ಮಗ ವತ್ಸರಾಜನಿಗೆ ಹುಟ್ಟಲಿರುವ ಸಂತತಿಯ ವಿಷಯವಾಗಿ ಒಮ್ಮೆಲೇ ಕಾಳಜಿ ಹೊಕ್ಕಿತ್ತು. ಮನೆಯಲ್ಲಿ ಒಂದು ತಿಂಗಳಿಂದ ಕಲಹ ಶುರುವಾಗಿತ್ತು. “ನಿನ್ನ ಲಗ್ನ ಮಾಡಿದೆ. ಈಗ ನೀನು ನನ್ನನ್ನು ಗತಿ ಕಾಣಿಸು!” ಎಂದು ವತ್ಸರಾಜನಿಗೆ ವಿನಂತಿ ಮಾಡಿಕೊಂಡರು. ದೇವರಾಜರ ಎರಡನೆಯ ಮದುವೆಯನ್ನು ವತ್ಸರಾಜ ಬಲವಾಗಿ ವಿರೋಧಿಸಿದ. ಶ್ರಾವಸ್ತಿ ರಾಜ್ಯ ಬೇರೆಯಾದ ನಂತರ ಬಹಳಷ್ಟು ಆಸ್ತಿ ಪಾಸ್ತಿ ಕೈಬಿಟ್ಟು ಹೋಗಿ ಭದ್ರಮುಖರ ಮನೆತನದ ಆರ್ಥಿಕ ಸ್ಥಿತಿ ಅರ್ಧದಷ್ಟು ಹದಗೆಟ್ಟಿತು. ದೇವರಾಜರ ಹರೆಯದ ದಾಸಿಯೊಬ್ಬಳಿಗೆ ಗರ್ಭ ನಿಂತಾಗ , ಆಕೆಯ ತಂದೆ ತಾಯಿಯರು ಪೌರರಿಗೆ ದೂರು ಕೊಡುವುದಾಗಿ ಹೆದರಿಸಿ ತುಸು ಭೂಮಿಯನ್ನು ದೇವರಾಜರಿಂದ ಕಿತ್ತುಕೊಂಡಿದ್ದರು. ವತ್ಸರಾಜ ಇದನ್ನೂ ವಿರೋಧಿಸಿದ್ದ. ಅಪವಾದದ ಭೀತಿಯಿಂದ ಆ ಪ್ರಕರಣವನ್ನು ಮುಂದುವರೆಸಲಿಲ್ಲ ಅಷ್ಟೇ!
ದೇವರಾಜರಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ವಿಚಾರಮಾಡಿದಷ್ಟೂ ಪಕ್ಷ್ಮಾದೇವಿಯ ಸೌಂದರ್ಯವೇ ಅವರಿಗೆ ಕಣ್ಣು ತುಂಬಿಸಿಬಿಟ್ಟಿತು. ಇದರಲ್ಲಿ ಏನಾದರೂ, ತನಗೆ ರಾಜಕೀಯ ಲಾಭವಿಲ್ಲ. ಪಕ್ಷ್ಮಾಳ ಬಗ್ಗೆ ಮಹಾರಾಣಿಯವರಿಗೆ ಅಸೂಯೆ ಇದೆ. ಮಹಾರಾಜರಿಗೆ ಹೊರತಾಗುವಂತೆ ತಾವೇ ಪಕ್ಶ್ಮಳನ್ನು ನೋಡಿಕೊಳ್ಳುವುದೆಂದು ಅಂಗಲಾಚಿಕೊಂಡು ಪಕ್ಷ್ಮಳ ಮೇಲಿನ ನಿಷೇಧ ದೂರ ಮಾಡಬಹುದೆ? ಮಹಾರಾಣಿ ಇದಕ್ಕೆ ಏಕೆ ಒಪ್ಪಬಾರದು? ಏನೇ ಆಗಲಿ, ಮೊದಲು ಪಕ್ಷ್ಮಳನ್ನು ಒಮ್ಮೆ ನೋಡಬೇಕೆಂದು ಆಸೆಯಾಯಿತು. ಮರುದಿನ ವೀರಸೇನನನ್ನು ಬರಹೇಳಿದ್ದು ಒಳ್ಳೆಯದೇ ಆಯಿತೆಂದು ನಿಶ್ಚಯ ಮಾಡಿಕೊಂಡರು.
ಮರುದಿನ ವೀರಸೇನ ಬಂದಾಗ ಅವನಿಗೆ ಇಪ್ಪತ್ತು ವರಹಗಳನ್ನು ಓಲೈಸಿ, ಛದ್ಮವೇಷದಲ್ಲಿ ಬೆಳಗಿನ ಮೂರು ಪ್ರಹರದ ಸುಮಾರಿಗೆ ದೇವರಾಜರು ಆಮ್ರವನದ ಸಮೀಪದ ಗುಡಿಸಲಿಗೆ ಕಾಲ್ನಡಿಗೆಯಿಂದ ಬಂದರು. ವೀರಸೇನನನ್ನು ಹೊರಗೆಯೇ ಕೂಡಿಸಿ, ಗುಡಿಸಲನ್ನು ಪ್ರವೇಶಿಸಿದರು. ಕೇಶಾಲಂಕಾರದಲ್ಲಿ ನಿರತಳಾದ ಪಕ್ಷ್ಮೆ ಚಕಿತಳಾಗಿ ನಿಂತಳು. ಗಡ್ಡ ಮೀಸೆಗಳನ್ನು ಕಿತ್ತೊಗೆದು, ದೇವರಾಜರು ಸಾಷ್ಟಾಂಗವೆರಗಿ ಭೋಗಭಿಕ್ಷೆಯನ್ನು ಬೇಡಿದರು. ಅಯೋಧ್ಯೆಯಲ್ಲಿ ಪಕ್ಷ್ಮೆ ನಿರ್ಗತಿಕಳಾದಾಗ ತಾವು ಆಶ್ರಯ ಕೊಟ್ಟುದನ್ನು ನೆನಪಿಗೆ ತಂದುಕೊಟ್ಟರು. ಮಹಾರಾಣಿಯನ್ನು ಓಲೈಸಿ ಆಕೆಗೆ ಕ್ಷಮಾದಾನ ಕೊಡಿಸುವುದಾಗಿ ಆಶ್ವಾಸನವಿತ್ತರು. ಅದು ಶಕ್ಯವಾಗದಿದ್ದರೆ, ಅಯೋಧ್ಯೆಯ ಹೊರಗೆ ಸಮೀಪದ ಒಂದು ಹಳ್ಳಿಯಲ್ಲಿ ಆಕೆ ವೈಭವದಿಂದ ಇರಲಿಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಒಟ್ಟಿಗೆ ಇದ್ದ ಎರಡೇ ದಿನಗಳನ್ನು ನೆನಪಿಗೆ ತಂದುಕೊಟ್ಟರು.
ಅಷ್ಟೊತ್ತಿಗೆ ಹೊರಗೆ ಏನೋ ಸದ್ದು ಕೇಳಿಸಿತು.
ಲಗುಬಗೆಯಿಂದ ದೇವರಾಜರು ಗಡ್ಡಮೀಸೆಗಳನ್ನು ಪುನಃ ಧರಿಸಿದರು.
ಅಯೋಧ್ಯೆಯ ಹತ್ತು ಪಹರೆಯ ಸಿಪಾಯಿಗಳು ಗುಡಿಸಲನ್ನು ಮುತ್ತಿದ್ದರು. ಪಕ್ಷ್ಮೆಯನ್ನೂ, ದೇವರಾಜರನ್ನೂ ಬಂಧಿಸಿ ಜವನಿಕೆಯಿದ್ದ ರಥದಲ್ಲಿ ಬೇರೆಬೇರೆಯಾಗಿ ಕಟ್ಟಿಕುಳ್ಳಿರಿಸಿ ರಥವನ್ನು ಅಯೋಧ್ಯೆಯತ್ತ ದೌಡಾಯಿಸಿದರು. ಯಾರೂ ಪಿಟ್ಟೆಂದು ಮಾತಾಡಲಿಲ್ಲ.
ಅರಮನೆಯ ಹಿಂದಿನ ಕುದುರೆಯ ಲಾಯದಲ್ಲಿ ಇಬ್ಬರನ್ನೂ ಬೇರೆಯಾಗಿ ಕೂರಿಸಲಾಯಿತು. ಒಂದು ಪ್ರಹರ ಹಾಗೆಯೇ ಮೌನವಾಗಿ ಕುಳಿತಿದ್ದರು. ಅನಂತರ ದೇವರಾಜರನ್ನು ಅವರ ಗಡ್ಡ ಮೀಸೆಗಳ ಸಹಿತವಾಗಿ ಮಹಾರಾಣಿಯ ಕೋಣೆಯ ಕೆಳಗಿನ ನೆಲಮನೆಗೆ ಒಯ್ಯಲಾಯಿತು, ಮುಸುಕಿನಲ್ಲಿ.
ಮಹಾರಾಣಿ ಒಬ್ಬಳೇ ನಿಂತಿದ್ದಳು. ಜೊತೆಗೆ ಇನ್ನಾರೂ ಚೇಟಿಯರು ಇರಲಿಲ್ಲ. ಪಹರೆಯವರು ಬಾಗಿಲವರೆಗೆ ಮಾತ್ರ ಬಂದರು.
“ಭದ್ರ ಮುಖ ದೇವರಾಜ! ಗಡ್ಡಮೀಸೆ ತೆಗೆದು ಬನ್ನಿರಿ!” ಮಹಾರಾಣಿ ಗಡ್ಡಮೀಸೆ ತೆಗೆದೊಗೆದು ದೇವರಾಜರು ಸಾಷ್ಟಾಂಗ ಪ್ರಣಿಪಾತ ಮಾಡಿದರು.
“ನಾನು ಸರ್ವಸ್ವಿ ತಪ್ಪುಗಾರ, ಸಾಮ್ರಾಜ್ಞಿ! ನನ್ನನ್ನು ಕ್ಷಮಿಸಿ.”
“ಕ್ಷಮಿಸುವುದೇನಿದೆ, ಭದ್ರಮುಖ! ಎಲ್ಲ ಗಂಡಸರು ಮಾಡುವುದನ್ನೇ ಮಾಡಿದಿರಿ. ಆದರೆ ನೆನಪಿರಲಿ. ನಿಮ್ಮ ಸೊಸೆ ನನ್ನ ಗೆಳತಿ.”
“ಹೌದು ಮಹಾರಾಣಿ. ಆಕೆಯ ಸಲುವಾಗಿಯಾದರೂ..”
“ನಿಮ್ಮ ಔದಾರ್ಯವನ್ನು ಪರೀಕ್ಷಿಸುವುದಕ್ಕಾಗಿ ನಾನೇ ವೀರಸೇನನನ್ನು ನಿಮ್ಮ ಬಳಿಗೆ ಅಟ್ಟಿದ್ದೆ. ಅವನಿಗೆ ಏನು ಪಾರಿತೋಷಕ ಕೊಟ್ಟಿರಿ?”
“ಇಪ್ಪತ್ತು ವರಹಗಳನ್ನು…”
“ಒಂದು ವರಹ ವಾರ್ತೆಗಾಗಿ, ಇಪ್ಪತ್ತು ವರಹ ಜೊತೆಗೆ ಬಂದು ದಾರಿ ತೋರಿಸುವುದಕ್ಕಾಗಿ, ಹತ್ತು ವರಹ ಪಹರೆ ಕುದುರೆಗಾಗಿ, ಹತ್ತು ವರಹ ನಿಮ್ಮ ರಥ ಎಳೆದು ತಂದದ್ದಕ್ಕಾಗಿ, ಅಲ್ಲವೆ? ರಾಜಪುರುಷರೇ ಹೀಗೆ ಜಿಪುಣತನ ತೋರಿಸಿದರೆ ರಾಜಪುರುಷರ ಮರ್ಯಾದೆ ಏನು ಉಳಿಯಿತು? ಆಗ ಪಕ್ಷ್ಮಾಳ ಎರಡು ದಿನದ ಸ್ನೇಹಕ್ಕಾಗಿ ಏನು ಕೊಟ್ಟಿರಿ?”
“ಹತ್ತು ವರಹಗಳು, ಮಹಾರಾಣಿ!”
“ನಿಮ್ಮ ರಸಿಕತೆಯ ಬೆಲೆ ಇಷ್ಟೇ ಏನು?”
ದೇವರಾಜರು ಕೈಹೊಸೆದುಕೊಳ್ಳುತ್ತ ಮೆಲ್ಲನೆ ಹೇಳಿದರು:
“ಶ್ರಾವಸ್ತಿಯ ಅರಸರು ಅಯೋಧ್ಯೆಯ ನಾಲ್ಕು ಹಳ್ಳಿಗಳನ್ನು ವಶಪಡಿಸಿಕೊಂಡಮೇಲೆ ನಮ್ಮ ಮನೆತನದ ಪ್ರಾಪ್ತಿ ಅರ್ಧದಷ್ಟು ಕಳೆದು ಹೋಯಿತು, ಮಹಾರಾಣಿ! ನಾನು ಈಗ ಅಯೋಧ್ಯೆಯ ವಣಿಕಪುತ್ರರಿಗಿಂತ ದರಿದ್ರ.”
“ಶ್ರಾವಸ್ತಿಯ ಅರಸರ ಪರಿಚಯ ನಿಮಗೆ ಇದೆಯೇ?”
“ಶ್ರಾವಸ್ತಿಯ ಈಗಿನ ಮಹಾರಾಜ ಸುಭಾನು ನನ್ನ ಬಾಲ್ಯದ ಸ್ನೇಹಿತ.”
“ನಿಮ್ಮಷ್ಟೇ ಸ್ತ್ರೀಲೋಲುಪನೇ?”
“ಹೌದು ಮಹಾರಾಣಿ!” ತಮಗೆ ಆದ ಅಪಮಾನವನ್ನು ನುಂಗುತ್ತ ದೇವರಾಜರು ಹೇಳಿದರು.
“ಪಕ್ಷ್ಮಾದೇವಿಯನ್ನು ಅವನಿಗೆ ಒಪ್ಪಿಸಿದರೆ ನಮ್ಮ ನಾಲ್ಕು ಹಳ್ಳಿಗಳನ್ನು ನಮಗೆ ಒಪ್ಪಿಸಬಹುದೇ?”
“ಕೇಳಿ ನೋಡಬೇಕು, ಮಹಾರಾಣಿ!”
“ಹಾಗಾದರೆ ನೀವು ಈ ಸಂಧಾನವನ್ನು ಮಾಡುವಿರಾ?”
“ತಮ್ಮ ಇಷ್ಟವಿದ್ದರೆ..”
“ನಮ್ಮದೇನು ಇಷ್ಟ? ನಿಮ್ಮ ಹಿರಿಯರು ವಶಪಡಿಸಿಕೊಂಡ ಭೂಭಾಗ ಅದು. ಅಯೋಧ್ಯೆಗೆ ಮರಳಿ ಬಂದರೆ ನಿಮ್ಮ ಪ್ರಾಪ್ತಿಯೂ ಇಮ್ಮಡಿಸಬಹುದಲ್ಲವೆ? ನಮ್ಮ ಹಿರಿಯರು ಬೇನೆಯಿಂದ ನರಳುತ್ತಿರುವಾಗ ದುರ್ಲಕ್ಷ್ಯಗೊಂಡ ನಮ್ಮ ರಾಜ್ಯದ ಸರಯುನದಿಯ ಆಚೆಗಿರುವ ಒಂದು ಪಟ್ಟಿಯನ್ನು ಶ್ರಾವಸ್ತಿಯ ಹೊಸರಾಜರು ವಶಪಡಿಸಿಕೊಂಡರು. ಅಲ್ಲಿಯ ಮಾಂಡಲಿಕರಾದ ನೀವು ಅಯೋಧ್ಯೆಯಲ್ಲಿ ನಿದ್ದೆಹೋದಿರಿ. ವೇಳೆಗೆ ಸರಿಯಾಗಿ ಸೈನ್ಯ ಕಳಿಸಿಕೊಡದಿದ್ದುದು ನಿಮ್ಮ ತಪ್ಪು. ಅದೀಗ ಅಯೋಧ್ಯೆಯ ಕೈಬಿಟ್ಟು ಹೋಗಿದೆ. ಅಲ್ಲಿಯ ಕೃಷಿವಲಯವನ್ನು ಇನ್ನೂ ಉಪಭೋಗಿಸುತ್ತ ಇದ್ದಾರೆ. ಇತ್ತ ಅಯೋಧ್ಯೆಗೂ ಕಪ್ಪ ಒಪ್ಪಿಸುವುದಿಲ್ಲ. ಅತ್ತ ಶ್ರಾವಸ್ತಿಗೂ ಕಪ್ಪ ಒಪ್ಪಿಸುವುದಿಲ್ಲ. ಗಾವುಂಡರಿಗೆ ಒಪ್ಪಿಸುತ್ತಾರೆ. ಗಾವುಂಡರು ತಾವೇ ತಿನ್ನುತ್ತಾರೆ. ಶ್ರಾವಸ್ತಿಗೆ ಆ ಭಾಗದ ಜನರಮೇಲೆ ಪೂರ್ಣ ನಿಯಂತ್ರಣವಿಲ್ಲ. ಅಲ್ಲಿಯ ಪಯಿರಿನ ಫ಼ಲ ಅಯೋಧ್ಯೆಯಲ್ಲೇ ಮಾರಾಟವಾಗುತ್ತದೆ. ನಾವೆಯಲ್ಲಿ ಸರಕು ತುಂಬಿ ಇಲ್ಲಿಯೇ ಬರುತ್ತಾರೆ. ಇಲ್ಲಿಯ ವರಹಗಳನ್ನು ತುಂಬಿಕೊಂಡು ಹೋಗಿ ಅಲ್ಲಿ ರೈತರು ಉಪಜೀವನ ಸಾಗಿಸುತ್ತಾರೆ…”
“ಹೌದು ಮಹಾರಾಣಿ, ಇಂದಿಗೂ ಅಲ್ಲಿಯ ರೈತರು ಅಯೋಧ್ಯೆಯ ಹೆಸರಿನಿಂದಲೇ ಅನ್ನ ಕಾಣುತ್ತಾರೆ.”
“ನಿಮ್ಮ ಹಿರಿಯರು ಸೋಮಾರಿಗಳು. ನೀವು ಸುಭಾನುವಿನ ಎದುರು ಪಕ್ಷ್ಮಾದೇವಿಯ ಗುಣಗಾನ ಮಾಡಿರಿ. ಒಪ್ಪಿದರೆ ರಾಜಸಭೆಯ ಎದುರು ನೃತ್ಯ ಮಾಡಿಸಿರಿ. ಒಪ್ಪದಿದ್ದರೆ, ಹಳ್ಳಿಗಳಿಗೆ ಹೋಗಿ ರೈತರನ್ನು ಹುರಿದುಂಬಿಸಿ ಕ್ರಾಂತಿ ಹೂಡಿರಿ. ನಮ್ಮ ಸೈನ್ಯ ನಂದಿಗ್ರಾಮದಲ್ಲಿ ಸನ್ನದ್ಧವಾಗಿ ನಿಂತಿರುತ್ತದೆ. ಕ್ರಾಂತಿಯ ವಾರ್ತೆ ಕೇಳಿಬಂದ ಕೂಡಲೆ ಮುನ್ನುಗ್ಗುತ್ತದೆ. ಆದರೆ ನಿಮ್ಮ ಪಕ್ಷ್ಮಾ ಸಂಧಾನ ಯಶಸ್ವಿಯಾಗಲೆಂದು ನಾನು ಮನಃಪೂರ್ವಕ ಇಚ್ಛಿಸುತ್ತೇನೆ..ಯುದ್ಧ ತಪ್ಪಿಸುವುದೇ ಮೇಲು. ಸ್ನೇಹಿತ ಸುಭಾನುವಿಗೆ ಮನವರಿಕೆ ಮಾಡಿಕೊಡಿರಿ. ನಿಮ್ಮ ಸಂಧಾನದ ಫ಼ಲಶ್ರುತಿಯನ್ನು ಹೇಳಿಕಳಿಸಿರಿ. ಸ್ತ್ರೀ ಸೌಂದರ್ಯವನ್ನು ಬಣ್ಣಿಸುವ ವಿಷಯ ನಿಮಗೆ ಸುಲಭ. ನಾನು ಅದರಲ್ಲಿ ಕುಶಲಳಲ್ಲ. ಎಂದು ಹೊರಡುತ್ತೀರಿ?”
“ನಾಳೆಯೇ!”
“ನಿಮ್ಮ ಬಾಲ್ಯ ಸ್ನೇಹಿತ ಮಾದ್ರಕನ ನೆನಪಿದೆಯೇ?”
“ಇದ್ದಾನೆ ಮಹಾರಾಣಿ. ಅಯೋಧ್ಯೆಗೆ ಕಾಳುಕಡ್ಡಿ ಮಾರಾಟಕ್ಕೆ ಬಂದಾಗೊಮ್ಮೆ ಬಂದು ಕಾಣುತ್ತಾನೆ.”
“ಸುಭಾನುವನ್ನು ಕಾಣುವ ಮೊದಲು ಮಧುವನ ಗ್ರಾಮಕ್ಕೆ ನಿಂತು ಮಾದ್ರಕನನ್ನು ಕಾಣಿರಿ. ಅವನಿಗೆ ಪಕ್ಷ್ಮೆಯ ಪರಿಚಯವಿದೆ. ಆದರೆ ಅದನ್ನು ಸುಭಾನುವಿಗೆ ತಿಳಿಸುವುದು ಬೇಡ. ಮಾದ್ರಕನ ಮನೆಯವರೆಗೆ ಪಕ್ಷ್ಮೆಯನ್ನು ಮುಟ್ಟಿಸುವುದು ನನಗೆ ಕೂಡಿತು. ನೀವು ಅವನಿಗೆ ತಿಳಿಸಬೇಕು-ಸಂಧಾನ ಯಶಸ್ವಿಯಾಗದಿದ್ದ ಪಕ್ಷದಲ್ಲಿ ನಾಲ್ಕು ಜನ ರೈತರನ್ನು ಕೂಡಿಸಿಕೊಂಡು ಶ್ರಾವಸ್ತಿಯ ಕೆಲ ಸೈನಿಕರನ್ನು ಹೊಡೆದುಬಡಿದು ಹಳ್ಳಿಯಿಂದ ಹೊರಗೆ ಅಟ್ಟಬೇಕು. ನಂದಿಗ್ರಾಮದಲ್ಲಿ ನಮ್ಮ ಸೈನ್ಯ ನಿಂತಿದೆಯೆಂದು ಭರವಸೆ ಕೊಡಬೇಕು. ಅನಂತರ ಸುಭಾನುವನ್ನು ಕಾಣಬೇಕು. ಸರಿಯೇ?”
“ಸರಿ. ಮಹಾದೇವಿ!”
ಆ ಕ್ಷಣದಲ್ಲಿ ತಮಗರಿಯದೆಯೇ ’ಮಹಾದೇವಿ’ ಎಂದು ಪುರುಕುತ್ಸಾನಿಯನ್ನು ಸಂಬೋಧಿಸಿದುದೇ ನಂತರ ಅವಳಿಗೆ ಖಾಯಂ ಹೆಸರಾಯಿತು.
“ಹಾಗಾದರೆ ಹೊರಡಿ..ಈ ಬಡ ವೇಷಭೂಷಣ ಬೇಡ. ಬದಿಯ ಕೋಣೆಯಲ್ಲಿ ಖಿಲ್ಲತ್ತು. ರಾಜಪ್ರತಿನಿಧಿಯ ವೇಷಭೂಷಣಗಳಿವೆ. ತಲೆಬಾಗಿಲಿನಿಂದಲೆ ಹರ್ಷಚಿತ್ತರಾಗಿ ಹೊರಡಿ. ನಿಮ್ಮ ಕಾರ್ಯವನ್ನು ಯಾರಿಗೂ ಹೇಳಬೇಡಿರಿ. ಹೋಗಬಹುದು.”
ಸಂತುಷ್ಟನಾದ ಭದ್ರಮುಖ ರಾಣಿಯ ಕಾಲುಮುಟ್ಟಿ ನಮಿಸಿ ಬೀಳ್ಕೊಂಡನು.
೪
ಹತ್ತು ನಿಮಿಷ ರಾಣಿ ವಿಚಾರ ಮಾಡುತ್ತ ಕುಳಿತಳು.
ವೇಷಭೂಷಣ ಧರಿಸಿ ದೇವರಾಜರು ಹೊರಗೆ ಹೋದ ಸುದ್ದಿಯನ್ನು ಬಾಗಿಲಿಗೆ ಕಟ್ಟಿದ ಗೆಜ್ಜೆಯ ಮೃದು ಸದ್ದು ಹೇಳಿತು.
ರಾಣಿ ತಟ್ಟನೆದ್ದು ತಾರ್ಕ್ಶ್ಯನಿಗೆ ಹೇಳಿ ಕಳುಹಿಸಿದಳು.
ತಾರ್ಕ್ಶ್ಯ ಬಂದೊಡನೆ ಅವನನ್ನು ಅಮ್ರವನಕ್ಕೆ ಓಡಿಸಿದಳು, ವಾರ್ತೆಯೊಂದಿಗೆ. ಪಕ್ಷ್ಮ ಆಮ್ರವನಕ್ಕೆ ಬಂದುದನ್ನು ಯಾರೋ ಅಪರಿಚಿತ ರಾಹುತರು ನೋಡಿ, ಆಕೆಯನ್ನು ಬಂಧಿಸುವ ಹೆದರಿಕೆ ಹಾಕಿದರಂತೆ. ಅವರಿಗೆ ಲಂಚ ಕೊಟ್ಟು, ಕುದುರೆ ಏರಿ ಪಕ್ಶ್ಮಾದೇವಿ ರಾಜ್ಯದ ಹೊರಗೆ ಓಡಿದಳಂತೆ.-ಇದೇ ಸುದ್ದಿಯ ಸಾರಾಂಶ. ಎತ್ತ ಹೋದಳು ತಿಳಿಯದು. ಬೇರೆ ಏನಾದರೂ ವ್ಯವಸ್ಥೆ ಮಾಡುತ್ತೇನೆ. ಕಾಯಿರಿ ಎಂಬ ಭರವಸೆ. ಈ ಕಟ್ಟುವಾರ್ತೆಯೊಂದಿಗೆ ತಾರ್ಕ್ಸ್ಯ ಹೊರಟುಹೋದಮೇಲೆ, ಮಹಾರಾಣಿ ಪಕ್ಶ್ಮಾದೇವಿಯನ್ನು ಒಳಗೆ ಬರ ಹೇಳಿದಳು.
ಆಕೆ ಬರುವವರೆಗೆ ಅಸೂಯೆಯನ್ನು ಹತ್ತಿಕ್ಕಿ ಹತ್ತಿಕ್ಕಿ, ಮುಖದ ಮೇಲೆ ಯಾವ ಪ್ರತ್ಯಕ್ಷ ಭಾವವೂ ತೋರಗೊಡದಂತೆ ಮುಗುಳು ನಗೆಯೊಡನೆ ನಿಂತಿದ್ದಳು.
ದುಮದುಮ ಉರಿಯುತ್ತ ಪಕ್ಷ್ಮಾರಾಣಿ ಪುರುಷರ ವಿಷಯದಲ್ಲಿ ತಾನೇ ಮೇಲುಗೈಯೆಂಬ ಅಭಿಮಾನದಲ್ಲಿ ಒಳಗೆ ಬಂದು ಸೆಟೆದು ನಿಂತಳು. ಕೆಂಗಣ್ಣುಗಳನ್ನು ವಿಸ್ಛಾಲಿಸಿ ರಾಣಿಯನ್ನು ದುರುದುರು ನೋಡಿ ಕೂಗಿದಳು:
“ನಾನು ಬದುಕುವುದು ಮಹಾರಾಣಿಗೆ ಇಷ್ಟವಿಲ್ಲ. ಹೀಗೆ ಭಯ-ಚಿಂತೆಯಿಂದ ಬದುಕುವುದಕ್ಕಿಂತ ಸಾವು ಮೇಲು. ನನ್ನನ್ನು ಶೂಲಕ್ಕೆ ಏರಿಸಿಬಿಡಿ, ಇದೇ ನನ್ನ ಪ್ರಾರ್ಥನೆ.”
ಮಹಾರಾಣಿ ಎರಡು ಹೆಜ್ಜೆ ಮುಂದೆ ಹೋಗಿ ಪಕ್ಶ್ಮಾದೇವಿಯನ್ನು ಆಲಿಂಗಿಸಿ ಚುಂಬಿಸಿದಳು. ಆಸನವನ್ನು ತೋರಿ “ಕೂರು” ಎಂದಳು.
ಅಷ್ಟಕ್ಕೇ ಪಕ್ಶ್ಮಾರಾಣಿಯ ಸಿಟ್ಟು ಅರ್ಧ ಇಳಿದಿತ್ತು. ಕುದುರೆಯ ಲಾಯದಲ್ಲಿ ನಿಂತು ನಿಂತು ಆಕೆಯ ಕಾಲು ಸೋತಿದ್ದವು. ಆಸನದ ಮೇಲೆ ಕುಕ್ಕರಿಸಿ, “ಈಗ ಚುಂಬನವೇಕೆ?” ಎಂದು ಕೊಂಕುನುಡಿ ಆಡಿದಳು.
“ನನ್ನ ಪತಿಯ ಚುಂಬನಗಳನ್ನು ನಾನು ನಿನ್ನ ಮುಖದ ಮೇಲಿಂದ ಕದ್ದೆನೆಂದು ನಿನಗೆ ಬೇಸರವೇ?-ರಾಣಿ ಕೇಳಿದಳು. ಇಂಥ ಉತ್ತರ ಅನಪೇಕ್ಷಿತವಾಗಿತ್ತು. ಪಕ್ಷ್ಮಳಿಗೆ ಏನು ಉತ್ತರ ಕೊಡಲಿಕ್ಕೂ ಮನಸಾಗಲಿಲ್ಲ. ಸೋತು ಹೋದಳು.
“ನನಗೆ ಮರಣ ಭಿಕ್ಷೆ ಕೊಡಿ” ಎಂದಿಷ್ಟೇ ಹೇಳಿದಳು.
“ಅದು ನನ್ನ ಕೈಯಲ್ಲಿ ಇಲ್ಲ. ಆ ಭಿಕ್ಷೆ ಕೊಡುವವರು ಮಹಾರಾಜರು. ಅದು ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ಅಧಿಕಾರ, ನಡೆಯುವವರೆಗೆ ಮಾತ್ರ. ದೇವರಾಜ ಅತಿಥಿಗೃಹದಲ್ಲಿ ನೀನು ಇದ್ದಾಗ ಚೇಟಿಯ ಜೊತೆಗೆ ಹೇಳಿ ಕಳಿಸಿದ್ದೆ. ನಿನಗೆ ಹೆದರಿಸುವುದಕ್ಕಾಗಿ. ಹೆದರುವುದು, ಬಿಡುವುದು ನಿನ್ನನ್ನು ಕೂಡಿದುದು. “ಆ ಶಿಕ್ಷೆ ವಿಧಿಸಲು ನಿನ್ನ ರಾಣಿ ಯಾರು? ನಾನು ಮಹಾರಾಜರ ಆನಂದಕ್ಕಾಗಿ ಬಂದವಳು” ಎಂದು ಆಗಲೇ ಹೇಳಿ ಬಿಟ್ಟಿದ್ದರೆ ನನ್ನ ಅಧಿಕಾರ ಏನು ಉಳಿಯುತ್ತಿತ್ತು? ಆದರೆ ನೀನು ಮೂವತ್ತು ವರಹಗಳ ಕಾಣಿಕೆಗಾಗಿ ನನ್ನ ಮಾತು ಕೇಳಿದೆ, ಅಲ್ಲವೆ? ನಿನ್ನ ಸ್ವಾತಂತ್ರ್ಯವನ್ನು ನೀನೇ ಮಾರಿಕೊಂಡೆ. ನನ್ನದೇನು ತಪ್ಪು?”
“ಮಹಾರಾಜರು ನೂರು ವರಹ ಕೊಡುವೆನೆಂದು ಹೇಳಿ ಕರೆಸಿಕೊಂಡರು..”
“ನಿನ್ನ ನೂರು ವರಹಗಳು ಮಧುವನದಲ್ಲಿ ನಿನಗೆ ಸಂದಿವೆ. ಅಯೋಧ್ಯೆಯಲ್ಲಿ ನೂರು ವರಹಗಳು ಸಂದಿವೆ. ಮಹಾರಾಜರಿಗೆ ಹತ್ತು ದಿನ ನೀಡಿದ ಸುಖಕ್ಕಾಗಿ ಇನ್ನೂ ನೂರು ವರಹಗಳು ಸಲ್ಲುತ್ತವೆ…ದೇವರಾಜರು ನಿನಗೆ ಕೊಟ್ಟಿದ್ದೆಷ್ಟು? ಎರಡು ದಿನಗಳ ಭೋಗಕ್ಕಾಗಿ ಹತ್ತು ವರಹಗಳು! ಅದರ ಇಮ್ಮಡಿ ತೆರ ಮಹಾರಾಜನಿಂದ ನಿನಗೆ ಸಲ್ಲುತ್ತದೆ. ಆದರೆ ನೀನು ಹೋದಲ್ಲಿ ಬಂದಲ್ಲಿ ಅಯೋಧ್ಯೆಯ ಜನ ಅರಸಿಕರು ಎಂದು ಪ್ರಚಾರ ಮಾಡಬಾರದು!”
“ನಾನು ಒಂದು ಸ್ಥಳದ ನಿಂದೆಯನ್ನು ಇನ್ನೊಂದು ಕಡೆಗೆ ಮಾಡುವುದಿಲ್ಲ. ಅದು ನಮ್ಮ ಧರ್ಮದ ವಿರುದ್ಧ.!”
“ನೀನು ಧರ್ಮಿಷ್ಟೆಯೆಂದೇ ಈ ಮಾತನ್ನು ಹೇಳುತ್ತಿದ್ದೇನೆ. ಮಾದ್ರಕನ ಜೊತೆಗೆ ನಿನ್ನ ವಾಗ್ದಾನದ ಪ್ರಕಾರ ಇನ್ನೆಷ್ಟು ದಿನಗಳು ಉಳಿದಿವೆ?”
“ಇಪ್ಪತ್ತೆಂಟು. ಅವನ ಮನೆಯಲ್ಲಿ ಮಾಡಿದ ನೃತ್ಯದ ಲೆಕ್ಕ ಹಿಡಿದರೆ, ಇಪ್ಪತ್ತೈದು.”
“ನಿನ್ನನ್ನು ಮಾದ್ರಕನ ಮನೆಗೆ ಕಳಿಸುತ್ತೇನೆ. ಕದಾಚಿತ್, ಅವನು ಸ್ವೇಚ್ಚೆಯಿಂದ ಶ್ರಾವಸ್ತಿಯ ಮಹಾರಾಜ ಸುಭಾನುವಿನ ಕಡೆಗೆ ನಿನ್ನನ್ನು ಕಳುಹಿಸಬಹುದು. ನಿನಗೆ ಸಂತೋಷವೇ?”
“ಸಂತೋಷ”
“ಎಲ್ಲರಿಗೂ ಸಂತೋಷ ಮಾಡುವುದೇ ರಾಜಧರ್ಮ. ನಿನಗೆ ಮರಣದ ಚಿಂತೆ ಬೇಡ. ಇಂದು ರಾತ್ರಿ ಅರಮನೆಯಲ್ಲಿ ಕಳೆದು ನಾಳೆ ನೀನು ಮಧುವನ ಗ್ರಾಮಕ್ಕೆ ತೆರಳಬೇಕು. ಜವನಿಕೆಯ ರಥ ಕಳಿಸಿಕೊಡುತ್ತೇನೆ. ಸಂತೋಷದಿಂದ ಇರು!”
ಸೆಟೆದು ಕುಳಿತ ಪಕ್ಶ್ಮಾದೇವಿ ದಿಗ್ಗನೆ ಎದ್ದು ರಾಣಿಯ ಪದ್ಮಕಮಲಗಳಿಗೆ ಎರಗಿದಳು. ಪಾದಗಳನ್ನು ಚುಂಬಿಸಿದಳು. ಕರುಣೆಯಿಂದ ಮಹಾರಾಣಿಯ ಎವೆ ಒದ್ದೆಯಾದವು.
“ಏಳು, ಊಟ ಮಾಡು. ಇಂದು ರಾತ್ರಿ ತಾರ್ಕ್ಶ್ಯ ಬಂದು ನಿನಗಿತ್ತ ಭರವಸೆಯನ್ನು ಪೂರ್ಣಗೊಳಿಸುತ್ತಾನೆ. ಆಗಬಹುದೇ?”
ಪಕ್ಶ್ಮಾದೇವಿಯು ಕಂಬನಿ ತುಂಬಿದ ಮೊಗ ಮೇಲೆ ಎತ್ತಿ ಗದ್ಗದಿಸಿದಳು.
“ಮಹಾರಾಣಿ, ತಾವು ಸಾಕ್ಷಾತ್ ಇಂದ್ರಾಣಿ!”
ಮಹಾರಾಣಿಗೆ ತನ್ನ ಸೋಲಿನ ತೀವ್ರ ಅರಿವಾಯಿತು. ಆದರೆ ರಾಜಧರ್ಮದ ಗೌರವವನ್ನು ಬಿಟ್ಟು ಕೊಡಲಿಲ್ಲ.
“ನೀನು ಈ ಕೋಣೆಯಲ್ಲೇ ವಿಶ್ರಮಿಸು. ಊಟ ಇಲ್ಲಿಯೇ ಬರುತ್ತದೆ.”
೫
ಅಂದು ರಾತ್ರಿ ತಾರ್ಕ್ಷ್ಯ ತನ್ನ ಪಣವನ್ನು ಸಲ್ಲಿಸಿದನು, ಪಕ್ಷ್ಮ ಸಾಕೆನ್ನುವಂತೆ.
ಮರುದಿನ ಬೇಗನೆದ್ದು ಪಕ್ಶ್ಮಾರಾಣಿಯನ್ನು ಗೌರವದಿಂದ ಅವಗುಂಠಿತ ರಥದಲ್ಲಿ ಮಧುವನಕ್ಕೆ ಕರೆದೊಯ್ದು ಮಾದ್ರಕನಿಗೆ ಒಪ್ಪಿಸಿದನು. ಹೋಗುವಾಗ ,
“ಇಂದು ಮಧ್ಯಾಹ್ನ ನಿನ್ನ ಬಾಲ್ಯಸ್ನೇಹಿತ ದೇವರಾಜರು ಬರುತ್ತಾರೆ. ಪಕ್ಶ್ಮಾ ಇಲ್ಲಿ ಇದ್ದುದನ್ನು ಈಗಲೇ ಹೇಳಬೇಡ. ಇಲ್ಲಿಂದ ಸುಭಾನು ಮಹಾರಾಜರನ್ನು ಕಾಣಲು ಶ್ರಾವಸ್ತಿಗೆ ತೆರಳುತ್ತಾರೆ. ಮರಳಿ ಬಂದಮೇಲೆ ಹೇಳಬಹುದು” ಎಂದು ತಿಳಿಸಿ ಅಯೋಧ್ಯೆಗೆ ತಾರ್ಕ್ಶ್ಯ ಮರಳಿದನು.
ದೇವರಾಜರ ಸಂಧಾನ ಕೈಗೂಡಿತು. ಪಕ್ಶ್ಮಾರಾಣಿಯನ್ನು ಸುಭಾನುವಿಗೆ ಒಪ್ಪಿಸಿ, ಲಿಖಿತ ಸನದಿನೊಡನೆ ತಮ್ಮ ನಾಲ್ಕು ಹಳ್ಳಿಗಳಿಗೆ ಬಂದರು. ರೈತರ ಗಾವುಂಡ ಸಭೆ ಏರ್ಪಡಿಸಿ, ಗಾವುಂಡರು ಕೂಡಿಸಿಟ್ಟ ಹಣದಲ್ಲಿ ಅರ್ಧದಷ್ಟು ಕಪ್ಪವನ್ನು ಎತ್ತಿದರು. ನಂದಿಗ್ರಾಮದಲ್ಲಿ ಜಮಾವಣೆಯಾದ ರಾಹುತರಲ್ಲಿ ಒಂದೊಂದು ಹಳ್ಳಿಗೆ ಇಪ್ಪತ್ತರಂತೆ ನೇಮಿಸಿದರು. ವೈಭವದಿಂದ ಅಯೋಧ್ಯೆಗೆ ಮರಳಿ ಬಂದರು. ನಂದಿಗ್ರಾಮದ ಬಳಿಯ ಅರಣ್ಯದಲ್ಲಿ ಸುತ್ತ ಬಿಡಾರ ಮಾಡಿದ ಐನೂರು ಸೈನಿಕರು ಸದ್ದಿಲ್ಲದೆ ಚೆದುರಿಹೋದರು.
ಅಯೋಧ್ಯೆಯ ತುಂಬ ಸಂಭ್ರಮವೋ ಸಂಭ್ರಮ. ಏನಾಯಿತು, ಯಾರಿಗೂ ಗೊತ್ತಿಲ್ಲ. ಶ್ರಾವಸ್ತಿಯ ನಾಲ್ಕು ಹಳ್ಳಿಗಳು ಅಯೋಧ್ಯೆಗೆ ಮರಳಿ ದೊರಕಿದುದಷ್ಟೇ ಎಲ್ಲರಿಗೂ ತಿಳಿದ ವಿಷಯ.
೬
ಇದೀಗ ತಾರ್ಕ್ಶ್ಯನಿಗೆ ಹೊಸ ಸಂಕಟ ಶುರುವಾಗಿತ್ತು.
ಪಕ್ಶ್ಮಾರಾಣಿಯ ಪಲಾಯಾನದ ವಾರ್ತೆ ಮಹಾರಾಜರಲ್ಲಿ ಯಾವ ಕ್ರೋಧವನ್ನೂ ಹುಟ್ಟಿಸಲಿಲ್ಲ-ನಿಜ.
ಹತ್ತು ದಿನ ಸುಖ ಭೋಗಿಸಿದರೂ ಮಹಾರಾಜರಿಗೆ ತೃಪ್ತಿ ಮಾತ್ರ ಇರಲಿಲ್ಲ.
“ತಾರ್ಕ್ಶ್ಯಾ! ನನಗೆ ಮದುವೆಯಾಗಬೇಕು! ” ಎಂದಿಷ್ಟೇ ಮಹಾರಾಜರು ಹೇಳಿದರು.
ಇದಕ್ಕೆ ಏನನ್ನಬೇಕು?
ಈ ಮಾತನ್ನು ಮಹಾರಾಣಿಯವರಿಗೆ ವರದಿ ಒಪ್ಪಿಸುವುದಕ್ಕೆ ಧೈರ್ಯ ತಾರ್ಕ್ಶ್ಯನಿಗೆ ಇಲ್ಲ.
ಮರುದಿನ ಮಹಾರಾಜರು ತಮ್ಮ ಬೇಡಿಕೆಯನ್ನು ಮತ್ತೆ ಹೇಳಿದರು, ತಮ್ಮ ಮಾತಿನ ಅರ್ಥವನ್ನು ವಿವರಿಸಿದ ಮೇಲೆ ತಾರ್ಕ್ಶ್ಯನಿಗೆ ತುಸು ನೆಮ್ಮದಿಯಾಯಿತು.
ಬಲಿತ ಗಣಿಕೆಯರಿಗೆ ಸಂಗವೇ ಮಹಾರಾಜರಿಗೆ ಬೇಸರವಾಗಿತ್ತು. ಅವರಿಗೆ ಉಪವರ ಕುಮಾರಿಯ ಮೀಸಲು ಮುರಿಯುವ ಹವ್ಯಾಸ ಹೊಕ್ಕಿತ್ತು.
ಗಣಿಕೆಯರಿಗೆ ಉಪವರ ಹೆಣ್ಣುಮಕ್ಕಳಿದ್ದಾರೆಯೇ, ಎಂದು ಊರೂರು ಅಲೆದದ್ದಾಯಿತು. ಯಾರೂ ಕೈಗೆ ಎಟುಕಲಿಲ್ಲ.
ಕುಲೀನ ಕುಟುಂಬಗಳಿಗೆ ಒಂದೆರಡು ಚೌಕಾಶಿ ಮಾಡಿದ್ದೂ ವ್ಯರ್ಥವಾಯಿತು. ಅಯೋಧ್ಯೆಯಲ್ಲಿ ಬಡವರಿದ್ದರೇ ಹೊರತು ಮಹಾರಾಜನ ಕೀರ್ತಿ ಕೇಳಿದವರಾರೂ ಇಂಥ ನರಕ ಯಾತನೆಗೆ ತಮ್ಮ ಮಕ್ಕಳನ್ನು ಒಪ್ಪಿಸಲಿಕ್ಕೆ ಸಿದ್ಧರಾಗಲಿಲ್ಲ.
ಇನ್ನು ನಾಗಕುಟುಂಬದ ಕಾಡು ಜನರನ್ನು ಸಂಧಿಸಬೇಕು. ಅಯೋಧ್ಯೆಯ ಉತ್ತರ ದಿಕ್ಕಿನಲ್ಲಿ ಬಹುದೂರ ಪ್ರಯಾಣ ಮಾಡಬೇಕು.
ಪುರುಕುತ್ಸ ಮಹಾರಾಜರ ಹವ್ಯಾಸವಂತೂ ಮಿತಿಮೀರಿಬಿಟ್ಟಿತು. ತಾರ್ಕ್ಷ್ಯನನ್ನು ತಮ್ಮ ಸೇವೆಯಿಂದ ಕಡಿದುಬಿಡುವುದಾಗಿ ಹೆದರಿಸತೊಡಗಿದರು.
ಗುಪ್ತ ರೀತಿಯಿಂದ ಪುರುಕುತ್ಸಾನಿಯ ಸೇವಕನಾದ ತಾರ್ಕ್ಷ್ಯನಿಗೆ ಸಂಕಟವಾಯಿತು. ಊರು ಬಿಟ್ಟು ಓಡಿ ಹೋಗುವುದು ಒಂದು ಉಪಾಯ. ಆದರೆ ಪುರುಕುತ್ಸಾನಿ ಕಾಲಕಾಲಕ್ಕೆ ತನಗೆ ಒಪ್ಪಿಸಿದ ಅರ್ಧ ರಾಜಕೀಯ ಕಾರ್ಯಗಳಿಗೆ ಮನಸೋತಿದ್ದ ತಾರ್ಕ್ಷ್ಯನಿಗೆ ಇದು ಬಹಳ ಬಿಗಿಯ ನಿರ್ಣಯವಂತಾಗಿ ತೋರಿತು.
ಮಹಾರಾಜರಿಗೂ ಮಹಾರಾಣಿಯವರಿಗೂ ಒಂದು ವಾರ ಊರಿಗೆ ಹೋಗುತ್ತೇನೆಂದು ಬಿನ್ನೈಸಿಕೊಂಡು ಉತ್ತರಕೋಸಲದ ಕಡೆಗೆ ಪ್ರಯಾಣ ಬೆಳೆಸಿದ. ಹತ್ತು ದಿನ ಬರಲಿಲ್ಲ.
೭
“ಕಾಲಿಯಾ! ತಾರ್ಕ್ಶ್ಯ ಬಂದನೇನು?”
ಈ ಒರಲು ಮಹಾರಾಜರಿಂದ ಐದನೇ ದಿನ ಶುರುವಾದದ್ದು ಐದು ದಿವಸ ಅವ್ಯಾಹತವಾಗಿ ಸಾಗಿತು.
“ಇನ್ನೂ ಇಲ್ಲ!” ಎಂದು ಹೇಳಿಹೇಳಿ ಕಾಲಿಯಾ ಬೇಸತ್ತಿದ್ದ.
ಹತ್ತನೆಯ ದಿವಸ ಸಂಜೆ ಕುದುರೆಯ ಖುರಪುಟ ಕೇಳಿ ಬಂತು.
ತಾರ್ಕ್ಷ್ಯನೇ ಬಂದನೆಂದು ಕಾಲಿಯಾ ಹೊರಗೆ ಓಡಿದ.
ಬಂದವನು ತಾರ್ಕ್ಷ್ಯನಲ್ಲ. ಅಪರಿಚಿತ ರಾಹುತನೊಬ್ಬ.
ಕುದುರೆಯ ಮುಂಭಾಗದಲ್ಲಿ ಕಂಬಳಿಯ ಮುಸುಕಿನಲ್ಲಿ ಸಡಿಲಾಗಿ ಕಟ್ಟಿದ ಹಸಿಬೆಯಂತ ಚೀಲವಿದ್ದಿತು.
ಕಾಲಿಯನನ್ನು ಸಮೀಪ ಕರೆದು ರಾಹುತ ಕುದುರೆಯ ಲಗಾಮು ಗಟ್ಟಿಯಾಗಿ ಹಿಡಿದು ನಿಲ್ಲುವಂತೆ ಹೇಳಿದ. ಅಪರಿಚಿತನು ತನ್ನನ್ನು ’ಕಾಲಿಯಾ’ ಎಂದು ಸಂಭೋದಿಸಿದ್ದನ್ನು ಕೇಳಿ ಕಾಲಿಯಾ ಮುಂದೆ ಬಂದು ಲಗಾಮು ಹಿಡಿದು ನಿಂತ.
ಜತನದಿಂದ ರಾಹುತ ಕುದುರೆಯಿಂದ ಇಳಿದು, ಆ ಹಸಿಬೆಯನ್ನು ತನ್ನ ಹೆಗಲಿಗೆ ಏರಿಸಿಕೊಂಡ. “ಮಹಾರಾಜರೆಲ್ಲಿ?” ಎಂದು ಕೇಳಿದ.
ಹಸಿಬೆಯೊಳಗಿಂದ ಅಫ಼ೀಮಿನ ಅಮಲಿನಲ್ಲಿ ಸಣ್ಣ ನರಳಿಕೆ ಕೇಳಿ ಬರುತ್ತಿತ್ತು.
ಕಾಲಿಯಾ ಲಗುಬಗೆಯಿಂದ ಕುದುರೆಯನ್ನು ಗಿಡಕ್ಕೆ ಕಟ್ಟಿ, ರಾಹುತನನ್ನು ಕರೆದೊಯ್ಯಲಿಕ್ಕೆ ಬಂದ.
ರಾಹುತ ಒಳಗೆ ಹೋಗಿ, ಕಾಲಿಯಾನನ್ನು ಅಲ್ಲಿಯೇ ನಿಲ್ಲಲಿಕ್ಕೆ ಹೇಳಿದ.
“ಪ್ರಭುಗಳು ಚಿತ್ತೈಸಬೇಕು. ತಾರ್ಕ್ಷ್ಯ ಈ ಕಾಣಿಕೆ ಕಳಿಸಿಕೊಟ್ಟಿದ್ದಾನೆ. ಇನ್ನೂ ಅಫ಼ೀಮಿನ ಅಮಲು ಇಳಿದಿಲ್ಲ. ಇಲ್ಲೇ ಮಲಗಿಸಲೇ?”
“ಹಾಸಿಗೆಯ ಮೇಲೇ ಮಲಗಿಸು.”
ಕಂಬಳಿಯ ಆವರಣವನ್ನು ತೆಗೆದು ಹದಿಮೂರು ವರ್ಷದ ಎಳೆಯ ಬಾಲಕಿಯನ್ನು ಹಾಸಿಗೆಯ ಮೇಲೆ ಮಲಗಿಸಿದ.
“ತಾರ್ಕ್ಷ್ಯನೆಲ್ಲಿ?”
“ನಾಳೆಗೆ ಬಂದು ಮುಟ್ಟುತ್ತಾನೆ. ಅವನ ಕಾಲಿಗೆ ಗಾಯವಾಗಿದೆ. ನಾಲ್ಕು ಕ್ರೋಸಿನ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದಾನೆ. ಪ್ರಭುಗಳು ತಡವಾದದ್ದಕ್ಕೆ ಕ್ಷಮಿಸಬೇಕು. ಅವನನ್ನು ಕರೆದು ತರಲು ನಾನು ಹೋಗಲೇ?”
“ನೀನು ಹೊರಡು.”
“ಅಪ್ಪಣೆ, ಮಹಾಪ್ರಭು!” ರಾಹುತ ಈಚೆಗೆ ಬಂದ. ಕಾಲಿಯಾನನ್ನು ದಿಟ್ಟಿಸಿ ನೋಡುತ್ತ, “ನೀನು ಇಲ್ಲಿಯೇ ಇರು” ಎಂದು ಹೇಳಿ ಕುದುರೆಯೇರಿ ಹೊರಟು ಬಿಟ್ಟ.
ಮರುದಿನ ಬೆಳಿಗ್ಗೆ ಕಾಲಿಯಾ ಎದ್ದು ಮಹಾರಾಜರ ಹಾಸಿಗೆಗೆ ಹೋಗಿ, ಮಲಗಿದ ಬಾಲಕಿಯನ್ನು ಎತ್ತಿ ತಂದ. ಚಿಕ್ಕ ಹುಡುಗಿ. ಏಕೋ ಕಾಲಿಯನಿಗೆ ಕಸಿವಿಸಿಯಾಯ್ತು. ಮಂದಪ್ರಕಾಶದಲ್ಲಿ ಎಲ್ಲಿಯೋ ಪರಿಚಿತ ಬಾಲಿಕೆಯೆಂಬ ಭಾವನೆ ಬಂದಿತು.
ಬಾಲಿಕೆಗೆ ಇನ್ನೂ ನಿಚ್ಚಳ ಎಚ್ಚರ ಬಂದಿದ್ದಿಲ್ಲ.
ಮೊಗಸಾಲೆಯ ಕಟ್ಟೆಯ ಮೇಲೆ ಕಾಲಿಯಾ ಅವಳನ್ನು ದಿಟ್ಟಿಸಿ ನೋಡಿದ.
ತನ್ನ ತಂಗಿ ನಾಗಿಯಾ!
ಒಳಗಿನಿಂದ ಒಂದು ಚಾದರ ತಂದು ಹೊದ್ದಿಸಿದ. ಗಾಳಿ ಹಾಕತೊಡಗಿದ. ಕ್ರೋಧ ಉಕ್ಕೇರಿತು. ಒಂದು ಕ್ಷಣ ಒಳಗೆ ಹೋಗಿ ರಾಜನನ್ನು ಚೂರಿಯಿಂದ ತಿವಿಯಬೇಕೆನಿಸಿತು. ಅಷ್ಟು ಕ್ರೋಧ. ತನ್ನ ಸಂಕಟವನ್ನು ಹತ್ತಿಕ್ಕಿದ.
ಹಾಗೆ ಮಾಡಿದ್ದರೆ ಚೀರಾಟವಾಗಿ ಪಹರೆಯವರು ನುಗ್ಗಿಬರಬಹುದಾಗಿತ್ತು.
ಆಮೇಲೆ ನಾಗಿಯಳ ಗತಿ..?
ನಾಗಿಯಳ ಉಸಿರು ಸಂತವಾಗಿ ಸಾಗತೊಡಗಿತು.
ಇನ್ನು ಅರ್ಧಪ್ರಹರದಲ್ಲಿ ಎಚ್ಚರವಾಗಬಹುದು. ಕುದುರೆ ಸಿಕ್ಕರೆ ಎರಡು ಹರದಾರಿ ಅಡ್ಡಹಾದಿ ಬಿದ್ದು ಓಡಿ ಹೋಗಬಹುದು.
ಹೊರಗೆ ಒಬ್ಬನೆ ಪಹರೆಯವನು ಎಚ್ಚರವಿದ್ದ. ಉಳಿದ ಐವರು ನಿದ್ರಿಸುತ್ತಿದ್ದರು.
ಕಾಲಿಯಾ ಆ ಪಹರೆಯ ರಾಹುತನನ್ನು ಕುರಿತು, “ಮಹಾರಾಜರು ತಾರ್ಕ್ಷ್ಯನನ್ನು ಕರೆದುಕೊಂಡು ಬರಲಿಕ್ಕೆ ಹೇಳಿದ್ದಾರೆ” ಎಂದ.
“ನಾನು ಹೋದರೆ ಇಲ್ಲಿ ಪಹರೆ ಯಾರು ಮಾಡಬೇಕು?”
“ನಾನು ವೈಜನಾಥನನ್ನು ಎಬ್ಬಿಸುತ್ತೇನೆ. ಬೇಗ ಹೋಗು.”
“ತಾರ್ಕ್ಷ್ಯ ಎಲ್ಲಿದ್ದಾನೆ?”
“ಅಯೋಧ್ಯೆಯ ತನ್ನ ಮನೆಯಲ್ಲಿ.”
ರಾಹುತ ಲಗುಬಗೆಯಿಂದ ಅಯೋಧ್ಯೆ ಕುರಿತು ಕುದುರೆ ಬಿಟ್ಟ. ಕಾಲಿಯಾ ಮಲಗಿದ್ದ ವೈಜನಾಥನ ಕಡೆಗೆ ಹೋಗುವುದನ್ನು ನೋಡಿ.
ಕಾಲಿಯಾ ವೈಜನಾಥನನ್ನು ಎಚ್ಚರಗೊಳಿಸಲಿಲ್ಲ. ಆತನ ಕುದುರೆಯನ್ನು ಅಲ್ಲಿಯೇ ಗಿಡಕ್ಕೆ ಕಟ್ಟಿದ್ದರು. ಮೆಲ್ಲನೆ ಬಿಚ್ಚಿ ಸದ್ದಿಲ್ಲದೆ ಆ ಕುದುರೆಯನ್ನು ಆಮ್ರವನದ ಮನೆಯ ಬಾಗಿಲಿಗೆ ತಂದು ನಿಲ್ಲಿಸಿದ.
ಆ ಕುದುರೆಗೆ ಕಾಲಿಯನ ಪರಿಚಯವಿತ್ತು.
ಮೆಲ್ಲನೆ ತಂಗಿ ನಾಗಿಯಾಳನ್ನು ಎತ್ತಿ ಒಯ್ದು ಕುದುರೆಯ ಹೆಗಲ ಮೇಲೆ ಮಲಗಿಸುತ್ತಲೆ, ಅದೇ ಕೈಯಿಂದ ಕಡಿವಾಣ ಹಿಡಿದು ಕುದುರೆಯನ್ನು ಏರಿದ. ನಡೆಸುತ್ತ ನಡೆಸುತ್ತ ಬೇಲಿಯ ಹೊರಗೆ ಹಿಂಭಾಗಕ್ಕೆ ಬಂದ. ಅಲ್ಲಿಯ ಅರಣ್ಯದಲ್ಲಿ ನಾಲ್ಕು ಹೆಜ್ಜೆ ನಡೆಯುತ್ತಲೇ ಮುಂದುವರಿದು, ಕಡಿವಾಣ ಎಳೆದ.
ಕುದುರೆ ಚಂದವಾಗಿ ಓಡತೊಡಗಿತು.
ಅದರ ರೂಢಿಗಳನ್ನು ಕಾಲಿಯಾ ಎಡಹೆಗಲಿಗೆ ಒಮ್ಮೆ ಚಪ್ಪರಿಸಿದ. ನಾಗಾಲೋಟದಿಂದ ಕುದುರೆ ಸಂಚರಿಸತೊಡಗಿತು.
೮
ಪುರುಕುತ್ಸ ಮಹಾಪ್ರಭುಗಳಿಗೆ ಅಂದು ಮದುವೆಯಾಯಿತೆ?
ತೇಲುಗಣ್ಣು-ಮೇಲುಗಣ್ಣಾಗಿ ತುಯ್ಯುತ್ತ ತಮ್ಮ ವಧುವಿನ ಕುಪ್ಪೆಯೊಂದಿಗೆ ಹಾಸಿಗೆಯ ಬಳಿಗೆ ಬಂದು ನೋಡಿದರು.
ಹುಡುಗಿಗೆ ಇನ್ನೂ ಅಫ಼ೀಮಿನ ಅಮಲು ಇಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅಸ್ಪಷ್ಟವಾಗಿ ನರಳುತ್ತಿತ್ತು.
ಅಲ್ಲಿಯೇ ಕುಳಿತು ಮಹಾರಾಜರು ಕಣ್ಣರಳಿಸಿ ನೋಡಿದರು.
ಹುಡುಗಿ ಚೆಲುವೆಯೇನೋ ಹೌದು.
ಆದರೆ..
ಕೊರಳಲ್ಲಿ ಕರಿಮಣಿಯ ಸರಗಳು, ನಾಗಮುದ್ರಿಕೆಯ ಹಿತ್ತಾಳೆಯ ತಾಯಿತ, ಕೈಯಲ್ಲಿ ಕರಿದಾರ, ಗಲ್ಲದ ಮೇಲೆ ಹಚ್ಚೆ..ನಾಗಕನ್ನಿಕೆಯ ಎಲ್ಲ ಲಕ್ಷಣಗಳೂ ಇದ್ದವು.
ಹಾಗೆಯೇ ದಿಟ್ಟಿಸಿ ನೋಡುವಂತೆ, ಒಮ್ಮೆಲೇ ಗುರುತು ಹತ್ತಿದಂತಾಯಿತು. ಆಕೆಯ ಮುಖವನ್ನು ಮುಂಚೆ ಎಲ್ಲಿ ನೋಡಿದ್ದೇನೆ? ಎಲ್ಲಿಯೋ ನೋಡಿದ ನೆನಪು! ಮಹಾರಾಜರು ತಲೆ ಚಚ್ಚಿಕೊಂಡರು..
ಹೌದು! ಒಂದೆರಡು ವರ್ಷಗಳ ಕೆಳಗೆ ಕಾಲಿಯಾ ಬಂದ ಹೊಸತರಲ್ಲಿ ಹೀಗೆಯೇ ಇರಲಿಲ್ಲವೇ?
ಕಾಲಿಯಾನ ತಂಗಿ ಇರಬಹುದೆ?
’ತಂಗಿ’ ಎಂಬ ಶಬ್ದದೊಡನೆ ಮಹಾರಾಜರಲ್ಲಿ ಜುಗುಪ್ಸೆ ಹುಟ್ಟಿತು..ತಮ್ಮ ಬಗ್ಗೆ, ತಮ್ಮ ದೈವದ ಬಗ್ಗೆ, ತಮ್ಮ ತಂದೆಯ ಬಗ್ಗೆ, ಕಾಲಿಯಾನ ಬಗ್ಗೆ, ಈ ಹುಡೂಗಿಯ ಬಗ್ಗೆ, ಹೆಚ್ಚಾಗಿ ತಮ್ಮ ಬಗ್ಗೆ…
ಇದೇನು ಮಾನಸಶಾಸ್ತ್ರ?- ಶಬ್ದ ಸಂಕೇತಗಳು ಈ ಮಾಟಮಾಡಬಹುದೇ? ಗೊತ್ತಿಲ್ಲ.
ಬಚ್ಚಲಿಗೆ ಹೋಗಿ ಮಹಾರಾಜರು ವಾಂತಿ ಮಾಡಿಕೊಂಡರು.
ಬಂದು ಇನ್ನೊಂದು ಮೂಲೆಯಲ್ಲಿ ಅಲ್ಲಿಯೇ ಒರಗಿಕೊಂಡರು.
೯
ಕಾಲಿಯಾನ ಹುಟ್ಟೂರು ಅಮರು ಗ್ರಾಮವನ್ನು ಮುಟ್ಟಲಿಕ್ಕೆ ಆ ಚಟುಲ ಕುದುರೆಗೂ ಮಧ್ಯಾಹ್ನವೇ ಆಯಿತು.
ತಂದೆ ವಾಸುಕಿ ತಾಯಿ ಭೋಗಿಯಾ ಮಗಳು ಕಳೆದು ಹೋಗಿದ್ದರಿಂದ ಚಿಂತಿತರಾಗಿ ಊಟವನ್ನೂ ಬಿಟ್ಟು ಕುಳಿತಿದ್ದರು. ನಾಗಿಯಾ ಪೇರಲೆಹಣ್ಣಿನ (ಅಮರುದ) ತೋಟದಲ್ಲಿ ಹಣ್ಣು ಕದಿಯುವಾಗ ತೋಟಿಗನ ಕೈಗೆ ಸಿಕ್ಕಿದರ ಸುದ್ದಿ ಅವರಿಗೆ ತಿಳಿದಿತ್ತು. ಭೀಮಕಾಯದ ವಾಸುಕಿ ಮುದಿ ತೋಟಿಗನನ್ನು ಎಳೆದು ತಂದು ಚಚ್ಚಿದ್ದನು. ’ನಾಗಿಯ ಹಣ್ಣು ಕದಿಯಲಿಕ್ಕೆ ಬಂದಿದ್ದು ನಿಜ. ಒಂದು ಹಣ್ಣು ತಿನ್ನಲಿಕ್ಕೆ ಕೊಟ್ಟು ನಾವು ಒಳಗೆ ಊಟಕ್ಕೆ ಕುಳಿತಿದ್ದೆವು. ಹೊರಗೆ ಬರುವಷ್ಟರಲ್ಲಿ ಆಕೆ ಮಾಯವಾಗಿದ್ದಳು. ಎದ್ದು ಮನೆಗೆ ಹೋಗಿರಬೇಕೆಂದು ಭಾವಿಸಿ ನಾವು ಬೇರೆ ವಿಚಾರ ಮಾಡಲಿಲ್ಲ. ಇಲ್ಲದಿದ್ದರೆ ಊಟ ಮಾಡಿ ಆಕೆಯನ್ನು ತಂದು ನಿಮಗೆ ದೂರುವ ವಿಚಾರವಿತ್ತು!” ಎಂದು ತೋಟಿಗ ಸುಖಿಯಾ ಹೇಳಿದನು. ಅವನು ವಯೋವೃದ್ಧ. ಅವನ ಮಾತು ಅಲ್ಲಗೆಳೆಯಲಾಗದಿದ್ದರೂ ಸಿಟ್ಟು ತಡೆಯದೆ ವಾಸುಕಿ ಅವನ ಮೈಮೇಲೆ ಬಿದ್ದು, ಕೈತಿರುವಿ ಗುದ್ದು ಕೊಟ್ಟಿದ್ದನು. ಅವನ ಹೆಂಡತಿ ಊರ ಗಾಮುಂಡನಿಗೆ ದೂರು ಕೊಟ್ಟಿದ್ದಳು. ಇಬ್ಬರು ದಾರಿಕಾರರು ಯಾರೋ ಒಂದು ಕಂಬಳಿಯಲ್ಲಿ ಸುತ್ತಿದ ಗಂಟನ್ನು ಹೊತ್ತುಕೊಂಡ ಕುದುರೆ ಸವಾರರನ್ನು ಸಂಧಿಸಿದ ಸುದ್ದಿ ತಿಳಿಯಿತು. ಗಂಟಿನಿಂದ ಒಂದು ಕಾಲು ಇಳಿಬಿದ್ದಿದನ್ನು ನೋಡಿ ಅವನನ್ನು ತಡೆಯುವ ಯತ್ನ ಮಾಡಿದ್ದರು. ಆದರೆ ರಾಹುತ ಬಲವಾಗಿ ಕುದುರೆ ಬಿಟ್ಟಮೂಲಕ ಸಾಧ್ಯವಾಗಲಿಲ್ಲವೆಂದು ತಿಳಿದಿತ್ತು. ಗಾಮುಂಡ ಊರ ಹಿರಿಯರನ್ನು ಕೂಡಿಸಿದ್ದ. ರಾಜನಿಗೆ ವರದಿ ಕಳಿಸಬೇಕು. ಯಾವ ರಾಜನೆಂಬ ಬಗ್ಗೆ ವಿವಾದ ಎದ್ದಿತ್ತು.
ಅಮರು ಗ್ರಾಮ ಗಡಿಪ್ರದೇಶ. ಯಾವ ರಾಜ್ಯಕ್ಕೆ ಸೇರಿದ್ದು ಊರವರಿಗೇ ಯಾರಿಗೂ ಗೊತ್ತಿಲ್ಲ. ಕೆಲವರು ಕಾಶಿರಾಜನೆಂದೂ, ಕೆಲವರು ಅಯೋಧ್ಯಾರಾಜನೆಂದೂ, ಕೆಲವರು ನೇಪಾಳ ರಾಜನೆಂದೂ ವಾದಿಸತೊಡಗಿದರು. ಕೋತ್ವಾಲನು ಕಾಶಿರಾಜನ ಅಭಿಮಾನಿ; ಸಭೆ ಬಿಟ್ಟು ಎದ್ದು ಹೋದನು. ಒಬ್ಬ ಹಿರಿಯ, “ನಮಗೆ ಒಳ್ಳೇದು ಮಾಡುವವರು ನಮ್ಮ ರಾಜರು” ಎಂದು ಹೇಳಿ, “ಅಯೋಧ್ಯಾ ರಾಜರು ಒಳ್ಳೆಯವರೆನ್ನಲಾರೆ, ಆದರೆ ನಿಮ್ಮ ಕೆಲಸವಾಗಬೇಕಾದರೆ, ಸಾಮ್ರಾಜ್ಞ್ನಿ ಮಹಾದೇವಿಯವರ ಕಡೆಗೆ ಹೋಗಬೇಕು!” ಎಂದು ಸಲಹೆ ಮಾಡಿದನು. ವಾಸುಕಿ ಸಭೆಗೆ ಬರಲಿಲ್ಲ. ಕುದುರೆ ಏರಿ ಆರು ಹಳ್ಳಿ ಸುತ್ತಿ ಏನೂ ತಿಳಿಯದ ಊರ ಕಡೆಗೆ ತಿರುಗಿದಾಗ, ಅಡವಿಯಲ್ಲಿ ಕುದುರೆಯ ಖುರಪುಟ ಕೇಳಿ, ಗಿಡಕ್ಕೆ ಮರೆಯಾಗಿ ದೊಣ್ಣೆಯೊಂದನ್ನು ಎತ್ತಿಕೊಂಡು ಸನ್ನದ್ಧವಾಗಿ ನಿಂತಿದ್ದನು. ಕಾಲಿಯಾನನ್ನು ಗುರುತಿಸಿ, ದೊಣ್ಣೆಯನ್ನು ದಪ್ಪಗೆ ಕೆಳಗೆ ಚಲ್ಲಿ, “ಕಾಲಿಯಾ” ಎಂದು ಕುದುರೆ ಇಳಿದು ಧಾವಿಸಿದನು.
ಚಾಣಾಕ್ಷ ಕಾಲಿಯಾ ಕುದುರೆ ನಿಲ್ಲಿಸಿ, “ಏನು?” ಎಂದು ಕೇಳಿದನು.
“ನಿನ್ನ ತಂಗಿ ನಾಗಿಯಾ..! ಎಂದು ವಾಸುಕಿ ಗದ್ಗದಿಸಿದನು.”
“ಇಲ್ಲಿದ್ದಾಳೆ ನಾಗಿಯಾ..!” ಎನ್ನುತ್ತ ಕುದುರೆ ಬಿಟ್ಟು ಕಾಲಿಯಾ ಇಳಿದನು.
ಅವನ ಬೆನ್ನ ಹಿಂದೆಯೇ ನಾಗಿಯಾ ಕುಳಿತಿದ್ದಳು. ಅವಳ ಅಫ಼ೀಮಿನ ಅಮಲು ಅಳಿದಿತ್ತು. ನೀಟಾಗಿ ಬಾಚಿಕೊಂಡು ಏನೂ ಆಗದವಳಂತೆ ಕುದುರೆಯ ಹಿಂದೆ ಕುಳಿತಿದ್ದಳು. “ನಾಗಿಯಾ…!” ಎಂದು ಆಕ್ರೋಶಿಸಿ, ಆಕೆಯನ್ನು ಕುದುರೆಯ ಮೇಲಿಂದ ಕೆಳಗಿಳಿಸಿ ವಾಸುಕಿ ಆಲಂಗಿಸಿದನು, “ಎಲ್ಲಿ ಹೋಗಿದ್ದೆ, ಮಗಳೇ..” ಎಂದು ಗೋಳಿಟ್ಟು ಕೇಳತೊಡಗಿದನು.
“ಅಮರುದ ತೋಟದಿಂದ ಸೀಳುದಾರಿಯಿಂದ ಅಡವಿಯನ್ನು ಸೇರಿದಾಗ ದಾರಿ ತಪ್ಪಿತ್ತು ಅಪ್ಪಾ, ನೀವೆಷ್ಟು ಚಿಂತೆ ಮಾಡಿದರೋ ಏನೋ?” ಎಂದು ನಾಗಿಯಾ (ಅಣ್ಣನ ಕಲಿಸಿಕೆಯ ಅನುಸಾರವಾಗಿ) ಹೇಳಿದಳು.
ಹಿಗ್ಗಿನ ಸಂಭ್ರಮದಲ್ಲಿ ತನ್ನ ಕುದುರೆಯ ಮೇಲೆ ಕೂಡಿಸಿಕೊಂಡು ವಾಸುಕಿ ಮಗನೊಡನೆ ಊರಿಗೆ ಬಂದನು. ಊರಿನ ಹೆಣ್ಣು ಮಕ್ಕಳು ಆರತಿ ಮಾಡಿ, ಕೇರಿನ ಬೊಟ್ಟಿನೊಡನೆ ಆಕೆಯ ದೃಷ್ಟಿದೋಷವನ್ನು ತೆಗೆದರು. ಅಲ್ಲಿಗೇ ಆ ಪ್ರಕರಣ ಮುಗಿದಿತ್ತಾದರೂ, ಮುದುಕಿ ಭೋಗಿಯಾಗೆ ಸಮಾಧಾನವಾಗಲಿಲ್ಲ.
ಆ ಪೇರಲ ತೋಟ (ಅಮರುದ) ಶ್ರೀವಾಮದೇವ ಮಹರ್ಷಿಗಳು ಬೆಳೆಸಿದ್ದು. ಈಗ ಹಿಮಾಲಯಕ್ಕೆ ತಪಶ್ಚರ್ಯೆಗಾಗಿ ತೆರಳಿದ್ದರು. ತೋಟದ ಉಸ್ತುವಾರಿ ನೋಡಲಿಕ್ಕೆ ತಮ್ಮ ಶಿಷ್ಯೋತ್ತಮ ದೇವದೇಮ ಮುನಿಗಳನ್ನು ಅಲ್ಲಿ ಬಿಟ್ಟು ಹೋಗಿದ್ದರು. ಭೋಗಿಯಾ ತನ್ನ ಮಗಳು, ಮಗ, ಗಂಡನೊಂದಿಗೆ ಮಹರ್ಷಿ ದೇವದೇಮ ದರ್ಶನಕ್ಕಾಗಿ ಬಂದು, ಕಾಯಿ-ಕರ್ಪೂರ ಅರ್ಪಿಸಿ, ಮಗಳು ನಾಗಿಯಾಳ ಬಗ್ಗೆ ಪ್ರಶ್ನೆ ಕೇಳಿದಳು.
ದೇವದೇಮರು ಮಹಾತಪಸ್ವಿಗಳು , ತ್ರಿಕಾಲ ಜ್ಞಾನಿಗಳು. ಅವರನ್ನು ಎಷ್ಟು ಹೊಗಳಿದರೂ ಕಡಿಮೆ.
ಯಾರ ಕಡೆಗೂ ನೋಡದೆ ಆಕಾಶ ನೋಡುತ್ತ ಒಮ್ಮೆ ಮಾತ್ರ ಮಹರ್ಷಿಗಳು ಗಟ್ಟಿಯಾಗಿ ನಕ್ಕು ಬಿಟ್ಟರು.
ಅನಂತರ ಕೆಲವು ನಿಮಿಷ ಗಂಭೀರವದನರಾಗಿ ಪುಟಪುಟನೆ ’ಅಸ್ಯವಾಮ ದೇವಸ್ಯ’ ಮುಂತಾದ ಮಂತ್ರಗಳನ್ನು ಪಠಿಸಿದರು.
ಒಂದೇ ಬಾರಿ ನಾಗಿಯಾಳ ಸರ್ವಾಂಗಗಳ ಮೇಲೆ ಕಣ್ಣುಹಾಯಿಸಿದರು.
“ನಾನು ಮಂತ್ರಿಸಿಕೊಟ್ಟ ತಾಯಿತ ಕಳೆದಿಲ್ಲ ತಾನೆ?” ಎಂದು ನಾಗಿಯಾಳಿಗೆ ಪ್ರಶ್ನಿಸಿದರು.
ನಾಗಿಯಾ ತನ್ನ ಕೊರಳಲ್ಲಿ ನೇತಾಡುತ್ತಿರುವ ತಾಯಿತವನ್ನು ಎತ್ತಿ ತೋರಿಸಿದಳು. ಅಲ್ಲಿಗೇ ಆಕೆಯನ್ನು ಬಿಟ್ಟು ಕಾಲಿಯಾನಿಗೆ ಪ್ರಶ್ನಿಸತೊಡಗಿದರು.
“ನೋಡು, ಕಾಲಿಯಾ! ನಾಗಕುಲದವರು. ಅಥರ್ವಣವೇದಿಗಳು. ದೇವರು ನಮಗೆ ಎಲ್ಲ ಕಲೆಗಳನ್ನೂ ದಯಪಾಲಿಸಿದ್ದಾನೆ. ಮಂತ್ರ-ತಂತ್ರ-ವಿಷ ಬಾಧೆಯ ಔಷಧ-ವೈದ್ಯವೇದ, ಶರೀರ ಸಂಪತ್ತು ಎಲ್ಲ ಕೊಟ್ಟಿದ್ದಾನೆ. ಆದರೆ ಒಂದನ್ನು ಮಾತ್ರ ಕೊಡಲಿಲ್ಲ? ಏನದು, ಹೇಳು?”
“ನಾನು ಅರಿಯೆ, ಗುರು! ತಾವೇ ಸರ್ವಜ್ಞರು. ಹೇಳೋಣವಾಗಲಿ.”
“ಹೇಳುತ್ತೇನೆ, ಕೇಳು. ಹೇಗೆ ಬದುಕಬೇಕೆಂಬ ಕಲೆಯನ್ನು ಮಾತ್ರ ಕೊಡಲಿಲ್ಲ.”
“ನಾವು ಹೃಷ್ಟಪುಷ್ಟರಾಗಿ ಬದುಕುತ್ತೇವಲ್ಲ ಗುರುಗಳೇ!”
“ಈಗ ನೋಡು. ನಿಮ್ಮ ಅಪ್ಪ ವ್ಯಗ್ರಚಿತ್ತನಿಗೆ ಹಿಂದು ಮುಂದಿನ ವಿಚಾರ ಮಾಡದೆ ತೋಟಿಗ ಮುದಿ ಸಖಿಯಾನನ್ನು ಥಳಿಸಿದನಂತೆ. ಇದಕ್ಕೆ ಜೀವನ ಕಲೆಯೆಂದು ಹೇಳಬಹುದೇ?”
ವಾಸುಕಿ ಬಾಯಿಬಿಟ್ಟ: “ನನ್ನ ಮನಸ್ಸು ಕಹಿಯಾಗಿತ್ತು. ತಾಳ್ಮೆ ಉಳಿದಿಲ್ಲ, ಪ್ರಭೂ, ತಪ್ಪಾಗಿ ಹೋಯಿತು.”
“ಚಿಂತೆಯಿಲ್ಲ ಬಿಡು, ನಾನು ಇಲ್ಲಿ ಇದ್ದೇನೆ! ಸಖಿಯಾ ಮೂರು ದಿನದಲ್ಲಿ ಸಂಪೂರ್ಣ ಗುಣವಾಗದಿದ್ದರೆ ನಾನು ಅಥರ್ವಣವೇದಿಯೇ ಅಲ್ಲ. ಈಗ ನೀನು, ಕಾಲಿಯಾ, ಊರು ಬಿಟ್ಟು ಅಯೋಧ್ಯೆಗೆ ಹೋದೆ. ಅಲ್ಲಿ ಅಯೋಗ್ಯ ಧನಿಯ ಸೇವೆ ನಿನ್ನ ಪಾಲಿಗೆ ಬಂತು ಹೌದೇ?”
ಈ ಬಗ್ಗೆ ಮಾತು ಮುಂದುವರೆಸುವುದಕ್ಕೆ ಮನಸಾ ಕಾಲಿಯಾ ಸಿದ್ದನಿರಲಿಲ್ಲ. ಅಲ್ಲಿಯೇ ಮಾತು ಮುಗಿಸಬೇಕೆಂದು, “ನಿಜ ಪ್ರಭು” ಎಂದನು.
“ಈಗ ನೀನು ತಾಯಿ! ನನ್ನ ಮಾತನ್ನು ಕ್ಷಮಿಸು. ನಿನ್ನ ಮಗಳು ಋತುಸ್ನಾತೆಯಾದಾಗ ಒಂದು ಋಗ್ವೇದೀಯ ಯಜ್ಞವಿದೆ. ಮಾಡಿದ್ದೀಯಾ?”
“ಇಲ್ಲ ಪ್ರಭು. ಅಥರ್ವಣವೇದಿಯವರು ಅದನ್ನು ಆಚರಿಸಲಿಕ್ಕೆ ಅಧಿಕಾರಿಗಳೇ?” ವಾಸುಕಿ ಅಡ್ಡಬಾಯಿ ಹಾಕಿದನು.
“ಏಕಿಲ್ಲ? ಎಲ್ಲ ವೇದಗಳು ಆ ಪರಬ್ರಹ್ಮನಿಂದ ಮೂಡಿಬಂದವಲ್ಲವೆ? ಆ ಯಾಗವನ್ನು ಮಾಡಿದರೆ, ತಾನು ಕುಮಾರಿಯಲ್ಲ, ಕನ್ಯೆ ಎಂಬ ಅರಿವು ಮಗಳಿಗೆ ಮೂಡುತ್ತಿತ್ತು, ಆಗ ಗಿಡ ಏರಬಾರದೆಂದು ತಿಳಿಯುತ್ತಿತ್ತು. ಈ ಎಲ್ಲ ಯಾಗಗಳು, ವ್ರತಗಳು, ನೇಮಗಳು, ಮನಸ್ಸನ್ನು ದೇಹದ ಅರಿವಿನತ್ತ ತಿರುಗಿಸಿ, ಆಯಾ ವಯಸ್ಸಿನ ಧರ್ಮ ಆಚರಿಸಲು ಬುದ್ದಿ ತರುತ್ತವೆ. ಅಲ್ಲವೆ? ವಾಸುಕೀ ನಿನ್ನ ವಯಸ್ಸೆಷ್ಟು?”
“ನನಗೆ ನೆನಪಿಲ್ಲ, ಪ್ರಭು!”
ಅವನ ಕೈಬೆರಳುಗಳನ್ನು ತಮ್ಮ ಕೈಯಲ್ಲಿ ಹಿಡಿದು, ಉಗುರುಗಳನ್ನು ಮುಟ್ಟಿ ನೋಡಿ “ನಿನಗೆ ೫೮ ವರ್ಷ. ಇನ್ನೆರಡು ವರ್ಷದಲ್ಲಿ ನಿನ್ನ ಷಷ್ಠ್ಯಬ್ದ ಪೂರ್ತಿ ಯಾಗವಾಗಬೇಕು ತಿಳಿಯಿತೆ? ಇರಲಿ; ಗ ಜ್ಯೋತಿಷ್ಯ ಶಾಸ್ತ್ರವನ್ನಷ್ಟು ನೋಡುತ್ತೇನೆ. ಯಾವ ದುಷ್ಟ ನಕ್ಷತ್ರಗಳು ಪ್ರಭಾವ ಬೀರಿ ನಾಗಿಯಾನ ಕಷ್ಟಕ್ಕೆ ಕಾರಣವಾದವೆಂಬುದನ್ನು ಗುಣಿಸಿ ಹೇಳುತ್ತೇನೆ.”
ಮಣ್ಣು ತುಂಬಿದ ಪಾತ್ರ್ಯೊಂದನ್ನು ತರಿಸಿ, ಗುಣಾಕಾರ ಭಾಗಾಕಾರದಲ್ಲಿ ಋಷಿಗಳು ತುಸು ಸಮಯ ಕಳೆದರು. ಪ್ರಶ್ನಜ್ಯೋತಿಷ್ಯದ ಲೆಕ್ಕದಂತೆ ಆಕೆ ಕಳೆದು ಹೋದ ದಿಕ್ಕನ್ನು ಹೇಳುತ್ತಿರುವಾಗ, ಭಯಪಟ್ಟು, ತಾಳ್ಮೆಗೆಟ್ಟು, ನೆಲದ ಮೇಲೆ ಕಾಲಿಯಾ ಕಾಲು ಹೊಸೆಯುತ್ತಿದ್ದದ್ದು ಕಾಣಿಸಿತು. ಹೆಚ್ಚು ವಿವರ ಹೇಳುವುದು ಈ ಸಂದರ್ಭದಲ್ಲಿ ಅಯುಕ್ತವೆಂದು ಋಷಿಗಳಿಗೆ ಅನಿಸಿತು. ಲೆಕ್ಕವನ್ನು ಅರ್ಧಕ್ಕೇ ನಿಲ್ಲಿಸಿ, ದಿವ್ಯ ದೃಷ್ಟಿಯನ್ನು ಮುಗಿಲತ್ತ ಹಾಯಿಸಿ ಹೇಳಿದರು.
“ಏನೋ, ಆ-ಮ್ರ, ಆ-ಮ್ರವೆಂಬ ಶಬ್ದ ನನ್ನ ಅಂತಃಕರಣದಲ್ಲಿ ಧ್ವನಿಸುತ್ತಿದೆ..”
ತಟ್ಟನೆ ಕಾಲಿಯಾ ಹೇಳಿದ: “ಅದೇ ಮಹಾಗುರು, ಅದೇ..ಇದೇ ಅಮರೂದ ತೋಟದಲ್ಲಿ ನಮ್ಮ ನಾಗಿಯಾ ದಾರಿ ತಪ್ಪಿಸಿಕೊಳ್ಳಲಿಲ್ಲವೇ? ತಾವು ಹೇಳಿದ್ದು ತಂತೋತಂತ ಹೊಂದಿಕೆಯಾಗುತ್ತದೆ!”
ಮಹರ್ಷಿಗಳು ಕಾಲಿಯಾನತ್ತ ನೋಡಿ, ಮುಗುಳುನಗೆ ನಕ್ಕರು. ತೋಟದಲ್ಲಿನ ಒಂದು ಸುಂದರ ಅಮರೂದ ಹಣ್ಣನ್ನು ಅಕ್ಷತೆಯೊಂದಿಗೆ ನಾಗಿಯಾಳ ಉಡಿಯಲ್ಲಿ ಹಾಕಿ, ” ಏನೂ ಭಯವಿಲ್ಲ ಮಗಳೇ, ಇನ್ನಾರು ತಿಂಗಳಲ್ಲಿ ನಿನ್ನ ವಿವಾಹವಾಗುತ್ತದೆ” ಎಂದು ಹೇಳಿ ಅಂದಿನ ಪ್ರಶ್ನೆಯ ವಿಷಯವನ್ನು ಮುಗಿಸಿ, ಎದ್ದರು.
ಎಲ್ಲರೂ ಹರ್ಷಚಿತ್ತರಾಗಿ ಮನೆಗೆ ಮರಳಿದರು. ಕಾಲಿಯನಿಗೆ ಮಾತ್ರ ಮಹರ್ಷಿಗಳ ಮುಗುಳುನಗೆಯಲ್ಲಿ ಏನೇನೋ ಗೂಢಾರ್ಥ ಕಾಣಿಸಿತು. ’ಎಲ್ಲ ಗೊತ್ತಿದೆ. ಆದರೆ ಎಲ್ಲ ಹೇಳಲಿಲ್ಲ. ನಮ್ಮ ಪುಣ್ಯ!’ ಎಂದುಕೊಂಡ.
೧೦
ತಾರ್ಕ್ಶ್ಯನಿಂದ ಸ್ವಜನಘಾತವಾಗಿತ್ತು ಅವನೂ ನಾಗಕುಲದವನೇ. ಮಹಾರಾಜ-ಮಹಾರಾಣಿಯವರೂ ಅದೇ ಕುಲದವರು. ಅರಸನ ಹೊಸ ಲಾಲಸೆಯನ್ನು ಪೂರೈಸುವುದಕ್ಕಾಗಿ ಮಾಡಿದ ದುಷ್ಕರ್ಮವು ಅವನ ಜೀವ ಹಿಂಡತೊಡಗಿತ್ತು. ಅದಕ್ಕೆಂದೇ ತಾರ್ಕ್ಷ್ಯ ಒಬ್ಬ ರಾಹುತನ ಜೊತೆಗೆ ತನ್ನ ಭಾರವನ್ನು ಆಮ್ರವನಕ್ಕೆ ಸಾಗಿಸಲು ವ್ಯವಸ್ಥೆ ಮಾಡಿದನು. ಸಾಲದುದಕ್ಕೆ ದಾರಿಯಲ್ಲಿ ಇನ್ನೊಮ್ಮೆ ನಾಗಿಯಳನ್ನು ನೋಡಬೇಕೆಂದು ಅನಿಸಿತು. ಆಫ಼ೀಮು ಇನ್ನೂ ಕೆಲಸ ಮಾಡುತ್ತದೆಯೋ ಇಲ್ಲವೊ ಎಂಬ ಪರೀಕ್ಷೆಗಾಗಿ. ಜೊತೆಗಿದ್ದ ರಾಹುತ ಮುಖಿಯಾ ಅತ್ಯಂತ ಪ್ರಭಾವಕಾರಿ ಅಮಲು ಬರುವ ವಿಶೇಷ ಅಫ಼ೀಮಿನ ಮಿಶ್ರಣ ಕೂಡಿಸಿ ತಯಾರಿಸಿದ ಖಾದ್ಯವನ್ನು ಆಕೆಗೆ ತಿನಿಸಿದ್ದನು. ಅವನ ಸಹಾಯದಿಂದ, ನಾಗಿಯಾಳನ್ನು ನೆಲಕ್ಕೆ ಮಲಗಿಸಿ, ಕಣ್ಣು ಪಾಪೆಯನ್ನು ತೆರೆದು ನೋಡಿದನು. ಕಣ್ಣುಗುಡ್ಡೆಗಳು ಇನ್ನೂ ನೀಲಿಯಾಗಿದ್ದವು. ಆಕೆಯ ಮುಖದ ಹೋಲಿಕೆ ಕಾಲಿಯನಂತೆ ಇದ್ದದ್ದು ತಾರ್ಕ್ಷ್ಯನ ಚಿಂತೆಗೆ ಕಾರಣ, “ಏನೇ ಆಗಲಿ, ತಡವಂತೂ ಆಗಿದೆ. ನಾನೇ ಪಾಪಕ್ಕೆ ಸಾಕ್ಷಿಯಾಗಲಾರೆ. ವರದಿಯಂತೂ ಮಹಾರಾಣಿಗೆ ಮುಟ್ಟಲೇ ಬೇಕು” ಎಂದು, ಆ ಎರಡನೇ ರಾಹುತ ಮುಖಿಯಾನಿಗೆ ನಾಗಿಯಾಳನ್ನು ಒಪ್ಪಿಸಿ, ತಾನು ಅಯೋಧ್ಯೆಗೆ ಬಂದು, ಆದಷ್ಟು ಮೆತ್ತಗಾಗಿ ರಾಣಿಗೆ ವರದಿ ಒಪ್ಪಿಸಿದನು. ಅರಸನ ಶಬ್ದಗಳನ್ನು ಬಳಸಲು ಧೈರ್ಯ ಬರಲಿಲ್ಲ. ಆದರೆ ಅವನ ಹೊಸ ಹವ್ಯಾಸದ ಸೂಕ್ಷ್ಮ ಪರಿಚಯ ಮಾಡಿಕೊಟ್ಟನು. ಅರಸನ ಮನಸ್ಸು ತಿರುಗಿಸುವ ತನ್ನ ಎಲ್ಲ ಯತ್ನ ವ್ಯರ್ಥವಾದುದನ್ನು ತಿಳಿಸಿದ.
“ಈ ವಿಷಯವನ್ನು ಮೊದಲೇ ಯಾಕೆ ಹೇಳಲಿಲ್ಲ?..” ಇಷ್ಟೇ ಹೇಳಿ, ರಾಣಿ ನಾಲಗೆ ಕಚ್ಚಿ ಹಿಡಿದಳು.
ಕ್ಷಣಾರ್ಧದಲ್ಲಿ ಆಕೆಯ ಮನಸ್ಸಿನಲ್ಲಿ ಒಂದು ವಿಚಾರ ಸುಳಿದು, ಆಕೆಯ ಪ್ರಭುಶಕ್ತಿಯೆದುರು ಮಾಯವಾಗಿತ್ತು. ತಾನೇ ವೇಷ ಮರೆಸಿಕೊಂಡು ಬೇರೆ ರೀತಿಯ ಕೇಶಾಲಂಕಾರ ಮಾಡಿಕೊಂಡು, ರಾಜನಿಗೂ ಅಫ಼ೀಮು ಕೊಟ್ಟು ತನ್ನ ಮನಃಕಾಮನೆಯನ್ನು ಏಕೆ ಪೂರೈಸಿಕೊಳ್ಳಬಾರದು? ಆದರೆ, ಹಾಗೆ ಹೇಳಿದ್ದರೆ ರಾಣಿಗೆ ತನ್ನ ಕೌಮಾರ್ಯಾವಸ್ಥೆಯ ವಿಷಯವನ್ನು ತಾರ್ಕ್ಶ್ಯನಿಗೆ ಸೂಚಿಸುವುದು ಅನಿವಾರ್ಯವಾಗುತ್ತಿತ್ತು. ’ತಾವೇ ಬೇಕಾದುದನ್ನು ತರ್ಕಿಸಿಕೊಳ್ಳಲಿ. ನನ್ನ ನಾಲಗೆ ಜಾರತಕ್ಕದಲ್ಲ’ ಎಂಬುದೇ ಅವಳ ನಿರ್ಧಾರ.
ತಾರ್ಕ್ಶ್ಯ ತನ್ನ ಸಂದೇಹಗಳನ್ನು ಸ್ಪಷ್ಟವಾಗಿ ಹೇಳಿದ. “ತಂದ ಕುಮಾರ್ತಿ ಕಾಲಿಯನ ತಂಗಿಯೇ ಆಗಿದ್ದರೆ, ಅದರಿಂದ ಉದ್ಭೂತವಾಗುವ ಸಮಸ್ಯೆಗಳು ತುಂಬಾ ಇವೆ” ಇಷ್ಟೇ ಹೇಳಿ ಮನೆಗೆ ತೆರಳಿದ.
ಮರುದಿನ ಮುಂಜಾನೆ ಪಹರೆಯ ರಾಹುತ ಕರೆಯಲು ಬಂದಾಗ “ಪಹರೆ ಬಿಟ್ಟು ಏಕೆ ಬಂದಿ?” ಎಂದು ಗಡುಸಾಗಿಯೇ ಕೇಳಿ ಅವನ ಜೊತೆಗೆ ತಾರ್ಕ್ಷ್ಯ ಆಮ್ರವನಕ್ಕೆ ಓಡಿ ಬಂದ.
ಆಗಾಗಲೇ ಹಕ್ಕಿಗಳು ಮಾಯವಾಗಿದ್ದವು.
ರಾತ್ರಿ ನಿದ್ದೆ ಇಲ್ಲದೆ ಮಹಾರಾಜರು ಇನ್ನೂ ಮಲಗಿಯೇ ಇದ್ದರು.
“ನಾವು ಬಂದಿದ್ದೆನೆಂದು ಮಹಾರಾಜರಿಗೆ ಎದ್ದಮೇಲೆ ತಿಳಿಸು!” ಎಂದು ಹೇಳಿ ಮಹಾರಾಣಿಯವರಿಗೆ ವರದಿ ಸಲ್ಲಿಸಲು ಅಯೋಧ್ಯೆಗೆ ಓಡಿದನು.
“ಮಹಾರಾಣಿ, ಕಾಲಿಯ ಮಾಯವಾಗಿದ್ದಾನೆ. ಆ ಕುಮಾರ್ತಿಯೂ ಮಾಯವಾಗಿದ್ದಾಳೆ. ನನ್ನ ಅಚಾತುರ್ಯ! ನನ್ನ ಹಣೇ ಬರಹ ! ” ಎಂದು ಅಕ್ಕಸದಿಂದ ಹಣೆ ಬಡಿದುಕೊಂಡನು.
“ಅಂಥ ಅಚಾತುರ್ಯವೇನು ಆಯಿತು?”
“ನಾನು ನಮ್ಮ ಊರಿಗೆ ಹೋಗಿ ನನ್ನ ಜನರಿಗೆ ಮುಖ ಹೇಗೆ ತೋರಿಸಲಿ?”
“ಶಾಂತನಾಗು. ವಿಚಾರಕ್ಕೆ ಸಮಯಕ್ಕೆ ಕೊಡು..ಕಾಲಿಯಾನ ಊರಾವುದು, ನೆನಪಿದೆಯೆ!”
’ಅಮರು ಗ್ರಾಮ..’
೧೧
ದೇವದೇಮ ಮಹರ್ಷಿಗಳು ಮಂಗಳವಾರದ ದಿನ ಪ್ರಶ್ನೆಗೆ ನಿಷಿದ್ದವೆಂದು ವಿಧಿಸಿದ್ದರು. ಅಂದು ಮಂಗಳವಾರ. ಪ್ರಶ್ನೆ ಕೇಳುವ ಜನರು ಇರುವುದಿಲ್ಲ. ಅಂದೇ ಕಾಲಿಯಾ ಅವರ ಆಶ್ರಮಕ್ಕೆ ಬಂದನು.
’ನಾನು ಧರ್ಮಚರ್ಚೆಗೆ ಬಂದಿದ್ದೇನೆ. ಜ್ಯೋತಿಷ್ಯ ಪ್ರಶ್ನೆಗಲ್ಲ!’ ಎಂದು ಹೇಳಿ, ಬಾಗಿಲ ಬಳಿ ನಿಂತ ಶಿಷ್ಯನನ್ನು ಬದಿಗೆ ಸರಿಸಿ ಒಳಗೆ ಪ್ರವೇಶಿಸಿದನು.
ಮಹರ್ಷಿಗಳ ಪೂಜೆ ಮುಗಿಯಲಿಕ್ಕೆ ಬಂದಿತ್ತು. ನಾಗದೇವನಿಗೆ ಮಂಗಳಾರತಿ ಬೆಳಗಿ, ಹಾಲಿನ ನೈವೇದ್ಯವಿಟ್ಟು, ಪೂಜೆ ಮುಗಿಸಿದನು. ತೀರ್ಥ ಪ್ರಸಾದಗಳನ್ನು ಕಾಲಿಯನಿಗೆ ಕೊಟ್ಟರು, ಮೌನವಾಗಿ.
“ಏನು ನಿನ್ನ ಧರ್ಮಪ್ರಶ್ನೆ?” ಗುರುಗಳು ಕೇಳಿದರು.
“ಒಬ್ಬ ಸ್ವಾಮಿಯು ಅಯೋಗ್ಯನಾಗಿರುವಾಗ ಅವನನ್ನು ಬಿಟ್ಟು ಇನ್ನೊಬ್ಬ ಸ್ವಾಮಿಯ ಸೇವೆ ಕೈಕೊಂಡರೆ ಅದು ಅಧರ್ಮವೇ?”
“ಮಗೂ, ನಿನ್ನ ಅಂತಃಕರಣದಲ್ಲಿ ಮೂಡಿದ ಸಂದರ್ಭ ನನಗೆ ಕಾಣುತ್ತಿದೆ. ನೀನು ಯಾರ ಸೇವೆ ಮಾಡಬೇಕೆಂದು ಇಚ್ಚಿಸುತ್ತೀಯೋ ಅವರು ಗುರುವಾರ ಮುಂಜಾನೆ ಇಲ್ಲಿಯೇ ಬರುತ್ತಾರೆ. ಆದರೇನು?-ಅವರನ್ನು ಕಾಣುವುದು ಬಿಡುವುದು ನಿನ್ನ ಸಾತ್ವಿಕ ಶಕ್ತಿಯ ಮೇಲೆ ಅವಲಂಬಿಸಿದೆ. ಅದು ನಿನ್ನದೇ ನಿರ್ಧಾರದ ವಿಷಯ!”
ಕಾಲಿಯನಿಗೆ ನೆಲಕ್ಕೆ ಕುಸಿಯುವಂತಾಯ್ತು. ತುಸು ಬೆರಳು ಕಚ್ಚುತ್ತ ಅವನು ಹೇಳಿದನು;
“ಪ್ರಭು ಇಂದು ಮಂಗಳವಾರ. ತಾವು ಪ್ರಶ್ನೆಗೆ ಉತ್ತರ ನೀಡುವುದಿಲ್ಲವೆಂದು ಕೇಳಿದ್ದೆ. ನನ್ನ ಮೇಲೆ ಕೃಪೆ ಮಾಡಿದಿರಲ್ಲ.”
“ಕೃಪೆ ಹೌದೋ ಅಲ್ಲವೋ, ನಿನ್ನ ದೃಢ ನಿಶ್ಚಯದ ಮೇಲೆ ಅವಲಂಬಿಸಿದೆ.”
“ಯಾಕೆ, ಮಹಾಸ್ವಾಮಿ?”
“ಹೆರವರ ಪಾಪಕೃತ್ಯಗಳನ್ನು ನೀನು ಮೂಕಸಾಕ್ಷಿಯಾಗಿ ನೋಡುತ್ತ ಬಂದಿರುವಿ. ನಿನ್ನ ಚಿತ್ತ ಚಂಚಲವಾಗಿದೆ. ಅದರ ಒಳಗಿನ ಅಂತಃಕರಣವನ್ನು ನೀನು ಆಶ್ರಯಿಸುವುದಾದಲ್ಲಿ , ಕಲ್ಯಾಣವಿದೆ. ಚಿತ್ತದ ಅಪಾರ ತೆರೆಗಳನ್ನು ನೀನು ನೋಡುತ್ತ ನಿಲ್ಲುವಿಯಾದರೆ, ಹೀಗೂ ಆಗಬಹುದು. ಹಾಗೂ ಆಗಬಹುದು. ಅದಕ್ಕೆ ನಿಯಮವೆಂಬುದೇ ಇಲ್ಲ. ಅದು ದೈವದ ಮಾತು. ಚಿತ್ತದ ನೂರಾಯೆಂಟು ತೆರೆಗಲಲ್ಲಿ ನೀನು ಆಯ್ದು ಒಂದು ತೆರೆ ಅಂತಃಕರಣದ ಮಾತಿಗೆ ಸಂವಾದಿಯಾದರೆ ಯಶಸ್ಸೂ ಸಿಕ್ಕಬಹುದು. ಉಳಿದ ನೂರಾಯೇಳು ತೆರೆಗಳು ನಿನ್ನ ಘಾತ ಮಾಡುವುದಕ್ಕೂ ಸಮರ್ಥವಿದೆ!”
“ನನ್ನ ಅಂತಃಕರಣದಲ್ಲಿ ಮೂಡಿದ ಪ್ರಶ್ನೆಯನ್ನು ತಾವು ಹೇಗೆ ಓದಿದಿರಿ?”
“ನಿರ್ಮಲಾಂತಃಕರಣದಿಂದ ! ಅಂತಃಕರಣಗಳು ಅಂತಃಕರಣಗಳಿಗೆ ಯಾವಾಗಲೂ ಮೂಕ ಸಂದೇಶ ತಿಳಿಸುತ್ತಲೇ ಇರುತ್ತವೆ. ಓದುವವನಿಗೆ ನಿರ್ಮಲ ಅಂತಃಕರಣ ಬೇಕು ಅಷ್ಟೇ!”
“ಮಂಗಳವಾರ ಕೂಡ ಅಂತಃಕರಣ ಓದಬಹುದೇ?”
“ಯಾಕಿಲ್ಲ? ನೀನು ಆಶ್ರಮದ ನಿಯಮ ಭಂಗಿಸಿ ಇಂದು ಪ್ರಶ್ನೆ ಕೇಳಲಿಕ್ಕೆ ಬಂದಿದ್ದೇ ಸಾಕು. ನಿನ್ನ ಮನಸ್ಸಿನಲ್ಲಿ ಇದ್ದದ್ದು ಅಂತಃಕರಣದ ಪ್ರಶ್ನೆ ಎಂದು ತಿಳಿಯಬಹುದು. ಅಂತಃಕರಣದ ಪ್ರಶ್ನೆ ಇದ್ದಾಗ ಯಾವ ದಿನವಾದರೂ ಸರಿ.”
“ಜ್ಯೋತಿಷ್ಯ ಪ್ರಶ್ನೆಗೂ ಅಂತಃಕರಣದ ಪ್ರಶ್ನೆಗೂ ಅಂತರವೇನು?”
“ಜ್ಯೋತಿಷ್ಯಶಾಸ್ತ್ರ ಒಂದು ವಿದ್ಯೆ. ಅದರ ನಿಯಮ ಅನುಸರಿಸಿ ಫಲ ಹೇಳಬಹುದು. ಅದು ಕಡಿಮೆ ಶ್ರಮದ ಕೆಲಸ. ದಿವಸಕ್ಕೆ ಇಪ್ಪತ್ತು ಜನರ ಜ್ಯೋತಿಷ್ಯ ಹೇಳಬಹುದು. ಅಂತಃಕರಣದ ಪ್ರಶ್ನೆ ಹಾಗಲ್ಲ. ಮೊದಲು ಅಂತಃಕರಣದ ಪ್ರವೇಶ ಮಾಡಬೇಕು. ಓರೆಕೋರೆಗಳನ್ನು ಅರಿಯಬೇಕು. ವ್ಯಾಪಿಸಿ ಅನಂತರ ಹೊರಗೆ ಕಾಲಿಟ್ಟು, ಭವಿಷ್ಯತ್ತಿನ ಸಾಧ್ಯಾಸಾಧ್ಯತೆಗಳ ರೇಷೆಗುಂಟ ಪ್ರಯಾಣ ಮಾಡಬೇಕು. ಒಂದು ದಿವಸದಲ್ಲಿ ಇಬ್ಬರು ಮೂವರ ಅಂತಃಕರಣ ಪ್ರವೇಶ ಮಾಡಬಹುದು. ಹೆಚ್ಚಿಗೆ ನನ್ನಿಂದಾಗುವುದಿಲ್ಲ. ನಮ್ಮ ಗುರು ವಾಮದೇವ ಮಹರ್ಷಿಗಳಿಗೆ ಈ ಸಮಸ್ಯೆ ಇಲ್ಲ. ಅವರ ಮಾತೇ ಜನರ ಭವಿಷ್ಯವಾಗುತ್ತದೆ. ಅವರವರ ಭವಿಷ್ಯ ಆಚಾರ್ಯರ ಮಾತಿನಂತೆ ಓಡುತ್ತದೆಯೆಂಬುದು ಅವರವರ ಅನುಭವದ ಮಾತು. ನಿಜವೆಂದರೆ, ಯಾವ ಶ್ರಮವಿಲ್ಲದೆ ಮಹರ್ಷಿಗಳು ಎಲ್ಲ ಘಟನೆಗಳನ್ನೂ ಹೇಳಬಲ್ಲರು.”
“ದೈವವು ಪೂರ್ವನಿಯೋಜಿತವೆಂದಾಯಿತಲ್ಲ!”
“ಹೌದು. ಜೀವನದ ಮುಖ್ಯ ಘಟನೆಗಳು ಪೂರ್ವನಿಯೋಜಿತ. ಅವನ್ನು ಸಾಧಿಸಲು ಮಾಡುವ ಪ್ರಯತ್ನ ಇಷ್ಟಾನಿಷ್ಟೋಪಪತ್ತಿಯಿಂದ ನೋಡುವವರ ಕಣ್ಣಿಗೆ ರಮ್ಯವಾಗುತ್ತದೆ. ಅನುಭವಿಸುವವನಿಗೆ ಏರುತಗ್ಗುಗಳಾಗಿ ಕಾಣಿಸುತ್ತದೆ. ಈಗ ನೀನೆ ಇರುವೆ. ಕಳೆದ ವಾರ ನಿನಗೆ ಒಂದು ದಾರುಣ ಅನುಭವ ಬಂದಿತು. ಚಿತ್ತವನ್ನು ಕದಡಿಸುವ ವಿಷಯಗಳೇ ಬೇರೆ. ಅಂತಃಕರಣದ ಮೇಲೆ ಚಿರಂತನ ಕಚ್ಚು ಬೀಳಿಸುವ ಘಟನೆಗಳೇ ಬೇರೆ. ನಿನಗೆ ಆದ ಅನುಭವ ಪೂರ್ವಕಲ್ಪಿತ. ನಿನ್ನ ಜೀವನವನ್ನು ಇಡಿಯಾಗಿ ನೀನೆ ನೋಡಿಕೊಂಡರೆ ಈ ದಾರುಣ ಆಘಾತದ ಸಂಭಾವ್ಯತೆ ನಿನಗೇನೆ ಮನವರಿಕೆಯಾಗಬಹುದು. ಆದರೆ ಅರ್ಧಮರ್ಧ ನೋಡಿ ಮನುಷ್ಯ ಸಂಭಾವ್ಯತೆಯನ್ನು ಮರೆತು, ಒಂದು ಘಟನೆಯನ್ನು ಒಂದೇ ಘಟನೆಯೆಂದಾಗಿ ಭಾವಿಸುತ್ತಾನೆ. ಅದೇ ದೃಷ್ಟಿದೋಷ ಮಾಯೆ. ಜೀವನನಾಟಕ ನಡೆಯಬೇಕಾದರೆ ಕತ್ತಲೆಯಲ್ಲಿ ಪಂಜುಗಳ ಅಂಧಕಪ್ರಕಾಶವೇ ಬೇಕೆಂದು ಅನಿಸುತ್ತದೆ. ನಿಚ್ಚಳ ಬುದ್ಧಿಯ ನಿರ್ಮಲಾಂತಃಕರಣಿಗಳಿಗೆ ಎಲ್ಲವೂ ನಿಚ್ಚಳ. ಅವರಿಗೆ ಅಚ್ಚರಿಯೆಂಬುದೇ ಇಲ್ಲ.”
“ಮಹಾಸ್ವಾಮಿ, ನನ್ನ ಕಣ್ಣ ಮೇಲಿನ ಪರೆ ಕಳಚಿದಿರಿ!”
“ನಿನ್ನ ಕಣ್ಣ ಮೇಲೆ ಒಂದೇ ಪರೆ ಇಲ್ಲ, ಕಾಲಿಯಾ! ದೇವರು ನಿನಗೆ ಸದ್ಬುದ್ಧಿಯನ್ನು ಕೊಡಲಿ. ನಿನ್ನ ಮನಸ್ಸಿನ ಗಾಯಗಳ ಲಸಿಕೆ ನಿನ್ನ ಅಂತಃಕರಣವನ್ನು ಮುಟ್ಟದಿರಲಿ. ನೀನು ಹೋಗಬಹುದು!”
ಕಾಲಿಯನ ಮನಸ್ಸಿನಲ್ಲಿ ಇನ್ನಷ್ಟು ನಿಚ್ಚಳ ಪ್ರಶ್ನೆಗಳಿದ್ದವು. ಆದರೆ ನಿರ್ಣಾಯಕ ಮಾತೇ ಬಂದಿದ್ದರಿಂದ ಮುಂದೆ ಏನೂ ಕೇಳಲಿಲ್ಲ. ’ಮುಖದ ಮೇಲೆ ಅವಗುಂಠನವಿದ್ದೇ ನಡೆಯುವುದು ದೈವ!’ ಎಂದುಕೊಂಡು ಅವನು ನಮಸ್ಕರಿಸಿ ಹೊರಟನು.
ಬುದ್ಧಿವಂತನಾಗಿದ್ದರೆ, ’ನಾನು ಏನು ಮಾಡಬೇಕು?’ ಎಂಬ ಪ್ರಶ್ನೆಯನ್ನು ಕೇಳಬಹುದಾಗಿತ್ತು. ಅರ್ಜುನನು ಬುದ್ಧಿವಂತನಾದುದರಿಂದ “ತದೇಕಂವದ ನಿಶ್ಚಿತ್ಯ ಯೇನ ಶ್ರೇಯೋಹಮಾಪ್ನುಯಾಂ” ಎಂಬ ಪ್ರಶ್ನೆ ಕೇಳಿದ. ಆದರೆ ಆಗಿನ ಶಿಕ್ಷಣ, ಸಂಸ್ಕೃತಿ ಇನ್ನೂ ಆ ಮಟ್ಟಕ್ಕೆ ಏರಿರಲಿಲ್ಲ. ಪರಿಪೂರ್ಣ ಋಷಿ ಮುನಿಗಳು ಇದ್ದರೇ ಹೊರತು ಸಾಮಾನ್ಯರು ಅವರ ಪೂರ್ಣ ಲಾಭ ಪಡೆಯುವ ಮಟ್ಟಕ್ಕೆ ಬಂದಿರಲಿಲ್ಲ. ಗುರುಗಳ ಶಕ್ತಿ ಪರೀಕ್ಷೆ ಮಾಡುವ ’ಅಚ್ಚರಿ’ ಎಂಬ ಮಾಯೆ ಇನ್ನೂ ಕಾಲಿಯನ ಮನಸ್ಸನ್ನು ಮುಸುಕಿತ್ತು.
೧೨
ಚಿಕ್ಕ ವಯಸ್ಸೇ ಆಗಲಿ, ರಾಜ-ರಾಣಿಯರ ಎಲ್ಲ ಗುಟ್ಟನ್ನೂ ಅರಿತ ಸೇವಕನೊಬ್ಬ ಓಡಿಹೋಗಿ ಶತ್ರುವಾಗುವುದು ಮಹಾರಾಣಿಗೆ ಪ್ರಶಸ್ತವೆನಿಸಲಿಲ್ಲ. ಅಮರು ಗ್ರಾಮಕ್ಕೆ ಹೋಗಿ ದೇವದೇಮ ಮಹರ್ಷಿಗಳನ್ನು ಕಂಡು. ಅವಂತಿಕಾದೇವಿಗೆ ಅಭಿಷೇಕ ಮಾಡಿಸಿ, ತನ್ನ ಕುಲ ಧರ್ಮಗವನ್ನು ಮುಗಿಸಿದಂತಾಯಿತೆಂದು ಮಹಾರಾಣಿ ಅಮರುವಿಗೆ ಗುರುವಾರ ಎರಡು ಪ್ರಹರಕ್ಕೆ ಬಂದು ಮುಟ್ಟಿದಳು. ದೇವಿಯ ದರ್ಶನ ಪಡೆದಳು. ಮಹರ್ಷಿಗಳ ದರ್ಶನಕ್ಕೆ ಬಿಳಿ ಸೀರೆಯನ್ನು ಉಟ್ಟುಕೊಂಡು, ತಲೆಯ ಮೇಲೆ ಸೆರಗು ಹೊದ್ದುಕೊಂಡು, ಪಾದಚಾರಿಣಿಯಾಗಿ ರಾಣಿ ಪುರುಕುತ್ಸಾನಿ ಆಶ್ರಮಕ್ಕೆ ಬಂದಳು.
ವಾಮದೇವ ಮಹರ್ಷಿಗಳ ಶಿಷ್ಯೆಯಾದ ಮಹಾರಾಣಿಯನ್ನು ಮಹರ್ಷಿ ದೇವದೇಮರು ಆದರದಿಂದ ಸ್ವಾಗತಿಸಿದರು. ಎಲ್ಲ ಶಿಷ್ಯರನ್ನೂ ಹೊರಗೆ ಕಳಿಸಿ, ಗುಟ್ಟಾಗಿ ಹೇಳಿದರು: “ನೀನು ಇಲ್ಲಿಯವರೆಗೆ ಯಶಸ್ವಿಯಾಗಿದ್ದೀಯ. ಮುಂದೆ ಪರಚಕ್ರದ ಸಂಭಾವ್ಯತೆಗಾಗಿ ಜೋಕೆಯಿಂದ ಇರಬೇಕು. ಮೊದಲು ತುಸು ಕಷ್ಟವಾದರೂ ಕೊನೆಗೆ ರಾಜ್ಯದ ಹಡಗು ನಿನ್ನಿಂದಲೇ ದಡ ಮುಟ್ಟುತ್ತದೆ. ಚಿಂತೆ ಬೇಡ.”
ಮಹಾರಾಣಿ ಬೆಕ್ಕಸಬೆರಗಾದಳು.
“ಮಹರ್ಷಿಗಳು ಆಶೀರ್ವದಿಸಬೇಕು. ಸಂಕಟ ನಿವಾರಣೆಗೆ ಬೇಕಾದ ಯಾಗವನ್ನು ಮಾಡಬೇಕು: ನಾನಿನ್ನೂ ಹಸುಳೆ.”
“ಆಗಲಿ; ಇಂದೇ ಶತಚಂಡೀ ಹೋಮವನ್ನು ಪ್ರಾರಂಭಿಸುತ್ತೇನೆ. ದೈವದಲ್ಲಿ ಇದ್ದುದನ್ನು ಯಾರೂ ಅಳಿಸುವುದು ಸಾಧ್ಯವಿಲ್ಲ. ಅದರ ಪರಿಣಾಮಗಳನ್ನು ಸಹ್ಯವಾಗಿ ಆಗುವಂತೆ ಮಾಡಬಹುದು, ಅಷ್ಟೆ. ನಿನಗೆ ಚಿಂತೆ ಬೇಡ. ಗುರುವರ್ಯರ ಕೃಪೆ ನಿನ್ನ ಮೇಲೆ ಸದೈವ ಇದೆ” ಎಂದು ಹೇಳಿ ಒಳಗಿನಿಂದ ಎಲೆ, ಅಡಿಕೆ, ಕಾಯಿ ತಂದು ಅವಳ ಎದುರಿಗೆ ಇಟ್ಟರು. ಮಹಾರಾಣಿ ಅದರಲ್ಲಿ ಐನೂರು ವರಹಗಳ ದಕ್ಷಿಣೆ ಇಟ್ಟು ಕೊಡಲು ಹೋದಳು. ಮಹರ್ಷಿಗಳು ಒಮ್ಮೆಲೇ ಹಿಂದೆಗೆದು, “ನಾನು ಹೊನ್ನು ಮುಟ್ಟುವುದಿಲ್ಲ. ನಮ್ಮ ಗೋತ್ರದ ಶಾಸ್ತ್ರಿಗಳಿದ್ದಾರೆ. ಅವರಿಗೆ ಕೊಡಬಹುದು” ಎಂದರು.
“ತಾವು ಸ್ವತ: ಕಂಕಣ ಕಟ್ಟಿಕೊಂಡು ಆಹುತಿ ನೀಡಬೇಕೆಂದು ನನ್ನ ಬಯಕೆ.”
“ಆಗಲಿ, ಅದಕ್ಕೆ ವೀಳ್ಯವಿದೆ. ಹಣ ಶಾಸ್ತ್ರಿಗಳಿಗೆ ಕೊಡಬೇಕು” ಎಂದರು.
ಅವರ ಅಪ್ಪಣೆಯ ಮೇರೆಗೆ ನಾಗೇಶ ಶಾಸ್ತ್ರಿಗಳು ಬಂದರು. ದೊಡ್ಡ ಹಮ್ಮಿಣಿಯನ್ನು ಕಂಡವರೇ, “ಇತ್ತೀಚೆಗೆ ಇಲ್ಲಿ ಚೋರಭಯ ಹೆಚ್ಚಾಗಿದೆ..” ಎಂದು ಅನುಮಾನ ಹೇಳಿದರು.
“ಇಲ್ಲಿ ಪಹರೆ ಇಡಿಸುತ್ತೇನೆ” ಎಂದಳು ಮಹಾರಾಣಿ, ವೀಳ್ಯ-ಅಕ್ಷತೆಯನ್ನೂ ಅಂಗವಸ್ತ್ರವನ್ನೂ ಮಹರ್ಷಿಗಳಿಗೆ ನೀಡಿ, ಹಮ್ಮಿಣಿಯನ್ನು ನಾಗೇಶ ಶಾಸ್ತ್ರಿಗಳಿಗೆ ಅರ್ಪಿಸಿ, ಸಾಷ್ಟಾಂಗ ನಮಸ್ಕಾರ ಮಾಡಿ, ಮಹಾರಾಣಿ ಹೊರಗೆ ಬಂದಳು.
ನೆರೆದ ಜನಸಂಮರ್ದದಲ್ಲಿ ಕಾಲಿಯಾ ಕಾಣಲಿಲ್ಲ.
ಆವಂತಿಕಾದೇವಿಯ ಅಭಿಷೇಕ ಶುಕ್ರವಾರ ಆಗಲಿ. ಎಂದು ನಿರ್ಣಯವಿತ್ತು ಮಹಾರಾಣಿ ಎರಡು ದಿನ ನಿಂತಳು.
ಕಾಲಿಯಾ ಬರಲಿಲ್ಲ; ಭೇಟಿಯಾಗಲಿಲ್ಲ.
ಶುಕ್ರವಾರ ಪೂಜೆಯ ಅನಂತರ ರಾಣಿ ತಾನೇ ಬಾಯಿಬಿಟ್ಟು ಕಾಲಿಯಾ ಮತ್ತು ಅವನ ಕುಟುಂಬದ ಜನರನ್ನು ವಿಚಾರಿಸಿಕೊಂಡು ಬರಲಿಕ್ಕೆ ಕಳಿಸಿದಳು.
ಒಂದು ದಿನ ಮುಂಚಿತವಾಗಿಯೇ ನೆರೆಯ ಹಳ್ಳಿಯಲ್ಲಿದ್ದ ಸಂಬಂಧಿಯಾರಿಗೋ ದೇಹಸೌಖ್ಯವಿಲ್ಲದ್ದಕ್ಕಾಗಿ ನೋಡಲು ಹೋಗಿರುವರೆಂದು ಗಾವುಂಡರು ವರದಿ ಒಪ್ಪಿಸಿದರು.
“ಇಲ್ಲಿಯೇ ಒಬ್ಬ ಶತ್ರು ಹುಟ್ಟಿಕೊಂಡ. ದೈವಲೀಲೆಗೆ ಉಪಾಯವಿಲ್ಲ” ಎಂದು ಮಹಾರಾಣಿ ಮತ್ತೊಮ್ಮೆ ಆವಂತೀಕಾದೇವಿಗೆ ನಮಿಸಿದಳು. ಎರಡು ಪಹರೆಯವರನ್ನು ದೇವದೇಮರ ಆಶ್ರಮದ ತೋಟ ಕಾಯಲಿಕ್ಕೆ ಇಟ್ಟು ದೇವದೇಮ ಮಹರ್ಷಿಗಳನ್ನು ಕಂಡು ಬೀಳ್ಕೊಡುವ ನಮಸ್ಕಾರ ಮಾಡಿದಳು.
“ಪುತ್ರವತೀ ಭವ!” ಎಂದು ಮಹರ್ಷಿಗಳು ಹರಸಿದರು.
ತನ್ನ ಸ್ಥಿತಿ ಅರಿತ ಮಹಾರಾಣಿಗೆ ಆಶೀರ್ವಾದ ಔಪಚಾರಿಕವೆನಿಸಿತು. ಕಿರುನಗೆ ನಕ್ಕು ಬೀಳ್ಕೊಂಡಳು.
ಶುಕ್ರವಾರ ಸಂಜೆ ಅವರು ಗ್ರಾಮವನ್ನು ಬಿಟ್ಟಾಗ ರಥದಲ್ಲಿಯೇ ಮಹಾರಾಣಿ ವಿಚಾರ ಮಾಡಿದಳು.
ಪುತ್ರವತೀ ಭವ! ಇದು ಕೇವಲ ಬಂಜೆ ಹೆಣ್ಣು ಮಕ್ಕಳಿಗೆ ಸಂತುಷ್ಟ ಪಡಿಸುವ ಆಶೀರ್ವಾದಿಸುವೊ ಮಹರ್ಷಿಗಳ ನೈಜ ಆಶೀರ್ವಾದವೋ?’
ಮಹಾರಾಣಿಯ ಮನಸ್ಸು ಚಂಚಲವಾಯಿತು. ನಗೆಯೂ ಬಂತು.
ಅರಮನೆಗೆ ಮರಳಿದೊಡನೆ ಪರಚಕ್ರದ ವಿಷಯವಾಗಿ ಆಳ ವಿಚಾರ ನಡೆಸಿದಳು.
೧೩
ಟಾಂಕಿ ಹಳ್ಳಿಯ ಹದಿನಾರು ವರ್ಷದ ನಾಗಕುಲದ ಬಾಲನೆಂದು ಅಯೋಧ್ಯೆಯ ಅರಸರ ಸೇವೆಗೆ ಸೇರಿದ ಕಾಲಿಯನಿಗೆ ತನ್ನ ವಯಸ್ಸಿಗೆ ಬರುವ ಮುಂಚೆಯೇ ಪ್ರಬುದ್ಧತೆ ಬಂದುಬಿಟ್ಟಿತ್ತು. ವಯಸ್ಸಿಗೆ ಮೀರಿದ ಮಹತ್ವಾಕಾಂಕ್ಷೆಯೂ ಅವನಲ್ಲಿ ಸೇರಿಕೊಂಡಿತ್ತು. ಅವನಿಗೆ ಸಿಕ್ಕಿದ ಕೆಲಸವೇ ಹಾಗೆ.
ರಾಣಿ ಪುರುಕುತ್ಸಾನಿ ಒಮ್ಮೆಲೇ ಮಹಾದೇವಿಯಲ್ಲಿ ಆದರ-ಭಕ್ತಿ. ರಾಜ ಪುರುಕುತ್ಸನ ಬಗ್ಗೆ ಜುಗುಪ್ಸೆ. ಈಗತಾನೆ ನಡೆದ ಘಟನೆಯಂತೂ ಅವನಿಗೆ ಕ್ರೋಧ ಆಕ್ರೋಶಗಳನ್ನು ತಂದಿತ್ತು. ಅದಕ್ಕೆ ಕಾರಣನಾದ ತಾರ್ಕ್ಷ್ಯನ ಮೇಲೆ ದ್ವೇಷ ಉಮ್ಮಳಿಸಿತ್ತು. ಸೇಡಿಗಾಗಿ ಹಾತೊರೆಯುತ್ತಿದ್ದ.
ಗುಪ್ತವೇಷದಲ್ಲಿ ಅಯೋಧ್ಯೆ ಮುಟ್ಟಿ, ತಾರ್ಕ್ಷ್ಯನ ಅಕೃತ್ಯವನ್ನು ರಾಣಿಗೆ ಹೇಳಿ, ಅವನ ವಿಶ್ವಾಸದ ಸ್ಥಾನವನ್ನು ತಾನು ಪಡೆದು, ಭದ್ರಮುಖ ಸ್ಥಾನಕ್ಕೆ ಬರಬೇಕೆಂದು ಅವನ ಮಹತ್ವಾಕಾಂಕ್ಷೆ. ರಾಣಿಯ ನ್ಯಾಯಬುದ್ಧಿಯಲ್ಲಿ ಅವನಿಗೆ ವಿಶೇಷ ವಿಶ್ವಾಸ. ಮಹಾದೇವಿಗೂ ಅನ್ಯಾಯವಾಗಿದೆ; ತನಗೂ ಅನ್ಯಾಯವಾಗಿದೆ. ಒಂದಾಗಿ ಕೆಲಸ ಮಾಡಿದರೆ ತಾರ್ಕ್ಷ್ಯ ಮಹಾರಾಜರನ್ನು ಉರುಳಿಸುವುದು ಯಾವ ಕಠಿಣ ಕೆಲಸ?
ಅವನಿಗೆ ’ತಾರ್ಕ್ಷ್ಯ’ನೆಂದರೆ ರಾಜನಿಗೆ ಗಣಿಕೆಯರನ್ನು ತರುವ ಭಟನೆಂದೇ ಕಲ್ಪನೆ. ತಾರ್ಕ್ಷ್ಯನ ಅನೇಕ ಮುಖಗಳಲ್ಲಿ ಇದು ಒಂದು ಮಾತ್ರ, ಎಂಬ ಕಲ್ಪನೆ ಅವನಿಗಿಲ್ಲ.
ಗುರು ದೇವದೇಮರಲ್ಲಿ ಅವನಿಗೆ ನಿಸ್ಸೀಮ ಭಕ್ತಿ. ಆದರೆ ಅಪಕ್ವ ವಯಸ್ಸು. ’ಏನು ಮಾಡಲಿ?’ ಎಂದು ಸ್ಪಷ್ಟವಾಗಿ ಕೇಳಲಿಕ್ಕೆ ನಾಚಿದ. ತನ್ನ ಆಕಾಂಕ್ಷೆಗಳನ್ನು ಬಚ್ಚಿಟ್ಟ. ಅವರ ಹೇಳಿಕೆಯಂತೆ ನೆಚ್ಚಿನ ರಾಣಿ ಪುರುಕುತ್ಸಾನಿ ಗುರುವಾರ ಪ್ರತ್ಯಕ್ಷಳಾಗುವಳೆಂದು ಅವನಿಗೆ ತಿಳಿದಿದ್ದು ಬುಧವಾರ ಮಾತ್ರ.
ಗುರುಗಳು ತಂಗಿಗೆ ಕೊಟ್ಟ ತಾಯಿತ ಇಂಥ ದೊಡ್ಡ ಕೆಲಸ ಸಾಧಿಸಿತ್ತೆಂಬ ಕಲ್ಪನೆ ಅವನಿಗಿರಲಿಲ್ಲ.
ಆ ತಾಯಿತವನ್ನು ತಾರ್ಕ್ಷ್ಯ ನೋಡಿದ್ದ. ದಾರಿಯಲ್ಲಿ ಆಕೆಯ ಅಮಲು ಇಳಿದಿದೆಯೇ, ಎಂದು ಪರೀಕ್ಷೆ ಮಾಡಲು ಕುದುರೆಯಿಂದ ಇಳಿಸಿದಾಗ, ಮುಖದ ಹೋಲಿಕೆ ನೋಡಿ ಕಾಲಿಯಾನ ತಂಗಿ ಇರಬಹುದೆಂದು ತಾರ್ಕ್ಷ್ಯ ತರ್ಕಿಸಿದ್ದ. ಆದರೆ ದೇವದೇಮರ ಚಿಹ್ನವಿದ್ದ ತಾಯಿತ ಆಕೆಯನ್ನು ರಕ್ಷಿಸುವದೆಂಬ ಧೈರ್ಯದಿಂದಲೇ ತಾರ್ಕ್ಷ್ಯ ಸುಮ್ಮನಾಗಿದ್ದ. ಇದು ಕಾಲಿಯನಿಗೆ ಹೇಗೆ ತಿಳಿದೀತು?
ಮಹಾರಾಜರೂ ಆ ತಾಯಿತವನ್ನು ಗುರುತಿಸಿದರು. ಗುರುಭಗಿನಿಯ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿದ್ದರೂ ಕಾಲಿಯನ ತಂಗಿ ಇರಬಹುದೆಂದು ಸಂಶಯ ಹುಟ್ಟಿತ್ತು. ಆ ಶಬ್ದವೇ ಅವರಲ್ಲಿ ಹೇಸಿಗೆ ಹುಟ್ಟಿಸಿತ್ತು. ಇದೆಲ್ಲ ಕಾಲಿಯನಿಗೆ ತಿಳಿಯದು. ಏನೇ ಕಾರಣದಿಂದ ತಂಗಿ ಪ್ರಸಂಗದಿಂದ ಪಾರಾದಳೆಂಬುದಿಷ್ಟೇ ಅವನಿಗೆ ಗೊತ್ತು.
ಮಹಾದೇವಿ ಅಮರು ಗ್ರಾಮಕ್ಕೆ ಬರುವರೆಂಬ ಸುದ್ದಿ ತಿಳಿದಮೇಲೆ ಕಾಲಿಯಾನ ಮನಸ್ಸು ವ್ಯಗ್ರವಾಯಿತು.
ಕಾಲಿಯನಿಗೆ ಕಠಿಣ ಯಶಸ್ಸು ಬೇಕು. ಸುಲಭ ಯಶಸ್ಸು ಬೇಡ. ಅದು ಅವನ ಸ್ವಭಾವ.
ಯೇಟ್ಸ್ ಮಹಾಕವಿ ಹೇಳಿದ ಈಚಿsಛಿiಟಿಚಿಣioಟಿ oಜಿ ತಿhಚಿಣ is ಜiಜಿಜಿiಛಿuಟಣ ಎಂಬುವ ದೂರ, ದುರೂಹ ಕೆಲಸಗಳ ಬಗ್ಗೆ ಅವನಿಗೆ ಇಷ್ಟ. ತನ್ನ ತಂಗಿಯನ್ನು ಉಳಿಸಿ ತರುವ ಕೆಲಸವನ್ನು ಅವನು ಯಶಸ್ವಿಯಾಗಿ ನೆರವೇರಿಸಿದ್ದ.. ರಾಜನ ಸೇವೆ ಅವನಿಗೆ ಬೇಸರ ತಂದಿತ್ತು. ಏಕೆಂದರೆ ಅದು ಸುಲಭ ಕೆಲಸ. ಮಹಾರಾಣಿ ಅಲ್ಲಿಗೆ ಬರದೇ ಹೋಗಿದ್ದರೆ, ಕಠಿಣ ಕೆಲಸವಾದ ಮಹಾರಾಣಿಯ ಗುಪ್ತಭೇಟಿ, ದೂರು, ತಾರ್ಕ್ಷ್ಯಗೆ ಶಿಕ್ಷೆ, ಇತ್ಯಾದಿಗಳನ್ನು ಮಾಡಿಯೂ ಮಾಡಬಹುದಿತ್ತು. ಮಹಾರಾಣಿ ಅಲ್ಲಿಯೇ ಬರುವುದರಿಂದ ತನ್ನ ಗುಪ್ತ ಭೇಟಿಯ ಕೆಲಸ ತಾನು ಊಹಿಸಿದ್ದಕ್ಕಿಂತ ಕಠಿಣವಾಗಿ ತೋರತೊಡಗಿತು.
ಈಗ ರಾಣಿಯ ಗುಪ್ತಸೇವಕರು ತನ್ನ ಶೋಧದಲ್ಲಿ ತೊಡಗಿರಬಹುದು. ನಾನು ಗುಪ್ತವೇಷದಿಂದ ಪ್ರಯಾಣ ಮಾಡುವುದು ಹೇಗೆ? ಕುದುರೆ ಬೇಕು. ಕುದುರೆಯ ಗುರುತು ಹಿಡಿದು ತನ್ನನ್ನು ಹಿಡಿಯಬಹುದು. ಮಹಾರಾಣಿ ನನ್ನನ್ನು ನಂಬಲಿಕ್ಕಿಲ್ಲ. ತಾರ್ಕ್ಷ್ಯನ ಮೇಲೆಯೇ ವಿಶ್ವಾಸವಿಡಬಹುದು. ತಾರ್ಕ್ಷ್ಯ ಏನಾದರೂ ಸುಳ್ಳು ಹೇಳಿ ಈಗಾಗಲೇ ವಿಷ ಊರಿರಬಹುದು. ಮಹಾರಾಣಿ ತಂಗಿಯೂ ಹೌದು, ಹೆಂಡತಿಯೂ ಹೌದು. ಕೇವಲ ನಾಗರಕ್ತವನ್ನೇ ನಂಬಲಿಕ್ಕಿಲ್ಲ. ತಾರ್ಕ್ಷ್ಯನೂ ನಾಗನೇ. ಅಲ್ಲಿಗೇ ಕಷ್ಟ ಪಟ್ಟು ಹೋಗಿ ಕಾರಾಗೃಹದಲ್ಲಿ ಕೊಳೆಯುವುದು ಬಂದರೆ ಏನು ಮಾಡಿದಂತಾಯ್ತು ? …ಇಂಥ ಸಾವಿರಾರು ತುಮುಲಗಳು ಅವನನ್ನು ಕೆರಳಿಸಿ, ಮಹರ್ಷಿಗಳು ಹೇಳಿದ ವಿವೇಕವಾಣಿಯನ್ನು ಮಸುಕುಮಾಡಿತು. ಒಂದು ಗಂಟೆ ಗಿಡದ ಬುಡದಲ್ಲಿ ಕುಳಿತು ವಿಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದನು.
ಮರುದಿನ ಬುಧವಾರ. ಊಟ ಮಾಡಿ ಹೊರಬಿದ್ದ ಕಾಲಿಯಾ ಮನೆಗೆ ಬಂದು ತನ್ನ ಕಕ್ಕನಿಗೆ ಸರ್ಪದಂಶವಾಗಿದೆಯೆಂದೂ, ಅತ್ಯವಸ್ಥೆಯಲ್ಲಿದ್ದಾನೆಂದೂ, ಟಾಂಕೀ ಗ್ರಾಮದವನೊಬ್ಬನು ಹೇಳಿದನೆಂದೂ ತಂದೆಗೆ ತಿಳಿಸಿದನು. ಮನೆಯವರೆಲ್ಲ ಗೋಳೋ ಎಂದು ಅಳುತ್ತ ಬಂಡಿ ಹೂಡಿ ಟಾಂಕೀ ಗ್ರಾಮಕ್ಕೆ ಹೊರಟರು. ಊರು ಮುಟ್ಟುವ ಹೊತ್ತಿಗೆ “ಇಲ್ಲ, ಕಕ್ಕ ಕಾಗೆಯ ಕೂಟವನ್ನು ನೋಡಿದ್ದಕ್ಕಾಗಿ ಹೇಳಿಕಳಿಸಿದ್ದಾನೆ. ಏನೂ ಚಿಂತೆಯಿಲ್ಲ.” ಎಂದು ಕಾಲಿಯಾ ಹೇಳಿದನು. ಎಲ್ಲರಿಗೂ ಸಮಾಧಾನವಾಯಿತು. ಕಕ್ಕ ದಖಿಯಾ ಇವರೆಲ್ಲ ಬಂದರೂ ಸೌಜನ್ಯದಿಂದ ಸ್ವಾಗತಿಸಿ “ಬಂದೀರಿ. ಎರಡು ದಿನ ಇದ್ದು ಹೋಗಿರಿ. ನಾಗಿಯಾ ದಾರೀ ತಪ್ಪಿಸಿಕೊಂಡ ಸುದ್ದಿ ಕೇಳಿದ್ದೆ. ನಾನೇ ಬರುವವನಿದ್ದೆ!” ಎಂದು ಹೇಳಿ ಕರೆದೊಯ್ದನು.
ಟಾಂಕೀ ಗ್ರಾಮದಲ್ಲಿ ಚಿರತೆಯ ಹಾವಳಿ ಇತ್ತು. ಹಳ್ಳಿಯ ಯುವಕರು ಕೋಲು, ಬಡಿಗೆ, ಕತ್ತಿ, ಬಿಲ್ಲು, ಬಾಣ, ಕೊಡಲಿಗಳ ಸಮೇತ ಗುಂಪುಕಟ್ಟಿಕೊಂಡು ಬೇಟೆಗೆ ಹೋಗುತ್ತಿದ್ದರು. ಚಿರತೆಯ ವಧುವಾಗಬೇಕಾದರೆ ಒಂದು ವಾರವೇ ಬೇಕಾಯಿತು. ಮುದುಕನಾದರೂ ಸದೃಢಕಾಯದ ವಾಸುಕಿಯೂ ಮೃಗಯಾ ವ್ಯಸನದಿಂದ ಹುರುಪಿಗೆದ್ದನು. ಕಾಲಿಯಾನಿಗೂ ಹತ್ತು ಹದಿನೈದು ಯುವಕರ ಸ್ನೇಹವಾಯಿತು. ಬೇಟೆಯ ಉತ್ಸಾಹದಲ್ಲಿ ಅವರ ಸ್ನೇಹ ಬಲಗೊಂಡಿತು.
ಏಳನೆಯ ದಿವಸ ಚಿರತೆ ಒಂದು ಆಡನ್ನು ಮುರಿದು ತಿಂದು ನಿದ್ರಿಸುತ್ತಿರುವಾಗ ಅದರ ಮೇಲೆ ಬಲೆ ಬೀಸಿ, ಗಿಡಕ್ಕೆ ಕಟ್ಟಿ, ಚಿರತೆಯನ್ನು ಜೀವಂತ ಹಿಡಿಯುವ ದುಃಸಾಹಸಕ್ಕೆ ಕಾಲಿಯಾ ಮುಂದಾದನು. ಹದಿನೈದು ಜನರಲ್ಲಿ ಒಬ್ಬನಾದ ಕಾಲಿಯಾ ಒಮ್ಮೆಲೇ ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಚಿಕ್ಕನಾಯಕನ ಪದವಿಗೆ ಏರಿದನು.
೧೪
ಪರಚಕ್ರದ ವಿಷಯಕ್ಕೆ ಹಗಲಿರುಳು ಚಿಂತಿಸುತ್ತಿದ್ದ ಪುರುಕುತ್ಸಾನಿ ತನ್ನದೇ ಆದ ಒಂದು ವಿಧಾನವನ್ನು ಸ್ವರೂಪಿಸಿದಳು. ಅಯೋಧ್ಯೆ ಸಣ್ಣರಾಜ್ಯ. ಅದರ ಸುತ್ತ ಮುತ್ತಲಿನ ಇತರ ಸಣ್ಣ ರಾಜ್ಯಗಳಾದ ಶ್ರಾವಸ್ತಿ, ಗಯಾ, ಕಾಶಿ, ಕಾಮಾಖ್ಯ ಇವುಗಳ ಜೊತೆಗೆ ಸ್ನೇಹವೇ ಇದರ ತಿರುಳು. ಮುಂದೆ ಸಾವಿರಾರು ವರ್ಷಗಳ ಮೇಲೆ ಬಂದ ಕೌಟಲೀಯ ಅರ್ಥಶಾಸ್ತ್ರದ ಪೂರ್ತಿ ವಿರುದ್ಧ ವಿಧಾನ ಅದು.
ಮೊದಲಿಗೆ ಒಂದು ನೆಪ ಬೇಕಾಗಿತ್ತು. ದೈವವಶಾತ್ ಗಂಡಕಿನದಿಯ ತೀರದ ಭಿಲ್ಲರು ಗುಂಪುಗುಂಪಾಗಿ ಶ್ರಾವಸ್ತಿಯ ಮೇಲೆ ಹಲ್ಲೆಮಾಡಿ ಕೊಲೆ-ಸುಲಿಗೆ-ದರೋಡೆಗಳನ್ನು ಮಾಡತೊಡಗಿದರು. ಶ್ರಾವಸ್ತಿಗೆ ಬಾಧೆ ಬಂದರೆ ಇಂದಿಲ್ಲ ನಾಳೆ ಅಯೋಧ್ಯೆಗೂ ಭಿಲ್ಲರು ದಾಳಿಯಿಕ್ಕಬಹುದೆಂಬ ನೆಪವೊಡ್ಡಿ ಐನೂರರ ಪಡೆಯನ್ನು ತಾನಾಗಿಯೇ ಶ್ರಾವಸ್ತಿಯ ಸುಭಾನುವಿನ ನೆರವಿಗೆ ಕಳಿಸಿಕೊಟ್ಟಳು. ಇತ್ತ ಶಸ್ತ್ರಾಸ್ತ್ರಸಂಗ್ರಹಣೆಗೆ ತೊಡಗಿದಳು. ಊರ ಕಮ್ಮಾರರ ಕುಲುಮೆಗಳೆಲ್ಲ ಕೆಲಸ ಮಾಡತೊಡಗಿದವು. ಕತ್ತಿ-ಭಲ್ಲೆ-ಚಪ್ಪಗೊಡಲಿಗಳು ಸದ್ದಿಲ್ಲದೆ ತಯಾರಾಗಿ ಶಸ್ತ್ರಾಗಾರವನ್ನು ಸೇರತೊಡಗಿದವು. ಆಯಕಟ್ಟಿನ ಸ್ಥಳಗಳಲ್ಲಿ ಪಹರೆಯವರನ್ನಲ್ಲದೆ ಗುಪ್ತಸೈನ್ಯವನ್ನು ಕಳಿಸತೊಡಗಿದಳು. ಹೊಸ ಯುವಕರನ್ನು ಸೇನೆಗೆ ಭರ್ತಿ ಮಾಡಿಸಿದಳು.
ಭಂಡಾರಿಯವರು ಬಂದು ಬೊಕ್ಕಸದ ಮೇಲೆ ಭಾರ ಬೀಳುತ್ತಿದೆಯೆಂದು ತಕರಾರು ಮಾಡಿದರು.
ಅದೇ ಸಮಯಕ್ಕೆ ಒಬ್ಬ ದೂತ ಹಠಾತ್ತನೆ ಬಂದು ಮಹಾದೇವಿಗೆ ಬಾಯಿ ವರದಿ ನೀಡಿದನು: “ಮಹಾದೇವಿ, ಶ್ರಾವಸ್ತಿಗೆ ಹೋದ ಚಿತ್ರ ಬಾಹುದಣ್ಣಾಯಕರ ವಾರ್ತೆ..”
ಭಂಡಾರಿಗಳನ್ನು ಕಳಿಸಿಕೊಟ್ಟು, ದೂತನನ್ನು ಮಹಾದೇವಿ ಅಲ್ಲಿಯೇ ನಿಲ್ಲಿಸಿಕೊಂಡು ಹೊರಗೆ ನಿಂತ ಕಾವಲುಗಾರನ್ನು ದೂರ ಕಳಿಸಿದಳು.
“ಏನು ವಾರ್ತೆ?”
“ದಣ್ಣಾಯಕರು ದಂಡವತ್ ಪ್ರಮಾಣ ಸಲ್ಲಿಸಿ ಹೇಳಿಕಳಿಸಿದ್ದಾರೆ. ಶ್ರಾವಸ್ತಿಯ ದಕ್ಶಿಣ ದಿಕ್ಕಿಗೆ ನಮ್ಮ ದಳಗಳ ಪ್ರಚಂಡ ವಿಜಯ ಗಳಿಸಿ ನೂರು ಭಿಲ್ಲರನ್ನು ಸೆರೆಹಿಡಿದಿವೆ.. ಆದರೆ..”
“ಆದರೇನು?”
ಭಿಲ್ಲರ ನಾಯಕ ಮೋಸಮಾಡಿದ್ದಾನೆ. ಏಳು ಜನರೊಂದಿಗೆ ತಾನು ಶರಭಾರಣ್ಯದಲ್ಲಿ ಓಡಿ ಹೋದನು. ಈವರೆಗೆ ಶ್ರಾವಸ್ತಿಯಲ್ಲಿ ಸುಲಿಗೆ ಮಾಡಿದ ರತ್ನ-ಕನಕಗಳೊಂದಿಗೆ. ಅವರ ಕಡೆಯ ಕೆಲವು ಭಿಲ್ಲರಿಗೆ ಶಿಕ್ಷೆಕೊಟ್ಟು ಕೇಳಲಾಗಿ ಈ ಸುದ್ಧಿ ಹೊರಬಂದಿತು. ಮುಖ್ಯ ಮಾಲು ಅರಣ್ಯಕ್ಕೆ ಹೋಗಿದೆ. ಅರಣ್ಯದಲ್ಲಿ ನಮ್ಮ ಸೈನಿಕರು ಅವರನ್ನು ಹುಡುಕಿ ಬಂಧಿಸುವುದಕ್ಕೆ ಹೋಗಬಹುದು. ಆಗ ಸೈನ್ಯವನ್ನು ಹತ್ತು-ಹತ್ತು ಜನರ ಚಿಕ್ಕ ಚಿಕ್ಕ ಗುಂಪುಗಳಾಗಿ ಕಳಿಸಬೇಕಾಗುತ್ತದೆ. ಈಗ ಸೆರೆಸಿಕ್ಕ ನೂರು ಭಿಲ್ಲರನ್ನು ಶ್ರಾವಸ್ತಿ ಮಹಾರಾಜರಿಗೆ ಒಪ್ಪಿಸಿಬಿಟ್ಟರೆ ಅವರ ಸಾವು ಖಂಡಿತ. ಹಾಗೆ ಹೆದರಿಕೆ ಹಾಕಿ, ಅವರ ತಲೆ ಬೋಳಿಸಿ, ಬಯಲುನಾಡಿನತ್ತ ಅಟ್ಟಬೇಕೆಂದು ದಣ್ಣಾಯಕರು ಸೂಚಿಸುತ್ತಾರೆ, ಮಹಾರಾಣಿ ಅಪ್ಪಣೆ ಕೇಳಿದ್ದಾರೆ.”
“ಅದೇಕೆ?”
“ನೂರು ಜನ ಭಿಲ್ಲರು ಅಡವಿಯ ಸಂಚಾರದಲ್ಲಿ ನಮ್ಮ ಸೈನಿಕರಿಗಿಂತ ಸಮರ್ಥರು. ಕಟ್ಟಿ ಇಟ್ಟರೂ ಬಿಡಿಸಿಕೊಳ್ಳಬಲ್ಲರು. ನಮ್ಮ ಸೈನ್ಯ ತುಂಡು ತುಂಡಾಗಿ ಹರಿದು ಹಂಚಿ ಅಡವಿಯಲ್ಲಿ ಶೋಧಕ್ಕಾಗಿ ಕಳಿಸುವುದು ದಣ್ಣಾಯಕರಿಗೆ ಇಷ್ಟವಿಲ್ಲ. ಅವರನ್ನು ಶ್ರಾವಸ್ತಿ ಮಹಾರಾಜರಿಗೆ ಒಪ್ಪಿಸಬಹುದೆ?”
“ಎರಡೂ ಬೇಡ. ನಮ್ಮ ಸೈನ್ಯ ಶ್ರಾವಸ್ತಿಗೆ ಹೋಗಬಾರದು. ಶರಭಾರಣ್ಯಕ್ಕೂ ಹೋಗಬಾರದು. ಇದ್ದಲ್ಲಿಂದ ನಂದಿಗ್ರಾಮಕ್ಕೆ ಬಂದು ಬಿಡಾರ ಹೂಡಿ ವಿಶ್ರಮಿಸಬೇಕು. ನಾಲ್ವರು ಭಿಲ್ಲರ ಪಡೆಯ ನಾಯಕರನ್ನು ಉಳಿದು ಉಳಿದ ಸೆರೆಯಾಳುಗಳಿಗೆ ಕೈಕೋಳ ಹಾಕಿ ಸೈನ್ಯದೊಂದಿಗೆ ಕರೆತರಬೇಕು. ಅವರ ನಾಯಕರನ್ನು ಮರ್ಯಾದೆಯಿಂದ ನೋಡಿಕೊಳ್ಳಬೇಕು. ನಂದಿಗ್ರಾಮದಲ್ಲಿ ರಾತ್ರಿ ನಾಲ್ವರು ನಾಯಕರನ್ನು ಬಿಟ್ಟು ಬಿಡಬೇಕು. ಅವರ ಹಿಂದೆ ಪಾಳತಿ ಇಡಲಿಕ್ಕೆ ನಮ್ಮ ಐವತ್ತು ಗುಪ್ತಚರರನ್ನು ಇಡಿರಿ. ಅವರಿಗೆ ಸ್ವತಂತ್ರ ಬಿಟ್ಟರೂ ದೂರದಿಂದ ನಮ್ಮ ಕಾವಲುಪಡೆಯವರು ಕಣ್ಣಿಟ್ಟಿರಬೇಕು! ಎಲ್ಲ ನೆನಪಿಟ್ಟೆಯಾ? ಯಾರಿಗೂ ಹೇಳಬೇಡ. ಊಟ ಮಾಡಿಕೊಂಡು ನೀನು ಹಿಂದಿರುಗು.”
ಮಹಾದೇವಿಯ ಸಂದೇಶದ ಜಾಣ್ಮೆಗೆ ದೂತ ಸಹದೇವ ನಾಯಕನು ತಲೆದೂಗಿ ಲಗುಬಗೆಯಿಂದ ಕುದುರೆ ಏರಿದನು. ಊಟಕ್ಕೆ ನಿಲ್ಲಲಿಲ್ಲ. ಅಡಿಗೆಯ ಮನೆಗೆ ಹೋದಂತೆ ನಟಿಸಿ, ಕೇವಲ ಹಾಲನ್ನು ಕುಡಿದು ಹೊರಟು ಬಿಟ್ಟನು. ರಾಣಿಗೆ ಅಡಿಗೆಮನೆಯಿಂದ ಸಹದೇವನ ಬಗ್ಗೆ ವರದಿ ಹೋಯಿತು.
ರಾಣಿ ಮೆಚ್ಚಿದಳು. ಆದರೂ ಸಮಾಧಾನವಾಗಲಿಲ್ಲ. ದೇವರಾಜ ಭದ್ರಮುಖರಿಗೆ ತಕ್ಷಣ ಬರಲಿಕ್ಕೆ ಹೇಳಿಕಳಿಸಿದಳು.
ಅವರು ಬಂದೊಡನೆ, ರಾಣಿ ಪ್ರಶ್ನಿಸಿದಳು: “ನಿಮ್ಮ ಸ್ನೇಹಿತ ಮಾದ್ರಕನ ಜನರು ಶರಭಾರಣ್ಯವನ್ನು ಬಲ್ಲರೆ?”
“ಬಲ್ಲರು, ಮಹಾದೇವಿ.”
“ನೀವು ಐವತ್ತು ಸೈನಿಕರನ್ನು ಜೊತೆಗೆ ಕರೆದುಕೊಂಡು ಮಧುವನ ಗ್ರಾಮಕ್ಕೆ ಹೋಗಬೇಕು. ಅಲ್ಲಿ ನಿಮಗೆ ಸಿಕ್ಕಷ್ಟು ರೈತರ ಪಡೆಯನ್ನು ಕೂಡಿಸಿಕೊಳ್ಳಿರಿ. ಪಶ್ಚಿಮ ದಿಕ್ಕಿನ ಕಡೆಯಿಂದ ಶರಭಾರಣ್ಯ ಪ್ರವೇಶಿಸಿರಿ. ಏಳು ಜನ ಭಿಲ್ಲ ನಾಯಕರು ಅವರ ಅರಸನೊಂದಿಗೆ ಶರಭಾರಣ್ಯದಲ್ಲಿ ನುಸುಳಿಕೊಂಡಿದ್ದಾರೆ. ಅವರನ್ನು ಹಿಡಿಯಲೇಬೇಕು. ಬಂಧಿಸಿ ಅಯೋಧ್ಯೆಗೆ ತರಬೇಕು. ಇದರ ಬಗ್ಗೆ ಬೊಬ್ಬಾಟ ಬೇಡ. ಆಗಬಹುದೇ?”
“ಆಗಲಿ, ಮಹಾದೇವಿ.”
“ಈಗಲೇ, ಹೋಗಿಬಿಡಿ.”
ದೇವರಾಜನ ಲೋಲುಪ ತೂಗಾಟದ ನಡಿಗೆಯನ್ನು ನೋಡಿ ಮಹಾರಾಣಿಗೆ ಅಸಹ್ಯವೆನಿಸಿತು. ಅವರನ್ನು ಹಿಂದೆ ಕರೆದಳು.
“ನಿಮ್ಮ ಜೊತೆಗೆ ನಿಮ್ಮ ಮಗು ವತ್ಸರಾಜನನ್ನು ಕರೆದೊಯ್ಯುವಿರಾ?” ಆಕೆಯ ಧ್ವನಿಯ ಸೂಚ್ಯತೆಯನ್ನು ಅರಿತು, ದೇವರಾಜ “ಹೌದು, ಮಹಾರಾಣಿ” ಎಂದರು.
“ಹಾಗಾದರೆ ಐವತ್ತು ಸೈನಿಕರಿಗೆ ಅವನೇ ದಣ್ಣಾಯಕನಾಗಲಿ, ಅವನಿಗೆ ತಕ್ಕ ಸಲಹೆ ಕೊಡಿರಿ. ಅವರು ಶರಭಾರಣ್ಯ ಪ್ರವೇಶಿಸಿದ ಮೇಲೆ, ನೀವು ಅಲ್ಲಿಂದ ಶ್ರಾವಸ್ತಿಗೆ ಹೋಗಿ ಮಹಾರಾಜ ಸುಭಾನುವಿನ ಸಂದೇಶ ಮುಟ್ಟಿಸಿರಿ. ಅವನ ರಾಜ್ಯದ ದಕ್ಷಿಣದಿಸೆಯಿಂದ ನುಗ್ಗಿ ಬಂದ ಭಿಲ್ಲರ ಪಡೆಗಳು ಚದುರಿ ಹೋಗಿ ದಕ್ಷಿಣಭಾಗ ನಿಷ್ಕಂಟಕವಾಗಿದೆ, ಎಂದು.”
“ಆಗಲಿ, ಮಹಾದೇವಿ.”
ಅವರು ಹೊರಟು ಹೋದರು. ಮಹಾರಾಣಿ ಒಂದೇ ಉಸಿರಿನಲ್ಲಿ ದೇವರಾಜರನ್ನು ಕೆಳಗೆ ತಂದಿದ್ದಳು. ವತ್ಸರಾಜನಿಗೆ ದಣ್ಣಾಯಕ ಪದವಿಗೆ ಏರಿಸಿದ್ದಳು. ಶ್ರಾವಸ್ತಿಯ ಪಕ್ಶ್ಮಾರಾಣಿಯನ್ನು ಕಾಣುವ ಸುವರ್ಣಾವಕಾಶವನ್ನೂ ದೇವರಾಜರಿಗೆ ಕಲ್ಪಿಸಿದ್ದಳು.
೧೫
ಸುಗ್ಗಿ ಮುಗಿದ ಹದಿನೈದು ದಿನಗಳಲ್ಲಿ ಅಮರು-ಟಾಂಕಿ ಗ್ರಾಮಗಳ ಸುಮಾರು ೨೫ ಯುವಕರ ಗುಂಪು ತಾವು ಅಯೋಧ್ಯೆ ನೋಡಿ ಬರುತ್ತೇವೆಂದು ಹೇಳಿ ಎರಡು ಚಕ್ಕಡಿ ಹೂಡಿದರು . ಒಂದು ಕ್ರೋಸು ಕ್ರಮಿಸಿ ಕೆಳಗೆ ಇಳಿದು ಪೊದೆಗಳಲ್ಲಿ ಬಚ್ಚಿಟ್ಟ ದೊಣ್ಣೆ, ಚೂರಿ, ಖಡ್ಗಗಳು, ಬಿಲ್ಲುಗಳನ್ನು ಎತ್ತಿ ಚಕ್ಕಡಿಗೆ ಹೇರಿದರು. ಅವರ ಮುಂದಾಳು ಚಿರತೆಯನ್ನು ಜೀವಂತ ಹಿಡಿದ ವೀರ, ಕಾಲಿಯಾ.
ಅವನಿಗೆ ಗೊತ್ತು. ಆಮ್ರವನದಲ್ಲಿ ಹಗಲು ಆರೇ ಜನರ ಪಹರೆ, ರಾತ್ರಿ ಒಬ್ಬ ಎಚ್ಚರ ಇರುತ್ತಾನೆ. ಉಳಿದವರು ನಿದ್ದೆಹೋಗಿರುತ್ತಾರೆ. ಶಸ್ತ್ರಗಳನ್ನು ಬದಿಗೆ ಮಲಗಿಸಿ; ಒಬ್ಬರು ಮೂರು ಪ್ರಹರ ಪಹರೆ ಮಾಡಿ ಇನ್ನೊಬ್ಬರನ್ನು ಎಬ್ಬಿಸುತ್ತಾರೆ.
ತನ್ನ ಗೆಳೆಯರಿಗೆ ಮೊದಲೇ ಹೇಳಿದ್ದ. ಸದ್ದಿಲ್ಲದೆ ಹೋಗಿ ಮೊದಲು ಮಲಗಿದವರ ಖಡ್ಗಗಳನ್ನು ಸೆಳೆದುಕೊಳ್ಳಬೇಕು. ಎಚ್ಚರವಿದ್ದ ಪಹರೆ ರಾಹುತನ ಕುದುರೆಯನ್ನು ದೂರದ ಗಿಡಕ್ಕೆ ಕಟ್ಟಿ, ಅವನನ್ನು ಸಂಧಿಸಬೇಕು, ಅವನಿಗೆ ಖಡ್ಗ ತೋರಿಸಿ, ನಿಶ್ಯಸ್ತ್ರಗೊಳಿಸಿ, ಹಗ್ಗದಿಂದ ಬಿಗಿಯಬೇಕು. ಅನಂತರ ಒಳಗಿದ್ದ ಸೇವಕನನ್ನು ತುಂಡರಿಸಬೇಕು. ಅನಂತರ..
ಎಲ್ಲ ಯೋಜನೆ ಮೊದಲೇ ಸಿದ್ಧಗೊಳಿಸಲಾಗಿತ್ತು. ಮಣ್ಣ ಮೇಲೆ ಬರೆದು ಬರೆದು ಅವರವರ ಸ್ಥಾನವನ್ನು ಗೊತ್ತುಪಡಿಸಿ, ಯಾರ ಯಾರ ಮೇಲೆ ದಾಳಿ ಮಾಡಬೇಕೆಂಬುದನ್ನು ಮೊದಲೇ ವಿವರಿಸಿ ಹೇಳಿದ್ದ. ಕಾಲಿಯನ ಯೋಜನೆ ನಿರ್ದೋಷವಾಗಿತ್ತು. ಮಹಾರಾಜರನ್ನು ಖಡ್ಗದಿಂದ ತಿವಿಯುವ ವಿಶೇಷಾದಿಕಾರವನ್ನು ಕಾಲಿಯನೇ ವಹಿಸಿಕೊಂಡಿದ್ದ.
ಆಮ್ರವನದ ಹಿಂದೆ ಅಡವಿಯ ಆಚೆ ಚಕ್ಕಡಿಗಳ ಕೊರಳು ಬಿಚ್ಚಿ, ದನಗಳಿಗೆ ಮೇವು ಹಾಕಿ, ಕಟ್ಟಿ, ಕಾಲ್ನಡಿಗೆಯಿಂದ ಅಡವಿಯನ್ನು ದಾಟಲಿಕ್ಕೆ ಅವರು ಹೊರಟರು. ನಿಯೋಜಿತ ಶಸ್ತ್ರಗಳನ್ನು ಇಟ್ಟುಕೊಂಡು, ಜೊತೆಗೆ ಒಂದೊಂದು ದೊಣ್ಣೆಯನ್ನೂ ಹಿಡಿದಿದ್ದರು. ಒಂದೆರಡು ಪಂಜುಗಳೂ ಇದ್ದವು. ಒಂದು ದೊಣ್ಣೆಯನ್ನೂ ಹಿಡಿದಿದ್ದರು. ಒಂದೆರಡು ಪಂಜುಗಳೂ ಇದ್ದವು. ಒಂದು ಪಂಜನ್ನು ಕಾಲಿಯಾ ತಾನೇ ಹಿಡಿದು ಎಲ್ಲರ ಮುಂದೆ ಸಾಗಿ ದಾರಿ ತೋರಿಸುತ್ತಿದ್ದ. ಎಲ್ಲರೂ ಮೌನವಾಗಿ ಹಿಂಬಾಲಿಸುತ್ತಿದ್ದರು.
ಅರಣ್ಯದ ಸರಿ ಮಧ್ಯಕ್ಕೆ ಬಂದು ಮುಟ್ಟಿರಬಹುದು. ಗಿಡದ ಮೇಲಿಂದ ತಾರ್ಕ್ಷ್ಯನ ಕ್ರೂರಧ್ವನಿ ಕೇಳಿ ಬಂತು:
“ಕಾಲಿಯಾ! ಅಲ್ಲಿಯೇ ನಿಲ್ಲು. ಈ ಬಾಣ ನೇರ ನಿನ್ನ ಎದೆಯನ್ನೇ ನೋಡುತ್ತಿದೆ.”
ಅಪ್ರತಿಭನಾಗಿ ಕಾಲಿಯಾ ನಿಂತ. ಅವನ ಸಂಗಡಿಗರು ಅಡವಿಯಲ್ಲಿ ಚೆಲ್ಲಾಪಿಲ್ಲಿಯಾಗುವುದರಲ್ಲಿ ಇದ್ದರು. ಮತ್ತೆ ತಾರ್ಕ್ಷ್ಯನ ಧ್ವನಿ:
“ನಿನ್ನ ಸಂಗಡಿಗರಿಗೆ ನಿಂತಲ್ಲಿಯೇ ನಿಲ್ಲುವಂತೆ ಹೇಳು. ನಿನ್ನ ಹಿಂದೆ ಮೂವತ್ತು ಗಿಡಗಳಲ್ಲಿ ಸೈನಿಕರು ಇದ್ದಾರೆ. ಅವರ ಬಾಣಗಳೂ ನಿನ್ನವರ ಎದೆ ಸೀಳಬಹುದು, ಓಡಲು ಯತ್ನಿಸಿದರೆ…
“ನಿಮ್ಮ ಬಳಿಯಲ್ಲಿ ಇರುವ ದೊಣ್ಣೆ-ಬರ್ಚಿ-ಕತ್ತಿಗಳನ್ನು ಆ ಬೇವಿನ ಗಿಡದ ಕೆಳಗೆ ಹಾಕಲು ಹೇಳು.”
ಕಾಲಿಯಾ ಅಸಹಾಯಕನಾಗಿ ತಾನೇ ಸಂಗಡಿಗರ ಶಸ್ತ್ರಗಳನ್ನು ಜಮಾಯಿಸಿ ಬೇವಿನಮರದ ಕೆಳಗೆ ಇಟ್ಟನು.
ಗಿಡಗಳಿಂದ ಜಿಗಿದ ಸುಮಾರು ಮೂವತ್ತು ರಾಹುತರು ಎಲ್ಲರನ್ನೂ ಸುತ್ತುಗಟ್ಟಿದರು. ಆಯುಧಗಳನ್ನು ಮರದ ಕೆಳಗೆ ಇರಿಸಲು ಬಗ್ಗಿದ ಕಾಲಿಯಾ ತನ್ನ ಸೊಂಟದ ಬರ್ಚಿಯನ್ನು ತೆಗೆದು ತಾರ್ಕ್ಷ್ಯನ ಮೇಲೆ ಏರಿ ಹೋದನು. ಹಿಂದಿನಿಂದ ಒಂದು ದೊಣ್ಣೆ ಅವನ ಮುಂಗೈಗೆ ಬಲವಾಗಿ ಬಿದ್ದು ಕೈಯಲ್ಲಿಯ ಭರ್ಚಿ ಕೆಳಗೆ ಬಿತ್ತು. ಕೈ ತಿಕ್ಕಿಕೊಳ್ಳುತ್ತ ಕಾಲಿಯಾ ನೆಲಕ್ಕೆ ಕುಸಿದನು.
ಗಿಡದ ಮರೆಗೆ ಅಡಗಿ ಕುಳಿತ ವೀರಸೇನ, “ಇನ್ನೂ ಒಂದು ಖಡ್ಗ ಬಂದಿಲ್ಲ!” ಎಂದನು.
ಒಬ್ಬ ರಾಹುತ ಒಂದು ಪೊದೆಯಲ್ಲಿ ಎಸೆದ ಖಡ್ಗವನ್ನು ತಂದು “ಇಲ್ಲಿದೆ” ಎಂದು ಒಪ್ಪಿಸಿದನು. ಕ್ಷಣಾರ್ಧದಲ್ಲಿ ಕಾಲಿಯನ ಹೊಂಚಿಗೆ ಪೂರ್ಣವಿರಾಮ.
ಎಲ್ಲರನ್ನೂ ಬಂಧಿಸಿದರು. ಇಪ್ಪತ್ತು ರಾಹುತರನ್ನು ಅಲ್ಲಿಯೇ ಬಿಲ್ಲುಬಾಣ ಖಡ್ಗಸಜ್ಜಿತರಾದ ಹತ್ತು ರಾಹುತರೊಂದಿಗೆ ತಾರ್ಕ್ಷ್ಯ ಬೇರೆ ಸೀಳುದಾರಿಯಿಂದ ಅಯೋಧ್ಯೆಗೆ ನಡೆದ.
ಬೆಳಗಿನವರೆಗೆ ಕಾಲಿಯನ ಜನರು ಕಾರಾಗೃಹದಲ್ಲಿ ಕಳೆದರು.
೧೬
ಮರುದಿನ ಕಾಲಿಯನೊಬ್ಬನನ್ನೇ ಮಹಾರಾಣಿಯ ಎದುರು ನಿಲ್ಲಿಸಲಾಯಿತು. ಅವನ ಬಲಗೈಗೆ ಒಂದು ಸೆಲ್ಲೆ ಸುತ್ತಲಾಯಿತು.
ಏನು ಶಿಕ್ಷೆ ವಿಧಿಸುವಳೋ ನೋಡಿಯೇ ಬಿಡುತ್ತೇನೆ, ಎಂಬ ಕ್ರೂರ ನೋಟದಿಂದ ಮಹಾರಾಣಿಯ ಎದುರು ಕಾಲಿಯಾ ಸೆಟೆದು ನಿಂತನು, ಮೌನವಾಗಿ. ನಮಸ್ಕರಿಸುವ ಗೋಜಿಗೆ ಹೋಗಲಿಲ್ಲ. ರಾಣಿಯೇ ಮೊದಲು ಮಾತಾಡಿದಳು:
“ಏನಪ್ಪಾ ಕಾಲಿಯಾ! ನಿನ್ನ ತಂದೆ ತಾಯಿಯರನ್ನು ನೋಡಬೇಕೆಂದು ಅಮರುವಿನವರೆಗೆ ನಾವೇ ಬಂದೆವು. ನೀನು ಅವರನ್ನು ಎಲ್ಲಿ ಬಚ್ಚಿಟ್ಟಿ?”
ತಂದೆ-ತಾಯಿಯರ ಮಾತಿನಿಂದ ಕಾಲಿಯ ಒಮ್ಮೆಲೇ ಕರಗಿಹೋದನು. ಮಹಾರಾಣಿಗೆ ವಂದಿಸದಿದ್ದುದಕ್ಕೆ ಪಶ್ಚಾತ್ತಾಪವೆನಿಸಿತು. ಆದರೂ ತನ್ನ ಹೊರ ಠೀವಿಯನ್ನು ಬಿಡಲಿಲ್ಲ. “ಕಕ್ಕನಿಗೆ ಹಾವು ಕಚ್ಚಿತೆಂದು ವಾರ್ತೆ ಬಂದಿತ್ತು. ಎಲ್ಲರೂ ಟಾಂಕಿಗೆ ಹೋಗಿದ್ದೆವು.”
“ಟಾಂಕಿಯಲ್ಲಿ ಜೀವಂತ ಚಿರತೆಯನ್ನು ಹಿಡಿದೆಯಂತಲ್ಲಾ!”
“ಹೌದು!”
“ಭಾಪು! ನಾವು ನಾಗಕುಲದವರು, ಯಾವಾಗಲೂ ವೀರರು! ಅಲ್ಲವೇ?”
ಇನ್ನೂ ತನ್ನ ದ್ರೋಹಯತ್ನದ ಬಗ್ಗೆ ಮಾತೇ ಇಲ್ಲ. ರಾಣಿಯ ಪ್ರಶ್ನೆಗೆ ’ಹೂಂ!’ ಎಂದು ತಲೆಯಲ್ಲಾಡಿಸಿದನು.
“ಅಮರುವಿನಲ್ಲಿ ನಮ್ಮ ರಾಜ್ಯದ ಕ್ಷೇಮಕ್ಕಾಗಿ ಆಚಾರ್ಯದೇವದೇಮರು ಶತಚಂಡಿ ಹೋಮ ಪ್ರಾರಂಭಿಸಿದ್ದಾರೆ. ಅಲ್ಲಿ ಕಳ್ಳರ ಹಾವಳಿಯಿದೆಯೆಂದು ಶಾಸ್ತ್ರಿ ನಾಗೇಶರು ಹೇಳಿದರು. ಅಲ್ಲಿ ಇಬ್ಬರು ರಾಹುತರನ್ನು ಇಟ್ಟಿದ್ದೇನೆ. ನಿನ್ನ ಸ್ನೇಹಿತರು ಕಲಿಗಳು. ಅವರದೊಂದು ಪಡೆ ಸ್ಥಾಪಿಸಿ ನೀನು ಅದರ ದಳಪತಿಯಾಗಬಹುದೇ?”
ಇದೇನು ಆಟ?-ದ್ರೋಹಿಗಳ ಪಡೆ? ದ್ರೋಹಿಯಾದ ತನಗೆ ದಳಪತಿಯ ಸ್ಥಾನ?-ಎಲ್ಲವೂ ವಿಚಿತ್ರ. ಆದರೂ ಬಾಗಿ, “ಆಗಬಹುದು, ಮಹಾರಾಣಿ!” ಎಂದು ಮುಜುರೆ ಮಾಡಿದ.
“ಅದಕ್ಕಿಂತ ಮುಂಚೆ ನೀನು ಮುಂದಾಳುತನವನ್ನು ಸಿದ್ಧಗೊಳಿಸುವ ಪರೀಕ್ಷೆಯಾಗಬೇಕು. ಅಯೋಧ್ಯೆಯ ಸೈನಿಕರೂ ವೀರರು. ಆದರೆ ಅರಣ್ಯದ ಯುದ್ಧದಲ್ಲಿ, ಅರಣ್ಯ ಸೋಸಿ ತೆಗೆಯುವುದರಲ್ಲಿ, ಅವರ ಅನುಭವ ಸಾಲದು. ಶ್ರಾವಸ್ತಿಯ ಮೇಲೆ ದಾಳಿ ಮಾಡಿದ ಭಿಲ್ಲ ಪಡೆಯವರನ್ನು ಅಯೋಧ್ಯೆಯ ಸೈನ್ಯ ಸೋಲಿಸಿದೆ. ಆದರೆ ಅವರ ರಾಜನೂ , ಆರು ಜನರೂ ಶರಭಾರಣ್ಯದಲ್ಲಿ ಅಡಗಿ ಕುಳಿತಿದ್ದಾರೆ. ನಿನ್ನ ನಾಗಸ್ನೇಹಿತರು ಶರಭಾರಣ್ಯವನ್ನು ಅರಿಯರು ನೀನೂ ಗಾಯಗೊಂಡಿರುವಿ. ಹೀಗಿದ್ದೂ ನಿನಗೆ ನಿನ್ನವರನ್ನು ಸೇರಿಕೊಂಡು, ಶರಭಾರಣ್ಯ ಸೋಸಿ, ಏಳೂ ಜನರನ್ನು ಬಂಧಿಸುವ ಕೆಲಸ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ನೀನು ಯಶಸ್ವಿಯಾದರೆ, ನಿನ್ನನ್ನು ಅಮರುವಿನ ದಳಪತಿಯಾಗಿ ಮಾಡಿ ಅಮರುವಿಗೆ ಕಳಿಸಿಕೊಡುತ್ತೇನೆ. ಆಗಬಹುದೇ?”
ಇಂಥವೇ ಕಠಿಣ ಕಾರ್ಯಗಳನ್ನೇ ಕಾಲಿಯಾ ಬೇಡಿ ಬಯಸಿದ್ದು. ಅವನ ಕಣ್ಣಲ್ಲಿ ನೀರೂರಿತು.
“ಆಗಬಹುದು, ಮಹಾದೇವಿ!-ಆದರೆ..ನನ್ನ ಅಪರಾಧಕ್ಕೆ..”
“ನಿನ್ನ ಅಪರಾಧವೇನು? ನಿನ್ನ ತಂಗಿಗೆ ಆದ ಅಪರಾಧದ ಬಗ್ಗೆ ನೀನು ಕೆರಳಿ ಅವಿವೇಕ ಮಾಡಿರುವೆ. ಅದೇನು ಅಪರಾಧವಲ್ಲ. ನಾನು ನಿನ್ನೂರಿಗೆ ಬಂದಾಗ ನೀನು ನನ್ನನ್ನು ಕಂಡು ದೂರು ತಿಳಿಸಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಆ ಮಾತು ಬೇಡ. ಈಗ ಮಾಡಬೇಕಾದ ಕೆಲಸವನ್ನು ನಿನ್ನವರಿಗೆ ವಿವರಿಸಿ ಹೇಳು. ನಾಗರು ಕಲಿಗಳು. ಕೆರಳುವಿಕೆ ಅವರ ಸ್ವಭಾವಗುಣಧರ್ಮ. ಅದನ್ನು ಹಿತವಾಗಿ ಬಳಸುವ ಅವಕಾಶ ನಿನಗಿದೆ. ಬಳಸುವುದು ನಿನ್ನನ್ನು ಕೂಡಿದೆ!” ಎಂದಳು ರಾಣಿ.
ಕಾಲಿಯಾ ಕುಲುಕುಲು ನಗುತ್ತ ಕಾರಾಗೃಹಕ್ಕೆ ಮರಳಿ ಬಂದು ಪ್ರವೇಶಿಸಿ ಎಲ್ಲವನ್ನೂ ವಿವರಿಸಿ ಹೇಳಿದನು. ಸಂಗಡಿಗರು ’ಇದು ಕಾಲಿಯಾನ ವಿಜಯ!’ ವೆಂದೇ ಭಾವಿಸಿದರು. ಹರ್ಷೋದ್ಗಾರ ಮಾಡಿದರು.
ರಾಣಿಯ ಅಪ್ಪಣೆಯ ಮೇರೆಗೆ ಅವರ ಊಟವಾಗಿ, ಶಸ್ತ್ರಾಸ್ತ್ರಗಳು, ಬಿಲ್ಲು ಬಾಣಗಳು ದೊರಕಿ, ಒಂದು ವಾರ ಸಾಲುವಷ್ಟು ರೊಟ್ಟಿ ಸಿಕ್ಕು ಅವರು ಸೀಳುದಾರಿಯಿಂದ ಶರಭಾರಣ್ಯವನ್ನು ಕಾಲ್ನಡಿಗೆಯಿಂದಲೆ ಉತ್ತರ ದಿಕ್ಕಿನಿಂದ ಪ್ರವೇಶಿಸಿದರು.
೧೭
ಮಾದ್ರಕನ ಸಲಹೆಯ ಮೇರೆಗೆ ವತ್ಸರಾಜನು ಉತ್ತರ ದಿಕ್ಕಿನ ಪಳವುಪೊದೆಗಳಲ್ಲಿ ಭಿಲ್ಲರಾಜ ಓಡಿ ಹೋಗದಂತೆ ದಿಗ್ಬಂಧನ ಮಾಡಿದನು. ತನ್ನ ಸೇನೆಯನ್ನು ಸುತ್ತುವರಿಸಿ ಭಿಲ್ಲರ ಸಣ್ಣ ಗುಂಪು ನಂದಿಗ್ರಾಮದ ಸಮೀಪ ಬರುವಣ್ತೆಯೇ ಚಾಣಾಕ್ಷ ವತ್ಸರಾಜನು ತನ್ನ ಸೇನೆಗಳನ್ನು ಏರ್ಪಡಿಸಿದ್ದನು. ಅಲ್ಲಿ ಸರಯೂನದಿ ಅವರಿಗೆ ಅಡ್ಡವಾಗುತ್ತದೆ. ಭಾರವಾದ ಸುಲಿಗೆಯನ್ನು ನಾವಿಕರು ದಾಟಿಸಲಾರರು. ಅಲ್ಲಿಗೇ ಅವರ ಓಟ ಕುಂಠಿತವಾಗುತ್ತದೆಯೆಂದು ಅವನ ಬೇತು.
ಉತ್ತರ ದಿಕ್ಕಿನಿಂದ ಪ್ರವೇಶಿಸಿದ ಕಾಲಿಯನ ಗುಂಪಿಗೆ ಇದರ ಲಾಭ ಚೆನ್ನಾಗಿಯೇ ಸಿಕ್ಕಿತು. ಎಲ್ಲರೂ ತಿಂದು ಉಗಿದ ತಾಂಬೂಲದ, ಹೆಜ್ಜೆಗಳ, ಕುದುರೆಗಳು ಮೇದ ಸ್ಥಳಗಳ ಗುರುತು ಗುರುತಿಸಿ, ಅವರು ಕುಳಿತ ಜಾಗೆಯನ್ನೇ ಕಾಲಿಯನ ಜನರು ಶೋಧಿಸಿ ಹಿಡಿದು, ಸಮೀಪದಲ್ಲೇ ವಿಶ್ರಮಿಸಿದರು.
ಮಾರನೆಯ ದಿನದ ಬೆಳಗಿನ ಜಾವದಲ್ಲಿ ಭಿಲ್ಲರು ಇನ್ನೂ ನಿದ್ರಿಸುತ್ತಿದ್ದಾಗ ಕಾಲಿಯಾ ಅವರನ್ನು ಸಂಧಿಸಿದನು. ಏಳುವ ಮೊದಲೇ ಅವರ ಕೈಗಳಿಗೆ ಸಂಕೋಲೆ ಬಿದ್ದಿತ್ತು. ಒಬ್ಬರಿಗೂ ಗಾಯವಾಗಲಿಲ್ಲ. ಅವರ ಮೇಲೆಯೇ ಅವರ ಸಾಮಾನು-ಗಂಟುಗದಡಿಗಳನ್ನು ಹೇರಿಸಿ, ಸರಯೂ ನದಿಯ ಮುಖದ ಕಿರಿಯಾಳನೀರಿನಲ್ಲಿ ನಡೆಸುತ್ತ, ಹಸ್ತಿಗ್ರಾಮಕ್ಕೆ ಬಂದನು. ಅಲ್ಲಿ ನಾಲ್ಕು ಚಕ್ಕಡಿ ಬಾಡಿಗೆಯಿಂದ ಗೊತ್ತುಮಾಡಿ ಒಂದೂವರೆ ದಿನಗಳಲ್ಲಿ ಸೀಳುದಾರಿಯಿಂದ ಅಯೋಧ್ಯೆಗೆ ಬಂದು ಮುಟ್ಟಿ , ಎಲ್ಲ ಸಾಮಾನು ಸರಂಜಾಮು ಸೆರೆಯಾಳುಗಳನ್ನೂ ಮಹಾರಾಣಿಗೆ ಒಪ್ಪಿಸಿದನು.
“ತಿಕ್ಕಾಟವಾಯಿತೆ?” ಎಂಬ ಮಹಾರಾಣಿಯ ಪ್ರಶ್ನೆಗೆ ಕಾಲಿಯಾ “ಅಂಥ ಸಂದರ್ಭವೇ ಒದಗಲಿಲ್ಲ” ಎಂದು ಹೇಳಿದನು.
ಮಹಾರಾಣಿಯಿಂದ ಖಿಲ್ಲತ್ತು ಪಡೆದು, ಸಂಗಡಿಗರೊಂದಿಗೆ ಅಮರು ಗ್ರಾಮಕ್ಕೆ ಹೊರಟು ಹೋದನು.
ಇತ್ತ ವತ್ಸರಾಜನು ದಿನಕ್ಕೆ ಮೂರು ಗಾವುದ ತನ್ನ ಸೈನ್ಯದ ವಲಯವನ್ನು ಬಿಗಿಗೊಳಿಸುತ್ತ, ಇನ್ನು ಎಲ್ಲಿಯೂ ಓಡಿಹೋಗಲಾರರು-ಎಂಬ ಧೈರ್ಯದಲ್ಲಿ ಅವರು ಇದ್ದ ವಸತಿಗೇ ಮಧ್ಯಾಹ್ನ ಮುಟ್ಟಿದನು. ಅವನ ದುರ್ದೈವಕ್ಕೆ ಸಿಕ್ಕಿದ್ದೇನು? ಭಿಲ್ಲರು ಅಡಿಗೆ ಮಾಡಿದ ಗಡಿಗೆ-ಮಡಿಕೆಗಳು, ತುಂಬಿಟ್ಟ ನೀರಿನ ಮಣ್ಣು ಹರಿವೆ, ತಾಂಬೂಲ ಮಿಶ್ರಿತ ಉಗುಳು, ಹರಕು ಬಟ್ಟೆ ಬರೆಗಳು.
’ಇಲ್ಲಿಯೇ ಬಿಡಾರ ಹೂಡಿದ್ದು ಖಂಡಿತ, ಎಲ್ಲಿ ಹೋಗಿರಬಹುದು?’ ಎಂದು ನಂದಿಗ್ರಾಮಕ್ಕೆ ಬಂದನು. ’ಅವರು ವಸತಿ ಮಾಡಿದ ಜಾಗೆ ಸಿಕ್ಕಿತು. ಅವರು ಸಿಕ್ಕಲಿಲ್ಲ!’ ಎಂಬ ಸಂದೇಶವನ್ನು ಮಹಾರಾಣಿಗೆ ಕಳಿಸಿದನು. ’ಸಿಕ್ಕಿದ್ದಾರೆ. ನಿನ್ನ ಚಾತುರ್ಯಕ್ಕೆ ಏನೂ ನಷ್ಟವಿಲ್ಲ. ನೀನು ದಳಪತಿ. ಹೊರಟು ಬಾ’ ಎಂದು ಮಹಾರಾಣಿಯ ಸಂದೇಶ ಬಂದಿತು.
ಶ್ರಾವಸ್ತಿಯ ಆತಿಥ್ಯದಿಂದ ಸಂತುಷ್ಟರಾದ ದೇವರಾಜ ಸುಭಾನು ಕೊಡಮಾಡಿದ ವಜ್ರ ವೈಡೂರ್ಯಗಳ ಕಾಣಿಕೆಯೊಂದಿಗೆ ಮಾದ್ರಕನನ್ನು ಮುಂದೆ ಮಾಡಿಕೊಂಡು ನಂದಿಗ್ರಾಮಕ್ಕೆ ಬಂದರು. ವತ್ಸರಾಜನಿಂದ ಭಿಲ್ಲರಾಜ ವಶನಾದ ಸುದ್ದಿ ತಿಳಿದು ಸಂತೋಷಗೊಂಡು, ವತ್ಸರಾಜನಿಗೆ ಕೈ ಮೈ ಮುಟ್ಟಿ ನೋಡಿ ” ನೀನು ಗಾಯಗೊಳ್ಳಲಿಲ್ಲವಷ್ಟೇ?” ಎಂದರು. ಎಲ್ಲರೂ ಕೂಡ ಅಯೋಧ್ಯೆಗೆ ಮರಳಿದರು. ವತ್ಸರಾಜ ದಳಪತಿಯಾದ ಸುದ್ದಿ ಆಗಲೇ ಮುಟ್ಟಿ ಹೃಷ್ಟ ಚಿತ್ತರಾದರು. ಸೆರೆಸಿಕ್ಕ ಭಿಲ್ಲರಾಜ ಉಪೇಂದ್ರನೂ ಅವನ ಸೇನಾನಿಗಳೂ ಎರಡು ದಿವಸ ಕಾರಾಗೃಹದಲ್ಲಿ ಬಂಧನದಲ್ಲಿ ಕಳೆದರು.
ಭಿಲ್ಲರಾಜ ಉಪೇಂದ್ರನ ಕೈಕೋಳವನ್ನು ಬಿಚ್ಚಿ ರಾಣಿಯ ಎದುರು ನಿಲ್ಲಿಸಲಾಯಿತು.
“ನೀವು ಶ್ರಾವಸ್ತಿಯ ಮೇಲೆ ದಾಳಿ ಮಾಡಿದ್ದು ಏಕೆ?”
“ಶ್ರಾವಸ್ತಿಯ ಅರಸರು ನಮ್ಮನ್ನು ಕಾಡುಪ್ರಾಣಿಗಳಂತೆ ಕಾಣುತ್ತಾರೆ. ವಿಜಯದಶಮಿಯ ಭಿಲ್ಲರ ಬೇಟೆಯಾಡುತ್ತಾರೆ. ನಮ್ಮವರ ಹೆಂಡಂದಿರನ್ನು ಎತ್ತಿಕೊಂಡು ಹೋಗುತ್ತಾರೆ.”
“ನಿಮಗೆ ಮತ್ತು ನಿಮ್ಮ ನೂರು ಜನ ಸೆರೆಯಾಳುಗಳಿಗೆ ಅಯೋಧ್ಯೆಯಲ್ಲಿ ಇರಲಿಕ್ಕೆ ಕೊಟ್ಟರೆ ಏನು ಮಾಡುತ್ತೀರಾ? ಕೊಲೆ-ಸುಲಿಗೆ-ದರೋಡೆ ಮಾಡುತ್ತೀರಾ?”
“ಇಲ್ಲ. ನಮಗೆ ಅಯೋಧ್ಯೆಯ ಜನರ ಬಗ್ಗೆ ಯಾವ ದ್ವೇಷವೂ ಇಲ್ಲ.”
“ದ್ವೇಷವಿಲ್ಲವೆಂದರಷ್ಟೇ ಸಾಲದು. ಪ್ರಜೆಗಳ ಜೊತೆಗೆ ಪ್ರಜೆಗಳಾಗಿ ಈ ರಾಜ್ಯ ನಮ್ಮದೇ ಎಂದು ಭಾವಿಸುವುದಾದರೆ ನಿಮಗೆ ಇಲ್ಲಿ ಸ್ಥಾನ ಸಿಕ್ಕೀತು. ಇಲ್ಲವಾದರೆ ನಿಮ್ಮ ನೂರು ಜನರನ್ನು ನಿಮ್ಮನ್ನು ಶ್ರಾವಸ್ತ್ಯ ಸುಭಾನುವಿಗೆ ಕಾಣಿಕೆಗಳಾಗಿ ಕೊಡುವುದಾಗಿ ನಿರ್ಧರಿಸಿದ್ಧೇನೆ.”
“ಬೇಡ ಮಹಾರಾಣಿ, ಸುಭಾನುವಿಗೆ ನಮ್ಮ ಜನರನ್ನು ಕೊಡುವುದೆಂದರೆ ಅವರನ್ನು ಕೊಂದಂತೆಯೇ! ಇಲ್ಲಿಯೇ ನಮ್ಮನ್ನು ಕೊಂದುಬಿಡಿ. ಆ ಚಿತ್ರಹಿಂಸೆ, ಅವಮಾನ ತಡೆದುಕೊಳ್ಳುವುದು ನಮಗೆ ಸಾಧ್ಯವಿಲ್ಲ” ಎಂದು ತನ್ನ ಮುಚ್ಚಿದ ಬಲಮುಚ್ಚಿದ ಮುಷ್ಟಿಯನ್ನು ತೆರೆದು ತೋರಿಸಿದ. ಬಲ ಹಸ್ತದಲ್ಲಿ ಬೆರಳುಗಳೇ ಇರಲಿಲ್ಲ.
“ಇದು ಸುಭಾನುವಿನ ರಾಜ್ಯದ ಕಾನೂನು!” ಎಂದ ವ್ಯಂಗ್ಯವಾಗಿ.
ರಾಜ್ಯಸಭೆಯಲ್ಲಿ ಒಂದೇ ಕೈ ಎತ್ತಿ ತಮ್ಮ ಜನರ ಪದ್ಧತಿಯಂತೆ ಕುರ್ನಿಸಾತ್ ಮಾಡಿದ್ದಕ್ಕಾಗಿ ಇದು ಶಿಕ್ಷೆಯಂತೆ!
“ನಿಮ್ಮಲ್ಲಿ ಹದಿನಾರು ಜನರ ಗುಂಪು ಮಾಡಿರಿ. ನಾನು ಹೇಳಿದ ಅಡವಿಯಲ್ಲಿ ಅವರು ಸಹಕುಟುಂಬ ವಾಸಿಸಲಿ. ಜೇನು ಸಾಕಿ, ಹಣ್ಣು ಮಾರಿ ಉಪಜೀವನ ಸಾಗಿಸಬೇಕು. ಕೊಲೆ-ಸುಲಿಗೆಗಳನ್ನು ಬಿಟ್ಟು ಬಿಡಬೇಕು. ಅವರಿಗೆಲ್ಲ ವರ್ಷಕ್ಕೆ ಹತ್ತು ಹೊನ್ನು ವರಮಾನ. ಪ್ರತಿಯಾಗಿ ಅವರು ರಾಜ್ಯಾಜ್ಞೆಯಾದಾಗ ಯುದ್ಧಕ್ಕೆ ಬರಬೇಕು. ಜನರಿಗೆ ಅನುಕೂಲವಾದ ಸಂರಕ್ಷಣೆ ನೀಡಬೇಕು. ಹೊಳೆ ದಾಟಿಸುವುದಕ್ಕಾಗಿ ಅಂಬಿಗರಾಗಿ ಕೆಲಸ ಮಾಡಬಹುದು. ಅದರ ಶುಲ್ಕ ಅವರೇ ಉಣ್ಣಬಹುದು. ನೀವು ಏಳು ಜನರು ಅಯೋಧ್ಯೆಯಲ್ಲಿ ಅವರ ಒಳ್ಳೆಯ ನಡತೆಗೆ ಒತ್ತೆಯಾಗಿರಬೇಕು. ಇಲ್ಲಿ ನಿಮಗೆ ತಕ್ಕ ರಾಜಮರ್ಯಾದೆ ಸಲ್ಲಿಸಲಾಗುವುದು. ಇದು ನಿಮ್ಮ ನೂರು ಜನಕ್ಕೆ ಒಪ್ಪಿಗೆಯಾಗಬಹುದೇ?”
“ಮಹಾರಾಣಿ, ತಮ್ಮ ನಿರ್ಣಯ ನಮಗೆ ಮಾನ್ಯ. ಆದರೆ ಎಲ್ಲ ಕರಾರುಗಳನ್ನು ನಮ್ಮ ಜನರಿಗೆ ನಾನೇ ವಿವರಿಸಿ ಹೇಳುವುದು ಅಗತ್ಯ. ಏನಾದರೂ ಅಲ್ಪ ಕಾರಣಕ್ಕಾಗಿ ಅವರು ದುರ್ಮಾರ್ಗಕ್ಕಿಳಿದರೆ ನನ್ನ ಅಥವಾ ಇತರ ಆರು ನಾಯಕರ ಜೀವ ವ್ಯರ್ಥ ಅಪಾಯಕ್ಕೀಡಾದೀತು!”
“ಅಗತ್ಯವಾಗಿ, ನಿಮ್ಮನ್ನು ನಮ್ಮ ಮತ್ಸರಾಜನು ರಾಜ್ಯ ಮರ್ಯಾದೆಯಿಂದ ನಂದಿ ಗ್ರಾಮಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಮ್ಮ ಸೇನೆಯ ವಶದಲ್ಲಿ ನಿಮ್ಮ ನೂರು ಯೋಧರಿದ್ದಾರೆ. ಅವರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕು. ಅನಂತರ ಆ ನಿರ್ಣಯವನ್ನು ಬದಲಿಸಕೂಡದು. ನಿಮಗೆ ಎರಡೇ ಮಾರ್ಗಗಳು ತೆರೆದಿವೆ. ಸುಭಾನುವಿಗೆ ಒಪ್ಪಿಸುವುದು; ಅಥವಾ ನನ್ನ ಕರಾರಿನ ಅನ್ವಯ ಅಯೋದ್ಯಾ ರಾಜ್ಯದಲ್ಲಿ ನೆಲೆಸುವುದು.”
“ಅರ್ಥವಾಯಿತು, ಮಹಾದೇವಿ!”
ಕರುಣೆ, ಕರಾರುಗಳ ಆರ್ಭಟೆಯಲ್ಲಿ ತಾವು ಶ್ರಾವಸ್ತ್ಯ ಶೆಟ್ಟರಿಂದ ಸುಲಿದು ತಂದ ಸಂಪತ್ತು ಏನಾಯ್ತು, ಎಂಬುದನ್ನು ಕೇಳುವುದನ್ನೇ ಉಪೇಂದ್ರ ಮರೆತು ಹೋಗಿದ್ದ.
೧೮
ಮಹಾರಾಣಿ ಭಾಂಡಾರಿಯವರನ್ನು ಕರೆಸಿದಳು. ದೇವರಾಜರು ತಂದ ಶ್ರಾವಸ್ತ್ಯ ಕಾಣಿಕೆಗಳು, ಬಿಲ್ಲರಿಂದ ತಂದ ಧನಕಗಳು ಒಂದೇ ರಾಶಿಯಾಗಿ ಒಂದು ಭದ್ರಕೋಣೆಯಲ್ಲಿ ಬಿದ್ದಿದ್ದವು. ಭಾಂಡಾರಿಯೊಬ್ಬನನ್ನೇ ಒಳಗೆ ಕರೆಸಿ ಅವುಗಳ ಮೌಲ್ಯವನ್ನು ಅಜಮಾಸಿಸಲಿಕ್ಕೆ ಬಿಟ್ಟಳು. ಊಟವೂ ಒಳಗೆ ಬರುತ್ತಿತ್ತು. ಎರಡು ದಿನಗಳ ಸತತ ಯತ್ನದಿಂದ ಅವು ಸುಮಾರು ಇಪ್ಪತ್ತು ಲಕ್ಷ ವರಾಹಗಳಾಗಬಹುದೆಂದು ಭಾಂಡಾರಿ ವರದಿ ಒಪ್ಪಿಸಿದ. ತನಗೆ ಮುತ್ತು ಪರೀಕ್ಷೆ-ವಜ್ರ ಪರೀಕ್ಷೆ ಮಾಡಲು ಬುದ್ಧಿ ಸಾಲದೆಂದು, ಲೆಕ್ಕ ತಪ್ಪಿರಬಹುದೆಂದು ಹೇಳಿದಳು. ”
“ಸರಿ. ಈಗ ನಾನು ಲೆಕ್ಕ ಮಾಡುತ್ತೇನೆ!” ಎಂದು ಮಹಾರಾಣಿ ಒಳಗೆ ಹೋದಳು. ಭಾಂಡಾರಿಯ ಕಡೆಯಿಂದ ಇದ್ದ ಬೆಲೆಬಾಳುವ ಸಾಮಾನುಗಳನ್ನೆಲ್ಲ ಒಂದು ಸಮತಟ್ಟು ಆಗುವಂತೆ ಮಾಡಿಸಿದಳು. ಅದರಲ್ಲಿ ಹದಿನಾರು ಸಮಪಾಲುಗಳನ್ನು ಮಾಡಬೇಕೆಂದು ಹೇಳಿದಳು. ಭಾಂಡಾರಿ ಬೆತ್ತದಿಂದ ಉದ್ದ ಅಡ್ಡ ಗೆರೆ ಎಳೆದು ಹದಿನಾರು ಜ್ಯಾಮಿತೀಯ ಭಾಗಗಳನ್ನು ಮಾಡಿದ.
“ತಿಂಗಳಿಗೆ ಒಂದೊಂದು ಗುಂಪಿನಂತೆ ಇಲ್ಲಿಯ ಧನದ ರಾಶಿಯನ್ನು ಭಾಂಡಾರಕ್ಕೆ ಸಾಗಿಸಬೇಕು. ಭಾಂಡಾರ ತುಂಬಿಸುವ ಮೊದಲು ಬಲ್ಲವರಿಂದ ಸರಿಯಾಗಿ ಬೆಲೆ ಮಾಡಿಸಬೇಕು. ಒಮ್ಮೆ ಬಂದ ಪರೀಕ್ಷಕರು ಇನ್ನೊಮ್ಮೆ ಬರಬಾರದು. ಮೌಲ್ಯದ ವರದಿಯನ್ನು ನನಗೆ ಒಪ್ಪಿಸಬೇಕು. ಯಾರೊಡನೆಯೂ ಇದರ ಬಗ್ಗೆ ಮಾತೆತ್ತಬಾರದು. ಜೋಕೇ!” ಎಂದು ಹೇಳಿ ಬಾಗಿಲು ಭದ್ರಪಡಿಸಿ ಶಯನಮಂದಿರವನ್ನು ಹೊಕ್ಕಳು. ಹಿಂತಿರುಗಿ ಭಾಂಡಾರಿಯತ್ತ ಕಣ್ಣು ಹಾಯಿಸಲಿಲ್ಲ.
ಆಕೆ ಹೋದ ನಿಟ್ಟಿನಲ್ಲೇ ಬೆಕ್ಕಸ ಬೆರಗಾಗಿ ಭಾಂಡಾರಿ ನೋಡುತ್ತಲೇ ನಿಂತ. ಚೇತರಿಸಿಕೊಂಡೂ ಹೊರಟಾಗ ಎದುರಿಗೆ ತಾರ್ಕ್ಷ್ಯ ಬಂದ.
“ಏನು ಕೃಷ್ಣಭಾಂಡಾರಿಗಳೇ. ಮೌಲ್ಯ ಪರೀಕ್ಷೆ ಮುಗಿಯಿತೇ?”
“ಮಹಾದೇವಿಯನ್ನು ಕೇಳು!” ಎಂದರು ಕೃಷ್ಣಭಾಂಡಾರಿಗಳು, ಸೆಡವಿನಿಂದ.
“ನೀವು ಎರಡು ದಿನ ಕಷ್ಟ ಪಟ್ಟಿರಿ. ಮಹಾದೇವಿ ಎರಡು ನಿಮಿಷದಲ್ಲಿ ಕೆಲಸ ಪೂರೈಸಿದಳು. ಯಾರ ಮೌಲ್ಯ ನಿಜ?”
ಆಗ ಭಾಂಡಾರಿಗೆ ಅದರ ಚಟುಲ ಹಾಸ್ಯ ಅರ್ಥವಾಯಿತು. “ನಿಜ ಮೌಲ್ಯ…ತಾರ್ಕ್ಷ್ಯ…ನಿಜ ಮೌಲ್ಯ ಮೌಲ್ಯವಂತರದೇ! ಒಪ್ಪುತ್ತಿಯಾ?” ಎಂದು ನಕ್ಕರು.
“ಒಪ್ಪುತ್ತೇನೆ!”
“ನೀನು?”
“ನಾನೂ!-ಇಂತಹ ಮಹಾರಾಣಿಯನ್ನು ನಾನೆಲ್ಲಿಯೂ ನೋಡಿದ್ದಿಲ್ಲ. ಭಾಂಡಾರಿಯವರೇ!”
ನಗುತ್ತ ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು.
೧೯
ಭಿಲ್ಲರು ರಾಣಿಯ ಎಲ್ಲ ಕರಾರುಗಳಿಗೂ ಒಪ್ಪಿದರು. ಅವರಲ್ಲಿದ್ದ ಒಳಪಂಗಡಗಳ ಅನುಸಾರವಾಗಿ ಅವರನ್ನು ಬೇರೆ ಬೇರೆ ಕಡೆಗೆ ನೆಲಸುವಂತೆ ರಾಜಾ ಉಪೇಂದ್ರನು ತನ್ನ ನಾಯಕರೊಂದಿಗೆ ಚರ್ಚಿಸಿ ಪಟ್ಟಿಮಾಡಿಕೊಟ್ಟನು. ಕೆಲವರು ಇಲಾವತಿ ತೀರದ ಅಂಬಿಗ ಕುಟುಂಬದವರು ಅಂಬಿಗ ಕೆಲಸವನ್ನು ಒಪ್ಪಿಕೊಂಡರು. ಕೆಲವರು ಲೋಹಾರರು. ಅವರಿಗೆ ಕುಲುಮೆ ಮಾಡಿ ಧಾತುವನ್ನು ಕರಗಿಸುವ ಕಮ್ಮಾರ ಉದ್ಯೋಗವನ್ನು ರಾಣಿ ಅಯೋಧ್ಯೆಯ ಸಮೀಪದ ಅರಣ್ಯಗಳಲ್ಲಿಯೇ ಮಾಡಿಕೊಟ್ಟಳು. ಕೆಲವರು ಬೇಟೆಗಾರರು. ಕೆಲವರು ದಂತದ ಕೆಲಸ ಮಾಡುವಲ್ಲಿ ನಿಷ್ಣಾತರು. ಕೆಲವರು ಮಣಿಗಾರರು. ಅವರವರ ವೃತ್ತಿಗೆ ಯುಕ್ತ ಸ್ಥಳಗಳನ್ನು ಮಹಾರಾಣಿ ಒಪ್ಪಿಸಿದಳು. ಭಿಲ್ಲರಾಜ ಉಪೇಂದ್ರ ಮತ್ತು ಅವನ ಆರು ಸಂಗಡಿಗರನ್ನು ಅಯೋಧ್ಯೆಯಲ್ಲೇ ರಾಜ ಮರ್ಯಾದೆಯಿಂದ ಇಡಲಾಯಿತು.
ಇನ್ನು ಒಂದು ಮುಖ್ಯ ಸಮಸ್ಯೆ; ಅವರವರ ಕುಟುಂಬದ ಜನರನ್ನು ಇಲಾವತಿ-ಗೋಮತಿ ತೀರದಿಂದ ಅಯೋಧ್ಯೆ ರಾಜ್ಯಕ್ಕೆ ತರುವುದು. ಉಪೇಂದ್ರನಿಂದ ಪತ್ರ ಬರೆಸಿ, ವೀರಸೇನನನ್ನು ಕಳಿಸಿದಳು. ಒಂದು ಕಾಲಕ್ಕೆ ಒಂದು ಅಥವಾ ಎರಡು ಕುಟುಂಬಗಳ ಜನರನ್ನಷ್ಟೇ ತರಬೇಕೆಂದು ಗೊತ್ತಾಯಿತು. ಒಂದೂವರೆ ತಿಂಗಳಲ್ಲಿ ಆಯಾ ಕುಟುಂಬಗಳು ತಮ್ಮ ತಮ್ಮ ಯಜಮಾನರನ್ನು ಕೂಡಿ ಕೊಂಡವು.
೨೦
ಮಹಾರಾಜರಿಗೆ ಅಂದು ವಾಂತಿಯಾದನಂತರ ಕರುಳುಬೇನೆಯಿಂದ ಮೂರು ತಿಂಗಳು ನರಳಿದರು. ಅವರ ಹತ್ತಿರ ರಾಜ್ಯವೈದ್ಯರು ಮತ್ತು ಇಬ್ಬರು ದಾದಿಯರು ಮಾತ್ರ ಇರತೊಡಗಿದರು.
ಒಂದು ದಿನ ಜ್ವರದ ಉಮ್ಮಳಿಕೆಯಲ್ಲಿ “ನಾನು ನನ್ನ ರಾಣಿಯನ್ನು ಕಾಣಬೇಕು!” ಎಂದು ಹಂಬಲಿಸಿದರು.
ರಾಹುತನಿಂದ ವಾರ್ತೆ ಕೇಳಿದೊಡನೆ ಪುರುಕುತ್ಸಾನಿ ಆಮ್ರವನಕ್ಕೆ ಧಾವಿಸಿದಳು.
“ಬಂದೆಯಾ, ಪುರುಕುತ್ಸಾನಿ! ಬರುವೆಯೋ ಇಲ್ಲವೋ ಎಂದಿದ್ದೆ!” ಎಂದರು.
ಮಹಾರಾಣಿ ಅವರ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಕೂದಲು ನೇವರಿಸಿದಳು.
“ಬಾ ಪುರುಕುತ್ಸಾನಿ, ನನ್ನ ಮಗ್ಗುಲಿಗೆ!”
“ಬೇಡ ಮಹಾರಾಜ, ನಿಮಗೆ ಜ್ವರ ಇದೆ!”
“ಜ್ವರದ ತಾಮಸದಲ್ಲಿಯೇ ನಾನು ನಿನ್ನನ್ನು ಭೋಗಿಸಬಲ್ಲೆ.”
“ಈಗ ನಿದ್ದೆ ಹೋಗಿರಿ, ಮಹಾರಾಜ, ನಿಮ್ಮ ಕಾಯಿಲೆ ವಾಸಿಯಾದೊಡನೆ ನಾವು ಇಬ್ಬರೂ ಆವಂತಿಕಾದೇವಿಯ ದರ್ಶನಕ್ಕೆ ಹೋಗೋಣ. ದೇವದೇಮ ಋಷಿಗಳನ್ನು ಕಾಣೋಣ!”
“ಈಗ ನನಗೆ ಕಾಮವಾಸನೆ ಆಗಿದೆ. ನೀನು ಸ್ಥ್ರೀಧರ್ಮವನ್ನು ಆಚರಿಸುತ್ತಿಯೋ ಇಲ್ಲವೋ ನೋಡೇಬಿಡುತ್ತೇನೆ.”
“ಪತಿಯ ಆರೋಗ್ಯ ಸ್ತ್ರೀಧರ್ಮದ ಮೊದಲನೇ ಕರ್ತವ್ಯ!”
“ನಾಳೆ ಜ್ವರ ಕಡಿಮೆಯಾದರೆ ಬರುತ್ತೀಯಾ!”
“ಓಹೋ! ಬರುತ್ತೇನೆ.”
ಮರುದಿನ ಜ್ವರ ಇನ್ನಷ್ಟು ಉಲ್ಬಣಿಸಿದುದರ ವಾರ್ತೆ ಬಂದಿತು. ಮತ್ತೆ ಪುರುಕುತ್ಸಾನಿ ಗಂಡನ ಬಳಿಗೆ ಧಾವಿಸಿದಳು. ಇಡೀ ರಾತ್ರಿ ತಾನೇ ಅರೈಕೆ ಮಾಡಿದಳು.
ಆದರೆ…
ಮರುದಿನ ಬೆಳಿಗ್ಗೆ ಮಹಾರಾಣಿ ಅರಮನೆಗೆ ಬಳಲಿ ಬೆಂಡಾಗಿ ಬಂದಳು. ಅರಮನೆಯ ಎದುರು ಅಂಗಳದಲ್ಲಿ ಒಂದು ದೊಡ್ಡ ಜನ ಸಮ್ಮರ್ದವೇ ನೆರೆದಿತ್ತು.
ಅದು ಅಯೋಧ್ಯೆಯ ಋಗ್ವೇದಿಯ ಬ್ರಾಹ್ಮಣರ ಗುಂಪು. ಮಹಾರಾಣಿ ಅಮರುವಿನಲ್ಲಿ ಶತಚಂಡಿ ಯಾಗವನ್ನು ಶುರುಮಾಡಿಸಿದ ವಾರ್ತೆ ಗೊತ್ತಾದ ಕೂಡಲೇ ವಶಿಷ್ಠ ಗೋತ್ರದ ಬ್ರಾಹ್ಮಣರಿಗೇ ಸರ್ವಸ್ವ ಮೊರೆ ಹೋಗುತ್ತಾಳೆ. ತಮ್ಮ ವಾಸಂತೀಕಾದೇವಿ ಕಡಿಮೆಯವಳೇ? ತಮ್ಮ ಬ್ರಹ್ಮದೇವರು ಕಡಿಮೆಯಾದರೆ? ತಮ್ಮ ಮಂತ್ರಗಳು ಕಡಿಮೆಯವೆ? ತಮ್ಮ ಗೋತ್ರರ್ಷಿ ವಶಿಷ್ಠರು ಕಡಿಮೆಯೇ? ಹೀಗೆ ಗುಜುಗುಜು ನಡೆದಿತ್ತು. ಅದರ ಮುಂದಾಳು ಸಿಂಹಭಟ್ಟ (ಅಥವಾ ಸಮ್ಹ) ನೆಂಬ ವಶಿಷ್ಠಗೋತ್ರಿಯ ಬ್ರಾಹ್ಮಣ.
ಮಹಾರಾಣಿ ಬಂದೊಡನೆ ಬ್ರಾಹ್ಮಣರು ದಾರಿ ಬಿಟ್ಟು ನಿಂತರು.
ಸಿಂಹ ಭಟ್ಟ ವಿವೇಕಿ. ಉಳಿದವರಂತೆ ದ್ವೇಷದಿಂದ ಬಂದವನಲ್ಲ. ಅಯೋಧ್ಯೆಯ ಅರ್ಚಕರು ಮೊದಲನೆಯ ಮೂರುವೇದಗಳ ಅಧಿಕಾರಿಗಳು. ನಲ್ಕನೆಯ ವೇದ ದೇವಮಾನ್ಯವಲ್ಲ. ಅಥರ್ವಣವೇದದ ಕ್ರಿಯೆಗಳು ಮಾಟ-ಮದ್ದುಗಳಿಗೆ ಉಪಯೋಗವೇ ಹೊರತು ಮೂಲದೇವವಲ್ಲ. ಅದಕ್ಕೆ ಉತ್ತೇಜನ ಕೊಡುವುದು ಅಯೋಧ್ಯೆಗೆ ಅವಮಾನಕರ. ಮುಂತಾಗಿ ಅವನು ಪ್ರಾಮಾಣಿಕವಾಗಿಯೇ ನಂಬಿದ್ದನು.
ಸಿಂಹ ಭಟ್ಟನನ್ನು ಕಂಡು, “ನನ್ನ ಸ್ನಾನವಾಗಿಲ್ಲ; ದ್ವಿಜರೊಡನೆ ಸ್ನಾನವಿಲ್ಲದೆ ಮಾತಾಡುವುದು ನನಗೆ ಕ್ಷೇಮವೆಂದು ನನಗೆ ಅನಿಸುವುದಿಲ್ಲ. ನೀವು ಭೂಸುರರು ನನಗೆ ಸ್ನಾನ ಮಾಡಲಿಕ್ಕೆ ಅವಕಾಶಕೊಡಿ. ಇಲ್ಲಿ ಬಿಸಿಲಲ್ಲಿ ಏಕೆ ನಿಂತಿರಿ? ಒಳಗೆ ಸಭಾಂಗಣದಲ್ಲಿ ವಿಶ್ರಮಿಸಿರಿ. ತುಸು ಹಾಲು ಹಣ್ಣು ವ್ಯವಸ್ಥೆ ಮಾಡುತ್ತೇನೆ. ಒಳಗೆ ಬನ್ನಿ” ಎಂದು ಹೇಳಿ ರಾಣಿ ಸ್ನಾನಕ್ಕೆ ಹೋದಳು.
ಭೂಸುರರು ಸಭಾಗಂಣದಲ್ಲಿ ಪವಡಿಸಿದರು. ಉತ್ತತ್ತಿ, ಬದಾಮು, ಖರ್ಜೂರಗಳ ಜೊತೆಗೆ ಕೇಶರ ಮಿಶ್ರಿತ ಹಾಲು ಬಂದಿತು. ತುಸು ವೇಳೆಯಲ್ಲಿ ಮಹಾರಾಣಿ ಬಿಳಿಸೀರೆ ಕುಪ್ಪಸ ಧರಿಸಿ ಹಾಜರಾದಳು. ತಾನೇ ಹಾಲಿನ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ಎಲ್ಲರಿಗೂ ನೀಡತೊಡಗಿದಳು.
ಉಪಾಹಾರವಾದ ಮೇಲೆ ಬ್ರಾಹ್ಮಣರಿಗೆ ಮಾತೇ ಹೊರಡಲೊಲ್ಲವು. ಸಿಂಹಭಟ್ಟನೊಬ್ಬನೆದ್ದು ಮಹಾರಾಣಿ ಪವಡಿಸಿದ್ದ ಆಸನದ ಬಳಿಗೆ ಹೋಗಿ ವಿನಯದಿಂದ ಕೇಳಿದನು:
“ಮಹಾರಾಜರ ಆರೋಗ್ಯ ಹೇಗಿದೆ?”
“ನಿನ್ನೆ ರಾತ್ರಿ ಉಲ್ಬಣಿಸಿತು. ಇಡೀ ರಾತ್ರಿ ನಾನು ಎದ್ದು ಕುಳಿತಿದ್ದೆ. ಅವರ ಆರೋಗ್ಯಕ್ಕಾಗಿ ತಾವು ವಾಸಂತೀಕಾದೇವಿಗೆ ಅಭಿಷೇಕ ಸಲ್ಲಿಸಬೇಕು.”
“ನಾವು ಶತಚಂಡಿಯಾಗ ಮಾಡಬೇಕೆಂದು ವಿಚಾರ ಮಾಡುತ್ತಿದ್ದೇವೆ.”
“ಆಗಬಹುದು. ಅಮರುವಿನಲ್ಲಿ ದೇವದೇಮ ಮಹರ್ಷಿಗಳು ಯಾಗ ಆರಂಭಿಸಿದ್ದಾರೆ. ಅಲ್ಲಿ ಐನೂರು ವರಹ ಸಲ್ಲಿಸಿದ್ದೇನೆ. ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಂಖ್ಯೆ ದೊಡ್ಡದು. ಇಲ್ಲಿ ಒಂದು ಸಾವಿರ ವರಹ ಸಲ್ಲಿಸುತ್ತೇನೆ. ಅಮರುವಿನಲ್ಲಿ ಯಾಗ ಮುಗಿಯುವುದರಲ್ಲಿ ಮಹಾರಾಜರ ಅನಾರೋಗ್ಯ ಉಲ್ಬಣಿಸಿತು. ಅದನ್ನೇ ಸಹಸ್ರ ಚಂಡಿಯಾಗಕ್ಕೆ ಬಹಳವಾಯಿತು, ಎಂದೇ ಅವರ ವಿಚಾರವಿರಬೇಕು. ನಿಮಗೆ ಕೊಡಮಾಡುವ ಸಾವಿರ ವರಹದಲ್ಲಿ ನಿಮಗೆ ಬೇಕಾದ ಯೋಗ್ಯಯಾಗವನ್ನು ಮಾಡಿರಿ. ನಮ್ಮ ಮುಖ್ಯ ಯೋಚನೆ ಮಹಾರಾಜರ ಆರೋಗ್ಯ ಆಗಬಹುದೇ?”
“ಆಗಬಹುದು.”
ಒಬ್ಬ ಕುಹಕಿ ಬ್ರಾಹ್ಮಣ ಭೀಮಭಟ್ಟ ಎದ್ದುನಿಂತು, “ಅಯೋಧ್ಯೆಯಲ್ಲಿ ಋಗ್ವೇದಿಯರಿಗೆ ಪ್ರಾಶಸ್ತ್ಯವಿರುವುದು ಪರಂಪರಾಪ್ರಾಪ್ತ, ಮಹಾರಾಣಿ !” ಎಂದ.
ಇನ್ನೊಬ್ಬ ಸಾಮವೇದಿ ಅದನ್ನು ನಿಷೇಧಿಸಿ, “ನಮ್ಮ ಅಜ್ಜ ಅಯೋಧ್ಯೆಯ ರಾಜ ಪುರೋಹಿತನಾಗಿದ್ದ. ಮಹಾರಾಣಿ! ನಾವು ಸಾಮವೇದಿಯರು!”
ಇನ್ನೊಬ್ಬ ಯಜುರ್ವೇದಿ ಚಟ್ಟನೆ ಎದ್ದು , “ಎಲ್ಲ ವೇದಗಳಿಗೂ ಮೂಲ ಯಜುರ್ವೇದವೆಂದು ವಿಷ್ಣುಪುರಾಣದಲ್ಲಿ ಹೇಳಿಲ್ಲವೇ, ಮಹಾರಾಣಿ” ಎಂದ.
ಆಗ ಸಿಂಹನು ಮುಂದೆ ಬಂದು, “ಈಗ ವೇದಾಂಗಗಳ ಚರ್ಚೆಗೆ ಬೇಡ. ಮಹಾರಾಣಿಯವರು ನಿನ್ನೆ ರಾತ್ರಿ ಮಹಾರಾಜರ ಶುಶ್ರೂಷೆಗಾಗಿ ನಿದ್ದೆಗೆಟ್ಟು ಬಂದಿದ್ದಾರೆ. ಅವರಿಗೆ ವಿಶ್ರಾಂತಿ ಅತ್ಯಗತ್ಯ. ನಾವು ಈಗ ಹೋಗೋಣ. ಇಂದು ಸಂಜೆ ವಾಸಂತಿಕಾ ದೇವಾಲಯದಲ್ಲಿ ಮಹಾರಾಜರ ಆರೋಗ್ಯಕ್ಕಾಗಿ ’ತ್ರಿಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ’ ಮಂತ್ರದ ಶತಾವರ್ತನೆ ಸಲ್ಲಿಸೋಣ. ಆಮೇಳೆ ಶತಚಂಡಿ ಯಾಗದ ಯೋಜನೆಯನ್ನು ನಿರ್ಧರಿಸೋಣ!” ಎಂದನು.
ಮತ್ತೆ ಋಗ್ವೇದಿ ಭೀಮಭಟ್ಟ ಬ್ರಾಹ್ಮಣ ಎದ್ದು ನಿಂತು, “ಶತಚಂಡಿ ಮಂತ್ರ ಯಾವ ವೇದದ ಅಂಗ?” ಎಂದು ಸವಾಲು ಹಾಕಿದ.
ಅವರ ಬದಿಯಲ್ಲೇ ನಿಂತ ಧಾಂಡಿಗ ಬ್ರಾಹ್ಮಣ ಶಾಮಭಟ್ಟ, “ಸುಮ್ಮನಿರೋ ಖೋಡಿ” ಎಂದು ಚೀರಿದ.
ಕೆಲ ಬ್ರಾಹ್ಮಣರು ಗೊಳ್ಳೆಂದು ನಕ್ಕರು. ಮತ್ತೆ ಕೆಲವರು ಮುಖ ತಗ್ಗಿಸಿದರು. ಕೆಲವರು “ಸರಿ ಹೇಳಿದೆ, ಅವನು ಬಾಯ್ಬಡಕ” ಎಂದು ಉದ್ಗಾರ ತೆಗೆದರು. ಅಂತೂ ಎಲ್ಲರೂ ಸಂತೋಷದಿಂದ ಹೊರಟರು.
ಬಾಗಿಲ ಬಳಿ ಒಬ್ಬ ಯುವಕ ಬ್ರಾಹ್ಮಣ ಹೊರಳಿ ನಿಂತು, “ಮಹಾದೇವಿಗೆ ಜಯವಾಗಲಿ” ಎಂದು ಕೂಗಿದ. ಎಲ್ಲರೂ ದನಿಗೂಡಿಸಿದರು. ಜಯ ಜಯಕಾರದ ಸದ್ದು ನಿಂತ ಮೇಲೆ ಮಹಾರಾಣಿ ಎದ್ದು ನಿಂತು, “ಮಹಾಜನಿಗೆ ಜಯವಾಗಲಿ” ಎಂದಳು.
ಮತ್ತೆ ಜಯಜಯಕಾರವೆದ್ದಿತು, ಮಹಾರಾಜರ ಆರೋಗ್ಯದ ಮುಖ್ಯ ವಿಷಯವನ್ನೇ ಮರೆತದ್ದಕ್ಕಾಗಿ ಅನೇಕರು ನಾಲಗೆ ಕಚ್ಚಿಕೊಂಡರು.
ಸಿಂಹನು ರಾಣಿಯ ಬಳಿಗೆ ಬಂದು, “ಮಹಾರಾಣಿ! ನಮ್ಮ ಅವಿವೇಕವನ್ನು ಕ್ಷಮಿಸಬೇಕು. ನಮ್ಮಲ್ಲಿ ಅನೇಕರು ಅಪಕ್ವರು. ವಾದವಿವಾದದ ರಾದ್ದಾಂತದಲ್ಲೇ ಅವರು ತಮ್ಮ ವಿದ್ವತ್ತೆಯನ್ನು ಹಾಳುಗೆಡವುತ್ತಾರೆ.”
“ಭೂಸುರರ ತಪ್ಪು ನಾನು ಎಣಿಸುವುದಿಲ್ಲ. ಶತಚಂಡಿ ಹೋಮವನ್ನು ಚೆನ್ನಾಗಿ ಮಾಡಿರಿ, ಅಷ್ಟೇ ಸಾಕು” ಎಂದು ಹೇಳಿ ಬೀಳ್ಕೊಟ್ಟಳು.
೨೧
ವೈದ್ಯರ ಚಾತುರ್ಯವೋ, ಶತಚಂಡೀಹೋಮದ ಪ್ರಭಾವವೋ, ಒಂದು ತಿಂಗಳ ಅವಧಿಯಲ್ಲಿ ಮಹಾರಾಜರು ಗುಣಮುಖರಾಗಿ ಅಡ್ಡಾಡತೊಡಗಿದರು. ಪೂರ್ಣಾಹುತಿಯ ದಿನ ಮಹಾರಾಣಿ ತಾನೇ ಬಂದು, ಅವರಿಗೆ ರಾಜಮಾನ್ಯ ಉಡುಗೆ ತೊಡಿಗೆಗಳನ್ನು ಉಡಿಸಿ, ರಥದಲ್ಲಿ ಕುಳ್ಳಿರಿಸಿ, ವಾಸಂತಿಕಾ ದೇವಸ್ಥಾನಕ್ಕೆ ಕರೆದೊಯ್ದಳು. ಅವರು ಬಂದೊಡನೆ ತಾಳ-ತುತ್ತೂರಿ-ಚೌಘಡದ ಮಂಗಲವಾದ್ಯ ಭೋರ್ಗರೆಯತೊಡಗಿದವು. ಒಳಗೆ ಒಂದು ಕಟ್ಟೆಯ ಮೇಲೆ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಸುವಾಸಿನಿಯರು ಕಿಕ್ಕಿರಿದು ನೆರೆದಿದ್ದರು. ವೇದಿಯ ಸುತ್ತಲೂ ಬ್ರಾಹ್ಮಣರು; ಒಂದು ಕಟ್ಟೆಯ ಮೇಲೆ ಮನ್ನೆಯರು, ಭದ್ರಮುಖರು; ಇನ್ನೊಂದರ ಮೇಲೆ ರಾಜ ಮನೆತನದ ಪರಿಜನರು: ಇನ್ನೊಂದರ ಮೇಲೆ ಸೆಟ್ಟಿ ಸಾಹುಕಾರರು; ಅಟ್ಟದ ಮೇಲೆ ಬಾಲಕರು, ಯುವಕರು, ಸಂದಣಿಗೊಂಡಿದ್ದರು. ದೇವಿಯ ಗರ್ಭಗುಡಿಯ ಇಮ್ಮಗ್ಗಲಿಗೂ ಅಖಂಡ ಸೌಭಾಗ್ಯವತಿಯರಾದ ಅಯೋಧ್ಯೆಯ ಗಣಿಕಾ ಜನರು ಕೈಯಲ್ಲಿ ಬೆಳ್ಳಿಬಟ್ಟಲಿನಲ್ಲಿ ಕುಂಕುಮದ ನೀರು ಜೋಡುವಿಳ್ಯದೆಲೆ ಹಿಡಿದುಕೊಂಡು ಉತ್ಕಂಠೆಯಿಂದ ದಾರಿಕಾಯುತ್ತಿದ್ದರು.
ರಾಜ-ರಾಣಿಯರು ನೇರವಾಗಿ ಗರ್ಭಗುಡಿಗೆ ಬಂದು, ದೇವಿಗೆ ಅರಿಷಿಣ ಕುಂಕುಮ-ಪನ್ನೀರು-ಹೂಗಳನ್ನು ಏರಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಹೊರಬರುತ್ತಲೇ, ಇಬ್ಬರು ಗಂಡುಗೊಜ್ಜೆಯರು ಗೆಜ್ಜೆಯ ಝಣತ್ಕಾರ ಮಾಡಿ ಬೆಳ್ಳಿಯ ಕೋಲು ನೆಲಕ್ಕೆ ಅಪ್ಪಳಿಸಿದರು. ಇನ್ನೊಬ್ಬ ವೃದ್ಧ ವೇಶ್ಯೆಯು ಬಂದು ರಾಜರನ್ನು ಆಲಿಂಗಿಸಿ, ಅವರ ಗಲ್ಲದ ಮೇಲೆ ಕಪ್ಪು ಚುಕ್ಕೆಯನ್ನಿಟ್ಟಳು, ದೃಷ್ಟಿದೋಷ ಪರಿಹಾರಕ್ಕಾಗಿ. ಅನಂತರ ಎಲ್ಲ ವೇಶ್ಯೆಯರೂ ದೂರದಿಂದ ಕೈಮಾಡಿ ಬೆರಳಚಿಟಿಕೆಯನ್ನು ಮುರಿದುಕೊಂಡರು. ಮುಂದೆ ಮುಂದೆ ಬಂದಂತೆಲ್ಲ ರಾಜ ರಾಣಿಯರ ಮೇಲೆ ಕೆಂಪು ಮಿಶ್ರಿತ ಪನ್ನೀರನ್ನು ಸಿಂಪಡಿಸತೊಡಗಿದರು. ವಿಳ್ಯದೆಲೆಗಳ ಕುಚ್ಚಿನಿಂದ. ರಾಜರು ಅವರ ಮುಖಗಳನ್ನು ವೀಕ್ಷಿಸುತ್ತಲೇ ಮುಂದುವರಿದರು, ತಮಗೆ ಹೆಚ್ಚು ಸುಖ ನೀಡಿದ ಮೃಗನಯನೆಯೇ ಕಾಣುವುದಿಲ್ಲವಲ್ಲಾ, ಎಂಬ ಉತ್ಕಂಠೆಯಿಂದ. ಮ್ಲಾನವದನೆಯಾಗಿ, ರಾಜರ ಹಾಸಿಗೆಯಿಂದ ಬಹಿಷ್ಕೃತಳಾದ ಮೃಗನಯನೆ, ತುಸು ಹಿಂದೆ ಹಿಂಜರಿದು ನಿಂತಿದ್ದಳು. ಅವಳನ್ನು ಕಾಣುತ್ತಲೇ ರಾಜರು ಒಂಟಿಹುಬ್ಬು ಮೇಲೆ ಏರಿಸಿದರು. ಆದರೂ ಮುಖ ಸಿಂಡರಿಸಿಕೊಂಡೇ ಆಕೆ ದೂರಿಂದ ಕುಚ್ಚಿನಿಂದ ಪನ್ನೀರು ಸಿಂಪಡಿಸಿದಳು. ಆಕೆಯನ್ನು ನೋಡುವ ಭರದಲ್ಲಿ ರಾಜರ ಸೆಲ್ಲೆ ಕೆಳಗೆ ಜಾರಿಬಿತ್ತು. ಮಹಾರಾಣಿಯೇ ಅದನ್ನು ಎತ್ತಿ ಅವರಿಗೆ ಮತ್ತೆ ಹೊದಿಸಿದಳು. ನಂತರ ಗರ್ಭಗುಡಿಯ ಹೊರಗೆ ಬಂದಾಗ, ಸುವಾಸಿನಿಯರು ಮಂಗಳಾರತಿ ಎತ್ತಿದರು. ಒಂದು ಬಾರಿ ದೇವಾಲಯದ ಪ್ರದಕ್ಷಿಣೆಯ ನೆಪದಲ್ಲಿ ರಾಜರಾಣಿಯರು ಎಲ್ಲರ ಮುಜುರೆ ಸ್ವೀಕರಿಸಿ ಬರುತ್ತಲೇ, ವೇದಮಂತ್ರಗಳ ಸುಸ್ವರ ಕೇಳಿಸತೊಡಗಿತು. ಗುಂಪು ಗುಂಪಾಗಿ ನಾಲ್ಕೂ ವೇದಗಳ ಶಾಸ್ತ್ರಿಗಳು ತಮ್ಮ ತಮ್ಮ ವೇದಗಳ ಒಂದೊಂದು ಋಚೆಯನ್ನೂ ತಮ್ಮ ತಮ್ಮ ರೀತಿಯಲ್ಲಿ ಹಾಡಿದರು. ಪೂರ್ಣಾಹುತಿಯನ್ನು ಎತ್ತಿ ವೇದಿಯ ಮುಂದೆ ನಿಂತ ಪುರೋಹಿತ ಸಿಂಹಭಟ್ಟನು, ’ಹ್ರಾಂ ಹ್ರೀಂ’ ಮಂತ್ರ ಹೇಳಿ, ಉಚ್ಚ ಕಂಠದಿಂದ ಸಾಮವೇದದ ಋಚೆಯೊಂದನ್ನು ಹಾಡಿ, ರಾಜರಾಣಿಯರ ಕೈಯಿಂದ ಪೂರ್ಣಾಹುತಿ ಬಿಡಿಸಿದನು. ಅಗ್ನಿಯು ಭಗ್ಗನೆ ಮೇಲಕ್ಕೆದ್ದು ಆಹುತಿ ನೊಣೆದನು. ಸುವಾಸಿನಿಯರು ಮಹಾರಾಣಿಯನ್ನು ಮಣೆಯ ಮೇಲೆ ಕೂರಿಸಿ ಅರಿಶಿಣ-ಕುಂಕುಮ ಹಚ್ಚಿ, ಕಾಯಿ-ಅಕ್ಕಿಗಳಿಂದ ಉಡಿ ತುಂಬಿದರು. ಎಲ್ಲ ಕಡೆಯಿಂದಲೂ ಜಯಜಯಕಾರದ ಘೋಷವೆದ್ದಿತು.
ಆ ಪ್ರಕಾಶದಲ್ಲಿ ಪುರುಕುತ್ಸಾನಿ ಢಾಳಾದ ಕುಂಕುಮ ಧರಿಸಿ ಸುಂದರಿಯಾಗಿ ಕಂಡಳೇನೋ ನಿಜ. ಆದರೆ ದುಃಖಿತೆಯಾದ ಮೃಗನಯನೆಯ ಚಿತ್ರವೇ ಅರಸರ ಮೈಮನಸ್ಸಿನಲ್ಲಿ ಅಚ್ಚೊತ್ತಿದಂತೆ ನಿಂತಿತ್ತು.
ಮುಂದೆ ಪಂಜಿನ ಮೆರವಣಿಗೆ. ಜಯಘೋಷಗಳ ಗದ್ದಲದಲ್ಲಿ ದಣಿದ ಮಹಾರಾಜರು ಅರಮನೆಯನ್ನು ಕಾಣುತ್ತಲೇ ಶಯ್ಯೆಯನ್ನು ಇಚ್ಚಿಸಿದರು. ಪುರುಕುತ್ಸಾನಿ ಅವರನ್ನು ಶಯ್ಯೆಯಲ್ಲಿ ಮಲಗಿಸಿದೊಡನೆ ನಿದ್ದೆ ಹತ್ತಿಬಿಟ್ಟಿತು. ಪುರುಕುತ್ಸಾನಿಯೊಬ್ಬಳೇ ಪ್ರಜಾಜನರ ಸಂತೋಷಕ್ಕಾಗಿ ಹೊರಕ್ಕೆ ಬಂದು ತುಸು ಹೊತ್ತು ನೃತ್ಯ ನಾಟಕಗಳನ್ನು ವೀಕ್ಷಿಸಿದಳು. ಅರ್ಧಕ್ಕೆ ಎದ್ದು ಅರಮನೆಯ ಶಯ್ಯಾಗೃಹವನ್ನು ಪ್ರವೇಶಿಸಿದಳು.
ರಾಜರ ಹಣೆಯ ಕುಂಕುಮ ಹಾಗೆಯೇ ಇತ್ತು.
ಪುರುಕುತ್ಸಾನಿ ದೃಢವಾಗಿ ಆಲಿಂಗಿಸಿ ನಿದ್ರೆ ಹೋದಳು. ಮರುದಿನ ಅಮರುವಿಗೆ ಪ್ರಯಾಣ ಬೆಳೆಸಬೇಕು. ಸಹಸ್ರ ಚಂಡೀಹೋಮ ಲಕ್ಷಚಂಡೀ ಹೋಮವಾಗುವುದು ಹಾಸ್ಯಾಸ್ಪದವಾಗಬಹುದಿತ್ತು.
ರಾಜರು ತಾಯಿಯ ಮಡಿಲಿನಲ್ಲಿ ಮಲಗಿದ ಮಗುವಿನ ಹಾಗೆ ಮಲಗಿಯೇ ಇದ್ದರು.
೨೨
ಮರುದಿನ ನಸುಕಿನಲ್ಲಿ ಎದ್ದು ರಥವೇರಿ ಮಹಾರಾಣಿ ಅಮರುಗ್ರಾಮಕ್ಕೆ ತೆರಳಿದರು.
ಅಚ್ಚುಕಟ್ಟಾದ ವ್ಯವಸ್ಥೆಯನ್ನು ಪಾಳ್ಯಗಾರ ಕಾಲಿಯಾ ಮಾಡಿದ್ದ. ಅವನ ಮನೆ ಈಗ ತುಸುವಿಸ್ತಾರಗೊಂಡಿತ್ತು. ಆವಂತಿಕಾದೇವಸ್ಥಾನ ತಳಿರು ತೋರಣಗಳಿಂದ ಅಲಂಕೃತವಾಗಿತ್ತು. ವಿಶೇಷವೇನೆಂದರೆ ಅಲ್ಲಿ ಹೊಸತಾಗಿ ನೆಲಸಿದ ಏಳು ಭಿಲ್ಲ ಕುಟುಂಬಗಳ ಸುವಾಸಿನಿಯರು ಒಂದೊಂದು ಮಣಿಮಾಲೆಯನ್ನು ರಾಣಿಯ ಕೊರಳಲ್ಲಿ ಹಾಕಿದರು. ಸುತ್ತಲೂ ಕುಣಿದರು. ಅವರ ಟೋಪಿಯನ್ನು ಧರಿಸಿ ರಾಣಿಯೂ ಕುಣಿದು ಚಪ್ಪಾಳೆ ಹಾಕಿದಳು. ಟೋಪಿಯ ಸಹಿತವಾಗಿ ರಾಣಿ ಅಮರುದವನಕ್ಕೆ ಬಂದು ಪೂರ್ಣಾಹುತಿ ನೀಡಿದಳು. ದೇವದೇಮ ಮಹರ್ಷಿಗಳು ಮತ್ತೆ ಏಕಾಂತ ಸಂದರ್ಶನ ನೀಡಿದರು. “ಬಹಳ ಅಚ್ಚುಕಟ್ಟಾಗಿ ಯಾಗ ನೆರವೇರಿತು. ಊರ ಸುವಾಸಿನಿಯರೆಲ್ಲ ದಿವಸವೂ ಮಾಲೆ ಮಾಡಿ ತರುತ್ತಿದ್ದರು ಅಗ್ನಿನಾರಾಯಣನಿಗೆ” ಎಂದು ಹೇಳಿ, “ವಾಮದೇವ ಮಹರ್ಷಿಗಳಿಂದ ನಿನಗಾಗಿ ಸಂದೇಶ ಬಂದಿದೆ. ಶಿಷ್ಯನೊಬ್ಬ ನಿನ್ನೆಯೇ ಬಂದ”-ದೇವದೇಮರು ಉಸಿರಿದರು.
ವಾಮದೇವರ ಹೆಸರು ಕೇಳುತ್ತಲೇ ರಾಣಿಯ ಚಿತ್ತ ಚುರುಕಾಯಿತು.
“ಏನು ಸಂದೇಶ?”
“ವಿಸ್ತಾರ ದೃಷ್ಟಿ ಇರಲಿ. ಬರಿ ನೆರೆಹೊರೆಯ ಚಿಂತೆಯಷ್ಟೇ ಮಹಾರಾಣಿಗೆ ಸಲ್ಲದು ಎಂದು ನಿನಗೆಯೇ ಹೇಳಲಿಕ್ಕೆಂದು ಸಂದೇಶ ಬಂದಿದೆ.”
“ಏನು ಇದರರ್ಥ.”
“ನನಗೂ ತಿಳಿಯದು. ನೀನು ನೆರೆಹೊರೆಯವರ ಚಿಂತೆ ಮಾಡಿದೆಯ?”
“ಹೌದು. ನಮ್ಮದು ಸಣ್ಣ ರಾಜ್ಯ. ನೆರೆಹೊರೆಯ ರಾಜ್ಯಗಳು ನಮಗೆ ಒಂದು ರೀತಿಯಿಂದ ಕವಚವಿದ್ದಂತೆ. ಭಿಲ್ಲರು ಶ್ರಾವಸ್ತಿಯನ್ನು ಸುಲಿದಾಗ ನನ್ನ ಸೇನೆ ಅದನ್ನು ಪರಿಹರಿಸಿತು. ಶ್ರಾವಸ್ತಿಯನ್ನು ಸುಲಿದ ಮೇಲೆ ಅವರು ನಮ್ಮ ಮೇಲೂ ಧಾಳಿ ಮಾಡಬಹುದಾಗಿತ್ತು. ಸುಭಾನು ನಮ್ಮ ನೆರವನ್ನು ಕೇಳಲಿಲ್ಲ. ನಾವೆ ಪಡೆಗಳನ್ನು ಕಳಿಸಿದೆವು. ಅದರಿಂದಾಗಿ ನಮ್ಮ ಪ್ರಾಪ್ತಿಯೂ ಹೆಚ್ಚಿತು.”
“ಮಗಳೇ, ನೀನು ಜಾಣೆ. ಸಂದೇಶವಂತೂ ಬಂದಿದೆ. ಅದರ ಅರ್ಥ ನನಗೆ ಆಗುತ್ತಿದೆ. ನಿನಗೆ ಏನು ಅರ್ಥವಾಗುತ್ತದೆಯೋ ಅದು ನಿನ್ನ ವಿಷಯ. ಹೆಚ್ಚಿಗೆ ಹೇಳಲಾರೆ. ಗ್ರಹಗಳಂತೂ ಇನ್ನೂ ಪರಚಕ್ರದ ಕಡೆಗೆ ತೋರಿಸುತ್ತಿವೆ.”
“ನಾನು ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲವೆ?”
“ನಾಳೆ ಬೆಳಿಗ್ಗೆ ಹಸಿದ ಹೊಟ್ಟೆಯಿಂದ ಬಾ. ಆಹಾರವನ್ನು ತೆಗೆದುಕೊಳ್ಳಬೇಡ.”
ಮರುದಿನ ಪುರುಕುತ್ಸಾನಿ ಉಪವಾಸವಿದ್ದು ಮಹರ್ಷಿಗಳ ದರ್ಶನಕ್ಕೆ ಬಂದಳು.
ಮಹರ್ಷಿಗಳು ರಾಣಿಯನ್ನು ಎದುರಿಗೆ ಕೂಡಿಸಿಕೊಂಡು ತುಸುಹೊತ್ತು ತಮ್ಮ ಗುರುಗಳನ್ನು ಕುರಿತು ಧ್ಯಾನ ಮಾಡಿದರು. ನಂತರ ಅವಳ ಕಡೆಗೆ ತೆವಳುಗಣ್ಣಿನಿಂದ ತುಸು ನೋಡಿದರು. ಅವಳ ಅಂತಃಕರಣವನ್ನು ಪ್ರವೇಶಿಸಿದರು. ಓರೆಕೋರೆಗಳನ್ನು ನೋಡಿದರು. ಅವಳ ದೈವರೇಷೆಗಳ ಪ್ರಕಾಶಮಯ ಕಿರಣಗಳನ್ನು ಕಂಡರು. ಅನಂತರ ಮೆಲುದನಿಯಲ್ಲಿ ಹೇಳಿದರು:
“ಮಗಳೇ, ಪಶ್ಚಿಮ ದಿಕ್ಕಿನ ಕಡೆಗೆ ತುಸು ಲಕ್ಷ ಹಾಯಿಸು. ಅದರ ಅರ್ಥವನ್ನು ಕೇಳಬೇಡ. ನಾವು ನಿನ್ನ ಅನುಭವದ ಮೇಲೆಯೇ ಕಟ್ಟುವವರು. ನಮ್ಮ ಅನುಭವವೇ ಬೇರೆ. ನಿನ್ನ ಅನುಭವದ ಅನುಸಾರವಾಗಿಯೇ ನೀನು ವಿಚಾರ ಮಾಡು. ಇಷ್ಟು ದಿನ ಪಶ್ಚಿಮ ದಿಕ್ಕಿಗೆ ಲಕ್ಶ್ಯವಿಟ್ಟಿದ್ದೀಯಾ?”
“ಇಲ್ಲ. ಅತ್ತ ಶರಭಾರಣ್ಯವಿದೆ. ನಂತರ ಶರವಣ ಅರಣ್ಯ ಬರುತ್ತದೆ. ಅಲ್ಲಿಂದ ಪರಚಕ್ರ ಸಾಧ್ಯವಿಲ್ಲ.”
“ಅಲ್ಲಿಂದಲೇ ಬರಬಹುದು.”
ತುಸು ಹೊತ್ತು ಮೌನವಾಗಿ ಇಬ್ಬರೂ ಕುಳಿತರು.
ಅನಂತರ ಪುರುಕುತ್ಸಾನಿ ನಮಸ್ಕಾರ ಮಾಡಿದಳು.
“ಪುತ್ರವತೀ ಭವ!”
ಎರಡೂ ಸಂದೇಶಗಳ ಅರ್ಥವಾಗಲಿಲ್ಲ..
ಊಟ ಮಾಡಿ ದೇವಿ ಅಮರು ಬಿಟ್ಟು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದಳು.
ಮಹಾರಾಜರು ಆಮ್ರವನಕ್ಕೆ ತೆರಳಿದರೆಂದು ಚೇಟಿ ಹೇಳಿದಳು.
ತಾರ್ಕ್ಷ್ಯನು ಜೋಲುಮೋರೆ ಹಾಕಿಕೊಂಡು ನಿಂತಿದ್ದನು. ಅವನ ಸಮೀಪ ಹೋಗಿ ಪ್ರಶ್ನಾರ್ಥಕವಾಗಿ ಹುಬ್ಬು ಏರಿಸಿದಳು.
“ಮತ್ತೆ ಅದೇ, ಮಹಾರಾಣಿ!”
’ಯಾರು’ ಎಂದು ಕೇಳುವ ಉಸಾಬರಿಗೆ ಪುರುಕುತ್ಸಾನಿ ಹೋಗಲಿಲ್ಲ. ಅಯೋಧ್ಯೆಯಲ್ಲಿ ಪೂರ್ಣಾಹುತಿಯ ದಿನವೇ ಆಕೆಗೆ ಸೂಚನೆ ಸಿಕ್ಕಿತ್ತು.
೨೩
ತಾರ್ಕ್ಷ್ಯನ ಮುಂದಾಳುತನದಲ್ಲಿ ಐವತ್ತು ಗುಪ್ತಚರರು ನಾನಾ ವೇಷಧಾರಿಗಳಾಗಿ ಯಾತ್ರಿಕರು, ಸಾಧುಗಳು, ಸನ್ಯಾಸಿಗಳು, ವರ್ತಕರು, ನಿರ್ಗತಿಕರು, ಕುದುರೆ ಮಾರುವವರು, ಬಳೆ-ಮಣಿ-ಮಾಂತ್ರಿಕ-ಮಂಗ ಆಡಿಸುವವರು-ಹಾವುಗಾರ-ಕರಡಿ ಕುಣಿತದವ, ನಟ-ಕೀರ್ತನಕಾರ-ಇಂಥಾ ಪ್ರಾರ್ಥನೆಗಳಲ್ಲಿ ಬಿಡಿಬಿಡಿಯಗಿ ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಿದರು. ದ್ವಾರಕೆಯಿಂದ ಹಿಡಿದು ಗಾಂಧಾರದವರೆಗೆ ನಾನಾ ದೇಶ ಸಂಚರಿಸಿ ಬಂದರು. ಭೃಗುಕಚ್ಚ, ಮಾಳವ, ಆವಂತಿ, ಹಸ್ತೀನಾಪುರ, ಕುರುಪಾಂಚಾಲ, ಕ್ರಿವಿ, ಪಂಚನದ, ಅಹಿಚ್ಚತ್ರ, ಕಾಶ್ಮೀರ, ಕುರುಜಾಂಗಲ, ತಕ್ಶಕ, ಮಿಥಿಲೆ, ಮದ್ರ, ಶಕ, ಹರಿಯೂಪಿಯ, ತ್ರಿಪುರ(ಪಶ್ಚಿಮ), ಔದುಂಬರ, ಕೈಕಯ, ಅಂಬಷ್ಟ, ಬರ್ಬರ, ಬಹ್ಲೀಕ, ಮ್ಲೇಚ್ಚ, ಮತ್ಸ್ಯ-ಎಲ್ಲ ಸಂಚರಿಸಿ ಬಂದರು.
ಯಾವ ನಾಡಿನಲ್ಲೂ ಅಶಾಂತಿ, ಯುದ್ಧಸನ್ನಾಹ, ದಂಡಯಾತ್ರೆ, ರಾಜಸೂಯ, ಸೈನ್ಯ ಜಮಾವಣೆಯ ಲಕ್ಷಣಗಳು ಕಂಡು ಬರಲಿಲ್ಲ.
ಅಯೋಧ್ಯೆ ಭದ್ರವಾಗಿತ್ತು. ಶಾಂತಿ ಸುವ್ಯವಸ್ಥೆ ನೆಲೆಗೊಂಡಿತ್ತು. ಭರ ಭರಾಟಿಯೊಂದಿಗೆ ಶಸ್ತ್ರಾಸ್ತ್ರಗಳ ಸಂಗ್ರಹಣೆ, ಗುಪ್ತ ಸೈನ್ಯಜಮಾವಣೆಯ ಭರ ಭರಾಟಿಯೂ ನಡೆದಿತ್ತು.
ಮಹಾರಾಣಿಯ ಅಳುಕು ಮರೆಯಾಗಲಿಲ್ಲ. ದೇಶ ವಿದೇಶಗಳ ಚಿಂತೆಯಲ್ಲದೆ ಕೌಟುಂಬಿಕ ಚಿಂತೆಯೂ ಮಹಾರಾಣಿಯ ಮನಸ್ಸಿನಲ್ಲಿ ತಾಂಡವವಡುತ್ತಿತ್ತು.
ಹೊರಗೆಲ್ಲ ಶಾಂತಿ ನೆಲೆಸಿರುವಾಗ ಅಯೋಧ್ಯೆಯ ಒಂದು ಹೃದಯ ಮಾತ್ರ ಪರಿತಪಿಸುತ್ತಿತ್ತು.
*****
ಮುಂದುವರೆಯುವುದು
ಕೀಲಿಕರಣ ದೋಷ ತಿದ್ದುಪಡಿ: ಶ್ರೀಶ ಕಾರಾಂತ್