ಬೇಟೆ

ಅತ್ತಿಂದಿತ್ತ ಇತ್ತಿಂದತ್ತ
ಎತ್ತೆತ್ತಿ ಒಗೆಯುತ್ತಿದೆ ಅವ್ಯಕ್ತ ಹಸ್ತ
ವಿತ್ತ-ಖ್ಯಾತಿಗಳ ನಿಮಿತ್ತವಿರದು
ನಿಕ್ಷಿಪ್ತ ನಿಯಮಕ್ಕೆ ಚಿತ್ತ ನಿರ್ಲಿಪ್ತ

ನೆಲಕಿನ್ನೂ ಅಂಟಿಲ್ಲ, ನೀರಿನ ಸೆಳೆತ
ಮಿಡಿತ ಮಾಗುವ ಮೊದಲೇ ಮತ್ತೊಂದರ ಮೊರೆತ
ಕೈಮೀರಿದಾಟಕ್ಕೆ, ಹುಚ್ಚೆದ್ದ ಓಟಕ್ಕೆ
ಏನು ಗುರಿ? ಯಾವ ಪುರುಷಾರ್ಥ?

ನೀರ ಋಣ ಸ್ನೇಹ ಋಣ ಬಂಧು ಋಣ ಪ್ರೀತಿ ಋಣ;
ಪಡೆದದ್ದ ಕೊಡುವುದು; ಕೊಟ್ಟಿದ್ದ ಪಡೆವುದು;
ಚಲನಶೀಲತೆಯೇ ಬದುಕು; ನಿಶ್ಚಲತೆ ಸಾವು;
ಸಾಕು ನಿಲ್ಲಲಿ, ಇನ್ನೆಷ್ಟು ಕಾರಣ?

ನಿರ್ಭವದ ನಶೆಯೊಳಗೆ ನಿರಪೇಕ್ಷ ನಡಿಗೆ
ಸಾಪೇಕ್ಷ ಸೂತ್ರದಲಿ ಸೌಂದರ್ಯದನುಭಾವ
ನೆಲೆಯಿಂದ ನೆಲೆಗೆ, ಕಲೆಯಿಂದ ಕಲೆಗೆ
ಕನಸುಗಳ ಪರಿಭ್ರಮಣ ಜೀವನದ ವೈಭವ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.