ಕನ್ನಡ ರಂಗಭೂಮಿ ಸಿನಿಮಾರಂಗದ ಏಳುಬೀಳುಗಳನ್ನು ತುಂಬಾ ಚೆನ್ನಾಗಿ ಬಲ್ಲ ‘ಮಿಸ್ಟರ್ ಎಕ್ಸ್’ ಮೊನ್ನೆ ಅಪರೂಪಕ್ಕೆ ಸಿಕ್ಕ. ನಾನು ಆಕಾಶವಾಣಿಯಲ್ಲಿ ದುಡಿಯುತ್ತಿದ್ದಾಗ ಗಾಳಿಯ ಮೇಲೆ ತೇಲಿಬಿಟ್ಟ ಪಾತ್ರಗಳಲ್ಲಿ ‘ಈರಣ್ಣನಷ್ಟೇ’ ‘ಮಿಸ್ಟರ್ ಎಕ್ಸ್’ ಕೂಡಾ ಮುಖ್ಯ. ಅದರಿಂದ ಅವನನ್ನೇ ಮಾತಿಗೆಳೆದೆ.
‘ಏನನ್ನುತ್ತೆ ಆಕಾಶವಾಣಿ ಈಗ’ ಎಂದೆ.
ಟೀವಿ ಬಂದ ಮೇಲೆ ಆಕಾಶವಾಣಿ ಕೇಳುವವರು ಕಡಿಮೆ ಆಗಿದಾರೆ. ಆದರೆ ಎಐಆರ್‌ಗೂ ಒಂದು ಮಹತ್ವವಿದೆ ಎಂದು ತೋರಿಸಿಕೊಟ್ಟವನು ಕಾಡುಗಳ್ಳ ವೀರಪ್ಪನ್. ಡಾ.ರಾಜ್‌ಕುಮಾರ್ ಮನೆಯವರೆಲ್ಲ ಎಐಆರ್ ಮಹತ್ವ ಅರಿತುದು ಆಗಲೇ. ಅದಕ್ಕೇ ಇಡೀ ರಾಜ್ ಕುಟುಂಬ ಆಕಾಶವಾಣಿಗೆ ಕೃತಜ್ಞರಾಗಿದ್ದೇವೆ ಎಂದು ನೂರು ಬಾರಿ ಹೇಳಿ ಆಗಿದೆ.
ಡಾಟ್ ಕಾಂಗಳು ಬಂದ ಮೇಲೆ ಪತ್ರಿಕೆಯ ಮಹತ್ವ ಕಡಿಮೆ ಆಗಿದೆ ಎಂದು ಕೇಳಿದ್ದೇನಲ್ಲ. ಹಾಗೇನಿಲ್ಲ. ಎಷ್ಟೋಮಂದಿ ಕಂಪ್ಯೂಟರ್‌ಗಳನ್ನೇ ನೋಡಿಲ್ಲ ಇಂದೂ, ಈಗಲೂ ಶುಕ್ರವಾರದ ಸಿನಿಮಾ ಪುಟಗಳಿಗಾಗಿ ಪತ್ರಿಕೆಗಳು ಬಿಸಿ ದೋಸೆಯಂತೆ ಖರ್ಚಾಗುತ್ತಿವೆಯಲ್ಲ ಅಂದಮೇಲೆ ನಟ-ನಟಿಯರಿಗೆ ಫುಲ್ ಪಬ್ಲಿಸಿಟಿ ಎಂದ ಹಾಗಾಯಿತು.
ಛೆ-ಛೆ ಎಂಥ ಫಲಾತನ್ ನಟ ನಟಿಯಾಗಲಿ ರಂಗಭೂಮಿಯಲ್ಲಿ ಅವರೆಷ್ಟೇ ಮೇಜರ್ ನಾಟಕಗಳನ್ನು ಮಾಡಿರಲಿ ಅವರ ಬಗ್ಗೆ ಪತ್ರಿಕೆಗಳಲ್ಲಿ ನಾಲ್ಕು ಸಾಲು ಬರೆಯುವವರು ಅಪರೂಪ. ಹಾಗೇನಾದರೂ ಕೆಲವರದು ಬಂದರೆ ಪತ್ರಿಕಾವಲಯದ ಸ್ವಿಚ್‌ಬೋರ್ಡ್‌ಗಳನ್ನು ಆಪರೇಟ್ ಮಾಡುವುದು ಅವರಿಗೆ ಗೊತ್ತು – ‘ಲಾಬಿ’ ಮಾಡುವುದೇ ಅಂಥ ಹಲವರ ಹಾಬಿ.
ನಾಟಕ ರಂಗದ ನಟನಟಿಯರ ಬಗ್ಗೆ ಬರೆಯದೆ ಸಿನಿಮಾದ ನಾಲ್ಕು ಪುಟ ತುಂಬುತ್ತಾರೆ ಹೇಗೆ?
ಡಬ್ಬ ನಟ-ನಟಿಯರಾದರೂ ಚಿಂತೆಯಿಲ್ಲ. ಅವರೊಂದು ಡಬ್ಬಾ ಫಿಲಮ್‌ನಲ್ಲಿ ಮಾಡಿ ಪ್ರೆಸ್‌ಮೀಟ್ ಕರೆದರೆ ಪಾರ್ಟಿ ನೀಡಿ ಹರಟಿದರೆ ಮುಂದಿನ ಶುಕ್ರವಾರ ಕಲರ್ ಫೋಟೋ ಮತ್ತು ಸಂದರ್ಶನ ಗ್ಯಾರಂಟಿ ಎನ್ನುವುದನ್ನೀಗ ಕಾಣಬಹುದು.
ನಟಿ ಮುದ್ದಾಗಿದ್ದರೆ, ಹಾಯ್ ಎನ್ನುತ್ತ ನೆಗೆ ಮಲ್ಲಿಗೆ ಚೆಲ್ಲಿದರೆ, ವಸ್ತ್ರ ಧರಿಸುವುದೇ ನನಗೆ ಅಲರ್ಜಿ ಎಂಬ ಮಾತು ಸ್ಪಷ್ಟವಾಗಿ ಹೇಳಿದರೆ ಅಂಥ ನಟಿಗೆ ಸ್ಪೆಷಲ್ ಫೋಟೋ ಸೆಷನ್‌ಗಳಾಗುತ್ತದೆ. ಸೆನ್‌ಷೇಶನಲ್ ಎನ್ನಬಹುದಾದಂಥ ಪೋಟೋಗಳು ಮುಂದಿನ ಶುಕ್ರವಾರ ರಂಗುರಂಗಾಗಿ ರಾರಾಜಿಸುತ್ತವೆ.
ಅಭಿನಯವೇ ಗೊತ್ತಿಲ್ಲದ ಆಕೆ ಏನು ಭಾವನೆಗಳನ್ನು ವ್ಯಕ್ತಪಡಿಸಿಯಾಳು. ಕನ್ನಡವೇ ಗೊತ್ತಿಲ್ಲದ ಪರಭಾಷಾ ಗಿಣಿಯಾದರೆ ಆಕೆಯನ್ನು ನಿರ್ದೇಶಕ ಹೇಗೆ ದುಡಿಸಿಕೊಳ್ಳುವ?
ಸೃಜನಶೀಲ ನಿರ್ದೇಶಕನಾದರೆ ಸೆಟ್ ಮೇಲೆ ದುಡಿಸಿಕೊಳ್ಳುವ, ಖಯಾಲಿ ನಿರ್ದೇಶಕರಾದರೆ ದುಡುಸಿಕೊಳ್ಳುವ ಸ್ಥಳವೇ ಬೇರೆ. ಕನ್ನಡದ ಬಗ್ಗೆ ಉದ್ದುದ್ದ ಮಾತನಾಡುತ್ತ, ಕನ್ನಡವೇ ನನ್ನ ಜೀವನದ ಉಸಿರು ಎನ್ನುವ ಮಂದಿಯೂ ಪರಭಾಷಾ ನಟಿಯರಿಗೆ ಅಗ್ರಮನ್ನಣೆ ಸಲ್ಲಿಸುತ್ತಿರುವುದು ಸರಿಯೇ? ದೋಷವಿರುವುದು ಕನ್ನಡ ಚಿತ್ರ ರಸಿಕರಲ್ಲೇ. ಅವರೊಮ್ಮೆ ಪರಭಾಷಾ ನಟಿಯರು ಅಭಿನಯಿಸಿದ ಚಿತ್ರಗಳನ್ನು ನಾವು ನೊಡುವುದಿಲ್ಲ ಎಂಬ ಮನಸು ಮಾಡಿದರೆ ನಿರ್ಮಾಪಕ ನಿರ್ದೇಶಕರು ಕನ್ನಡ ನಟ-ನಟಿಯರನ್ನೇ ಹಾಕಿ ಚಿತ್ರ ಮಾಡುವ ದಿನ ಬರುತ್ತದೆ. ಅಂಥ ಚಿತ್ರಗಳನ್ನು ‘ಕ್ಯೂ’ ನಿಂತು ನೋಡುವ ಮನಸು ಮಾಡಬೇಕಷ್ಟೆ ಕನ್ನಡಿಗರು.
ರಮೇಶ್, ಶಿವರಾಜ್‌ಕುಮಾರ್, ರವಿಚಂದ್ರನ್, ಅವರ ಚಿತ್ರಗಳು ವಾರಕ್ಕೊಂದು ಬಂದರೆ ಅವರಿಗೆ ಅವರೇ ಕಾಂಪಿಟೇಷನ್ ಮಾಡಿಕೊಂಡಂತಾಗುವುದಿಲ್ಲವೆ?
‘ಅದೃಷ್ಟ ಬಂದಾಗ ಬಾಚಿಕೋ’ ಎನ್ನುತ್ತಾರಲ್ಲ ಹಾಗೆ, ಕಾಲ್‌ಷೀಟ್ ಕೇಳಿದವರಿಗೆಲ್ಲ- ಕಥೆ ಕೇಳದೆ-ಪಾತ್ರಗಳಲ್ಲಿ ಚೂಸಿ ಆಗಿರದೆ ‘ಕೋ’ ಅನ್ನುತ್ತ ಹೋದರೆ ಈ ಸಮಸ್ಯೆ ಅನಿವಾರ್ಯವಾಗಿ ಎದುರಾಗುತ್ತದೆ. ಇದಕ್ಕೆ ಮದ್ದನ್ನ ಅವರವರೇ ಕಂಡುಹಿಡಿದುಕೊಳ್ಳಬೇಕು.
ಒಳ್ಳೆ ಥಿಯೇಟರ್‌ಗಳು ಬಲಾಢ್ಯರಿಗೆ ಮಾತ್ರ ಸಿಗುತ್ತೆ. ಸಿಕ್ಕಿದ ಥಿಯೇಟರ್‌ನಲ್ಲಿ ಚಿತ್ರ ಚೆನ್ನಾಗಿ ಓಡುತ್ತಿದ್ದರೂ ಅದನ್ನು ಕೀಳಿಸಿ ತಮ್ಮ ಚಿತ್ರ ಹಾಕುವ ಮಹಾಮಹಿಮರು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆ. ಇದೊಂದು ವಿಷವ್ಯೂಹ. ಕತ್ತಿ, ಚಾಕು, ಚೂರಿಗಳೇ ಚಿತ್ರರಂಗವನ್ನು ಆಳುವ ದಿನ ಬಂದು ಹೋಗಿದೆ. ಹಣವೇ ಮುಖ್ಯವಾಗಿರುವ ಈ ಜಗತ್ತಿನಲ್ಲಿ ಒಬ್ಬರನ್ನೊಬ್ಬರು ತುಳಿದು ಮುಂದೆ ಬರುವುದೇ ಇಂದಿನ ನೀತಿ ಆಗಿದೆ.
ಅದರಲ್ಲೇನೂ ಅನುಮಾನವಿಲ್ಲ. ಹಣ ಅಷ್ಟೇ ಮುಖ್ಯ ಈಗ. ಸಿನಿಮಾ ಎಂದರೆ ಸಿಡಿಸಿಡಿ ಎನ್ನುತ್ತಿದ್ದ ರಂಗನಟ-ನಿರ್ದೇಶಕರು ಈಗ ಸಿನಿಮಾದಲ್ಲಿ ಮುಳುಗಿಲ್ಲವೆ? ಹೌದು, ಕುಣಿತಗಳಿಂದ ನಾಟಕ ಕುಲಗೆಟ್ಟು ಹೋಯಿತು ಎಂದು ಬಿ.ವಿ.ಕಾರಂತರನ್ನು ಜರಿದವರು – ಸಿನಿಮಾರಂಗಕ್ಕೆ ಬಂದಾಗ ಕಾಂಪ್ರೋಮೈಸ್ ಆಗಿ ಹಾಡುಗಳನ್ನು ಹಾಕಿಲ್ಲವೆ? ಮುಂಚೆ ವಿಚಾರ ಸಂಕಿರಣಗಳಲ್ಲಿ ಎಸ್.ಎಲ್. ಭೈರಪ್ಪನವರನ್ನು ಗೇಲಿ ಮಾಡಿದವರು ಕಾದಂಬರಿ ರೈಟ್ಸ್ ಚಿತ್ರಕ್ಕೆಂದು ಪಡೆದುಕೊಳ್ಳುವಾಗ ನೀವೇ ‘ಇಂದ್ರ ಚಂದ್ರ’ ಎಂದು ಅವರನ್ನು ಹಾಡಿ ಹೊಗಳಿಲ್ಲವೆ?
ಹಾಗಾದರಿದು ಒಂದು ರೀತಿಯ ದ್ವಂದ್ವದ ಜಗತ್ತು ಎನ್ನಿ.
ಇಲ್ಲಿ ನಾವು ಕಾಣುವುದು ಕೇಳುವುದು ತುಟಿಯಂಚಿನ ಮಾತುಗಳೇ ಹೊರತು, ಹೃದಯದ ಅಂತರಾಳದಿಂದ ಬರುವಂಥ ಮಾತುಗಳಲ್ಲ. ಇಲ್ಲಿ ಗೆದ್ದ ಕುದುರೆಗೆ ಮನ್ನಣೆಯೇ ಹೊರತು ಸೋತ ಕುದುರೆಗಳಿಗಲ್ಲ.
ಚಿತ್ರರಂಗದಲ್ಲೀಗ ರೀಮೇಕ್ ಹಾವಳಿ ಅತಿಯಾಗಿದೆಯಲ್ಲ. ಬಹಳಷ್ಟು ಪತ್ರಕರ್ತರೂ ಈಗ ಸಿನಿಮಾ-ಟೀವಿಗಳಿಗೆ ನುಗ್ಗಿದ್ದಾರೆ. ‘ಎಷ್ಟಾದರೂ ಖರ್ಚಾಗಲಿ ಒಳ್ಳೆ ಕತೆ ಇದ್ದರೆ ಕೊಡಿ’ ಎಂದು ಕುಮಾರಸ್ವಾಮಿಯವರು ಹೇಳಿದರಂತೆ. ರಾಷ್ಟ್ರಗೀತೆ ಮಾಡಿದ ಕೆ.ಮಂಜು ಸಹಾ ಹೇಳುತ್ತಲೆ ಇರುತ್ತಾರೆ. ಇಂಥ ವೇಳೆ ನಾಗೇಶ್‌ಕುಮಾರ್, ಯೋಗೀಶ್ವರ್ ಅಂಥವರೂ ದನಿಗೂಡಿಸುತ್ತಾರೆ. ‘ಕೊಡಬಹುದಲ್ಲವೆ ಒಳ್ಳೆ ಕಥೆಗಳನ್ನು’ ಪತ್ರಕರ್ತರು ಎಂದಾಗ ‘ಹೌದಲ್ಲ’ ಎಂದುಕೊಂಡೆ, ೨೦೦೧ರಲ್ಲಿ ಪತ್ರಕರ್ತರ ಚಿತ್ರಗಳೂ ಕಥೆಯಾದಾವು. ಆ ಹೊತ್ತಿಗೆ ವಿಮರ್ಶೆ ಬರೆಯಲು ಮತ್ತೊಬ್ಬ ಯುವ ಪತ್ರಕರ್ತ ಹುಟ್ಟಿರುತ್ತಾರೆ.
– ಜೈ ಕನ್ನಡಾಂಬೆ
*****
(೯-೨-೨೦೦೦)