ವೇದ: ಅಪ್ತವಾಗದೇ ಹೋದ ಮತ್ಸ್ಯಕನ್ಯೆಯ ವಿಷಾದಗೀತ

-೧-

ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ ಸ್ಥಿತಿಯಂತೂ ಯಾವಾಗಲೂ ಸೃಷ್ಟಿಯಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ‘ಸರ್ವಾಧಿಕಾರ ಏಕಾರ್ಥ’ದ ಪಠ್ಯ ಎಂಬ ಸ್ಥಿತಿ ಯಾವಾಗಲೂ ಉಂಟಾಗಲಿಲ್ಲ. ಹೀಗಾಗಿ, ವೇದ ಎನ್ನುವುದಕ್ಕೆ ವ್ಯಾಖ್ಯಾನ ಮುಕ್ತತೆಯೇ ಮೂಲಭೂತ ಸ್ವಭಾವವಾಗಿದ್ದು, ವೇದಾಧಾರಿತ ಧರ್ಮಗಳು ಅವನ್ನು ಅನೇಕ ಸಾರಿ ಅಪಾರ ಏಕಾಗ್ರತೆಯಿಂದ ಸರ್ವಾಧಿಕಾರೀ ಏಕಾರ್ಥಕ್ಕೆ ತಿರುಗಿಸಲು ಪ್ರಯತ್ನಿಸಿದವು. ಉದಾಹರಣೆಗೆ, ಭಾರತೀಯ ಸನ್ನಿವೇಶದಲ್ಲಿ ಪಾಷಂಡಿತನದ ವ್ಯಾಖ್ಯೆಗೆ ವೇದಪ್ರಾಮಾಣ್ಯವನ್ನೇ ಬಳಸಲಾಯಿತು. ಫ್ಲಾಹರ್ಟಿ ‘ಹಿಂದೂ ಧರ್ಮದಲ್ಲಿನ ಪಾಷಂಡಿತನದ ಸ್ವರೂಪ’ ಎಂಬ ಲೇಖನದಲ್ಲಿ ಪಾಷಂಡಿತನದ ಪಟ್ತಿ ನೀಡುತ್ತಾಳೆ. ಯಾರು ಪಾಷಂಡಿಗಳಲ್ಲ? ಶಿವಾರಾಧಕರಲ್ಲಿ ಅನೇಕ ಪಂಥಗಳು ಪಾಷಂಡಿ. ವಿಷ್ಣು ಭಕ್ತಿಯ ಪಂಥಗಳಲ್ಲಿ ಅನೇಕವು ಪಾಷಂಡಿ. ಅವರು ಇವರನ್ನು ಅ-ವೈದಿಕ ಎನ್ನುತ್ತಿದ್ದರು. ಇವರು ಅವರನ್ನು ಅ-ವೈದಿಕ ಎನ್ನುತ್ತಿದ್ದರು. ಆದರೆ, ಅವೆಲ್ಲ ತುಂಬ ಪರಿಷ್ಕೃತವಾದ ತರ್ಕ-ವಿವಾದಗಳಾಗಿ ಮಾತ್ರ ಮುಗಿಯುತ್ತಿದ್ದೇವೆಯೇ ಹೊರತು, ಇಡೀ ಸಮಾಜವನ್ನು ನಿಯಂತ್ರಿಸುವ ಏಕತ್ರ ಲೌಕಿಕ ಶಕ್ತಿಗಳಾಗಿ ಬೆಳೆಯಲಿಲ್ಲ. ಅದಕ್ಕಾಗಿಯೇ ‘ವೇದವೆಂಬುದು ಓದಿನ ಮಾತು’ ಎಂಬ ಉಗ್ರ ಮಾತು ಉಡಾಫೆಯ ಮಾತಾಗದೆ ಗಂಭೀರ ತತ್ವದ ಮಾತಾಗಿ ಉಳಿದು ಬಂದಿತ್ತು. ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ವೇದಗಳ ಆಪ್ತ ರಹಸ್ಯಾತ್ಮಕತೆ ಮುಂದೆ ಸಾಮಾಜಿಕ ನಿಷಿದ್ಧವಾಗಿ ಬೆಳೆದಂತೆ, ಅವುಗಳ ಅನುಭಾವಿ ಮತ್ತು ದಾರ್ಶನಿಕ ಸೃಜನಶೀಲತೆ ಕಡಿಮೆಯಾಗುತ್ತ ಬಂತು. ಜಾತಿಪದ್ಧತಿಯ ಕಾರಣಕ್ಕಾಗಿ ವೇದದ ಲಭ್ಯತೆ ಸ್ತ್ರೀ ಮತ್ತು ಶೂದ್ರರಿಗೆ ಇಲ್ಲವಾದದ್ದೆ ಅದರ ಶಕ್ತಿಯೂ ಸೀಮಿತವಾಗಿಬಿಟ್ಟಿತು. ಹೀಗಾಗಿ, ಮುಂದೆ ಬಂದ ಭಕ್ತಿ ಮುಂತಾದ ಆಂದೋಲನಗಳಲ್ಲಿ ವೇದದ ಸೃಜನಶೀಲ ಉಪಯುಕ್ತತೆಯೇ ತುಂಬ ಗೌಣ ಎಂದಾಗಿಬಿಟ್ಟಿತು. ವೇದಗಳು ಜನತೆ ತಲುಪಲಾರದ, ಮುಖಾಮುಖಿಯಾಗಲಾರದ ಒಂದು ಅಧಿಕಾರದ ರಹಸ್ಯಾತ್ಮಕ ನಿಯಂತ್ರಣದಲ್ಲಿವೆ ಎಂಬ ಸ್ಥಿತಿ ಭಾರತೀಯ ದರ್ಶನಗಳ ಮೇಲೆ ಉಂಟುಮಾಡಿದ ಪರಿಣಾಮ ಊಹಾತೀತ. ಆಪ್ತ ರಹಸ್ಯಾತ್ಮಕತೆ ಮತ್ತು ಸಾಮಾಜಿಕ ನಿಷೇಧಗಳ ನಡುವೆ ವ್ಯತ್ಯಾಸ ಮಾಯವಾಗಿದ್ದರ ಬಗ್ಗೆ ಸಾಂಪ್ರದಾಯಿಕ ಆಚಾರ್ಯರಲ್ಲಿ ಅನೇಕರಿಗೆ ಕೋಪವಿತ್ತು. ರಾಮಾನುಜಾಚಾರ್ಯರು ಬಂಡೆದದ್ದೇ ಈ ರಹಸ್ಯಾತ್ಮಕತೆ ಜಾತಿ ನಿಷೇಧವಾಗಿ ಪರಿವರ್ತನೆಯಾಗಿದ್ದರ ಬಗ್ಗೆ.

ವೇದಗಳಿಗೆ ಇವುಗಳಿಂದ ನಷ್ಟವಾಯಿಯೆ? ಅಥವಾ ಭಾರತೀಯರ ದಾರ್ಶನಿಕ ಸೃಜನಶೀಲತೆಗೂ? ಈ ಪ್ರಶ್ನೆಗೆ ಉತ್ತರ ಕೊಡುವುದು ತುಂಬ ಕಷ್ಟ. ಜನರಿಗೆ ವಿಶಾಲ ಲಭ್ಯತೆ ಇರದಿದ್ದರೆ ದೇವರೂ ಕ್ಷೀಣಿಸುತ್ತಾನೆ. ಅಥವಾ ಜನರ ನಡುವೆ ಬಾಳಿ ಬೆಳೆಯದಿದ್ದರೆ ದೈವೀಗ್ರಂಥಗಳೂ ನೆಲ ಕಾಣದ ಬೀಜವಾಗುತ್ತವೆ. ಆತ್ಮಕ್ಕೆ ಒಡಲಿರದಿದ್ದರೆ ಅದೂ ಅಶರೀರಿಯಾಗಿಬಿಡುತ್ತದೆ. ನೆರೂದ ಇದನ್ನು ತನ್ನ ಮಾರ್ಮಿಕ ಕವನವೊಂದರಲ್ಲಿ ಶೋಧಿಸುತ್ತಾನೆ. ಕುಡುಕರ ನಡುವೆ ಮತ್ಸ್ಯಕನ್ಯೆಯೊಬ್ಬಳು ಜಲಜಗತ್ತಿನಿಂದ ತೇಲಿ ಬರುತ್ತಾಳೆ. ಅವಳನ್ನು ಗುರುತಿಸದ ಕುಡುಕರು ಆಕೆಯ ಮೇಲೆ ಉಗುಳುತ್ತಾರೆ. ಸಿಗರೇಟಿನಿಂದ ಸುಡುತ್ತಾರೆ. ಆಕೆ ಮತ್ತೆ ಸಾಗರಕ್ಕೆ ವಾಪಸಾಗುತ್ತಾಳೆ. ನೆರೂದ ಇಲ್ಲಿ ಬರೆಯುವ ಸಾಲು ತುಂಬ ಮುಖ್ಯ: ‘ಆಕೆ ಮತ್ತೆ ಸಾವಿನ ಕಡೆಗೆ ತೇಲಿದಳು. ’ ಆಕೆ ಸಾವಿನ ಕಡೆಗೆ ತೇಲಿದಳೆ? ಆಕೆ ದೈವವೇ ಆಗಿದ್ದರೂ ಮರ್ತ್ಯರ ನಡುವೆ ಮಾತ್ರ ಆಕೆ ಸಮೃದ್ಧವಾಗಿರಬಲ್ಲಳು. ಅದು ಬೇರು-ಕೊಂಬೆಗಳ ಸಂಬಂಧ. ಹೀಗೆ ಅಮೂರ್ತವಾಗಿ ಹೇಳುವುದಾದರೆ, ವೇದಗಳ ಲಭ್ಯತೆಯ ವಿಸ್ತರ ಕಡಿಮೆಯಾದ್ದರಿಂದ ಅವುಗಳ ದಾರ್ಶನಿಕ ಸಮೃದ್ಧತೆಯೂ ಕಡಿಮೆಯಾಗಿದೆ. ಅದು ಆ-ಚಾರಿತ್ರಿಕ ಎಂಬ ಮಾತು ಸರಿ. ಆದರೆ, ಚರಿತ್ರೆಯಲ್ಲಿ ಅವು ಬೆಳೆಯುವಲ್ಲಿ ವೈವಿಧ್ಯತೆಯೂ ಇಲ್ಲವಾಯಿತು. ಅವು ಮತ್ತೆ ಲೌಕಿಕ ಸಾಮಾನ್ಯರ ಜೀವನದಲ್ಲಿ ಇಳಿದು ಬಂದಾಗ ಏನಾಗುತ್ತದೆ? ಮಾರ್ಕ್ವೆಜ್‌ನ ಕಥೆಯೊಂದರಲ್ಲಿ ರೆಕ್ಕೆಗಳಿರುವ ಅಲೌಕಿಕ ಮುದುಕ ಬರುತ್ತಾನೆ. (ನರಹಳ್ಳಿ ಬಾಲಸುಬ್ರಹ್ಮಣ್ಯರ ಮಾರ್ಕ್ವೆಜ್‌ನ ಅನುವಾದಿತ ಕಥೆಗಳ ಸಂಗ್ರಹದಲ್ಲಿದೆ ಈ ಕೃತಿ). ಆತ ಅಲೌಕಿಕ, ಆ ಆ-ಸಾಮಾನ್ಯ. ಆದರೆ ಅವನೂ ಕ್ಷೀಣವಾಗುತ್ತಾನೆ. ಲಯವಾಗುತ್ತಾನೆ. ಹೀಗೆ, ವೇದಗಳೂ ಕೂಡಾ ಭಾರತೀಯರ ಮಟ್ಟಿಗೆ ಜೀವನ ವಿದೂರವಾಗಿ ಲಯವಾಗಿ ಬಿಟ್ಟಿವೆ.

ವೇದಗಳು ಈಗ ರೆಕ್ಕೆಗಳಿರುವ ಅಲೌಕಿಕ ಮುದುಕ. ಕುಡುಕರ ನಡುವೆ ತೇಲಿದ ಸ್ವಪ್ನ ಕನ್ಯೆ: ಪರಸ್ಪರ ನಷ್ಟ, ಪರಸ್ಪರ ಲಯ.

– ೨ –

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ನಂತರದ ಆದರ್ಶವಾದಿ ದಿನಗಳಲ್ಲಿ ಸಾಂಪ್ರದಾಯಿಕ ಸಂಸ್ಕೃತ ವಿದ್ವತ್ತಿಗೂ ಪ್ರಗತಿಪರ ಆದರ್ಶಗಳಲ್ಲಿ ಪರಂಪರೆಯನ್ನು ಅರ್ಥೈಸುವ ಹಠವಿತ್ತು. ವಿಜ್ಞಾನ ಮತ್ತು ಪಾಶ್ಚಾತ್ಯ ಸಂಸ್ಕ್ರಿತಿಗಳ ಬೆಳಕಿನಲ್ಲಿ ತೌಲನಿಕವಾಗಿ ಭಾರತೀಯ ಸಂಸ್ಕೃತಿಯನ್ನು ವಿಶ್ಲೇಷಿಸುವ ಕ್ರಮ ಆಗ ಬೆಳೆದಿತ್ತು. ವೇದಗಳಲ್ಲಿ ಎಲ್ಲವೂ ಇವೆ ಎಂಬ ಅಪ್ರಬದ್ಧ ಉತ್ಸಾಹ ಒಂದು ಕಡೆಗೆ. ಇನ್ನೊಂದು ಕಡೆಗೆ “ವೈದಿಕ ಸಂಸ್ಕ್ರಿತಿ ಮಾನವನ ಸಂಸ್ಕೃತಿಯ ಶೈಶವಾವಸ್ಥೆಯದು” ಎಂಬ ಅಭಿಪ್ರಾಯ. ಈ ಎರಡು ಅತಿಗಳ ಮಧ್ಯೆ ಮಾನವ ಬದುಕಿನ ಮೂಲಭೂತ ಸತ್ಯಗಳನ್ನು ಕಾಣುವ ಒಂದು ನಿರ್ದಿಷ್ಟ ಕ್ರಮವಾಗಿ ವೇದಾಧ್ಯಯನ ಮಾಡಿದ ವೇದಪಂಡಿತರ ಒಂದು ಪರಂಪರೆ ಇತ್ತು. ಆ ಪರಂಪರೆ ಕನ್ನಡದಲ್ಲಿ ಸಾಕಷ್ಟು ಸೃಜನಶೀಲವಾದ ಕೆಲಸ ಮಾಡಿತ್ತು. ಪಶ್ಚಿಮೇತರ ದಾರ್ಶನಿಕ ನೆಲೆ ತಿಳಿಯುವುದಕ್ಕೆ ಇದು ತುಂಬ ಅವಶ್ಯ.

ವೇದಗಳ ಬಗ್ಗೆ ನನಗಿರುವ ಆಸಕ್ತಿ ಮೂಲತಃ ಸೌಂದರ್ಯಾತ್ಮಕ ಮತ್ತು ತಾತ್ವಿಕ. ಅದನ್ನು ದಿವ್ಯದರ್ಶನಸಾರ ಎಂದು ನನ್ನ ವೈದಿಕೇತರ ಮನಸ್ಸು ಒಪ್ಪಲಾರದು. ಆದರೆ, ಈ ಅನುಮಾನ, ಕಟ್ಟೆಚ್ಚರಗಳು ವೈದಿಕ ವಾಕ್ಯ ಸಾಗರದಲ್ಲಿ ಕಾಲಿಟ್ಟಾಗ ಹಾಗೇ ಕರಗಿ ಹೋಗುತ್ತವೆ. ಬೌದ್ಧದರ್ಶನ-ಅದರಲ್ಲೂ ಮುಖ್ಯವಾಗಿ ನಾಗಾರ್ಜುನ-ವೈದಿಕ ಸಾಹಿತ್ಯಸಮೂಹವನ್ನು ದಟ್ಟವಾಗಿ ಅನುಮಾನಿಸಿದ್ದು, ನಿರಾಕರಿಸಿದ್ದು ಈ ಕಾರಣಕ್ಕಾಗಿಯೇ. ಇವೆಲ್ಲ ‘ಮೆಟಫಿಸಿಕಲ್ ಸ್ಪೆಕ್ಯುಲೇಷನ್’ ಎಂದು, ಅಧ್ಯಾತ್ಮಿಕ ಊಹಾಪೋಹಗಳು ಎಂದು ಬೌದ್ಧರು ಉಗ್ರವಾಗಿ ಟೀಕಿಸಿದರು.

ಆದರೆ, ಆಧ್ಯಾತ್ಮಿಕಾನುಭವದಲ್ಲಿ ಸೌಂದರ್ಯಾತ್ಮಕ ಪ್ರಯಾಣ ಸಲ್ಲದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡಿದೆ. ಪಶ್ಚಿಮದ ಸಮಾಜ ವಿಜ್ಞಾನ ಮತ್ತು ವೇದಾಧ್ಯಯನ ಕ್ರಮದ ಒಂದು ಮಾದರಿ ವೇದದ ರಹಸ್ಯಾತ್ಮಕ ಪ್ರತಿಮೆಗಳನ್ನು ನೈಸರ್ಗಿಕ ವ್ಯಾಪಾರದ ಅಭಿನಯ ಎಂದು ಕರೆದವು. ಮಾರ್ಕ್ಸ್‌ವಾದಿ ವಿದ್ವಾಂಸ ಕೋಶಾಂಬಿಯಂಥವರು ಕೂಡಾ ಇದಕ್ಕೆ ಬಲಿಯಾದರು. ಆದರೆ, ವೇದಗಳಲ್ಲಿ ಪ್ರತಿಮಾರೂಪದ ಆಶ್ಚರ್ಯಕರ ಚಿಂತನೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸರಳ ತಾತ್ವಿಕ ಸೂತ್ರಕ್ಕೆ ಹೊದಲಾರದ ಬಹುಮುಖೀ ವೈವಿಧ್ಯತೆ ಇದೆ. ಇಲ್ಲಿ ಭೌತವಾದೀ ದನಿಗಳಿವೆ. ಜಗತ್ತು ಅಂತಿಮವಾಗಿ ನಿರ್ನಾಮವಾಗುವ ಒಂದು ಉದ್ದೇಶಹೀನ ಚಲನೆ ಎನ್ನುವ ಉಚ್ಛೇದವಾದಿಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ವೈತದ ದನಿ ಇದೆ. ಬೌದ್ಧ, ಜೈನರ ಛಾಯೆಗಳೂ ಕಾಣುತ್ತವೆ. ಆದರೆ ಈ ಕೃತಿಯ ಮಿತಿ ಎಂದರೆ ಒಂದು ನಿರ್ದಿಷ್ಟ ‘ಸಾಮರಸ್ಯ’ ತತ್ವದ ಹಿನ್ನೆಲೆಯಲ್ಲಿ ಋಗ್ವೇದವನ್ನು ಸಂಗ್ರಹಿಸಿರುವುದು. ಈ ಚೌಕಟ್ಟಿನಾಚೆಗಿನ ಪ್ರತಿಮೆಗಳು, ದೃಶ್ಯಗಳು ವೇದದಲ್ಲಿವೆ. ವೇದದ ಮುಖ್ಯಗುಣ ಅದರ ಬಹುಮುಖತೆ. ಆದರೆ ಇವೆಲ್ಲವೂ ಅಡಕವಾಗಿರುವುದು ನಾನು ಮೊದಲೇ ಹೇಳಿದ ಹಾಗೆ ಪ್ರತಿಮಾ ಮಾರ್ಗದ ಚಿಂತನೆಯಲ್ಲಿ.

ಪ್ರತಿಮಾಮಾರ್ಗ ಎಂದರೇನು? ಉದಾಹರಣೆಗೆ, ಚಕ್ರದ ಪ್ರತಿಮೆಯನ್ನೇ ತೆಗೆದುಕೊಳ್ಳಿ ಅದು ಋತ. ಲೋಹಿಯಾರ ಇತಿಹಾಸಚಕ್ರ ದರ್ಶನದ ಬೇರುಗಳು ಇಲ್ಲೇ ಇವೆ ಎನ್ನುವುದು ಆಶ್ಚರ್ಯಕಾರಿಯಾದರೂ ಸತ್ಯ. ಈ ಚಕ್ರದ ಚಲನ ನಿಸರ್ಗದಲ್ಲಿದೆ. ಪಶು-ಪಕ್ಷಿ, ಪ್ರಾಣಿಗಳ ಪ್ರಾಣ ವ್ಯಾಪಾರದಲ್ಲಿದೆ. ದೇವತೆಗಳ ಕ್ರಿಯೆಯಲ್ಲೂ ಚಕ್ರದ ಚಲನೆ ಇದೆ. ಮಾನವನ ಧೀಃಶಕ್ತಿ ಮೂಲಭೂತ ಸತ್ಯದ ಹುಡುಕಾಟದಲ್ಲಿ ಪ್ರತಿಮೆಗಳನ್ನು ಮಾತ್ರ ಸೃಷ್ಟಿಸುತ್ತದೆ. ಹಾಗೆಯೇ ಚಕ್ರದ ಜತೆಗೆ ನದಿಯ, ಜೀವನದಿಯ ಪ್ರತಿಮೆಯೂ ಒಟ್ಟಿಗೇ ಉಕ್ಕುತ್ತದೆ. ಈ ಪ್ರತಿಮೆಗಳು ಸಮಷ್ಟಿ, ನಿಸರ್ಗ, ವೈಯಕ್ತಿಕ ಹೀಗೆ ಮೂರು ಪಾತಳಿಗಳಲ್ಲಿ ಹಬ್ಬಿ ಬೆಳೆಯುತ್ತವೆ. “ವಿಶ್ವಕರ್ಮ ವಿಶ್ವ ಯಜ್ಞವೆಂಬ ಗಾನಾತ್ಮಕವಾದ ವಸ್ತ್ರವನ್ನು ಹೆಣೆಯುತ್ತಾನೆ” ಎಂಬ ರೀತಿಯ ವಾಕ್ಯಗಳ ಬಗ್ಗೆ ಬೃಹತ್ ಪುಸ್ತಕಗಳನ್ನು ಬರೆಯಬಹುದು.

ನಿಸರ್ಗದ ಶಕ್ತಿಗಳೇ ಪ್ರತಿಮೆಗಳಾಗುತ್ತವೆ. ಆದರೆ, ಈ ಪ್ರತಿಮೀಕರಣದಲ್ಲಿ ನಿಸರ್ಗದ ವ್ಯಾಪಾರದ ಸರಳ ಪ್ರತಿಫಲನವಿಲ್ಲ. ಅಗ್ನಿ ಎನುವುದು ಬರೀ ಬೆಂಕಿಯಲ್ಲ. ಅಗ್ನಿ ಎನ್ನುವುದು ನಿತ್ಯವಾದ ಇಳಾರೂಪಿ. ಅದು ಸರಸ್ವತಿ ರೂಪವೂ ಹೌದು. ಆತ ಕವಿ. ಅಗ್ನಿ ಯಾಕೆ ಕವಿ? ಅಥವಾ ಕವಿ ಯಾಕೆ ಅಗ್ನಿ? ವೈದಿಕ ಕಾವ್ಯ ಮೀಮಾಂಸೆಯ ಬಹುಮುಖ್ಯ ಹೊಳಹುಗಳು ಇಲ್ಲಿ ಸಿಗುತ್ತವೆ. ಕವಿಗಳು “ಋತದ ಪಥವನ್ನು ಪ್ರವೇಶಿಸಿ ಅತ್ಯಂತ ಗೂಢವಾದುದೂ ಅತ್ಯುತ್ತಮವಾದದೂ ಆದ ರಹಸ್ಯವನ್ನು ಅರಿಯುತ್ತಾರೆ”. ಹಾಗೆಯೇ ಛಂದಸ್ಸಿನ ಬಗ್ಗೆಯೂ ಇರುವ ವೈದಿಕ ಉಪನಿಷತ್ ವಿಚಾರ ಒಂದು ಹೊಸ ತಾತ್ವಿಕ ಪ್ರಸ್ಥಾನವನ್ನು ತೆರೆಯಬಲ್ಲದು. ಇದನ್ನು ಪ್ರೊ. ಚಕ್ರವರ್ತಿ ತಮ್ಮ ಇನ್ನೊಂದು ಇಂಗ್ಲಿಷ್ ಕೃತಿಯಲ್ಲಿ ವಿವರಿಸಿದ್ದಾರೆ.

ಸಾವಿನಿಂದ ಭೀತರಾದ ದೇವತೆಗಳು ಛಂದಸ್ಸಿನ ಮುಸುಕು ಧರಿಸುತ್ತಾರೆ. ವೇದತ್ರಯದ ಛಂದಸ್ಸಿನ ಪರದೆಯಲ್ಲಿ ಮರೆಯಾಗುತ್ತಾರೆ. ‘ಛದ್’ ಎಂದರೆ ಪರದೆ, ಮರೆ ಎಂಬರ್ಥವೂ ಇವೆ. ಸಾವಿನಿಂದ ಪಾರಾಗುವ ಆಸೆ ಛಂದಸ್ಸಿನ ಕಲ್ಪನೆಯ ಹಿನ್ನೆಲೆಯಲ್ಲಿ ಇದೆ ಎಂಬ ವಿಚಾರ ಕಾವ್ಯ ಮೀಮಾಂಸೆಯ ದೃಷ್ಟಿಯಿಂದ ರೋಮಾಂಚಕಾರಿ. ಆದರೆ, ಛಂದಸ್ಸಿನ ಮರೆ ಕೂಡಾ ದೋಷಪೂರ್ಣ. ದೇವತೆಗಳನ್ನು ಸಾವು ಮತ್ತೆ ಬಂದು ಕಾಡುತ್ತದೆ. ಗಾಯತ್ರಿ ಎಂಬ ದೈವತಕ್ಕೆ ಇಷ್ಟೆಲ್ಲಾ ಆಯಾಮಗಳು ಮಿಂಚುತ್ತಾ ಹೋಗುತ್ತವೆ. ಛಂದಸ್ಸಿನ ವಿಶ್ಲೇಷಣೆಗೆ ಆಧ್ಯಾತ್ಮಿಕ ಆಯಾಮ ಬಂದುಬಿಡುತ್ತದೆ.

ಈ ಚರ್ಚೆಯನ್ನು ಸಮಕಾಲೀನ ಕನ್ನಡ ಸಂಸ್ಕೃತಿಯ ವಿವೇಚನೆಗೆ ತಂದು ನಿಲ್ಲಿಸಲು ಸಾಧ್ಯ. ಕನ್ನಡ ಸಂಸ್ಕೃತಿ ರೂಪುಗೊಂಡಿರುವುದೇ ವೈದಿಕ-ವೈದಿಕೇತರ ಧಾರೆಗಳ ಮಿಲನ ಮತ್ತು ಸಂಘರ್ಷದಿಂದ. ವೈದಿಕಾಧ್ಯಯನದ ಅತ್ಯುತ್ತಮವನ್ನು ವೈದಿಕೇತರ ಅತ್ಯುತ್ತಮ ಎದುರಾದಾಗಲೇ ಕನ್ನಡ ಸಂಸ್ಕೃತಿ ತನ್ನ ಶಕ್ತಿ, ಸೌಂದರ್ಯವನ್ನು ಪಡೆದಿರುವುದು. ಹಳ್ಳಿ ಹೆಂಗಸಿನ ಹಾಡಿನಲ್ಲಿ ಕಾಣುವ ದೇವಿ ಹಾಗೂ ವೈದಿಕ ಋಷಿಗಳ ಅದಿತಿ ಎದುರುಬದುರಾಗಿಯೇ ಕನ್ನಡದ ಅನನ್ಯ ಸೌಂದರ್ಯ ಹುಟ್ತಿದೆ. ಆದರೆ ಇಂದು ಕನ್ನಡ ಸಂಸ್ಕೃತಿಯಲ್ಲಿ ಅಥವಾ ಕನ್ನಡ ಭಾಷೆಯೊಳಗೆ ಅತ್ಯುತ್ತಮ ವೈದಿಕ ಸಾಧನೆಗಳೇ ಕಾಣುತ್ತಿಲ್ಲ. ಹಿಂದೂ ಮತಾಂಧ ರಾಜಕಾರಣ ವೈದಿಕ ಸಂವೇದನೆಯನ್ನೂ ಹಿಗ್ಗಿಸುವುದಿಲ್ಲ. ಕನ್ನಡವನ್ನೂ ಹಿಗ್ಗಿಸುವುದಿಲ್ಲ.

ಜತೆಗೆ ಋಕ್‌ಸಂಹಿತ ಸಾಹಿತ್ಯ ಸಮೂಹದಲ್ಲಿ ಇರುವ ಜಾತ್ಯಾತೀತವಾದ, ಪ್ರಗತಿಪರವಾದ ಸಂವೇದನಾಕ್ರಮಗಳಿಗೆ ನಾವೂ ಮುಖಾಮುಖಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯಲ್ಲಿ ಹರಿದುಬಂದಿರುವ ಹಲವು ಪ್ರಾಣಧಾರೆಯಲ್ಲಿ ಯಾವುದೂ ಊನವಾಗದ ಹಾಗೆ, ಅಂಗವಿಕಲವಾಗದ ಹಾಗೆ ನಾವಿಂದು ನೋಡಿಕೊಳ್ಳಬೇಕಾಗಿದೆ. ಅದಾಗದಿದ್ದರೆ ಪಶ್ಚಿಮದಿಂದ ಬರುವ ಅಪಾಯಕಾರಿ ಖಡ್ಗಧಾರೆಗಳಿಂದಾಗಿ ನಾವು ನುಚ್ಚುನೂರಾದೇವು. ಇಲ್ಲ, ಒಳಗಿಂದಲೇ ಹುಟ್ಟುವ ಅಪಾಯಕಾರೀ ಹಿಂದೂ ಮತಾಂಧರ ಹೊದೆತಕ್ಕೆ ನಾಶವಾದೇವು. ಮತ್ತೆ ಸಾಂಸ್ಕೃತಿಕ ದೇಶೀವಾದ ಸಮಾಜವಾದಿ ಮೌಲ್ಯಗಳನ್ನು ಒಳಗೊಳ್ಳಬಲ್ಲದು ಎಂಬುದನ್ನು ನಮ್ಮ ಸಂಸ್ಕೃತಿ ಸಾಧಿಸಲು ಸಾಧ್ಯವಾದಾಗ ಮಾತ್ರ ಕನ್ನಡ ಸಂಸ್ಕೃತಿ ಬೆಳೆಯುತ್ತದೆ.

ಸಾಂಸ್ಕೃತಿಕ ವಿನಾಶ ಎಂದರೆ ಒಂದು ವಿಶೇಷ ಪರಿಣಿತಿಯನ್ನು ಕಣ್ಮರೆಯಾಗಲು, ಕರಗಿಹೋಗಲು ಅವಕಾಶಕೊಡುವುದು. ಈ ವಿಶೇಷ ಪರಿಣಿತಿಯ ಮಾತು ಎಲ್ಲ ರಂಗಗಳಿಗೂ ಸಲ್ಲುತ್ತದೆ. ಒಬ್ಬ ಬಿದಿರು ಕೆಲಸದಾತ, ಒಬ್ಬ ಬೆಳ್ಳಿ-ಬಂಗಾರ ಕೆಲಸದಾತ, ಒಬ್ಬ ಬಡಗಿ, ಒಬ್ಬ ಚಿತ್ರಕಾರ, ಒಬ್ಬ ನೃತ್ಯಗಾರ, ಒಬ್ಬ ಗಮಕಿ, ಒಬ್ಬ ನೇಕಾರ, ಒಬ್ಬ ಬಣ್ಣಗಾರ ಮರೆಯಾಗುವುದು ಎಷ್ಟು ವಿಷಾದದ ಸಂಗತಿಯೋ, ಹಾಗೆಯೇ ಒಬ್ಬ ಸಂಪ್ರದಾಯಸ್ಥ ಪಂಡಿತನ ಪರಿಣಿತಿ ನಿರುಪಯುಕ್ತವಾಗುವುದೂ ಕೂಡ.

(ಪ್ರೊ. ಜಿ. ಎನ್. ಚಕ್ರವರ್ತಿಯವರ ‘ಧರ್ಮಚಕ್ರ’ ಕೃತಿಗೆ ಬರೆದ ಸಂಪಾದಕೀಯ). (೧೯೯೩)
*****

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.