ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಪ್ರೇಮ ಜಪಮಣಿ ಕದ್ದು ಹಾಡು ಕೊಟ್ಟಿತು
ಜತೆಗೆ ಕವಿತೆಯನ್ನು ಕೂಡಾ
‘ಶಕ್ತಿ ಇಲ್ಲ’ ಎಂದು ಚೀರಿದೆ
ವ್ಯಾಕುಲನಾಗಿ ಗೋಗರೆದೆ
ಹೃದಯಕ್ಕೆ ನನ್ನ ಮೊರೆ ಕೇಳಲೇ ಇಲ್ಲ.
ಪ್ರೇಮದಿಂದಾಗಿ ನಾನು ಹಾಡುಗಾರನಾದೆ
ಸುತ್ತ ಚಪ್ಪಾಳೆಯ ಹೊಳೆ
ಪ್ರೇಮ ಕಬಳಿಸಿತು ಕೀರ್ತಿ
ನಾಚಿಕೆ ಮಾನ ಮರ್ಯಾದೆ
ಎಲ್ಲ ಹಾಗೇ ಕಿತ್ತೊಗೆಯಿತು
ಒಂದು ಕಾಲಕ್ಕೆ ನಾನು ಸಜ್ಜನ, ಶೀಲವಂತ
ಭದ್ರ ಬುಡವಿದ್ದ ಮಹಾಪರ್ವತ
ನಿನ್ನ ಬಿರುಗಾಳಿ ಎದುರು ತರಗೆಲೆ
ಹಾಗೆ ಹಾರದ ಪರ್ವತ ಎಲ್ಲಿದೆ, ಹೇಳು?
ನಾನು ಬೆಟ್ಟವೆ? ನಿನ್ನ ಪ್ರತಿಧ್ವನಿ ಹಿಡಿದೆ
ನಾನು ಜೊಳ್ಳೆ? ನಿನ್ನ ಬೆಂಕಿಯಲ್ಲಿ ಉರಿದು ಹೊಗೆಯಾದೆ
ನಿನ್ನ ಇರುವು ಕಂಡು, ನಾಚಿಕೆ ಉಕ್ಕಿ ನನ್ನಿರವು ಬಿಟ್ಟೆ
ಈ ಅಸ್ತಿತ್ವ ಹೀನ ಸ್ಥಿತಿಯಿಂದ ಲೋಕಾತ್ಮ ಹುಟ್ಟಿತು
ಮೇಲೆ ನೀಲಾಕಾಶದ ಸ್ವರ್ಗ, ಭೂಮಿ-ಕೆಳಗೆ ಕೂತ ಕುರುಡ ಭಿಕ್ಷಕ
ದೇಹದೊಳಗೆ ಅಡಗಿಕೂತ ಆತ್ಮ, ಭವಿಗಳ ನಡುವಿನ ಮಹಾಭಕ್ತನ ಹಾಗೆ
ನಿನ್ನ ನಾಮಸ್ಮರಣೆ ಎನ್ನುವುದು ಕಡಲ ಹಾಗೆ
ನನ್ನ ನಾಲಗೆಯ ಹಡಗು, ಆತ್ಮಕ್ಕೆ ಕಡಲಯಾನ
ನನಗೆ ಕಡಲ ವಾತ್ಸಲ್ಯಮಯ ಸ್ವರ್ಗದ ದಿವ್ಯದೃಷ್ಟಿ
ನಿದ್ರೆಯ ಜೊಂಪಿಂದ ಕಣ್ಣು ತೂಗಿತೆ? ಅದಕ್ಕೇಕೆ ದುಃಖ?
*****
