ನಾನೊಂದು ಸಿನಿಮಾ ಮಾಡಲಿದ್ದೇನೆ-ನಿಮಗೊಂದು ಅವಕಾಶ ಕೊಡಲಿದ್ದೇನೆ

ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ,

ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು.

ಅದರಿಂದಾಗಿ ನಾನು ನಡೆಸುತ್ತಿದ್ದ ಪತ್ರಿಕೆಗೆ ತಾತ್ಕಾಲಿಕ ವಿರಾಮ ನೀಡಿ ನನ್ನ ದೇಹದಲ್ಲಿ ಒಂದು ತೊಟ್ಟು ರಕ್ತ ಇರುವವರೆಗೆ ನಿಮ್ಮ ಏಳಿಗೆಗಾಗಿ ದುಡಿಯುವ ಮನಸ್ಸು ಮಾಡಿದ್ದೇನೆ.

ಸಿನಿ ಪತ್ರಕರ್ತನಾಗಿ ಅಲ್ಲಿ ಮಹತ್ತರವಾದುದನ್ನು ಸಾಧಿಸಬೇಕು ಎಂದು ಆಸೆಪಟ್ಟೆ. ಅದಕ್ಕಾಗೇ ಮೀಸಲಾಗಿದ್ದ ಸಂಘಗಳಿಂದ ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್ ಹಾಗೂ ವೇದಿಕೆ ಸಂಸ್ಥೆಗಳು ಏನಾದರೂ ಮಾಡಿ ಯಾವೆಂದು ಶಬರಿಯಂತೆ ಕಾದೆ. ಆದರೆ ಆ ಎರಡು ಸಂಸ್ಥೆಗಳನ್ನು ತಮ್ಮ ತಮ್ಮ ಜೇಬಿನಲ್ಲಿಟ್ಟುಕೊಂಡಿರುವ ಮಂದಿ ಸಂಸ್ಥೆಯ ಲೆಟರ್‌ಹೆಡ್ ಲಾಭ ಪಡೆಯುತ್ತ ಹೋದರೆ ಹೊರತು ಯುವ ಪೀಳಿಗೆಯ ಪತ್ರಕರ್ತರನ್ನು ಕ್ಯಾರೇ ಎನ್ನಲಿಲ್ಲ. ಸಮಿತಿ, ಕಮಿಟಿ ಮುಂತಾದವುಗಳಿಗೆ ಹಾರಲು ಸಂಸ್ಥೆ ಹೆಸರು ಉಪಯೋಗವಾಯಿತು. ಅವರಿಗೆ ‘ಜೈ’ ಎಂದವರೆಲ್ಲ ‘ಕುರಿಗಳು ಸಾರ್‍ ಕುರಿಗಳು’ ಎನ್ನುವ ಸ್ಥಿತಿ ಬಂತು.

ಆಗಲೆ ನಾನು ನಿರ್ಧರಿಸಿದ್ದು-ಪೇಪರ್‍ ಮಾಡುವುದಕ್ಕಿಂತ ಸಿನಿಮಾ ಟೀವಿ ಸೀರಿಯಲ್ ಮಾಡುವುದು ವಾಸಿ ಎಂದು. ಪೇಪರ್‍ ಮಾಡಹೊರಟವನು ಫ್ಲಾಪ್ ಆಗಬಹುದು-ಆದರೆ ಸಿನಿಮಾ ಮಾಡಹೋದವನು ‘ಚೀಟರ್‍’ ಎನ್ನಿಸಿಕೊಳ್ಳಬಹುದೆ ಹೊರತು ‘ಪಾಪರ್‍’ ಆಗುವುದು ಸಾಧ್ಯವಿಲ್ಲ ಎನಿಸಿತು. ಅದರಿಂದ ಈಗ ಸಿನಿರಂಗಕ್ಕೆ ಕಾಲಿಟ್ಟಿರುವೆ.

ನಾನೂ ಸುನೀಲ್‌ಕುಮಾರ್‍ ದೇಸಾಯಿಯವರಂತೆ ಹೊಸ ಮುಖಗಳನ್ನು ಹಾಕಿಕೊಂಡೇ ಚಿತ್ರ ಮಾಡುವೆ. “ಸುದೀಪ್ ಸಂಜೀವ್”ಗೆ ಅವರ ತಂದೆ ಸರೋವರ್‍ ಸಂಜೀವ್ ಗಾಡ್‌ಫಾದರಾಗಿದ್ದಾರೆ. ನಿಮ್ಮಂತಹವರಿಗೆ ಅಂಥ ಗಾಡ್‌ಫಾದರ್‌ಗಳಿಲ್ಲ ಎಂದು ನಾನು ಬಲ್ಲೆ.

ಅದರಿಂದ ಹತ್ತು-ಇಪ್ಪತ್ತು ಸಾವಿರ ಹಾಕಬಲ್ಲ ನಟ-ನಟಿಯರು ಇಂದೇ ಬನ್ನಿ. ನನ್ನ ಚಿತ್ರ ರಿಲೀಸ್ ಆದರೆ ನಾಳೆ ನೀವು ಗ್ಲಾಮರಸ್ ಸ್ಟಾರ್‍ಸ್ ಆಗಬಹುದು.

ಆಗ ಗಾಂಧೀನಗರದವರು ನಿಮ್ಮನ್ನು ಬುಕ್ ಮಾಡಲು ನಾ ಮುಂದು-ತಾ ಮುಂದು ಎಂದು ಬರುತ್ತಾರೆ. ಮೊದಲು ಹೀರೋ ಪಾತ್ರಕ್ಕೆ ೧೫ ಸಾವಿರ ೨೦ ಸಾವಿರ ಕೊಡಬಹುದು. ಒಂದು ಚಿತ್ರ ಕ್ಲಿಕ್ ಆದರೆ ಲಕ್ಷ-ಲಕ್ಷ ಕೊಡುವವರು ಹುಡುಕಿ ಬರುತ್ತಾರೆ.

ಚಿತ್ರ ಶತದಿನೋತ್ಸವ ಓಡಿದಲ್ಲಿ ನಿಮ್ಮ ಕಾಲ್‌ಷೀಟ್‌ಗೆ ವಿಲಿವಿಲಿ ವದ್ದಾಡುವವರು ಸಾಲು ಸಾಲು ಕ್ಯೂ ನಿಂತಾರು.

ಆಗ ನಿಮ್ಮ ಹೆಸರಿನಲ್ಲೊಂದು ಅಭಿಮಾನಿ ಸಂಘ ನೀವೇ ಆರಂಭಿಸಿದರೆ ಅದು ಬೃಹದಾಕಾರವಾಗಿ ಬೆಳೆಯುತ್ತದೆ.

ಮೊದಲ ಪ್ರದರ್ಶನಕ್ಕೆ ನೀವು ಸ್ವಲ್ಪ ತಡವಾಗಿ ಕಾರಿನಲ್ಲಿ ಬಂದಿಳಿಯಿರಿ. ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಎಲ್ಲರಿಗೂ ಸ್ಟೈಲಿಷ್ ಆಗಿ ಆಟೋಗ್ರಾಫ್ ಹಾಕಿ.

ನಿಮ್ಮ ಕೈಯಿಂದ ಖರ್ಚಾದರೂ ಚಿಂತೆಯಿಲ್ಲ ನಿಮ್ಮ ದೃಶ್ಯ ಬಂದಾಗ ವಿಶಿಲ್ ಹಾಕಲು-ಕಾಸೆಸೆಯಲು ಮಂದಿಯನ್ನು ಕರೆತನ್ನಿ. ಆಗ ಜನಪ್ರಿಯತೆ ಹೆಚ್ಚುತ್ತ ಹೋಗುತ್ತದೆ.

ಕೋಟಿ ಕೋಟಿ ಹಾಕಿದ ಚಿತ್ರಗಳು ಮಾತ್ರ ಹಣ ಮಾಡುತ್ತದೆ ಎಂಬುದು ಸುಳ್ಳು.

‘ಯಾರಿಗೆ ಸಾಲತ್ತೆ ಸಂಬಳ’ ಕಡಿಮೆ ವೆಚ್ಚದಲ್ಲಿ ತಯಾರಾದ ಚಿತ್ರ. ಆದರೂ ಅದೇಕೆ ಗೆದ್ದಿತು?

ಮಕ್ಕಳ ಆಸೆ-ಕನಸು, ಕೆಳ-ಮಧ್ಯಮ ವರ್ಗದ ಜನತೆಯ ಕಷ್ಟ-ಸುಖಗಳು ಹೇಳಿದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ?

ಅದಕ್ಕೆ ನಾನೀಗ ಅಂತದೇ ಕತೆ ಆರಿಸಿರುವೆ. ಕಥೆ ಏನು ಎಂದು ಈಗ ಕೇಳಬೇಡಿ?

ಪಾತ್ರಗಳು ಹೇಗಿರಬಹುದು ಎಂದು ಪತ್ತೇದಾರಿ ಕೆಲಸಕ್ಕೆ ಹೊರಡಬೇಡಿ. ಹಾಸ್ಯ ದೃಶ್ಯಗಳು ಹೇಗಿರಬಹುದು ಎಂದು ಈಗ ನಾನು ಹೇಳುವುದಿಲ್ಲ.

ಚಿತ್ರ ನಟ-ನಟಿಯರಾಗ ಬಯಸುವವರು ಹತ್ತು-ಇಪ್ಪತ್ತು-ಸಾವಿರ ಹಣ ಹಾಕಬಲ್ಲವರು ತಕ್ಷಣ ಬಂದು ನೋಡಿ.

ಮೇಲುಕೋಟೆ ಪ್ರೊಡಕ್ಷನ್ಸ್
ಪಂಗನಾಮ ಬಿಲ್ಡಿಂಗ್, ಕುಂಭಕೋಣ

ತಮ್ಮವ
ಮಿ.ವೆಂಕಣ್ಣ
ಚಿತ್ರ ನಿರ್ಮಾಪಕ

ಈ ಲೇಖನ ಹೇಗಿದೆ ಮೂರ್ತಿಗಳೆ ಎಂದ ವೆಂಕಣ್ಣ.

“ಆಹಾ!! ತಲೆ ಅಂದ್ರೆ ತಲೆ ಎಂಕ. ಛಾಟಿ ಇಲ್ಲದೆ ಬುಗುರಿ ಆಡಿಸಬಲ್ಲೆ ನೀನು” ಎಂದೆ.

ಈಗ ಈ ಚಿತ್ರದ ಮುಹೂರ್ತಕ್ಕೆ ಕಾದಿರುವೆ ನಾನೂ ಸಹ.
*****
(೨೮-೭-೨೦೦೦)