ಸಾವಿನತ್ತ ಒಂದು ಹೆಜ್ಜೆ

ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ ಸಾವಿಗೆ ಯಾರೂ ಕಾರಣರಲ್ಲ. ತನ್ನ ಆತ್ಮೀಯರಾರಿಗೂ ಯಾವುದೇ ವಿಧದ ಹಿಂದೆಯಾಗಬಾರದು’ ಬರೆದಿಟ್ಟ. ಅಮ್ಮನಿಗೊಂದು ಭಾವುಕವಾಗಿ ಪತ್ರ ಪ್ರಾರಂಭಿಸಿದ. ‘ಹೆತ್ತ ಋಣಕ್ಕೆ ತಾ ನೀಡುತ್ತಿರುವುದು ಸಾವಿನ ನೋವೊಂದೇ_’ ಎಂದು ಮುಗಿಸಿದ. ಇನ್ನು ಸುಧಾಗೊಂದು ಪತ್ರ ಬರೆಯಬೇಕು. ಏನೂ ಹೇಳದೆ, ಹೇಳಲಾರದೆ ಹೋಗುವುದಾದರೂ ಹೇಗೆ? ಏನೆಂದು ಬರೆಯುವುದು? ಬಹಳ ಹೊತ್ತು ಚಿಂತಿಸಿದ. “ಸುಧಾ-ನಿನ್ನ ಜಗತ್ತಿನಲ್ಲಿ ನನಗೆ ಅಣುವಿನಷ್ಟೂ ಸ್ಥಾನವಿಲ್ಲದಿರಬಹುದು, ನನ್ನ ಜಗತ್ತಿನ ತುಂಬ ನೀನೇ ತುಂಬಿರುವೆ” ಆರಂಭಿಸಿ ನಿಲ್ಲಿಸಿದ. ಪದಗಳನ್ನು ಆಯ್ದು ತೂಗಿ ಜೋಡಿಸಿದ. “ಇದು ಆತ್ಮಹತ್ಯೆಯಲ್ಲ ಸುಧಾ. ಆತ್ಮಾರ್ಪಣೆ! ನಿನ್ನ ಪ್ರೀತಿಯ ಬಲಿಪೀಠಕ್ಕೆ ನರಬಲಿಯೇ ಬೇಕಿರಬಹುದು_” ಕಣ್ಣೇಕೋ ಹನಿಗೂಡಿತು. ಮತ್ತೂ ಬರೆದ_ “ನಿನಗೆ ಪ್ರೀತಿ ಆಟಿಗೆಯಂತೆ, ಆಡಿ ಎಸೆಯಬಲ್ಲೆ. ನನಗೆ ಪ್ರೀತಿ, ಪವಿತ್ರವಾದದ್ದು. ಅದಕ್ಕಾಗಿ ಪ್ರಾಣತ್ಯಾಗಕ್ಕೂ ನಾ ಸಿದ್ಧ!” ತಾ ಸಾಯುತ್ತಿರುವುದು ಸುಧಾಗಾಗಿ ಅಲ್ಲ. ಪ್ರೀತಿಯ ಪವಿತ್ರತೆಗಾಗಿ. ಪ್ರೇಮದ ಸಿದ್ಧಾಂತಗಳಿಗಾಗಿ ಹುತಾತ್ಮನಾಗುತ್ತಿದ್ದೇನೆ. ಎಂದು ಸಮರ್ಥಿಸಿಕೊಂಡ. ಕಡೆಗೆ ಸೇರಿಸಿದ_“ಸುಧಾ, ನೀ ಸುಖವಾಗಿರಬೇಕು. ನಿನ್ನ ಸುಖದಲ್ಲಿ ನನ್ನ ಆತ್ಮ ಶಾಂತಿ ಹುಡುಕುತ್ತದೆ. ನಮ್ಮ ಹತ್ತು ವರ್ಷಗಳ ಸಾಂಗತ್ಯ ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾಗಿ ಜ್ಞಾಪಿಸಿದರೆ, ನಾ ಧನ್ಯ” ಪದಗಳು ತೃಪ್ತಿಕರವಾಗಿ ಕಂಡವು. ಇಷ್ಟು ಸಾಕು ಎಂದು ಮುಗಿಸಿದ. ನೀಟಾಗಿ ಮಡಚಿ ಕವರ್‍ನಲ್ಲಿ ಹಾಕಿ ಮೇಲೆ ಸುಧಾಳ ಹೆಸರು ಬರೆದ. ನಾಡದ್ದು ಸುಧಾಳ ಹುಟ್ಟು ಹಬ್ಬ. ಆ ದಿನ ಇದನ್ನು ಉಡುಗೊರೆಯಾಗಿ ಕೊಡಬೇಕು!

ಸುಧಾ ರವಿಯ ಸೋದರತ್ತೆಯ ಮಗಳು. ಸುಧಾ ತೊಟ್ಟಿಲಲ್ಲಿ ಬೆಟ್ಟು ಚೀಪುವಾಗಲೇ ‘ನಿನ್ನ ಹೆಂಡತಿ ಕಣೋ’ ಎಂದು ಹಿರಿಯರೆಲ್ಲ ಹೇಳುವಾಗ ಎಳೆಯ ವಯಸ್ಸಿನಲ್ಲಿ ಎಂಥದೋ ಪ್ರೀತಿಯ ಪುಳಕ. ಹದಿಹರೆಯದ ಹೊಸಿಲಲ್ಲಿ ಅವನ ಪ್ರೀತಿಯ ಮಹಾಪೂರಕ್ಕೆ ಸುಧಾ ದಿಕ್ಕಾದಳು. ಹಿರಿಯರ ಆಶಯ-ಒಪ್ಪಿಗೆ ಎಲ್ಲ ಇದ್ದ ಈ ಪ್ರೇಮ ಕತೆಗೆ ಸುಖಾಂತವೇ ಕಾದಿತ್ತು. ಆದರೆ ಆದದ್ದೇ ಬೇರೆ-ಹದಿನಾರರ ವಯಸ್ಸಿನಲ್ಲಿ ತನ್ನೊಡನೆ ಮೂರೂ ಹೊತ್ತೂ ಸುತ್ತಿದ ಹುಡುಗಿ, ಎಂ. ಎಸ್ಸಿ, ಪಾಸಾಗುವ ಹೊತ್ತಿಗೆ ಬಹಳಷ್ಟು ಬದಲಾದಳು, ಬೆಳೆದಳು. ‘ನನ್ನ ಮನಸ್ಸಿಗೆ ರೆಕ್ಕೆ ಮೂಡುವ ಮೊದಲೆ, ದಿಕ್ಕು ತೋರಿಟ್ಟ ಹಾಗಿತ್ತು ರವಿ. ಈಗ ನನ್ನ ಭಾವನೆಗಳು, ಅಭಿರುಚಿಗಳು ಬಹಳಷ್ಟು ಬದಲಾಗಿವೆ. ಹದಿನಾರರ ಮೋಹದಲ್ಲಿ ನೀಡಿದ ಬಾಲಿಷ ಭಾಷೆಗಳಿಗೆ, ಪ್ರಮಾಣಗಳಿಗೆ ಉರುಳು ಹಾಕಿಕೊಳ್ಳಲು ಸಿದ್ಧವಿಲ್ಲ. ನಾ ನನ್ನ ಸಹಪಾಠೀನ ಪ್ರೀತಿಸ್ತಾ ಇದ್ದೇನೆ’ ಎಂದು ತಣ್ಣಗೆ ಹೇಳಿಬಿಟ್ಟಳು.

ಮೊಟ್ಟಮೊದಲ ಬಾರಿಗೆ ಅತೀವ ಸಂಕಟದ ಅನುಭವ. ಹುಟ್ಟಿದಾರಾಭ್ಯ ಬಯಸಿದ್ದೆಲ್ಲ ಬಳಿಯೇ ಇದ್ದು ಬೆಳೆದವನು. ಸುಧಾಳನ್ನು ಹುಚ್ಚಾಪಟ್ಟೆ ಪ್ರೀತಿಸಿದ್ದ. ಎಲ್ಲ ಭಗ್ನ ಪ್ರೇಮಿಗಳಂತೆ ಅವನಿಗೆ ಹೊಳೆದದ್ದೂ ಒಂದೇ ಹಾದಿ. ಸುಧಾ ಇಲ್ಲದೆ ಬದುಕು ಊಹಿಸುವುದು ಹೇಗೆ? ನೆನಪುಗಳನ್ನು ಅಳಿಸುವುದು ಹೇಗೆ? ವರ್ಷಗಳಿಂದ ‘ಫಿಯಾನ್ಸಿ’ ಎಂದು ಸಾರಿಕೊಂಡು ಬಂದ ಸಮಾಜಕ್ಕೆ ಉತ್ತರಿಸುವುದು ಹೇಗೆ? ಪ್ರಶ್ನೆಗಳಿಗೆಲ್ಲ ಅವನ ಮಟ್ಟಿಗೆ ಇದ್ದದ್ದು ಒಂದೇ ಸುಲಭ ಪರಿಹಾರ_ಸಾವು!

ಈ ಮೂರು ಪತ್ರಗಳಲ್ಲಿ ಎಲ್ಲವೂ ಮುಗಿದು ಹೋಗಲಿದೆ. ಎಲ್ಲರನ್ನೂ ಬಿಟ್ಟು ಸಾಯುವುದೇ ಹೇಡಿಯಂತೆ. ಕೊಂಚ ಅಳುಕು, ಅಧೈರ್ಯ, ಇಲ್ಲಿಯವರೆಗೂ ಬೋರ್ ಎನಿಸಿದ್ದ ಶಶಿಯ ಮಾತುಗಳು ತಟ್ಟನೆ ನೆನಪಾದವು. ಅವಳ ಸೋಲು, ನಿರಾಶಾವಾದ, ಇದ್ದಕ್ಕಿದ್ದಂತೆ ಆಪ್ಯಾಯಮಾನವಾಯಿತು. ಶಶಿ ಎಷ್ಟೋ ಬಾರಿ ಹೇಳಿದ್ದಳು_“ಸಾಯೋರನ್ನ ಹೇಡಿ ಅಂತಾರೆ, ಅದು ಸುಳ್ಳು ಕಣೋ. ತಮ್ಮ ಬದುಕನ್ನು ತಮ್ಮ ಕೈಯಿಂದಲೇ ಕೊನೆಯಾಗಿಸೋಕೆ ಎಷ್ಟು ಧೈರ್ಯ ಬೇಕಲ್ಲ! ಬಹುಶಃ ಕೊಲೆ ಮಾಡಲೂ ಅಷ್ಟು ಬೇಕಿರಲಾರದು….” ಸಾವಿನಲ್ಲಿ ಶೌರ್ಯ, ಸಾಹಸ ಹುಡುಕಿದ. ಧೈರ್ಯ ತುಂಬಿಕೊಂಡ. ಒಮ್ಮೆಗೇ ಕತ್ತಲಾದ ಬದುಕಿನಲ್ಲಿ ಸಾವು ಬೆಳಕಿನ ಕಿಂಡಿಯಂತೆ ಕಂಡಿತು.

ಶಶಿ, ಸುಧಾಳ ಬಾಲ್ಯ ಸ್ನೇಹಿತೆ. ಜೊತೆಗೆ ಓದು, ಆಟ, ಸ್ಕೂಲು, ಮೂರು ಹೊತ್ತೂ ಸುಧಾಳ ಮನೆಯಲ್ಲೇ ಇರುತ್ತಿದ್ದ ರವಿಗೆ ಪರಿಚಯವಾಗಿತ್ತು. ಪಿ. ಯು. ಸಿ ವರೆಗೆ ಒತ್ತಿಕೊಂಡಿದ್ದ ಗೆಳತಿಯರು ಕಾಲೇಜು ಹಂತದಲ್ಲಿ ಬೇರೆಯಾದರು. ಕಡೆಗೊಮ್ಮೆ ಸುಧಾ ಮನೆ ಬದಲಿಸಿದಾಗ, ಎದುರಿಗೆ ಸಿಕ್ಕರೆ ನಾಲ್ಕು ಕ್ಷೇಮದ ಮಾತಾಡುವಲ್ಲಿ ಮುಗಿದು ಹೋಗುತ್ತಿತ್ತು. ಬಹುಶಃ ಶಶಿಯ ಮಾವನ ಮನೆ, ರವಿಯ ಪಕ್ಕದ ಮನೆ ಆಗಿರದಿದ್ದರೇ, ಅವರ ಎಳೆತನದ ಪರಿಚಯವೂ ಮರೆಯುತ್ತಿತ್ತು. ಆದರೆ ಶಶಿ, ಬಿ. ಎಸ್ಸಿ. ಕಡೆಯ ಹಂತದಲ್ಲಿದ್ದಾಗ ಅಪ್ಪ ಸತ್ತರು. ಏನೊಂದೂ ಉಳಿಸದೆ ಕೈ ಖಾಲಿ ಸತ್ತ ಅಪ್ಪ….ಇದ್ದ ಒಬ್ಬನೇ ಮಾವನ ಆಶ್ರಯಕ್ಕೆ ತಾಯಿ, ಮಗಳು ಬಂದು ಸೇರುವಂತಾಯಿತು. ಏನೆಲ್ಲ ಕನಸು ಹೊತ್ತ ಶಶಿ ಎಂ. ಎಸ್ಸಿ. ಗೆ ಸೀಟು ದೊರೆತರೂ ಓದಾಲಾರದೆ ಉಳಿದಳು. ನೆನ್ನೆ ಮೊನ್ನೆಯವರೆಗೂ ಸುತ್ತಲಿದ್ದ ಸ್ನೇಹಿತೆಯರು ತಮ್ಮ ಸಂಸಾರಗಳತ್ತ ಹಾರಿ ಹೋಗಿದ್ದರು. ಎಲ್ಲೂ ಹೆಚ್ಚು ಹೋಗದ ಶಶಿ, ರವಿ ಮನೆಗೆ ಆಗಾಗ ಬರುವಳು. ರವಿ ಅಮ್ಮನೊಡನೆ, ರವಿಯೊಡನೆ ಗಂಟೆಗಟ್ಟಲೆ ಮಾತಾಡುವಳು. “ಅಪ್ಪ ಇದ್ದಿದ್ದರೆ…..” ಎಂದು ಭಾವುಕವಾಗಿ ‘ರೆ’ ಪ್ರಪಂಚವನ್ನು ತೆರೆದಿಡುವಳು. ಇದ್ದಾಗ ಧಾರಾಳ ಖರ್ಚು ಮಾಡಿ, ಸತ್ತಾಗ ಏನೂ ಉಳಿಸದ ಅಪ್ಪನ ಬಗ್ಗೆ ಕೆಲವೊಮ್ಮೆ ಕಟುವಾಗಿಯೇ ಟೀಕಿಸುವಳು. ಒಂದು ಕಾಲಕ್ಕೆ ಸತ್ಯವಿದ್ದ ಸಿಹಿ ಕ್ಷಣಗಳ ಕನಸಿನಲ್ಲಿ, ಭೂತದ ಚಿಂತನೆಯಲ್ಲಿ ವರ್ತಮಾನ ಶೂನ್ಯವಾಗುತ್ತಾ ಹೋಯಿತು. ತನ್ನ ನೋವುಗಳನ್ನು, ದುರಾದೃಷ್ಟಗಳನ್ನು ದುರ್ಬೀನಿನಡಿ ಹಿಗ್ಗಿಸಿ ನೋಡಿದಾಗಲೆಲ್ಲ ಸ್ವಯಂ ಮರುಕದ ಸೆಳೆಯೊಡೆದು ಇದ್ದಕ್ಕಿದ್ದಂತೆ ಸಾವಿನ ಬಗ್ಗೆ ದೊಡ್ಡ ದೊಡ್ಡ ವ್ಯಾಖ್ಯಾನ ಪ್ರಾಂರಂಭಿಸಿಬಿಡುವಳು….. ‘ಬದುಕಲಾರದವರು ಸಾಯುತ್ತಾರೆ ಅನ್ನೋದು ಮೂರ್ಖತನ. ನಿಜವಾಗಿ ನೋಡಿದರೆ ಸಾಯಲಾರದವರಷ್ಟೆ ಬದುಕುತ್ತಾರೆ. ನೋಡು ಅತ್ತೆ ಬದುಕಿದ್ದಾಳೆ. ಮೂರು ಕಾಸು ಕೈಗೆ ಹಾಕದ ಮುಂಗೋಪಿ ಮಾವನೊಡನೆ. ಅಪ್ಪನನ್ನು ಕಳಕೊಂಡೂ ಅಮ್ಮ ಬದುಕಿದ್ದಾಳೆ…. ಏನೋ ಸುಖ ದೋಚಿಕೊಳ್ಳಲು ನಿಧಿಯಾಗಿ ಕಾದಿದೆ ಎಂಬ ಕಾರಣಕ್ಕಲ್ಲ, ಕೇವಲ ಸಾಯಲಾರದೆ….’ ಅಲ್ಲಿಂದ ಮುಂದೆ ಅವಳ ಬದುಕಿನ ವಿಶ್ಲೇಷಣೆ ತನ್ನದೇ ದಿಕ್ಕು ಹಿಡಿದು ಸಾವಿನ ಹೊಸಿಲಲ್ಲಿ ಬಂದು ನಿಲ್ಲುತ್ತಿತ್ತು. ಬಹಳಷ್ಟು ಬಾರಿ ಅವಳನ್ನು ಕಾಡುತ್ತಿದ್ದುದು ‘ನಾನಿಂಥ ದುರಾದೃಷ್ಟೆ ಏಕಾದೆ_ನಾನೇ ಏನಾಗಬೇಕಿತ್ತು?’ ಎಂಬ ಪ್ರಶ್ನೆ. ಬದುಕು ತನಗೆ ದೊಡ್ಡ ಅನ್ಯಾಯ ಮಾಡಿದೆ ಎಂಬ ಅನಿಸಿಕೆ.

ಅಪ್ಪನ ಮುದ್ದು ಮಗಳು. ಖಂಡುಗ ಓದಿ, ದೊಡ್ಡ ಹುದ್ದೆ ಹಿಡಿದು ಒಳ್ಳೆ ಕಡೆ ವಿವಾಹವಾಗಲು ಕನಸು ಕಂಡ ಶಶಿಗೆ, ಅಪ್ಪನ ಸಾವಿನ ತಿರುವಿನಲ್ಲಿ ಎಲ್ಲ ತಿರುಗು ಮುರುಗು! ಒಂದು ಕಾಲಕ್ಕೆ ಸ್ಥಿತಿವಂತರಾಗಿದ್ದ ಶಶಿಯನ್ನು ಇಂದಿನ ಈ ಸ್ಥಿತಿಯಲ್ಲಿ ನೋಡುವುದು ನಮಗೆಲ್ಲ ಅಭ್ಯಾಸವಾಗಿದ್ದರೂ, ಶಶಿಗೆ ಇದಿನ್ನೂ ಹೊಂದಿರಲಿಲ್ಲ. ಗತಕಾಲದ ನೆನಪುಗಳಲ್ಲಿ, ಘಟಿಸಿದ ಘಟನೆಗಳ ಅಘಟಿತ ಸಾಧ್ಯತೆಗಳನ್ನು ಕಲ್ಪಿಸಿ ಕೊರಗುವಳು. ಜೊತೆಯ ಸುಧಾ ಎಂ. ಎಸ್ಸಿ. ಮಾಡುತ್ತಿದ್ದಾಳೆ. ಪಿ. ಎಚ್. ಡಿ. ಬಗ್ಗೆಯೂ ಯೋಚಿಸಿದ್ದಾಳೆ. ಬಹಳಷ್ಟು ಸ್ನೇಹಿತೆಯರಾಗಲೇ ಅಚ್ಚುಕಟ್ಟಾಗಿ ಸಂಸಾರ ಹೂಡಿದ್ದಾರೆ. ತನ್ನ ಬದುಕೋ ಹುಚ್ಚು ಹೊಳೆಯಲ್ಲಿ ಬಿಟ್ಟ ಕಾಗದದ ದೋಣಿ!

ಮೊದಮೊದಲು ಶಶಿಯ ಬಗ್ಗೆ ರವಿಗೆ ಅನುಕಂಪವೇ ಇತ್ತು. ಆದರೆ ಇತ್ತೀಚೆಗೆ_‘ಛೇ ಯಾರಿಗೂ ಅಪ್ಪ ಸತ್ತಿಲ್ಲವೆ? ಇವಳಿಗಾದರೆ ತಲೆ ಮೇಲೆ ಸೂರು ನೀಡಲು ಮಾವ ಇದ್ದಾನೆ. ಅದೂ ಅಲ್ಲದೆ ಬೀದಿಗೆ ಬಿದ್ದವರೂ ಮುಂದೆ ಬಂದಿಲ್ಲವೆ? ಇವಳೇಕೆ ಕಳೆದುಹೋದುದನ್ನೇ ಹಿಡಿದಿಡಿದು ಜಗ್ಗುತ್ತಾಳೆ’ ಎನಿಸಿತ್ತು.

“ಬದುಕಿನ ನೋವುಗಳನ್ನು, ಸೋಲುಗಳನ್ನು, ಸವಾಲಿನಂತೆ ಸ್ವಿಕರಿಸಬೇಕು ಶಶಿ” ಎಂದು ಭಾಷಣ ಬಿಗಿದಿದ್ದ ರವಿ. ಇಂದು ಮೇಜಿನ ಮೇಲಿದ್ದ ಮೂರು ಪತ್ರಗಳನ್ನು ವಿಷಾದದಿಂದ ನೋಡಿದ. ಪುಟ್ಟ ಸೀಸೆಯಲ್ಲಿ ಬಿಳಿಯ ಸಯನೈಡ್ ಪುಡಿ ತನ್ನ ಇಂದಿನ ಚಿಂತೆಗಳಿಗೆಲ್ಲ ಸಿದ್ಧೌಷಧಿಯಂತೆ ನಗುತ್ತಿದೆ.

ಶಶಿ ನೂರು ಬಾರಿಯಾದರೂ ಹೇಳಿದ್ದಳು_“ಆತ್ಮಹತ್ಯೆ ಪಾಪದ ಕೆಲಸ ಅಂತ ನನಗೆಂದೂ ಅನಿಸಿಲ್ಲವೊ. ನಮ್ಮ ಜೀವ ತೆಗೆದುಕೊಳ್ಳುವ ಹಕ್ಕೂ ನಮಗಿಲ್ಲ ಅಂದರೆ ಅದೆಂಥ ಸ್ವತಂತ್ರಬದುಕು ನಮ್ಮದು! ಈ ಜೀವನ ನನ್ನದು, ಅದನ್ನು ನನಗಿಚ್ಛೆ ಬಂದಂತೆ ಬದುಕುವ, ಇಲ್ಲ ಬಿಸುಡುವ ಹಕ್ಕೂ ನನ್ನದೇ_ಸತ್ತ ಬದುಕು ಬದುಕುವ ಬದಲು ಒಮ್ಮೆ ಮರಣದ ಬಾಗಿಲು ತಟ್ಟಿಬಿಡುವುದು ಮೇಲು_” ಹೀಗೆ ಸ್ವಗತವೆಂಬಂತೆ ಒಂದೇ ರಾಗದಲ್ಲಿ ಹೇಳುತ್ತಾ ಹೋಗಿದ್ದಳು. ರವಿ ಬಹಳಷ್ಟು ಸಲಹೆ, ಸಮಾಧಾನ, ಪರಿಹಾರ ಸೂಚಿಸಿದ್ದ. ಅವೆಲ್ಲ ಏನೊಂದೂ ಪರಿಣಾಮ ಬೀರದೆ, ಅವನು ಏನೊಂದೂ ಮಾತು ಆಡಿ ಇಲ್ಲವೋ ಎಂಬಂತೆ ಶಶಿ ಮುಂದುವರೆಸಿದ್ದಳು_“ಅಲ್ಲ ಸಾವಿನ ಬಗ್ಗೆ ಏಕಿಷ್ಟು ಹೆದರುತ್ತೇವೆ? ಅದೂ ಬದುಕು ಇಷ್ಟು ದುರ್ಬರವಾದಾಗಲೂ…. ಇಂಥಾ ಬದುಕಿಗಿಂತ ಸಾವು ಭೀಕರವಿರಲಾರದು. ಅಗೋಚರ ಮೃತ್ಯುವಿನ ವಿಚಿತ್ರ ಭಯ. ಕಾಣದ, ಕೇಳದ, ಹೊಸ ಅನುಭವದ ವಿಸ್ತಾರಕ್ಕೆ ಜಿಗಿವ ಭಯ. ಬದುಕಿನ ಎಲ್ಲ ಹಂತಗಳ ಸಹಜತೆಯಂತೆಯೇ ಸಾವೂ ಸಹಜವಲ್ಲವೆ? ಅದು ತನ್ನಂತೆಯೇ ಬರಲಿ, ನಾವಾಗಿಯೇ ಎಳೆದು ತರಲಿ, ವ್ಯತ್ಯಾಸವೇನು? ಸಾವು ಒಂದು ಸ್ಥಿತಿ, ಒಂದು ಅನುಭವ, ನಮ್ಮಂಥವರಿಗಂತೂ ಬದುಕಿಗಿಂತ ಸಿಹಿ ಅನುಭವ, ಸಾವು ಚಿರ ನಿದ್ರೆ_ಕನಸುಗಳೂ ಕಲಕದ ಗಾಢ ನಿದ್ರೆ_” ಎನ್ನುತ್ತಾ ಸಾವನ್ನು ರಮ್ಯವಾಗಿ ಚಿತ್ರಿಸಿಕೊಂಡು ಖುಷಿಪಟ್ಟಿದ್ದಳು.

ಇತ್ತೀಚೆಗೆ ಶಶಿ ಸಾವಿನ ಬಗ್ಗೆ ವಿಪರೀತ obsesseಜ ಆಗುತ್ತಿದ್ದಾಳೆ ಎಂದು ರವಿಗೂ ಅನ್ನಿಸಿತ್ತು. ಒಂದೆರಡು ಬಾರಿ ಗದರಿ ರೇಗಿದ್ದರೂ, ಶಶಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನಿಸಲಿಲ್ಲ. “ಸಾಯೋರ್‍ಯಾರೂ ಹೀಗೆ ಸಾರಿ ಸಾರಿ ಹೇಳೊಲ್ಲ ಬಿಡು. ಒಂದು ಒಳ್ಳೆ ಕೆಲಸ ಸಿಕ್ಕರೆ, ಮದುವೆ ಆದರೆ ಎಲ್ಲ ಸರಿಹೋಗುತ್ತೆ” ಎಂದು ಅಮ್ಮ ಕೂಡ ಹೇಳಿದ್ದಳು. ಅದೂ ಅಲ್ಲದೆ ರವಿಯೊಡನೆ ಮಾತ್ರ ಮುಕ್ತವಾಗಿ ಮಾತನಾಡುವ ಹುಡುಗಿ, ಮತ್ತೆಲ್ಲರ ಜೊತೆ ನಗುನಗುತ್ತಲೇ ಇರುವಳು. ಏನೂ ಆಗದಂತೆ ನಟಿಸುವಳು. “ಸುಮ್ಮನೆ ಮೂರೂ ಹೊತ್ತೂ ಇಲ್ಲದ್ದೆಲ್ಲ ಯೋಚಿಸೋ ಬದಲು, ಗಮನಕೊಟ್ಟು ಬ್ಯಾಂಕ್ ಪರೀಕ್ಷೆಗಳಿಗೆ ಕಟ್ಟಬಾರದ? ಇಲ್ಲ ತೆಪ್ಪಗೆ ಒಂದು ಗಂಡು ಒಪ್ಪಿ ಮದುವೆ ಆಗು, ಅವ ಬರೀ ಬಿ. ಎ. ಇವನಿಗೆ ವಿದ್ಯೆಯ ಗಂಧವೇ ಇಲ್ಲ ಅಂತ ಕಣಿ ಹೇಳುತ್ತಾ ಕೂರಬೇಡ” ಎಂದೆಲ್ಲ ರವಿ ರೇಗಿದ್ದ. ಶಶಿಯ ಚಿಂತನೆಯ ದಿಕ್ಕು ಚೂರೂ ಬದಲಾಗಿರಲಿಲ್ಲ. ತೀವ್ರತರದ ಖಿನ್ನತೆ ಅವಳನ್ನು ಆವರಿಸಿತ್ತು. ಅವಳ ಕಷ್ಟಗಳು ಬಹಳಷ್ಟು ಸ್ವ-ಕಲ್ಪಿತ ಎನಿಸಿದರು ಅವಳ ಮಟ್ಟಿಗೆ ಅವೆಲ್ಲ ವಾಸ್ತವ ಸತ್ಯಗಳು.

ಈಗನಿಸುತ್ತದೆ ಓರ್ವ ವ್ಯಕ್ತಿ ತನ್ನ ದುಃಖಗಳನ್ನು ಎಷ್ಟೇ ಪಾರದರ್ಶಕವಾಗಿ ಹಿಡಿದರೂ, ಏಕೋ ದುರಂತ ಘಟಿಸುವವರೆಗೆ ಘಟಿಸಬಹುದು ಎನಿಸುವುದೇ ಇಲ್ಲ.

ರವಿ ಎಷ್ಟೋ ಹೊತ್ತು ಯೋಚಿಸಿದ. ತನ್ನ ಸಾವಿನ ಪ್ರಶ್ನೆಗಳಿಗೆಲ್ಲ ಶಶಿ ಉತ್ತರಿಸಿ ಆಗಿದೆ. ಅವಳು ಬರೀ ಬಾಯಲ್ಲಿ ಹೇಳುತ್ತಿದ್ದ ಹೊಗಳುತ್ತಿದ್ದ ಮೃತ್ಯುವನ್ನು ತನ್ನ ಕೋಣೆಗಿಂದು ಸ್ವಾಗತಿಸುವೆ. ಮತ್ತೊಮ್ಮೆ ಸುಧಾಗೆ ಬರೆದ ಪತ್ರ ಓದಿಕೊಂಡೆ. “ಸುಧಾಳ ಕಣ್ಣಲ್ಲಿ ತನಗಾಗಿ ಎರಡು ಹನಿ ಉದುರಿದರೆ ಸಾಕು” ಎಂದು ಹುಚ್ಚುಚ್ಚಾಗಿ ಯೋಚಿಸಿದ. ಸಾವಿನ ಕ್ಷಣದಲ್ಲೂ, ಸಾವಿನ ನಿಶ್ಚಯದಲ್ಲೂ ಬದುಕು ಅಡಗಿತ್ತು. ಸತ್ತ ನಂತರ ಮುಗಿಯಿತು. ಸುಧಾ ಅತ್ತರೇನು, ಬಿಟ್ಟರೇನು….. ಉಹುಂ, ಹಾಗಲ್ಲ. ತಾ ಉಳಿಯಬೇಕು…. ಪ್ರೀತಿಸಿದವರ ಎದೆಯಲ್ಲಿ ನೋವಾಗಿ, ಕಣ್ಣಲ್ಲಿ ಕಂಬನಿಯಾಗಿ, ಜನರಲ್ಲಿ ‘ಅಮರ ಪ್ರೇಮ’ದ ನೆನಪಾಗಿ, ಪ್ರೀತಿಯಿಂದ ಕೊಲ್ಲುವುದು ಎಂದರೆ ಇದೇ ಇರಬಹುದು!

ಮೇ ತಿಂಗಳ ನಾಲ್ಕನೇ ತಾರೀಖು, ಸಂಜೆ ಸುಧಾ ಮನೆಗೆ ಹೋಗಿ ಹುಟ್ಟು ಹಬ್ಬದ ಶುಭಾಶಯ ಹೇಳಿ ಕವರ್ ಕೈಗಿಟ್ಟು ಬಂದು ಬಿಡುವುದು. ಸಯನೈಡ್ ಹೆಚ್ಚು ಹೊತ್ತು ಉಳಿಸುವುದಿಲ್ಲ. ಎಲ್ಲ ಹೆಚ್ಚೆಂದರೆ ಹತ್ತು ನಿಮಿಷಗಳ ಅವಧಿ. ಒಮ್ಮೆ ಕುಡಿದರೆ, ಜೀವ ಕೊಟ್ಟ ಬ್ರಹ್ಮನೂ ಉಳಿಸಲಾರ.

ಎಲ್ಲ ಸಿದ್ಧವಾಗಿತ್ತು. ತಯಾರಾಗಿ ಇನ್ನೇನು ಹೊರಡಬೇಕು ಎನ್ನುವಾಗ ಶಶಿ ಬಂದಳು! ರವಿ ಅವಳನ್ನು ನೋಡುವ ಸ್ಥಿತಿಯಲ್ಲೂ ಇರಲಿಲ್ಲ. ಅವನದೇ ನೋವು ಚಿಂತೆ ಹಾಸಿ, ಹೊದೆದು, ಹಂಚುವಷ್ಟಿರುವಾಗ ಶಶಿಯ ಗೋಳುಗಳಿಗೆ ಕಿವಿಯಾಗುವ ತಾಳ್ಮೆ ಎಲ್ಲಿ ಬಂತು. “ಬರ್ತೀಯಾ ರವಿ, ಹೀಗೇ ಸುತ್ತಾಡಿ ಬರೋಣ….” ಶಶಿ ಸಾಕಷ್ಟು ಸುಸ್ತಾದಂತೆ ಕೇಳಿದಳು. “ಸಾರಿ, ನಾನೆಲ್ಲೂ ಬರಲಾರೆ….” ಎಂದೇನೋ ಹೇಳಬೇಕೆಂದುಕೊಂಡವನು, “ಛೆ ಈ ದಿನ ಇದ್ದು ನಾಳೆಗಾಗಲೇ ಸಾವಿನ ಅತಿಥಿಯಾಗುವವನು ನಾನು. ನನ್ನ ಕಡೆಯ ನೆನಪುಗಳನ್ನಾದರೂ ಸಿಹಿಯಾಗಿ ಉಳಿಸಿ ಹೋಗಬೇಕು” ಎಂದು ಎದ್ದು, “ಸರಿ ಬಾ” ಎಂದು ಹೊರಟ. ಅಮ್ಮ ಒಳಗಿಂದ _ “ಸ್ವೆಟರ್ ಹಾಕೊಕೊಂಡು ಹೋಗೋ. ವಾರದಿಂದ ಸುಸ್ತು ತಲೆನೋವು ಅಂತ ಫ್ಯಾಕ್ಟರಿಗೂ ಹೋಗಿಲ್ಲ_” ಕಳಕಳಿಯಿಂದ ಹೇಳಿದಾಗ, ವಿಷಾದದಿಂದ ನಕ್ಕ.

ಇಬ್ಬರೂ ತಮ್ಮದೇ ಚಿಂತೆಗಳಲ್ಲಿ ಮಾತಿಲ್ಲದೆ, ಲಾಲ್‌ಬಾಗ್‌ವರಗೂ ಹೆಜ್ಜೆ ಹಾಕಿದರು. ಕೆರೆಯ ದಡದಲ್ಲಿ ಕುಳಿತಾಗ ಆಗಲೇ ಸೂರ್ಯ ಮುಳುಗಿ, ಸಂಜೆಯ ಕೆಂಪು ಕಪ್ಪಾಗುತ್ತಿತ್ತು. ಎಷ್ಟೋ ಹೊತ್ತು ಏನೂ ಮಾತನಾಡದೆ ಮೌನದಲ್ಲಿ ಮುಳುಗಿದರು.

“ರವಿ ಈ ಬದುಕಿನಲ್ಲಿ ಬದುಕುವಂಥಹದಾದರೂ ಏನಿದೆ?” ಮತ್ತೆ ಶುರುವಾಯಿತು ಇವಳ ಪುರಾಣ ಎನಿಸಬೇಕಿದ್ದ ರವಿಯ ಮನಸ್ಸಿಗೆ, ಶಶಿಯ ಪ್ರಶ್ನೆ ತನ್ನ ಭಾವನೆಗಳಿಗೇ ಮಾತುಕೊಟ್ಟಂತೆ ಆತ್ಮೀಯವಾಯಿತು.

“ಏನೂ ಇಲ್ಲ ಶಶಿ…. ಏನೂ ಇಲ್ಲ” ಎನ್ನುವಾಗ ಅವಳಿಗಿಂತ ತನಗೇ ಎಂಬಂತೆ ಹೇಳಿಕೊಂಡ, ನಿಶ್ಚಿತವಾದ ನಿರ್ಧಾರವನ್ನು ಮತ್ತೂ ಗಟ್ಟಿಮಾಡಿಕೊಳ್ಳುವಂತೆ. ಇದ್ದಕ್ಕಿದ್ದಂತೆ ಶಶಿ ಹೇಳಿದಳು….

“ನಿನಗೆ ಗೊತ್ತಾ ರವಿ, ಸ್ಕೂಲಲ್ಲಿ ಕಾಲೇಜಲ್ಲಿ ಸುಧಾಗಿಂತ ನಾನೇ ಮುಂದಿದ್ದೆ….” ಎಂಥಹುದೋ ಬಾಲಿಶ ಹೆಮ್ಮೆಯಲ್ಲಿ ನಕ್ಕಳು. ಮರುಕ್ಷಣ ಮಂಕಾಗಿ_ “ರವಿ, ಹೆಣ್ಣಿಗೆ ರೂಪ ಇರಬೇಕು, ಹಣ ಇರಬೇಕು, ಇಲ್ಲ ಅದೃಷ್ಟವಿರಬೇಕು….” ಎಂದೇನೋ ಸಂಬಂಧವೇ ಇಲ್ಲದಂತೆ ಮಾತಾಡಿದಳು. ರವಿ ಅನ್ಯಮನಸ್ಕನಾಗಿಯೇ “ಹುಂ”ಗುಟ್ಟಿದ. ಮತ್ತೆಷ್ಟೋ ಹೊತ್ತು ಬರೀ ಮೌನ. ಬೀದಿ ದೀಪಗಳು ಹೊತ್ತಿಕೊಂಡರೂ, ಕುಳಿತೇ ಇದ್ದರು! ಇದ್ದಕ್ಕಿದ್ದಂತೆ ಶಶಿಯ ತಲೆ ಭುಜಕ್ಕೆ ಒರಗಿದಾಗ ರವಿ ಬೆಚ್ಚಿ ಎಚ್ಚೆತ್ತ. “ಏಯ್ ಶಶಿ… ಶಶಿ…. ಏನಾಯಿತು?” ಅಲುಗಿಸಿದ. ಉತ್ತರ ಸಿಗದಾಗ ಗಾಬರಿಯಿಂದ “ಶಶಿ….” ಎಂದು ಎತ್ತಿ ಕೂರಿಸಲು ಕೈ ಹಿಡಿದ. ಕೈ ಒದ್ದೆಯಾಗಿ ತಟ್ಟನೆ ಬೆಳಕಿಗೆ ಹಿಡಿದರೆ…. ರಕ್ತ! ಬಲಗೈಯ ಮಣಿಕಟ್ಟಿನಿಂದ ಒಸರಿದ ರಕ್ತ! ಒಂದೇ ಏಟಿಗೆ ಅವಳ ವ್ಯಾನಿಟಿ ಚೀಲ ಭುಜಕ್ಕೇರಿಸಿ, ಎರಡೂ ಕೈಯಲ್ಲಿ ಅವಳನ್ನು ಬಿಗಿ ಹಿಡಿದು ಮೇಲೆತ್ತಿ ಗೇಟ್ ಕಡೆ ಧಾವಿಸಿದ. ಬರೀ ನಲವತ್ತು ಕೆ. ಜಿ, ಯಾದರೂ ದಾಪುಗಾಲು ಹಾಕುವುದು ಸುಲಭವಿರಲಿಲ್ಲ. ಹಣೆಯಲ್ಲಿ ಬೆವರು ಜಲಪಾತವಾಯಿತು. ಎದೆ ಬಡಿತ ಅನಿಶ್ಚಿತ ಭಯದಲ್ಲಿ ಹೊಡೆದುಕೊಂಡಿತು. “ಆಟೋ….” ಹುಚ್ಚನಂತೆ ಕೂಗಿ, ಹತ್ತಿರದ ನರ್ಸಿಂಗ್ ಹೋಂಗೆ ಓಡಿಸಿದ.

ರಾತ್ರಿ ಎಂಟರ ಸಮಯ. ಡಾಕ್ಟರ್ ಹೊರಬಂದು_ “ಸಾರಿ ಶಿ ಈಸ್ ಡೆಡ್” ಎಂದಾಗ ಮರಗಟ್ಟಿ ನಿಂತ. ಅವರ ಮಾತುಗಳು ಕಿವಿ ತಮಟೆಗೆ ತಗಲಿಯೂ ಮಿದುಳಿಗೆ ಅರ್ಥವಾಗದೆ ನಿಂತುಬಿಟ್ಟವು.

“ಏನು ಹೇಳ್ತಾ ಇದ್ದೀರಾ…. ಈಗ ಈಗ ನನ್ನ ಜೊತೆ ಮಾತಾಡ್ತ ಇದ್ದಳು….”

“ಸಾರಿ, ಆತ್ಮಹತ್ಯೆ ಇದ್ದ ಹಾಗಿದೆ. ರಕ್ತಸ್ರಾವ ಹೆಚ್ಚಾದ ಹಾಗಿಲ್ಲ. ಪೋಲೀಸ್ ಕೇಸ್, ನಾವಿಲ್ಲಿ ನೋಡಲು ಸಾಧ್ಯವಿಲ್ಲ. ತಕ್ಷಣ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡುಹೋಗಿ….”

ಎಲ್ಲವೂ ಮುಗಿದುಹೋಗಿತ್ತು. ಏನು ಘಟಿಸುತ್ತಿದೆ ಎಣಿಸುವಷ್ಟರಲ್ಲಿ ದೊಡ್ಡ ತೆರೆ! ಬದುಕು-ಸಾವಿನ ಬಾಗಿಲು ತೆರೆದು ಶಶಿ ನಡೆದೇ ಬಿಟ್ಟಿದ್ದಳು. ಒಮ್ಮೆಯೂ ಹಿಂದುರುಗಿ ನೋಡದೆ. ಬಲಗೈ ನರಕ್ಕೆ ಬ್ಲೇಡ್ ತೀಡಿ, ವಿಷ ತುಂಬಿದ್ದಳು. ಸಾಯುವ ಈ ಭಯಂಕರ ಬಗೆಯಾದರೂ ಅವಳಿಗೆ ಹೇಗೆ ತಿಳಿಯಿತು…. ವಿಭ್ರಾಂತನಾಗಿ ಕುಳಿತ. ಸಾವು ತನ್ನದೇ ದಾರಿಗಳನ್ನು ಹುಡುಕಿಕೊಳ್ಳುವುದೇನೊ…. ಮೂರೇ ದಿನಗಳಲ್ಲಿ ತಾ ಸಯನೈಡ್ ಸಂಪಾದಿಸಲಿಲ್ಲವೆ, ಹಾಗೆ, ಎರಡೂ ಕೈಗಳಲ್ಲಿ ತಲೆ ಹುದುಗಿಸಿ ಕುಳಿತ. ರಾತ್ರಿಯ ಹನ್ನೊಂದು ಗಂಟೆ, ಪೋಲೀಸ್ ವಿಚಾರಣೆ ಮುಗಿದಿರಲಿಲ್ಲ.

“ಹುಡುಗಿ ಹೆಸರು….?”

“ಶಶಿ…..”

“ನಿಮಗೂ ಅವರಿಗೂ ಏನು ಸಂಬಂಧ?”

“ಸಂಬಂಧ ಏನೂ ಇಲ್ಲ, ನನ್ನ ಸ್ನೇಹಿತೆ….”

“ಓಹೋ….. ಗರ್ಲ್‌ಫ್ರೆಂಡಾ….” ರಾಗ ಎಳೆದು ಕೇಳಿದರು. ಶಶಿ ಫ್ರೆಂಡಾಗಿದ್ದಳು. ‘ಗರ್ಲ್’ ಆಗಿ ನೋಡಿರಲಿಲ್ಲ. ಸುಧಾ ನನ್ನ ಬಾಲ್ಯ ಯೌವನಗಳ ತುಂಬ ತುಂಬಿ ನಿಂತಾಗ ಯಾವುದೇ ಹುಡುಗಿಯೂ ‘ಗರ್ಲ್’ ಆಗಿ ಕಂಡಿರಲಿಲ್ಲ.

“ನೀವು ಪ್ರೀತಿಸ್ತಾ ಇದ್ರಾ?” ಗುಂಡಿನಂತೆ ನೇರ ಪ್ರಶ್ನೆ.

“ಇಲ್ಲ ಸ್ವಾಮಿ. ಬರೀ ಸ್ನೇಹಿತೆ, ಪಕ್ಕದ ಮನೆಯೋಳು”

“ಮತ್ತೆ ಇದೆಲ್ಲ ಹೇಗಾಯ್ತು?” ಸಂಜೆಯ ಘಟನೆಗಳೆಲ್ಲ ಚಾಚೂ ತಪ್ಪದೆ ವಿವರಿಸಿದ.

“ಅಲ್ರೀ ಸಾಯಂಕಾಲದ ಆರು ಗಂತೆಗೆ ಲಾಲ್‌ಬಾಗ್‌ನಲ್ಲಿ ಹೋಗಿದ್ದೀರಿ. ಪಕ್ಕದಲ್ಲಿ ಅವಳು ಕುಳಿತು ಕೈ ಕತ್ತರಿಸಿಕೊಂಡು ವಿಷ ಹಾಕಿಕೊಂಡರೂ ನಿಮಗೆ ತಿಳಿಯಲಿಲ್ಲವೆ?”

“ಕತ್ತಲಿತ್ತು ನಾ ಏನೋ ಯೋಚಿಸುತ್ತಾ ಇದ್ದೆ….”

“ಲವ್ ಗಿವ್ ಮಾಡಿ ಏನಾದ್ರೂ ಹೆಚ್ಚುಕಮ್ಮಿ….”

“ನಾಳೆ ಪೋಸ್ಟ್ ಮಾರ್ಟೆಮ್ ಮಾಡ್ತೀರಲ್ಲ. ನೀವೇ ನೋಡಿ” ಅಸಹನೆಯಿಂದ ಕಿರುಚಿದ.

“ಸಾರಿ, ಉದ್ರೇಕಗೊಳ್ಳಬೇಡಿ. ನಮ್ಮ ಕೆಲಸ ನಾವು ಮಾಡಬೇಕಲ್ಲ” ಇನ್ಸ್‌ಪೆಕ್ಟರ್ ಭುಜದ ಮೇಲೆ ಕೈಯಾಡಿಸಿ ಹೇಳಿದ.

“ಹಾಂ…. ನೋಡಿ, ನೀವೇ ಏಕೆ ಕೊಲೆ ಮಾಡಿರಬಾರದು?” ಬಾಂಬ್ ಬಿದ್ದಂತೆ ಬೆಚ್ಚಿದ.

“ನಾನು…. ನಾನು… ಏನು ಹೇಳ್ತಾ ಇದ್ದೀರ? ಅವಳನ್ನು ನಾ ಏಕೆ ಕೊಲೆ ಮಾಡ್ಲಿ….?”

“ಮತ್ತೆ ಎಡಗೈಯಿಂದ ಬಲಗೈನ ಅಷ್ಟು ಅಚ್ಚುಕಟ್ಟಾಗಿ ಅವಳೇ ಕೊಯ್ದುಕೊಂಡಳಾ….?”

“ಸತ್ಯವಾಗಿ ಸಾರ್. ಅವಳು ಎಡಚಿ, ಊಟ ತಿಂಡಿ ಬರೆಯೋದು ಎಲ್ಲ ಎಡಗೈಯಲ್ಲೆ….”

“ಅಹ್ಹಾ…. ಒಳ್ಳೆ ಸಮಯಸ್ಪೂರ್ತಿ ಇದೆ ನಿಮಗೆ…..” ಅಪನಂಬಿಕೆಯ ಅಟ್ಟಹಾಸದ ನಗು.

“ಹೋಗಲಿ, ನಿಮ್ಮ ಪ್ರಕಾರ ಆತ್ಮಹತ್ಯೆಗೆ ಕಾರಣ ಏನು ? ಹುಡುಗಿ ಚಿಕ್ಕದು, ಓದಿರೋ ಹುಡುಗಿ….”

“ಅವಳು ತುಂಬಾ ದಿನದಿಂದ ‘ಡಿಪ್ರೆಸ್’ ಆಗಿದ್ದಳು. ಅಪ್ಪಾ ಸತ್ತಾಗಲಿಂದ….”

“ಅಪ್ಪ ಸತ್ತದ್ದು ಯಾವಾಗ?”

“ಎರಡು ವರ್ಷ ಆಯ್ತು.”

“ಎರಡು ವರ್ಷದ ಹಿಂದೆ ಅಪ್ಪ ಸತ್ತದ್ದಕ್ಕೆ ಇವತ್ತು ಆತ್ಮಹತ್ಯೆ ಮಾಡಿಕೊಂಡಳಾ….?” ಏನೆಂದು ಉತ್ತರಿಸುವುದು? ಅವರಿಗಿರಲಿ ರವಿಗೇ ತನ್ನ ಕಾರಣಗಳು, ಸಮರ್ಥನೆಗಳು ನಂಬುವಂತಿರಲಿಲ್ಲ. ಶಶಿ ಏಕೆ ಸತ್ತಳು? ಬರೀ ಬದುಕಿನ ಬಗೆಯ ಆಕ್ರೋಶವೇ? ಖಿನ್ನತೆಯೇ? ಇಲ್ಲ ತನಗೂ ತಿಳಿಯದ ರಹಸ್ಯ ನೋವುಗಳಿತ್ತೆ? ನನ್ನೊಡನೆಯೂ ಹಂಚಿಕೊಳ್ಳದ ಉಳಿದ ಬೇರೆ ಸಮಸ್ಯೆಗಳಿತ್ತೆ? ಸತ್ತವರು ತಮ್ಮ ಹಿಂದೆ ಎಷ್ಟೊಂದು ಪ್ರಶ್ನೆಗಳನ್ನು ಉಳಿಸಿ ಹೋಗುತ್ತಾರೆ? ಯೌವನದ ಹುಡುಗಿ ಲಾಲ್‌ಬಾಗ್‌ನಲ್ಲಿ ತನ್ನ ಪಕ್ಕ ಕುಳಿತು ಪ್ರಾಣಬಿಟ್ಟಳು ಎಂದರೆ ನಂಬುವವರಾರು?

“ಏನಾದ್ರೂ ಚೀಟಿ ಬರೆದಿದ್ದಾರಾ?” ಇನ್ಸ್‌ಪೆಕ್ಟರ್ ಕೇಳಿದ.

“ಗೊತ್ತಿಲ್ಲ….”

“ನಿಮ್ಮ ಭುಜದಲ್ಲಿರೋದು ಆಕೆಯ ಚೀಲಾನಾ?” ತಟ್ಟನೆ ಶಶಿಯ ಚೀಲ ನೆನಪಾಗಿ ತೆರೆಯಲು ಹೋದ_

“ಇಲ್ಲಿ ಕೊಡಿ….” ಎಂದು ತೆಗೆದುಕೊಂಡರು. ಏನೇನೋ ಸಾಮಾನುಗಳ ನಡುವೆ ಒಂದು ಚಿಕ್ಕ ಪತ್ರ ಸಿಕ್ಕಿತು. ‘ನಾ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ. ನನ್ನ ಸಾವಿಗೆ ಯಾರೂ ಕಾರಣರಲ್ಲ….’ ಎರಡೇ ಸಾಲಿನ ಪತ್ರ. ಗಟ್ಟಿಯಾಗಿ ಓದಿ ‘ಹುಂ….’ ಎಂದರು. ರವಿ ಕೊಂಚ ಉಸಿರಾಡಿದ.

“ಇದು ಆಕೆಯ ಅಕ್ಷರಾನ….? ನೀವೇ ಏಕೆ ಬರೆಸಿರಬಾರದು? ಜೀವನದಲ್ಲಿ ಜಿಗುಪ್ಸೆ ಹುಟ್ಟುವಂತಹುದೇನಾಗಿತ್ತು….?” ಮುಗಿಯದ ತನಿಖೆ.

ಇಡೀ ರಾತ್ರಿ ಶಶಿಗಾಗಿ ಕಣ್ಣೀರು ಸುರಿಸಬೇಕೋ, ಇಲ್ಲ ತಾ ಸಿಕ್ಕಿಕೊಂಡಿರುವ ಸುಳಿಗಾಗಿ ಅಳಬೇಕೋ ತಿಳಿಯಲಿಲ್ಲ. ರಾತ್ರಿ ಮೂರು ಗಂಟೆಗೆ ವಿಷಯ ತಿಳಿದ ಅಪ್ಪ ಬಂದರು. ಗಾಬರಿಯಿಂದ ಕಂಗೆಟ್ಟಿದ್ದರು. ಅವರ ತನಿಖೆ, ವಿಚಾರಣೆ ಆಯಿತು. ಹೇಳಿಕೆ ಬರೆದುಕೊಂಡರು. ಶಶಿಯ ತಾಯಿ ಹಾಗೂ ಮಾವ ಬಳ್ಳಾರಿಗೆ ಹೋಗಿದ್ದ ಕಾರಣ ‘ತಂತಿ’ ಕೊಟ್ಟು ಬಂದರು. ಸದ್ಯ ಶಶಿಗೆ ಪತ್ರ ಬರೆಯುವಷ್ಟು ಮುಂಜಾಗರೂಕತೆ ಇತ್ತಲ್ಲ. ಆದರೆ ಆ ಪತ್ರ ಹೆಚ್ಚೇನೂ ವ್ಯತ್ಯಾಸ ಮಾಡಿದಂತಿರಲಿಲ್ಲ. ಸಾವಿಗೆ ಸ್ಪಷ್ಟ ಕಾರಣವಿರಲಿಲ್ಲ. ಖಿನ್ನತೆಯಿಂದಲೇ ಸತ್ತಳು. ಸಾವಿನ ರಮ್ಯತೆಗೆ ಬೆರಗಾದಳು. ಎಂದರೆ ನಂಬುವವರಾರು?

ಬೆಳಿಗ್ಗೆ ಪೋಲೀಸ್ ಸ್ಟೇಷನ್‌ನಿಂದ ಆಸ್ಪತ್ರೆಗೆ ಬಂದಾಗ ಶಶಿ ಆಗಲೇ ‘ಶವ’ವಾಗಿ ಶವದ ಕೋಣೆಯಲ್ಲಿ! ಕೊಳಕು ಬ್ಯಾಂಡೇಜುಗಳ ರಾಶಿ, ಔಷಧಿ ಬಾಟಲುಗಳ ನಾತ, ಎಳನೀರು ಬುರುಡೆಯ ತಿಪ್ಪೆಯ ನಡುವೆ ಮುಗುಮುಚ್ಚಿ ಹೆಜ್ಜೆಹಾಕುತ್ತಾ ಶವದ ಕೋಣೆಗೆ ಓಡಿ ಬಂದ. ವಿಶಾಲವಾದ ಕೊಠಡಿ. ಒಂದೆರಡು ಕಲ್ಲು ಮೇಜುಗಳು, ಅತ್ತ ಬೆತ್ತಲಾಗಿ ಕಡೆದ ಕಲ್ಲಿನಂತೆ ಕರಕಲಾದ ಗಂಡು ಶವ, ನೆಲದ ಮೇಲೆ ಚಾಪೆಯಲ್ಲಿ ಮುದುರಿಟ್ಟ ಮತ್ತೊಂದು ಹೆಂಗಸಿನ ಶವ, ಇತ್ತ ಬಾಗಿಲ ಬಳಿಯ ಕಲ್ಲು ಮೇಜಿನ ಮೇಲೆ ಕೆಂಪು ಸೀರೆಯಲ್ಲಿ ಅಂಗಾತವಾಗಿ, ಅನಾಥವಾಗಿ, ಎಲ್ಲರಿದ್ದೂ ಯಾರೂ ಇಲ್ಲದಂತೆ ಮಲಗಿದ್ದ ಶಶಿ! ತಣ್ಣಗಾಗಿ ಜೀವರಸ ಬತ್ತಿಹೋದ ನಿರ್ಜೀವ ದೇಹ. ಅರೆ ಮುಚ್ಚಿದ ಕಣ್ಣು, ಯಾರದೋ ಚುಂಬನಕ್ಕೆ ಕಾದಂತೆ ಅರೆಬಿರಿದ ಒಣಗಿದ ತುಟಿಗಳು, ಕೆಲವೇ ಗಂಟೆಗಳ ಹಿಂದೆ ಲಾಲ್‌ಬಾಗಿನ ಹಸಿರಿನಲ್ಲಿ, ನನ್ನ ಪಕ್ಕ ಕುಳಿತ ಹುಡುಗಿ ಈಗಿಲ್ಲ ಎಂದರೆ ರವಿ ನಂಬುವುದು ಹೇಗೆ? ಎಳೆಯ ಮಗುವಿನಂತೆ ರವಿ ಬಿಕ್ಕಿದ. ಅಪ್ಪ ಭುಜ ತಟ್ಟಿ ಸಮಾಧಾನ ಮಾಡುತ್ತ ಹೊರಗೆ ತಂದರು. ಬಾಗಿಲ ಬಳಿ ಇಬ್ಬರು ವಾಚ್‌ಮನ್‌ಗಳು ಆರಾಮವಾಗಿ ಹರುಟುತ್ತ ಮೂಳೆ ರಾಶಿಗಳನ್ನು ಬಟ್ಟೆಯಿಂದ ಒರೆಸಿ ಶುಚಿ ಮಾಡುತ್ತಾ ಕುಳಿತಿದ್ದರು. ಇಲ್ಲಿ ಸಾವು ಎಷ್ಟು ನಿಕಟವಿದೆ, ಸ್ಪರ್ಶಿಸುವಷ್ಟು ಹತ್ತಿರವಿದೆ!

ಹೊರಗೆ ಬಂದು ಕಲ್ಲು ಬೆಂಚಿನ ಮೇಲೆ ಇಬ್ಬರೂ ಕುಳಿತರು. ಅಪ ಬೇಸರದ ಕಂಠದಲ್ಲಿ “ಸ್ಟುಪಿಡ್ ಗರ್ಲ್, ಎಂಥಾ ಕೆಲಸ ಮಾಡಿಕೊಂಡಳು, ಹೇಡಿಗಳ ಕೆಲಸ….” ಹೇಳುತ್ತಿದ್ದಂತೆ ಏಕೋ ತನ್ನನ್ನೇ ಉದ್ದೇಶಿಸಿ ಹೇಳಿದಂತೆ ರವಿ ತಟ್ಟನೆ ರೇಗಿದ “ಸಾಯೋಕೆ ಧೈರ್ಯ ಬೇಕು ಅಪ್ಪ…. ಧೈರ್ಯ ಬೇಕು. ಬದುಕುವವರಿಗೆ ಸಾಯೋ ಹಕ್ಕು ಇಲ್ಲವೆ?” ಅಪ್ಪ ಒಂದು ಕ್ಷಣ ಬೆರಗಾಗಿ ನೋಡಿ, ತಟ್ಟನೆ ಭುಜ ಅಪ್ಪಿ ಸಮಾಧಾನ ಮಾಡಿದರು.

ಗಂಟೆ ಹತ್ತು ದಾಟಿತ್ತು. ಒಬ್ಬ ಕಾನ್ಸ್‌ಟೇಬಲ್ ಹಾಗೂ ಇನ್ಸ್‌ಪೆಕ್ಟರ್ ಬಂದಿಳಿದರು.

“ಅವರ ಕಡೆಯವರಾರೂ ಬಂದಿಲ್ವೆ?”

“ಇಲ್ಲ ಬಳ್ಳಾರಿಗೆ ಹೋಗಿದ್ರು…. ತಂತಿ ಕೊಟ್ಟಿದ್ದೇವೆ.” ಗಂಟೆ ಹನ್ನೊಂದು! ನಿದ್ದೆ ಇರದೆ ಕಳೆದ ರಾತ್ರಿ ರವಿಯ ಕಣ್ಣಲ್ಲಿ ಕೆಂಪಾಗಿ ಕುಳಿತಿತ್ತು.

“ಪೋಸ್ಟ್ ಮಾರ್ಟಮ್ ಮಾಡಿ ಇಡೋಣೇನು? ವಿಷ ತಗೊಂಡಿರೋ ಕೇಸ್. ಬಹಳ ಬೇಗ ಎಲ್ಲ ಮುಗಿಸಬೇಕು” ರವಿ ತಲೆಯಾಡಿಸಿದ. ಪೋಲೀಸ್ ಫೈಲು ಹಿಡಿದು ಓಡಾಡಿದರು.

“ಇಸಮಿನ ಜಾತಿ?” ಪೇದೆ ಬಂದು ಕೇಳಿದ. ಸತ್ತರೂ ಜಾತಿ ಮಾತ್ರ ಹೋಗುವುದಿಲ್ಲ. ಒಂದು ಅಳತೆ ಟೇಪ್ ತಂದು ಶಶಿಯ ಉದ್ದಗಲ ಅಳೆದರು….

“ಉದ್ದ ಐದು ಅಡಿ…. ಅಗಲ ಮೂವತ್ತು ಅಂಗುಲ….” ನಿನ್ನೆ ಐದು ಅಡಿ ಎತ್ತರವಿದ್ದ ಹುಡುಗಿ, ಇಂದು ಐದು ಅಡಿ ಉದ್ದವಾಗಿ ಮಲಗಿದ್ದಾಳೆ.

ಸುದ್ದಿ ತಿಳಿದ ಒಂದಿಬ್ಬರು ಪರಿಚಿತರು, ಸಂಬಂಧಿಗಳೂ ಬಂದಿಳಿದರು. ಪೊಲೀಸರ ತನಿಖೆ ಪ್ರಾರಂಭ.

“ನೀವೇನಾಗಬೇಕು…. ಇದು ಶಶಿಯ ಅಕ್ಷರಾನ? ಹೆಣ ಗುರುತಿಸುತ್ತೀರಾ….. ಹುಡುಗಿ ಸ್ವಭಾವ ಹೇಗೆ?…. ಏಕೆ ಸತ್ತಳು….” ಇತ್ಯಾದಿ ಇತ್ಯಾದಿ.

“ಅಯ್ಯೋ ಹೋದವಾರ ಬಂದಿದ್ಲು. ಅದೇನಾಯ್ತೋ ಸಾಯೋಕೆ?….” ಅಚ್ಚರಿಯ ರಾಗ.

“ಎಡಗೈಯಲ್ಲಿ ಬರೀತಾ ಇದ್ದಳಾ?”

“ಹೌದು. ಎಲ್ಲ ಎಡಗೈಯಲ್ಲೇ….”

“ಈ ಹುಡುಗ ಯಾರು ಗೊತ್ತಾ?”

“ಹಾಂ, ಶಶಿ ಮನೆ ಪಕ್ಕದಲ್ಲೇ ಇದ್ದಾನೆ.”

“ಏನಾಗಬೇಕು?”

“ಸಂಬಂಧ ಏನೂ ಇಲ್ಲ?”

“ಲವ್ ಮಾಡ್ತಾ ಇದ್ರಾ?”

“ಗೊತ್ತಿಲ್ಲಪ್ಪ….”

ಬಂದವರೆಲ್ಲರ ತನಿಖೆ ವಿಚಾರಣೆ. “ಯಾರು ರವಿ. ಆ ಹುಡುಗಾನಾ? ಅವನಿಗೇನೋ ಮದುವೆಯಂತೆ, ಅದಕ್ಕೇ ಹೀಗಾಯಿತೆ?” ಗುಸು ಗುಸು ಪಿಸು ಮಾತು. “ಛೆ…. ಎಂಥಾ ಒಳ್ಳೆಯ ಹುಡುಗಿ ಹೀಗೆ ಮಾಡಿಕೊಳ್ಳುವುದೆ? ಒಬ್ಬಳೇ ಮಗಳು ಬೇರೆ….” ಅನುಮಾನ ಅನುಕಂಪಗಳ ಸುರಿಮಳೆ. ಬೇಸರದಿಂದ ರವಿ ಎದ್ದು ಬಾಗಿಲಿನ ಬಳಿ ಹೋದ….. ಕ್ಷಣ ಚೀರಿ ಹಾಗೇ ನಿಂತುಬಿಟ್ಟ. ಬಾಗಿಲು ಹಾಕದೆಯೇ ಪೋಸ್ಟ್ ಮಾರ್ಟಮ್ ನಡೆಯುತ್ತಿತ್ತು! ಶಶಿಯ ಕೋಮಲ ಶರೀರವನ್ನು ಕತ್ತರಿಸಿ ಒಗೆವ ಹದ್ದುಗಳಂತೆ ಕಂಡವು…. ಸುತ್ತಲಿನ ಬಿಳಿಯ ಕೋಟುಗಳು!

“ಒಂದು ಚಾಪೆ ಬಿಳಿ ಬಟ್ಟೆ ತನ್ನಿ….” ಪೇದೆ ಬಂದು ಹೇಳಿದ. “ಇಲ್ಲೇ ಆಸ್ಪತ್ರೆ ಹಿಂದೆಯೇ ಸಿಗುತ್ತೆ ಬೇಗ ತನ್ನಿ….”

ಅರ್ಧ ಗಂಟೆಯಲ್ಲಿ ಶಶಿಯನ್ನು ಚಾಪೆಯಲ್ಲಿ ಮೂಟೆಯಾಗಿ ಸುತ್ತಿ ತಂದು, ತುಕ್ಕು ಹಿಡಿದ ಸ್ಟ್ರೆಚರ್ ಮೇಲೆ ಹಾಕಿದರು. ಬರೀ ಮುಖವಷ್ಟೇ ಕಾಣುತ್ತಿತ್ತು. ಇಟ್ಟ ಸ್ಟಿಕರ್ ಬಿಂದಿ ಕೂಡ ಅಲುಗಿರಲಿಲ್ಲ. ಮೈಪೂರಾ ಮುದುಡಿ ಚಾಪೆಯಲ್ಲಿ ಮೂಟೆಯಾಗಿತ್ತು.

“ಹುಡುಗಿ ಅಮ್ಮ, ಮಾವ ಬರಬೇಕು. ಅವರಿಗೆ ಯಾರ ಮೇಲಾದ್ರೂ ಗುಮಾನಿ ಇದೆಯಾ ನೋಡಬೇಕು. ಅವರು ಏನು ಹೇಳ್ತಾರೆ ಅದರ ಮೇಲೆ ನಿರ್ಧಾರ ಆಗುತ್ತೆ….” ರವಿ ಏನನ್ನೂ ಹೇಳಲಾರದ ಸ್ಥಿತಿಯಲ್ಲಿ ಕುಳಿತ. ಇನ್ಸ್‌ಪೆಕ್ಟರ್ ಪೊಲೀಸ್ ಪೇದೆ ಅಲ್ಲೇ ಓಡಾಡುತ್ತಿದ್ದರು. ಹೆಣ ಸಾಗಿಸುವವರೆಗೂ ಅವರಿಗು ಬಿಡುಗಡೆ ಇಲ್ಲವಲ್ಲ.

ಸಂಜೆ ನಾಲ್ಕು ಗಂಟೆ. ಆಗಲೇ ಶವದ ಬಾಯಲ್ಲಿ ಕೆಂಪಗೆ ರಕ್ತ ಜಿನುಗುತ್ತಿತ್ತು. ಮೈ ಬಣ್ಣ ಕಪ್ಪಾಗಿ, ಸ್ವಲ್ಪ ಊದಿದ ಶವ, ಬಾಯಲ್ಲಿ ಒಸರಿದ ರಕ್ತ ಭಯ ಹುಟ್ಟಿಸಿತು. ಸಾವು ಎಂದರೆ ಇದೇ ಏನು? ಅಷ್ಟೆಲ್ಲ ರಮ್ಯವಾಗಿ ಚಿತ್ರಿಸಿದ ಸಾವು ಇಷ್ಟು ಭಯಂಕರವೆ? ಮುದ್ದು ಮುಖದ ನೆನಪುಗಳನ್ನು ತೊಳೆದು ಎಷ್ಟು ಭೀಭತ್ಸ ದೃಶ್ಯಗಳನ್ನು ಬಿಟ್ಟು ಹೋದಳು. ಯಾರದೋ ಕನಸುಗಳಿಗೆ ವಸ್ತುವಾಗುವ ಬದಲು, ‘ನೈಟ್‌ಮೇರ್’ ಆದಳಲ್ಲ. ಇನ್ನು ನೆನೆದಾಗೆಲ್ಲಾ ಶಶಿ, ರಕ್ತ ಒಸರುತ್ತಾ ಮೂಟೆಯಾಗಿ ಮಲಗಿದ ನಿರ್ಜೀವ ಮುಖವಾಗಿ ಕಾಡುತ್ತಾಳೆ.

ಶಶಿ ತಾಯಿ ಬಳ್ಳಾರಿಯಿಂದ ಬಂದಿಳಿದಾಗ ಗಂಟೆ ಐದು ದಾಟಿತ್ತು. ತಾಯಿಯ ಸ್ಥಿತಿಯಂತೂ ನೋಡುವಂತಿರಲಿಲ್ಲ. ಗಂಡನಿಲ್ಲದೆ, ಅಣ್ಣನ ಹಂಗಿಗೆ ಬಿದ್ದ ತಾಯಿಯ ಸಕಲ ಆಸೆಗಳಿಗೂ ಶಶಿ ಊರುಗೋಲಾಗಿದ್ದಳು. ಶಶಿಗೊಂದು ಕೆಲಸವಾಗಬೇಕು, ಮದುವೆಯಾಗಬೇಕು, ತನ್ನ ಮುಪ್ಪಿಗೆ ಆಸರೆಯಾಗಬೇಕು…. ಏನೆಲ್ಲ ಭರವಸೆ ಹೊತ್ತ ತಾಯಿಯ ಕನಸುಗಳು ಒಮ್ಮೆಗೇ ಸ್ಫೋಟಿಸಿ ಚಿಂದಿಯಾದವು. “ನೀನಿದ್ದೂ ಉಳಿಸಿಕೊಳ್ಳಲಿಲ್ಲವೇ ರವಿ….” ರವಿ ಗಳಗಳ ಅತ್ತುಬಿಟ್ಟ. ವಿದ್ಯುತ್ ಚಿತಾಗಾರ ಮುಚ್ಚುವ ಹೊತ್ತಿಗೂ ಹೆಣ ಬಿಟ್ಟುಕೊಡದೆ ಗೋಳಿಟ್ಟಳು. ಚಿತಾಗಾರದ ರೋಲರ್‍ಗಳ ಮೇಲೆ ಇಟ್ಟಿಗೆಯ ಗೂಡಿನೊಳಗೆ ಶಶಿಯ ಹೆಣ ಜಾರಿ, ಕಬ್ಬಿಣದ ಕದ ಮುಚ್ಚಿಕೊಂಡಿತು.

ಶಶಿ ಸತ್ತು ವಾರವಾಗಿದೆ. ಶಶಿಯ ತಾಯಿ ಏನೊಂದೂ ಗುಮಾನಿ, ಅನುಮಾನ ವ್ಯಕ್ತಪಡಿಸದ ಕಾರಣ, ಪೊಲೀಸ್ ಕೇಸ್ ಅಷ್ಟೇನೂ ಜಟಿಲವಿರಲಿಲ್ಲ. ಆದರೂ ದಿನಕ್ಕೊಮ್ಮೆ ಸ್ಟೇಷನ್ ಕಡೆ ಹೆಜ್ಜೆ ಹಾಕಿ ಬರಬೇಕಿತ್ತು. ಫೈಲ್ ಅಷ್ಟು ಬೇಗ ಮುಚ್ಚೋಲ್ಲ. ಕೈ ಬಿಸಿ…. ತಲೆ ಬಿಸಿ…. ಯಾರಿಗೆ ಗೊತ್ತು! ಒಂದು ದಿನ ಹೋಗದಿದ್ದರೂ “ಏನು ಬರಲೇ ಇಲ್ಲ….” ಎಂದು ತಪ್ಪಿಸಿಕೊಂಡ ಕೊಲೆಗಾರನನ್ನು ಹಿಡಿದು ಕೇಳುವ ರೀತಿ ಪ್ರಶ್ನೆಗಳು. ಹೆಚ್ಚೇನೂ ಆಗುವುದಿಲ್ಲ ತಿಳಿದಿತ್ತು. ಸಮಯ ಬೇಕಿತ್ತು. ಶಶಿಯ ಸಾವಿನ ಸುತ್ತ ಅಣಬೆಗಳಂತೆ ರಾತ್ರೋರಾತ್ರಿ ನೂರಾರು ಕತೆಗಳು ಹುಟ್ಟಿಕೊಂಡಿದ್ದವು. ರವಿ-ಶಶಿಯ ಕೂಡಿಸಿದ ಕತೆಗಳು. ಅವಳ ಹೊಟ್ಟೆಯನ್ನಂತೂ ಬಗೆದು ನೋಡಿದ್ದರು. ಹಾಗೇ ಅವಳೆದೆಯನ್ನೂ ತೆರೆದು ನೋಡುವಂತಿದ್ದರೆ! ನೂರೆಂಟು ಉಹಾಪೋಹಗಳು, ಇತ್ತೀಚೆಗೆ ತನ್ನ-ಸುಧಾಳ ‘ಎಂಗೇಜ್‌ಮೆಂಟ್’ ಮುರಿದದ್ದೂ ಸುದ್ದಿಯಾಗಿ ಹರಡಿತ್ತು. ಕತೆಗಳು ಮತ್ತಷ್ಟು ಪುಷ್ಟಿ ಪಡೆದು ದಷ್ಟಪುಷ್ಟವಾದವು.

ವಾರದ ಹಿಂದೆ ಸಾವಿನ ಸುತ್ತ ಗಸ್ತು ಹೊಡೆದ ಮನಸ್ಸಿಗೆ ಹೇಳಿಕೊಂಡ_ ‘ಅಂದು ಸಾಯಲು ಒಂದೇ ಒಂದು ಕಾರಣವಿತ್ತು. ಇಂದು ನೂರು ಕಾರಣಗಳಿವೆ….’ ಡ್ರಾಯರ್‍ನಲ್ಲಿ ಬಿರಡೆ ಬಿಗಿದು ತಣ್ಣಗೆ ಕುಳಿತ ಬಿಳಿಯ ಪುಡಿಯ ಶೀಷೆ ನೆನಪಾಗಿ ಬೆವೆತ. ಇನ್ನೆರಡು ದಿನಕ್ಕೆ ಸುಧಾಳ ಮದುವೆ. ಅವಳಿಗಾಗಿ ಬರೆದಿಟ್ಟ ಪತ್ರವಿನ್ನೂ ತನ್ನ ಡೈರಿಯಲ್ಲಿ ಹಾಗೇ ಮಲಗಿದೆ. ಆದರೆ ಏಕೋ ವಾರದ ಹಿಂದಿದ್ದ ಸಾವಿನ ಬಿಗಿ ನಿರ್ಧಾರ, ಎಳೆ ಎಳೆಯಾಗಿ ಹಿಂಜಿ ಸಡಿಲವಾಗಿದೆ.

ಇಂದು ಶಶಿ ಇಲ್ಲ. ಬಹುಶಃ ನಾಲ್ಕು ಸಾಲಿನ ಪತ್ರದೊಡನೆ ಇಪ್ಪತ್ತು ಮೂರು ವರ್ಷಗಳ ಸಂಬಂಧ ಮುಗಿಸಿಬಿಟ್ಟಿದ್ದಳು. ಸತ್ತು ಬೂದಿ ಆರುವ ಮೊದಲು ಶಶಿ ಇಲ್ಲವಾಗುತ್ತಾಳೆ ಎಂದುಕೊಂಡಳು. ಆದರೆ…. ಶಶಿ ಸಾವಿನಲ್ಲೂ ಬದುಕಿದ್ದಾಳೆ…. ಪ್ರೀತಿಸಿದವರ ಎದೆಯಾಳದಲ್ಲಿ ನೋವಾಗಿ…. ಸಿಹಿ ನೆನಪುಗಳ ಹುಗಿದು, ಭೀಭತ್ಸವಾಗಿ.

ರವಿ ರೂಮು ಸೇರಿಡ್ರಾಯರ್ ತೆಗೆದು ಬಾಟಲಿಯಲ್ಲಿದ್ದ ಬಿಳಿಯ ಸಯನೈಡ್ ಪುಡಿಯನ್ನೇ ಬಹಳ ಹೊತ್ತು ದಿಟ್ಟಿಸಿ ನೋಡಿದ. ಎಷ್ಟು ಬೇಗ ಎಲ್ಲ ಮುಗಿದುಹೋಯಿತು. ಶಶಿಯ ಎಲ್ಲ ಸಮಸ್ಯೆಗಳಿಗೂ ಉತ್ತರವಾಯಿತು. ಆದರೆ ಅವಳ ಸಾವು ತಂದಿಟ್ಟ ಸಮಸ್ಯೆಗಳು…. ನನ್ನ ಕೊಲ್ಲುತ್ತಿವೆ. ಶಂಕೆಯ ಕಣ್ಣುಗಳಿಗೆ, ಎತ್ತ ಬೇಕಾದರೂ ಹೊರಳಬಲ್ಲ ನಾಲಗೆಗಳಿಗೆ ನನ್ನ ಆಹಾರವಾಗಿ ಬಿಟ್ಟು ನಡೆದೇ ಬಿಟ್ಟಳು. ಗಂಡನನ್ನು ಕಳಕೊಂಡ ಅಣ್ಣನ ಹಂಗಿನಲ್ಲಿರುವ ತಾಯಿಯನ್ನು, ಮತ್ತದೇ ಹಂಗಿನ ಹಗ್ಗದಲ್ಲಿ ಬಿಗಿದು ನಡೆದೇಬಿಟ್ಟಳು. ‘ಹೇಳು ಶಶಿ…. ಯಾವ ಗುರಾಣಿ ಹಿಡಿಯಲಿ ಜನರ ಈಟಿ ನೋಟಕ್ಕೆ….’ ಸ್ವಗತವೆಂಬಂತೆ ಹೇಳಿಕೊಂಡ.

ಕ್ಷಣ ಯೋಚಿಸಿದ, ‘ನಾ ಸತ್ತೂ ಸಾಧಿಸುವುದೇನು? ನನ್ನದೇ ಜಾಗದಲ್ಲಿ ಸುಧಾಳನ್ನು ಕೂರಿಸಿ ಹೋಗುತ್ತೇನೆ. ಶಂಕೆಯ ಶಿಲುಬೆಯನ್ನು ಅವಳ ಹೆಗಲಿಗೆ ವರ್ಗಾಯಿಸಿ ಹೋಗುತ್ತೇನೆ. ಬದುಕುಳಿದವರಿಗೂ ಸಾವಿನ ನೆರಳಾಗಿ ಕಾಡುತ್ತೇನೆ. ಸಾಯುವ ಹಕ್ಕು ನಮಗಿರಬಹುದು. ಇತರರಿಗೆ ಇಷ್ಟು ನೋವುಣಿಸುವ ಹಕ್ಕೂ ಇದೆಯೆ? ಅವಳ ಸಾವು ಅವಳಿಗೆ ಪರಿಹಾರವಾಗಿತ್ತು. ಅದರೊಡನೆ ನಮ್ಮೆಲ್ಲರ ನೋವೂ ಅನಿವಾರ್ಯವಿತ್ತು ಎಂದು ತಿಳಿದೂ ಸಾಯುವುದು ಪರಮಸ್ವಾರ್ಥವಲ್ಲವೆ? ಎಲ್ಲವನ್ನು ತ್ಯಜಿಸಿ ನಾ ಸಾಯುತ್ತಿಲ್ಲ. ಎಲ್ಲವನ್ನೂ ಬಯಸಿ ಸಾಯುತ್ತಿರುವೆ. ಸಾವಿನ ಸಮೀಕರಣದಲ್ಲಿ ಇಲ್ಲದ ಆದರ್ಶಗಳ ತೂರಿಸುವುದು ಏಕೆ? ಅದು ಸಿಗಲಿಲ್ಲ, ಇದು ಸಿಗಲಿಲ್ಲ ಎಂದು ಮುನಿಸಿ ಊಟ ಬಿಡುವ ಮಗುವಿನಂತೆ ಶಶಿ ಜೀವಬಿಟ್ಟಳು. ಬದುಕಿನ ಎಲ್ಲ ಸೋಪಾನಗಳೂ ಸಾಫಾಗಿ ಏರುವಂತಿರಬೇಕು. ಎಲ್ಲಿ ಜಾರಿದರೂ ಎದ್ದು ಪ್ರಯತ್ನಿಸದೆ, ಅಲ್ಲಿಗೇ ನಿಲ್ಲಿಸಿ ಹಿಂತಿರುಗುವುದು ಹೇಡಿತನವೇ ಅಲ್ಲವೆ? ಬದುಕಲಾರದ ದೌರ್ಭಾಗ್ಯವನ್ನೂ ವೈಭವೀಕರಿಸುವುದೇಕೆ?’

ತಟ್ಟನೆ ರೂಮಿನ ದೀಪ ಹತ್ತಿ, ರವಿ ಬೆಚ್ಚಿದ. ದೀಪ ಹಚ್ಚಿದ ಅಪ್ಪ ಮೇಜಿನ ಬಳಿ ಬಂದು ಮೃದುವಾಗಿ ಕೇಳಿದರು.“ಕತ್ತಲಲ್ಲಿ ಏನು ಮಾಡ್ತಾ ಇದ್ದೀಯಾ….?” ಶೀಷೆಯನ್ನು ಡ್ರಾಯರ್ ಒಳಗೆ ನೂಕಿ “ಏನೂ ಇಲ್ಲಪ್ಪ….” ಮುಗ್ಧವಾಗಿ ಉತ್ತರಿಸಿದ. “ರವಿ ಸಾಯಲು ದೈರ್ಯ ಬೇಕು ನಿಜ. ಆದರೆ ಅದರ ಅರ್ಧದಷ್ಟು ಸಾಕಿತ್ತಲ್ಲ ಬದುಕಲು….” ಮೆಲ್ಲನೆ ಭುಜ ತಟ್ಟಿದರು. “ಬಾ ತಿಂಡಿ ತಿನ್ನು….” ಎಂದು, ಕಿಟಕಿಯ ಪರದೆ ಸರಿಸಿ ಒಳಗೆ ಹೋದರು.

‘ಸಾವಿನಲ್ಲಿ ಸುಖ, ಸಾವಿನ ಅಲೌಕಿಕ ಅನುಭವ, ಸಾವಿನ ಅನ್ವೇಷಣೆ, ಕನಸುಗಳೂ ಕದದದ ದೀರ್ಘ ನಿದಿರೆ…. ಎಷ್ಟೆಲ್ಲ ಪದಗಳು….. ಬರೀ ಖಾಲಿ ಖಾಲಿ ಪದಗಳು! ಶಶಿಗೆ ತಿಳಿದಿದ್ದರೆ…. ಸಾವು ಸತ್ಯ…. ಶವದ ಕೋಣೆಯಲ್ಲಿ ರಕ್ತ ಒಸರುತ್ತಾ ಒರಗಿದ ಸತ್ಯ…. ಹೊಟ್ಟೆ ಬಗೆದು ಚಾಪೆಯಲ್ಲಿ ಸುತ್ತಿಟ್ಟ ಭಯಂಕರ ಸತ್ಯ…. ತುಕ್ಕು ಹಿಡಿದ ಸ್ಟ್ರೆಚರ್ ಮೇಲೆ ನಿರ್ಜೀವವಾದ ಭೀಭತ್ಸ ಸತ್ಯ…. ಎಂದು ತಿಳಿದಿದ್ದರೆ, ಬಹುಶಃ ಶಶಿ ಸಯುತ್ತಿರಲಿಲ್ಲವೇನೋ! ಕೊನೆಗೆ ತಾ ಸಾಯುತ್ತಿರುವುದಾದರೂ ಏತಕ್ಕೆ…?’ ರವಿ ಗಲಿಬಿಲಿಗೊಂಡ. ‘ಪ್ರೇಮಕ್ಕೆ ಮದುವೆ….ಮೃತ್ಯು’ ಎರಡನೇ ಗುರಿ ಎಂಬ ಪೂರ್ವಗ್ರಹ ಪೀಡಿತ ಮನೋಭಾವ ಕಾರಣವೇ? ಇಲ್ಲ ಸುಧಾಳ ನಿರಾಕರಣೆಯಲ್ಲಿ ಆತ್ಮಾಭಿಮಾನಕ್ಕೆ ಪೆಟ್ಟುಬಿದ್ದು ತಾಳಲಾರದೆ ಸಾವಿನಲ್ಲಿ ಮುಖ ಮುಚ್ಚಿಕೊಳ್ಳುವ ಬಗೆಯೆ ಇದು? ನಾ ತ್ಯಜಿಸುತ್ತಿರುವುದು ಜಗತ್ತನಲ್ಲ, ನನ್ನ ನೋವುಗಳನ್ನು, ನೋವು ತಾಳದ ನಿಶ್ಯಕ್ತತೆಗೆ ಆದರ್ಶದ ಹೊದಿಕೆ!’ ಡೈರಿಯಲ್ಲಿಟ್ಟ ಮೂರೂ ಪತ್ರಗಳನ್ನು ತೆಗೆದು ಹರಿದು ಹಾಕಿದ. ಎದ್ದು ಬಾಲ್ಕನಿಗೆ ಬಂದ. ಮೇ ತಿಂಗಳು…. ಗುಲ್ ಮೊಹರ್ ಹಾದಿ ಬೀದಿಗಳಲ್ಲಿ ಕೆಂಪಾಗಿ ಅರಳಿ ನಿಂತಿತ್ತು. ಸಂಜೆ ಸುಂದರವಾಗಿ ಕಂಡಿತು. ಕೆಂಪು ಸೂರ್ಯ, ನೀಲಿ ಆಕಾಶ, ಬಿಳಿಯ ಹಕ್ಕಿಗಳು…. ಇವೆಲ್ಲ ಬಿಟ್ಟು ಹೋಗಲು ನಿರ್ಧರಿಸಿದ್ದಾದರೂ ಹೇಗೆ ಅಚ್ಚರಿಗೊಂಡ. ‘ಒಮ್ಮೆ ಸಾವನ್ನು ಸ್ಪರ್ಶಿಸಿ ಸಮೀಪ ನಿಂತು ಸಂಭಾಷಿಸಿ ಬರೆದಿದ್ದೇನೆ… ಬಹುಶಃ ಬದುಕನ್ನು ಯಾರೂ ಪ್ರೀತಿಸದಷ್ಟು ಗಾಢವಾಗಿ ನಾ ಪ್ರೀತಿಸಬಲ್ಲೆ’ ಹೇಳಿಕೊಂಡಂತೆ ಮನಸ್ಸು ಹಗುರವಾಯಿತು.

ಪುಟ್ಟ ಸೀಸೆಯನ್ನು ಹೊರತಂದು, ಕಿಟಕಿಯಾಚೆಗೆ ದೂರ ಎಸೆದ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.