ಇಕೋ ಹೋಳಿಗೆ

‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ ಸರಕನ್ನು ಕಲಬೆರಕೆ ಮಾಡಿ ಕಾಸು ಮಾಡುವ ಮಾಲಲ್ಲ ಇದು. ಬಚ್ಚಿಟ್ಟು, ಬೇಕೆಂದಾಗ ತೆಗೆದು ಕಳ್ಳತನದಲ್ಲಿ ಮಾರಿಕೊಳ್ಳುವ ವ್ಯಾಪಾರಿ ಸಾಮಾನೂ ಅಲ್ಲ…ನನ್ನ ೬೦ ವರ್ಷದ ವಯಸ್ಸನ್ನು ಏರಿ ನಿಂತು ಅದರ ಆಜುಬಾಜುಗಳಲ್ಲಿ ಬಗ್ಗಿ ನೋಡಿದಾಗ ಆಳದಲ್ಲೆಲ್ಲೋ ಅಡಗಿರುವ ಕೆಲವು ‘ನೆನಪುಗಳ ಸ್ಟಾಕ್’ ಇದು.

ಯಾರು ಏನನ್ನಾದರೂ ಕಾಂಟ್ರಡಿಕ್ಟ್ ಮಾಡಬಹುದು. ಆದರೆ ವ್ಯಕ್ತಿಗೆ ಆಗಿರುವ ವಯಸ್ಸಿನ ಬಗ್ಗೆ ಅದು ‘ಸುಳ್ಳು’ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಕಾರಣಗಳಿಗಾಗಿ ತಪ್ಪು ವಯಸ್ಸನ್ನು ದಾಖಲಿಸಿ ನಾವು ಚಿಕ್ಕ ವಯಸ್ಸಿನವರೆಂದು ಹೇಳುವವರ ಮಾತು ಬೇರೆ….ಹೇಳುವುದೇನೇ ಆದರೂ ವಯಸ್ಸು ಮಾತ್ರ ಆಗೇ ಇರುತ್ತದೆ. ಹಾಗೆ ನೋಡಿದರೆ ವಯಸ್ಸನ್ನು ಹಿಡಿದಿಟ್ಟುಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಕೋರ್ಟ್ ಸ್ಟೇ ಆರ್ಡರ್‌ನಿಂದಲೂ ಅದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ….ಅಸಲು ಇರುವ ತನಕ ಬ್ಯಾಂಕಿನಲ್ಲಿ ಬಡ್ಡಿಯೂ ಬೆಳೆಯುವಂತೆ ಜೀವವಿರುವವರೆಗೂ ವಯಸ್ಸು ಆಗುತ್ತಲೇ ಇರುತ್ತದೆ.

ಹಾಗೆ ನನಗಾಗಿರುವ ಈ ವಯಸ್ಸಿನ ಹಿಂದೆ ಏನೇನೋ ನೆನಪಿನ ರಾಶಿಗಳಿವೆ. ಅದರಲ್ಲಿ ಕೆಲವು ಮರೆವಿನ ಮರೆಯಲ್ಲಿ ಕರಗಿ ಹೋಗಿಬಿಡುವಂಥ ಅತಿ ಸಾಮಾನ್ಯರನ್ನು ಕುರಿತದ್ದಾಗಿರಬಹುದು. ಮತ್ತೆ ಕೆಲವು ಬದುಕಿನ ಒಳಾರ್ಥಗಳನ್ನು ತಿಳಿಸಿ ಹೇಳಲು ಸಹಾಯಕವಾಗುವಂಥ ಪ್ರಸಂಗಗಳಾಗಿರಬಹುದು. ಅಂಥ ನೆನಪುಗಳೆಷ್ಟೋ ಆಳದಲ್ಲಿ ಹೂತುಹೋಗಿವೆ. ಈ ನೆನಪಿನ ಹೊಂಡದಲ್ಲಿರುವ ‘ಹೂಳು’ ಆಗಾಗ ತೆಗೆಯುತ್ತಿರಬೇಕು. ನೆನಪುಗಳ ತಳವನ್ನು ತಡಕಿ, ಕೆದಕಿ, ಹುಡುಕಿ ಪಾತಾಳಗರಡಿಯನ್ನು ಹಾಕಿ ಹೆಕ್ಕಿ ಹೊರತೆಗೆದವುಗಳನ್ನು ತೊಳೆದು ತೋರಿಸುವ ಪ್ರಯತ್ನ ಈಗ ಮಾಡಲಾಗಿದೆ.

ಹೀಗೆ ಹಳೆಯದನ್ನೆಲ್ಲಾ ಹೊರತೆಗೆದು ದಾಖಲಿಸುವಾಗ ಏನಾಗಬಹುದು ಎಂದು ಯೋಚಿಸಿದಾಗ, ನನ್ನ ಕನ್ನಡ ಮೇಷ್ಟ್ರು ಹೇಳಿದ್ದ ‘ಮುತ್ತಜ್ಜ ಹೋಳಿಗೆ ಬಡಿಸಿದ ಕತೆ’ ಜ್ಞಾಪಕಕ್ಕೆ ಬರುತ್ತಿದೆ. ಮುತ್ತಜ್ಜನಿಗೆ ವಿಪರೀತ ವಯಸ್ಸಾಗಿದೆ. ತಲೆ, ಕೈ-ಕಾಲು-ಯಾಕೆ? ಇಡೀ ದೇಹವೇ ಗಡಗಡ ನಡುಗುತ್ತಿದೆ. ನಡೆಯುವುದು ಕಷ್ಟ, ಮೇಲಾಗಿ ಕಣ್ಣು ಕಾಣುವುದಿಲ್ಲ. ಡಬ್ಬದಿಂದ ತೆಗೆದ ನಶ್ಯವನ್ನು ತನ್ನ ಮೂಗಿಗೆ ತಾನೇ ಏರಿಸುತ್ತಿದ್ದ ನಶ್ಯದ ಪುಡಿಯಲ್ಲಿ ಕಾಲು ಭಾಗ ಮೂಗಿಗೆ, ಮುಕ್ಕಾಲುಭಾಗ ಮೈಗೆ…..ಒಂದು ಹಬ್ಬದ ದಿನ ಮೊಮ್ಮಕ್ಕಳಿಗೆಲ್ಲಾ ತನ್ನ ಕೈಯಾರೆ ಹೋಳಿಗೆ ಬಡಿಸಬೇಕೆಂಬ ಬಯಕೆ ಹುಟ್ಟಿತು. ಯಾರು ಎಷ್ಟು ಹೇಳಿದರೂ ಮುದುಕ ಕೇಳುವುದಿಲ್ಲ. ತನ್ನ ಕೈಯಿಂದಲೇ ಐವತ್ತು ಹೋಳಿಗೆ ಜೋಡಿಸಿಟ್ಟ. ಒಬ್ಬ ಅದನ್ನು ಹಿಡಿದು ಮುದುಕನ ಪಕ್ಕದಲ್ಲಿ ನಿಂತ. ಮತ್ತೊಬ್ಬ ಜೋಲಿ ಹೊಡೆದು ಬಿದ್ದಾನೆಂದು ಮುದುಕನ ಹತ್ತಿರವೇ ನಡೆಯುತ್ತಿದ್ದ. ಮುತ್ತಜ್ಜ ಅಂದಾಜಿನ ಮೇಲೆ ನಡೆಯುತ್ತ ಒಬ್ಬೊಬ್ಬ ಮೊಮ್ಮಗನ ಊಟದ ಎಲೆ ಮುಂದೆ ಬಂದು ನಿಂತು, ಒಂದೊಂದೇ ಹೋಳಿಗೆಯನ್ನು ತನ್ನ ನಡುಗುವ ಕೈಗಳಿಂದ ಎತ್ತಿ ಸಾಕಷ್ಟು ಬಗ್ಗಿರುವ ದೇಹವನ್ನು ಮತ್ತಷ್ಟು ಬಾಗಿಸಿ ಸ್ವಲ್ಪ ಎತ್ತರದಿಂದಲೇ ಹೋಳಿಗೆ ಬಡಿಸುತ್ತ ಹೊರಟ….ಮಂದವಾಗಿದ್ದ ದೃಷ್ಟಿ, ನಡುಗುವ ಕೈ. ಆ ದೊಡ್ಡ ಪರಾತದಿಂದ ಎತ್ತಿ ಹಿಡಿದ ಆ ಹೋಳಿಗೆಯೂ ಗಡಗಡ ನಡುಗುತ್ತ ತನ್ನೊಳಗೆ ಹುದುಗಿಸಿಕೊಟ್ಟುಕೊಂಡಿದ್ದ ಹೂರಣವನ್ನೆಲ್ಲಾ ಪರಾತದಲ್ಲಿ ಚೆಲ್ಲಿಸುತ್ತಿತ್ತು. ಹೂರಣ ರಹಿತ, ಆದರೆ ಪ್ರೀತಿಪೂರ್ಣ ಹೊರ ಪದರ ಮಾತ್ರ ಮೊಮ್ಮಕ್ಕಳಿಗೆ ದಕ್ಕಿದ್ದು….

ಹಿಂದಿನ ನೆನಪುಗಳನ್ನು ಮೆಲುಕು ಹಾಕಿದಾಗ ಆಗಬಹುದಾದುದೂ ಹೀಗೆಯೇ. ಆದರೆ ಈ ಹೊರಪದರಕ್ಕೆ ಅಂಟಿರುವ ಹೂರಣದ ಅಲ್ಪ ಸಿಹಿ ಅನುಭವ ಆದರೂ ಆಗಬಹುದೇನೋ ಅನ್ನುವ ನಂಬಿಕೆಯಿಂದ ನನ್ನ ಸ್ಟಾಕ್‌ನಿಂದ ತೆಗೆದ ಹೋಳಿಗೆಯನ್ನು ಬಡಿಸುತ್ತಿದ್ದೇನೆ….ಗಟ್ಟಿಯಾದ ಅಂಚನ್ನು ಮುರಿದು ಪಕ್ಕಕ್ಕಿಟ್ಟು, ಮದ್ಯದ ಮೃದುವಾದ ಕಣಕಕ್ಕೆ ಹತ್ತಿರುವ ಹೂರಣದ ಜೊತೆ ಚೂರು ಹೋಳಿಗೆಯ ಸಿಹಿಯನ್ನು ಅನುಭವಿಸಲು ಓದುಗರಿಗೆ ಸಾಧ್ಯವಾದರೆ ಅಷ್ಟೇ ಸಾಕು…..

ನನ್ನ ನೆನಪೆಲ್ಲ ವೈಯಕ್ತಿಕವಾದದ್ದಾದರೂ ಅವುಗಳಿಗೆ ಕೊಂಚಮಟ್ಟಿನ ಸಾರ್ವತ್ರಿಕ ಇರಬಹುದು, ಅರ್ಥಾತ್ ಅಂಥ ಪ್ರಸಂಗಗಳು, ಅನುಭವಗಳು, ಅನಿಸಿಕೆಗಳು ಬೇರೆ ಎಷ್ಟೋ ಮಂದಿಯ ಬದುಕಿನಲ್ಲೂ ಪ್ರೀತಿ-ದ್ವೇಷ, ನೋವು-ನಲಿವು, ಸುಷ್ಟತನ-ಅನುಕಂಪ ಇವೆಲ್ಲಾ ಇರುವಂಥದ್ದೇನೆ…. ‘ಟೇಕ್ ಸ್ಟಾಕ್ ಆಫ್’ ಅನ್ನುವ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದೆ. ನಮ್ಮನ್ನು ಎತ್ತಿ ಏರಿಸಿದಂಥ ಅನುಭವಗಳು, ನಾಶ ಮಾಡಿದಂತಹ ಕೆಡಕುಗಳು, ಮೌಲ್ಯಗಳನ್ನೇ ಮರೆಮಾಡುವ ಕೆಟ್ಟತನಗಳು, ತೋರಿಸಿದ ಪ್ರೀತಿ, ಸೌಜನ್ಯ, ಸಜ್ಜನಿಕೆಗಳು, ಇವೆಲ್ಲದರ ಸೂಕ್ಷ್ಮವಾದ ಪರಿಶೀಲನೆಯೂ ಇಂಥ ಪ್ರಯತ್ನದಲ್ಲಿ ಅಡಗಿದೆ.

ನಾವು ಬೇಡ ಬೇಡವೆಂದರೂ ಬಂದೂ ಬಂದೂ ಕಾಡುವ ನೆನಪುಗಳೆಷ್ಟೋ ನಮ್ಮ ಮೂರ್ಖತನಗಳನ್ನು ಮುಚ್ಚಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನಗಳೆಷ್ಟೋ! ಮೃಗತ್ವ, ಕೌರ್ಯಗಳ ಜೊತೆಜೊತೆಗೆ ಇರಬಹುದಾದ ಮಾನವೀಯ-ದೈವಿಕ ಗುಣಗಳನ್ನು ಗುರುತಿಸದೆ ಹೋಗುವ ಪ್ರಸಂಗಗಳೆಷ್ಟೋ…. ಹಂಚಿಕೊಳ್ಳುವಾಗ ಸಂತೋಷವಾಗುತ್ತೆ, ಆದರೆ ಉಪಯೋಗವಾಗುವಂಥದ್ದು ಮಾತ್ರ ಉಳಿಯುತ್ತೆ.

ನನ್ನ ನೆನಪುಗಳ ಓದುವಿಕೆಯಿಂದ ಯಾರಿಗಾದರೂ ಎನಾದರೂ ಗಾಢವಾದ ಅನುಭವವಾಗಬಹುದೆಂಬ ಹಮ್ಮು ನನಗಿಲ್ಲ. ಇದರ ಉದ್ದೇಶವೂ ಅದಲ್ಲ. ಏಕೆಂದರೆ…..
‘ಕಿಡ್ನಿ’ ಕೊಡಬಹುದು. ಯೌವನ ಕೊಡಲಾಗುವುದಿಲ್ಲ.
‘ರಕ್ತ’ ಕೊಡಬಹುದು, ಯೌವನ ಕೊಡಲಾಗುವುದಿಲ್ಲ.
‘ವಿದ್ಯೆ’ ಹೇಳಿಕೊಡಬಹುದು. ಆಚರಣೆ ಹೇಳಿಕೊಡಲಾಗದು.
‘ಸ್ಟಾಕ್’ ಎಂದರೆ ವಂಶ, ಮನೆತನ ಅಂತಲೂ. ಮೂಲಧನ ಅನ್ನುವ ಅರ್ಥವೂ ಇದೆ. ನನ್ನ ವಂಶ-ಮನೆತನದ ಬಗ್ಗೆ ಎಲ್ಲರಿಗೂ ಇರುವಂತೆ ನನಗೂ ಹೆಮ್ಮೆ. ನನ್ನ ಪುರ್ವಿಕರಂತೆ ನಾನು ಬಾಳಲು ಸಾಧ್ಯವಾಗಲಿಲ್ಲ ಎಂಬ ಕೊರತೆ. ಅವರ ಅಷ್ಟಿಷ್ಟು ಗುಣಗಳನ್ನಾದರೂ ನನ್ನಲ್ಲಿ ಅಳವಡಿಸಿಕೊಳ್ಳಬೇಕೆಂಬ ಹಂಬಲ ಇದೆ. ಅವರ ಆಕಾಶದೆತ್ತರದ ಆಶೋತ್ತರಗಳನ್ನು ನನ್ನಿಂದ ಈಡೇರಿಸಲಾಗಲಿಲ್ಲ ಎಂಬ ಸಂಕಟವಿದೆ. ಅವರ ಬುದ್ಧಿ-ಚಾತುರ್ಯಗಳ ಒಂದು ಅಂಶವಾದರೂ ನನಗೆ ದಕ್ಕಲಿಲ್ಲವಲ್ಲ ಎಂಬ ನೋವಿದೆ….ಇಷ್ಟೆಲ್ಲ ಕೊರತೆ, ಹಂಬಲ, ಸಂಕಟ ನೋವುಗಳ ಮಧ್ಯೆಯೂ ನಾನು ಇಷ್ಟರ ಮಟ್ಟಿಗಾದರೂ ಇದ್ದೇನಲ್ಲ ಅನ್ನುವ ಸ್ವಲ್ಪ ಸಮಾಧಾನವಿದೆ…ನಾನೊಬ್ಬ ಸಾಮಾನ್ಯ ವ್ಯಕ್ತಿ. ಸಾಮಾನ್ಯರ ನಡುವೆ ಬದುಕಿದ್ದು. ಸಾಧಾರಣತೆಯನ್ನೇ ನನ್ನ ಸಂಪತ್ತನ್ನಾಗಿ ಬಳಸುತ್ತಿರುವವನು.

ಇಲ್ಲಿ ದಾಖಲಿಸುವ ಅನುಭವಗಳು ಒಬ್ಬ ಪ್ರಸಿದ್ಧ ವ್ಯಕ್ತಿಯ ಅಸಾಧಾರಣ ಅನುಭವದ ಕತೆಯಲ್ಲ. ನಾಗರೀಕತೆಯು ನಡೆದುಬಂದ ದಾರಿಯನ್ನು ತೋರಿಸುವ ವಿವರಣೆಯಲ್ಲ. ಸಾಮ್ರಾಜ್ಯಗಳ ಏಳುಬೀಳುಗಳನ್ನು ರಸವತ್ತಾಗಿ ಚಿತ್ರಿಸುವ್ ಚರಿತ್ರೆಯಲ್ಲ. ಸಾಮಾನ್ಯರ ನಡುವಿದ್ದು, ನನ್ನ ಮುಂದೆ ನನ್ನನ್ನೇ ವಸ್ತುವನ್ನಾಗಿಟ್ಟುಕೊಂಡು, ಹಾಯ್ದು ಹೋದ ಹಲವು ಸರಳ ಅನುಭವಗಳ ಗುಚ್ಚಗಳು. ವಸ್ತು ನಾವೇ ಆದಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ. ನಾನು ಬರೆದದ್ದು ನಿಜವೋ ಕಟ್ಟುಕತೆಯೋ ಎಂದು ಕೇಳುವವರು ಯಾರು? ಎಚ್ಚರದ ಪೋಷಾಕಿನಲ್ಲಿ, ನಿಜದ ಬೆಳಕಿನ ಮುಂದೆ, ನಾನು ಇರುವಂತೆಯೇ ನಿಲ್ಲುವ ಧೈರ್ಯಕ್ಕೆ ಮಾತ್ರ ನನ್ನಲ್ಲಿ ಕೊರತೆಯಿಲ್ಲ ಎಂದಷ್ಟೇ ಹೇಳಬಲ್ಲೆ…..

ನನ್ನ ತಂದೆಯ ಅಪ್ಪ ರಾಮಣ್ಣ ನಾಯಕ್. ನಾನು ನೊಡಿರಲಿಲ್ಲ. ಅವರ ಬಗ್ಗೆ ನನ್ನಪ್ಪನಿಂದ ಬೇಕಾದಷ್ಟು ಕೇಳಿದ್ದೆನೆ. ನನ್ನಜ್ಜ ಮತ್ತು ಅವರ ಹಿಂದಿನವರು ತುಂಬಾ ಶ್ರೀಮಂತರು. ಅವರೆಲ್ಲರ ಹೆಸರಿನ ಮೊದಲಿಗೆ ‘ಸಾಹುಕಾರ್’ ಅಂತ ಬರೆಯುತ್ತಿದ್ದುದು ನನಗೆ ಗೊತ್ತು. ಹಾಗೆಯೇ ಅದರ ನಂತರ ‘ಪತ್ತಾರ್’ ಅಂತಲೂ, ಹೆಸರಿನ ಕೊನೆಗೆ ‘ನಾಯಕ್’ ಅಂತಲೂ ಸೇರಿ ಅಜ್ಜನ ಹೆಸರು ಸಾಹುಕಾರ್ ಪತ್ತಾರ್ ರಾಮಣ್ಣ ನಾಯಕ್ ಎಂದಿರಬೇಕು. ಈ ಮನೆತನದವರು ದೊಡ್ಡ ಜಮೀನುದಾರರಾಗಿದ್ದು, ಬಡ್ಡಿ ವ್ಯವಹಾರವನ್ನೂ ಇಟ್ಟುಕೊಂಡಿದ್ದರು. ಜೊತೆಗೆ ಚಿನ್ನದ ವ್ಯಾಪಾರವೂ ನಡೆದಿತ್ತಂತೆ. ಆದರೆ ಚಿನಗಾರರ ಕೆಲಸ ಮಾಡಿದವರಲ್ಲ. ಹಾಗೆಯೆ ಮಹಾರಾಷ್ಟ್ರದ ಶಿವಾಜಿ ಮಹಾರಾಜರ ಸೈನ್ಯದ ಒಂದು ತುಕಡಿಯ ಮುಖಂಡತ್ವ ವಹಿಸಿದ್ದರೆಂಬ ಕಾರಣಕ್ಕಾಗಿ ನಮ್ಮ ಪೂರ್ವಜರಲ್ಲಿ ಯಾರಿಗೋ ‘ನಾಯಕ್’ಪದವಿ ಬಂದಿರಬಹುದು……

(ಬಡ್ಡಿ ವ್ಯವಹಾರದ ಬ್ಯಾಂಕಿಂಗ್ ಸಂಸ್ಥೆಯಲ್ಲಿ ನಾನು ಅಧಿಕಾರಿಯಾಗಿದ್ದುದು ನನ್ನ ಸಹೋದರ ದತ್ತಾತ್ರೇಯ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದುದೂ ಒಂದು ಕಾಕತಾಳೀಯ)

ಎಲ್ಲಿಂದ ಎಲ್ಲಿಗೆ ವಲಸೆ ಹೋದರೋ, ಯಾವ ಕಾರಣಕ್ಕೋ ನಾಕಾಣೆ. ಅಂತೂ ಧಾರವಾಡಜಿಲ್ಲೆಯ ರಾಣಿಬೆನ್ನೂರನ್ನು ತಮ್ಮ ಊರನ್ನಾಗಿಸಿಕೊಂಡರು. ಬೇಕಾದಷ್ಟು ಆಸ್ತಿಯ ಒಡೆತನ, ಮೈಲುಗಟ್ಟಲೆ ಹಾಸಿದ್ದ ಭೂಮಿಯ ಒಡೆಯರಾಗಿ ಬಾಳಿದರು.

ನಮ್ಮಜ್ಜ ರಾಮಣ್ಣ ನಾಯಕ್ ಪದವೀಧರರಲ್ಲ. ಅವರ ತಂಗಿಯ ಮಕ್ಕಳ ಕಡೆ ಇಬ್ಬರು ಪದವೀಧರರಾಗಿದ್ದು ವಕೀಲಿ ವೃತ್ತಿ ಹಿಡಿದಿದ್ದರಂತೆ. ರಾಮಣ್ಣ ಪದವೀಧರರಲ್ಲವಾದರೂ ಮಹಾಬುದ್ಧಿಶಾಲಿ. ಕಲಿತಷ್ಟು ವಿದ್ಯೆಯನ್ನೇ ಸ್ವಶಕ್ತಿಯಿಂದ ಬೆಳೆಸಿಕೊಂಡವರು. ಇವರಲ್ಲಿ ಪ್ರಮುಖವಾಗಿ ಕಂಡಂಥ ಎರಡು ಗುಣಗಳು ಅಥವಾ ಅವಗುಣಗಳು. ಒಂದು, ಅವರಲ್ಲಿದ್ದ ಬಂಡಾಯ ಪ್ರವೃತ್ತಿ. ಎರಡು ಅಹಂಕಾರ ಎಂದು ಅನುಮಾನಿಸುವಷ್ಟು ಸ್ವಾಭಿಮಾನ. ಈ ಬಂಡಾಯತನ ಮತ್ತು ಸ್ವಾಭಿಮಾನದ ಜೊತೆ ಸೇರಿಬಿಟ್ಟಿದ್ದ ಮತ್ತೊಂದು ದುರುಳ ಮಿತ್ರನೆಂದರೆ ಅಪಾರ ಕೋಪ. ಈ ಮೂರು ಗುಣಾವಗುಣಗಳು ಸಣ್ಣಗೆ ನಮ್ಮೆಲ್ಲರಲ್ಲೂ ರಕ್ತಗತವಾಗಿ ಬಂದುಬಿಟ್ಟಿದೆ. ಇದೊಂದುಕಡೆಗಾದರೆ ಮತ್ತೊಂದು ಕಡೆ ಈ ರಾಮಣ್ಣ ಸ್ನೇಹ ಜೀವಿಯೂ ಆಗಿದ್ದು ಬದುಕನ್ನು ಅಪಾರವಾಗಿ ಪ್ರೀತಿಸಿದವರೂ ಹೌದು. ಈ ಸ್ವಭಾವವೈಚಿತ್ರ್ಯಗಳು ಮುಂದಿನ ಮೂರು ಪ್ರಸಂಗಗಳಲ್ಲಿ ಪ್ರಕಟವಾಗಿದೆ.

ಒಂದು: ಎಷ್ಟೊಂದು ಆಸ್ತಿ-ಪಾಸ್ತಿ-ಭೂಮಿ ಕಾಣಿ! ತಮ್ಮ ಮನೆತನದವರಿಗಿದ್ದ ಒಟ್ಟು ಜಮೀನಿನ ವಿಸ್ತೀರ್ಣವನ್ನು ಯಾರೊಬ್ಬರೂ ಪೂರ್ತಿಯಾಗಿ ಕಂಡಿರಲಿಲ್ಲವಂತೆ! ಸುತ್ತು ಹತ್ತು ಹಳ್ಳಿಗಳಲ್ಲೆಲ್ಲಾ ಹರಡಿದ್ದ‌ಈ ಭೂಮಿಯಲ್ಲಿ ಎಷ್ಟು ಫಲವತ್ತಾದದ್ದೋ ಎಷ್ಟು ಬಂಜರಭೂಮಿಯೋ….ಇರಲಿ. ಇಷ್ಟೊಂದು ಶ್ರೀಮಂತಿಕೆ ಇದ್ದ ಅವರಪ್ಪನ ಎಕೈಕ ಪುತ್ರ ತನ್ನ ಊರು ಬಿಟ್ಟು ಯಾವುದೋ ನೌಕರಿ ಹಿಡಿಯುವ ಅನಿವಾರ್ಯತೆಯಾದರೂ ಹೇಗೆ ಬಂತು? ಜಗಳವಾಡಿ ಊರು ಬಿಟ್ಟಿರಬೇಕು, ಇಲ್ಲವೇ ತನಗೆ ಸರಿ ಹೊಂಉವ ಹಾಗೆ ಎಲ್ಲವೂ ನಡೆಯದೆ ಹೋಗಿರಬೇಕು. ನೌಕರಿಗೆ ಏಕೆ ಸೇರಿದರೆಂಬುದು-ಅದೂ ತಿಳಿಯದಾಗಿದೆ. ಬಹುತೇಕ ಅವರಲ್ಲಿದ್ದ ಬಂಡಾಯತನದಿಂದಾಗಿರಬೇಕು. ಅವರು ಇದ್ದ ಕೆಲಸ ದೊಡ್ಡ ಕೆಲಸವೇನಲ್ಲ. ಆದರೆ ಸರ್ಕಾರಿ ಕೆಲಸವಾಗಿದ್ದು ಮೇಲಾಧಿಕಾರಿಗಳೆಲ್ಲಾ ಇಂಗ್ಲಿಷ್ ಭಾಷೆಯಲ್ಲಿ ನಡೆಸುತ್ತಿದ್ದ ವ್ಯವಹಾರ ಸಂಬಂಧದ ಕಾಗದ ಪತ್ರಗಳಲ್ಲಿಯ ಕಾಗುಣಿತವನ್ನೋ ವಾಕ್ಯರಚನೆಯನ್ನೋ ವಿಷಯದ ಮಂಡನೆಯನ್ನೋ ತಿದ್ದಿ ಸರಿಪಡಿಸಿ ಮತ್ತೆ ಮತ್ತೆ ಬರೆಸುತ್ತಿದ್ದರಂತೆ. ಇವರ ಚಾಣಾಕ್ಷತೆ ಎಲ್ಲಿಗೆ ಮುಟ್ಟಿತೆಂದರೆ ಬರೆದ ಪತ್ರಗಳಲ್ಲೂ ತಪ್ಪು ಹುಡುಕಿ ವಾಪಸ್ಸು ಮಾಡುತ್ತಿದರಂತೆ.
ಈ ಚಿಕಿತ್ಸಕ ಬುದ್ಧಿಯಿಂದಾಗಿ ರಾಮಣ್ಣಕೆಲಸ ಕಳೆದುಕೊಂಡಿರಬೇಕು.

ಎರಡು: ಊರೂರು ಅಂಡಲೆಯುವ ಈ ಜಂಗಮ ಪ್ರವೃತ್ತಿಯಿಂದಾಗಿ ರಾಮಣ್ಣ ತನ್ನ ಊರು, ಸಂಸಾರ, ವ್ಯವಹಾರದ ಕಡೆ ಅಷ್ಟಾಗಿ ಗಮನಕೊಟ್ಟಿರಲಾರರು. ಇಷ್ಟರ ಮೇಲೆ ತಲೆಮಾರು ಕೂತು ತಿಂದರೂ ಕರಗದಷ್ಟು ಶ್ರೀಮಂತಿಕೆಗೆ ಒಡೆಯನೆಂಬ ಬಿಮ್ಮು-ಬಿಗಿ. ಈ ‘ಜಂಗಮ’ನನ್ನು ‘ಸ್ಥಾವರ’ವನ್ನಾಗಿ ಕೂಡಿಸುವ ಪ್ರಯತ್ನ ಸಫಲವಾಗಲಿಲ್ಲವೆಂದು ಕೇಳಿದ್ದೇನೆ. ಒಮ್ಮೆ ಊರಿನಲ್ಲಿದ್ದಾಗ ಗೆಳೆಯರೂ ಬಳಗದವರೂ ಇದ್ದ ಕಡೆ ತಮ್ಮ ಶ್ರೀಮಂತಿಕೆಯ ಬಗ್ಗೆ ಹೇಳಿಕೊಂಡರಂತೆ. ಅವರಲ್ಲಿ ಯಾರೋ ಒಬ್ಬರು ಮತ್ತೊಬ್ಬರಲ್ಲಿ ಈ ವಿಷಯ ಪ್ರಸ್ತಾಪಿಸಿ “ಇವನಿಗೆ ಇರೋದು ಅಷ್ಟರಲ್ಲೇ ಇದೆ. ನನ್ನ ಹೆಂಡ್ತಿ ಮೈಮ್ಯಾಗೆ ಇರೋವಷ್ಟು ಒಡವೆ ಅವನ ಮನೇಲಿ ಇಲ್ಲ.” ಅಂತ ಅಂದನಂತೆ. ಈ ಮಾತು ರಾಮಣ್ಣನ ಕಿವಿಯ ಮೇಲೆ ಬಿತ್ತು. ಅವರ ಸ್ವಾಭಿಮಾನ ಕೆರಳಿತು. ಅಹಂಕಾರಕ್ಕೆ ಪೆಟ್ಟು ಬಿತ್ತು. ಕೋಪ ನೆತ್ತಿಗೇರಿತು. ಧಡ ಧಡ ಮನೆಗೆ ಬಂದರು. ಸಂಜೆ ಹೊತ್ತು…

“ಇಲ್ಲಿ ಬಾಯಿಲ್ಲಿ…..ಲಗೂನ.” ಅಂತ ಹೆಂಡತಿ ತುಳಸಾಬಾಯಿನ ಕರೆದರು. ಆಕೆ ಗಾಬರಿಯಾದಳು. ಮಾತಾಡಿಸೋದೆ ಅಪರೂಪವಾಗಿರೋ ಗಂಡ ಇಷ್ಟೊಂದು ಎತ್ತರದ ದನೀಲಿ ತನ್ನನ್ಯಾಕೆ ಕರೀತಾರೆ….? ತುಳಸಾಬಾಯಿ ಸಾತ್ವಿಕ ಹೆಣ್ಣುಮಗಳು. ಈ ಗಡಸುದನಿಯ ಕೂಗನ್ನು ಕೇಳಿ ನಡುಗಿದಳು. ಗಂಡನ ಮುಂದೆ ಮುಖ ಎತ್ತಿ ನಿಂತು ಮಾತಾಡುವ ಕಾಲವಲ್ಲ. ಕೋಪಿಷ್ಠ ಗಂಡ. ಏನು ಅನಾಹುತ ನಡೆದಿದೆಯೋ? ತನ್ನಿಂದೇನಾದರೂ ತಪ್ಪಾಯಿತೆ? ಊಟಕ್ಕೆ ಬಡಿಸುವಾಗ ಏನಾದರೂ ಅಪಚಾರವಾಯಿತೇ? ಮದ್ಯಾಹ್ನ ಚಹಾಪಾನಿ ಕೊಡುವಾಗ ಏನಾದರೂ ಅಪಚಾರವಾಯಿತೇ? ಇನ್ನೂ ಮಕ್ಕಳಾಗಿಲ್ಲ. ಚಿಕ್ಕ ವಯಸ್ಸು. ಮೃದುವಾಗಿ ಮಾತಾಡಿಸಬೇಕಾದ ಕಾಲದಲ್ಲಿ ಹೀಗೇಕೆ ಕೆಂಡಕಾರುತ್ತಿದ್ದಾರೆ? ಹೆದರಿಹೋದಳು ತುಳಸಾಬಾಯಿ.

“ಕರೆದ್ರಲ್ಲಾ….ಏನಾರ ಬೇಕಾಗಿತ್ತೇನು?” ಮೆಲ್ಲಗೆ ಕೇಳಿದಳು.
“….ನೋಡಿಲ್ಲೆ….ಲಗೂನ ಪೆಠಾರಿ ಬೀಗ ತಗದು ನಿನಗೇ ಅಂತ ನಮ್ಮ ಮನ್ಯಾಗ ಏನೇನು ಒಡವಿ ವಸ್ತ್ರ ಅದೆ. ಎಲ್ಲಾ ತೆಗಿ….”
“ಯಾಕೆ….ಏನಾಗಿದೆ?”
“ಹೇಳಿದಷ್ಟು ಮಾಡು….ನನ್ನನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಬ್ಯಾಡ….”
“….ಆಗಲ್ರಿ….”ಅಂದಾಕೆ ನೆಟ್ಟಿಗೆ ಒಳಕೋಣೆಗೆ ಹೋಗಿ, ಪೆಠಾರಿ ತೆಗೆದು ತನ್ನ ಹಿಂದೆ ಬಂದು ನಿಂತಿದ್ದ ಗಂಡನನ್ನು ನೋಡುತ್ತ ಹಿಂದೆ ಸರಿದಳು. ರಾಮಣ್ಣ ನೋಡಿದ….ಹೆಂಡತಿ ಕಡೆ ತಿರುಗಿ “ನೋಡು…ಇಲ್ಲಿ ಎಷ್ಟು ಒಡವೆ ಅದ ಅಷ್ಟನ್ನೂ ಮೈಮೇಲೆ ಹಾಕ್ಕೊಂಡು, ಬೇರೆ ಜರತಾರಿ ಶೀರಿ ಉಟ್ಕೊಂಡು ಬಾ….ಲಗೂನ….”
“ಅಲ್ರೀ, ಎಲ್ಲಾ ಒಮ್ಮೆಲೆ ಹಾಕ್ಕೊಂಡು ಎಲ್ಲಿಗೆ ಹೋಗೂದ್ರಿ…. ಒಂದೊಂದು ಒಡವಿ ನಾಕು ಐದು ತರಹದ್ದು ಅವೆ….ಎಲ್ಲಾ ಹಾಕ್ಕೋ ಬೇಕಂದ್ರ ಮೈಮ್ಯಾಗ ಜಾಗನಾರ ಬೇಕಲ್ಲ, ಹುಚ್ಚಿ ಅಂತಾರೆ ನನ್ನ…”
“ಅದರ ಉಸಾಬರಿ ನಿನಗ್ಯಾಕ?…..ಹೇಳಿದಷ್ಟು ಮಾಡು….” ಗಡುಸಾಗಿ ಹೇಳಿದ ರಾಮಣ್ಣ.
“…..ಹಾಂಗೇ ಆಗಲೇಳ್ರೀ……ಹಾಕ್ಕೊಂಡು ಬರ್‍ತೇನಿ….ಅನಕಾ….ಹೊರಗೆ ಹಜಾರದಾಗಿರ್ರೀ….”

ತುಳಸಾಬಾಯಿ ಜರತಾರಿ ಸೀರೆ ಉಟ್ಟು, ಇದ್ದಬದ್ದ ಒಡವೆಗಳನ್ನೆಲ್ಲಾ ಹೇರಿಕೊಂಡು ಹೊರಗೆ ಬಂದಳು. ಹೆಣ್ಣುಮಗಳು ಬಂಗಾರದ ಭಾರದಿಂದ ಬಗ್ಗಿ ಹೋಗಿರಬೇಕೆಂಬ ಭಾವನೆ ಬರುವ ಹಾಗೆ ನಿಧಾನವಾಗಿ ನಡೆಯುತ್ತ, ಹೆದರುತ್ತ, ಮುಖದ ಮೇಲಿನ ಬೆವರಿನ ಹನಿಗಳನ್ನು ಒರೆಸಿ ರಾಮಣ್ಣನ ಮುಂದೆ ನಿಂತಳು….ಈಗ ರಾಮಣ್ಣ ಹೆಂಡತಿಯನ್ನು ಅದುವರೆಗೂ ನೋಡಿರಲಿಲ್ಲವೋ ಎಂಬಂತೆ ಕಣ್ತುಂಬ ನೋಡುತ್ತ ನಿಂತರು. ಜಗ ಜಗ ಹೊಳೆಯುವ ಒಡವೆ ವಸ್ತ್ರಾಭರಣ ಭೂಷಿತೆ ಹೆಂಡತಿಯನ್ನು. ರಾಮಣ್ಣನ ಮುಖದ ಮೇಲೆ ಸಮಾಧಾನದ ಸಣ್ಣ ನಗು ಮಿನುಗಿತು.

“ಸರಿ, ಆತು ನೀನು ಹೋಗು…..” ಅಂದರು. ಗಂಡನ ಈ ವಿಚಿತ್ರ ವರ್ತನೆಯಿಂದ ವಿಹ್ವಲಳಾದ ಹೆಂದತಿ ಕಾರಣ ಕೇಳಲು ಅಂಜಿದಳು.
ಆದರೆ ರಾಮಣ್ಣನಿಗೆ ಹೆಂಡತಿಯ ಕಡೆ ನೆಟ್ಟಿದ್ದ ದೃಷ್ಟಿ ತೆಗೆಯುವುದು ಕಷ್ಟವಾಯಿತೇನೋ ! ನಮ್ಮಜ್ಜಿ ಆಗಿನ ಕಾಲದ ದೊಡ್ಡ ಅಂಚಿನ ಜರತಾರಿ ಸೀರೆ ಉಟ್ಟು, ಬರೀ ಜರತಾರೀನೇ ತುಂಬಿರುತ್ತಿದ್ದ ಆ ಸೀರೆಯ ಸೆರಗನ್ನು ತಲೆಯ ಮೇಲೆ ಅರ್ಧಕ್ಕೆ ಎಳೆದುಕೊಂಡು, ಮನೆತನದ ಬಂಗಾರದ ನಗನಾಣ್ಯಗಳನ್ನೆಲ್ಲಾ ಧರಿಸಿ ನಿಂತಿದ್ದರೆ ಪ್ರಾಯಶಃ ಒಂದು ಚಿನ್ನದ ಬೊಂಬೆಯೇ ನಿಂತಿರಬಹುದೆಂಬ ಭ್ರಮೆ ಹುಟ್ಟಿರಬೇಕೆಂದು ನನ್ನ ಊಹೆ….ರಾಮಣ್ಣ ಮತ್ತೆ ಮತ್ತೆ ನೋಡುತ್ತ ನಿಂತರು. ತಮಗೆ ತಾವೇ ಸಂತೋಷಪಟ್ಟರು. ಪಕ್ಕನೆ ಊರಿನಲ್ಲಿ ಆಡಿದ್ದ ಅಡ್ಡ ಮಾತಿನ ನೆನಪಾಯಿತು. ಇದೆಲ್ಲದರ ಉದ್ದಿಶ್ಯದ ಹಿನ್ನೆಲೆ ಹೊಳೆಯುತ್ತಿದ್ದಂತೆ ಹೆಂಡತಿಗೆ “ನೀನು ಒಳಗೆ ಹೋಗು” ಎಂದು ಹೇಳಿ, ಮನೆಯ ಮುಂದಿನ ಜಗುಲಿಗೆ ಬಂದು ನಿಂತರು. ಅಬ್ಜಿಮಾನ ಅಹಂಕಾರವಾಗಿಬಿಟ್ಟಿದೆ. ಅಹಂಕಾರದಿಂದಲೇ ಅಲಂಕೃತನಾದ ರಾಮಣ್ಣ ಊರಿನ ರಸ್ತೆಯಲ್ಲಿ ಬಿರಬಿರನೆ ನಡೆದರು. ಅಡ್ಡ ಮಾತಾಡಿದ್ದರ ಬಗ್ಗೆ ಇವರಿಗೆ ರಿಪೋರ್ಟ್ ಮಾಡಿದ್ದವನ ಜೊತೆ ಮಾಡಿಕೊಂಡು ತನ್ನ ಐಶ್ವರ್ಯದ, ಶ್ರೀಮಂತಿಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ವ್ಯಕ್ತಿಯ ಮನೆ ಬಾಗಿಲಿಗೆ ಬಂದು ನಿಂತರು….(ವ್ಯಕ್ತಿಯ ಹೆಸರು ನನಗೆ ಗೊತ್ತಿಲ್ಲ) ಜೋರಾದ ದನಿಯಲ್ಲಿ….“ಬಾರಲೇ ಹೊರಗ….ನೀ ಏನ್ ಅಂದಿ ಅಂಬೋದರ ಖಬರ್ ಅದಽ ಏನೋ ನಿನಗ…ಬಾ ಹೊರಗ…” ಅಂತ ಕೂಗಿದರು. ವ್ಯಕ್ತಿ ಹೊರಗೆ ಬಂದ. ಅವನ ಸಮೀಪಕ್ಕೆ ಸರಿದು “ಬಾರೋ…. ತೋರಿಸ್ತೀನಿ…. ಏನಂದಿ ನೀನು… ನಿನ್ನ ಹೆಂಡ್ತಿ ಮೈಮೇಲಿನ ಒಡವಿಯಷ್ಟು ನನ್ನ ಶ್ರೀಮಂತಿಕಿ ಇಲ್ಲ ಅಂದ್ಯಲ್ಲೋ….ಬಾ ತೋರಿಸ್ತೀನಿ. ಊರಾಗಿನ ಎಲ್ಲಾ ಮಂದಿ ಐಶ್ವರ್ಯ ಸೇರಿಸಿದರೂ ನನ್ನ ಹೆಂಡ್ತಿ ಮೈಮ್ಯಾಲಿನ ಒಡವಿ ಕಿಮ್ಮತ್ತಿಗೆ ಕಡಿಮಿ….ಗೊತ್ತಾತ….” ಅಂದು ಹೊರಟೇ ಬಿಟ್ಟರು. ಕಿವಿ ಮಾತು ಮನೆಮಾತಾಗಿ, ಹಾದಿಬೀದಿ ರಂಪಕ್ಕೆ ಇಳಿಯಿತು. ಆದರೆ ರಾಮಣ್ಣನನ್ನು ಅಷ್ಟು ಹಗುರವಾಗಿ ನಡೆಸಿಕೊಂಡವರು ವಿಚಿತ್ರ ರೀತಿಯಲ್ಲಿ ಪಾಠ ಕಲಿತಂತಾಯಿತು.

ಮೂರು: ರಾಮಣ್ಣನಿಗೆ ತನಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುವ ಸ್ವಾತಂತ್ರ್ಯ ಬೇಕು. ತನಗೆ ತೋಚಿದ ಹಾಗೆ ನಡೆಯುವ ವ್ಯಕ್ತಿ. ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು, ತನ್ನ ಸ್ವಾಭಿಮಾನಕ್ಕೂ ಯಾರೂ ಪಿನ್ನು ಚುಚ್ಚಬಾರದು…. ಇವೆರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳುವುದು ಅವರಿಗೂ ಕಷ್ಟವಾಗಿ, ಇತರರಿಗೂ ಕಷ್ಟವಾಯಿತು.

ನಮ್ಮ ಪೂರ್ವಿಕರ ಮನೆ ಅತಿಥಿಗಳಿಗೆ ಒಂದು ಅನ್ನಛತ್ರ….ಊರಿಗೆ ಬಂದವರು, ಅವರು ಯಾವುದೇ ಕೆಲಸಕ್ಕೆ ಬಂದಿರಲಿ, ನೇರವಾಗಿ ನಾಯಕರ ಮನೆಗೆ ಬರಬಹುದು. ಸ್ನಾನ ಮಾಡಿ, ನಡುಮನೆಯ ಗಳದ ಮೇಲೆ ಸಾಲುಸಾಲಾಗಿ ಹರಡಿ ಹಾಕಿರುತ್ತಿದ್ದ ಪಂಚೆ-ಮೇಲುವಸ್ತ್ರ ಎಳೆದುಕೊಂಡು ಊಟದ ಪಂಕ್ತಿಯಲ್ಲಿ ಕುಳಿತು ಊಟಮಾಡಿ ಹೋಗಬಹುದಾಗಿತ್ತು. ಯಾರು ಯಾತಕ್ಕೆ ಬಂದಿದ್ದಾರೆ, ಅವರು ಇನ್ನೆಷ್ಟು ದಿನ ಊರಿನಲ್ಲಿರುತ್ತಾರೆ, ಬಂದಿರುವ ಉದ್ದಿಶ್ಯವೇನು-ಎಂಬುದನ್ನು ಯಾರೂ ಕೇಳುವಂತಿಲ್ಲ. ಇಂಥ ಒಂದು ದಿನ ಹತ್ತಿಪ್ಪತ್ತು ಮಂದಿ ಅತಿಥಿಗಳು ಊಟಕ್ಕೆ ಕುಳಿತಿದ್ದಾರೆ….ಹೊತ್ತಾಯಿತೆಂದು ಬಡಿಸಲು ಪ್ರಾರಂಭವಾಗಿದೆ. ರಾಮಣ್ಣ ಮನೆಯಲ್ಲಿಲ್ಲ….ಅವರನ್ನು ಕೂಡಲೇ ಊಟಕ್ಕೆ ಬರುವಂತೆ ತಿಳಿಸಲು ಆಳನ್ನು ಕಳಿಸಿದ್ದಾರೆ….ಅವನಾದರೂ ರಾಮಣ್ಣ ಎಲ್ಲಿ ಅಂತ ಹುಡುಕಬೇಕು? ಮನೆಯ ಹತ್ತಿರದ ದೇವಸ್ಥಾನದ ಹಜಾರದಲ್ಲಿ ನೋಡಿದ್ದಾಯಿತು. ಪಕ್ಕದ ಮರದಡಿಯ ಕಟ್ಟೆಯ ಮೇಲೆ ಕುಳಿತು ಸ್ನೇಹಿತರೊಡನೆ ಹರಟುತ್ತಿರಬಹುದೆಂಡು ಅಲ್ಲಿಗೂ ಹೋಗಿಬಂದಾಯಿತು. ಎಲ್ಲೂ ರಾಮಣ್ಣ ಕಾಣಲಿಲ್ಲ. ಊರಾಚೆಯ ಹೊಲದ ಅಂಚಿನಲ್ಲಿ ನಿಂತು ಯಾರದೋ ತಗಾದೆಯ ಬಗ್ಗೆ ಚರ್ಚಿಸುತ್ತಾ ನಿಂತಿದ್ದಾರೆ. ಆಳು ಅಲ್ಲಿಗೂ ಹೋದ….ಅತಿಥಿಗಳು ಕಾಯುತ್ತಿದ್ದಾರೆ, ಬರಬೇಕೆಂದು ತಿಳಿಸಿದ… ರಾಮಣ್ಣ ಮನೆಯ ಕಡೆ ಧಾವಿಸಿದ. ಅವರು ಮನೆಯ ಒಳಗಡೇ ಬಂದು, ಕೈಕಾಲು ತೊಳೆದು ಬಟ್ಟೆ ಬದಲಾಯಿಸಿ ಊಟದ ಮನೆಗೆ ಬಂದು ನೋಡುತ್ತಾರೆ. ಕಾಲ ಮೀರಿ ಹೋಗಿತ್ತು. ಅತಿಥಿಗಳು ಊಟ ಪ್ರಾರಂಭ ಮಾಡಲು ಯಾರೋ ಹುಕುಂ ಕೊಟ್ಟಾಗಿದೆ. ರಾಮಣ್ಣನ ಊಟದ ಸ್ಥಳ ಪಂಕ್ತಿಯ ಮೊದಲನೆಯದು. ಬಂದು ನೋಡುತ್ತಾರೆ ಈಗಾಗಲೇ ಊಟ ಪ್ರಾರಂಭವಾಗಿದೆ. ಅದಷ್ಟೇ ಅವರಿಗೆ ಸಾಕಾಯಿತಿ. ಸ್ವಾಭಿಮಾನದ ಪ್ರಶ್ನೆ! ಮನೆಯ ಯಜಮಾನ ತಾನು ಇನ್ನೂ ಕುಳಿತಿಲ್ಲ. ಊಟ ಪ್ರಾರಂಭವಾಗಿದೆ! ಅಷ್ಟಕ್ಕೆ ಬಿಡಬಾರದು! ರಾಮಣ್ಣನಿಗೆ ವಿನಾಕಾರಣ ಸಿಟ್ಟುಬಂದು, ಅದು ನೆತ್ತಿಗೇರಿ ಮುಖ ಕೆಂಪಾಗಿ, ಮೂಗು ಅರಳಿ ತನ್ನ ಸ್ಥಾನದಲ್ಲಿದ್ದ ದೊಡ್ಡ ಬೆಳ್ಳಿಯ ತಟ್ಟೆಯನ್ನು ದೂರಕ್ಕೆ ಎಸೆದುಬಿಟ್ಟರಂತೆ….ಅತಿಥಿಗಳು ಕಂಗಾಲಾದರು….ಮನೆಯವರಿಗೆಲ್ಲಾ ಮುಜುಗರವಾಯಿತು. ಹೆಂಡತಿತುಳಸಾಬಾಯಿ ಗಂಡನನ್ನು ಸಮಾಧಾನಪಡಿಸುವ ಪ್ರಯತ್ನಗಳೆಲ್ಲಾ ವಿಫಲವಾದವು. ಊಟ ನಡೆದೇ ಇದೆ. ಸಿಟ್ಟಿನಿಂದ ಸಿಡಿಯುತ್ತಿದ್ದ ರಾಮಣ್ಣ ಧಡ ಧಡ ಊಟದ ಮನೆಬಿಟ್ಟು ಹೊರಟುಹೋದವರು ಎಷ್ಟೋ ದಿನಗಳ ಮೇಲೆ ಊರಿಗೆ ವಾಪಸ್ಸಾದರಂತೆ ಎಲ್ಲಿಗೆ ಹೋಗಿದ್ದರೋ ಏನು ಮಾಡುತ್ತಿದ್ದರೋ ಯಾರಿಗೆ ಗೊತ್ತು.

ಇಷ್ಟೆಲ್ಲಾ ಐಶ್ವರ್ಯವನ್ನು ರಾಮಣ್ಣ ಸರಿಯಾಗಿ ನಿಭಾಯಿಸಿದರೆ? ಊರಿಗೊಬ್ಬ ಹಾಡುಗಾರ ಬಂದರೆ ಅವನ ಗಾಯನವನ್ನು ಎಷ್ಟು ದಿನ ಅಂದರೆ ಅಷ್ಟು ದಿನ ಕೇಳುತ್ತ ಕೂಡುವುದು. ನಾಟಕದವರು ಬಂದರೆ ಅವರು ಆಡುವ ನಾಟಕಗಳನ್ನು ನೋಡುತ್ತಾ ಸಂತೋಷದಿಂದ ಕಾಲ ಕಳೆದುಬಿಡುವುದು. ಹರಿಕಥೆದಾಸರು ಬಂದರೆ ತಮ್ಮ ಮನೆಯಲ್ಲಿ ಅವರನ್ನು ಉಳಿಸಿಕೊಂಡು ತಿಂಗಳುಗಟ್ಟಲೆ ಹರಿಕಥಾಶ್ರವಣದಲ್ಲಿ ಮಗ್ನರಾಗಿ ಬಿಡುವುದು….ಏನಿಲ್ಲವೆಂದರೂ ಊರಿನ ಸ್ನೇಹಿತರನ್ನು ಕೂಡಿಸಿಕೊಂಡು ಗಂಟೆಗಟ್ಟಲೆ ಹರಟೆ ಹೊಡೆಯುವುದು….

ನಿತ್ಯ ವ್ಯವಹಾರದ ಜಂಜಾಟದಿಂದ ದೂರವಾಗಿ ಬಹುಶಃ ಬಡ್ಡಿ ವ್ಯವಹಾರ-ವ್ಯಾಪಾರ ಕುಂಠಿತವಾಗಿರಬೇಕು…ಇದರ ಮೇಲೆ ಹುಟ್ಟಿದ ಒಂದೆರಡು ಮಕ್ಕಳು ಸತ್ತು ಹೋದುದರ ಚಿಂತೆ….ಕೊನೆಗೂ ಹುಟ್ಟಿದ ಗಂಡುಮಗು ಉಳಿಯಿತು.

ಕಲೋನ್ನತಿಗಾಗಿ-ಹೆಸರಿಗೆ ಅನ್ವರ್ಥವಾಗಿ
ಅವರೇ ನನ್ನ ತಂದೆ ಗುಂಡಣ್ಣ ನಾಯಕ್.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.