೧. ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ ನಿಮ್ಮ ಶರಣ ಸಂಬಂಧ
೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ
ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ
ನಿಮ್ಮ ನಿಲವನನುಭವ ಸುಖಿ ಬಲ್ಲ
೩ ಜಲದೊಳಗಣ ಕಿಚ್ಚು
ಜಲವ ಸುಡದೆ ಜಲವು ತಾನಾಗಿದ್ದಿತು ನೋಡಾ
ನೆಲೆಯನಱಿದು ನೋಡಿಹೆನೆಂದಡೆ
ಅದು ಜಲವು ತಾನಲ್ಲ
ಕುಲದೊಳಗಿದ್ದು ಕುಲವ ಬೆರೆಸದೆ
ನೆಲೆಗೆಟ್ಟು ನಿಂದುದನಾರು ಬಲ್ಲರು
ಹೊಱಗೊಳಗೆ ತಾನಾಗಿದ್ದು ಮತ್ತೆ
ತಲೆದೋಱದಿಪ್ಪುದು ಗುಹೇಶ್ವರ ನಿಮ್ಮ ನಿಲವು ನೋಡಾ
೪ ನೆಲದ ಮಱೆಯ ನಿಧಾನದಂತೆ
ಮುಗಿಲ ಮಱೆಯಲಡಗಿದ ಮಿಂಚಿನಂತೆ
ಬಯಲ ಮಱೆಯಲಡಗಿದ ಮರೀಚಿಯಂತೆ
ಕಂಗಳ ಮಱೆಯಲಡಗಿದ ಬೆಳಗಿನಂತೆ
ಗುಹೇಶ್ವರ ನಿಮ್ಮ ನಿಲವು
ಒಟ್ಟಾಗಿ ನೋಡಿದರೆ ಈ ನಾಲ್ಕು ವಚನಗಳು ಅಲ್ಲಮನ ಚಿಂತನೆಗೆ ಒಂದು ಚೌಕಟ್ಟನ್ನು ಒದಗಿಸುವಂತೆ ಕಾಣುತ್ತವೆ. ಈ ನಾಲ್ಕೂ ವಚನಗಳಲ್ಲಿ ಸುಮಾರಾಗಿ ಒಂದೇ ಬಗೆಯ ಹೋಲಿಕೆಗಳು ಬಳಕೆಯಾಗಿವೆ. ಅದಕ್ಕಿಂತ ಹೆಚ್ಚಾಗಿ ಒಂದೇ ಬಗೆಯ ಅರ್ಥ ಸೂಚನೆಯನ್ನು ಹೊಂದಿರುವ ‘ಒಳಗೆ,’ ‘ಮಱೆ,’ ಮತ್ತು ‘ಅಡಗು’ ಪದಗಳು ಹೋಲಿಕೆಯ ಸಂಬಂಧ ಸೂಚನೆಗೆ ಬಳಕೆಯಾಗಿವೆ.
ಕಾಣುವ ಕಾಣದ್ದರ ಸಾಂಬಂಧ
ಈ ವಚನಗಳಲ್ಲಿ ಗೋಚರ ಮತ್ತು ಅಗೋಚರಗಳಿಗಿರುವ ಸಂಬಂಧದ ರಹಸ್ಯಮಯತೆ/ ನಿಗೂಢತೆಯನ್ನು ಖಚಿತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ‘ಗೋಚರ’ವು ‘ಅಗೋಚರ’ವನ್ನು ‘ಒಳಗೊಂಡಿದೆ’ ಯಾದ್ದರಿಂದಲೇ ಅಗೋಚರವು ಕಣ್ಣಿಗೆ ಕಾಣದಂತಿದೆ. ಗೋಚರ ಮತ್ತು ಅಗೋಚರಗಳೆರಡೂ ಪರಸ್ಪರ ‘ಶರಣಾ’ಗಿವೆ. ಇವುಗಳ ಸಂಬಂಧ ಅರಿವಿಗೆ ಬರುತ್ತಿದ್ದರೂ ಕಾಣುತ್ತಿಲ್ಲ. ಆದ್ದರಿಂದಲೇ ಈ ವಚನ ‘ಶೂನ್ಯ’ದ ವ್ಯಾಖ್ಯೆಯೂ ಹೌದು. ಮನುಷ್ಯನ ಗ್ರಹಿಕೆಯ ಮಿತಿಗಳನ್ನು ಸೂಚಿಸುವಂಥದೂ ಹೌದು. ಕಾಣುವುದು ಶಿಲೆಯೇ ಹೊರತು ಅದರೊಳಗಣ ಬೆಂಕಿಯಲ್ಲ. ಆದರೆ ಕಾಣದ ಬೆಂಕಿಗೂ ಅಸ್ತಿತ್ವವಿದೆ. ಅದೂ ಸತ್ಯವೇ ಹೌದು. ಹೆಚ್ಚೆಂದರೆ ನಮ್ಮ ಗ್ರಹಿಕೆಗೆ ಒದಗುವುದು ಕಾಣುವ ಮತ್ತು ಕಾಣದ್ದರೆ ಸಂಬಂಧ ಮಾತ್ರ. ಈ ಸಂಬಂಧವಾದರೂ ಪರಸ್ಪರಾವಲಂಬಿಯಾದದ್ದು. ಆದ್ದರಿಂದಲೇ ಈ ವಚನದ ಪದಗಳನ್ನು ಸ್ಥಳಾಂತರಿಸಿಯೂ ಓದಿಕೊಳ್ಳಬಹುದು-ವೃಕ್ಷದೊಳಗಣ ಬೀಜದಂತೆ, ಇತ್ಯಾದಿ. ಹೀಗಾಗಿ ಈ ವಚನದಲ್ಲಿನ ‘ಅಂತೆ’ಗಳು ಕೇವಲ ಉಪಮಾವಾಚಕಗಳಲ್ಲ. ನೀರೊಳಗಿನ ಪ್ರತಿಬಿಂಬದ ‘ಹಾಗೆಯೇ’ ಎಂಬಂಥ ಅವಧಾರಣೆಯನ್ನು ಸೂಚಿಸುವ ಪದಗಳು ಹೌದು. ಉಪಮೆಗಳು ಎಂದು ಈ ಚಿತ್ರಗಳನ್ನು ನೋಡಿದರೆ ಈಗ ಈ ವಚನ ಆಶ್ವರ್ಯದ ಭಾವ ತುಂಬಿದ ವಚನವಾಗಿ ಕಾಣುತ್ತದೆ. ಅವಧಾರಣೆ ಎಂದರೆ ರಹಸ್ಯವನ್ನು ಅರಿತವನೊಬ್ಬ ‘ನಿಮಗೆ’ ಎಂದು ಓದುಗರಾದ ನಮ್ಮೆಲ್ಲರನ್ನೂ ಸಂಬೋಧಿಸಿ ಹೇಳುವ ಮಾತಾಗುತ್ತದೆ. ಹಾಗಾಗಿ ಈ ವಚನದಮಟ್ಟಿಗೆ ಗುಹೇಶ್ವರ ಎಂಬುದು ಕೇವಲ ಅಂಕಿತಮಾತ್ರವಾಗುವುದಿಲ್ಲ. ಗುಹೆ ಮತ್ತು ಈಶ್ವರ ಸಂಬಂಧ ಸೂಚಕವೂ ಆಗುತ್ತದೆ. ಕಲ್ಲು-ಬೆಂಕಿ, ನೀರು-ಪ್ರತಿಬಿಂಬ, ಬೀಜ-ಮರ, ಶಬ್ದ-ನಿಶ್ಯಬ್ದಗಳ ಸಂಬಂಧದ ಹಾಗೆಯೇ ಈ ಸಂಬಂಧವೂ ಕೂಡ. ಇಡೀ ವಚನದ ಎಲ್ಲ ಚಿತ್ರಗಳಿಗೂ ಶಬ್ದ-ನಿಶ್ಯಬ್ದಗಳ ಸಂಬಂಧವೇ ತಳಹದಿಯಾಗಿದೆ. ಈ ವಚನದ ಬೆಂಕಿ, ಪ್ರತಿಬಿಂಬ, ಮರಗಳೆಲ್ಲವೂ ಅಗೋಚರ. ಅಗೋಚರವಾದ್ದರಿಂದಲೇ ನಿಶ್ಯಬ್ದ ಆಗಿರುವಂಥವು. ನಿಶ್ಯಬ್ದವಾದರೂ ಆದಿಮ ನಿಶ್ಯಬ್ದ. ಅಷ್ಟೆ ಅಲ್ಲ, ಅದು ಶಬ್ದ ಸಂಬಂಧಿಯೂ ಹೌದು. ಕಲ್ಲು, ನೀರು, ಬೆಂಕಿ ಹೀಗೆ ಪಂಚಭೂತಗಳ ಕಲ್ಪನೆ ಇರುವಂತೆ ಮೇಲು ನೋಟಕ್ಕೆ ತೋರುತ್ತದೆ. ಸ್ವಾರಸ್ಯವೆಂದರೆ ಶಬ್ದವನ್ನೂ ಒಂದು ಇರುವಿಕೆ, , ಎಂಬಂತೆ ಗ್ರಹಿಸಿರುವುದು.
ವಿಂಗಡಣೆ
ಸಾಂಪ್ರದಾಯಿಕವಾಗಿ ಈ ವಚನಗಳನ್ನು ಪಿಂಡಸ್ಥಲದ ವಚನಗಳೆಂದು ವಿಂಗಡಿಸಿರುವುದುಂಟು. ಆದರೆ ಇವು ಐಕ್ಯಸ್ಥಿತಿಯನ್ನು ವರ್ಣಿಸುವ ವಚನಗಳೂ ಆಗಿವೆ. ತಾಯ ಬಸುರಿನೊಳಗಣ ಪಿಂಡಕ್ಕೂ ತಾಯಿಗೂ ಇರುವ ಪರಸ್ಪರ ಐಕ್ಯ ಸಂಬಂಧದಂತೆಯೇ ಮನುಷ್ಯನಿಗೂ ವಿಶ್ವದ ಪಿಂಡಕ್ಕೂ ಇರುವ ಸಂಬಂಧ. ಇದನ್ನು ಅರಿಯುವುದು ಹೇಗೆ, ಅರಿತು ನಿಜಮಾಡಿಕೊಳ್ಳುವುದು ಹೇಗೆ? ನಿಸರ್ಗ, ನಿಸರ್ಗಾಂತರ್ಗತ ಮನುಷ್ಯ, ಮನುಷ್ಯ ವಿಶಿಷ್ಟವಾದ ‘ಶಬ್ದ’ ಮತ್ತು ಇವೆಲ್ಲದರ ಅರಿವಿಗೂ ತಳಹದಿಯಾದ ನಿಶ್ಯಬ್ದದ ವಿವೇಚನೆ ಇಲ್ಲಿದೆ. ಭಾಷೆಯು ನಮ್ಮದಾದಮೇಲೆ ನಮ್ಮ ಭಾಷಾಪೂರ್ವ ಸ್ಥಿತಿಯನ್ನು ಕಲ್ಪಿಸಿಕೊಳ್ಳುವ ಪ್ರಯತ್ನದ ಹಾಗೆಯೇ ಇದೂ ಕೂಡ. ಪಾವಕ, ಪ್ರತಿಬಿಂಬ, ವೃಕ್ಷ ಎಲ್ಲಕ್ಕೂ ಉಲಿಯುವಿಕೆ ಇದ್ದರೂ (ಎರಡನೆಯ ವಚನವನ್ನು ನೋಡಿ) ಆ ಉಲಿ ಅವ್ಯಕ್ತ. ಅದು ತಿಳಿಯುವುದು ಕೂಡ ಶಬ್ದದ ಮುಖಾಂತರವೇ.
ಗುಹೇಶ್ವರ ಮತ್ತು ಶರಣ ಇವರ್ತಿಬ್ಬರ ಸಂಬಂಧವನ್ನು ಈ ವಚನಗಳಲ್ಲಿ ಒಳಗು-ಹೊರಗು, ತಾನು-ಅನ್ಯ ಎಂಬ ಭೇದವಿಲ್ಲದ ಸಂಬಂಧವಾಗಿ ಹೇಳಲಾಗಿದೆ. ಸಂಬಂಧವನ್ನು ಅರಿಯುವುದು ಮಾತ್ರ ಮನುಷ್ಯನಿಗೆ ಸಾಧ್ಯ. ನಿಲವು ಏನಿದ್ದರೂ ಗುಹೇಶ್ವರನದ್ದು. ಅವನ ನಿಲವು ಸತ್ಯವೇ ಆದರೂ ಅದು ವ್ಯಕ್ತಿ/ ಗೋಚರ/ ಇಂದ್ರಿಯಗಮ್ಯ ಅಲ್ಲ. ಕಲ್ಲಿನೊಳಗೆ ಕಿಚ್ಚು ಇದೆ. ಆದರೆ ಆ ಸ್ಥಿತಿಯಲ್ಲಿ ಉಲಿಯಲಾರದು. ‘ಉರಿ’ ಮತ್ತು ‘ಉಲಿ’ ಎರಡೂ ಗೋಚರವಾಗಬಲ್ಲ ವಸ್ತುಗಳು. ತೋರದ, ಆದರೆ ‘ಇರು’ವ, ಇನ್ನೂ ವಸ್ತುರೂಪ ತಾಳದೆ ‘ತಾನೇ’ ಆಗಿ ಇರುವ ಗುಹೇಶ್ವರನ ನಿಲವನ್ನು ಶರಣ ಮಾತ್ರ ಬಲ್ಲ-ತನ್ನೊಳಗಿನ ಬೆಂಕಿಯನ್ನು ಕಲ್ಲು ಮಾತ್ರ ಬಲ್ಲಂತೆ, ತನ್ನೊಳಗಿನ ಮರದ ಉಲಿಯನ್ನು ಬೀಜ ಮಾತ್ರ ಬಲ್ಲಂತೆ.
ನಿಲವು-ಸ್ಥಿರತೆ
ನೀರಿನೊಳಗಿನ ಬೆಂಕಿ ಅದು ಬೆಂಕಿಯೇ ಆಗಿದ್ದರೂ ನೀರನ್ನು ಸುಡದೆ ಇರುತ್ತದೆ. ಬೆಂಕಿಯ ‘ಕುಲ’ಬೇರೆ, ನೀರಿನ ‘ಕುಲ’ಬೇರೆ. ನೀರಿನಲ್ಲಿರುವ ಬೆಂಕಿ ನೆಲೆಗಟ್ಟು ನಿಂತಿದೆ. ಇಲ್ಲಿ ಒಳಗೆ ಮತ್ತು ಹೊರಗೆ ಎಂಬ ಭೇದವಿಲ್ಲ. ತಾನು ತಾನೇ ಆಗಿರುವಾಗ ಅದಕ್ಕೆ ಬೇರೆ ಗುರುತಾದರೂ ಏಕೆ ಬೇಕು? ಪಿಂಡದೊಳಗಿನ ಮಗುವಿಗೆ ಯಾವ ಚಹರೆ? ವೃಕ್ಷವಾದಾಗ ಮಾತ್ರ ತಾನೆ ಬೇರೆ ಬೇರೆ ಎಂದು ಗುರುತಿಸುವ ಅಗತ್ಯ ಬರುವುದು?
ಆದರೂ ಮನುಷ್ಯನಿಗೆ ತಾನು ಮತ್ತು ಪರ ಎಂಬ ತಿಳವಳಿಕೆಯನ್ನು ದಾಟಲು ಕಷ್ಟವಾಗುತ್ತದೆ. ಪರ ಎಂದು ತಿಳಿಯಲಾಗುವ ಗುಹೇಶ್ವರನೂ ತನ್ನೊಳಗೇ ಇರುವವನು ಎಂಬುದನ್ನು ತಿಳಿವಳಿಕೆಯಾಗಿ ಅಲ್ಲ. ಮಾಹಿತಿಯಾಗಿ ಅಲ್ಲ. ಸ್ವ-ಅನುಭವವಾಗಿ ಪಡೆಯಬೇಕೆಂಬ ಹಂಬಲ, ಹುಡುಕಾಟ ಅಲ್ಲಮನ ವಚನಗಳಲ್ಲಿದೆ.
ನಿಲವು ಎಂಬ ಮಾತು ಒಂದು ಬಗೆಯ ಸ್ಥಿರತೆಯನ್ನು ಸೂಚಿಸುತ್ತದೆ. ಆದರೆ ಇಲ್ಲಿ ಗುಹೇಶ್ವರನ ‘ನಿಲವು’ ಸ್ಥಿರವೂ ಅಲ್ಲ, ಜಡವೂ ಅಲ್ಲ. ಯಾಕೆಂದರೆ ಅವನ ನಿಲವು ಮುಗಿಲ ಮರೆಯ ಮಿಂಚಿನಂತೆ. ಬಯಲ ಮರೆಯ ಬಿಸಿಲ್ಗುದುರೆಯಂತೆ ಚಲನಶೀಲವಾದದ್ದು. ‘ಕಂಗಳ ಮಱೆಯಲಡಗಿದ ಬೆಳಗಿನಂತೆ’ ಎಂಬ ಸಾಲು ಗುಹೇಶ್ವರನು ಕಣ್ಣಿನ ಮರೆಯಲ್ಲಿರುವ ಬೆಳಕೇ ಆಗಿದ್ದಾನೆ ಎನ್ನುತ್ತಾ ಅವನನ್ನು ಅರಿಯುವುದೆಂದರೆ ತನ್ನನ್ನೆ ಅರಿಯುವುದು ಎಂದು ಸೂಚಿಸುತ್ತದೆ. ನೆಲದ ಮರೆಯ ನಿಧಾನವನ್ನು ಪಡೆಯಲು ನೆಲವನ್ನೆ ಬಗೆಯಬೇಕಲ್ಲವೆ? ‘ನೆಲ’ ಎಂಬುದು ಅರಿಯಲು ಬಯಸುವ ಮನುಷ್ಯ ವ್ಯಕ್ತಿಯೇ ಆಗಿದ್ದಾನೆ.
ಈ ವಚನಗಳಲ್ಲಿನ ಮುಖ್ಯ ಪದಗಳಾದ ಶಿಲೆ, ಉದಕ, ಬೀಜ, ಶಬ್ದ, ನೆಲ, ಮುಗಿಲು, ಬಯಲು ಮತ್ತು ಕಣ್ಣು ಶರಣನಿಗೂ; ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಯಬ್ದ, ನಿಧಾನ, ಮಿಂಚು, ಮರೀಚಿ ಮತ್ತು ಬೆಳಗು ಗುಹೇಶ್ವರನಿಗೂ ಅನ್ವಯವಾಗುತ್ತವೆಂಬಂತೆ ತೋರುತ್ತದೆ. ನಿಜ. ಆದರೆ ಈ ಕ್ರಮವನ್ನು ಪಲ್ಲಟಿಸಿಯೂ ಓದಬಹುದು. ಆಗ ಗುಹೇಶ್ವರನನ್ನು ಅರಿಯುವ ಶೋಧ ತನ್ನನ್ನೆ ಅರಿಯುವ ಶೋಧವಾಗಿ, ಆ ಶೋಧದುದ್ದಕ್ಕೂ ಬದಲಾಗುವ ಪಲ್ಲಟಗೊಳ್ಳುವ ನಿಲವುಗಳ ಚರಿತ್ರೆ ಅಲ್ಲಮನ ವಚನಗಳಲ್ಲಿ ಮೈದೋರತೊಡಗುತ್ತದೆ. ಗೊಚರ/ಅಗೋಚರ, ಶಬ್ದ/ನಿಶ್ಯಬ್ದ, ತಾನು/ಪರ ಇವು ಅಲ್ಲಮನ ಚಿಂತನೆಯ ಮುಖ್ಯ ಪರಿಭಾಷೆಯಾಗಿರುವುದು ಹೊಳೆಯುತ್ತದೆ.
೫ ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳ ನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು ಗುಹೇಶ್ವರ
ನಿಮ್ಮ ಶರಣನುದಯಿಸಿದನಂದು
೬ ನಿನ್ನ ನಾನಱಿಯದಂದು ಮುನ್ನ ನೀನೇನಾಗಿದ್ದೆ ಹೇಳಾ
ಮುನ್ನ ನೀ ಬಾಯ ಮುಚ್ಚಿಕೊಂಡಿದ್ದೆಯೆಂಬುದ
ನಾ ನಿನ್ನ ಕಣ್ಣಿಂದ ಕಂಡೆನು
ಎನ್ನ ನಾನಱಿದ ಬಳಿಕ
ಇನ್ನು ನೀ ಬಾಯ್ದೆಱೆದು ಮಾತನಾಡಿದರೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ
ಎನ್ನ ಕಾಬ ನಿನಗೆ
ನಿನ್ನ ಕಾಬ ನನಗೆ ಸಂಚದ ನೋಟ ಒಂದೇ ನೋಡಾ
ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವನಱಿದೆ ನೋಡಾ
ತಾನು ಮತ್ತು ಪರ ಹಾಗೂ ಇವೆರಡರ ನಡುವೆ ಸಂಬಂಧವನ್ನು ಸ್ಥಾಪಿಸುವ ಭಾಷಿಕ ವ್ಯವಹಾರ ಇವರಡು ವಚನಗಳ ಮುಖ್ಯಾಂಶವಾಗಿದೆ. ಐದನೆಯ ವಚನವು ಒಂದು ಸ್ವಗತವಾಗಿದೆ. ಇಲ್ಲಿ ‘ಆದಿ’ಗೂ ಹಿಂದಿನ ಸ್ಥಿತಿಯ ವರ್ಣನೆ ಇದೆ. ಅದು ನಿಶ್ಚಲವಾದ, ನಿಶ್ಯಬ್ದವಾದ ಸ್ಥಿತಿ. ಅಲ್ಲಿ ಆದಿಯೂ ಇಲ್ಲ. ಆಧಾರವೂ ಇಲ್ಲ, ಆದಿಯ ಆಧಾರವೂ ಇಲ್ಲ. ನಾನು ಎಂಬ ಕಲ್ಪನೆಯಾಗಲೀ ಅಂಥ ಕಲ್ಪನೆಗೆ ಆಧಾರವಾಗುವ ವಿಚಾರವಾಗಲೀ ಇಲ್ಲ. ಇಂಥ ಸ್ಥಿತಿಯಲ್ಲಿ ಕಾಲದ ಕಲ್ಪನೆಯೂ ಇಲ್ಲ. ಹಾಗಾಗಿ ಇದು ಕಾಲ ಗಣನೆಯನ್ನೆ ಆಧರಿಸಿದ ಚರಿತ್ರೆಗೆ ಆಚಿನ ಸ್ಥಿತಿ. ಅಲ್ಲಿ ಗುಹೇಶ್ವರ ಎಂದು ಕರೆಯುವ. ತನ್ನಿಂದ ಬೇರೆ ಎಂಬಂತೆ ತೋರುವ ‘ನೀನು’ ಮಾತ್ರ ಇದೆ. ಹೀಗೆ ಹೇಳುವುದೂ ಕಷ್ಟ. ಏಕೆಂದರೆ ನೀನು ಎಂಬ ಕಲ್ಪನೆಗೆ ಅರ್ಥ ಬರುವುದೇ ‘ನಾನು’ ಇದ್ದಾಗ. ಹಾಗಾಗಿ ಇಲ್ಲಿ ಹೇಳುತ್ತಿರುವುದು ಗುಹೇಶ್ವರನ ಶರಣನ ಉದಯವನ್ನು ಕುರಿತು. ಈ ಉದಯವೇ ನಿಶ್ಚಲ ಸ್ಥಿತಿಯಲ್ಲಿನ ಒಂದು ಪ್ರಥಮ ಚಾಲನೆ. ಸಚರ (ಚಲನೆ) ಮತ್ತು ಅಚರ (ನಿಶ್ಚಲ) ಏನೂ ಇಲ್ಲದ ಸ್ಥಿತಿಯಲ್ಲಿ ‘ನಾನು’ ಹುಟ್ಟಿದ ಬಗೆಗಿನ ಸ್ವಗತ ಇಲ್ಲಿದೆ. ಇದೇ ವಿಚಾರವು ಮುಂದಿನ ವಚನದಲ್ಲಿ ಇನ್ನಷ್ಟು ವಿವರವಾಗಿ ಪರಿಶೀಲನೆಗೊಂಡಿದೆ.
ಸಂವಾದದ ಬೆಡಗು-ಬೆರಗು
ಆರನೆಯ ವಚನದಲ್ಲಿ ಸ್ವಗತದ ಬದಲಾಗಿ ಸಂವಾದವಿದೆ. ಸಂವಾದದ ಬೆಡಗು-ಬೆರಗುಗಳನ್ನು ಅರಿಯುವ ಪ್ರಯತ್ನವಿದೆ. ಹಾಗೆ ಇಲ್ಲಿ ಎರಡು ಬಗೆಯ ಸಂವಾದಗಳಿವೆ. ಒಂದು ಭಾಷಿಕವಾದ ಸಂವಾದ, ಇನ್ನೊಂದು ಭಾಷೆಯ ಹಂಗಿಲ್ಲದ ನೊಟ ಮಾತ್ರವಿರುವ ಶುದ್ಧ ಅರಿವಿನ ಸಂವಾದ. ಸಂವಾದ ಅಗತ್ಯವಾಗುವುದಾದರೂ ನಾನು ಬೇರೆ ನೀನು ಬೇರೆ ಎಂಬ ಅರಿವು ಮೂಡಿದ ಮೇಲಷ್ಟೆ? ಮೊದಲು ಹುಟ್ಟಿದ್ದು ‘ನಾನು’. ನಾನು ನಾನಾಗುವವರೆಗೆ ‘ನೀನು’ ಎಂಬುದಕ್ಕೆ ಅರ್ಥವೇ ಇಲ್ಲ. ನಾನು ಮತ್ತು ನೀನು ಎಂಬ ಭಿನ್ನತೆಯೇ ಇಲ್ಲದಿರುವಾಗ ಮಾತಿನ ಅಗರ್ಯವಿಲ್ಲ. ನಾನೂ ಮೌನ, ನೀನೂ ಮೌನ. ನಿನ್ನ ಮೌನವನ್ನು ನಾನು ನಿನ್ನ ಕಣ್ಣಿನಿಂದಲೇ ನೋಡಿದೆ. ಆದರೆ ನಾನು ಎಂಬ ಅರಿವು ನನ್ನಲ್ಲಿ ಮೂಡಿದ ಕ್ಷಣದಿಂದ ನೀನು ಮಾತನಾಡಬೇಕಾಯಿತು. ನೀನು ಬಾಯ್ದೆರೆದು ಮಾತನಾಡುವಂತೆ ಮಾದಿದ್ದು ನಾನು ಅಥವ ನಾನು ನಾನೇ ಎಂಬ ನನ್ನ ಅರಿವು. ಆಗ ಸರ್ವನಾಮಗಳು ಬೇಕಾದವು, ಸಂಬೋಧನೆಗಳು ಬೇಕಾದವು. ಮಾತು ನಾಚಿಕೆಯನ್ನು ಹುಟ್ಟಿಸಿತು. ನೋಟಕ್ಕೆ ನಾಚಿಕೆ ಇಲ್ಲ, ಮಾತಿಗೆ ನಾಚಿಕೆ ಇದೆ. ನಾನು ಮತ್ತು ನೀನು ಬೇರೆ ಬೇರೆ ಎಂಬ ಅರಿವು ಮೂಡಿದ ಮೇಲೂ ನನ್ನನ್ನು ‘ಕಾಬ’-ಕಾಣುವ/ಕಾಪಾಡುವ ನನಗೆ ಮತ್ತು ನಿನಗೆ ನೋಟದ ರಹಸ್ಯ ಮಾತ್ರ ಒಂದೇ ಆಗಿದೆ. ನಿನಗೆ ಮತ್ತು ನಿನ್ನನ್ನು ಕಾಣುವ/ಕಾಪಾಡುವ ನನಗೆ ನೋಟ ಒಂದೇ, ಆದರೆ ನನ್ನ ಮಾತು ಬೇರೆ ನಿನ್ನ ಮಾತು ಬೇರೆ. ಇದು ಬೆಡಗು, ಇದು ಬೆರಗು, ಇದನ್ನು ನಾನು ನಾನೇ ಆದಮೇಲೆ ಅರಿತದ್ದು.
ಕೇವಲ ನೋಟ ಮಾತ್ರವಿರುವ, ನಾನು ಮತ್ತು ನೀನು ಎಂಬ ಭೇದವಿರದ ಸ್ಥಿತಿ ನಿಜವಾಗಿ ಅ-ಗಮ್ಯವಾದದ್ದು. ನಾವಿಬ್ಬರೂ ಬೇರೆ ಮತ್ತು ನಮ್ಮಿಬ್ಬರ ನಡುವೆ ಸಂವಾದ ಮಾತ್ರ ಸಾಧ್ಯ ಎಂಬ ಬೆರಗು ಮಾತ್ರ ಗಮ್ಯವಾಗಿರುವಂಥದ್ದು. ಸಾಮಾನ್ಯವಾಗಿರುವ ನೋಟ ಮತ್ತು ವ್ಯಕ್ತಿ ವಿಶಿಷ್ಟವಾಗಿರುವ ಭಾಷೆ ಹಾಗೂ ಇವೆರಡಕ್ಕೂ ತಳಹದಿಯಾಗಿರುವ ನಾನು ಮತ್ತು ನೀನು ಎಂಬ ಭೇದದ ವಿವೇಚನೆ ಇಲ್ಲಿ ಮುಖ್ಯವಾಗಿದೆ.
*****
ಕೀಲಿಕರಣ: ಶ್ರೀನಿವಾಸ (ಚೀನಿ) ಓದಿದವರು ಗುರುಪ್ರಸಾದ್.ಎಸ್ (ಪಚ್ಚಿ)