ಡಿಜಿಟಲ್ ಕಂದರವನ್ನು ಬಗೆಯುತ್ತಾ

-ಕುಮಾರ್ ವೆಂಕಟ್ (ಕನ್ನಡಕ್ಕೆ ಸುದರ್ಶನ್ ಪಾಟೀಲ್ ಕುಲಕರ್ಣಿ)

ನಮ್ಮ ಸಾಮಾಜಿಕ ಸಮಸ್ಯೆಗಳ ಕೇಂದ್ರ ಬಿಂದುಗಳಾಗಿರುವ, ಜಗತ್ತಿನ ಮೂಲೆಮೂಲೆಯಲ್ಲೂ ಅವಿತು ಕೂತಿರುವ, ತೀವ್ರ ಬಡತನ ಹಾಗೂ ಜನ ಸಮುದಾಯದಲ್ಲಿನ ಕೆಳವರ್ಗಗಳ ಅವಕಾಶಹೀನತೆ ಇತ್ಯಾದಿಗಳ ನಿವಾರಣೆ ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಶಕ್ತಿಗಳಿಂದ ಮಾತ್ರ ಸಾಧ್ಯವೆಂದೇ ನಾವೆಲ್ಲಾ ನಂಬಿದಂತಿದೆ. ಹೇಗಾದರೂ ಸರಿ, ಈಗಿರುವ ಡಿಜಿಟಲ್ ಕಂದರವನ್ನು ಮುಚ್ಚಲೇಬೇಕೆನ್ನುವ ತುಡಿತ ನಮ್ಮ ಇಂದಿನ ಎಲ್ಲಾ ಪ್ರಮುಖ ಬಡತನ ನಿವಾರಣಾ ಪ್ರಯತ್ನಗಳ ತಿರುಳೇ ಆಗಿರುತ್ತದೆ.

ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಬೇಡಿಕೆಗಳನ್ನು ಬಹುತೇಕವಾಗಿ ತುಂಬಿಸಿರುವ ಮಾಹಿತಿ ತಂತ್ರಜ್ಞಾನ ಕೈಗಾರಿಕಾ ಸಂಸ್ಥೆಗಳು ಸಹಜವಾಗಿಯೇ ಪ್ರಪಂಚದ ಇತೆರೆಡೆಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಲಿವೆ. ಇತ್ತ ಬಡತನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿರುವ ಅಭಿವೃಧ್ಧಿಶೀಲ ದೇಶಗಳ ರಾಜಕೀಯ ನಾಯಕರು, ತಮ್ಮ ಜನತೆಯ ಜೀವನ ಮಟ್ಟವನ್ನು ಎತ್ತರಿಸುವ ಕೊನೆಯ ಆಧಾರಗಳೆಂದು ಹೊಸ ತಂತ್ರಜ್ಞ್ಯಾನ ಮತ್ತು ಜಾಗತಿಕ ಮಾರುಕಟ್ಟೆಗಳ ಮೊರೆಹೋಗ ಹತ್ತಿದ್ದಾರೆ. ಪರಿಣಾಮವಾಗಿ, ಸರ್ಕಾರಿ ಅಧಿಕಾರಿಗಳು ಮತ್ತು ಕೈಗಾರಿಕಾ ವ್ಯಾಪಾರಿಗಳು, ವಿಶ್ವಬ್ಯಾಂಕ್ ಹಾಗೂ ವಿಶ್ವ ಮಾರುಕಟ್ಟೆ ಸಂಸ್ಥೆಗಳ ಬೆಂಬಲದಿಂದ ಸಮಸ್ಯೆಯ ನಿವಾರಣೆಯಲ್ಲಿ ಒಂದೇ ಪಕ್ಷವಹಿಸಿದಂತಾಗಿದೆ.

ತಂತ್ರಜ್ಞಾನದಿಂದ ವಾಸ್ತವದಲ್ಲಿ ನಾವು ಏನನ್ನು ಸಾಧಿಸಬಹುದೆಂಬುದರ ಬಗ್ಗೆ ಸರಿಯಾದ ತಿಳುವಳಿಕೆಯೊಂದು ನೀತಿನಿಯಮಾವಳಿಗಳ ಹೇಳಿಕೆಗಳಿಂದಲೂ, ವ್ಯಾಪಾರೀ ಪ್ರಣಾಳಿಕೆಗಳಿಂದಲೂ, ಬಡತನ ನಿವಾರಣಾ ಸಲಹಾ ಪಟ್ಟಿಗಳಿಂದಲೂ, ಸದಾ ಮಾಯವಾಗಿಯೇ ಬಿಟ್ಟಿರುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಕಂದರಗಳು, ಈ ಡಿಜಿಟಲ್ ಕಂದರಕ್ಕೆ ಮೂಲಕಾರಣಗಳೋ, ಅಥವಾ ಅವು ಇದರದ್ದೇ ತತ್ಪರಿಣಾಮಗಳೋ ಎಂಬುದು ಇಂದಿನ ಒಂದು ಬಹುಮುಖ್ಯ ಪ್ರಶ್ನೆಯಾಗಿಯೇ ಉಳಿದಿದೆ.

ಬಡತನ ನಿರ್ಮೂಲನೆಗೆಂದಿರುವ ಪ್ರಮುಖ ಅಂತರ್‌ರಾಷ್ಟ್ರೀಯ ಸಂಸ್ಥೆ, ಸಂಯುಕ್ತರಾಷ್ಟ್ರಾಭಿವೃದ್ಧಿ ಕಾರ್ಯಕ್ರಮ(ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೊಗ್ರಾಂ), ತನ್ನ ೨೦೦೧ನೇ ಸಾಲಿನ ಮಾನವ ಅಭಿವೃದ್ಧಿ ವರದಿ ಪತ್ರದಲ್ಲಿ, ‘ತಂತ್ರಜ್ಞಾನದ ಕಂದರ, ಆರ್ಥಿಕ ಕಂದರವನ್ನೇನೂ ಅನುಸರಿಸಬೇಕಿಲ್ಲ’ ಎಂಬಂತೆ ಹೇಳಿಕೆ ಕೊಟ್ಟಿದೆ. ಆದರೆ ಈ ಹೇಳಿಕೆಗಳಿಗೆ ತದ್ವಿರುದ್ಧವಾಗಿ, ಈವರೆಗಿನ ಸಾಕ್ಷ್ಯಾಧಾರಗಳು ಮಾತ್ರ, ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಈ ತಂತ್ರಜ್ಞಾನ ವಿಭಜನೆಯೆಂಬುದು, ಆದಾಯ ವಿಭಜನೆಯನ್ನು ಯಾವತ್ತೂ ನಿಯಮಿತವಾಗಿಯೇ ಅನುಸರಿಸಿಕೊಂಡು ಬಂದಿದೆ ಎಂದೇ ತೋರಿಸುತ್ತವೆ. ಅಂತರ್ಜಾಲಕ್ಕೆ ಸಂಪರ್ಕಿಸಲ್ಪಟ್ಟ ಶೇ.೯೬ರಷ್ಟು ಗಣಕಯಂತ್ರಗಳಿರುವುದು, ವಿಶ್ವ ಜನಸಂಖ್ಯೆಯ ಶೇ.೧೫ರಷ್ಟು ಜನರಿಗೆ ಮಾತ್ರ ಮನೆಯಾಗಿರುವ ಸಂಪದ್ಭರಿತ ರಾಷ್ಟ್ರಗಳಲ್ಲಿ. ಅಮೇರಿಕೆಯ ಶೇ.೬೦ ಜನರಿಗೆ ಮಾತ್ರ ಅಂತರ್ಜಾಲದ ಜೊತೆ ಯಾವುದಾದರೊಂದು ಬಗೆಯಲ್ಲಿ ಸಂಪರ್ಕವಿದ್ದು, ಈ ಅಂಕಿ‌ಅಂಶಗಳು ಮನೆಯ ವಾರ್ಷಿಕ ಆದಾಯಕ್ಕೆ ಅತ್ಯಂತ ನಿಕಟವಾಗಿ ಸಂಬಂಧಪಟ್ಟಿವೆ. ಭಾರತದಲ್ಲಿ ಬರೀ ಶೇ ೦.೫ರಷ್ಟು ಅಂದರೆ ನೂರು ಕೋಟಿ ಜನಸಂಖ್ಯೆಯ ದೇಶದಲ್ಲಿ ಉನ್ನತ ಆದಾಯಮಟ್ಟ, ಶಿಕ್ಷಣ ಮತ್ತು ಗಣಕಯಂತ್ರ ಬಳಕೆಯಲ್ಲಿ ಕುಶಲತೆ ಹೊಂದಿದ ಬರೀ ೫೦ ಲಕ್ಷ ಜನರಿಗೆ ಮಾತ್ರ ಅಂತರ್ಜಾಲ ಕೈಗೆಟಕುತ್ತಿದೆ.

ಉಳ್ಳವರೇ ಪಡೆವವರು

ಹೀಗಾಗಿ ತಂತ್ರಜ್ಞಾನ ಲಭ್ಯತೆ ಮತ್ತದರ ಪರಿಣಾಮಗಳತ್ತ ಲಕ್ಶ್ಯ ವಹಿಸುವುದು ಇಂದು ಅತ್ಯವಶ್ಯವಾಗಿದೆ. ಅಮೇರಿಕೆಯ ಇತ್ತೀಚಿನ ಆರ್ಥಿಕ ಉಲ್ಬಣತೆ ಬಹುಪಾಲು ಹೊಸ ತಂತ್ರಜ್ಞಾನದಿಂದಲೇ ಆದದ್ದು. ಇಷ್ಟೆಲ್ಲಾ ತಂತ್ರಜ್ಞಾನ ಮತ್ತು ಸಿರಿತನವಿದ್ದಾಗಲೂ ಆ ದೇಶದ ರಾಷ್ಟ್ರೀಯ ಬಡತನ ದರ ಮಾತ್ರ, ೧೯೭೦ರ ಮಧ್ಯದ ಕಂಪ್ಯೂಟರ್ ಕ್ರಾಂತಿಗಿಂತ ಮೊದಲು ಎಷ್ಟಿತ್ತೊ, ಅಂದರೆ ಶೇ. ೧೧ ಕ್ಕಿಂತಲೂ ಅಧಿಕದಷ್ಟಿದೆ. ಸುಮಾರು ನಾಲ್ಕು ಕೋಟಿ ಅಮೇರಿಕನ್ನರು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದರೆ, ಶೇ.೧೫ರಷ್ಟು ಮಕ್ಕಳು ಬಡತನದಲ್ಲಿ ಬೆಳೆಯುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಮಾರುಕಟ್ಟೆ ಶಕ್ತಿಗಳು ಅಮೇರಿಕೆಯ ಬಡತನ ಸಮಸ್ಯೆಯನ್ನು ಎದುರಿಸುವಲ್ಲಿ ವಿಫಲವಾಗಿವೆ ಎಂಬುದು ಇದರಿಂದ ಸ್ಪಷ್ಟವಾಗಿಯೇ ಸಾಬೀತಾಗುತ್ತದೆ. ಅಷ್ಟೇ ಅಲ್ಲ, ಈ ಶಕ್ತಿಗಳು ತಮಗೆ ಎಲ್ಲಿ ಲಾಭವಿಲ್ಲವೋ ಅತ್ತ ನೋಡುವುದೇ ಇಲ್ಲ ಎಂಬುದೂ, ನಮಗೆ ಇಲ್ಲಿ ಕಂಡುಬರುತ್ತದೆ.

ಅಲ್ಲದೇ, ಅಮೇರಿಕೆಯ ಶ್ರೀಮಂತ ಹಾಗೂ ಬಡವನ ನಡುವಿನ ಆದಾಯದ ಅಂತರ ಕಳೆದ ಕಾಲು ಶತಮಾನದಲ್ಲಿ ಶೇ.೫೦ರಷ್ಟು ಅಧಿಕಗೊಂಡಿದೆ. ಇದರರ್ಥವಿಷ್ಟೇ. ಮಾರುಕಟ್ಟೆಯ ಶಕ್ತಿಗಳು ಹೊಸ ತಂತ್ರಜ್ಞಾನವನ್ನು ಹರಡಿದಂತೆಲ್ಲಾ, ಈಗಾಗಲೇ ಉತ್ತಮವಾಗಿರುವವರು ಮಾತ್ರ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಇದ್ದು, ಈಗಾಗಲೇ ಕಾಲಾಂತರದಿಂದ ಇರುವ ಆರ್ಥಿಕ ಅಸಮಾನತೆಯನ್ನು ಇದು ಹೋಗಲಾಡಿಸುವ ಬದಲು ಮತ್ತಷ್ಟು ಬಲಪಡಿಸುತ್ತದೆ.

ಅಮೇರಿಕೆಯಂತೂ “ಉತ್ತಮ”ರಲ್ಲಿನ ಉದಾಹರಣೆ. ಇನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಬಡತನ ಸಮಸ್ಯೆಯನ್ನಂತೂ ಕೇಳುವುದೇ ಬೇಡ. ಅದು ಇನ್ನಷ್ಟು ಹರವಾದದ್ದು ಮತ್ತು ಆಳವಾದದ್ದು. ದಿನವೊಂದಕ್ಕೆ ಒಂದು ಡಾಲರಿಗಿಂತಲೂ ಕಡಿಮೆ ಆದಾಯ ಪಡೆವ ೧೩೦ ಕೋಟಿ ಜನರಲ್ಲಿ ಬಹುಪಾಲಿನವರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಾರೆ. ಅಮೇರಿಕೆಯಂಥ ದೇಶ ತಾನು ತನ್ನ ಅತ್ಯುತ್ತಮ ಆರ್ಥಿಕ ಸ್ಥಿತಿಯಲ್ಲಿರುವಾಗಲೇ, ತನ್ನ ಸೀಮೆ ಮಾತ್ರದಲ್ಲಿಯೇ ಬಡತನವನ್ನು ನಿವಾರಿಸದೇ ಹೋಗಿರುವ ಪಕ್ಷದಲ್ಲಿ, ಅಭಿವೃದ್ಧಿಶೀಲ ದೇಶಗಳು ತಂತ್ರಜ್ಞಾನ ಹಾಗೂ ಮಾರುಕಟ್ಟೆಗಳೆಂಬ ಇವೇ ಸಲಕರಣೆಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಗಾತ್ರದಲ್ಲಿರುವ ಈ ಸಮಸ್ಯೆಯನ್ನು ನಿರ್ಮೂಲನ ಮಾಡಿಯಾವು ಎಂದು ನಾವು ಬಯಸುವುದು ಸಾಧುವೆ?

ಸಂಯುಕ್ತ ರಾಷ್ಟ್ರ ಅಭಿವೃದ್ಧಿ ಕಾರ್ಯಕ್ರಮದ ವರದಿ ಪತ್ರ, ಕನಿಷ್ಠ ಪಕ್ಷ ತಂತ್ರಜ್ಞಾನ ಸೃಷ್ಟಿಸಲ್ಪಡುವುದು ಬಡವರ ಬೇಡಿಕೆಗಾಗಿ ಅಲ್ಲ ಎಂತಲೂ, ಬದಲು ಮಾರುಕಟ್ಟೆಯ ಒತ್ತಡಗಳಿಂದಾಗಿ ಎಂತಲಾದರೂ ಒಪ್ಪಿಕೊಳ್ಳುತ್ತದೆ. ಇತ್ತ ಮಾರುಕಟ್ಟೆಗಳು, ಶ್ರೀಮಂತ ವರ್ಗದವರ ಬಂಡವಾಳ ಹಾಗೂ ಬಳಕೆ ಪ್ರವೃತ್ತಿಯಿಂದಲೂ ನಿರ್ದೇಶಿಸಲ್ಪಡುತ್ತವೆ. ಬಹಳಷ್ಟು ಕಡೆಗಳಲ್ಲಿ ಮರುದಿನದ ಊಟದ ಯೋಚನೆಯಿಲ್ಲದವರ ಅಥವಾ ವೈದ್ಯಕೀಯ ಚಿಕಿತ್ಸೆಗಳಿಗೆ ಚಿಂತಿಸಪಡಬೇಕಾಗಿಲ್ಲದವರ ಜೀವನವನ್ನು ಇನ್ನಷ್ಟು ಅನುಕೂಲಕರವೂ ಮತ್ತು ಆರಾಮದಾಯಕವೂ ಮಾಡಬೇಕೆಂದೇ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿರುವುದನ್ನು ನಾವು ಕಾಣುತ್ತೇವೆ. ಬಡತನ ನಿವಾರಣೆಯ ಹೆಚ್ಚಿನ ಲಕ್ಷ್ಯ ಮನುಷ್ಯನ ಮೂಲಭೂತ ಬೇಡಿಕೆಗಳೇ ಇನ್ನೂ ನೀಗದೇ ಇರುವ ಸ್ಥಿತಿಯಲ್ಲಿ ಇತರೇ ಹೆಚ್ಚಿನ ಅನುಕೂಲಕ್ಕಾಗಿ ಈ ತಂತ್ರಜ್ಞಾನಗಳನ್ನು ಬಳಸುವುದನ್ನು ನಾವು ಕಾಣುತ್ತೇವೆ.

ಇದರರ್ಥ, ಬಡದೇಶಗಳ ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಏನೂ ಉಪಯೋಗವಿಲ್ಲ, ಅಥವಾ ಮಾರುಕಟ್ಟೆ ಆಧಾರಿತ ಮಾರ್ಗಗಳನ್ನು ಬಳಸುವುದರಿಂದ ಬಡತನದ ಮೇಲಿನ ದೊಡ್ಡ ಬೀಸಿನ ಆಕ್ರಮಾಣದಲ್ಲಿ ಅವುಗಳಿಗೆ ಯಾವ ಪಾತ್ರವೂ ಇಲ್ಲ, ಅಂತಲ್ಲ. ಜಗತ್ತಿನ ಅತ್ಯಂತ ಬಡದೇಶಗಳಲ್ಲಿ ಒಂದಾದ ಬಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕು ಸಾವಿರಾರು ಗ್ರಾಮಗಳಲ್ಲಿ ಉದ್ಯಮಗಳನ್ನು ಪ್ರೋತ್ಸಾಹಿಸಲು “ಮೈಕ್ರೋ-ಕ್ರೆಡಿಟ್” (ಅಲ್ಪ-ಸಾಲ) ಎಂಬ ವಿಧಾನವನ್ನು ಬಳಸುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ, ಒಬ್ಬ ಉದ್ಯಮಿ ಸೆಲ್ಯುಲರ್ ಫೊನಿನ ಸೇವೆಯನ್ನು ಬ್ಯಾಂಕಿನ ಸಬ್ಸಿಡಿದಾರನೊಬ್ಬನಿಂದ ಖರೀದಿಸಿ “ಕರೆಗೊಂದು ದರ”ದಂತೆ ನಡೆಸುತ್ತಾನೆ. ಪರಿಣಾಮವಾಗಿ ಇಡೀ ಹಳ್ಳಿಯೊಂದು ದೂರವಾಣಿ ಜಾಲಕ್ಕೆ ಸೇರಿದಂತಾಗುತ್ತದೆ. ಈ ಸಣ್ಣ ಗಾತ್ರದ ಉದ್ಯಮಗಳು ಸಾಲ ಮರುಪಾವತಿಯ ದರ ಅಧಿಕವಾಗಿದ್ದಾಗಲೂ ಲಾಭಗಳಿಸುವಲ್ಲಿ ಸಫಲವಾಗಿವೆ.

ಈ ಕಾರ್ಯಕ್ರಮ ವ್ಯಾಪ್ತಿಯಲ್ಲಿ ಸಣ್ಣದಾದರೂ, “ಅಲ್ಪ-ಸಾಲ” ಪದ್ಧತಿ ಬಡದೇಶಗಳಲ್ಲಿ, ಕೆಲವೇ ನೂರು ಡಾಲರುಗಳ ಮಟ್ಟದಲ್ಲಿ ಪರಿಣಾಮಕಾರಿಯಾಗಬಲ್ಲದೆಂದು ಗ್ರಾಮೀಣ ಬ್ಯಾಂಕಿನ ಅನುಭವದಿಂದ ನಮಗೆ ತಿಳಿದುಬರುತ್ತದೆ. ಇಂಥ ಸೃಜನಶೀಲ ಬಗೆಗಳನ್ನು ಇನ್ನೂ ದೊಡ್ಡಗಾತ್ರದಲ್ಲಿ, ಹೊಸ ತಂತ್ರಜ್ಞಾನ ಮತ್ತು ಜಾಗತೀಕರಣದ ಸುತ್ತ ಹರಡಿರುವ ಠೊಳ್ಳುಗಳಲ್ಲಿ ಸಿಲುಕಿಕೊಳ್ಳದೇ ಬಳಸುವುದರಲ್ಲಿ ಹೊಸ ಸವಾಲುಗಳು ಅಡಗಿವೆ.

ಅಲ್ವಿನ್ ಟೋಫ್ಲರ್ ಎಂಬ ಭವಿಷ್ಯತ್ಕಾರ ಈ “ಮೈಕ್ರೊ ಕ್ರೆಡಿಟ್” (ಅಲ್ಪ ಸಾಲ)ದ ಯೋಜನೆಯನ್ನು “ಮೈಕ್ರೊ-ಟ್ರೇಡ್” (ಸಣ್ಣ-ಮಾರಾಟ)ದೊಡನೆ ಸಂಯೋಜಿಸುವಂತೆ ಕರೆ ನೀಡಿದ್ದಾನೆ. ಸಣ್ಣ ಹಳ್ಳಿಗಳಲ್ಲಿರುವ ಬಡಜನರು ಅಂತರ್ಜಾಲವನ್ನು, ಸಣ್ಣ ಪ್ರಮಾಣದಲ್ಲಿ ಕೃಷಿಪದಾರ್ಥಗಳು ಹಾಗೂ ಕರಕುಶಲ ವಸ್ತುಗಳಿಗಾಗಿ ಸಹಸ್ರಾರು ಮೈಲಿ ದೂರದಲ್ಲಿರುವ ಮಾರುಕಟ್ಟೆಗಳನ್ನು ಗುರುತಿಸಲು ಬಳಸುವ ಕನಸನ್ನು ಆತ ಕಾಣುತ್ತಾನೆ.

ನಿಸ್ಸಂಶಯವಾಗಿ, ಇಲ್ಲಿರುವ ಸಮಸ್ಯೆ ಏನೆಂದರೆ ಇಂಥದಕ್ಕೆ, ಜನ ದೂರದ ಸ್ಥಳಗಳಿಗೆ ಮಾರಾಟ ಮಾಡಲಾಗಲಿ, ಗ್ರಾಹಕರನ್ನು ಉತ್ತೇಜಿಸಲಾಗಲಿ, ಕಂಪ್ಯೂಟರಿನಲ್ಲಿ ಆಸ್ಥೆಯಿರುವ ಮಾತಿರಲಿ ಅಕ್ಷರ ಕಲಿತವರೂ ಆಗಿರುವುದಿಲ್ಲ. ಅಲ್ಲದೇ, ಅಂತರ್ಜಾಲದ ಮೂಲಕ ಮಾಹಿತಿಯನ್ನು ಕಳುಹಿಸುವುದು ಅನುಕೂಲಕರವಾಗಿದ್ದರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ವಸ್ತುಗಳನ್ನು ಎಲ್ಲೆಡೆಗೆ, ಅದೂ ಸಾಗಾಣಿಕೆಯ ವ್ಯವಸ್ಥೆಯ ಮೂಲಹಂದರವೂ ಇರದ ಸಣ್ಣ ಹಳ್ಳಿಯಿಂದ ಸಾಗಿಸುವುದು, ಕಠಿಣವೂ ಅದಕ್ಷವೂ ಆದ ಕ್ರಮವಾಗಿರುತ್ತದೆ.

ಮಾಜಿ ವ್ಯಾಪಾರಿ ಮತ್ತು ಇಂದು ಭಾರತದಲ್ಲಿ ಬಂಡವಾಳ ಹೂಡಿಕೆದಾರನೂ ಆಗಿರುವ ಗುರುಚರಣ್‌ದಾಸ್ ತನ್ನ ಇತ್ತೀಚಿನ “ಇಂಡಿಯಾ ಅನ್‌ಬೌಂಡ್” ಎಂಬ ಕೃತಿಯಲ್ಲಿ, ವಿಶ್ವ ಮಾರುಕಟ್ಟೆ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಜಾಗತಿಕ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಭಾರತದಂಥ ಅಭಿವೃದ್ಧಿ ಶೀಲ ದೇಶಗಳು ತಾವು ಯಾವುದರಲ್ಲಿ ಸಮರ್ಥರೋ ಅವನ್ನು ಮಾತ್ರ ಉತ್ಪಾದಿಸಿ, ಉಳಿದದ್ದನ್ನು ಆಯಾತಮಾಡಿಕೊಳ್ಳಬೇಕು ಎನ್ನುತ್ತಾನೆ. ಉದಾಹರಣೆಗಾಗಿ, ಸಣ್ಣ ತಂತ್ರಾಂಶವೊದು ದೊಡ್ಡ ಪ್ರಮಾಣದಲ್ಲಿ ಉಕ್ಕಿನಂಥ ಸಾಮಾನ್ಯ ವಸ್ತುವೊಂದನ್ನು ಖರೀದಿಸಬಲ್ಲದು ಎನ್ನುತ್ತಾನೆ. ಹಾಗಾದಲ್ಲಿ ಈಗಾಗಲೇ ಇತರ ವಸ್ತುಗಳನ್ನು ಉತ್ಪಾದಿಸುತ್ತಿದ್ದು, ಈ ಮಾರಾಟ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದಂಥವರ ಪಾಡೇನು? ಜಾಗತಿಕ ವ್ಯಾಪಾರವೆಂಬುದು ಸ್ಥಳೀಯ, ವೈವಿಧ್ಯಮಯ ಮತ್ತು ಆರೋಗ್ಯಕರ ಅರ್ಥವ್ಯವಸ್ಥೆಗಳಿಗೆ ಪರ್ಯಾಯವಾಗಲಾರದು.

ಬಡವರು ವ್ಯಾಪಾರೀ ಅವಕಾಶಗಳೆ?

ಕೋಟ್ಯಾಂತರ ಜನರು ಇವರುಗಳು ತಯಾರಿಸಿದ ವಸ್ತುಗಳನ್ನು ಖರೀದಿಸಲಾರದೇ ಹೋಗುತ್ತಿರುವುದರಿಂದ ತಂತ್ರಜ್ಞಾನ ಸಂಸ್ಥೆಗಳಿಗೂ ಈ ಡಿಜಿಟಲ್ ಕಂದರವೆಂಬುದು ಒಂದು ದೊಡ್ಡ ಕಾಳಜಿಯೇ ಆಗಿದೆ. ಬಡತನವನ್ನು, ಬಗೆಹರಿಸಲೇಬೇಕಾದ ಗಂಭೀರ ಸಮಸ್ಯೆಯೆಂಬಂತೆ ಪರಿಗಣಿಸದೇ, ಕೈಗಾರಿಕೆಗಳು ಈ ಮಾರುಕಟ್ಟೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲಾರರು. ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕರೂ, ಅಧ್ಯಕ್ಷರೂ ಆಗಿರುವ ಬಿಲ್ ಗೇಟ್ಸ್‌ರವರು ಅಭಿವೃದ್ಧಿಶೀಲ ದೇಶಗಳಲ್ಲಿರುವ ಬಡಜನರು ಗಣನೀಯ ವ್ಯಾಪಾರೀ ಅವಕಾಶಗಳೇನೂ ಅಲ್ಲವೆಂದು ಸ್ಪಷ್ಟವಾಗಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ.

ಹ್ಯುಲೆಟ್ ಪ್ಯಾಕರ್ಡ್ ಸಂಸ್ಥೆ ಮಾತ್ರ, ತಾನು “ಬೆಳೆಯುವ ಗತಿಯಲ್ಲೇ, ಇನ್ನೂ ಉತ್ತಮನೂ ಆಗಬಹುದು” ಎಂದುಕೊಳ್ಳುತ್ತಾ‌ಈ ವಿಷಯದಲ್ಲಿ ಹೆಚ್ಚು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇವರ, ಸಕಲರನ್ನೂ ವಿದ್ಯುನ್ಮಾನ ತಂತ್ರಜ್ಞಾನದಡಿಯಲ್ಲಿ ತರಲೆಂಬ ಮಹತ್ವಾಕಾಂಕ್ಷೆಯ ವರ್ಲ್ಡ್ ಇ-ಇನ್‌ಕ್ಲುಜನ್ ಎಂಬ ಕಾರ್ಯಕ್ರಮ, ಮನೆಯಿಂದಲೇ ದೂರದ ಕೆಲಸ ನಿರ್ವಹಿಸಲ್ಪಡಲು ಸಾಧ್ಯವಾಗಿಸುವ ಟೆಲಿಕಮ್ಯೂಟಿಂಗ್, ವಿ-ವಾಣಿಜ್ಯ ಮತ್ತಿತರ ಹಣಕಾಸಿಗೆ ಸಂಬಂಧಪಟ್ಟ ಸೇವೆ, ಇಂಥ ಕ್ಷೇತ್ರಗಳಲ್ಲಿ, ಸ್ಥಳೀಯ ಸಹವರ್ತಿಗಳೊಡನೆ ತಕ್ಕುದಾದ ತಂತ್ರಾಂಶಗಳ ಮೇಲೆ ಕೆಲಸ ಮಾಡುವ ಯೋಜನೆಯಾಗಿದೆ. ಈ ತಂತ್ರಾಶಗಳ ಆಯ್ಕೆಯಲ್ಲಿ ವಾಸ್ತವದ ಒತ್ತಡಗಳು ಯಾವ ರೀತಿಯ ಪ್ರಭಾವ ಬೀರಬಹುದೆಂಬುದು ಕಾದು ನೋಡಬೇಕಾದ ವಿಷಯವಾಗಿದೆ. ಅದರಲ್ಲೂ ಈ ಸಂಸ್ಥೆ ಹೆಚ್ಚು ಆಸ್ಥೆವಹಿಸಿರುವ, ಜಗತ್ತಿನ ಯಾವುದೇ ಮೂಲೆಯಲ್ಲೂ ಕುಳಿತು ಇನ್ನಾವುದೋ ಮೂಲೆಯಲ್ಲಿನ ಕೆಲಸ ಮಾಡಬಹುದಾದ ಅನುಕೂಲ ಕಲ್ಪಿಸುವ “ಇ-ಜಾಬ್ಸ್” ನಂತಹ ತಂತ್ರಾಂಶಗಳು ಹೆಚ್ಚಿನ ಶಿಕ್ಷಣ ಮತ್ತು ಕುಶಲತೆಯನ್ನು ಪಡೆದವರಿಗೆ ಮಾತ್ರ ಸಮರ್ಪಕವಾಗಿರುವಂತೆ ಕಾಣುತ್ತವೆ.

ತಂತ್ರಜ್ಞಾನ ನಿರ್ಮಿಸಿರುವ ಕಂದರ, ಈಗಾಗಲೇ ಮೂಲಭೂತ ಆವಶ್ಯಕತೆಗಳನ್ನು ಹೊಂದಿದ, ಆದರೆ ತಂತ್ರಜ್ಞಾನ ಕೈಗೆಟುಕದೇ ಹಿಂದುಳಿದವರ ಪಾಲಿಗೆ ಹೆಚ್ಚು ನಿಜವಾಗಿದೆ. ಈ ಕಂದರದ ನಿವಾರಣೆ, ಅಂಥ ವರ್ಗದ ಜನಸಮುದಾಯದಕ್ಕೆ ಒಂದು ದೊಡ್ಡ ವ್ಯತ್ಯಾಸವನ್ನೂ, ಟೆಕ್ನಾಲಜಿ ಕಂಪನಿಗಳಿಗೆ ಹೊಸ ಆದಾಯವನ್ನೂ ಉಂಟುಮಾಡಬಹುದು.

ಇನ್ನೊಂದೆಡೆ, ಸರಿಯಾದ ಪೌಷ್ಟಿಕ ಆಹಾರ, ಪ್ರಾಥಮಿಕ ಆರೋಗ್ಯ, ಮೂಲಭೂತ ಶಿಕ್ಷಣ, ಶುದ್ಧ ನೀರು, ಮತ್ತು ವಾಸಕ್ಕೆ ಶುಚಿಯಾದ ವಾತಾವರಣದ ಕೊರತೆಯಿರುವ ಲಕ್ಷಾಂತರ ಜನರ ಪಾಲಿಗೆ ಈ ಡಿಜಿಟಲ್ ಕಂದರವೆಂಬುದೊಂದು ಯಾವ ಅರ್ಥವೂ ಇಲ್ಲದ ಪದವಷ್ಟೆ. ಏಕಕಾಲದಲ್ಲಿ ಈ ಅವಶ್ಯಕತೆಗಳು ಪೂರ್ಣಗೊಳ್ಳದೆ, ಮಾಹಿತಿ ತಂತ್ರಜ್ಞಾನವನ್ನು ಕೊಡುವುದು ಉಪಯುಕ್ತವಾಗಲಾರದು. ಹಳ್ಳಿಯೊಂದರ ಪ್ರಾಥಮಿಕ ಶಾಲೆ, ಕಂಪ್ಯೂಟರಿನ ಸೌಲಭ್ಯ ಪಡೆದರೂ, ದಿನನಿತ್ಯದ ಬದುಕು ಬದುಕಲು ಸೆಣಸುತ್ತಿರುವ ತಂದೆತಾಯಿಗಳನ್ನು ಪಡೆದ, ಮೂಲ ವೈದ್ಯಕೀಯ ಚಿಕಿತ್ಸೆಯೂ ಸಿಗದ, ಪೌಷ್ಟಿಕತೆಯ ಕೊರತೆಯಿರುವ, ಮಗುವೊಂದು ಅದರಿಂದ ಏನನ್ನೂ ಪಡೆಯಲಾರದು.

ಇಂಥ ಆಳವಾಗಿರುವ ಮತ್ತು ತೀವ್ರವಾಗಿರುವ ಬಡತನದ ಸಮಸ್ಯೆಗೆ ಗಂಭೀರವಾದ ಪರಿಹಾರವೊಂದು ಡಿಜಿಟಲ್ ಕಂದರವೆಂಬುದರ ಆಚೆಗೆ, ಆಳಡಿಯಲ್ಲಿ ಅಡಗಿರುವ ಸಾಮಾಜಿಕ ಅಸಮಾನತೆಗಳಾನ್ನು ಎದುರಿಸುವಂತಹದ್ದಾಗಿರಬೇಕು. ಏನೇ ಆದರೂ ಸಮಸ್ಯೆಗೆ ತಕ್ಕಂತೆ ಸಮಾಧಾನವನ್ನು ಕಂಡುಕೊಳ್ಳಬೇಕು. ಬಡತನದಂತಹ ಕಾಲಾಂತರದ ಸಮಸ್ಯೆ, ಮನುಕುಲದ ಬೇಡಿಕೆ ಮತ್ತು ಆಶಯಗಳನ್ನು ತಲುಪುವ, ಸಮರ್ಪಕವಾದ ಮತ್ತು ಸ್ಥಿರವಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಟ್ಟಿದ ಜನಕೇಂದ್ರಿತ ಬಗೆಯೊಂದನ್ನು ಬೇಡುತ್ತದೆ. ಸಮಾಜ, ಭೂರಹಿತ ಕಾರ್ಮಿಕರಿಗೆ, ಗ್ರಾಮೀಣ ವಿಭಾಗದ ಬಡ ರೈತರಿಗೆ, ಅಲ್ಪ-ಕೂಲಿ ಪಡೆವ ನಗರದ ಕೊಳೆಗೇರಿಯ ಕೆಲಸಗಾರರಿಗೆ, ಬದುಕಲು ತಕ್ಕುದಾದ ಆದಾಯವನ್ನು ಪಡೆಯಲು ಮತ್ತು ತಮ್ಮ ಬೇಡಿಕೆಗಳನ್ನು ಇನ್ನೂ ಹೆಚ್ಚಿನ ಆತ್ಮ ಗೌರವದಿಂದ ಪೋರೈಸಿಕೊಳ್ಳಲು ತಕ್ಕ ಮಾರ್ಗಗಳನ್ನು ಹುಡುಕಬೇಕು.

ಇಂದಿನ ಮಾಹಿತಿ ತಂತ್ರಜ್ಞಾನ ಹಾಗೂ ಜಾಗತೀಕರಣದ ಈ ಯುಗದಲ್ಲಿ ನಾವು ಬಡತನವನ್ನು ನೋಡುವ ಮತ್ತದನ್ನು ಪರಿಹರಿಸುವ ಬಗೆಯೊಂದು, ಸಂಪೂರ್ಣ ವಿಭಿನ್ನ ದೃಷ್ಟಿಮಟ್ಟವನ್ನೇ ಬೇಡುತ್ತಿದೆ, ಎಂಬುದರಲ್ಲಿ ಎರಡು ಮಾತಿಲ್ಲ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.