“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….”
ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ ಜೊತೆಯೂ ಮಲಗಿಲ್ಲವ?”
ನಿಶ್ಚಲತೆಯಿಂದ ಉತ್ತರಿಸಿದಳು ಅವಳು. “ಇಲ್ಲ”.
“ಬೇರೆ ಯಾರನ್ನೂ ಪ್ರೀತಿಸಿಲ್ಲವ?”
“ಇಲ್ಲ”.
ಒಂದು ಸಣ್ಣ ಉಸಿರು ಆತನ ಮುಖದಿಂದ ತಿಳಿಯುವಂತೆಯೇ ಹೊರಬಿತ್ತು. “ಇರಲಿ ಹೊತ್ತಾಯಿತು. ನಾನು ಹೊರಟೆ.” – ಎಂದ.
“ಹೂಂ…. ಹೋಗು. ಅಲ್ಲಿಗೇ…”
ಆತನಿಗೆ ಸಿಟ್ಟು ಬರುವುದಿಲ್ಲ. ಸುಮ್ಮನೆ ನಗುವ. ಮಗುವಿನಂತೆ ನಿಲ್ಲುವ. “ನೀನೊಬ್ಬಳೇ ನನಗೆ ಏಳೇಳು ಜನ್ಮಕ್ಕೂ ಅಂತೆಲ್ಲ ನಾಟಕದ ಮಾತು ಹೇಳಬೇಕೆ? ಬೇಕೆಂದರೆ ಹೇಳುವೆ.”
“……….”
ಕೇಳಿದ “ನಾನಿನ್ನು ಹೊರಡಲೆ?”
“ಬೇಡ. ಹನ್ನೆರಡೂವರೆಗೆ ಒಂದು ನಿಮಿಷವಿದೆ. ಅಷ್ಟು ಕಳೆಯಲಿ.”
ಎದ್ದು ನಿಂತ ಅವನನ್ನು ಒತ್ತಿ ಕುಳ್ಳರಿಸಿದಳು ಅವಳು. ಒಂದೇ ನಿಮಿಷ….
ಹನ್ನೆರಡೂವರೆಯಾಯಿತು. ಆತ ಹೊರಟು ಹೋದ.
ಆತ ತನ್ನ ಮಟ್ಟಿಗೆ ಪ್ರಪಂಚವೇ ಆಗಿರುವನಲ್ಲವೆ! ಬಾಗಿಲು ಹಾಕಿದಳು ಆಕೆ. ಫ್ಯಾನಿನಡಿ ಕೈಕಾಲುಗಳನ್ನು ಸಡಿಲಾಗಿ ಚೆಲ್ಲಿ ಕಣ್ಣು ಮುಚ್ಚಿ ಮಲಗಿದಳು. ….ನಿಧಾನವಾಗಿ ಉಸಿರಾಡು. ಇನ್ನೂ ನಿಧಾನ. ತಲೆಯಲ್ಲಿ ಬೇರೆ ಯಾವ ವಿಚಾರ ಬೇಡ. ಆಳವಾಗಿ ಒಂದು ನಿದ್ದೆ ಬರಲಿ. ನಿದ್ದೆ ಬರಲಿ. ನಿದ್ದೆ ಬರಲಿ…. ತನ್ನೊಳಗೇ ಹೇಳಿಕೊಂಡಳು.
ಆದರೂ ಆತ ಆ ಪ್ರಶ್ನೆ ಕೇಳಿದನಲ್ಲ! ಎಲವೋ, ಗಂಡಸರು ಮಲಗುವಷ್ಟು ಸುಲಭವಾಗಿ ಹೆಂಗಸರು ಮಲಗುವುದಿಲ್ಲ ತಿಳಕೊ. ಅವರ ಆಯ್ಕೆ ಬಹಳ ಸೂಕ್ಷ್ಮದ್ದು. ಜಾಗರೂಕತೆಯದು. ಎಷ್ಟೆಂದರೆ ಆಯ್ಕೆ ಮುಗಿಯುವಾಗ ಅವರ ಆಯುಷ್ಯವೇ ಅರ್ಧ ಮುಗಿಯುತ್ತದೆ. ಅದಕ್ಕೇ ಬಹುಶಃ ಅವರಿಗೆ ಆಯ್ಕೆಯ ಅವಕಾಶವನ್ನೇ ಕತ್ತರಿಸಿ ಹಾಕಿರುವುದು.
ಉಸಿರಾಟ ಆಳವಾದಂತೆ ಧ್ಯಾನವೂ ಆಳ ಆಳಕ್ಕೆ ಇಳಿಯುತ್ತಿತ್ತು. ಎಲ್ಲೋ ಆಳತಳಕ್ಕೆ ಹೋಗಿ ಸ್ಮೃತಿ ಕಚ್ಚಿ ಎತ್ತಿ ಮೇಲ್ತಂದಂತೆ, ಹಿಡಿತ ತಪ್ಪಿ ಮತ್ತದು ಕೆಳಗೆ ಬಿದ್ದಂತೆ. ಮತ್ತೆ ಮತ್ತೆ ಹೆಕ್ಕಿಕೊಂಡಂತೆ. ಏನದು? ಯಾರ ನೆನಪು?
- ಅವು ಪ್ರಾಥಮಿಕದ ದಿನಗಳು. ಶಾಂತಪ್ಪ ಮಾಸ್ಟರಲ್ಲವೆ ಅವರು. ಆಗ ತಾನಿನ್ನೂ ನಾಲ್ಕನೆಯ ತರಗತಿ. ಶಾಂತಪ್ಪ ಮಾಸ್ಟರು ಕ್ಲಾಸ್ ಟೀಚರಾಗಿ ಬಂದಿದ್ದರು. ನೋಡಲು ಹುರುಪಾಗಿದ್ದರು. ಎತ್ತರ. ನಕ್ಕರೆ ಗಲ್ಲಗಳಲ್ಲಿ ಗೆರೆ.
ಪಕ್ಕದಲ್ಲಿ ಕುಳಿತಿದ್ದ ಅರುಂಧತಿ “ಈ ಮಾಸ್ಟರು ಚಂದ ಇದ್ದಾರೆ ಅಲ್ಲನ?” ಎಂದು ಕಿವಿಯಲ್ಲಿ ಪಿಸುಗುಟ್ಟಿದಾಗ “ಥೂ ಹಾಗೆಲ್ಲ ಹೇಳಬಾರದು. ಅಸಹ್ಯ.” – ಎಂದಿದ್ದೆ ತಾನು. ಮನೆಗೆ ಹೋದ ಮೇಲೆ ಅರುಂಧತಿ ಹೀಗೆ ಹೇಳಿದಳು ಎಂದು, ತಾನಾದರೆ ದೊಡ್ಡ ಸುಭಗಿತ್ತಿ ಹಾಗೆಲ್ಲ ಹೇಳುವವಳಲ್ಲ ಎಂಬಂತೆ ಅಮ್ಮನೊಡನೆ ಹೇಳುತ್ತ ಆ ಮಾಸ್ಟರ ವಿಷಯವನ್ನು ಮತ್ತೆ ಎತ್ತಿದರೆ.
“ಕಲಿಯುವ ಮಕ್ಕಳಿಗೆ ಏನದು ಅಧಿಕ? ಮಾಸ್ಟರು ಹೇಗಿದ್ದರೇನು?” – ಅಮ್ಮ ತಾನು ಹೇಳುವುದನ್ನು ಪೂರ್ತಿ ಯಾಕೆ ಕೇಳಬಾರದು? ತಾನು ಅಂಥವಳಲ್ಲ ಅಂತ ಅಮ್ಮನಿಗೇಕೆ ತಿಳಿಯುವುದಿಲ್ಲ?
ಆದರೂ….. ಬೆನ್ನ ಹಿಂದೆ ಕೈಕಟ್ಟಿಕೊಂಡು ಪಾಠ ಹೇಳುತ್ತ ತಿರುಗುತ್ತಿದ್ದ ಅವರು ಒಮ್ಮೆ ತನ್ನ ಸಮೀಪಕ್ಕೆ ಬಂದಾಗ ಅವರ ಶರ್ಟಿನ ತುದಿಯನ್ನು ತಾನು ಮುಟ್ಟಿದ್ದು ಅಮ್ಮನಿಗೆ ಹೇಳಲೇ ಇಲ್ಲ ತಾನು.
ಅದು ಅಷ್ಟೇ. ಅಲ್ಲಿಗೆ ಮುಗಿಯಿತು.
ಅವರಿಗೂ ಲೆಕ್ಕದ ಟೀಚರಿಗೂ ದೋಸ್ತಿ ಬಿದ್ದಿದೆ ಎಂದಳು ಗಿರಿಜ ಎಂಬವಳು. ಹೇಗೆ ಗೊತ್ತಾಯಿತು ನಿನಗೆ ಎಂದರೆ ಗೊತ್ತಾಯಿತು ಹೇಗೋ ಎಂದಳು. ಕಣ್ಣಲ್ಲಿ ಕಂಡಂತೆ ಏನೇನೋ ವಿವರಿಸಿದಳು. “ಟೀಚರು ಮಾತಾಡುವಾಗ ಮಾಸ್ಟರು ಅವರನ್ನೇ ನೋಡುತ್ತಿರುತ್ತಾರೆ. ಇನ್ನೊಮ್ಮೆ ಸರೀ ನೋಡು” ಎಂದಳು. ಅಷ್ಟರವರೆಗೆ ಮಾಸ್ಟರು ಕೊಟ್ಟ ಹೋಮ್ವರ್ಕನ್ನು ಜತನದಿಂದ ಮಾಡುತ್ತಿದ್ದ ತಾನು ಆಮೇಲಿಂದ ಒಟ್ಟಾರೆಯಾಗಿ ಮಾಡಿದೆನಲ್ಲವೆ? ಅರುಂಧತಿ ಮತ್ತು ಗಿರಿಜ ಕೂಡ ಬಹುಶಃ.
ಒಂದು ರಾತ್ರಿ ಊಟದ ಸಮಯ. “ಅಮ್ಮ, ಆ ಶಾಂತಪ್ಪ ಮಾಸ್ಟರು ಲೆಕ್ಕದ ಟೀಚರೊಡನೆ….” ಎಂದು ಹೇಳಲು ಹೊರಟದ್ದೇ “ಮಾಸ್ಟರುಗಳಿಗೆ ಮಕ್ಕಳಿಗೆ ಪಾಠ ಹೇಳುವುದು ಬಿಟ್ಟು ಯಾಕೆ ಇಂಥದ್ದೆಲ್ಲ, ಬೇಕಾಗಿದೆಯ?” ಎಂದೆಲ್ಲ ಹೇಳುತ್ತ ಮುಂದೆ ತಾನು ಉದ್ದ ಎಳೆಯಬೇಕೆಂದಿದ್ದ ಮಾತುಗಳನ್ನೆಲ್ಲ ಗುಡಿಸಿಹಾಕಿಬಿಟ್ಟಳು. ತನಗೆ ಊಟ ಸೇರಲಿಲ್ಲ. “ಉಣ್ಣು. ರಾತ್ರಿ ಅಡಿಕೆಯಷ್ಟು ಉಂಡರೂ ಆನೆಯಷ್ಟು ಬಲ” – ಕಣ್ಣು ಕೆಂಚರಿಸಿದಳು ಅಮ್ಮ.
* * * *
ಎಲ್ಲಿಯ ಶಾಂತಪ್ಪ ಮಾಸ್ಟರೋ ಯಾವ ಲೆಕ್ಕದ ಟೀಚರೋ. ಈಗ ಆ ಮಾಸ್ಟರು ಎಲ್ಲಿದ್ದಾರೆ? ಆ ಟೀಚರಂತೂ ಮದುವೆಯಾಗಲೇ ಇಲ್ಲವಂತೆ. ಟೀಚರ್, ದೊಡ್ಡ ತಪ್ಪು ಮಾಡಿದಿರಿ. ಆತ ಯೌವನವನ್ನು ಪ್ರೀತಿ ಮಾಡುವವ. ಜೀವವನ್ನಲ್ಲ. ನೀವು ಬಿಳಿಗೂದಲಿನವರಾದರೆ ಅವನಿಗೆ ಬೇಡ. ಇದೆಲ್ಲ ನಿಮಗೆ ಯಾಕೆ ತಿಳಿಯದೇ ಹೋಯಿತು ಟೀಚರ್?
ಸ್ವತಃ ಟೀಚರೇ ಎದುರು ನಿಂತು ನಗುತ್ತಿದ್ದರು. ಪ್ರಶ್ನೆಯನ್ನು ಅವಳಿಗೇ ತಿರುಗಿ ಸಿಟ್ಟಂತೆ. ಎಲ್ಲ ಪುರುಷರೂ ಹಾಗೇ ಎಂಬಂತೆ.
ಕಿರುಚಿದಳು ಆಕೆ. “ಟೀಚರ್, ಆತನೇನು ಶಾಂತಪ್ಪ ಮಾಸ್ಟರ ಹಾಗಲ್ಲ ತಿಳೀತಾ?” ನಸುನಗುತ್ತ ಟೀಚರು ಮರೆಯಾದರು. ಆಕೆ ಮೆಲುವಾಗಿ ಉಸಿರಾಡಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳಬೇಕೆಂದಷ್ಟೂ ಅದು ವೇಗದಿಂದ ಏರಿಳಿಯ ತೊಡಗಿತು. ಶಾಂತಪ್ಪ ಮಾಸ್ಟರ ಕಣ್ಣುಗಳನ್ನು ನೆನಪಿಸಿಕೊಳ್ಳ ಹೋದಳು. ಅವು ಟೊಳ್ಳು ಬಿದ್ದಿದ್ದವು!
….ಕಣ್ಣೆದುರು ಆತ ನಿಂತಿದ್ದ. ಅದೇ ಸಂಯಮದ ನಗೆ.
ನಂಬುತ್ತೀಯ ಇದನ್ನ? ಇನ್ನೂ ಏಳೆಂಟು ವರ್ಷದ ಹುಡುಗಿಯ ಪ್ರೀತಿ ಕಥೆಯನ್ನ? ಆತ ಎಲ್ಲ ಬಲ್ಲಂತೆ ದೊಡ್ಡದಾಗಿ ನಕ್ಕ. ಅಕೆ ಆ ನಗೆಯನ್ನೇ ದಿಟ್ಟಿಸಿದಳು. ಆತನ ನಗೆಯ ಗೆರೆ ಶಾಂತಪ್ಪ ಮಾಸ್ಟರ ನಗೆಯ ಗೆರೆಯನ್ನೇ ಹೋಲುತ್ತಿದೆಯೇ….! ಮೆಲ್ಲ ಅ ಗೆರೆಯ ಮೇಲೆ ಕೈಯಾಡಿಸಿದಳು. ಬಾಲ್ಯದ ಮೃದು ಭಾವನೆಯನ್ನು ಪ್ರೀತಿಯಿಂದ ಸವರಿದಂತೆ.
ಆತ ಮಾಯವಾದ.
* * * *
ನಾಟಕದ ಹಾಡುಗಳಿಗೆ ಹಾರ್‍ಮೋನಿಯಂ ನುಡಿಸಲು ಬರುತ್ತಿದ್ದ ರಘುಪತಿ! ನೀನು ಇನ್ನೂ ಇಲ್ಲಿದ್ದೀಯ? ಇಲ್ಲವೇ ಇಲ್ಲ ಎಂದು ತಿಳಿದಿದ್ದೆ. ಹಾರ್‍ಮೋನಿಯಂ ನುಡಿಸುವ ಆ ದೃಢವಾದ ಬೆರಳುಗಳನ್ನೇ ನಾವು ನೋಡುತ್ತಾ ಇರುತ್ತಿದ್ದೆವಲ್ಲ! ಕೆಂಪು ಗುಲಾಬಿ ಮಿಶ್ರ ಉಗುರುಗಳು. ಬೆರಳುಗಂಟಿನ ಮೇಲೆಯೂ ರೋಮ. ಅವು ಹಾರ್‍ಮೋನಿಯಂನ ಮೆನಯ ಮೇಲೆ ಕುಣಿಯುತ್ತ ಅತ್ತ ಇತ್ತ ಸಾಗುವಾಗ ಸಮ್ಮೋಹಗೊಂಡವರಂತೆ ನೋಡುತ್ತಿದ್ದೆವಲ್ಲ ಎಲ್ಲ ಹುಡುಗಿಯರೂ. ಮನೆ ಪಕ್ಕದ ಕಸ್ತೂರಿಯೂ. ಇಲ್ಲವಾದರೆ ಅವನ ಕುರಿತು ಮಾತಾಡುವಾಗೆಲ್ಲ ಕಸ್ತೂರಿಯ ಮುಖ ಯಾಕೆ ಹೊಳೆಯುತ್ತಿತ್ತು? ಆತ ಕಾಟುಜಾತಿಯವ ಎಂದು ತಿಳಿದ ದಿನ ಅವಳ ದನಿಯೇಕೆ ಬೇಸರ ಕಾಸಿದಂತಿತ್ತು?
“ನಿಂಗೇನು ಅವರು ಯಾವ ಜಾತಿಯಾದರೆ?” – ಸುಭಗಿತ್ತಿ ತಾನು ಕೇಳಿದ್ದೆ. ಕಸ್ತೂರಿ ಮಾತಾಡಲಿಲ್ಲ. ಬಹಳ ಹೊತ್ತಿನವರೆಗೂ ಯೋಚನೆಯಲ್ಲಿದ್ದಂತೆ ಕಂಡಳು. ಅವಳ ದುಃಖ ಕಂಡು ತನಗೆ ಖುಶಿಯಾಗಿತ್ತು. ಜೊತೆಗೇ ಅವ ಕಾಟುಜಾತಿಯಂತ ಒಳಗೊಳಗೇ ಖುಶಿ ನಂದಿಹೋಗುತ್ತಿತ್ತು ಕೂಡ. ಆದರೂ ಬಾಯಿಪಾಠ ಹೇಳುವಂತೆ ಹೇಳಿದ್ದೆ. “ಜಾತಿಗೀತಿ ಎಂಥದನಾ? ಅದೆಲ್ಲ ಸುಮ್ಮನೆ” – ಎಂದು.
ಮನ ಮುಟ್ಟುವುದರೊಳಗೆ ಅವಳೊಡನೆ ಬೇಕೆಂದೇ ಜಗಳಾಡಿದ್ದೆ. ಸಣ್ಣ ವಿಷಯಕ್ಕೆ. ಆತ ಚಾಕ್ಪೀಸ್ ಹಿಡಿಯುವುದು ಸಿಗರೇಟು ಹಿಡಿದ ಹಾಗೇ ಎಂದು ಆಕೆ ಹೇಳಿದ್ದಕ್ಕೆ. ಸ್ವಲ್ಪ ಸಮಯದ ನಂತರ ಮತ್ತೊಂದು ಸುದ್ದಿ ತಂದವಳೂ ಅವಳೇ. “ಏಯ್ ರಘುಪತಿಗೆ ಮದುವೆಯಂತೆ. ಸಾವಿರಗಟ್ಟಲೆ ವರದಕ್ಷಿಣೆಯಂತೆ.” ಆಕೆ ಹೇಳಿದ್ದು ‘ನಿನಗೆ ಹಾಗೇ ಆಗಬೇಕು’ ಎಂಬ ಧಾಟಿಯಲ್ಲಿ! ಯಾವುದೂ ಸ್ವಷ್ಟವಿಲ್ಲದ ಸ್ಪಷ್ಟ ನುಡಿಯದ ಸ್ವಷ್ಟಗೊಳ್ಳಲು ಹೆದರುವ ದಿನಗಳವು. ಎಲ್ಲ ಮುಸುಕಿನೊಳಗಿನ ಗುಮಾನಿ.
ತಾನು ಮುಟ್ಟಿನವಳು ಬೇರೆ. ಕೆಳಹೊಟ್ಟೆ ಅಸಾಧ್ಯ ನೋಯುತ್ತಿತ್ತು. ಕಾಲು ಜಗಿಯುತ್ತಿತ್ತು. ಮನೆ ಮುಟ್ಟಿದವಳೇ ವಾಂತಿ ಮಾಡಿದೆ. ತಿಂಡಿ ಬೇಡ ಕಾಫಿ ಬೇಡ ಎಂದು ಮುಟ್ಟಿನ ಮೂಲೆಯಲ್ಲಿ ಕವುಚಿ ಮಲಗಿಬಿಟ್ಟೆ. ಒಳಗಿನಿಂದ ಕೇಳಿಸುತ್ತಿತ್ತು. “ಎಸ್ಸೆಸ್ಸೆಲ್ಸಿ ಆಗಿಬಿಟ್ಟರೆ ಸಾಕು. ಮುಂದೆ ಕಳಿಸುವುದು ಬೇಡ. ಮುಟ್ಟಿನ ಹೊತ್ತಿನಲ್ಲೆಲ್ಲಾ ಶಾಲೆಗೆ ಹೋಗುವುದು, ಉಳಿದವರನ್ನು ಮುಟ್ಟುವುದು, ಹಾರುವುದು ಕುಣಿಯುವುದು, ಯಾಕಾಗುತ್ತದೆ? ಮುಂದೆ ಹೆತ್ತು ಹಿಡಿಯ ಬೇಕಾದವರು.”
“ಅಷ್ಟೇ ಸೈಯಾ? ಯಾರನ್ನಾದರೂ ಕಟ್ಟಿಕೊಂಡು ಹಾರಿದರೆ!…. ಜಾತಿಗೀತಿ ನೋಡಿಕೊಂಡು ಹಾರಿದರಾದರೂ ಅದೊಂದು ಲೆಕ್ಕ” – ದೊಡ್ಡ ನಗೆಯಲ್ಲಿ ಮಾತು ಉರುಳಿಸಿಬಿಡುವ ಗುಂಡಕ್ಕ. ಅವರಿಗೆ ಇದೆಲ್ಲ ಹೇಗೆ ತಿಳಿಯುತ್ತದೆ?
ತಾನು ಬಿಕ್ಕುತ್ತಿದ್ದೆ. ಗುಂಡಕ್ಕನಿಗೆ ಕಾಣಿಸುತ್ತಿರಲಿಲ್ಲ.
ಮರೆಯಾಗಿದ್ದ ರಘುಪತಿ ಯಕಿಲ್ಲಿ ಮತ್ತೆ ಪ್ರತ್ಯಕ್ಷನಾದ? ನನಗಂತೂ ಬೇಡ.
…..ಮುಂದೆ? ಕೇಳಿದನಾತ ಬಾನ್ಸುರಿಯಂತೆ. ಅರೆ, ರಘುಪತಿಯ ನಗೆಯ ಬಿಳಲು ಇಲ್ಲಿ, ನಿನ್ನ ಕಣ್ಣಲ್ಲಿ! ಹೋಗು ಹೋಗು, ನಾ ಮುಂದೆ ಹೇಳುವುದಿಲ್ಲ. ಅದೂ ನಿನ್ನ ಹತ್ತಿರ.
* * * *
ಹೊರಳಿದಳಾಕೆ. ಏನು ಮಾಡಿದರೂ ನಿದ್ದೆ ಬರಲೊಲ್ಲದು. ಸುತ್ತ ನಿಶ್ಶಬ್ದ. ನಿಶ್ಶಬ್ದತೆ ಸೀಳಿಕೊಂಡು ನಂಬರು ಕರೆದಂತೆ.
ಹಂಡ್ರೆಡ್ ಅಂಡ್ ಏಯ್ಟ್?
ಎಸ್ ಸರ್.
ಈ ಸರ್‍ಗೆ ಎಷ್ಟು ಬೇಗ ‘ನೋ’ ಅನ್ನಬೇಕಾಯ್ತು. ಅತನ ನಿಲುವು ನಡಿಗೆಯನ್ನು ತಾನು ಕಣ್ಣಿಂದ ಹಿಂಬಾಲಿಸುತ್ತಿರುವಾಗಲೇ ಫಕ್ಕನೆ ಆತ ತೀರ ಕೊಳಕಾಗಿ ಕಂಡಿದ್ದ. ಸಧ್ಯ ತಾನು ಬಯಿಬಿಡದ್ದು ಎಷ್ಟು ಒಳ್ಳೆಯದಾಯಿತು! ಮತ್ತೆ, ಪ್ರೀತಿಸುತ್ತೇನೆಂದು ಜಗವೆಲ್ಲ ಹೇಳಿಕೊಂಡು ಬಂದ ಮತ್ತೊಬ್ಬ ಸರ್. ಬಲು ತಮಾಷೆಯಾಗಿದ್ದ. ಆಚೀಚೆ ಹೋಗುವಾಗ ಸಣ್ಣಗೆ ಸಿಳ್ಳಿನಲ್ಲಿ ಹಾಡು ನುಡಿಸುತ್ತಿದ್ದ. ಪ್ರೀತಿಯ ವಿಷಯ ಮಾತಾಡುವಾಗೆಲ್ಲ ಎದೆಯ ಮೇಲೆ ಕೈಯಿರಿಸಿಕೊಳ್ಳುತ್ತಿದ್ದ. ತನಗೆ ತಡೆಯಲಾರದ ನಗು ಬರುತ್ತಿತ್ತು. ಮತ್ತು ತಾನು ಅವನಿಗೂ ‘ನೋ’ ವಾಗಬೇಕಾಯಿತು. ಅವರ ಮುಖಗಳನ್ನೆಲ್ಲ ಈಗ ಎಣಿಸಹೋದರೆ ಒಂದೂ ಮೂಡುತ್ತಿಲ್ಲ!
ಕೇಳಿಲ್ಲಿ, ಎಲ್ಲಿಯೂ ಬೀಳದೆ ಜೋತಾಡದೆ ಸೋಲದೆ ತೆರೆದುಕೊಳ್ಳುತ್ತ ಮುಚ್ಚಿಕೊಳ್ಳುತ್ತ ಮತ್ತೆ ತೆರೆದುಕೊಳ್ಳುತ್ತ ಬದುಕಿಗೆ ಮಿಡಿಯುತ್ತಲೇ ಇದ್ದೆ. ಇನ್ನೂ ಹೇಳಬೇಕೇನು ನಿನಗೆ? ಕೇಳುವಂಥವನಾಗಿ ಧೀರ.
* * * *
ಅಂದೊಮ್ಮೆ ನೈಟ್ ಬಸ್ಸಿನಲ್ಲಿ ಕುಳಿತಿದ್ದೆ. ತನ್ನ ಬಳಿಯೇ ಓರ್ವ ಬಂದು ಕುಳಿತ. ಎಲ್ಲಿಯವನೋ ಯಾರೋ. ಬಸ್ಸು ವಾಲುವಾಗ ತೋಳಿಗೆ ತೋಳು ತಾಕುತಿತ್ತು. ಮೊದಮೊದಲು ಮುದುರುತ್ತಿದ್ದ ಆತ ಆ ಮೇಲೆ ಮಾತಿಗೆ ತೊಡಗಿದ. ಸ್ವರದಲ್ಲಿ ಹೊಳಪಿತ್ತು. ಏನು ಮಾತಾಡಿದ ಅಂದರೆ ತನ್ನ ಕೆಲಸ ಹೆಸರು ಊರು… ಹೀಗೇ. ಯಾಕೆ ಹೇಳಿದನೋ. ಮನುಷ್ಯ ತನ್ನನ್ನು ತಾನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ಇರಬಹುದು. ಕಣ್ಣು ಕೂರುತ್ತಿತ್ತು. ಒಮ್ಮೊಮ್ಮೆ ಅವನ ತಲೆ ನನ್ನ ಹೆಗಲಿಗೆ ಬಂದು ತೂಗುತ್ತಿತ್ತು. (ಉದ್ದ ಪಯಣ. ನಾನೂ ಏನೂ ಮಾಡುವಂತಿರಲಿಲ್ಲ ಅಂತೆಲ್ಲ ಹೇಳಬೇಕೇ?) ಕತ್ತಲಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಆದರೆ ಲೈಟು ಹತ್ತಿದಾಗಲೂ ನಾನು ಕಿಟಕಿಯ ಹೊರಗೆ ನೋಡುತ್ತಿದ್ದೆ! ನನಗವನನ್ನು ನೋಡಬೇಕೆಂದು ಅನಿಸಲೇ ಇಲ್ಲ. ಬೆಳಕಲ್ಲಿ ಅವನ ಮಾತು ಕೇಳಬೇಕೆಂತಲೂ ಅನಿಸುತ್ತಿರಲಿಲ್ಲ. ಮಬ್ಬುಗತ್ತಲೆಯಲ್ಲಿ, ಬೆಕ್ಕಿನನಿದ್ದೆಯಂತಹ ಸಣ್ಣ ಸಣ್ಣ ನಿದ್ದೆಗಳೆಡೆಯಲ್ಲಿ ಆತ ಮಾತಾಡುತ್ತಲೇ ಇದ್ದ. ಏನಂತ? ನೆನಪಿಲ್ಲ. ನಾನೇನೂ ನಿದ್ದೆ ಹೋಗಿರಲಿಲ್ಲ. ಆದರೆ ಅವನ ಮಾತಿನ ಸಾರ ನನಗೆ ಬೇಕಂತಲೂ ಇರಲಿಲ್ಲ. ಮರೆತುಹೋಗದಿರುವುದು ಬಸ್ಸಿನ ಕುಲುಕಟ ಮಾತ್ರ.
ಬೆಳಗಿನ ನಸುಕು. ಅವನ ಊರು ಬಂತು ಬಂತೆನುವಾಗ ತನ್ನ ಸೂಟ್ಕೇಸ್ ಇತ್ಯಾದಿ ಜೋಡಿಸಿಕೊಳ್ಳತೊಡಗಿದ. ಅಷ್ಟು ಹೊತ್ತೂ ಜೊತೆಗೇ ಕುಳಿತು ಚಂದ ದನಿಯಲ್ಲಿ ಮಾತಾಡುತ್ತಲೇ ಬಂದ ಆತ ಊರು ಬರುತ್ತಲೂ ಅಪರಿಚಿತರಂತೆ ತಟಪಟ ಇಳಿದು ಹೋಗಿ ಬಿಟ್ಟ. ಎಲ್ಲಿಗೋ ಏನೋ? ಮನುಷ್ಯ ಮನುಷ್ಯನಾಗಿ ಇರುವುದು ಇಂತಹ ಕೆಲ ಕ್ಷಣಗಳಲ್ಲಿ ಮಾತ್ರವಿರಬಹುದೆ? ಸಭ್ಯತೆಯ ಎಲ್ಲೆ ಮೀರದೆಯೂ ನೆನಪು ಉಳಿಸಿ ಹೋದ. ಹೋಗುವಾಗ ನನಗೂ ದುಃಖವಾಗಲಿಲ್ಲ. …ಇನ್ನೂ ಇದ್ದಾನೆ ಒಳಗೆ ಅಂದರೆ! ಕೇವಲ ಧ್ವನಿಯಾಗಿ.
ಹೇಳು. ಇದಕ್ಕೆಲ್ಲ ಪ್ರೀತಿಯ ಹೆಸರು ಕೊಡುತ್ತೀಯ? ಮಲಗುವುದೆಂದರೆ ಇದೇ ಮತ್ತೆ ಎನ್ನುತ್ತೀಯ? ಆದರೆ ನಾನು ಹಾಗೆಣಿಸುವುದಿಲ್ಲ. ಬಹುಶಃ ಪ್ರೀತಿಸುವ ಗುಣದ ಮನ ಆ ಸ್ವಭಾವ ಒಣಗಿ ಹೋಗದಂತೆ ಮೃದುತ್ವದ ಸಿಂಚನ ಮಾಡುತ್ತ ತನ್ನನ್ನು ತಾನೇ ಕಾಪಾಡಿಕೊಂಡು ಬರುವ ಬಗೆಯಾಗಿರಬಹುದು ಅದು. ಇದೆಲ್ಲ ನಡೆದದ್ದು ಮುಂದೊಂದು ದಿನದ ಒಂದು ಘನಕ್ಕಾಗಿ. ಒಂದು ನಿಜಕ್ಕಾಗಿ. ಒಂದು ನಿಜವಾದ ಮಲಗುವಿಕೆಗಾಗಿ. ಅರ್ಥವಾಗುತ್ತಿದೆಯೆ ನಿನಗೆ? ಅರ್ಥ ಮಾಡಿಸಬೇಕಿಲ್ಲ. ಅದೂ ನಿನಗೆ!
ಇಷ್ಟಕ್ಕೂ ಅರ್ಥ ಮಾಡಿಸುವ ಕೆಲಸ ಬಲುಕಷ್ಟದ್ದು. ಉದಾಹರಣೆಗೆ ಆ ಶತದಡ್ಡ ಹುಡುಗ, ಅಡ್ಡಡ್ಡ ಬೆಳೆಕುಕೊಂಡವ, ಬಂದ ಎಂದರೆ ಎಲ್ಲಿಲ್ಲದ ಗಲುವು ಯಾಕೆ ತುಂಬುತ್ತಿತ್ತೆಂದು ಹೇಳಲು ಹೇಗೆ ಸಾಧ್ಯ? ಅವನಿರುವಷ್ಟು ಹೊತ್ತು ಮಾತಿಗೆ ಮುಂಚೆ ನಗೆ. ನಗೆಗಾಗಿಯೇ ಅರಳುವಂತಹ ನಗೆ. ಈಗಲೂ ಅವನನ್ನು ನೆನೆಸಿಕೊಮಡರೆ ಒಮದು ಹಾಸು ನಗೆ ಬರುತ್ತದೆ ತನಗೆ.
ಈ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ನೋಡಿದರೆ ನನಗೇ ಆಶ್ಚರ್ಯವಾಗುತ್ತದೆ. ಕೇವಲ ಆಶ್ಚರ್ಯವೇ? ಚೇಷ್ಟೆಯ ನಗು. ತೆಳು ಅಲೆಯ ಮೃದು ವೇದನೆ. ಎಲ್ಲೋ ಸಂಧಿಸಿದ ಕಣ್ಣುಗಳು ಯಾವ ಸೇತುಬಂಧವಿಲ್ಲದೆಯೂ ಹರಿದುಬರುವ ಮಂದಸ್ಮಿತಗಳು ಶಬ್ದವಿಲ್ಲದ ಮತುಗಳು ಕೇಳದ ರಾಗಗಳು…..
* * * *
“ಹೂಂ. ಹಾಗೆ ಬಾ ಮತ್ತೆ.”
“ಅರೇ, ನೀನಿನ್ನೂ ಹೋಗಿಲ್ಲವೆ? ಹನ್ನೆರಡೂವರೆಯಾದೊಡನೆ ಹೋಗುವೆನೆಂದು ಹೊರಟವನು? ಹೋಗು ಹೋಗು. ನನ್ನ ಬಳಿ ಮಾತಿಲ್ಲದೆ ಕುಳಿತುಕೊಳ್ಳುವವನು ಅದು ಹೇಗೆ ಇನ್ನೊಬ್ಬಳು ಎದುರು ಬಂದರೆ ವಾಚಾಳಿಯಾಗುತ್ತಿ? ನೀನೆಂದರೆ ಅಸಹ್ಯವಾಗುವಂತೆ ವರ್ತಿಸುತ್ತಿ? ನೀನೇ ಅಲ್ಲ ಅಂತನಿಸುವಷ್ಟು ಕೆಟ್ಟದಾಗಿ ನಗುತ್ತೀ ಚಲಿಸುತ್ತೀ…..”
ಆಕೆ ಅವನನ್ನೇ ದಿಟ್ಟಿಸಿದಳು.
ಆ ಮುಖದಲ್ಲಿ ಗೆರೆಯಿತ್ತು. ತುಟಿಯಲ್ಲಿ ಸಿಳ್ಳಿತ್ತು. ಬೆರಳ ತುದಿಯಲ್ಲಿ ಗುಲಾಬಿ ಗೆಂಪಿತ್ತು. ಕಣ್ಣಲ್ಲಿ ನಗೆಯಿತ್ತು.
ಸೊಂಟಕ್ಕೆ ಕೈಕೊಟ್ಟು ನಗುತ್ತ ನಿಂತಿದ್ದನಾತ.
ಬಾ. ದೇವರಗೂಡಲ್ಲಿ ಕೈಗೆ ಕಡಗೋಲು ಕೊಟ್ಟು ಕೂರಿಸುತ್ತೇನೆ…..
* * * *
ಆಕೆ ತಲೆಯನ್ನೊಮ್ಮೆ ಜೋರಾಗಿ ಅಲುಗಿಸಿ ಮಲಗಿದಳು. ಈಗ ಶವಾಸನ. ಕಾಲನ್ನು ಅಗಲಿಸಿ ಎದೆಯ ಮೇಲೆ ಬಲಗೈಯಿಟ್ಟು ಎಡಗೈಯನ್ನು ನಾಭಿಯ ಮೇಲಿಟ್ಟು ಉಸಿರಿನ ಏರಿಳಿತವನ್ನೇ ಗಮನಿಸು – ಎಂದು ತನಗೇ ಹೇಳಿಕೊಳ್ಳುತ್ತ. ನಿಧಾನವಾಗಿ ಆಳವಾಗಿ ಉಸಿರಾಡುತ್ತ.
ಫ್ಯಾನು ತಿರುಗುತ್ತಲೇ ಇತ್ತು. ತನ್ನ ಸುತ್ತ ತಾನೇ. ಸ್ವಂತ ಗತಿಯ ಮೇಲೆ ತನಗೇ ನಿಯಂತ್ರಣವಿಲ್ಲದ ವಸ್ತು.