ಬ್ರಹ್ಮಾಂಡಮಂ ನಿರ್‍ಮಿಸಿದ ಕರ್‍ತಾರನದಟು
ಬಿಡಿಸಲಾಗದ ಒಗಟು; ಆ ಗೂಢತಮ ತಮೋ
ವಿಸ್ತೀರ್‍ಣದಲಿ ಬೆಳಕಿನರಿಲುಗಳ ಸೋದಿಸಿಹ
ಧುರಧರನು ವಿಜ್ಞಾನಿ; ಪೂರ್‍ಣತೆಯನರಿಯನೈ
ಸೃಷ್ಟಿಕರ್‍ತಾರನಾಡುಂಬೊಲದ ಕಮ್ಮಟಿಕೆ
ಧೀಂಕಿಡುವ ಮನುಜಕೃತಿ ಗೋಳಗುಮ್ಮಟವೈಸೆ?
ಮುಗಿಲನಿಲ್ಲಿಯೆ ನೆಲಕೆ ಎಳೆದು ತಂದಿಹ ಶಿಲ್ಪಿ
ಭವ್ಯತೆಗೆ ಗುಮ್ಮಟ ಕಿರೀಟವನೆ ತೊಡಿಸಿಹನು.
ಅಡಿಯಿಂದ ಮುಡಿಯನಿಟ್ಟಿಸೆ ಎದೆಯ ಮೇಲುರುಳಿ
ಬೀಳ್ವ, ತೆರ! ಹಮ್ಮು ಬಿಮ್ಮಿನ ಸೊಮ್ಮು ಹಮ್ಮದಂ-
ಬೋಗುತಿದೆ! ಇದರ ಗರ್‍ಭದಲ್ಲಿ ಪರಬೊಮ್ಮ ಗುರು
ಗುಮ್ಮ; ಬಯ್, ಹೊಗಳು, ನಗು, ಅಳು, ಹಾಡು, ಚೀರಾಡು
ಯಾವೆಲ್ಲವೇಳು ಸಲ ಪಡಿನುಡಿದು ಗುಪ್ತವನಿ-
ಸುವದಿರವು: ಇದು ಜಗದ ಬಗೆ, ದೃಷ್ಟಿಯೊಲು ಸೃಷ್ಟಿ.
*****