(ಕಪ್ಪು ಕಾದಂಬರಿಯ ಮುನ್ನುಡಿ)
ಈ ನನ್ನ ಕಪ್ಪು ಪ್ರೀತಿಯ ಕಾದಂಬರಿ ಮತ್ತೆ ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಈ ಕೆಳಗೆ ಕಾಣಿಸಿದಂತೆ ನಾಲ್ಕು ಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಯಸುವೆ.
ಈ ಕೃತಿ ಪ್ರಕಟವಾದ ವರ್ಷದಲ್ಲಿ ನನ್ನ ಜೀವಕ್ಕೆ ಸಂಚಕಾರ ತಂದಿತ್ತು ಎಂಬ ಬಗ್ಗೆ ಇವರಿಸುವ ಮೊದಲು ನಾನು ಯಾವ ನಮೂನೆಯ ಲೇಖಕ ಎಂಬುದನ್ನು ವಿವರಿಸುವುದು ಒಳ್ಳೆಯದು, ನಾನು; ನನ್ನಂಥ ಗ್ರಾಮೀಣ ಹಿನ್ನೆಲೆಯ ಲೇಖಕರು ಯಾವುದೇ ವಿಶ್ವವಿದ್ಯಾನಿಲಯದಿಂದ ಬರಹ ರೂಢಿಸಿಕೊಂಡವರಲ್ಲ. ನಾವು ಓದಿದ್ದು ಅಕ್ಷರ ಕಲಿತುಕೊಂಡದ್ದು ಎಷ್ಟು ಆಕಸ್ಮಿಕವೋ, ಬರೆಯತೊಡಗಿದ್ದು ಅಷ್ಟೇ ಆಕಸ್ಮಿಕ. ಪುಂಖಾನುಪುಂಖವಾಗಿ ಕಥೆ ಹೇಳುತ್ತಿದ್ದ; ಪದಗಳನ್ನು ಕಟ್ಟಿ ಹಾಡುತ್ತಿದ್ದ ಬೊಜ್ಜು ಬಾಯಿಯ ಅನಕ್ಷರಸ್ಥ ಹಿರಿಯರ ನಡುವೆ ಬಾಲ್ಯ ಕಳೆಯದಿದ್ದಲ್ಲಿ ನನಗೆ ಬರಹದ ಆಸಕ್ತಿ ಮೂಡುತ್ತಿರಲಿಲ್ಲ. ಕಲ್ಲುಗೋಡೆಗಳಿಗೆ ಡಿಕ್ಕಿ ಹೊಡೆದು ತಲೆಯ ತಾಕತ್ತನ್ನು ಪರೀಕ್ಷಿಸುವ ಗೋಜಿಗೂ ಹೋಗುತ್ತಿರಲಿಲ್ಲ. ಪ್ರೌಢಶಾಲೆ ದಾಟುವ ಹೊತ್ತಿಗೆ ನರಸಿಂಹಯ್ಯನವರಿಂದ ಹಿಡಿದು ಅನಕೃ, ತರಾಸುರಂಥವರನ್ನು ಅರಗಿಸಿಕೊಂಡಿದ್ದ ನಾನು ಸಿದ್ಧಗಂಗಾಮಠದಲ್ಲಿ ಮಲ್ಲೇಪುರಂ ವೆಂಕಟೇಶ್‌ರಂಥವರ ಸಹವಾಸದಿಂದ ಒಂದಿಷ್ಟು ಯಶಸ್ವಿ ಭಾವಗೀತೆಗಳನ್ನು ಬರೆಯಲಿಕ್ಕೆ, ಕುವೆಂಪು, ಬೇಮ್ದ್ರೆಯವರಂಥವರ ಕಾವ್ಯಗಳ ಜೊತೆಗೆ ಪಂಪ, ರನ್ನ, ಕುಮಾರವ್ಯಾಸರಂಥ ಹಳಗನ್ನಡ ಕವಿಗಳ ಕಾವ್ಯಗಳನ್ನು ಓದಿಕೊಂಡೆ. ವಾಚಕರವಾಣಿಗೆ ಪತ್ರ ಬರೆಯುವುದರ ಮೂಲಕ ಗದ್ಯ ಬರಹವನ್ನು ರೂಢಿಸಿಕೊಂಡೆ. ಧಾರವಾಢದಲ್ಲಿ ಹೆಡೆಯಾಡುತ್ತಿದ್ದ, ಬುಸುಗುಟ್ಟುತ್ತಿದ್ದ ನವನಿರ್ಮಾಣ ಚಳವಳಿಗಳಲ್ಲಿ ಹೌದೋ, ಅಲ್ಲವೋ ಎನ್ನುವಂತೆ ಭಾಗವಹಿಸಿ ಪ್ರತಿಭಟಿಸುವ, ಉಲ್ಲಮ್ಘಿಸುವ ಚಾಳಿ ಹತ್ತಿಸಿಕೊಂಡೆ. ನಮ್ಮೆಲ್ಲರ ಅದೃಷ್ಟವೋ ಎಂಬಂತೆ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಭವ್ಯ ಭಾರತವನ್ನು ತುರ್ತು ಪರಿಸ್ಥಿತಿ ಎಂಬ ಕತ್ತಲೆಯ ಕೂಪಕ್ಕೆ ತಳ್ಳಿ ಪುಣ್ಯಕಟ್ಟಿಕೊಂಡರು. ಆ ಸಂದರ್ಭದಲ್ಲಿ ಸುಡು ಸುಡುವ, ಹಸಿ ಹಸಿ ಪದ್ಯಗಳನ್ನು ಬರೆಯುತ್ತಿದ್ದ ನನಗೆ ಹೇಗಾದರೂ ಮಾಡಿ ಜೈಲಿಗೆ ಹೋಗಿಉ ಪೋಲೀಸರ ಹೈದರಾಬಾದ್ ಗೋಲಿಯ ರುಚಿ ನೋಡುವ ಆಸೆ ಇತ್ತು. ಅದಕ್ಕಾಗಿ ನಾನು ಇಂದಿರಾಗಾಂಧಿ ವಿರುದ್ಧ ಮಾತಾಡಿದೆ, ಬರೆದೆ, ಗೆಳೆಯರನ್ನು ಕಟ್ಟಿಕೊಂಡು ಜಗದಂಬೆ ಬೀದಿ ನಾಟಕವನ್ನೂ ಆಡಿದೆ. ಆದರೆ ಇಪ್ಪತ್ತರ ಹರೆಯದ ಸಣಕಲು ಶರೀರದ ನನ್ನನ್ನು ಮುಟ್ಟುವ ಧೈರ್ಯ ಅವತ್ತಿನ ಪೋಲೀಸರಿಗೆ ಬರಲೇ ಇಲ್ಲ – ಪೋಲೀಸರಿಗಿಂತ ಮೊದಲೇ ನಮ್ಮಪ್ಪ ನನ್ನನ್ನು ಆಂಧ್ರಪ್ರದೇಶಕ್ಕೆ ಗಡಿಪಾರು ಮಾಡಿ ತಲೆ ನೋವು ಕಡಿಮೆ ಮಾಡಿಕೊಂಡ. ಅಲ್ಲಿ ಒಂದೆರಡು ತಿಂಗಳು ಒಡಹುಟ್ಟಿದ ಅಕ್ಕನಮನೆಗೆ ನೀರು ಹೊತ್ತ ಮೇಲೆ ಮಾಸ್ತರಿಕ ನೌಕರಿ ದೊರಕಿತು.
ನಾನು ಮಾಸ್ತರಿಕೆ ಆರಂಭ್ಸಿದ ವಂದವಾಗಲಿ ಎಂಬ ಶಿಲಾಯುಗ ಜಾಯಮಾನದ ಹಳ್ಳಿಯಲ್ಲೂ ನನ್ನ ಬಂಡಾಯ ಜಾಯಮಾನದ ಗುಣ ದ್ವಿಗುಣಗೊಂಡಿತು. ಅಲ್ಲಿ ಕೇವಲ ಮೇಲ್ಜಾತಿಯವರಿಗೆ, ಮೇಲ್ವರ್ಗದವರಿಗಷ್ಟೇ ಸೀಮಿತಗೊಂಡಿದ್ದ ಸರಕಾರಿ ಶಾಲೆಗೆ ಶೂದ್ರಕೋಮಿಗೆ ಸೇರಿದ ಹುಡುಗರುಪ್ಪಡಿಯನ್ನು ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಸೆಗಣಿ ಬಳಿಯೋ ಮೂಮ್ಡೇವ್ಕೆ ವಿದ್ಯೆ ಹತ್ತೋದಿಲ್ಲಪ್ಪಾ…. ಅಂಥ ಹುಚ್ಚು ಸಾಹಸ ಮಾಡಬೇಡ ಎಂದು ಹೇಳಲು ಪ್ರಯತ್ನಿಸಿದ ಗ್ರಾಮದ ಗೌಡರ, ಜಮೀನ್ದಾರರ ಮಾತಿಗೆ ಸೊಪ್ಪು ಹಾಕಲಿಲ್ಲ. ಅವರ ಕಣ್ಣುಗಳು ಕೆಂಜರಿಯುತ್ತಿದ್ದರು ಲೆಕ್ಕಿಸಲಿಲ್ಲ. ಉಳ್ಳವರ ಎಂಜಲು ಅರಗಿಸಿಕೊಂಡೇ ಸಹಸ್ರ ಸಹಸ್ರ ಕೊರತೆಗಳ ನಡುವೆ ಬದುಕುತ್ತಿದ್ದ ಹೊಲೆಯರ, ಮಾದಿಗರ ಮಕ್ಕಳು ಶಾಲೆಯ ಆಜುಬಾಜು ಸುಳಿಯಬಾರದೆಂದೇ ಸರಕಾರಿ ಶಾಲೆಗೆ ಪಕಾಕಟ್ಟಡ ಆಗದಂತೆ ಅಲ್ಲಿನ ಜಮೀನ್ದಾರಿ ವ್ಯವಸ್ಥೆ ನೋಡಿಕೊಂಡಿತ್ತು. ಆದರ್ಶಗಳ ಗೂಬೆ ಮೇಲೆ ವಿಹರಿಸುತ್ತಿದ್ದ ನಾನು ತುರ್ತುಪರಿಸ್ಥಿತಿ ಎಂಬ ಬಿಲ್ಲು ಬಾಣಹಿಡಿದುಕೊಂಡು ದಲಿತರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಬಗೆಬಗೆಯ ಪ್ರಯತ್ನ ಮಾಡಿದೆ. ಉಳ್ಳವರ ಯಾವುದೇ ಹಂಗು ಲಗಾಮುಗಳಿಂದ ದೂರವಿದ್ದ ನಾನು ಸರಕಾರಿ ಶಾಲೆಯನ್ನು ಮೇಲ್ಜಾತಿಯವರ ಸುಪರ್ಧಿಯಲ್ಲಿದ್ದ ವೀರಭದ್ರ ದೇವರ ಗುಡಿಯಿಂದ ದಲಿತಕೇರಿಯಲ್ಲಿದ್ದ ಕಂದಾರಮ್ಮನ ಗುಡಿಗೆ ವರ್ಗಾಯಿಸಿ ಜಮೀನ್ದಾರಿ ವ್ಯವಸ್ಥೆಯ ಬೆನ್ನಿಗೆ ಬರೆ ಎಳೆದೆ. ಇದರಿಂದ ರೆಡ್ಡಿ ಕೋಮಿನವರು ಬುಸುಗುಟ್ಟ,ಆರಂಭಿಸಿದ್ದು ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೂ ವ್ಯಾಪಿಸಿತು. ದೈಹಿಕವಾಗಿಯೂ ಗಟ್ಟಿಮುಟ್ಟಾಗಿದ್ದ ನಾನು ಯಾವುದೇ ಬುಸುಗುಟ್ಟುವಿಕೆಗೆ ವಿಚಲಿತನಾಗದೆ ಕಪ್ಪೆಗಳಂತೆ ಪುಟಿದು ನೆಗೆದುನೋಡುತ್ತಿದ್ದ ದಲಿತ ಮಕ್ಕಳನ್ನು ಹಿಡಿದು ತಂದು ಅಕ್ಷರ ಕಲಿಸುವಲ್ಲಿ ಯಶಸ್ವಿಯಾದೆ. ದಲಿತ ಕೇರಿಯಲ್ಲಿ ಅಕ್ಷರದ ಅರುಣೋದಯ ಕಾಣಿಸಿಕೊಂಡಿದ್ದು ನನ್ನ ಸತತ ಪ್ರಯತ್ನದಿಂದಾಗಿಯೇ, ಅನೇಕ ವರ್ಷಗಳ ಕಾಲ ದಲಿತ ಬದುಕಿನೊಂದಿಗೆ ನಿಕಟ ಸಂಬಂಧವಿರಿಸಿಕೊಂಡಿದ್ದರಿಂದಾಗಿಯೇ ನನ್ನ ಕಥೆಗಳಲ್ಲಿ ದಲಿತರಾದ ಕಿವುಡ, ಕತ್ತಲ, ಠೊಣ್ಣಿ, ಉಪ್ಪುಳಿ, ಕೊಕ್ಕ, ಚಂದ್ರರಂಥವರು ಸ್ವಾಭಾವಿಕವಾಗಿ ಜಾಗ ಪಡೆದುಕೊಂಡರು. ದಲಿತೇತರರು ದಲಿತರ ಬಗ್ಗೆ ಬರೆಯಬಾರದೆಂದು ಕಡುವಾಗಿ ವಾದಿಸುತ್ತಿರುವರು ನನ್ನದೊಂದು ಯಶಸ್ವಿ ಕಥೆ ದೇವರ ಹೆಣದ ಬಗ್ಗೆ ಅಪಸೊಲ್ಲು ಎತ್ತಿದರು. ದಲಿತರ ಬದುಕು ಹೀಗಿರಲು ಸಾದ್ಯವೇ ಎಂಬ ಅನುಮಾನ ವ್ಯಕ್ತಪಡಿಸುವ ಕರ್ನಾಟಕದ ಅಕ್ಷರಸ್ಥ ದಲಿತ, ನೆರೆಹೊರೆಯ ದಲಿತರ ಬದುಕಿನ ಒಳನಮೂನೆಗಳನ್ನು ನೋಡಿಲ್ಲ. ಊಹೆಗೆ, ಅಕ್ಷರದ ಚಿಮುಟಿಗೆ ನಿಲುಕದ ಎಷ್ಟೋ ದಾರುಣ ಸತ್ಯಗಳು ಆಂಧ್ರದ ಗ್ರಾಮಾಂತರ ಪ್ರದೇಶದಲಿವೆ ಎಂಬ ವಾಸ್ತವ ಗೋಚರಿಸುವುದು. ಒಂದು ಕೋಳಿ, ಒಂದು ಕ್ವಾರ್ಟರ್ ರಂ, ಒಂದು ಸಾವಿರ ನಗದು ರೂಪಾಯಿ ನಗದು ಕೊಟ್ಟರೆ ಸೂಚಿಸಿದವರನ್ನು ನಿರಾಯಾಸವಾಗಿ ಕೊಲೆಮಾಡುವಂಥ ದಲಿತ, ಶೂದ್ರ ಅಲ್ಲಿ ಆಯುಧದ ರೀತಿಯಲ್ಲಿದ್ದಾನೆ. ಅಂಥವರನ್ನು ಅಲ್ಲಿನ ಜಮೀನ್ದಾರಿ ವ್ಯವಸ್ಥೆ ತನ್ನ ಅಸ್ತಿತ್ವದ ರಕ್ಷಣೆಗೆ ಬಳಸಿಕೊಳ್ಳಿತ್ತಿದೆ. ಕೊಲೆ, ಸುಲಿಗೆ, ಖಟ್ಳೆಗಳಿಂದಾಗಿ ಜೈಲು ಪಾಲಾದವರಿಗೂ ಮತ್ತು ಅವರ ಹೆಂಡತಿ ಮಕ್ಕಳಿಗೂ ನಡುವೆ ಅಕ್ಷರದ ಸೇತುವೆಯಾಗಿ ಕೆಲಸ ಮಾಡಿದ ಅನುಭವ ನನಗಿದೆ. ಬೀದಿಯಲ್ಲಿ ಹೋಗುವ ಎಷ್ಟೋ ಮಾರಿಗಳನ್ನು ಮೈ ಮೇಲೆಳೆದುಕೊಂಡ ಅನುಭವ ನನಗಿದೆ. ಇಂಥ ಸಂದರ್ಭದಲ್ಲಿ ನಾನು ನಿರ್ವಾತ ಸ್ಥಿತಿಯಲ್ಲಿ ಕೂತು ಕಾಲ್ಪನಿಕ ಕಥೆಗಳನ್ನು ಬರೆಯಲಿಲ್ಲ. ನನ್ನ ಒಂದೊಂದು ಕಥೆಯ ಹಿಂದೆ ಒಂದೊಂದು ಸಂಕಟ, ತಾಪತ್ರಯಗಳಿವೆ. ಕರ್ನಾಟಕದ ಓದುಗರೊಂದಿಗೆ ನಿರಂತರವಾಗಿ ಸಂವಾದಿಸುವ; ನಿಕಟ ಸಂಪರ್ಕವಿರಿಸಿಕೊಳ್ಳುವ, ನನ್ನ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ಭೀಕರ ಒಂಟಿತನದ ಬೇಗುದಿಯನ್ನು ನೀಗಿಕೊಳ್ಳಲೆಂದೇ ಅನೇಕ ಕಥೆಗಳನ್ನು ಒಂದರ ಹಿಂದೆ ಒಂದರಂತೆ ಬರೆದೆ. ಹೀಗೆ ನನಗೆ ತೋಚಿದಂತೆ ಬರೆಯುವುದು ನನಗೆ ಅನಿವಾರ್ಯವಾಗಿತ್ತು. ಬರಹದ ಮೂಲಕ ನನ್ನ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಬರಹ ನನ್ನ ಮಾನಸಿಕ ಬೇಗುದಿಯನ್ನು ಕಡಿಮೆಮಾಡಿ ಮನಸ್ಸನ್ನು ನಿರಮ್ಮಳಮಾಡುತ್ತಿತ್ತು. ಇನ್ನೊಬ್ಬರು ನನ್ನನ್ನು ಕಥೆಗಾರನೆಂದು ಗುರುತಿಸುವಷ್ಟರ ಮಟ್ಟಿಗೆ ನಾನು ಅನೇಕ ಕಥೆಗಳನ್ನು ಬರೆದೆ. ಆಗ ಸ್ವಲ್ಪ ಸೊಕ್ಕು ಬಂದು ಬೆಂಗಳೂರಿನ ಗೆಳೆಯರೆದುರು ಧಿಮಾಕಿನಿಂದ ಅಡ್ಡಾಡುತ್ತಿದ್ದೆ. ಆ ಸೊಕ್ಕು, ಧಿಮಾಕು ಜಮೀನ್ದಾರಿ ವ್ಯವಸ್ಥೆಯ ಪ್ರಭಾವದಿಂದ ಬಂದದ್ದು…. ಕನಿಷ್ಠ ಸೌಲಭ್ಯಗಳಿಲ್ಲದೆ ಬದುಕುತ್ತಿರುವಲ್ಲಿನ ಹಳ್ಳಿಗಳಿಗೆ, ಉಯ್ಯಾಲವಾಡ, ಕೋಸಿಗೆ ಔಕು ಮುಂತಾದ ಪಾಳೆ ಪಟ್ಟುಗಳಾಗಲೀ, ಗಂಗುಲ ಪ್ರತಾಪರೆಡ್ಡಿ. ಚೆಲ್ಲಾರಾಮ ಕ್ರಿಷ್ಣರೆಡ್ಡಿ, ಭೂಮಾನಾಗಿ ರೆಡ್ಡಿಯರಂಥ ಜಮೀನ್ದಾರರಾಗಲೀ ಬಿಟ್ಟರೆ ಬೇರೊಂದು ಮಾಹಿತಿ ತಿಳಿಯದು. ಅಂಥ ವಾತಾವರಣ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕ್ರಮ, ವಯಕ್ತಿಕ ಕ್ಷೇಮ ಲಾಭ ಹೇಗಿರಬೇಡ? ಶ್ರೀರಾಕುಳಂ ರೈತ ಹೋರಾಟಕ್ಕೆ ಸಂಬಂಧಿಸಿದಂಥ ಸಾಹಿತ್ಯದ ಪ್ರಭಾವದಿಂದಾಗಿ ನನ್ನ ಬಹುಪಾಲು ಆರಂಭಿಕ ಕಥೆಗಳಲ್ಲಿ ಕ್ರೌರ್ಯ ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅಷ್ಟೇ ನಿಚ್ಚಳವಾಗಿತ್ತು. ಭಾಷೆ, ಅನುಭವ ಮತ್ತು ಅಭಿವ್ಯಕ್ತ ಕ್ರಮ ಕನ್ನಡದ ಲೇಖಕರಿಗಿಂತ ಭಿನ್ನವಾಗಿತ್ತು. ಭಿನ್ನವಾಗಿರುವುದು ಕೂಡ. ಇದನ್ನೆಲ್ಲ ಓದಿದ ವಿಮರ್ಶಕರು ನನ್ನನ್ನು ಪಾಶ್ಚಿಮಾತ್ಯ ಲೇಖಕರೊಂದಿಗೆ ಸಮೀಕರಿಸಿ ನೋಡುವುದು, ಕನ್ನಡದ ಬಹುಮುಖ್ಯ ಕಥೆಗಾರರ ಪ್ರಭಾವ ನನ್ನ ಮೇಲಿದೆಯೆಂದು ವಾದಿಸುವುದು ಎಷ್ಟರಮಟ್ಟಿಗೆ ಸರಿ? ಅಂದ ಮಾತ್ರಕ್ಕೆ ನಾನು ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ದೇವನೂರು ಮಹಾದೇವನಂಥವರ ತರಗತಿಗಳಲ್ಲಿ ಓದಿಲ್ಲವೆಂದು ಅರ್ಥವಲ್ಲ…. ಒಬ್ಬ ಕಥೆಗಾರ ಯಾವ ಯಾವ ಶಾಲೆಗಳನ್ನು ದಾಟಬೇಕೋ ಅದನ್ನೆಲ್ಲ ನಾನೂ ಯಶಸ್ವಿಯಾಗಿ ದಾಟಿದ್ದೇನೆ…. ಕನ್ನಡ ಮತ್ತು ತೆಲುಗು ಭಾಷೆಗಳ ಸಣ್ಣ ಕಥಾ ಪ್ರಕಾರದ ಸತ್ವವನ್ನು ಅರಗಿಸಿಕೊಳ್ಳಿತ್ತಲೇ ಕಥೆಗಳನ್ನು ಬರೆಯತೊಡಗಿದಂಥವನು ನಾನು…. ಇರಲಿ…. ಈ ಹಿನ್ನೆಲೆಯಿಂದ ೧೯೮೦ರ ಹೊತ್ತಿಗೆ ಸುಮಾರು ಕಥೆಗಳನ್ನು ಬರೆದು ಅನೇಕರಿಂದ ಹಲೋ, ಹಲೋ ಎನ್ನಿಸಿಕೊಳ್ಳುತ್ತಿದ್ದ ನಾನು ಈ ನನ್ನ ಪ್ರಪ್ರಥಮ ಕಾದಂಬರಿ ಬರೆದದ್ದೆ ತೀರಾ ಆಕಸ್ಮಿಕ. ಆ ಹೊತ್ತಿಗಾಗಲೆ ಹುಂಬತನಕ್ಕೆ ಹೆಸರಾಗಿದ್ದ ನಾನು ‘ಇನ್ನಾದರೂ ಸಾಯಬೇಕು’ ಎಂಬ ಕಥೆ ಬರೆದು ಬಳ್ಳಾರಿಯ ಹೋಟೆಲ್ ಉದ್ಯಮಿಯೋರ್ವರ ಕೋಪಾರುಣನೇತ್ರಗಳಿಗೆ ತುತ್ತಾಗಿ ಕೋರ್ಟುಕಟ್ಟಲೆ ಹತ್ತಿಳಿದಿದ್ದೆ. ಕೋರ್ಟಿಗೆ ಹೋಗುವಂಥ ಕತೆಗಳನ್ನು ಬರೆಯುವ ನಾನೆಂಬ ಅಹಂನಲ್ಲಿದ್ದ ನನಗೂ ಮತ್ತು ಮಲ್ಲೇಪುರಂ ವೆಂಕಟೇಶರೆಂಬ ಪಂಡಿತರಿಗೂ ೧೯೭೦ರಲ್ಲಿ ಸೃಜನಶೀಲಕ್ರಿಯೆಗೆ ಸಂಬಂಧಿಸಿದಂತೆ ಮಾತಿನ ಚಕಮಕಿಯಾಯಿತು. “ಕಥೆ ಬರೆದಷ್ಟು ಸುಲಭವಲ್ಲ ಕಾದಂಬರಿ ಬರೆಯುವುದು” ಅವರೂ, ಅದ್ಯಾವ ಮಹಾಸಂಗತಿ ಎಂದು ನಾನೂ ಅರ್ಧಗಂಟೆ ಕಾಲ ವಾದಿಸಿದೆವು. ಮಾತಿಗೆ ಮಾತು ಬೆಳೆದು ನಾನು ಒಂದೇ ವಾರದಲ್ಲಿ ಕಾದಂಬರಿ ಬರೆಯುವೆನೆಂದೂ; ಅದು ವಿಮರ್ಶಕರಿಗೆ ಮೆಚ್ಚುಗೆಯಾಗಿ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆಯುವುದೆಂದೂ ಅವರಿಗೆ ಮಾತುಕೊಟ್ಟೆ.
ಬೆಂಗಳೂರಿಂದ ವಂದವಾಗಿಲಿಗೆ ಮರಳಿ ಬಂದೊಡನೆ ಒಂದು ವಾರದಲ್ಲಿ ಕಾದಂಬರಿ ಬರೆದು, ಅದಕ್ಕೆ ಕಪು ಎಂಬ ಶೀರ್ಶಿಕೆ ಕೊಟ್ಟೆ. ನಾನೆಂದೂ ನನ್ನ ಬರಹವನ್ನು ಎರಡನೆ ಸಾರಿ ಓದುವ, ತಿದ್ದುವ ತಾಪತ್ರಯಕ್ಕೆ ಸಿಲುಕಿದವನಲ್ಲ. ಅದರಂತೆ ಕಪ್ಪು ಕಾದಂಬರಿಯ ಹಸ್ತಪ್ರತಿಯ ಮೇಲೆ ಕಣ್ಣಾಡಿಸಲಿಲ್ಲ. ಅದನ್ನು ಕಂಕುಳಲ್ಲಿಟ್ಟುಕೊಂಡು ಸೀದ ಬೆಂಗಳೂರಿಗೆ ಹೋಗಿ ಛಾಲೆಂಜರ್ ಮತ್ತು ಛಾರ್ಜರ್ ವೆಂಕಟೇಶ್‌ರೆಂಬ ನಿರುಪದ್ರವಿ ಮಿತ್ರರ ಮುಂದೆ ಹಿಡಿದೆ. ಅವರು ಓದಿದರೋ ಇಲ್ಲವೋ ನೆನಪಿಲ್ಲ ಆದರೆ ಅವರು ಶಹಬ್ಬಾಶ್ ಕುಂವೀ ಎಂದು ಬೆನ್ನುತಟ್ಟಿದ್ದು ಮಾತ್ರ ನೆನಪಿದೆ.
ಪ್ರಕಾಶನಕ್ಕೆ ಸಂಬಂಧಿಸಿದಂತೆ ಅನೇಕ ಎಡರುತೊಡರುಗಳು ಎದುರಾದವು. ಅದು ಮಲ್ಲಿಗೆ ಎಂಬ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಲಿ ಎಂದು ಯಾಕೆ ಆಶಿಸಿದೆನೆಂದರೆ ಕನ್ನಡದ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರಾದ ಎಸ್.ದಿವಾಕರ್ ಅವರು ಸಂಪಾದಕರಾಗಿದ್ದು ನವೋದಯ ಕಾಲದ ಅನೇಕ ಮಹತ್ವದ ಕಥೆಗಳನ್ನು ಗಿರಡ್ಡಿಯವರ ಮಾತುಗಳೊಂದಿಗೆ ಮಾಸಿಕದಲ್ಲಿ ಪ್ರಕಟಿಸುತ್ತಿದ್ದರು. ಅವರಿಗೆ ಕಾದಂಬರಿಯ ಹಸ್ತ ಪ್ರತಿ ನೀಡಿ ತಿಂಗಳುಗಟ್ಟಲೆ ಕಾದೆ. ಅದನ್ನು ಓದಿರದಿದ್ದ ಅವರು ಇಂಗ್ಲೀಷ್ ಕಾದಂಬರಿಗಳ ಬಗ್ಗೆ ಗಂಟೆಗಟ್ಟಲೆ ಮಾತಾಡಿ ನನ್ನನ್ನು ಹಿಂಡಿ ಹಿಪ್ಪೆಮಾಡಿದರು. ಉಪಾಯಾಂತರದಿಂದ ಕಾದಂಬರಿಯ ಹಸ್ತಪ್ರತಿಯನ್ನು ಪಡೆದು, ಕಂಕುಳಲ್ಲಿ ಶಿಳ್ಳೆ ಹಾಕುತ್ತ ಸೀದ ಗೀತಾ ಪ್ರಕಾಶಕರ ಬಳಿಗೆ ಹೋದೆ. ನನ್ನ ದೃಷ್ಟಿಯಲ್ಲಿ ಆಗ ಅವರೋರ್ವರೇ ಶ್ರೇಷ್ಠ ಪ್ರಕಾಶಕರಾಗಿದ್ದರು. ಹೋದೊಡನೆ ಪ್ರವರ ಹೇಳಿಕೊಂಡು ಅವರ ಕೈಗೆ ಕಾದಂಬರಿಯ ಹಸ್ತಪ್ರತಿ ಕೊಟ್ಟು ರಾಜ ಗಾಂಭೀರ್ಯದಿಂದ ನಿಂತುಕೊಂಡೆ. ಆ ಮಾಹಾನುಭಾವರು ಹಸ್ತಪ್ರತಿ ಕಡೆಗೊಮ್ಮೆ; ನನ್ನ ಕಡೆಗೊಮ್ಮೆ ಅನುಮಾನಾಸ್ಪದ ರೀತಿಯಲ್ಲಿ ನೋಡಿ ನನ್ನ ನಾಮಾಂಕಿತ ಕೇಳಿದರು, ಹೇಳಿದೆ. ನಕ್ಕು “ಕುಂ ವೀರಭದ್ರಪ್ಪ ಎಂಬ ಹೆಸರು ಕೇಳಿದ್ರೆ ಯಾರು ಈ ಕಾದಂಬರಿ ಓದೋದಿಲ್ರೀ…. ಸಾಯಿಸುತೆ, ರಾಧಾದೇವಿ, ಅಶ್ವಿನಿ…. ಇಂಥ ಹೆಸರಿಟ್ಕೊಂಡ್ರೆ ನಾವಿದನ್ನು ಪ್ರಕಟಿಸ್ತೀವಿ” ಎಂದರು. ಅದನ್ನು ಕೇಳಿ ಸಿಟ್ಟು ಬೇಸರ ಒಟ್ಟಿಗೆ ಬಂದವು. ಸಾಲಸೋಲಮಾಡಿ ನಾನೇ ಪ್ರಕಟಿಸಬೇಕೆಂದು ಪರಮಮಿತ್ರ ಜಾಣಗೆರೆಯವರ ಕೈಗೆ ಕೊಟ್ಟು “ಕುಂಬಳಕಾಯಿ ನಿಮ್ದೆ; ಕುಡುಗೋಲು ನಿಮ್ದೆ” ಎಂದು ಭಾರ ಹಾಕಿದೆ. ಮುಂದೆ ಸಂಸಾರದ ತಾಪತ್ರಗಳಿಂದಾಗಿ ಅದರ ಹೊಣೆಯನ್ನು ಹಗರಿ ಬೊಮ್ಮನಹಳ್ಳಿಯ ಯುವಕರ ಸಂಘ ಪ್ರಕಾಶನದ ಹಿರಿಯ ಆತ್ಮೀಯ ಮಿತ್ರರಾದ ಗುರುಮೂರ್ತಿಯವರ ಕೊರಳಿಗೆ ಕಟ್ಟಿದೆ. ಯಾಕಾಗಬಾರದೆಂದು ಅವರು ಅದನ್ನು ಪ್ರಕಟಿಸಿ ಬಿಟ್ಟರು. ಬಿಡುಗಡೆ ಆಗುವುದಕ್ಕಿಂತ ಮೊದಲು ಕಪ್ಪು ಕಾದಂಬರಿಯ ಐದಾರು ಪ್ರತಿ ತಂದು ವಂದವಾಗಿಲಿಯ ಮಹಾನ್ ಓದುಗರಾದ ತಿಪ್ಪಾರೆಡ್ಡಿ, ಸುಶೀಲಮ್ಮರಿಗೆ ಕೊಟ್ಟು ಕಾಲರ್ ಸರಿಪಡಿಸಿಕೊಂಡೆ.
ಒಂದು ದಿನ ಶಾಲೆಗೆ ಹೊರಟಿದ್ದ ನನ್ನನ್ನು ತುರುಬಿ ಪ್ರಹ್ಲಾದರೆಡ್ಡಿ “ಮೇಸ್ಟ್ರೆ! ಹೇಳ್ದೆ ಕೇಳ್ದೆ ಊರು ಬಿಟ್ಟು ಹೋಗಿಬಿಡಿ” ಎಂದರು, ಬಾಯಿ ಒಣಗಿತು. “ಯಾಕ್ರಿ?” ಅಂದೆ, “ನೀವು ಊರವರ ಮೇಲೆ ಅದೇನೋ ಕಾದಂಬರಿ ಗೀದಂಬರಿ ಬರೆದೀರಂತಲ್ರಿ…. ನಿಮ್ಮ ತಲೆ ಬೋಳಿಸಿ ಕತ್ತೆ ಮೇಲೆ ಕುಂಡ್ರಿಸಿ ಮೆರವನಿಗೆ ಮಾಡಬೇಕಂತ ಊರವರು ಒಳಗೊಳಗೆ ಪ್ಲಾನ್ ಮಾಡ್ತಿದ್ದಾರೆ; ಆ ಗಲಾಟೆಯಲ್ಲಿ ನಿಮ್ಮ ಕೊಲೇನೂ ಆಗಬಹ್ದು…. ಅದ್ಕೆ ಈಗಿಂದೀಗ್ಲೆ ಊರು ಬಿಟ್ಟು ಹೋಗಿಬಿಡ್ರಿ” ಎಂದು ಅಂಗಲಾಚಿದರು. ಅದನ್ನು ಕೇಳಿ ನಾನು ಕುಸಿದುಬಿಟ್ಟೆ.
ಮುಖ್ಯ ರಸ್ತೆಯಿಂದ ಐದಾರು ಮೈಲಿ ದೂರದಲ್ಲಿ ದೀಪದಂತಿದ್ದ ಆ ಊರಲ್ಲಿ ಕೊಲೆಗಿಲೆ ನಡೆದರೂ ಹೊರ ಪ್ರಪಂಚಕ್ಕೆ ಅಷ್ಟು ಸುಲಭವಾಗಿ ಗೊತ್ತಾಗುವುದು ಸಾಧ್ಯವಿರಲಿಲ್ಲ. ಗ್ರಾಮದಲ್ಲಿ ನಡೆಯುತ್ತಿದ್ದ ಎಷ್ಟೋ ದೊಂಬಿಗಳು, ಕೊಲೆಗಳು ಮುಖಂಡರ ಪಂಚಾಯ್ತಿಗಳಿಂದಾಗಿ ಅಲ್ಲೇ ಮುಚ್ಚಿಕೊಂಡು ಬಿಡುತ್ತಿದ್ದವು. ಮೇಸ್ಟ್ರುಗಳೆಂದರೆ ರೆಡ್ಡಿ ಕೋಮಿನವರ ಸಾಕುನಾಯಿಗಳಂತಿರಬೇಕೆಂದೇ ಭಾವಿಸಿದ್ದಂತಹ ಗ್ರಾಮ ಅದಾಗಿತ್ತು. ಅಲ್ಲಿ ಕೆಲಸ ಮಾಡಿದ ಮೇಸ್ಟ್ರುಗಳು ಆ ಗೌಡನ ಮನೆಯಲ್ಲೊಂದಿಷ್ಟು, ಈ ಗೌಡನ ಮನೆಯಲ್ಲೊಂದಿಷ್ಟು ಉಂಡು, ಅವರೊಂದಿಗೆ ಇಸಪೀಟು, ಮಟಕಾ ಆಡಿ ಹೇಗೋ ಒಂದು ರೀತಿ ಕಾಲಕಳೆದು ಹೋಗಿದ್ದರು. ಆದರೆ ನಾನು ದಲಿತ, ಶೂದ್ರರನ್ನು ಅಕ್ಷರಸ್ಥರನ್ನಾಗಿ ಮಾಡಿದ್ದು, ನನ್ನಿಂದ ವಿದ್ಯೆ ಕಲಿತ ಅವರು ಎದೆ ಸೆಟೆಸಿಕೊಂಡು ಅಡ್ಡಾಡುತ್ತಿದ್ದುದು, ಚಪರ ಚನ್ನಪ್ಪನ ಗುಂಡನ್ನು ಅದೋನಿಯ ಮಾಟಿಗರ ಬೇಡರಿಂದ ಎತ್ತಿಸಿ ಊರ ಪ್ರಮುಖ ಗೌಡನ ಬಾಯಿಯಿಂದ ಸಾರ್ವಜನಿಕವಾಗಿ ಸುಳ್ಳು ಹೇಳಿಸಿ ಅವರ ಪ್ರತಿಷ್ಠೆಯ ಬೆನ್ನಿಗೆ ಬರೆ ಎಳೆದದ್ದು, ಇಂಥ ಎಷ್ಟೋ ಕಾರಣಗಳಿಂದ; ಸುಧಾರಣೆಗಳಿಂದ ಒಳಗೊಳಗೇ ಕೆರಳಿದ್ದ ಜಮೀನ್ದಾರಿ ಮಂದಿ ನನ್ನ ಕಾದಂಬರಿಯನ್ನೇ ಒಂದು ನೆಪವಾಗಿರಿಸಿಕೊಂಡು ಅಲ್ಲಿಯ ಮುಗ್ಧ ಜನರನ್ನು ನನ್ನ ವಿರುದ್ದ ಎತ್ತಿಕಟ್ಟುವಲ್ಲಿ ಯಶಸ್ವಿಯಾದರು.
ದೈಹಿಕವಾಗಿ ಸ್ಟ್ರಾಂಗ್ ಇದ್ದ ನನ್ನನ್ನು ಅಷ್ಟು ಸುಲಭವಾಗಿ ಅಟ್ಯಾರ್ ಮಾಡುವುದು ಸಾಧ್ಯವಿರಲಿಲ್ಲ. ಶಿವಲಿಂಗಯ್ಯ, ಮಾನಪ್ಪಾಚಾರಿಯರಂಥ ಅಪಾ ಪೋಲಿಯರು ಸ್ಕೂಲ್ ಬಳಿಗೆ ಬಂದು ಬಾಯಿಗೆ ಬಂದಂತೆ ಬಯ್ದು ಹೋದರು. ನಾನು ಏಳೆಂಟುಮಂದಿ ಬಾಡಿಗೆ ಬಂಟರಿಗೆ ಕುಡಿಸಿ ತಿನ್ನಿಸಿ ಮೈಗಾವಲು ಇರಿಸಿಕೊಂಡು ಅಡ್ಡಾಡತೊಡಗಿದೆ. ನನ್ನ ಹೆಣ ಇಂದು ಉರುಳಬಹುದು, ನಾಳೆ ಉರುಳಬಹುದೆಂದು ಜಾತಕಪಕ್ಷಿಗಳಮ್ತೆ ಕಾಯುತ್ತಿದ್ದ ಗ್ರಾಮಸ್ಥರು ನಾನಿನ್ನು ಬದುಕಿರುವುದು ಕಂಡು ಪದೇಪದೆ ನಿರಾಶರಾಗುತ್ತಿದ್ದರು. ಸೊಂಟದಲ್ಲಿ ಸೈಕಲ್ ಚೈನು, ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬೆಂಗಾವಲಿನಡುವೆ ಸಹಜ ಕ್ರಿಯೆಗಳನ್ನು ಅರ್ಧಂಬರ್ಧ ತೀರಿಸುತ್ತ ಹೇಗೋ ಮೂರುನಾಲ್ಕು ದಿನ ಕಳೆದ ಮೇಲೆ ನನ್ನನ್ನು ರಾಮದೇವರಗುಡಿ ಪಂಚಾಯ್ತಿ ಕಟ್ಟೆಗೆ ಕರೆದರು. ಗುರುಬಸಪ್ಪ (ಎರಡು ಮೂರು ಖೂನಿ ಮಾಡಿ ದಕ್ಕಿಸಿಕೊಂಡಿದ್ದಂಥ ವ್ಯಕ್ತಿ. ಈಗ ಗುರುಬೋಧೆ ಸ್ವೀಕರಿಸಿ ಸಾಧು ಸಂತನಾಗಿದ್ದಾನೆ) ಹೋಗದಂತೆ ನನ್ನನ್ನು ತಡೆದ, “ಎರಡರಲ್ಲೊಂದು ಪೈಸಲ್ಲಾಗಲಿ” ಎಂಬ ಕಾರಣದಿಂದ ನಾನು ಹಿಂಗಾವಲು, ಮುಂಗಾವಲು ಇಟ್ಟುಕೊಂಡು ಅಲ್ಲಿಗೆ ಹೋದೆ. ಅಲ್ಲಿದ್ದ ಒಬ್ಬೊಬ್ಬ ಸದ್‌ಗೃಹಸ್ಥ ಬಾಯಿಗೆ ಬಂದಂತೆ ಮಾತಾಡಿದ. ನಾನು ನನ್ನು ಕಾದಂಬರಿ ಸದರೀ ಗ್ರಾಮಕ್ಕೂ ಯಾವ ಸಂಬಂಧವಿಲ್ಲವೆಂದೂ, ದೂರದ ಕೋಸಿಗಿಯಲ್ಲಿದ್ದ ನಾರಾಯಣ ದೊರೆ (ಶಾಂಬೆನಗಲ್‌ರವರ ನಿಶಾಂತ್ ಚಿತ್ರಕ್ಕೆ ಸ್ಪೂರ್ತಿ ನೀಡಿದ ಸ್ವಾತಂತ್ರೋತ್ತರ ಪಾಳೆಗಾರ., ಅನೇಕ ನಮೂನೆಯ ದೌರ್ಜನ್ಯಕ್ಕೆ, ಕ್ರೌರ್ಯಕ್ಕೆ ಹೆಸರಾಗಿದ್ದ ಆತ ಆದವಾನಿಯಲ್ಲಿ ೧೯೭೪ರಲ್ಲಿ ಹಾಡುಹಗಲೇ ಕೊಲೆಯಾದ) ಕುರಿತು ಬರೆದದ್ದೆಂದೂ ಪರಿಪರಿಯಾಗಿ ಹೇಳಿದೆ. ಆದರೆ ಅವರಾರೂ ನನ್ನ ಮಾತನ್ನು ಕೇಳಲು ಸಿದ್ಧರಿರಲಿಲ್ಲ. ನಾನೊಬ್ಬ ಹಾರ್ಡ್‌ಕೋರ್ ನಕ್ಸಲೈಟ್‌ನೆಂದೇ ತಿಳಿದಿದ್ದ ಗ್ರಾಮದ ಸರಪಂಚ ಓಂಕಾರರೆಡ್ಡಿ “ಎಷ್ಟು ಪುಸ್ತಕ ಮಾಡಿಸಿದ್ದೀ, ನಿನ್ನಂಥ ನಾಸ್ತಿಕ ಮಾಡುವ ಆಣೆ ಪ್ರಮಾಣಗಳನ್ನು ನಾವೆಲ್ಲ ನಂಬೋದಿಲ್ಲ…. ಹತ್ತು ಸಾವಿರ ಪುಸ್ತಕಗಳನ್ನು ಪ್ರಿಂಟ್ ಮಾಡಿಸಿದ್ದೀ ಅಂತ ನಮ್ಗೆಲ್ಲ ಗೊತ್ತಾಗಿದೆ. ಮರ್ಯಾದೆಯಿಂದ ಅವನ್ನೆಲ್ಲ ತಂದು ನಮ್ಮ ಕಣ್ಣೆದುರಿಗೆ ಸುಡಬೇಕು. ಇಲ್ಲಾಂದ್ರೆ ನಿನ್ ಕಥೇನ ಮುಗಿಸ್ತೀವಿ” ಎಂದ. ಅದಕ್ಕೆ ನಾನು ಒಪ್ಪಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಊರುಬಿಟ್ಟೆ. ಹಾಗೆ ಊರು ಬಿಟ್ಟವನು ಅಪ್ಪಿತಪ್ಪಿ ಆ ಊರಲ್ಲಿ ಕಾಲಿರಿಸಲಿಲ್ಲ.
ಮುಂದೆ ಈ ಕಾದಂಬರಿಯನ್ನು ಪ್ರೊ. ಚಂದ್ರಶೇಖರ ಪಾಟೀಲ ಬಿಡುಗಡೆ ಮಾಡುತ್ತ ಶ್ರೇಷ್ಠ ಕೃತಿ ಎಂದು ಹೊಗಳಿದರು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ವಿಮರ್ಶಕರು ಕಾದಂಬರಿಯನ್ನು ಮೆಚ್ಚಿ ಬರೆದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೮೩ರ ಸಾಲಿನ ಉತ್ತಮ ಕಾದಂಬರಿ ಪ್ರಶಸ್ತಿ ನೀಡಿ ಗೌರವಿಸಿತು.
ಕರ್ನಾಟಕದ ಒಂದೆರಡು ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ತರಗತಿಗಳಿಗೆ ಈ ಕಾದಂಬರಿಯನ್ನು ಪಠ್ಯವಾಗಿರಿಸಿದವು. ನನ್ನನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಕಾದಂಬರಿಕಾರರನ್ನಾಗಿ ಸ್ವೀಕರಿಸಿದ ಈ ನನ್ನ ಪ್ರೀತಿಯ ಕಪ್ಪು ಕಾದಂಬರಿ ಹುಟ್ಟಿಸಿದ ದಿಗಿಲು, ತೋರಿಸಿದ ಪ್ರೀತಿ, ತೆರೆದ ಜೀವನಾನುಭವ ಅಷ್ಟಿಷ್ಟಲ್ಲ. ಈ ಕಾದಂಬರಿ ಸೃಷ್ಟಿಸಿದ ಜಾಡಿನಲ್ಲಿ ನಡೆಯುತ್ತಲೆ ಬೇಲಿ ಮತ್ತು ಹೊಲ, ಅಸ್ತಿ, ಕೊಟ್ರಿ ಹೈಸ್ಕೂಲಿಗೆ ಸೇರಿದ್ದು ಮುಂತಾದ ಅನೇಕ ಕಾದಂಬರಿಗಳನ್ನು, ಮತ್ತು ಇತ್ತೀಚೆಗೆ ಶಾಮಣ್ಣ ಎಂಬ ಬೃಹತ್ಕಾದಂಬರಿಯನ್ನೂ ಬರೆದೆ.
ರಾಜೇಂದ್ರ ಪ್ರಿಂಟರ್‍ಸ್‌ನ ಮಿತ್ರ ಲೋಕಪ್ಪನವರು ತಮ್ಮ ಸಂವಹನ ಪ್ರಕಾಶನದ ಮೂಲಕ ಪ್ರಕಟಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ.
ಕಳೆದ ವರ್ಷ ಭೌತಿಕವಾಗಿ ನಮ್ಮಿಂದ ಅಗಲಿದ ಈ ನೆಲದ ಶ್ರೇಷ್ಠ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣನವರಿಗೆ ಈ ಕೃತಿಯನ್ನು ಅರ್ಪಿಸಿರುವೆ.
ಮತ್ತೊಮ್ಮೆ ಈ ನನ್ನ ಪ್ರೀತಿಯ ಬರಹವನ್ನು ಓದುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನಮಸ್ಕಾರಗಳು.
ಕೊಟ್ಟೂರು (ಬಳ್ಳಾರಿ ಜಿಲ್ಲೆ) ಕುಂ. ವೀರಭದ್ರಪ್ಪ
ದಿ. ೨೪-೦೭-೧೯೯೯
*****
ಕೀಲಿಕರಣ: ಸಿ ಶ್ರೀನಿವಾಸ (ಚೀನಿ), ಗುರುಪ್ರಸಾದ್ (ಪಚ್ಚಿ)