ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ
ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ
ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು
ಕಟುಕ ಮಗ ಜಾರ್ಜನಿಗೆ ನಾನು ಬೇಡ.
ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ
ಗುಲಾಬಿ ಗಿಡದಲ್ಲಿ ಹೂವಿದ್ದಂತೆ ಎನ್ನುತ್ತಾನೆ,
ಅಜ್ಜಿ ಬಳಿ ಸುಳಿದಾಡಿದರೆ
ಹುಳ ಹಿಡಿವರಂತೆ.
ಆಹಾ ! ಏನಿವನ ಕಲ್ಪನೆ !
ಮಕ್ಕಳು ಹೂವುಗಳು, ಇವನರ್ಧಾಂಗಿ ನಳನಳಿಸುವ ಸಸಿ
ಇವನೇನು ನೆಲವೆ ? ಸುತ್ತಲಿನ ಗಾಳಿಯೆ ?
ಅಥವಾ ಈ ದಾಂಪತ್ಯ ಕೊಂಬೆಯೆ ?
ಮಕ್ಕಳಿಗೆ ಹುಳ ಹಿಡಿಯಲಿಕ್ಕೆ ನಾನೇನು ಕೀಟಗರ್ಭಿಣಿಯೆ ?
ನಗು ಬರಿಸುತ್ತದೆ ಇವನ ಕಲ್ಪನೆ
ನನ್ನ ಮಗನಿಷ್ಟು ಅಲ್ಪನೆ ?
ಕಾಣದ ಬೇರುಗಳ ಕಂಡು ಕನಸಾಗುವ ಹೂವುಗಳು
ಅನಾದಿ ವೃಕ್ಷಕ್ಕೆ ಕಾಣದ ಬಡ್ಡೆ,
ನಾನು ಈ ವೃಕ್ಷಕ್ಕೆ ಸಂಕುಚಿತ ರೂಪ.
ಜಾರ್ಜನ ಬೆಂಕಿಗೆ
ಕ್ಯಾರೊಲಿನ್ ಪೆಟ್ರೋಲು.
ತಪ್ಪು ಅವಳದ್ದಲ್ಲ.
ಜಾರ್ಜು ಜನಿಸುವ ಮುಂಚೆ ಸ್ಕರ್ಟೆತ್ತಿ ಕುಣಿಯುವ ನನಗೆ
ಮುದುಕರ ನೆರಳು ಕೂಡಾ ತಾಗಬಾರದು ಎಂದು ಎಚ್ಚರಿಕೆ.
ನಮಗೆ ಯಾರೂ ಬೇಡ, ಸ್ವಾತಂತ್ರ್ಯ ಸಾಕೆಂದು
ಸುಖದ ಹುಡುಕಾಟ, ಸಂವಿಧಾನವೆ ಕೊಟ್ಟ
ಪ್ರತಿ ಪ್ರಜೆಯ ಹಕ್ಕೆಂದು
ಅಮೆರಿಕದ ನಂಬಿಕೆ. ಈಗಲೂ ಮಾದಕವಸ್ತು ಮೊರೆಹೋಗಿ
ವಾಸ್ತವವೆ ಭ್ರಮೆಯಾಗಿ
ಎಚ್ಚತ್ತಾಗ ಕತ್ತಲಿನ ಭೀತಿ.
ಮೊಮ್ಮಕ್ಕಳನ್ನು ಕ್ಯಾರೊಲಿನ್ ಕಸಿದಿಲ್ಲ
ನಾನೇ ಅವರನ್ನು ಕಳೆದುಕೊಂಡೆ :
ನನ್ನಂತೆ ಅವಳೂ ಕೂಡ ಕಳೆದುಕೊಳ್ಳುತ್ತಾಳೆ.
ಪ್ರತಿಯೊಬ್ಬ ಅಮೆರಿಕನ್ನನಿಗೂ
ವೃದ್ಧಾಪ್ಯ ಶಾಪ.
ಮೊಮ್ಮಕ್ಕಳ ಸಾಮೀಪ್ಯವಿಲ್ಲದೆಯೆ
ಸಾವು ಹುಟ್ಟಿನ ವೃತ್ತ ಸಂಪೂರ್ಣವಾಗದೆಯೆ
ವೃದ್ಧಾಪ್ಯ ಕತ್ತೆ ಬಾಲದ ಡಬ್ಬ.
ಇನ್ನೊಂದು ಕತ್ತೆಯ ಮುಂದೆ
ಅಸಹಾಯಕತೆಯನ್ನು ತೋಡಿಕೊಳ್ಳುವುದಷ್ಟೆ ನಮ್ಮ ಬದುಕು.
*****