ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ ದಿನ ಹೆಬ್ಬಾವಿನ ಹಾಗೆ ಮಿಸುಕಾಡದೆ ಮಲಗಿದ್ದ ಸಮುದ್ರ ಈಗ ಧಾರಾಳವಾಗಿ ಉಸಿರಾಡುತ್ತಿರುವಂತೆ ಮೈಯುಬ್ಬಿಸಿ ತನ್ನ ಸಣ್ಣ ಸಣ್ಣ ಅಲೆಗಳಿಂದ ತೀರವನ್ನು ಬರಸೆಳೆಯತೊಡಗಿತ್ತು. ಕಳೆದ ವರ್ಷವೆಲ್ಲ ಹಲವು ತಾಪತ್ರಯಗಳು. ಒಂದೊಂದೂ ಮನಸ್ಸನ್ನು ಹಿಂಡಿ ಹಿಂಡಿ ಅವಳನ್ನು ಹಣ್ಣುಮಾಡಿದ್ದುವು: ಕೋಡಂಬಾಕ್ಕಂನ ಹಳೆಯ ಮನೆಯಿಂದ ಬೆಸೆಂಟ್‌ನಗರದ ಇನ್ನೊಂದು ಮನೆಗೆ ಸ್ಥಳಾಂತರ; ಸುಣ್ಣಬಣ್ಣಕ್ಕಾಗಿ, ಸಾಮಾನು ಸರಂಜಾಮಿನ ಒಪ್ಪ ಓರಣಕ್ಕಾಗಿ ಪರದಾಟ; ತೀರ ಹತ್ತಿರದವರ ಅನಾದರದಿಂದ ಪ್ರಪಂಚವೇ ಬರಿದಾದ ಅನುಭವ; ದಿನಗಳೆದಂತೆ ಕ್ಷಣಕ್ಷಣವೂ ತಾನೇ ಅಗೋಚರವಾದೊಂದು ದಿಕ್ಕಿನತ್ತ ನಿರಾಯಾಸವಾಗಿ ತುಯ್ಯುತ್ತಿರುವ ಹಾಗೆ ಭ್ರಮೆ. ಅಥವಾ ಭಯವೋ? ಆದರೆ ಈಗ ಇಲ್ಲಿ, ಈ ಸಮುದ್ರ ತೀರದಲ್ಲಿ ಸಪಾಟಾಗಿ ಹರಡಿಕೊಂಡ ಮರಳಿಗೂ ಉದ್ದಕ್ಕೆ ಸಾಗಿದ ಡಾಂಬರು ರಸ್ತೆಗೂ ನಡುವೆ ನೆರಳು ಹಾಸಿರುವ ಒಂದೇ ಒಂದು ಹೊಂಗೆಯ ಮರದ ಕೆಳಗೆ ಕುಳಿತವಳಿಗೆ ಸರಸರನೆ ಮರವೇರಿ, ಉಬ್ಬಿದ ಬಾಲವನ್ನೆತ್ತಿ ರೆಂಬೆಕೊಂಬೆಯಗುಂಟ ಕೀಚ್ ಕೀಚ್ ಎನ್ನುತ್ತಾ ಕುಣಿದಾಡತೊಡಗಿದ ಅಳಿಲೊಂದನ್ನು ಕಂಡದ್ದೇ ಎಂದೋ ಕಳೆದುಕೊಂಡಿದ್ದ ಸಂತೋಷದ ಎಳೆಯೊಂದು ಮತ್ತೆ ಸಿಕ್ಕಂತಾಯಿತು. ಕುಳಿತ ನೆಲೆ ಬರೀ ಮರಳಾದರೂ ಸುಭದ್ರ ಎನ್ನಿಸಿತು. ಕಣ್ಣನ್ನು ಅರೆಮುಚ್ಚಿ ಅಷ್ಟು ದೂರಕ್ಕೆ ದೃಷ್ಟಿ ಚೆಲ್ಲಿದವಳಿಗೆ ಈ ಒಂದು ಕ್ಷಣ ಹೊರ ಜಗತ್ತಿನ ಎಲ್ಲ ಕ್ರೌರ್ಯವೂ ಕರಗಿಹೋದಂತೆ, ಗುಂಯೆನ್ನುವ ಜೀರುಂಡೆ ಸಂಜೆಯ ಬಟ್ಟೆಯೊಳಗೆ ಸುಖದ ಹೂವುಗಳನ್ನು ನೇಯುತ್ತಿರುವಂತೆ, ಪ್ರೀತಿಸಿ ಮದುವೆಯಾದವನ ಕೈ ತನ್ನನ್ನು ಆಲಿಂಗಿಸಿ ಮೈಯೆಲ್ಲ ಪುಳಕಗೊಳಿಸಿದಂತೆ…
ಬೆಕ್ಕಿನ ಹಾಗೆ ಕಣ್ಣನ್ನು ಕಿರಿದುಗೊಳಿಸಿಕೊಂಡು ಸಮುದ್ರದ ಸ್ವಲ್ಪ ಭಾಗವನ್ನು ಮರೆ ಮಾಡಿದ ಆ ಮಂದಿಯನ್ನು ನೋಡಿದಳು. ಸುಖೀ ಸಂಸಾರ? ಕುರ್ಚಿಯೊಂದು-ಅದೇನು ಗಾಲಿ ಕುರ್ಚಿಯೇ?-ಅವರನ್ನು ಬೇರೆ ಬೇರೆಯಾಗಿ ನಿಲ್ಲಿಸಿದಂತಿತ್ತು. ಇಬ್ಬರು, ಚೆನ್ನಾಗಿಯೇ ಇದ್ದಾರಲ್ಲ, ಹುಡುಗಿಯರು. ಒಬ್ಬಳದು ತಿಳಿ ನೀಲಿ ಸೀರೆ; ಇನ್ನೊಬ್ಬಳದು ಹಳದಿ-ಕೆಂಪು ಬಣ್ಣಗಳ ಸಾಲ್ವಾರ್ ಕಮೀಜ್. ಅವರ ಜೊತೆಗೊಂದು ಹಸಿರು ಅಂಗಿ ತೊಟ್ಟ ಪುಟಾಣಿ ಬೇರೆ. ಆಮೇಲೆ ಒಂದು ಬಿಳಿ ತಲೆ. ಆಕೆ ಅಜ್ಜಿ ಇರಬೇಕು. ಒಳ್ಳೆ ಕಟ್ಟುಮಸ್ತಾಗಿದ್ದ ಗಂಡಸೊಬ್ಬ ಮರಳಿನ ಮೇಲೆ ಗುಲಾಬಿ ಬಣ್ಣದ ಬೆಡ್‌ಶೀಟ್ ಹಾಸಿದವನು ನೀರಿಗಿಳಿಯಲು ಹಾತೊರೆಯುವಂತಿದ್ದ ಆ ಪುಟಾಣಿಯನ್ನು ಹಿಡಿದುಕೊಳ್ಳುತ್ತಿದ್ದ. ನೊರೆ ಸೂಸುವ ಅಲೆಗಳ ಹಿನ್ನೆಲೆಯಲ್ಲಿ ಮನಸ್ಸಿಗೆ ಮುದ ನೀಡುವಂತೆ ಕಂಡ ಆ ವಿವಿಧ ಬಣ್ಣಗಳು ಮತ್ತು ಆಕಾರಗಳು ತನ್ನ ನೆರೆಹೊರೆಯ ಅಬ್ಬರ ಅರಚಾಟಗಳಿಗೆ ತೀರ ಅಪವಾದವೆಂಬಂತಿದ್ದುವು. ಇಷ್ಟು ಜನರನ್ನು ಬಂಧಿಸಿಟ್ಟಿರುವ ಕೊಂಡಿ ಯಾವುದು? ಅದೇನು ಪ್ರೀತಿಯೇ? ಆತಂಕವೇ? ಒಂಟಿಯಾಗಬಯಸದ ಮನಃಸ್ಥಿತಿಯೆ?
ಅವಳದು ಯಾತನೆಯ ಮಡುವಿಗಿಳಿಯುವ ಪ್ರವೃತ್ತಿಯೇ ಇರಬೇಕು. ಯಾಕೆಂದರೆ ಈಗ ಅವರು ಕುರ್ಚಿಯ ಸಮೇತ ಸಮುದ್ರದಂಚಿಗೆ ಕೊಂಡೊಯ್ಯುತ್ತಿದ್ದ ಆ ಬಿಳಿಯ ತಲೆ ಮುದುರಿಕೊಂಡು ಕೂತ ಹೆಳವಿಯೊಬ್ಬಳದೆಂದೇ ಯಾಕೆ ಅನ್ನಿಸಬೇಕು? ಇಲ್ಲ, ಇದು ಬರೀ ಭ್ರಮೆಯಷ್ಟೆ; ಎಂದೋ ನೋಡಿದ ಮಾತಿಲ್ಲದ ಸಿನಿಮಾದಲ್ಲಿ ಹೆಳವಿಯೊಬ್ಬಳನ್ನು ಹೀಗೇ ಕೊಂಡೊಯ್ಯುತ್ತಿದ್ದರಲ್ಲ, ಅದರ ಹಠಾತ್ ನೆನಪಷ್ಟೆ. ಹೇಳಿ ಕೇಳಿ ನಟಿಯಾಗಿದ್ದ ತನಗೆ ಕೆಲಕಾಲ ಸಿನಿಮಾ ತಾರೆಯಾಗಿ ಬೆಳಗಿದ ಈ ಬದುಕು ಅಭಿನಯದಷ್ಟು ಸುಂದರವಾಗಿ ಕಾಣುವುದಿಲ್ಲವೇಕೆ? ಚಿತ್ರದ ರೋಗಿಯನ್ನು ನೋಡುವುದರಲ್ಲೇ ಎಂಥ ಆನಂದ! ಕಣ್ಣುಗಳನ್ನು ಪೂರ ಅಗಲಿಸಿ ನೋಡಿದಳು. ಆ ಹೆಂಗಸು ನೆಟ್ಟಗೆ ಕೂತಿದ್ದಾಳೆ. ಬಿಳಿಯ ತಲೆ ಹೌದು. ಅವಳ ದೇಹ ಸಂಪೂರ್ಣವಾಗಿ ಅವಳ ಸ್ವಾಧೀನದಲ್ಲೇ ಇದೆಯಲ್ಲ!
ಸುಮ್ಮನೆ ಕಣ್ಣು ಮುಚ್ಚಿಕೊಂಡಳು-ಯಾರೋ ನಡೆದಾಡುತ್ತಿರುವ ಸದ್ದು, ಏನನ್ನೋ ಕೆರೆಯುತ್ತಿರುವ ಸದ್ದು ತನ್ನ ಬಳಿಯಲ್ಲೇ ಕೇಳಿಸುವವರೆಗೆ. ಒಂದು ಬದಿಗೆ ಮುಖ ತಿರುಗಿಸಿ ನೋಡಿದರೆ ಮರಳನ್ನು ಬಗೆಯುತ್ತಿದ್ದ ಒಣಕಲು ಕೈಯೊಂದು ಥಳ ಥಳ ಹೊಳೆಯುವ ವಸ್ತುವೊಂದನ್ನು ಹಿಡಿದೆತ್ತಿಕೊಂಡಿತು. ಈಗ ತುಸು ನೆಟ್ಟಗೆ ಕೂತು ಎವೆಯಿಕ್ಕದೆ ನೋಡಿದಳು. ನಿನ್ನೆ ಇದೇ ಮರಳಲ್ಲಿ ಚೆಲ್ಲುಚೆಲ್ಲಾಗಿ ಕುಣಿಯುತ್ತಿದ್ದ ಹುಡುಗಿಯೊಬ್ಬಳ ಕೈಬಳೆ! ಅದು ಚಿನ್ನದ್ದಲ್ಲದಿದ್ದರೆ ಅಷ್ಟೇಕೆ ಹೊಳೆಯಬೇಕು? ಒಣ ಕಟ್ಟಿಗೆಯ ಹಾಗಿರುವ ಆ ನರಗಟ್ಟಿದ ಕಪ್ಪು ಕೈಯ ಸೀಳುಬಿಟ್ಟ ಉಗುರು ಈಗ ಬಳೆಯನ್ನು ಕೆರೆಯುತ್ತಿದೆ. ಬಹುಶಃ ಆ ಹುಡುಗಿ ನೆನ್ನೆ ಬೀಳಿಸಿದ್ದಿರಬೇಕು. ಅನಿರೀಕ್ಷಿತವಾಗಿ ಐಶ್ವರ್ಯ ಸಿಕ್ಕಿಬಿಟ್ಟಿತೆಂದು ಈ ಮುದಿ ಕೈಯವನೂ ಹಿಗ್ಗುತ್ತಿರಬೇಕು. ಆಕೆಯ ದೃಷ್ಟಿ ಆ ಮುದಿಕೈಯಗುಂಟ ಹರಿದು ಅವನ ಕಳ್ಳ ಕಣ್ಣುಗಳಿಗೆ ಗುರಿಯಿಟ್ಟಿತು. ಈ ಸಣ್ಣ ಕಳವಿಗೊಂದು ಅನಾಮಿಕ ಸಾಕ್ಷಿಯಾದ ತಾನು ಏನು ತಾನೆ ಹೇಳಬಹುದು? ಏನಾದರೂ ಹೇಳುವ ಹಕ್ಕು ತನಗುಂಟೆ? ತೋಳಗಳೇ ತುಂಬಿರುವ ಜಗತ್ತಿನಲ್ಲಿ ಈ ಮುದಿ ಕೈಯೂ ಒಂದು ತೋಳವಾಗಿರುವಾಗ ತನಗೇಕೆ ಇಲ್ಲದ ಉಸಾಬರಿ? ಆ ನರಪೇತಲ ಬಳೆಯನ್ನು ಕಿಸೆಯಲ್ಲಿಟ್ಟುಕೊಂಡು ಪರಾರಿಯಾದಾಗ ಈಕೆ ಒಮ್ಮೆ ನಿಟ್ಟುಸಿರಿಟ್ಟು ಮತ್ತೆ ಕಣ್ಣು ಮುಚ್ಚಿಕೊಂಡಳು.
ಎಲ್ಲ ಹಾಳು ಹಾಳು. ಇದ್ದಕ್ಕಿದ್ದಂತೆ ಬೀಸತೊಡಗಿದ ಗಾಳಿ ಅಲ್ಲಲ್ಲಿ ಮರಳನ್ನೂ ಕಸಕಡ್ಡಿಯನ್ನೂ ಮೇಲೆಬ್ಬಿಸಿ ತಿಪ್ಪರಲಾಗ ಹಾಕತೊಡಗಿದ್ದೇ ಅವಳ ಮನೆಯಂಗಳದ ಜಾಜಿ ಹೂಗಳ ಕಂಪು, ತೆಂಗಿನ ಮರದಡಿಯ ನೆರಳು ಬರೀ ನೆನಪಷ್ಟೇ ಆಗಿಬಿಟ್ಟುವು. ಗಾಳಿ ಈಗ ಎಷ್ಟು ಜೋರಾಗಿ ಬೀಸುತ್ತಿತ್ತೆಂದರೆ ಸಮುದ್ರ ಹುಚ್ಚೆದ್ದು ಭೋರ್ಗರೆಯುತ್ತಿತ್ತು. ಮೀನಿನ ಹಳಸುವಾಸನೆಯ ಜೊತೆ ಹೇಲಿನ ದುರ್ನಾತದ ಪೈಪೋಟಿ. ಬೀಚು ಕೂಡ ಜನರಿಲ್ಲದೆ ಖಾಲಿಯಾಗಲು ಸಕಾಲ. ಆಕೆ ಕಣ್ಣುಬಿಟ್ಟು ಸಾವರಿಸಿಕೊಂಡಾಗ ಹುಡುಗನೊಬ್ಬ ಒಂದು ಪುಟ್ಟ ನಾಯಿಮರಿಯ ಜೊತೆ ಆಡುತ್ತಿದ್ದದ್ದು ಕಾಣಿಸಿತು.
ಇಬ್ಬರೂ ಮತ್ತೆ ಮತ್ತೆ ಒಂದೇ ಆಟ ಆಡುತ್ತಿರಬಹುದೆ? ಹುಡುಗ ನಾಯಿಮರಿಯನ್ನು ನೀರಿಗಿಳಿಯುವಂತೆ ಪುಸಲಾಯಿಸುತ್ತಿದ್ದ. ಅದು ನೀರಿಗಿಳಿದದ್ದೇ ಅವನು ಹಿಂತಿರುಗಿ ನೊರೆಯನ್ನು ತುಳಿದಾಡುತ್ತ ತೀರಕ್ಕೆ ಓಡಿಬರುತ್ತಿದ್ದ. ನಾಯಿಮರಿ ತನ್ನ ಪುಟ್ಟ ಪುಟ್ಟ ಕಾಲುಗಳನ್ನೂ ಬಾಲವನ್ನೂ ನೀರಿಗೆ ಬಡಿಯುತ್ತ, ಒಮ್ಮೊಮ್ಮೆ ಸಂತೋಷದಿಂದ ಬೌ ಬೌ ಎನ್ನುತ್ತ ಈಜಿ ಬಂದು ತೀರದಲ್ಲಿದ್ದ ತನ್ನ ದಣಿಯನ್ನು ಕೂಡಿಕೊಳ್ಳುತ್ತಿತ್ತು. ಆಕೆ ಮುಗುಳುನಕ್ಕಳು. ಮತ್ತೆ ಕಣ್ಣುಮುಚ್ಚಿಕೊಂಡು ನಲವತ್ತು ವರ್ಷಗಳ ಹಿಂದಿನ ಹುಡುಗಿಯಾದಳು. ಆ ಹುಡುಗಿ ಭರತನಾಟ್ಯ ಕಲಿಯಲು ಅವಳ ಅಮ್ಮನ ಒತ್ತಾಯವೇ ಕಾರಣ. ಒಮ್ಮೆ ತಿರುವಳ್ಳಿಕೇಣಿಯ ದಂಡಾಯುಧಪಾಣಿ ಗುರುಗಳ ಅದೇ ಮನೆಯೊಳಗೆ ಥೈ ಥಕ್ ಥೈ ಕುಣಿಯುತ್ತಿದ್ದಾಗ ಇದ್ದಕ್ಕಿದ್ದಂತೆ ಜೋರು ಮಳೆ ಬಂದು, ಗುಡುಗು ಮೊಳಗಿ, ಮಿಂಚುಗಳು ಹರಿಹಾಯುತ್ತಿರುವಂತೆ ಕರೆಂಟು ಹೋಗಿಬಿಟ್ಟಿತ್ತು. ಆಮೇಲೆ ನಡೆದದ್ದೇನು? ಗುರುಗಳ ಬಲಿಷ್ಠ ಕೈಯಲ್ಲಿ ಮೈಮುರಿಯುವಂತಾದದ್ದು, ಕಿಬ್ಬೊಟ್ಟೆಯ ಕೆಳಗೆ ತಿವಿದಂತಾದದ್ದು, ಕಪ್ಪು, ಕೆಂಪು ಬಣ್ಣಗಳ ಹಾವಳಿಯಿಂದ ಪಾತಾಳಕ್ಕೆ ಜಾರಿದಂತಾದದ್ದು. ಎಲ್ಲ ಥೇಟ್ ಸಿನಿಮಾದ ಹಾಗೆಯೇ. ಅಲ್ಲದಿದ್ದರೆ ಈಗಲೂ ಅತ್ಯಾಚಾರದ ದೃಶ್ಯ ಬಂದಾಗಲೆಲ್ಲ ಗುಡುಗು ಮಿಂಚು ಮಳೆಗಳೇ ಏಕೆ? ಆಮೇಲೆ ತಾರೆಯಾಗಿ ನಾಲ್ಕು ದಿನ ಹದ್ದು ಕಣ್ಣುಗಳ ಮುಂದೆ ಅಭಿನಯ. ಅದಕ್ಕಾಗಿ ಅಮ್ಮನ ವಶೀಲಿ-ನಿರ್ಮಾಪಕರ ಮರ್ಜಿಗಾಗಿ, ನಿರ್ದೇಶಕರ ವಕಾಲತ್ತಿಗಾಗಿ. ಆಯಿತು. ಖ್ಯಾತಿ, ಹಣ ಒಟ್ಟೊಟ್ಟಿಗೇ ಸಿಕ್ಕಬೇಕಾದರೆ ಅದೃಷ್ಟ ಬೇಕಂತೆ. ಅಮ್ಮನ ಆಸೆಯೇನೋ ಕೈಗೂಡಿತು. ಕೃತಾರ್ಥಳಾಗಿ ಸತ್ತಳು. ತಾನು? ಅಭಿನಯದಲ್ಲಿ ಅಂತರಂಗ ಬದಲಾಗದಂತೆ ಇಟ್ಟುಕೊಳ್ಳಲು ಪ್ರಯತ್ನಿಸಿ ಕೆಟ್ಟೆ. ಸಿನಿಮಾ ಹೇಗೆ ವೇಷವೋ ಸಿನಿಮಾದವರದೂ ಹಾಗೆಯೇ ವೇಷ. ವೇಷ ಹಾಕಲಾರದ ತನಗೆ ಪ್ರೀತಿ ವಾತ್ಸಲ್ಯ ಕೂಡ ಸಿನಿಮಾವೆಂದು ತಿಳಿಯದೆ ಹೋಯಿತು. ಮದುವೆಯಾಗಿದ್ದರೆ ತಾನೆ ವಿಚ್ಛೇದನ? ಸಾವಿರದಲ್ಲಿ ಒಬ್ಬಳಾಗಿ ಬದುಕಬಯಸದವಳು ಈಗ ವೃದ್ಧಾಶ್ರಮದ ಅನಾಥೆಯಂತೆ…
ಮರಳ ಮೇಲೆಯೆ ಕಾಲುಚಾಚಿ, ಉಗುರುಬೆಚ್ಚಗಿನ ವಾತಾವರಣಕ್ಕೆ ಮೈಯೊಡ್ಡಿಕೊಂಡು ಕುಳಿತವಳು ತಾನು ಇತರರಂತಾಗಲಿಲ್ಲವಲ್ಲ ಎಂಬ ನೋವಿನಿಂದ ನಕ್ಕಳು. ಆ ಹುಡುಗ, ಆ ನಾಯಿಮರಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಲೇ ಕಣ್ಣಗಲಿಸಿದಳು. ಹುಡುಗ ನಾಪತ್ತೆ. ನಾಯಿಮರಿ ಅಲೆಗಳ ಅಬ್ಬರದಿಂದ ಬಿಡಿಸಿಕೊಳ್ಳುವುದಕ್ಕಾಗಿ ಹೆಣಗುತ್ತಿತ್ತು. ಆ ಹೆದ್ದೆರೆಗಳಿಗೆ ಏನೇನೂ ಸಾಟಿಯಿಲ್ಲದ ತನ್ನ ಪುಟ್ಟ ಪುಟ್ಟ ಕಾಲುಗಳನ್ನು ಬಡಿಯುತ್ತ, ಕುಂಯ್ಯೆನ್ನುತ್ತ, ಆಗಾಗ ನೀರಿನಲ್ಲಿ ಮುಳುಗೇಳುತ್ತ, ಉಸಿರುಗಟ್ಟಿದಂತಾದಾಗ ಒದ್ದಾಡುತ್ತ ಕೊನೆಗೂ ಒಂದು ಬಗೆಯ ಛಲದಿಂದ ತೀರವನ್ನು ಸೇರಿತು. ತೀರ ಸೊರಗಿಹೋಗಿದ್ದ ಅದು ಸ್ವಲ್ಪ ಹೊತ್ತು ಗೊತ್ತು ಗುರಿ ಸಿಕ್ಕದೆ ತೆವಳುತ್ತ, ತೆವಳುತ್ತ ಮರಳನ್ನು ಮೂಸಿತು; ಜಾಡು ಸಿಕ್ಕದೆ ಅತ್ತಿಂದಿತ್ತ ಓಡಾಡಿ, ಅಲ್ಲಲ್ಲಿ ಮೂಸುತ್ತ ಅನಾಥವಾಯಿತು. ತಕ್ಷಣ ಅವಳಿಗೆ ಸತ್ಯದರ್ಶನವಾಗಿ ಹೌಹಾರಿದಳು. ಸ್ವಲ್ಪ ಹೊತ್ತಿಗೆ ಮೊದಲು ಯಾವುದು ಹುಡುಗ-ನಾಯಿಯ ಆಟವೆನ್ನಿಸಿತ್ತೋ ಅದು ಕೇವಲ ಆ ಹುಡುಗನ ಕುಯುಕ್ತಿಯ ತಾಲೀಮಾಗಿತ್ತಷ್ಟೆ ಎಂಬುದರಲ್ಲಿ ಸಂಶಯ ಉಳಿಯಲಿಲ್ಲ. ಸಾಕಿದ ಮುದ್ದು ಪ್ರಾಣಿಯ ಕತ್ತು ಹಿಸುಕಿ ಕೈತೊಳೆದುಕೊಳ್ಳಲು ಯಾರಿಗೆ ತಾನೆ ಮನಸ್ಸು ಬಂದೀತು?
ನಾಯಿಮರಿ ಖಾಲಿ ಖಾಲಿಯಾಗಿದ್ದ ಆ ಮುಸ್ಸಂಜೆಯಲ್ಲಿ ಸುಮ್ಮನೆ ಅಲೆದಾಡತೊಡಗಿತು. ಆಕೆ ಶ್…ಶ್… ಎಂದು ಪ್ರೀತಿಯಿಂದ ಕರೆದಳು. ಅದನ್ನು ಮನೆಗೆ ಎತ್ತಿಕೊಂಡು ಹೋಗಿ, ಸಮಾಧಾನಪಡಿಸಿ, ಮುದ್ದುಮಾಡಿ, ಹಾಲಿಟ್ಟು, ನಿನ್ನಂಥ ಅನಾಥನಿಗೂ ನನ್ನಲ್ಲಿದೆ ಆಶ್ರಯ ಎಂದು ತೋರಿಸಿಕೊಡುವ ಇರಾದೆ. ಆದರೆ ಆ ನಾಯಿಮರಿ ಅವಳನ್ನು ತಿರಸ್ಕರಿಸಿದ್ದಷ್ಟೇ ಅಲ್ಲ, ತನ್ನ ದುರುಳ ದಣಿಯೊಬ್ಬನನ್ನು ಬಿಟ್ಟು ಬೇರೆ ಯಾರಿಗೂ ತಾನು ಕುರುಡು, ಕಿವುಡು ಎಂದು ಸಾರುವ ಹಾಗೆ ಒದ್ದೆ ಮೈಯಲ್ಲಿ ಥರಥರಗುಟ್ಟುತ್ತ ಓಡಿಹೋಯಿತು. ತಾನು ಮನೆ ಬಿಟ್ಟು ಇಲ್ಲಿಗೆ ಬಂದದ್ದಾದರೂ ಯಾಕೆ ಎಂದು ಮತ್ತೊಮ್ಮೆ ವಿಷಾದದಿಂದ ನಕ್ಕಳು. ಕಡೆಗೆ ಉಸ್ಸಪ್ಪಾ ಎಂದು ಮೇಲೆದ್ದವಳೇ ಕೊನೆಯ ಬಾರಿ ಬೀಚಿನತ್ತ ಕಣ್ಣಾಡಿಸಿದಳು. ಆ ಸುಖೀಸಂಸಾರ ಗಾಳಿ ಜೋರಾಗುತ್ತಿದ್ದರೂ ಅವಸರವಿಲ್ಲದೆ ನಿಧಾನವಾಗಿ ಅಲ್ಲಿಂದ ಹೊರಡಲು ಸಜ್ಜಾಗುತ್ತಿತ್ತು. ಆಮೇಲೆ ಸಂಜೆಗತ್ತಲಿಗೆ ಧ್ವನಿಯೊಂದನ್ನು ತೊಡಿಸುವಂತೆ ಅವಳು ಆ ಮೊದಲು ಯಾವುದನ್ನು ಕೇವಲ ತನ್ನ ಭ್ರಮೆ ಎಂದು ತಿಳಿದಿದ್ದಳೋ ಅದು ಕಣ್ಣುಕುಕ್ಕುವ ವಾಸ್ತವವಾಗಿಬಿಟ್ಟಿತ್ತು. ಅವರು ಗಾಲಿ ಕುರ್ಚಿಯಲ್ಲಿ ಕೂರಿಸುತ್ತಿದ್ದದ್ದು ಒಬ್ಬ ಗುಜ್ಜಾರಿಯನ್ನಲ್ಲ, ಗುಜ್ಜಾರಿಗಿಂತ ಕಡೆಯಾದ ಇಳಿವಯಸ್ಸಿನ ಮುದುಕಿಯೊಬ್ಬಳ ಬಿಳಿ ತಲೆಯ ಕೆಳಗೆ ಸುರುಟಿಕೊಂಡಿರುವ ಮೈಯಿ. ಅದರಡಿಯಲ್ಲಿ ಪುಟ್ಟ ಕೂಸಿಗಿರುವಂಥ ಕೋಲು ಕಾಲುಗಳು… ಎಂದೋ ನೋಡಿದ ಮಾತಿಲ್ಲದ ಸಿನಿಮಾದಲ್ಲಿ ಕಂಡ ದೇಹವಲ್ಲದ ದೇಹ.
*****
ಕೃಪೆ: ಅವರ್‌ಕರ್ನಾಟಕ.ಕಾಂ