ಭವ – ೪

ಅವನ ಉದ್ದವಾದ ಗಡ್ಡ, ಹೆಗಲಮೇಲೆ ಚೆಲ್ಲಿದ ಕೂದಲು, ಅವನು ಉಟ್ಟು ಹೊದೆಯುವ ಸಾದಾ ಬಿಳಿ ಪಂಚೆ, ಅವನ ಶಾಂತವಾದ ಕಣ್ಣುಗಳು – – ಥೇಟು ಒಬ್ಬ ಋಷಿ ಕುಮಾರನವು ಎನ್ನಿಸುತ್ತಿತ್ತು. ಇವನು ಯಾರ ಮಗನೂ ಅಲ್ಲ, ದೇವರ ಮಗ ಎಂದುಕೊಂಡು ನಾನು ಶಾಂತನಾದೆ. “ಆದರೆ ಇವತ್ತು ಬೆಳಿಗ್ಗೆ ಎಲ್ಲ ಬದಲಾಗಿ ಬಿಟ್ಟಿತು. ಪ್ರಸಾದ ತಾಯಿಯ ಎದುರು ಹೋಗಿ. ನಿಂತು, ’ನಾನು ಯಾರು?’ ಎಂದನಂತೆ. “ಋಷಿಯಂತೆ ಕಂಡ ಮಗನಿಗೆ ಸುಳ್ಳು ಹೇಳಲಾರದೆ, ಸತ್ಯವನ್ನು ಹೇಳಲೊಲ್ಲದೆ ಗಂಗೂ ಕಣ್ಣು ತುಂಬಿ ಬಂದು ಸುಮ್ಮನಿದ್ದಳಂತೆ. ಅವನು ನನ್ನ ಮಗನೆಂದು ಎಲ್ಲರೂ ಹೀಯಾಳಿಸಿದ್ದನ್ನು ಕೇಳಿದ್ದ ಪ್ರಸಾದನಿಗೆ ಯಾಕೆ ಸಂಶಯ ಹುಟ್ಟುಬಿಟ್ಟಿತೊ? ಎಂದು ತಾಯಿ ಕಂಗಾಲಾಗಿದ್ದಳು. ಆದರೆ ಒಂದು ಕ್ಷಣದಲ್ಲಿ ಅವಳಿಗೆ ತಿಳಿದಿತ್ತು. ಪ್ರಸಾದ ತನ್ನನ್ನು ಆ ಪ್ರಶ್ನೆ ಕೇಳಿದ್ದಲ್ಲ. ತನಗೇ ಕೇಳಿಕೊಂಡದ್ದು. ’ನಾನು ಯಾರು?’ ಎಂದು ಮತ್ತೆ ಅಂದವನು, ’ಅಮ್ಮ ಇದನ್ನು ತಿಳಿಯಲು ನಾನು ಸಂನ್ಯಾಸ ತೆಗೆದುಕೊಳ್ಳಬೇಕೆಂದಿದ್ದೇನೆ. ನಾನು ನಿನ್ನಲ್ಲಿ ಅಂಕುರಿಸಿದ ಹರಿದ್ವಾರಕ್ಕೇ ಹೋಗಿ ನನ್ನ ಸಂಗೀತದ ಉಪಾಸನೆ ಮುಂದುವರೆಸುತ್ತೇನೆ. ಇದಕ್ಕೆ ನಿನ್ನ ಅಪ್ಪಣೆ ಬೇಕು. ಆದರೆ ಸುಲಭವಾಗಿ ಸಂಸಾರದ ಮೋಹ ಯಾರನ್ನೂ ಬಿಡದು. ಜೊತೆಗೆ ಅಪ್ಪಯ್ಯನನ್ನೂ ಕರೆದುಕೊಂಡು ಹೋಗುತ್ತೇನೆ. ಅವರು ನನ್ನನ್ನು ಅತಿಯಾಗಿ ಹಚ್ಚಿಕೊಂಡಂತಿದೆ’ ಎಂದು ಗಂಗೂಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟನಂತೆ. ಚಂದ್ರಪ್ಪನನ್ನು ಅವನು ಅಪ್ಪಯ್ಯನೆಂದು ಕರೆಯೋದು. “ಗಂಗೂ ಈಗ ಕಂಗಾಲಾಗಿದ್ದಾಳೆ. ಇರುವ ಒಬ್ಬನೇ ಮಗನನ್ನು ಕಳಕೊಂಡರೆ ತನ್ನ ಪಾಡೇನು ಎಂದು ದುಃಖಿಯಾಗಿ ಬಿಟ್ಟಿದ್ದಾಳೆ. “ಮಗನನ್ನು ಉಳಿಸಿಕೊಳ್ಳಲು ಏನೇನೋ ಉಪಾಯಗಳನ್ನು ಹುಡುಕುತ್ತ ನನಗೆ ಹೇಳಿದಳು: ಮಗನಿಗೆ ಅವನ ಹುಟ್ಟಿನ ನಿಜವನ್ನು ತಿಳಿಸಿಬಿಡುವುದು. ಅಂದರೆ ನಿನ್ನ ಬಗ್ಗೆಯೂ ಹೇಳಿಬಿಡುವುದು. ಎಲ್ಲ ಯೋಗಾಯೋಗವೆನ್ನಿಸುತ್ತದೆ – ನೀನು ಈ ಸಮಯದಲ್ಲೇ ಇಲ್ಲಿಗೆ ಬಂದುಬಿಟ್ಟಿದ್ದೀಯ. ತನ್ನ ಸತ್ಯದಿಂದ ಮಗ ಮನೆಯಲ್ಲೇ ಉಳಿಯುತ್ತಾನೆಂದು ಗಂಗೂಗೆ ಒಂದು ಭ್ರಮೆ. ಇನ್ನೊಂದು ಭ್ರಮೆಯೆಂದರೆ ನನ್ನಿಂದ ದೇವರ ಎದುರು ಒಂದು ತಾಳಿ ಕಟ್ಟಿಸಿಕೊಂಡು ಬಿಟ್ಟರೆ ಮಗನ ಚಿತ್ತಕ್ಷೆ‌ಊ?ಭೆಗೆ ಶಮೆ ದೊರಕುತ್ತದೆ ಎಂದು. “ಒಂದಕ್ಕೊಂದು ಏನು ಸಂಬಂಧವೋ ತಿಳಿಯದು. ನನ್ನ ಲಾಯರ್ ತಲೆಗೆ ಅಂಥವು ಹೊಳೆಯಲ್ಲ. ನಾನಿದಕ್ಕೆ ಒಪ್ಪಿಬಿಟ್ಟೆ. ಆದರೆ ನನ್ನ ಆಸೆಬುರುಕ ಮಗನದೇ ನನಗೆ ಚಿಂತೆ. ಎಲ್ಲಿ ಆಸ್ತಿ ಪಾಲಾಗಿ ಬಿಡಬೇಕಾಗುತ್ತದೋ ಎಂದು ಅವನು ಕಿರುಚಾಡಿ ನನ್ನನ್ನು ಕೊಲ್ಲಲು ಬಂದರೂ ಬಂದನೆ. ಅವನ ರಾಜಕೀಯ ನಾನು ಕಂಡಿಲ್ಲವ? ಗೂಂಡಾಗಳನ್ನು ಬಿಟ್ಟು ತನ್ನ ಎದುರಾಳಿಗಳನ್ನು ಅವನು ಹೊಡೆಸಿದ್ದಿದೆ”. ನಾರಾಯಣನ ಮಾತು ಥಟ್ಟನೆ ಲಾಯರುಗಿರಿಯ ತಿರುವು ತೆಗೆದುಕೊಂಡಿತು: “ನನ್ನ ಪ್ರಸಾದನಿಗೆ ವೈರಾಗ್ಯವಲ್ಲವೆ? ನನ್ನ ಆಸ್ತಿಯನ್ನೆಲ್ಲ ನನ್ನ ಮಗನಿಗೇ ಮಾಡಿ ಪತ್ರವನ್ನು ರಿಜಿಸ್ಟರ್‍ಡ್ ಮಾಡಿಬಿಡುತ್ತೇನೆ. ನನ್ನದು ಹೆಚ್ಚಾಗಿ ಸ್ವಯಾರ್ಜಿತವೇ. ಗಂಗೂ ಆಸ್ತಿಯನ್ನು ಹೇಗೂ ಅವಳ ಹೆಸರಿಗೇ ರಿಜಿಸ್ಟರ್‍ಡ್ ಮಾಡಿಬಿಟ್ಟಿದ್ದೇನೆ. ಅವಳ ಸಂಪಾದನೆ ಅವಳಿಗೆ ಸಾಕು. ನನಗೆ ಇರುವ ಒಂದೇ ಚಿಂತೆಯೆಂದರೆ ಅಮ್ಮನದು. ಅವಳು ಖಂಡಿತ ಗಂಗೂಗೆ ನಾನು ತಾಳಿಕಟ್ಟುವುದನ್ನು ಒಪ್ಪುತ್ತಾಳೆಂದು ನನಗೆ ಗೊತ್ತು. ಒಂದು ದಿನ ಚಿಂತೆಯಲ್ಲಿರುವ ನನ್ನನ್ನು ಕಂಡು ಅರ್ಥಗರ್ಭಿತವಾಗಿ ಹೇಳಿದ್ದಳು – ’ನಿನ್ನ ಮಗನಿಗೊಂದು ಹೆಣ್ಣು ನೋಡಿ ಮದುವೆ ಮಾಡಿಬಿಡೋ. ಅವನು ತನ್ನ ಸಂಸಾರ ಮಾಡಿಕೊಂಡು ಬೇರೆಯಾಗಿ ಇರಲಿ. ಮಾಣಿಗೂ ಜವಾಬ್ದಾರಿ ಗೊತ್ತಾದಂತೆ ಆಗುತ್ತದೆ. ನೀನೂ ಆಗ ನಿನಗೆ ಸರಿಕಂಡದ್ದನ್ನು ಮಾಡಬಹುದು’ ಎಂದಮೇಲೆ ಅವಳು ಪಿಸುಗುಟ್ಟುವಂತೆ ನನ್ನ ಕಿವಿಯಲ್ಲಿ ಇನ್ನೊಂದು ಮಾತು ಹಾಕಿ ನನ್ನನ್ನು ಚಕಿತಗೊಳಿಸಿಬಿಟ್ಟಳು.” ನಾರಾಯಣ ಮಾತು ನಿಲ್ಲಿಸಿ ಕಾರಿನ ಬಾಗಿಲು ತೆರೆದು ದಿನಕರನನ್ನು ಕೂರಿಸಿಕೊಂಡು ಸ್ಟಾರ್‍ಟ್ ಮಾಡಿ ಹೇಳಿದ: “ಅಮ್ಮ ಏನು ಹೇಳಿದಳು ಗೊತ್ತ?” ದಿನಕರ ’ಏನು’ ಎಂದ. ಕಾರನ್ನು ಬಿಡುತ್ತ ನಾರಾಯಣ ಗೌರವದ ಧ್ವನಿಯಲ್ಲಿ ಹೇಳಿದ: “ನನ್ನ ಅಮ್ಮನಿಗೆ ಮಾತ್ರ ಇನ್ನೊಂದು ಜನ್ಮವೆತ್ತುವ ಅಗತ್ಯ ಬೀಳದು ಎನ್ನಿಸುತ್ತೆ ನನಗೆ. ಅವರು ಈ ಭವದಲ್ಲಿದ್ದೂ ಈ ಭವದಿಂದ ಮುಕ್ತರು”. ಇನ್ನಷ್ಟು ಹೊತ್ತು ಕಳೆದು ಕಂಪಿಸುವ ಧ್ವನಿಯಲ್ಲಿ ಹೇಳಿದ: “ಗಂಗೂ ಕೂಡ ನನಗೆ ಬಳಗದವಳಂತೆಯೇ’ ಎಂದು ಅಮ್ಮ ಅಂದುಬಿಟ್ಟಿದ್ದಳು. ವರ್ಷದ ಹಿಂದಿನ ಮಾತು ಇದು. ಗಂಗೂಗೆ ಅಮ್ಮ ಅಂದದ್ದು ಹೇಳಿದೆ. ಅದಕ್ಕವಳು ’ಅಮ್ಮನ ಆ ಮಾತಿನಿಂದಾಗಿ ನಾನು ನಿಮ್ಮ ಹೆಂಡತಿಯಾಗಿ ಬಿಟ್ಟಂತೆಯೇ’ ಎಂದಿದ್ದಳು.” ದಿನಕರ ಈ ಮಾತು ಕೇಳಿ ಕುಸಿದುಬಿಟ್ಟ. ನಾರಾಯಣನ ಜೀವನದಲ್ಲಿ ತಾನು ಪಾಲುದಾರ, ಆದರೆ ಅವನ ಬಿಡುಗಡೆಯಲ್ಲಿ ತನಗೆ ಯಾವ ಪಾತ್ರವೂ ಇಲ್ಲ. ನಾರಾಯಣನಿಗೆ ಸಂಸಾರದ ಒಂದು ಚೌಕಟ್ಟಿದೆ; ಆದರೆ ತನಗೆ ಇಲ್ಲ. ಅವನಿಗೆ ಹೇಳಿ ಕೇಳುವವರೂ ಇದ್ದಾರೆ. ಸಮಾಜದ ಭಯವಿದೆ., ಅಲ್ಲೊಂದು ಅವನಿಗೆ ನಿಶ್ಚಿತ ಪಾತ್ರವಿದೆ; ಆದರೆ ತನಗೆ ಇಲ್ಲ. ಅವನಿಂದ ನೋಯುವವರೂ ಇದ್ದಾರೆ; ನಿರೀಕ್ಷಿಸುವವರೂ ಇದ್ದಾರೆ; ಆದರೆ ತನಗೆ ಇಲ್ಲ. ಪ್ರಸಾದ ನಾರಾಯಣನಿಗೆ ಇದ್ದಾನೆ; ತನಗೆ ಇಲ್ಲ. ತನ್ನಿಂದ ಅವನು ಹುಟ್ಟಿರಬಹುದು, ಇಲ್ಲದೇ ಇರಬಹುದು – ಆದರೆ ತಾನು ಆ ಬಗ್ಗೆ ಏನು ಮಾಡುವುದೂ ಉಳಿದಿಲ್ಲ. ದಿಗ್ಭ್ರಮೆ ಮಾತ್ರ ತನ್ನ ಪಾಲಿಗೆ. ಈ ದೇಹ ಅಂಥ ದಿಗ್ಭ್ರಮೆಯನ್ನು ಹೆಚ್ಚು ಕಾಲ ಧಾರಣ ಕೂಡ ಮಾಡಲಾರದು. ತನ್ನಂಥ ಅತಂತ್ರನಿಗೆ ಸಂಸಾರವೂ ಇಲ್ಲ, ಸಂನ್ಯಾಸವೂ ಇಲ್ಲ. ತನಗೆ ನೆಲೆಯೇ ಇಲ್ಲ. ತಾನು ಯಾರೆಂದು ಹುಡುಕಿದರೂ ಏನೂ ಸಿಗುವುದಿಲ್ಲ.

ಅಧ್ಯಾಯ ೭

ನಾರಾಯಣ ತಂತ್ರಿ ಮುಖ್ಯ ರಸ್ತೆಯಿಂದ ಕಾರನ್ನು ತಿರುಗಿಸಿ ಏನೋ ಹೇಳಿದ. ದಿನಕರನಿಗೆ ಕೇಳಿಸಲಿಲ್ಲ. ಒಂದು ಒಂಟಿಯಾಗಿದ್ದ ಹೆಂಚಿನ ಮನೆಯ ಎದುರು ನಿಲ್ಲಿಸಿದ. “ನನಗೊಂದು ಡ್ರಿಂಕ್ ಬೇಕೆನ್ನಿಸಿದಾಗ ಇಲ್ಲಿಗೆ ನಾನು ಬರುವುದಿದೆ” ಎಂದು ದಿನಕರನಿಗೆ ಕೊಂಚ ಆಶ್ಚರ್ಯವಾಗುವಂತೆ ಮಾಡಿದ. ಮನೆಯ ಒಳಕ್ಕೆ ಅದು ತನ್ನ ಸ್ವಂತದ್ದೆಂಬಂತೆ ಅವನು ಹೋಗುವಾಗ, ಮನೆಯ ಹೊರಗೆ ಬರಿ ಮೈಮೇಲೆ ಟವಲು ಹೊದ್ದವನೊಬ್ಬ “ರಂಗಮ್ಮಾ, ಲಾಯರು ಬಂದ್ದಿದ್ದಾರೆ” ಎಂದು ಗಟ್ಟಿಯಾಗಿ ಹೇಳುತ್ತಾ ಎದ್ದು ನಿಂತಾಗ ಡಿನಕರನಿಗೆ ಗುಮಾನಿಯಾಯಿತು. ‘ತನ್ನಂಥವನೇ ಈ ನಾರಾಯಣ. ಇವನಿಗೂ ದೀರ್ಘಕಾಲದ ತೀವ್ರ ಭಾವವನ್ನು ಧಾರಣೆ ಮಾಡುವ ಶಕ್ತಿಯಿಲ್ಲ’ ಎಂದು ಕೊಂಡ. ಎಲೆಯಡಿಕೆ ಮೆಲ್ಲುತ್ತಿದ್ದ ಆಕರ್ಷಕಳಾದ ಕಪ್ಪು ಹೆಂಗಸೊಬ್ಬಳು ಮೋರೆ ತೋರಿಸಿ, ಬಂದಿರ? ಎಷ್ಟು ದಿನವಾಗಿ ಬಿಟ್ಟಿತು ಬಂದು” ಎಂದು ಉಪಚರಿಸಿದಳು. ನಾರಾಯಣ ಮತ್ತೇನೂ ಹೇಳಬೇಕಾದ್ದು ಉಳಿದಿರಲಿಲ್ಲ.ಒಂದು ಬಾಟಲು ವ್ಹಿಸ್ಕಿ ಮತ್ತು ಜಗ್ಗಿನಲ್ಲಿ ನೀರನ್ನು ಅವಳೇ ತಂದು ಎದಿರಿಟ್ಟಿದ್ದಳು. ದಿನಕರ, “ನಾನು ಕುಡಿಯುವುದು ಬಿಟ್ಟಿದ್ದೇನೆ, ಕೊನೆಯ ಪಕ್ಷ ಈ ಬಟ್ಟೆಯನ್ನು ತೊಟ್ಟಿರುವ ತನಕ” ಎಂದ. ಆದರೆ ನಾರಾಯಣ ಸುರಿದುಕೊಂಡ ವ್ಹಿಸ್ಕಿಯ ವಾಸನೆಗೆ ತನ್ನ ದೆಹಲಿಯ ಲೋಲುಪತೆಯ ದಿನಗಳು ನೆನಪಾಗಿ ಆಸೆಯಾಗದೆ ಇರಲಿಲ್ಲ. ತಾನು ಮತ್ತೆ ಅದಕ್ಕೆ ಮರಳುವವನೇ ಎಂದುಕೊಳ್ಳುತ್ತಿದ್ದಾಗ ದಿನಕರನಿಗೆ ಏನೇನೂ ಅರ್ಥವಾಗದ ತುಳುವಿನಲ್ಲಿ ನಾರಾಯಣ ರಂಗಮ್ಮನಿಗೆ ಹೇಳಿದ: “ಇವರು ನನ್ನ ದೆಹಲಿಯಲ್ಲಿರುವ ಸ್ನೇಹಿತರು. ಬಹಳ ದೊಡ್ಡವರು. ಸದ್ಯ ವ್ರತದಲ್ಲಿದ್ದಾರೆ. ಇವರಿಗೆ ಲಿಂಬೆ ಹಣ್ಣಿನ ಶರಬತ್ತು ಮಾಡಿಕೊಡು. ಬೇರೆ ಕಾರ್ಯಕ್ರಮ ಇವರಿಗೂ ಬೇಡ, ನನಗೂ ಬೇಡ.” ರಂಗಮ್ಮ ವೈಯಾರ ಮಾಡುತ್ತ ಒಳಹೋದ್ದನ್ನು ಕಂಡು ’ಈ ನಾರಾಯಣನ ಪಾಡೇ ಇಷ್ಟು. ಸಮಾಧಾನಗಳನ್ನೆಲ್ಲ ಇಟ್ಟುಕೊಂಡೇ ನರಳುತ್ತಿರುತ್ತಾನೆ. ನರಳಿ ಏನೂ ಪ್ರಯೋಜನವಿಲ್ಲ ಎಂದು ತಿಳಿದು ವೇದಾಂತಿಯೂ ಆಗಿರುತ್ತಾನೆ. ಇವನೂ ಹೊರಳಿಕೊಂಡು ಹೊಸಬನಾಗುವುದಿಲ್ಲ. ನಾನೂ ಹೊರಳಿಕೊಂಡು ಹೊಸಬನಾಗುವುದಿಲ್ಲ’ಎಂದು ಕೊಂಡಿದ್ದ. ಆದರೆ ಈಗ ನಿಜವಾಗಿಯೂ ದುಃಖದಲ್ಲಿದ್ದು ಗಂಗಿಯನ್ನು ರಾಜಾರೋಷವಾಗಿ ಮದುವೆಯಾಗಿ ಬಿಡಲು ತಯಾರಾದವನನ್ನು ತಾನು ಯಾಕೆ ರಂಗಿಯ ವಯ್ಯಾರ ಕಂಡು ಸಂಶಯ ಪಡುತ್ತಿದ್ದೇನೆಂದು ತನ್ನ ಬಗ್ಗೆ ನಾಚಿಕೆ ಆಯಿತು. ತಾನು ಎಂದೆಂದೂ ಮುಗ್ಧ ಸ್ಥಿತಿಯಲ್ಲಿ ಇದ್ದುದೇ ಇಲ್ಲ.ಸರಳನಾಗದೇ ಮುಕ್ತಿಯಿಲ್ಲ, ಸರಳನಾಗುವುದು ಈ ಪ್ರಪಂಚದಲ್ಲಿ ಇರುವ ತನಕ ತನಗೆ ಸಾಧ್ಯವಿಲ್ಲ. ಪರಮಹಂಸರು ಕಾಳಿಯ ಎದುರು ನೈವೇದ್ಯವಿಟ್ಟು, ತಾಯೀ ಇದನ್ನು ನೀನು ತಿನ್ನಲೇಬೇಕು ಎಂದು, ತಾಯಿ ಅಕ್ಷರಶಃ ನ್ಯೆವೇದ್ಯ ತಿನ್ನುವಳೆಂದು ನಂಬಿದ್ದರಾಗಿ, ಬಿಕ್ಕಿ ಬಿಕ್ಕಿ ಅಳುತ್ತಿರುವಾಗ ಕಪ್ಪು ಬೆಕ್ಕೊಂದು ಬಂದು ನ್ಯೆವೇದ್ಯವನ್ನು ತಿಂದಿತ್ತಂತೆ. ಆ ಕಪ್ಪು ಬೆಕ್ಕೇ ಕಾಳಿಯೆಂದು ಪರಮಹಂಸರು ತಿಳಿದುಬಿಟ್ಟರಂತೆ. ತಾನಾದರೋ ಅದನ್ನು ಒಂದು ಬೆಕ್ಕೆಂದೇ ಅಂದುಕೊಳ್ಳುತ್ತಿದ್ದೆ. ಹಾಗೆ ಅಂದುಕೊಳ್ಳುತ್ತಿದ್ದೆ ಎಂದು ತನಗೆ ಗಾಢವಾದ ವಿಷಾದವೂ ಇಲ್ಲ. ಯಾಕೆಂದರೆ ನಿಜವಾಗಿಯೂ ಅದೊಂದು ಕಪ್ಪಾದ ಬೆಕ್ಕೇ. ಇಲಿಯನ್ನು ಕಂಡಿದ್ದರೆ ಅದನ್ನೂ ಹಿಡಿದು ತಿನ್ನುತ್ತಿದ್ದ ಬೆಕ್ಕು. ನಾರಾಯಣನ ಹಾಗೆ, ತನ್ನಹಾಗೆ ತಿಳಿದುಬಿಟ್ಟವರಿಗೆ ಸರಳತೆಯಿಲ್ಲ, ದರ್ಶನವಿಲ್ಲ, ಬೆರಗಿಲ್ಲ, ಮಗುಚಿಕೊಳ್ಳುವುದು ಸಾದ್ಯವಿಲ್ಲ, ಸಂಸಾರದಲ್ಲಿ ತೃಪ್ತಿಯೂ ಇಲ್ಲ, ಪ್ರಪಂಚಕ್ಕೆ ಅತೀತವಾದ್ದನ್ನು ಪ್ರಪಂಚದವನಾಗಿದ್ದೇ ತಿಳಿಯಬೇಕೆಂಬ ಆ‌ಅಸೆ ಪಡದಂತೆ ಇರುವುದೂ ಸಾಧ್ಯವಿಲ್ಲ. ಅಂದರೆ ತನಗೆ ಸ್ವರ್ಗವೂ ಇಲ್ಲ, ನರಕವೂ ಇಲ್ಲ. ಇರುವುದೆಂದರೆ ಗೋಳು ಮಾತ್ರ. ನಾರಾಯಣ ವ್ಹಿಸ್ಕಿಯನ್ನು ಸೇವಿಸುತ್ತ ಧಾರಾಳವಾಗಿ ಅರಳಿಕೊಳ್ಳಲು ತೊಡಗಿದ್ದ: “ಈ ವ್ಯಸನವನ್ನು ಮಾತ್ರ ನಾನು ಅಮ್ಮನಿಂದ ಬಚ್ಚಿಟ್ಟಿದ್ದೇನೆ ಎಂದು ತಿಳಿದಿದ್ದೇನೆ. ಅಥವಾ ಹಾಗೆ ನಾನು ತಿಳಿದುಕೊಂಡಿರಲಿ ಎಂದು ಅಮ್ಮ ನಟಿಸುತ್ತಾರೆ. ನಾವು ಹೀಗೆಲ್ಲ ಆಗಿ ಬಿಟ್ಟಿದ್ದೀವಿ ಎಂದು ವ್ಯಸನಪಟ್ಟು ಪ್ರಯೋಜನವೂ ಇಲ್ಲವೋ, ದಿನಕರ. ಸುಮ್ಮನಿದ್ದು ಬಿಡಬೇಕು. ಸುಮ್ಮನಾಗಿ ಬಿಟ್ಟವರಿಗೆ ದೇವರ ಕೃಪೆ ತನ್ನಿಂದ ತಾನಾಗಿಯೇ ಒದಗಿ ಬಿಡುವುದು ಉಂಟಂತೆ. ಅದು ಇರಲಿ – ಶಾಸ್ತಿಗಳನ್ನು ನೋಡು. ಬಂಗಾರದಂಥ ಒಂದು ಹೆಂಡತಿಯನ್ನು ಹೊಡೆದೂ ಬಡೆದೂ ಅವಳೊಬ್ಬ ಮಲಯಾಳಿ ಪಂಡಿತರ ಜೊತೆ ಓಡಿ ಹೋಗುವಂತೆ ಮಾಡಿದರು. ಒಂದು ಪೆಟ್ಟಿಗೆಯ ತುಂಬ ಬಂಗಾರ ತುಂಬಿಕೊಂಡು ಅವಳು ಪರಾರಿಯಾಗಿಬಿಟ್ಟಳಂತೆ. ಆದರೆ ಅವಳಿಗೂ ಒಂದು ಸೂಳೆಯಿದೆ. ಹಿಂದಿನಿಂದ ಇದ್ದದ್ದು ಅದು. ತುಂಬ ಒಳ್ಳೆಯವಳು ಅವಳು ಅನ್ನು. ಅವಳ ಮಾತು ಕೇಳಿ ಇನ್ನೊಂದು ಮದುವೆಯಾದರು. ಹುಟ್ಟಿದ ಮಗಳೂ ಅಪ್ಪನ ಕಾಠಿಣ್ಯಕ್ಕೆ ಹೇಸಿ ಯಾರನ್ನೋ ಕಟ್ಟಿಕೊಂಡು ಓಡಿಹೋದಳು. ಹೀಗಾಗಿ ಶಾಸ್ತಿಗಳು ಈಗ ಪುರಾಣ ಪ್ರವಚನ ಮಾಡಿಕೊಂಡು ಅಲೀತಾರೆ. ಕರ್ಮ ಹೀಗೆ ಸವೆಯುತ್ತೆ ಅಂತ ತಿಳಿದಿದಾರೆ. ಹುಚ್ಚು ಬ್ರಾಹ್ಮಣ. ಹುಟ್ಟಿದ ಗುಣ ಸುಟ್ಟರೂ ಹೋಗಲ್ಲ ಅಂತ ಅದಕ್ಕೇ ಗಾದೆಯಿರೋದು. ಜನ ಕೂಡ ಅಂಥವರನ್ನು ಅವರು ಬದಲಾದರೂ ನಂಬದು. ಅವರೇ ಹೆಂಡತೀನ್ನ ಹೊಡೆದು ಸಾಯಿಸಿದ್ದು ಅಂತಾರೆ ಅವಳನ್ನು ಹುಗಿದ ಹೊಂಡದಲ್ಲಿ ನೆಟ್ಟ ಹಲಸಿನ ಮರದಲ್ಲಿ ಆ ಕಾರಣದಿಂದಾಗಿ ಫಲವಾಗಿಲ್ಲ ಎಂದು ಈ ಪ್ರಾಂತ್ಯದಲ್ಲೆಲ್ಲ ಪ್ರತೀತಿಯಿದೆ. ಬಂಗಾರವನ್ನು ಬಚ್ಚಿಟ್ಟು ಆಷಾಢಭೂತಿಯಾಗಿದ್ದಾನೆಂದೂ ಹೇಳುವ ಜನ ಇದ್ದಾರೆ – ಎನ್ನು.” ನಾರಾಯಣ ಮಾತಿನ ಗುಂಗಿನಲ್ಲೇ ಇದ್ದ. ಗಂಗೂವನ್ನು ಹೊಗಳಲು ತೊಡಗಿದ. “ನಾನು ಡ್ರಿಂಕ್ ತಗೋಳ್ತ ಇದ್ದದ್ದು ಗಂಗೂ ಮನೇಲೆ. ಚೀಟೀಲಿ ಬರೆದು ಕೊಟ್ಟರೆ ಸಾಕು, ಪಾಪ ಚಂದ್ರಪ್ಪ ವ್ಹಿಸ್ಕಿಯನ್ನೂ, ಐಸನ್ನೂ ತಂದುಬಿಡುತ್ತಿದ್ದ. ನಾನು ಗಂಗಿ ಮನೇಲಿ ಒಂದು ಫ್ರಿಜ್ಜನ್ನೂ ತಂದು ಇಟ್ಟೆ. ನಮ್ಮನೇಲಿ ಅಮ್ಮ ಫ್ರಿಜ್ಜು ಬೇಡವೇ ಬೇಡ ಅಂದರು. ಅಮ್ಮನಿಗೆ ಮುಸುರೆ ಮಡೀಲಿ ನಂಬಿಕೆ. ಆಯಿತ? ಗಂಗೂ ಮಗನಿಗೆ ನಾನಲ್ಲಿ ಹೋಗಿ ವ್ಹಿಸ್ಕಿ ಕುಡಿಯೋದು ಸರಿಕಾಣಲಿಲ್ಲಾಂತ ಕಾಣುತ್ತೆ. ಗಂಗೂ ತನ್ನಲ್ಲಿ ಬಂದು ಕುಡಿಯಬಾರದೆಂದು ಕಾಲು ಹಿಡಿದು ಅತ್ತುಬಿಟ್ಟಳು. ಆಯಿತಾ? ಕುಡಿಯೋದು ಬಿಟ್ಟ ಮೇಲೆ, ಅವಳ ಹತ್ತಿರ ಹೋಗಿ ಬರೋದು ನಿಂತಿತು. ಇಲ್ಲಿಗೆ ಬಂದು ಹೋಗುವ ಚಟ ಹತ್ತಿಕೊಂಡಿತು. ಇದನ್ನೇ ಸಂಸಾರ ಅನ್ನೋದು. ನಿನ್ನ ವಿಷಯ ನಾನು ಕೇಳಲೇ ಇಲ್ಲ. ಆದರೆ ಗಂಗೂ ಕೇಳಿದಳು. ಅವಳಿಗೇನು ಉತ್ತರ ಕೊಟ್ಟಿರಬಹುದು ನಾನು ಊಹಿಸು. ಅವನ ಹಾಗಿನ ಆರ್ಟಿಸ್ಟ್‌ಗಳು ಮದುವೆ ಗಿದುವೆ ಆಗದೆ ಆರಾಮಾಗಿ ಇದ್ದುಬಿಡ್ತಾರೇಂತ ಅಂದೆ.‘ ಪಾಪ ಅವರೂ ಏನೋ ದುಃಖದಲ್ಲಿದಾರೆ ಅಂತ ಗಂಗೂ ಅಂದು ಬಿಟ್ಟಳು.” ನಾರಾಯಣ ನಗಲು ತೊಡಗಿದ್ದ. ಅವನ ಒಳಮನಸ್ಸಿನ ಆಯಾಸವೆಲ್ಲವೂ ಪರಿಹಾರವಾದಂತೆ ಕಂಡಿತ್ತು.

ಅಧ್ಯಾಯ ೮

ಶಾಸ್ತಿಗಳು ಬಂದು ಕಾಯುತ್ತಿದ್ದರು. ತನಗೆ ಊಟಬೇಡವೆಂದು ನಾರಾಯಣ ತನ್ನ ಮಲಗುವ ಕೋಣೆಗೆ ಸೀದ ಹೋಗಿಬಿಟ್ಟ – ತಾಯಿಗೆ ತನ್ನ ಬಾಯಿವಾಸನೆ ಗೊತ್ತಾಗದೆ ಇರಲೆಂದು. ಆದರೆ ತಾಯಿ ಅವನಿಗಾಗಿ ಕುಟ್ಟವಲಕ್ಕಿಯನ್ನು ಮೊಸರಿನಲ್ಲಿ ಕಲಿಸಿ ಅವನು ಮಲಗಿದ್ದ ಕೋಣೆಗೇ ಕಳಿಸಿದರು. ಯಾಕೆ೦ದರೆ ಬೇಯಿಸಿದ ಮುಸುರೆಯನ್ನು ಅವರು ಕಲಿಸುವ೦ತಿರಲಿಲ್ಲ. ಆದರೆ ಮಗನನ್ನು ಉಪವಾಸದಲ್ಲಿ ಮಲಗಲು ಬಿಡುವುದು ಸಧ್ಯವೂ ಇರಲಿಲ್ಲ. ಶಾಸ್ತಿಗಳೂ ತಾವು ರಾತ್ರೆ ಹೊತ್ತು ಫಲಹಾರ ಮಾತ್ರ ಮಾಡುವುದು ಎಂದಾಗ, ಅವರಿಗೂ ಕುಟ್ಟವಲಕ್ಕಿ ಮೊಸರು ಕೊಟ್ಟು, ದಿನಕರನಿಗೂ ಮೊಮ್ಮಗ ಗೋಪಾಲನಿಗೂ ಅವರು ಮಾಡಿದ ಭಕ್ಷ್ಯಭೋಜ್ಯಗಳನ್ನೆಲ್ಲ ಬಡಿಸಿದರು. ಮಧ್ಯಾಹ್ನದ ಊಟಕ್ಕಿಂತ ಇದು ಬೇರೆಯಾಗಿತ್ತು. ಎಲೆಯ ಸುತ್ತಲೂ ಹಲವು ಪಲ್ಯಗಳು, ಕೋಸಂಬರಿ, ಹಪ್ಪಳ, ಸಂಡಿಗೆ, ಕೀರು, ತೊವ್ವೆ ಈ ವಸ್ತುಗಳನ್ನು ಶೃಂಗಾರವಾಗಿ, ಊಟದ ಮುನ್ಸೂಚನೆಯ ಪದಾರ್ಥಗಳಾಗಿ ಬಾಡಿಸಿದ ಕುಡಿ ಎಲೆ ಪಡೆದಿತ್ತು. ಮೊದಲು ತೋರದ ಪದಾರ್ಥಗಳೂ ಆಮೇಲೆ ಪ್ರತ್ಯಕ್ಷವಾಗಲಿದ್ದವು. ಸೀತಮ್ಮನಿಗೆ ಪ್ರಿಯವಾಗಲೆಂದು ಅವರ ಮೊಮ್ಮಗನಂತೆಯೇ ಎಲೆಯ ಸುತ್ತಲೂ ಪರಿಸಂಚನೆ ಕಟ್ಟಿ, ಆಪೋಶನ ತೆಗೆಡುಕೊಂಡು ಊಟ ಶುರುಮಾಡಿದ. “ನಿಮ್ಮ ಕಡೆಯ ಬ್ರಾಹ್ಮಣರಲ್ಲೂ ಈ ಪದ್ಧತಿಯಿದೆಯಲ್ಲವೆ?” ಎಂದು ಸೀತಮ್ಮ ಕೇಳಿದ್ದು ಅರ್ಥವಾಗದೆ ಗೋಪಾಲನ ಕಡೆ ನೋಡಿದ. ಗೋಪಾಲ ಪ್ರಶ್ನೆಯನ್ನು ವಿವರಿಸಿದ. ದಿನಕರ ಸೀತಮ್ಮನಿಗೆ ಹೂಂಗುಟ್ಟಿ ಶಾಸ್ತಿಗಳ ಕಡೆ ತಿರುಗಿ, “ನನಗೆ ಕುಟ್ಟವಕ್ಕಿ ಗೊತ್ತಾದ್ದು ಈ ಅಮ್ಮನಿಂದಲೇ, ನನ್ನ ಅಮ್ಮನೂ ಈ ಕಡೆಯವರು ಆದದ್ದು ಹೌದೆ ಆದರೆ, ನನಗೂ ಅವರದನ್ನು ತಿನ್ನಿಸಿರಬಹುದು” ಎಂದು ಹೇಳಿದ್ದ. ತನಗೆ ಪ್ರಿಯವೆಂದು ಈ ಭಕ್ಷ್ಯಭೋಜ್ಯಗಳ ನಡುವೆ ಕುಟ್ಟವಲಕ್ಕಿಯನ್ನು ಕೇಳಿದ್ದ. “ಅದರಿಂದಲೇ ಹೊಟ್ಟೆ ತುಂಬಿಸಿಕೊಂಡು ಬಿಡಬೇಡ. ವ್ರತ ಹಿಡಿದ ಮುದುಕರ ಫಲಹಾರ ಅದು” ಎಂದು ಒಂದು ಚೂರೇ ರುಚಿಗೆಂದು ದಿನಕರನಿಗೆ ಬಡಿಸಿದ್ದರು. ಶಾಸ್ತಿಗಳು ದಿನಕರ ಕುಟ್ಟವಲಕ್ಕಿ ತಿನ್ನುವುದನ್ನೇ ಮತ್ತೆ ನೋಡತೊಡಗಿದ್ದರು. “ಅದು ಯಾಕೆ ಆ ಮಾಣಿಯನ್ನ ತಿಂದುಹಾಕಿ ಬಿಡುವಂತೆ ನೋಡ್ತಾ ಇದೀರಿ?” ಎಂದು ಸೀತಮ್ಮ ನಗೆಯಾಡಿದ್ದು ಕೇಳಿ ಶಾಸ್ತಿಗಳು ಗಾಬರಿಗೊಂಡರು. ’ದೇವೀ, ಭಗವತೀ ನನ್ನ ಕಾಪಾಡು’ ಎಂದು ಜಪ ಮಾಡಿದರು. ’ಇವನನ್ನು ನೋಡಿದರೆ ಅವನ ಮುಖದಲ್ಲಿ ಪಂಡಿತನ ವರ್ಚಸ್ಸೇ ಕಂಡಂತಾಗುತ್ತದಲ್ಲ. ಅವನ ಕಣ್ಣುಗಳು ತಾಯಿಯದರ ಹಾಗಿವೆ. ಆದರೆ ಅವನ ಚೂಪಾದ ಮೂಗು, ಮುಖದ ಬಣ್ಣ, ಬಾಯಿ ಮುಚ್ಚಿಕೊಂಡ್ಡಿದ್ದಾಗ ಅವನ ತುಟಿಗಳು ಬಿಗಿ ಮುದ್ರೆಯಲ್ಲಿರುವಂತೆ ಕಾಣುವ ಅದರ ಗಡಸು ಎಲ್ಲ ಪಂಡಿತನ ಥರ ಹಾಗೆಯೇ ಇವೆಯಲ್ಲ. ಸಂಗೀತ ಕೇಳುತ್ತ ಆ ಪಂಡಿತ ಹಾಗೆಯೇ ಕೂತಿರುತ್ತಿದ್ದ. ಅವನಿಗೇ ಹುಟ್ಟಿದನೇ ಇವನು?’ ಎಂದು ಬಂಗಾರದ ಜೊತೆ ಪರಾರಿಯಾದ ಪಂಡಿತನ ಮೇಲಿನ ದ್ವೇಷ ಅಸೂಯೆಗಳನ್ನು ಮತ್ತೆ ಅನುಭವಿಸುತ್ತ ನೋಡಿದರು. ಇಲ್ಲ ಈ ಪುಟಾಣಿ ನನ್ನ ಮಗನೇ, ನಾನು ಈಳಿಡುತ್ತ ಹುಟ್ಟಿಸಿದವನು. ಆದರೆ ಕೋಮಲವಾದ ಅಂತಃಕರಣವನ್ನು ಯಾವ ಮಾಯೆಯಲ್ಲೋ ಪಡೆದವನು. ನನ್ನವನು, ಆದರೆ ನನ್ನವನಲ್ಲ. ನನ್ನ ವಂಶೋದ್ಧಾರಕ, ಆದರೆ ನನ್ನವನು ಆಗಲಾರ ಎಂದೆಲ್ಲ ಅಂದುಕೊಳ್ಳುತ್ತ ಈ ಅನುಮಾನಗಳಿಗೆ ಮುಕ್ತಾಯವೇ ಇಲ್ಲವೆ ಎಂದು ಹಲುಬತೊಡಗಿದ್ದರು. ನನ್ನ ನರಕಕ್ಕೆ ನಾನೊಬ್ಬನೇ ಹೋಗುವೆ. ಅಲ್ಲಿ ಅನಂತಕಾಲದವರೆಗೆ ಊಳಿಡುತ್ತಲೇ ಇರುವೆ. ಇದು ನನ್ನ ಕರ್ಮ ಎಂದು ನಿಟ್ಟುಸಿರಿಟ್ಟರು. ಈ ಮುದುಕನಿಗೆ ದಾರಿ ತೋರಿಸು ಭಗವತಿ, ನನ್ನ ಹೃದಯದಲ್ಲಿರುವ ಪಂಡಿತನ ಮೇಲಿನ ದ್ವೇಷವನ್ನು ಇಂಗಿಸು. ಪಾರು ಮಾಡು ಎಂದು ಜಪಿಸುತ್ತ ತಮ್ಮ ಫಲಾಹಾರ ಮುಗಿಸಿ ತನ್ನ ನಾಳೆಯನ್ನು ಎದುರುಗೊಳ್ಳಲು ರಾತ್ರೆಯೆಲ್ಲ ಕಾದರು. ಇವನನ್ನು ತನ್ನ ಪ್ರೇತಕಳೆಯ ಮನೆಗೆ ಕರೆದುಕೊಂಡು ಹೋಗಬೇಕೋ, ಬಾರದೋ ಎಂಬ ಸಂದಿಗ್ಧದಲ್ಲಿ ಅವರು ನಿದ್ದೆ ಮಾಡಲೇ ಇಲ್ಲ. ಮಾರನೇ ದಿನ ಅವನು ಎದ್ದವನೇ, “ಕೇರಳದಿಂದ ಹಿಂದಕ್ಕೆ ಬರುವಾಗ ನಿಮ್ಮಲ್ಲಿದ್ದು ಹೋಗುವೆ, ಆಗದಾ ಚಿಕ್ಕಪ್ಪ?” ಎಂದುಬಿಟ್ಟ. ಯಾಕೆ ಹಾಗೆ ಥಟ್ಟನೆ ಅವನಿಗೆ ಅನ್ನಿಸಬಿಡಬೇಕೋ? ಆದರೆ ಶಾಸ್ತಿಗಳ ಮನಸ್ಸು ಇದರಿಂದ ಹಗುರಾಯಿತು. “ದೇವಿಯ ಇಚ್ಛೆ ಹಾಗಿರಬೇಕು. ಮಗನನ್ನು ಮನೆಗೆ ಕರೆದೊಯ್ಯಲು ನನ್ನಲ್ಲಿ ಯೋಗ್ಯತೆ ಹುಟ್ಟಲು ಕಾಯಬೇಕು” ಎಂದುಕೊಂಡು ತಾನು ಬಂದಿದ್ದ ಕಾರಿನಲ್ಲಿ ಬೆಳಗಿನ ಫಲಹಾರ ಮುಗಿಸಿ ಹೊರಟುಹೋದರು. ತಾನು ಇನ್ನೂ ಹೆಚ್ಚುದಿನ ಬದುಕುವುದಿಲ್ಲ, ಬದುಕುವ ಆಸೆ ಕಳಕೊಳ್ಳುತ್ತಿದ್ದೇನೆ ಎಂದುಕೊಂಡು ರಾಧೆಯ ಮನೆಗೆ ಹೋದರು. ಯಾರು ನನ್ನ ಶ್ರಾದ್ಧ ಮಾಡುವುದು ಎಂದು ತನಗೇ ಕೇಳಿಕೊಂಡರು. ಸತ್ಯವಿದ್ದಂತೆ ಆಗಲಿ ಎಂದು ಪ್ರಶ್ನೆಯನ್ನು ದೇವರಿಗೆ ಬಿಡಲು ಪ್ರಯತ್ನಿಸಿದರು.

ಅಧ್ಯಾಯ ೯

ರಾತ್ರೆ ತನ್ನ ಕೋಣೆಗೆ ಹೋದ ದಿನಕರನಿಗೆ ನಿದ್ದೆ ಬರಲಿಲ್ಲ. ಎದ್ದು ಕೂತ. ವಾಕ್‌ಮನ್‌ನಿಂದ ಸಂಗೀತ ಕೇಳಿಸಿಕೊಳ್ಳಲು ಪ್ರಯತ್ನಿಸಿದ. ರುಚಿಸಲಿಲ್ಲ, ಟಿಬೆಟನ್ನರ ಪ್ರಾರ್ಥನೆ ಕೃತಕವೆನ್ನಿಸಿತ್ತು. ತನ್ನ ಹೃದಯದಲ್ಲಿ ಅದಕ್ಕೆ ಸ್ಪಂದನವಿರದೇ ಹೋಗಿತ್ತು. ಕಾಗದಗಳನ್ನು ಬರೆಯುವುದು ಎಂದುಕೊಂಡ. ಆದರೆ ತನ್ನ ಮೊದಲನೆಯ ಕಾಗದವನ್ನು ಅದನ್ನು ಎಂದೆಂದೂ ಓದದ ಮಹಾಮಾತೆಗೇ ಬರೆಯಬೇಕಾಗಿತ್ತು. ಹೀಗೆ ತನಗಾಗಿ ಒಂದು ಪತ್ರವನ್ನು ತನ್ನಿಂದಲೇ ಮಹಾಮಾತೆಯಾಗಿಬಿಟ್ಟು ಓದಲಾರದ ಇನ್ನೊಬ್ಬಳಿಗೆ ಬರೆಯುವುದೇ ತನ್ನ ಅಬ್ಸರ್ಡಿಟಿಗೆ ಸೂಚಕವಾಗಿತ್ತು. ಈ ಪತ್ರವನ್ನು ಇಂಗ್ಲಿಷಿನಲ್ಲೇ ಬರೆಯಲು ಹೊರಟು ’ಡಿಯರ್ ಶ್ರೀಮತಿ ಮಹಾಮಾತೆ’ ಎಂದು ಶುರು ಮಾಡಿ, ನಕ್ಕು, ಹೊಡೆದುಹಾಕಿ ’ಡಿಯರ್ ಮಹಾಮಾತೆ’ ಎಂದು ಇನ್ನೊಮ್ಮೆ ಇನ್ನೊಂದು ಕಾಗದದ ಮೇಲೆ ಶುರುಮಾಡಿದ. ಮೇಲೆ ಮಹಾಮಾತೆಗೆ ಪ್ರಿಯವಾಗಲೆಂದು ’ಓಂ ನಮೋ ಭಗವತಿ’ ಎಂದು ದೇವನಾಗರಿಯಲ್ಲಿ ಬರೆದ.

‘ಡಿಯರ್ ಮಹಾಮಾತೆ’, ನನ್ನ ಕಷ್ಟದ ಕಾಲದಲ್ಲಿ ನಾನು ನಿನ್ನನ್ನೂ ಗಂಗೂನನ್ನು ನನ್ನ ಮನಸ್ಸಿನಲ್ಲೇ ಹುಡುಕಲು ತೊಡಗಿದ್ದಾಗ, ನಿನ್ನ ಬಗ್ಗೆ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿ ಬಂದಿದ್ದ ವೃತ್ತಾಂತವನ್ನು ಓದಿದೆ. ಅದು ನೀನೇ ಇರಬೇಕೆಂದು ಖಚಿತವಾಗಿಬಿಟ್ಟಿತು. ಯಾಕೆಂದರೆ ಆ ವೃತ್ತಾಂತ ಹೀಗೆ ಶುರುವಾಗಿತ್ತು: ಒಂದು ರಾತ್ರೆ ರೈಲಿನಲ್ಲಿ ನೀನು ಕಾಶಿಗೆ ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ನಿನಗೆ ಕಾಣುವಂತೆ ಮಲಗಿದ್ದ ಒಬ್ಬ ಸ್ಫುರದ್ರೂಪಿ ಯುವಕನನ್ನು ನೋಡಿದಿ. ಆಗ ನಿನಗೆ ನಿನ್ನ ಹಿ೦ದಿನ ಜನ್ಮದಲ್ಲಿ ರಾಧೆಯಗಿ ಹುಟ್ಟಿದ್ದು ನೆನಪಾಗಿಬಿಟ್ಟಿತು. ದಿವ್ಯಪ್ರೇಮ ನಿನ್ನಲ್ಲಿ ಇದ್ದಕ್ಕಿದ್ದ೦ತೆ ಸ್ಫುರಿಸಿಬಿಟ್ಟಿತು. ನೀನು ನಿಸ್ಸಹಾಯಕಳಾಗಿ ಬಿಟ್ಟೆ. ಭವದ ನಿನ್ನ ಶರೀರಕ್ಕೆ ಅದನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ನಿನ್ನ ಜೊತೆಯಲ್ಲಿ ತಂದೆಯಿದ್ದಾರೆಂಬುವುದನ್ನೂ ಮರೆತುಬಿಟ್ಟೆ. ಯಾವುದೋ ನಿಲ್ದಾಣದಲ್ಲಿ ಒಂದು ಕ್ಷಣ ನಿಂತಿದ್ದ ರೈಲಿನಿಂದ ನೀನು ಉಟ್ಟಬಟ್ಟೆಯಲ್ಲೇ ಇಳಿದುಬಿಟ್ಟೆ. ಪರಿವ್ರಾಜಕೆಯಂತೆ ಅಲೆಯಲು ತೊಡಗಿದಿ. ಹೀಗೆ ಅಲೆಯುತ್ತಲೇ ಇದ್ದಾಗ ಒಂದು ಅರಳಿಮರದ ಕೆಳಗೆ ಬಳಲಿ ಕೂತಿದ್ದಿ. ಕೊಳಲೂದುತ್ತಿದ್ದ ಒಬ್ಬ ಗೊಲ್ಲನನ್ನು ಕಂಡಿ. ಅವನು ಕೂಡ ನೀನು ರೈಲಿನಲ್ಲಿ ಕಂಡವನಂತೆಯೇ ನಿನ್ನ ಭವಾವಳಿಯಿಂದ ನಿನ್ನನ್ನು ಬಿಡುಗಡೆ ಮಾಡಲು ಕಾಣಿಸಿಕೊಂಡ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಆಗಿದ್ದ. ನೀನು ಅವನ ಕೊಳಲನಾದ ಕೇಳುತ್ತ ಇಹದಿಂದ ಮುಕ್ತಳಾಗಿ ಸಾಕ್ಷಾತ್ ರಾಧೆಯಾಗಿಯೇ ಬಿಟ್ಟೆ. ಹೀಗೆ ನಿನ್ನ ವೃತ್ತಾಂತ ಅದರಲ್ಲಿತ್ತು. ಜೊತೆಗೇ ಅದರಲ್ಲಿ ನಿನ್ನ ಸದ್ಯದ ರೂಪದ ಚಿತ್ರಗಳು ಕೂಡ ಇದ್ದವು. ನನಗೆ ಮಾತ್ರ ನಿನ್ನ ಕಣ್ಣುಗಳಲ್ಲಿ ಇನ್ನೂ ಉಳಿದೇ ಬಿಟ್ಟಿದ್ದ ಹಿಂದಿನ ತುಂಟತನ ಕಂಡುಬಿಟ್ಟಿತು. ಡಿಯರ್ ಮಹಾಮಾತೆ, ಈ ಭವದಲ್ಲಿ ನೀನು ಪ್ರಥಮ ಪ್ರಣಯದ ಅನುಭವ ಪಡೆದದ್ದು ಕೃಷ್ಣನನ್ನು ಕಂಡು ಅಲ್ಲ – ಈಗ ಕಳವಳದಲ್ಲಿ ತೊಳಲಾಡುತ್ತಿರುವ ಈ ನನ್ನನ್ನು ನೋಡಿಯೇ. ನೆನಪಿಸುವೆ, ಕೇಳಿಸಿಕೋ. ಇಪ್ಪತ್ತನಾಲ್ಕು ವರ್ಷಗಳ ಕೆಳಗೆ ನೀನು ಹದಿನೆಂಟು ವರ್ಷದ ಹುಡುಗಿಯಿದ್ದಿರಬೇಕು. ಅಂದು ನಾನು ಅಕಸ್ಮಾತ್ ಎರಡನೇ ದರ್ಜೆಯಲ್ಲಿ ಪ್ರಯಾಣ ಮಾಡಬೇಕಾಗಿ ಬಂದಿತ್ತು. ನೀನು ಮೇಲಿನ ಸೀಟಿನಲ್ಲಿ ಮಲಗಿದ್ದೆ. ನಿನ್ನ ತಂದೆ ಕೆಳಗಿನದರಲ್ಲಿ ಮಲಗಿದ್ದರು. ಆಮೇಲೆ ನೀನೇ ನನಗೆ ಹೇಳಿದಂತೆ ಗಂಡನ ಜೊತೆ ಬಾಳ್ವೆ ಮಾಡಲಿಲ್ಲವೆಂದು ಹಠ ಹಿಡಿದ ನಿನ್ನ ಗ್ರಹಚಾರ ಕಳೆಯಲಿ ಎಂದು ಕಾಶಿಗೆ ನಿನ್ನ ತಂದೆ ನಿನ್ನನ್ನು ಕರೆದುಕೊಂಡು ಬಂದಿದ್ದರು. (ಕಾಲೇಜು ಓದುತ್ತಿದ್ದ ಹುಡುಗಿಯಾದ್ದರಿಂದ ನೀನು ನನಗೆ ಇದನ್ನೆಲ್ಲ ನಿನ್ನ ಮುದ್ದಾದ ಹರಕು ಮುರುಕು ಇಂಗ್ಲೀಷಿನಲ್ಲೇ ಹೇಳಿದ್ದಿ.) ಮುಖ್ಯ ವಿಷಯಕ್ಕೆ ಬರುವೆ. ನೀನು ನನಗೆ ಕಾಣುವಂತೆ ಕಿಟಿಕಿಯ ಪಕ್ಕದ ಸೀಟಿನಲ್ಲಿ ನಾನು ಮಲಗಿದ್ದೆ. ನೀನು ಮಲಗಿದ್ದ ಅಪ್ಪರ್ ಬರ್ತಿನ ಸರಪಳಿಯ ಕೊಂಡಿಯನ್ನು ಸರಿಯಾಗಿ ಸಿಕ್ಕಿಸಿರಲಿಲ್ಲವೆಂಬ ನನ್ನ ಆತಂಕ ನಿನ್ನನ್ನು ಚೆನ್ನಾಗಿ ನೋಡಲು ನೆವವಾಯಿತು. ನೀನು ಕೂಡ ಎರಡು ಕಣ್ಣುಗಳಲ್ಲೂ ನನ್ನನ್ನು ತುಂಬಿಕೊಳ್ಳುವಂತೆ ನೋಡಲು ತೊಡಗಿದ್ದಿ. ನಿನ್ನ ಅಪ್ಪ ನನ್ನನ್ನು ಸಂಶಯದಲ್ಲಿ ನೋಡುತ್ತ ಮಲಗಿದ್ದರೆಂಬುದು ನಿನಗೆ ಗೊತ್ತಿರಲಿಲ್ಲ. ಬಾಯನ್ನು ಅಲ್ಲಾಡಿಸುತ್ತ ತುಟಿಗಳನ್ನು ಮೃದುವಾಗಿ ಕಡೆದುಕೊಳ್ಳತೊಡಗಿದಿ – ಸುಳ್ಳು ಸುಳ್ಳೇ ಏನನ್ನೋ ತಿನ್ನುತ್ತಿರುವ ನೆವದಲ್ಲಿ. ನಿನ್ನ ಮೊಲೆಗಳು ನಿನಗೇ ಭಾರವೆಂಬಂತೆ ನಿನ್ನ ಕೈಗಳಿಂದ ಅವುಗಳನ್ನು ತುಸು ಎತ್ತುವಂತೆ ನಟಿಸಿದಿ. ಹೊದಿಕೆಯ ಒಳಗೆ ಕೈ ಹಾಕಿ ಸೆಖೆ ಎಂಬಂತೆ ಫ್ಯಾನಿನ ಕಡೆ ನೋಡುತ್ತ ನಿನ್ನ ಕುಪ್ಪಸದ ಗುಂಡಿಗಳನ್ನು ಬಿಚ್ಚಿದಿ. ತಲೆಗೂದಲನ್ನು ನೇವರಿಸಿದಿ. ನಿನ್ನ ತುಟಿಗಳನ್ನು ನನಗೆ ಕಡಿಯಬೇಕೆಂದೆನಿಸಿದ್ದು ನಿನಗೆ ಗೊತ್ತಾದಂತೆ ಕಣ್ಣನ್ನು ಮಿಟುಕಿಸಿಯೇಬಿಟ್ಟಿ. ಬಹಳ ತುಂಟು ಕಣ್ಣು ನಿನ್ನದು. ತನ್ನಷ್ಟಕ್ಕೆ ನಗುವ ಕಣ್ಣು ನಿನ್ನದು. ಇವತ್ತೂ ನಿನ್ನ ಕಣ್ಣುಗಳು ಹಾಗೇ ಇವೆ. ಒಂದು ವರ್ಷದ ಹಿಂದೆ ಗಂಗೂ ಎಂಬ ಒಬ್ಬ ಹುಡುಗಿಯನ್ನು ದೇಹಗಳು ಬೆರೆತು ಕರಗಿಹೋಗುವಂತೆ ನಾನು ಪ್ರೀತಿಸಿದ್ದರ ನೆನಪು ಮರುಕಳಿಸಿತ್ತು. ನಿನ್ನನ್ನು ತಿಂದುಬಿಡುವಂತೆ ನೋಡುತ್ತ, ನಿನ್ನ ಬರ್ತ್ ಕೊಂಡಿಯಿಲ್ಲದೆ ಕಳಚೀತೆಂಬ ನನ್ನ ಆತಂಕವೇ ಕಾರಣವೆಂಬಂತೆ, ನಾನು ಎದ್ದು ನಿಂತು ನಿನ್ನ ತೊಡೆಗಳನ್ನು ಮುಟ್ಟುವಂತೆ ನನ್ನ ಎಡಗೈ ಸೋಕಿಸಹೋದಾಗ, ನೀನೂ ನನ್ನ ಕೈಗಳಿಂದ ಮುಟ್ಟಿಸಿಕೊಳ್ಳುವಂತೆ ಮಗ್ಗುಲಾಗಿ ನಿನ್ನ ಬಲತೊಡೆಯನ್ನು ನನ್ನ ಎಡಗೈಗೆ ಒತ್ತಿದಿ. ನೀನು ಮಲಗಿದ್ದ ಬರ್ತ್‌ನ್ನು ಎದ್ದುನಿಂತು ಮೇಲಕ್ಕೆ ಎತ್ತಿ ಕೊಂಡಿಸಿಕ್ಕಿಸುತ್ತಿದ್ದ ನನ್ನನ್ನು ನಿನ್ನ ಅಪ್ಪ ’ಏಯ್’ ಎಂದು ಹೊದಿಕೆ ಎಸೆದು ಎದ್ದುನಿಂತು ಹೊಡೆದು ಕಿರುಚಾಡತೊಡಗಿದರು. ಆತಂಕದಲ್ಲಿ ನಿನ್ನ ಬರ್ತನ್ನೆತ್ತಿ ಕೊಂಡಿ ಸಿಕ್ಕಿಸುತ್ತಿದ್ದವನೊಬ್ಬನ (ಆಧುನಿಕ ಆಕರ್ಷಕ ವೇಷದವನೊಬ್ಬನಾದ ನನ್ನಂಥವನ) ಈ ಅಪರೂಪದ ಪರೋಪಕಾರಿ ಭಾವವನ್ನು ಮೆಚ್ಚಿಕೊಂಡಿದ್ದ ಇತರ ಪ್ರಯಾಣಿಕರು ಸದಾ ಉರಿಮುಖದವರಾಗಿದ್ದ ನಿನ್ನ ಅಪ್ಪನಿಗೆ ಛೀಮಾರಿ ಹಾಕಿದರು. ಇದನ್ನೆಲ್ಲ ತುಂಟತನದಿಂದ ನೋಡುತ್ತಿದ್ದ ನೀನು ಮಾತಿಲ್ಲದೆ ನನ್ನ ಜೊತೆ ಒಂದು ಒಪ್ಪಂದಕ್ಕೆ ಬಂದಿದ್ದಿಯೆಂದು ನನಗೆ ಗೊತ್ತಾಗಿಬಿಟ್ಟಿತ್ತು. ಸ್ತೀಹೃದಯ ತಿಳಿಯುವುದರಲ್ಲಿ ಈ ನನ್ನ ಈಗಿನ ಅಯ್ಯಪ್ಪ ವೇಷದಲ್ಲೂ ನಾನು ನಿಷ್ಣಾತ. ಇರಲಿ. ನಾನು ವಿನಾಕಾರಣ ನಿನ್ನ ಅನಾಗರಿಕ ತಂದೆಯಿಂದ ಅವಮಾನಿತನಾದವನಂತೆಯೂ, ಆದರೆ ನಿನ್ನ ಮೂರ್ಖ ಅಪ್ಪನನ್ನು ಕ್ಷಮಿಸಿದವನಂತೆಯೂ ನಟಿಸಿದ್ದೆ. ಎಲ್ಲರೂ ದೀಪವಾರಿಸಿದ ಮೇಲೆ ನೀನು ಮೆತ್ತಗೆ ಎದ್ದು ಹೋದಿ. ನೀನು ಎಲ್ಲಿಗೆ ಹೋಗಿದ್ದಿಯೆಂಬುದನ್ನು ಊಹಿಸಿದ್ದ ನಾನೂ ಎದ್ದುಹೋಗಿ ಸೀದ ಟಾಯ್ಲೆಟ್ಟಿನ ಬಾಗಿಲು ತಳ್ಳಿದೆ. ಅದರೊಳಗೆ ಇದ್ದ ನೀನು ನನ್ನನ್ನು ತಬ್ಬಿಕೊಂಡೆ. ನೀನು ನಿನ್ನ ಕುಪ್ಪಸದ ಗುಂಡಿಗಳನ್ನು ಮಾತ್ರ ತೆರೆದದ್ದಲ್ಲ; ಟಾಯ್‌ಲೆಟ್ಟಿನಲ್ಲಿ ಅದೆಷ್ಟು ವೇಗವಾಗಿ ನಿನ್ನ ಮೊಲೆಕಟ್ಟನ್ನೂ ಬಿಚ್ಚಿ ಸೊಂಟಕ್ಕೆ ಸಿಕ್ಕಿಸಿದ್ದಿ. ಅಲ್ಲಿನ ಉಚ್ಚೆ ವಾಸನೆಯನ್ನು ನಾವಿಬ್ಬರೂ ಗಮನಿಸಲೇ ಇಲ್ಲ. ನಾನು ನಿನ್ನ ತುಟಿಗಳನ್ನು ಕಚ್ಚತೊಡಗಿದ್ದೆ. ನೀನು ಬಿಡಿಸಿಕೊಂಡು ನನ್ನ ಕಿವಿಯನ್ನೂ ಮುಖವನ್ನೂ ಕಚ್ಚುತ್ತ, ನಿನ್ನ ಎದೆಗೆ ನನ್ನ ಕೈಗಳನ್ನು ಇಟ್ಟುಕೊಂಡು ನನಗೆ ಹೇಳಿದಿ. ಹೀಗೆ: ನೀನು ಕಾಲೇಜು ಓದುವ ಹುಡುಗಿಯಾಗಿದ್ದಿ. ನಿನಗೆ ಒತ್ತಾಯದಿಂದ ಮಾಡಿದ್ಡ ಮದುವೆ ನಿನಗೆ ಇಷ್ಟವಿರಲಿಲ್ಲ. ನನ್ನ ಜೊತೆ ಕರೆದಲ್ಲಿಗೆ ಬಂದು ಬಿಡುವಿ ಎಂದಿ. ಪ್ರೇಮದ ಉತ್ಕರ್ಷದ ನಿನ್ನ ಮೂರ್ಖತನದಲ್ಲಿ ನೀನು ದೇವಿಯಂತೆ ನನಗೆ ಕಂಡಿ. ರೈಲು ಯಾವುದೋ ಸ್ಟೇಶನ್ನಿನಲ್ಲಿ ಬಂದು ನಿಲ್ಲುವಂತೆ ಸ್ಲೋ ಆಗುತ್ತ ಹೋಯಿತು. ಇಲ್ಲೇ ನಾವಿಬ್ಬರೂ ಇಳಿದು ಪರಾರಿಯಾಗೋಣ ಎಂದಿ. ನಿನ್ನನ್ನು ಮೋಹಿಸಿದ್ದರೂ ನನಗೆ ಅಂಥ ಧೈರ್ಯವಿರಲಿಲ್ಲ. ಆದರೆ ಅದೂ ಒಂದು ಪ್ರಣಯಕೇಳಿಯ ಪೂರ್ವಭಾವಿ ಸಿದ್ಧತೆಯೆಂದುಕೊಂಡು ’ಆಗಬಹುದು’ ಎಂದು ನಿನ್ನನ್ನು ತಡಕಾಡತೊಡಗಿದ್ದೆ. ನೀನು ಮಾತ್ರ ಹುಚ್ಚು ಹುಡುಗಿ. ಇಳಿದೇಬಿಟ್ಟೆ. ಕ್ಷಣ ಮಾತ್ರ ನಿಂತಿದ್ದ ರೈಲು ಹೊರಟುಬಿಟ್ಟಿತು. ಆಮೇಲೆ ನಿನ್ನನ್ನು ಕಾಣದೆ ನಿನ್ನ ಅಪ್ಪ ಗೋಳಾಡುತ್ತ ಗಂಟುಮೂಟೆ ಹೊತ್ತು ಮುಂದಿನ ಸ್ಟೇಶನ್ನಿನಲ್ಲಿ ಇಳಿದುಬಿಟ್ಟಾಗ ನನಗೇನು ಮಾಡಬೇಕು ತೋಚದೆ ನಾನು ಸುಮ್ಮನಾಗಿಬಿಟ್ಟೆ. ಗಂಗೂ ನಂತರ ನನ್ನ ಎರಡನೇ ಸೋಲು ಇದು. ನಾನು ಯಾರನ್ನೂ ಪ್ರೀತಿಸಲಾರೆನೇನೋ ಎಂದು ನನ್ನ ಆತ್ಮರತವಾದ ವ್ಯಕ್ತಿತ್ವದ ಬಗ್ಗೆಯೇ ಈ ಘಟನೆಯ ನಂತರ ಅನುಮಾನ ಪಟ್ಟು ನರಳತೊಡಗಿದೆ. ಈಗಲೂ ಅದೇ ನರಳಾಟದಿಂದ ಪಾರಾಗದ ನಾನು ನಿನಗೆ ಈ ಪತ್ರ ಬರೆಯುತ್ತಿದ್ದೇನೆ. ಬಹಳ ವರ್ಷಗಳಾದ ಮೇಲೆ ನಾನೊಬ್ಬ ಖ್ಯಾತ ವ್ಯಕ್ತಿಯಾದೆ. ಹಲವು ಪ್ರಣಯಗಳ ನಂತರ ಒಬ್ಬಳನ್ನು ಮದುವೆಯಾದೆ. ಆಮೇಲೆ ನಾನಿಲ್ಲದಾಗ ಇನ್ನೊಬ್ಬನ ತೋಳಿನಲ್ಲಿ ನನ್ನ ತೋಳಿನಲ್ಲಿರುವುದಕ್ಕಿಂತ ಹೆಚ್ಚಿನ ಸುಖ ಗಿಟ್ಟಿಸಿಕೊಳ್ಳುತ್ತಿದ್ದ ನನ್ನ ಹೆಂಡತಿಯ ಘಾತುಕತನದಿಂತ ಕ್ರುದ್ಧನಾಗಿ, ಅವಮಾನಿತನಾದೆ. ಅವಳಿಗೆಷ್ಟು ನನ್ನ ಬಂಗಾರ ಕೊಟ್ಟರೆ ಅವಳು ನನ್ನನ್ನು ಬಿಟ್ಟಾಳು ಎಂಬ ವ್ಯವಹಾರದಲ್ಲಿ ನಮ್ಮ ಜಗಳ ಬೆಳೆಯುತ್ತ ಹೋದಂತೆ ಹೇಸಿದೆ. ಹೇಸಿದೆ ಮಾತ್ರ – ಹೊರಳಲಿಲ್ಲ. ಯಾಕೆಂದರೆ ನನ್ನ ಹೆಂಡತಿ ನನ್ನ ಆಸ್ತಿಗಾಗಿ ನನ್ನನ್ನು ಮದುವೆಯಾಗಿ ಇನ್ನೊಂದು ಸಂಬಂಧ ಇಟ್ಟುಕೊಂಡಂತೆಯೇ, ಗ್ಲಾಮರ್ ವರ್ಲ್ಡ್‌ನ ನಾನು ಗ್ಲಾಮರ್ ವರ್ಲ್ಡ್‌ನ ಅವಳನ್ನು ಮದುವೆಯಾಗಿ ಇನ್ನೂ ಹಲವು ಲಘು ಸಂಬಂಧಗಳನ್ನೂ ಸರ್ಕಸ್ಸಿನ ಟೈಟ್‌ರೋಪ್ ವಾಕರ್‍ನಂತೆ ನಿರ್ವಹಿಸಿದ್ದೆ. ನಾನು ಯಾರು, ನನ್ನ ಸತ್ಯವೇನು? ಎಂದು ತಿಳಿಯದ್ದರಿಂದಲೇ ಈ ಭವದ ದಿಗ್ಬಂಧನಗಳ ಭ್ರಮೆಗೆ ನಾನು ಒಳಗಾಗಿರುವುದು ಎಂದು ನೀನು ಹೇಳೀಯ. ಅದು ನನಗೆ ಗೊತ್ತು. ಆದರೆ ಈ ಸತ್ಯ ಸದಾ ನನಗೆ ತಿಳಿದಿದ್ದರೂ ಭ್ರಮೆಯಲ್ಲಿರುವ ತರಳೆ ನನಗೆ ಪ್ರಿಯಕರವಾಗಿಯೂ ಇತ್ತು. ಇವಳಿಗೆ ಕೊಟ್ಟ ಹೊತ್ತನ್ನು ಮರೆತು ಇನ್ನೊಬ್ಬಳಿಗೆ ಅದೇ ಹೊತ್ತನ್ನು ಗೊತ್ತು ಮಾಡುವುದು, ಇವಳ ಕೋಪ ಶಮನವಾಗಲೆಂದು ಅವಳಿಗೆ ಮೋಸ ಮಾಡುವುದು, ಇಂಥ ಕೋಪಾವೇಶಗಳನ್ನು ಉಂಟುಮಾಡುತ್ತ ಕಾಮಕೇಳೀಯ ವಿಧವಿಧದ ಸೊಗಸುಗಳ ಅನುಭವಕ್ಕೆ ವಿರಹತಾಪವನ್ನು ಒಗ್ಗರಣೆ ಮಾಡಿಕೊಳ್ಳುವುದು ನನ್ನ ಹವ್ಯಾಸವಾಗಿತ್ತು. ಅದರಿಂದ ನನ್ನಲ್ಲಿ ಉಂಟಾಗುತ್ತಲೇ ಹೋದ ಸುಸ್ತು, ನನ್ನ ಒಳಗಿಂದ ಇನ್ನೊಂದು ನಾದವನ್ನು ಕ್ಷೀಣವಾಗಿ ಕೇಳಿಸುವಂತೆಯೂ ಮಾಡಿತ್ತು. ನನ್ನ ಹೆಂಡತಿಯ ಜೊತೆ ಇರಲಾರದೆ, ಬಿಡಲೂ ಆರದೆ ಒಂದು ದಿನ ಸಜ್ಜನಿಕೆಯಲ್ಲಿ ಅವಳ ಜೊತೆ ತಾಜ್ ಕಾಂಟಿನೆಂಟಲ್‌ನಲ್ಲಿ ಸೊಗಸಾದ ಅರೋಮಾದ ಡಾರ್ಜೆಲಿಂಗ್ ಚಹಾ ಕುಡಿಯುತ್ತಿದ್ದವನು ಸೀದಾ ಬ್ಯಾಂಕಿಗೆ ಹೋಗಿ ಸೇಫ್ ಡಿಪಾಸಿಟ್ಟಿನಿಂದ ನನ್ನ ತಾಯಿ ಬಿಟ್ಟುಹೋದ ಬಂಗಾರದ ಕೆಲವು ಗಟ್ಟಿಗಳನ್ನು ಎತ್ತಿತಂದು ಸುಮಾರು ಇಪ್ಪತ್ತು ಲಕ್ಷಗಳು ಬೆಲೆಬಾಳುವ ಬಂಗಾರವನ್ನು ಅವಳಿಗೆ ಆಶ್ಚರ್ಯವಾಗುವಂತೆ ಕೊಟ್ಟುಬಿಟ್ಟೆ. ಅವಳ ಮುಖ ಅರಳಿದ್ದನ್ನು ಯಾವತ್ತೂ ಮರೆಯಲಾರೆ. ಮುಗ್ಧ ಮಗುವಿನ ಖುಷಿಯನ್ನು ಅವಳಲ್ಲಿ ಕಂಡೆ. ಬಂಗಾರ ಅವಳಲ್ಲಿ ಹೀಗೆ ಉಂಟು ಮಾಡಿದ ಭ್ರಮೆಯ ವಿಲಾಸಕಂಡು ನನ್ನ ಕರುಳು ಮಿಡಿಯಿತು. ಅವಳ ಮೇಲಿದ್ದ ದ್ವೇಷವೆಲ್ಲ ಕಳೆದುಹೋಯಿತೆನ್ನಿಸಿತ್ತು. ಆದರೆ ಮೊದಲ ಬಾರಿ ಅವಳ ಪ್ರಣಯ ಕೇಳಿಯನ್ನು ಖುದ್ದು ಕೇಳಿಸಿಕೊಂಡಿದ್ದು ನೆನಪಾದಾಗಲೆಲ್ಲಾ ಮತ್ತೆ ಆ ದ್ವೇಷ ಮರುಕಳಿಸಿದ್ದಿದೆ. ನಾನು ನನ್ನ ಫ್ಲಾಟಿನ ಬಾಗಿಲನ್ನು ನನ್ನ ಕೀನಿಂದ ತೆರೆದು ಡ್ರಾಯಿಂಗ್ ರೂಮಿನಲ್ಲಿ ಸದ್ದಿಲ್ಲದೆ ನಿಂತಾಗ ಸಂಜೆಹೊತ್ತು ಅವಳು ಪರಮ ಸುಖದಲ್ಲಿ ನರಳುತ್ತಿದ್ದಳು. ಅವಳ ಮಿಂಡ, ಒಬ್ಬ ಯಃಕಶ್ಚಿತ್ ಎಂಜಿನಿಯರು. ಇಬ್ಬರೂ ಗದ್ಗದವಾದ ಗಂಟಲಿನಲ್ಲಿ ಪಶುವಿನ ವಿಚಿತ್ರ ಸ್ವರವನ್ನು ಹೊರಡಿಸುತ್ತ ತಣಿಯುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದಂತೆ, ನಾನು ಇನ್ನು ತಾಳಲಾರೆ, ಅವಳನ್ನು ಅಡಿಗೆಮನೆಯ ಚಾಕುವಿನಿಂದ ನುರಿದು ಸಾಯಸಬೇಕು ಎನ್ನಿಸಿತ್ತು. ತನ್ನ ಹೆಣ್ಣು ಇನೊಬ್ಬನಿಂದ ತಾನು ಮಾಡಿದ್ದನ್ನೇ ಮಾಡಿಸಿಕೊಳ್ಳುತ್ತಾಳೆ ಎಂಬುದು ಮಹಾ ಕಾಮುಕರಿಗೂ ಬೆರಗಿನ ವಿಷಯವಾಗಿರುತ್ತದೆ. ಈ ಬೆರಗಿನಲ್ಲೂ ಬಿಡುಗಡೆ ಸಾಧ್ಯವಾಗಬಹುದಲ್ಲವೆ? ಅಂತೂ ಅವಳು ಬಂಗಾರದ ಭ್ರಮೆಯಲ್ಲಿ ಹಿಗ್ಗಿದ ದೃಶ್ಯದಲ್ಲಿ ನನ್ನ ಬಿಡುಗಡೆಯ ಮುನ್ಸೂಚನೆ ಕಂಡಂತಾಗಿ ನಾನು ವ್ರತದ ಈ ವೇಷವನ್ನು ತೊಟ್ಟು, ನನ್ನ ಕೆಲಸಗಳನ್ನೆಲ್ಲ ಮುಂದೆ ಹಾಕಿ, ಮೂರು ತಿಂಗಳಿಂದ ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಅಲೆಯುತ್ತ, ಮನಸ್ಸು ತಣಿಯದಿದ್ದಾಗ, ನಿನ್ನ ಬಗ್ಗೆ ವರದಿ ಓದಿದ್ದೆ. ಮತ್ತೇನೋ ಬಿಡುಗಡೆಯ ಭರವಸೆ ಹುಟ್ಟಿತ್ತು. ನೀನು ಆಶ್ರಮ ಮಾಡಿಕೊಂಡು ಇರುವ ಜಗತ್ಪ್ರಸಿದ್ದವಾದ ಮದ್ರಾಸಿನ ಹತ್ತಿರದ ನಿನ್ನ ಹಳ್ಳಿಗೆ ಒಂದು ವಾರದ ಹಿಂದೆ ಬಂದೆ. ಅದೆಷ್ಟು ಜನ. ಅದೇನು ಸಂಭ್ರಮ. ಎಲ್ಲೆಲ್ಲೂ ನಿನ್ನ ಬಣ್ಣ ಕಟ್ಟಿದ ಚಿತ್ರಗಳು, ನಿನ್ನ ಚಿತ್ರಗಳಿದ್ದ ಬಟ್ಟೆಗಳು, ನಿನ್ನ ಚಿತ್ರಗಳಿದ್ದ ಸ್ಟಿಕರ್‍ಸ್, ನಿನ್ನ ಚಿತ್ರಗಳಿದ್ದ ತಟ್ಟೆಗಳು – ನಿನ್ನ ಆಶ್ರಮದ ಹೊರವಲಯ ಒಂದು ಅಧುನಿಕ ಸೂಪರ್ ಮಾರ್ಕೆಟ್ಟಾಗಿ ಕಂಡಿತು. ನಿರಾಸೆಯಾಯಿತು. ಕುತೂಹಲವೂ ಆಯಿತು. ನಿನ್ನನ್ನು ನೋಡಬಂದವರಿಗೆ ಅವರವರ ಅಂತಸ್ತಿಗೆ ತಕ್ಕಂತಹ ಛತ್ರದ ರೂಮುಗಳೂ ಇದ್ದವು. ಆದರೆ ನಿನ್ನ ಮಹತ್ವದಿಂದಾಗಿಯೇ ಸಮುದ್ರ ತೀರದ ಆ ಹಳ್ಳಿಯಲ್ಲಿ ಎದ್ದುನಿಂತ ಟೂರಿಸ್ಟ್ ಹೋಟೆಲೊಂದರಲ್ಲಿ ಇಳಿದುಕೊಂಡೆ. ನನ್ನಂತೆಯೇ ನಿನ್ನನು ನೋಡಲು ಬಂದ ಹಲವು ಫಾರಿನ್ ಟೂರಿಸ್ಟರೂ ಅಲ್ಲಿ ಉಳಿದಿದ್ದರು. ನೀನು ಒಂದು ನಿಮಿಷ ಕಾಲ ಪ್ರತಿಯೊಬ್ಬನನ್ನೂ ಖಾಸಗಿಯಾಗಿ ನೋಡುವುದೆಂದರೂ, ಹತ್ತು ಗಂಟೆಗಳ ಕಾಲ ನೀನು ನನ್ನ ಮಂದಾಸನದಲ್ಲಿ ಭಗವತಿಯಂತೆ ಕೂತಿದ್ದರೆ ಸುಮಾರು ಆರುನೂರು ಜನರನ್ನು ಮಾತ್ರ ನೋಡಬಹುದು. ನನ್ನ ಟೀವಿ ಖ್ಯಾತಿಯನ್ನು ಎಲ್ಲರಿಂದ ಮುಚ್ಚಿಟ್ಟುಕೊಂಡ ನಾನು ನಿನ್ನ ಅಧಿಕಾರಿಗಳಿಗೆ ಮಾತ್ರ ಹೇಳಿಕೊಂಡು ಮೂರುದಿನಗಳ ನಂತರದ ಭೇಟಿ ಮಾಡುವ ಭಾಗ್ಯವಂತನಾದೆ. ಅರ್ಧ ನಿಮಿಷದ ದರ್ಶನದ ಒಂದು ಕಿಲೋಮೀಟರಿನ ಕ್ಯೂ ಮುಗಿದ ನಂತರದ, ವಿ‌ಐಪಿಗಳಿಗಾಗಿ ಇದ್ದ ಒಂದು ನಿಮಿಷ ದರ್ಶನದ ಪುಟ್ಟ ಕ್ಯೂನಲ್ಲಿ ನಿಂತು, ನನ್ನ ನೆವದಲ್ಲಿ ಬಿಡುಗಡೆ ಪಡೆದ ನಿನ್ನ ಮುಖದರ್ಶನ ಮಾಡಲು ಮತ್ತೆ ಕಾದೆ. ನಿರೀಕ್ಷೆಯಲ್ಲಿ, ಆತಂಕದಲ್ಲಿ, ಅನುಮಾನದಲ್ಲಿ. ಅರ್ಧ ನಿಮಿಷದ ಕ್ಯೂನವರು ನಿನ್ನ ಸ್ವಹಸ್ತದಿಂದ ತಲೆ ಮುಟ್ಟಿಸಿಕೊಳ್ಳುವಷ್ಟು ಮಾತ್ರ ಭಾಗ್ಯಶಾಲಿಗಳು. ಆದರೆ ಒಂದು ನಿಮಿಷದ ಕ್ಯೂನವರು ನಿನ್ನಿಂದ ಅಪ್ಪಿಸಿಕೊಳ್ಳುವಷ್ಟು ಪುಣ್ಯವಂತರು. ಅಲ್ಲಿರುವ ಯಾತ್ರಿಕರ ಬೆರಗಿನ ಕಥೆಗಳಿಂದ ನಾನೊಂದು ಮಾತು ಕೇಳಿದ್ದೆ. ಯಾರ ಭಕ್ತಿ ಪರಿಶುದ್ಧವಾಗಿರುತ್ತದೋ, ಯಾರು ಭವದ ಕಲ್ಮಶ ಕಳೆದುಕೊಳ್ಳುವಷ್ಟು ಕರ್ಮವನೆಲ್ಲ ಸವೆಸಿಬಿಟ್ಟು ಬಿಡುಗಡೆಯ ತುದಿಗಾಲಲ್ಲಿ ನಿಂತಿರುತ್ತಾರೋ, ಅವರನ್ನು ನೀನು ತಬ್ಬಿದಾಗ ನಿನ್ನ ಮೊಲೆಯಲ್ಲಿ ಹಾಲು ಕಾಣಿಸಿಕೊಳ್ಳುವುದಂತೆ. ಅದನ್ನು ನೀನವರ ಕಣ್ಣಿಗೆ ಒತ್ತುತ್ತೀಯಂತೆ. ಸುಪ್ರೀಂ ಕೋರ್ಟಿನ ಮುದಿ ಜಡ್ಜ್ ಒಬ್ಬರಿಗೆ ನಿನ್ನ ಎದೆ ಹಾಲು ದೊರೆತು, ಅವರು ಎಲ್ಲವನ್ನೂ ಬಿಟ್ಟುಕೊಟ್ಟು ನಿನ್ನ ಸಂಸ್ಥೆಯ ಮುಖ್ಯ ಅಧಿಕಾರಿಗಳಲ್ಲಿ ಒಬ್ಬರಾಗಿ ಬಿಟ್ಟಿದ್ದಾರಂತೆ. ನನ್ನ ಎದುರಿನವರ ನಿಮಿಷ ನಿಮಿಷ ದರ್ಶನದ ಭಾಗ್ಯವನ್ನು ವಾಚು ನೋಡಿಕೊಂಡು ಎಣಿಸುತ್ತ, ನನ್ನ ಸರದಿಗಾಗಿ ತವಕಿಸುತ್ತ, ಹತ್ತಿರವಾಗುತ್ತ, ಆಗುತ್ತ, ನಿನ್ನನ್ನು ಇಣುಕಿಯಾದರೂ ನೋಡುತ್ತಿರಬೇಕೆಂದುಕೊಂಡರೆ ತೀರ ಹತ್ತಿರವಾಗುವ ತನಕ ನೀನು ಕಾಣಿಸದಂತೆ ವಕ್ರವಾದ ರೇಖೆಗಳಲ್ಲಿ ಈ ಕ್ಯೂವನ್ನು ನಿನ್ನ ಅಧಿಕಾರಿಗಳು ನಿಲ್ಲಿಸಿರುತ್ತಾರೆ. ನಿನ್ನನ್ನು ಕಾಣುವುದೊಂದು ಹಠಾತ್ತನೆ ದೊರಕುವ ಅನುಭವದಂತಿರಬೇಕೆಂಬುದು ಅವರ ಯೋಜನೆಯೆಂದು ಕಾಣುತ್ತದೆ. ಟೀವಿಯಲ್ಲಿ ಏನನ್ನು, ಯಾವಾಗ, ಎಷ್ಟು ಹಠಾತ್ತನೆ ಎಂಬಂತೆ ತಂದು ಪ್ರೇಕ್ಷಕರ ಆಸಕ್ತಿ ಉಳಿಸಿಕೊಳ್ಳಬೇಕೆಂಬುದರಲ್ಲಿ ನಿಷ್ಣಾತನಾದ ನಾನು ಕ್ರಮೇಣ ನನ್ನ ಆಸಕ್ತಿ ಕಳೆದುಕೊಂಡಿದ್ದೆ. ಇಂಥ ಉಪಾಯಗಳಿಂದ ನಾನು ರೋಸಿ ಹೋಗಿ ನಿನ್ನನ್ನು ಹುಡುಕಿಕೊಂಡು ಬಂದದ್ದಲ್ಲವೆ? ಕಾಮಕೇಳಿಯಲ್ಲಿ ಕಲಾವಿದರಾಗಿ ಬಿಟ್ಟವರೂ ಕೂಡ ಈ ಹಂತ ಹಂತದ ಆಕ್ರಮಣದ ಕಲೆಯನ್ನು ಡೆಲಿಬರೇಟಾಗಿ ಬಳಸುತ್ತಾರಲ್ಲವೆ? ನಿನ್ನನ್ನು ಸುಮ್ಮನೆ ನೋಡಿದೆ. ಅಷ್ಟು ಜನರನ್ನು ಮುಟ್ಟಿ ತಬ್ಬಿದರೂ ನೀನು ಸುಸ್ತಾಗಿದ್ದಂತೆ ಕಾಣಲಿಲ್ಲವೆಂಬುದು ಬೆರಗಾಯಿತು. ನನ್ನನ್ನೂ ತಬ್ಬಿದಿ. ಆದರೆ ನಿನ್ನ ಮೊಲೆಯಲ್ಲಿ ಹಾಲು ಬರಿಸುವಷ್ಟು ಪುಣ್ಯವಂತ ನಾನಾಗಿರಲಿಲ್ಲ. ನಿನ್ನ ಕಣ್ಣುಗಳಲ್ಲಿ ಆ ಹಿಂದಿನ ತುಂಟತನ ಉಳಿದುಬಿಟ್ಟಿದ್ದನ್ನು ಕಂಡಿದ್ದೆನಲ್ಲವೆ? ; ಆದರೂ ನೀನು ಹೊರಳಿಬಿಟ್ಟೆಯಾ? ; ಹೇಗೆ? ; ಹೊರಳಿಕಂಡ ಮೇಲೂ ನಮ್ಮ ನಮ್ಮ ಭವದಲ್ಲಿ ನಾವು ಇರುವುದಲ್ಲವೆ? ; ನೀನು ಇನ್ನೂ ಉಚ್ಚೆ ಹೊಯ್ಯುತ್ತಿ ಅಲ್ಲವೆ? ; – ಹೀಗೆ ಏನೇನೋ ನಾನು ಅನುಮಾನಿಸುತ್ತಿದ್ದಾಗ ನೀನು ನನ್ನ ತಬ್ಬಿದಿ. ದಿವ್ಯವಾದ, ಎಷ್ಟು ಮುಟ್ಟಿದರೂ ಹಳಸದ ಪ್ರೇಮದಲ್ಲಿ ನನ್ನನ್ನು ತಬ್ಬಿದಿ. ಇದರಿಂದ ನನಗೆ ಬೆರಗಾಯಿತು. ಮತ್ತೆ ನನ್ನ ಬೆನ್ನಿಗಿದ್ದ ಇನ್ನೊಬ್ಬನನ್ನೂ ಹಾಗೆಯೇ ತಬ್ಬಿದಿ. ಆದರೆ ನಾನು ಮಾತ್ರ ನಿನಗಿರುವುದೆಂದು ನಾನು ಆ ಕ್ಷಣದಲ್ಲಿ ಭಾವಿಸುವಂತೆ ಮಾಡಿದ್ದಿ. ಅವನು ಮಾತ್ರ ನಿನಗಿರುವುದೆಂದು ಅವನು ಭಾವಿಸುವಂತೆಯೂ ಮಾಡಿದ್ದಿ. ಇದು ಕೂಡ ಹೇಗೆ ನಿನಗೆ ದಿನ ದಿನವೂ ಬೇಸರ ತರದಂತೆ ಉಳಿದ ಕಲೆಯಾಗಿರಬಹುದು ಎಂದು ಮತ್ತೆ ಯೋಚಿಸಿದೆ. ಇರಲಿ. ಕೂತೇ ಇರಬೇಕಾಗಿಬಂದ ನೀನು, ಪಾಪ, ನಿನ್ನ ವಯಸ್ಸಿಗೂ ಹೆಚ್ಚಾಗಿ ತೋರವಾಗಿ ಬಿಟ್ಟಿದಿ ಎಂದೂ ಎನ್ನಿಸಿತ್ತು. ನಿನ್ನನ್ನು ನೋಡಿಯಾದ ಮೇಲೆ ನನಗೆ ಅಮ್ಮನಂತಾಗಿಬಿಟ್ಟಿದ್ದ ಸೀತಮ್ಮನನ್ನೂ, ನಾನು ವೈರಾಗ್ಯದಲ್ಲಿ ದಂಡಿಸಲು ಪ್ರಯತ್ನಿಸುತ್ತಿರುವ ಈ ದೇಹಕ್ಕೆ ತನ್ನ ರುಚಿಯೇನು ಎಂಬುದನ್ನು ಗುಪ್ತವಾಗಿ ತೋರಿಸಿಕೊಟ್ಟವಳಾದ ಗಂಗೂಬಾಯಿ ಎಂಬುವಳನ್ನೂ ನೋಡಲೆಂದು ಹೊರಟವನಿಗೆ ಶಾಸ್ತಿಗಳೆಂಬ ವೃದ್ಧರ ಪರಿಚಯವಾಯಿತು. ಕುಟ್ಟವಲಕ್ಕಿ ತಿನ್ನಿಸಿ ಅವರು ನನಗೆ ಯಾವುದೋ ಪೂರ್ವ ಜನ್ಮದ ಬಂಧುವಿನಂತಾಗಿಬಿಟ್ಟರು. ಪ್ರಿಯ ಮಹಾಮಾತೆ, ನಾನೂ ನಾರಾಯಣನೂ ಒಟ್ಟಾರೆ ಪ್ರೀತಿಸಿದ್ದ ಗಂಗೂಗೆ ಹುಟ್ಟಿದ ಮಗ ನನ್ನವನೋ? ಅವನು ವೈರಾಗ್ಯವಶನಾಗಿ ಸರ್ವಸಂಗ ಪರಿತ್ಯಾಗದ ಹವಣಿಕೆಯಲ್ಲಿದ್ದಾನಂತೆ – ಈಗ ನಾನೇನು ಮಾಡಬೇಕು? ಹೇಳು. ಈ ಭವದಿಂದ ನನಗೆ ಮುಕ್ತಿಯಿದೆಯೆ ಹೇಳು? ಅಥವಾ ಅಂಥ ಮುಕ್ತಿಯ ಬಯಕೆ ಹುಟ್ಟಾ ಅನುಮಾನಿಯಾದ ನನಗೆ ಕೇವಲ ಕುತೂಹಲದ್ದೋ ಹೇಳು. ನಿನಗೆ ನನ್ನಿಂದ ಆದದ್ದು ನಿಜವಾದರೆ, ನನಗೆ ಯಾಕೆ ಅದು ನಿನ್ನಿಂದ ಆಗಲಿಲ್ಲ? ಹೇಳು. ಪ್ರಿಯ ಮಹಾಮಾತೆ, ಜಗತ್ತಿನ ಉದ್ಧಾರದ ಹವಣಿಕೆಯ ನಿನಗೆ ಇಂಥ ಪ್ರಶ್ನೆಗೆ ಉತ್ತರ ಕೊಡಲು ಎಲ್ಲಿ ಸಮಯ ಸಿಕ್ಕೀತು, ಹೇಳು. ನನ್ನ ಹೆಸರನ್ನು ತೊರೆದು ಸದ್ಯ ಸ್ವಾಮಿಯಾದ ನನ್ನ ತಾಯಿಯ ಪುಟಾಣಿ- ಎಂದು ಕಾಗದ ಮುಗಿಸಿದ. ಸುಸ್ತಾಗಿತ್ತು. ನಿದ್ದೆ ಹೋದ.

ಅಧ್ಯಾಯ ೧೦

ಮಂಗಳೂರಿನಲ್ಲಿ ತನ್ನ ಮೂರನೆ ದಿನದ ಬೆಳಿಗ್ಗೆ ಬಹುಬೇಗ ಎದ್ದಿದ್ದೇನೆಂದು ತಿಳಿದು ಹೊರಬಂದ ದಿನಕರ ತನಗಿಂತಲೂ ಬೇಗ ಎದ್ದು ಬಿಟ್ಟಿದ್ದ ಅಮ್ಮ ಅಂಗಳವನ್ನು ಗುಡಿಸಿ, ಸಾರಿಸಿ, ರಂಗೋಲೆಯಿಕ್ಕಲು ತಯಾರಾಗಿದ್ದುದನ್ನು ಕಂಡ. “ನಿದ್ದೆ ಮಾಡಿದೆಯಾ? ಕುರ್ಚಿತಂದು ಕುಳಿತುಕೋ. ಇವತ್ತು ಏನು ಬಿಡಿಸುತ್ತೇನೆ ನೋಡು. ನಿನ್ನ ಕೊರಳಿನ ತಾಯಿತದಲ್ಲಿ ಇರೋ ಶ್ರೀಚಕ್ರಾನ್ನ ಇಡೀ ಅಂಗಳ ತುಂಬುವ ಹಾಗೆ ಬಿಡಿಸುತ್ತೇನೆ. ಅದು ನಿನ್ನ ತಾಯಿಯ ರಕ್ಷೆಯಲ್ಲವ? ನಿನ್ನನ್ನು ಕಾಪಾಡಿಕೊಂಡು ಬಂದಿದ್ದಲ್ಲವ?” ಎಂದು ಬಿಡಿಸಲು ತೊಡಗಿದರು. ಅವರು ಶ್ರೀಚಕ್ರ ಎಂದದ್ದು ಅವನಿಗೆ ಮಾತ್ರ ಅರ್ಥವಾಗಿತ್ತು. ಆದರೆ ನೋಡು ನೋಡುತ್ತ, ಅರಿಶಿನ, ಕುಂಕುಮಗಳಲ್ಲಿ ಅಂಗಳದ ಮೇಲೆ ಏಳುತ್ತ ಹೋದದ್ದನ್ನು ಚೂರು ಚೂರಾಗಿ ಗ್ರಹಿಸುತ್ತ, ಅದು ಪೂರ್ಣ ಎದ್ದಮೇಲೆ ಕಣ್ಣುತುಂಬುವಂತೆ ನೋಡಿದ. ಹೀಗೆ ನೋಡುವಾಗ ಫ್ರೆಶ್ಶಾದ ಕಾಫಿಯನ್ನು ಸೇವಿಸುತ್ತಿದ್ದ. ಒಂಬತ್ತು ತ್ರಿಕೋಣಗಳು ಒಂದರಲ್ಲಿನ್ನೊಂದು ಸಂಗಮವಾಗಿ, ಸಂಗಮಗೊಂಡದ್ದು ತನ್ನ ಪರಿಧಿಯಲ್ಲಿ ಚಕ್ರವಾಗಿ, ಚಕ್ರವಾದ್ದು ಹೂವಿನ ದಳಗಳಾಗಿ, ಇಡೀ ಹೂವು ಚೌಕಾಕಾರದಲ್ಲಿ ಒಳಗೊಂಡ ಆಕಾರವಾಗಿ, ನಾಲ್ಕು ದಿಕ್ಕುಗಳಿಗೆ ಚಾಚಿ ದ್ಯಾವಾಪೃಥವಿಗಳ ಸೃಷ್ಟಿ ಚೈತನ್ಯವನ್ನು ತನ್ನಲ್ಲಿ ಗರ್ಭಿಸಿಕೊಂಡಿತ್ತು. ಅಮ್ಮನ ಧ್ಯಾನದಲ್ಲಿದು ರೂಪ ಪಡೆದಿತ್ತು. ನೋಡುವವನ ಕಣ್ಣುಗಳು ಯೋನಿ ಲಿಂಗಗಳ ಸತತ ಸಂಯೋಗದಲ್ಲಿ ತತ್ಪರವಾಗುತ್ತ, ಕುಂಕುಮ ಮತ್ತು ಅರಿಶಿನದ ಬಣ್ಣಗಳಲ್ಲಿ ತಂಗುತ್ತ, ಚಲಿಸುತ್ತ ಕೇಂದ್ರದ ಬಿಂದುವಿನಲ್ಲಿ ಏಕಾಗ್ರಗೊಳ್ಳುವಂತಿತ್ತು. ಕಾಫಿ ಕುಡಿದು ಮುಗಿಸಿ ಮನಸ್ಸು ಪ್ರಸನ್ನವಾದಂತಾಗಿ ಮಹಡಿ ಮೇಲಿನ ತನ್ನ ರೂಮಿಗೆ ಹೋಗಿ ಮತ್ತೆ ಬರೆಯುತ್ತ ಕೂತ. ಈಗ ತಾನು ಬಿಟ್ಟಿಹೊರಟಿದ್ದ ಹೆಂಡತಿಗೆ: ಪ್ರಿಯ ರಂಜನ, ಅವತ್ತು ನನಗೆ ಅನ್ನಿಸಿದ ತೀವ್ರವಾದ ದ್ವೇಷ ಮತ್ತು ಅಸೂಯೆಯಲ್ಲೇ ನನ್ನ ಬಿಡುಗಡೆಯ ಮುನ್ಸೂಚನೆಯಿದ್ದೀತು. ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ನಿನ್ನನ್ನು ನುರಿದು ಸಾಯಿಸಬೇಕು ಎನ್ನಿಸಿತ್ತು. ಹಾಗೆಯೇ ರಂಡೆಯಾಗಿ ಬಿಟ್ಟ ನಿನಗೂ ಕೂಡ ನಿನ್ನ ಬಿಡುಗಡೆ ಅವನಿಂದ ಜಡಿಸಿಕೊಳ್ಳುವಾಗ ಇದ್ದೀತು. ನೀನು ಅವನಿಗೆ ತೆರೆದುಕೊಳ್ಳುತ್ತ ತೆರೆದುಕೊಳ್ಳುತ್ತ ನಿನ್ನ ಎಲ್ಲ ಸಂಧಿ ಮೂಲೆಗಳಲ್ಲೂ ಅವನನ್ನು ಪಡೆದ ಸುಖದ ಉತ್ಕಟತೆಯಿಂದ ನರಳುತ್ತಿದ್ದುದನ್ನು ಈಗ ಅಸೂಯೆಯಿಲ್ಲದಂತೆ ನೆನಪು ಮಾಡಿಕೊಳ್ಳಲು ನಾನು ಹೆಚ್ಚು ಹೆಚ್ಚು ಸಮರ್ಥನಾಗುತ್ತ ಹೋದಂತೆ ಹಾಗೆ ನನಗೆ ತಿಳಿಯಲು ತೊಡಗಿದೆ. ಸತ್ತುಬಿಡುತ್ತಿದ್ದೇನೆ ಎನ್ನುವಷ್ಟು, ತಾಳಿಕೊಳ್ಳಲಾರದಷ್ಟು ನಿನಗೊಂದು ಅಪೂರ್ವ ಸುಖದ ಅನುಭವವಾದಾಗಲೂ ಅದು ಸಾಧ್ಯ. ಉಪಾಯಗಾರಳಾದ ರಂಡೆಯಾಗಿಯೇ ನೀನು ಉಳಿದುಬಿಟ್ಟರೆ ನೀನು ಹೊರಳಿಕೊಳ್ಳುವಷ್ಟು ಪರಾಧೀನೆಯಾಗಲಾರೆ. ಪ್ರೇಮೋತ್ಕಟತೆಯಲ್ಲಿ ನನ್ನಿಂದ ಮುಟ್ಟಿಸಿಕೊಂಡ ಹುಡುಗಿಯೊಬ್ಬಳು ಮಹಾಮಾತೆಯಾಗಿರುವುದನ್ನು ನೋಡಿ ಈ ಮಾತನ್ನು ನಾನು ಆಡುತ್ತಿರುವುದು. ಹಾಗೆಯೇ ನಾನು ಕೊಟ್ಟ ಬಂಗಾರವನ್ನು ನೋಡುತ್ತ ಅದರ ಭ್ರಮೆಯಲ್ಲಿ ನಿನ್ನ ಮುಖ ಅರಳಿದ್ದನ್ನು ನೆನೆದಾಗಲೂ ನೀನು ಪಟ್ಟ ಭ್ರಮೆಯ ಉತ್ಕಟತೆಯೇ ನಿನ್ನಲ್ಲಿ ವೈರಾಗ್ಯವನ್ನೂ ಅರಳಿಸಬಹುದೆಂಬ ಭರವಸೆ ನನಗಿದೆ. ಇದು ಯಾವತ್ತು ಆಗುವುದೋ ಹೇಳಲಾರೆ. ಆದರೆ ಆದಾಗ, ಅದೆಷ್ಟು ಸುಲಭದ್ದು, ಯಾವತ್ತಾದರೂ ನನಗೆ ಅದು ಅನ್ನಿಸಬಹುದಾಗಿತ್ತು ಎಂದು ನಿನಗೆ ಗೊತ್ತಾಗುತ್ತದೆ. ಒಳ್ಳೆಯದಾಗಲಿ. ಆದರೆ ನಾನು ನಿನ್ನನ್ನು ನಿಜವಾಗಿ ಮುಟ್ಟಿ ಪಡೆದಿದ್ದಿಲ್ಲ. ನೀನು ನನ್ನನ್ನು ನಿಜವಾಗಿ ಮುಟ್ಟಿ ಕಂಡಿದ್ದಿಲ್ಲ. ನಿನ್ನ ತೊಡೆಯ ಮೇಲಿನ ಆ ಮಚ್ಚೆಯನ್ನು ಅವನು ಸವರುತ್ತಾನೆಂದು ಆಗೀಗ ನನಗಾಗುವ ಅಸೂಯೆ ತಮಾಷೆಯಾಗಿ ನನಗೆ ಕಾಣಬಹುದೆಂಬ ಭರವಸೆಯಲ್ಲಿ ನಾನಿರುತ್ತೇನೆ. ಇರಲಿ. ಎಂಜಲು ಬುರುಕನಾದ ಒಬ್ಬ ಹಲ್ಕಾನಿಂದ ಅದು ಯಾಕೆ ಹಾಗೆ ಜಡಿಸಿಕೊಳುತ್ತೀಯೊ ನನಗೆ ತಿಳಿಯದಾಗಿದೆ. ನನ್ನ ಫ್ಲ್ಯಾಟನ್ನು ಎಷ್ಟು ದಿವಸಗಳು ಬೇಕಾದ್ರೂ ಇಟ್ಟುಕೋ. ನಾನು ಥಟ್ಟನೆ ಅಲ್ಲಿ ಪ್ರತ್ಯಕ್ಷನಾಗಿ ಬಿಡಬಹುದೆಂಬ ಭಯವೂ ನಿನಗೆ ಬೇಡ. ನನಗೆ ಅಂಥ ಪ್ರಲೋಭನೆಯೂ ಹುಟ್ಟುವುದು ಬೇಡವೆಂದು ರಿಜಿಸ್ಟರ್‍ಡ್ ಪೋಸ್ಟಿನಲ್ಲಿ ನನ್ನ ಕೀ ಕಳಿಸುತ್ತಿದ್ದೇನೆ. ಮರೆತ್ತಿದ್ದೆ. ಮದುವೆಯಾಗಿ ಒಂದು ವರ್ಷದ ಕಾಲ ನೀನು ಆಸೆಪಟ್ಟು ನನ್ನಿಂದ ಪಡೆದ ಮನೆಯ ಎಲ್ಲ ವಸ್ತುಗಳೂ ನಿನ್ನವೇ ನಿನ್ನಿಂದ ಬಳಲಿ ದ್ವೇಷದಿಂದ ಮುಕ್ತನಾಗಲಾರದೆ ದಾರಿ ಹುಡುಕುತ್ತಿರುವ ದಿನಕರ.ತನ್ನ ಎಲ್ಲ ಪ್ರೇಯಸಿಯರನ್ನೂ ನೆನೆದುಕೊಂಡು ಒಂದೊಂದಾಗಿ ಪುಟ್ಟ ಪುಟ್ಟ ಪತ್ರಗಳನ್ನು ಬರೆದ.ಪ್ರಿಯ ಸುದರ್ಶಿನಿ,ನಿನ್ನನ್ನು ನಾನು ಮನಸಾರೆ ಪ್ರೀತಿಸಲಿಲ್ಲ. ನೀನೂ ನನ್ನನ್ನು ಪ್ರೀತಿಸಲಿಲ್ಲ. ಆದರೆ ಪರಸ್ಪರ ಆಕ್ರಮಣಕ್ಕೆ ಹಾತೊರೆದೆವು. ಒಂದು ದಿನ ನೀನು ನಿನಗೇ ಗುನುಗಿಕೊಳ್ಳುತ್ತ ಏಕಾಕಿಯಾಗಿ ಒಳಗಣ್ಣಾಗಿ ಕೂತಿದ್ದನ್ನು ನೋಡಿದ್ದು ನೆನಪಾಗುತ್ತದೆ. ಭವದಿಂದ ನೀನು ಬಿಡುಗಡೆ ಪಡೆಯುವ ಸಾಧ್ಯತೆ ಅದರಲ್ಲಿ ನನಗೆ ಕಾಣುತ್ತದೆ. ಹೀಗೆ, ದಿನಕರಪ್ರಿಯ ಪ್ರೀತಿ,ಯೌವನ ಕಳೆಯುತ್ತಿದೆ ಎಂಬ ದಿಗಿಲಿನಲ್ಲಿ ನನ್ನನ್ನು ನೀನು ಕೂಡಬಯಸಿದ್ದು, ಯಾವ ಹೆಣ್ಣೆಂದರೂ ಪ್ರಾರಂಭದ ಕುತೂಹಲದ ನಾನು ನಿನ್ನನ್ನು ಕೂಡಿದ್ದು. ಆಮೇಲೆ ನಿನ್ನಿಂದ ತಪ್ಪಿಸಿಕೊಳ್ಳಲು ನಾನು ಏನೇನೋ ಉಪಾಯಗಳನ್ನು ಹುಡುಕತೊಡಗಿದೆ. ಪ್ರೀತಿಯ ಭ್ರಮೆಯಲ್ಲಿ ನಿನ್ನನ್ನು ಉಳಿಸಿಕೊಂಡೇ ಇದ್ದೆ. ಯಾಕೆಂದರೆ ಯಾವತ್ತು ನಿನ್ನಂತೆ ನಾನೂ ಏಕಾಕಿಯೆ. ನನ್ನಿಂದ ಸುಖ ಕಾಣದಿದ್ದಾಗಲೂ ಕೂಡಿದಾಗ ನೀನು ನಿನಗೇ ಮೋಸ ಮಾಡಿಕೊಳ್ಳಲು ನನಗೆ ಹಿತವೆನ್ನಿಸಲೆಂದು ನರಳುತ್ತಿದ್ದಿ. ಅದನ್ನು ನಂಬಿದವನಂತೆ ನಟಿಸುತ್ತಿದ್ದ ನನ್ನ ಮೋಸವನ್ನು ಕ್ಷಮಿಸಿಬಿಡು. ಒಂದು ದಿನ ನೀನು ಮುಡಿದ ಹೂವನ್ನು ಎಷ್ಟು ಜೋಪಾನವಾಗಿ ಹೆರಳಿನಿಂದ ತೆಗೆದು ಎಲೆಯ ಮೇಲಿಟ್ಟು ಅದನ್ನು ನಿನ್ನ ಬೆರಳುಗಳಿಂದ ನೀರು ಚಿಮುಕಿಸಿ, ಬೇಕೆನ್ನುವಷ್ಟು ಮಾತ್ರ ಒದ್ದೆ ಮಾಡಿ ಅಕ್ಕರೆಯಲ್ಲಿ ಅದನ್ನು ನೀನು ನೋಡಿದ ನೆನಪಾಗುತ್ತದೆ. ನಾನು ಅದನ್ನು ಬೆರಗಿನಲ್ಲಿ ನೋಡುತ್ತಿದ್ದೇನೆಂಬ ಪರಿವೆ ನಿನಗಿರಲಿಲ್ಲ. ನಮಗೆ ಒಳ್ಳೆಯದಾಗುತ್ತದೆ ಎಂದು ಇದರಿಂದ ಭರವಸೆ ಹುಟ್ಟುತ್ತದೆ. ವೈರಾಗ್ಯಕ್ಕಾಗಿ ಬಯಸಿ, ಬಯಸುವುದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲೆಂದು ತಿಳಿದಿರುವ ಇತಿ ನಿನ್ನ
ದಿನಕರಪ್ರಿಯ ಮಮತಾ,ನಿನ್ನನ್ನು ಬೆತ್ತಲೆ ನೋಡಲು ನೀನು ಬಿಟ್ಟಿದ್ದೇ ಇಲ್ಲ. ಆದರೆ ಒಂದು ದಿನ ಅವಸರದಲ್ಲಿ ನೀನು ಬಟ್ಟೆ ಬಿಚ್ಚಿ ಹೊದಿಕೆಯ ಒಳಗೆ ಸೇರುವಾಗ ನಿನ್ನ ತೊಡೆಯ ಮೇಲೆ ಅಗಲವಾದ ಬಿಳಿಯ ಲುಕೊಡರ್ಮಾ ಕಲೆಯನ್ನು ಕಂಡೆ. ಅದು ಲೆಪ್ರಸಿಯಲ್ಲವೆಂದು ನನಗೆ ಗೊತ್ತು. ಹಾಗೆ ನಾನು ತಿಳಿದೇನೆಂದು ನಿನಗೆ ಭಯ. ನನ್ನನ್ನು ಮೆಚ್ಚಿಸಲು ನೀನು ಮಾಡದ ತ್ಯಾಗವಿಲ್ಲ. ನನ್ನ ಎಲ್ಲ ಪ್ರೇಯಸಿಯರನ್ನೂ ಅಸೂಯೆಯಿಲ್ಲದಂತೆ ನೀನು ಕಂಡಿ. ತೊಡೆಯಿಂದ ಕ್ರಮೇಣ ನಿನ್ನ ಮೈಯನ್ನೆಲ್ಲ ಆವರಿಸಿ ಬಿಡಬಹುದಾದ ನಿನ್ನ ಲುಕೊಡರ್ಮಾ ರೋಗದಲ್ಲೇ ನಿನ್ನ ಮುಕ್ತಿಯಿದ್ದೀತು. ದೇವರು, ನಿನಗೆ ಅದನ್ನು ಎದುರಿಸುವ ಧೈರ್ಯಕೊಡಲಿ. ನಿನ್ನಿಂದ ನಾನು ನಿಜವಾಗಿ ಉದ್ರೇಕಗೊಂಡದ್ದಿಲ್ಲ. ಕನಿಕರದಿಂದ ಮಾತ್ರ ನಿನ್ನನ್ನು ಕೂಡುತ್ತಿದ್ದುದು.
ಇತಿ
ನಿನಗಾಗಿ ಪ್ರಾರ್ಥಿಸುವ
ದಿನಕರ ನಾಳೆಯೆದ್ದು ಲಕ್ನೋದವಳಿಗೆ, ಅಲಹಾಬಾದಿನವಳಿಗೆ, ಲಂಡನ್ನಿನ್ನಲ್ಲಿರುವವಳಿಗೆ, ತಾನು ಕೂಡಲು ಹೊಂಚುತ್ತಿದ್ದ, ಆದರೆ ವಿಳಂಬಿಸಿ ತನ್ನಲ್ಲಿ ಆಸೆಯನ್ನು ಬೆಳೆಸುತ್ತಿದ್ದ, ದೆಹಲಿ ಪತ್ರಿಕೆಯೊಂದರ ಒಬ್ಬ ವರದಿಗಾರಳಿಗೆ ಬರೆಯುವುದು ಎಂದುಕೊಂಡು, ಬರೆದ ಕಾಗದಗಳನ್ನೆಲ್ಲ ಕವರಿಗೆ ಹಾಕಿದ. ಮಹಾಮಾತೆಗೆ ಬರೆದಿದ್ದನ್ನು ಮಾತ್ರ ಅಂಚೆಗೆ ಹಾಕಿ ಪ್ರಯೋಜನವಿಲ್ಲ. ಅವಳಿಗೆ ಉಸಿರಾಡಲೂ ಪುರುಸೋತ್ತಿಲ್ಲ ಎಂದುಕೊಂಡ. ಟಪ್ಪಾಲು ಪೆಟ್ಟಿಗೆ ಹುಡುಕಿಕೊಂಡು ಮನೆಯಿಂದ ಹೊರಗೆ ಹೊರಟ. “ವಾಕಿಂಗ್ ಮುಗಿಸಿ ಬಂದವನೇ ಸ್ನಾನ ಮಾಡಿ ತಿಂಡಿ ತಿನ್ನು. ಇವತ್ತು ನಿನಗೆ ಇಷ್ಟವಾಗಬಹುದೆಂದು ದೋಸೆ ಹಿಟ್ಟು ಕಲಿಸಿಟ್ಟಿದ್ದೇನೆ. ನನ್ನ ಮಗರಾಯ ಏಳುವುದು ಎಷ್ಟು ಹೊತ್ತೋ? ಇವತ್ತು ಅವನಿಗೆ ಕೋರ್ಟಿದೆ ಬೇರೆ” ಎಂದು ಸೀತಮ್ಮ ಕರೆದು ಹೇಳಿದರು. ಅವರ ಮಾತು ಅರ್ಥವಾಗದಿದ್ದರೂ ಅವರ ಆರ್ತತೆ ಹಿತವಾಗಿತ್ತು.

ಅಧ್ಯಾಯ ೧೧

ಸ್ನಾನಕ್ಕೆಂದು ಹೊರಡಲೆಂದಿದ್ದ ನಾರಾಯಣ ತನ್ನ ರೂಮಿಗೆ ಬಂದು ಬಾಗಿಲು ಹಾಕಿಕೊಂಡ. “ನನಗೇನು ಮಾಡುವುದು ಹೊಳೆಯುತ್ತಿಲ್ಲ” ಎಂದು ಮಾತಿಗೆ ಶುರು ಮಾಡಿದ. ಹಿಂದಿನ ರಾತ್ರೆ ಕುಡಿದು ಬಂದವನು ಮಗನನ್ನು ಎಬ್ಬಿಸಿ ತನ್ನ ನಿರ್ಧಾರ ಹೇಳ್ದನಂತೆ. ಆಸ್ತಿಯನ್ನೆಲ್ಲ ನಿನಗೆ ಮಾತ್ರ ಬರೆದಿಡುತ್ತೇನೆಂದು ಕೂಡ ಹೇಳಿದ್ದನಂತೆ. ಆದರೆ ಮಗರಾಯ ರೋಷಾವೇಶದಲ್ಲಿ ಕುಣಿದಾಡಿ, ಇಂಥ ಅಪ್ಪನ ಮಗ ತಾನಾಗಿ ಯಾಕೆ ಹುಟ್ಟಿದೆನೆಂದು ಗೋಳಾಡಿ, ತನ್ನನ್ನು ಎತ್ತಿ ಸಾಕಿದ ಗಂಗೂವನ್ನು ಆಸೆಬುರುಕ ಸೂಳೆಮುಂಡೆಯೆಂದು ಬೈದಾಡಿ, ಪ್ರಸಾದನನ್ನು ಕಪಟ ಸನ್ಯಾಸಿಯೆಂದು ಹೀಯಾಳಿಸಿ ತನ್ನ ತಲೆಯನ್ನು ಗೋಡೆಗೆ ಬಡಿದುಕೊಳ್ಳುತ್ತ, ತಾನು ಈ ಮನೆಯಲ್ಲಿ ಇರುವುದಿಲ್ಲ, ಇರುವುದಿಲ್ಲ ಎಂದು ಕಿರುಚಿದ್ದನಂತೆ. ಮಹಡಿ ಮೇಲಿನ ದಿನಕರನ ಕಿರುಕೋಣೆಯಲ್ಲಿ ಈ ರಾದ್ಧಾಂತ ಕೇಳಿಸಿರಲಿಲ್ಲ. ಕಡಿದುಬಿಟ್ಟ ಧೈರ್ಯದಲ್ಲಿ ನಾರಾಯಣ ಮಗನ ಹತ್ತಿರ ಮಾತು ಎತ್ತಿರಬೇಕು.ಈ ರಾದ್ಧಾಂತ ಸೂಕ್ಷ್ಮವಾದ ಕಿವಿಯ ತಾಯಿಗೆ ಕೇಳಿಸಿತ್ತಂತೆ. ಅವರು ಎದ್ದು ಹೋಗಿ ಮೊಮ್ಮಗನನ್ನು ಸಮಾಧಾನ ಮಾಡಿ, “ಮೊದಲು ಈ ಮಾಣಿಗೊಂದು ಮದುವೆ ಮಾಡಿಬಿಡೋ, ಇಲ್ಲವಾದರೆ ಅವನಿಗೆ ಯಾರೂ ಹೆಣ್ಣು ಕೊಡದೆಹೋದಾರು ಅಂತ ಮಾಣಿಗೆ ಭಯವಿರಬಹುದು. ಅಲ್ಲದೆ ಅವನ ಎಲೆಕ್ಷನ್ನಿನ ಹುಚ್ಚೂ ಇಳಿದುಬಿಡಲಿ ಬಿಡು. ಎಷ್ಟಾದರೂ ನಿನ್ನ ಮಗನಲ್ಲವ? ಅಪ್ಪನ ಹಾಗೆ ತಾನೂ ಮುನಿಸಿಪಾಲಿಟಿ ಪ್ರೆಸಿಡೆಂಟಾಗಬೇಕು, ಆಗಿ ಮೆರೀಬೇಕು ಅಂತ ಬಯಸತ್ತೆ” ಎಂದಿದ್ದರಂತೆ. ಅರೆ – ಈ ರಾದ್ಧಾಂತದ ಸುಳುವೂ ಕೂಡ ಕೊಡದಂತೆ ಅಮ್ಮ ರಂಗೋಲೆಯಿಕ್ಕುತ್ತ ಇದ್ದರಲ್ಲ ಎಂದು ದಿನಕರ ಬೆರಗಾಗಿ, “ನಿನ್ನ ತಾಯಿಯೇ ನಿಜವಾಗಿ ಮಹಾಮಾತೆ. ಈ ಪ್ರಪಂಚದಲ್ಲಿದ್ದು ಎಲ್ಲರನ್ನೂ ಪಾಲನೆಮಾಡುತ್ತ ಎಲ್ಲವನ್ನೂ ಬಿಟ್ಟಿರುವಂತೆಯೂ ಇದ್ದಾರೆ” ಎಂದ. ನಾಲ್ಕು ದೋಸೆಗಳನ್ನು ಹೊಯ್ಯಬಲ್ಲ ಒಲೆಯ ಮೇಲಿನ ಕಾವಲಿ ಮೇಲೆ ದೋಸೆಗಳನ್ನು ಚುಂಯ್ ಎಂದು ಹರಡುತ್ತ, ದೋಸೆಗಳ ಮೇಲೆ ತುಪ್ಪ ಸವರಿ ಅದನ್ನು ಗರಿ ಗರಿಯಾಗುವಂತೆ ಮಗಚುತ್ತ, ಹದಗೊಂಡದ್ದರ ಮೇಲೆ ತುಸು ಕೆಂಪು ಚಟ್ನಿಯನ್ನೂ ಸವರಿ, ಈರುಳ್ಳಿ ಆಲೂಗಡ್ಡೆಯ ಪಲ್ಯವನ್ನು ತುಂಬಿ, ಮಡಿಸಿ, ಸಟ್ಟಗದಿಂದ ನೀಟಾಗಿ ಎತ್ತಿ ಎಲೆಯ ಮೇಲೆ ಬಡಿಸಿ, ಇನ್ನೊಂದಷ್ಟು ಹಸಿ ಮೆಣಸಿನ ಕಾಯಿ ಚಟ್ನಿಯನ್ನು ಪಕ್ಕದಲ್ಲಿ ಬಡಿಸುತ್ತ ಸೀತಮ್ಮ ತನ್ನ ಕಾಯಕದಲ್ಲಿ ಮಗ್ನರಾಗಿದ್ದರು. ಶ್ರೀಯಂತ್ರದ ಒಂಬತ್ತು ತ್ರಿಕೋಣಗಳನ್ನು ದೈವಿಕ ಸಂಯೋಗದಲ್ಲಿ ಕೂಡುವಂತೆ ಮಾಡಿದ್ದ ಅವರ ಕೈಚಳಕವೇ ಅವರ ದೋಸೆಗಳ ಹದದಲ್ಲೂ ದಿನಕರನಿಗೆ ಕಂಡಿತ್ತು. ಇಂಗ್ಲಿಷಿನಲ್ಲಿ ಹೇಳಿದರೆ ತನ್ನ ಗೋಳು ಅಮ್ಮನಿಗೆ ಗೊತ್ತಾಗದೆಂದು ದಿನಕರನಿಗೆ ನಾರಾಯಣ ಹೇಳಿದ: “ನನಗೇ ಹುಟ್ಟಿದ್ದೆಂದು ಖಾತ್ರಿಯಿರುವ ಈ ಮಗ, ನನ್ನ ಲೀಗಲ್ ಹಕ್ಕುದಾರ ನನ್ನ ಮಗನೇ ಅಲ್ಲವೆನಿಸುತ್ತದೆ…” ಮುಂದಿನ ಮಾತನ್ನು ಹೇಳಲು ಹೋದರೆ ಅತಿಥಿಯಾದ ಗೆಳೆಯನಿಗೆ ನೋವಾಗುತ್ತದೆಂದು ಸಜ್ಜನಿಕೆಯಲ್ಲಿ ಮಾತು ತಿರುಗಿಸಿದ. ದೇಶಕ್ಕೆಲ್ಲ ಒಂದೇ ಪರ್ಸನಲ್ ಲಾ ಇರಬೇಕೆಂದು ತನ್ನ ರಾಜಕೀಯ ಧೋರಣೆಗಳನ್ನು ವಿವರಿಸುತ್ತ ದಿನಕರನ ಅಭಿಪ್ರಾಯಕ್ಕಾಗಿ ಕಾದ. ದಿನಕರ ಒತ್ತಾಯದ ಎರಡು ಮಸಾಲೆ ದೋಸೆಗಳನ್ನು ತಿಂದು, ಇನ್ನಷ್ಟು ಒತ್ತಾಯದ ಸಾದಾ ಗರಿಗರಿ ದೋಸೆ ತಿನ್ನುತ್ತಿದ್ದಾಗ, “ಅಮ್ಮ” ಎಂದು ಕರೆಯುವ ಚಂದ್ರಪ್ಪನ ಧ್ವನಿ ಕೇಳಿಸಿತು. ಮಗನಿಗೆ ಬಡಿಸಲಿದ್ದ ದೋಸೆಯನ್ನು ಎಲೆಯ ಮೇಲೆ ಹಾಕಿಕೊಂಡು ಹಿತ್ತಲಿನಲ್ಲಿದ್ದ ಚಂದ್ರಪ್ಪನಿಗೆ ಬಡಿಸಿ ಒಳಬಂದು ಕೇಳಿದರು: “ನೋಡಲು ಇಲ್ಲಿಗೆ ಬರುವುದೋ, ಪೇಟೆಯ ಕಛೇರಿಗೆ ಬರುವುದೋ ಎಂದು ಚಂದ್ರಪ್ಪ ಕೇಳಿದ. ದೋಸೆಯನ್ನು ಗಂಗೂಗೆ ಕೊಡಬಹುದಲ್ಲ ಎಂದು ಅವಳು ಸ್ನಾನ ಮಾಡದಿದ್ದರೂ ಸರಿಯೆ, ಒಂದು ಕ್ಷಣಕ್ಕಾದರೂ ಇಲ್ಲೇ ಬಂದು ಹೋಗಲಿ ಎಂದೆ. ಅವಳಿಗೆ ರಜಾ ಅಲ್ಲವ? ಅವಳು ಎಲ್ಲರಿಗೂ ಮನೇಲಿ ಗಂಜಿ ಮಾಡಿ ಬಡಿಸಬಹುದಲ್ಲವ? ಗಂಜಿಯೂಟ ಮಾಡಲು ಹೇಗೂ ಹೊತ್ತಾಗುತ್ತೆ ಅಂತ ಇಲ್ಲಿಗೇ ಬರಲು ಹೇಳಿದೆ. ನಿನ್ನದೇನು ಅವಸರ? ಇದ್ದದ್ದೇ. ಅರ್ಧಗಂಟೆ ತಡವಾಗಿ ಪೇಟೆ ಕಛೇರಿಗೆ ಹೋದರಾಯಿತು. ಮೊಮ್ಮಗ ಮಹಾರಾಯ ಇನ್ನೂ ಯಾಕೆ ತಿಂಡಿಗೆ ಬರಲಿಲ್ಲವೋ? ಹಾಳು ಫೋನನ್ನು ಮಾಡಿಕೊಂಡು ಊಟತಿಂಡಿ ಮರೆತುಬಿಡುತ್ತೆ ಮಾಣಿ”. ಎಂದು ಸಡಗರದಲ್ಲಿ ಮಾತಾಡುತ್ತ ಗಂಗೂಗು ಆಗುವಷ್ಟು ದೋಸೆ ಹಿಟ್ಟಿದೆಯೆ ಎಂದು ನೋಡಿ, ಒಲೆಯುರಿಯನ್ನು ಸಣ್ಣ ಮಾಡಿ, “ನಿನಗಿನ್ನೊಂದು ಬಡಿಸಲ?” ಎಂದು ಕೇಳಿ, ತೇಗಿ ತನ್ನ ತೃಪ್ತಿ ತೋರಿಸಿದ ಮಗನಿಂದ ಸಮಾಧಾನಗೊಂಡು ಸೀತಮ್ಮ ಚಂದ್ರಪ್ಪನ ಜೊತೆ ಮಾತಾಡಲು ಹಿತ್ತಲಿಗೆ ಹೋದರು. ಆದರೆ ಚಂದ್ರಪ್ಪ ಕಾಯದೆ, ಕೈಯಲ್ಲೇ ಹಿಡಿದು ತಿಂದ ಮುಸುರೆಯ ಎಲೆಯನ್ನು ಹಿತ್ತಲಿನ ತೊಟ್ಟಿಯಲ್ಲಿ ಹಾಕಿ, ಹೋಗಿಬಿಟ್ಟಿದ್ದ.

ಅಧ್ಯಾಯ ೧೨

ಇವತ್ತು ಇನ್ನೊಂದು ಚೆಲುವಾದ ಸೀರೆಯುಟ್ಟು ಅದಕ್ಕೊಪ್ಪುವ ಗಾಜಿನ ಬಳೆಗಳನ್ನು ತೊಟ್ಟು, ಹೆರಳಿನಲ್ಲಿ ಮಲ್ಲಿಗೆ ಮುಡಿದು, ಸ್ನಾನ ಮಾಡಿಯೇಬಂದತಿದ್ದ ಗಂಗೂನನ್ನು ಸೀತಮ್ಮ ಅಡಿಗೆ ಮನೆ ಪಕ್ಕದಲ್ಲಿ ಶ್ರೋತ್ರೀಯರಲ್ಲದ ನಾರಾಯಣನ ಕೋರ್ಟಿನ ಸ್ನೇಹಿತರಿಗಾಗಿ ಇದ್ದ ಬೇರೊಂದು ಊಟದ ಮನೆಯಲ್ಲಿ ಕೂರಿಸಿ ದೋಸೆ ಬಡಿಸಿದರು. ತಿಂಡಿ ಮುಗಿಸಿ, ಎಲೆಯನ್ನು ಬಿಸಾಕಿ, ‘ಡೈನಿಂಗ್ ಹಾಲಾದ’ ಈ ಊಟದ ಮನೆಯಲ್ಲಿ ಅದು ಅನಗತ್ಯವೆಂದರೂ ಕೇಳದೆ ತಾನು ಕೆಳಗೆ ಕೂತು ತಿಂದಲ್ಲಿ ಗೋಮಯದ ಶಾಸ್ತ ಮಾಡಿ, ಗಂಗೂ ನಾರಾಯಣನನ್ನು ನೋಡಲು ಮಹಡಿ ಹತ್ತಿ ಹೋದಳು. ನಾರಾಯಣನೂ ಮಾತು ಮುಗಿದಾದ ಮೇಲೆ ಕಪ್ಪು ಕೋಟು ಧರಿಸಿ, ಬಿಳಿಯ ಪ್ಯಾಂಟ್ ಹಾಕಿಕೊಂಡು, ಬಿಳಿಯಂಗಿಯ ಗರಿಗರಿ ಕಾಲರಿಗೆ ಲಾಯರ್ ಟೈ ಧರಿಸಿ, ಕೈಯಲ್ಲೊಂದು ಗೌನನ್ನೂ ಕೇಸುಗಳ ಕಟ್ಟನ್ನೂ ಹಿಡಿದು ಅವಳ ಜೊತೆಯೇ ಕೆಳಗಿಳಿದಿದ್ದ. ಅವನ ಬೆನ್ನ ಹಿಂದೆ ಬಂದ ಗಂಗೂ ದಿನಕರನಿಗೆ ನಮಸ್ಕರಿಸಿ ಎದ್ದು, “ನಿಮ್ಮ ಪ್ರಸಾದ ನಿಮ್ಮನ್ನು ನೋಡಬೇಕೆಂದು ಕೇಳಿದ. ಸಂಜೆ ಬರುತ್ತೀರ” ಎಂದು ಹಿಂದಿಯಲ್ಲಿ ಕೇಳಿದಳು. ಅವಳು ಸ್ಕೂಲಲ್ಲಿ ಕಲಿತಿದ್ದ ಹಿಂದಿಯನ್ನು ಎಷ್ಟು ಚೆನ್ನಾಗಿ ಬಳಸುತ್ತಾಳೆ ಎಂದು ಗಮನಿಸಿ “ಆಗಲಿ” ಎಂದ ದಿನಕರ. “ಇಲ್ಲೇ ಹತ್ತಿರದಲ್ಲೇ ಗಂಗೂ ಮನೆಯಿರೋದು. ನೇರ ಮನೆಯೆದುರಿನ ರೋಡಿನಲ್ಲಿ ಬಲಕ್ಕೆ ತಿರುಗಿ ಹೋದರೆ ಟಪಾಲು ಪೆಟ್ಟಿಗೆ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಒಂದು ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸಿಗುತ್ತದೆ. ಸಿಂಡಕೇಟ್ ಬ್ಯಾಂಕ್‌ಗೆ ಎದುರಾಗಿ ನಿಂತರೆ ನಿನ್ನ ಎಡಕ್ಕೇ ಒಂದು ಸಣ್ಣ ಬೀದಿಯಿದೆ. ಆ ಬೀದಿಯಲ್ಲಿ ಐದನೇ ಮನೆ ಇವಳದು. ಋಷಿಕೇಶವೆಂದು ಮನೆಯ ಹೆಸರು. ಪ್ರಸಾದನಿಗೆ ಒಪ್ಪುವ ಹೆಸರು”ಎಂದು ನಾರಾಯಣ ನಗೆಯಾಡಿದ. ದಿನಕರನಿಗೆ ಋಷಿಕೇಶದ ಶಿವಾನಂದರ ಆಶ್ರಮದಲ್ಲಿ ತಾವು ಇಳಿದುಕೊಂಡದ್ದು ನೆನಪಾಯಿತು. ಹಠ ಹಿಡಿದಿದ್ದ ಗೋಪಾಲನನ್ನು ನಾರಾಯಣನೇ ಎತ್ತಿಕೊಂಡು ತಾಯಿಯ ಜೊತೆ ಸೇತುವೆ ದಾಟಿ ಹೋಗಿದ್ದ. ಅದೊಂದು ಏಕಾಂತದ ಅಪೂರ್ವ ಸಂದರ್ಭವಾಗಿತ್ತು. ಗಂಗೂ ಈಗ ಮಾತ್ರ ನಿರ್ಭಾವದಲ್ಲಿ ನಿಂತಿದ್ದಳು. “ಬೇಡ ಗಂಗೂ, ಚಂದ್ರಪ್ಪನನ್ನೇ ಕಳಿಸಿಬಿಡು. ದಿನಕರನಿಗೆ ದಾರಿ ತಪ್ಪುವುದು ಬೇಡ” ಎಂದು ನಾರಾಯಣ ಗೆಲುವಾಗಿ ಹೇಳಿ, ” ಸ್ವಲ್ಪ ಬಾ ಮಾತಾಡಬೇಕು. ನನ್ನ ಕಛೇರಿಗೆ ಬಾ. ಕಾರಲ್ಲಿ ಹಿಂದಕ್ಕೆ ಕಳಿಸುವೆ” ಎಂದು ದಿನಕರನನ್ನು ಕೈ ಹಿಡಿದು ಕರೆದುಕೊಂಡು ಹೋದ. ಗಂಗೂ ಅಮ್ಮನ ಜೊತೆ ಸ್ವಲ್ಪ ಕಷ್ಟಸುಖ ಹೇಳಿಕೊಳ್ಳುವುದೆಂದು ನಿಂತಳು. ರಸ್ತೆಯಲ್ಲಿ ಕಾರು ನಡೆಸುತ್ತ ನಾರಾಯಣ ಒಂದು ಆಪತ್ತಿನಿಂದ ಪಾರಾದವನಂತೆ ಮಾತಾಡಲು ತೊಡಗಿದ್ದ. ಬೆಳಿಗ್ಗೆ ಎದ್ದು ಮುಂಡನ ಮಾಡಿಸಿಕೊಂಡು ಬಂದ ಪ್ರಸಾದನನ್ನು ಕಂಡು ಗಂಗೂ ಹೆದರಿದ್ದಳಂತೆ. ಆದರೆ ಪ್ರಸಾದ ತನ್ನ ಸಂಗೀತದ ಪ್ರಾಕ್ಟೀಸು ಮುಗಿಸಿ ತಾಯಿಗೆ ಬಂದು ಕಾಲೆರಗಿ ನಿಂತ. ನಾರಾಯಣ ತಂತ್ರಿಗಳು ಮನೆಗೇ ಬಂದು ಹೋಗಲಿ, ಅಮ್ಮ ನಾನು ಇಲ್ಲೇ ಇರುತ್ತೇನೆ; ಅಲೆದಾಡಿಕೊಂಡು ಇರುತ್ತೇನೆ ಎಂದುಬಿಟ್ಟ. ಸನ್ಯಾಸದ ಕಾವಿ ವೇಷದ ಹಂಗೂ ನನಗೆ ಬೇಡ, ಎಂದ. ಗೊತ್ತಾಯಿತ ದಿನಕರ? ಪ್ರಸಾದ ನನ್ನನ್ನು ಹೆಸರು ಹಿಡಿದು ಕರೆದದ್ದು ಇದೇ ಮೊದಲು. ಗಂಗೂಗೆ ಆಶ್ಚರ್ಯವಾಗಿಬಿಟ್ಟಿತು. ಪ್ರಸಾದ ತುಂಬ ಸಮಾಧಾನದಿಂದ ಅಕ್ಕರೆಯಿಂದ ಮಾತಾಡಿದ್ದ. ನನ್ನ ಮೇಲಿನ ದ್ವೇಷದಿಂದ ಕಳಚಿಕೊಂಡಿದ್ದ. ಗಂಗೂಗೆ ಕಣ್ಣಲ್ಲಿ ನೀರು ಬಂದಿತು ಮಗನೇ ಸರ್ವತ್ಯಾಗಿಯಾಗಿ ಆದಿಶಂಕರನಂತೆ ಎದುರು ನಿಂತು ಅಭಯದ ಮೂರ್ತಿಯಂತೆ ಕಂಡಾಗ ಜನ್ಮವಿತ್ತ ತಾಯಿಗೇ ಇನ್ನೊಂದು ಜನ್ಮ ಪಡೆದಂತೆ ಆಗದೆ ಇರುತ್ತದೆಯೇ? ನೀವು ನನಗೆ ಶಾಸ್ತೋಕ್ತವಾಗಿ ತಾಳಿ ಕಟ್ಟಿ ಸಮಾಜದ ಕಣ್ಣೊರೆಸುವುದು ಬೇಡ ಎಂದುಬಿಟ್ಟಳು. ಅದೊಂದು ದಿವ್ಯ ಮುಹೊರ್ತವೆನ್ನಿಸಿದ್ದರಿಂದ ನಿನ್ನ ಸಂಗತಿಯನ್ನೂ ಮಗನಿಂದ ಮುಚ್ಚಿಡದೆ ಅವಳು ಹೇಳಿಬಿಟ್ಟಾಗಿದೆ. ಆದ್ದರಿಂದ ನೀನು ಮನೆಗೆ ಹೋಗಿ ಪ್ರಸಾದನನ್ನು ಆಶೀರ್ವದಿಸಿ ಬಿಡಲಿ ಎಂದಳು ಗಂಗು. ಆದಕ್ಕೇ ನಿನ್ನನ್ನು ಬರಲು ಕರೆದದ್ದು ಅವಳು. ಗಂಗೂ ತುಂಬ ದೊಡ್ಡ ಹೆಂಗಸು ದಿನಕರ” ಎಂದು ಭಾವೋದ್ರೇಕದಿಂದ ನಾರಾಯಣ ಮಾತಾಡುತ್ತಿರುವುದು ಕೇಳಿ ದಿನಕರನಿಗೆ ಕಸಿವಿಸಿಯಾಯಿತು. ಒಂದು ದೊಡ್ಡ ಮುಜುಗರದಿಂದ ಪಾರಾಗಿ ಬಿಟ್ಟವನ ನಿರಂಬಳ ಭಾವ ಅವನ ಮಾತಿನಲ್ಲೂ ಹಾವಭಾವದಲ್ಲೂ ಇತ್ತು. ಆದರೆ ನಾರಾಯಣನಂತೆ ಸಂಸಾರದಲ್ಲಿದ್ದು ಆಪತ್ತುಗಳನ್ನು ಎದುರಿಸಿದವನ ಔದಾರ್ಯವನ್ನೂ ಸಮಾಧಾನವನ್ನೂ ಉಪಾಯಗಾರಿಕೆಯನ್ನೂ ತಾನು ತಿಳಿಯಲಾರೆ. ತನ್ನಂಥವನು ಯಾವ ದೊಡ್ಡಸ್ತಿಕೆಯ ನೈತಿಕ ಭಾವನೆಗೂ ಅರ್ಹನಲ್ಲವೆಂದುಕೊಂಡು ದಿನಕರ ವಿನಯದಲ್ಲಿ ನಾರಾಯಣನನ್ನ ಅವನ ಕಛೇರಿಗೆ ಹಿಂಬಾಲಿಸಿದ. ಮಂಗಳೂರಿನ ಸಣ್ಣ ಸೆಖೆ ಚಳಿಗಾಲದಲ್ಲೂ ತೋರತೊಡಗಿತ್ತು. ಹಲವು ಕ್ಲರ್ಕುಗಳ, ಕಪಾಟು ತುಂಬ ದಪ್ಪ ದಪ್ಪ ಪುಸ್ತಕಗಳ ಭರ್ಜರಿಯಾದ ತನ್ನ ಆಫೀಸನ್ನು ಅಭಿಮಾನದಿಂದ ನಾರಾಯಣ ತೋರಿಸಿದ್ದನ್ನು ಮೆಚ್ಚಿ ಸ್ನೇಹದಲ್ಲಿ ಕೈಕುಲುಕಿದ. ಹೋಗಿ ಬರುತ್ತೇನೆ ಎಂದ. ನಾರಾಯಣನ ಕ್ಲಾರ್ಕ್ ಒಬ್ಬನಿಂದ ಡ್ರೈವ್ ಮಾಡಿಸಿಕೊಂಡು ದಿನಕರ ಮನೆಗೆ ಹಿಂದಕ್ಕೆ ಬಂದ. ‘ಹುಷಾರಿಲ್ಲವ’ ಎಂದು ಅಮ್ಮ ಕೇಳಿದರು. ಮಧ್ಯಾಹ್ನದ ಊಟಕ್ಕೆ ತಯಾರಿ ನಡೆದಿತ್ತು. ಉಣ್ಣುವುದಕ್ಕೆ ಕೈ ಮಾಡಿ ತೋರಿಸಿ ‘ಇವತ್ತು ಪತ್ರಡೆ ಮಾಡ್ತೇನೆ’ ಎಂದಿದ್ದರು.

ಭಾಗ : ೩
ಅಧ್ಯಾಯ ೧

ಎಲ್ಲೂ ನಿಲ್ಲಲಾರದಂತೆ ಚಡಪಡಿಸುತ್ತಿದ್ದ ಶಾಸ್ತಿಗಳು ರಾಧೆ ಮಲ್ಲಿಗೆಯನ್ನು ಬಾಳೆಯ ನಾರಿನಲ್ಲಿ ಹೆಣೆಯುವುದನ್ನು ನೋಡಿ, ” ಸರೋಜ ಮಲ್ಲಿಗೆ ಕಟ್ಟುವಾಗ ಅದೆಷ್ಟು ಮಗ್ನಳಾಗಿ ಇರುತ್ತಿದ್ದಳು. ಹಾಡುವಾಗಂತೂ ಅವಳು ಸಾಕ್ಷತ್ ದೇವಿಯಂತೆ ಕಾಣುತ್ತಿದ್ದಳು” ಎಂದು ನಿಟ್ಟುಸಿರಿಟ್ಟರು. ಮತ್ತೆ ಅಂಗಳದಲ್ಲಿ ಸುತ್ತಾಡುತ್ತ “ಮಹಾದೇವಿಗೆ ತನ್ನ ಮಗಳನ್ನು ಕಂಡು ಮನಸ್ಸು ತಣಿದರೆ ಸಾಕೆನ್ನಿಸುತ್ತೆ” ಎಂದರು. ರಾಧೆ ಹೂವು ಕಟ್ಟುವುದನ್ನು ನಿಲ್ಲಿಸಿ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸತೊಡಗಿದಳು: ‘ಭಗವಂತ, ನಾನು ಕಾಯುತ್ತಿದ್ದ ಕ್ಷಣ ಈಗಲೆ ಬಂದು ಬಿಡಲಪ್ಪ’. ಆ ದಿನ ಪ್ರಾತಃಕಾಲದ ಎಳೆಬಿಸಿಲು ಆಗ ಈಗ ಕಾಣಿಸಿಕೊಳ್ಳುತ್ತ ಹವಾ ಹಿತವಾಗಿತ್ತು. ಸೂರ್ಯನ ಸವಾರಿ ಮುಗಿಲಿನ ಮೇಲೆ ನಡೆದಿತ್ತು. ಗುಡಿಸಿ ಸಾರಿಸಿದ ಅಂಗಳ ತಂಪಾಗಿತ್ತು. ಶಾಸ್ತಿಗಳು ಮತ್ತೆರಡು ಸುತ್ತು ಬಂದು ” ರಾಧೆ ” ಎಂದರು. ಸ್ವಲ್ಪ ಸುಮ್ಮನಿದ್ದು ತನ್ನ ಕೈಯನ್ನು ಬೆನ್ನಿಗೆ ಕಟ್ಟಿ ನಿಂತು, “ಅವನು ನನ್ನ ಮಗನ? ನನ್ನ ಮಗ ಆದರೂ ಅವನು ನನ್ನನ್ನು ಅಪ್ಪ ಎಂದುಕೊಳ್ಳುವವನ? ಅವನು ತನ್ನ ತಂದೆಯನ್ನು ದೇವರಲ್ಲಿ ಹುಡುಕುತ್ತಿರುವ ಸಾಧಕನಂತೆ ಕಾಣುತ್ತಾನೆ. ಅವನು ಹುಡುಕುವುದು ಸಿಗಲಿ ಎಂದು ತಂದೆಯೆಂದುಕೊಂಡ ನಾನು ದೇವರಲ್ಲಿ ಪ್ರಾರ್ಥಿಸ ಬಹುದು ಅಷ್ಟೆ. ಅವನು ನನ್ನ ಮಗ ಹೌದೋ ಅಲ್ಲವೊ? ಅಂತೂ ಅವನು ನನಗೆ ಇನೊಂದು ಜನ್ಮ ಕೊಡುವವನಂತೆ ಕಾಣುತ್ತಾನೆ. ದೇವರ ಕೃಪೆಯಿಂದ ನಾನು ಮತ್ತೆ ಹುಟ್ಟಿದಂತೆ ಎನ್ನಿಸಿ ನನ್ನ ಒಳಗಿನ ಚೀರಾಟ ನಿಂತೀತು”.
ರಾಧೆ ಗಳಗಳನೆ ಅಳುತ್ತ ತಾನು ಬಚ್ಚಿಟ್ಟಿದ್ದ ಸತ್ಯವನ್ನು ಹೇಳುತ್ತ ಶಾಸ್ತಿಗಳನ್ನು ಅರಳಿಸುತ್ತ ಹೋದಳು.

ಅಧ್ಯಾಯ ೨

ಶಾಸ್ತಿಗಳು ಶ್ರೀಮಂತ ಜಮೀನುದಾರರಾದ್ದರಿಂದ ಮಗಳನ್ನು ಮಂಗಳೂರಿನ ಕಾಲೇಜೊಂದರಲ್ಲಿ ಓದಲು ಬಿಟ್ಟಿದ್ದರು. ಓದಿನಲ್ಲಿ ಜಾಣೆಯಾದ ಹುಡುಗಿ, ಒಳ್ಳೆಯ ಕಾಲೇಜಲ್ಲೇ ಓದಲಿ ಎಂದು ಅವರ ಆಶಯ. ಯಾರಾದರೂ ಸಂಬಂಧಿಗಳ ಮನೆಯಲ್ಲಿ ಬಿಡಬೇಕು ಎಂಬ ಮಗಳ ಶೀಲ ಕಾಯುವ ತಾಯಿಯ ಅತಂಕವನ್ನು ಶಾಸ್ತಿಗಳು ಒರಟಾಗಿ ಧಿಕ್ಕರಿಸಿದ್ದರು. ಅದಕ್ಕೆ ಕಾರಣ ತನ್ನವರು ಎಂದುಕೊಳ್ಳಬಹುದಾದ ಯಾವ ಸಂಬಂಧಿಯೂ ಶಾಸ್ತಿಗಳಿಗೆ ಇರಲಿಲ್ಲ. ಹಾಗಾಗಿ ಮಗಳನ್ನು ಹಾಸ್ಟೆಲಲ್ಲಿ ಬಿಟ್ಟಿದ್ದರು. ಈ ಸ್ವಾತಂತ್ರ್ಯದ ಪರಿಣಾಮ: ಅವಳಿಗೆ ಡಿಬೇಟುಗಳಲ್ಲಿ ಸೊಗಸಾಗಿ ಮಾತಾಡುವ ಹುಡುಗನೊಬ್ಬ ಸ್ನೇಹಿತನಾಗಿಬಿಟ್ಟದ್ದು. ಅವಳೂ ಡಿಬೇಟುಗಳಲ್ಲಿ ನಿಷ್ಣಾತಳಾದ ದಿಟ್ಟ ಹುಡುಗಿಯೇ. ಡಿಬೇಟಿನ ಹುಚ್ಚಿನಲ್ಲೇ ಅವಳಿಗೆ ರಾಜಕೀಯ ಸಂಗತಿಗಳ ಹುಚ್ಚೂ ಹಿಡಿದದ್ದು. ಬಡವರ ಮನೆಯಲ್ಲಿ ಹುಟ್ಟಿ ಸ್ಕಾಲರ್‍ಶಿಪ್ ಪಡೆಯುವಷ್ಟು ಜಾಣನಾಗಿ ಎಂಜಿನಿಯರಿಂಗ್ ಓದುತ್ತಿದ್ದ ಈ ಹುಡುಗ ಜಾತಿಯಲ್ಲಿ ಮಲೆನಾಡು ಕಡೆಯ ಹಳೆಪೈಕದವನಾಗಿದ್ದ. ಗಡ್ಡ ಬೆಳಸಿ ಜುಬ್ಬ ಪೈಜಾಮದಲ್ಲಿರುತ್ತಿದ್ದ ಸ್ಪುರದ್ರೂಪಿಯಾದ ಹುಡುಗ ಅವನು . ತನ್ನ ಹೆಸರನ್ನು ತಿಮ್ಮಯ್ಯ ಎನ್ನುವುದರಿಂದ ಚಾರ್ವಾಕ ಎಂದು ಬದಲಾಯಿಸಿಕೊಂಡು ಎಲ್ಲರ ಗಮನಕ್ಕೂ ಅವನು ಪಾತ್ರನಾಗಿದ್ದ. ತನ್ನನ್ನು ಎಲ್ಲರೂ ಗಮನಿಸಲೇಬೇಕಾದಂತೆ ವರ್ತಿಸುವುದು ಅವನಿಗೆ ಚಟವಾಗಿ ಬಿಟ್ಟಿತ್ತು. ಜಮೀಂದಾರಿಕೆಯ ಖಂಡನೆ, ಜಾತಿಪದ್ಧತಿಯ ಖಂಡನೆ ಇತ್ಯಾದಿಗಳನ್ನು ಅವನು ಹೊಸ ಶಬ್ದಗಳಲ್ಲಿ ಮಾಡಬಲ್ಲವನಾಗಿದ್ದ. ರಾಧೆಗೆ ಅದನ್ನೆಲ್ಲ ವಿವರಿಸಲು ತಿಳಿಯದು. ಅವನು ಕಮ್ಯುನಿಸ್ಟಾಗಿಬಿಟ್ಟು ಅದಕ್ಕೂ ಮುಂದೆ ಹೋಗಿಬಿಟ್ಟಿದ್ದ ಎಂದವಳಿಗೆ ಮಂಗಳೆಯಿಂದಲೇ ಗೊತ್ತಾದ್ದು. ಶಾಸ್ತಿಗಳ ಮಗಳು ಮಂಗಳೆಗೆ ಅವನ ವಿಚಾರಗಳು ಆಕರ್ಷಕವಾಗಿದ್ದವು. ತನ್ನ ತಂದೆಯ ಬಗ್ಗೆ ಅವಳಲ್ಲಿ ಬೆಳೆಯುತ್ತ ಹೋಗಿದ್ದ ಅಸಮಾಧಾನಕ್ಕೆ ಚಾರ್ವಾಕನ ವಿಚಾರಗಳಿಂದ ಒಂದು ಹೊಸ ಆಯಾಮ ಸಿಕ್ಕಂತಾಗಿತ್ತು. ಮನೆಗೆ ಬಂದಾಗ ತಾಯಿ ಒತ್ತಾಯಿಸಿದರೂ ಅವಳು ದೇವರಿಗೆ ನಮಸ್ಕಾರ ಮಾಡಳು. ಬ್ರಾಹ್ಮಣರೆಲ್ಲರೂ ಜಿಗಣೆಗಳು ಇದ್ದಂತೆ ಎಂದು ವಾದಿಸುವಳು. ಅವಳ ವಿಚಾರಗಳು ತಂದೆಗೆ ಗೊತ್ತಾಗದಂತೆ ಮಹಾದೇವಿಯೂ, ರಾಧೆಯೂ ನೋಡಿಕೊಂಡಿದ್ದರು. ಮಂಗಳೆಯ ಮನಸ್ಸಿನಲ್ಲಾಗುತ್ತಿದ್ದ ಪರಿವರ್ತನೆಯಿಂದಾಗಿ ಅವಳು ರಾಧೆಗೆ ಹತ್ತಿರವಾಗುತ್ತ ಹೋದಳು. ರಾಧೆಯ ಮನೆಯಲ್ಲಿ ತಾನು ಗಂಜಿಯನ್ನು ಯಾಕೆ ಉಣ್ಣಬಾರದೆಂದು ಹಠ ಹಿಡಿಯುವಳು. ರಾಧೆ ಅದಕ್ಕೆ ಒಲ್ಲಳು. ಆದರೆ ಒಲ್ಲೆ ಎಂದೂ ಹೇಳಲಾರಳು. ಮಂಗಳೆ ತನ್ನ ಪ್ರೇಮವನ್ನು ರಾಧೆಗೆ ಹೇಳಿಕೊಂಡಿದ್ದಳು. ‘ನಮಗೆ ಮದುವೆಯಲ್ಲಿ ನಂಬಿಕೆಯಿಲ್ಲ. ನಾವಿಬ್ಬರೂ ಒಟ್ಟಾಗಿ ಗುಪ್ತವಾಗಿ ಜನರನ್ನು ಸಂಘಟಿಸಿ ಕ್ರಾಂತಿ ಮಾಡುತ್ತೇವೆ’ ಎಂದು ಮಂಗಳೆ ಹೇಳಿದರೆ, ಮೊದಮೊದಲು ರಾಧೆ ನಂಬಿರಲಿಲ್ಲ. ಆದರೆ ಹುಚ್ಚು ಹುಡುಗಿ ನಿಜವಾಗಿಯೂ ತನ್ನ ವಿಚಾರಕ್ಕೇ ಗಂಟು ಬಿದ್ದಿದ್ದಾಳೆ ಎಂದವಳಿಗೆ ಮನದಟ್ಟಾಗತೊಡಗಿತು. ಮಂಗಳೂರಿನ ಎಲ್ಲ ಹುಡುಗಿಯರಂತೆ ಅವಳು ಇರಲಿಲ್ಲ; ಅವಳಿಗೆ ಒಡವೆ, ವಸ್ತಗಳಲ್ಲಿ ಏನೇನೂ ಆಸೆಯಿರಲಿಲ್ಲ. ಆಸೆಪಟ್ಟವರನ್ನು ಅವಳು ಹೀಯಾಳಿಸುತ್ತಿದ್ದಳು. ರಾಧೆಗೆ ಅವಳ ಎದುರು ಬಂಗಾರದ ಬಳೆ ತೊಟ್ಟಿರುವುದೂ ಅವಮಾನಕರವೆಂಬಂತೆ ಮಾಡಿದ್ದಳು. ಅವಳು ಉಡುತ್ತಿದ್ದುದು ಸಾದಾ ಬಿಳಿ ಸೀರೆ, ಬಿಳಿಯ ಕುಪ್ಪಸ. ಕತ್ತಿನಲ್ಲಿ ಒಂದು ಸರವನ್ನಾಗಲೀ, ಕಿವಿಯಲ್ಲಿ ಬೆಂಡೋಲೆಯನ್ನಾಗಲೀ ಅವಳು ತೊಡಳು. ಒಂದು ದಿನ ವಾದಕ್ಕೆ ವಾದ ಬೆಳೆದು, “ಬಸುರಿಯಾಗಿದ್ದ ತನ್ನ ಹೆಂಡತಿಯನ್ನು ಜಪ್ಪಿ ಸಾಯಿಸಿದ ನನ್ನ ಕೊಲೆಗಡುಕ ತಂದೆಯ ಜೊತೆ ಯಾಕೆ ಸಂಬಂಧವಿಟ್ಟುಕೊಂಡಿದ್ದೀರಿ. ಮೊದಲು ನಿಮ್ಮಂಥವರ ಬಿಡುಗಡೆಯಾಗಬೇಕು” ಎಂದು ನಿಷ್ಠುರವಾಗಿ ಅವಳು ಅಂದು ಬಿಟ್ಟಿದ್ದಳು. ಅಪ್ಪನ ಹಾಗೆಯೇ ಮಗಳು ಮಹಾನಿಷ್ಠುರಿ, ಕೆಟ್ಟ ನಾಲಗೆಯ ಹಠಮಾರಿ ಎಂದುಕೊಂಡು ರಾಧೆ ಸುಮ್ಮನಾಗಿ ಬಿಟ್ಟಿದ್ದಳು. ಅವಳು ಅಂದದ್ದನ್ನು ದುಡುಕು ಮನುಷ್ಯನಾದ ಶಾಸ್ತಿಗಳಿಗೆ ಹೇಳದೆ ಹೊಟ್ಟೆಯಲ್ಲಿಟ್ಟುಕೊಂಡಿದ್ದಳು. ತನಗೆ ದಾತಾರರಾದವರ ಮನೆಯಲ್ಲಿ ರಾಧೆಗೆ ಯಾರು ಬೇಕು? ಯಾರು ಬೇಡ? ಇಬ್ಬರೂ ಕಾಲೇಜನ್ನು ತೊರೆದು ಓಡಿಹೋಗಿಯಾದಮೇಲೆ ಆರು ತಿಂಗಳ ಕಾಲ ಎಲ್ಲೆಲ್ಲಿ ಇದ್ದರೊ? ಅದೇನು ಕಡಿದರೊ ತಿಳಿಯದು. ಚಾರ್ವಾಕ ಶಿವಮೊಗ್ಗೆಗೆ ಬಂದು ಒಂದು ಗ್ಯಾರೇಜಿನಲ್ಲಿ ಕಾರುಗಳನ್ನು ರಿಪೇರಿ ಮಾಡುವ ಕೆಲಸಕ್ಕೆ ನಿಂತ. ತಮ್ಮ ಹೊಟ್ಟೆಗೆ ಅವನ ದುಡಿಮೆ ಏನೇನೂ ಸಾಲದಾಗಿ ಹೋದಾಗ ಮಂಗಳೆ ರಾಧೆಗೆ ಕಾಗದ ಬರೆದಿದ್ದಳು .‘ನಾವು ಎಲ್ಲಿದ್ದೇವೆ ತಂದೆಗೆ ತಿಳಿಸಬೇಡ. ಶೂದ್ರನೆಂದು ನನ್ನ ಗಂಡನನ್ನು ಅವರು ಕೊಂದರೂ ಕೊಂದರೆ. ನಿನಗೆ ಇಷ್ಟವಾದರೆ, ಕಷ್ಟವಾಗದಿದ್ದರೆ ನನಗೆ ಒಂದಷ್ಟು ಹಣ ಕಳುಹಿಸು. ಕ್ರಾಂತಿ ಚಿರಾಯುವಾಗಲಿ’ ಎಂದು. ರಾಧೆ ಪ್ರತಿ ತಿಂಗಳೂ ಒಂದು ಸಾವಿರಕ್ಕೆ ಕಡಿಮೆಯಿಲ್ಲದಂತೆ ಹಣ ಕಳುಹಿಸಲು ತೊಡಗಿದಳು. ಕೆಲವು ತಿಂಗಳುಗಳಾದ ಮೇಲೆ ಒಡಕು ಸ್ವರದ ಪತ್ರಗಳು ಬರಲು ತೊಡಗಿದವು. ಎಲ್ಲ ಗಂಡಹೆಂಡಿರ ಸಹಜ ವಿರಸದಂತೆ ರಾಧೆಗೆ ಅದು ಕಂಡಿತು. ಆದರೆ ಮಂಗಳೆಗೆ ‘ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ’ ಎಂದು ಕಾಣಿಸಲಿಲ್ಲ. ಎಲ್ಲ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಅಂತರ್ಗತವಾದ ಬಿಕ್ಕಟ್ಟಾಗಿ – ಅದು ಕಂಡಿತ್ತು. ತನಗೆ ಅಂಥ ಮಾತುಗಳು ಅರ್ಥವಾಗದಿದ್ದರೂ, ತನಗೆ ಎಂಥ ಮಾತುಗಳನ್ನಾದರೂ ಹೇಳಬೇಕೆಂಬ ಮಂಗಳೆಯ ಆರ್ತತೆಯಿಂದ ರಾಧೆಗೆ ಖುಷಿಯಾಗಿತ್ತು. ‘ಚಾರ್ವಾಕ ಹೊತ್ತಿಗೆ ಸರಿಯಾಗಿ ಮನೆಗೆ ಬರುವುದಿಲ್ಲ. ಕುಡಿಯಲಿಕ್ಕೆ ಕಲಿತುಬಿಟ್ಟಿದ್ದಾನೆ. ನಿನ್ನಂಥ ಒಂದು ಹೆಣ್ಣನ್ನು ಕಟ್ಟಿಕೊಂಡು ಸಂಸಾರಿಯಾಗಬೇಕಾಗಿ ಬಂದು ತನ್ನ ಕ್ರಾಂತಿಗೆ ಅವಕಾಶವಾಗದೇ ಹೋಯಿತೆಂದು ಜಗಳವಾಡುತ್ತಾನೆ. ಆದರೆ ಅವನು ಕ್ರಾಂತಿಯ ನಿಜ ಸ್ವರೂಪ ತಿಳಿದಂತಿಲ್ಲ. ಗೃಹಿಣಿಯಾದ ಹೆಂಗಸಿಗೆ ಮಾತ್ರ ಕ್ರಾಂತಿಯ ನಿಜವಾದ ಅರ್ಥ ತಿಳಿದೀತು’ ಎಂದು ಮಂಗಳೆ ಬರೆದದ್ದಕ್ಕೆ ‘ನಿನ್ನ ಗಂಡನನ್ನು ಒಲಿಸಿಕೊಂಡು ಬಸುರಿಯಾಗಿಬಿಡು. ಆಗ ಎಲ್ಲ ಸರಿಹೋಗುತ್ತದೆ’ ಎಂದು ಇಂಥ ವಿಷಯಗಳಲ್ಲಿ ಘಾಟಿಯಾದ ರಾಧೆ ಬರೆದಿದ್ದಳು. ತನ್ನ ಕ್ರಾಂತಿಕಾರತೆಯ ವಿಚಾರ ಕೈಬಿಡದಂತೆ ಮಂಗಳೆ ರಾಧೆಯ ಹಿತವಚನ ಕೇಳಿರಬೇಕು. “ಈಗ ನಿಮ್ಮ ಮಗಳು ಏಳು ತಿಂಗಳ ಬಸುರಿ. ನಿಮ್ಮ ಅಪ್ಪಣೆಯಾದರೆ ಕರೆದುಕೊಂಡು ಬಂದುಬಿಡುತ್ತೇನೆ. ತಾಯಿಯ ಮನೆಯಲ್ಲೇ ಅವಳಿಗೆ ಹೆರಿಗೆಯಾಗಿ ಬಿಡಲಿ. ಸಹಾಯಕ್ಕೆ ನಾನಿದ್ದೇನಲ್ಲವೇ?” ಎಂದು ತೋರಿಕೆಗೆ ಸಡಗರಪಡುತ್ತ, ಆದರೆ ಆತಂಕದಲ್ಲಿ ಕೇಳಿದಳು. “ನಿಮಗೆ ನಿಮ್ಮ ಅಳಿಯ ಬ್ರಾಹ್ಮಣನಲ್ಲವೆಂದು ಮಗಳನ್ನೇನೂ ದೂರಮಾಡಬೇಕಿಲ್ಲವಲ್ಲ. ಅಲ್ಲದೆ ಹುಟ್ಟಲಿರುವ ಕೂಸು ಅರಿಯದ್ದು. ಅದಕ್ಕೆ ಯಾವ ಜಾತಿ?” ಎಂದಳು. “ನಾನು ಶೂದ್ರಳಲ್ಲವ?” ಎಂದು ಕಿಚಾಯಸಿದ್ದಳು. ಶಾಸ್ತಿಗಳು ಗಂಭೀರವಾಗಿ ಹೇಳಿದರು: “ಕರೆದುಕೊಂಡು ಬಾ”. ತನ್ನ ಮನಸ್ಸು ರಾಧೆಯ ಕೃಪೆಯಿಂದ ಸ್ಥಿಮಿತದಲ್ಲಿ ಉಳಿಯಲಿ ಭಗವತೀ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ ತನ್ನ ಶಾಪ ಕಳೆಯುವುದನ್ನು ನಿರೀಕ್ಷಿಸುತ್ತ, “ಆ ದರಿದ್ರ ಹುಡಗನಿಗೂ ಉಡುಪಿಯಲ್ಲಿ ಒಂದು ಗ್ಯಾರೇಜು ತೆಗೆಸಿಕೊಟ್ಟರಾಯಿತು. ನನ್ನ ಮಗಳು ದೂರವಿದ್ದುಬಿಟ್ಟರೆ ಯಾವ ಅಂಕೆ ಅಣತಿಯಿಲ್ಲದ ಅವನು ಕುಡಿದು ಕೆಟ್ಟುಹೋದಾನು” ಎಂದರು.

ಬಹಳ ಖುಷಿಯಲ್ಲೇ ಮಹಾದೇವಿಗೆ ಇದನ್ನೆಲ್ಲ ಹೇಳಿ, ಮೊಮ್ಮಗುವನ್ನು ತಮ್ಮ ಮನೆಯಲ್ಲಿ ಪಡೆಯಲು ಅಣಿ ಮಾಡುವುದೆಂದುಕೊಂಡು ಮನೆಗೆ ಬರುತ್ತಿದ್ದ ಶಾಸ್ತಿಗಳಿಗೆ ಹಠಾತ್ತನೆ ಹೀಗೂ ಎನ್ನಿಸಿತ್ತು: ‘ದಿನಕರ ನನ್ನ ಮಗನಲ್ಲದಿದ್ದರೆ ಆ ಟ್ರಂಕಿನಲ್ಲಿದ್ದ ಬಂಗಾರವೆಲ್ಲ ನನ್ನದೇ, ನನ್ನ ಮಗಳ ಮಗುವಿಗೆ ಸೇರಬೇಕಾದ ಆಸ್ತಿ ಅದು’. ‘ಹಾಗೆಲ್ಲ ನನಗೆ ಯೋಚನೆ ಬಾರದಂತೆ ನೋಡಿಕೋ ಭಗವತಿ’ ಎಂದು ಪ್ರಾರ್ಥಿಸುತ್ತ ಮನೆಯನ್ನು ಹೊಕ್ಕಿದ್ದೆ ಎಂಬುದನ್ನು ತಮ್ಮ ಮನೋಕ್ಲೇಶದಿಂದ ಮುಂದೆ ಉಂಟಾಗುತ್ತಿದ್ದ ತಳಮಳಗಳಲ್ಲಿ ಶಾಸ್ತಿಗಳು ನೆನೆಯುತ್ತಿದ್ದರು.

ಅಧ್ಯಾಯ ೩

ಅಯ್ಯಪ್ಪ ದರ್ಶನಕ್ಕಾಗಿ ಶಬರಿಮಲೆ ಬೆಟ್ಟ ಹತ್ತಿ ಇಳಿದದ್ದು ತನಗೊಂದು ಕೇವಲ ಪಕ್ನಿಕ್‌ನಂತಾಗಿ ಬಿಟ್ಟಿತೆಂದು ದಿನಕರನಿಗೆ ಆಶ್ಚರ್ಯವಾಗಿರಲಿಲ್ಲ. ಇಳಿದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದವನು ಉದ್ದೇಶಪೂರ್ವಕವಾದ ಸಾಧನೆಗೆ ಸಿಗುವುದಲ್ಲ ಅದು ಎಂದು ತನಗೇ ಹೇಳಿಕೊಂಡಿದ್ದ. ತಣ್ಣೀರು ಮಿಂದಿದ್ದ ತನ್ನ ಮೈಯನ್ನು ಖುಷಿಯಲ್ಲಿ ಒರೆಸಿಕೊಂಡು ಬೆಟ್ಟ ಹತ್ತುವ ಮುಂಚೆಯೇ ತಾನು ಕೊಂಡಿದ್ದ ಕೇರಳದ ಅಗಲವಾದ ಕೆಂಪು ಅಂಚಿನ ಪಂಚೆಯನ್ನುಟ್ಟು, ಖಾದಿಯ ಬಿಳಿ ಅಂಗಿಯನ್ನು ತೊಡುತ್ತಿದ್ದಾಗ ನೆನಪಾಗಿತ್ತು. ತನ್ನನ್ನು ಅಲ್ಲಾಡಿಸಿಬಿಟ್ಟಿದ್ದ ಮಂಗಳೂರಿನ ಚಳಿಗಾಲದ ಆ ಸಂಜೆ ಮುಂದಿನ ದಿನಗಳ ಕಳವಳಗಳಲ್ಲಿ ಮತ್ತೆ ಮತ್ತೆ ನೆನಪಾಗುವುದು ಇತ್ತು. ಕೈಯಲ್ಲಿ ತಂಬೂರಿ ಮೀಟುತ್ತ ಪದ್ಮಾಸನ ಹಾಕಿ ಹಾಡುತ್ತ ಪ್ರಸಾದ ಕೂತಿದ್ದ. ತನ್ನ ತಂದೆ ಯಾರು, ತಾಯಿ ಯಾರು ಎಂದು ಕಂಡರಿಯದ ತನಗೆ ಅವನನ್ನು ಕಂಡಕ್ಷಣದಲ್ಲಿ ಇವನು ನನ್ನ ಮಗನಿರಬಹುದೆ ಎಂಬ ಕುತೂಹಲ ಹುಟ್ಟಿತ್ತು. ಆದರೆ ತನ್ನನ್ನು ಕ್ರಮೇಣ ಆವರಿಸುತ್ತ ಹೋದ ಭಾವ: ಅವನ ನೀಳವಾದ ಕಣ್ಣುಗಳು ಅರ್ಧ ನಿದ್ರೆಯಲ್ಲಿ ಎಂಬತೆ ಅರೆ ಮುಚ್ಚಿ ತನ್ಮಯವಾಗಿದ್ದವು ಎಂಬುದು. ಸಪುರವಾದ, ಆದರೆ ಬಲವಾದ ಸ್ನಾಯುಗಳ ಅವನ ದೇಹ ನೆಟ್ಟಗೆ ಧ್ಯಾನಸ್ಥವಾಗಿತ್ತು. ಸಂಜೆಯ ಕೋಮಲವಾದ ನೆರಳಿನಲ್ಲಿ, ಆಕಾಶಕ್ಕೆ ತೆರೆದುಕೊಂಡಿದ್ದ ಹೊರಾಂಗಣದಲ್ಲಿ ಕೂತವನು ಹರೆಯದ ಮುನಿಕುಮಾರನಂತೆ ಕಂಡಿದ್ದ. ಅವನನ್ನು ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ತಾನು ತುಸು ದೂರ ನಿಂತು ನೋಡಿದ್ದೆ. ತಲೆಯ ಉದ್ದವಾದ ಕೂದಲನ್ನೂ ಮುಖದ ಗಡ್ಡವನ್ನೂ ಇಂದು ತಾನೆ ಮುಂಡನ ಮಾಡಿಸಿಕೊಂಡಿರಬೇಕು. ಮುಂಡನ ಮಾಡಿಸಿಕೊಂಡ ಜಾಗ ಪೇಲವವಾಗಿ ಬಹಳ ಕಾಲ ಸೂರ್ಯನ ಬಿಸಿಲಿನಿಂದ ಮುಚ್ಚಿಕೊಂಡಿತ್ತೆಂದು ತಿಳಿಯುವಂತಿತ್ತು. ಗಾಳಿಗೂ ಬಿಸಿಲಿಗೂ ಒಡ್ಡಿಕೊಂಡು ತಿರುಗಿದ ಅವನ ಮೈ ಬಣ್ಣ ನಿಷ್ಕಳಂಕವಾಗಿತ್ತು. ಗೋಪಿಯರಿಗೆ ಮತ್ತು ಬರಿಸಿದ್ದ ಶ್ಯಾಮ ವರ್ಣ ಅವನದು.

ಬಿಳಿಯ ಒಂದು ಧೋತ್ರವನ್ನು ಸೊಂಟಕ್ಕೆ ಸುತ್ತಿ, ಬಿಳಿಯ ಇನ್ನೊಂದು ಧೋತ್ರವನ್ನು ಹೆಗಲಿನ ಮೇಲೆ ಮೈ ಪರಿವೆಯಿಲ್ಲದಂತೆ ಚೆಲ್ಲಿಕೊಂಡಿದ್ದ. ಅವನ ಮೂಗು ತುಸು ಬಾಗಿ ನೀಳವಾದ್ದು, ಗದ್ದ ಧೃಡವಾದ್ದು, ಹಣೆ ವಿಶಾಲವಾದ್ದು ಎಂದು ಗಮನಿಸಿದ. ಅವನ ಕಿವಿಗಳು ಖಂಡಿತ ನಾರಾಯಣನದಂತೆ ಅಲ್ಲ – ತಾಯದರಂತೆ ಅವು. ಒಂಟಿಯನ್ನು ಹಾಕಿದ್ದರೆ ಎದ್ದು ಕಾಣಿಸಬಹುದಿತ್ತು. ಅವನ ಒಟ್ಟು ಮುಖದ ಲಾವಣ್ಯ ಹೆಂಗಸರನ್ನು ಮರುಳುಗೊಳಿಸಬಹುದಾದ್ದು. ಹೀಗೆ ಅನ್ನಿಸಿದಾಗ ತನ್ನ ಕಾಮುಕ ಚರಿತ್ರೆ ನೆನಪಾಗಿತ್ತು. ಅವನ ಮುಖ ಲಕ್ಷಣವನ್ನು ಹಾಗೆ ಪರಿಭಾವಿಸುವ ತನ್ನ ಗುಪ್ತ ಉದ್ದೇಶದಿಂದ ನಾಚಿಕೆಯೂ ಆಗಿತ್ತು. ಆದರೆ ಯಾಕೆ ನಾಚಬೇಕು?ಎಂದು ಅವನ ಸಂಗೀತದಿಂದ ಉತ್ತೇಜಿತನಾಗಿ ಯೋಚಿಸಿದ. ಬ್ರಹ್ಮ ಸೂತ್ರಕ್ಕೆ ಭಾಷ್ಯ ಬರೆಯುತ್ತಿದ್ದ ಆದಿಶಂಕರರು ಕಾಣಲು ಇವನಂತೆಯೇ ಇದ್ದಿರಬೇಕು. ಬಾಲ ಸನ್ಯಾಸಿಯಾಗಿದ್ದೂ ಅವರು ಗಾಢವಾದ ರತಿಜ್ಞಾನವಿದ್ದವರನ್ನು ಮೀರಿಸುವಂತೆ ದೇವಿಯನ್ನು ನಖಶಿಖಾಂತ ವರ್ಣಿಸಿದ್ದರು. ಚಂದ್ರಪ್ಪ ಕೇವಲ ಒಂದು ಚಡ್ಡಿಯನ್ನೂ ಬನೀನನ್ನೂ ಧರಿಸಿ, ಅಗೆಯುತ್ತಿದ್ದ ಹಾರೆಯನ್ನು ಪಕ್ಕದಲ್ಲಿರಿಸಿಕೊಂಡು, ಬಾಯಿ ತೆರೆದ ಬೆರಗಿನಲ್ಲಿ ಕೈಗಂಟಿದ ಕೆಸರನ್ನು ಲೆಖ್ಖಿಸದೆ ಪ್ರಸಾದ ಹಾಡುವುದನ್ನು ಕೇಳಿಸಿಕೊಳ್ಳುತ್ತಿದ್ದ. ತಾನು ಬಂದು ಸುಮ್ಮನೆ ಮನೆಯೆದುರಿನ ನಂದಬಟ್ಟಲ, ದಾಸವಾಳ, ಪಾರಿಜಾತ, ಸಂಪಿಗೆ ಮರಗಳ ತೋಟದ ನೆರಳಿನಲ್ಲಿ ನಿಂತಿದ್ದೆ. ಚಂದ್ರಪ್ಪನ ಶ್ರಮದ ಫಲವಾಗಿ ಹೂವುಗಳ ಸುಗಂಧ ಇಡೀ ತೋಟವನ್ನು ಆವರಿಸಿತ್ತು. ಮಗನನ್ನು ತಾನು ವಾತ್ಸಲ್ಯದಿಂದ ನೋಡುತ್ತಿರುವುದನ್ನು ಗಂಗೂ ಕಂಡಿರಬೇಕು. ಬೆಳ್ಳೀಬಟ್ಟಲಿನಲ್ಲಿ ಬಿಸಿ ಹಾಲನ್ನು ಹೊರಾಂಗಣದ ಚಿಟ್ಟೆಯ ಮೇಲಿಟ್ಟು, ‘ಬಂದಿರಾ’ ಎಂದು ಉಪಚರಿಸಿ, ಚಿಟ್ಟೆಯ ಮೇಲೆ ಬರುವಂತೆ ಕರೆದಿದ್ದಳು. ತಲೆಯ ಮೇಲೆ ಸೆರಗು ಹೊದ್ದು ಹಣೆಗೆ ಗಂಧವನ್ನಿಟ್ಟ ಗಂಗೂ ಋಷಿಪತ್ನಿಯಂತೆ ಕಂಡಿದ್ದಳು. ಚಿಟ್ಟೆ ಹತ್ತಿ ತಾನು ಕೂತೇ ಇದ್ದೆ – ಅದೆಷ್ಟು ಹೊತ್ತೋ ತಿಳಿಯದಂತೆ. ನೆರಳುಗಳು ಉದ್ದವಾಗಿ ದೀಪ ಹಚ್ಚುವ ಸಮಯವಾಗತೊಡಗಿತ್ತು. ಪ್ರಸಾದ ತನಗೇ ಹಾಡಿಕೊಳ್ಳುತ್ತಲೇ ಇದ್ದ – ನಿಶ್ಚಲನಾಗಿ ಕೂತು. ಯಾವ ಹಾವಭಾವವೂ ಇಲ್ಲದಂತೆ. ಅವನ ಆಲಾಪ ಅಲೆ‌ಅಲೆಯಾಗಿ ಅಲೆದು, ತಾನು ಹೊರಹೊಮ್ಮಿದ ಮೂಲ ಶೃತಿಗೆ ಮತ್ತೆ ಮತ್ತೆ ಬಂದು, ತಣಿದು, ಇಗೋ ಸರಳವಾಗಿ ಬಿಡುತ್ತ, ಇಗೋ ಮತ್ತೆ ಬಿಗಿಯಾಗಿ ಬಿಡುದ್ದ ಏರಿಳಿಯುವ ಸೋಜಿಗದಲ್ಲಿ ಪ್ರಸಾದ ತಾನು ಮುಟ್ಟಬೇಕಾದ್ದನ್ನು ಮುಟ್ಟಿದವನಂತೆ ಕಂಡಿದ್ದ. ತಾನು ಹುಡುಕುತ್ತಿರುವ ‘ಅದೃಷ್ಟ’ ಇವನು ಈಗ ಪಡೆದುಕೊಂಡ ಹಾಗೇ ಇರುತ್ತದೆ ಎನ್ನಿಸಿತ್ತು. ಚಲನೆಯಲ್ಲಿದ್ದೂ ಅದು ನಿಶ್ಚಲ. ನಿರಾಯಾಸವಾಗಿ ಚಲಿಸುವುದರಿಂದಲೇ ಅದು ನಿಶ್ಚಲ. ಆದರೆ ತನ್ನಂಥವರಿಗೆ ಅದು ಕ್ಷಣಿಕ. ತನ್ನ ಮಗನೇ ಅವನಾಗಿದ್ದರೂ ಏನು? ಆಗದಿದ್ದರೂ ಏನು? ತಾನು ಇನ್ನೂ ಮುಟ್ಟದ್ದನ್ನು ಅವನು ಮುಟ್ಟಿಬಿಟ್ಟಿದ್ದಾನೆ ಎನ್ನಿಸಿತ್ತು. ಆಗೀಗ ತನಗೆ ಹೊಳೆದಂತೆ ಮಾತ್ರ ಆಗುವುದನ್ನು ಅವನು ನಿಗಾ ಇಟ್ಟು ನೋಡಿರಬೇಕು. ಅವನ ಒಟ್ಟು ಶಾಂತವಾದ ಭಾವ ಹಾಗಿದೆ – ಭವದಲ್ಲಿದ್ದೂ ಭವದ ಎಗ್ಗಿಲ್ಲದಂತೆ ಇರುವುದು ಸಾಧ್ಯವೆಂದು ಅನ್ನಿಸುತ್ತಾನೆ. ಹೀಗೆ ಗುರುಭಾವದಿಂದ ತಾನು ಅವನನ್ನು ನೋಡಿದ್ದೆ. ಅದೊಂದು ಮಹೂರ್ತ. ತಾನು ಅವನ ತಂದೆಯಾದರೇನು? ಅಲ್ಲವಾದರೇನು? ಅವನ ಕಾಲನ್ನು ಮುಟ್ಟಿ ನಮಸ್ಕರಿಸಬೇಕು ಎನ್ನಿಸಿತು. ಹೀಗೆ ತನಗೆ ಅನ್ನಿಸುತ್ತಿದ್ದಂತೆಯೇ ಸ್ಥಿತಪ್ರಜ್ಞನಂತಿದ್ದ ಪ್ರಸಾದ ತನ್ನ ಸ್ವಪ್ನಸ್ಥವಾದ ಕಣ್ಣುಗಳನ್ನು ತೆರೆದಿದ್ದ. ಇವನು ಅಪ್ಪನೋ ಅಲ್ಲವೋ ಎನ್ನುವ ಅನುಮಾನವಾಗಲೀ, ಕುತೂಹಲವಾಗಲೀ, ಆತಂಕವಾಗಲೀ ಅವನಿಗೆ ಪ್ರಸ್ತುತವೇ ಅಲ್ಲವೆನ್ನುವಂತೆ ತನ್ನನ್ನು ಅವನ ಕಣ್ಣುಗಳಲ್ಲಿ ಇಡಿಯಾಗಿ ತಂದುಕೊಳ್ಳುವಂತೆ ನೋಡಿದ್ದ. ನಿರ್ವಿಕಾರದ ದಿವ್ಯವಾದ ಅವನ ನೋಟಕ್ಕೆ ವಶವಾಗಿ ತಾನೂ ಒಂದು ಕ್ಷಣ ಆಸೆಯಿಲ್ಲದಂತೆ ತೆರೆದುಕೊಂಡಿರಬೇಕು. ತಂಬೂರಿಯನ್ನು ಕಣ್ಣಿಗೆ ಒತ್ತಿಕೊಂಡು ಪ್ರಸಾದ ಥಟ್ಟನೇ ಎದ್ದು ನಿಂತಿದ್ದ. ಎಷ್ಟು ಸುಂದರನಾದ ಉದ್ದನೆಯ ಕೋಮಲ ಸ್ವಭಾವದ ಹುಡುಗ ಎಂದು ತನಗೆ ಆ ಕ್ಷಣದಲ್ಲಿ ಅವನ ಮೇಲೆ ಪುತ್ರ ವಾತ್ಸಲ್ಯ ಹುಟ್ಟಿಬಿಟ್ಟಿತು. ಮೋಹಕವೆಂದು ತನಗೆ ಕಾಣತೊಡಗಿದ್ದ ಪ್ರಸಾದನ ಕಣ್ಣುಗಳು ನಿಧಾನ ಮುಚ್ಚಿಕೊಂಡವು. ಆಮೇಲೆ ಕೈ ಮುಗಿದು ನಿಂತು, ದೇವರಿಗೆ ಎಂಬಂತೆ ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದ. ತಾನು ಹೊರಳಿಬಿಟ್ಟಂತೆನಿಸಿ ಆಶೀರ್ವಾದದ ಮಾತು ಹೊಳೆಯದೆ ಸೋಜಿಗವಾಗಿತ್ತು. ಅವನ ತಲೆಯನ್ನು ಮುಟ್ಟಿದ್ದೆ. ಮತ್ತೆ ಅವನ ಕೆನ್ನೆ ಹಿಡಿದು ನೆತ್ತಿಯನ್ನು ಮೂಸಿದ್ದೆ. ಇದನ್ನು ದೂರದಿಂದ ನೋಡುತ್ತ ನಿಂತಿದ್ದ ಗಂಗೂಗೆ ಕಣ್ಣು ತುಂಬಿಬಂದ್ದಿತ್ತು. ಅವಳಿಗೂ ಇದು ಮುಹೂರ್ತವೆಂದು ಕಾಣಿಸಿರಬೇಕು. ದೀಪ ಹಚ್ಚಿ ತನಗೇ ಎನ್ನುವಂತೆ ಹೇಳಿಕೊಂಡಳು: “ಇನ್ನು ಮುಂದೆ ನನ್ನ ಮಗ ಸನ್ಯಾಸಿ. ಯಾರಿಗೂ ಅವನು ನಮಸ್ಕಾರ ಮಾಡುವಂತಿಲ್ಲ. ಅವನೇ ಶ್ರೀಪಾದನಾಗಿಬಿಟ್ಟ.” ಆಮೇಲೆ ಸೆರಗಿನಿಂದ ಕಣ್ಣೊರೆಸಿಕೊಂಡಿದ್ದಳು. ಅವನ ಮೇಲಿನ ತಾಯ್ತನದ ಹಂಬಲಗಳನ್ನೆಲ್ಲ ಇನ್ನು ಬಿಟ್ಟುಕೊಡಬೇಕಾಗಿ ಬಂದ ತನ್ನ ಸ್ಥಿತಿಯನ್ನು ದುಃಖದಲ್ಲಿ ಅವಳು ಎದುರುಗೊಳ್ಳುತ್ತಲೇ ತನ್ನನ್ನು ‘ಹೋಗಿಬನ್ನಿ’ ಎಂದು ಉಪಚರಿಸಿ, ಗೇಟಿನ ತನಕ ಬಂದು ಕಳುಹಿಸಿದ್ದಳು.


ಮುಗಿಯಿತು

“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.