ನರ್ಮದಾ ಬಚಾವ್ ಆಂದೋಳನದ ಮೇಧಾ ಪಾಟ್ಕರ್ ಈಗೇನು ಮಾಡುತ್ತಾರೆ? ತಮ್ಮ ಹೋರಾಟವನ್ನ ಯಾವ ದಿಕ್ಕಿನಲ್ಲಿ ತಿರುಗಿಸುತ್ತಾರೆ? ಅಣೆಕಟ್ಟಿನ ಕಲಸ ಮುಂದುವರಸಬಹುದೆಂಬ ಸುಪ್ರೀಂ ಕೋರ್ಟಿನ ತೀರ್ಪು ಬಂದಕೂಡಲೇ ಗುಜರಾತ್ ರಾಜ್ಯದಲ್ಲಿ ಅನೇಕ ಕಡೆ ಪಟಾಕಿ ಹಚ್ಚಿ ಸಿಹಿ ಹಂಚಿ ಜನ ತಮ್ಮ ಖುಷಿಯನ್ನ ವ್ಯಕ್ತಪಡಿಸಿದರೆ, ಅತ್ತ ಮೇಧಾ ಪಾಟ್ಕರ್ ಮತ್ತು ಅರುಂಧತಿ ರಾಯ್ ದುಃಖದಿಂದ, ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಮೇಧಾಗಂತೂ ಇಂದು ತಮ್ಮ ಜೀವನದ ಗುರಿಯೇ ಕಳಚಿಬಿದ್ದಂತಾಗಿದೆ. ಅರುಂಧತಿ ರಾಯ್ ಬಗ್ಗೆ ಕಡಿಮೆ ಮಾತಾಡಿದಷ್ಟೂ ಒಳ್ಳೆಯದು – ಆಕೆ ಈ ಆಂದೊಳನಕ್ಕೆ ತನ್ನ ಬುಕರ್ ಬಹುಮಾನದ ಖ್ಯಾತಿಯ ನೆರಳನ್ನ ಹಿಂಬಾಲಿಸುತ್ತಾ ನಂತರ ಬಂದಾಕೆ.
ಮೇಧಾ ಹಿಡಿದ ದಾರಿ ಮೊದಲಿನಿಂದಲೂ ಕಠಿಣವಾದದ್ದು. ಇದು ಅಂತಿಮವಾಗಿ ದುಃಖ, ದುಗುಡ, ನಿರಾಶೆ ಕೊಡುವ ದಾರಿಯೇ ಆಗಿತ್ತು. ಯಾವುದೇ ಒಂದು ದೊಡ್ಡ ವಿಷಯಕ್ಕೆ ವಿರುದ್ಧವಾದ ನಿಲುವು ತೆಗದುಕೊಂಡು ಹಠಹಿಡಿದಂತೆ, ಚಂಡಿ ಹಿಡಿದಂತೆ ಮಾಡಿದರೆ – ಅದನ್ನೇ ಜೀವನದ ಧ್ಯೇಯ ಮಾಡಿಕೊಂಡರೆ, ಚಡಪಡಿಕೆ ತಪ್ಪಿದ್ದಲ್ಲ. ಜೊತೆಗೆ ಒಂದು ನಿಲುವು ತೆಗೆದುಕೊಂಡು ನಿಲುವಿನ ಪರ ಅತಿರೇಕಕ್ಕೆ ಹೋದಾಗ ಸಿಗುವ ಫಲ – ಅದೂ ಅಕಸ್ಮಾತ್ ಸಿಕ್ಕರೆ – ತಾತ್ಕಾಲಿಕವಾದದ್ದಾಗಿರುತ್ತದೆಂದು ನಮಗೆ ಚರಿತ್ರೆ ತೋರಿಸಿಕೊಟ್ಟಿದೆ. ಈಗ ಉಚ್ಚ ನ್ಯಾಯಾಲಯ ಅಣೆಕಟ್ಟು ಕಟ್ಟಲು ಪರವಾನಗಿ ನೀಡಿರುವುದರಿಂದ ಮೇಧಾರಿಗೆ ಸಕಾರಣವಾಗಿ ತಮ್ಮ ಹೋರಾಟ ಮುಂದುವರೆಸಲು ಅನುಕೂಲವಾಗಿದೆ. ಅಕಸ್ಮಾತ್ ನ್ಯಾಯಾಲಯ ನರ್ಮದಾ ಆಂದೋಳನದ ಪರವಾಗಿ ತೀರ್ಪಿತ್ತಿದ್ದರೆ ಆಗ ಏನಾಗಬಹುದಿತ್ತು ಉಹಿಸಿಕೊಳ್ಳಿ… ನರ್ಮದಾ ಬಚಾವಾಯಿತು! ಇನ್ನು ಆಂದೋಳನ ಯಾವುದರ ಬಗ್ಗೆ? ಇಂಥ ಪರಿಸ್ಥಿತಿಯಲ್ಲಿ ಅರುಂಧತಿ ರಾಯ್ ಅಂತಹ ಜನ ತಮ್ಮ ಹಳೇ ಕೆಲಸಕ್ಕೆ ವಾಪಸ್ಸಾಗಿ ಮತ್ತೊಂದು ಕಾದಂಬರಿ ಬರೆಯಬಹುದು – ಆದರೆ ನರ್ಮದಾ ಆಂದೋಳನ ಈಕ್ವಲ್ಸ್ ಮೇಧಾ, ಮೇಧಾ ಈಕ್ವಲ್ಸ್ ನರ್ಮದಾ ಎಂಬಂತಹ ಇಮೇಜಿರುವ ಈಕೆ ಏನು ಮಾಡುತ್ತಾರೆ?
ಹಾಗೆ ನೋಡಿದರೆ ಮೇಧಾರ ಹೋರಾಟದ ಜೀವನದ ದೃಷ್ಟಿಯಿಂದ ಈ ತೀರ್ಪು ಆಕೆಗೆ ಜೀವನದಾನವನ್ನ ಮಾಡಿ ಆಕೆ ಹೋರಾಡುತ್ತಿರುವ ಮೂಲಭೂತ ವಿಷಯವನ್ನ ಜೀವಂತವಾಗಿಟ್ಟಿದೆ ಎನ್ನಬಹುದು. ಈಗ ಗುಜರಾತ್ ಸರಕಾರ ಅಣೆಕಟ್ಟು ಕಟ್ಟಿ ಮುಗಿಸುವವರೆಗೂ ಆಕೆಗೆ ಒಂದು ಎಜೆಂಡಾ ಇದೆ. ಆ ನಂತರವೂ ಪುನರ್ವಸತಿಯ ಮಾತು ಮುಂದುವರೆಸಬಹುದು. ಆದರೆ ಅಣೆಕಟ್ಟಿನ ಎತ್ತರ ಜಾಸ್ತಿ ಮಾಡಲು ಪರವಾನಗಿ ಕೊಡದೇ ಇದ್ದಿದ್ದರೆ ಈ ಹೆಚ್ಚಿನ ಉದ್ದೇಶ ನಾಪತ್ತೆಯಾಗಿಬಿಡುತ್ತಿತ್ತು.
ಒಂದು ರೀತಿಯ ವಿಪರೀತ ನಿಲುವು ತೆಗೆದುಕೊಳ್ಳುವುದು ಮೇಧಾರಿಗೆ ಹೊಸದೇನೂ ಅಲ್ಲ. ಬಹುಶಃ ಆಕೆ ಹೋರಾಡುತ್ತಿರುವ ವಿಷಯಕ್ಕೆ ಇಂಥ ನಿಲುವಿನ ಅವಶ್ಯಕತೆಯಿದ್ದೀತು. ಯಾವುದೇ ವಿಷಯದ ಚರ್ಚೆ ಇಂಥ ವಿಪರೀತ ನಿಲುವಿನಿಂದಲೇ ಪ್ರಾರಂಭವಾಗಿ ಹಂತಹಂತವಾಗಿ ಒಂದೊಂದೇ ಉಪವಿಷಯಗಳಲ್ಲಿ ರಾಜಿ ಅಥವಾ ಒಪ್ಪಂದ ತಲುಪುವ ಪ್ರಾಸೆಸ್ ಆಗಿರುತ್ತದೆ. ಆದರೆ ಮೇಧಾ ಮೊದಲಿನಿಂದಲೂ ಏನನ್ನೂ ಬಿಟ್ಟುಕೊಡಲು ತಯಾರಿರಲೇ ಇಲ್ಲ ಎಂಬಂಥ ಇಮೇಜನ್ನ (ಇದು ನಿಜವೂ ಇರಬಹುದು) ಜನರ ಮುಂದಿಟ್ಟಿದ್ದಾರೆ. ಹಾಗೆ ನೋಡಿದರೆ ನರ್ಮದಾ ಆಂದೋಳನ ಪ್ರಾರಂಭವಾದಾಗ ಚರ್ಚೆಗೊಳಗಾಗುತ್ತಿದ್ದ ಮುಖ್ಯ ವಿಷಯ ಪರಿಸರದ ಸಮತೋಲನದಲ್ಲಿ ಆಗಬಹುದಾದ ಏರುಪೇರಿನ ಬಗ್ಗೆಯಿತ್ತು. ಟೆಹರಿ ಅಣಕಟ್ಟಿನ ವಿಷಯವೂ ಇದೇ ಕಾರಣಕ್ಕಾಗಿ ಸುಂದರಲಾಲ್ ಬಹುಗುಣರಂತಹ ಪರಿಸರವಾದಿಗಳನ್ನು ಆಕರ್ಷಿಸಿತ್ತು.
ಆದರೆ ಜನಸಮೂಹವನ್ನು ಆಕರ್ಷಿಸಿ ಯಾವುದೇ ಆಂದೋಳನವನ್ನ ಜನಪ್ರಿಯ ಮಾಡಬೇಕಾದರೆ ತಕ್ಷಣದ ವಿಷಯವನ್ನ ದೂರದೃಷ್ಟಿಯ ಜೊತೆಗೆ ಸೇರಿಸದಿದ್ದರೆ ಕೈಯೆಣಿಕೆಯ ಕೆಲ ಬುದ್ಧಿಜೀವಿಗಳಷ್ಟೇ ಆ ಆಂದೋಳನದಲ್ಲಿ ಉಳಿದು ಬಿಡುತ್ತಾರೆ. ಇದನ್ನು ಮೇಧಾ ಬಹುಶಃ ಬಹುಬೇಗ ಕಂಡುಕೊಂಡರು ಅನ್ನಿಸುತ್ತದೆ. ಜೊತೆಗೆ ಕೋರ್ಟು ಕಛೇರಿಗಳಲ್ಲಿ ವಾದವಿವಾದ ಮಾಡುವಾಗಲೂ – ಮೂವತ್ತು ವರ್ಷಗಳ ನಂತರ ಆಗಬಹುದಾದ ಪರಿಸರದ ಏರುಪೇರಿನ ಬಗ್ಗೆ ಮಾತ್ರ ಚರ್ಚೆ ನಡೆಸುವುದಕ್ಕಿಂತ ನಾಳೆಯೇ ಆಗಬಹುದಾದ ಅನಾಹುತದ ಬಗ್ಗೆಯೂ ಮಾತನಾಡಿದರೆ ತಕ್ಷಣದ ಸಮಾಧಾನವೂ ಸಿಗಬಹುದು. ಸಮಯಕಳೆದಂತೆ ಆದಿವಾಸಿಗಳ ಪುನರ್ವಸತಿ ಚರ್ಚೆಯ ಮುಖ್ಯವಿಷಯವಾಗುತ್ತಾ ಹೋದದ್ದನ್ನ ನಾವು ಈ ಆಂದೋಳನದಲ್ಲಿ ಕಾಣಬಹುದು.
ಮೇಧಾರಂತಹ ಜನ ಕೈಹಿಡಿದಿರುವ ವಿಷಯ ಸರಳವಾದದ್ದೇನೂ ಅಲ್ಲ. ಹೀಗಾಗಿ ಸಣ್ಣ ಮಕ್ಕಳಂತೆ, ಒಂದು ವಿಚಾರದ ಬಗ್ಗೆ ಸಂಪೂರ್ಣ ಚರ್ಚೆಯಾಗುವುದಕ್ಕೆ ಮೊದಲೇ ಮತ್ತೊಂದು ವಿಷಯ ಎತ್ತಿ ಚಂಡಿ ಹಿಡಿಯುವ ಪ್ರಾಸೆಸ್ ನಮಗೆ ಕಾಣುತ್ತದೆ. ಒಂದು ಕಡೆ ಕೋರ್ಟು, ಕೇಂದ್ರ ಸರಕಾರ, ಮಧ್ಯಪ್ರದೇಶ ಸರಕಾರ ಮತ್ತು ಗುಜರಾತ್ ಸರಕಾರ ಈ ಅಣೆಕಟ್ಟಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಈಗ ಅಣೆಕಟ್ಟಿನ ಎತ್ತರ ಬೆಳೆಸಿದರೆ – (ಅದಕ್ಕಾಗಿ ಅಕ್ಟೋಬರ್ ೩೧, ಸರದಾರ್ ಪಟೇಲರ ಹುಟ್ಟುಹಬ್ಬದಂದು ಪೂಜೆ ನಡೆದು ಕಲಸ ಪ್ರಾರಂಭಮಾಡಿದ್ದಾಗಿದೆ) ಅದರ ಹೆಚ್ಚಿನ ಪ್ರಯೊಜನ ಗುಜರಾತಿನ ಜನಕ್ಕೆ – ಮುಖ್ಯವಾಗಿ ಬರಪೀಡಿತವಾಗಿರುವ ಸೌರಾಷ್ಟ್ರ ಪ್ರದೇಶಕ್ಕೆ ಆಗುವುದೂಂತ ಹೇಳಲಾಗಿದೆ. ಆದರೆ ಪುನರ್ವಸತಿಯ ಕಾರ್ಯದಲ್ಲಿ ಮಧ್ಯಪ್ರದೇಶ (ಅಲ್ಲಿಯ ಹಳ್ಳಿಗಳೂ ಮುಳುಗುವುದರಿಂದ) ಹಾಗೂ ಗುಜರಾತ್ ಸಹಭಾಗಿಗಳಾಗಿರಬೇಕು. ಪುನರ್ವಸತಿಗೆ ತಮ್ಮಲ್ಲಿ ಜಮೀನಿಲ್ಲವೆದು ಮಧ್ಯಪ್ರದೇಶದ ಮುಖ್ಯಮಂತ್ರಿ ಕೆಲದಿನಗಳ ಹಿಂದೆ ಒಂದು ಹೇಳಿಕೆ ಕೊಟ್ಟು ದೊಡ್ಡ ಬಾಂಬನ್ನೇ ಹಾಕಿದ್ದಾರೆ. ಹೀಗಾಗಿ ಈ ಅಣೆಕಟ್ಟಿನ ಎತ್ತರ ಬೆಳೆಸುವ ಬಗ್ಗೆ ಮಧ್ಯಪ್ರದೇಶ ಸರಕಾರದ ಉತ್ಸಾಹ ಗುಜರಾತ್ ಸರಕಾರದಷ್ಟು ಇಲ್ಲ. ಆದರೆ ಮೇಧಾರ ಕರ್ಮಭೂಮಿ, ಉಪವಾಸ ಸತ್ಯಾಗ್ರಹಗಳು ಮಧ್ಯಪ್ರದೇಶದಲ್ಲಿ ನಡೆಯುತ್ತವೆಯೇ ಹೊರತು ಗುಜರಾತಿನಲ್ಲಿ ಅಲ್ಲ. ಯಾಕೆ?
ಹಲವು ವರ್ಷಗಳ ಹಿಂದೆ ಶೂಲಪಾಣೇಶ್ವರ ದೇವಾಲಯ ಮುಳುಗಡೆಯಾಗುವಾಗ ತಾವು ಅಲ್ಲಿ ಆತ್ಮಸಮರ್ಪಣೆ ಅಥವಾ, ಆಕೆಯ ಭಾಷೆಯಲ್ಲಿ ಜಲಸಮಾಧಿ – ಮಾಡಿಕೊಳ್ಳುವೆನೆಂದು ಹೇಳಿದ ಮೇಧಾ, ಅಂಥ ದುಸ್ಸಾಹಸಕ್ಕೆ ಕೈ ಹಾಕದೇ ಚರ್ಚ್‌ಗೇಟ್ ಮುಂಬಯಿಯಲ್ಲಿ ಉಪವಾಸ ಕೂತರು. ಈಗ ಭೋಪಾಲದಲ್ಲಿ ೫ ದಿನದ ಉಪವಾಸ ಮಾಡಿದರು. ಮೇಧಾ ಯಾಕೆ ಅಣೆಕಟ್ಟಿನ ಕಲಸ ಆಗತ್ತಿರುವ (ಕೇವಡಿಯಾ ಕಾಲೋನಿ) ಸ್ಥಳದ ಹತ್ತಿರ ಉಪವಾಸ ಕೂಡುವುದಿಲ್ಲ, ಕಡೆಗೂ ಆತ್ಮಾಹುತಿಯ ಸಾಹಸಕ್ಕೆ ಯಾಕೆ ಕೈ ಹಾಕಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟದ ಕೆಲಸವೇನೂ ಅಲ್ಲ. ಕೇವಡೀಯಾ ಕಾಲೋನಿಯಲ್ಲಿ ಉಪವಾಸ ಕೂತರೆ ಪತ್ರಕರ್ತರು ಅಷ್ಟುದೂರ ಹೋಗಿ ಈ ಬಗ್ಗೆ ವರದಿ ಮಾಡಲಾರರು, ಇವರ ಚಿತ್ರ ಛಾಪಿಸಲಾರರು. ಉಪವಾಸದ ಮುಖ್ಯ ಉದ್ದೇಶ ಜನರಿಗೆ ನಾಯಕರಿಗೆ ಈ ಸಂದೇಶ ಮುಟ್ಟಿಸುವುದೇ ಆಗಿರುವುದರಿಂದ ಇವುಗಳು ಜನರಿರುವ ಜಾಗದಲ್ಲಿ, ಸರಕಾರದ ಗಮನ ಸೆಳೆವ ಜಾಗದಲ್ಲಿ ಆಗುತ್ತದೆ. ಇಂಥ ಆಂದೊಳನಗಳಿಗೆ ಆತ್ಮಾಹುತಿ ಒಂದು ಪರಿಹಾರವೂ ಅಲ್ಲ. ಮೇಧಾರ ಆತ್ಮಾಹುತಿಯಾದರೆ ಅದು ಹೋರಾಟದ ಅಂತ್ಯವೂ ಆಗಿಬಿಡುತ್ತದೆ. ಈಗಲೂ ಆತ್ಮಾಹುತಿಯ ಮಾತುಗಳು ಕೇಳಿಬರುತ್ತಿವೆ – ಆದರೂ ಆತ್ಮಾಹುತಿ ಹೆಚ್ಚೂ ಕಡಿಮೆ ಸೋಲನ್ನೊಪ್ಪಿದಂತೆಯೆ ಎಂದು ನಾವುಗಳು ನೆನಪಿಡಬೇಕು. ಯಾವುದೇ ಮಾತುಕತೆಯ, ಲೇನ್‌ದೇನ್ ಕಾರ್ಯಕ್ರಮದಲ್ಲಿ ಮೊದಲಿಗೇ ವಿಪರೀತ ನಿಲವು ತಗೆದುಕೊಳ್ಳಬಾರದೆಂಬ ಪಾಠವನ್ನು ಮಾತ್ರ ಮೇಧಾ ಕಲಿತಿಲ್ಲವೆಂದೇ ಹೇಳಬೇಕು.
ಆದರೆ ಈಗ ಆಂದೋಳನ ಒಂದು ವಿಚಿತ್ರ ಹಂತ ತಲುಪಿಬಿಟ್ಟಿದೆ. ಈಗ ಮೇಧಾ ಮತ್ತು ಆಂದೋಳನಕಾರರು ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆಯಿಡಬೇಕಾಗುತ್ತದೆ. ಪರಿಸರ, ಪುನರ್ವಸತಿ – ಎರಡರ ಬಗೆಗೂ ಒಂದೇ ಧ್ವನಿಯಲ್ಲಿ ಮಾತನಾಡದೇ ಪುನರ್ವಸತಿಯ ವಿಷಯವನ್ನ ಪಟ್ಟಾಗಿ ಹಿಡಿದು, ಸರಕಾರದಿಂದ ಕೆಲಸ ತೆಗೆಯುವ ಅಜೆಂಡಾ ಯಾರಾದರೂ ಕೈ ಹಿಡಿಯಲೇ ಬೇಕಾಗಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಕೆಲಸ ತಕ್ಷಣ ಪ್ರಾರಂಭಮಾಡಿ ಗುಜರಾತಿನ ಬಿಜೆಪಿ ಸರಕಾರ ತನ್ನ ಆಂತರಿಕ ಸಮಸ್ಯೆಗಳನ್ನ, ಈಚೆಕೆ ಪಂಚಾಯತಿ, ಮುನಿಸಿಪಲ್ ಚುನಾವಣೆಗಳಲ್ಲಿ ಮಣ್ಣು ಮುಕ್ಕಿದ ವಿಷಯವನ್ನ ಮರೆತು ಹೊಸ ಚೈತನ್ಯದಿಂದ ಮುಂದುವರೆಯುತ್ತಿದೆ. ಎನ್‌ಬಿಎ ಆಂದೋಳನಕಾರರು ಸ್ವಲ್ಪ ದಿಕ್ಕೆಟ್ಟವರಂತೆ ಕಾಣುತ್ತಿದ್ದಾರೆ….
ಉಚ್ಚ ನ್ಯಾಯಾಲಯದ ತೀರ್ಪಿನಿಂದ ಕೋಪಗೊಂಡಿರುವ ಆಂದೋಳನದವರು ಇದು ತಮಗೆ ಒಪ್ಪಿಗೆಯಿಲ್ಲವೆಂದು ಪಟ್ಟುಹಿಡಿದು ಕೂತಿದ್ದಾರೆ. ಕೋರ್ಟಿನಿಂದ ತೀರ್ಪು ಬಂದ ಮೇಲೆ – ಇದು ಒಪ್ಪಿಗೆಯಿಲ್ಲವೆಂದು ಹೇಳುವುದು ಎಷ್ಟು ಸಮಂಜಸ? ತಮಗೆ ವ್ಯತಿರೇಕವಾಗಿ ಬಂದಿದ್ದು ಗುಜರಾತ್ ಸರಕಾರವೂ ಇದೇ ನಿಲುವನ್ನ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು? ನ್ಯಾಯಪಾಲಿಕೆಯಂಥಹ ಸಂಸ್ಥೆಯ ತೀರ್ಪನ್ನ “ಟಿoಣ ಚಿಛಿಛಿeಠಿಣಚಿbಟe ಣo ಣhe ಚಿಜಿಜಿeಛಿಣeಜ ಠಿeoಠಿಟe” ಎಂಬಂತ ನಿಲುವನ್ನ ಬುದ್ಧಿಜೀವಿಗಳಾದ ಮೇಧಾರಂತಹವರು ತೆಗೆದುಕೊಂಡಾಗ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿರುವವರೆಲ್ಲ ಎದ್ದು ಕೂತುಕೊಳ್ಳುವ ಸಮಯ ಬರುತ್ತದೆ. ಆದರೆ ತೀರ್ಪು ಬಂದಕೂಡಲೇ ಮೇಧಾ ಹಾಗೆ ಪ್ರತಿಕ್ರಯಿಸಿದರೂ, ಈಚೆಗೆ ಕೊಟ್ಟ ಸಂದರ್ಶನವೊಂದರಲ್ಲಿ ತಮ್ಮ ಮುಂದಿರುವ ಸಂವಿಧಾನಬದ್ಧ ದಾರಿಗಳನ್ನ ಚರ್ಚಿಸಿರುವುದು ಒಳ್ಳಯದೇ ಆಗಿದೆ. ಇಲ್ಲವಾದಲ್ಲಿ ಮೇಧಾ ಮತ್ತು ಆಂದೊಳನದವರು ತಮಗೆ ಭಾರತ ಸಂವಿಧಾನದ ವ್ಯವಸ್ಥೆಯ ಬಗ್ಗೆಯೇ ನಂಬಿಕೆಯಿಲ್ಲವೆಂದು ಹೇಳಿದಂತಾಗುತ್ತಿತ್ತು.
ಅಕಸ್ಮಾತ್ ಆಂದೋಳನ ಈ ದಾರಿ ಹಿಡಿದರೆ, ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸುವ ಹಂತ ತಲುಪಿದರೆ ಬಹುಶಃ ಮೇಧಾರಿಗೆ ಈಗಿರುವ ಸಪೂರ್ಟ್ ಕೂಡಾ ಕಡಿಮೆಯಾಗುವ ಅಪಾಯವಿದೆ.
ಮೇಧಾ ಕೋರ್ಟಿನ ಬಗ್ಗೆ ತಮಗೆ ನಂಬಿಕೆಯಿಲ್ಲವೆಂದಮಾತ್ರಕ್ಕೆ ಆಕೆ ಚರ್ಚಿಸುತ್ತಿರುವ ಮೂಲಭೂತ ವಿಷಯಗಳ ಮಹತ್ವ ಕಡಿಮೆಯಾಯಿತೆಂದು ಯಾರೂ ನಂಬಬಾರದು. ಆದರೆ ನಾವುಗಳು ನಮ್ಮಲ್ಲರ ಜೀವನವನ್ನ ಒಂದು ಪ್ರಜಾತಾಂತ್ರಿಕ ಚೌಕಟ್ಟಿನೊಳಗೆ ಬದುಕಲು ನಮ್ಮ ಸಂವಿಧಾನವನ್ನ ರೂಪಿಸಿರುವುದರಿಂದ, ಈ ಸಂಸ್ಥೆಗಳ ಉದ್ದೇಶವನ್ನ ಪ್ರಶ್ನಿಸುವುದು – ಅದರಲ್ಲೂ ಮೇಧಾ, ಅರುಂಧತಿಯಂತಹ ಬುದ್ಧಿಜೀವಿಗಳು ಇದನ್ನ ಪ್ರಶ್ನಿಸುವುದು ಬಹಳ ಭಯಾನಕವಾದ ಪರಿಸ್ಥಿತಿಯನ್ನುಂಟುಮಾಡುತ್ತದೆ. ತಮಾಷೆಯೆಂದರೆ ಇಂಥಹ ಒಂದು ತೀರ್ಪು – ಕಾನೂನಿನ ತಕ್ಕೆಗೇ ಸಿಗಲಾರರು ಎಂದು ಭಾವಿಸಿದ್ದ ಮಾಜಿ ಪ್ರಧಾನಿ ನರಸಿಂಹರಾವ್, ಜಯಲಲಿತಾರು ಜೈಲಿನ ಬಾಗಿಲು ತಟ್ಟುತ್ತಿರುವ ಸಂದರ್ಭದಲ್ಲಿ – ನ್ಯಾಯಪಾಲಿಕೆಯ ವ್ಯವಸ್ಥೆಯಲ್ಲಿ ನಂಬಿಕೆ ಮರುಕಳಿಸುತ್ತಿರುವ ಸಂದರ್ಭದಲ್ಲಿ, ಬಂದಿದೆ. ದೊಡ್ಡ ನೀರಾವರಿ ಯೋಜನೆಗಳು, ಅಣೆಕಟ್ಟುಗಳು ಎಷ್ಟು ಜಟಿಲವಾದ ವಿಷಯವೆಂದು ನಿರೂಪಿಸಲೋ ಎಂಬಂತೆ ಉಚ್ಚನ್ಯಾಯಾಲಯದ ತೀರ್ಪೂ ಸರ್ವಾನುಮತದಿಂದ ಕೂಡಿಲ್ಲ. ಮೇಧಾ ಈ ಭಿನ್ನಾಭಿಪ್ರಾಯವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ!
ಈ ಎಲ್ಲ ಜನಾಂದೋಳನಗಳೂ ಎರಡು ಧಾರೆಗಳನ್ನ ನಮ್ಮ ಮುಂದಿಡುತ್ತದೆ. ಜನಾಂದೊಳನಗಳಲ್ಲಿ ಬರಬಹುದಾದ ಸಣ್ಣಪುಟ್ಟ ಆಂದೊಳನಗಳನ್ನ ಸದ್ಯಕ್ಕೆ ಬಿಟ್ಟು ಬಿಡೋಣ. ದೊಡ್ಡ (ನರ್ಮದಾದಂತಹ) ಆಂದೋಳನಗಳಲ್ಲಿ ನಾವು ಯಾವುದಾದರೂ ಒಂದು ವಿಚಾರದ “ಪರ” ವಾಗಿ ಹೋರಾಡುವಾಗ, ಸೋಲೆಂಬುದು ಇಲ್ಲವೇ ಇಲ್ಲ. ಉತ್ತರಾಖಂಡ್, ಜಾರ್‌ಖಂಡ್, ಗೊರ್ಖಾಲ್ಯಾಂಡ್… ಇತ್ಯಾದಿ ಆಂದೋಳನಗಳನ್ನ ತೆಗೆದುಕೊಂಡರೆ ಬೇರೆ ಬೇರೆ ಹಂತದಲ್ಲಿ (ಸಂವಿಧಾನಾವನ್ನ ಒಪ್ಪಿ, ಅದರ ಚೌಕಟ್ಟಿನೊಳಗೆ ಕೆಲಸ ಮಾಡಲು ತಯಾರಾದಾಗ) ಅದರ ನಾಯಕರು – ಆ ವಿಚಾರಧಾರೆ – ಸಫಲತೆ ಪಡೆದದ್ದನ್ನ ನೋಡಬಹುದು. ಸಫಲತೆ ಪಡೆಯದ ವಿದರ್ಭ, ತೆಲಂಗಾಣಾ, ಕೊಡಗು ಇತ್ಯಾದಿಗಳು ಎಂದಿಗೂ “ಟosಣ ಛಿಚಿuse” ಆಗುವುದೇ ಇಲ್ಲ.. ಎಲ್ಲಿಯವರೆಗೆ ಅದು ಸಫಲವಾಗುವುದಿಲ್ಲವೋ ಅಲ್ಲಿಯವರೆಗೆ ಅದರ ನಾಯಕರ ಕೆಲಸ ಮುಂದುವರೆಯುತ್ತಲೇ ಇರುತ್ತದೆ. ಅದು ಸಫಲವಾದಾಗ ಅದನ್ನ ಕಟ್ಟುವ ಕಾಪಾಡುವ ಕೆಲಸ ಮಾಡಬಹುದು (ದುರಾದೃಷ್ಟದಿಂದ ಅದರ ನಾಯಕತ್ವ ಆಂದೋಳನಕಾರರಿಗೆ ಸಿಗದಿರಲೂಬಹುದು – ಜಾರ್‌ಖಂಡ್‌ನಲ್ಲಿ ಶಿಬೂ ಸೋರೆನ್‌ಗೆ ಆದ ಹಾಗೆ..)
ಅದೇ ಯಾವುದೇ ವಿಷಯಕ್ಕೆ ವಿರುಧ್ಧವಾಗಿ ಕೆಲಸ ಮಾಡಿದಾಗ – ಸಫಲತೆ ಪ್ರಾಪ್ತವಾದರೂ ಅದು ಒಂದು “ಜeಚಿಜ eಟಿಜ” ಆಗಿಬಿಡುತ್ತದೆ. ನರ್ಮದಾ ಅಣೆಕಟ್ಟು ನಿಲ್ಲಿಸಿಬಿಟ್ಟರೆ ಇಂಥದೇ ಕೆಲಸದ ಮೇಲೆ ತಮ್ಮಿಡೀ ಜೀವನವನ್ನ ಕಳೆದಿರುವ ಮೇಧಾ ಏನು ಮಾಡುತ್ತಾರೆ… ಬೇರೊಂದು ಅಣೆಕಟ್ಟನ್ನ ವಿರೋಧಿಸುತ್ತಾರೆಯೇ, ಅಥವಾ ವ್ಯವಸ್ಥೆಯ ಮುಖ್ಯಧಾರೆಯಲ್ಲಿ ಬೆರೆತು ಹೋಗುತ್ತಾರೆಯೇ…
ಸ್ವಾತಂತ್ರ ಸಂಗ್ರಾಮದಂತಹ ಹೋರಾಟಗಳು ಬೇರೆಯೇ ಸ್ಥರದವು – ಅಲ್ಲಿ ಹೋರಾಟಗಾರರು ಕೈಗತ್ತಿಕೊಂಡಿರುವ ವಿಷಯ ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸಿ, ಅದರೊಂದಿಗಿನ ಕೊಂಡಿಗಳನ್ನು ಮುರಿಯುವುದೇ ಆಗಿದೆ. ಆ ಸಂದರ್ಭದಲ್ಲಿ ಮೂಲಭೂತ ಉದ್ದೇಶವೇ ಇರುವ ವ್ಯವಸ್ಥೆಯನ್ನ ಪ್ರಶ್ನಿಸುವುದಾಗಿರುತ್ತದೆ. ಇಂಥ ಸಂಗ್ರಾಮಗಳಲ್ಲಿ – ಒಂದು ಭೂಪ್ರದೇಶ ಹಂಚಿಹೋಗಬಹುದು (ರಷ್ಯಾ, ಯುಗೋಸ್ಲಾವಿಯಾ…) ಅಥವಾ ಸಂವಿಧಾನವೇ ಬದಲಾಗಬಹುದು (ದಕ್ಷಿಣ ಆಫ್ರಿಕಾ). ಆದರೆ ಮೇಧಾ ಎತ್ತಿರುವ ವಿಷಯ ಆ ದೃಷ್ಟಿಯಿಂದ ಪರಿಸರ ಮತ್ತು ದೊಡ್ಡ ಅಣಕಟ್ಟುಗಳಿಂದ ಆಗಬಹುದಾದ ಕಷ್ಟನಷ್ಟಗಳಿಗೆ ಸೀಮಿತವಾಗಿದೆ.
ಇಲ್ಲಿ ಗುಜರಾತಿನಲ್ಲಿ ಎಲ್ಲರೂ ಕೋರ್ಟಿನ ತೀರ್ಪಿನಿಂದ ಖುಷಿಗೊಂಡಿದ್ದಾರೆ. ಇದೊಂದು ಮರೀಚಿಕೆಯಂತೆ ಎಲ್ಲರಿಗೂ ಕಾಣುತ್ತಾ ಇದೆ. ಆದರೆ ಮೇಧಾರನ್ನ ಟೀಕಿಸುವವರೆಲ್ಲ ಮುಳುಗಲಿರುವ ಆದಿವಾಸಿ ಗ್ರಾಮಗಳ ಜನರಬಗ್ಗೆ ಯೋಚನೆ ಮಾಡಬೇಕಾಗಿದೆ. ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲವೆಂಬ ಆರೋಪವನ್ನ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಯಾವುದೇ ಪ್ರಗತಿಯ ಕಾರ್ಯಕ್ರಮದಲ್ಲಿ ಹೆಚ್ಚಿನ ಮಂದಿಯ ಲಾಭಕ್ಕಾಗಿ ಕೆಲವರು ನಷ್ಟಹೋಗುತ್ತಾರೆ. ಮೇಧಾ ಈ ಮಂದಿಯ ನಷ್ಟವನ್ನಲ್ಲದೇ, ಆಗಬಹುದಾದ ಲಾಭದ ಲೆಕ್ಕಾಚಾರವನ್ನೂ ಪ್ರಶ್ನಿಸುತ್ತಿದ್ದಾರೆ. ಕೋರ್ಟು ಲಾಭದ ಬಗ್ಗೆ ತೀರ್ಪನ್ನ ಕೊಟ್ಟುಬಿಟ್ಟಿದಯಾದ್ದರಿಂದ – ನಮಗೆ ಇಷ್ಟವಿಲ್ಲದಿದ್ದರೂ ಅದನ್ನ ಒಪ್ಪಲೇ ಬೇಕಾಗಿದೆ. ಈಗ ಮೇಧಾರ ಕೆಲಸ ಆದಿವಾಸಿಗಳ ನಷ್ಟವನ್ನ ಕಡಿಮೆ ಮಾಡುವುದು ಹೇಗೆಂದು ಆಲೋಚಿಸುವುದಾಗಬೇಕಾಗಿದೆ. ಜೊತೆಗೆ ಆಂದೋಳನಕ್ಕಾಗಿರುವ ಧಕ್ಕೆಯಿಂದಲೂ ಚೇತರಿಸಿಕೊಂಡು ಮುಂದುವರೆಯಬೇಕಾಗಿದೆ. ಆದರೆ ಕುತೂಹಲದ ವಿಷಯವೆಂದರೆ – ತೀರ್ಪು ಮೇಧಾರ ಪರವಾಗಿದ್ದಿದ್ದರೆ ಮೇಧಾ ಮುಂದಿನ ಹತ್ತು ವರ್ಷಗಳಲ್ಲಿ ಏನು ಮಾಡುತ್ತಿದ್ದರು ಎಂಬುದು.
ಉಚ್ಚನ್ಯಾಯಾಲಯ ಈ ಕುತೂಹಲವನ್ನ ನೀಗಿಸುವಂತಹ ತೀರ್ಪನ್ನ ಕೊಟ್ಟಿಲ್ಲವಂದಷ್ಟೇ ಹೇಳಬೇಕು. ಹೀಗಾಗಿ ಮೇಧಾ ತಮ್ಮ ಕೆಲಸವನ್ನ (ಬಹುಶಃ ಸಂವಿಧಾನದ ಚೌಕಟ್ಟಿನೊಳಗೆ – ಅಥವಾ ಹಾಗೆಂದು ಆಶಿಸೋಣ) ಯಾವ ಚಿಂತೆಯೂ ಇಲ್ಲದೇ ಮುಂದುವರೆಸಬಹುದು.
*****
ಎಂ ಎಸ್ ಶ್ರೀರಾಂರವರು ಆರು ವರ್ಷಗಳ ಹಿಂದೆ ಬರೆದ ಈ ಲೇಖನವನ್ನು ಅವರು ಮತ್ತೆ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಅಲ್ಲಿ ಸಾಕಷ್ಟು ಚರ್ಚೆಯೂ ಆಗಿದೆ. ಲೇಖನ ಕನ್ನಡಸಾಹಿತ್ಯ.ಕಾಮ್ ಓದುಗರ ಗಮನಕ್ಕೆ ಬರಲಿ ಹಾಗು ಮುಂದೆ ಅರ್ಕೈವ್‌ಗೂ ಸೇರಲಿ ಎಂದನ್ನಿಸಿ ಪ್ರಕಟಿಸಲಾಗಿದೆ. ಮೇಧಾರವರ ಬಗೆಗೆ ನರ್ಮದ ಬಚಾವ್ ಆಂದೋಳನದ ಬಗೆಗೆ ಉದಯವಾಣಿಯಲ್ಲಿ ಅನಂತಮೂರ್ತಿಯವರು ಬರೆದ ಲೇಖನವನ್ನುಇದೇ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.- ಜೊತೆಗೆ ಕರ್ನಾಟಕದ ತಡಡಿ ಯೋಜನೆಯ ಬಗೆಗೂ ಸಂತೋಷ ಕುಮಾರ್ ಮೆಹಂದಳೆಯವರ ಲೇಖನವನ್ನು ಪ್ರಕಟಿಸಲಾಗಿದೆ. ಸಂ