ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ ಶೇಖರಿಸಿದ್ದ ಹಿಮದರಾಶಿಯನ್ನ ಮೊದಲು ಕ್ಲೀನ್ಮಾಡಿ,’ಡ್ರೈವ್‌ವೇ’, ಮನೆ ಮುಂದಿನ ‘ವಾಕ್‌ವೇ’ಲಿ ಸ್ನೋ ‘ಶವಲ್’ ಮಾಡೊದರಲ್ಲಿ ನಡ ಬಿದ್ದೊಗಿತ್ತು. ಮನೆಯೊಳಗೆ ಬಂದು ‘ಅರೇಂಜ್ ಜೂಸ್’ ಕುಡಿದು ದೊಪ್ಪೆಂದು ಸೋಫಾಮೇಲೆ ಕುಕ್ಕರಿಸಿ ಕೂತವನ “ಯೂ ಲೇಜಿ ಬಾಯ್ ಕಮ್ ಲೆಟ್ಸ್ ಮೇಕ್ ಎ ಸ್ನೋಮ್ಯಾನ್” ಎಂದು ನನ್ನ ನಾಕು ವರ್ಷದ ಮಗಳು ಛೇಡಿಸಿದ್ದಳು. ಅವಳೊಂದಿಗೆ ಆಟವಾಡಿ ಒಳಗೆ ಬಂದಾಗ ನನ್ನಾಕೆ “ಸ್ವಲ್ಪ ಹಾಗೆ ಮೈಲ್ ಚೆಕ್‌ಮಾಡಿ ಪ್ಲೀಸ್” ಎಂದು ಕೀ ಕೈಗಿಟ್ಟಳು. ಎಷ್ಟು ದಿನಗಳಾಗಿತ್ತೊ ನೋಡಿ ‘ಮೈಲ್‌ಬಾಕ್ಸ್’ ಪೂರ್ತಿಯಾಗಿ ತುಂಬಿತ್ತು- ಮಧ್ಯಕ್ಕೆ ಮಡಿಚಿ ತುರಿಕಿದ ‘ಮ್ಯಾಗ್‌ಜೈನು’ಗಳು; ಪೊಸ್ಟ್‌ಕಾರ್ಡುಗಳು; ‘ಎನ್ವೆಲೋಪ್’ಗಳು; ನೂರೆಂಟು ‘ಜಂಕ್’ ಲಕೋಟೆಗಳು. ಊಟ ಮಾಡಿ ಪುಸ್ತಕ ಹಿಡಿದು ಹಾಸಿಗೆಯಮೇಲೆ ಆಗಿನ್ನು ಉರುಳಿದ್ದೆ- “ಕಣ್ಣಿ ನಿನಗೆ ಇಂಡಿಯಾದಿಂದ ಯಾವುದೋ ಲೆಟರ್ ಬಂದಿದೆ” ನನ್ನಾಕೆ ಕೂಗಿದ್ದು ಕೇಳಿತ್ತು.
ಮೊದಲಿಗೆ ಖುಶಿಯಾಗಿತ್ತು. ಆದರೆ ತಕ್ಷಣವೇ ಇದು ಯಾರು ಈ ಕಾಲದಲ್ಲಿ ಲೆಟರ್ ಬರಿಯೋವರು ಎಂದು ಅಶ್ಚರ್ಯವಾಗಿತ್ತು. ಈಗೆಲ್ಲ ಏನಿದ್ದರು ಫೋನು, ಇಮೈಲು, ಇಲ್ಲ ಅಂತರಜಾಲದಲ್ಲಿ ‘ವೆಬ್‌ಕ್ಯಾಮ್’ ಮೂಲಕ ನೇರ ಮುಖಾಮುಖಿ ಮಾತುಕತೆ ಅಥವಾ ‘ಚ್ಯಾಟು’. ಅಂಥಾದರಲ್ಲಿ ನನಗೆ ಇಂಡಿಯಾದಿಂದ ಲೆಟರ್ ಬರೆಯೋವರು ಯಾರಪ್ಪ ಎಂದುಕೊಳ್ಳುತ್ತ ಎದ್ದೆ. ಇಪ್ಪತ್ತು ವರುಷದ ಹಿಂದೆ ನ್ಯೂಯಾರ್ಕಿಗೆ ಬಂದಾಗ ವಾರಕ್ಕೆ ಒಂದೊ ಎರಡೊ ಕಾಗದ ತಪ್ಪದೆ ಬರುತಿತ್ತು- ನನ್ನ ತಾಯಿ ಬರೆದಿದ್ದು. ಮೈಸೂರಿನ ಆಗ್ರಹಾರದ ಮನೆಗೆ ಫೋನ್ ಬಂದ ಮೇಲಂತು ಕಾಗದ ಬರೆಯುವುದು ಬರುವುದು ಎರಡೂ ಅಪರೂಪವಾಗಿತ್ತು. ಈಗಂತೂ ಕಾಗದ ಬರೆಯೋ ಅಭ್ಯಾಸ ಪೂರ್ತಿಯಾಗಿ ನಿಂತೆ ಹೋಗಿದೆ. ಈಗ ಎಂಟು ವರುಷದಿಂದಿಚೆಗಂತೂ ನೋಡಿದ ಕ್ಷಣವೇ `ಎರೊಗ್ರಾಮ್’ ಎಂದು ತಿಳಿಯುವ ಆ ನೀಲಿ ಬಣ್ಣದ ಕಾಗದವನ್ನ ನಾನು ನೋಡಿದ್ದಿಲ್ಲ. ಕೂತೂಹಲ ಹೆಚ್ಚಾಗಿ ಕೆಳಗಿಳಿದು ಬಂದೆ.
“ಯಾರದು?”
“ನೋಡಲಿಲ್ಲ, ಗೊತ್ತಿಲ್ಲ”
ಕಾಗದದ ಹಿಂದೆ ನೋಡಿದೆ. ‘ಎಚ್. ಎಸ್. ಲಕ್ಷ್ಮಿನರಸಿಂಹಯ್ಯ. ಶಾರದಾವಿಲಾಸ್ ಹೈಸ್ಕೂಲ್ ಹೆಡ್‌ಮಾಸ್ಟರ್ (ರಿಟೈರ್ಡ್)’ ಎಂದು ಬರೆದಿತ್ತು. ಕೆಳಗೆ ಮೈಸೂರಿನ ವಿಳಾಸವಿತ್ತು. ಸ್ವಲ್ಪ ಹೊತ್ತು ಯಾರೆಂದು ತಿಳಿಯಲಿಲ್ಲ. ನಂತರ ಎಲ್ಲವು ನೆನಪಿಗೆ ಬಂದಿತ್ತು.
ಈಗಿನ್ನು ಮೂರು ತಿಂಗಳ್ಹಿಂದೆ ನಮ್ಮೂರಿಗೆ ಹೊಗಿದ್ದಾಗ ದೋಬಿ ಅಂಗಡಿ ಚಿಕ್ಕಣ್ಣನ ಬಗ್ಗೆ ಪರಿಪರಿಯಾದ ಕಥೆಗಳನ್ನು ಕೇಳಿ ಯಾವುದು ನಿಜ ಯಾವುದು ಸುಳ್ಳೆಂದು ತಿಳಿಯದೆ ಗೊಂದಲವಾಗಿ ಎಲ್ಲವೂ ಒಗಟಾಗಿ ತೋರಿತ್ತು. ಆಗಲೇ ನಾನು ನರಸಿಂಹಯ್ಯನವರ ಮನೆಗೆ ಹೋಗಿದ್ದು. ಅವರಿಗೆ ಒಂದು ಪತ್ರ ಬರೆದಿಟ್ಟು ಬಂದಿದ್ದು.
ನನ್ನ ಆ ಪತ್ರಕ್ಕೆ ಉತ್ತರ ಈ ಕಾಗದ. ಬನ್ನಿ ಮೊದಲು ಕಥೆ ಕೇಳಿ- ಆ ನಂತರ ಉತ್ತರ ಓದೋಣ.
ಮನೆ ಕಿರಿ ಮಗ ನಾನು. ಕಿರಿಯನಾದ್ದರಿಂದ ಮನೆಯ ಹಿರಿಯರೆಲ್ಲರೂ ನನ್ನ ಹತ್ತಿರ ಕೆಲಸ ತೆಗೆಸಿದವರೆ. “ಲೋ ಕಣ್ಣಿ ಪಾಠಕ್ಕೆ ಹುಡುಗರು ಬಂದಾಯ್ತು ಸೀಮೆಸುಣ್ಣ ಬೇಗ ತಗೊಂಡು ಬಾರೊ”; ಓಡೊಗಿ ಎರಡು ‘ಸ್ಯಾರಿಡಾನ್’ ತಗೊಂಡು ಬಾ, ಆ ಬಟ್ಟೆಲಿ ಮೊಟರ್‌ಬೈಕ್ ಒರೆಸು, ಸೈಕಲ್ಲ್ ಇಳಿಸು- ಅವರ ಪಾಲಿಗೆ ಬಂದ ಕೆಲಸವೆಲ್ಲ ಹೆಚ್ಚು ಕಡಿಮೆ ನನ್ನ ತಲೆಗೆ ಕಟ್ಟೊವೊರು. ಕಾಕ ಅಂಗಡಿಗೆ ಹೋಗಿ ಕರಬೇವು ಕೊತ್ತಮರಿನೊ, ಇಲ್ಲಾ ಹಸಿಮೆಣಸಿನಕಾಯಿ ಅಥವಾ ತೆಂಗಿನಕಾಯಿನೊ ತಗೊಂಡು ಬರೊದು, ಇಂಡಿಯನ್ ಕಾಫಿವರ್ಕ್ಸ್‌ನಲ್ಲಿ ಕಾಫಿಪುಡಿ, ಗೋವಿಂದು ಅಂಗಡಿಯಲ್ಲಿ ಬೆಣ್ಣೆ, ಕೃಷ್ಣಸೋಜಿ ಡಿಪೊಲಿ ಹಳೆ ಅಕ್ಕಿಗೆ ಹೇಳಿದ್ದು ಬರೊದು, ಸಾಬರ ಸೌದೆ ಡಿಪೊಗೆ ಹೋಗಿ ಚಕ್ಕೆ ಸೌದೆ ತಂದು ಹಾಕೊಕ್ಕೆ ಹೇಳಿದ್ದು ಬರೊದು…..ಹೀಗೆ ಚಿಕ್ಕಪುಟ್ಟ ಎಲ್ಲಾ ಕೆಲಸಕ್ಕು ನನ್ನನ್ನೆ ಅಟ್ಟೊವರು. ನಾನಿನ್ನು ಚಡ್ಡಿ ಹಾಕ್ಕೊಳ್ಳೊ ವಯಸ್ಸಿಗಾಗಲೆ ನನ್ನಣ್ಣಂದರೆಲ್ಲರು ಪ್ಯಾಂಟಿಗೆ ಬಂದಿದ್ದರು. ನನಗೆ ಎಂಟೊ ಹತ್ತೊ ಇದ್ದಿರಬೇಕು. ಇನ್ನು ನಾನು ಚಿಕ್ಕವನಾಗಿ ಮಾಡೊಕ್ಕೆ ಆಗದೆ ಇರೊ ಕೆಲವು ಕೆಲಸಗಳು ದೊಡ್ಡವನಾಗ್ತ ಆಗ್ತಾ ನನ್ನ ಪಾಲಿಗೆ ಬಂದವು. ನಲ್ಲಿಲಿ ನೀರು ನಿಂತರೆ ಬಾವಿಲೊಂದು ನಾಕು ಕೊಡ ಸೇದಿ ಹಂಡೆ ತುಂಬಿಸೊದು; ಬಚ್ಚಲಮನೆ ಚಿಮಣಿ ಕಟ್ಟ್ಕೊಂಡು ಹೊಗೆ ತುಂಬಿದರೆ ಗಳುಲಿ ಕುತ್ತಿ ಎರಡು ಕೊಡ ನೀರು ಸುರಿದು ಕ್ಲೀನ್ ಮಾಡೊದು….ಇದೆಲ್ಲದರ ಜೋತೆಗೆ ದಿನ ಸ್ಕೂಲಿಗೂ ಹೋಗಬೇಕಿತ್ತು. ಈ ದಿನನಿತ್ಯದ ಎಷ್ಟೊ ಕೆಲಸಗಳಲ್ಲಿ ನನಗೆ ಬಹಳ ಇಷ್ಟವಾಗಿದ್ದ ಕೆಲಸವೆಂದರೆ ಚಿಕ್ಕಣ್ಣನ ದೋಬಿ ಅಂಗಡಿಗೆ ಹೋಗಿ ಬಟ್ಟೆ ಇಸ್ತರಿ ಮಾಡಿಸಿಕೊಂಡು ಬರೊದು.
ದೇವಾಂಬ ಅಗ್ರಹಾರದ ನಮ್ಮ ಮೂಲೆಮನೆ ಎಡವಿ ಬಿದ್ದರೆ ಬಲಗಡೆ ಮಗ್ಗಲಲ್ಲಿ ವೀಣೆಶೇಷಣ್ಣ ಅಡ್ಡರಸ್ತೆ. ರಸ್ತೆಯ ಮೂಲೆಯಲ್ಲಿ ನರಸಿಂಹಯ್ಯನವರ ಮನೆ. ಆ ಮನೆಯ ತುದಿಗೆ ಬೀದಿಯ ಕಡೆಗಿದ್ದ ಪುಟ್ಟ ಕೊಠಡಿಯೆ ಚಿಕ್ಕಣ್ಣನ ಅಂಗಡಿ- ಧೋಭೀ ಶಾಪು. ದಿನವು ಇಸ್ತರಿ ಮಾಡಿಸೊಕ್ಕೆ ಬಟ್ಟೆ ಇದ್ದೆ ಇರೊದು: ಅಣ್ಣಂದರದು ಇಲ್ಲ ತಂದೆಯವರದು. ಅಂಗಡಿ ಮೆಟ್ಟಲಮೇಲೆ ನಿಂತು ಚಿಕ್ಕಣ್ಣ ಇಸ್ತರಿ ಮಾಡೊದನ್ನ ನೋಡೊದೆಂದರೆ ನನಗೆ ಬಹಳ ಮೋಜು. “ಅಲ್ಲೇ ಮೇಟಿಕಂಬದ ಹಾಗೆ ನಿಂತಕೊ ಬೇಡ ಇಸ್ತರಿ ಮಾಡಿಸ್ಕೊಂಡು ಬಾ ಅವರಿಗೆ ಅಫೀಸಿಗೆ ಲೇಟಾಗುತ್ತೆ” ಎಂದು ಅಮ್ಮ ಹೇಳಿದ್ದೆ ಸಾಕು ಮನೆಯಾಚೆ ಓಡ್ತಿದ್ದೆ. ನಾನು ಅವರಷ್ಟೆತ್ತರ ಬೆಳದಾಗಲೆ ಗೊತ್ತಾಗಿದ್ದು ಅಡಿಗೆ ಮನೆ ಕಿಟಿಕಿಯಿಂದ ಅಂಗಡಿ ಮೆಟ್ಟಲು, ಕಟ್ಟೆ ಕಾಣಿಸೊದು ಅಂತ. ಚಿಕ್ಕಣ್ಣ “ಈಗಲೇ ಬೇಕಂತೆ” ಅಂತ ನಾನಂದರೆ “ಅರು ಶರ್ಟು ಮೂರು ಪ್ಯಾಂಟು” ಅಂತ ಎಣಿಸಿ, ಬಟ್ಟೆಮೇಲೆ ನೀರು ಚುಮುಕಿಸಿ ಟೇಬಲ್ಲಿನ ಮೇಲೆ ಇಟ್ಟು “ಅಯ್ತರ, ಬನ್ನಿ” ಎಂದೊ; “ಇಲ್ಲೆ ನಿಲ್ಲರ ಒಂದು ನಿಮಿಷ” ಅಂತಲೊ; ಇಲ್ಲ ಅಂದೆನಾದರು ಬಟ್ಟೆ ಜಾಸ್ತಿ ಇತ್ತೊ “ಸ್ವಲ್ಪ ಟೆಮ್ ಅಯ್ತದ್ರಪ್ಪೊ” ಅಂತಲೊ ಹೇಳಿ ಮತ್ತೆ ಇಸ್ತರಿ ಮಾಡೊವರು. ನೀರು ಚುಮುಕಿಸಿದ ಬಟ್ಟೆಮೇಲೆ ಇಸ್ತರಿಪೆಟ್ಟಿಗೆ ಇಟ್ಟಾಗ ‘ಚುಸ್ ಚುಸ್’ ಶಬ್ದ, ಜೊತೆಯಲ್ಲಿ ಬರೊ ಹಬೆ ಅದನ್ನ ನೋಡೊಕ್ಕೆ ನನಗೆ ಚಿಕ್ಕಂದಿನಲ್ಲಿ ಎಲ್ಲಿಲ್ಲದ ಖುಶಿ. ಒಂದೆರಡು ಬಾರಿ ಕೇಳಿದ್ದು ಉಂಟು ಚಿಕ್ಕಣ್ಣ “ನಾನು ಒಂದು ಸರ್ತಿ ಮಾಡಲ”; “ಇಲ್ಲರಪ್ಪೊ ನಿಮಗೆ ಅಗೋಕಿಲ್ಲ ಇದು ನಿಮಗಿನ್ನು ಒಸಿ ಭಾರ”. ಒಮ್ಮೊಮ್ಮೆ ಅಂಗಡಿ ಆಗಿನ್ನು ತೆಗೆದು ಇಸ್ತರಿಪೆಟ್ಟಿಗೆಯಲ್ಲಿ ಇಜ್ಜಲು ಹಾಕಿ, ಬೆಂಕಿಹಚ್ಚಿ ಹೊರಗಡೆ ಚಪ್ಪಡಿ ಕಲ್ಲಿನಮೇಲೆ ಮುಚ್ಚಳ ತೆಗೆದಿಟ್ಟು ಉರಬಿ ಕೆಂಡಮಾಡೊದನ್ನ ನೋಡ್ತಾ ನಿಂತರೆ ಹೇಳುವದಕ್ಕೆ ಆಗದ ಕೂತುಹಲ, ಆಸಕ್ತಿ. ಅಂಗಡಿಯಲ್ಲಿ ಒಂದೆರಡು ಬಾರಿ ನನ್ನ ತರಗತಿಯಲ್ಲೆ ಓದ್ತಿದ್ದ ನಂಜಪ್ಪನ್ನ ನೋಡಿ ಅಶ್ಚರ್ಯವಾಗಿ ಶಾಲೆಯಲ್ಲಿ ಕೇಳಿದ್ದೆ “ಚಿಕ್ಕಣ್ಣ ನಿನ್ನ ತಂದೆನೆನೊ” ಅದಕ್ಕವನು “ಚಿಕ್ಕಪ್ಪ” ಎಂದಷ್ಟೆ ಹೇಳಿದ್ದ. ಸಂಜೆ ಶಾಲೆ ಮುಗಿದಮೇಲೆ ಮನೆ ಮುಂದೆ ‘ಮಾರಿಗುಂಡ’ ಗೋಲಿ ಆಟಕ್ಕೊ; ‘ಕಳ್ಳ-ಪೋಲಿಸ್’ ಆಟಕ್ಕೊ ನಂಜಪ್ಪನು ಕೆಲವು ದಿನ ಬರ್ತಿದ್ದ. ನಾನು ಲೊಯರ್ ಮಿಡಲ್ ಸ್ಕೂಲ್ ಪಾಸಾಗಿ ಹೈಸ್ಕೂಲ್ ಸೇರಿದ್ದೆ. ನಂಜಪ್ಪ ಒಂದು ವಾರವಾದರು ಸ್ಕೂಲಿನಲ್ಲೆಲ್ಲು ಕಣ್ಣಿಗೆ ಬಿದ್ದಿರಲಿಲ್ಲ. ಚಿಕ್ಕಣ್ಣನ್ನ ಕೇಳಿದ್ದಕ್ಕೆ “ಅವನು ಓದಿದ್ದು ಸಾಕ್ರ ಇನ್ನು ಸ್ವಲ್ಪ ಗೈಯೊದು ಕಲಿಲೀ”. ಮಾತಿನ ಅರ್ಥ ಸರಿಯಾಗಿ ತಿಳಿಯದೆ ಏನೊ ಕೆಟ್ಟದ್ದು ಆಗಿರಬೇಕು ಎಂದು ಮನೆಯಲ್ಲಿ ಅಮ್ಮನ್ನ ಹೀಗಂದರು ಚಿಕ್ಕಣ್ಣ ಅಂತ ಕೇಳಿದ್ದೆ. ಅಲ್ಲೆ ಇದ್ದ ಎದರು ಮನೆ ಶೇಷಮ್ಮ ಪಾಠಿ “ಹಳ್ಳಿಲಿ ಕುರಿ ಮೇಯಸೊವನಿಗೆ ಓದಿದ್ದು ಸಾಕು ಅಂತ. ಅದಕ್ಕೆ ನಿನಗೆ ದು:ಖವೆನೋ? ಬೇಕಾದರೆ ಅವನೊಂದಿಗೆ ನೀನು ಹೋಗು ಕುರಿ ಕಾಯೋಕ್ಕೆ” ಎಂದು ಅಮ್ಮನ ಮುಖ ನೋಡಿ ನಕ್ಕು “ಅವನಣ್ಣ ಇದಾನಲ್ಲೊ ಏನೊ ಅವನ ಹೆಸರು?” ಎಂದು ನನ್ನ ನೋಡಿದಾಗ “ಸಿದ್ದು” ಅಂದೆ. “ಅವನು ಇಷ್ಟೂ ಓದಲಿಲ್ಲ. ಸೀದ ಅಂಗಡಿ ಕೆಲಸಕ್ಕೆ ಹಾಕ್ಕೋಂಡ ಚಿಕ್ಕಣ್ಣ. ಈಗ ನಾವೇನು ಓದಿರೋದು ಮಹಾ? ನಿಮ್ಮಮ್ಮ ಮೂರನೆ ಕ್ಲಾಸು ನಾನು ಅದು ಇಲ್ಲ” ಅಂದರು.
ನಾನು ಪ್ರೀ-ಯುನಿವರ್ಸಿಟಿ ಸೇರೊ ಹೊತ್ತಿಗೆ ನೂರಡಿ ರಸ್ತೆಯಲ್ಲಾಗಲೆ ಎರಡು ‘ಡ್ರೈ ಕ್ಲಿನರ್ಸ್’ ಅಂಗಡಿಗಳು ಕಾಣಿಸಿಕೊಂಡಿತ್ತು: ‘ಸನ್ ಲೈಟ್’ ಮತ್ತೆ ಲಕ್ಷ್ಮಿ ಥಿಯೆಟರಿನ ಮುಂದಿದ್ದ ‘ಎಸ್. ಇ. ಎಲ್’ ಲಾಂಡ್ರಿ. ಕಾಲ ಬದಲಾಗಿತ್ತು. ಚಿಕ್ಕಣ್ಣ ಮಾತ್ರ ಬಟ್ಟೆಮೂಟೆಗಳನ್ನ ಕತ್ತೆಮೇಲೆ ಹೇರಿಕೊಂಡು ದೋಬಿಗಾಟ್‌ಗೆ ಸವಾರಿ ಹೋಗೊದು ತಪ್ಪಿರಲಿಲ್ಲ. ನಮ್ಮ ಮನೆಯಲ್ಲು ಬದಲಾವಣೆಯಾಗಿತ್ತು. ಪ್ಯಾಂಟು ಶರ್ಟುಗಳೆಲ್ಲ ನೇರ ‘ಡ್ರೈ ಕ್ಲಿನರ್ಸ್’ಗೆ ಹೋಗಿ ಇಸ್ತರಿ ಮಾಡಿಸೊಕ್ಕೆ ಬಟ್ಟೆಗಳು ಕಡಿಮೆಯಾಗಿತ್ತು. ಅಂದರೆ ಮನೆಯಲ್ಲಿ ದುಡಿದು ಸಂಪಾದಿಸೊವರ ಬಟ್ಟೆಗಳು ನೇರ ಲಾಂಡ್ರಿಗೆ ಇನ್ನು ಮಿಕ್ಕುಳಿದವರ ಬಟ್ಟೆಗಳನ್ನ ಮನೆ ಕೆಲಸದ ತಿಮ್ಮಮ್ಮ ಓಗೆದು ಹಾಕೊವಳು. ನನ್ನ ಚಿಕ್ಕಂದಿನ ಕೆಲಸಗಳನೆಲ್ಲಾ ಈಗ ತಿಮ್ಮಮ್ಮನ ಮಗಳು ಮಾಡ್ತಿದ್ದಳು. ಜುಬ್ಬ, ಪಂಚೆಗಳನ್ನ ಇಸ್ತರಿ ಮಾಡಿಸಿಕೊಂಡು ಬರೊಕ್ಕು ಅವಳೆ ಹೊಗ್ತಿದ್ದಳು. ಹಾಗಾಗಿ ಆ ದಿನಗಳಲ್ಲಿ ವೈಯಕ್ತಿಕವಾದ ಬದಲಾವಣೆಯೆಂದರೆ ನಾನು ಚಿಕ್ಕಣ್ಣನ ಅಂಗಡಿಗೆ ಹೊಗೊದು ಪೂರ್ತಿಯಾಗಿ ನಿಂತಿತ್ತು. ಆಗೊಮ್ಮೆ ಈಗೊಮ್ಮೆ ಸ್ನೇಹಿತರೆನಾದರು ಅಲ್ಲಿ ಅಂಗಡಿಯ ಹತ್ತಿರ ಕಂಡರೆ ನಾನು ಒಂದೆರಡು ಕ್ಷಣ ನಿಂತು ಕಾಡ್ಹರಟೆ ಹೊಡೆಯುತ್ತ ಹಾಗೆ ಚಿಕ್ಕಣ್ಣನ ಕೂಡವು ಒಂದೆರಡು ಮಾತಾನಾಡಿ ಬರುವುದೆಷ್ಟೊ ಅಷ್ಟೆ.
ಈಗಲೂ ನ್ಯೂಯಾರ್ಕಿನಿಂದ ಮೈಸೂರಿಗ್ಹೊದಾಗಲೆಲ್ಲಾ ಅಂಗಡಿಗೆ ಹೋಗಿ ಚಿಕ್ಕಣ್ಣನವರನ್ನ ಒಂದೆರಡು ನಿಮಿಷ ಮಾತಾಡಿಸಿ ಬರೊ ರೂಡಿ ನನ್ನದು. ಚಿಕ್ಕಣ್ಣ ನನಗೆ ತಿಳಿದಂಗೆ ಜಾಸ್ತಿ ಮಾತಿನ ಮನುಷ್ಯನಲ್ಲ. “ಅಲ್ಲಿ ಬರಿ ಕಾರು ಅನ್ನಿ? ಇಮಾನದಲ್ಲಿ ಎಷ್ಟು ದಿನ ಅಯ್ತದ್ರ ಹೊಗೊಕ್ಕೆ? ಅದ್ಯಾಂಗ್ ಬುದ್ದಿ ಈಗ ಅಲ್ಲಿ ರಾತ್ರಿ, ನಮ್ಗಿಲ್ಲಿ ಸೂರ್ಯ ಬೆಳಗ್ತವನೆ ಮತ್ತೆ?” ಹೀಗೆ ಕೂತುಹಲದಿಂದ ಒಂದೆರಡು ಪ್ರಶ್ನೆಗಳನ್ನ ಕೇಳ್ತಿದ್ದಿದ್ದೆಷ್ಟೊ ಅಷ್ಟೆ. ನಾನು ಕೂಡ “ಹೇಗಿದ್ದಿರ ?” “ನಂಜಪ್ಪ ಎನು ಮಾಡ್ಕೊಂಡಿದಾನೆ ?” “ಸಿದ್ದು ಎಲ್ಲಿದಾನೆ ?” ಅಂತ ವಿಚಾರಿಸಿ ಒಂದೆರಡು ಮಾತಾಡಿ ಬರುತಿದ್ದೆ. ಕೆಲವು ವರುಷಗಳ ಹಿಂದೆ ಚಿಕ್ಕಣ್ಣನ ನೆರತ ಕೂದಲನ್ನು ಕಂಡು ಮೊದಲಬಾರಿಗೆ ಅವರ ವಯಸ್ಸೆಷ್ಟಿರಬಹುದೆಂದು ಮನ ಎಣಿಸಿತ್ತು. ನನ್ನ ತಂದೆಯ ವಯಸ್ಸಿರಬೇಕು. ಮೀಸೆ ಬಿಟ್ಟ ಕುಳವಲ್ಲ ಇದು ಎಂದು ಮನಸ್ಸಿಗೆ ಬಂದಾಗ ನನ್ನ ತಂದೆ ಮುಖದಲ್ಲಿ ಮೀಸೆ ಕಂಡ ನೆನಪಾಗದೆ ನಗು ಬಂದಿತ್ತು. ಬಿಳಿ ಪಂಚೆ ಮೇಲೆ ಬಿಳಿ ಬನಿಯನ್ನು. ಆ ವಯಸ್ಸಿಗೆ ಸಾಮಾನ್ಯವಾಗಿ ಎಲ್ಲಾ ಗಂಡಸರಿಗೂ ಸೊಂಟದ ಸುತ್ತ ಎದ್ದು ಕಾಣುವ ಬೊಜ್ಜು ಸ್ವಲ್ಪವು ಇರಲಿಲ್ಲ. ಗಟ್ಟಿಮುಟ್ಟಾದ ಆಳು. ಅರು ದಶಕಕ್ಕೂ ಹೆಚ್ಚಿನ ಜೀವನ ಕಂಡ ಕಣ್ಣು. ಅಂದು ಕೇಳಿದ್ದೆ “ಚಿಕ್ಕಣ್ಣ ನೀವು ಸಿದ್ದು ಜೋತೆಯಲ್ಲಿ ಅವನ ಮನೆಯಲ್ಲಿ ಇರಬಹುದಲ್ಲ?” ಅದಕ್ಕವರು “ಅದ್ಯಾಕ್ ಬುದ್ದಿ ಹಂಗ್‌ಹೇಳಿರ. ನನಗೇನಾಗದೆ ಗುಂಡ್ ಗುಂಡ್‌ಕಲ್ಲು ಇದ್ದಂಗ್ ಇವ್ವನಿ” ಅಂದರು.
ನಕ್ಕು “ನಾನು ಹೇಳಿದ್ದು ಸೊಸೆ ಸೇವೆ ಮಾಡಲಿ ಅಂತ, ಸಾಕು ದುಡಿದಿದ್ದು ಅಂತ ಅನಿಸೊಲ್ಲವೇ ನಿಮಗೆ ?”
“ಹೋ ಹಂಗರ…..ತಿಳಿತ್ತ್‌ರ…. ಚಿಕ್ಕ ಮಕ್ಕಳು ಸೆಂದಾಗಿರಲಿ ಬುಡಿ….ನಾ ಹೋದರೆ ಬೇಡ ಅನ್ನೊಕಿಲ್ಲ ಅವಂ….ಆದರೂ ಒಂದೆರಡು ದಿನದ ಮಾತು ಬೇರೆ….ಅಲ್ಲೇ ಇರೊದು ತೆಪ್ಪು… ಬೇಡಿ……ಈ ರಟ್ಟೆಲಿ ಈ ಪೆಟ್ಟಿಗೆ ಎತ್ತೋ ಸಕ್ತಿ ಇರೊಗಂಟ ದುಡಿಯೊದ್ರ…..ಅಷ್ಟೇಯ…ಅದು ಬಿಟ್ಟು ನಂಗ ಮಾಡೊಕ್ಕೆ ಬೇರೆ ಇನ್ನೇನು ಬಂದಾತು ಹೇಳಿ”. ಚಿಕ್ಕಣ್ಣನ ಆ ಮಾತು ಕೇಳಿ ಅಚ್ಚರಿಯಾಗಿತ್ತು. ಹೇಳಲು ಏನು ತೋರದೆ ಹಾಗೆ ಬಂದಿದ್ದೆ.
ಈ ಬಾರಿ ಈಗ ಮೂರು ತಿಂಗಳ್ಹಿಂದೆ ಹೋದಾಗ ಗಣಪತಿ ಹಬ್ಬ ಆಗಿನ್ನು ಮುಗಿದಿತ್ತು. ಎರಡು ದಿನ ಪಕಡದಸ್ತಾಗಿ ಊಟ ಹೊಡೆದು ಮಲಗಿ ಮೂರನೆ ದಿನವು ಬೆಳಿಗ್ಗೆ ಅಕ್ಕಿರೊಟ್ಟಿ ಗಟ್ಟಿ ಚಟ್ನಿ ಒಂದು ನಾಕು ಕತ್ತರಸಿ ಮಂಚದಮೇಲೆ ಬಿದ್ದವನಿಗೆ ಎಚ್ಚರವಾದಗ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಅಡಿಗೆಮನೆಯಲ್ಲಿ ಹೂಜಿಯಿಂದ ಕಾದಾರಿದ ನೀರನ್ನು ದೊಡ್ಡದಾದ ಸ್ಟೀಲ್ ಲೋಟವೊಂದಕ್ಕೆ ಬಗ್ಗಿಸಿಕೊಂಡು ಗಟಗಟ ಕುಡಿದು ಹಾಗೆ ಕಿಟಕಿಯಲ್ಲಿ ನೋಡಿದಾಗ ಮೊದಲಿಗೆ ಕಣ್ಣಿಗೆ ಬಿದ್ದದ್ದು ಕಾಕ ಅಂಗಡಿ ಹತ್ತಿರ ಕಟ್ಟಿದ್ದ “ಸ್ಟೇಜು”; ಅದರಮೇಲೆ ನಿಂತ ನಾಕಾರು ಬೀದಿ ಹುಡುಗರು ಏನನ್ನೋ ಮಾಡ್ತಿದ್ದದ್ದು. ಸಂಜೆ ಏನಾದರು ಕಾರ್ಯಕ್ರಮ ಇರುತ್ತೆ ಎಂದುಕೊಂಡವನಿಗೆ ಚಿಕ್ಕಣ್ಣನ ಅಂಗಡಿ ಮುಂದಿನ ಕಟ್ಟೆ, ಮೆಟ್ಟಲು ಕಾಣಾದೆ ಅಶ್ಚರ್ಯವಾಗಿ ಮತ್ತೊಮ್ಮೆ ನೋಡಿದೆ. ಎಷ್ಟೊ ವರ್ಷಗಳಿಂದ ನೋಡಿ ನೋಡಿ ಕಣ್ಣಿಗೆ ಕಟ್ಟಿದಂತಿದ್ದ ಬೀದಿಯವರೆಗೂ ಬರುವ ಕೆಳಮಟ್ಟಕ್ಕಿದ್ದ ಕೆಂಪು ಬಣ್ಣದ ಎರಡು ಕಟ್ಟೆಗಳು ಇರಲಿಲ್ಲ. ಹೊಸಲಿನ ಉದ್ದಕ್ಕೂ ಇದ್ದ ಎರಡು ಮೆಟ್ಟಲುಗಳು ಮಾಯವಾಗಿ ನೆಲ ಸಮನಾಗಿ ಚಪ್ಪಟ್ಟೆಯಾಗಿ ಕಂಡಿತ್ತು. ಆ ಹೊತ್ತಿನಲ್ಲೆಂದೂ ಕದ ಮುಚ್ಚದ ಚಿಕ್ಕಣ್ಣನ ಅಂಗಡಿ ಬಾಗಿಲಿಗೆ ಬೀಗ ಬಿದ್ದಿತ್ತು. ಹಸಿರು ಬಾಗಿಲಿಗೆ ಹೊಸದಾಗಿ ಬಣ್ಣ ಹೊಡೆದಂತಿತ್ತು. ಮನೆಯಲ್ಲಿ ಯಾರನ್ನಾದರು ಕೇಳಿದರೆ ಗೊತ್ತಾಗುತ್ತೆ ಎಂದು ಹಜಾರಕ್ಕೆ ಬಂದವನಿಗೆ ಮೂವತ್ತು ವರ್ಷಕ್ಕೂ ಹಿಂದೆ ಶೇಷಮ್ಮ ಪಾಠಿ ಗೇಲಿ ಮಾಡಿದ್ದು ನೆನಪಿಗೆ ಬಂದಿತ್ತು. ಪಾಠಿಯು ಇರಲ್ಲಿಲ್ಲ ಇಂದು ನನ್ನ ತಾಯಿಯು ಬದುಕಿರಲಿಲ್ಲ. ಅಲ್ಲಿಯೇ ಇದ್ದ ನನ್ನ ಅತ್ತಿಗೆಯನ್ನು ಕೇಳೊಣವೆಂದೆನಿಸಿ ಅವರಿಗೆ ತಿಳಿದಿರಲಾರದೆಂದು ಉಹಿಸಿ “ಮನ್ನಿ ಇಲ್ಲೆ ಒಂದು ಸುತ್ತು ಹೊಗಿದ್ದು ಬರ್ತಿನಿ” ಎಂದು ಹೊರ ನಡೆದೆ. “ಮಳೆ ಬಂದರು ಬರಬಹುದು ಬೇಗ ಬಂದ್ಬಿಡಿ” ಎಂದು ಹೇಳಿದ್ದು ಕೇಳಿಸಿತ್ತು.
ಆಷಾಢ ಮುಗಿದು ಮಳೆಗಾಲವಿನ್ನು ಪ್ರಾರಂಭವಾಗಿರದ ಆ ಸಪ್ಟೆಂಬರ್ರಿನ ಮಧ್ಯಾಹ್ನ ಬಿಸಿಲು ಇಲ್ಲದೆ ಚಳಿಯು ಆಗದೆ ಹಿತವಾಗಿದ್ದರೂ ಈಗಲೋ ಆಗಲೋ ಮಳೆ ಬಂದರು ಬರಬಹುದೆನೊ ಎನ್ನುವಂತಿತ್ತು. ಬಲಕ್ಕೆ ಮೂಲೆ ತಿರುಗಿದವ ಮನೆಯ ಹಿಂಬಾಗಕ್ಕಿದ್ದ ಗಲ್ಲಿಯ ಕಡೆ ಒಮ್ಮೆ ನೋಡಿದೆ. ಬೆಳಿಗ್ಗೆ ಹೊತ್ತು ವರಾಂಡದಲ್ಲಿ ತರಕಾರಿ ಮಾರುತಿದ್ದ ಮೂಲೆ ಮನೆ ಪಾಳು ಬಿದ್ದಿತ್ತು. ಆ ಮನೆಯ ಮುಂದಿದ್ದ ಪಂಪೊತ್ತುವ ಬೀದಿ ನಲ್ಲಿಯಲ್ಲಿ ನೀರು ಬರುತ್ತೊ ಇಲ್ಲವೋ ನೋಡಬೇಕೆಂಬ ಕುತೂಹಲವಾಯಿತು. ಆ ಪಾಳುಬಿದ್ದ ಮನೆಯ ಪಕ್ಕದ್ದೆ ಸೂಳೆ ಮಾದಮ್ಮನ ಮನೆ. ಈಗ ಒಂದೆಂಟು ವರ್ಷದಿಂದ ವ್ಯವಹಾರ ಚಾಲ್ತಿಯಲ್ಲಿ ಇಲ್ಲದೆ ಮನೆಗೆ ಬೀಗ ಬಿದ್ದಿದೆ. ಗಲ್ಲಿ ದಾಟಿ ಹತ್ತು ಹೆಜ್ಜೆ ನಡೆಯೋದರಲ್ಲಿ ಚಿಕ್ಕಣ್ಣನ ಅಂಗಡಿ ಮುಂದೆ ಬಂದಿದ್ದೆ. ಚೇಚು ಸಿಕ್ಕರೆ ವಿಷಯ ತಿಳಿಯುತ್ತೆ ಎಂದೆನಿಸಿ ಮುಂದೆ ನಡೆದವನು ಅಂಗಡಿ ಕಿಟಕಿಲಿ ಇಣುಕಿ ನೋಡಿದರೆ ಏನಾದರು ತಿಳಿಯಬಹುದೆಂದು ಹಿಂದಕ್ಕೆ ತಿರುಗಿದಾಗ ನಿರಾಸೆಯಾಗಿತ್ತು. ಕಿಟಿಕಿ ಮುಚ್ಚಿತ್ತು.
ಚೇಚು ಪೂರ್ತಿಹೆಸರು ಶೇಶಾದ್ರಿ. ಚೇಚು ನನ್ನ ದೊಡ್ಡಣ್ಣನ ಜೊತೆ. ಅವರಿಗಿಂತ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವನಿರಬೇಕು. ಚೇಚುಗೆ ಇಡಿ ಕೆ.ರ್. ಮೊಹಲ್ಲಾದ ಎಲ್ಲಾ ಪೋಲಿ ಪೋಕರಿಗಳ ಜೊತೆಗೆ ಗೂಂಡಾಗಳ ಪರಿಚಯ ಸಹವಾಸ. ‘ಡಿಚ್ಚಿ ಚೀದಿ(ಶ್ರೀಧರ)’, ‘ಮೆಂಟಲ್’ ರಾಮ, ಹಾಲುಮಾರೊ ಚಾಟಿಬೋರ, ಮಹದೇವು, ಲಕ್ಷ್ಮಣ, ‘ರುದ್ರ ಉರುಫ್ ಮೂಗ’ ಹಾಗು ನನಗೆ ಗೊತ್ತಿಲ್ಲದ ಇನ್ನು ಅನೇಕ ರೌಡಿಗಳೊಂದಿಗೆ ಅವನ ಸ್ನೇಹ. ಸುತ್ತಾಮುತ್ತಾ ಇದ್ದ ಸಿನೆಮಾ ಟಾಕಿಸ್‌ನಲ್ಲಿ ರಾಜ್‌ಕುಮಾರ್ ಚಿತ್ರಕ್ಕೆ ಮೊದಲನೆ ದಿನ ಟಿಕೆಟ್ಟು ಬೇಕು ಅನ್ನಿ ನಮ್ಮ ಚೇಚುಗೆ ಹೇಳಿದರೆ ಸಾಕು. “ಏಯ್ ಪಿಕ್ಚರ್ ಸುಮಾರಾಗಿದೆ ನಾಕುವಾರ ಓಡುತ್ತಷ್ಟೆ” ಅಂತಲೊ “ಚೆನ್ನಾಗಿದೆ ನೂರು ದಿನಕ್ಕೆ ಮೋಸ ಇಲ್ಲ” ಅಂತಲೊ ಹೇಳಿ ಅವನ ಛೇಲಾಗಳ ಹತ್ತಿರ ಟಿಕೆಟ್ಟು ತರಿಸಿ ಕೊಡುತ್ತಿದ್ದ.
ಚೇಚುಗು ಚಿಕ್ಕಣ್ಣನ ಅಂಗಡಿಗು ಬಹಳ ಹಿಂದಿನ ನಂಟು. ಬೆಳಿಗ್ಗೆ ಎದ್ದು ಅಂಗಡಿ ಮೆಟ್ಟಲಮೇಲೆ ನಿಂತು ಸೀಗರೆಟು ಸೇದುತ್ತ, ಪ್ರಜವಾಣಿ ಓದುತ್ತಾ, ಚಿಕ್ಕಣ್ಣನೊ ಇಲ್ಲ ಸಿದ್ದುವೊ, ಕಾಕ ಅಂಗಡಿ ಪಕ್ಕದ ತಮ್ಮಣ್ಣನವರ ‘ಜಾಯ್‌ಹೌಸ್’ನಿಂದ ತರೆಸಿದ ಕಾಫಿ ಕುಡಿದ ಮೇಲೆಯೆ ಮುಂದಿನ ಕೆಲಸ ಚೇಚುಗೆ. ಅಂದಕಾಲತಿಲ್ಲೆ ಫಾತಿಮ ಅನ್ನೊ ಹೆಣ್ಣು ಮಾದಮ್ಮನ ಮನೆಯಲ್ಲಿತ್ತು. ಬಹಳ ಸುಂದರವಾಗಿದ್ದಳು ಅನ್ನೋ ಮಾತು ಮೊಹಲ್ಲಾ ತುಂಬಾ ಹಬ್ಬಿತ್ತು. ಆಕೆಗೆ ಚೇಚುನ ಕಂಡರೆ ಇಷ್ಟ ಚೇಚುಗೆ ಅವಳು. ಆದರೆ ಸೂಳೆಮನೆ ಒಳಗೆ ಚೇಚುಗೆ ಕಾಲಿಡೊಕ್ಕೆ ಬಿಡತಿರಲಿಲ್ಲವಂತೆ. ಮಾದಮ್ಮ “ಅಯ್ಯೋ ಬೇಡರಪ್ಪೊ ನೀವು ಬ್ರಾಹಂರು ಬೇಡ. ನಿಮಗೆ ಯಾರು ಬೇಕು ಹೇಳಿ ಹೊರಗೆ ನಾನೆ ಕಳುಹಿಸಿಕೊಡ್ತಿನಿ” ಅನ್ನೊವಳಂತೆ. ಹೀಗೆ ಒಂದು ದಿನ ಮಧ್ಯಾಹ್ನದ ಹೊತ್ತಿನಲ್ಲಿ ಸಿದ್ದುನ ಅಂಗಡಿ ಹೊರಗೆ ಕಾವಲು ನಿಲ್ಲಸಿ, ಒಳಗೆ ಇಸ್ತರಿ ಮಾಡೊ ಟೇಬಲ್ಲಿನ ಕೆಳಗೆ ಫಾತಿಮ ಜೋತೆ ನಮ್ಮ ಭೂಪ ‘ಢಮ್ಕಿಲಿಕ್ಕಿ ಢಮಾಲಿಕ್ಕಿ’ ಅಂತೆ. ಹೊರಗೆ ನಿಂತ ಸಿದ್ದುಗೆ ಪಾಪ ಚಿಕ್ಕಪ್ಪ ಯಾವಗ ದೋಬಿಗಾಟಿನಿಂದ ಬಂದುಬಿಡುತ್ತಾರೊ ಅನ್ನೋ ಅತಂಕ. ಹಾಗೆನಾದರು ಬಂದರೆ ಚೆನ್ನಾಗಿರೊಲ್ಲ ತೊಂದರೆಯಾಗುತ್ತೆ ಅನ್ನೊ ಹೆದರಿಕೆ ಭಯ. ಆದರೆ ಹಾಗೇನು ಆಗಲಿಲ್ಲವಂತೆ.
ಚೇಚುನ ಅಗ್ರಹಾರದಲ್ಲಿ ಹುಡ್ಕೊದು ಸುಲಭ. ಚಿಕ್ಕಣ್ಣನ ಅಂಗಡಿ, ಕಾಕ ಅಂಗಡಿ ಮೂಲೆ, ‘ಜಾಯ್‌ಹೌಸು’, ಲಕ್ಷ್ಮಿ ಟಾಕಿಸಿನ ಮುಂದಿದ್ದ ಅಟೊಸ್ಟಾಂಡು ಅಲ್ಲೆಲ್ಲೂ ಇಲ್ಲವೆಂದರೆ ನೂರಡಿ ರಸ್ತೆಯಲ್ಲಿದ್ದ ‘ನವೀನ ಬಾರು’, ಆಗೊಮ್ಮೆ ಈಗೊಮ್ಮೆ ಮನೆ- ಇದಿಷ್ಟೆ ಅವನ ಠಿಕಾಣ. ಸ್ಟೇಜ್ ಹಾಕಿದ್ದ ಚೌಕದ ಹತ್ತಿರವೆಲ್ಲೂ ಕಣ್ಣಿಗೆ ಕಾಣದೆ ಅಟೊಸ್ಟಾಂಡ್ ಹತ್ತಿರ ನೋಡೊಣವೆಂದುಕೊಳ್ಳುತ್ತಾ ಲಕ್ಷ್ಮಿ ತಿಯೇಟರ್ ಕಡೆ ತಿರುಗಿ ಡೌನ್ ಇಳಿದವನಿಗೆ ‘ಗುರು ಸೌಂಡ್ ಸಿಸ್ಟಂಸ್’ ಅಂಗಡಿ ಮುಂದೆ ಚೇಚು ಕಂಡಿದ್ದ. ನನ್ನನ್ನು ನೋಡಿದವನೆ
“ಒಹೋ ಪರಂಗಿಗಳು ಯಾವಾಗ ಇಳಿದಿದ್ದು ?”
“ಮೂರು ದಿನ ಅಯ್ತು”
ಉಭಯ ಕುಶಲೋಪರಿ ಮಾತಾಡುತ್ತ ನೂರಡಿ ರಸ್ತೆಯ ಬಳಿ ಬಂದೆವು. ವಾಹನಗಳು ಓಡಾಡೊ ಶಬ್ದ, ಮೂಲೆಯಲ್ಲಿ ಸಾಲಾಗಿ ನಿಂತ ಅಟೊಗಳು, ರಸ್ತೆಬದಿಗಿದ್ದ ಅಂಬಳೆ ಅಣ್ಣಯ್ಯ ಪಂಡಿತರ ಸ್ಕೂಲಿನ ಗೋಡೆ ಕಡೆಯಿಂದ ಉಚ್ಚೆಯ ಗಬ್ಬುನಾತ, ಶಾಲೆಯ ಮುಂಬಾಗದ ‘ಫುಟ್‌ಪಾತಿ’ನಲ್ಲಿ ದಿಮ್ಮಿಯೊಂದರಮೇಲೆ ಕೂತಿದ್ದ ಎಳನೀರು ಮಾರುವವ, ಬಸ್‌ಸ್ಟಾಪಿನ ಹಿಂದೆ ಮರದ ನೆರಳಲ್ಲಿ ಬೀಡಿ ಸೇದುತ್ತಾ ಕೂತ ಜೋಡು ಹೊಲಿಯವವ, ದೊಡ್ಡಮೋರಿಯ ಕಟ್ಟೆಮೇಲೆ ಸುಮ್ಮನೆ ಕೂತ ನಾಕಾರು ಮಂದಿ.
“ಅಂಗಡಿ ಕಟ್ಟೆ ಮೆಟ್ಟಲು ಒಡೆಸಿ ಚಿಕ್ಕಣ್ಣ ಏನೊ ಮಾಡಿದಾಗಿದೆ ?”
“ಸೀಗರೇಟು ಗಿಗರೇಟು ಸೇದ್ತಿಯೊ ಅಥವಾ ಇನ್ನು ಏನು ಇಲ್ಲವೊ?
“ಇಲ್ಲ”
ಕಾಕ ಅಂಗಡಿಲಿ ‘ವಿಲ್ಸ್‌ಫಿಲ್ಟರ್’ ತಗೊಂಡು ಅಲ್ಲೆ ಇದ್ದ ಸೀಮೆಎಣ್ಣೆ ಬುಡ್ಡಿಯಲ್ಲಿ ಅದಕ್ಕೆಂದೆ ಇಟ್ಟಿದ್ದ ಕಾಗದದ ತುಂಡ್ಹಿಡಿದು ಹೊತ್ತಿಸಿಕೊಂಡವನು
“ಕಾಫಿ ಕುಡಿಯೋಣವ ?”
“ಹೂಂ”
ರಸ್ತೆ ದಾಟುತ್ತ “ನನ್ನ ಹುಡ್ಕೊಂಡು ಬಂದಂಗಿದೆ ಅದನ್ನ ಕೇಳೊದಕ್ಕೆ ?”
“ಹೂಂ ಹೌದು”
ಲಕ್ಷ್ಮಿ ಟಾಕಿಸಿನ ಪಕ್ಕದಲ್ಲಿದ್ದ ಲಕ್ಷ್ಮಿಭವನದಲ್ಲಿ ಕೂತವಿ.
“ಅಂಗಡಿ ಏನಾಯಿತು ಅಂತ ಎರಡು ನಿಮಿಷದಲ್ಲಿ ಹೇಳಬಹುದು. ನಿನಗೆ ಟೈಮ್ ಇದ್ದರೆ ‘ಫುಲ್ ಸ್ಟೊರಿ’ ಹೇಳತ್ತಿನಿ… ನೀನು ಕೇಳೊದಿದ್ದರೆ.”
“ಹೂಂ ಅದಕ್ಕೆ ನಿನ್ನ ಹುಡ್ಕೊಂಡು ಬಂದಿರೊದು ಹೇಳು ಕೇಳ್ತಿನಿ.”
ತುಂತರು ಮಳೆ ಶುರುವಾಗಿದ್ದು ಕಿಟಕಿಯಲ್ಲಿ ಕಂಡಿತ್ತು. ಚೇಚು ಚಿಕ್ಕಣ್ಣನ ಕಥೆ ಹೇಳಿದ.
ಕೆಂಪಸಿದ್ದನಹುಂಡಿ ಅನ್ನೋ ಹಳ್ಳಿ ಇದೆ ಬನ್ನೂರು ಹತ್ತಿರ- ಅಲ್ಲಿ ಹುಟ್ಟಿದ್ದು. ತಂದೆ ಎರಡನೆ ಹೆಂಡತಿ ಮಗ. ಹೆರಿಗೆಲಿ ತಾಯಿ ಸತ್ತು ಮಗು ಬದುಕಿ ಉಳಿತು. ಅಪ್ಪನಿಗೆ ವಯಸ್ಸಿಗೆಬಂದ ಮೊದಲನೆ ಹೆಂಡತಿ ಮಗನಿದ್ದರು ಇನ್ನೊಂದು ಮದುವೆ ಆಸೆ ಚಪಲ. ಮೂರನೆ ಮದುವೆಗೆ ಸಾಲ ಕೊಡಲ್ಲ ಅಂದರು ಗೌಡರು. ಆ ಕೋಪ ಎಷ್ಟು ವರ್ಷವಾದರೂ ಇಳಿಲಿಲ್ಲವಂತೆ. ಈಚಲಮರ ಹತ್ತೊದು, ಇಳಿಸೊದು, ಗೌಡರಮನೆಗೆ ಕೊಟ್ಟು ತಾನು ಚೆನ್ನಾಗಿ ಕುಡಿಯೊದು. ಎದ್ವಾತದ್ವಾ ಮೊಖಮೂತಿ ನೋಡದೆ ಹೊಡಿಯೊದು. ‘ನಿನ್ನ ಹೆತ್ತವಳನ್ನೆ ತಿಂದ್ಯಲ್ಲೊ’, ‘ಹಡದವಳ್ನೆ ನುಂಗ್ಹಾಕ್ಕೊಂಡ್ಯಲ್ಲೊ ಇನ್ನು ನನಗೇನು ಮಾಡ್ತಿ’, ‘ತಾಯಿನ ತಿಂದ ಸೂಳೆಮಗನೆ’ ಅಂತ ಮುಖ ತಿವಸ್ಕೊಂಡು ತಿವಸ್ಕೊಂಡೆ ಬೆಳದಿದ್ದು. ಕುರಿ ಕಾಯೊದು, ಗೌಡರ ಮನೆಗೆ ಜೀತ ಮಾಡೊದು ಅಷ್ಟೆ. ಪ್ರೀತಿ ಅಂತ ಕಂಡಿದ್ದು ಅಂದರೆ ಇವರ ಅಣ್ಣ- ದೊಡ್ಡಣ್ಣ. ಚಿಕ್ಕಣ್ಣನಿಗೆ ಹದಿನೆಂಟು ತುಂಬೊದರಲ್ಲಿ ಅಪ್ಪ ಆದೆನೊ ಕಾಯಿಲೆ ಬಂದು ಸತ್ತ. ಅಷ್ಟ್ರಲ್ಲಿ ದೊಡ್ಡಣ್ಣನಿಗೆ ಮದುವೆಯಾಗಿ ಎರಡು ಮಕ್ಕಳಾಗಿದ್ದವು. ಚಿಕ್ಕಣ್ಣ ಚಿಕ್ಕಪ್ಪನಾಗಿದ್ದ. ಅಪ್ಪನ ಸಾಲ ತೀರಿಸೊಕ್ಕೆ ಜೀತ ಮಾಡದೆ ವಿಧಿ ಇರಲಿಲ್ಲ. ಅತ್ತಿಗೆನೂ ದುಡಿತಿದ್ದಳು. ದೊಡ್ಡಣ್ಣ ಒಂದು ದಿನ ತಮ್ಮನ್ನ ಕೂರಿಸ್ಕೊಂಡು ಹೇಳಿದ. “ತಮ್ಮಣ್ಣ, ನೀನು ಮೈಸೂರಿಗೆ ಹೋಗು. ಅಲ್ಲಿ ಏನಾದರು ಕಸುಬು ಕಲತು ನಿನ್ನ ಕಾಲಮೇಲೆ ನಿಂತಕೊ ಇಲ್ಲೆ ಇದ್ದರೆ ಇಷ್ಟೆ- ಜೀವನ ಪೂರ್ತಿ ಕುರಿಕಾಯೋದು. ನೀನು ಹೋದರೆ ಇವಕ್ಕು ಮುಂದಕ್ಕೆ ಏನಾದರು ಗತಿ ಅಗುತ್ತೆ. ನಾನು ಮೇಷ್ಟರಿಗೆ ಮಾತಾಡಿದಿನಿ ಅವರು ಎನಾದರು ದಾರಿ ಮಾಡ್ತಾರೆ” ಅಂತ. ಬನ್ನೂರಿನಲ್ಲಿ ಶ್ರೀರಾಮಚಂದ್ರನ ಒಂದು ದೇವಸ್ಥಾನ ಇದೆ. ಮೈಸೂರಿನ ಒಬ್ಬ ಬಡಬ್ರಾಹ್ಮಣ ಬನ್ನೂರಿನಲ್ಲಿ ಮೇಷ್ಟರಾಗಿದ್ದರು. ಅವರದ್ದು ಇನ್ನೊಂದು ಕತೆ ಅದು ಇನ್ನ್ಯಾವತ್ತಾದರು ಹೇಳ್ತಿನಿ- ಇರಲಿ. ಶಾಲೆಯು ದೇವಸ್ಥಾನದಲ್ಲೆ ಅವರ ಸಂಸಾರವು. ಅಲ್ಲೆ ಪ್ರಾಕಾರದ ಮೂಲೆಯೊಂದರಲ್ಲಿ ವಾಸ. ಮಾರನೆ ದಿನ ಚಿಕ್ಕಣ್ಣನ ಕರಕೊಂಡು ದೇವಸ್ಥಾನಕ್ಕೆ ಹೋದರು ದೊಡ್ಡಣ್ಣ. ಮೇಷ್ಟರು ಪೂಜೆ ಮುಗಿಸಿ ಮಕ್ಕಳು ಯಾವಾದಾದರು ಶಾಲೆಗೆ ಬಂದಾವೊ ಅಂತ ದಾರಿ ನೋಡ್ತಿದ್ದರು. “ಅಡ್ಡಬಿದ್ದೆ ಅಯ್ಯನೊವರೆ ನನ್ನ ತಮ್ಮ.. ಜೀವನಕ್ಕೆ ಒಂದು ದಾರಿ ತೋರಿಸಬೇಕು” ಅಂತ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಚಿಕ್ಕಣ್ಣನು ಕಾಲಿಗೆ ಬಿದ್ದ. “ಶನಿವಾರ ಬಾರೊ ಅಪ್ಪ, ಎಲ್ಲಾ ಅವನಿಚ್ಚೆ” ಅಂತಂದು ಗರ್ಭಗುಡಿ ಕಡೆ ಒಮ್ಮೆ ನೋಡಿ “ಒಳ್ಳೆದಾಗಲಿ ಹೊಗಿದ್ದು ಬನ್ನಿ” ಅಂದರು. ಅಣ್ಣನ ಹಿಂದೆ ಕೈಕಟ್ಟಿ ನಿಂತವನು ಹಾಗೆ ಹಿಂದಕ್ಕೆ ನಡೆದು ಬಂದ.
ಆ ಕಾಲದಲ್ಲಿ ತೋಗರಿಬೀದಿಲಿ ಧರ್ಮಪ್ಪ ಅಂಥಾ ಇದ್ದರು. ದಾನ ಧರ್ಮ ದೇವರು ದಿಂಡರು ಅಂತ ಬಾಳಿ ಬದುಕಿದವರು. ಮೇಷ್ಟರು ಚಿಕ್ಕಣ್ಣನ್ನ ಅವರ ಮನಗೆ ಕರಕೊಂಡುಹೊಗಿ ಜೀವನಕ್ಕೆ ಎನಾದರು ಮಾಡಿ ಗೌಡರೆ ಅಂದರು. ಚಿಕ್ಕಣ್ಣನಿಗೆ ಓ ಅಂದರೆ ಟೊ ಅನ್ನೊಕ್ಕು ಬರೊಲ್ಲ ಅಂತ ಗೊತ್ತಾದಮೇಲೆ ಗೌಡರು ಎದರು ಗಲ್ಲಿಯಲ್ಲಿ ಇಸ್ತರಿಮಾಡ್ತಿದ್ದ ಮುದುಕ ಮುನಿಯಣ್ಣನೊಂದಿಗೆ ಇರೊಕ್ಕೆ ಹೇಳಿದರು. ಆ ವಯಸ್ಸಿನಲ್ಲಿ ಮುದುಕನಿಗು ಒಂದಾಸರೆ ಆಗುತ್ತೆ ಚಿಕ್ಕಣ್ಣನಿಗೊಂದು ಕಸುಬಾಗುತ್ತೆ ಅಂತ ಅವರೆಣೆಸಿದ್ದು. ಹಣ್ಣ್‌ಹಣ್ಣಾದ ಮುದುಕ ಒಂದುಕಾಲನ್ನ ಪರಲೋಕದಲ್ಲಾಗಲೆ ಇಟ್ಟಾಗಿತ್ತು. ಒಂದೆರಡು ತಿಂಗಳಲ್ಲೆ ಮುನಿಯ ಸತ್ತ. ಚಿಕ್ಕಣ್ಣ ಸುತ್ತಮುತ್ತ ಬೀದಿಗಳಿಗೆ ಅಗಸನಾದ.
ಇದೆಲ್ಲಾ ಆದಾಗ ನಮ್ಮ ದೇಶಕಿನ್ನು ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅಂದರೆ ನಾನಿನ್ನು ಹುಟ್ಟಿರಲಿಲ್ಲ. ದೋಬಿಯಾದ ಒಂದೆರಡು ವರ್ಷಕ್ಕೆ ಮುನಿಯನ ಜಾಗ ಬಿಡಬೇಕಾಗಿಬಂತು ಚಿಕ್ಕಣ್ಣನಿಗೆ. ಗೌಡರು ವೀಣೆಶೇಷಣ್ಣ ರಸ್ತೆಲಿದ್ದ ನರಸಿಂಹಯ್ಯನವರಿಗೆ ಹೇಳಿ ಅವರು ಸಂತೋಷವಾಗಿ ಅವರ ಮನೆಯ ತುದಿಗಿದ್ದ ಒಂದು ಪುಟ್ಟಜಾಗವನ್ನ ಬಿಟ್ಟುಕೊಟ್ಟರು. ಆದೆ ನನಗೆ ನಿನಗೆ ಗೊತ್ತಿರೊ ದೋಬಿಅಂಗಡಿ. ಚಿಕ್ಕಣ್ಣ ಆ ಅಂಗಡಿಯಲ್ಲಿ ಬೇರುಬಿಟ್ಟ ವರ್ಷವೇ ನಾವು ಆಜಾದಿಗಳಾಗಿದ್ದಂತೆ. ಅಲ್ಲಿ ಬೇರು ಬಲಿತಮೇಲೆ ಚಿಕ್ಕಣ್ಣನೆ ಕಟ್ಟೆ, ಮೆಟ್ಟಲು ಮಾಡಿಸಿದ್ದಂತೆ.
ವರ್ಷಗಳು ಉರುಳಿತ್ತು. ದೊಡ್ಡಣ್ಣನ ಮಕ್ಕಳು ದೊಡ್ಡವರಾಗ್ತಿದ್ದರು. ಮೈಸೂರಿಗೆ ಕಳುಹಿಸಬೇಕು ಅಂದರೆ ನೀನು ಮದುವೆ ಆಗಬೇಕು ಅಂದರು ದೊಡ್ಡಣ್ಣ. ಆಯ್ತು ಮದುವೆ. ಮೂರು ವರ್ಷವಾದರು ಮಕ್ಕಳಾಗಲಿಲ್ಲ. ಹರಕೆ, ಪೂಜೆ, ಕುಂಡಲಿ ತೋರಿಸಿದ್ದು ಎಲ್ಲಾ ಅಯ್ತು. ಶ್ರೀರಂಗಪಟ್ಟಣದ ಹತ್ತಿರದ ಹಳ್ಳಿಗ್ಹೊಗಿ ನಾಗಪಂಚಮಿ ದಿನವೊ ಷಷ್ಟಿದಿನವೊ ಹಾಲು ಎರೆದು ಸುಬ್ರಮಣ್ಯಕ್ಕೆ ದರ್ಶನಕ್ಕೆ ಬರ್ತಿವಿ ಅಂತ ಹರಕೆನು ಅಯ್ತು. ಆದರೂ ಮಕ್ಕಳಾಗಲಿಲ್ಲ. ಹೆಂಡತಿ ಇನ್ನೊಂದು ಮದುವೆ ಆಗಿ ಅಂತ ಬಲವಂತ ಮಾಡಿದಳು. ಚಿಕ್ಕಣ್ಣ ಇಲ್ಲ ಅಂದರು. ದೊಡ್ಡಣ್ಣನ ಮಕ್ಕಳು ಮೈಸೂರಿಗೆ ಬಂದರು. ಸಿದ್ದುನ ಅಂಗಡಿ ಕೆಲಸಕ್ಕೆ ಹಾಕ್ಕೊಂಡರು ನಂಜಪ್ಪನ ಸ್ಕೂಲಿಗೆ ಹಾಕಿದರು. ಮಕ್ಕಳು ಬಂದಿದ್ದಕ್ಕೆ ಹೆಂಡತಿಗೆ ಸಂತೋಷವಾಗಿದ್ದರು ತನ್ನದಾದ ಮಕ್ಕಳಿಲ್ಲದ ಕೊರಗಿಗೊ ಇಲ್ಲ ಬೇರೆ ಯಾವುದೋ ಕಾಯಿಲೆಯೋ ಅಂತು ಹಾಸಿಗೆ ಹಿಡಿದಳು. ಎಷ್ಟರಮಟ್ಟಿಗೆ ಎಂದರೆ ಕೈ ಕಾಲುಗಳಲ್ಲಿ ಸ್ವಾಧಿನವಿರಲಿಲ್ಲ. ಎಲ್ಲವು ಇವರೆ ಮಾಡಿಸಬೇಕು. ತಿಂಡಿ ಊಟ ಸ್ನಾನ ಹೆಂಡತಿ ಬಟ್ಟೆ ಒಗೆದುಹಾಕೊದು ಎಲ್ಲ ಕೆಲಸವು ಇವರದ್ದೆ. ನಾನು ಎಷ್ಟೊಬಾರಿ ಊಟ ಮಾಡಿದಿನಿ- ಮುದ್ದೆ ಜೋತೆಗೆ ಬಸ್ಸ್‌ಸಾರು ಮೊಹಲ್ಲಾಲಿ ಯಾರು ಅಷ್ಟು ಚೆನ್ನಾಗಿ ಮಾಡೊಲ್ಲ. ಹೆಂಡತಿ ಅತ್ತುಕರೆದು ಎನು ಮಾಡಿದರು ಇನ್ನೊಂದು ಮದುವೆ ಆಗೊಲ್ಲಾ ಅಂದರು. ಜಾಸ್ತಿ ಮಾತಿಲ್ಲ. ಇಲ್ಲ ಅಷ್ಟೆ.
ಬೆಳಿಗ್ಗೆ ಏಳುವರೆ ಹೊತ್ತಿಗೆ ಅಂಗಡಿ ಬಾಗಿಲು ತೆಗೆದು ಇಸ್ತರಿಪೆಟ್ಟಿಗೆಲಿ ಕೆಂಡ ಮಾಡೊದಕ್ಕೆ ಇಡೊ ಹೊತ್ತಿಗೆ ಜಾಯ್‌ಹೌಸಿನಿಂದ ಕಾಫಿ ಬರೊದು ಅದನ್ನ ಕುಡಿದಮೇಲೆ ಕೆಲಸ ಶುರು. ನಾನು ಕಂಡಂಗೆ ಸುಮಾರು ಐವತ್ತು ವರ್ಷದಲ್ಲಿ ಇದು ಒಂದೆ ಒಂದು ದಿನವು ತಪ್ಪಲಿಲ್ಲ. ಅಕ್ಕಪಕ್ಕದ ಮನೆ ಹೆಂಗಸರು ‘ಚಿಕ್ಕಣ್ಣ ಬಾಗಿಲು ತೆಗೆದಾಯ್ತು, ಏಳುವರೆ ಅಯ್ತು ಎದ್ದೇಳಿ’ ಅಂತ ಮಕ್ಕಳನ್ನು ದೊಡ್ಡವರನ್ನು ಎಬ್ಬಸೊ ಮಟ್ಟಿಗೆ. ಆದ್ಮಿ ಟೈಮು ಅಂದರೆ ಟೈಮು. ಜ್ವರ ಕೆಮ್ಮಲು ಅಂತ ಮಲಗಿದ್ದಿಲ್ಲ. ಅಂತಾದ್ದೆನಿದ್ದರು ಅಂಗಡಿ ಬಾಗಿಲುಮಾತ್ರ ಅವರೇ ತೇಗಿಬೇಕು. ಇಸ್ತರಿ ಸಿದ್ದು ಮಾಡಿದರು ಇವರು ಅಲ್ಲೆ ಕಟ್ಟೆಮೇಲೆ ಕೂತ್ಕೊತಿದ್ದರು ಮನೆಗ್ಹೊಗಿ ಮಲಗ್ತಿರಲಿಲ್ಲ. ಹನ್ನೊಂದು ಗಂಟೆಹೊತ್ತಿಗೆ ಅಂಗಡಿಲಿ ಸಿದ್ದುನ ಬಿಟ್ಟು ಮನೆಗೆ ಹೋಗಿ ಅಲ್ಲಿ ಕೆಲಸಗಳನ್ನ ಮುಗಿಸಿ, ಹೆಂಡತಿಗೆ ಊಟ ಮಾಡಿಸಿ, ಸಿದ್ದುಗೆ ತಿನ್ನೊಕ್ಕೆ ಅಂಗಡಿಗೆ ಏನಾದರು ತಂದುಕೊಟ್ಟು ಕತ್ತೆಯೊಂದಿಗೆ ದೋಬಿಗಾಟಿಗೆ ಹೋದರೆ ಇನ್ನು ಬರೋದು ಸಾಯಂಕಾಲವೆ. ರಾತ್ರಿ ಎಂಟು ಕೆಲವೊಮ್ಮೆ ಒಂಬತ್ತು ಗಂಟೆಯವರೆಗೆ ಅಂಗಡಿಲಿದ್ದು ಮನೆಗೆ ಹೋಗೋದು. ಇದು ಚಿಕ್ಕಣ್ಣನ ದಿನಚರಿ- ಜಿಂದಗಿ. ವರ್ಷಾವರ್ಷ ಅಂಗಡಿಲಿದ್ದ ಕ್ಯಾಲೇಂಡರ್ ಬದಲಾಗ್ತಿದಿದ್ದು ಬಿಟ್ಟರೆ ಬೇರೆ ಎಂದು ಏನು ಎಳ್ಳಷ್ಟು ಬದಲಾಗಿರಲಿಲ್ಲ.
ಸ್ವಲ್ಪ ವರ್ಷಗಳ ಹಿಂದೆ ಸಿದ್ದು ಇಟ್ಟಿಗೆಗೂಡಿನಲ್ಲಿ ಇನ್ನೊಂದು ಅಂಗಡಿ ತೇಗಿತಿನಿ ಅಂದ. ಒಳ್ಳೆದು ಅಂದರು. ಆದಾದ ಸ್ವಲ್ಪ ದಿನಕ್ಕೆ ನಂಜಪ್ಪ ಬ್ಯಾಂಕಲ್ಲಿ ಸಾಲ ತೆಗೊಂಡು ಬೆಂಗಳೂರಿನಲ್ಲಿ ಅಟೊ ಓಡಿಸ್ತಿನಿ ಅಂದ. ಸರಿ ಅಂದರು. ಆಮೇಲೆ ಸಿದ್ದು ಮದುವೆ. ಮೊಮ್ಮಗ. ಸಂತೋಷದಿಂದ ಅಜ್ಜನಾಗಿದ್ದ ಚಿಕ್ಕಣ್ಣ. ಎಲ್ಲಾ ಚೆನ್ನಾಗೆ ಇತ್ತು. ಚಿಕ್ಕಣ್ಣನ ಮಾತಲ್ಲಿ ಹೇಳಬೇಕು ಅಂದರೆ ‘ದ್ಯಾವರು ಸೆಂದಾಗೆ ಮಡಗವನೆ ಬಿಡು, ಎನಕ್ಕು ಕಡಿಮೆ ಮಾಡಿಲ್ಲ’.
ಕಳೆದ ವರ್ಷ ಹೆಂಡತಿ ಸತ್ತುಹೋದಳು. ಮನೇಲಿ ಇವರೊಬ್ಬರೆ. ಬೆಳಿಗ್ಗೆ ಅಷ್ಟೋತ್ತಿಗೆ ನನಗೆ ಹೇಳಿ ಕಳುಹಿಸಿದ್ದರು. ಸಿದ್ದುನು ಬಂದಿದ್ದ. ಅವತ್ತೂ ಅಂಗಡಿ ತೆಗೆಯೊಕ್ಕೆ ಹೋರಟರು. ಸಿದ್ದುಗೆ ಕೋಪ ತಡೆಯೊಕ್ಕೆ ಆಗದೆ ಅಂದೆ ಮೊದಲು ಚಿಕ್ಕಪ್ಪನಮೇಲೆ ಕೂಗಾಡಿದ್ದ. ಉತ್ತರ ಇಲ್ಲ- ಮೌನ. ಹಳ್ಳಿಯಿಂದ ಎಲ್ಲರೂ ಬರೊವರಗು ಹೆಣದ ಜೋತೆ ಕೂತು ಏನು ಮಾಡೊದು ಎಂದಿರಬೇಕು. ಮನುಷ್ಯ ಮೊದಲೆ ಮಾತು ಕಡಿಮೆ ಆ ದಿನ ಕಳೆದಮೇಲೆ ಮಾತು ಪೂರ್ತಿಯಾಗಿ ನಿಲ್ಲಸೆಬಿಟ್ಟರು ಅಂದರು ತಪ್ಪಾಗೋಲ್ಲ ನೋಡು. ಇಸ್ತರಿ ಮಾಡಿಸೊಕ್ಕೆ ಬಂದವರ ಹತ್ತಿರವು “ಹೂಂ”, “ಇಲ್ಲ್ರ”, “ಹೌದ್ರ” ಇಷ್ಟೆ ಹೊರತು ಜಾಸ್ತಿ ಮಾತಿಲ್ಲ. ನಿನ್ನಂತವರು ಯಾವಾಗಲಾದರೂ ವರ್ಷಕ್ಕೊಂದು ಸರ್ತಿ ಬಂದಾಗ ಒಂದೆರಡು ಮಾತೆಷ್ಟೊ ಅಷ್ಟೆ. ದಿನವು ಅಂಗಡಿಗೆ ಹೋಗುತ್ತಿದ್ದ ನನ್ನ ಕೂಡವು ಜಾಸ್ತಿ ಮಾತಿಲ್ಲ. ತಾವಾಯ್ತು ಅಂಗಡಿ ಅಯ್ತು. ದೋಬಿಗಾಟಾಯ್ತು ಮನೆಯಾಯ್ತು. ಸಿದ್ದು ಬಹಳ ಕರೆದ ನನ್ನ ಜೋತೆ ಬಂದಿರಿ ಎರಡು ಅಂಗಡಿನೂ ನಾನು ನೋಡ್ಕೊತಿನಿ, ನೀವು ಸಾಕು ದುಡಿದಿದ್ದು ಅಂತ. ಉತ್ತರ ಇಲ್ಲ- ಮೌನ. ಸುಮ್ಮನೆ ಬೆನ್ನು ತಟ್ಟಿ ಬೇಡವೆಂದಿದ್ದೆಷ್ಟೊ ಅಷ್ಟೆ.
ಹೊರಗೆ ಮಳೆ ಜೋರಾಗಿ ಸುರಿತಿತ್ತು. “ಇನ್ನೊಂದು ರೌಂಡು ಕಾಫಿ ಹೇಳು ಎರಡು ನಿಮಿಷದಲ್ಲಿ ಬರ್ತಿನಿ” ಎಂದು ಎದ್ದು ನಿಂತ ಚೇಚು. “ಎಲ್ಲಿಗೆ ಮಳೆ ಜೋರಾಗಿ ಬರ್ತಿದೆ” ಅಂದೆ. “ಇಲ್ಲೆ ಪಕ್ಕದಲ್ಲೆ ಬಂದೆ” ಎಂದು ಹೊರಗೊಡಿದ್ದ. ಕೂತಿದ್ದ ಟೇಬಲ್ಲಿನ ಪಕ್ಕದಲ್ಲಿದ್ದ ಕಿಟಕಿಯ ಬಾಗಿಲು ಗಾಳಿಗೆ ಒಂದೇಸಮ ‘ಪಟ್ ಪಟ್’ ಎಂದು ಬಡಿಯುತಿತ್ತು. ಬಗ್ಗಿ ಬಾಗಿಲೆಳೆದು ಮುಚ್ಚಿದೆ. ಹೋಟಲಿನ ಮಾಲಿಕ ಗದ್ದೆಯಮೇಲೆ ಸುಮ್ಮನೆ ಕೂತಿದ್ದ. ಹೋಟಲಿನ ಬಾಗಿಲ ಬಳಿ ಜನ ಗೋಡೆಗೊರಗಿ ಹಿಂದಕ್ಕೆ ನಿಂತಿದ್ದರು. ‘ವೈಟರ್’ ಮತ್ತೆ ಬಿಸಿಯಾದ ಕಾಫಿ ತಂದಿಟ್ಟ. ಒಂದು ಗುಟುಕು ಹೀರಿದಾಗ ಹಿತವಾಗಿತ್ತು. ಅಷ್ಟರಲ್ಲಿ ತಿರುಗಿ ಓಡಿಬಂದಿದ್ದ ಚೇಚು ಜೋರಾಗಿ ಉಸಿರುಬಿಡುತ್ತಾ ಕೂತಾಗ ಎಂತದ್ದೊ ವಾಸನೆ ಮೂಗಿಗೆ ಬಡಿದಿತ್ತು. “ಏನೋ ಸಪೋಟ ವಾಸನೆ ಇದ್ದ ಹಾಗಿದೆ” ಎಂದೆ. “ಹೂಂ ಅದಕ್ಕೆ ಹೊಗಿದ್ದು” ಎಂದು ನಕ್ಕಿದ್ದ. ಚೇಚು ಅಲ್ಲೆ ಪಕ್ಕದಲ್ಲಿರೊ ‘ಶಿವ ವೈನ್‌ಸ್ಟೊರ್’ಗೆ ಹೊಗಿದ್ದೆಂದು ನನಗು ಅರ್ಥವಾಯಿತು. ಒಂದು ಕ್ವಾರ್ಟರ್ ಹಾಕ್ಕೊಂಡು ಬಂದಿರಬೇಕು. ಮುಂಚಿನಿಂದಲು ಹಾಗೆ ಅಲ್ಲೆ ನಿಂತು ಲೋಟಾಕ್ಕೆ ಬಗ್ಗಿಸಿ ಒಂದೆ ಗುಟುಕಿಗೆ ಕುಡಿಯೋದು. ಬಾಯಿಗೆ ಒಂದು ಉಪ್ಪಿನಕಾಯಿ ಇಲ್ಲವೊ ಒಂದಿಷ್ಟು ಕಾರದ ಪುರಿ. ಬಂದು ಕುಳಿತವನು ಮುಂದಕ್ಕೆ ಕತೆ ಹೇಳಿದ.
ಈಗ ಒಂದೆರಡು ತಿಂಗಳ ಹಿಂದಿನ ಮಾತು. ನಮ್ಮ ಬೀದಿ ಸುಬ್ರಮಣ್ಯ ಇದಾನಲ್ಲ ಅವರ ತಂದೆ ಶ್ರಾದ್ಧ ಅವತ್ತು. ಯಾವತ್ತು ಇಲ್ಲದೆ ಇದ್ದಿದ್ದು ಅವತ್ತು ನನ್ನೂ ಊಟಕ್ಕೆ ಬಾರೊ ಅಂತ ಕರೆದಿದ್ದ. ನಾನು ಬೇಡವೋ ಸುಬ್ಬು ನಿಮ್ಮಮ್ಮ ಏನಾದರು ಅಂದಾರು ಅಂದೆ. ಅದೆಲ್ಲಾ ಏನು ಇಲ್ಲ ನೀನು ಸುಮ್ಮನೆ ಬಾ ಅಂದಿದ್ದ. (ಇದನ್ನ ಕೇಳಿ ನನಗ್ಯಾಕೊ ಅನುಮಾನವಾಯ್ತು. ಚೇಚುನ ಊಟಕ್ಕೆ ಕರೀಬಾರದು ಅಂತಲ್ಲ, ಆದರೂ ನನಗೆ ತಿಳಿದಂಗೆ ಅಗ್ರಹಾರದಲ್ಲಿ ಎಂದು ಯಾರು ಚೇಚುನ ಮನೆಗೆ ಊಟಕ್ಕೆ ಕರೆಯೋ ಅಷ್ಟು ಧೈರ್ಯ ಮಾಡಿರಲಿಲ್ಲ). ತಿಥಿ ಅಂದಮೇಲೆ ಊಟ ಲೇಟುತಾನೆ. ನಾನು ಅವತ್ತು ಮಧ್ಯಾಹ್ನ ಅಂಗಡಿ ಕಟ್ಟೆಮೇಲೆ ಕೂತಿದ್ದೆ. ಸಿದ್ದುನು ಬಂದು ಹೋಗಿದ್ದ. ಸಾಮಾನ್ಯವಾಗಿ ಅಷ್ಟ್ಹೊತ್ತಿಗೆಲ್ಲ ದೋಬಿಗಾಟಿಗೆ ಹೋಗೊ ಚಿಕ್ಕಣ್ಣ ಇನ್ನು ಅಂಗಡಿಲೇ ಇದ್ದರು. ಹರ ಇಲ್ಲ ಶುಭ ಇಲ್ಲ. ಅವರ ಪಾಡಿಗೆ ಅವರು ನನ್ನ ಪಾಡಿಗೆ ನಾನು. ಬೀದಿಲಿ ಹೋಗೊಬರೋವರನ್ನ ನೋಡುತ್ತಾ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಸುಬ್ಬು ದೊನ್ನೆಯೊಳಗೆ ಅನ್ನದ ಉಂಡೆ ಹಿಡಿದು ಮನೆ ಹಿತ್ತಲ ಕಡೆ ಬಂದ. ಅವನ ಹಿಂದೆಯೆ ಹುಡುಗನೊಬ್ಬ ಒಂದು ಕುರ್ಚಿ ಹಿಡಿದು ಬಂದ. ಹಿತ್ತಲಿನ ಎತ್ತರವಾಗಿದ್ದ ಗೋಡೆ ಹತ್ತಿರ ಬಂದು ಕುರ್ಚಿಮೇಲೆ ನಿಂತು, ದೊನ್ನೆಲಿದ್ದ ಉಂಡೆಯನ್ನ ತೆಗೆದು ಗೋಡೆಮೇಲಿಟ್ಟು ಆಕಾಶ ನೋಡ್ತಾ “ಕಾ ಕಾ ಕಾ”….”ಕಾ ಕಾ ಕಾ”… ಅಂತ ಕೂಗಿ ಕರಿತಾ ಇರಬೇಕಾದರೆ ಇತ್ತಕಡೆ ಬೀದಿಯಿಂದ ಹುಡುಗನೊಬ್ಬ ಅಂಗಡಿಗೆ ಬಂದು “ನಿಮ್ಮನ್ನ ಬರೋದಕ್ಕೆ ಹೇಳಿದರು ತಾತ” ಅಂತ ಚಿಕ್ಕಣ್ಣನಿಗೆ ಹೇಳಿದ. ಚಿಕ್ಕಣ್ಣ “ಹೌದ್ರ ಬಂದೆ..” ಅಂತ ಹುಡುಗನ ಹಿಂದೆಯೆ ಹೊರಟರು. ಅಷ್ಟ್ಹೊತ್ತಿಗೆ ಕುರ್ಚಿಯಿಂದಿಳಿದು ಸುಬ್ಬು ಒಳಗೊಗ್ತಿದ್ದ. ಚಿಕ್ಕಣ್ಣ “ಪಿಂಡ ಇಟ್ಟಾಯ್ತು. ಎಲ್ಲಾ ಮುಗಿತು ಅನಿಸುತ್ತೆ” ಎಂದು ನರಸಿಂಹಯ್ಯನವರ ಮನೆಗೆ ಹೋದರು.
ಊಟ ಮುಗಿಸಿ ಬಂದಾಗ ಅಂಗಡಿ ಮುಚ್ಚಿತ್ತು. ದೋಬಿಗಾಟಿಗೆ ಹೋದರೆನೋ ಅಂತಂದುಕೊಂಡವನು ಕಾಗೆಗಳು ಬಂದವೋ ಇಲ್ಲವೋ ಎಂದು ಗೋಡೆಮೇಲೆ ನೋಡಿದೆ. ಪಿಂಡ ಇರಲಿಲ್ಲ. ಕಾಗೆಗಳೆರಡು ಅಲ್ಲಿ ಇಲ್ಲಿ ಹರಡಿ ಬಿದ್ದ ಅನ್ನದಗಳನ್ನ ಹೆಕ್ಕುತ್ತಿದ್ದವು. ನಾನು ನನ್ನಪಾಡಿಗೆ ಹೋರಟುಹೋದೆ.
ನನಗೆ ವಿಷಯ ತಿಳಿದಾಗ ಎಲ್ಲಾ ಅಗೋಗಿತ್ತು.
ಮನೆಗೆ ಕರೆಸಿದ್ದ ನರಸಿಂಹಯ್ಯನವರು “ಚಿಕ್ಕಣ್ಣ ಬಹಳ ವರ್ಷದಿಂದ ನೀನು ಇಲ್ಲೆ ಇದಿಯೋ ಅಪ್ಪ. ನಿನಗೆ ಹೇಗೆ ಹೇಳಬೇಕೊ ಗೊತ್ತಿಲ್ಲವೊ ತಂದೆ” ಅಂತ ಪ್ರಾರಂಭಮಾಡಿದಾಗ ಚಿಕ್ಕಣ್ಣನಿಗೆ ಏನು ಅರ್ಥವಾಗದೆ
“ಬುದ್ದಿ ನೀವು ದೊಡ್ಡವರು. ನನ್ನತಾವ ಏನು… ಅದೇನಿದ್ದರು ಈಂಗ್ ಮಾಡೋ ಚಿಕ್ಕಣ್ಣ ಅನ್ನಿ ಬುದ್ದಿ…ಮಾಡ್ತಿನಿ..”.
“ಅಲ್ಲೋ ಅಪ್ಪ ನನ್ನ ಮಗ ಕೇಸರಿ ಇದಾನಲ್ಲೊ ಅವನು ಒಂದು ಕಾರು ಖರೀದಿ ಮಾಡಿದಾನೆ. ಅದನ್ನ ನಿಲ್ಲಿಸೊಕ್ಕೆ ಒಂದು ಜಾಗ ಬೇಕು. ಏನು.. ಅವನೂ ಎರಡು ಮೂರು ಕಡೆ ವಿಚಾರಿಸಿಕೊಂಡೆ ಬಂದಿದಾನೆ. ಏನು.. ಬಹಳ ವರ್ಷದಿಂದ ಲಲಿತಮ್ಮನವರ ಶಾಪಿನಲ್ಲಿ ತಾತಾಚಾರ್ ಮಕ್ಕಳು ನಿಲ್ಲಿಸ್ತಾರೆ. ಇನ್ನು ಆ ಕಡೆ ನವಗ್ರಹ ದೇವಸ್ಥಾನದ ಪಕ್ಕದ ಗರಾಜಿನಲ್ಲಿ ಜಾಗವಿಲ್ಲವಂತೆ..ಎದರುಮನೆ ಆ ಸಿಂಧಿಗಳು ನಿಲ್ಲಿಸ್ಕೊತಾರೆ… ಏನು….ಈ ಪುಟ್ಟಬೀದಿಲಿ ಹೊರಗಡೆ ನಿಲ್ಲಿಸೊಕ್ಕು ಆಗೋದಿಲ್ಲ….ಅದಕ್ಕೆ ನಿನಗೆ ಅಭ್ಯಂತರವಿಲ್ಲದಿದ್ದರೆ ನಿನ್ನ ಅಂಗಡಿ ಹಿಂದಕ್ಕಿರೊ ಗೋಡೆ ಒಡೆಯಿಸಿ ಇಲ್ಲೆ ಒಂದು ಷೆಡ್ ಮಾಡಬೇಕು ಅಂತ ಅವನಿಚ್ಚೆ…. ಕಾರು ಬರೊದಕ್ಕೆ ಇನ್ನು ಸಮಯ ಇದೆಯೊ ಅಪ್ಪ…. ಏನು…ನೀನು ನಿಧಾನಕ್ಕೆ ಯೋಚನೆಮಾಡಿ ಹೇಳು.. ನಿನ್ನ ಜಾಗಬಿಡು ಅಂದರೆ ದೇವರು ನನ್ನ ಮೆಚ್ಚೊಲ್ಲ…ನೀನೆ ಏನು ಮಾಡೊದಂತ ಹೇಳು”.
“ನೀವು ಹೇಳಿದಾಗ ಖಾಲಿಮಾಡಿ ಕೊಡ್ತಿನಿ ಬುದ್ದಿ”.
“ಇಲ್ಲೆ ಹತ್ತಿರದಲ್ಲಿ ನಿನಗೆ ಬೇರೆ ಯಾವುದಾದರು ಜಾಗದ ವ್ಯವಸ್ತೆ ಆಗಬೇಡವೆ….ತಾಳು ನಾನು ಯಾರಿಗಾದರು ಕೇಳಿ ನೋಡ್ತಿನಿ…ಏನು… ನೀನೂ ವಿಚಾರಿಸು” ಅಂದರಂತೆ.
ನಡೆದಿದ್ದು ಇಷ್ಟೇ. ಜಾಗಕ್ಕೇನು ಎಲ್ಲಿ ಬೇಕಾದರು ಸಿಗತಿತ್ತು. ನಾನೆ ಒಂದು ದಿನದಲ್ಲಿ ಕೊಡಿಸಿ ಕೊಡ್ತಿದ್ದೆ.
ಆದರೆ…
ಅಂಗಡಿ ಬೀಗ ಹಾಕ್ಕೊಂಡು ಕತ್ತೆಮೇಲೆ ಬಟ್ಟೆ ಹೇರಿಕೊಂಡು ಎಂದಿನಂತೆ ದೋಬಿಗಾಟ್‌ಗೆ ಹೋಗಿದಾರೆ. ಎಡಗಾಲಿನ ಹಿಮ್ಮಡಿಗೆ ಮುಳ್ಳೊಂದು ಚುಚ್ಚಿಕೊಂಡಿದೆ. ಒಡೆದು ಬಿರುಕು ಬಿಟ್ಟ ಹಿಮ್ಮಡಿಯ ಒಂದು ಬಿರುಕಿನ ಮಧ್ಯಕ್ಕೆ ಸರಿಯಾಗಿ ಉದ್ದವಾದ ಮುಳ್ಳು ಆಳವಾಗಿ ಒಳಕ್ಕೆ ನಾಟಿ ರಕ್ತ ಬಂದಿದೆ. ಆದರು ಮುಳ್ಳನ್ನ ತೆಗದಿಲ್ಲ. ಸುಸ್ತಾಗಿ ಮರಕ್ಕೆ ಒರಗಿ ಕೂತು ಹಾಗೆ ಮಲಗಿದ್ದು- ಅಷ್ಟೇ.
ಚೇಚು ಕತೆ ಹೇಳಿ ಮುಗಿಸಿದ್ದ. ಮಳೆ ಕಡಿಮೆ ಆಗಿತ್ತು. ಏನೊ ಕಳೆದುಕೊಂಡವನಂತೆ ಸಂಕಟವಾಗಿತ್ತು. ಮಾತಿಲ್ಲದೆ ಆ ತುಂತರು ಮಳೆಯಲ್ಲಿ ಮನೆಯ ಕಡೆಗೆ ಇಬ್ಬರು ಹೆಜ್ಜೆ ಹಾಕುತ್ತ ನಡೆದವು.
ನಾನು ಮನೆಗೆ ಬರುವುದಕ್ಕು ಅದಕ್ಕೆ ಸರಿಯಾಗಿ ಮಳೆ ಪೂರ್ತಿಯಾಗಿ ನಿಂತಿದ್ದಕ್ಕು ನನ್ನ ಸ್ನೇಹಿತ ಜಯಕುಮಾರ್ ‘ಚೇತಕ್ ಬಜಾಜ್’ನಲ್ಲಿ ಬಂದು ಇಳಿಯುವುದಕ್ಕು ಸರಿಹೋಗಿತ್ತು. ಉಭಯ ಕುಶಲೋಪರಿಯಾದಮೇಲೆ “ಮನುಷ್ಯ ಒಂದೆರಡು ದಿನ ಚೆನ್ನಾಗಿ ಮಲಗಲಿ ಆಮೇಲೆ ಬಂದು ನೋಡೋಣ ಅಂತ ನಾವು ಮೂರು ದಿನ ಬಿಟ್ಟು ಬಂದರೆ ನೀನಾಗಲೆ ಮಳೆಲಿ ಎಲ್ಲೊ ಸರ್ಕಿಟ್ ಹೋಗಿದ್ದು ಬರ್ತಾ ಇರೊ ಹಾಗಿದೆ” ಸ್ಕೂಟರ್ ಸ್ಟಾಂಡ್ ಹಾಕುತ್ತ ಕೇಳಿದ್ದ
“ಇಲ್ಲವೊ ಲಕ್ಷ್ಮಿಭವನದಲ್ಲಿ ಕೂತಿದ್ದೆ”
“ಯಾರ ಜೋತೆ ?” ಸಿಗರೇಟ್ ಹೊತ್ತಿಸಿಕೊಂಡಿದ್ದ
“ಚೇಚು”
“ಅದೇನು ಎಲ್ಲಾ ಬಿಟ್ಟು ಚೇಚು ಜೋತೆ ? ”
ಅಷ್ಟರಲ್ಲಿ ಅತ್ತಿಗೆ ಮನೆಯೊಳಗಿನಿಂದ ಬಂದವರು
“ಎಲ್ಲಿಗೆ ಹೋರಟ್ಹೊದರಿ ನೀವು ? ನಿಮ್ಮ ಅಣ್ಣ ಆಗಲೇ ಶುರು ಮಾಡಿದ್ದ್ರು ಮಳೆಲಿ ಸಿಕ್ಕೊಂಡಿದಾನೆ ಎಲ್ಲಿಗೆ ಅಂತನಾದರು ಕೇಳಬೇಡವೆ ಅಂತ”
“ನಮಸ್ಕಾರ ಮನ್ನಿ” ಅಂದ ಜಯಕುಮಾರ್ ಸಿಗರೇಟ್ ಹಿಡಿದ ಕೈಯನ್ನ ಬೆನ್ನ ಹಿಂದಕ್ಕೆ ಹಾಕುತ್ತ.
“ನಮಸ್ಕಾರ. ಫ್ರೇಂಡ್ ಬಂದರೆ ವಿಸಿಟ್ಟು ಇಲ್ಲದಿದ್ದರೆ ಇಲ್ಲ. ಈ ಬೀದಿಲೇ ಹೋದರು ಬರೊಲ್ಲ ನೀವೆಲ್ಲ” ಅಂದರು ನಗುತ್ತ.
“ಇಲ್ಲಾ ಮನ್ನಿ ಈ ಕಡೆ ಬಂದಾಗಲೆಲ್ಲ ಬರ್ತಿನಿ” ಎಂದು ಕೆಮ್ಮಿದ್ದ.
ಮತ್ತದೇ ಸಪೋಟ ವಾಸನೆ ಮೂಗಿಗೆ ಬಡಿದಿತ್ತು. “ಎಲ್ಲಾ ಮುಗಿಸಿಕೊಂಡೆ ಬಂದಾಗಿದೆ” ಎಂದೆ. ಅತ್ತಿಗೆಗು ಅರ್ಥವಾಗಿ ಅವರು ನಕ್ಕಿದ್ದರು. ಜಯ “ಸುಮ್ಮನಿರೊ” ಎಂದ. “ಪರವಾಗಿಲ್ಲ ಜಯಕುಮಾರ್” ಎಂದು ನಗುತ್ತಾ ಒಳಗ್ಹೋದರು ಅತ್ತಿಗೆ.
“ಅದೇನಪ್ಪ ಚೇಚು ಜೋತೆ ಅಂತಾದ್ದು”
“ಇಲ್ಲವೊ ಚಿಕ್ಕಣ್ಣನ ಬಗ್ಗೆ ಹೇಳ್ತಿದ್ದ. ಕೇಳ್ತಾ ಕೂತಿದ್ದೆ.”
“ಎಲ್ಲಾ ಬಿಟ್ಟು ಅವನನ್ನ ಕೇಳು. ಎಷ್ಟೋ ಜನ ಐವತ್ತು ಅರವತ್ತು ವರ್ಷದಿಂದ ಒಂದೇಮನೆಲಿ ವಾಸ ಮಾಡಿದ್ದ್ರು ಮನೆ ಖಾಲಿ ಮಾಡೊಲ್ಲವೆ. ಚಿಕ್ಕಣ್ಣನು ಬಿಟ್ಟ ಅಷ್ಟೆ.”
ನನಗೆ ಆ ಮಾತು ಕೇಳಿ ಶಾಕ್ ಆಗಿತ್ತು. “ನಿನಗೆ ಗೊತ್ತಿರೊ ವಿಷಯ ಸರಿಯಾಗಿ ಹೇಳು” ಅಂದೆ.
“ಹೇಳೊಕ್ಕೆ ಏನಿದೆಯೊ ಮಣ್ಣಾಂಗಟ್ಟಿ. ಜಾಗ ಬೇಕು ಅಂದರು ನರಸಿಂಹಯ್ಯನವರು. ಅವರೆ ಯಾರಿಗೋ ಹೇಳಿ ಹಳೆಬಂಡಿಕೇರಿಲಿ ಒಂದು ಜಾಗನೂ ಕೊಡಿಸಿದರು. ಹಿಂದೆ ನಿಮ್ಮ ಮನೆಗೆ ಹಾಲು ಕರೆಯೊಕ್ಕೆ ಬರ್ತಿದ್ದನಲ್ಲೋ ಅವನ ಮನೆ ಹತ್ತಿರವಂತೆ. ಎರಡು ವಾರದಲ್ಲಿ ಚಿಕ್ಕಣ್ಣ ಅಲ್ಲಿಗೆ ಹೋದ. ಇವರು ಕಟ್ಟೆ ಮೆಟ್ಟಲು ಒಡೆಯಿಸಿ, ಹಿಂದಗಡೆ ಗೋಡೆ ಒಡೆಯಿಸಿ ಷೆಡ್ ಮಾಡ್ಕೊಂಡರು. ಅಷ್ಟೆ ಇನ್ನೇನು. ಯಾಕೆ ಚೇಚು ಹೇಳಿದ್ದಾದರು ಏನು?”
“ನರಸಿಂಹಯ್ಯನವರು ಹೇಳಿದ ದಿನವೇ ದೋಬಿಗಾಟ್‌ನಲ್ಲಿ ಮರಕ್ಕೊರಗಿ ಕೂತವರು ಎಳಲೇ ಇಲ್ಲಾ ಅಂತಂದ ಮತ್ತೆ. ನೀನು ಹೊಸ ಅಂಗಡಿಗೆ ಹೋಗಿದಿಯ ? ನೀನು ಚಿಕ್ಕಣ್ಣನ್ನ ಲಾಸ್ಟ್ ನೋಡಿದ್ದು ಯಾವಾಗ ?”
“ನಾನು ಚಿಕ್ಕಣ್ಣನ್ನ ನೋಡಿ ನಾಕಾರು ತಿಂಗಳಾದರು ಆಗಿರಬೇಕು. ಅಂಗಡಿಗೆ ನಾನು ಯಾಕೋ ಹೋಗಲಿ. ಚೇಚುಗೆ ಎಲ್ಲೊ ಸ್ವಲ್ಪ ಜಾಸ್ತಿ ಆಗಿದೆ ಬಿಟ್ಟಿದಾನೆ ಬಂಡಿ. ಅವನನ್ನ ಜಾಗ ಕೊಡಿಸು ಅಂತ ಕೇಳಲಿಲ್ಲ ಅನಿಸುತ್ತೆ. ಅದಕ್ಕೆ ಏನೋ ಬಾಯಿಗೆ ಬಂದಿದ್ದು ಹೇಳಿದಾನೆ.”
“ನಡಿ ಒಂದು ನಿಮಿಷ ಸ್ಕೂಟರ್ನಲ್ಲಿ ಅಂಗಡಿ ಹತ್ತಿರ ಹೋಗಿ ನೋಡ್ಕೊಂಡು ಬಂದು ಬಿಡೋಣ.”
“ಈಗ ಅರ್ಜೇಂಟ್ ನಾನು ಎಲ್ಲೊ ಹೋಗಬೇಕು. ಸುಮ್ಮನೆ ನೋಡಿದ್ದು ಹೋಗೋಣ ಅಂತ ಬಂದೆ. ಬೇಕಾದರೆ ನಾಳೆ ಬೆಳಿಗ್ಗೆ ಬೇಗ ಬರ್ತಿನಿ ಹೋಗೋಣವಂತೆ” ಎಂದವನು ಹೊರಟೆಬಿಟ್ಟ.
ನನಗೆ ಅಸ್ತವ್ಯಸ್ತವಾಗಿತ್ತು. ಯಾಕೋ ಏನೋ ಎಲ್ಲವು ಗೋಜುಲು ಗೋಜುಲಾಗಿ ತೋರಿತ್ತು. ಈ ತೊಡಕು ಈಗಲೇ ಪರಿಹಾರವಾಗಬೇಕೆಂದನಿಸಿ ಅತ್ತಿಗೆಗೆ ಹೇಳಿ ಸ್ಕೂಟಿಯಲ್ಲಿ ಜಯ ಹೇಳಿದ್ದ ಗಲ್ಲಿಯ ಹತ್ತಿರ ಬಂದವನಿಗೆ ಧೋಭೀ ಅಂಗಡಿಯೋಂದು ಕಣ್ಣಿಗೆ ಬಿದ್ದಿತ್ತು. ಚಿಕ್ಕಣ್ಣ ಅಂಗಡಿಯಲ್ಲಿರಲಿಲ್ಲ. ನನ್ನ ವಯಸ್ಸಿನವನೊಬ್ಬ ಇಸ್ತರಿ ಮಾಡುತ್ತಿದ್ದ.
“ಇಲ್ಲಿ ಚಿಕ್ಕಣ್ಣ ಅನ್ನೊವರು ಯಾರಾದರು ಇದಾರೆಯೆ ?”
“ಯಾವ ಚಿಕ್ಕಣ್ಣ ?”
“ಇದು ಅವರಂಗಡಿ ಅಲ್ಲವೇ ?”
“ಇಲ್ಲಾ ಸಾರ್ ನಂದು. ಹತ್ತು ವರ್ಷ ಅಯ್ತು.”
“ವೀಣೆಶೇಷಣ್ಣ ರಸ್ತೆಲಿ ಚಿಕ್ಕಣ್ಣ ಅಂತ ಗೊತ್ತೆ ತಮಗೆ?”
“ಒಹೋ ಅವರನ್ನೇ ನೀವು ಕೇಳಿದ್ದು. ಈಗ ಎರಡು ತಿಂಗಳ್ಹಿಂದೆ ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂದೆ ಅಂಗಡಿ ಹಾಕ್ತಾರೆ ಅಂತ ಹೇಳ್ತಿದ್ದರು. ಆದರೆ ಏನು ಕಾಣಲಿಲ್ಲ ಸಾರ್. ಈ ಎರಿಯಾಗೆ ಬಂದಿಲ್ಲ.”
“ಸರಿ ಥ್ಯಾಂಕ್ಸ್”.
ಯಾರನ್ನ ಕೇಳುವುದೆಂದು ಯೋಚನೆ ಮಾಡುತ್ತಾ ಬಂದವನಿಗೆ ಸಿದ್ದು ಅಂಗಡಿ ಇಟ್ಟಿಗೆಗೂಡಿನಲ್ಲಿದೆಯೆಂಬುದು ತಟ್ಟನೆ ಹೊಳೆದು ಆ ಕಡೆಗೆ ಓಡಿಸಿದೆ. ಚಿಕ್ಕಣ್ಣ ಹೇಳಿದ್ದ ದೇವಸ್ಥಾನದ ಮುಂದೆ ಸ್ಕೂಟಿ ನಿಲ್ಲಿಸಿ ಎದುರಿನಲ್ಲಿದ್ದ ಗಲ್ಲಿಯಲ್ಲಿ ನಡೆದೆ. ಹೆಂಗಸೊಬ್ಬಳು ಮನೆಯ ಹೊಸಿಲ ಬಳಿ ಕುಳಿತು ಪುಟ್ಟ ಹುಡುಗಿಯ ತಲೆಯ ಕೂದಲಿನಲ್ಲಿ ಹೇನು ಹುಡುಕುತಿದ್ದಳು.
“ನಮಸ್ಕಾರ. ಇಲ್ಲಿ ಸಿದ್ದು ಅಂಥಾ ದೋಬಿ ಅಂಗಡಿ ಇಟ್ಟ್ಕೊಂಡಿದ್ದರಲ್ಲ ಎಲ್ಲಿ ಗೊತ್ತೆ ?”
“ಅಂಗಡಿ ಮುಚ್ಚಿದೆಯಲ್ಲ ಆದೆ ಕಾಣ್ರಪ್ಪೋ. ಆದರೆ ಅವರು ಈಗ ಇಲ್ಲಿ ಇಲ್ಲವಲ್ಲ್ರ. ನೀವು ಯಾರು ಅವರ ಜನವೋ?”
“ಇಲ್ಲ ಪರಿಚಯ ಅಷ್ಟೆ. ಈಗ ಎಲ್ಲಿದಾರೆ ಗೊತ್ತೆ?”
“ಸಂಸಾರ ಪೂರ್ತ ಬೆಂಗಳೂರಿಗೆ ಹೋರಟು ಹೋದ್ರಲ್ಲಪ್ಪ. ಒಂದೆರಡು ತಿಂಗಳಾಗ್ತ ಬತ್ತು. ಬನ್ನೂರು ತಾವ ಅಲ್ಲವೇ ಅವರು- ದೊಡ್ಡಣ್ಣ. ನಮ್ಮ ಹಳ್ಳಿಯು ಅಲ್ಲೇಯ ಒಸಿ ಮುಂದೆ. ಈಗ ಒಂದು ನಾಕು ತಿಂಗಳಾಗಿತ್ತು ಅನ್ನಿ ಅವರು ಇಲ್ಲಿ ಮಗನೊಟ್ಟಿಗೆ ಬಂದು. ಅವರು ಹೋದರು.”
“ದೊಡ್ಡಣ್ಣನವರ ತಮ್ಮ ಚಿಕ್ಕಣ್ಣ ಅಂತ ಅವರು ಏನಾದರು ಜೋತೆಲಿ ಹೋದರೆ ಗೊತ್ತೆ?”
“ಅದೇನೋ ಗೊತ್ತಿಲ್ಲ್ವಲ್ಲಪ್ಪೊ.”
“ಒಳ್ಳೆದು ಬರ್ತಿನಿ” ಎಂದು ಹೊರಟವನಿಗೆ ಬೇಸರವಾಗಿತ್ತು.
ನಿಜ ಚಿಕ್ಕಣ್ಣ ಒಬ್ಬ ಸಾಮಾನ್ಯ ಮನುಷ್ಯ. ಯ:ಕಶ್ಚಿತ್ ದೋಬಿ. ಆದರೂ ಚೇಚುವಾಗಲಿ ಜಯಕುಮಾರನಾಗಲಿ ಈ ವಿಷಯದಲ್ಲಿ ಸುಳ್ಳು ಹೇಳುವ ಪ್ರಮೇಯವಾವುದು ನನಗೆ ಕಾಣಲಿಲ್ಲ. ಅವರಿಬ್ಬರೂ ಅವರವರಿಗೆ ತಿಳಿದ ವಿಷಯವನ್ನೇ ನಿಜ ಎಂದು ನನಗೆ ಹೇಳಿರಬೇಕು ಎಂಬ ತೀರ್ಮಾನಕ್ಕೆ ಬಂದೆ. ಚಿಕ್ಕಣ್ಣನ ಮನೆಯ ಹತ್ತಿರವೆ ಯಾರನ್ನಾದರು ಕೇಳುವದೆ ಸರಿ ಎನಿಸಿತ್ತು. ಹೀಗೆ ಯೋಚನೆಮಾಡುತ್ತ ವೀಣೆಶೇಷಣ್ಣ ರಸ್ತೆಯ ಹತ್ತಿರ ಬಂದಾಗ ನರಸಿಂಹಯ್ಯನವರನ್ನೇ ಕೇಳಿಬಿಡೋಣವೆಂದು ಅವರ ಮನೆಯ ಬಾಗಿಲ ತಟ್ಟಿದ್ದೆ. ತೀರ್ಥಯಾತ್ರೆಗೆ ಹೋಗಿದ್ದಾರೆಂದು ತಿಳಿದಮೇಲೆ ಬೇರೆನು ಮಾಡಲು ತಿಳಿಯದೆ ಅಲ್ಲೆ ಕೂತು ಒಂದು ಕಾಗದ ಬರೆದಿಟ್ಟು ಛಲಬಿಡದ ತಿವಿಕ್ರಮನಂತೆ ನಮ್ಮ ಅಗ್ರಹಾರದ ಮೇಲಕ್ಕಿರುವ ತೋಗರಿಬೀದಿಗೆ ಬಂದೆ. ಕುಂಚಗರು, ಕುರುಬರು, ಒಕ್ಕಲಿಗ ಗೌಡರು ಅಲ್ಲಿ ಇಲ್ಲಿ ಕೆಲವು ಶೆಟ್ಟರ ಮನೆಗಳಿರೊ ಜಾಗವದು. ಅಲ್ಲೆ ಏಲ್ಲೊ ಚಿಕ್ಕಣ್ಣನ ಮನೆ. ಬೀದಿ ಮೂಲೆಯಲ್ಲಿ ನಿಂತಿದ್ದವರು ಮೂರು ಮಂದಿ. ಒಬ್ಬ ವಯಸ್ಸಿನಲ್ಲಿ ಹಿರಿಯನಾಗಿ ಕಂಡಿದ್ದ. ಇನ್ನಿಬ್ಬರಿಗೆ ಇಪ್ಪತ್ತಾದರು ತುಂಬಿರಬೇಕು. ಅವರಿಂದ ನನಗೆ ತಿಳಿದಿದ್ದಿಷ್ಟು.
ಕಿರಿಯರಿಬ್ಬರಿಗೂ ಚಿಕ್ಕಣ್ಣನ ಹೆಸರು ಕೇಳಿದ ನೆನಪು ಆದರೆ ಆತ ಯಾರೇಂಬುದೆ ಗೋತ್ತಿರಲಿಲ್ಲ. ಹಿರಿಯ ಹೀಗೆ ಹೇಳಿದ:
“ನಾನು ಚಿಕ್ಕ ಮೊಗ ಅದಾಗ್ಲಿಂದಲೂ ನೋಡಿವ್ನಿ ಬುದ್ದಿ. ಗಟ್ಟಿ ಆಳು. ಅರವತ್ತು ತುಂಬಿದ ಪ್ರಾಯದಲ್ಲು ಇವಕ್ಕೆ(ಕಿರಿಯರನ್ನ ನೋಡುತ್ತ) ಬೇಕಾದರೆ ಚಳ್ಳೆಕಾಯಿ ಮುಕ್ಕಿಸಿ ಬಿಡೋ ಆಸಾಮಿ. ಮುಳ್ಳು ಚುಚ್ಚಿದ್ದಕ್ಕೆ ಸಾಯೋ ಕುಳ ಅಲ್ಲ ಬುಡಿ. ಒಂದು ಬೀಡಿ ಇಲ್ಲ ಸಿಗರೇಟಿಲ್ಲ ಹೆಂಡ ಒಂದು ದಿನ ಮುಟ್ಟ್ನಿಲ್ಲ. ಅವರ ಹಳ್ಳಿಲಿ ಇದ್ದಾಗ ಹೇಗೋ ನನಗೆ ತಿಳಿದು ಆದರೆ ಇಲ್ಲಿ ಒಂದು ದಿನ ಮಾಂಸ ಮುಟ್ಟ್ನಿಲ್ಲ. ನಾವು ಕುರುಬರೆ ಆದರೆ ನಮಗೆ ಎಲ್ಲಾ ಬೇಕು. ಚಿಕ್ಕ ವಯಸ್ಸನಲ್ಲೆ ಹೆಂಡರು ಹಾಸಿಗೆ ಹಿಡಿದಳು. ಆದರೂ ಹೈದ ಇನ್ನೊಂದು ಹೆಣ್ಣ ತರನಿಲ್ಲ. ಈ ವಯಸನಲ್ಲು ಬೇಕು ಅಂದರ ಮಗು ಮಾಡಾರು ತೇಗಿರಿ. (ಕಿರಿಯರಿಬ್ಬರು ನಕ್ಕಿದ್ದರು) ಹೂಂ ಬುದ್ದಿ ಮಾತಿಗೆ ಹೇಳಿದ್ದು. ನಮಗೆ ರಾತ್ರಿ ಹೆಂಡ ಕುಡಿನಿಲ್ಲ ಅಂದರೆ ನಿದ್ದೆ ಬರೊದಿಲ್ಲ. ಆದರೆ ಅವರು ಹಾಂಗಲ್ಲ. ನಿಜ ಜಾಸ್ತಿ ಮಾತಿರಲಿಲ್ಲ. ಹೆಂಡರ್ರು ಹೋದಮೇಲಂತು ಪೂರ್ತಿ ನಿಂತೆ ಹೊಯ್ತು ಅನ್ನಿ. ಆ ಅಯ್ಯನವರು ಜಾಗ ಖಾಲಿ ಮಾಡಬೇಕು ಅಂದಿದ್ದು ನಿಜ. ಚಿಕ್ಕಣ್ಣ ದೋಬಿಗಾಟನಲ್ಲಿ ಮರಕ್ಕೆ ಒರಗಿ ಮಲಗಿದ್ದು ನಿಜವೆ. ಸತ್ತೆ ಹೊದರು ಅಂತ ಸುದ್ದಿ ಹಬ್ಬಿರೋದು ನಿಜವೆ. ಸತ್ತಿದ್ದರೆ ಹೆಣ ಇಲ್ಲಿಗೆ ತರದೆ ಇರ್ತಿದ್ದರೆ ನೀವೆ ಹೇಳಿ ಬುದ್ದಿ. ಮಾತಿಗೇನು ಬುದ್ದಿ ಸುಮ್ಕೆ ಆಡಬಹುದು. ನನ್ನ ಜೀವ ಹೇಳೊದು ಅವರು ಚೆಂದಾಗೆವರೆ ಅಂತ. ಎಲ್ಲಿ ಯಾಕೆ ಏನು ನಾ ಕಾಣೆ.”
ಆತನ ಮಾತು ನನಗ್ಯಾಕೊ ಸರಿ ಎನಿಸಿತ್ತು.
“ನಿಮ್ಮ ಹೆಸರು”
“ಯಾಕೆ ಬುದ್ದಿ ಏನಾದರು ತಪ್ಪು ಹೇಳಿದನೆ?”
“ಇಲ್ಲಪ್ಪ. ಎಲ್ಲಾ ಸರಿಯಾಗೆ ಹೇಳದಿ. ಅದಕ್ಕೆ ಕೇಳಿದ್ದು”
“ಬೊರಣ್ಣ ಅಂತ ಬುದ್ದಿ ಇಲ್ಲೆ ಸಂತೆಪೇಠೆಲಿ ಕೂಲಿ ಕೆಲಸ ಮಾಡ್ತಿವಿ”
“ಸರಿಯಪ್ಪ ಬರ್ತಿನಿ” ಎಂದು ಮನೆಗೆ ಬಂದೆ.
ನಾನು ನ್ಯೂಯಾರ್ಕಿಗೆ ಹಿಂತಿರುಗುವ ಮೊದಲೊಮ್ಮೆ ಮತ್ತೆ ನರಸಿಂಹಯ್ಯನವರ ಮನೆಗ್ಹೋಗಿ ನೋಡಿದ್ದೆ. ಅವರಿನ್ನು ಬಂದಿರಲಿಲ್ಲ. ಸುಮಾರು ಐವತ್ತು ವರುಷದ ದೋಬಿಅಂಗಡಿ- ಚಿಕ್ಕಣ್ಣನ ಅಂಗಡಿಯೆಂದೆ ಹೆಸರಾಗಿದ್ದ ಜಾಗ ಕಾರು ನಿಲ್ಲಿಸುವ ಷೆಡ್ ಆಗಿ ಮಾರ್ಪಾಡಾಗಿದ್ದು ನಿಜ ಸಂಗತಿ. ಈಗ ಆದು ಮುಗಿದ ಕತೆ.
ಆದರೆ…ಚಿಕ್ಕಣ್ಣ ಏನಾದ ?
ಓದೋಣ ಬನ್ನಿ…
ನರಸಿಂಹಯ್ಯನವರ ಪತ್ರದಲ್ಲಿ ಬರೆದ ಉತ್ತರ ಹೀಗಿತ್ತು:
ನಿಮ್ಮ ಸ್ನೇಹಿತ ಹೇಳಿದ್ದು ಚೇಚು ಹೇಳಿದ್ದು ಎರಡೂ ನಿಜವೇ -ಒಂದು ವಿಷಯವನ್ನುಳಿದು. ಅಂದು ನಾನು ಜಾಗ ಬೇಕೆಂದು ಹೇಳಿದ ದಿನ ಚಿಕ್ಕಣ್ಣ ಮರಕ್ಕೊರಗಿ ಮಲಗಿದವನು ಸತ್ತು ಹೋದನೆಂದೆ ನನಗೂ ಸುದ್ದಿ ಬಂದಿದ್ದು. ಕೂಡಲೇ ಸಿದ್ದುವಿಗೆ ಹೇಳಿ ಕಳುಹಿಸಿದ್ದೆ. ಚಿಕ್ಕಣ್ಣ ಸತ್ತಿರಲಿಲ್ಲ. ಮಲಿಗಿದವನಿಗೆ ನಿದ್ದೆಯಲ್ಲೆ ‘ಮೈಲ್ಡ್ ಸ್ಟ್ರೋಕ್’ ಹೊಡೆದು ಜ್ಞಾನ ಹೋಗಿತ್ತು ಅಷ್ಟೆ. ಅಲ್ಲಿದ್ದ ಜನಕ್ಕೆ ತಿಳಿಯದೆ ಗಾಬರಿಯಲ್ಲಿ ಸತ್ತೆ ಹೋದರು ಎಂದು ತಿಳಿದು ಹಬ್ಬಿದ ಸುದ್ದಿ ಆದು. ಒಂದು ತಿಂಗಳಲ್ಲಿ ಎಲ್ಲ ಸರಿಯಾಗುತ್ತೆ ಆದರೆ ಮೊದಲಿನಂತೆ ಜಾಸ್ತಿಯಾಗಿ ಕೆಲಸ ಮಾಡಬಾರದು ಎಂದರಂತೆ ವೈದ್ಯರು. ನಾನು ತಿಳಿದವರಿಗೆ ಹೇಳಿ ಹಳೆಬಂಡಿಕೇರಿಯಲ್ಲಿ ಒಂದು ಜಾಗದ ವ್ಯವಸ್ಥೆಯನ್ನು ಮಾಡಿದ್ದೆ. ಒಂದು ವಾರದಲ್ಲಿ ಚಿಕ್ಕಣ್ಣ ಅಂಗಡಿಗೆ ಹೋಗಬೇಕೆಂದು ಹಠ ಹಿಡಿದು ಕೂತಿದ್ದನಂತೆ. ದೊಡ್ಡಣ್ಣ ತಡೆದರಂತೆ. ಅಷ್ಟ್ರಲ್ಲಿ ಬೆಂಗಳೂರಿನಿಂದ ನಂಜಪ್ಪ ಆವನ ಹೆಂಡತಿ ಬಂದರಂತೆ. ಮನೆ ಖರೀದಿ ಮಾಡಿದಿನಿ ಎಲ್ಲರೂ ಅಲ್ಲಿಯೆ ಬಂದಿದ್ದರೆ ಚೆನ್ನಾಗಿರುತ್ತೆ ಆದೆ ಒಳ್ಳೆಯದು ಅಂತ ಅವರಪ್ಪನಿಗೆ ಒಪ್ಪಿಸಿಬಿಟ್ಟು ಹೋದನಂತೆ. ಆದಾದ ತಿಂಗಳಲ್ಲೇ ಎಲ್ಲರೂ ಬೆಂಗಳೂರಿಗೆ ಹೋಗಿ ನೆಲೆಸಿದ್ದು.
ನಾನು ತೀರ್ಥಯಾತ್ರೆ ಮುಗಿಸಿ ಬರುವಾಗ ಮನೆಗು ಹೋಗಿ ಬಂದೆ. ಚಿಕ್ಕಣ್ಣ ಈಗ ಇಸ್ತರಿ ಮಾಡುವದನ್ನು ಪೂರ್ತಿಯಾಗಿ ನಿಲ್ಲಿಸಿದ್ದಾನೆ. ಮೊಮ್ಮಕ್ಕಳು ಶಾಲೆಗೆ ಹೋದಮೇಲೆ ಅಂಗಡಿಯಲ್ಲಿ ಕೂತಿರುತ್ತಾನೆ. ಮನೆಗೆ ಸೇರಿದಂತಿರುವ ಅಂಗಡಿಯನ್ನು ಸಿದ್ದಣ್ಣ ನಡೆಸುತ್ತಾನೆ. ಬ್ಯಾಂಕಿನ ಸಾಲವನ್ನು ತೀರಿಸಿ ಅಟೊ ನಂಜಪ್ಪನದಾಗಿದೆ. ಒಟ್ಟಿನಲ್ಲಿ ಎಲ್ಲರೂ ಕ್ಷೇಮವಾಗಿ ಸಂತೋಷವಾಗಿದ್ದಾರೆ….
*****
೩-೧೯-೨೦೦೩