‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….?
ಮಾನ್ಯರೆ,
ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು ಯೋಜನೆಗಳನ್ನು ಹಾಕಿದಿರಿ, ಪ್ರೆಸ್ ಮೀಟ್ ಕರೆದಾಗ ಎಲ್ಲರೂ ತಲೆಗೊಂದು ಮಾತನಾಡದೆ, ಎಲ್ಲರ ಪರವಾಗಿ ಒಬ್ಬರು ಮಾತನಾಡುವ, ಸಂಪ್ರದಾಯಕ್ಕೆ ಹಳಿ ಹಾಕಿದಿರಿ. ರೀಮೇಕ್‌ಗಿರುವ ಸೌಲಭ್ಯ ಮಾರ್ಚಿವರೆಗೆ ಸರಕಾರ ಮುಂದೂಡುವಂತೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಂವಾದಿಸುವಾಗ ವಿಷ್ಣುವರ್ಧನ್ ಅವರನ್ನು ನಿಮ್ಮೊಂದಿಗೆ ಕರೆದೊಯ್ದಿರಿ.
ಪ್ರೆಸ್ ಕ್ಲಬ್ ಪ್ರೆಸ್ ಮೀಟ್‌ನಲ್ಲಿ ಅಶ್ಲೀಲ ಚಿತ್ರ ತೆಗೆಯುವವರನ್ನು ಎಚ್ಚರಿಸುತ್ತೇವೆ ಎಂದಿರಿ. ಆ ನಿಟ್ಟಿನಲ್ಲಿ ಮುಂದುವರೆದಲ್ಲಿ ಅಂಥವರನ್ನು ಬ್ಲಾಕ್ ಲಿಸ್ಟ್ ಮಾಡುವೆವು ಎಂದಿರಿ. ಒಟ್ಟಿನಲ್ಲಿ ಖಂಡಿತ ಇದು ಸಾಮಾನ್ಯ ಸಾಧನೆಯಲ್ಲ.
ಸಾಮಾನ್ಯ ಸಾಧನೆಯಲ್ಲ ಎಂದು ಏಕೆ ಹೇಳುತ್ತಿದ್ದೇನೆಂದರೆ ಚಿತ್ರರಂಗದ ಗುಟ್ಟು-ಗುಮಾನಿಗಳನ್ನು, ಸಿಹಿ-ಕಹಿಗಳನ್ನು, ವರದಿ-ವಿಶ್ಲೇಷಣೆಗಳನ್ನು ಅಂದಿನಿಂದ ಇಂದಿನವರೆಗೂ ಮಾಡುತ್ತ ಬಂದಿರುವ ಸಿನಿ ಪತ್ರಕರ್ತರ ಸಂಘ ಎರಡು ಹೋಳಾಗಿ ಇಂದಿಗೂ ನಿಷ್ಕ್ರಿಯವಾಗಿ ಬಿದ್ದಿದೆಯೇ ಹೊರತು ಒಂದಾಗಿ ಹೊಸ ಹುಟ್ಟನ್ನು ತೋರುವ ಪ್ರಯತ್ನ ಇನ್ನೂ ಮಾಡಿಯೇ ಇಲ್ಲ.
ಆ ದೃಷ್ಟಿಯಿಂದ ನಿಮ್ಮ ಸಾಧನೆ ದೊಡ್ಡದು. ಆದರೆ ಚುನಾವಣೆಯ ಸಮಯದಲ್ಲಿ ಶ್ರೀಸಾಮಾನ್ಯನಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಅಂಗೈಲಿ ಆಕಾಶ ತೋರಿಸುತ್ತ ನೂರೆಂಟು ಆಸೆ, ಆಮಿಶಗಳನ್ನೊಡ್ಡಿ-ಕುರ್ಚಿಗಾಗಿ ಕಚ್ಚಾಟ ನಡೆಸುವುದು. ಇಂದಿನ ಡೆಮಾಕ್ರಸಿಯಲ್ಲೊಂದು ಪರಂಪರೆಯೇ ಆಗಿದೆ.
ಈಗ ನಿಮ್ಮ ಆಶ್ವಾಸನೆ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದಂತೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ನೋಡೋಣ….
ಸ್ವಾಮಿ
ನಿಮ್ಮ ಕಛೇರಿಯ ಪಕ್ಕದಲ್ಲಿಯೇ ‘ತ್ರಿಭುವನ’ ಚಿತ್ರಮಂದಿರವಿದೆ. ಅಲ್ಲಿ ‘ಅಪ್ಸರ’ ಎಂಬ ಕನ್ನಡ ಚಿತ್ರವೊಂದು ನಡೆಯುತ್ತಿದೆ ಎಂಬುದು ನಿಮಗೆ ತಿಳಿದಿರಲೇಬೇಕು. ಅ ಚಿತ್ರದ ನಿರ್ದೇಶಕನ ಹೆಸರು ‘ಭರತ್’ ಅಂತೆ.
ಈ ಕಾಲದಲ್ಲಿ ರಾಮ-ಲಕ್ಷಣರಾರು ಭರತ ಶತೃಘ್ನರು ಯಾರು? ಎಂದು ಹೇಳುವುದೇ ಕಷ್ಟ.
ಯಕ್ಷಗಾನ, ಬಯಲಾಟದಲ್ಲಿ ಮುಖವಾಡ ಬಳಸುತ್ತಾರೆ. ಒರಿಜಿನಲ್ ಮುಖವನ್ನು, ಹೆಸರನ್ನು, ವ್ಯಕ್ತಿತ್ವವನ್ನು ಮರೆಮಾಚುವ ಸಾಧನವದು. ನಾನು ಮಾಡುತ್ತಿರುವುದು ಸರಿಯಲ್ಲ ಎನಿಸಿದ ವ್ಯಕ್ತಿಯು ತನ್ನ ಹೆಸರು ಮರೆಮಾಚಿ ಬೇರೊಂದು ಪೆನ್‌ನೇಮ್ ಬಳಸುತ್ತಾನೆ. ಅವನನ್ನು ಗಿಲ್ಟ್‌ಕಾನಷಸ್ ಕಾಡುವುದರಿಂದ.
ಸರಕಾರಿ ಅಧಿಕಾರಿಗಳು ಆಫೀಸರ್‌ಗಳ ಅವಕೃಪೆಗೆ ಪಾತ್ರರಾಗಬಾರದೆಂದು ಅಡ್ಡಹೆಸರಿನಲ್ಲಿ ಬರೆಯುತ್ತಾರೆ. ಟಿ.ವಿ. ಸಿನಿಮಾಗಳ ನಿರ್ದೇಶನ ಮಾಡುವಾಗಲೂ ಇದೇ ಪದ್ಧತಿ ಈಗ ಜಾರಿಗೆ ಬಂದಿದೆ. ಪತ್ರಿಕಾಲಯಗಳಲ್ಲಿ ಕೈತುಂಬ ಸಂಬಳ ಪಡೆಯುವ ಪತ್ರಕರ್ತರೂ ಸಹಾ ಬೇರೆ ಪತ್ರಿಕೆಗಳಿಗೆ ತುಂಬ ಗುಟ್ಟು-ಗುಟ್ಟಾಗಿ ಬೇರೆ ಹೆಸರಿನಲ್ಲಿ ಬರೆಯುವುದು ಹಣ ಸಂಪಾದನೆಯ ದೃಷ್ಟಿಯಿಂದಲೇ.
ಕಾಲ ಕುಲಗೆಟ್ಟು ಹೋಗಿರುವಾಗ ಎಷ್ಟು ಹಣ ಬಂದರೂ ಸಾಕಾಗದು ಎಂಬ ಮಾತು ಸತ್ಯ. ಹಣ ಸಂಪಾದನೆಯ ಸುಲಭೋಪಾಯ ಸೆಕ್ಸ್ ಫಿಲಂಸ್ ಎಂಬುದು ಗಾಂಧಿನಗರಿಗರಿಗೆ ಗೊತ್ತು. ಅದಕ್ಕೆ ಆರೋಗ್ಯ ಶಿಕ್ಷಣ ಎನ್ನುತ್ತಾರೆ. ಏಡ್ಸ್ ಪ್ರಚಾರ ಎನ್ನುತ್ತಾರೆ – ಬಿಚ್ಚಮ್ಮಗಳನ್ನು ತೆರೆಯಮೇಲೆ ತರುತ್ತಾರೆ. ಚಿತ್ರದ ಹೆಸರು ಯಾವುದೋ ಇರುತ್ತದೆ ಮಧ್ಯೆ ದಿಢೀರ್ ಎಂದು ದೇವರು ಪ್ರತ್ಯಕ್ಷವಾದಂತೆ ‘ಬ್ಲೂ ಫಿಲಂಸ್ ಬಿಟ್ಸ್’ ರಾರಾಜಿಸಿ-ಚಿತ್ರಮಂದಿರ ತುಂಬುವಂತೆ ಮಾಡುತ್ತದೆ.
ಪೋಲೀಸ್ ಇಲಾಖೆಯಾಗಲಿ, ಫಿಲಂ ಚೇಂಬರ್‍ಸ್ ಆಗಲಿ ನಿರ್ಮಾಪಕರ ಸಂಘವಾಗಲಿ ಈವರೆಗೆ ಇದಕ್ಕೊಂದು ಮೋಕ್ಷ ಕಂಡುಹಿಡಿಯಲು ಸಾಧ್ಯವೇ ಆಗಿಲ್ಲದಿರುವುದರಿಂದಲೇ ‘ಅಪ್ಸರ’ದಂಥ ಚಿತ್ರ ಗಾಂಧಿನಗರ ಸೆಂಟರ್’ಲ್ಲಿ ರಾಜಾರೋಷವಾಗಿ ಬರುತ್ತದೆ.
ಈ ಚಿತ್ರ ನೋಡಿ ಬಂದ ಮಿತ್ರರ ಕಥಾನಕದ ವಿವರ, ವಿಕೃತಕಾಮದ ಸಂಭೋಗದ ಕ್ರಿಯೆಯ ವಿವರ ಕೇಳಿದಾಗ ಇಂಥ ಅನಾಗರಿಕ ದೃಶ್ಯಗಳು ಹೇಗೆ ಸೆನ್ಸಾರಾದುವು ಎಂದು ಕೇಳುತ್ತಿರುವವರು ಬಹುಮಂದಿ.
ಮತದಾನದಲ್ಲಿ ತುಂಬ ಸೊಗಸಾಗಿ ಅಭಿನಯಿಸಿದ ಅವಿನಾಶ್ ಅಂಥವರು ‘ಅಪ್ಸರ’ದಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿದುಬಂದಾಗ ಚಿತ್ರ ಸಹ್ಯವಿದ್ದೀತು ಎಂದೇ ಎನಿಸುತ್ತದೆ.
ಅವಿನಾಶ್ ಅಂಥ ಸಂಭಾವಿತ ಈ ಚಿತ್ರದಲ್ಲಿರುವರು ಎಂಬ ಕಾರಣಕ್ಕೆ ಬಹುಮಂದಿ ಹೋಗಿದ್ದರು. ಅನಂತರ ಚಿತ್ರ ನೋಡಿದ ಪ್ರೇಕ್ಷಕ ಮಿತ್ರರೊಬ್ಬರು ಅವರನ್ನು ಸಂಪರ್ಕಿಸಿದಾಗ “ಚಿತ್ರ ಹೀಗಿರುತ್ತದೆ ಎಂದು ತಿಳಿದಿರಲಿಲ್ಲ. ಸಾರಿ” ಎಂದು ತಮಗೆ ತಿಳಿಯದೆ ಆದ ಪ್ರಮಾದಕ್ಕೆ ಪರಿತಪಿಸಿದರಂತೆ.
ಇದು ಹೀಗೆ ಮುಂದುವರೆದಲ್ಲಿ ಇದಕ್ಕೆ ತಡೆ ಎಂಬುದೆಲ್ಲಿ? ಕನ್ನಡ, ಕಲೆ, ಸಂಸ್ಕೃತಿ ಎಂದು ಒಂದೆಡೆ ಉದ್ದುದ್ದನೆಯ ಭಾಷಣ, ರಾಜ್ಯೋತ್ಸವದ ಗದ್ದಲದಲ್ಲಿ ಎಲ್ಲ ಮುಳುಗಿದ್ದಾಗ ‘ಸಂದೀಲಿ ಸಮಾರಾಧನೆ’ ಎಂದು ಅಪ್ಸರದಂಥ ಚಿತ್ರ ಓಡುತ್ತಲೇ ಇರುತ್ತದೆ.
ಇದು ಹೀಗೆ ಮುಂದುವರೆದಲ್ಲಿ ಸದಭಿರುಚಿ ಎಂಬ ಪದವನ್ನೇ ಡಿಕ್ಷನರಿಯಿಂದ ಕಿತ್ತೊಗೆಯಬೇಕಾದೀತು.
ಒಬ್ಬರಲ್ಲ ಇಬ್ಬರಲ್ಲ ಎಷ್ಟೊಂದು ಮಂದಿ ಇದ್ದಾರೆ ನಿಮ್ಮ ನಿರ್ಮಾಪಕರ ಸಂಘದಲ್ಲಿ. ದಯಮಾಡಿ ಒಮ್ಮೆ ಯಾರಾದರೂ ಹೋಗಿ ಕಾಮಕೇಳಿಯ ವಿವಿಧ ಭಂಗಿಗಳನ್ನು ಕಾಣ್ತುಂಬ ನೋಡಿದ ಮೇಲಾದರೂ ಇಂಥ ಚಿತ್ರಗಳ ತಡೆಗೆ ಕಾರಣರಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಿ ಎಂದು ವಿನಂತಿಸಲೇ?
*****
(೯-೧೧-೨೦೦೧)
ಕೀಲಿಕರಣ: ಕಿಶೋರ್ ಚಂದ್ರ