತಿಯನ್ನು ಕಳೆದುಕೊಳ್ಳಲೆಂಬಂತೆ ಒದರುತ್ತ ಓಡೋಡುತ್ತ ಬರುವ ಹೆಜ್ಜೆಯ ಸಪ್ಪಳ ಕೇಳಿ, ತಡೆದಾಗ, ಕತ್ತಲೆಯಲ್ಲಿ ಅವರನ್ನು ಸಮೀಪಿಸುತ್ತಿದ್ದವನು, “ಇದೇ! ಬುಡಣಸಾಬರೋ ನೋಡ್ತೆ. ದೂರದಿಂದ ಯಾರೆಂದು ತಿಳಿಯದೆ ಎದೆಯಲ್ಲಿ ಧಸ್ ಆಯ್ತು ನೋಡಿ. ಇನ್ನೂ ಇಲ್ಲೇ ಇದ್ದೀರಲ್ಲ. ಪೇಟೆಯಲ್ಲಿ ನಿಮ್ಮನ್ನು ಯಾವಾಗ ನೋಡಿದ್ದೆ. ನಾನು ನಾಗೇಶ, ಪರಶುರಾಮಭಟ್ಟರ ಮಗ. ನರಸಿಂಹ ಆಡಲಿಕ್ಕೆ ಬಾ ಎಂದು ಹೇಳಿ ಕಳುಹಿಸಿದ್ದ. ಹಾಗೆಂದೇ ಹೊರಟೆ. ಬೇಗ ಬೇಗ ಹೆಜ್ಜೆ ಹಾಕಿ. ನಿಮ್ಮ ಹತ್ತಿರ ಕೊಡೆಯೂ ಇಲ್ಲ.” ಎಂದು ಒಂದೇ ಉಸಿರಿನಲ್ಲಿ ಅಂದವನೇ ಮುದುಕನ ಮಾತಿನ ದಾರಿ ಕಾಯದೇ, ಅವಸರ ಅವಸರವಾಗಿ ಅಲ್ಲಿಂದ ನಡೆದೇಬಿಟ್ಟ. ಅವನು ಕಾಣದಾದದ್ದೇ ಓಣಿಯಲ್ಲಿಯ ಕತ್ತಲೇ ಒಮ್ಮೆಲೇ ದಟ್ಟವಾದಂತೆ ಎಲ್ಲವೂ ನಿಶ್ಯಬ್ದವಾದಂತೆ ಭಾಸವಾಗಿ, ಬುಡಣಸಾಬರ ಮೈ ’ಶಿರ್’ ಎಂದು, ತಿರುಗಿ ನವಿರಿದೊಳಗಾದಾಗ ತಾವೇ ದಿಗಿಲುಪಟ್ಟು, ಎಲ್ಲ ಬಿಟ್ಟು ಇಸ್ಪೀಟಿನ ತಲಬಿಗೆ ಅಂಗಡಿಯನ್ನು ಇಷ್ಟು ಬೇಗ ಮುಚ್ಚಿದನೋ ಎಂದು ಕಳವಳಿಸುತ್ತ, ಮನವೇಲನ ದಣಪೆ ದಾಟುತ್ತಿದ್ದಾಗ, ಮನೆಯ ಜಗಲಿಯ ಮೇಲೆ ಕಂದೀಲಿನ ಬೆಳಕನ್ನು ನೋಡಿ ಅಷ್ಟರಲ್ಲೆ ಸಮಾಧಾನ ಪಟ್ಟು, ಇಲ್ಲೆಲ್ಲೋ ಚಕ್ಕಡಿ ಇದ್ದುದು ನೆನಪಿಗೆ ಬಂದು, ಅದಕ್ಕೆ ಎಡವಬಾರದೆಂಬಂತೆ ಬದಿಗೆ ಸರಿದು ಬೆತ್ತವೂರಿ ತಡವುತ್ತ ಉತ್ತುಮಿಯ ಹಿತ್ತಿಲನ್ನು ಕಳೆಯುವಷ್ಟರಲ್ಲಿ ಹಿಂದಿನಿಂದ ಯಾರೋ, ‘ರಾಜರ್ ರಾಜನು ಬಂದಾ’ ಎಂದು ಹುರುಪಿನಿಂದ ರಾಗ ಎಳೆದು ಹಾಡುತ್ತ ಬಂದವನು, ಮನವೇಲನ ದಣಪೆಯ ಇದಿರು ಏನನ್ನೋ ಎಡವಿದವನಂತೆ ‘ಔಕ್’ ಎಂದು ಹೌಹಾರಿ, ‘ಥೂ ಸತ್ತ್ ಹೋಗಲಿ’ ಎಂದು ಏನನ್ನೋ ಯಾರನ್ನೋ ಶಪಿಸುತ್ತ, ಓಡೋಡುತ್ತ ಬುಡಣಸಾಬರನ್ನು ದಾಟುತ್ತಿರುವಾಗ ನಡಿಗೆಯ ವೇಗಕ್ಕೆ ತಡೆಹಾಕಿ. “ಓಹೋಹೋ ಬುಡಣಸಾಬರು. ತ್ವರೆ ಮಾಡಿ, ತ್ವರೆ ಮಾಡಿ. ಅಂತಿಂಥಾ ಮಳೆ ಬರೂದಿಲ್ಲ ಮಾರಾಯರೇ, ಏನು ಕಡಕಡಾಟ, ಝಗಝಗಾಟ ನೋಡಿ. ಈ ತಿಂಗಳಲ್ಲಿ ಇಂಥಾ ಮಳೆ ಬಂದದ್ದು ನಿಮಗಾದರೂ ನೆನಪುಂಟೆ ಸಾಬರೇ?’ ಓ ನಾನೋ? ಮಾಧವ, ಕೇಶವ ಪೈರ ಮಗ. ನರಸಿಂಹನ ಮನೆಗೆ ಹೊರಟೆ, ಆಟಕ್ಕೆ. ಬಾ ಎಂದು ಹೇಳಿಕಳಿಸಿದ್ದ. ಆ ಮನವೇಲನ ದಣಪೆ ಮುಂದೆ ಮಾರಾಯರೇ, ಗಾಡಿಯ ಹಗ್ಗ ಎದ್ದು ಕಾಣ್ತದೆ, ಮೆಟ್ಟಿಬಿಟ್ಟೆ. ಏನೋ ಎಂತ ಜಿಗಿದುಬಿದ್ದೆ ನೋಡಿ” ಎಂದವನೆ ಮೈಯಲ್ಲಿ ಮತ್ತೆ ಹುರುಪು ಹೊಕ್ಕವನಂತೆ, ಬಯಲಾಟದೊಳಗಿನ ವೇಷದಂತೆ ಕುಣಿಯುತ್ತ ಅಲ್ಲಿಂದ ಓಟ ಕಿತ್ತ. ಅವನ ಹುರುಪು ಬುಡಣಸಾಬರಲ್ಲೂ ಹೊಕ್ಕಿತೆಂಬಂತೆ ನಡಿಗೆಯ ವೇಗ ತುಸು ಹೆಚ್ಚಿಸಿದರು. ಪರಮೇಶ್ವರಿ, ಸಣ್ಣಪ್ಪನಾಯ್ಕರ ಹಿತ್ತಲುಗಳನ್ನು ದಾಟಿ, ನರಸಿಂಹನ ಹಿತ್ತಲ ದಣಪೆಗೆ ಬಂದಾಗ ತಡೆದರು. ಕತ್ತಲು ಕತ್ತಲಾದ ಹಿತ್ತಲದಲ್ಲಿ ಕಣ್ಣು ಹಾಯಿಸಿ, ಹುಡುಕಿದರು. ದಣಪೆಯಿಂದ ದೂರವಾಗಿ ಕಪ್ಪಿನ ಗುಪ್ಪೆಯಂತೆ ನಿಂತ ಮನೆಯಲ್ಲಿ ದೀಪವಿದ್ದುದಷ್ಟೇ ಕಾಣಿಸುತ್ತಿತ್ತು. ಬದಿಯ ಮನೆಯಲ್ಲಿ ಹುಡುಗರ ಭಜನೆಯ ಗಲಾಟೆ. ಹಿಂದಿನ ದೀವರ ಕೇರಿಯಲ್ಲಿ ನಾಯಿಯೊಂದು ತಡೆಯಿಲ್ಲದೇ ಬೊಗಳುತ್ತಿತ್ತು. ಓಣಿಯ ಬಲಬದಿಯ ಹಿತ್ತಲಲ್ಲಿ ಕಲಾಯಿಕಾರ ಕರೀಮಸಾಬನ ಮನೆಯಲ್ಲಿ ಪಾತ್ರೆಗಳಿಗೆ ಕಲಾಯಿ ಹಾಕುವ ಕೆಲಸ ನಡೆದಿತ್ತು. ಓಣಿಯ ಕಡೆ ಬೆನ್ನು ಮಾಡಿ ನಿಂತ ಮನೆಯ ಹಿಂದಿನ ಜಗಲಿಯ ಮೇಲೆ, ನೆಲದಲ್ಲಿ ಬಿಲ ತೆಗೆದು ಹುಗಿದ ಬೆಂಕಿ ಆಡಿನ ತೊಗಲಿನ ತಿದಿಯನ್ನೊತ್ತಿ ಕೆಣಕಿದಾಗ ‘ಭುಸ್’ ಎಂದು ಹೊರಬಂದು ಕೆಂಪು ನಾಲಿಗೆ ಚಾಚಿದಾಗ, ಹತ್ತಿರದ ಗಿಡಮರಗಳೆಲ್ಲ ಒಮ್ಮೆ ಕೆಂಪಾಗಿ ಮರಗಳಿಗೆ ವಿಷವೇರಿದಂತೆ ಕಪ್ಪಾದುದನ್ನು ನೋಡುತ್ತ ಮುಂದೆ ಸಾಗುತ್ತಿದ್ದಾಗ, ಆಡಲೀ ಆಡಲೀ, ಆಡುವ ವಯಸ್ಸೇ ಅವರದು. ಈಗಲ್ಲದೆ ಇನ್ನೂ ಯಾವಾಗ ಆಡಿಯಾರು, ಎಂದುಕೊಳ್ಳುತ್ತಾ ಕೈತಾನನ ಎಣ್ಣೆಯ ಗಾಣವನ್ನು ಸಮೀಪಿಸುವ ಹೊತ್ತಿಗೆ ಇನ್ನೊಮ್ಮೆ ಮಿಂಚು ಕತ್ತಲೆಯನ್ನು ಕೊರೆದಾಗ, ದೂರ ಇದಿರುಗಡೆಯಿಂದ ಯಾರೋ ಉತ್ಸಾಹದ ಹೆಜ್ಜೆ ಇಡುತ್ತ ಆಗೀಗ, ಕಿವಿಯಲ್ಲಿ ಗಾಳಿ ಹೊಕ್ಕ ಮಣಕದ ಹಾಗೆ ನೆಗೆದಾಡುತ್ತ, ‘ಭೋರ್ ಭೋರ್ ಭಂಗೀ-ಭಂಗಾರಕ್ಕನ ತಂಗೀ.’ ಎಂದು ತಮ್ಮ ಕೇರಿಯ ಕೋಳಿ ಗಿರಿಯಣ್ಣ ಮೊಮ್ಮಕ್ಕಳನ್ನು ಆಡಿಸುವಾಗ ಹಲ್ಲಿಲ್ಲದ ಬಾಯಿಂದ ಹಾಡುವ ಹಾಡನ್ನೇ ರಾಗವಾಗಿ ಹಾಡುತ್ತ, ಕುಣಿಯುತ್ತ ಬಂದವನು ಬುಡಣಸಾಬರನ್ನು ನೋಡಿ, ನಿಲ್ಲದೇ, “ಬುಡಣಸಾಬರೂ. ಬಹಳ ಮುದುಕರು. ಮಳೆಯು ಬಂದರೂ ಹೊರಗೆ ಹೊರಟರೂ” ಎಂದು ಗದ್ಯವನ್ನೇ ತನ್ನ ಕುಣಿತದ ಗತ್ತಿಗೆ ಸರಿಯಾಗಿ ಹಾಡುತ್ತ, “ಅತ್ಯಂತ ತರಾತುರಿಯಲ್ಲಿ ಹೊರತಂಥ ಕೆಲಸ ಬಹಳ ಬಹಳ. ನರಸಿಂಹನ ಮನೆಗೆ ಆಟಕ್ಕೆ ಹೊರಟವನಾಗಿದ್ದಂಥ ನನ್ನನ್ನು ಯಾರೂ ತಡೆಯಬೇಡಿರೋ” ಎಂದು ಯಕ್ಷಗಾನದ ದಾಟಿಯಲ್ಲರುಹಿ ಥೈ ಥೈ ಥೈ ಎನ್ನುತ್ತ ಅಲ್ಲಿಂದ ಕಾಲ್ತೆಗೆದಾಗ ಬುಡಣಸಾಬರಿಗೆ ನಗು ಬಂದುಬಿಟ್ಟಿತು. ಸಾಂತಯ್ಯರ ಸರ್ವೋತ್ತಮ ಎಂದು ತೋರುತ್ತದೆ. ಇನ್ನೂ ಹುಡುಗುತನ ಬಿಟ್ಟಿಲ್ಲ ಎಂದುಕೊಂಡು ಕೈತಾನನ ಗಾಣದಿಂದ ಇಡುಗಿದ ಎಣ್ಣೆಯ ವಾಸನೆಗೆ ಮೂಗಿನ ಹೊರಳೆ ಅರಳಿಸುತ್ತ ಮುಂದೆ ಸಾಗುತ್ತಿದ್ದಾಗ, ಓಣಿಯ ತುದಿಯಲ್ಲಿ ರಾಜರಸ್ತೆಯ ಆ ಮಗ್ಗುಲಲ್ಲಿ ನಿಂತ ಗಣಪಯ್ಯರ ಅಂಗಡಿಯ ಲಾತನಿನ ಮಂದ ಬೆಳಕಿನ ಹಿನ್ನೆಲೆಯಲ್ಲಿ ಓಡಿಬರುತ್ತಿದ್ದ ಯುವಕನೊಬ್ಬ, “ಸೋಮಳೆ ಬಂತೋ ಮಳೆರಾಯ ಕೊಡೆ ತಾರೋ ಸುಬ್…” ಎಂದು ಬುಡಣಸಾಬರನ್ನು ಕಂಡು ಹಾಡಿಗೆ ತಡೆ ಹಾಕಿದವನು ಹಣಪಯ್ಯರ ತಮ್ಮನ ಮಗ ವಿಠಲ…“ ಎಲ್ಲಿ ನರಸಿಂಹನ ಮನೆಗೆ ಆಟಕ್ಕೆ ಹೊರಟೆಯೋ” ಎಂದು ನಗುತ್ತ ಕೇಳಿದ ಬುಡಣಸಾಬರ ಪ್ರಶ್ನೆಗೆ ಇವರಿಗೆ ಹೇಗೆ ತಿಳಿಯಿತಪ್ಪ ಎಂದು ತಬ್ಬಿಬ್ಬಾದ ವಿಠಲ, “ದೊಡ್ಡಪ್ಪನಿಗೊಂದು ಹೇಳಬೇಡಿ ಮಾರಾಯರೇ, ದಮ್ಮಯ್ಯ, ಮಧ್ಯಾಹ್ನ ಅಂಗಡಿ ಬಂದುಮಾಡಿ ಗೋಕರ್ಣಕ್ಕೆ ಹೋಗಿದ್ದನಂತೆ ನರಸಿಂಹ. ಸಂಜೆ ಹಿಂತಿರುಗಿ ಬಂದದ್ದೇ ಆಟಕ್ಕೆ ಹುಕ್ಕಿ ಬಂತೆಂದು ಕಾಣುತ್ತದೆ. ಹೇಳಿ ಕಳಿಸಿದ್ದ. ಅದೆ! ಮಳೆ ಬಂದೇಬಿಟ್ಟಿತಲ್ಲ. ಬೇಗ ಬೇಗ ಹೋಗಿ ನಮ್ಮ ಅಂಗಡಿಯಲ್ಲಾದರೂ ನಿಂತುಕೊಳ್ಳಿ,” ಎಂದವನೇ ಅಲ್ಲಿ ನಿಲ್ಲದೆ ಆಗಲೇ ಉದುರಹತ್ತಿದ ಹನಿಗಳಿಗೆ ಕೈಗಳನ್ನೇ ತಲೆಯ ಮೇಲೆ ಕೊಡೆಯಂತೆ ಎತ್ತಿ ಹಿಡಿದು ‘ಕೊಡೆ ತಾರೋ ಸುಬ್ರಾಯ’ ಎಂದು ನರಸಿಂಹನ ದಣಪೆ ತಲುಪುವ ತನಕವೂ ಹಾಡುತ್ತ ಕುಣಿಯುತ್ತ ದಣಪೆ ಸೇರಿ ಕತ್ತಲೆಯಲ್ಲಿ ಪೂರಾ ಕರಗಿದ. ದುಡುದುಡು ಹೆಜ್ಜೆ ಹಾಕಿ ಗಣಪಯ್ಯರ ಅಂಗಡಿ ಹೊಕ್ಕು, ಅಬ್ಬಾ ಮಳೆ ಬಂದೇಬಿಟ್ಟಿತಲ್ಲ ಎಂದು ಬುಡಣಸಾಬರು ದಣಿವಾರಿಸಿಕೊಳ್ಳುವಷ್ಟರಲ್ಲಿ, ಆಗಿನಿಂದ ಹನಿಯಾಗಿ ಜಿನುಗುತ್ತಿದ್ದ ಮಳೆ ಒಮ್ಮೆಗೆಲೇ ಧಾರೆಯಾಗಿ ಸೋ ಎನ್ನಲು ತೊಡಗಿತು. ಇನ್ನೂ ಹತ್ತು ನಿಮಿಷ ನಡೆದರೆ ಮೊಮ್ಮಗಳ ಮನೆ. ಇಲ್ಲೇ ಇನ್ನೆಷ್ಟು ಹೊತ್ತು ಕಾಯಬೇಕೋ ಎಂದು ಆತಂಕಪಟ್ಟರು. ತಮ್ಮತ್ತ ನೋಡಿದ ಗಣಪಯ್ಯರಿಗೆ, “ಈ ಅಡ್ಡ ತಿಂಗಳಲ್ಲಿ ಎಂಥಾ ಮಳೆ ನೋಡು ಗಣಪಯ್ಯ” ಎನ್ನುತ್ತ ಅಂಗಡಿಯ ಚಿಟ್ಟೆಯೇರಿ ಕುಳಿತು, ತಾವು ಇದೀಗ ಹಾದು ಬಂದ ಓಣಿ, ಕತ್ತಲೆ ಮಳೆಗಳಲ್ಲಿ ಕರಗುತ್ತಿದ್ದುದನ್ನು ನೋಡುತ್ತ, ಓಣಿಯಲ್ಲಿ ಭೆಟ್ಟಿಯಾದ ಆ ನಾಲ್ವರ ಹುರುಪನ್ನೂ ನೆನೆಯುತ್ತ ಒಳಗೊಳಗೇ ನಗುತ್ತ, ಮಳೆ ಹೊಳವಾಗುವುದನ್ನೇ ಕಾಯುತ್ತಿದ್ದರು.
*
*
*
ಓಣಿಯಲ್ಲಿ ಬುಡಣಸಾಬರನ್ನು ಮೊತ್ತಮೊದಲು ಸಂಧಿಸಿದ ನಾಗೇಶ, ಹಾಡುತ್ತ ಕುಣಿಯುತ್ತಲೇ ನರಸಿಂಹನ ಅಂಗಳ ತಲುಪಿದ.“ಮುದದಿಂದಾ೭ ಮುದಕೀ ತಿನ್…” ಎಂದು, ‘ಮುದ್ಕಿ ತಿಂದಾ’ ಎಂದು ಪೂರ್ತಿಗೊಳ್ಲಬೇಕಾದ ತನ್ನ ಹಾಡಿನ ಕೊನೆಯನ್ನು, ಈ ಮನೆಯಲ್ಲಿ ಒಂದು ಮುದುಕಿ ಇದ್ದುದು ನೆನಪಿಗೆ ಬಂದವನಂತೆ ಅರ್ಧಕ್ಕೇ ತಡೆದು, ನಾಲಗೆ ಕಚ್ಚುಕೊಳ್ಳುತ್ತ ಮನೆಯ ಮೆಟ್ಟಿಲೇರಿದಾಗ, ನರಸಿಂಹ ಆಗಲೇ ಊಟ ಮುಗಿಸಿ ಜಗಲಿಯ ಮೇಲೆ ಚಾಪೆ ಹಾಸಿ ಇಸ್ಪೀಟು ಎಲೆಗಳಪೆಟ್ಟಿಗೆಗಳೆರಡನ್ನು ತಂದಿಟ್ಟು ಹರಿವಾಣವೊಂದರಲ್ಲಿ ಎಲೆ ಅಡಿಕೆ ಬೀಡಿ ಕಟ್ಟುಗಳ ಸರಂಜಾಮನ್ನು ಸಿದ್ಧಗೊಳಿಸಿ, ಇವರು ಬರುವ ಹಾದಿಯನ್ನೇ ಕಾಯುತ್ತಿದ್ದ. ಅಡುಗೆಮನೆಯೊಳಗೆ ಇವರೆಲ್ಲರ ಸಲುವಾಗಿ ಅಜ್ಜಿಯ ಪಳಗಿದ ಕೈಯಿಂದ ಸಿದ್ಧವಾಗುತ್ತಿದ್ದ ಸಂಬಾತ ಅವಲಕ್ಕಿಯ, ಬಾಯಲ್ಲಿ ನೀರೂರಿಸುವ ಖಮಂಗವಾಸನೆ ಜಗಲಿಯವರೆಗೂ ಇಡುಗಿತ್ತು. ಮೆಟ್ಟಿಲೇರಿ ಬಂದದ್ದೇ, ‘ಅಬ್ಬಬ್ಬ! ಏನ್ ಗುಡುಗು ಎಂಥ ಮಿಂಚು’, ಎಂದು ಉದ್ಗರಿಸಿದ ನಾಗೇಶ, “ಏ ಮಿಂಚು ಅಂದ ಕೂಡಲೇ ನೆನಪಾಯಿತು ನೋಡು. ನಿಮ್ಮ ದಣಪೆ ಹತ್ತಿರದ ಮಾವಿನಮರದ ಕೆಳಗೊಬ್ಬ ಕರ್ರಗಿನ ಕಂಬಳಿ ಕೊಪ್ಪೆ ಹಾಕಿ ನಿಂತಿದ್ದ ನೋಡು. ದಣಪೆ ಹೊಕ್ಕತಿರಬೇಕಾದರೆ ಮಿಂಚು ಝಗ್ ಎಂದಾಗ ನೋಡಿದೆ. ಎದೆ ಜಲ್ ಅಂದಿತು ನೋಡು. ಮೋರೆ ಕಾಣಲಿಲ್ಲ. ಕೊಪ್ಪೆ ಮಾತ್ರ”. ನರಸಿಂಹ ಅವನ ಕಡೆ ಲಕ್ಷ್ಯ ಕೊಟ್ಟಂತಿರಲಿಲ್ಲ. ಅಡುಗೆಮನೆಯಲ್ಲಿದ್ದ ಅಜ್ಜಿ ಮಾತ್ರ “ಯಾರು, ನಾಗೇಶನೇನೋ? ಎಂತಹ ಕತೆ ಹೇಳ್ತಿದೀಯೋ”, ಎಂದು ಕೇಳುತ್ತಿರುವಾಗಲೇ ಅಂಗಳದಲ್ಲಿ. “ರಾಜರ್ ರಾಜನು ಬಂದ” ಎಂದು ತನ್ನ ಹಾಜರಿ ಕೊಟ್ಟ ಮಾಧವ ಜಗಲಿಗೆ ಬಂದು, ಸಂಬಾರ ಅವಲಕ್ಕಿಯ ಪರಿಮಳಕ್ಕೆ ಇತ್ಸಾಹಿತನಾಗಿ, “ವ್ಹಾ! ಈ ಹೊತ್ತು ಗಡದ್ದಾಗಿ ಆಟ ಹೊಡೀಬೇಕು ನೋಡು. ಜಂಗೀ ಮಳೆಯೂ ಬರ್ತದ್….ಮಳೆ ಎಂದ ಕೂಡಲೇ ನೆನಪಾಯಿತು ನೋಡು. ನಿಮ್ಮ ಕೊಟ್ಟಿಗೆಯ ಹತ್ತಿರ ಗೊಬ್ಬರ ಕುಳಿ ಇಲ್ಲ? ಅಲ್ಲೊಬ್ಬ, ಮಾರಾಯ ಕಪ್ಪಗಿನ ಮನುಷ್ಯ ತಲೆಯ ಮೇಲೆ ಕಂಬಳಿ ಕೊಪ್ಪೆ ಹಾಕಿ ಹೀಗೆ ಕೈಕಟ್ಟಿ ನಿಂತಿದ್ದ ನೋಡು. ಮಿಂಚಿನ ಬೆಳಕಿನಲ್ಲಿ ಕಂಡಾಗ ಹೊಟ್ಟೆಯಲ್ಲಿ ಕಲ್ ಎನ್ನಿಸಿತು ನೋಡ್” ಎಂದ ಹೆದರಿದ ದನಿಯಲ್ಲಿ.
“ಏನ್ ಏನ್ ಏನ್ ನೋಡಿದಿರೋ? ಏನ್ ಕತೆರೋ ಅದು?” ನರಸಿಂಹನ ಅಜ್ಜಿ ಕಾತರತೆಯಿಂದ ಅಡಿಗೇಮನೆಯಿಂದಲೇ ಕೇಳಿದಳು.
“ನಿಮ್ಮ ದನದ ಕೊಟ್ಟಿಗೆಯ ಹತ್ತಿರ…” ಎಂದು ಮಾಧವ ಹೇಳುತ್ತಿರುವಾಗಲೇ ಜಗಲಿಗೆ ಬಂದ ಸರ್ವೋತ್ತಮ, “ನಾನೂ ನೋಡಿದೆ. ಕಪ್ಪಗಿದ್ದಾನಲ್ಲ? ಕಂಬಳಿ ಕೊಪ್ಪೆ ಹಾಕಿಕೊಂಡಿದ್ದಾನಲ್ಲ? ಇಷ್ಟುದ್ದ ಮೀಸೆ ಬಿಟ್ಟಿದ್ದಾನಲ್ಲ? ಹಿತ್ತಲಲ್ಲಿ ಕಾಲಿಟ್ಟದ್ದೇ ಮಿಂಚು ಝಗ್ ಎಂದಾಗ ಕಂಡೆ ನೋಡು” ಎಂದು ನಡುಗಿದ.
ನರಸಿಂಹನ ತಾಯಿ, ಅಜ್ಜಿ, ಇಬ್ಬರೂ ಗಾಬರಿಗೊಂಡು ಅಡುಗೆ ಮನೆ ಬಿಟ್ಟು ಹೊರಗೆ ಬಂದರು. ಹೊಸತಿಲಲ್ಲಿ ನಿಂತು, “ಯಾರ ಬಗ್ಗೆ ಮಾತಾಡ್ತೀರೋ? ಯಾರನ್ನು ನೋಡಿದಿರೋ?” ಎಂದು ಅಜ್ಜಿ ಕೇಳುವುದಕ್ಕೂ, “ಅದೆ ಮಳೆ ಬಂದೆಬಿಟ್ಟಿತಲ್ಲ” ಎನ್ನುತ್ತ ಓಡೋಡಿ ಬಂದ ವಿಠಲ ಮನೆ ಹೋಗುವುದಕ್ಕೂ ಸರಿಯಾಯಿತು. “ಅಬ್ಬಾ! ಅಜ್ಜೀ ನನಗೆ ನೀನು ಕೆಂಪು ನೀರನ್ನು ನಿವಾಳಿಸಬೇಕು ನೋಡ್! ಹ್ಯಾಗೆ ಹೆದರಿದೆ! ಜೀವ ಇನ್ನೂ ಥರಥರ ಅನ್ನುತ್ತಿದೆ ನೋಡ್. ನಿಮ್ಮ ಕೊಟ್ಟಿಗೆಯ ಬಾಗಿಲಲ್ಲಜ್ಜೀ ಒಬ್ಬ ಕರ್ರಗಿನ ಮನುಷ್ಯ ಕಂಬಳೀ ಕೊಪ್ಪೆ ಹಾಕಿ, ಕೈಯಲ್ಲಿ ಸುರುಳಿ ಸುತ್ತಿದ ಹಗ್ಗ ಹಿಡಿದು ನಿಂತಿದ್ದು ನೋಡಿ…”
“ಅರೆ! ಯಾರಾದರೂ ಕಳ್ಲಗಿಳ್ಳ ಇರಲಿಕ್ಕಿಲ್ಲವಲ್ಲ?” ಎಂದು ನರಸಿಂಹನ ತಾಯಿ ಗಾಬರಿಪಡಿಸಿದಾಗ, ನರಸಿಂಹ,
“ಅದ್ಯಾರಲ್ಲಮ್ಮ, ಇವರು ಬರೀ ಪುಕ್ಕರು. ಆಗ ನಾನು ಗೋಕರ್ಣಕ್ಕೆ ಹೋಗುವ ಮೊದಲು ಅವನು ನಮ್ಮ ಅಂಗಡಿಗೂ ಬಂದಿದ್ದ. ಹೊಲೆಯರವನು. ಕೈಯಲ್ಲಿ ಹಗ್ಗದ ಸುರುಳಿ ಹಿಡಿದುಕೊಂಡು, ಹೆಗಲ ಮೇಲೆ ಕಂಬಳಿ ಹೊದ್ಕೊಂಡು, ಮೆಲ್ಲನೆ ಅಂಗಡಿ ಹೊಕ್ಕು, ಕೆಳಜಗಲಿಯ ಮೇಲೆ ಮಾತನಾಡದೆ ಕೂತ್ಕೊಂಡ. ನಿನಗೇನು ಬೇಕೋ ಎಂತ ಕೇಳಿದೆ. ತಲೆ ಎತ್ತಲಿಲ್ಲ. ಹಗ್ಗ ಮಾರಲಿಕ್ಕೆ ಬಂದಾನೊ ಎಂತ ತಿಳಿದು, ನಮಗೆ ಹಗ್ಗ ಬೇಡ ಎಂದೆ. ಆದರೂ ಹಂದಾಡದೆ ಕುಳಿತ. ಬೇಕಾದರೆ ನಮ್ಮ ಮನೆಗೆ ಹೋಗಿ ಕೇಳು. ಶಾನುಭಾಗರ ಮನೆ ಎಂತ ಕೇಳು, ಹೇಳ್ತಾರೆ ನೋಡು ಅಂದೆ. ಮಾತನಾದದೆ ಎದ್ದ. ಮೂಕನಿದ್ದರೂ ಇದ್ದಾನು. ರಸ್ತೆ ದಾಟಿ ಓಣಿ ಹೊಕ್ಕ. ಮುಂದೆ ಎಲ್ಲಿ ಹೋದನೋ ಗೊತ್ತಿಲ್ಲ. ಹುಚ್ಚನಿದ್ದರೂ ಇದ್ದಾನು. ಆಗ ದಾರಿ ತಪ್ಪಿ ಎಲ್ಲೋ ಹೋದವನು ಈಗ ಇಲ್ಲಿ ಬಂದು ಮುಟ್ಟಿದ್ದರೂ ಮುಟ್ಟಿದ್ದಾನು. ಮನೆ ಎಂತ ತಿಳಿದು ಕತ್ತಲೆಯಲ್ಲಿ ಕೊಟ್ಟಿಗೆಗೆ ಹೋಗಿದ್ದರೂ ಹೋಗಿದ್ದಾನು” ಎಂದು ಆಡಲಿಕ್ಕೆಂದು ಇಸ್ಪೀಟು ಎಲೆಗಳ ಪೆಟ್ಟಿಗೆ ಬಿಚ್ಚಹತ್ತಿದ. ಗೆಳೆಯರಿಗೆ ಸಮಾಧಾನವಾದಂತಿತ್ತು: ಯಾರೂ ಮಾತನಾದಲಿಲ್ಲ. ಅಜ್ಜಿ ಕೂದ ಸುಮ್ಮನಿದ್ದಳು. ನರಸಿಂಹನ ತಾಯಿ ಮಾತ್ರ ಕೊಟ್ಟಿಗೆಯ ಹತ್ತಿರ ಬಂದವನು ಇಲ್ಲಿಯೂ ಬರಲಾರನಷ್ಟೆ? ಎಂದು ಅನ್ನಿಸಿದ ದುಗುಡವನ್ನು ಉಳಿದವರು ಸುಮ್ಮಗುಳಿದುದನ್ನು ನೋಡಿ, ಬಾಯಿಂದ ಆಡಿ ತೋರಿಸದೆ ಅಡುಗೆಮನೆಯಲ್ಲಿ ಅರ್ಧಕ್ಕೇ ಬಿಟ್ಟು ಬಂದ ಕೆಲಸದತ್ತ ನಡೆದಳು.
ಹೊರಗೆ, ಮಳೆ ಧಾರೆ ಹಿಡಿದು ಹೊಯ್ಯುತ್ತಿತ್ತು. ಗುಡುಗು ಮಿಂಚುಗಳೊಂದಿಗೆ ದೊಡ್ಡ ಗಾಳಿಯೂ ಬೀಸತೊಡಗಿದ್ದರಿಂದ ಹಿತ್ತಲ ಮರಗಳೆಲ್ಲ ರಭಸದಿಂದ ತೂಗಿ ಹೆಗ್ಗೆಗಳು ತೂರಾಡಿ ಭೋ ಎನ್ನುತ್ತಿದ್ದವು. ಹೊತ್ತು ಹೋದಂತೆ ಗಾಳಿ ಮಳೆಗಳ ಜೋರು ಹೆಚ್ಚುತ್ತಲೇ ಹೋಯಿತು. ಕತ್ತಲೆಯಲ್ಲಿ ಒಂದೇ ಸಮನೆ ಕಣ್ಣು ಮುಚ್ಚಿ ಹೊಯ್ಯುತ್ತಿದ್ದ ನೀರಿನ ಸದ್ದು ಗದ್ದಲ ಕೇಳುತ್ತ, ಅಂಗಳದಲ್ಲಿ ದೃಷ್ಟಿನೆಟ್ಟು ಕೂತ ಅಜ್ಜಿಯ ಮನಸ್ಸು ಹಿಂದೆ ಇಂತಹದೇ ಮಳೆ ಬಂದ ದಿನಗಳನ್ನು ನೆನೆಯುತ್ತ ನೆನೆಯುತ್ತ, ಇತಿಹಾಸದಿಂದ ಪುರಾಣದ ತನಕವೂ ಹೋಗಿ ತಿರುಗಿ ವರ್ತಮಾನಕ್ಕೆ ಬಂದಾಗ ಮೈನೆವಿರಿಗೊಳಗಾಗಿ, ಕೊಟ್ಟಿಗೆಯ ಹತ್ತಿರ ಬಂದವನು ಏನು ಮಾಡುತ್ತಿದ್ದಾನೋ, ಇವನೊಬ್ಬ ಹೀಗೇ ಹೇಳದೇ ಕೇಳದೇ ಇಂತಹ ವೇಲೆಯಲ್ಲಿ ಏಕೆ ಬಂದಿದ್ದಾನೋ, ಎಂದು ಆತಂಕಪಟ್ಟು ಒಮ್ಮೆಲೆಗೇ ಎದ್ದು ಜಗಲಿಯ ಮೆಟ್ಟಲಿಗೆ ಬಂದು, ಹೊರಗೆ ಹಣಕಿಕ್ಕಿ ನೋಡುತ್ತಿದ್ದಾಗ, ಕಚ್ ಎಂದು ಕತ್ತಲನ್ನು ಕಚ್ಚಿದ ಮಿಂಚು ಹಗಲಾಯಿತೆನ್ನುವಷ್ಟು ಬೆಳಕನ್ನು ಗಳಕ್ಕನೆ ಕಾರಿದಾಗ: ಅಂಗಳ, ಅದರಂಚಿನಲ್ಲಿಯ ಹಿತ್ತಲು, ಮೂಲೆಯಲ್ಲಿ ನಿಂತ ಕೊಟ್ಟಿಗೆ, ಅದರಾಚೆಯ ಓಣಿ ಎಲ್ಲ ಎಲ್ಲ ಒಮ್ಮೆ ಝಗ್ ಎಂದು ಬೆಳಗಿ ತಿರುಗಿ ಕಪ್ಪೇರಿದಾಗ, ಕಪ್ಪಾಗುವ ಮೊದಲಷ್ಟೇ ಅಂಗಳದಲ್ಲಿ ತುಳಸೀ ವೃಂದಾವನದ ಹತ್ತಿರವೇ ಫಕ್ಕನೆ ಕಂಡಂತಾದವನನ್ನು ಬಾಯಲ್ಲಿ ವರ್ಣಿಸುವಸಾಧ್ಯವಾದಾಗ, ಜೀವಕ್ಕೆ ಹತ್ತಿದ ನಡುಕದಿಂದ ಸಾವರಿಸಿಕೊಳ್ಳುತ್ತ ತಿರುಗಿ ಹೊಸತಿಲಿಗೆ ಬರುವ ಹೊತ್ತಿಗೆ, ಇತ್ತ,
ಆಟ ಒಳ್ಳೇ ರಂಗಕ್ಕೆ ಬಂದಿತ್ತು.
*
*
*
ಬೆಳಗುಜಾವದಲ್ಲಿ ಕಂಡ ಕನಸಿನಿಂದ ಎಚ್ಚೆತ್ತು ಭಡಕ್ಕನೆ ಹಾಸಿಗೆಯಲ್ಲಿ ಎದ್ದು ಕುಳಿತ ಬುಡಣಸಾಬರು, “ಫಾತಿಮಾ” ಎಂದು ಮೊಮ್ಮಗಳನ್ನು ಕೂಗಿ ಕರೆದರು. ಅಜ್ಜನ ಗಾಬರಿ ತುಂಬಿದ ಕರೆಯನ್ನು ನಿದ್ದೆಗಣ್ಣಿನಲ್ಲೇ ಕೇಳಿದಂತಾಗಿ ಎಚ್ಚರಗೊಂಡು ದಡಬಡಿಸಿ ಎದ್ದ ಫಾತಿಮಾ, ಕೋಣೆಯ ಬಾಗಿಲು ತೆರೆದು ಹೊರಗೆ ಬರುವ ಹೊತ್ತಿಗೆ, ಬುಡಣಸಾಬರು ಹೊರಗೆ ಹೊರಡುವ ಸಿದ್ಧತೆಯಲ್ಲಿ ಇದ್ದುದನ್ನು ನೋಡಿ ಅಚ್ಚರಿಪಟ್ಟು, “ಎದ್ದದ್ದೇ ಎಲ್ಲಿ ಹೊರಟಿರಿ ದಾದಾಜಾನ್? ಮೋರೆ ಕೂಡ ತೊಳೆದಿಲ್ಲ. ಪ್ರಾರ್ಥನೆಯಾಗಿಲ್ಲ” ಎಂದು ಕೇಳಿದಾಗ, “ಉಸ್ಮಾನ ಇನ್ನೂ ಮಲಗಿರಬೇಕು ಅಲ್ಲವೆ? ಎಬ್ಬಿಸಬೇಡ, ನಾನು ಈಗಲೇ ಕಾಸಿಮನ ಮನೆಗೆ ಹೋಗುತ್ತೇನೆ. ಪ್ರಾರ್ಥನೆಯನ್ನು ಅಲ್ಲೇ ಮಾಡುತ್ತೇನೆ. ಎಚ್ಚರವಾಗುವಾಗ ಬಹಳ ಕೆಟ್ಟ ಕನಸು ಬಿದ್ದಿತು ನೋಡು. ನೀನು ಒಳಗೆ ಹೋಗಿ ಮಲಕೋ” ಎಂದವರೇ ಬೆತ್ತವನ್ನೂರುತ್ತ ಮೆಟ್ಟಿಲಿಳಿದು ನಡದೇಬಿಟ್ತರು. ಅಜ್ಜನ ಈ ವಿಚಿತ್ರ ರೀತಿಯನ್ನು ಕಂಡು ದಿಗಿಲುಗೊಂಡ ಫಾತಿಮಾ, ಒಳಗೆ ಹೋಗಿ ಗಂಡನನ್ನು ಎಬ್ಬಿಸಿದಳು. “ನೀನು ಹೆದರಬೇಡ. ಕಾಸಿಮನ ಬಗ್ಗೆ ಏನೋ ಕೆಟ್ಟ ಕನಸು ಬಿದ್ದಿರಬೇಕು. ನಾನೂ ಕಾಸಿಮನ ಮನೆಯ ತನಕ ಹೋಗಿಬರುತ್ತೇನೆ” ಎಂದು ಹೆಂಡತಿಗೆ ಸಮಾಧಾನ ಹೇಳಿ, ಮೋರೆ ತೊಳೆದು, ಉಡುಪು ಮಾಡಿ ಮನೆಯ ಹೊರಗೆ ಬಿದ್ದು ಉಸ್ಮಾನ ರಸ್ತೆಗೆ ಬರುವಷ್ಟರಲ್ಲಿ ಬುಡಣಸಾಬರು ಗಣಪಯ್ಯರ ಅಂಗಡಿಯ ಇದಿರಿನ ಓಣಿಯಲ್ಲಿ ತಿರುಗಿಯಾಗಿತ್ತು. “ಅಬ್ಬಾ! ಇಷ್ಟು ಅವಸರದಿಂದ ನಡೆಯಬೇಕಾದರೆ ಅದೆಂತಹ ಕನಸು ಬಿದ್ದಿರಬೇಕೋ,’ ಎಂದುಕೊಂಡ ಉಸ್ಮಾನ ತನ್ನ ನಡಿಗೆಯ ವೇಗ ಹೆಚ್ಚಿಸಿದ.
ರಸ್ತೆ ಹಾಗೂ ಓಣಿಗಳ ಕೂಟದಲ್ಲಿ ನಿಂತ ಆ ರಾಕ್ಷಸಾಕಾರದ ಗಾಳಿಮರ ನಡುವೆಯೇ ಮುರಿದು ಗದ್ದೆಯಲ್ಲಿಕುಸಿದುದನ್ನು: ಕೈತಾನನ ಹಿತ್ತಲಲ್ಲಿ ಮುಗಿಲೆತ್ತರಕ್ಕೆ ಬೆಳೆದ ತೆಂಗಿನಮರವೊಂದು ಚೆಂಡೇ ಕಳಚಿ ಬಿದ್ದು ಬೋಳಾಗಿ ನಿಂತುದನ್ನು: ಗದ್ದೆಯ ಬದಿಯ ಬೇಲಿಯೊಳಗಿನ ಹೂವು, ಎಲೆ, ಜಿಗ್ಗುಗಳ ಓಣಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದುದನ್ನು ನೋಡಿ, ಬುಡಣಸಾಬರು, ಕೈತಾನನ ಗಾಣ ದಾಟಿ ನರಸಿಂಹನ ದಣಪೆಯನ್ನು ಸಮೀಪಿಸುತ್ತಿದ್ದಾಗ ದಣಪೆಯ ಒಳಗಡೆ, ಹಿತ್ತಲಲ್ಲಿ ನೆರೆದ ಜನರ ಗುಂಪನ್ನು ನೋಡಿ, ಕಣ್ಣುಗಳನ್ನು ಅಬ್ಬಾ ಎಂದು ಇಷ್ಟಗಲ ಅರಳಿಸಿ, “ಇಷ್ಟೆಲ್ಲ ಜನ ಆಟಕ್ಕೆ ಬಂದಿದ್ದರೆ? ಆಟ ಈಗ ಮುಗಿದಿತೆ?” ಎಂದು ಚಕಿತರಾಗಿ ಮುಂದೆ ನಡೆದಾಗ, ದಣಪೆಯೊಳಗಿಂದ ಮಡಕೆಯಲ್ಲಿ ಬೆಂಕಿ ಹೊತ್ತು ಹೊರಗೆ ಬಂದವನ ಹಿಂದೆಯೇ ನಿನ್ನೆ ರಾತ್ರಿ ಓಣಿಯಲ್ಲಿ ಭೆಟ್ಟಿಯಾದ ನಾಲ್ವರು ಗೆಳೆಯರೂ ಹೊರಗೆ ಬಂದರು: ಅವರ ಹೆಗಲ ಮೇಲೆ ಬಿಳಿಯ ಹೊದಿಕೆ ಮುಚ್ಚಿದ, ಬಿದಿರ ಸಿದಿಗೆಯೇರಿದ ದೇಹ! ಶ್ರೀರಾಮ್ ಜೈರಾಮ್ ಕೆಳದನಿಯಲ್ಲೇ ಭಜನೆ ಮಾಡುತ್ತ ಹೊರಗೆ ಬಂದ ಆ ಗುಂಪು ಆ ನಾಲ್ವರ ಹಿಂದೆಯೇ ಹೊರಟಿತು. ‘ಯಾ ಖುದಾ’ ಎಂದು ತಬ್ಬಿಬ್ಬಾಗಿ ನೋಡುತ್ತ, ಕಾಲು ಸೋತುಬಂದಂತಾಗಿ ನಡೆಯಲಾಗದೇ, ನಿಂತಲ್ಲೆ ನಿಂತುಬಿಟ್ಟ ಮುದುಕ ಬುಡಣಸಾಬರ ಕಡೆಗೊಮ್ಮೆ ದುಃಖ ತುಂಬಿದ ದೃಷ್ಟಿ ಬೀರಿ, ಗುಂಪು ಮುಂದೆ ನಡೆಯಿತು. ಅವರೆಲ್ಲರೂ ಕೈತಾನನ ಗಾಣ ದಾಟಿ, ಮುಂದೆ ಹೋಗಿ ಓಣಿಯ ತುದಿ ಸೇರಿ ರಸ್ತೆಗೆ ಹೊರಳುವ ತನಕವೂ ಹಿಂತಿರುಗಿ ನೋಡುತ್ತ ನಿಂತಾಗ ನರಸಿಂಹನ ಮನೆಯೊಳಗಿಂದ ಕೇಳಿಸಿದ ಆಕ್ರಂದನದಿಂದ ಕರುಳು ಕಿವುಚಿದಂತಾಗಿ, ನಸುಕಿನಲ್ಲಿ ಕಂಡ ಕನಸೂ ನೆನಪಿಗೆ ಬಂದು ಎಲ್ಲವೂ ನಿಚ್ಚಳವಾದಂತಾಗಿ, ‘ಇದು ಆಗಬಾರದಾಗಿತ್ತು,’ ಎಂದರು. ಮರುಗಳಿಗೆ ಅನುಭವದ ಆಳ ಬಾಯಿಬಿಟ್ಟಾಗ ‘ಎಲ್ಲ ಖುದಾನ ಮರ್ಜಿ’ ಎಂದರು. ಸೋತ ವೃದ್ದ ಕಾಲುಗಳನ್ನೆಳೆಯುತ್ತ ಮುಂದೆ ಸಾಗಿ ಪರಮೇಶ್ವರಿಯ ಹಿತ್ತಲ ದಣಪೆ ದಾಟುತ್ತಿದ್ದಾಗ, ಹಿಂದಿನಿಂದ ಯಾರೋ ‘ದಾದಾಜಾನ್’ ಎಂದು ಕರೆದದ್ದು ಕೇಳಿಸಿ ತಡೆದಾಗ, ಓಡೋಡಿ ಬಂದು ಮುಟ್ಟಿದ ಉಸ್ಮಾನ್ ತನಗೆ ಹತ್ತಿದ ಉಬ್ಬಸವನ್ನೂ ಲೆಕ್ಕಿಸದೆ, “ಕೇಳಿದೆಯಾ ದಾದಾಜಾನ್, ನರಸಿಂಹ ಸತ್ತನಂತೆ!” ಎಂದ. ಬುಡಣಸಾಬರು ಬರಿಯೆ ‘ಹೂಂ’ ಎಂದರು. ಅಜ್ಜನ ಹೂಂಕಾರದ ಅರ್ಥವನ್ನು ತಿಳಿದುಕೊಳ್ಳುವ ಮೊದಲೇ, ತನಗೆ ತಿಳಿದಿದ್ದನ್ನು ಒಳಗೆ ಇಟ್ಟುಕೊಳ್ಳುವುದಸಾಧ್ಯವಾಗಿ ಉಸ್ಮಾನ ಹೇಳಿದ: “ರಾತ್ರೆ ಗೆಳೆಯರೊಂದಿಗೆ ಇಸ್ಪೀಟು ಆಡುತ್ತಿದ್ದಾಗ, ಆಟ ಒಳ್ಳೇ ರಂಗಕ್ಕೆ ಬಂದಾಗ ಇವನು ಒಮ್ಮೆಲೇ ಹೆದರಿ, ‘ಅಜ್ಜೀ, ಹಾವೂ’, ಎಂದು ಒದರಿದನಂತೆ. ಅಜ್ಜಿ, ಗೆಳೆಯರೆಲ್ಲ ಹೌಹಾರಿಎಲ್ಲಿ ಎಲ್ಲಿ ಎಂದು ಹುಡುಕುತ್ತ ಕೇಳಿದಾಗ ಸುಣ್ಣ ಹಚ್ಚಿಕೊಂಡ ಬೆರಳನ್ನು ಕಂದೀಲಿನ ಬೆಳಕಿಗೆ ಹಿಡಿದು, ನಡುಗುತ್ತ, “ನನಗಾಗ ಕೊಟ್ಟಿಗೆಯಲ್ಲಿ ಕಚ್ಚಿದ್ದು ಇಲಿಯಲ್ಲವೇನೋ, ಅಜ್ಜೀ, ಬೆರಳು ನೋಡ್!”ಎಂದನಂತೆ. ಸಂಜೆ, ಕೊಟ್ಟಿಗೆಯಲ್ಲಿ ಅಟ್ತದ ಮೇಲಿನಿಂದ ಹುಲ್ಲುಕಟ್ಟುಗಳನ್ನು ಇಳಿಸುವಾಗ, ಕಚ್ಚಿದ್ದು ಇಲಿಯೆಂದು ತಿಳಿದು ಗಾಯಕ್ಕೆ ಸುಣ್ಣ ಹಚ್ಚಿಕೊಂಡ ಬೆರಳು ಕಪ್ಪುಗಟ್ಟಿತ್ತಂತೆ. ತಲೆ ಸುತ್ತಿದಂತಾಗುತ್ತದೆಯೆಂದು ಮಲಗಿದನಂತೆ. ಮಧ್ಯರಾತ್ರಿಯ ಹೊತ್ತಿಗೆ…ಅಲ್ಲ ದಾದಾಜಾನ್, ಎಂತಹ ಹೊತ್ತಿಗೆ ಸಾವು ನೋಡು! ಅಗದೀ ಉಮೇದಿನಿಂದ ಗೆಳೆಯರನ್ನೆಲ್ಲ ಆಟಕ್ಕೆ ಕರೆದಾಗ…”
ಬುಡಣಸಾಬರು ಮಾತನಾಡಲಿಲ್ಲ.
ನಿನ್ನೆ ಸಂಜೆಯಿಂದಲೂ ಅನುಭವಿಸಿದ್ದು: ತಾವು ಸುತ್ತಿದ ಆ ಬಳಸು ದಾರಿಯಲ್ಲಿ ತಮ್ಮ ಗಮನ ಸೆಳೆದದ್ದು, ನೆನಪು ಕೆರಳಿಸಿದ್ದು, ಕಂಡಂತೆ ಕಾಣಿಸಿಕೊಂಡಂತೆ ಭಾಸವಾದದ್ದು, ಮಳೆ ಬಿದ್ದದ್ದು-ಎಲ್ಲ ಎಲ್ಲವೂ ಮರುಕಳಿಸಿದಂತಾಗಿ, ಮುಂಜಾವದ ಕನಸೂ ಇನ್ನೊಮ್ಮೆ ನೆನಪಾಗಿ, ನಿನ್ನೆಯ ಸಂಜೆಯೇ ಹಾವಿನ ರೂಪ ಧರಿಸುತ್ತ ಅವನ ಸಾವಿಗಾಗಿ ಸಿದ್ಧವಾಗುತ್ತಿತ್ತು. ಹೊಂಚುಹಾಕುತ್ತಿತ್ತು ಎಂದು ಅನ್ನಿಸಿದಾಗ ಜೀವ ಜುಮ್ ಎಂದಿತು.
ಉಸ್ಮಾನ ಏನೋ ಮಾತನಾಡಿರಬೇಕು, ಬುಡಣಸಾಬರಿಗೆ ಅದು ಕೇಳಿಸಲಿಲ್ಲ. ಅವರು ತಮ್ಮದೇ ಗುಂಗಿನಲ್ಲಿದ್ದರು: ಗೆಳೆಯರನ್ನು ಆಟಕ್ಕೆ ಕರೆದಾಗ ಸತ್ತದ್ದಲ್ಲ. ಕಚ್ಚಿದ್ದು ಇಲಿಯೆಂದು ಅಜ್ಜಿ-ಅಮ್ಮರಿಗೆ ಬಾಯಿಯಿಂದ ಹೇಳುವಾಗಲೂ ಸಾವಿನ ಮುಂಗಾಳಿ ಹತ್ತಿದ ಜೀವ ಆಳದಲ್ಲೆಲ್ಲೋ ಹೆದರಿಯೇ ಗೆಳೆಯರನ್ನು ಆಟಕ್ಕೆ ಕರೆಸಿರಬೇಕು: ಹಾಗೆಂದು ಉಸ್ಮಾನನಿಗೆ ಮಾತ್ರ ಬಾಯಲ್ಲಿ ಆಡಿ ತೋರಿಸಲಿಲ್ಲ.
ಇಬ್ಬರೂ ಈಗ ಓಣಿಯ ಬಾಯಿಗೆ ಬಂದಿದ್ದರು. ಇದಿರುಗಡೆ, ನಿನ್ನೆ ಮಧ್ಯಾಹ್ನದಿಂದಲೂ ಮುಚ್ಚಿಯೇ ಇದ್ದ, ಈಗ ದಿಕ್ಕಿಲ್ಲದಂತೆ ನಿಂತಿದ್ದ ಆ ಚಿರಪರಿಚಿತವಾದ ಅಂಗಡಿಯ ಕೆಳಜಗುಲಿಯ ಮೇಲೊಬ್ಬ ಹೊಲೆಯನು ಕಂಬಳಿ ಹಾಸಿ ಹಗ್ಗದ ಸುರುಳಿಯನ್ನೇ ತಲೆದಿಂಬಾಗಿಸಿ ರಸ್ತೆಯ ಕಡೆಗೆ ಬೆನ್ನುಮಾಡಿ ಮಲಗಿದ್ದುದನ್ನು ನೋಡುತ್ತ, ಪೂರ್ವದ ಆಕಾಶ ಎಂದಿನಂತೆಯೇ ಕೆಂಪೇರಹತ್ತಿದಾಗ, ನಿನ್ನೆ ರಾತ್ರೆ ಅಂತಹದೇನೂ ನಡೆಯಲೇ ಇಲ್ಲ ಎನ್ನುವ ಮೋಡಿಯಲ್ಲಿ ಹೊಸ ದಿನವೊಂದು ಸದ್ದಿಲ್ಲದೇ ಹುಟ್ಟುತ್ತಿದ್ದಾಗ, ರಸ್ತೆಗೆ ಹೊರಳಿ, ಮುಂದೆ ನಡೆದಿದ್ದರು. ಮಾತು ನಿಲ್ಲಿಸಿದ್ದರು.
*****