ಜನಾಕರ್ಷಣೆಗೊಂದು ಹೊಸ ಗಿಮಿಕ್ಸ್: ಆಂಟಿ ಪ್ರೀತ್ಸೆ

ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ.  ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ.  ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು.
ಇಂಥ ವೇಳೆ ಕೋಟಿ ಕೋಟಿ ವೆಚ್ಚದ ಚಿತ್ರ, ಭಾರೀ ನಟರು ಪರಭಾಷಾ ನಟಿಯರು, ವಿದೇಶದಲ್ಲಿ ಷೂಟಿಂಗ್ ಎಂಬೆಲ್ಲ ಆಮಿಷಗಳನ್ನು ಒಡ್ಡುತ್ತಿರುವ ನಿರ್ಮಾಪಕ-ನಿರ್ದೇಶಕರು ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ ಈಗ.
ಒಂದು ಕಾಲದಲ್ಲಿ ರವಿಚಂದ್ರನ್ ನೀರಿನಂತೆ ಹಣ ವೆಚ್ಚಿಸಿ ಗ್ಲಾಮರ್‍ ಜಗತ್ತಿನಲ್ಲೊಂದು ಕ್ರಾಂತಿಯನ್ನೇ ಮಾಡಿದರು. ಕ್ಯಾಸೆಟ್ ಮಾರಾಟದಲ್ಲಿ ಒಂದು ಭಾರೀ ಮೊತ್ತವಿದೆ  ಎಂಬುದನ್ನು ತೋರಿಸಿಕೊಟ್ಟರು.  ನಂತರ ಬಂದ ಉಪೇಂದ್ರ ತಮ್ಮ ಗಿಮ್ಮಿಕ್ಕುಗಳಿಂದಲೇ ಮುಗಿಲೆತ್ತರ ಬೆಳೆದು ಪಡ್ಡೆ ಹುಡುಗರ ಪ್ರಾಣಪ್ರಿಯರಾದರು.
ಹೆಸರಿಡುವುದರಲ್ಲಿ, ಚಿತ್ರಮುಖೇನ ಒಗಟು ನಿರ್ಮಿಸುವುದರಲ್ಲಿ, ಕಿಡ್ನಾಪ್ ಆದ ಉಪೇಂದ್ರ ಎಂದು ತಿಂದಿಕ್ಕಿ ತಮಾಷೆ ನೋಡಿ ಜನರನ್ನು ವಂಚಿಸುವುದರಲ್ಲಿ, ಅರಮನೆ ಅಂಗಳದಲ್ಲಿ ೩ ನಿಮಿಷದ ಒಂದು ಷಾಟ್‌ಗೆ ೨೦ ಲಕ್ಷ ೩೦ ಲಕ್ಷ ವೆಚ್ಚಿಸಿ ಗಮನ ಸೆಳೆಯುವುದರಲ್ಲಿ ಧನರಾಜರ ತಮಿಳು ಕನ್ನಡ ಚಿತ್ರಕ್ಕೆ ಎಚ್‌೨ಓ ಎಂದು ಹೆಸರಿಸಿ, ಕಾವೇರಿ ನೀರಿನ ಕತೆ ಚಿತ್ರಿಸುವಲ್ಲಿ ಮಗ್ನರಾಗಿ ಹಾಲಿವುಡ್‌ನಲ್ಲೇ ಚಿತ್ರೀಕರಣ ಎಂದು ರಾಮುಗಾಗಿ ‘ಹಾಲಿವುಡ್’ ನಿರ್ಮಿಸ ಹೊರಟು-ಸುದ್ದಿಗೆ ಒಳ್ಳೆಯ ಗ್ರಾಸವಾಗಿದ್ದಾರೆ.  ‘ಯಜಮಾನ’ದ ರೀಮೇಕ್ ಯಶಸ್ಸಿನಿಂದ ಸಂಪ್ರೀತರಾದ ರೆಹಮಾನ್ ‘ಹುಚ್ಚ’ ಮುಗಿಸಿ ಜಿಲ್ಲಾಧಿಕಾರಿ ಹಿಂದೆ ಹೊರಟು ಈಗ ‘ಹಾಲಪ್ಪ’ನ ಬಿಡುಗಡೆಗೆ ಸರಿಯಾದ ಸಮಯ ಎಂದು ನಿರ್ಧರಿಸಿ ಯಜಮಾನದ ಸಿಲ್ವರ್‍ ಜ್ಯೂಬಿಲಿ ಸಂಭ್ರಮದಲ್ಲಿದ್ದಾರೆ.
ಜಯಶ್ರೀದೇವಿ ಶ್ರೀ ಮಂಜುನಾಥ ಚಿತ್ರಕ್ಕೆ ಘಟಾನುಘಟಿಗಳನ್ನು ಕಲೆಹಾಕಿ ಇದು ಇನ್ನೊಂದು ಬಗೆ ಗಿಮಿಕ್ ಎಂಬುದನ್ನು ತೋರುತ್ತಿದ್ದಾರೆ.
ಇಂಥ ವೇಳೆ ಚಿತ್ರರಂಗಕ್ಕೆ ಅಡಿ ಇಟ್ಟ ಮುನಿರತ್ನ ಜಯಶ್ರೀದೇವಿಯಂತಹ ಹೆಣ್ಣು ೪೦೦ ಮೈ. ದೂರದಿಂದ ಬಂದು ಕನ್ನಡಿಗರ ಮೇಲೆ ಸವಾರಿ ಮಾಡುವುದಕ್ಕೆ ಕಿಡಿಕಾರಿ ವಾಸು ನಿರ್ದೇಶನದ ‘ಆಂಟಿ ಪ್ರೀತ್ಸೆ’ ಇಡೀ ಕರ್ನಾಟಕದಲ್ಲಿ ಜನಪ್ರಿಯ ಮಾಡಲು ತಮ್ಮದೇ ಆದ ಹೊಸ ಯೋಜನೆ ಹಾಕಿದ್ದಾರೆ.
ಇದು ಈವರೆಗೆ ಯಾರೂ ಮಾಡದಿದ್ದಂತಹ ಭಾರೀ ಪ್ರಯೋಗ.
ಆ ವಿವರ ಗಮನವಿಟ್ಟು ಓದಿ.
‘ಆಂಟಿ ಪ್ರೀತ್ಸೆ’ ಬಿಡುಗಡೆ ಆದ ದಿನ ಕರ್ನಾಟಕ ರಾಜ್ಯಾದ್ಯಂತ ಮೊದಲನೆ ದಿನ ಮೊದಲನೆ ಆಟ ಎಲ್ಲರಿಗೂ ಉಚಿತ ಪ್ರವೇಶ.
ಖುಶ್‌ಬೂ, ಅನಂತ್‌ನಾಗ್, ರಾಂ ಕುಮಾರ್‍ ಮುಂತಾದವರೆಲ್ಲ ಅಭಿನಯಿಸಿರುವ ಚಿತ್ರ ಪುಕ್ಕಟೆಯಾಗಿ ತೋರುತ್ತಾರೆ ಎಂದರೆ ಯಾರು ತಾನೆ ಬಿಡುತ್ತಾರೆ.
ಜನಜಂಗುಳಿ ಗ್ಯಾರಂಟಿ ಇರುತ್ತದೆ ಎಂದ ಮೇಲೆ ಎಲ್ಲ ಚಿತ್ರಮಂದಿರಗಳ ಬಳಿಯೂ ಪೊಲೀಸ್ ಕಾವಲು ಇರಲೇಬೇಕು.
ತೀರಾ ನುಗ್ಗಾಟವಾದರೆ ಲಘುಲಾಠಿ ಪ್ರಹಾರಕ್ಕೂ ಸಿದ್ಧರಿರಬೇಕು ಮಂದಿ.
ಎಲ್ಲ ಚಿತ್ರಮಂದಿರಗಳು ‘ಫಸ್ಟ್ ಷೋ’ ಹೌಸ್‌ಫುಲ್ ಆಗುವುದರಿಂದ ನಂತರ ಮೌತ್ ಪಬ್ಲಿಸಿಟಿ ಜೋರಾಗಿರುತ್ತದೆ ಎಂಬುದು ಮುನಿರತ್ನ ಅವರ ಗ್ರಹಿಕೆ.
    ಅನಂತರ ಆಂಟಿಗೆ ಉಚಿತ ಪ್ರವೇಶ.
    ಅಂಕಲ್‌ಗೆ ಟಿಕೆಟ್ ಕೊಂಡರೆ ಮಾತ್ರ ಪ್ರವೇಶ.
    ತಾತನಿಗೆ ಕಾಸಂತೆ – ಅಜ್ಜಿಗೆ ಕಾಸಿಲ್ಲವಂತೆ.
    ಹೇಗಿದೆ ಪ್ಲಾನು?
ಅಲ್ಲ,  ಇಂದು ಚಿತ್ರ ತೆಗೆಯುವುದೇ ಒಂದು ಭಾರೀ ಸಮಸ್ಯೆ.  ಚಿತ್ರ ಸಿದ್ಧವಾದರೂ ಚಿತ್ರಮಂದಿರ ದಕ್ಕಿಸಿಕೊಳ್ಳುವುದು ಇದ್ದದ್ದೂ ಭಾರೀ ಸಮಸ್ಯೆ.  ಚಿತ್ರದ ಒಂದು ಪ್ರಿಂಟ್ ಹಾಕಿಸುವುದೆಂದರೆ ಎದೆ ನಡುಗುವ ದಿನ ಇಂದು.  ಅಂಥದರಲ್ಲಿ ಪ್ರಿಂಟು ಹಾಕಿಸಿ, ಬಾಡಿಗೆಯೂ ಕಟ್ಟಿ ಎಲ್ಲರಿಗೂ ‘ಫ್ರೀ ಷೋ’ ಎನ್ನಬೇಕಾದರೆ ನಿರ್ಮಾಪಕ ಎಂಟೆದೆಯವರು ಎಂಬುದರಲ್ಲಿ ಅನುಮಾನವೇ ಇಲ್ಲ.
‘ಟಿ.ವಿ. ಮುಂದೆ ಕುಳಿತ ಮಂದಿಯನ್ನು ಚಿತ್ರಮಂದಿರಕ್ಕೆ ಕರೆತರಲು ಹಣ ಸುರಿದು ಎಂತೆಂಥ ಸರ್ಕಸ್ ಮಾಡಬೇಕಾದ ದಿನ ಬಂದು ಹೋಯಿತು’ ಎಂದು ಕೊರಗಿದವರು ಬಹುಮಂದಿ.
ನಿರ್ದೇಶಕರ ನಟ-ನಟಿಯರ ಜನಪ್ರಿಯತೆ ನೋಡಿ ಚಿತ್ರಮಂದಿರ ಗಿಜಿಗಿಜಿ ತುಂಬುವ ದಿನ ಬರುವಂಥ ಚಿತ್ರಗಳನ್ನು ತೆಗೆಯುವುದು ಸಾಧ್ಯವೇ ಇಲ್ಲವೆ?
-‘ಮಫತ್ತಾಗಿ ಬಿಟ್ಟಾಗ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.  ಅದರಿಂದ ಚಿತ್ರ ಜನಪ್ರಿಯವಾದರೂ ಆದೀತು’ ಎಂಬುದು ಹಲವರ ಲೆಕ್ಕಾಚಾರ.
‘ಬಾಣಂತಿ ಖುಶ್‌ಬೂವನ್ನು ಕಾಣಲು ಖುಶಿಯಿಂದ ಮಂದಿ ಬರುವುದು ಗ್ಯಾರಂಟಿ’ ಎಂಬುದು ಖುಶ್‌ಬೂ ಅಭಿಮಾನಿಯೊಬ್ಬರ ಅನಿಸಿಕೆ.
‘ಸ್ವಲ್ಪ ಧಡೂತಿಯಾಗಿರುವವರೆಲ್ಲ ನೈಟಿ ಹಾಕಿಕೊಂಡು ‘ನಾನೂ ಆಂಟಿ’ ಎಂದು ಚಿತ್ರಮಂದಿರಕ್ಕೆ ತೆರಳಬಹುದು’
ನಟ-ನಟಿಯರ ಹೆಸರಿಗೆ ಚಿತ್ರಮಂದಿರ ತುಂಬುತ್ತಿದ್ದ ದಿನಗಳಿದ್ದವು.  ನಂತರ ಕಣಗಾಲ್‌ರಂಥ ನಿರ್ದೇಶಕರು ಸ್ಟಾರ್‍ ವ್ಯಾಲ್ಯೂ ಗಿಟ್ಟಿಸಿಕೊಂಡು ಅವರ ಹೆಸರಿಗೆ ಜನ ಬರುವಂತೆ ಮಾಡಿಕೊಂಡರು.
ಹೊಸ ಮುಖಗಳಾದರೂ ಚಿಂತೆಯಿಲ್ಲ ಫ್ರೆಶ್‌ನೆಸ್ ಮತ್ತು ರಿಚ್‌ನೆಸ್ ಇದ್ದರೆ ಜನ ತುಂಬುತ್ತಾರೆ ಎಂಬುದನ್ನು ‘ನನ್ನ ಪ್ರೀತಿಯ ಹುಡುಗಿ’ ತೋರಿದೆ.  ಹಾಗೆ ನಾಗತಿಹಳ್ಳಿ ಕೂಡ ಒಬ್ಬ ಸ್ಟಾರ್‍ ಆಗಿದ್ದಾರೆ.
ಇಂತ ಪ್ರಯತ್ನಗಳು ಹೆಚ್ಚಿ ಕತೆ ಕಾದಂಬರಿ ಚಿತ್ರಗಳಿಗೆ ಜನ ತಾವಾಗಿ ಟಿಕೇಟು ಕೊಂಡು ಬರುವಂತಾದರೆ ಅದು ನಿಜವಾಗಿ ಚಿತ್ರರಂಗದ ಉದ್ಧಾರ.
ಅಂಥ ದಿನ ಬರಲಿ ಎಂದು ನೀವು ಆಶಿಸುತ್ತೀರಲ್ಲವೆ?
*****
(೧೮-೫-೨೦೦೧)