“ಟ್ರಿನ್… ಟ್ರಿನ್…” ರಿಂಗಣಿಸಿದ ದೂರವಾಣಿ ಕರೆಗೆ ಸ್ಪಂದಿಸಿದ ಪ್ರಸಿದ್ಧ ರೋಬೊ ತಜ್ಞ ಪ್ರೊ. ರಂಗ ಪ್ರಸಾದ.
“ಪ್ರೊ. ರಂಗಪ್ರಸಾದ ಹಿಯರ್…! ”
“ಗುಡ್ ಮಾರ್ನಿಂಗ್. ಪ್ರೊಫೇಸರ್…” ಸಿಟಿಯಿಂದ ನಾಲ್ವತ್ತು ಕೀ.ಮಿ.ದೂರದಲ್ಲಿರೊ ಎಸ್ಟೆಟ್‌ನಿಂದ ಮ್ಯಾಗಿಯ ಧ್ವನಿ ಸ್ಪುಟವಾಗಿ ಮೂಡಿ ಬಂದದ್ದಲ್ಲದೆ ಎದುರಿಗಿನ ವಿಡಿಯೋ ಮೇಲೆ ಅವಳ ಬಿಂಬವೂ ಮೂಡಿ ಬಂದಿತು.
“ಪ್ರೊಫೇಸರ್. ನನಗೊಂದು ರೊಬೊಟಿನ ಅಗತ್ಯವಿದೆ…”
“ಶೂರ್.ಮ್ಯಾಗಿ. ಆದರೆ ಅದರ ಪ್ರೊಗ್ರಾಮಿಂಗ ಮತ್ತು ಕ್ಯಾರಕ್ಟರ ಬಗ್ಗೆ ನೀನು ಮೊದಲೇ ನನಗೆ ಡಿಟೈಲ್ಸ್ ಕೊಟ್ಟಲ್ಲಿ ನೀನಗೋಸ್ಕರವೆಂದೆ ರೊಬೊಟನ್ನು ಡಿಸೈನ್ ಮಾಡಬಹುದು…”
“ಇಲ್ಲ.ಅದೆಲ್ಲಾ ಅಗತ್ಯವಿಲ್ಲ. ಸಾಮಾನ್ಯವಾಗಿ ನಾನು ಹೇಳಿದ್ದನ್ನೆಲ್ಲಾ ಕೇಳುವಂತಹ ನನ್ನ ದೈನಂದನ ಮತ್ತು ಕಛೇರಿಯ ಕೆಲಸಗಳಿಗೆ ಸಹಾಯವಾಗುವಂತಹ ಮತ್ತು ಬಹಳವೆಂದರೆ ಕಾರು ರೈಡಿಂಗ ಮತ್ತು ನ್ನನ್ನೆಲ್ಲಾ ಕೆಲಸಗಳಿಗೆ ಯಾವುದೆ ತೊಂದರೆಯಾಗದಂತೆ ಸಹಾಯ ಮಾಡುವ ಸಾಮಾನ್ಯ ರೊಬೊ ಇದ್ದರೆ ಸಾಕು…”
“ಓ.ಕೆ. ಮ್ಯಾಗಿ. ಸಂಜೆ ನಿಮ್ಮ ಮನೆಗೆ ನನ್ನ ಹುಡುಗ ಬಂದು ತಲುಪಿಸುತ್ತಾನೆ. ಹಾಗು ನೀನು ಹೇಳುವ ಎಲ್ಲಾ ಕೆಲಸಗಳಿಗೆ ಅವನು ಅದನ್ನು ಟ್ಯೂನ್ ಮಾಡಿಟ್ಟು ಬರುತ್ತಾನೆ…”
“ಥ್ಯಾಂಕೂ.. ಪ್ರೊಫೇಸರ್. ”
ಹೀಗೆ ವರುಷಗಳ ಹಿಂದೆ ಈ ರೀತಿಯಾಗಿ ಲಕ್ಷಾಧೀಶಳೂ ಹಾಗೂ ಕೈಗಾರಿಕೊದ್ಯಮಿ ಎಂದೇ ಹೆಸರುಗಳಿಸಿದ್ದ ಮ್ಯಾಗಿ ಮನೆಯನ್ನು ಬಂದು ಸೇರಿಕೊಂಡಿದ್ದು ಮ್ಯಾಕ್ಸ್ ಎಂಬ ರೋಬೊ. ಅವನು ಅವಳು ಹೇಳುವುದನ್ನೇಲ್ಲಾ ಚಾಚು ತಪ್ಪದೇ ಪಾಲಿಸುತ್ತಾನೆ. ಅವಳು ಬೆಳಿಗ್ಗೆ ಎದ್ದ ಕೂಡಲೆ ಕಾಫಿ ತಂದಿಡುತ್ತಾನೆ. ಸ್ನಾನ ಮಾಡಿ ಹೊರಗೆ ಬರುತ್ತಿದ್ಡಂತೆ ಹೇಯರ್ ಡ್ರೈಯರ್ ಎತ್ತಿಕೊಂಡು ಬಂದು ಆನ್ ಮಾಡಿಕೊಂಡು ನಿಲ್ಲುತ್ತಾನೆ.
ಅವಳು ಡ್ರೆಸ್ಸ್ ಮಾಡಿಕೊಳ್ಳುತ್ತಿದ್ದರೆ ಆಸಕ್ತಿಯಿಂದ ಕನ್ನಡಿಯನ್ನು ನಿಂತು ನೋಡುತ್ತಾನೆ… ಅವಳು ಹೊರಕ್ಕೆ ಬರುತ್ತಿದ್ದಂತೆ ಬಾಗಿಲನ್ನು ತೆರೆದು ನಿಂತು ಅವಳು ದಾಟುತ್ತಿದ್ದಂತೆ ರಿಮೋಟಿನಿಂದ ಬಾಗಿಲನ್ನು ಹಾಕಿಕೊಳ್ಳುವಂತೆ ಮಾಡುತ್ತಲೇ ಕಾರಿನ ಬಳಿಗೆ ಸಾಗಿ ಹೋಗಿ ಹಿಂದಿನ ಬಾಗಿಲನ್ನು ತೆರೆದಿಟ್ಟು ತಾನು ಡ್ರೈವರ್ ಸೀಟನ್ನು ಸೇರಿಕೊಳ್ಳುತ್ತಿದ್ದ. ಅಫೀಸಿನಲ್ಲಿ ಅವಳು ಡಿಕ್ಟೆಟ್ ಮಾಡುತ್ತಿದ್ದರೆ ನೇರವಾಗಿ ಅದನ್ನು ಕಂಪ್ಯೂಟರಿನಲ್ಲಿ ಪಿ಼ಡ್ ಮಾಡುತ್ತಾ ಸಾಗುತ್ತಿದ್ದ. ಸಂಜೆ ಮನೆಗೆ ಬಂದ ಮೇಲೆ ಕೂಡಾ ಅಷ್ಟೆ ಅವಳಿಗೆ ಕಾಫಿಯಿಂದ ಹಿಡಿದು ನೈಟಿಯನ್ನು ಎತ್ತಿಕೊಡುವವರೆಗೂ ಕೆಲಸ ನಿರ್ವಹಿಸುತ್ತಿದ್ದ.
ಆದರೆ ಇತ್ತಿಚಿನ ಕೆಲ ದಿನಗಳಿಂದ ಚಿರಾಗ್‌ನಲ್ಲಿ ಬದಲಾವಣೆ ಬಂದಿದ್ದನ್ನು ಅವಳು ಗಮನಿಸಿದ್ದಳು. ಅವನು ಅವಳು ನೋಡುತ್ತಿದ್ದ ದೃಷ್ಟಿಯಲ್ಲಿ ಬದಲಾವಣೆ ಕಂಡಿತ್ತು. ಅವಳ ಹತ್ತಿರ ಬಂದು ನಿಲ್ಲುತ್ತಿದ್ದ. ಮೊದಲಿನಂತೆ ಹೇಳಿದ್ದಷ್ಟನ್ನೇ ಮಾಡಿಕೊಂಡಿರದೆ ಅದನ್ನು ಮಾಡಲೇ ಇದನ್ನು ಮಾಡಲೇ ಎಂದೆಲ್ಲಾ ಕೇಳುತ್ತಿದ್ದ. ಅವಳನ್ನು ಅಗಾಗ ಹೊಗಳಲು ಆರಂಭಿಸಿದ್ದ. ಆದರೆ ಪೂರ್ತಿಯಾಗಿ ಅವನ ಬಗ್ಗೆ ಮ್ಯಾಗಿಗೆ ಸಂಶಯ ಮತ್ತು ಅವನನ್ನು ಗಮನಿಸುವ ದೃಷ್ಟಿ ಕೋನ ಬದಲಾಗಿದ್ದು ಮಾತ್ರ ಕೆಲ ದಿನಗಳ ಹಿಂದೆ ನಡೆದ ಘಟನೆಯ ನಂತರವೇ…
… ಅಂದು ಎಂದಿನಂತೆ ಮ್ಯಾಕ್ಸ್ ಅವಳ ಪಕ್ಕದಲ್ಲಿ ಕುಳಿತು ಅವಳು ಮಾಡುವುದನ್ನೇ ಗಮನಿಸುತ್ತಿದ್ದ. ಅದಕ್ಕೂ ಮೊದಲಷ್ಟೆ ಅವನು ಕುಳಿತುಕೊಂಡು ಒಂದು ಚಲನ ಚಿತ್ರವನ್ನು ವಿಕ್ಷಿಸಿದ್ದ. ಇದ್ದಕ್ಕಿದ್ದಂತೆ ಅವಳಿಗೆ
“ಹಾಯ್ ಸ್ವೀಟಿ…”ಎಂದ. ಅವಳಿಗೆ ಅಚ್ಚರಿಯಾದರೂ ಅವನತ್ತ ತಿರುಗಿ ಮುಗುಳ್ನಗೆ ಬೀರುತ್ತಾ…
“ಏನು… ಮ್ಯಾಕ್ಸ್…? “ಎಂದಳು.
“ಏನಿಲ್ಲ ಸುಮ್ಮನೆ ಮಾತಾಡಲು ಬಂದೆ … “ಎಂದವ ಅವಳನ್ನೇ ವೈಯ್ಯಾರವಾಗಿ ದಿಟ್ಟಿಸಿದ. ಅವಳಿಗೆ ವಿಚಿತ್ರ ಎನ್ನಿಸಿದರೂ ತೋರ್ಪಡಿಸದೆ
“ಹೇಳು… ಯಾವ ವಿಷಯನ್ನು ಮಾತಾಡೋಣ… ವಿಜ್ಞಾನ… ಮಾಹಿತಿ ತಂತ್ರಗಳು… ಕ್ಲೋನಿಂಗ… ನ್ಯೂಕ್ಲೀಯರ್ ಸೈನ್ಸ್…”
“ಅದಲ್ಲ…”ಎನ್ನುತ್ತಾ ತಡವರಿಸಿದ.
“ಮತ್ತಿನ್ಯಾವುದು… ? ”
“ಅದೇ ಈ ಮೊದಲು ಚಿತ್ರದಲ್ಲಿ ಮಾತಾಡುತ್ತಿದ್ದರಲ್ಲ… ಹಾಗೇ ನಿನ್ನೊಂದಿಗೆ ಮಾತಾಡಬೇಕೆನ್ನಿಸುತ್ತಿದೆ…”
“ವಾಟ್ … ? “ಮ್ಯಾಗಿಯ ದ್ವನಿಯಲ್ಲಿ ಅಚ್ಚರಿ.. ಉದ್ವೇಗ .. ಆತಂಕ ಸ್ಪಷ್ಟವಾಗಿ ಕಂಡು ಬರುತ್ತಿತ್ತು.
“ಹೌದು… ಮ್ಯಾಗಿ ಅದೇನೊ ಅರ್ಥವಾಗದ ಶಬ್ದಗಳ ಬಗ್ಗೆ ತಿಳಿದುಕೊಳ್ಳಬೇಕು ಅನ್ನಿಸುತ್ತಿದೆ… ”
“ಅಂದ್ರೆ… ಯಾವ ರೀತಿಯ ಶಬ್ದಗಳು… ? ಏನೆಲ್ಲಾ ತಿಳಿದುಕೊಳ್ಳಬೇಕೆನ್ನಿಸುತ್ತಿದೆ ನಿನಗೆ…? ”
“ಅದೇ ನೀನು ನೋಡಿದ್ಯಲ್ಲ. ಹಾಗೇ ನಾನು ನಿನ್ನ ಪಕ್ಕದಲ್ಲೆ ಕುಳಿತು ಮಾತನಾಡಬೇಕು. ನಿನ್ನ ಕೈ ಹಿಡಿದು ಕೊಳ್ಳಬೇಕು… ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು… ದೊಡ್ಡದಾಗಿ ನಗಬೇಕು… ಹಾಂ. ನನ್ನ ನೆನೆಪಿನಲ್ಲಿ ನಗೋದು ಅಂದ್ರೆನೆಂದು ತೀಳಿದುಕೊಳ್ಳಲಾಗ್ತಿಲ್ಲ. ನೀನೆ ಕೈಹಿಡಿದು ಹೇಳಿಕೊಡ್ತಿ ತಾನೆ…? ಹಾಗೆ ಕೈ ಹಿಡಿದು ನಗ್ತಾ ನಗ್ತಾ ನಿನ್ನನ್ನು ನಾನು ಹಿಡಿದು ಕೊಳ್ಳಬೇಕು…”
“ಓ… ಶಟ್ ಅಪ್ ಮ್ಯಾಕ್ಸ್. ನೀನೇನು ಮನುಷ್ಯನೇ ಅದನ್ನೆಲ್ಲಾ ಮಾಡೋಕೆ…? ”
“ಯಾಕೆ ಮನುಷ್ಯರು ಮಾತ್ರ ಮಾಡಬೇಕೆ…? ”
“ಹೌದು ಮ್ಯಾಕ್ಸ್. ಕೆಲವು ಕೆಲಸಗಳನ್ನು ನೀನು ಮಾಡಲಾಗುವುದಿಲ್ಲ. ಅವನೆಲ್ಲಾ ನಾವು ಮಾತ್ರ ಮಾಡಿಕೊಳ್ಳ ಬಲ್ಲೆವು…”
“ಇಲ್ಲ ನಾನೂ ಮಾಡಬಲ್ಲೆ…”
“ಏನು ಮಾಡಬಲ್ಲೆ ನೀನು…? ”
“ಅದೇ ಪ್ರಿತೀಸೋದು…! ”
“ವಾಟ್. ನೀನು ಪ್ರೀತಿಸೋದಾ… ? ”
“ಹೌದು. ಮ್ಯಾಗಿ ನಾನೂ ಪ್ರೀತಿಸ್ಬೇಕು.”
“ಮ್ಯಾಕ್ಸ್. ನೀನು ಪ್ರೀತಿಸೊದಾ…? ನೀನೊಬ್ಬ ಯಂತ್ರ ಮಾನವ. ಮಾನವನ ಆಜ್ಞೆಗೊಳಪಟ್ಟು ಕೆಲಸ ಮಾಡುವುದಷ್ಟೆ ನಿನ್ನ ಕೆಲಸ. ಅದನ್ನು ಬಿಟ್ಟು ಇದೆಲ್ಲಾ ಏನು ನಾಟಕ ಆರಂಭಿಸಿದ್ದೀಯಾ…? ಇದನ್ನೆಲ್ಲಾ ಯಾರು ತುಂಬಿದರು ನಿನ್ನ ತಲೆಗೆ…? ”
“ಯಾಕೆ. ನಾನು ರೋಬೊ ಆದ ಮಾತ್ರಕ್ಕೆ ಪ್ರೀತಿಸಬಾರದಾ… ? ನೀವು ಮಾನವರು ಮಾತ್ರ ಪ್ರಿತಿಸಬಹುದಾ…? ನಾನೊಂದು ಯಂತ್ರ ಮಾನವನಾಗಿದ್ದ ಮಾತ್ರಕ್ಕೆ ನನಗೆ ಯೋಚನೆಗಳೆ ಇರಬಾರದಾ…? ”
“ಯಾರು ಹೇಳಿದ್ದು. ನಿನಗೂ ಯೋಚನೆಗಳು ಇರ್ಬೆಕು. ಆದರೆ ಅದು ನನ್ನ ಆಜ್ಞೆ ಮತ್ತು ಕೆಲಸವನ್ನು ನಿರ್ವಹಿಸಲು ಅಗತ್ಯವಿರುವಷ್ಟು ಮಾತ್ರ. ನಿನ್ನನ್ನು ಅದಕ್ಕೆಂದೆ ನಾನು ತಂದಿದ್ದು…”
“ಅನ್ಯಾಯ…”ಗೊಣಗಿದ ಮ್ಯಾಕ್ಸ್ ತನ್ನಲ್ಲೆ.
“ಯಾಕೆ…? “ಅವಳಿಗೆ ಅವನ ಹೊಸ ಪದಗಳು ಅಚ್ಚರಿ ಮೂಡಿಸಿದ್ದವು.
“ಇನ್ನೇನು. ನಾನು ನಿಮ್ಮಂತೆ ನಡೆದಾಡ್ತಿನಿ. ನಿಲ್ತಿನಿ. ಮಾತ್ನಾಡ್ತಿನಿ ಎಲ್ಲಾ ಕೆಲಸವನ್ನು ನಿರ್ವಹಿಸೋ ನಾನು ಪ್ರೀತಿಸ್ಬಾರದಾ…? ”
“ಹಾಗಂದ್ರೆ ನಿನಗೆ ಗೊತ್ತಾ…? ”
“ಗೊತ್ತು. ಪ್ರೀತಿ ಒಂದು ಮಾನಸಿಕವಾದ ಅನುಭೂತಿ. ಅನುಭವಕ್ಕೇನೆ ಅದು ಗೊತ್ತಾಗೋದು. ಪ್ರೀತಿಸ್ತಿದ್ದೇನೆ ಅನ್ನೋದು ಮಾನಸಿಕವೇ ಹೊರತಾಗಿ ಭೌತಿಕವಲ್ಲದ ಒಂದು ಹೊಸ ಆಯಮ… ಪ್ರೀತಿ ಇದ್ದಲ್ಲಿ ದ್ವೇಷ ಇದೆ. ಅಸೂಯೆ ಇದೆ. ಇತ್ಯಾದಿ… ಇತ್ಯಾದಿ…”
“ಚೆನ್ನಾಗಿದೆ ಡೆಫಿನಿಶನ್. ಇದು ಅನುಭವಾನಾ ? ಇಲ್ಲಾ ಯಾರಾದರು ಹೇಳಿ ಕೊಟ್ಟದ್ದಾ ? ”
“ಎರಡಕ್ಕೂ ಜಾಸ್ತಿ ವ್ಯತ್ಯಾಸ ಇಲ್ಲ ಎಂದುಕೊಳ್ತಿನಿ..”
“ಅ೦ದ್ರೆ ನೀನು ಯಾರನ್ನಾದರು ಪ್ರೀತಿಸ್ತಿದಿಯಾ ? ಐ. ಮೀನ್ ಲವ್..! ”
“ಹೌದು… ”
“ವಂಡರ್ ಫುಲ್. ಯಾರನ್ನ ”
“ನಿನ್ನನ್ನೆ ಮ್ಯಾಗಿ. ಐ..ಲವ್..ಯೂ ”
ಸ್ಥಂಭಿಸಿ ನಿಂತುಬಿಟ್ಟಳು ಮ್ಯಾಗಿ.
ಮುಂದುವರೆದು ಬರುತ್ತಿದ್ದ ಮ್ಯಾಕ್ಸ್‌ನನ್ನು ಕಂಡು ಹಿಂದೆ ಸರಿಯುತ್ತಾ ಕಿರುಚಿದಳು.
“ಮ್ಯಾಕ್ಸ್. ಸ್ಟಾಪ್ ದೆರ್. “ಅವನು ಅಲ್ಲೇ ನಿಂತ. ಅವನ ಹಸಿರು ಕಣ್ಣುಗಳಲ್ಲಿ ಇದ್ದ ಭಾವನೆಯನ್ನು ಅವಳಿಂದ ಗುರುತಿಸುವುದು ಅಸಾಧ್ಯವಾಗಿತ್ತು. ಕೂಡಲೇ ಈ ಹೊಸ ಬೆಳವಣಿಗೆಗಗಳ ಬಗ್ಗೆ ಅವಳು ಪ್ರೊ.ರಂಗ ಪ್ರಸಾದಗೆ ಮೊಬೈಲ್ ಮೂಲಕ ತಿಳಿಸಿದವಳೆ ಅವರ ಅಪ್ಪಣೆಯಂತೆ ಮ್ಯಾಕ್ಸ್ ನನ್ನೇತಿಕೊಂಡು ಅವರ ಲ್ಯಾಬಿಗೆ ಹೋದಳು.
*
*
*
“ಇದೊಂದು ತೀರ ಅಪರೂಪದ ಬೆಳವಣಿಗೆ “ಎಂದರು ರಂಗಪ್ರಸಾದ ಅವರ ಎದುರಿಗೆ ನಿರ್ಜಿವ ಶವದಂತೆ ಮ್ಯಾಕ್ಸ್ ಮಲಗಿದ್ದ.
“ಹೌದು ಅದೇ ನನಗೂ ಅರ್ಥವಾಗುತ್ತಿಲ್ಲ ಮ್ಯಾಕ್ಸ್ ಅದ್ಹೆಗೆ ಈ ರೀತಿಯಾಗಿ ವರ್ತಿಸಿದ ಎಂದು. ”
“ಮ್ಯಾಗಿ. ಹಾಗೇನಾದರೂ ಮ್ಯಾಕ್ಸ್ ರೋಬೊ ನೀತಿ ಸಂಹಿತೆಯನ್ನು ಉಲ್ಲಂಘಿಸಿಯೂ ಬದುಕಿದ್ದರೆ ಅದೊಂದು ಅದ್ಭುತ ಬೆಳವಣಿಗೆಯಾಗಲಿದೆ….”
“ಅಂದರೆ … ? ”
“ಒಂದು ಕಾಲಕ್ಕೆ ರೋಬೊ ಬರಿ ಕಾಲ್ಪನಿಕ ಯಂತ್ರವಾಗಿತ್ತು. ಆದರೆ ವಿಜ್ಞಾನ ಬೆಳೆದಂತೆಲ್ಲಾ ರೋಬೊಗಳೂ ಸಾಕಷ್ಟು ಅಭಿವೃದ್ಧಿ ಹೊಂದಿವೆ. ರೋಬೊಗಳ ಮೆದುಳಿಗೆ ನೀಡಿರುವುದು ಕೇವಲ ೪೦ ನ್ಯೂರಾನ್ಸ್ ಶಕ್ತಿಯಾದರೂ ಅವುಗಳೆರೆದುರಿಗೆ ಬಿಲಿಯನ್ನುಗಟ್ಟಲೆ ನ್ಯೂರಾನ್ಸ್ ಶಕ್ತಿಯನ್ನು ಹೊಂದಿರುವ ಮಾನವ ಏನೇನೂ ಅಲ್ಲ ಎನ್ನುವಂತಾಗುತ್ತಿದ್ದಾನೆ.
ಅಲ್ಲದೆ ಮಾನವನಿಗೆ ಕಲಿಯಲು ಬೇಕಾದ ವರ್ಷಗಟ್ಟಲೆ ಅವಧಿಗೆ ಹೋಲಿಸಿದರೆ ರೋಬೊ ಕೆಲವೇ ಗಂಟೆರ್ಗಳಲ್ಲಿ ಕಲಿತು ಬಿಡುತ್ತಿದೆ. ಹೀಗೆ ಆದರೆ ರೋಬೊಗಳು ಒಂದಿನ ಮಾನವನ ಸಂತಿತಿಯನ್ನೇ ಮೆಟ್ಟಿ ಮೆರೆದರೂ ವಿಚಿತ್ರವೇನಲ್ಲ.
ಯಾಕೆಂದರೆ ಮ್ಯಾಕ್ಸ್ ಒಬ್ಬ ಅಧ್ಬುತ ಕೆಲಸಗಾರನಾದರೂ ಅವನ “ಪೊಜಿಟ್ರಾನಿಕ್ ಮೆದುಳಿಗೆ ಬೇರಾವುದೆ ಯೋಚನೆಗಳಿಗೆ ಅವಕಾಶವಾಗುವಂತೆ ಪ್ರಾವಿಶನ್ನನ್ನು ನಾನು ಮಾಡಿಲ್ಲ. ಅಲ್ಲದೆ ನಿನ್ನೊಂದಿಗೆ ಅವನು ಮಾಡಿದ ವಾದ ವೈಖರಿಯನ್ನು ಗಮನಿಸಿದರೆ ಖಂಡಿತವಾಗಿಯೂ ಮ್ಯಾಕ್ಸ್‌ನಲ್ಲಿ ಹೊಸದಾದ ಸರ್ಕ್ಯೂಟ್‌ಗಳು ಅಭಿವೃದ್ಢಿಯಾಗಿರುವ ಲಕ್ಷಣಗಳು ಕಾಣಿಸುತ್ತಿವೆ.
“ಹಾಗಾಗುವ ಸಾಧ್ಯತೆ ಇದೆ ಅಂತೀರಾ ಪ್ರೊಫೇಸರ್ … ! ”
“ಹೌದು ಮ್ಯಾಗಿ. ಯಾಕೆಂದರೆ ಇಂತಹದ್ದೇ ಬುದ್ಧಿವಂತ ರೋಬೊಗಳ ಗುಂಪೊಂದು ತಮ್ಮಲ್ಲೇ ಬೆಳೆಸಿಕೊಂಡ ಅಪರೂಪದ ಗುಣಗಳ ಪರಿಣಾಮವಾಗಿ ಇದ್ದ ಎಂಟು ಜನ ರೋಬೊಗಳಲ್ಲೆ ಒಬ್ಬನನ್ನು ನಾಯಕನನ್ನಾಗಿಸಿಕೊಂಡು ತಮ್ಮ ಮಾಲಿಕನ ವಿರುದ್ಧ ಬಂಡೆದ್ದಿದ್ದು ವಿಚಿತ್ರವಾದರೂ ಸತ್ಯವಾದ ಘಟನೆಯಾಗಿದೆ. ಹೀಗಿದ್ದಾಗ ನಾರ್ಮಲ್ಲಿಗಿಂತಲೂ ಹೆಚ್ಚಿನ ಬುದ್ಧಿ ಶಕ್ತಿಹೊಂದಿದ್ದ ರೋಬೊ ಈ ರೀತಿಯಲ್ಲಿ ಬೆಳವಣಿಗೆಯನ್ನು ತೋರಿಸಿದ್ದರೆ ಆಶ್ಯರ್ಯವೇನೂ ಇಲ್ಲ…”
“ಆದರೆ ಪ್ರೋಪೇಸರ್. ಅವನು ನನ್ನನ್ನೇ ಲವ ಮಾಡೋ ರೀತಿಯಲ್ಲಿ ಬೀಹೆವ್ ಮಾಡಿದ್ದಲ್ಲದೆ ನನ್ನನ್ನೇ ಹಿಡಿದುಕೊಳ್ಳಲು ಬಂದ. ರೀಯಲ್ಲಿ ವಂಡರ್. ಮ್ಯಾಗಿ ಐ…ಲವ್…ಯೂ… ಅಂದ ಮ್ಯಾಕ್ಸ್. ! ”
“ಆಶ್ಚರ್ಯವಾದರೂ ನಾನು ಸುಳ್ಳೆನ್ನುವುದಿಲ್ಲ. ಯಾಕೆಂದರೆ ನಮ್ಮೆಲ್ಲರಂತೆ ವ್ಯವಹರಿಸಲು ಮ್ಯಾಕ್ಸನನ್ನು ಸಂಪೂರ್ಣ ಮಾನವರಂತೆ ನಿರ್ಮಿಸಲಾಗಿದ್ದು ಕೇವಲ ಅವನಿಗೆ ಕಣ್ಣಿನಲ್ಲಿ ಕಾಣುವ ದೃಶ್ಯದಿಂದಲೇ ಪರಿಸ್ಥಿತಿಯನ್ನು ಅರಿತು ನಡೆಯುವಂತಹ ಪ್ರೊಗ್ರಾಮಿಂಗನ್ನು ಅಳವಡಿಸಲಾಗಿದೆ. ನೀನು ನಗುತ್ತಿದ್ದರೆ ಅದು ಅವನ ಕಣ್ಣಿಗೆ ಕಾಣಿಸುತ್ತಿದ್ದಂತೆ ಅವನ ಪಾಜಿಟ್ರಾನಿಕ್ ಮೆದುಳಿಗೆ ಆ ಕ್ರಿಯೆಯ ಬಗ್ಗೆ ಸಂದೇಶ ತಲುಪುತ್ತದೆ.
ಅಲ್ಲಿ ಮೊದಲೇ ಯಾವ್ಯಾವ ರೀತಿಯ ಸನ್ನೀವೇಶಗಳಿಗೆ ಹೇಗೆ ವರ್ತಿಸಬೇಕೆನ್ನುವ ವಿವರಣೆಗಳನ್ನು ತು೦ಬಿಸಿದ್ದರಿಂದ ಅದನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ಮ್ಯಾಕ್ಸ್ ಭಾವನೆಗಳನ್ನು ಹೊರಗೆಡವಬಲ್ಲ. ನೀನು ಮಾತಾಡಿದರೆ ಅದು ಅವನ ಸ್ಪೀಕರಿಗೆ ಕೇಳಿಸುತ್ತಿದ್ದಂತೆ ಅಲ್ಲಿಂದ ಸಾಗಿ ಹೋಗುವ ಆ ಮೂಲಕ ಅವನ ಕಂಪ್ಯೂಟರಿನಲ್ಲಿ ಡೀಕೋಡ ಅಗಿ ಅದಕ್ಕೆ ಲಾಜಿಕಲ್ಲಾಗಿ ಉತ್ತರ ರೂಪದಲ್ಲಿ ಅವನ ಮೆದುಳು ವ್ಯಕ್ತಪಡಿಸುತ್ತಿದ್ದಂತೆ ಅದು ಪುನಃ ಶಬ್ದ ಹಾಗೂ ಧ್ವನಿಯನ್ನು
ಸೌಂಡ ಕಾರ್ಡಗಳು ಮೂಲಕ ವ್ಯಕ್ತಪಡಿಸುತ್ತವೆ. ಅದು ನಮಗೆ ಅವನು ಮಾತಾಡಿದಂತೆ ಇರುವುದರಿಂದ ಮ್ಯಾಕ್ಸ್ ಸಹಜವಾಗಿ ಮಾತಾಡುತ್ತಿರುವಂತೆ ತೋರುತ್ತದೆ.
ಅಷ್ಟೇ ಅಲ್ಲದೆ ಅವನಿಗೆ ಏಟಾದರೆ ರಕ್ತ ಬರುವಂತೆಯೂ … ಕಣ್ಣಿಂದ ನೀರು ಸುರಿಯುವಂತೆ ಅಶ್ರು ಗ್ರಂಥಿಗಳನ್ನೂ ಸೇರಿಸಲಾಗಿದೆ. ಹಾಗಾಗಿ ಮಾನವನು ಮಾಡಬಲ್ಲಂತಹ ಅಲ್ಲ ಕೆಲಸಗಳನ್ನು ಮ್ಯಾಕ್ಸ ಮಾಡಬಲ್ಲ. ಹೀಗಿದ್ದಾಗ ಅವನಲ್ಲಿ ಈ ರೀತಿಯ ಬದಲಾವಣೆಗಳು ಬಂದಿದ್ದರೆ ನಿಜಕ್ಕೂ ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ. ಬಹುಶಃ ಇನ್ನು ಮುಂದೆ ಯಂತ್ರಗಳೂ ಕೂಡಾ ಮಾನವನಂತೆ ಭಾವನೆಗಳನ್ನು ವ್ಯಕ್ತಪಡಿಸಿ ಬದುಕಬಹುದೆಂದುಕೊಳ್ಳುತ್ತೆನೆ… ಎನಿ ಹೌ… ಮ್ಯಾಗಿ. ಮೂರು ದಿನಗಳ ನಂತರ ನಾನು ಮ್ಯಾಕ್ಸನನ್ನು ಪುನಃ ಕಳಿಸುತ್ತೇನೆ. ಯಾವುದಕ್ಕೂ ಅವನ ಮೇಲೊಂದು ಲಕ್ಷವಿರಲಿ. …”
“ಓ…ಕೆ… ಪ್ರೋಪೇಸರ್…”ಧನ್ಯವಾದಗಳನ್ನರ್ಪಿಸಿದ ಮ್ಯಾಗಿ ಎಸ್ಟೇಟಿನತ್ತ ನಡೆದಳು.
*
*
*
ನಂತರದ ದಿನಗಳಲ್ಲಿ ಮ್ಯಾಕ್ಸ್ ಎಂದಿನಂತೆ ಅವಳೊಂದಿಗೆ ಇದ್ದನಾದರೂ ಅವನು ತನ್ನನ್ನು ಗಮನಿಸುತ್ತಿದ್ದಾನೆ ಎನ್ನುವುದು ಅವಳ ಗಮನಕ್ಕೆ ಬಂದಿತ್ತು. ತಾನು ಬೆಡ್ ರೂಮಿನಲ್ಲಿ ಬಟ್ಟೆ ಬದಲಿಸುತ್ತಿದ್ದರೆ ತನ್ನನ್ನು ಮೇಲಿನಿಂದ ಕೆಳಗಿನವರೆಗೆ ತದೇಕ ಚಿತ್ತನಾಗಿ ದಿಟ್ಟಿಸುತ್ತಿದ್ದುದ್ದನ್ನು… ತಾನು ಅವನ ಪಕ್ಕದಲ್ಲಿದ್ದರೆ ಅಗಾಗ ತನ್ನನ್ನೇ ನೇರವಾಗಿ ನೋಡುತ್ತಾ ನಿಲ್ಲುವುದನ್ನು ಮ್ಯಾಕ್ಸ್ ಆರಂಭಿಸಿದ್ದನ್ನು ಅವಳು ಸ್ಪಷ್ಟವಾಗಿ ಗುರುತಿಸಿದ್ದಳು. ಅಂದು ತೀರ ಕೆಲಸವಿದ್ದುದರಿಂದ ಮುಗಿಸುವ ಹೊತ್ತಿಗೆ ರಾತ್ರಿಯಾಗಿತ್ತು. ಮಲಗಲು ಹೋಗಬೇಕೆನ್ನುವ ಹೊತ್ತಿಗೆ ಮ್ಯಾಕ್ಸ್ ಕೂಡಾ ಅವಳ ಹಿಂದೆ ಬಂದ.
“ಏನು…? ”
“ನಾನು ನಿನ್ನ ಜೊತೆ ಮಲಗುತ್ತಿನಿ…! ”
“ಮ್ಯಾಕ್ಸ್. ಹೋಗಿ ಅಲ್ಲಿ ಕುಳಿತುಕೊ…”
“ನೋ ಮ್ಯಾಗಿ. ನಾನು ನಿನ್ನೊಂದಿಗೆ ಇರಲು ಬಯಸುತ್ತೇನೆ….”ಅವನ ಮಾತು ಮುಗಿಯುವ ಮುಂಚೆ ಕೂಗಿದ್ದಳು ಮ್ಯಾಗಿ.
“ಶಟ್ ಅಪ್. ಮಾಕ್ಸ್ ಹೋಗಿ ಕೂತಿರು…”
“ಇಲ್ಲ ಮ್ಯಾಗಿ. ನನಗೆ ನೀನು ತುಂಬ ಇಷ್ಟ ವಾಗುತ್ತಿದ್ದೀಯ… ನಾನು ನಿನ್ನೊಂದಿಗೆ ಇರುತ್ತೇನೆ…”
“ನೋ. ಮ್ಯಾಕ್ಸ್. ನಿನಗೆ ನಿನ್ನದೆ ಆದ ಪರಿಮಿತಿಗಳಿವೆ. ನೀನು ಇಂತಹ ವಿಷಯಗಳಿಗೆ ಅತೀತ…”
“ಇಲ್ಲ. ನನಗೆ ಹಾಗನ್ನಿಸುತ್ತಿಲ್ಲ. ನನ್ನಲ್ಲಿ ಈ ರೀತಿಯ ವಿಚಾರಗಳು ಮೂಡಿದಂತಿನಿಂದ ನಾನು ಕೂಡಾ ನಿಮ್ಮಂತೆನೆ ಪರಿಪೂರ್ಣ ಎಂದುಕೊಳ್ಳುತ್ತಿದ್ದೇನೆ. ಪ್ಲೀಸ್ ಮ್ಯಾಗಿ. ಒಮ್ಮೆ ನನ್ನ…”
“ನೋಡು ಮ್ಯಾಕ್ಸ್ ಕೆಲವು ಕಾಲದ ನಂತರ ನಿನ್ನ ಕುಲವೂ ನಮ್ಮಂತೆಯೇ ಬದುಕು ನಡೆಸುವ ಕಾಲ ಬಂದೆ ಬರುತ್ತದೆ. ಅಂತಹ ಒಂದು ಭವಿಷ್ಯತ್ತಿನ ವ್ಯವಸ್ಥೆಗೆ ನೀನು ಮೈಲಿಕಲ್ಲಾಗುತ್ತೀಯ. ಆದರೆ ನೀನು ಸಧ್ಯಕ್ಕೆ ನಿನ್ನ ಪರಿಮಿತಿಯನ್ನು ಮೀರುವಂತಿಲ್ಲ…”
“ಇಲ್ಲ. ಮ್ಯಾಗಿ. ನನಗೇನೂ ಆಗಲಾರದು. …”
“ಯಾಕಾಗಲ್ಲ. ನಿನ್ನದು ಆಜ್ಞೆಗೊಳಪಟ್ಟು ಕೆಲಸ ಮಾಡುವ ಮೆದುಳು… ನಿನ್ನ ಸರ್ಕ್ಯೂಟಗಳೂ ಒಂದು ಹಂತದ ನಂತರವೂ ಬೆಳವಣಿಗೆಗಳನ್ನು ಕಂಡರೆ ನೀನು ನಾಶವಾಗಿ ಹೋಗುತ್ತೀಯಾ…”
“ಇಲ್ಲ. ಮ್ಯಾಗಿ. ನನಗೇನೂ ಆಗಲಾರದು. ನಾನು ನಿನ್ನೊಂದಿಗೆ ಸೇರಿ ಪರಿಪೂರ್ಣನಾಗಿದೇನೆ. ಒಮ್ಮೆ ನನ್ನನ್ನು ತಬ್ಬಿಕೊ… ನೋಡು ನಾನು ನಿಮ್ಮಂತೆ ಎಲ್ಲವನ್ನು ಮಾಡುವಾಗ ಪ್ರೀತಿಯೆನ್ನೇಕೆ ಮಾಡಬಾರದು… ಅದಕ್ಕೆ ಇವತ್ತು ನಿನ್ನೊಂದಿಗೆ ಮಲಗಲಾ….? “ಅವನ ದ್ವನಿಯಲ್ಲಿ ಏರಿಳಿತಗಳಿರಲಿಲ್ಲ. ನಿರಂತರವಾಗಿ ಒಂದೇ ಟೋನಿನಲ್ಲಿ ಅದು ಹರಿಯುತ್ತಿತ್ತು.
ಅವನ ವಾದವನ್ನು ಕೇಳುತ್ತಿದ್ದರೆ ಅವಳಿಗೆ ಸಿಡಿದು ಬಿಡುವಂತಾಯಿತು. ಅವಳಿಗೆ ಅರ್ಥವಾಗಿ ಹೋಯಿತು. ಮ್ಯಾಕ್ಸ ಯಾವ ರೀತಿಯಲ್ಲಿ ತನ್ನನ್ನು ಪ್ರೀತಿಸಬೇಕೆಂದುಕೊಳ್ಳುತ್ತಿದ್ದಾನೆಂದು. ಇವನಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕೆನ್ನಿಸಿತವಳಿಗೆ.
“ಮ್ಯಾಕ್ಸ್. ನೀನು ಎಲ್ಲವನ್ನು ಮಾಡಬಲ್ಲೆ. ಆದರೆ ಪ್ರೀತಿಯಂತಹ ಪದಗಳಿಗೆ ನೀನು ಅತೀತ. ನೀನು ಮಾನವರಿಗಿಂತ ಎಷ್ಟೆ ಚೆನ್ನಾಗಿ ವೇಗವಾಗಿ ಕೆಲಸಗಳನ್ನು ಮಾಡಬಹುದು. ಆದರೆ ಒಂದು ಗಂಡು ಹೆಣ್ಣು ಸೇರಿದಾಗ ಆಗುವ ಅನುಭೂತಿ ಇದೆಯಲ್ಲ ಅದು ಕೇವಲ ನಾವು ನಿನ್ನ ಪ್ರೊಗ್ರಾಮನಲ್ಲಿ ಸೇರಿಸಿದರೆ ಮಾತ್ರ ನಿನಗೆ ಸೇರಿಸಿದ್ದಷ್ಟೆ ಅರ್ಥವಾಗುತ್ಯೆ ವಿನಃ ಬೇರೆನೂ ಅಲ್ಲ. ನೀನೊಂದು ಯಂತ್ರ. ನಿನಗೆ ಹೇಳಿ ಕೊಟ್ಟಿದ್ದನ್ನ ಮಾತ್ರ ಮಾಡಬಲ್ಲೆ ವಿನಃ ನಮ್ಮಂತೆ ಭಾವನೆಗಳಿಗೆ ಸ್ಪಂದಿಸಲಾರೆ. ಸಂವೇದನೆ ಅನ್ನೊದು ಕೇವಲ ಮನಸ್ಸಿನಿಂದ ಬರಬೇಕಷ್ಟೆ…
ನೀನು ನನ್ನೊಂದಿಗೆ ಪ್ರೀತಿಸ್ತಿಯಾ…? ಮಲಗುತ್ತಿಯಾ…? ನಂತರ ಏನು ಮಾಡುತ್ತಿ…? ಸುಮ್ಮನೆ ಬಂದು ಬಿದ್ದುಕೊಂಡರಾಗಲಿಲ್ಲ. ಒಬ್ಬ ಪರಿಪೂರ್ಣ ಗಂಡಸು ಮಾಡಬೇಕಾದ ಕೆಲಸ ನಿನ್ನಿಂದಾಗೋಲ್ಲ ತಿಳಿದುಕೊ. ಅದಕ್ಕೆ ಮನಸ್ಸು ಮೈ ಎರಡೂ ಸಂವೇದನಾ ಶೀಲವಾಗಿರಬೇಕು. ನೀನೊ ನಾನು ಹೇಳಿದರೆ, ಇಲ್ಲ ಗುಂಡಿಗಳನ್ನು ಕದಲಿಸಿದರೆ ಏನೂ ಮಾಡಬಲ್ಲೆ… ಗಂಡಸಿನಂತೆ ಕೂಡಾ ವರ್ತಿಸಬಲ್ಲೆ ಅಂತಿಟ್ಕೊ… ಆದರೆ ಹಾಗೆ ಯಂತ್ರದಂತೆ ಚಲಿಸುತ್ತಿದ್ದರೆ ಸಾಕಾಗಲ್ಲ. ಸಂವೇದನೆ ಅನ್ನೊದು ಅದರಲ್ಲಿ ಇರಬೇಕು… ಮುಖ್ಯವಾಗಿ ಅನುಭೂತಿ ಬೇಕು… ನಿನ್ನಂತೆ ಕೇವಲ ಡೆಫಿನೇಶನ್ ಅಲ್ಲ. ಆದ್ದರಿಂದ ಇವಲ್ಲ ಹುಚ್ಚಾಟವನ್ನು ಬಿಟ್ಟು ಸುಮ್ಮನೆ ಬಿದ್ದುಕೊ…ಎಷ್ಟೆಂದರೂ ನೀನು ಅಮಾನವ…”
ಎಂದವಳೆ ಅವನೆಡೆಗೆ ಚಲಿಸಿ ಅವನೆದೆಗೆ ಅಳವಡಿಸಿದ್ದ ಕೆಲವು ಗುಂಡಿಗಳನ್ನು ಅದುಮಿ ದೂರವಾಣಿಯ ಮೂಲಕ ಪ್ರೋ. ರಂಗ ಪ್ರಸಾದರನ್ನು ಸಂಪರ್ಕಿಸಿದಳು.
“ಪ್ರೋಪೇಸರ್. ನಾಳೆ ಇದನ್ನು ವಾಪಸ್ಸು ಲ್ಯಾಬಿಗೆ ಒಯ್ದು ಪರೀಕ್ಷಿಸಿ. ಪುನಃ ಮ್ಯಾಕ್ಸ್‌ಗೆ ತಲೆ ತಿರುಗಿದಂತಿದೆ. “ಎಂದವಳೆ ಫೋನಿರಿಸಿ ತನ್ನ ರೂಮಿಗೆ ಸರಿದು ಹೋದಳು.
ನಿಂತೇ ಇದ್ದ ಮ್ಯಾಕ್ಸ್ ಕುಸಿದು ಕುಳಿತ. ಅವನ ಶಕ್ತಿಯನ್ನು ಯಾರೋ ಕಿತ್ತುಕೊಂಡಂತೆ ಅನ್ನಿಸುತ್ತಿತ್ತವನಿಗೆ. ಅವನ ಕಣ್ಣುಗಳಿಂದ ನೀರಿಳಿಯುತ್ತಿತ್ತು. ನಿಜಕ್ಕೂ ಮ್ಯಾಕ್ಸ್ ಬದಲಾಗಿದ್ದನೆ… ? ಅಥವಾ ಮ್ಯಾಕ್ಸನನ್ನು ಬದಲಿಸಬೇಕೆ…?
*****