ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು.
ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ ಉಳಿದ ಯೂರೋಪಿಯನ್ ಭಾಷೆಗಳಾಗಲಿ, ಏಷಿಯನ್ ಭಾಷೆಗಳಾಗಲಿ – ಏನಾದರೂ ಇದ್ದರೆ ‘ಅದು ಬೇಕಾದ ತಂತ್ರಾಂಶಗಳನ್ನು ರೂಪಿಸುವ ದೊಡ್ಡ ಸಂಸ್ಥೆಗಳ ಕೃಪೆ’ ಎಂಬ ವಾದ ಆಗಾಗ್ಯೆ ಮಹಾತ್ಮಗಾಂಧಿ ರಸ್ತೆಯ ಕಾಫಿಹೌಸ್‌ನಲ್ಲಿ, ಬ್ರಿಗೇಡ್ ರಸ್ತೆಯ ಕಾಫಿ ಡೇ ಔಟ್‌ಲೆಟ್‌ನ ಪಾವಟಿಗೆಗಳ ಮೇಲೆ ಕೇಳಿಬರುತ್ತಿರುತ್ತದೆ. ತಂತ್ರಾಂಶಗಳನ್ನು ರಚಿಸಿ ಬಿಡುಗಡೆ ಮಾಡುವ ದೊಡ್ಡ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಇಂಗ್ಲಿಷೇತರ ಭಾಷೆಗಳು ತಮ್ಮ ಬಂಡವಾಳವನ್ನು ಅಥವ ಲಾಭವನ್ನು ಅಧಿಕ ಮಾಡಿಕೊಳ್ಳಲು ಒಂದು ವಾಹಕ ಮಾತ್ರ. ಎಲ್ಲರೂ ‘ಬರಹದ’ ಶೇಷಾದ್ರಿವಾಸುಗಳೆ? ಭಾಷೆಗೆ ಬಂಡವಾಳ ಹಾಗು ಲಾಭ ತರುವ ಚೈತನ್ಯವಿಲ್ಲದಿದ್ದರೆ ಆ ದೊಡ್ಡ ಸಂಸ್ಥೆಗಳು ಈಗ ಮಾಡುತ್ತಿರುವ ಪ್ರಯತ್ನಗಳನ್ನು ಮಾಡುತ್ತಿದ್ದವೆ ಎಂದು ತಾರ್ಕಿಕವಾಗಿ ಆಲೋಚಿಸಿದರೆ ನಮಗೆ ನಿರಾಶೆ ಖಂಡಿತ.
ಇಂಗ್ಲಿಷ್ ಭಾಷೆಯು ಪ್ರತಿ ಕ್ಷೇತ್ರಗಳಲ್ಲೂ ಪ್ರಗತಿಗೆ ನೀಡಿರುವ ಕಾಣಿಕೆಯನ್ನು ಅಲ್ಲಗಳೆಯುವ ಮೂರ್ಖತನಕ್ಕೆ ನಾವು ಹೋಗುವುದಿಲ್ಲ-ಅವರುಗಳ ಸಾಹಸ ಪ್ರವೃತ್ತಿಯನ್ನೂ ಅಲ್ಲಗಳೆಯುವುದಿಲ್ಲ , ಆದರೆ ಎಲ್ಲವನ್ನೂ ಕೇವಲ ಸ್ವಪ್ರಯೋಜನಕ್ಕೆ ಮಾತ್ರ ಸೀಮಿತಗೊಳಿಸಿಬಿಡುವ- ಆ ಮೂಲಕ ತಾನಷ್ಟೆ ಒಂದು ದೈತ್ಯ ಶಕ್ತಿಯಾಗಿ ಉಳಿದ್ದನ್ನೆಲ್ಲ ಉಪೇಕ್ಷಿಸುವ, ಆ ಉಳಿದದ್ದೆಲ್ಲ ಏನೂ ಅಲ್ಲ ಎಂದು ‘ಚಿಕ್ಕದನ್ನೋ-ದೊಡ್ಡದನ್ನೋ’ ಮಾಡುವ , ಸಹಿಸಲಾಗದಿದ್ದರೆ ದೊಡ್ಡ ಮೀನಿನಂತೆ ‘ ಮತ್ಸ್ಯ ನ್ಯಾಯ’ಕ್ಕಿಳಿಯುವ ಪ್ರವೃತ್ತಿಯ ಬಗೆಗಷ್ಟೆ ನಮ್ಮ ಸಿಟ್ಟು . ಜೊತೆಗೆ ಚೈತನ್ಯಶಾಲಿಯಾದದ್ದಷ್ಟೆ ಉಳಿಯುತ್ತದೆ ಎಂಬ ಅಸಹ್ಯಕರ ‘ಡಾರ್ವಿನ್ ಸೂತ್ರ’ ವನ್ನು ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಮುಂಚಾಚುವ ಭಂಡತನವೂ ಇಂಗ್ಲಿಷ್‌ಗೆ ಇದೆ.
ಸಿಟ್ಟಿನ ಮಧ್ಯೆ ಶೇಷಾದ್ರಿವಾಸು ರಂತಹವರು ಹುಟ್ಟಿಕೊಳ್ಳುತ್ತಾರೆ, ಕನ್ನಡಸಾಹಿತ್ಯ.ಕಾಂ ನಂತಹವು ಹುಟ್ಟಿಕೊಳ್ಳುತ್ತವೆ. ಶೇಷಾದ್ರಿವಾಸುರವರು ನನಗೆ ನೇರ ಪರಿಚಯವಿಲ್ಲದಿದ್ದರೂ ನಾನು ಅಂತರ್‌ಜಾಲದ ಸಂದರ್ಭದಲ್ಲಿ ‘ಬರಹ’ವನ್ನು ನೋಡುವಾಗ ವಾಸುರವರ ‘ಸಿಟ್ಟು’ ನೋಡುತ್ತೇನೆ.
ಮಾರ್ಚ್ ೨೯ ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ‘ಕನ್ನಡ ಸಾಹಿತ್ಯ.ಕಾಂ’ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಸಿಟ್ಟು-ಸಂಯಮ ಕೂಡಿದ ಒಂದು ಹೆಜ್ಜೆ ಇಟ್ಟೆವು. ಔಪಚಾರಿಕವಾಗಿ ಬಿಡುಗಡೆ ಮಾಡಿದ ವಾರ್ತಾಸಚಿವ ಬಿ.ಕೆ.ಚಂದ್ರಶೇಖರ್‌ರವರು , ನೆರೆದಿದ್ದವರನ್ನು ಉದ್ದೇಶಿಸಿ ‘ವಿನಯ ನೀತಿಯನ್ನು’ ‘ಕನ್ನಡದಲ್ಲಿ ಸ್ಪೆಲ್ ಚೆಕ್ ಸೌಲಭ್ಯ ಉಳ್ಳ ಅತ್ಯತ್ತಮ ತಂತ್ರಾಂಶ’ ರೂಪಿಸುವ ಕರೆ ನೀಡಿದ ಅನಂತಮೂರ್ತಿಯವರು, ಸಾಹಿತ್ಯವೊಂದಕ್ಕಷ್ಟೇ ‘ಕನ್ನಡ ಸಾಹಿತ್ಯ.ಕಾಂ ಸೀಮಿತಗೊಳ್ಳದೆ ಒಂದು ರೀತಿಯ ಇಂಟರ್ ಆಕ್ಟಿವಿಟಿಗೆ ಅವಕಾಶವಿರಲಿ’ ಎಂದು ಆಶಿಸಿದ ಗಿರೀಶ್ ಕಾಸರವಳ್ಳಿಯವರು, ಕಾರ್ಯಕ್ರಮ ನಿರ್ವಹಿಸಿದ ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಮಲ್ಲೇಪುರಂ ವೆಂಕಟೇಶ್ ಮುಂತಾದವರು ನಮ್ಮೊಡನೆ ಸಹ ಯಾತ್ರಿಗಳಾದರು. ಅನಂತಮೂರ್ತಿಯವರು ‘ತಮ್ಮ ತಲೆಮಾರಿನ ಲೇಖಕರು- ಮಿತ್ರವೃಂದದಲ್ಲಿ ದೊರಕುವ ಓದುಗ ಹಾಗು ಬಾಯಿಮಾತಿನಿಂದ ದಕ್ಕುವ ಓದುಗವೃಂದದ ’ ನಡುವೆ ಬೆಳೆದು ಬಂದವರು, ಇಂಟರ್‌ನೆಟ್‌ನಿಂದಲೇ ಲೇಖಕನಿಗೆ ಖ್ಯಾತಿಯಾಗಲಿ ,ಓದುಗನಾಗಲಿ ದಕ್ಕುತ್ತದೆ ಎಂದನ್ನಿಸುವುದಿಲ್ಲ – ಈ ವೆಬ್ ಸೈಟ್ ನಡೆಸುವವರಿಗೆ ಈ ವಿನಯವಿರಲಿ ’ ಎಂದು ಸಂದರ್ಭೋಚಿತವಾಗಿ, ಅರ್ಥಬದ್ಧವಾಗಿ ಹೇಳಿದ್ದನ್ನು ನಾವು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಪಠ್ಯಕ್ಕಾಗಿಯೇ ಇಂಟರ್‌ನೆಟ್. ಇಂಟರ್‌ನೆಟ್‌ಗಾಗಿ ಪಠ್ಯವಲ್ಲ.
ಹಿರಿಯರೇನೋ ಗಟ್ಟಿಯಾಗಿ ಹೆಜ್ಜೆ ಇಟ್ಟಿದ್ದಾರೆ, ನಾವು ಇಟ್ಟಿರುವ ಹೆಜ್ಜೆಗೆ ಅವರುಗಳು ಕಲಿಸಿದ ವಿನಯವಂತಿಕೆ ಹಾಗು ಸಿಟ್ಟು ಎರಡೂ ಕಾರಣ. ಪ್ರಾರಂಭದಲ್ಲಿ ಇದೆಲ್ಲ ಸ್ವಲ್ಪ ಅಮೆಚೂರಿಶ್ ಆಗಿ ಕಾಣಬಹುದು. ಆದರೂ ನಾವೂ ಸಹ ಅಂತರ್ಜಾಲದಲ್ಲಿ ಹೆಜ್ಜೆಯೂರುತ್ತಲೇ ನೆಲೆಗೊಳ್ಳುವ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ಎಲ್ಲರ ಬೆಂಬಲವಿರಲಿ ಎಂದೂ ಇಲ್ಲಿ ಪುನರ್‌ಮನವಿ ಮಾಡಿಕೊಳ್ಳುತ್ತಿದ್ದೇವೆ.
ಕಳೆದ ಸಂಚಿಕೆಯ ಬಗ್ಗೆ ಚಾರಣಿಗರ ಪ್ರತಿಕ್ರಿಯೆ
ನಿರೀಕ್ಷೆ ಮೀರಿದ ಉತ್ತೇಜನ ಚಾರಣಿಗರಿಂದ ಬಂದಿದ್ಡು ನಮ್ಮ ಈ ಅಮೆಚೂರಿಶ್ ಪ್ರಯತ್ನ ಸಾರ್ಥಕವಾಗುವ ಲಕ್ಷಣಗಳನ್ನು ತೋರಿಸುತ್ತಿವೆ.
ನಮ್ಮ ಲೇಖಕರ ಪಟ್ಟಿಗೆ ಹಿರಿಯರಾದ ಕೆ.ವಿ.ಸುಬ್ಬಣ್ಣ, ಸುಮತೀಂದ್ರ ನಾಡಿಗ್, ವೈದೇಹಿ, ಕನ್ನಡದಲ್ಲಿ ಪ್ರಬುದ್ಧ ಸಾಹಿತ್ಯ ಪರಂಪರೆಯನ್ನು ದಾಟದ ನಮ್ಮ ಪುಟಗಳಲ್ಲಿ ತಮ್ಮ ಸಾಹಿತ್ಯವನ್ನು ಬಳಸಿಕೊಳ್ಳಲು ಲಿಖಿತ ಅನುಮತಿ ನೀಡಿದ್ದಾರೆ. ವಿವೇಕ್‌ಶಾನಾಭಾಗ್, ಈ ಅಂಚೆಯ ಮೂಲಕ ಅನುಮತಿ ನೀಡಿದ್ದಾರೆ. ಅನಕೃರವರ ಸಂಧ್ಯಾರಾಗ ಬಳಸಬಹುದೆಂದು ಶ್ರೀ ಗೌತಂರವರು ಅನುಮತಿ ನೀಡಿದ್ದಾರೆ.
ಇಂಗ್ಲಿಷ್ ವಿಭಾಗಕ್ಕೆ ಕನ್ನಡ ಚಿತ್ರಗಳಿಗೆ ಗಂಭೀರ ವಿಮರ್ಶೆ ಬರೆದಿರುವ ಟಿ.ಜಿ.ವೈದ್ಯವಾಥನ್, ಬೆಂಗಳೂರಿನವರೇ ಆದ ಮುಕುಂದರಾವ್‌ರವರು ಹೊಸ ಸೇರ್ಪಡೆ.
ಇವರಿಗೆಲ್ಲ ಇಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
ಇಂಗ್ಲಿಷ್ ಹಾಗು ಕನ್ನಡ ಎರಡೂ ಭಾಷೆಗಳಲ್ಲಿ ನಾವು ಸಾಹಿತ್ಯವನ್ನು ನೀಡಿದಾಗ ಇಂಗ್ಲಿಷ್‌ಗೆ ಸಿಕ್ಕುವ ಆದರಣೆ ಕನ್ನಡಕ್ಕೆ ಸಿಕ್ಕಲಾರದು ಎಂದಂದುಕೊಂಡಿದ್ದೆವು. ಆದರೆ ನಮ್ಮ ಅಂದಾಜನ್ನು ಮೀರಿ ಶೇಕಡ ೯೨ ಮಂದಿ ಕನ್ನಡವನ್ನು ನೋಡಿದ್ದಾರೆ ಹಾಗು ಅನೇಕ ರೀತಿಯ ಈಮೈಲ್‌ಗಳು ಬರುತ್ತಿವೆ. ಎಲ್ಲ ಈ ಮೈಲ್‌ಗಳಿಗೂ ನಾವು ನೇರವಾಗಿ ಉತ್ತರ ನೀಡುವುದು ಸಾಧ್ಯವಾಗದ್ದಕ್ಕಾಗಿ ಕ್ಷಮೆ ಕೋರುತ್ತಿದ್ದೇವೆ. ಕಾಲಾವಕಾಶ ನೋಡಿಕೊಂಡು ಉತ್ತರಿಸಲಾಗುವುದು.
ಅಡಿ ಟಿಪ್ಪಣಿ
ಮೈಕೋದವರು ಒಂದು ಪುಟವನ್ನು ಪ್ರಾಯೋಜಿಸುವಂತೆ ಮನಒಲಿಸಿದವರು ನನ್ನ ನೆರಮನೆಯವರಾದ ಶ್ರೀ ಎಂ.ವಿ.ನಾಯಕ್. ಅವರಿಗೆ ಹಾಗು ಮೈಕೋದವರಿಗೆ ನಮ್ಮ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ. ಈ ಪ್ರಾಯೋಜನೆಯಲ್ಲಿ ಬಂದದ್ದು ರೂ. ೫೦೦೦/=
ನನ್ನ ಸ್ನೇಹಿತ ವಿಶ್ವನಾಥನಿಗೂ ಸಾಹಿತ್ಯಕ್ಕೂ ಸಂಬಂಧವೇ ಇಲ್ಲ. ‘ಹಣ ಬರುತ್ತದೆಯೇ?’ – ಈ ಪ್ರಶ್ನೆಯನ್ನು ಅವನು ನನಗೆ ಪದೆ ಪದೆ ಹಾಕಿದ್ದಾನೆ. ‘ಇಲ್ಲ’ ವೆಂದು ಹೇಳಿ ಅವನಿಗೆ ನಮ ಉದ್ದೇಶಗಳನ್ನು ವಿವರಿಸಿದರೆ ಅದನ್ನು ಅರ್ಥಮಾಡಿಕೊಳ್ಳಲೂ ಅವನು ನಿರಾಕರಿಸಿಬಿಡುತ್ತಾನೆ. ‘ಪ್ರಯೋಜನವಿಲ್ಲದ ಕಾರ್ಯದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ’ ಎಂಬುದು ಅವನ ವಾದ. ಹಣ ಮಾಡುವುದೊಂದೇ ಗುರಿಯಾಗಿಟ್ಟುಕೊಂಡಿರುವ ಅವನು ‘ಸಾಹಿತ್ಯ-ಪಾಹಿತ್ಯ ’ ಎಂದು ವ್ಯಂಗ್ಯವಾಡದೆ ಇರುವುದಿಲ್ಲ. ಇಂತಹವನೂ ಒಮ್ಮೊಮ್ಮೆ ದಿಡೀರನೆ ಜಿ.ಪಿ ರಾಜರತ್ನಂರ ನಂಜಿ ಗೀತೆಗಳನ್ನು, ಬೇಂದ್ರೆಯವರ ಕವನಗಳ ಭಾಗಗಳನ್ನು ಭಾವ ಪೂರ್ವಕವಾಗಿ ಮಾತಿನ ಮಧ್ಯೆ ತುರುಕಿ ಅಚ್ಚರಿಗೊಳಿಸಿಬಿಡುತ್ತಾನೆ.
ನಮ್ಮ ಕೆಲಸ ಸುಗಮವಾಗಲು ಅವನು ಒಂದು ಸಣ್ಣ ಸ್ಕಾನರ್ ( ಏಸೆರ್- ಸ್ಕಾನ್‌ಪ್ರಿಸಾ ೬೪೦ ಪಿ) ಕೊಡಿಸಿದ್ದಾನೆ. ನನ್ನ ಕಾಟದಿಂದ ಅವನಿಗೆ ಬೇಸರವಂತೂ ಆಗಿಲ್ಲ ಎಂಬ ಖಾತ್ರಿಯೊಂದಿಗೆ ಅವನಿಗೂ ನಮ್ಮ ಧನ್ಯವಾದಗಳನ್ನು ಹೇಳುತ್ತಿದ್ದೇನೆ.
ಸಂತೋಷದ ಮಧ್ಯೆ ಸಣ್ಣ ಸಣ್ಣ ಕಿರಿಕಿರಿಗಳು
ನಮ್ಮ ಈ ಅಂತರ್ಜಾಲ ತಾಣ ಉದ್ಘಾಟನೆಯಾದಾಗ ಪತ್ರಿಕೆಯೊಂದರ ವರದಿಯಲ್ಲಿ ನಮ್ಮ ಪ್ರಯತ್ನವನ್ನು ಪ್ರಥಮ ಎಂದು ಹೇಳಲಾಗಿದ್ದು ಸ್ವಲ್ಪ ಕಿರಿಕಿರಿಯುಂಟು ಮಾಡಿತು. ನಮಗಿಂತ ಮುಂಚೆ ಶ್ರೀ ಪವನಜರವರು ವಿಶ್ವಕನ್ನಡ.ಕಾಂ ಎಂಬ ಪತ್ರಿಕೆಯನ್ನು ಮೊದಲು ಪ್ರಾರಂಭಿಸಿದರೆಂದು ದಾಖಲಿಸುತ್ತಿದ್ದೇವೆ.
ಅವರ ಪತ್ರಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವೆಬ್ ಮಾಸ್ಟರ್‌ಗಳಿಗಾಗಿಯೇ ರಚಿಸಿಕೊಂಡಿರುವ ಅಂತರ್ಜಾಲತಾಣದಿಂದ ‘ಉತ್ತಮ ತಾಣ’ ವಿನ್ಯಾಸದ ಪ್ರಶಸ್ತಿ ದಕ್ಕಿದೆ. ಅಭಿನಂದನೆಗಳೊಂದಿಗೆ ಸಂತೋಷವನ್ನು ಸೂಚಿಸುತ್ತಿದ್ದೇನೆ.
ಕಂಪ್ಯೂಟರ್‌ಗಳು ಆಗಾಗ್ಯೆ ಕೈ ಕೊಡುವುದು, ಸಿಡಿಲು ಗುಡುಗುಗಳಿಂದ ಮೋಡಂಗಳು ಸುಟ್ಟು ಹೋಗುವುದು, ಟೆಲಿಫೋನ್ ಲೈನ್ ಕೆಟ್ಟು ವಾರಗಟ್ಟಳೆ ನಾವು ಅಪ್‌ಲೋಡ್ ಮಾಡಲಾಗದಂತೆ ಮೂಲೆಯಲ್ಲಿ ಕುಳಿತು ನಮ್ಮನ್ನು ಹಂಗಿಸುವುದು ಇತ್ಯಾದಿ ತಾಂತ್ರಿಕ ಅಡಚಣೆಗಳಿದ್ದಾಗ ಎಸ್.ಪಿ. ರಸ್ತೆಯ ಮೈಕ್ರೋಕಾಂಪ್‌ಹುಡುಗ, ಯುವ ಮಿತ್ರ ತ್ಯಾಗರಾಜ್ ನೆರವಿಗೆ ಬಂದಿದ್ದಾನೆ. ಅವನಿಗೂ ಇಲ್ಲಿ ಧನ್ಯವಾದಗಳು. ಇವನನ್ನು ಸಂಪರ್ಕಿಸಲು ನಾನು ಎಸ್.ಪಿ ರಸ್ತೆಗೆ ಹೋದಾಗಲೆಲ್ಲ ಅಲ್ಲಿನ ಸಣ್ಣಸಣ್ಣ ಹುಡುಗರ ವ್ಯಾಪರಿ ನೈಪುಣ್ಯತೆ, ಚಾಣಾಕ್ಷತನ, ದಗಲ್ಬಾಜಿತನ, ಬಡತನವನ್ನು ಮೀರಿ ಬೆಳೆಯಬೇಕೆಂಬ ಹಂಬಲ ಇತ್ಯಾದಿ ಸಂಗತಿಗಳು ಕಾಡಿದ್ದಿದೆ. ಬರೆಯ ಬೇಕೆಂದನ್ನಿಸಿದೆ. ಅವಕಾಶ ಸಿಕ್ಕಾಗ ನೋಡೋಣ. ಮೇಲಿನ ಎಲ್ಲ ಕಾರಣಗಳಿಗೆ ಈ ಸಂಚಿಕೆ ತಡವಾಗಿರುವುದನ್ನು ಚಾರಣಿಗರು ಅರ್ಥಮಾಡಿಕೊಳ್ಳಬಲ್ಲರು.
ಮುಂದಿನ ಸಂಚಿಕೆಯಲ್ಲಿ ಅನಕೃರವರ ಸಂಧ್ಯಾರಾಗ ಕಾದಂಬರಿ ಪ್ರಕಟವಾಗಲಿದೆ.
ನಿಮ್ಮ ಪ್ರತಿಕ್ರಿಯೆಗಳಿಗೆ , ಸಲಹೆಗಳಿಗೆ ಸದಾ ಸ್ವಾಗತ ಎಂದು ಹೇಳಿ ಮುಗಿಸುತ್ತಿದ್ದೇನೆ.
ಕೀಪ್ ಇನ್ ಟಚ್ ಅನ್ಡ್ ಕೆ ಎಲ್ ಒ ಎಲ್. (ಬೇಕೆಂದೇ ಟು ಪ್ರವೊಕ್ ಈ ಕೊನೆ ಸಾಲು-ಏನಂತೀರಿ?)
ಶೇಖರ್‌ಪೂರ್ಣ
*****
೧೯-೦೫-೨೦೦೧