ಸಾಯಂಕಾಲ ಐದೂವರೆ ಹೊತ್ತಿಗೆ ಸೋಂಪಗೌಡರ ಮನೆಯ ಸೈರನ್ ಕಿವಿ ತೂತಾಗುವಂತೆ ‘ಕೊಂಯ್ಯೋ…’ಎಂದು ಕೂಗತೊಡಗಿದಾಗ ಕಾಡೆಮನೆ ಲಿಂಗಪ್ಪಣ್ಣನ ಮನಸ್ಸು ವ್ಯಗ್ರವಾಗಿ ಸಿಟ್ಟು ಏರುತ್ತಾ ಏರುತ್ತಾ ತಾರಕಕ್ಕೆ ಮುಟ್ಟಿ ಮುಖ ಕೆಂಪೇರಿ ಗಂಟಲುಬ್ಬಿತು! ಸೈರನ್ ಕೂಗಿನಿಂದ ಸ್ಪೂರ್ತಿ ಪಡೆದ ಲಿಂಗಪ್ಪಣ್ಣನ ನಾಯಿ ಟೈಗರ್, ಸೈರನ್ ಕೂಗಿನೊಂದಿಗೆ ಸ್ಪರ್ಧೆಗಿಳಿದಂತೆ ಊಳಿಡತೊಡಗಿದಾಗ ಲಿಂಗಪ್ಪಣ್ಣನ ಸಿಟ್ಟು ಸ್ಫೋಟಗೊಂಡು ಬೈಗುಳಗಳಾಗಿ ಸಿಡಿಯತೊಡಗಿತು, “ಥೆಕ್; ಈ ಅಪಶಕುನದ ಅರೆಬ್ಬಾಯಿ, ಯಾವ ಕುಂಭಕರ್ಣನ ಎಬ್ಬಿಸಿಕೇಂತ?… ಇದರ ಶನಿ ಹಿಡಿಯ. ಇದರೊಟ್ಟಿಗೆ ಈ ಹಡಬೆ ನಾಯಿನೂ….” ಲಿಂಗಪ್ಪಣ್ಣ ಹಲ್ಲುಕಚ್ಚಿ ಕಿವಿ ಮುಚ್ಚಿಕೊಂಡರು. ಲಿಂಗಪ್ಪಣ್ಣನ ಅರಚಾಟ ಕೇಳಿದ ಜಾನಕಿ, “ಹಾಂ…. ಇವರ್ದ್ ಸುರಾತ್…ಈ ಸ್ಯೊರನೂ…ಇವರ ಬೊಬ್ಬೆನೂ. ಈ ನಾಯಿನೂ….ನನ್ನ ಜಲ್ಮಕ್ಕೆ ಸಾಕ್.” ಎಂದು ಗೊಣಗುತ್ತಾ ತೋಟದ ಕೆಲಸದವರು ಸೈರನ್ ಕೇಳಿ ಕೆಲಸ ಬಿಟ್ಟು ಬರುತ್ತಾರೆಂಬ ಗಡಿಬಿಡಿಯಲ್ಲಿ ಕಾಫಿ, ತಿಂಡಿಯ ತಯಾರಿಗೆ ಅಡುಗೆ ಕೋಣೆ ಹೊಕ್ಕರು. ಕೋಪ, ಅಸಹನೆ, ಅಸಹಾಯಕತೆಯಿಂದ ಕುದಿಯುತ್ತಿದ್ದ ಲಿಂಗಪ್ಪಣ್ಣ ದರ್ಶನ ಬಂದವರಂತೆ ಅಂಗಳದಲ್ಲಿ ತಕಧಿಮಿ ಕುಣಿಯುತ್ತಾ ಚಡಪಡಿಸತೊಡಗಿದರು. ಸೈರನ್ ಧ್ವನಿ ಏರುತ್ತಾ ಜೋರಾಗುತ್ತಿದ್ದಂತೆ ಲಿಂಗಪ್ಪಣ್ಣನ ಬಯ್ಗಳ ಅಶ್ಲೀಲತೆಯ ಆಯಾಮ ಪಡೆಯಿತಾದರೂ, ಸೈರನ್ ಭೋರ್ಗರೆವ ಶಬ್ದಕ್ಕೆ ಯಾವುದೂ ಕೇಳದಂತಾಯಿತು. ಟೈಗರ್ ನಾಯಿ ಊಳಿಡುವುದೂ ಕೇಳದಂತಾಯುತು. ಜೊತೆಗೆ ಟಾಮಿ ನಾಯಿಯೂ ಸೇರಿಕೊಂಡು ಊಳಿಡತೊಡಗಿದ್ದು, ಆಕಾಶಕ್ಕೆ ಮೊಗ ಮಾಡಿದ ಅದರ ಮೂತಿಯಿಂದ ಮಾತ್ರ ಗೊತ್ತಾಗುವಂತಿತ್ತು.
ಸೈರನ್ ಕೇಳಿ ನಾಯಿಗಳು ಊಳಿಡುವುದು ಲಿಂಗಪ್ಪಣ್ಣನ ಮನೆಯಲ್ಲಿ ಮಾತ್ರ ಅಲ್ಲ! ಮೊದಲಿಗೆ ಸೋಂಪಗೌಡರ ಮನೆಯ ಆಲ್ಸೇಶನ್ ನಾಯಿ ‘ಜಿಮ್ಮಿ’ ಸೈರನ್ ಆರಂಭವಾಗುತ್ತಿದ್ದಂತೆ ಅದರ ಎದುರು ಮಹಾಭಕ್ತನೊಬ್ಬ ದೇವರ ಮುಂದೆ ಮೊಣಕಾಲೂರಿ ಬೇಡಿಕೊಳ್ಳುವಂತೆ ಕುಳಿತು ಊಳಿಡಲು ಆರಂಭಿಸುತ್ತದೆ. ಪ್ರತಿ ಬೇಟೆಯಲ್ಲೂ ‘ಜಿಮ್ಮಿ’ ಯನ್ನೇ ನಾಯಕನೆಂದು ಒಪ್ಪಿಕೊಂಡಿರುವ ರೂಬಿ, ಸಿಂಗ, ಜೂಲಿ ಮತ್ತು ಮರಿನಾಯಿಗಳು ‘ಜಿಮ್ಮಿ’ಯನ್ನು ಅನುಸರಿಸಿ ಸಾಮೂಹಿಕವಾಗಿ ಊಳಿಡತೊಡಗುತ್ತವೆ. ಇದನ್ನು ಕೇಳಿದ ಸೋಂಪಗೌಡರ ತೋಟದ ಪಕ್ಕದ ತೋಟದ ಲಿಂಗಪ್ಪಣ್ಣನ ಟೈಗರ್ ಉತ್ಸಾಹಗೊಂಡು ಊಳಿಡತೊಡಗುತ್ತವೆ. ಜೊತೆಯಲ್ಲಿ ಅದರ ಸಂಗಾತಿ ಟಾಮಿಯೂ! ಇದನ್ನು ಕೇಳಿದ ಇತರ ಮನೆಗಳ ನಾಯಿಗಳೂ ತಾವೂ ಈ ಕೋರಸ್‌ನಲ್ಲಿ ಸೇರಿಕೊಳ್ಳುತ್ತವೆ. ಈ ಸಾಮೂಹಿಕ ಆಲಾಪನೆ ಮನೆಯಿಂದ ಮನೆಗೆ ಮಿಂಚಿನಂತೆ ಹಬ್ಬುತ್ತಾ ಅನುರಣಿಸಿದಾಗ ಆ ಗ್ರಾಮ ಇಡೀ ನಿಸ್ಸಹಾಯಕತೆಯಿಂದ ಅನಾಥವಾಗಿ ರೋಧಿಸುವಂತಿರುತ್ತದೆ. ಎಲ್ಲ ತೋಟಗಳ ಯಜಮಾನರೂ ಸಿಟ್ಟು, ಅಸಹನೆಯಿಂದ ಏನೂ ಮಾಡಲಾಗದೆ ನಾಯಿಗಳಿಗೆ ಶಪಿಸುತ್ತಾರೆ. ಆ ಹೊತ್ತಲ್ಲಿ ಯಾರು ಏನು ಮಾತಾಡಿದರೂ ಯಾರಿಗೂ ಕೇಳಿಸದು. ಎಲ್ಲರೂ ಕಿವಿಮುಚ್ಚಿ ತಮ್ಮಷ್ಟಕ್ಕೇ ಗೊಣಗುತ್ತಿರುವುದು ಎಲ್ಲ ಮನೆಗಳ ಸಾಮಾನ್ಯ ದೃಶ್ಯವಾಗಿರುತ್ತಿತ್ತು.
ಸೈರನ್ ಕಿವಿ ಹರಿದು ಹೋಗುವಂಥ ಸದ್ದಿನೊಂದಿಗೆ ನಾಯಿಗಳ ಊಳಿಡುವ ಕೋರಸ್ ಸೇರಿ ಉಳಿದೆಲ್ಲ ನಿತ್ಯದ ಶಬ್ದಗಳೂ, ಮಾತುಗಳೂ ಕೇಳಿಸದಿದ್ದಾಗ ಲಿಂಗಪ್ಪಣ್ಣನ ಹೆಗಲಲ್ಲಿದ್ದ ಬೈರಾಸನ್ನು ಕಿವಿಗಳೆರಡೂ ಮುಚ್ಚಿಕೊಂಡಂತೆ ತಲೆಗೆ ಗಟ್ಟಿಯಾಗಿ ಬಿಗಿದುಕೊಂಡರು. ಕೆಲನಿಮಿಷ ಕಣ್ಣುಮುಚ್ಚಿ ಧ್ಯಾನಸ್ಥನಂತೆ ಕುಕ್ಕರು ಕುಳಿತ ಲಿಂಗಪ್ಪಣ್ಣ ಸೈರನ್ ಧ್ವನಿ ಇಳಿಮುಖ ಆಗುತ್ತಿದ್ದಂತೆ, ಮತ್ತೆ ಬೈಗುಳ ಚೆಲ್ಲತೊಡಗಿದರು. “ಅವ್ಕೇ…..ಸಂಬಳಕ್ಕೆ ಸರಿ ಕೆಲಸ ಮಾಡ್ದು ಬೇಡಾಂತ ಇರ್ದು; ಊರವ್ಕೆ ಯಾಕೆ ಉಪದ್ರಾ? ಕೆಲ್ಸದವರ ಇಸುವಲ್ಲೇ ಇಸೊಕು! ಅಲ್ಲ; ಐದ್…. ಐದೂವರೆ ಗಂಟೆಗೆ ಕೆಲ್ಸ ಕೈದ್ ಮಾಡ್ದೂಂತ ಹೇಳ್ರೆ. ಹೇಂಗೆ ಬದುಕುದು? ದುಡ್ಡುನ ಹಂಕಾರದವು….ಒಟ್ಟಾರೆ ಈ ಊರುಲಿ ಹೇಳೊವು ಕೇಳೊವು ಯಾರೂ ಇಲ್ಲೇಂತಾವುಟ್ಟು….” ಸೈರನ್ ಆರ್ಭಟ ತಗ್ಗಿ ನಿಂತರೂ ಕಿವಿಯೊಳಗೆ ಇನ್ನೂ ‘ಗುಂಯಿ’ ಎನ್ನುತ್ತಿದ್ದುದರಿಂದ ಏನೇನೂ ಕೇಳಿಸದೆ ಕೆಪ್ಪನಂತಾದ ಲಿಂಗಪ್ಪಣ್ಣ. ಮೇಲಕ್ಕೆ ಮೊಗ ಮಾಡಿದ ನಾಯಿಗಳ ಮೂತಿ ನೋಡಿದಾಗಲೇ ಅವಿನ್ನೂ ಊಳಿಡುತ್ತಿವೆಯೆಂದು ಗೊತ್ತಾಗಿ. ಕಲ್ಲೊಂದನ್ನು ಎತ್ತಿ ನಾಯಿಗಳತ್ತ ಹುಚ್ಚನಂತೆ ಎಸೆದರು. ಅಂಗಳದ ತುದಿಯಲ್ಲಿ ಲಿಂಗಪ್ಪಣ್ಣನ ಕಟ್ಟಿದ ಹುಂಜ ‘ಕೆಮ್ಮೈರ’ ತಪಸ್ಸಿಗೆ ನಿಂತತೆ ಒಂಟಿಕಾಲಲ್ಲಿ ನಿಂತು ಕತ್ತನ್ನು ನೀಳ ಚಾಚಿ ತಲೆ ಕೊಂಚ ಆನಿಸಿ ಈ ಭಯಂಕರ ಶಬ್ದ, ಕಿರುಚಾಟ ಏನೆಂದು ಪ್ರಶ್ನಾರ್ಥಕವಾಗಿ ನೋಡುತ್ತಿತ್ತು. ಲಿಂಗಪ್ಪಣ್ಣ ಎಸೆದ ಕಲ್ಲು ಗುರಿ ತಪ್ಪಿತನ್ನ ಪಕ್ಕದಲ್ಲೇ ಸಿಡಿದು ಭೂಕಂಪವಾದಂತೆ ಭಾಸವಾಗಿ ಬೆದರಿದ ಹುಂಜ ರೆಕ್ಕೆ ಬಿಚ್ಚಿ‘ಕತ ಕತ’ ಎನ್ನುತ್ತಾ ಒಮ್ಮೆ ಮೇಲೆ ಎತ್ತರಕ್ಕೆ ಹಾರಿ, ಜಾನಕಿ ಕರಂಡೆ ಉಪ್ಪಿನಕಾಯಿಗೆಂದು ಒಣಗಲು ಚಾಪೆಯಲ್ಲಿ ಹರಡಿದ ಮೆಣಸಿನಕಾಯಿ ಮೇಲೆ ವಿರಮಿಸಲು ಯತ್ನಿಸಿ ಮೆಣಸೆಲ್ಲಾ ಚೆಲ್ಲಾಪಿಲ್ಲಿಯಾದಾಗ ಗಲಿಬಿಲಿಗೊಂಡು ಹಾರುತ್ತಾ. ಜಾರುತ್ತಾ ಹೇಗೇಗೋ ಓಡಿ ಮನೆಯಾಚೆ ಹಟ್ಟಿಯ ಹಿಂದೆ ಎಲ್ಲೋ ಮರೆಯಾಯಿತು.
ಕಳೆದ ಸೆಪ್ಟಂಬರ್‌ನಲ್ಲಿ ಸೋಂಪ ಗೌಡರು ಅವರ ಪತ್ನಿ ಹೊನ್ನಮ್ಮನವರೊಂದಿಗೆ ತಮ್ಮ ಭಾವ ಅಂದರೆ ಹೊನ್ನಮ್ಮನವರ ಅಣ್ಣನಿರುವ ದೆಹಲಿಗೆ ಹೋಗಿದ್ದರು. ಅಲ್ಲಿಂದ ಕಾಶಿ, ರಾಮೇಶ್ವರ ಪುಣ್ಯಕ್ಷೇತ್ರಗಳಿಗೆ ಭೇಟಿಯಿತ್ತು ಹೊರಡುವಾಗ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಭಾವನವರು ತೋಟದ ಕೆಲಸದವರನ್ನು ಮಧ್ಯಾಹ್ನ, ಸಂಜೆ ಊಟ ಕಾಫಿಗೆ ಕರೆಯುವುದು ಸುಲಭವಾಗಲೆಂದು ಕಾರ್ಖಾನೆಗಳಲ್ಲಿ ಸಮಯಸೂಚಕವಾಗಿ ಕೂಗುವಂಥ ಸೈರನ್ ಒಂದನ್ನು ಗೌಡರಿಗೆ ಒತ್ತಾಯಪೂರ್ವಕ ಕೊಡಿಸಿದ್ದರು. ಸೋಂಪ ಗೌಡರಿಗೇನೋ ಇದಿಷ್ಟು ಉಪಯೋಗಕ್ಕೆ ಬಂದೀತೆಂದು ಆಗ ಅನ್ನಿಸಿರಲಿಲ್ಲ. ಆದರೂ ಭಾವನವರ ಪ್ರೀತಿಗಾಗಿ ತೆಗೆದುಕೊಂಡಿದ್ದರು. ಗೌಡರಿಗೆ ತಮ್ಮ ತೋಟದ ಕೆಲಸದವರನ್ನು ಮಧ್ಯಾಹ್ನ, ಸಂಜೆ, ಊಟ ಕಾಫಿಗೆ ಕರೆಯುವುದು ನಿಜವಾಗಿಯೂ ಒಂದು ತಲೆಬೇನೆಯಾಗಿತ್ತು. ಈಗ ಹಿಂದಿನಂತಲ್ಲ; ಮೊದಲಿದ್ದ ಗದ್ದೆಗಳೆಲ್ಲವಕ್ಕೆ ಅಡಿಕೆ ಗಿಡ ಹಾಕಿ ಮೈಲುದ್ದ ತೋಟವೇ ಆಗಿರುವುದರಿಂದ ತೋಟದ ತುದಿಯಲ್ಲೆಲ್ಲೋ ಕೆಲಸಮಾಡುತ್ತಿರುವವರನ್ನು ಕರೆಯಬೇಕಾದರೆ ಕೂಗು ಹಾಕಿ ಹಾಕಿ ಗಂಟಲು ನೋಯುತ್ತಿತ್ತು. ಈಗಂತೂ ತೋಟಕ್ಕೆ ನೀರು ಹಾರಿಸುವ ಸ್ಟ್ರಿಂಕ್ಲರ್‌ಗಳ ಸದ್ದಿನೊಂದಿಗೆ ಇವರ ಕೂಗು ಆರ್ತನಾದದಂತೆ ಕೇಳಿಸುತ್ತಿತ್ತು. ಅಲ್ಲದೆ ಗೌಡರ ತೋಟದ ಕೆಲಸಕ್ಕೆ ಬರುವವರು ಏಳೆಂಟು ಮೈಲು ದೂರದ ಅರಂಬೂರು ಕಡೆಯವರಾದ್ದರಿಂದ ಗೌಡರು ಮೊದಲಿನಿಂದಲೂ ಸಂಜೆ ಸರಿಯಾಗಿ ಐದೂವರೆ ಗಂಟೆಗೆ ಕೆಲಸ ನಿಲ್ಲಿಸುವಂತೆ ಹೇಳಿ ಕಳಿಸುತ್ತಿದ್ದರು. ಸುತ್ತಮುತ್ತಲಿನ ತೋಟಗಳಲ್ಲಿ ಆರೂವರೆ ಆರು ಮುಕ್ಕಾಲಾದರೂ ಕೆಲಸ ಕೈಲಾಗದಿದ್ದರೂ, ಸೋಂಪ ಗೌಡರೇಕೋ ಈ ಪರಿಪಾಠ ಬೆಳೆಸಿದ್ದರು. ಬೆಳಿಗ್ಗೆ ಒಂಭತ್ತು ಗಂಟೆಗೆ ಕೆಲಸ ಆರಂಭವಾದರೆ ಮಧ್ಯಾಹ್ನ ಒಂದೂವರೆಗೆ ಮನೆಯವರೆಲ್ಲ ಊಟಕ್ಕೇಳುವ ಹೊತ್ತಿಗೇ ಸರಿಯಾಗಿ ಕೆಲಸದವರಿಗೂ ಊಟ. ಆಮೇಲೆ ಎರಡು ಗಂಟೆಯಿಂದ ಐದೂವರೆವರೆಗೆ ಕೆಲಸ, ಮತ್ತೆ ಸಂಜೆ ಕಾಫಿಯಾಗಿ ಕೆಲಸದವರು ಹೊರಡುತ್ತಾರೆ. ಹೀಗೆ ಬೆಳಿಗ್ಗೆ ಒಂಭತ್ತಕ್ಕೆ ಗೌಡರ ಸೈರನ್ ಕೂಗಿದರೆ ಮತ್ತೆ ಸರಿಯಾಗಿ ಮಧ್ಯಾಹ್ನ ಒಂದೂವರೆಗೆ ಕೂಗುತ್ತದೆ, ಬಳಿಕ ಸಂಜೆ ಐದೂವರೆಗೆ ಕೊನೆಯ ಕೂಗು. ಸೈರನ್ ಸಾಧಾರಣ ಮೂರು ನಾಲ್ಕು ಮೈಲು ಸುತ್ತಳತೆಗೆ ಕೇಳುವಷ್ಟು ಜೋರಾಗಿದೆ ಬೇರೆ.
ಮೊದಮೊದಲು ಈ ಸೈರನ್ ಕೂಗಿನಿಂದ ಎಲ್ಲರೂ ಮೋಜು ಪಡೆಯುತ್ತಿದ್ದರು. ಅದೊಂದು ಹೊಸ ತಮಾಷೆಯ ಸಂಗತಿಯಾಯಿತು. ಚಿಕ್ಕ ಮಕ್ಕಳಂತೂ ಸೈರನ್‌ನೊಂದಿಗೇ ಕಿರುಚಾಡುತ್ತಾ ಕುಣಿದಾಡುತ್ತಾರೆ. ಬೆಳಿಗ್ಗೆ ಒಂಭತ್ತೂಕಾಲಕ್ಕೆ ಸುಳ್ಯಕ್ಕೆ ಹೊರಡುವ ಎರಡನೆ ಟ್ರಿಪ್ಪಿನ ಅವಿನಾಶ್ ಬಸ್ಸಲ್ಲಿ ಶಾಲೆಗೋ, ಕಾಲೇಜಿಗೋ, ತಾಲ್ಲೂಕಾಫೀಸಿಗೋ, ಸೊಸೈಟಿಗೋ, ಕೇಪಿನ ಬೆಡಿಯ ಚರೆಮದ್ದಿಗೋ ಅಥವಾ ‘ಹೀಂಗ ಸುಮ್ಮಂಗೆ’ ಹೊರಟವರಿಗೋ, ಎಲ್ಲರಿಗೂ ಒಂಭತ್ತರ ಸೈರನ್ ಕೇಳಿದೊಡನೆ ಗಡಿಬಿಡಿಯೋ ಗಡಿಬಿಡಿ. ಮನೆಯಲ್ಲೇ ಕೂತು ಬೀಡಿ ಕಟ್ಟಿ ಸಂಜೆ ಐದೂವರೆಗೆ ಸೈರನ್ ಕೇಳಿದೊಡನೆ ಕೆಲಸ ನಿಲ್ಲಿಸಿ, ಅಂದವಾಗಿ ಶೃಂಗಾರ ಮಾಡಿ ಬೀಡಿಯ ಪ್ಲ್ಯಾಸ್ಟಿಕ್ ಬ್ಯಾಗ್‌ನೊಂದಿಗೆ ಬ್ರೇಂಚ್‌ಗೆ ಹೋಗುವ ಹುಡುಗಿಯರನ್ನೂ, ಶಾಲೆ ಕಾಲೇಜಿನಿಂದ ಐದೂಮುಕ್ಕಾಲರ ಬಸ್ಸಲ್ಲಿ ಬಂದಿಳಿವ ಹುಡುಗಿಯರನ್ನೂ ಏನಾದರೂ ಕಾರಣ ಹುಡುಕಿ ಮಾತಾಡಿಸಲು ತವಕಿಸುವ, ಎಸ್ಸೆಲ್ಸಿಯಲ್ಲಿ ನಾಲ್ಕನೇ ಬಾರಿಗೆ ಓದುತ್ತಿರುವ ಮೇಗಡೆಮನೆ ಕೃಷ್ಣ, ಕಾನದ ಸುರೇಶ, ಕಲ್ಲರ್ಪೆ ಜಗ್ಗ ಮುಂತಾದ ಹುಡುಗರು, ಸೈರನ್ ಕೂಗುತ್ತಿದ್ದಂತೆ ತಲೆ, ಎದೆಯೊಳಗೆ ಏನೋ ಹರಿದಾಡಿದಂತಾಗಿ ಯಾರದೋ ಮಾತಿಗೆ ಏನೇನೋ ಉತ್ತರಿಸುತ್ತಾ, ನಗಬಾರದ್ದಕ್ಕೆ ನಗುತ್ತ ಆಚೀಚೆ ಸುಳಿದಾಡುತ್ತಾರೆ. ಬೆತ್ತಕ್ಕೋ, ಬಿದಿರುಗಳೆಗೋ, ಮೊಜೆಂಟಿ, ಕೋಲ್ಜೇನು ಹುಡುಕಿ ಹೊರಟವರೋ ಅಥವ ಹೊಟ್ಟ ಹೊಡಿಯಲು ಕೇಪಿನ ಬೆಡಿಯೊಂದಿಗೆ ಹೋದವರೋ ಎಲ್ಲರೂ ಸಂಜೆ ಸೈರನ್ ಕೇಳಿದ ಕೂಡಲೆ ಎಲ್ಲ ಬಿಟ್ಟು ಕಾಡಿನಿಂದ ಇಳಿಯಲು ಶುರುಮಾಡುತ್ತಾರೆ. ಗುಡ್ಡೆಗೆ ಮೇಯಲು ಹೋದ ದನಕರುಗಳಿನ್ನೂ ಬಾರದಿದ್ದರೆ ಸೇಸನಂಥವರು ಪುರುಪುರೂಂತ ಕಾಡಿನತ್ತ ತೆರಳಿ ಬೇಗ ಬೇಗ ಹೊಡಕೊಂಡು ಬರುತ್ತಾರೆ. ಆದರೆ ಈಗ, ಸೈರನ್ ಕೇಳಿದರೆ ಸಾಕು. ದನಕರು ಅವಾಗಿ ಗುಡ್ಡೆ ಇಳಿದು ಹಟ್ಟಿಗೆ ಕೂಡಲು ಬರುವುದರಿಂದ ಸೇಸ ಉದ್‌ಗಿಲ್ ಮೇಲೆ ಕೈ ಇಟ್ಟು ಬೀಡಿ ಹೊಗೆ ಬಿಡುತ್ತಾ ಖುಶಿಯಾಗಿರುತ್ತಾನೆ.
ಸೈರನ್ನೊಂದಿಗೆ ಊರಿನ ಎಲ್ಲರ ಮನೆಯ ನಾಯಿಗಳೂ ಊಳಿಡುವುದು ಆರಂಭದಲ್ಲಿ ಮೋಜೆನಿಸಿ ಕ್ರಮೇಣ ಎಲ್ಲರಿಗೂ ಕಿರಿಕಿರಿಯೆನಿಸತೊಡಗಿತು. ಉಳಿದೆಲ್ಲಾ ತೋಟಗಳ ಕೆಲಸದವರೂ ಸೈರನ್ ಶಬ್ದದಿಂದ ಮುದಗೊಳ್ಳುತ್ತಾ ಐದೂವರೆಗೇ ಕೆಲಸ ನಿಲ್ಲಿಸಿ ಮನೆಗೆ ಹೋಗುವುದು ರೂಢಿಯಾಗತೊಡಗಿತು.
ಅರಂಬೂರು, ಅಜ್ಜಾವರ, ಕಲ್ಲುಮಕ್ಕಿ ಕಡೆಗಳಿಂದ ಬರುವ ಮೂರು ಮಣ್ಣಿನ ರಸ್ತೆಗಳೂ ಸೇರುವ ಜಂಕ್ಷನ್‌ನಲ್ಲಿ ‘ಜಯಲಕ್ಷ್ಮಿ ಭವನ’ ಎಂಬ ಹೋಟೆಲು ನಡೆಸುತ್ತಿರುವ ಶಂಭಟ್ಟರಿಗೂ ಸೈರನ್ ಸದ್ದು ಕೇಳಿದೊಡನೆ ಬಿ.ಪಿ ಏರಲಾರಂಭಿಸುತ್ತದೆ. ಕಲ್ಲುಮಕ್ಕಿ ಕಡೆಯ ಶೀನ ಎಂಬ ಹುಡುಗನನ್ನು ಕ್ಲೀನಿಂಗ್ ಕಂ ಕುಕ್ಕಿಂಗ್ ಕೆಲಸಕ್ಕಿಟ್ಟುಕೊಂಡಿರುವ ಶಂಭಟ್ಟರ ಹೋಟೆಲಿಗೆ ವ್ಯಾಪಾರ ಚೆನ್ನಾಗಿದೆ. ಮಗ ಸುಳ್ಯದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ. ಹೋಟೆಲ್ನ ಹಿಂಬದಿಯಲ್ಲೇ ಇರುವ ಭಟ್ಟರ ಮನೆ ನೋಡಿದರೆ ಭಟ್ಟರು ಗಟ್ಟಿ ಆಗಿದ್ದಾರೆ ಎನ್ನಬಹುದು. ಪ್ರತಿದಿನ ಗಂಟೆ ಏಳಾದರೂ ಶೀನನಿಗೆ ಕೆಲಸದಿಂದ ಬಿಡುಗಡೆಯಾಗುತ್ತಿರಲಿಲ್ಲ. ಬೆಳಿಗ್ಗೆ ಏಳಕ್ಕೆ ಆರಂಭವಾಗುವ ಕ್ಲೀನಿಂಗ್ ಕಂ ಕುಕ್ಕಿಂಗ್ ಕೆಲಸ ಸಂಜೆ ಆರರ ತನಕ, ಎಂದು ಮೊದಲಿಗೆ ಇದ್ದ ನಿಯಮ ಈಗೀಗ ಗಂಟೆ ಏಳಾದರೂ ಮುಗಿಯುತ್ತಿರಲಿಲ್ಲ. ಶೀನನಿಗೆ ಕೈಕಾಲೆಲ್ಲ ನೀರಿನಲ್ಲಿ ತೊಯ್ದು ತೊಯ್ದು ಹುಳುಕಡಿತ ಆರಂಭವಾಗಿದೆ. ಕತ್ತಲಾದಂತೆ ಶೀನನಿಗೆ ದೂರದ ಮನೆ ತವಕ. ಆದರೆ ಶಂಭಟ್ಟರು ಏನಾದರೂ ಕೆಲಸ ಹೇಳಿ ತಡ ಆಗುವಂತೆ ಮಾಡುತ್ತಿದ್ದರು. ಸಮಯ ನೋಡಲು ಅರಿಯದ ಶೀನ ಸೂರ್ಯನನ್ನೇ ನಂಬಿದವ.
ಆದರೆ ಈಗ ಸೈರನ್ ಸದ್ದು ಕೇಳಿದೊಡನೆ ಶೀನನ ಕಿವಿ ನಿಮಿರುತ್ತದೆ. ಇನ್ನು ಕೆಲ ಹೊತ್ತಲ್ಲಿ ಕೆಲಸಕ್ಕೆ ಬಿಡುಗಡೆ ಎಂಬ ಆಶೆ. ಆರು ಗಂಟೆಯಾಗುತ್ತಿದ್ದಂತೆ ಶೀನ ಹೊರಡುವ ತಯಾರಿಯಾಗಿ ಕೈಕಾಲು ತೊಳೆದುಕೊಳ್ಳುವುದು, ಭಟ್ಟರಿಗೆ, ಈಗೀಗ ಭಯಂಕರ ಸಿಟ್ಟು ಬರಿಸುತ್ತಿತ್ತು. ಏನಾದರೂ ಮಾಡಿ ಕೆಲಸ ಮುಂದುವರಿಸುವಂತೆ ಇನ್ನೇನೋ ಹೆಚ್ಚಿನ ಕೆಲಸ ಹೇಳಿದರೆ, ಶೀನ-ಗೌಡರ ಮನೆಯ ಸೈರನ್ ಆಗಲೇ ಆಯಿತಲ್ಲಾ? ಎನ್ನುವುದು ಭಟ್ಟರಿಗೆ ಎದುರು ಮಾತಾಡಿದಂತಾದರೂ, ಭಟ್ಟರು ಕೊಡುವ ಸಂಬಳಕ್ಕೆ ಯಾರೂ ಸಿಗದ ಕಾರಣ ಸುಮ್ಮನೆ ಗುರುಗುಟ್ಟುತ್ತಿದ್ದರಷ್ಟೇ. ಆದರೂ ಹಾಗೂ ಹೀಗೂ ಮಾಡಿ ಆರೂವರೆ ಆರು ಮುಕ್ಕಾಲವರೆಗೂ ತಳ್ಳುತ್ತಿದ್ದರು.
ಬೆದ್ರಾಡಿ ತ್ಯಾಂಪಣ್ಣ ಗೌಡರದ್ದು ಬೇರೆಯೇ ತಲೆಬೇನೆ. ಊರಿನ ಕೆಲಸದವರು ಸೈರನ್ ಕೇಳಿ ಐದೂವರೆಗೆ ಕೆಲಸ ನಿಲ್ಲಿಸುತ್ತಾರೆಂದು ಬಿಜಾಪುರ, ಧಾರವಾಡ ಕಡೆಯ ಆಳುಗಳನ್ನು ಕೆಲಸಕ್ಕಿಟ್ಟಿದ್ದರು. ಆದರೆ ಇತ್ತೀಚೆಗೆ ಈ ಬಿಜಾಪುರದವರೂ ಸೈರನ್ ಕೇಳಿದ ಕೂಡಲೆ ಕೆಲಸ ನಿಲ್ಲಿಸುತ್ತಿದ್ದುದರಿಂದ ದೊಡ್ಡ ತಲೆಬೇನೆ ಶುರುವಾಗಿತ್ತು. ಆಳಿಗೆ ಐವತ್ತು ರೂಪಾಯಿ ಸಂಬಳ ಕೊಟ್ಟು ಐದೂವರೆಗೆ ಕೆಲಸ ಕೈದು ಮಾಡುವುದೆಂದರೆ ನಷ್ಟ ಎಷ್ಟಾಯಿತು? ಕೆಲಸದವರನ್ನು ಆದಷ್ಟು ದುಡಿಸದಿದ್ದರೆ ಹೇಗೆ? ಅಡಿಕೆ ರೇಟು ನೆಲ ಮುಟ್ಟಿರುವಾಗ ಈಗಲೇ ಹೀಗಾದರೆ, ಮುಂದೆ ಇವರಿಂದ ಕೆಲಸ ಮಾಡಿಸಲು ಸಾಧ್ಯವೆ? ಈ ಬಗೆಯ ಯೋಚನೆ ಸುತ್ತಮುತ್ತಲಿನ ತೋಟದ ಧನಿಗಳೆಲ್ಲರ ತಲೆಯಲ್ಲೂ ಹೊಗೆಯೆಬ್ಬಿಸಿತ್ತು. ಆದರೆ ಹೆಚ್ಚಿನವರು ಮದುವೆ, ಬೊಜ್ಜ, ಎಂಥದೇ ಜಂಬರವಿರಲಿ ಅಡಿಗೆಗೆ ಕಡಾಯಿ, ಕವಂಗ, ಚೆಂಬು, ಚೆರಿಗೆಯಿಂದ ಗ್ಯಾಸ್‌ಲೈಟ್‌ವರೆಗೆ; ತೋಟಕ್ಕೆ ಮದ್ದು ಬಿಡುವ ಗಟಾರ್ ಪಂಪಿನಿಂದ ಎಮ್ಮೆಗೆ ಜೋಡಿ ಮಾಡಿಸಲು ಬೀಜದ ಕೋಣನವರೆಗೆ ಯಾವುದಕ್ಕಾದರೂ ಸೋಂಪ ಗೌಡರಲ್ಲಿಗೇ ಹೋಗುವುದು. ಆಗೀಗ ಕೈಕಡಕ್ಕೂ ಗೌಡರೇ ನೆನಪಾಗುವುದರಿಂದ ಈಗ ಯಾರೂ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಕೆಲವು ದೊಡ್ಡ ತೋಟಗಳ ಶ್ರೀಮಂತರಿಗೆ ಸರ್ಕಾರದ ಉನ್ನತ ಪ್ರಭಾವೀ ಅಧಿಕಾರದಲ್ಲಿರುವ ಗೌಡರ ಭಾವನವರೇ ಈ ಸೈರನ್ ಕೊಡಿಸಿದ್ದು ಗೊತ್ತಿದ್ದುದರಿಂದ ಏನು ಹೇಳಲೂ ಮನಸ್ಸಿಲ್ಲ. ಕಾಡೆಮನೆ ಲಿಂಗಪ್ಪಣ್ಣನಿಗೆ ಸೋಂಪಗೌಡರ ಶ್ರೀಮಂತಿಕೆಯಿಂದ ಮೊದಲೇ ಹೊಟ್ಟೆಯುರಿ. ಈಗ ಸೈರನ್ ಹಾವಳಿಯಿಂದಾಗಿ ಏನೂ ಮಾಡಲಾಗದೆ ಹುಚ್ಚನಂತಾಗಿದ್ದರು. ಮಹಾ ಕಂಜೂಸ್ ಎಂದೇ ಹೆಸರು ಪಡೆದಿರುವ ಲಿಂಗಪ್ಪಣ್ಣ ಆಲಿಯಾಸ್ ಲಿಂಗಪ್ಪ ಗೌಡ ಸಂಬಳ ಕೊಡುವುದರಲ್ಲಿ, ಕೆಲಸ ಮಾಡಿಸುವುದರಲ್ಲಿ ಭಾರೀ ಸತಾಯಿಸುವ ಆಸಾಮಿ. ಹೀಗಾಗಿಯೇ ಇರಬೇಕು. ಕೆಲದಿನಗಳ ಹಿಂದೆ ಸೈರನ್ ಕೇಳಿದೊಡನೆ ಕೋಪ ನೆತ್ತಿಗೇರಿ ರಕ್ತದೊತ್ತಡ ಖಂಡಾಬಟ್ಟೆಯಾಗಿ ತಲೆತಿರುಗಿ ಬಿದ್ದಿದ್ದರಂತೆ. ಏನಾದರೂ ಮಾಡಿ ಈ ಸೈರನ್ ಶಬ್ದ ನಿಲ್ಲುವಂತೆ ಮಾಡದಿದ್ದರೆ ತನಗೆ ಉಳುಗಾಲವಿಲ್ಲ, ಎಂದು ಲಿಂಗಪ್ಪಣ್ಣ ದಿನಾ ಏನೇನೋ ಉಪಾಯ ಹುಡುಕುತ್ತಿದ್ದರು.
ಸಾಯಂಕಾಲ ಶಂಭಟ್ಟರ ಜಯಲಕ್ಷ್ಮಿ ಭವನದಲ್ಲಿ ಬೆದ್ರಾಡಿ ತ್ಯಾಂಪಣ್ಣ ಗೌಡರೂ ಸುಬ್ಬಯ್ಯ ಪಾಟಾಳಿಯವರೂ ಚಾ ಹೀರುತ್ತಿದ್ದಾಗ ಕಾಡಮನೆ ಲಿಂಗಪ್ಪಣ್ಣ, “ಹೀಂಗಾದರೆ ನಾವು ಈ ಜಲ್ಮಲಿ ಬರ್ಖತ್ ಅಕಿಲ್ಲೆ…” ಎಂದು ಗೊಣಗುತ್ತಾ ಒಳಗೆ ಬಂದರು. ತ್ಯಾಂಪಣ್ಣ ಗೌಡರೂ, ಸುಬ್ಬಯ್ಯ ಪಾಟಾಳಿಯವರೂ ಏನಾಯ್ತೆಂದು ಲಿಂಗಪ್ಪಣ್ಣನ ಮುಖ ನೋಡಿದರು. “ಅಲ್ಲ; ಐದ್ ಐದೂವರೆಗೆ ಕೆಲ್ಸ ಕೈದ್ ಮಾಡ್ರೆ ನಾವು ಹೇಂಗೆ ಕೆಲ್ಸ ಮಾಡ್ಸುದು.? ಅಡಿಕೆ ರೇಟ್ ಪಾತಾಳಕ್ಕಿಳ್ದುಟ್ಟು. ಆದರ ಎಡೆಲಿ ಈ ಕೆಲ್ಸದವರ ಐದೂವರೆಗೆ ಬುಟ್ರೆ ನಾವ್ ಹೇಂಗೆ ಬದ್ಕುದು ತ್ಯಾಂಪಣ್ಣ? ಏನ್ ಹೇಳ್ರೆ ಸುಬ್ಬಣ್ಣಯ್ಯ….? ಎಂದು ಲಿಂಗಪ್ಪಣ್ಣ ತನ್ನ ಬಹುದಿನಗಳ ಅಸಹನೆಯನ್ನು ಚೆಲ್ಲಿದರು. “ಹೌದೂಂತ! ನಮ್ಮಲ್ಲಿನೂ ಈ ಸುಟ್ಟ ಬಿಜಾಪುರದ ಕೆಲ್ಸದವುನೂ ಐದೂವರೇಗೆ ಕೆಲ್ಸ ನಿಲ್ಸಿಕೆ ಸುರು ಮಾಡ್ಯೊಳೋ!! ಹೀಂಗಾದರೆ ಇನ್ನ್… ಕೆಲ್ಸ ಮಾಡ್ಸೂದು ಹೇಂಗೆ? ಸಂಬಳ ಕೊಡ್ದು ಹೇಂಗೆ?” ತ್ಯಾಂಪಣ್ಣ ಗೌಡರೂ ತಮ್ಮ ಅಸಮಧಾನವನ್ನೂ ಹೊರಹಾಕಿದರು. ಅಷ್ಟರಲ್ಲಿ ದಬ್ಬಡ್ಕ ರಾಮಣ್ಣ ರೈಗಳೂ ಕೊಂರ್ದೋಡಿ ಮಾಲಿಂಗ ಮಣಿಯಾಣಿಗಳೂ ಹೋಟೆಲಿಗೆ ಬಂದರು. “ಏನ್? ಎಲ್ಲವೂ ಭಾರೀ ತಲೆಬೆಚ್ಚಲಿದ್ಹಾಂಗೆ ಕಂಡದೆ, ಸಂಗತಿ ಎಂಥಾ?” ರಾಮಣ್ಣ ರೈಗಳು ಪ್ರಶ್ನಿಸಿದ್ದೇ ತಡ ಸುಡುತ್ತಿರುವ ಬಿಸಿ ಬಿಸಿ ಚಾವನ್ನೂ ಲೆಕ್ಕಿಸದೆ ಒಂದೇ ಗುಟುಕಿಗೆ ಗಟಗಟನೆ ಕುಡಿದ ಲಿಂಗಪ್ಪಣ್ಣ “ಇದರ ಹೀಂಗೇ ಬುಟ್ರೆ ಆಕಿಲ್ಲೆ ರೈಗಳೇ… ಆಕಿಲ್ಲೆ! ಹೇಂಗಾರ್ ಮಾಡಿ ಈ ಸ್ಯೊರನ್ ಶಬ್ದ ನಿಲ್ಸುವ್ಹಾಂಗೆ ಮಾಡೂಕು. ಏನ್ ಹೇಳ್ರೆ ಮಾಲಿಂಗಣ್ಣ?” ಎಂದು ಕಣ್ಣು ಕಿರಿದುಗೊಳಿಸಿ ಮೂತಿಯನ್ನು ಚೂಪು ಮಾಡಿದರು.
“ಸಂಗತಿ ಸತ್ಯ! ನೀವ್ ಹೇಳ್ದಾಂಗೆ ಈ ಸೈರನ್ ಶಬ್ದಂದಾಗಿ ನಮ್ಮಲ್ಲಿನೂ ಸರಿ ಕೆಲ್ಸ ಸಾಗೂದುಲ್ಲೆ! ಐದೂವರೆ ಆಕನ ಎಲ್ಲವೂ ಹೊರ್ಡುದೇಂತ….!?” ಮಾಲಿಂಗ ಮಣಿಯಾಣಿ ದನಿಗೂಡಿಸಿದರು.
“ಸಂಗತಿ ನಂಗೂ ಗೊತ್ತಾವುಟ್ಟು, ಆದರೆ ನಿಲ್ಸುದು ಅಂದರೇ…. ಹೇಂಗೆ? ಸೋಂಪ ಗೌಡ್ರ್ ಎಂಥಕ್ಕಾರು ಬೇಕಾದ್ದೆ. ಅವರೊಟ್ಟಿಗೆ ಹೇಂಗೆ ಹೇಳ್ದು….? ಅದೂ ಅಲ್ಲದೆ, ಸೈರನ್ ಹಾಕಿಕೆ ಹೇಳ್ದ ಗೌಡ್ರ ಭಾವ ಏನ್ ತಿಳ್ಕಂಬೊ? ಅವೂ ಬೇಕಲ್ಲೆ ನವ್ಗೇ…? ಇದ್ದುದ್ದನ್ನು ಇದ್ದಹಾಗೆ ಹೇಳುವ ರಾಮಣ್ಣ ರೈಗಳು ಸಮಸ್ಯೆ ಬಗೆಹರಿಸುವುದಕ್ಕೆ ದಾರಿ ಹುಡುಕತೊಡಗಿದರು. ಉಳಿದವರು ಇದ್ದದ್ದನ್ನು, ಇಲ್ಲದ್ದನ್ನೂ ಸೇರಿಸಿ ಹೇಗೆ ಹೇಳುವುದೆಂದು ತೋಚದೆ ಮುಖ ಮುಖ ನೋಡತೊಡಗಿದರು. “ರೈಗಳು ಮನ್ಸು ಮಾಡಿದ್ರೆ ಹೇಗಾದ್ರೂ ಹೇಳಿ ನಿಲ್ಲಿಸಬಹುದು. ಅಲ್ವಾ ತ್ಯಾಂಪಣ್ಣ?”ಎಂದು ಸುಬ್ಬಯ್ಯ ಪಾಟಾಳಿಯವರು ಮೆಲ್ಲಗೆ ಮಗ್ಗ ಎಳೆಯತೊಡಗಿದರು.
ಇವರೆಲ್ಲರ ಮಾತನ್ನು ಚಾ ಹಿಂಡುವವರಂತೆ ನಟಿಸುತ್ತಾ ಕೇಳುತ್ತಿದ್ದ ಶಂಭಟ್ಟರು, ಈಗ ಬಾಯಿ ಹಾಕಿದರು. “ಪಾಟಾಳಿಯವರು ಹೇಳಿದ್ದು ಸರಿ. ರೈಗಳು ಮನಸ್ಸು ಮಾಡಿದ್ರೆ ಇದನ್ನು ನಿಲ್ಲಿಸಬಹುದು, ಅದಿಕ್ಕೆ ಒಂದು ಉಪಾಯ ಕೂಡಾ ಉಂಟು ನನ್ನೊಟ್ಟಿಗೆ….” ಎಂದು ರೈಗಳಿಗೆ ಹಬೆಯಾಡುತ್ತಿರುವ ಬಿಸಿ ಚಾದ ಗ್ಲಾಸ್ ಕೊಡುತ್ತಾ ಕಿವಿಯಲ್ಲಿ ಖುಸುಖುಸು ಅಂತೇನೋ ಉಸುರಿ, ಯಾವಾಗಲೂ ಹೊತ್ತಿಗೆ ಮೂರು ಸೇರು ಹಾಲು ಕೊಡುವ, ಒಮ್ಮೊಮ್ಮೆ ಬೀಜದ ಹೋರಿಯಂತೆ ಬುಸುಗುಡುತ್ತಾ ಹಾಲು ಕೊಡದೆ ಒದೆಯುವ ಅಭ್ಯಾಸವಿರುವ ಜರ್ಸಿದನಕ್ಕೆ ಮೂಗುದಾರ ಹಾಕಲು ಬೆಂಚಲ್ಲಿ ಕಾಲು ನೀಡಿ ಕುಳಿತು, ಕಾಲ ಹೆಬ್ಬೆರಳಿಗೆ ಸಪೂರ ನೈಲಾನ್ ಹಗ್ಗವೊಂದರ ತುದಿಯನ್ನು ಉರುಳು ಹಾಕಿ ಸಿಕ್ಕಿಸಿ, ಮತ್ತೆ ನಾಲ್ಕೈದು ಹತ್ತಿಯ ಸಪೂರ ಹಗ್ಗಗಳೊಂದಿಗೆ ಹುರಿಮಾಡತೊಡಗಿದರು.
ನಿಧಾನವಾಗಿ ಚಾ ಹೀರುತ್ತಿದ್ದ ರಾಮಣ್ಣ ರೈಗಳ ಮುಖ ಅರಳಿತು.
ರಾತ್ರಿ ರಾಮಣ್ಣ ರೈಗಳ ಮನೆಯಲ್ಲಿ ಸೇರಿದ ಎಲ್ಲರೂ ಒಂದೊಂದು ಬಗೆಯಲ್ಲಿ ಮಾತಾಡಿ ಸರಿ ತಪ್ಪುಗಳ ಮಧ್ಯೆ ಗೊಂದಲದಲ್ಲಿ ಬಿದ್ದರು. ಕೊನೆಗೆ ಮಾಲಿಂಗ ಮಣಿಯಾಣಿಯವರು ತಡೆಯಲಿಕ್ಕಾಗದೆ “ಹೀಂಗೆ ಮಾಡ್ರೆ ಸರಿಯಾದೊ ತ್ಯಾಂಪಣ್ಣ?”ಎಂದು ಕೇಳಿಯೇಬಿಟ್ಟರು. ತ್ಯಾಂಪಣ್ಣ ಗೌಡರು ಬಾಯಲ್ಲಿದ್ದ ಎಲೆಅಡಿಕೆ ರಸ ಹೊರಚಿಮ್ಮದಂತೆ ಮುಖ ಮೇಲೆತ್ತಿ ಕೆಳದವಡೆಯನ್ನು ಕೊಂಚ ಮುಂದಕ್ಕೆ ತಂದಾಗ ನಾಲಿಗೆ ಸರಿಯಾಗಿ ಹೊರಳದೆ “ಉಮ್ಮ….ಣಂಗೊಂಡು ಗೊಠಾಅಡುಲ್ಳೆ” ಎಂದು ಅಸ್ಪಷ್ಟವಾಗಿ ಉಸುರಿ, ತುಟಿಯ ಬದಿಯಿಂದ ಇಳಿಯುತ್ತಿದ್ದ ವೀಳ್ಯರಸವನ್ನು ಎಡಮುಂಗೈಯಲ್ಲಿ ಒರೆಸುತ್ತಾ ಬಲಗೈ ಚೆಲ್ಲಿದರು. ಮೊದಲೇ ಒಲೆಯ ಮೆಲೆ ಕೂತಂತಿದ್ದ ಕಾಡೆಮನೆ ಲಿಂಗಪ್ಪಣ್ಣ “ಉಮ್ಮ… ನಂಗೊಂದು ಗೊತ್ತಾದುಲ್ಲೆ-ಅಂತ ಹೇಳಿ ಬುಟ್ರೆ ಮುಗ್ತಾ ತ್ಯಾಂಪಣಣ್ಣ….? ಎಂದು ಕುಂಡೆ ಸುಟ್ಟವರಂತೆ ಆಡತೊಡಗಿದರು.
“ಸರೀಂತೇಳ್ರೆ ಸರಿ. ತಪ್ಪೂಂತ ಗ್ರೇಸಿಕಂಡ್ರೆ… ತಪ್ಪು! ಯಾಕೆ ಗೊತ್ತುಟ್ಟೋ?” ಎಂದು ಎಲ್ಲರ ಮುಖವನ್ನೊಮ್ಮೆ ಕಣ್ಣಿಟ್ಟು ನೋಡಿದ ರೈಗಳು, “ನಾವು ಧೈವಕ್ಕೆ ತಪ್ಪಿ ನಡ್ಕಂಬ್‌ದಲ್ಲೆಲ್ಲೋ? ಹಾಂಗಾರೆ ಸರಿ; ಮತ್ತೇ….ತಪ್ಪೂಂತಾದರೆ ಅದ್ ಏನಂತ್ ನಿವ್ಗೇ…. ಗೊತ್ತುಟ್ಟಲ್ಲೇ?” ಎಂದು ಭೂತ ಕಟ್ಟ್ ಹೇಳುವ ರೀತಿಯಲ್ಲಿ, ಪೂರಾ ಹೇಳದಿದ್ದರೂ ತಿಳಿಯುವಂತೆ, ಹೇಳಿದರು. “ಸರಿಯೋ…. ತಪ್ಪೋ…ನಂಗೊತ್ತಿಲ್ಲೆ. ಒಟ್ಟಾರೆ ಆ ಅರೆಬ್ಬಾಯಿ ನಿಲ್ಲೋಕು, ಅಷ್ಟೆ” ಲಿಂಗಪ್ಪಣ್ಣ ತಾನು ಸಂಜೆಯಿಂದ ಹಲವು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದರು. ಆಗ ರಾಮಣ್ಣ ರೈಗಳು, “ಸುಮ್ಮಂಗೆ…ಇನ್ನ್ ಸನ ಚಪ್ಪೆ ಗುದ್ದುದು ಎಂಥರ? ಎಲ್ಲವ್ಕೂ ಆದೂಂತಾದರೆ ನಾಳೆ ಬೊಳ್ಪಿಗೆ ಗೌಡ್ರಲ್ಲಿಗೆ ಪೋಯಿ. ಹೇಂಗೆ? ಆಗದಾ….?” ನಿರ್ಧರಿಸಿಯೇ ಬಿಟ್ಟಂತೆ ಕೇಳಿದರು. ಎಲ್ಲರೂ ಆಯಿತೆಂದು ಒಪ್ಪಿಕೊಂಡವರಂತೆ ಬೈರಾಸು, ಮುಂಡ ಕೊಡವಿ ಮೇಲೆದ್ದರು.
ಮರುದಿನ ಗೌಡರ ಮನೆಗೆ ರಾಮಣ್ಣ ರೈ, ತ್ಯಾಂಪಣ್ಣ ಗೌಡ, ಸುಬ್ಬಯ್ಯ ಪಾಟಾಳಿ, ಮಾಲಿಂಗ ಮಣಿಯಾಣಿ, ಲಿಂಗಪ್ಪಣ್ಣ ಅಲಿಯಾಸ್ ಲಿಂಗಪ್ಪ ಅಲ್ಲದೆ, ಭೂತ ಕಟ್ಟುವ ಮೋಂಟ ಪರವ ಮತ್ತು ಕೇಂಪು; ಒಟ್ಟಾಗಿ ಬಂದರು. ಎಲ್ಲರಿಗೂ ಚಾ ಅವಲಕ್ಕಿ ಬಾಳೆಹಣ್ಣಿನ ಉಪಚಾರವಾದ ಮೇಲೆ ಸೋಂಪ ಗೌಡರು, “ಎಲ್ಲವೂ ಅಪರೂಪಕ್ಕೆ ಒಟ್ಟಿಗೆ ಬಂದೊಳರಿ, ಏನಾರ್ ವಿಶೇಷ ಉಟ್ಟೋ ಹೇಂಗೆ?” ಎಂದರು. ಸೋಂಪ ಗೌಡರೇ ಆರಂಭಿಸಿದ್ದು ಒಳ್ಳೆದಾಯಿತೆಂದು ರೈಗಳು. “ನಮ್ಮ ಮೋಂಟಂಗೆ ಏನೋ ಬಾಧೆ ಸುರು ಆವುಟ್ಟು ಗಡ….. ಎಂದು ಹಾಗೇ ಮೋಂಟನತ್ತ ನೋಡಿ, ”ಹೌದಾ ಮೋಂಟ, ಅದೆಂಥ ಗೌಡ್ರೊಟ್ಟಿಗೆ ಸರಿ ಹೇಳ್…” ಎಂದು ಅಹವಾಲನ್ನು ಅಂಗಳದಲ್ಲಿ ಕುಳಿತ ಮೋಂಟನ ಹೆಗಲಿಗೆ ದಾಟಿಸಿದರು. ಗೌಡರಿಗೂ ಗೌಡರ ಹಿಂದೆ ನಿಂತಿದ್ದ ಅವರ ಪತ್ನಿಗೂ ಏನೂ ಸುಳಿವು ಸಿಗಲಿಲ್ಲ.
“ನನ್ನಿಂದಾಗಿ ಎಂಥ ದೋಷ ಆವುಟ್ಟೂಂತ ನಂಗೆ ಗೊತ್ತಿಲ್ಲೆ ಉಳ್ಳಾಯ! ದಿನೊಳು ಹಿಂಬೊತ್ತಾಕನ ನಂಗೆ ದರ್ಸನ ಬಂದದೆ! ಯಾಕೇಂತ ಗೊತ್ತಾತ್‌ಲ್ಲೆ ಸುಮಾರ್ ಕಡೆ ಕೇಳ್ಸಿದೆ. ಕಡೇಗೆ ಕಿರ್ಲಾಯ ತಂತ್ರಿಗೆ ಹೇಳ್ದೊ-ಅದ್ ನಾವ್ ನಂಬುವ ಪಿಲಿಚಾಮುಂಡಿದ್ ಉಪದ್ರಾಂತ. ಚಾವಡಿಗೆ ಅಸುದ್ದೊ ಆವುಟ್ಟುಗಡಾ! ಎಂಥಾ ಅಸುದ್ದೋಂತ ಕೇಳ್ರೆ…ಗಾದೊಲಿ ಮೂರ್ತ ಭಂಗಾಂತ….ಹೇಳ್ದೊ” ತಕ್ಷಣ ರಾಮಣ್ಣ ರೈಗಳು “ಗಾದೊಲಿ ಅಲ್ಲ ಮಾರಾಯಾ ಅದ್…” ಗೌಡರತ್ತ ನೋಡಿ “ಗೌಡ್ರೆ….ಅದ್-‘ಗೋಧೂಳಿ ಮಹೂರ್ತ ಭಂಗಾಂತ’-ತಂತ್ರಿಗ ಹೇಳ್ದ್ ಗಡ….” ಎಂದು ಸರಿಪಡಿಸಿ ಹೇಳಿದರು. “ಉಮ್ಮ ನಂಗೆ ಎಂಥದೂ ಗೊತ್ತಾದುಲ್ಲೆ. ಹಿಂಬೋತ್ತಾಕನ ಭೂತ ಚಾವಡಿ ಹಕ್ಕಲೆ ಒಂದು ಚೂರೂ ಶಬ್ದ ಮಾಡಿಕೆ ಬೊತ್ತ್ ಗಡ….ಧೈವಕ್ಕೆ ಶಾಂತಿಭಂಗ ಅದೆ ಗಡ… ನೀವು ಹಾಕುವ ಸ್ಕೊರನ್ ಶಬ್ದೊ ಆಗಿರ್ದೂಂತ ನಾ ಹೇಳಿಕೊಂಬೊದು….ಸೈರನ್ ಶಬ್ದ ಕೇಳ್ಯಾಕನೇ ಯಾಗೊಳು ನಂಗೆ ದರ್ಸನ ಸುರು ಅದು….” ಎಂದು ಮೋಂಟ ತನ್ನ ಕಷ್ಟ ತೋಡಿಕೊಂಡ. ಸೋಂಪ ಗೌಡರು ಆಶ್ಚರ್ಯ ಆತಂಕದಿಂದ ಬಾಯಿ ಬಿಟ್ಟರು. ಕಳೆದ ಗುರುವಾರ ಹೊತ್ತಿಗೆ ಎರಡು ಸೇರು ಹಾಲು ಕೊಡುವ ಪ್ರೀತಿಯ ಕಪಿಲೆ ಹಸು ಹಟ್ಟಿಯಲ್ಲಿ ನಿಂತಲ್ಲೇ ಬಡ್ಡಾಂತ ಬಿದ್ದು ಗೊರ…ಗೊರ ಎಂದು ಕಾಲು ನಿಮಿರಿ ಸತ್ತದ್ದು!? ಗೌಡತಿಯ ಬೊಳ್ಳೆ ಹೇಂಟೆ “ಕೆಕ್…ಕೆಕ್…”ಎನ್ನುತ್ತಾ ಪಟ್ಟನೆ ಬಿದ್ದು ಮರಗಟ್ಟಿದ್ದು!? ವಾರದಿಂದ ಬಲಗಣ್ಣ ರೆಪ್ಪೆ ತನ್ನಿಂತಾನೆ ಹೊಡಕೊಳ್ಳುತ್ತಿರುವುದು! ಗೌಡರಿಗೆ ಎಲ್ಲದರ ಸೂಚನೆ ಏನೆಂದು ಹೊಳೆಯಿತು. ಅಷ್ಟರಲ್ಲಿ ಲಿಂಗಪ್ಪಣ್ಣ, ‘ಒಟ್ಟಿಗೇ ಈ ನಾಯಿಗಳೂ ಎಲ್ಲರ ಮನೇಲಿ ಬೊಬ್ಬೆ ಹಾಕುದು ಭಾರೀ ಅಸುದ್ದೂ ಆಗಿರ್ದು….”ಎಂದು ತನ್ನ ಸಂಶಯ ಸೇರಿಸಿದರು. “ನಮ್ಮ ಲಿಂಗಪ್ಪಣ್ಣಂಗೂ ಕೆಲ ಸರ್ತಿ ದರ್ಸನ ಬಂದದೇಂತ… ಕೆಲೊವು ಹೇಳುವೆ! ಹೌದಾ ಲಿಂಗಪ್ಪಣ್ಣ….?”ಎಂದು ಸುಬ್ಬಯ್ಯ ಪಾಟಾಳಿಯವರು ಸೇರಿಸಿದ್ದು ಮಾತಿಗೆ ಬಲ ಬರಲೆಂದೇ ಇರಬಹುದೆಂದು ಭಾವಿಸಿದ ಲಿಂಗಪ್ಪಣ್ಣ,”ಹ್ಹೆ… ಹ್ಹೆ…. ಹೌ…. ಹೌದ್… ಹೌದ್…ಒಮ್ಮೊಮ್ಮೆ ನೆಲ ಅದ್ರಿದಾಂಗೆ ಅದೆ…ನಂಗೆ…”ಎಂದು ಆಚೀಚೆ, ಮತ್ತೊಮ್ಮೆ ಮೇಲೆ ಕೆಳಗೆ ನೋಡಿ ಒಪ್ಪಿಕೊಂಡರು.
“ಉಳ್ಳಾಯ ನನ್ನ ಜೀವಲಿ ಬದ್ಕಿಕೆ ಬುಡೊಕು; ಇಲ್ಲರೇ ನಾ ದಿನೊಳು ದರ್ಸನ ಹಿಡ್ದ್ ಸತ್ತೇ ಹೋನೆ….!! ಮತ್ತೆ ನನ್ನ ಹೆಣ್, ಮಕ್ಕಳಿಗೆ ನೀವೇ…” ಮೋಂಟ ಅಳಲಾರಂಭಿಸಿದ. ಕೇಪು ಆಧರಿಸಿ ಹಿಡಿದುಕೊಂಡ.
ಗೌಡರ ಕಿವಿಗಳು ಬಿಸಿಯಾಗಿದ್ದವು. ಗೌಡರ ಪತ್ನಿ ಭಯಭೀತರಾಗಿದ್ದರು. ಇನ್ನು ಏನೇನು ಆಗಲಿದೆಯೋ? ಗೌಡರು ದೈವಭಕ್ತ. ತಾನು ನಂಬುವ ಪಿಲಿ ಚಾಮುಂಡಿಗೆ ತನ್ನಿಂದ ಏನು ಅಪರಾಧವಾಯಿತೋ? ದೈವದ ಶಾತಿಭಂಗ ಮಾಡಿದರೆ ಉಳಿವೆನೆ? ಗೌಡರು ಚಿಳ್ಳನೆ ಬೆವರಿದರು. ಕುಳಿತಲ್ಲಿಂದ ಎದ್ದರು. ಸೀದಾ ಒಳಹೋಗಿ ಸೈರನ್‌ನ ಪ್ಲಗ್ ಕನೆಕ್ಷನ್ ತೆಗೆದೇ ಬಿಟ್ಟರು. ಮತ್ತೆ ಸುಸ್ತಾದಂತೆ ಬಂದು ಕುರ್ಚಿಯಲ್ಲಿ ಕುಳಿತರು.
ಮೌನ; ಯಾರೂ ಮಾತು ಮುಂದುವರಿಸಲಿಲ್ಲ. ಲಿಂಗಪ್ಪಣ್ಣ ತನ್ನ ಸಂತಸ ಪ್ರಕಟಿಸಲಾಗದೆ ಒದ್ದಾಡತೊಡಗಿ, ಸುಬ್ಬಯ್ಯಪಾಟಾಳಿಯವರ ದೈತ್ಯ ದೇಹದ ಮರೆಗೆ ನಿಂತುಕೊಂಡು ಸಾವರಿಸಿಕೊಂಡರು. ರಾಮಣ್ಣರೈಗಳು ಗೆಲುವಿನ ಓರೆನೋಟವನ್ನು ತ್ಯಾಂಪಣ್ಣಗೌಡ, ಮಾಲಿಂಗ ಮಣಿಯಾಣಿಯವರ ಕಡೆ ಹಾಯಿಸಿದರು. ಬಂದ ಕೆಲಸವಾಗಿತ್ತು. ಎಲ್ಲರೂ ಸಂತೋಷದಿಂದ ಗೌಡರಿಗೆ ವಂದಿಸಿ ಹೊರಟರು. ಗೌಡರು ಕುರ್ಚಿಯಲ್ಲಿ ಕುಳಿತೇ ಇದ್ದರು. ಪಿಲಿ ಚಾಮುಂಡಿ ಗೌಡರ ಮುಂದೆ ಕುಣಿಯುತ್ತಿತ್ತು. ಕಡ್ತಲೆಯನ್ನು ಝಳಪಿಸುತ್ತಾ, ಇಟ್ಟಲ್ಲಿ ಮತ್ತೆ ಹೆಜ್ಜೆಯಿಡದ ದೆವ್ವದ ಕಾಲಿನ ಗಗ್ಗರದ ಭೀಕರ ಝೇಂಕಾರ ಗೌಡರ ಕಿವಿಗೆ ಅಪ್ಪಳಿಸುತ್ತಿತ್ತು. ಆಳೆತ್ತರ ಘೋರವರ್ಣದ ಅಣಿಯ ನಡುವಿನಿಂದ ರಕ್ತವರ್ಣದ ನಾಲಿಗೆಯನ್ನು ಹೊರ ಚಾಚಿ ಕೆಂಡದಂಥ ಕಣ್ಣಿಂದ ಗೌಡರನ್ನು ತಿವಿಯುವಂತೆ ನೋಡುತ್ತಿತ್ತು. ಗೌಡರ ಪತ್ನಿ ಗೌಡರನ್ನು ಸಂತೈಸುವಂತೆ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು.
* * *
ಶಂಭಟ್ಟರ ಜಯಲಕ್ಷ್ಮಿ ಭವನದಲ್ಲಿ ಎಲ್ಲರಿಗೂ ಸಂಜೆ ಉಚಿತ ಚಾ ಸಮಾರಾಧನೆಯಾಯಿತು. ಲಿಂಗಪ್ಪಣ್ಣ ಒಂದು ಗೇಣು ಮೇಲೆ ನಡೆಯುತ್ತಿದ್ದರು. ಹೊರಗೆ ಮೋಂಟ ಮತ್ತು ಕೇಪು ಒಬ್ಬರನ್ನೊಬ್ಬರು ಆಧರಿಸಿಕೊಂಡು ನೆಟ್ಟಗೆ ನಿಲ್ಲಲು ಪ್ರಯತ್ನಿಸುತ್ತಿದ್ದರು.
ಸಾಯಂಕಾಲ ಐದೂವರೆಗೆ ಗೌಡರ ಸೈರನ್ ಕೂಗಲಿಲ್ಲ! ಎಲ್ಲರೂ ಸಂತಸ, ನೆಮ್ಮದಿಯಿಂದ ನಿರಾಳವಾದರು.
ಗೌಡರ ಜಿಮ್ಮಿ ಅತ್ತಿತ್ತ ಕುಂಯಿ ಕುಂಯಿ ಅನ್ನುತ್ತಾ ಅತ್ತಿತ್ತ ಸುತ್ತಾಡತೊಡಗಿತು. ಉಳಿದ ನಾಯಿಗಳೂ ಉಚ್ಚೆ ಬಂದವುಗಳಂತೆ ಆಚೀಚೆ ಸುಳಿಯತೊಡಗಿದವು. ಸೈರನ್ ಎದುರು ಜಿಮ್ಮಿ ಮಹಾ ಭಕ್ತನಂತೆ ಕುಳಿತು ಮೂತಿ ಮೇಲಕ್ಕೆತ್ತಿ ಮತ್ತೆ ಕುಂಯಿಗುಡುತ್ತಾ ಮುಂಗಾಲುಗಳನ್ನು ಮಡಚಿ ಮೂತಿಯನ್ನು ನೆಲದ ಮೇಲಿರಿಸಿತು.
ಇದ್ದಕ್ಕಿದ್ದಂತೆ ಲಿಂಗಪ್ಪಣ್ಣನ ಟೈಗರ್ ಊಳಿಡತೊಡಗಿತು. ಜತೆಗೆ ಟಾಮಿಯೂ, ಇದನ್ನು ಕೇಳಿದ ಜಿಮ್ಮಿ, ರೂಬಿ, ಸಿಂಗ, ಜೂಲಿ…. ಎಲ್ಲರ ಮನೆಯ ನಾಯಿಗಳೂ ಒಂದೊಂದಾಗಿ ಕೋರಸ್‌ನಲ್ಲಿ ಸೇರಿಕೊಂಡವು. ಮನೆಯಿಂದ ಮನೆಗೆ ಈ ಆಲಾಪನೆ ಮಿಂಚಿನಂತೆ ಹರಡಿತು. ಊರಿಡೀ ಕಿವಿ ಮುಚ್ಚಿಕೊಂಡಿತು. ತೋಟದ ಧನಿಗಳೆಲ್ಲರೂ ಕಿವಿಮುಚ್ಚಿ ಕುಳಿತರು. ನಾಯಿಗಳ ರೋಧನ ತಾರಕಕ್ಕೇರುತ್ತಿತ್ತು.
ಕಾಡೆಮನೆ ಲಿಂಗಪ್ಪಣ್ಣ ಕಿವಿಮುಚ್ಚಿಕೊಳ್ಳುವಂತೆ ಬೈರಾಸನ್ನು ತಲೆಗೆ ಗಟ್ಟಿಯಾಗಿ ಬಿಗಿದು, ಸಿಕ್ಕ ಸಿಕ್ಕವರನ್ನು ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈಯುತ್ತಾ ಅಂಗಳದಲ್ಲಿ ಹುಚ್ಚನಂತೆ ತಕಧಿಮಿ ಕುಣಿಯತೊಡಗಿದರು.
ಕೆಲವು ಶಬ್ದಗಳ ಅರ್ಥ
ರೆಬ್ಬಾಯಿ= ಆರ್ಭಟ
ಬೈರಾಸ್= ರುಮಾಲು
ಇಸುವಲ್ಲೇ ಇಸೊಕು= ಇಡುವಲ್ಲೇ ಇಡಬೇಕು
ಗಡ= ಅಂತೆ
ಮುಂಡು= ಧೋತಿ
ಉಳ್ಳಾಯ= ಧನಿಗಳೇ
ಹಿಂಬೊತ್ತಾಕನ= ಸಂಜೆಯಾಗುವಾಗ
ಹೋನೆ= ಹೋಗುತ್ತೇನೆ
ಕಡ್ತಲೆ= ಭೂತದ ಖಡ್ಗ/ಕಠಾರಿ
ಅಣಿ= ಭೂತದ ಪ್ರಭಾವಳಿ
ಗಗ್ಗರ= ಭೂತದ ಕಾಲಿನ ಆಭರಣ
ಮೊಜೆಂಟಿ= ಚಿಕ್ಕ ಗಾತ್ರದ ಜೇನ್ನೊಣದ ಹಿಂಡು ಮತ್ತು ಗೂಡು
ಹೊಟ್ಟ= ದಪ್ಪದಾದ ದೊಡ್ಡ ಕೊಕ್ಕಿನ ಕಾಡು ಪಕ್ಷಿ
ಉದ್‌ಗಿಲ್= ಬದಿಗೆ ಸರಿಸಲು ಸಾಧ್ಯವಿರುವ ಉದ್ದ ಕೋಲುಗಳ ಗೇಟಿನಂಥ ತಡೆ
ಕಟ್ ಹೇಳುವುದು= ಭೂತ ನುಡಿ ಕೊಡುವುದು
ಕೈಕಡ= ಕೈಸಾಲ
ಇನ್‌ಸನ= ಇನ್ನೂ ಸಹ
ಪರವ= ಭೂತ ಕಟ್ಟುವ ಒಂದು ಜನಾಂಗ
*****
ಕೀಲಿಕರಣ: ಸೀತಾಶೇಖರ
