ಕಪ್ಪು ಮೋಡ, ಬೆಳ್ಳಿ ಅಂಚು

ಕಪ್ಪು ಮೋಡ, ಬೆಳ್ಳಿ ಅಂಚು

ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು-

‘ಈಗ ಹೇಗಿದೆ?’
ಪ್ರಯಾಸಪಟ್ಟು ಸಣ್ಣ ನಗೆ ಎಳೆದು-
‘ಓ.ಕೆ. ಹುಷಾರಾಗಿದ್ದೀನಿ, ನೀ ಇನ್ನು ಹೋಗು. ನಿಮ್ಮನೆಯೊರು ಕಾಯ್ತಾ ಇರ್‍ತಾರೆ. ಪುಟ್ಟ ಬೇರೆ ನಿಮ್ಮನೇಲಿ….’
‘ಹೆಚ್ಚು ಮಾತಾಡ್‌ಬೇಡ. ನಾನಿವತ್ತು ಇಲ್ಲೇ ಮಲಗ್ತೀನಿ. ಅವರು ಮಕ್ಕಳನ್ನ ನೋಡಿಕೊಳ್ತಾರೆ.’
‘ಬೇಡ ಶೀಲಾ ಪರವಾಗಿಲ್ಲ…. ನಾ ಈಗ ಸರಿಯಾಗಿದ್ದೀನಿ….’ ನನ್ನ ಬಾಯ ಮೇಲೆ ಬೆರಳಿಟ್ಟು ‘ಹುಷ್’ ಎಂದು ಗದರಿದಳು. ನಾ ಮೆಲ್ಲನೆ ಹೇಳಿದೆ-
‘ಹೆದರಬೇಡ, ನಾ ಮತ್ತೆ ನಿದ್ದೆ ಗುಳಿಗೆ ತೆಗೆದುಕೊಳ್ಳೋಲ್ಲ….’

ಮೋಸಂಬಿ ರಸ ಹಿಂಡುತ್ತಿದ್ದ ಶೀಲಾ ತಟ್ಟನೆ ತಲೆ ಎತ್ತಿದಳು.

‘ನೀ ಮತ್ತೆ ತೆಗೆದುಕೊಳ್ಳಬೇಕೆಂದಿದ್ರೆ ಧಾರಾಳವಾಗಿ ತಗೋ. ಈ ಬಾರಿ ಉಳಿಸೋಕೆ ನಾ ಬರೋಲ್ಲ ಅಷ್ಟೆ….’
ತಮಾಷೆಗೇನೋ ಎಂದು ನೋಡಿದೆ. ಅವಳ ಮುಖಭಾವ ಕಟುವಾಗಿತ್ತು. ಮರುಕ್ಷಣ ತಿಳಿಯಾದಳು.
‘ಬದುಕಿನ ಎಲ್ಲಾ ಸಮಸ್ಯೆಗೂ ಸಾವೇ ಉತ್ತರ ಅನ್ನೋ ಹಾಗಿದ್ರೆ ಈ ಜಗತ್ತಿನಲ್ಲಿ ಒಂದು ನರಪಿಳ್ಳೆಯೂ ಉಳೀತಿರಲಿಲ್ಲ ಕಣೇ….’
ನಾನು ಮೆಲ್ಲನೆ ನಕ್ಕೆ
‘ಅರೆ ಹುಡುಗಿ, ನಾನು ಎಲ್ಲಿ ಸಾಯಲು ಹೋಗಿದ್ದೆ. ನನ್ನ ಸಾವಿನ ಯತ್ನ ಕೂಡ, ಬದುಕೋ ಹತಾಶ ಪ್ರಯತ್ನ ಆಗಿತ್ತು. ರವೀನ ಹೇಗಾದರೂ ಸರಿ ಉಳಿಸಿಕೊಳ್ಳೋ ಕಟ್ಟಕಡೆಯ ವಿಪರೀತ ಪ್ರಯಾಸವಾಗಿತ್ತು.’
‘ಅವನ ಉಳಿವು ಅಳಿವಿಗೂ, ನಿನ್ನ ಉಳಿವು ಅಳಿವಿಗೂ ಯಾಕೆ ಕೊಂಡಿ ಹಾಕ್ತೀಯಾ….’ ಲೋಟ ನನ್ನ ಕೈಗಿಡುತ್ತಾ ಒರಟಾಗಿ ಹೇಳಿದಳು. ‘ಅವನಿಲ್ಲದೆ ಬದುಕಿಲ್ಲ ಅಂತಲೆ…? ಅದಕ್ಕೇನಂತಾರೆ, ಅಮೋಘ ಪ್ರೇಮ….’ ಮತ್ತೆ ಕುಟಕಿದಳು. ‘ಓಹ್ ಕಮಾನ್ ಮಧು. ಜೀವನದ ಸರ್ವೇಸಾಮಾನ್ಯ ಸಂಬಂಧಗಳಿಗೆಲ್ಲ ಬಹು ದೊಡ್ಡ ಅರ್ಥ ಕಲ್ಪಿಸಬೇಡ. ಮೂಲಭೂತ ಅವಲಂಬನೆಗೆ, ಮೇಲೆ ನೀನು ಎಷ್ಟೇ ಕೋಟ್ ಪ್ರೀತಿ ಪ್ರೇಮದ ಡಿಸ್‌ಟೆಂಪರ್ ಹೊಡೆದರೂ….’ ಜೋರಾಗಿ ನಗತೊಡಗಿದಳು.

ನಾನು ಗಂಭೀರವಾಗಿ ಹೇಳಲು ಹೊರಟೆ-

‘ರವಿ ಇಲ್ಲದೆ ನಾನು ಯಾಕೆ ಬದುಕಬೇಕು ಅನ್ನಿಸುತ್ತೆ….’
ಶೀಲಾ ಕುರ್ಚಿ ಎಳಕೊಂಡು, ನನ್ನೆದುರು ಬಲು ಹತ್ತಿರದಲ್ಲಿ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು-‘ಯಾಕೆ ರವಿ ಇಲ್ಲದೆ ಬದುಕುವುದು ಪ್ರಯಾಸ ಅಂತಲೆ? ಬದುಕುವುದನ್ನು ಎಂದಾದರೂ ನೀನು ಕಲಿಯಲೇಬೇಕು ಮರಿ, ಈಗ ಮಲಗು….’ ಬಾಗಿಲು ಮುಂದೆ ಮಾಡಿ ಹೊರಗೆ ಹೊರಟು ಹೋದಳು.
ಬಹಳ ಹೊತ್ತು ನಿದ್ದೆ ಬರಲಿಲ್ಲ. ನೋವು, ಆಯಾಸ ಸ್ವಲ್ಪ ತಗ್ಗಿತ್ತು. ವಾರದ ಹಿಂದೆ ತಟ್ಟನೆ ಪ್ರಾರಂಭವಾದ ಈ ಹಾಳು ಜ್ವರ ಈಗಷ್ಟೇ ಬಿಟ್ಟಿತ್ತು.

ಬದುಕು ಅನಿರೀಕ್ಷಿತಗಳನ್ನೇ ಹೊತ್ತು ತರುತ್ತದೆ, ಅದೂ ತಯಾರಿಲ್ಲದವರ ಹೆಗಲಿಗೆ? ಹತ್ತು ವರ್ಷಗಳ ವೈವಾಹಿಕ ಬದುಕಿನ ಒಂದು ಸಂಜೆ-

ನನ್ನವನಾದ ರವಿ ನನ್ನೆದುರು ಚಡಪಡಿಸುತ್ತಾ ಕುಳಿತಿದ್ದ. ಅವ ಸುಮಾರು ಎರಡು ಗಂಟೆ ಕೊರೆದ ಸುದೀರ್ಘ ಕತೆಯ ಒಟ್ಟು ಸಾರಾಂಶ ಇದು-

‘ನಮ್ಮ ನಡುವೆ ಏನೂ ಉಳಿದಿಲ್ಲ. ನಿಧಾನವಾಗಿ ನಿರ್ಣಯಕ್ಕೆ ಬಾ. ಆದರೆ ಈ ವಿಚ್ಛೇದನ ಅನಿವಾರ್ಯ. ನನ್ನ ಮನಸ್ಸು ಬೇರೆಲ್ಲಿಗೋ ಹಾರಿದೆ. ನಾನು ಸ್ವತಂತ್ರವಾಗ ಬಯಸುತ್ತೇನೆ.’

ಎಷ್ಟು ಸಲೀಸಾಗಿ ಒಪ್ಪಿಸಿದ್ದ. ನಾ ಬೆಕ್ಕಸಬೆರಗಾಗಿ ಕೇಳಿದೆಲ್ಲವನ್ನೂ ನಂಬಲಾರದೆ ಕಣ್ಣರಳಿಸಿ ಕುಳಿತುಬಿಟ್ಟಿದ್ದೆ. ನಮ್ಮ ಅತ್ಯಂತ ಆಪ್ತರಲ್ಲೂ, ಆತ್ಮೀಯರಲ್ಲೂ…. ನಮ್ಮ ಗಂಡಂದಿರಲ್ಲೂ ನಾವು ಕಾಣದ ಎಷ್ಟೊಂದು ಮುಖಗಳಿವೆ?
‘ನಿನ್ನ-ಪುಟ್ಟಿಯ ಖರ್ಚು ವೆಚ್ಚ ಆಮೇಲೂ ನಾ ವಹಿಸ್ತೀನಿ. ನೀ ಅದರ ಚಿಂತೆ ಮಾಡಬೇಡ’ ಈ ಕ್ಷಣದ ಅವನ ಆಶ್ವಾಸನೆಗಳಿಗೆ ನನ್ನ ಭವಿಷ್ಯವನ್ನೆಲ್ಲ ತೂಗು ಹಾಕಲು ಕರೆಕೊಟ್ಟ. ಅವನ ಸ್ವಾತಂತ್ರ್ಯಕ್ಕೆ ಅವ ತಿಂಗಳಿಗೆ ಸಾವಿರದೈನೂರು ದಂಡ ತೆರಲು ನಿದ್ಧನಿದ್ದ!
ನಾನು ಅತ್ತೆ, ಕೂಗಾಡಿದೆ. ಯಾವುದಕ್ಕೂ ಅವ ಪ್ರತಿಕ್ರಿಯಿಸದೆ ತನ್ನ ನಿರ್ಧಾರವನ್ನೇ ಮುಂದಿಟ್ಟು ಕಲ್ಲು ದೇವರಾದ. ಒಂದು ಕ್ಷಣ… ‘ನನ್ನ ಮನೆ, ನನ್ನ ಗಂಡ, ನನ್ನ ಮಗು, ನಾಲ್ಕಂಕಿಯ ಸಂಬಳ….’ ಎಂಬ ಅತ್ಯಂತ ಸುಭದ್ರ ಸಂಬಂಧದಲ್ಲಿ ಕಾಲುಚಾಚಿ ಆರಾಮ ಕುಳಿತ ನನ್ನನ್ನು, ಕೂತ ಜಮಖಾನದಿಂದಲೇ ತೆಗೆದೊಗೆದಂತಾಗಿತ್ತು.

ತಟ್ಟನೆ ಆಗ ತೋರಿದ್ದು ಒಂದೇ ದಾರಿ, ನಿದ್ದೆ ಗುಳಿಗೆ ನುಂಗಿದೆ. ಎದ್ದಾಗ ಆಸ್ಪತ್ರೆಯಲ್ಲಿದ್ದೆ. ರವಿ ತಲೆ ಕೆಳಗೆ ಹಾಕಿ ಚಿಂತಾಕ್ರಾಂತನಾಗಿ ಕುಳಿತಿದ್ದ. ನನಗೆ ಗೊತ್ತಿತ್ತು ನಾನು ಸಾಯುವುದಿಲ್ಲ ಎಂದು. ಹೆಚ್ಚು ಗುಳಿಗೆ ತೆಗೆದುಕೊಂಡಿರಲಿಲ್ಲ. ಬದುಕಿನ ಸೆರಗನ್ನು ಭದ್ರ ಹಿಡಿದುಕೊಂಡೇ ಸಾವಿನ ಪ್ರಪಾತಕ್ಕೆ ಧುಮುಕಿದ್ದೆ.

ರವಿ ಉಳಿದ-ಮನೆಯಲ್ಲಿ. ಮತ್ತೆ ವಿಚ್ಛೇದನದ ಮಾತು ಎತ್ತಲಿಲ್ಲ. ಬೆಳಿಗ್ಗೆ ಎಂಟಕ್ಕೆ ಮನೆ ಬಿಡುವ, ರಾತ್ರಿ ಹತ್ತಕ್ಕೆ ಬರುವ ‘ಊಟ’ ಎಂದರೆ ‘ನನ್ನದಾಗಿದೆ-’ ಎಂಬ ಮೊಟಕು ಉತ್ತರ. ಒಂದೇ ಮನೆಯಲ್ಲಿ ಒಂದೇ ಹಾಸಿಗೆಯಲ್ಲಿ ಶುದ್ಧ ಅಪರಿಚಿತರು.

ಎಲ್ಲಾ ಬದಲಾಗಿತ್ತು.

ಮಾತು ಮಾತಿಗೆ ಸಿಡುಕುವುದು, ರೇಗುವುದು ನಿಂತಿತ್ತು. ನನ್ನೆಲ್ಲ ಅಳು-ಕೂಗಾಟಕ್ಕೆ ಅವನ ಮೌನ ನಿರ್ಲಕ್ಷ್ಯವಷ್ಟೇ ಉತ್ತರವಾಗಿತ್ತು. ನನ್ನ ಅಸ್ತಿತ್ವವೇ ಇಲ್ಲವೆಂಬಂತೆ ವರ್ತಿಸುವ ಅವನಿಗೆ ನನ್ನ ಅವಶ್ಯಕತೆಯೇ ಇಲ್ಲದೆ, ನಾನು ಮಾತ್ರ ಅವನನ್ನು ಬಿಡದೆ ತಬ್ಬಿ ಹಿಡಿದ ಸತ್ಯ ಹೊಳೆಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಒಂದು ಮುಂಜಾನೆ ತನ್ನ ಬಟ್ಟೆಗಳನ್ನು ಸೂಟ್‌ಕೇಸಿಗೆ ತುರುಕಿ ನಡೆದವ ಮತ್ತೆ ಬರಲಿಲ್ಲ. ಕಾನೂನಿಗಲ್ಲದಿದ್ದರೂ, ಸಮಾಜದ ಕಣ್ಣಿಗೆ ಒಂದು ವಿವಾಹವಾಗಿದ್ದ. ಅವಳು ಎರಡೆಳೆ ಕರಿಮಣಿ ಸರದ ದಪ್ಪ ತಾಳಿಯನ್ನು ಎದೆಯ ಮೇಲೆ ಹೆಮ್ಮೆಯಿಂದ ಹಾಕಿಕೊಂಡು ಜಾಹಿರಾತು ಮಾಡಿದಳು. ತನ್ನ ಹೆಸರಿನ ಮುಂದಕ್ಕೆ ‘ರವಿ ಹುಲಸೂರ್’ ಎಂದು ಇವನ ಹೆಸರು, ಊರುಗಳನ್ನು ಅಂಟಿಸಿಕೊಂಡಳು. ನನಗಿಂತ ಹೆಚ್ಚು ಅಭದ್ರತೆಗಳು ಅವಳನ್ನು ಕಾಡಿದಂತಿತ್ತು!

ನಕ್ಕು ನಗಿಸಿದ ಇನಿಯ, ಇರಿದು ಕರಗದೆ ನಡೆದಿದ್ದ.

ವರ್ಷಗಳು ನೀರೆರೆದು, ಕ್ಷಣದಲ್ಲಿ ಬುಡ ಕಡಿದಿದ್ದ.

ಹೆಚ್ಚು ಕಾಲ ಬೇಕಾಗಿರಲಿಲ್ಲ. ಈ ವ್ಯರ್ಥ ಸಂಬಂಧ ಜಗ್ಗಿ ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಅಂದು ಸಂಜೆ ಸಹಿ ಹಾಕಿದೆ. ಅವನ ಹಿಡಿದೆಳೆದ ಸೂತ್ರ ಕತ್ತರಿಸಿ, ಹಾರಲು ಬಿಟ್ಟೆ. ಹೋಗಲಿ, ಅವನ ಮನ ಬಂದತ್ತ.

‘ಏನು ಮಾಡ್ತೀಯ ಮಧು, ಯೋಚಿಸಿದ್ಯಾ ಏನಾದ್ರೂ….?’ ಶೀಲಾಳ ಪ್ರಶ್ನೆಗೆ ಕೇಳಿಸದವಳಂತೆ ಕಿಟಕಿ ಆಚೆ ನೋಡುತ್ತಾ ನಿಂತೇ ಇದ್ದೆ.
‘ಮಧೂ….’ ಗಟ್ಟಿಯಾಗಿ ಕೂಗಿದಳು. ‘ಅವರಿವರ ಅನುಕಂಪದ ಚಟ್ಟ ಏರಬೇಡ. ಆ ಅನುಕಂಪ ನಿನ್ನ ಒಂದು ಹೊತ್ತಿನ ಊಟಕ್ಕೂ ಒದಗದು….’ ಗದರಿಸುವಂತೆ ಹೇಳಿದಳು.
“ಈ ಶೋಕ ಎಷ್ಟು ದಿನ? ಸತ್ತವರಿಗೂ ಹದಿಮೂರನೇ ದಿನಕ್ಕೆ ತಿಥಿ ಮಾಡಿ ಮುಗಿಸ್ತಾರೆ’- ಕಟುವಾಗಿತ್ತು ಅವಳ ವಾಕ್ಯ.
‘ಮತ್ತೆ ಆತ್ಮಹತ್ಯೆ….? ಕೆಣಕಿ ಪ್ರಶ್ನಿಸಿದಳು.
‘ಇಲ್ಲಾ ನಾ ಖಂಡಿತಾ ಸಾಯೋಲ್ಲ….’ ದೃಢವಾಗಿ ಹೇಳಿದೆ. ‘ಪುಟ್ಟಿಗಾಗಿ ನಾನು ಬದುಕಬೇಕೆನಿಸಿದೆ…’ ಬದುಕಲು ನಾ ಕೆದಕಿದ ಹೊಸ ಹೊಸ ಕಾರಣಗಳಿಂದ ಶೀಲಾ ಸ್ವಲ್ಪವೂ ಕದಲಲಿಲ್ಲ. ಜೋರಾಗಿ ನಕ್ಕಳು.
‘ಬದುಕಲು ನೆನಪುಗಳನ್ನು ಹುಡುಕಬೇಡವೇ ಮಧು, ನಿನಗಾಗಿ, ನಿನ್ನ ಬದುಕಿಗಾಗಿ, ಈ ಜೀವನದ ಸೋಲುಗಳನ್ನೆಲ್ಲ ಸವಾಲುಗಳನ್ನಾಗಿ ಉತ್ತರಿಸುವ ಛಲಕ್ಕಾಗಿ ಪಂಥಾಹ್ವಾನಕ್ಕಾಗಿ ಬದುಕು. ನಾಳೆ ಪುಟ್ಟಿ ಬೆಳೆದು ದೂರಾಗಬಹುದು. ಋಣಭಾರವನ್ನು ಅವಳ ಹೆಗಲಿಗೆ ಹೇರಿ ಹಿಡಿದಿಡಬೇಡ. ಹಾರಲು ಬಿಡು ಹಕ್ಕಿಯಂತೆ. ಮತ್ತೆ ಗಾಳಿಪಟದಂತೆ ಜಗ್ಗಿ ಸೂತ್ರ ಎಳೆಯಬೇಡ. ನೀ ನಿಲ್ಲಬಲ್ಲೆ ನಿನ್ನದೇ ಪಾದಗಳ ಬಲದ ಮೇಲೆ…’

ಅವಳು ಹೇಳಿದಷ್ಟು ಸುಲಭವಿರಲಿಲ್ಲ ಬದುಕುವುದು, ಮತ್ತೆ ಪ್ರಾರಂಭಿಸುವುದು. ಮನಸ್ಸಿಗೆ ಶಾಂತಿ ಇರಲಿಲ್ಲ. ಕುದಿವ ಆಕ್ರೋಶ, ಅವನತ್ತ ವಿಪರೀತ ನಿಷ್ಠೆಯಿಂದ ಬಾಳಿದ ಬದುಕು, ನಿಷ್ಠೆಯನ್ನು ಹಕ್ಕಿನಂತೆ ನಿರೀಕ್ಷಿಸಿತ್ತು. ನಾನೆಂದೂ ಮೈಯಿರಲಿ, ಮನಸ್ಸಿನಲ್ಲೂ ‘ಜಾರಿರಲಿಲ್ಲ’ ಅದು ನನ್ನ ದೌರ್ಬಲ್ಯವೋ, ಹೆಚ್ಚಳಿಕೆಯೋ, ಗೊತ್ತಿರಲಿಲ್ಲ. ಅದು ನನ್ನ ಸೋಲೆನ್ನಬೇಕೆ, ಶ್ರೇಷ್ಠತೆ ಎನ್ನಲೇ ತಿಳಿದಿರಲಿಲ್ಲ. ನನ್ನ ಮನೆ, ಮನೆಯಂಗಳದಾಚೆ ನಾ ಕಂಡ ಬದುಕೆಷ್ಟಿತ್ತು? ಒಮ್ಮೆ, ಒಮ್ಮೆ ಮಾತ್ರ ರವಿಯ ಸ್ನೇಹಿತನೊಬ್ಬ ಬಂದು ಉಳಿದ ನಾಲ್ಕು ದಿನ-ಬೆಳಿಗ್ಗೆ ಎದ್ದೊಡನೆ ನೈಟಿ ತೆಗೆದು, ಜಡೆ ಹೆಣೆದು, ನಾಲ್ಕು ಮಾತು ಹೆಚ್ಚೇ ಆಡಿದ್ದೆ-ರವಿಯ ಕಣ್ಣು ಕೆಂಪಾಗಿತ್ತು. ಒಂದಿಷ್ಟು ಹಗರಣವೇ ಆದ ನೆನಪಿದೆ. ನಾ ಮತ್ತೆ ಅಡಿಗೆ ಮನೆ ಸೇರಿದೆ. ‘ಗಂಡನ ಇಚ್ಛೆಯನರಿವ ಸತಿ’ಯಾದೆ. ಗಂಡನ ಅಭಿಪ್ರಾಯಕ್ಕೆ ಪೂರಕವಾಗಿ ನನ್ನ ನಡವಳಿಕೆಯ ತಿದ್ದಿಕೊಂಡೆ. ನಿಜ, ಇದನ್ನು ಪೂರಾ ಅವ ಹೇರಿದ್ದಲ್ಲ. ನಾ ಸ್ಥಾಪಿಸಿದೆ ಬಿಟ್ಟಿದ್ದೆ ನನ್ನ ವ್ಯಕ್ತಿತ್ವವನ್ನು. ವಾದಿಸುವ, ಹೋರಾಡುವ ಆ ಶ್ರಮವೇಕೆ ಎಂಬ ಆಲಸ್ಯದಲ್ಲಿ. ಆದರೂ ಅನಿಸಿದ್ದೇನೊ ನಿಜ-

ನಾವು ರೇಣುಕೆಯರು
ನಿಂತ ನೀರಲ್ಲಿ
ಪುರುಷನ ನೆರಳು ಕಂಡೇ
ಅಪವಿತ್ರರಾದವರು
ಪರಶುರಾಮನ ಕೊಡಲಿ ಏಟಿಗೆ
ಸತ್ತವರು, ಮತ್ತೆ ಹುಟ್ಟಿದವರು.
ಯುಗಗಳ ನಂತರವೂ
ಕಾದಿದೆ ಕೊರಳ ಮೇಲೆ
ಪುರುಷ-ರಾಮರ ಕೊಡಲಿಗಳು

ಅವನಿಗೆಲ್ಲಿತ್ತು ಆ ಮಿತಿ, ಆ ಸೀಮೆ-ಸರಹದ್ದು. ಸೀತೆಯ ಪಾದಕ್ಕೇ ನಿಂತಿತ್ತಲ್ಲ ಲಕ್ಷ್ಮಣ ರೇಖೆ. ತ್ರೇತಾಯುಗದ ರಾವಣರಿರಲಿಲ್ಲ. ಆದರೂ ಹಾಕಿದ ಗೆರೆಯ ದಾಟಲು ಎಂಥಾ ಅಳುಕು. ಅವ ಲಗ್ಗೆ ಇಟ್ಟಿದ್ದ. ವಯಸ್ಸು ಮರೆತು ಹೊಸ ಪ್ರೀತಿ-ಸಾಹಸಕ್ಕೆ, ಮತ್ತೆ ಪ್ರೀತಿಸುವ ಹಕ್ಕನ್ನು ಕಾನೂನು ಕೂಡಾ ಕಿತ್ತುಕೊಳ್ಳಲಾರದುನನ್ನ ವಯಸ್ಸು ಮಾತ್ರ ಹಣೆಯಲ್ಲಿ ನವಿರಾದ ಗೆರೆಗಳಾಗಿತ್ತು. ನನ್ನ ವಯಸ್ಸು ಹಿಡಿ ಮಾತ್ರ ಉಳಿದ ಕರುಳ ಗುಚ್ಛವಾಗಿತ್ತು. ನನ್ನ ವಯಸ್ಸು ದಶಕಗಳ ಕುಪ್ಪಳಿಸಿ ಖಾಲಿಯಾಗಿತ್ತು. ಅದರಾಚೆ ಏನೂ ಆಗಲಿಲ್ಲ. ಬದುಕು ಮಾತ್ರ ಉಳಿದುಬಿಟ್ಟಿತ್ತು. ಸೀಮಾರೇಖೆಯ ಹೊರ ಸುಳಿಯದೆಯೆ. ನಾನೇ ಒಡ್ಡಿಕೊಂಡ ಅವಲಂಬನೆಯ ಮಯಣದರಮನೆ ಕರಗುತ್ತಿತ್ತು.

ಕಿಡಿಗೇಡಿ ಪ್ರಶ್ನೆಯೊಂದು ಕಣ್ಣು ಮಿಟುಕಿಸಿತು.

ಶೋಷಿತರು ಯಾರು? ನಾನೇ, ಅವಳೇ?
ಯೌವನವನ್ನೆಲ್ಲ ಅವನಿಗೆ ಅರ್ಪಿಸಿ ಖಾಲಿಯಾದ ನಾನೇ? ಇಲ್ಲ ಇಪ್ಪತ್ತರ ಕುಡಿ ಯೌವನವನ್ನು ಅವನಿಗೆ ಅರ್ಪಿಸ ಹೊರಟ ಅವಳೆ?
ಎಂಥಾ ಹುಚ್ಚಿಯರು! ಅರೆ-ಗಂಡನಿಗೂ ಪೂರ್ಣ ‘ಸತಿ’ಯಾದವರು!
ರವಿಯ ಬಗ್ಗೆ ಚಿಂತಿಸಿದಷ್ಟೂ ನನ್ನ ಸಿಟ್ಟು ಆಕ್ರೋಶ, ಮಿತಿಮೀರುತ್ತಿತ್ತು. ಒಮ್ಮೆ ಪ್ರಜ್ಞೆ ತಪ್ಪಿ ಬಿದ್ದಾಗ, ಶೀಲಾ ಗಟ್ಟಿಯಾಗಿ ರೇಗಿದಳು-
‘ನಿನ್ನ ಬಿ.ಪಿ. ಏರ್‍ತಾ ಇದೆ…. ಗಂಡನ ಜೊತೆ ಆರೋಗ್ಯಾನೂ ಕಳಕೊಳ್ಳೋ ಪಣ ತೊಟ್ಟಿದ್ದೀಯಾ?’ ಮತ್ತೆ ಮೆತ್ತಗಾದರೂ, ಅಷ್ಟೇ ದೃಢಸ್ವರದಲ್ಲಿ-

‘ನೋಡು, ರವಿ ಬಗ್ಗೆ ನೀನು ಎಷ್ಟೇ ಯೋಚಿಸಿದರೂ, ಕೋಪಗೊಂಡರೂ ಅವನಿಗದು ಯಾವ ರೀತಿಯಲ್ಲೂ ತಟ್ಟದು. ನೀನು ಪ್ರಯತ್ನಪೂರ್ವಕವಾಗಿ ಅವನತ್ತ ಚಿಂತಿಸೋದ ನಿಲ್ಲಿಸಬೇಕು’ ವ್ಯೆದ್ಯಳ ಗತ್ತಿನಲ್ಲಿ ಆಜ್ಞಾಪಿಸಿದಳು.

“ವಿವಾಹದ ಪವಿತ್ರ ಬಂಧನಾನ….’ ನಾನು ಇನ್ನೂ ರಗಳೆ ಪ್ರಾರಂಭಿಸುವ ಮೊದಲೇ ಕತ್ತರಿಸಿ-

‘ಅವನನ್ನು ಬಿಡು, ಅವನ ಬದುಕಿನ, ಅವನ ಗತಿಗೆ, ಇದು ಯಾವ ಕಾಲ ವಿವಾಹ-ದ್ರೋಹ ಎಂದೆಲ್ಲ ನಡೆಯದ ನಾಣ್ಯಗಳನ್ನು ಹಿಡಿದು ತಿರುಗಾಡಲು. ಒಂದು ತಾಳಿಯಿಂದ, ಒಂದು ಕಾನೂನಿನಿಂದ ಮನುಷ್ಯ ಸಂಬಂಧಗಳನ್ನು ಕಟ್ಟಿಡಲು ಸಾಧ್ಯವೇ? ಅವನಿಗೆ ನೀನು ಬೇಕಿಲ್ಲದ ಮೇಲೆ, ನಿನಗೇಕೆ ಅವನು ಅಷ್ಟು ಬೇಕು?’

ಏಕೆ ಬೇಕು….? ಎದೆಗೆ ಗುದ್ದಿದ ಪ್ರಶ್ನೆ.

‘ಅವನನ್ನು ಮರೆಯೋದು, ಅವನಷ್ಟು ಸುಲಭವಾಗಿ ಪ್ರೀತಿಯನ್ನು ಮರೆಯೋದು….’ ಮತ್ತೆ ಕತ್ತರಿ ಬಿತ್ತು ನನ್ನ ಪ್ರಲಾಪಕ್ಕೆ.

ಇದನ್ನು ಪ್ರೀತಿ ಎಂದು ಅರ್ಥೈಸಬೇಡ ಅಂತ ನಾನು ಹೇಳಿದ್ದೆ. ಅವಲಂಬನೆಯ ಮೂಲಭೂತ ಬೇಡಿಕೆಗೆ ಪ್ರೀತಿ-ಪ್ರೇಮದ ಎಷ್ಟೊಂದು ರಂಗಿನ ಪದಗಳನ್ನು ಹೊದಿಸದರೂ, ಅದರ ಹರಕು ಕಣ್ಣಿಗೆ ರಾಚುತ್ತೆ. ರವಿ ಒಂದು ಪಕ್ಷ ಹಣ ಕಳುಹಿಸದಿದ್ದರೆ ನಿನ್ನ ಮುಂದಿನ ತಿಂಗಳ ದಿನಸಿ ಎಲ್ಲಿಂದ ಬರುತ್ತೆ. ಮನೆ ಬಾಡಿಗೆ, ಹಾಲಿಗೆ ಹಣ, ಪುಟ್ಟಿ ಫೀಸ್…. ಮೊದಲು ಇದಕ್ಕೆ ಉತ್ತರ ಹುಡುಕು, ಪ್ರೀತಿ-ಪೇಮದ ಬಗ್ಗೆ ನಂತರ ಚಿಂತಿಸಿದರಾಯ್ತು, ಪುರುಸೊತ್ತಾಗಿ,’

ಬಿ. ಪಿ. ಸಲಕರಣೆ ಚೀಲಕ್ಕೆ ತುರುಕಿ ನಡೆದೇ‌ಇಟ್ಟಳು ಶೀಲಾ.

ಶೀಲಾ ಮುಲಾಜಿಲ್ಲದ ಹೆಂಗಸು. ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ ಮೂರ್ನಾಲ್ಕು ಹೆರಿಗೆ, ಶಸ್ತ್ರಕ್ರಿಯೆ ಮಾಡುವ, ನೂರೆಂಟು ಕಾರಣಗಳಿಗೆ ಬಸಿರಿಳಿಸುವ-ಸ್ತ್ರೀತಜ್ಞೆ. ವೃತ್ತಿ ಸಹಜವೇನೋ ಎಂಬಂತೆ ಶೀಲಾಳಿಗೆ ನಯನಾಜೂಕಿನ ಮಾತುಗಳನ್ನು ಪೋಣಿಸುವ ಸಹನೆ ಇರಲಿಲ್ಲ. ಇದ್ದದ್ದನ್ನು ಮುಖಕ್ಕೆ ಎತ್ತೆ ಒಗೆವಂತೆ ಹೇಳುವಳು.

‘ಬದುಕುವುದು ಅಂತಲೇ ನಿರ್ಧರಿಸಿದ ಮೇಲೆ ಹೇಗಾದರೂ ಬದುಕೋದು ಅಂದರೇನು? ಬದುಕೋದಾದರೆ ಗರ್ವದಿಂದ ಬದುಕು’ ಎನ್ನುವಳು.
‘ಅವರಿವರ ಸಹಾನುಭೂತಿಯ ಗುಡ್ಡೆ ಹಾಕಿಕೊಂಡು ನೀ ಗದ್ದುಗೆ ಏರೋಕಾಗಲ್ಲ’ ಎಚ್ಚರಿಸುವಳು.
‘ಸಾಕು ಹೊರಗೆ ಬಾ ಈ ದುರಂತ ನಾಯಕಿಯ ಪಾತ್ರದಿಂದ. ನಿನಗೆ ಈ ನೋವು ಒಂದು ರೀತಿ ಮಜ ಕೊಡ್ತಾ ಇದೆ ಅಲ್ಲ’ ಕೆಣಕುವಳು.

ನಾ ಬೆಚ್ಚುತ್ತಿದ್ದೆ. ನನ್ನ ಮುಖವಾಡಗಳನ್ನೆಲ್ಲ ಕಿತ್ತೆಸೆಯುವ ಅವಳ ಪರಿಗೆ, ಪೂರ್ಣ ಬೆತ್ತಲಾಗುವ ಭಯಕ್ಕೆ. ಅವಳ ಒಂದೊಂದು ಮಾತು, ನನ್ನ ಒಳಗೊಳಗೇ ಮುಟ್ಟಿ-ತಟ್ಟಿ ಪ್ರಶ್ನಿಸುವುವು. ನನ್ನ-ಅವನ ಸಂಬಂಧ ಹುಸಿ-ದಿಟವ ಬೇರ್ಪಡಿಸಲು ಪ್ರೇರೇಪಿಸುತ್ತಿದ್ದವು.

ಈಗ ಕುಳಿತು ಯೋಚಿಸಿದರೆ, ನಮ್ಮ ಸಾಂಗತ್ಯ ವಿಚಿತ್ರವಿತ್ತು ಅನಿಸುತ್ತದೆ. ವಾರಗಕ್ಕಲೆ ರವಿ ಪ್ರವಾಸಕ್ಕೆ ಹೋದಾಗ ನಾನು ಚಡಪಡಿಸುತ್ತಿದ್ದೆ. ಹಾಲಿನವನ ಲೆಕ್ಕ ದಿನಸಿಯವನ ಲೆಕ್ಕ ಎಲ್ಲವನ್ನೂ ಎಡತಾಡಲು. ಎಲೆಕ್ಟ್ರಿಸಿಟಿ ಬಿಲ್‌ಗೆ ಪಕ್ಕದ ಮನೆ ಶಶಿಯನ್ನು ಕೇಳಬೇಕಿತ್ತು. ಶೀಲಾ ಕೈಲಿ ಇವರು ಕೊಟ್ಟ ಬೇರರ್ ಚೆಕ್ ಕಳುಹಿಸುತ್ತಿದ್ದೆ.

ರವಿ ಕೂಡಾ ನನ್ನ ‘ಮಿಸ್’ ಮಾಡುತ್ತಿದ್ದ. ನಾನು ಅನಿವಾರ್ಯವಾಗಿ ತೌರಿಗೆ ಹೋದ ಒಂದೆರಡು ಸನ್ನಿವೇಶದಲ್ಲಿ, ಬೆಳಿಗ್ಗೆ ಬಿಸಿ ಬಿಸಿ ಕಾಫಿ ಇಲ್ಲದೆ, ಘಮ ಘಮ ಉಪ್ಪಿಟ್ಟಿಲ್ಲದೆ, ಮಧ್ಯಾಹ್ನಕ್ಕೆ ಹಾಜರಾಗುವ ಮೂರು ಡಬ್ಬದ ಕ್ಯಾರಿಯರ್ ಇಲ್ಲದೆ, ಸಂಜೆ ತೆರೆದ ಬಾಗಿಲಿನ ನಗುವ ಪತ್ನಿಯ ಸ್ವಾಗತಿವಿಲ್ಲದೆ.

ಅವಲಂಬಿತರು…. ಪರಮ ಅವಲಂಬಿತರು. ಅವನ ಅವಲಂಬನೆಗಳಿಗೆ ಬಹಳ ಸುಲಭವಾಗಿ ಬದಲು ಸಿಕ್ಕಾಗಿದೆ. ನನ್ನ ಅವಲಂಬನೆಯೇ ಅಧಿಕವಿತ್ತು. ಆರ್ಥಿಕ ಅವಲಂಬನೆ. ಮಾನಸಿಕ ಅವಲಂಬನೆ, ಹೊರಗಿನೆಲ್ಲ ಪ್ರಪಂಚಕ್ಕೆ ಕದವಿಕ್ಕಿ ಕುಳಿತ ಏಕಾಂಗಿಯ ಸಾಂಗತ್ಯದ ಅವಲಂಬನೆ.

ಈ ಮನೆಯ ಮುಖಂಡತ್ವವನ್ನು ನಾನೇ ಬಿಟ್ಟುಕೊಟ್ಟಿದ್ದೆ, ಯಾರದೋ ನೆರಳಲ್ಲಿ ಯಾರದೋ ಹೆಗಲಿಗೆ ಜವಾಬ್ದಾರಿ ಹೇರಿ, ಯಾರದೋ ಆಸರೆಯಲ್ಲಿ ಉಳಿಯುವುದರಲ್ಲಿ ಒಂದು ಬಗೆಯ ಆರಾಮವಿತ್ತು. ಬ್ಯಾಂಕಿನಿಂದ ಹಣ ಬೇಕು, ರವಿ ತರುತ್ತಿದ್ದ. ಪೋಸ್ಟ್ ಆಫೀಸ್ ಉಳಿತಾಯ, ರವಿ ಕಟ್ಟಿ ಬರುತ್ತಿದ್ದ. ದೀಪ ಕೆಟ್ಟು ಹೋಯ್ತು, ರವಿ ಬದಲಿಸುತ್ತಿದ್ದ. ಪುಟ್ಟಿಯ ಹೆಚ್ಚಿನ ಪ್ರಶ್ನೆಗಳಿಗೆಲ್ಲ ‘ಅಪ್ಪ ಬರಲಿ, ಅಪ್ಪನ ಕೇಳು, ಅಪ್ಪಂಗೆ ಹೇಳ್ತೀನಿ ತಾಳು….’ ಉತ್ತರವಾಗಿತ್ತು. ರವಿ ಕಿತ್ತುಕೊಳ್ಳದಿದ್ದರೂ ಅವನ ಶಿರಕ್ಕೆ ಕಿರೀಟ ಇಟ್ಟು, ನಾ ಪದತಳದಲ್ಲಿ ಕುಳಿತಿದ್ದೆ.

ಎಷ್ಟು ಸಣ್ಣ ಘಟನೆಗಳು….

‘ಅಮ್ಮ ಇರಾಕ್ ಯಾವ ಖಂಡದಲ್ಲಿದೆ?’
‘ಅಪ್ಪನ ಕೇಳೋಗಮ್ಮ….’
‘ಅಮ್ಮ ರಿಪೋರ್ಟ್ ಕಾರ್ಡ್‌ಗೆ ಸಹಿ ಹಾಕು….’
‘ಅಪ್ಪನ ಹತ್ರ ಹಾಕಿಸ್ಕೋ….’
‘ಇವತ್ತು ಪೇರೆಂಟ್ಸ್ ಡೇ….’
‘ರವಿ, ನೀನು ಹೋಗಿ ಬರ್ತೀಯಾ, ಮರೀಬೇಡ….’

ಸಣ್ಣ ಸಣ್ಣ ಕೆಲಸಗಳು. ನನ್ನ ಶಕ್ತಿ ಮೀರಿದ ಹಿಮಾಲಯವನ್ನು ಎತ್ತಿಡಬೇಕಾದ ಘನ ಕಾರ್ಯಗಳಲ್ಲ. ಪುಟ್ಟ ಪುಟ್ಟ ಕೆಲಸಗಳು…. ನಾನು ಹೊರಲಾರದ್ದಲ್ಲ. ನಾನು ಹಂಚಿಕೊಳ್ಳದೆ ಉಳಿದದ್ದು…. ನಾನು ಕಲಿಯದ್ದು!

ಶೀಲಾ ಹೇಳುತ್ತಾಳೆ ಒರಟಾಗಿ-

‘ಬದುಕಿಗೆ ತಯಾರಾಗುವ ಯೋಚನೆಯೇ ನಿನಗೆ ಬಂದಿರಲಿಲ್ಲವಾ ಮಧು? ಆಪತ್ಕಾಲಕ್ಕಷ್ಟೇ ನಾವು ಕಲಿತ ವಿದ್ಯೆ, ಪ್ರತಿಭೆ, ಚಟುವಟಿಕೆ ನೆನಪಾಗುತ್ತದೆ. ಇಲ್ಲಾ ಹೀಗೇ ತಗ್ಗಿಗೆ ಹರಿಯೋ ನೀರಿನಂತೆ ಹೋದತ್ತಲೇ ಹಾದಿಯೆಂದು ಕೈ ಕಟ್ಟಿ ಕೂರುತ್ತೇವೆ.’

ಬದುಕಿಗೆ ತಯಾರಾಗುವ ಪ್ರಮೇಯವೇ ಬಂದಿರಲಿಲ್ಲ. ಶೇಕಡ ತೊಂಬತ್ತೊಂಬತ್ತು ಸಂಸಾರಗಳು, ಏನೇ ತೊಂದರೆ ಬಂದರೂ, ಹೇಗೋ ಕೊನೆಯವರೆಗೂ ನಿಭಾಯಿಸುತ್ತವೆ. ಉಳಿದ ಆ ಶೇಕಡ ಒಂದರ ಸಾಧ್ಯತೆ…. ಅತಿ ಕಡಿಮೆ. ಬದುಕು ನನ್ನ ಗಣಿತ, ಹುಣಾಕಾರದ ಎಗ್ಗಿಲ್ಲದೆ ನಕ್ಕಿತ್ತು!

ಹೊಸ ಬದುಕಿಗೆ ಒಂದೊಂದೇ ಹೆಜ್ಜೆಗಳು, ಪ್ಲಾಸ್ಟರ್‍ನಲ್ಲಿದ್ದ ಕಾಲನ್ನು ಉಪಯೋಗಿಸದೆ ಬಿಟ್ಟು ನಡೆಯಲು ತಡವರಿಸುವ ಪರಿ ನನ್ನದಾಗಿತ್ತು. ಶೀಲಾ ಎರಡು ದಿನ ರಜೆ ಹಾಕಿ ನನ್ನೊಂದನೆ ಬಂದಳು. ಬ್ಯಾಂಕಿನಲ್ಲೊಂದು ಅಕೌಂಟ್ ತೆಗೆಸಿದಳು. ವಿದ್ಯಾವಂತೆ ನಾನು. ಒಂದು ಚೆಕ್ ಬರೆಯುವುದು ಕಲಿತದ್ದು…. ಮುವ್ವತೈದಕ್ಕೆ! ಅಂಚೆ ಕವರಿನ ಬೆಲೆ ಒಂದು ರೂ. ಎಂದು ತಿಳಿದದ್ದು…. ಮುವ್ವತೈದಕ್ಕೆ! ಪುಟ್ಟಿಯ ಅಂಕ ಗಣಿತಕ್ಕೆ ಉತ್ತರ ಹುಡುಕಿದ್ದು ಮುವ್ವತೈದಕ್ಕೆ!
‘ಮದು, ಏನು ಮಾಡಬೇಕು ಅಂತ ಯೋಚಿಸಿದ್ದೀಯಾ?’ ಮತ್ತೆ ಒತ್ತಿ ಕೇಳಿದ ಶೀಲಾಗೆ ಅರೆಮನಸ್ಸಿನಿಂದ ಹೇಳಿದೆ-

‘ಬಿ. ಎ. ಕಟ್ತೀನಿ….’
‘ಬಿ. ಎ. ಮಾಡಿ ಏನು ಮಾಡ್ತೀಯಾ?’ ನೇರವಿತ್ತು ಅವಳ ಪ್ರಶ್ನೆ.
‘ಗೊತ್ತಿಲ್ಲ, ನನ್ನ ಉದಾಸೀನದ ಉತ್ತರ.
‘ಮಧು, ನಿನಗೆ ಮತ್ತೆ ಈ ಸಾವಿರದೈನೂರ ಜೀವನಾಂಶದಲ್ಲಿ ಬದುಕು ಒಗ್ಗಿ ಹೋಗುತ್ತೆ…. ಏನಾದರೂ ಮಾಡಬೇಕು ಅನ್ನೋ ಉತ್ಸಾಹ, ಛಲ, ಒಂದಿಷ್ಟೂ ಬೇಡವೇ?’ ಅಸಮಾಧಾನದಿಂದ ರೇಗಿದಳು.
‘ಶೀಲಾ ಪ್ಲೀಸ್…. ನನ್ನನ್ನು ಏನು ಮಾಡು ಅಂತೀಯಾ? ಡಿಗ್ರಿ ಇಲ್ಲ. ಮತ್ತೆ ಹಿಂದಿರುಗಿದರೆ ಸ್ವಾಗತಿಸೋಕೆ ತೌರಿನ ಸಂಪತ್ತಿಲ್ಲ. ನನ್ನ ಕಸ ಗುಡಿಸು, ಮುಸುರೆ ತಿಕ್ಕು ಅಂತೀಯಾ….’

ಶೀಲಾ ಬಹಳ ಹೊತ್ತು ಉತ್ತರಿಸಲಿಲ್ಲ.
‘ಮಧು… ನೀನು ತಗ್ಗಿನ ಹಾದಿಯನ್ನೆ ಹಿಡಿಯುತ್ತಿ. ವಿದ್ಯುತ್ತು ಅತಿ ಕಡಿಮೆ ನಿರೋಧಕ ದಾರಿಯನ್ನು ತುಳಿಯುತ್ತೆ. ಮನುಷ್ಯ ಕೂಡ ಅತಿ ಕಡಿಮೆ ಪರಿಶ್ರಮದ ಮಾರ್ಗ ಹುಡುಕ್ತಾ ಇರ್‍ತಾನೆ. ನೀ ಏನು ಆಗಬೇಕು ಅಂತ ನಿಶ್ಚಯಿಸಬೇಕಾದವಳು ನೀನು. ನಿನ್ನಿಂದ ಏನು ಸಾಧ್ಯ ಅಂತ ತಲೆ ಕೆಡಿಸಿಕೊಳ್ಳಬೇಕಾದವಳೂ ನೀನೇ….’
ನಾ ಏನೂ ಹೇಳದೇ ಸುಮ್ಮನೆ ಕುಳಿತೆ.

ಯುದ್ಧದಲ್ಲಿ ಶಸ್ತ್ರಾಭ್ಯಾಸ ಮಾಡಲು ಹೊರಟಿದ್ದೆ. ಈ ಜೀವನ ಸಮರಕ್ಕೆ ನಾನು ಸಿದ್ಧವಿರಬೇಕಿತ್ತು. ಎಷ್ಟು ಮಧಾಹ್ನಗಳು ಎಷ್ಟು ಸಂಜೆಗಳು ವ್ಯರ್ಥವಾಗಿ ಕಳೆದದ್ದು. ಮನೆಗೆ ಮಿಕ್ಸಿ ಬಂತು. ಫ್ರಿಜ್ ಬಂತು. ವಾಷಿಂಗ್ ಮಷಿನ್ ಬಂತು…. ನನ್ನ ಕೆಲಸವಿಷ್ಟು ಹಗುರವಾಗಿತ್ತು. ಸಮಯವಿಷ್ಟು ಮಿಕ್ಕಿ ಉಳಿದಿತ್ತು.

ನಾವು ಜಡತ್ವವನ್ನು ಅವಳಿಯಾಗಿ ಪಡೆದು ಬಂದವರು. ಅವಶ್ಯಕತೆ ಇಲ್ಲದೆ ಏನನ್ನೂ ಕಲಿಯಲು, ಒಂದಿಂಚೂ ಬೆಳೆಯಲು ಸಿದ್ಧರಿಲ್ಲದವರು. ನಿಜ, ನಾ ಹೋರಾಡಬೇಕಿರಲಿಲ್ಲ. ಒಂಬತ್ತರಿಂದ ಐದರ ಕೆಲಸ ಹಿಡಿದು. ಆದರೆ ನನ್ನ ಬೆರಳ ತುದಿಯ ಪ್ರತಿಭೆಯನ್ನು ಉಳಿಸಿಕೊಳ್ಳಬಹುದಿತ್ತು. ಕಲಿತ ವಿದ್ಯೆಯನ್ನು ಬಳಸಿಕೊಳ್ಳಬಹುದಿತ್ತು. ಸ್ವತಃದುಡಿಮೆಯ ಸವಿರುಚಿಯ ಒಂದಿಷ್ಟು ಸವಿಯಬಹುದಿತ್ತು. ಅಂಥಾ ಯಾವ ಯತ್ನವನ್ನೂ ಮಾಡಲಿಲ್ಲ. ಈ ಒಂದು ದಶಕದಲ್ಲಿ. ಎಂಥಾ ಹುಚ್ಚು ಜನ ನಾವು, ಬದುಕು ಅಂಚಿಗೆ ನೂಕುವವರೆಗೂ ನಿಂತಿರುತ್ತೇವೆ. ಕೊನೆಗೆ ಆ ತುದಿಯ ಹಿಡಿದು ಜೋತಾಡುತ್ತೇವೆ. ಬೀಳಬಹುದಾದ ಪ್ರಪಾತಕ್ಕೆ ಹೆದರಿ ತಲ್ಲಣಿಸಿ.
ಒಂದು ದಶಕ ಹೇಗೆ ಕಳೆದಿತ್ತು?

ಪುಟ್ಟಿ-ಹುಟ್ಟಿದಳು, ಹೊಟ್ಟೆ ಕೆಳಗಾದಳು, ಅಂಬೆಗಾಲಿಟ್ಟಳು. ಹೆಜ್ಜೆ ಇಟ್ಟು ನಡೆದೇಬಿಟ್ಟಳು…. ಎಷ್ಟೊಂದು ಬೆಳವಣಿಗೆ!

ರವಿ…. ಎಂ. ಬಿ. ಎ. ಮುಗಿಸಿದ. ಕಂಪ್ಯೂಟರ್…. ಮಾರ್ಕೆಟಿಂ ಅಂತ ಡಿಗ್ರಿ…. ಡಿಪ್ಲಮೋಗಳ ಪೋಣಿಸಿಕೊಂಡ. ಸಾವಿರದಿನ್ನೂರರ ಸಂಬಳಕ್ಕೆ ಸೇರಿದಾತ, ಆರು ಸಾವಿರದ ಅಂಚಿಗೆ ಬಂದ!

ನಾನು…. ತಾಯಾದೆ, ಒಂದಿಷ್ಟು ದಪ್ಪವಾದೆ. ಮನೆಗೆಲಸ, ವಿಡಿಯೋ, ಮತ್ತೆ ಜೋಡಿಸಿ ಹೋದ ಕೇಬಲ್ ಟಿ. ವಿ. ಗೆ ಜೋತುಬಿಟ್ಟೆ ದಶಕವನ್ನು. ಮೂಲೆಮನೆಯ ಸೀತಾ ಹುಬ್ಬು ಕಿತ್ತು ಹಣಗಳಿಸುವುದನ್ನು, ಪಕ್ಕದ ಮನೆ ಶಶಿ, ಅರಚಿಕೊಳ್ಳೊ ಮಕ್ಕಳನ್ನು ಸಂಭಾಳಿಸುತ್ತಾ ಬೇಬಿ ನರ್‍ಸರಿ ತೆರೆದದ್ದನ್ನು ಮೋಜಿನಿಂದ ಕಂಡೆ, ಆಡಿಕೊಂಡೆ. ‘ಇವರಿಗೆ ಇಷ್ಟವಾಗೋಲ್ಲ’ ಎಂಬ ಸಬೂಬನ್ನು ಹೊಂದಿಸಿಕೊಂಡೆ. ಹಾಗೆ ನೋಡಿದರೆ ರವಿ, ನನ್ನ ಕೆಲಸ, ಹವ್ಯಾಸಗಳಿಗೆ ಯಾವತ್ತೂ ಆಕ್ಷೇಪ ಎತ್ತಿರಲಿಲ್ಲ. ಇಬ್ಬರೇ ಇದ್ದ ಮನೆಯಲ್ಲಿ ಹಿರಿಯರ ಅಂಕೆ ಅಡ್ಡಿಯೂ ಇರಲಿಲ್ಲ. ಏಕೋ ಏನೋ ಮಾಡಬೇಕಿನಿಸಲಿಲ್ಲ. ಬಾಲ್ಯ್ದ ವೇಗ, ಆವೇಗ, ಸ್ಪರ್ಧೆ ಯಾವುದೂ ಇಲ್ಲದ ಈ ವಿವಾಹಿತ ಬದುಕು, ಸಮತಟ್ಟು ತಲುಪಿತ್ತು. ಎಲ್ಲಾ ಹುಡುಗಿಯರಂತೆ ನಾನೂ ಶಾಲೆಯಲ್ಲಿ ಚಿತ್ರ ಬಿಡಿಸಿದ್ದೆ. ಪ್ರಬಂಧ ಬರೆದಿದ್ದೆ. ಕದ್ದು ಮುಚ್ಚಿ ಕವನಗಳನ್ನೂ ಬರೆಯುತ್ತಿದ್ದೆ. ಅಲಂಕಾರದ ಬಟ್ಟೆಗಳನ್ನೂ ಹೊಲೆದುಕೊಳ್ಳುತ್ತಿದ್ದೆ. ಅವಕ್ಕೆಲ್ಲ ಇದ್ದ ಕಾರಣಗಳು ಈಗ ಇರಲಿಲ್ಲ. ಕಾರಣಗಳಿಲ್ಲದೆಯೂ ಸಾಧಿಸುವ ಛಲಕ್ಕೆ ಬೇಕಾದ ಪರಿಶ್ರಮದ ಅಗತ್ಯ ಕಾಣಲಿಲ್ಲ. ‘ಏನೂ ಮಾಡ್ತಾ ಇಲ್ವಾ ಮಧು….. ಪೇಂಟಿಂಗ್, ಹೊಲಿಗೆ….’ ಅಂದಾಗೆಲ್ಲ ‘ಪುಟ್ಟ ಮಗು ಇದೆ ಸಮಯವೆಲ್ಲಿ….’ ಅನ್ನುತ್ತಿದ್ದೆ. ಕಾರಣಗಳಿತ್ತು. ನೂರು ಕಾರಣಗಳು…. ಪುಟ್ಟಿ ಬೆಳೆದಂತೆ ಕಾರಣಗಳೆಲ್ಲ ನೆಪಗಳಾದವು. ‘ಮಗು ಬಂದಾಗ ಮನೆಯಲ್ಲಿರಬೇಕು’ ಇವರು ಬಂದ ತಕ್ಷಣ ಕಾಫಿ ಆಗಬೇಕು….’ ಕಾರಣಗಳ ಕೊಟ್ಟುಕೊಂಡೆ. ಗೃಹಿಣಿಯ ಮಾದರಿಯಾಗುವ ಆಸೆಯಿಂದಲ್ಲ. ಮತ್ತೇನೂ ಆಗಲಾರದ ಆಲಸ್ಯದಿಂದ.

ಅಂದು, ಅವನ ಮೊದಲ ಚೆಕ್ ಬಂದಿತ್ತು.

ಈಗ ನನ್ನ…. ಅವನ ನಡುವೆ ಉಳಿದ ಸಂಬಂಧ ಈ ಹಣವೊಂದೇ.

ಇಷ್ಟೇ ಇತ್ತೇ ನಮ್ಮ ಸಂಬಂಧ…. ಇಷ್ಟೇ? ‘ಇರಲಿಕ್ಕಿಲ್ಲ ರವಿ…. ಒಂದಿಷ್ಟು ಮತ್ತೇನೋ ಇತ್ತು. ಇಲ್ಲದಿದ್ದರೆ ಸಮಯ ಹೀಗೇಗೆ ನಿಂತುಬಿಟ್ಟಿದೆ, ನೀ-ನಿಲ್ಲದ ಈ ಹೊತ್ತಿನಲ್ಲಿ. ಅವಳು ಕಣ್ಣೊತ್ತುವುದೇಕೆ, ಸಂಜೆ ಕೆಂಪಿನ ಕತ್ತಲಲ್ಲೆ. ಶೀಲಾ ಏನೇ ಹೇಳಿದರೂ ನನ್ನ-ಅವನ ನಡುವೆ ಅವಲಂಬನೆಯ ಹೊರತಾಗಿಯೂ ಒಂದು ಸಂಬಂಧವಿತ್ತು. ಪ್ರೀತಿಯೋ-ಪ್ರೇಮವೋ ಯಾವುದೋ ಒಂದು. ನನ್ನನ್ನು ಈ ವೈವಾಹಿಕ ನಿಶ್ಚಿಂತೆಯಲ್ಲಿ, ಸುಷುಪ್ತಿಯಲ್ಲಿ ಮಲಗಿಸಿದ ಒಂದಿಷ್ಟು ಸಿಹಿವರ್ಷಗಳು.

ಸತ್ಯ ಇಷ್ಟೆ, ಪ್ರೇಮ-ಕಾಮ, ವಾತ್ಸಲ್ಯ, ಭರವಸೆ, ನಿಷ್ಠೆ ಎಲ್ಲಾ ಬಂಧನಗಳೂ ಕಿತ್ತುಕೊಂಡ ಮೇಲೂ ಜಗ್ಗಾಡಿ ಉಳಿದುಕೊಂಡ ಕೊಂಡಿ…. ಈ ಹಣದ್ದು!

‘ಬೇಡ, ನಾ ಹಸಕ್ಕೊಂಡಾದ್ರೂ ಸಾಯ್ತೀನಿ. ಭಿಕ್ಷೇನಾದ್ರೂ ಬೇಡ್ತೀನಿ. ಅವನ ಹಣ ಬೇಕಿಲ್ಲ. ನನಗೂ ಆತ್ಮಗೌರವ ಇದೆ’ ಬುಸುಗುಟ್ಟುತ್ತ ಚೆಕ್ ಅತ್ತ ಬಿಸುಟೆ. ಅದು ಬರೀ ಬಾಯಿ ಮಾತಿನ ಚೀರಾಟ ಎಂದು ನನಗೂ ಗೊತ್ತಿತ್ತು. ಈ ಸಾವಿರದೈನೂರರ ಮೇಲೆ ನನ್ನ ತಿಂಗಳು ಪೂರಾ ಒಂಟಿಗಾಲಲ್ಲಿ ನಿಂತಿತ್ತು.

ಶೀಲಾ ನಾ ಬಿಸುಟ ಚೆಕ್ಕನ್ನು ನಿಧಾನವಾಗಿ ಎತ್ತಿ ಮೇಜಿನ ಮೇಲಿಟ್ಟು, ನನ್ನ ಬಳಿ ಬಂದು, ಭುಜ ತತ್ಟುತ್ತಾ ನನ್ನ ಹೈ-ಡ್ರಾಮಾದಿಂದ ಕೊಂಚವೂ ವಿಚಲಿತವಾಗದೆ ಹೇಳಿದಳು-

“ಙou ಛಿಚಿಟಿ’ಣ ಚಿಜಿಜಿoಡಿಜ seಟಜಿ ಡಿesಠಿeಛಿಣ mಥಿ ಜeಚಿಡಿ, ಆತ್ಮಗೌರವ ಬಹಳ ದುಬಾರಿಯಾದುದು. ಸದ್ಯಕ್ಕೆ ನಾಳೆ ಹೋಗಿ ಇದನ್ನು ಜಮಾ ಮಾಡು. ಅವನ ಈ ಚೆಕ್ಕನ್ನು ಬಿಸುಡಬಲ್ಲ ತಾಕತ್ತು ನಿನಗೆ ಬಂದಾಗ ಹೇಳುವಿಯಂತೆ….’

ಶೀಲಾಳದು ಕಡ್ಡಿ ಮುರಿದಂಥಾ ಮಾತು. ವೈದ್ಯಳು ಸಕ್ಕರೆ ಬೆರೆಸದೆಯೇ ಕಹಿ ಔಷಧಿಯ ಗಂಟಲಲ್ಲಿ ನುಗ್ಗಿಸಬಲ್ಲವಳು. ಶಸ್ತ್ರಕ್ರಿಯೆಯಂತೆ ಸುಳ್ಳು, ಪೊಳ್ಳುಗಳಲ್ಲಿ ಸಿಲುಕಿದ ಸತ್ಯವನ್ನು ಕತ್ತರಿಸಿ ಬೇರ್ಪಡಿಸಿ ಕಣ್ಣೆದುರು ತೂಗುಹಾಕಬಲ್ಲವಳು. ನನ್ನ ಬಗ್ಗೆ ಒಂದಿಷ್ಟು ಸಿಟ್ಟೂ ಇದ್ದವಳು. ಬಹುಶಃ ಬದುಕನ್ನು ವ್ಯವಸ್ಥಿತವಾಗಿ ಬದುಕಿದವರಿಗೆ, ಬದುಕಿನೆಲ್ಲ ಸಾಧ್ಯತೆಗಳನ್ನು ಊಹಿಸಿ ತಯಾರಾದ ಜಾಣರಿಗೆ ನನ್ನಂಥಾ ಗಬ್ಬೆಬ್ಬಿಸಿಕೊಂಡ ಬದುಕು ರೇಗಿಸಬಹುದು. ಹೇಸಿಗೆ ಎನಿಸಬಹುದು. ಒಮ್ಮೆ ಮೆತ್ತಗಾದ ಕ್ಷಣದಲ್ಲಿ ಶೀಲಾ ಹೇಳಿದ್ದಳು-

‘ನಾ ಅನುಕಂಪ ಸುರಿಸಬಹುದು, ನಿನ್ನ ಪರ ವಹಿಸಿ ಅವನಿಗಿಷ್ಟು ಹಿಡಿಶಾಪ ಹಾಕಬಹುದು. ಹೇಳು ಅದರಿಂದೇನು ಪ್ರಯೋಜನ? ಭೂತ ಎಷ್ಟೇ ಸುಂದರವಿದ್ದರೂ ಬರೀ ಇತಿಹಾಸವಾಗುತ್ತೆ. ಅವಶೇಷಗಳಷ್ಟೇ ಉಳಿಯುತ್ತೆ. ಈ ಅನುತಾಪ, ಅನುಕಂಪವನ್ನೆಲ್ಲ ಚಾಚಿ ಹರಡಿ ಹೊದ್ದು ಮಲಗಿಬಿಡುತ್ತೀ. ನಿನಗೀಗ ಬೇಕಿರೋದು ಎದ್ದು ಕುಳಿತುಕೊಳ್ಳುವ ಕ್ರಿಯೆ. ನೀನು ಎಂದೂ ನಿನ್ನ ಭವಿಷ್ಯದ ಬಗ್ಗೆ ಚಿಂತಿಸಲಿಕ್ಕಿಲ್ಲ ಅಲ್ಲ…. ಅದನ್ನೂ ರವಿಗೇ ಬಿಟ್ಟಿದ್ದೆ. ಅಥವಾ ಈಗಲೂ ಬಿಟ್ಟಿರುವೆ.’

ನಾನು ಭವಿಷ್ಯದ ಬಗ್ಗೆ ಯೋಚಿಸಿದ್ದೆ. ಬೆಳಗಾಗೆದ್ದರೆ ಪತ್ರಿಕೆಯಲ್ಲಿ ಅಪಘಾತಗಳ ಸುದ್ದಿ ಓದಿಯೇ ನಡುಗುತ್ತಿದ್ದೆ. ರವಿ ಬರುವುದು ಕೊಂಚ ತಡವಾದರೂ ತಳಮಳಿಸುತ್ತಿದ್ದೆ. ಮೆಜೆಸ್ಟಿಕ್ ಸರ್ಕಲ್ ಹತ್ತಿರ ಯಾವನೋ ಕೆಂಪು ದೀಪ ನೋಡಿಯೂ ನುಗ್ಗಿಸಿ, ರವಿ ಬ್ರೇಕ್ ಒತ್ತಿ ಮುಗ್ಗರಿಸಿದ ಪ್ರಕರಣ…. ಮೊಣಕೈ ತರಚಿದ್ದಕ್ಕೆ ಆತಂಕಪಟ್ಟಿದ್ದೆ. ನನ್ನ ಮನಸ್ಸಿಗೆ ಹೊಳೆದಿದ್ದ, ನಾ ಊಹಿಸಿದ್ದ, ಚಿಂತಿಸಿದ್ದ, ಅತಿ ದೊಡ್ಡ ದುರಂತ ರವಿಯ ಸಾವು!

ಅಂತಹ ಸಮಯಕ್ಕೂ ಒಂದು ಬಗೆಯ ನೆರವಿತ್ತು, ನೆರಳಿತ್ತು. ರವಿ ಜೀವ ವಿಮೆ ಮಾಡಿಸಿದ್ದ. ಇಪ್ಪತ್ತು ಪರ್‍ಸೆಂಟ್ ಪಿ. ಎಫ಼್. ಕಟ್ಟುತ್ತಿದ್ದ. ನಲವತ್ತರ ವಯಸ್ಸಿಗೇ ಪ್ಲಾಟ್ ಬುಕ್ ಮಾಡಿದ್ದ. ಆರ್ಥಿಕ ಸ್ಥಿತಿಯ ಬಗ್ಗೆ ನಾ ಯೋಚಿಸಬೇಕಿರಲಿಲ್ಲ.

ಇಂದು ರವಿಯ ಸಾವಿಗಿಂತ ದೊಡ್ಡ ದುರಂತ ನನ್ನ ಕಣ್ಣ ಮುಂದೆ ನಿಂತಿದೆ. ಬಾಡಿಗೆ ಮನೆಯಲ್ಲಿ ಬಿಡಿಗಾಸಿಲ್ಲದೆ, ರವಿಯ ಆಶ್ವಾಸನೆಯ ಮೇಲೆ ನಿಂತಿದ್ದೆ, ಅವನ ತಿಂಗಳ ಹಣದ ನಿರೀಕ್ಷೆಯಲ್ಲಿ, ಒಂದು ಪಕ್ಷ ಬಾರದಿದ್ದರೆ ಎಂಬ ಆತಂಕದಲ್ಲಿ, ಜೀವನಾಂಶಕ್ಕೆ ಹೋರಾಡಬೇಕಿತ್ತೆ ಎಂಬ ಡೈಲಮಾದಲ್ಲಿ!

ಛೀ, ನಾನು ರವಿಯ ಸಾವನ್ನು ಬಯಸುತ್ತಿರುವೆನೆ? ದೇವರೆ, ಸಂಬಂಧಗಳು ಕೂಡ ಕಟ್ಟಕಡೆಗೆ ತಮ್ಮ ಸ್ವಾರ್ಥವನ್ನಷ್ಟೇ ಹುಡುಕಿ ನಿಲ್ಲುತ್ತವಲ್ಲ. ಏನೆಲ್ಲ ಇನ್‌ಷೂರ್ ಮಾಡಿದ್ದೆವು. ಈ ವಿವಾಹ, ಈ ಸಂಬಂಧ, ಈ ಪ್ರೀತಿ ಇನ್‌ಷೂರ್ ಆಗುವಂತಿದ್ದರೆ!

ರವಿ ನನ್ನ ಬದುಕನ್ನು ಈ ಮಟ್ಟಿಗೆ ನಿಯಂತ್ರಿಸಲು ಬಿಡಬಾರದು. ರವಿಯ ಹಣದ ಮೇಲೆ ನನ್ನ ಹಕ್ಕಿರಬಹುದು….. ಅವ ಹೊರಗೆ ದುಡಿದಂತೆಯೇ, ನಾ ಒಳಗೆ ದುಡಿದಿದ್ದೆ. ನನ್ನ ಪತಿಯ ಸ್ಥಾನದಿಂದ ನಿವೃತ್ತನಾದರೂ, ಪುಟ್ಟಿಯ ಅಪ್ಪನಾಗಿ, ಅವನ ಕರ್ತವ್ಯಗಳಿವೆ. ಆದರೂ ಈ ಹಣ ನನ್ನ ಕುಟುಕುತ್ತದೆ, ಕಟ್ಟಿಕೊಂಡ ತಪ್ಪಿಗಾಗಿ, ಬಿಟ್ಟು ಹೋದ ಗಂಡ ‘ಕಪ್ಪ’ ತೆರುತ್ತಿರುವ ಹಣ!

ನನ್ನ ಸ್ವಾವಲಂಬನೆಗೆ ಶೀಲಾ ನೂರು ಹಾದಿಗಳನ್ನು ತಡಕಾಡಿದಳು. ಟೈಪಿಂಗ್, ಬೇಬಿ ಸಿಟ್ಟಿಂಗ್, ಪ್ಲಾಂಟ್ ನರ್ಸರಿ…. ನಾ ಎಲ್ಲಕ್ಕೂ, ನಕಾರ ಹೇಳುತ್ತಾ ಬಂದೆ. ತಟ್ಟನೆ ಏನೋ ಹೊಳೆದಂತೆ-

‘ಮಧು, ನಿನ್ನ ಬೆಡ್‌ರೂಂನಲ್ಲಿ ಹೊಲಿಗೆ ಮೆಷೀನ್ ನೋಡಿದ್ದೆ. ನೀ ಅಮ್ಮನ ಮನೆಯಿಂದ ತಂದಿದ್ದಲ್ಲಾ? ಆಗೇನೇನೋ ಹೊಲಕೊಳ್ತಾ ಇದ್ದೆ. ಇದಕ್ಕೆ ಫ್ರಿಲ್, ಅದಕ್ಕೆ ಪಫ್ ಅಂತ ಏನೇನೋ ಹೊಲಕೊಂಡು ಮೆರಿತಾ ಇದ್ದದ್ದು ನೆನಪಿದೆ. ನಿನ್ನ ಭವಿಷ್ಯಕ್ಕೆ ಈಗ ಹೊಲಿಗೆ ಸಾಕು.’
‘ಏನು ರವಿಕೆ ಹೊಲಕೊಂಡು ಹೊಟ್ಟೆ ಹೊರೆಯೋಗಾಗುತ್ತಾ?
‘ಥೂ ನಿನ್ನ, ಹೊಲೆಯೋದು ಅಂದರೆ ಈ ನಮ್ಮ ಹಿಂದೀ ಚಿತ್ರಗಳಲ್ಲಿ ತೋರಿಸ್ತಾರಲ್ಲ, ಹಗಲೂ ರಾತ್ರಿ ಕೆಮ್ಮಿಕೊಂಡು ನಾಲ್ಕು ಕಾಸು ಸಂಪಾದಿಸೋ ವಿಧವೆ ತಾಯಂದಿರ ಚಿತ್ರ, ಹಾಗೆ ಅಂದುಕೊಂಡೆಯಾ? ನೀ ದರ್ಜಿ ಅಲ್ಲ. ಡ್ರೆಸ್ ಡಿಸೈನರ್ ಆಗ್ತೀಯಾ…. ನೋಡು ಹೇಗೂ ಮುಂದಿನ ಕೋಣೆ, ವರಾಂಡಕ್ಕೆ ತೆರೆದಿದೆ. ದೊಡ್ಡದಾಗೂ ಇದೆ. ಇವತ್ತೇ ಹೋಲ್ ಸೇಲಿನಲ್ಲಿ ಒಂದಿಷ್ಟು ಬಟ್ಟೆ, ಲೇಸು, ಬಟನ್ ಎಲ್ಲಾ ತರೋಣ. ನೀ ಬೊಟೀಕ್ ಪ್ರಾರಂಭಿಸು.’
ಶೀಲಾಳ ಒಂದು ಪುಟ್ಟ ಸಲಹೆ. ನನ್ನ ಭವಿಷ್ಯಕ್ಕೆ ಕಿರು ಬಾಗಿಲು ತೆರೆದಿತ್ತು. ಶೀಲಾಳ ಬಾಲವಿಡಿದು ಒಂದಿಷ್ಟು ಸುತ್ತಿದೆ. ಬಣ್ಣ ಬಣ್ಣದ ಹೊಸ ವಿನ್ಯಾಸಗಳ ಶೋ ರೂಂಗಳನ್ನು ನೋಡಿಯೇ ನನಗಷ್ಟು ಐಡಿಯಾ ಬರುತ್ತಿತ್ತು. ಶೀಲಾ ಐದಾರು ಉಡುಪು ವಿನ್ಯಾಸದ ಪುಸ್ತಕಗಳನ್ನು ತಂದುಕೊಟ್ಟಳು. ಒಂದಿಷ್ಟು ಉತ್ಸಾಹದಿಂದಲೇ ಆರಂಭವಾಯಿತು. ನನ್ನ ಬೆರಳ ತುದಿಯ ಪ್ರತಿಭೆಯ ಉದ್ಯಮವಾಗಿಸುವ ಬೃಹತ್‌ಕಾರ್ಯ.

ಏಕೋ, ಸಮಯ ಸರಿದಂತೆ ಮನಸ್ಸು ಮತ್ತೆ ನಿಧಾನವಾಗಿ ಹಳೆಯ ಬದುಕಿಗೆ ಬಂದು ನಿಂತಿತು. ಆರು ತಿಂಗಳು ಕಳೆದಿತ್ತು. ಅವನ ಚೆಕ್ ತಿಂಗಳು ತಿಂಗಳು ತಪ್ಪದೆ ತಲುಪುತ್ತಿತ್ತು. ಪುಟ್ಟಿಯ ಬಗ್ಗೆ ಆಗಾಗ್ಗೆ ಬಂದು ವಿಚಾರಿಸಿಕೊಳ್ಳುವ. ಅವ ಬಿಟ್ಟು ಹೋದ ಹೊಸತರಲ್ಲಿ ಧೂಳೆದ್ದ ಛಲ ಮತ್ತೆ ಸೋಲತೊಡಗಿತ್ತು. ಒಂದಿಷ್ಟು ಅಕ್ಕಪಕ್ಕದವರ ರವಿಕೆ-ಫ್ರಾಕ್ಸ್ ಹೊಲೆದುಕೊಟ್ಟಿದ್ದೆ ಅಷ್ಟೆ. ಅದರಾಚೆ ಹೊಲಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆರಂಭದ ಆ ಉತ್ಸಾಹ ಹೆಚ್ಚು ದಿನ ಉಳಿಯಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಮನೆಯಲ್ಲೇ ಇದ್ದವಳಿಗೆ ಈ ಓಡಾಟ-ಹೋರಾಟ ಅತಿ ಪ್ರಾಯಾಸದ್ದೆನಿಸಿತ್ತು.

ಶೀಲಾ ತಿವಿದು ಕೇಳಿದಾಗೆಲ್ಲ-‘ಯಾರೇ ನನ್ಹತ್ರ ಬರ್ತಾರೆ. ಬಂದ್ರೂ ಇವತ್ತು ಕೊಟ್ಟು ನಾಳೇನೇ ಕೊಡಿ ಅಂತಾರೆ. ಇಡೀ ರಾತ್ರಿ ಕುಳಿತು ಹೊಲೆಯಬೇಕು. ಮತ್ತೆ ಇಲ್ಲಿ ಸಡಿಲ, ಅಲ್ಲಿ ಬಿಗಿ ಅನ್ನೋ ದೂರುಗಳನ್ನು ಕೇಳಬೇಕು’ ಎಂದಿದ್ದೆ.

“ಮಧು ಸೆಲ್ಫ್‌ಡ್ರೈವ್ ಇಲ್ಲದ ಜನಕ್ಕೆ ಹೊರಗಿಂದ ಎಷ್ಟೇ ಪಂಪ್ ಹೊಡೆದರೂ ತುಸುಕ್ ಅಂತ ಕೂರುತ್ತಾರೆ. ನೀನು ಆ ಗುಂಪಿನೋಳು. ನಿನ್ನ ಸ್ವಾವಲಂಬನೆ ಒಂದು ದಿನದಲ್ಲಿ ಒಂದು ರವಿಕೆ ಹೊಲೆದೊಡನೆ ಧಾವಿಸಿ ಬರುತ್ತೆ ಅಂದುಕೊಂಡೆಯಾ?’ ಶೀಲಾ ಗುಡುಗಿ ಕೇಳಿದಳು.

ಏಕೋ ನನ್ನಲ್ಲಿ ಉತ್ಸಾಹವೇ ಮೂಡಲಿಲ್ಲ. ಒಂದು ಜೀವನಕ್ರಮಕ್ಕೆ ಒಗ್ಗಿದ ದೇಹ-ಮನಸ್ಸು ಬದಲಾವಣೆಗೆ ಎಷ್ಟೊಂದು ಪ್ರತಿಭಟಿಸುತ್ತದೆ! ಇದು ಒಂಬತ್ತರಿಂದ ಐದರ ಕೆಲಸವಾಗಿರಲಿಲ್ಲ. ಅತ್ತ ಮಾಡಿ ಬಿಸುಟು ಪ್ರತಿ ತಿಂಗಳ ನಿಗದಿತ ಸಂಬಳವನ್ನು ನಿಶ್ಚಿಂತೆಯಿಂದ ನಿರೀಕ್ಷಿಸಲು. ನಾನೊಂದು ಉದ್ಯಮವಾಗಬೇಕಿತ್ತು. ಏಕ ವ್ಯಕ್ತಿಯ ಉದ್ಯಮ. ವಿನ್ಯಾಸ ಹುಡುಕುವುದು, ಉಡುಪುಗಳಿಗೆ ಅಳವಡಿಸಿ ತಯಾರಿಸುವುದು, ಮತ್ತೆ ಕೊಳ್ಳುವ ಗಿರಾಕಿಗಳ ಹುಡುಕುವುದು. ನನ್ನ ಗತಿ ಬಲು ನಿಧಾನವಾಗಿತ್ತು. ಒಂದೆರಡು ಹೊಲೆದು ಸುತ್ತಮುತ್ತ ಒಂದಿಬ್ಬರಿಗೆ ತೋರಿಸುವುದು. ಮತ್ತೆ ಖರ್ಚಾಗದಿದ್ದರೆ ‘ಇದೆಲ್ಲಾ ನನ್ನಿಂದಾಗೋಲ್ಲ ಬಿಡು’ ಎಂದು ಖಿನ್ನಳಾಗುವುದು. ಇದರ ಲೈನಿಂಗ್ ಬಟ್ಟೆ ಇಲ್ಲ. ಇದರ ಶೋ-ಬಟನ್ ಸಿಕ್ಕಿಲ್ಲ. ನಾಳೆ ತಂದರಾಯಿತು. ನಾಡಿದ್ದು…. ಹೀಗೇ ಮುಂದೂಡುವ ನನ್ನ ಸೋಮಾರಿತನದಲ್ಲಿ ಒಂದು ಸಣ್ಣ ಆಸೆಯೂ ಇತ್ತು…. ರವಿ ಮತ್ತೆ ಬರಬಹುದೆಂದು….. ನನ್ನ ನಿಷ್ಕ್ರಿಯತೆ ಕಂಡುಕೊಂಡ ಆಶಾವಾದ ಅದು.

ಅಪ್ಪಟ ಅವಶ್ಯಕತೆ ಇದ್ದರೂ ಬದುಕದ ನಮ್ಮಂಥವರಿಗೆ ಕೆಲವೊಮ್ಮೆ ಶಾಕ್-ಟ್ರೀಟ್‌ಮೆಂಟ್ ಒಂದೇ ಉತ್ತರವಿರಬೇಕು. ಬದುಕು ಬದಲಾಯಿತು. ಆ ಒಂದು ಘಯ್ಟನೆಯಲ್ಲಿ!

ಪುಟ್ಟಿಯ ಹುಟ್ಟು ಹಬ್ಬ-ನೆನಪಿರಬಹುದೆ ರವಿಗೆ? ರವಿ ಈ ವಿಷಯಗಳಲ್ಲಿ ಬಹಳ ಮರೆವಿನವ. ಹುಟ್ಟು ಹಬ್ಬ, ನಮ್ಮ ಮದುವೆಯಾದ ದಿನ ಎಲ್ಲವನ್ನೂ ವಾರಗಟ್ಟಲೆ ಮೊದಲೇ ಕೊರೆದು ನೆನಪಿಸಿ ಅಂದು ಸಂಜೆ ನುಗ್ಗುತ್ತಿದ್ದೆವು, ಎಂ. ಜಿ. ರಸ್ತೆ-ಡಿನ್ನರ್-ಐಸ್‌ಕ್ರೀಮ್ ಅಂತ. ಇಲ್ಲ ಅಂದರೆ ಅದೇ ಸಂಜೆ ಆಫೀಸಿನಲ್ಲೇನೋ ಕೆಲಸ ಬಿತ್ತು ಎಂದು ಎಂಟರವರೆಗೂ ಆರಾಮವಾಗಿ ಮರೆತು ಕೂರುವ ಆಸಾಮಿ. ಅದ್ಯಾಕೋ ರವಿಗೆ ಈ ಸಣ್ಣ ಸಣ್ಣ ವಿಷಯಗಳು ಸಣ್ಣ ಸಣ್ಣ ಸುಖಗಳು ಕಣ್ಣಿಗೆ ಕಾಣುತ್ತಲೇ ಇರಲಿಲ್ಲವೇನೋ. ಯಾವುದೋ ಭಯಂಕರ ಸುಖದ ಬೇಟೆಯಲ್ಲಿದ್ದ….!

ನಾಳೆ ರವಿ ಬರಲಿ ಬಿಡಲಿ, ಹುಟ್ಟುಹಬ್ಬ ಆಚರಿಸಬೇಕು. ತಿಂಗಳ ಕೊನೆಯಲ್ಲಿ ಉಳಿದ ಹಣ ಲೆಕ್ಕ ಹಾಕಿ, ಕೂಡಿಸಿ, ಗುಣಿಸಿ, ನೋಡಿದೆ. ಒಟ್ಟು ನೂರು ರೂಪಾಯಿಗಳಷ್ಟು ತೆಗೆದಿಡಬಹುದು. ಪುಟ್ಟಿಗೊಂದು ಹೊಸ ಫ್ರಾಕ್ ತರಬೇಕು. ಪುಟ್ಟಿಯ ಕೈ ಹಿಡಿದು ‘ಕಮರ್ಷಿಯಲ್ ರಸ್ತೆ’ ತುಳಿದೆ. ಒಂದೊಂದೇ ಅಂಗಡಿಗಳು-ಝಗಮಗಿಸುವ ಬೆಳಕು.

‘ಬನ್ನಿ ಮೇಡಂ, ಏನು ಬೇಕು?’ ಮುಗುಳ್ನಗೆಯ ಸ್ವಾಗತದ ಸೇಲ್ಸ್‌ಗರ್ಲ್.
“ಒಂದು ಫ್ರಾಕ್ ಬೇಕು….’ ಒಂದೇನು ರಾಶಿ ರಾಶಿ ಮೊಗೆದು ಬಿತ್ತು. ಒಂದೊಂದೇ ಬೆಲೆಯ ಚೀಟಿಯ ಎತ್ತಿ ನೋಡಿದೆ. ಎದೆ ಧಸಕ್ ಎಂದಿತು. ಈ ಒಂದು ವರ್ಷದಲ್ಲಿ ಏನೆಲ್ಲಾ ಬದಲಾಯಿತೋ ಗೊತ್ತಿಲ್ಲ. ರವಿಯ ಸಂಬಳದಲ್ಲೂ ಇಷ್ಟು ಬಡ್ತಿ ಆಗಿರಲಿಕ್ಕಿಲ್ಲ. ಫ್ರಾಕ್‌ಗಳೆಲ್ಲದರ ಬೆಲೆ ೩೦೦-೩೫೦ರ ಫಲಕ ಹೊತ್ತು ಕುಳಿತಿದ್ದವು ಮೆಲ್ಲನೆ ನಡುಗಿದೆ.
‘ಇದು ಬೇಡ, ತುಂಬಾ ಗ್ರಾಂಡ್ ಆಯ್ತು. ಇದರ ಬಣ್ಣ ಗಾಡಿ….’ ನನ್ನ ಸಬೂಬುಗಳನ್ನು ಇರಿದು ನೋಡುವಂತೆ-
‘ಯಾವ ಬಣ್ಣ ಬೇಕು ಹೇಳಿ ತೋರಿಸ್ತೀವಿ. ಇನ್ನೂ ಕಡಿಮೆ ಬೆಲೆಯದಾದರೆ ಅವೂ ಇವೆ….’
‘ಹಾಗಲ್ಲ….’ ನಾ ತಡವರಿಸುತ್ತಿದ್ದಂತೆಯೇ ಮತ್ತೊಂದು ರಾಶಿ ಕಡಿಮೆ ಬೆಲೆಯ ೨೦೦-೨೫೦ರ ಫ್ರಾಕ್‌ಗಳು! ಮುಜುಗರಗೊಂಡೆ. ಬಲೆಯಲ್ಲಿ ಸಿಕ್ಕಿಕೊಂಡ ಮೃಗದಂತೆ ಚಡಪಡಿಸಿದೆ.
‘ಇಲ್ಲ ಇದು ಬೇಡ…. ನೋಡಿ ಬರ್ತೀನಿ….’ ನಾ ತಟ್ಟನೆ ತಿರುಗಿ ಪುಟ್ಟಿಯ ಕೈ ಹಿಡಿದು ಹೊರಟಂತೆ, ಎತ್ತಿ ಹಾಕಿದ ರಾಶಿಯ ಹ್ಯಾಂಗರ್‍ಗೆ ಸೇರಿಸುತ್ತಿದ್ದ ಆ ಸೇಲ್ಸ್‌ಗರ್ಲ್ ವ್ಯಂಗ್ಯವಾಗಿ ಬದಿಯವಳಿಗೆ-

‘ನೋಡಿ ಬರ್ತಾರಂತೆ….’ ಎಂದು ಮೆಲ್ಲನೆ ಹೇಳಿ ಕಿಸಕ್ಕನೆ ನಕ್ಕದ್ದು, ಎದೆ ಇರಿಯಿತು. ಈ ಅಂಗಡಿಯವರು, ಗಿರಾಕಿಗಳ ಆರ್ಥಿಕ ಸ್ಥಿತಿಯನ್ನು ಮನದಲ್ಲೇ ಓದಿ ಬಿಡುವಷ್ಟು ನಿಪುಣರು. ಓರ್ವ ಸೇಲ್ಸ್‌ಗರ್ಲ್-ಓರ್ವ ಯಕಶ್ಚಿತ್ ಸೇಲ್ಸ್‌ಗರ್ಲ್‌ಳ ಅಪಹಾಸ್ಯಕ್ಕೆ ಗುರಿಯಾಗಿದ್ದೆ. ಇಂದು ಹೆಚ್ಚೆಂದರೆ ಅವಳ ಸಂಬಳ ಎಷ್ಟಿರಬಹುದು…. ಐನೂರು.. ಇಲ್ಲ.. ಸಾವಿರ… ಅಷ್ಟಕ್ಕೇ ಇಷ್ಟು ಗರ್ವವೇ? ಕುದಿದ ಕೋಪದ ಮನಕ್ಕೆ ಎಲ್ಲಿಯದೋ ಉತ್ತರ-

‘ಇರಬಹುದು…. ಆದರೆ ಅದು ಅವಳು ದುಡಿದ ಹಣ… ತಿಂಗಳೂ ತಿಂಗಳೂ ಬಿಟ್ಟು ಹೋದ ಗಂಡ ಒಲ್ಲದ ಮನಸ್ಸಿನಿಂದ ಬಿಸುಡುವ ಹಣವಲ್ಲ…. ತಿಂಗಳು ತಿಂಗಳೂ ಅನಿಶ್ಚಯದ ಕಾಯುವಿಕೆ ಅವಳಿಗಿಲ್ಲ.’

ತಟ್ಟನೆ ಸುಧಾರಿಸಿಕೊಂಡೆ. ಕೋಪ-ಅಸಹಾಯಕತೆಗೆ ಇದು ಕಾಲವಲ್ಲ. ಮಲ್ಲೇಶ್ವರಂನಲ್ಲಿಳಿದು, ಗಾರ್ಡನ್ ಬಟ್ಟೆ ಎರಡೂವರೆ ಮೀಟರ್ ಹರಿಸಿಕೊಂಡೆ. ಒಂದಿಷ್ಟು ಸ್ಯಾಟಿನ್ ರಿಬ್ಬನ್, ಜರಿ, ಲೇಸು, ಅಲಂಕಾರದ ಗುಂಡಿಗಳನ್ನು ಕೊಂಡೆ.

‘ಏನು ಮಾಡ್ತಾ ಇದ್ದೀಯಾ ಅಮ್ಮಾ….’ ಎಂದಪುಟ್ಟಿಗೆ-
“ಆ ಫ್ರಾಕ್ ಯಾವುದೂ ಚೆನ್ನಾಗೇ ಇರಲಿಲ್ಲ ಪುಟ್ಟಿ. ನೋಡ್ತಾ ಇರು ಎಂಥಾ ಸಿಂಡ್ರೆಲ್ಲಾ ಡ್ರೆಸ್ ಹೊಲೀತೀನಿ….’

ಅಪಮಾನಕ್ಕಿಂತ ದೊಡ್ಡ ಚಾಲಕಶಕ್ತಿ ಮತ್ತೊಂದಿರಲಾರದು. ಶೀಲಾ ಕೂಡಾ ತುಂಬಲು ಯತ್ನಿಸಿ ವಿಫಲಳಾದ ಆ ಸಾಹಸ ಪ್ರವೃತ್ತಿ ಮೈಮೇಲೆ ಆವರಿಸಿತ್ತು. ಹೊಲಿಗೆ ಯಂತ್ರದ ಮೇಲೆ ಕುಳಿತ ನನ್ನ ಕಣ್ಣ ಮುಂದೆ ಅಂಗಡಿಯ ಶೋ-ಕೇಸಿನಲ್ಲಿ ತೂಗಾಡಿದ ಆ ೩೦೦ ರೂ. ಗಳ ಫ್ರಾಕ್ ! ಕಡೆಗೂ ಹೊಲಿದು ಮುಗಿಸಿದ್ದೆ. ರಾತ್ರಿಯ ಆಳದಲ್ಲೇ ಲೇಸ್ ಜೋಡಿಸಿ, ಗುಂಡಿ ಅಲಂಕರಿಸಿ ಸಿದ್ಧವಾದಾಗ ನನ್ನ ಛಲವೇ ಗೆದ್ದಿತ್ತು…. ಸಿಂಡ್ರೆಲ್ಲಾ ಫ್ರಾಕ್! ಲೆಕ್ಕಹಾಕಿದೆ. ನೂರಾ ಐದು ರೂಪಾಯಿ ವೆಚ್ಚ ತಗುಲಿತ್ತು. ಒಂದು ನೂರು ರೂಗಳ ಉಡುಪಿಗೆ ಮುನ್ನೂರರ ಬೆಲೆಯೆ? ನನ್ನ ಬೆರಳ ತುದಿಯಲ್ಲಿ ಎಂಥ ಪ್ರತಿಭೆ ಇದೆ. ಅದನ್ನೇಕೆ ಕಟ್ಟಿ ಕೂಡಿ ಹಾಕಿರುವೆ? ನಾ ಬರೀ ಸೀರೆ ಅಂಚು, ಫಾಲ್ಸ್ ಹೊಲಿಯೋ ಹೆಂಗಸಲ್ಲ. ನಾ ಡಿಸೈನ್ ಮಾಡಬಲ್ಲೆ-ಅವರಿವರ ಬಟ್ಟೆ ಬರೆಗಳ, ತೋಳು ರವಿಕೆಗಳ, ಸಲವಾರ್-ಕಮೀಜುಗಳ, ಸಿಂಗರಿಸಬಲ್ಲೆ. ಲವಲವಿಕೆಯ ಲೇಸುಗಳಿಂದ ರಂಗೇರಿಸಬಲ್ಲೆ, ಬಣ್ಣ ಬಣ್ಣದ ಹೊಳಪು ಚಮಕಿಗಳಿಂದ… ನನ್ನ ಬದುಕನ್ನೂ,

ಈ ಒಂದು ಘಟನೆಯಲ್ಲ….
ಮತ್ತೆ ಮತ್ತೆ ಎದುರಾದವು ನನಗೆ ಸವಾಲಾದ ಸಮಸ್ಯೆಗಳು, ಘಟನೆಗಳು.
ಅಂದು ಪುಟ್ಟಿಯನ್ನು ಎಳೆದುಕೊಂಡು ಎಂ. ಜಿ. ರಸ್ತೆಗೆ ಹೋಗಿದ್ದ ಪ್ರಸಂಗ, ‘ಲೇಕ್ ವ್ಯೂ’ ಬಳಿ ಬರುತ್ತಿದ್ದಂತೆ ಪುಟ್ಟಿ ಕುಣಿದಳು-
‘ಅಮ್ಮಾ ಐಸ್‌ಕ್ರೀಂ, ದೊಡ್ಡದು…. ಬ್ಲಾಕ್ ಫಾರೆಸ್ಟ್ ಐಸ್‌ಕ್ರೀಮ್….’
ಅದೆಷ್ಟು ಬಾರಿ ಬಂದಿದ್ದೆ ಇಲ್ಲಿಗೆ…. ರವಿಯೊಡನೆ. ಬ್ಲಾಕ್ ಫಾರೆಸ್ಟ್…. ಹದಿನೆಂಟು ರೂಪಾಯಿ ಬೆಲೆಯದು…. ಮೆಲ್ಲನೆ ಪರ್ಸ್ ತೆರೆದೆ. ಹತ್ತು ರೂಪಾಯಿಯ ಒಂದು ನೋಟು, ಒಂದೂವರೆ ರೂಗಳ ಚಿಲ್ಲರೆ ವಿಷಾದದಿಂದ ನಕ್ಕಿತು.

‘ಈಗ ಬೇಡ ಪುಟ್ಟಿ, ಮತ್ತೆ ಬರೋಣ….’
‘ಉಹುಂ ಈಗಲೇ ಬೇಕು….’ ಕಾಲನ್ನು ನೆಲಕ್ಕೆ ಅಪ್ಪಳಿಸಿ ಹಟದಿಂದ ಹೇಳಿದಳು.
‘ನೆಗಡಿಯಾಗುತ್ತೆ, ಕೆಮ್ಮು ಬರುತ್ತೆ ನೋಡು….’ ನನ್ನ ಒಣ ಗದರಿಕೆಯೆಂದೂ ಅವಳ ತಟ್ಟಲಿಲ್ಲ.
‘ಏನೂ ಬರೋಲ್ಲ, ಈಗಲೇ ಬೇಕು….’ ಆಗಲೇ ತಾರಕ ಸ್ವರ ಹೊರ ಬರುವ ಎಲ್ಲಾ ಸೂಚನೆಗಳೂ ಕಂಡವು.
ಸೋತೆ…. ಪೂರ್ಣ ಸೋತೆ.
‘ಪುಟ್ಟಿ…’ ಅವಳ ಕೆನ್ನೆ ಹಿಡಿದು ಅತ್ಯಂತ ದೀನಳಾಗಿ ಹೇಳಿದೆ-
‘ಪುಟ್ಟಿ, ನನ್ನತ್ರ ಹಣ ಇಲ್ಲ ಕಣೆ, ನೋಡು….’ ಖಾಲಿಯಾಗಿ ಸೊರಗಿ ಬಾಯಿಬಿಟ್ಟ ಪರ್ಸ್ ಹಿಡಿದೆ. ಪುಟ್ಟಿ ತಟ್ಟನೆ ಮೌನವಾದಳು. ಪರ್ಸ್‌ನೆಲ್ಲ ಒಮ್ಮೆ ತಡಕಾಡಿದಳು. ನನ್ನ ನೂರು ಸುಳ್ಳುಗಳಿಗಿಲ್ಲದ ತಾಕತ್ತು ಆ ಒಂದು ಸತ್ಯಕ್ಕಿತ್ತು.
‘ಯಾಕೆ ದುಡ್ಡಿಲ್ಲ….? ಮತ್ತೆ ಅಪ್ಪ ಯಾವಾಗ್ಲೂ ಕೊಡಿಸ್ತಿದ್ರು….’
‘ಅಪ್ಪ ಹತ್ತಿರ ದುಡ್ಡಿದೆ ಪುಟ್ಟಿ…. ಅಪ್ಪ ಕೆಲಸ ಮಾಡ್ತಾರೆ….’
ಅವಳಿಗೆ ಕೊಟ್ಟ ಉತ್ತರ ನನಗೇ ಹೇಳಿಕೊಂಡಂತಿತ್ತು. ಹಾಗಾದರೆ ನಾನೀವರೆಗೆ ಮಾಡಿದ್ದಾವುದೂ ಕೆಲಸವಲ್ಲವೆ?
ಮಾತಿಲ್ಲದೆ ಕಾಲೆಳೆಯುತ್ತಾ ನನ್ನ ಕೈ ಹಿಡಿದು ನಡೆದ ಸಪ್ಪೆ ಮುಖವನ್ನೇ ನೋಡಿದೆ.
‘ಸಾಫ್ಟೀ ಕೊಡಿಸಲಾ?’ ಪಕ್ಕದ ರಸ್ತೆ ಬದಿಯ ಎರಡು ರೂಪಾಯಿಯ ಕೋನ್ ತೆಗೆದುಕೊಟ್ಟೆ. ಸುಮ್ಮನೆ ಎತ್ತಿಕೊಂಡು ತಿನ್ನುತ್ತಾ ಬಂದಳು.
ಹೆಚ್ಚು ಮಾತಿಲ್ಲದೆ ಊಟ ಮುಗಿಯಿತು. ಹಾಸಿಗೆ ಸರಿಪಡಿಸಿ, ಕತ್ತಿನವರೆಗೂ ಬೆಚ್ಚಗೆ ಹೊದ್ದಿಸಿ ಮಲಗಿಸಿದೆ. ತಟ್ಟನೆ ಪುಟ್ಟಿ ಹಾಸಿಗೆಯಿಂದ ಪುಟಿದೆದ್ದು ಕುಳಿತಳು.

‘ಅಮ್ಮ ನನ್ನ ಫೀಸ್‌ಗೆ ಮತ್ತೆ ದುಡ್ಡು?’ ಅವಳ ಎಳೆಯ ಮುಖದಲ್ಲಿ ಗಾಢವಾದ ಆಕಂಕ ಅಭದ್ರತೆ, ಎದೆಯ ತಟ್ಟಿತು. ಮುಖ ಗೆಲುವಾಗಿಸಿ ಪ್ರಯತ್ನಪಟ್ಟು ಹೇಳಿದೆ-
‘ಅಪ್ಪ ದುಡ್ಡು ಕಳಿಸ್ತಾರೆ ಪುಟ್ಟಿ….’

ತಿಂಗಳಿಗೊಮ್ಮೆ ಕಾಣುವ ಅಪ್ಪನ ಯಾವುದೋ ಭರವಸೆಯಲ್ಲಿ ಮತ್ತೆ ಹೊದ್ದು ಮಲಗಿದಳು. ಮಲಗಿದ ಅವಳ ಮುಖವನ್ನೇ ತುಂಬಿದಗಣ್ಣುಗಳಿಂದ ನೋಡಿದೆ. ಉಬ್ಬಿದ ಹಾಲುಗೆನ್ನೆಗಳ ನಡುವೆ ಸಣ್ಣ ಬಾಯಿ ನೋವಿನಿಂದ ನಸು ಬಾಗಿತ್ತು. ನಿದ್ದೆಯಲ್ಲೂ ಅತೃಪ್ತಿ-ಆತಂಕದ ಚಿನ್ಹೆ. ಮುಖದಲ್ಲಿ ದುಗುಡ ತುಂಬಿತ್ತು.

ದೇವರೆ, ನೊಂದವರ ಮೇಲೆ ನೋವುಗಳ ಹೇರಿ, ಬೆಂದವರ ಮೇಲೆ ಬೆಂಕಿಯ ಚೆಲ್ಲುವ ನಿನ್ನ ಈ ಪರಿ ಎಂಥದ್ದು? ನೋವು ನಲಿವುಗಳು ತಕ್ಕಡಿಯಲ್ಲಿ ತೂಗಿ ಸಮನಾಗಿ ಹಂಚಬೇಕಿತ್ತು ನೀನು.

ಒಳಗೆಲ್ಲ ಸಂಕಟ. ನನ್ನ ಮಗಳಿಗೆ, ವೈಭವದ ಐಶ್ವರ್ಯದ ಬದುಕು ಬೇಡ- ಅವಳಿಗೆ ಒಗ್ಗಿದ ಮಧ್ಯಮವರ್ಗದ ಬದುಕನ್ನೂ ನೀಡಲಾರದಾಗಿದ್ದೆ. ಪುಟ್ಟಿ ಕೇಳಿದ ಐಸ್‌ಕ್ರೀಂ ಕೊಡಿಸದ ಸಂಕಟ ಕಾಡಿತ್ತು. ಎಷ್ಟೋ ಬಾರಿ ನೆಗಡಿ, ಕೆಮ್ಮು ಇದ್ದಾಗ ಕೊಡಿಸದೆ ಗದರಿಸಿ ಕರೆತಂದದ್ದುಂಟು. ಆದರೆ ಎಂದೂ ಇಷ್ಟು ಸಂಕಟವಾಗಿರಲಿಲ್ಲ. ಪರ್ಸ್‌ನಲ್ಲಿ ಕೇವಲ ಹತ್ತು ರೂಪಾಯಿಗಳನ್ನು ಹಿಡಿದು ತಿಂಗಳ ಮತ್ತೈದು ದಿನಗಳನ್ನು ಎದುರುಗೊಳ್ಳುವ ಕಲ್ಪನೆಯೇ ಎದೆಯಲ್ಲಿ ತಮಟೆ ಬಾರಿಸಿತ್ತು.

ತಟ್ಟನೆ ಎದ್ದೆ. ಪುಟ್ಟಿಗೆ ಹೊದಿಕೆ ಹೊದ್ದಿಸಿ, ದೀಪ ಆರಿಸಿ ಹಾಲಿಗೆ ಬಂದೆ. ಶೀಲಾ ತಂದಿಟ್ಟ ಫ್ಯಾಷನ್ ಪತ್ರಿಕೆಗಳನ್ನು ಹೊರಗೆಳೆದೆ. ಒಂದೊಂದು ಉಡುಪಿನ ವಿನ್ಯಾಸವನ್ನು ಅಧ್ಯಯಿಸುತ್ತಾ ಬೇಕಾಗುವ ಸಾಮುಗ್ರಿ-ಬಟ್ಟೆಯ ಅಳತೆ ಅಂದಾಜು ಮಾಡಿ ಪಟ್ಟಿ ಮಾಡತೊಡಗಿದೆ. ನಾ ಡಿಸೈನರ್ ಆಗಲೇಬೇಕು…. ಈ ಹರಕು ವರ್ತಮಾನಕ್ಕೆ ತೇಪೆ ಹಚ್ಚುವ ಕೆಲಸ ಬೇಡ. ನಾಳಿನ ಚಿಂತೆ ಇಲ್ಲದಷ್ಟು ಹಣ ಸಂಪಾದಿಸುವ ಉದ್ಯಮಿಯಾಗಬೇಕು. ಪುಟ್ಟಿಗೆ ಅವಳಿಗೊಗ್ಗಿದ ಬದುಕನ್ನು ನೀಡುವಷ್ಟು.

ನನಗೆ ಅಷ್ಟೈಶ್ವರ್ಯಗಳೂ ಬೇಕು. ಕಮರ್ಷಿಯಲ್ ರಸ್ತೆಯಲ್ಲಿ ಮುನ್ನೂರರ ಆ ಫ್ರಾಕು ಕೊಳ್ಳುವೆನೋ ಇಲ್ಲವೋ, ಆ ಕೊಳ್ಳಬಲ್ಲ ಶಕ್ತಿ ನಾನು ಗಳಿಸಬೇಕು. ಹದಿನೆಂಟು ರೂಪಾಯಿಗಳ ಐಸ್‌ಕ್ರೀಂಗೆ ಸುರಿಯುವುದು ಎಷ್ಟು ಸಾಧುವೋ ಚಿಂತೆ ಇಲ್ಲ. ಅದು ಬೇಡ ಎಂದು ನಿರ್ಣಯಿಸಬಲ್ಲ ಆಯ್ಕೆ ನನಗೆ ಬೇಕು.

ಈ ಹಣದಿಂದ ಎಲ್ಲವನ್ನೂ ಕೊಳ್ಳಲಾರೆ ನಿಜ. ಆದರೆ ಹಣದಿಂದ ನಾನು ಬಹಳಷ್ಟು ಕೊಳ್ಳಬಲ್ಲೆ. ಹಣವನ್ನು ಬೇಡವೆನ್ನುವ ಆಯ್ಕೆ ನನಗಿರಲಿ. ಇಲ್ಲದ್ದನ್ನು ಒಲ್ಲೆನೆನ್ನುವ ಹುಸಿ ವೈರಾಗ್ಯ ಬೇಡ. ಮತ್ತೆ ಮುಷ್ಟಿಯಲ್ಲಿ ಮುದುಡಿದ ಹತ್ತು ರೂ. ಹಿಡಿದು ತಿಂಗಳ ಮತ್ತೈದು ದಿನಗಳನ್ನು ಎದುರು ನೋಡುವ ಭಯಂಕರ ನಿರೀಕ್ಷೆ ಬೇಡ.

ನನ್ನ ಹಣ ನನಗೆ ಬಹಳಷ್ಟನ್ನು ಕೊಡಬಲ್ಲದು.

-ಪುಟ್ಟಿಯ ಭವಿಷ್ಯವನ್ನು ಕೊಡಬಲ್ಲದು.
-ನನ್ನ ನಾಳೆಗಳನ್ನು ಕೊಡಬಲ್ಲದು.
-ನನ್ನ ಕಳಕೊಂಡ ಆತ್ಮವಿಶ್ವಾಸವನ್ನು ಕೊಡಬಲ್ಲದು.

ಇದಾವುದನ್ನೂ ರವಿಯ ಹಣ ನನಗೆ ಒದಗಿಸಲಾರದು. ಬಲಾತ್ಕಾರದ ಕರ್ತವ್ಯ ನಿರ್ವಹಣೆಯ ಆ ಹಣ ತಿಂಗಳಿಗೆ ಸಾವಿರವಲ್ಲ, ಹತ್ತು ಸಾವಿರವಾದರೂ ನನ್ನ ಬದುಕಿಗೆ ಮತ್ತೆ ಭದ್ರತೆಯನ್ನು ನೀಡಲಾರದು.
ಮನಸ್ಸಿನ ಮೂಲೆಯಲ್ಲಿದ್ದ ಕಹಿಯನ್ನೆಲ್ಲ ಗುಡಿಸಿ ಹಾಕಿದೆ.
ಪರೀಕ್ಷೆಗಿಡದ ಪ್ರೀತಿಗಳಿಗಿಂತ ಈ ಸೋತ ಸಂಬಂಧಗಳೇ ಮೇಲೇನೋ.
ಏಕಾಯಿತು ಹೀಗೆ? ಏಕೆ? ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿಕೊಳ್ಳುವುದೇಕೆ? ಉಪಯೋಗವಿಲ್ಲದ ಉತ್ತರಗಳ ತಲಾಷೆಯಾದರೂ ಏಕೆ? ಈ ಉತ್ತರಗಳೊಂದೂ ಅವನನ್ನು ನನ್ನಲ್ಲಿಗೆ ಮತ್ತೆ ತರಲಾರವು.

ಅವನನ್ನೇ ಕೇಳಿದರೆ ಕಾರಣಗಳನ್ನು ಪೋಣಿಸಬಲ್ಲ…. ಹತ್ತಲ್ಲ… ನೂರು. ಅದೆಲ್ಲ ಮತ್ತೆ ಯೋಚಿಸಿದ ನಂತರ ಹುಟ್ಟಿದ ಕಾರಣಗಳು…. ನೆಪಗಳು ಬರೀ ನೆಪಗಳು. ಶೀಲಾ ಹೇಳಿದ್ದು ನಿಜವಿರಬಹುದು- ‘ಇದ್ದದ್ದೆಲ್ಲ ಹಳತಾಗುತ್ತದೆ. ಹೆಂಡತಿಯೂ ಸೇರಿದಂತೆ….’ ಎಂದು ನಕ್ಕಿದ್ದಳು. ನಾನೂ ತೆಪ್ಪಗೆ ನಕ್ಕೆ, ಗೆಲುವಾದೆ, ಅವನ ದೌರ್ಬಲ್ಯಕ್ಕೆ ನನ್ನಲ್ಲೇಕೆ ತಪ್ಪುಗಳ ಹುಡುಕಿಕೊಳ್ಳಲಿ! ‘ಹೌದು ಶೀಲಾ, ಹಲತಾದದ್ದೆಲ್ಲ ಆಕರ್ಷಣೆ ಕಳಕೊಳ್ಳುತ್ತದೆ, ಗಂಡನೂ ಸೇರಿದಂತೆ….’ ಎಂದೆ. ‘ಹೌದಾ….?’ ಹುಬ್ಬೇರಿಸಿ ನಕ್ಕಳು. ‘ಹೂಂ, ಹೀಗಿದ್ದೂ, ಮೆಟ್ಟ ಚಪ್ಪಲಿಯಂತೆ, ಹೊದ್ದ ಛಾದರದಂತೆ, ತೊಟ್ಟ ಬಳೆಯಂತೆ, ಬಳಸಿದ್ದೆಲ್ಲ ಹಿತವಾಗಿರುತ್ತದೆ…. ಹಳತಾದಂತೆ. ಬದುಕನ್ನು ಈ ತಿರುವಿನಲ್ಲಿ ತಟ್ಟನೆ ಹೊಸತಾಗಿ ಪ್ರಾರಂಭಿಸೋದು ಎಷ್ಟು ಕಷ್ಟ….’

‘ಇದು ಕಥೆಯಲ್ಲ, ಸಿನೆಮಾ ಅಲ್ಲ. ಮೂರನೆಯ ಹೆಣ್ಣು ಖಳನಾಯಕಿಯಾಗಬೇಕಿಲ್ಲ. ಪತ್ನಿಯ ಪಾತಿವ್ರತ್ಯದ ಅಖಂಡ ಜಯವಾಗಬೇಕಿಲ್ಲ…’ ಶೀಲಾ ಮತ್ತೆ ವಾಸ್ತವಕ್ಕೆ ಎಳೆದಳು.

ನಾ ಮತ್ತೆ ಮತ್ತೆ ಹೇಳಿಕೊಂಡೆ. ಚಡಪಡಿಸಿದ ಮನಸ್ಸಿನ ತಲೆಯ ಮೇಲೆ ಮೊಟ್ಟಿ ಮೊಟ್ಟಿ ಹೇಳಿಕೊಂಡ ಮಾತು…. ಬಿಡು ಅವನನ್ನು, ಅವನ ಬದುಕಿಗೆ.

ನಿನ್ನ ನೀತಿ-ಪ್ರೀತಿ ತಕ್ಕಡಿಯಲ್ಲಿ ತೂಗಿ ಸೋಲುವುದೇಕೆ, ಅದರ ಫಲಿತಾಂಶಗಳೆಂದೂ ಅವನ ತಟ್ಟದ ಮೇಲೆ. ಅವನಿಗೆ ಶಿಕ್ಷೆ ನೀಡುವ ಹಕ್ಕು, ಅಧಿಕಾರವಿಲ್ಲದಾಗ ಅವನ ತಪ್ಪು-ಒಪ್ಪುಗಳನ್ನು, ಪಾಪ-ಪುಣ್ಯಗಳನ್ನು, ನ್ಯಾಯ-ಅನ್ಯಾಯಗಳನ್ನು ತೂಗಿ ತೂಗಿ ತೃಪ್ತಿ ಪಡುವುದೇಕೆ? ಬಿಡು ಅವನನ್ನು ಅವನ ಬದುಕಿಗೆ, ಅದರೊಡನೆಯ ಪಾಪ-ಪುಣ್ಯಗಳ ತಕ್ಕಡಿಗೆ, ಒಪ್ಪು-ತಪ್ಪುಗಳ ಇತ್ಯರ್ಥಕ್ಕೆ, ಪ್ರೀತಿ-ಪ್ರೇಮಗಳ ಹೆಣಗಾಟಕ್ಕೆ. ಮತ್ತೆ ಮತ್ತೆ ಮಂತ್ರದಂತೆ ಹೇಳಿಕೊಂಡೆ. ಅವನತ್ತ ವ್ಯರ್ಥ ಚಿಂತಿಸಿ ಪೋಲಾಗುತ್ತಿದ್ದ ತನ್ನ ಮನಸ್ಸನ್ನು ಎಳೆದೆಳೆದು ಗೂಟಕ್ಕೆ ಕಟ್ಟಿದೆ-ವರ್ತಮಾನದ ಗೂಟಕ್ಕೆ ನನ್ನ ಶಕ್ತಿ ಚಿಂತನಾ ಸಾಮರ್ಥ್ಯವನ್ನೆಲ್ಲ ಆಕ್ರೋಶದ ಕಡಾಯಿಯಲ್ಲಿ ಹಾಕಿ ಕುದಿಸಿ ಕುದಿಸಿ ಕರಕಲಾಗಿಸುವುದರಲ್ಲೇನು ಲಾಭ?

ಕ್ಲೀಷೆಯಾಗುವಷ್ಟು ಬಾರಿ ಶೀಲಾ ಹೇಳಿ ಹೋದಳು-

‘ಬದುಕು ಎಲ್ಲವನ್ನೂ ಕಲಿಸುತ್ತದೆ, ಬದುಕುವುದನ್ನೂ….’

ಕಲಿಕೆ ಕಷ್ಟವಿರಲಿಲ್ಲ, ನಾನಂದುಕೊಂಡಷ್ಟು. ಮೊದಲ ಹೆಜ್ಜೆಯಷ್ಟೇ ಭಾರವಿತ್ತು. ಎತ್ತಿ ಇಟ್ಟೊಡನೆ ನಡಿಗೆ ಸುಲಭವಾಯ್ತು. ಆರಂಭವಷ್ಟೇ ಪ್ರಾಯಾಸದ್ದು, ಹಾದಿ ಹಗುರವಿತ್ತು. ಹೊರಗಿನ ಪ್ರಪಂಚ ನಾನು ಕಲ್ಪಿಸಿದಷ್ಟು ಭಯಂಕರವಿರಲಿಲ್ಲ. ನನ್ನ ನೋಡಿ ನಕ್ಕು ಮುಕ್ಕಳಿಸಲು ಜನಕ್ಕೆ ಸಮಯವೆಲ್ಲಿ? ತಮ್ಮ ಬದುಕಿನ ಓಟದಲ್ಲಿ ಓಡುತ್ತಿರುವ ಜನ…. ಪುರುಸೊತ್ತಿಲ್ಲದ ಜನ.

ಮುಗುಳ್ನಗೆ, ಮೊದಲ ಬಾರಿಗೆ ಸ್ವಾತಂತ್ರ್ಯದ ಅನುಭವವಾಯಿತು. ಏಕಾಂತ ನಾನು ಕಲ್ಪಿಸಿದಷ್ಟು ಅಸಹನೀಯವಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಸಹ್ಯವಾಗುತ್ತಾ ಆಪ್ತವಾಗತೊಡಗಿತು. ‘ನನಗೆ ಸ್ವತಂತ್ರ ಕೊಡು’ ಅಂದಿದ್ದ ಅವ, ಅವನ ನೆನಪು-ಅಪರಾಧಿ ಪ್ರಜ್ಞೆಯಿಂದ ಸ್ವತಂತ್ರನಾದನೋ ಇಲ್ಲವೋ ಗೊತ್ತಿಲ್ಲ. ಅವನಿಗೆ ಸ್ವಾತಂತ್ರ್ಯ ನೀಡುತ್ತಲೇ ನಾನು ಸ್ವತಂತ್ರಳಾದೆ. ನನ್ನೊಳಗಿನ-ನಾನೇ ಗುರುತಿಸಿರದ ವ್ಯಕ್ತಿಯೊಂದು ನುಸುಳಿ ಹೊರಬಂದಿತ್ತು.

ನನ್ನ ಬದುಕಿನಲ್ಲಿ ಮತ್ತೆ ಸ್ನೇಹ-ಸಂಬಂಧಗಳು ಬರಬಹುದು, ಆದರೆ ಅವಲಂಬನೆಗಳಲ್ಲ.

ನನ್ನ ಬದುಕಿನಲ್ಲಿ ಮತ್ತೆ ಪುರುಷರು ಹಾಯಬಹುದು, ಆದರೆ ಯಜಮಾನರಲ್ಲ.

ನಾನಿಂದು ಯಾರಿಗೂ ಉತ್ತರಿಸಬೇಕಿಲ್ಲ. ಎಲ್ಲಿ ಹೋದೆ, ಯಾವಾಗ ಬಂದೆ. ಏನು ಮಾಡಿದೆ, ಅಡಿಗೆ ಏಕಾಗಿಲ್ಲ, ಕಾಫಿ ಬಿಸಿ ಇಲ್ಲ-ಯಾವುದಕ್ಕೂ ಉತ್ತರಿಸಬೇಕಿಲ್ಲ. ಬದುಕು ಒಂಟಿತನವನ್ನೇ ನನ್ನ ಜೋಳಿಗೆಗೆ ಹಾಕಿದ್ದರೆ, ಈ ಏಕಾಂತದಲ್ಲೇ ಅಡಗಿರುವ ಲಾಭವನ್ನು ಅಗೆಯ ಹೋದೆ, ನಿಜವಾದ ಉದ್ಯಮಿಯಂತೆ! ಸುಳ್ಳು ಏಕೆ…. ನಿಜ, ರಾತ್ರಿಗಳು ತಟ್ಟನೆ ತಣ್ಣಗಾಗುತ್ತವೆ…. ಗ್ರೀಷ್ಮದ ರಾತ್ರಿಗಳೂ ಕೂಡಾ. ನಮ್ಮದೊಂದು ಅದ್ಭುತ ಲೈಂಗಿಕ ಬದುಕಿತ್ತು ಎಂದಲ್ಲ. ಹೀಗಿದ್ದೂ ರವಿ ಹುದುಗಿಕೊಂಡಿರುವ ಎದೆಯಲ್ಲಿ ಮುಳ್ಳಿನ ಹಾಗೆ, ನೆನಪಾದಾಗಲೆಲ್ಲ ಅಲುಗಿ ನೋಯುವ ಹಾಗೆ, ಇವನ ನೆನಪು, ಅದುಮಿ ಇಟ್ಟಷ್ಟೂ ಪುಟಿವ ಚಂಡು. ನನ್ನ ಜಾಗೃತ ಅವಸ್ಥೆಗೆ ಮರೆಯಾಗಿ, ಇಲ್ಲ ಮರೆತಂತೆ ನಟಿಸುವಾಗಲೇ ರಾತ್ರಿ ಕನಸಿನಲ್ಲಿ ತಟ್ಟನೆ ಮೈ-ಮನಗಳನ್ನು ಮುಟ್ಟಿ ಬೆಚ್ಚಿಸುವುದುಂಟು. ನನ್ನ ಚಿಂತನೆಯ ಎಷ್ಟು ಭಾಗವನ್ನು ಕೆಲವು ಕಾಲದ ಮಟ್ಟಿಗಾದರೂ ಅವ ಆವರಿಸಿದ್ದು ತಿಳಿದರೆ, ಅವನಿಗಿರಲಿ ನನಗೇ ಅಚ್ಚರಿಯಾಗುತ್ತದೆ.

ಈಗ ನಾ ಹೋರಾಡುವುದನ್ನು ಬಿಟ್ಟೆ, ನೆನಪುಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದನ್ನು ಬಿಟ್ಟೆ. ಬನ್ನಿ ನೆನಪುಗಳೇ ಅದೇನು ಮಾಡುತ್ತೀರೋ ಎಂದು ಎದೆ ಕೊಟ್ಟು ನಿಂತೆ. ಭೂತವನ್ನು ಅಳಿಸುವ ಶ್ರಮವೇಕೆ? ಭೂತವನ್ನು ಭೂತವಾಗಿ ಸ್ವೀಕರಿಸಿಬಿಟ್ಟರಾಯಿತು, ಭವಿಷ್ಯವಾಗಲು ಬಿಡದೆ.

ಮತ್ತೆ ಪ್ರಾರಂಭಿಸಿದೆ, ಅರೆಮನಸ್ಸಿನ ಯತ್ನವಲ್ಲ, ಪೂರ್ಣಪ್ರಮಾಣದ ಪ್ರಯತ್ನ.

ಶೀಲಾ ನಾಲ್ಕು ಜನ ಪರಿಚಯ ಇದ್ದವಳು, ಹೊರಗೆ ತಿರುಗಾಡುವವಳು. ನಾನು ರಾತ್ರಿಯೆಲ್ಲ ಕುಳಿತು ಡಿಸೈನ್ ಮಾಡಿದ ಸಲವಾರ್-ಕಮೀಜಗಳನ್ನು ತಾನೇ ಹಾಕಿಕೊಂಡು ಜಾಹೀರಾತು ಮಾಡಿದಳು. ಬಹಳ ಪರಿಶ್ರಮದಿಂದ ಐದಾರು ಸೆಟ್ ತಯಾರಿಸಿದ್ದೆ. ಭಾರವಾದ ತಾಳಿ ಸರ ಮಾರಿ ಬಂದ ಹಣದಲ್ಲಿ ಬಹಳಷ್ಟನ್ನು ನನ್ನ ಗಾರ್ಮೆಂಟ್ ಉದ್ಯಮಕ್ಕೆ ತೊಡಗಿಸಿದೆ. ಶೀಲಾ ನನ್ನ ಹೊಸ ಉತ್ಸಾಹ ಕಂಡಳು. ನಾಲ್ಕೇ ವಾರದಲ್ಲಿ ಒಂದಷ್ಟು ಆರ್ಡರ್‍ಸ್ ತಂದಳು. ಮನೆಯಲ್ಲೇ ಸಿದ್ಧ ಉಡುಪುಗಳನ್ನು ತೂಗುಹಾಕಲು ಸಮಯ ಹಿಡಿಯಲಿಲ್ಲ. ಹತ್ತು-ಹದಿನೈದು ಉಡುಪುಗಳು ಸದಾ ಸಿದ್ಧವಿದ್ದವು. ಮೆಲ್ಲಮೆಲ್ಲನೆ ನನ್ನ ಮುದುಡಿದ ನೈಟಿಯ ಕವಚದಿಂದ ಪೂರ್ಣ ಪ್ರಮಾಣದ ಮಹಿಳಾ ಉದ್ಯಮಿ ಹೊರಬಂದಳು-ಸುತ್ತಮುತ್ತಲ ಕಾಲೇಜು ಹುಡುಗಿಯರು, ಅವರ ಸ್ನೇಹಿತರು…. ಆರು ತಿಂಗಳು, ಕೇವಲ ಆರು ತಿಂಗಳು…. ನನ್ನ ಆದಾಯ ಎರಡು ಸಾವಿರ ಮುಟ್ಟಿತ್ತು!

ನನ್ನ ನೋಡುತ್ತಿದ್ದ ಪುಟ್ಟಿಯ ಕಣ್ಣುಗಳಲ್ಲಿ ಹೊಳಪು-ಹೆಮ್ಮೆ ಕಂಡೆ. ಮೆಲ್ಲಮೆಲ್ಲನೆ ಹಣವಿಲ್ಲದ ಆತಂಕ ತಗ್ಗಿತು. ಅವಳ ಊಟ-ತಿಂಡಿ-ಉಡುಪುಗಳಲ್ಲಿ ಕಡಿತವಿರಲಿಲ್ಲ. ಈ ಮಧ್ಯೆ ಶೀಲಾ ತನ್ನ ಬಳಿಗೆ ಯಾವುದೋ ದೂರದರ್ಶನದ ಸ್ಕ್ರಿಪ್ಟ್‌ಗೆಂದು ವೈಧ್ಯಕೀಯ ಮಾಹಿತಿ ಹುಡುಕಿ ಬಂದ ನಿರ್ದೇಶಕನಿಗೆ ನನ್ನ ಹೆಸರು ಸೂಚಿಸಿದ್ದಳು. ‘ವಸ್ತ್ರ ವಿನ್ಯಾಸ’- ನನ್ನ ಸಾಧಾರಣ ಹೊಲಿಗೆಗೆ ಹೊಸ ಹೊಸ ಹೆಸರುಗಳು, ಮಾಧ್ಯಮಗಳು, ಆಯಾಮಗಳು, ‘ಕ್ರೆಡಿಟ್ ಲೈನ್’ ಇರಬೇಕೆಂಬ ಒಪ್ಪಂದದ ಮೇಲೆ ಒಪ್ಪಿದೆ. ಮೊದಲ ಪ್ರಯತ್ನ. ಹಗಲಿರುಳ ನಿದ್ದೆ ತೊರೆದು ಹೊಚ್ಚ ಹೊಸ ವಿನ್ಯಾಸಗಳನ್ನು ಹುಡುಕಿದೆ. ದೇಶೀ, ವಿದೇಶೀ, ಪತ್ರಿಕೆಗಳನ್ನೆಲ್ಲಾ ತಡಕಾಡಿ ಹೊಂದಿಸಿದೆ. ಬದುಕು ಬದಲಾಯಿತು, ಪುಟ್ಟ ತೆರೆಯ ಮೇಲೆ ಪ್ರಸಾರವಾದ ಆ ಒಂದು ಸಾಲಿನಿಂದ, ವಸ್ತ್ರ ವಿನ್ಯಾಸ- ‘ಮಧು ಬುಟೀಕ್, ಮಲ್ಲೇಶ್ವರಂ.’

ಮತ್ತೆಂದೂ ಹಿಂದೆ ನೋಡುವ, ನಾ ಹೊರಟ ಹಾದಿಯಲ್ಲಿ ತಡವರಿಸುವ ಅಪಾಯವಿಲ್ಲದೆ ನಡೆದೆ. ಭವಿಷ್ಯದ ಗಾಬರಿ ಮರೆಯಾಯಿತು. ಬ್ಯಾಂಕ್‌ನಲ್ಲಿ ಸ್ವಲ್ಪ ಸ್ವಲ್ಪವಾಗಿ ಕೂಡಿದ ಹಣ ಎದೆಯ ಆತಂಕ ಸಂಪೂರ್ಣ ತಗ್ಗಿಸಿತು. ಒಂದು ದೊಡ್ಡ ಪ್ರಶ್ನೆಯಾಗಿದ್ದ ‘ನಾಳೆ’ ನೂರು ಅರ್ಥಗಳೊಡನೆ, ನೂರು ಸಾಧ್ಯತೆಗಳೊಡನೆ ಕೈ ನೀಡಿತು.

‘ಅಮ್ಮ ನಾ ಫಸ್ಟ್ ಬಂದಿದ್ದೀನಿ….’ ರಿಪೋರ್ಟ್ ಕಾರ್ಡ್ ಹಿಡಿದು ಕುಣಿಯುತ್ತಾ ಬಂದ ಪುಟ್ಟಿಯ ಎತ್ತಿ ಮುತ್ತಿಟ್ಟೆ.
‘ಅಮ್ಮ ನಂಗೇನ್ ಕೊಡಿಸ್ತೀಯಾ?’ ಪುಟ್ಟಿ ಕೇಳಿದಳು.
‘ನಡಿ ಸೆಲಿಬ್ರೇಟ್ ಮಾಡೋಣ….’ ಬಟ್ಟೆ ಬದಲಿಸುತ್ತಾ ಹೇಳಿದೆ.
‘ನಾವಿಬ್ರೆ?’
‘ನಾವಿಬ್ರೂ….’ ಒತ್ತಿ ಹೇಳಿದೆ.
ಅದೇ ‘ಲೇಕ್ ವ್ಯೂ.’ ಏನೂ ಬದಲಾಗಿರಲಿಲ್ಲ. ಐಸ್‌ಕ್ರೀಂ ಬೆಲೆಯ ಹೊರತು.
‘ಅಮ್ಮ ಐಸ್‌ಕ್ರೀಂ…. ದೊಡ್ಡದು….’ ಕುರ್ಚಿಯಿಂದ ಕಾಲು ಕೆಳಗೆ ಇಳಿಬಿಟ್ಟು, ಜೋಡಿ ಜುಟ್ಟುಗಳನ್ನು ಕುಣಿಸುತ್ತಾ ಹೇಳಿದಳು. ಗಲ್ಲಕ್ಕೆ ಕೈಯೂರಿ ಖುಷಿಯಿಂದ ಮೇಜಿನ ಮೇಲೆ ತಾಳ ಕುಟ್ಟುತ್ತಾ ಕೂತೆ. ಬೇರರ್ ಬಂದ, ಮೆನು ಕಾರ್ಡ್ ಕೈಗಿಟ್ಟ.
‘ಐಸ್‌ಕ್ರೀಂ-ಮೆರ್ರಿ ವಿಡೋ ಸ್ಪೆಷಲ್…. ಎರಡು’
‘ದೊಡ್ಡದು….’ ಪುಟ್ಟಿ ಅವಳ ಪರಿಯಲ್ಲಿ ಹೇಳಿದಳು.

ಅಗಲ ಪಿಂಗಾಣಿ ತಟ್ಟೆಯಲ್ಲಿ ಹರಡಿಕೊಂಡ ಮೂರು-ನಾಲ್ಕು ಸವಿಯ ಐಸ್‌ಕ್ರೀಂ ಮೇಲೆ ಕಂದುಬಣ್ಣದ ಕೇಕಿನ ನಾಲ್ಕು ತುಂಡುಗಳ ಅಲಂಕೃತ ಮುಕುಟ. ಯಾರು ಇದಕ್ಕೆ ಈ ಹೆಸರಿಟ್ಟವರು…. ‘ಮೆರ್ರಿ ವಿಡೋ ಸ್ಪೆಷಲ್’…. ಮೆರ್ರಿ….! ಜೋರಾಗಿ ನಗತೊಡಗಿದೆ.

‘ತುಂಬಾ ಚೆನ್ನಾಗಿ ಇದೆ ಅಲ್ಲ ಅಮ್ಮಾ ?’ ಪುಟ್ಟಿ ಸವಿ ಸವಿದು ತಿಂದಳು.
‘ಹೂಂ….’ ಎಂದೆ. ಸಂತೃಪ್ತಿಯ ಅವಳ ಮುಖವನ್ನೇ ನೋಡುತ್ತ .
ಶೀಲಾ ಯಾವಾಗಲೂ ಗುಣಿಗುಣಿಸುತ್ತಿದ್ದ ‘ಸಮತಾ’ದ ಹಾಡು ಕಿವಿಯಲ್ಲಿ ಮೊರೆ ಇಟ್ಟಿತು –
‘ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವಾ…. ಬೆಳಕಿಗಿಂದು ಹೊರಗೆ ಬಾ ಕಂಡೀತು ಜೀವನ….’
ಬಿಲ್ ಕೊಟ್ಟು ಹೊರಗೆ ಬಂದೆ. ಆಕಾಶದಲ್ಲಿ ಅಲ್ಲಿಷ್ಟು ಕಪ್ಪು ಮೋಡ ಆವರಿಸಿತ್ತು.
‘ಮಳೆ ಬರುತ್ತೆ ಬೇಗ ಹೋಗೋಣ ಬಾ ಪುಟ್ಟಿ….’ ಕೈ ಹಿಡಿದು ಹೊರಟೆ, ತಟ್ಟನೆ ಎದುರಿಗೆ ರವಿ ನಿಂತಿದ್ದ!
‘ಅಪ್ಪಾ….’ ಜೋರಾಗಿ ಓಡಿ ಪುಟ್ಟಿ ಅಪ್ಪಿದಳು. ರವಿ ಎರಡೂ ಕೆನ್ನೆಗೆ ಮುತ್ತಿಟ್ಟ,
‘ಪುಟ್ಟಿ ಐಸ್‌ಕ್ರೀಂ ತಿಂತಿಯಾ ?’ ಮುದ್ದಿನಿಂದ ಕೇಳಿದ.
‘ನಾವಾಗ್ಲೇ ತಿಂದ್ವಿ….’

ಪುಟ್ಟಿಯನ್ನು ಮೆಲ್ಲನೆ ಕೆಳಗಿಳಿಸಿ, ರವಿ ನನ್ನನ್ನೇ ನೋಡಿದ. ಮೂರು ಹೊತ್ತು ನೈಟಿಯಲ್ಲಿ ಕಂಡಿದ್ದ ಪತ್ನಿಯ ಗುರುತು ಸಿಕ್ಕಲಿಲ್ಲವೇನೋ, ರವಿ ಬಿಟ್ಟುಹೋದ ಹೆಣ್ಣು ಅಲ್ಲಿರಲಿಲ್ಲ. ಅವನಲ್ಲಿ ಒಂದಿಷ್ಟು ಅಳುಕಿತ್ತು, ಅಪರಾಧೀ ಪ್ರಜ್ಞೆ ತುಡಿದಿರಬೇಕು.

‘ಮಧೂ ಹಣದ ತೊಂದರೆ ಏನಾದ್ರೂ ಇದೆಯಾ? ಸಾವಿರದೈನೂರರಲ್ಲಿ ಸಂಭಾಳಿಸೋದು ಕಷ್ಟ ಗೊತ್ತು. ಆದರೆ ನನ್ನೊಬ್ಬನ ಸಂಬಳದಲ್ಲಿ ಎರಡು ಸಂಸಾರ ನಡೀಬೇಕು. ನನಗೀಬಾರಿ ಪೇ-ರಿವೈಸ್ ಆದ್ರೆ ಸ್ವಲ್ಪ ಹೆಚ್ಚು ಕೊಡಬಲ್ಲೆ….’ ತಡವರಿಸಿದ. ನಾ ಮೆಲ್ಲನೆ ನಕ್ಕೆ.

‘ಡೋಂಟ್ ವರಿ ರವಿ. ನೀ ನನಗಾಗಿ ಕಳಿಸೋ ಅವಶ್ಯಕತೆ ಇಲ್ಲ. ಆದರೆ ಹಾಂ…. ಈ ಪುಟ್ಟಿ ನನ್ನ ಮಗಳಂತೆ ನಿನ್ನ ಮಗಳೂ ಹೌದು. ಅವಳಿಗೆ ಅಪ್ಪನ ಹಕ್ಕು ಖಂಡಿತಾ ಇದೆ. ನನಗೆ ಕಳಿಸ್ತಾ ಇದ್ದ ಹಣಾನ ಬೇಕಾದ್ರೆ ಅವಳ ಹೆಸರಲ್ಲಿ ಬ್ಯಾಂಕಿಗೆ ಹಾಕು….’

‘ಆದ್ರೆ ನೀ ಹೇಗೆ….’ ಅವನ ಮಾತನ್ನು ಮಧ್ಯೆ ತುಂಡರಿಸಿ ಹೇಳಿದೆ-
‘ರವಿ ಅವಲಂಬಿತರು ಎಂದಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲಲೇಬೇಕು…. ಪುಟ್ಟಿ ಹೊರಡೋಣ, ಅಪ್ಪಂಗೆ ಟಾಟಾ ಮಾಡು….’
ಆಟೋದಲ್ಲಿ ಕುಳಿತು, ಕಲ್ಲಿನಂತೆ ನಿಂತೇ ಇದ್ದ ರವಿಗೆ ಕೈ ಬೀಸಿದೆ. ತಲೆ ಹೊರಹಾಕಿ ನೋಡಿದೆ-
ಆಗಸದಲ್ಲಿ ಮೂಡಿದ್ದ ಕಪ್ಪು ಮೋಡಕ್ಕೊಂದು ಬೆಳ್ಳಿ ಅಂಚಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.