ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ ಆಗದೆ ಕೆಳಗೆ ಬೀಳಲೂ ಆಗದೆ ಹೆಪ್ಪುಗಟ್ಟಿದ ಹಿಮದ ರಾಶಿ, ಮುಂದೆ ಕಾರಿನ ಕನ್ನಡಿಯಿಂದ ನೇತಾಡುವ ಸ್ನೋವೈಟ್, ಕೆಳಗೆ ಡ್ಯಾಶ್‌ಬೋರ್ಡಿನ ಮೇಲೆ ಗಾಜಿನಲ್ಲಿ ಬಂಧಿಯಾಗಿ ಕಾರಿನ ಸುಖವಾದ ನಿಯಂತ್ರಿತ ಹವೆಯಿಂದ ವಂಚಿತನಾಗುತ್ತಿರುವ ಶ್ರೀಗಂಧದ ವೆಂಕಟರಮಣ, ಕಪ್ ಹೋಲ್ಡರಿನಲ್ಲಿ ಆಗತಾನೆ ತುಂಬಿಸಿದ ಬಿಸಿಯಾಗಿ ಹಬೆಯಾಡುವ ಕಾಫಿ-ಎಲ್ಲವನ್ನೂ ಒಟ್ಟಿಗೆ ಅನುಭವಿಸುವ ತವಕದಲ್ಲಿ ಕಾರಿನ ಸ್ಟೀರಿಯೋ ಹಾಕಿದ, ಯೋಗಣ್ಣ. ” ವ್ಯಾಸಂ ವಸಿಷ್ಟನಪ್ತಾರಂ” ರಾಗವಾಗಿ ಆರಂಭಿಸಿದ ಸುಬ್ಬಲಕ್ಷ್ಮಿಯನ್ನು ಕೇಳಿದಾಕ್ಷಣ ” ಓ, ಇದು” ಎನ್ನಿಸಿದರೂ ಕೆಸೆಟ್ಟನ್ನು ಬದಲಿಸಲು ಮನಸ್ಸಾಗಲಿಲ್ಲ, ಅಥವಾ ಧೈರ್ಯವಾಗಲಿಲ್ಲ. ಎಲ್ಲದಕ್ಕಿಂತ ಶ್ರೇಷ್ಟವಾದುದಂತೆ ವಿಷ್ಣುಸಹಸ್ರನಾಮ. ನಿತ್ಯ ಇದನ್ನು ಪಠನ ಮಾಡಿದರೆ ರೋಗರುಜಿನಾದಿಗಳು ಹತ್ತಿರ ಸೇರುವುದಿಲ್ಲವಂತೆ. ಸಾಕ್ಷಾತ್ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಮಹಾಭಾರತದ ಯುದ್ಧಾನಂತರ ಹೇಳಿದ ಭಗವಾನ್ ವಿಷ್ಣುವಿನ ಸಹಸ್ರನಾಮಾಂಕಿತಗಳೇ ಇವು. ಪ್ರತಿಪಾರ್ಶ್ವದಲ್ಲಿರುವ ಮೂವತ್ತಾರು ಸಹಸ್ರನಾಡಿಗಳನ್ನು ಶುದ್ಧಿಗೊಳಿಸುತ್ತದಂತೆ ಈ ಸಹಸ್ರನಾಮ. ಪ್ರತಿ ನಾಡಿಗೊಂದರಂತೆ ಸೃಷ್ಟಿಯಾಗಿದ್ದ ಬೃಹತಿ ಸಹಸ್ರನಾಮದ ಸಂಕುಚಿತ ರೂಪವೇ ಇದು. ಎಪ್ಪತ್ತೆರಡು ಸಹಸ್ರ ನಾಡಿಗಳಿಗೊಂದರಂತೆ ಇದ್ದ ಕೋಟ್ಯಾನುಕೋಟಿ ನಾಮಪದಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡರಲ್ಲವೇ. ಹೀಗೆ ಮಾಡಿದ್ದು ಯಾರಿರಬಹುದು. ಅದು ಮುಖ್ಯವೇ. ಇರಲಿಕ್ಕಿಲ್ಲ. ಇಷ್ಟಾಗಿಯೂ ಅದರಲ್ಲೇ ಹೇಳಿಲ್ಲವೇ “ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮತಸ್ತುಲ್ಯಂ ರಾಮನಾಮ ವರಾನನೇ.” ಶ್ರೀರಾಮರಾಮ ಎಂದುಬಿಟ್ಟರೆ ಅಥವಾ ಇದೊಂದು ಸ್ತೋತ್ರವನ್ನು ಹೇಳಿಬಿಟ್ಟರೆ ಸಾಕು, ಸಹಸ್ರನಾಮಪಠನದ ಪುಣ್ಯ ಬಂದುಬಿಡುತ್ತದಂತೆ. ಹಾಗಿದ್ದಾಗ್ಯೂ ಏಕೆ ಹೇಳಬೇಕು ಈ ವಿಷ್ಣುಸಹಸ್ರನಾಮವನ್ನು. ಅಲ್ಲ, ಕೇಳಬೇಕು ಮುಕ್ಕಾಲು ಗಂಟೆಯ ಕೆಸೆಟ್ಟನ್ನು. ತಪ್ಪು ತಪ್ಪು, ಕೇಳಬಾರದು ಹಾಗೆಲ್ಲ. ಅನುಷ್ಟುಪ್ ಛಂದಸ್ಸಿನಲ್ಲಿ, ನೂರಾಏಳು ಭಾಗಗಳಲ್ಲಿ ವರ್ಣಿತವಾಗಿರುವ ಲೋಕಪಾಲಕನ ಸಹಸ್ರ ನಾಮಗಳನ್ನು ಅಲ್ಪಪ್ರಾಣ, ಮಹಾಪ್ರಾಣಗಳ ಪಂಕ್ಚುಯೇಷನ್ನುಗಳನ್ನೊಳಗೊಂಡು ಹೇಳಿದರೆಯೇ ಚೆನ್ನು. ಕೇಳಿಯಾದ ಮೇಲೆ ಅದರ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿದಲ್ಲಿ ಆಗುವ ಉಪಯೋಗವೇನು? ಅಥವಾ ಇವೆಲ್ಲವನ್ನೂ ಬರೀ ಬೊಗಳೆಯೆಂದು ಝಾಡಿಸಬಲ್ಲ ಸಾಮರ್ಥ್ಯ ತನಗಿದೆಯೇ? ತನಗೇನು ತುಂಬಾ ವಯಸ್ಸಾಗಿದೆಯೇ. ಇದು ಯಾಕೆ ಲೋಕಾತೀತ ವಿಷಯಗಳ ಬಗ್ಗೆ ಅತೀವ ಆಸಕ್ತಿ ಈ ನಡುವೆ. ಈ ಮೂವತ್ತೈದಕ್ಕೆ ಅರವತ್ತೈದರಂತೆ ತನಗೇಕೆ ಇಷ್ಟವಾಗುತ್ತದೆ ಈ ಮನುಧರ್ಮಶಾಸ್ತ್ರ, ವಿಷ್ಣುಸಹಸ್ರನಾಮದ ಭಾಷ್ಯ, ಯೋಗಿಯ ಆತ್ಮಕಥೆ. ಬುದ್ಧನಿಗೆ ಜ್ಞಾನೋದಯವಾದದ್ದು ಆತ ಸಂಪನ್ನನಾದ ಸಿದ್ದಾರ್ಥನಾಗಿದ್ದಾಗ. ಸಿದ್ಧಾರ್ಥ ದರಿದ್ರ ಚಾರುದತ್ತನಂತಿದ್ದರೆ ಅವನೂ ಬೇರೆಯವರಂತೆಯೇ ಇರುತ್ತಿದ್ದನೇನೋ. ಅಶೋಕ ಮನುಷ್ಯನಾದದ್ದು ಕೂಡ ಕಳಿಂಗ ಯುದ್ಧವಾದ ಮೇಲೆಯೇ. ಈ ಜಗತ್ತೇ ಹಾಗೆ. ಪ್ರತಿ ಮನುಷ್ಯರ ಜೀವನದಲ್ಲೂ ಇಂಥದೊಂದು ಏನಾದರು ನಡೆದೇ ಇರುತ್ತದೆ. ಹಾಗಾಗಿಯೇ ಅವರು “ದೊಡ್ಡವರಾಗುವುದು”. ಈ ಅಮೆರಿಕಾಕ್ಕೆ ಬಂದಮೇಲೆಯೇ ಹೀಗಾದದ್ದು. ಭಾರತದಲ್ಲಿಯೇ ಇದ್ದಿದ್ದರೆ ಈ ವಿಷ್ಣುಸಹಸ್ರನಾಮ ಕೇಳಲು ಪುರುಸೊತ್ತಾಗುತ್ತಿತ್ತೋ ಇಲ್ಲವೋ. ಯೋಗಣ್ಣ ಯೋಚನೆ ಮಾಡುತ್ತಲೇ ಇದ್ದ. ಪ್ರತಿವರ್ಷ ಬೆಂಗಳೂರಿಗೆ ಹೋಗಿ ತನ್ನ ಜೊತೆಯವರನ್ನು ನೋಡಿ ಬರುತ್ತಾನೆ. ಸ್ನೇಹಿತರೂ ಸಂಬಂಧಿಕರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಹಾಗೆ ಮಾನವಶಾಸ್ತ್ರದ ಬಗ್ಗೆ ಮಾತಾಡುತ್ತಾನೆ. ತಾನು ರೇಷ್ಮೆ ಪಂಚೆಯುಟ್ಟು, ಸಕಲಾಭರಣಗಳಿಂದ ಕಂಗೊಳಿಸುತ್ತಾ, ಲೋಶನ್ನಿನಿಂದ ಜಾರುತ್ತಿರುವ ಮೈ, ಮೇಬಿಲಿನ್ನಿನ ಮೇಕಪ್ಪು ಲಿಪ್‌ಸ್ಟಿಕ್ಕಿನೊಂದಿಗೆ ಟೈಮೆಕ್ಸ್ ವಾಚು ಸ್ಯಾಂಸೊನೈಟಿನ ಲೆದರ್ ಬ್ಯಾಗಿನ ಜೊತೆಗೆ ರೇಷ್ಮೆ ಸೀರೆಯಿಂದ ಮಾತ್ರ ಭಾರತೀಯತೆಗೆ ಜೋತಾಡುತ್ತಿರುವ ಹೆಂಡತಿಯೊಂದಿಗೆ ಕುಟುಂಬಸಮೇತ ಸತ್ಯನಾರಾಯಣ ಪೂಜೆ ಮಾಡಿಸುತ್ತಾನೆ. ಅದನ್ನು ವಿಡಿಯೋ ತೆಗೆಯುತ್ತಾನೆ. ಊಟ ಮಾಡಿ ದಕ್ಷಿಣೆ ಪಡೆದು ಹೋಗುವ ಬ್ರಾಹ್ಮಣ, ಬ್ರಾಹ್ಮಣಿತಿಯರೆಲ್ಲರೂ “ತ್ಚು, ತ್ಚು, ಅಮೆರಿಕಾದಲ್ಲಿದ್ದರೂ ಏನು ಭಕ್ತಿ, ಏನು ಸಂಸ್ಕೃತಿ” ಎಂದು ಹೊಗಳಿ ಹೋಗುವಾಗ ಅಪ್ಪ ಅಮ್ಮ. ಅತ್ತೆ ಮಾವಂದಿರ ಧನ್ಯತಾಭಾವವನ್ನು ನೋಡಿ ಏನು ಮಾಡಬೇಕೆಂದು ತಿಳಿಯದೇ ಕಂಗಾಲಾಗುತ್ತಾನೆ. ಆದರೆ ಒಂದು ಮಾತ್ರ ನಿಜ. ಇವನ ಬಾಲ್ಯದ ಸ್ನೇಹಿತರೆಲ್ಲರೂ ಬೆಂಗಳೂರಿನಲ್ಲಿ ಇವನಿಗಿಂತ ಬಿಜಿಯಾಗಿದ್ದಾರೆ. ಮುಕ್ಕಾಲುವಾಸಿಯೆಲ್ಲ ಫೋನು ಮೊಬೈಲುಗಳಲ್ಲೇ ಸಿಗುವುದು. ಯೋಗಕ್ಷೇಮ ವಿಚಾರಿಸುವುದಕ್ಕೆಯೇ ಪುರುಸೊತ್ತಿಲ್ಲ. ಇನ್ನು ಬೇರೆ ವಿಷಯ ಎಲ್ಲಿ. ಶುದ್ಧವಾದ ಭಾರತೀಯತೆ ಭಾರತದಲ್ಲಿ ಮಾತ್ರ ಸಿಗುತ್ತದೆ ಎಂದು ನಂಬಿ ಅದನ್ನರಸುತ್ತಾ ರಾಮಕೃಷ್ಣಾಶ್ರಮಕ್ಕೆ ಹೋಗಲು ಮನೆಯ ಪಕ್ಕದಲ್ಲಿದ್ದ ಷಡ್ಕನನ್ನುಕರೆಯುತ್ತಾನೆ. ಬಿಸಿನೆಸ್ ಮೀಟಿಂಗಿಗೆಂದು ಸಿಂಗಪೂರಕ್ಕೆ ಹೋಗಬೇಕೆಂದು ತಪ್ಪಿಸಿಕೊಳ್ಳುತ್ತಾನೆ, ಷಡ್ಕ. ತಾನು ಯಾಕೆ ಹೀಗೆ ಎಂದು ಯೋಚಿಸುತ್ತಾನೆ. ತಾನೊಬ್ಬನೇ ಹೀಗೋ ಅಥವಾ ಎಲ್ಲರೂ ಹೀಗೋ ಗೊತ್ತಾಗುವುದಿಲ್ಲ. ತಾನು ಬೇರೆಯವರಿಗಿಂತ ಸ್ವಲ್ಪ ಭಿನ್ನನೇ, ಆದರೆ ಹೇಗೆ. ಭಿನ್ನವಾಗಿರಲಿಕ್ಕಿಲ್ಲ. ಹೇಳಿಕೇಳಿ ತಾನು ಕಾರ್ಡಿಯಾಲಜಿಸ್ಟ್. ಅಮೆರಿಕಾದಲ್ಲಿದ್ದರೂ ಕೈತುಂಬಾ ಸಂಬಳ ಬರುತ್ತದೆ. ಮನೆ, ಕಾರುಗಳು, ಬ್ಯಾಂಕ್ ಅಕೌಂಟ್, ಪೋರ್ಟ್ ಫೊಲಿಯೊ ಎಲ್ಲವೂ ವೈನಾಗೇ ಇದೆ. ಜತೆಯಲ್ಲಿರುವ ಕೆಲವರಿಗೆ ಇನ್ನೂ ಮದುವೆಯೇ ಆಗಿಲ್ಲ. ಡೌ ಜೋನ್ಸು, ನಾಸ್ದಾಕುಗಳ ಬಗ್ಗೆ, ಮನೆಯ ಚದರ, ಲಾನಿನ ಸೌಂದರ್ಯ, ಬೆಳೆಯುತ್ತಿರುವ ಮಕ್ಕಳು, ಸದಾಶಿವನಗರದಲ್ಲೊಂದು ಸೈಟು ಹಾಗೆ ಹೀಗೆ ಎಂದು ತಲೆ ಕೆಡಿಸಿಕೊಳ್ಳಬೇಕಾದ ತಾನು ಹೀಗೆ ಮೋಕ್ಷ, ಮುಕ್ತಿ, ಯಜ್ಞ, ಯಾಗ ಸಹಸ್ರನಾಮಾದಿಗಳಿಗೆ ಮನಸೋತದ್ದು ಯಾಕೆ. “ಧ್ಯಾಯನ್ ಕೃತೇ ಯಜನ್ ಯಜ್ಞೈಸ್ತ್ರೇತಾಯಾಂ ದ್ವಾಪರೇರ್ಚಯನ್ ಯದಾಪ್ನೋತಿ ತದಾಪ್ನೋತಿ ಕಲೌ ಸಂಕೀರ್ತ್ಯ ಕೇಶವಂ (ವಿ.ಪು.) ಕೃತಯುಗದಲ್ಲಿ ಧ್ಯಾನದಿಂದಲೂ, ತ್ರೇತಾಯುಗದಲ್ಲಿ ಯಜ್ಞಗಳಿಂದಲೂ ದ್ವಾಪರಯುಗದಲ್ಲಿ ಪೂಜೆಯಿಂದಲೂ ಗಳಿಸಬಹುದಾದ ಫಲವನ್ನು ಕಲಿಯುಗದಲ್ಲಿ ಸಹಸ್ರನಾಮಪಠನ ಅದೂ ವಿಷ್ಣುಸಹಸ್ರನಾಮಪಠನ ಅದರ ಅನುಸಂಧಾನದಿಂದ ಪಡೆಯಬಹುದಂತೆ. ಎಲ್ಲ ಬಗೆಯ ಪಾಪವನ್ನೂ ತೊಳೆದು ಏಳೇಳು ಜನ್ಮಕ್ಕೂ ಮುಕ್ತಿ ಕೊಡುತ್ತದಂತೆ. ಪುರುಸೊತ್ತಿಲ್ಲದ ಜೆಟ್‌ಕಲಿಯುಗದ ಮನುಷ್ಯರಿಗೆಂದೇ ಬರೆದಂತಿದೆ. ಅನುಸಂಧಾನವನ್ನೂ “ಅನುಸರಿಸಬಹುದು”. ಯಾಗ ಮಾಡಲು ನಮಗೆ ಸಮಯವೆಲ್ಲಿದೆ? ಕೆಸೆಟ್ ಕೇಳಿ ಶಾರ್ಟ್‌ಕಟ್ಟಿನಿಂದ ಸ್ವರ್ಗಕ್ಕೆ ಹೋಗಬೇಕೆನ್ನುವ ಹಂಬಲ ನಮಗೆ. ಯುದ್ಧಾನಂತರ ಯುಧಿಷ್ಟಿರ ಕೇಳುತ್ತಾನಂತೆ. ” ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ ಸ್ತುವಂತಃ ಕಂ ಕಮರ್ಚನ್ತಃ ಪ್ರಾಪ್ನುಯುರ್ವಾನವಾಃ ಶುಭಂ” “ದೇವರುಗಳಲ್ಲೆಲ್ಲಾ ಶ್ರೇಷ್ಠವಾದದ್ದು ಯಾವುದು, ಧರ್ಮಗಳಲ್ಲಿ ಅತಿ ಮುಖ್ಯವಾದದ್ದು ಯಾವುದು?” ಈ ಯುಧಿಷ್ಟಿರನ ಪ್ರಶ್ನೆಗೆ ಭೀಷ್ಮನ ಉತ್ತರ ಸಹಸ್ರನಾಮೋಪಾದಿಯಲ್ಲಿ ಬಂದಿತಂತೆ. ಅಲ್ಲ! ಮನಸ್ಸು ಯೋಚನೆಯನ್ನು ಕೊಂಚ ಬದಲಿಸುವ ಪ್ರಯತ್ನ ಮಾಡಿತು. ಸಂತೃಪ್ತಿ ಅಂದರೇನು? ಮನುಷ್ಯ ಯಾವಾಗ ತಾನು ಪರಮಸುಖಿ ಅಂದುಕೊಳ್ಳುತ್ತಾನೆ? ಪಾರಮಾರ್ಥಿಕ ಅನ್ನುವುದು ಇಷ್ಟವಾಗಬೇಕಾಗುವುದು ಈ ಲೌಕಿಕ ಪ್ರಪಂಚದ ವ್ಯಾಪಾರ ಮುಗಿಯುತ್ತಾ ಬಂದಾಗಲಲ್ಲವೇ? ಬುದ್ಧನಿಗೆ ರಾಜ್ಯ ಇತ್ತು, ದುಡ್ಡಿತ್ತು, ಸುಂದರವಾದ ಹೆಂಡತಿ ಇದ್ದಳು. ಬೇಕಾದದ್ದೆಲ್ಲಾ ಕೈಗೆ ಸಿಕ್ಕ ಮೇಲೆ ಇವೆಲ್ಲಾ ಮಾಯೆ ಅನ್ನಿಸಿತ್ತು. ಅಶೋಕನಿಗೂ ಹಾಗೇ. ಕಳಿಂಗ ಯುದ್ಧ ಸೋತಿದ್ದರೆ ಆತ ಇಷ್ಟು ದೊಡ್ಡ ಮನುಷ್ಯನಾಗುತ್ತಿದ್ದನೇ? ತಾನು ಸುಖಿಯೇ? ಸಂತೃಪ್ತನೇ? ಈ ಪ್ರಪಂಚದಲ್ಲಿ ತಾನು ಸಾಧಿಸುವುದು ಇಷ್ಟೇನೇ? ಮೈಸೂರಿನಲ್ಲಿದ್ದಾಗ ಒಂದೇ ಗುರಿ, ಅಮೆರಿಕಾಕ್ಕೆ ಹೋಗಬೇಕು, ಅಲ್ಲಿ ಜೀವನ ಮಾಡಬೇಕು. ಕಾರಿನಲ್ಲಿ ಓಡಾಡಬೇಕು.ದೊಡ್ಡಮನೆ ಕಟ್ಟಬೇಕು. ಎಲ್ಲವೂ ಆಗಿಹೋಯಿತಲ್ಲ ಈ ಕಳೆದ ಹತ್ತು ವರ್ಷಗಳಲ್ಲಿ. ಜೀವನದಲ್ಲಿ ಇನ್ನೇನೂ ಮಾಡುವುದೇ ಇಲ್ಲವೆಂದೇ ಈ ವಿಷಯಗಳು ಇಷ್ಟವಾಗುತ್ತಿವೆಯೇ? ಸಿದ್ದಾರ್ಥ ಬುದ್ಧನಾಗುತ್ತಿದ್ದಾನೆಯೇ? ಇಷ್ಟೆನೇ ಈ ಜೀವನ ಎಂದು ವೇದಾಂತಿಯಂತೆ ಯೋಚಿಸುತ್ತೆ ಮನಸ್ಸು, ಒಮ್ಮೊಮ್ಮೆ. ಆಗ ಏನೋ ಆಗಬೇಕು ಎಂದನಿಸುತ್ತದೆ. ಏನಾಗಬೇಕು? ಬೇಡ. ಈ ಏನೋ ಆಗುವ ರೇಜಿಗೆಯೇ ಬೇಡ. ನಾನು ನಾನಾಗಿಯೇ ಇರಲು ಏನು ಮಾಡಬೇಕು? ಇನ್ನೊಂದು ಮನೆ ತೆಗೆದುಕೊಳ್ಳಲೇ? ಕಾರನ್ನು ಬದಲಾಯಿಸಲೇ? ಯುರೋಪಿಗೆ ಲಾಸ್ ವೆಗಾಸಿಗೆ ಪ್ರಯಾಣ ಮಾಡಲೇ? ಇದೇ ತಾನೆ ಬದಲಾವಣೆ ಅಮೆರಿಕಾದಲ್ಲಿ. ಮೊದಲೇ ಚೆನ್ನಾಗಿತ್ತು. ಹಂತಹಂತಕ್ಕೂ ಗುರಿ ಬದಲಾಗುತ್ತಿತ್ತು. ಪಿಯೂಸಿಯಲ್ಲಿ ಎಂಬಿಬಿಎಸ್ ಗೆ ಹೋಗುವುದು. ನಂತರ ಎಂಡಿ ಮಾಡುವುದು, ಆಮೇಲೆ ಅಮೆರಿಕ. ಅಲ್ಲಿಗೆ ತಟಸ್ಥವಾಗಿ ಗಟ್ಟಿಬಂಡೆಯ ರೀತಿ ಆಗಿಬಿಟ್ಟಿತು ಜೀವನದ ಗತಿ. ಇಲ್ಲಿಗೆ ಬಂದಮೇಲೆ ಏನೇನು ಮಾಡಬೇಕೆಂದು ಮುಂಚೆಯೇ ಯೋಚಿಸಬೇಕಿತ್ತು. ಇನ್ನೇನೂ ಇಲ್ಲ ಎಂದು ಓದುತ್ತೇನೆಯೇ ತಾನು ಹಿಮಾಲಯದ ಸಾಧುಗಳ ಕಥೆಯನ್ನು, ರಜನೀಶರ ಆತ್ಮಚರಿತ್ರೆಯನ್ನು. ಇರಬಹುದು. “ವನಮಾಲೀ ಗಧೀ ಶಾಜ್ಞ್ಗೀ ಶಂಖೀ ಚಕ್ರೀ ಚ ನಂದಕೀ ಶ್ರೀಮನ್ನಾರಾಯಣೋ ವಿಷ್ಣುಃ ವಾಸುದೇವೋ ಭಿರಕ್ಷತು.”. ಆರಿಸಿದ ಸ್ಟೀರಿಯೋ ಸ್ವಿಚ್ಚನ್ನು. ಕಪ್ ಹೋಲ್ಡರಿನಲ್ಲಿದ್ದ ಕೆಪೋಚಿನೋ ಗುಟುಕರಿಸಿದ. ಆಸ್ಪತ್ರೆ ಹತ್ತಿರವಾಗುತ್ತಿತ್ತು. ಫಲಶೃತಿ ಕೇಳಬಾರದಂತೆ. ಎಲ್ಲಾ ಸಾವಿರ ಹೆಸರುಗಳನ್ನು ಹೇಳಿ ಆಮೇಲೆ ಈ ರೀತಿ ಹೇಳಿದರೆ ಈ ಲೋಕದಲ್ಲೂ ಬೇರೆ ಲೋಕದಲ್ಲೂ ಯಾವರೀತಿಯ ಪುಣ್ಯ ಲಭಿಸುತ್ತದೆ ಎನ್ನುವುದನ್ನು ವರ್ಣಿಸಿದ್ದಾರೆ. ಕೇಳುವ ಉದ್ದೇಶ ಮೋಕ್ಷ, ಪುಣ್ಯವೇ ಆದರೂ ಯಾವ ಯಾವ ತರದ ಪುಣ್ಯ ಬರಬಹುದು ಅನ್ನುವುದನ್ನು ವಿವರವಾಗಿ ತಿಳಿಯುವುದು ತಪ್ಪು. ಅದೂ ಸರಿ ಅನ್ನಿ. ಇದು ಬಹಳ ಶಕ್ತಿಶಾಲಿಯಾದ ಮಂತ್ರ. ದೇಹದ ಎಪ್ಪತ್ತೆರಡು ಸಹಸ್ರ ನಾಡಿಗಳನ್ನು ಶುಚಿಗೊಳಿಸುವುದು ಅಂದರೇನು? ದೇಹದಲ್ಲಿರುವುದು ಎಪ್ಪತ್ತೆರಡು ಸಾವಿರ ನಾಡಿಗಳೇ? ನಾಡಿಗಳು ಎಂದರೇನು? ಎಲ್ಲ ರಕ್ತನಾಳಗಳೂ ನಾಡಿಗಳೇನೇ? ಬಹುಶಃ ಕೆಪಿಲರಿಗಳನ್ನೂ ಸೇರಿಸಿರಬಹುದು. ದಿನಬೆಳಗಾದರೆ ತೊಡೆಯನಾಡಿಯೊಳಗೆ ತಂತಿಹಾಕಿ ಹೃದಯದ ಕರೋನರಿಗಳಿಗೆ ತಂತಿಬಿಟ್ಟು ಮುಚ್ಚಿಕೊಳ್ಳುತ್ತಿರುವ ನಾಳಗಳನ್ನು ಬೆಲೂನು ಹಾಕಿ ಹಿಗ್ಗಿಸುವ ತನ್ನಂಥವನೂ ಈ ಸ್ತೋತ್ರ ಹೇಳಿಬಿಟ್ಟರೆ ನರನಾಡಿಗಳೆಲ್ಲವೂ ಶುದ್ಧವಾಗಿಬಿಡುತ್ತವೆ ಅನ್ನುವುದನ್ನು ನಂಬುವುದು…….? ಯಾವುದು ವಿಜ್ಞಾನ, ಯಾವುದು ಗೊಡ್ಡುನಂಬಿಕೆ. ಏನನ್ನುತ್ತೆ ನಮ್ಮ ಸೈನ್ಸು, ನಮ್ಮ ಕಾರ್ಡಿಯಾಲಜಿ. ಯಾರಿಗೆ ಹೃದಯಾಘಾತವಾಗುತ್ತದೆ? ಏನನ್ನುತ್ತಾರೆ ನಮ್ಮ ಹ್ಯಾರಿಸನ್ನು ಬ್ರೌನ್ ವಾಲ್ಡುಗಳು? ವಯಸ್ಸು, ಪುಲ್ಲಿಂಗ, ಸಕ್ಕರೆ ಖಾಯಿಲೆ, ಕೌಟುಂಬಿಕ ಹಿನ್ನೆಲೆ,ಅತಿಪಿತ್ಥ, ರಕ್ತದೊತ್ತಡ, ಸಿಗರೇಟು ಹೃದಯಕ್ಕೆ ಒಳ್ಳೆಯವಲ್ಲ. ಈ “ಹೈ ರಿಸ್ಕ್” ಇರುವ ಜನಗಳು ನಮ್ಮ ಬಳಿ ಬಂದರೆ ನಾವೇನು ಮಾಡುತ್ತೇವೆ, ಟ್ರೆಡ್ ಮಿಲ್ ಹತ್ತಿಸುತ್ತೇವೆ, ಓಡಿಸುತ್ತೇವೆ. ಉತ್ತರ ಸಿಕ್ಕಲಿ ಬಿಡಲಿ, ಅನುಮಾನ ಜಾಸ್ತಿ ಆಗಿಬಿಟ್ಟರೆ ತೊಡೆಗೆ ತಂತಿಹಾಕಿ ಆಂಜಿಯೋಗ್ರಾಂ ಮಾಡೇಬಿಡುತ್ತೇವೆ, ಬೆಲೂನು ಬಿಟ್ಟೇಬಿಡುತ್ತೇವೆ. ಇವಿಷ್ಟು ನಮಗೆ ಗೊತ್ತಿರುವುದು. ನಮಗೆ ಗೊತ್ತಿರದೇ ಇರುವುದು ಏನು? ಈ ಅಮೆರಿಕನ್ನರೇ ಹೀಗೆ. ದಿನಾ ಏನಾದರೂ ಹೊಸದು ಹೇಳುತ್ತಲೇ ಇರುತ್ತಾರೆ. ನಿನ್ನೆ ಹೋಮೋಸಿಸ್ಟೀನ್ ಅಂದರು. ಇನ್ನೊಂದು ಯಾವುದೋ ಬ್ಯಾಕ್ಟೀರಿಯಾ ತರವಂತೆ. ಅದರಿಂದಲೂ ಹೃದಯಾಘಾತ ಆಗಬಹುದಂತೆ. ಇನ್ನೂ ಏನೇನು ಹೇಳುತ್ತಾರೋ. ಕಿವಿನೋವಿಗೆ, ಕೆಮ್ಮಿಗೆ ಕೊಡುವ ಔಷಧಿಯಿಂದ ಹಾರ್ಟ್ ಅಟ್ಯಾಕ್ ಗುಣವಾಗುತ್ತೆ ಎಂದು ಯಾರಾದರೂ ಕಂಡುಹಿಡಿದುಬಿಟ್ಟರೆ ಅಲ್ಲಿಗೆ ತಮ್ಮಂಥವರು ಕೆಲಸ ಕಳೆದುಕೊಂಡು ಮನೆಗೆ ಹೋಗಬೇಕಷ್ಟೆ. ಮತ್ತೊಂದು ವಿಷಯ! ಬರೀ ಮುಚ್ಚಿದ್ದ, ಮುಚ್ಚುತ್ತಿರುವ ಕರೋನರಿಯನ್ನು ಹಿಗ್ಗಿಸಿ ತಾನು ಈ ರೋಗಿಗಳ ಜೀವ ಉಳಿಸುತ್ತಿದ್ದೇನೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಪ್ರಾಮಾಣಿಕ. ಪ್ರಾಮಾಣಿಕತೆಗೆ ಬೆಂಕಿ ಬೀಳಲಿ. ಪ್ರಪಂಚದಲ್ಲಿ ತನಗಿರುವ ಇಮೇಜಿದು ಅನ್ನುವ ತರ್ಕದಲ್ಲಿ ಮನಸ್ಸು ಹಿಗ್ಗಿ ಹೀರೇಕಾಯಿಯಾಗುತ್ತದೆ. ಅದೇ ಒಂದು ವೇಳೆ ನಿಜವಾಗಿದ್ದರೆ ತಾನು ನೋಡದ, ಕೈಯಾಡಿಸದ ಹೃದಯರೋಗಿಗಳೆಲ್ಲ ಇಷ್ಟರಲ್ಲಿ ಸತ್ತಿರಬೇಕಲ್ಲ. ನಮ್ಮ ದೊಡ್ಡಪ್ಪಂದಿರುಗಳನ್ನೇ ತೆಗೆದುಕೊಳ್ಳೋಣ. ಹತ್ತು ವರ್ಷವಾಗಿದೆ, ಹಾರ್ಟ್ ಅಟ್ಯಾಕ್ ಆಗಿ. ಯಾವ ಕಾರ್ಡಿಯಾಲಜಿಸ್ಟ್ ಹತ್ತಿರವೂ ತೋರಿಸಿಲ್ಲ. ಅಲ್ಲೇ ಚಿಕ್ಕಬಳ್ಳಾಪುರದಲ್ಲಿ ಯಾವುದೋ ಡಾಕ್ಟರು ಏನೋ ಡ್ರಿಪ್ ಕೊಟ್ಟನಂತೆ. ಈಗಲೂ ಕಲ್ಲು ಗುಂಡಿನಹಾಗೆ ಇದ್ದಾರೆ. ದಿನಾ ಸೈಕಲ್ ತುಳಿಯುತ್ತಾರೆ, ಕಟ್ಟಿಗೆ ಒಡೆಯುತ್ತಾರೆ. ಏನೋ ಅಮೆರಿಕಾದ ಡಾಕ್ಟರು ಎಂದು ತೋರಿಸಲು ಬಂದಾಗ ತಾನು ಟೆಸ್ಟ್ ಮಾಡಿಸಿ ಎಂದರೆ ನಕ್ಕು ಸುಮ್ಮನೆ ವಾಪಸ್ ಹೋದವರು ಇಲ್ಲಿಯತನಕ ಬಂದಿರಲಿಲ್ಲ. ತಾನು ಟೆಕ್ನಿಕ್ಕಿನಲ್ಲಿ ಯಾವ ನಲ್ಲಿ ರಿಪೇರಿಯವನಿಗಿಂತ ಮೇಲು. ಇಬ್ಬರೂ ಅಷ್ಟೆ, ಮುಚ್ಚಿಕೊಂಡಿರುವ ನಳಿಕೆಗಳನ್ನು ರಿಪೇರಿಮಾಡುತ್ತೇವೆ. ಸ್ವಲ್ಪ ಸೂಕ್ಷ್ಮ ತಿಳಿಸಿಕೊಟ್ಟರೆ ಅವನೇ ನನಗಿಂತ ಚೆನ್ನಾಗಿ ನನ್ನ ಕೆಲಸ ಮಾಡಬಹುದೇನೋ. ನಲ್ಲಿ ರಿಪೇರಿಯವನ ಜೊತೆ ತನ್ನ ವೃತ್ತಿಯನ್ನು ಹೋಲಿಸಿದಾಗ ನಗು ಬರುತ್ತದೆ. ಎಲ್ಲವೂ ಸೋಗಲಾಡಿತನ. ದೊಡ್ಡ ಬಿಳಿಯ ಕೋಟು, ಸ್ಕ್ರಬ್ಸ್, ಸ್ಟೆತೋಸ್ಕೋಪು, ಮಿಲಿಯನ್ ಗಟ್ಟಲೆ ಖರ್ಚುಮಾಡಿ ಕಟ್ಟಿಸಿರುವ ಈ ಆಸ್ಪತ್ರೆ ಬರೀ ಶೋಕಿ. ಈ ಜೀವ ಅನ್ನುವುದು ಅಷ್ಟೊಂದು ಫ್ರಜೈಲ್ ವಸ್ತುವೇ ಯಾರು ಬೇಕಾದರೂ ಉಳಿಸುವುದಕ್ಕೆ, ತೆಗೆಯುವುದಕ್ಕೆ. ಆಂಟಿಬಯಾಟಿಕ್ ಕೊಡುವುದರಲ್ಲಿ, ಅಪೆಂಡಿಸೈಟಿಸ್ ಗೆ ಆಪರೇಷನ್ ಮಾಡುವುದರಲ್ಲಿ, ಬೈ ಪಾಸ್ ಸರ್ಜರಿ ಮಾಡುವುದರಲ್ಲಿ, ತಲೆ ಬುರುಡೆ ಒಡೆದು ಒಳಗಿರುವ ಗಡ್ಡೆ ತೆಗೆಯುವುದರಲ್ಲಿ, ಕೀಮೋತೆರಪಿಯಲ್ಲಿ ಜೀವ ಉಳಿಸುವ ಕ್ರಿಯ ಇದೆಯೇ? ನಿಜ ಹೇಳೋಣ. ಈ ಮೇಲ್ಕಂಡ ಯಾವುದೇ ದೊಡ್ಡದಾಗಿ ಕಾಣಿಸುವ ವೈದ್ಯಕೀಯ ಚಮತ್ಕಾರಗಳನ್ನು ಯಾವುದೇ ಡಾಕ್ಟರು ತನ್ನ ದಿನನಿತ್ಯದ ಕೆಲಸವೆಂದು ತಿಳಿಯುತ್ತಾನೆಯೇ ಹೊರತು ಪ್ರತಿನಿತ್ಯ ಈ ರೀತಿ ಧನ್ಯನಾಗುತ್ತಾ ಕೂತರೆ ಆ ಧನ್ಯತೆಗೆ ಒಂದು ಅರ್ಥವಿರುವುದೇ ಇಲ್ಲ. ಜೀವನವಿಡೀ ಮೆಡಿಕಲ್ ಸ್ಟುಡೆಂಟಾಗೇ ಇರಬೇಕಾಗುತ್ತದೆ. ಇದೇನು ರೊಟೀನ್ಟಿಯೇ, ಅಥವಾ ಮಾಡುವ ಕೆಲಸದ ಮೇಲೆ ತಾತ್ಸಾರವೇ. ಒಳ್ಳೆಯ ಕೆಲಸಗಳು ರೊಟೀನ್ ಆದರೆ ಕೊಲೆಮಾಡುವುದರಲ್ಲಿ ಥ್ರಿಲ್ ಹೆಚ್ಚಿರುತ್ತದೆ ಅನ್ನಿಸುತ್ತದಂತೆ. ತಾನು ಬೇರೆ ಎಲ್ಲರಂತೆ ಒಬ್ಬ ಟೆಕ್ನಿಶಿಯನ್. ನುರಿತ ತಂತ್ರಜ್ಞ, ಅಷ್ಟೆ. ಮನುಷ್ಯರ ತೊಡೆ, ಹೃದಯದ ಜೊತೆ, ಸ್ಟೆಂಟಿನ ಜೊತೆ ಆಟವಾಡುತ್ತೇನೆ. ನಮ್ಮ ಮನೆಯ ನಲ್ಲಿಯವನು ಸ್ಕ್ರೂ ಡ್ರೈವರ್, ರಿಂಚುಗಳ ಜತೆ ಹೆಣಗಾಡುತ್ತಾನೆ. ಜೀವ ಉಳಿಸುವುದೆಲ್ಲ ದೊಡ್ಡಮಾತು. ಬರೀ ಕರೋನರಿಯೊಳಗೆ ಬೆಲೂನು ಬಿಡುವಷ್ಟು ಸುಲಭವಲ್ಲ ಈ ಜೀವ ಉಳಿಸುವ ಕೆಲಸ. ಮಾಡುವ ದುರ್ವಿದ್ಯೆ, ಊಟದ ಅಶಿಕ್ಷೆ ಮತ್ತು ಕೆಟ್ಟ ಜೀನುಗಳು ಈ ಹತ್ತು ಹಲವು ಸೇರಿ ನಾಡಿಯ ಒಳಪದರವನ್ನು ನಾಶಮಾಡಿ ಹೆಪ್ಪುಗಟ್ಟಿದ ಸಣ್ಣ ಗಡ್ಡೆ ಒಡೆದ ತಕ್ಷಣ ಪಟೀರೆಂದು ಒಡೆದುಹೋಗುವ ಹೃದಯದ ಜೊತೆಗೆ, ತಲೆಗೆ ಭರ್ಜರಿ ಏಟು ಬಿದ್ದು ಬುರುಡೆಯೊಳಗೆ ಹೆಪ್ಪುಗಟ್ಟುವ ರಕ್ತದ ಗಡ್ಡೆಯ ಒತ್ತಡ ಹಿಮ್ಮೆದುಳಿನ ಮೇಲೆ ಬಿದ್ದಾಕ್ಷಣ, ಕೆಟ್ಟ ಸೂಕ್ಷ್ಮಾಣುಗಳು ರಕ್ತ ಸೇರಿ ಅಂಗಾಂಗಗಳ ಕ್ರಿಯೆಗಳನ್ನು ಕೆಡಿಸಿದಾಗ, ಮೂಳೆಗಳ ನಡುವಿನ ಕಾರ್ಟಿಲೇಜು ಸವೆದು ಸವೆದು ನಿಸ್ಸಾರವಾದಾಗ, ಕೋಶಗಳು ಹತೋಟಿಮೀರಿ ರತಿಕ್ರೀಡೆಯಾಗಿ ಕ್ಯಾನ್ಸರ್ ಎಂಬ ಮಾರಿಯನ್ನು ಹುಟ್ಟಿಸಿದಾಗ—- ಜೀವ ಹೋಗಬೇಕು. ಅಬ್ಬ! ಎಂತಹ ಮಹದನ್ವೇಷಣೆ! ಮೊದಲೂ ಸಾಯುತ್ತಿದ್ದ ಮನುಷ್ಯ, ಈಗಲೂ ಸಾಯುತ್ತಿದ್ದಾನೆ. ಊಟ ಮಾಡಿ ಮೊಮ್ಮಕ್ಕಳ ಜೊತೆ ಆಟ ಆಡಿ ರಾತ್ರಿ ಮಲಗಿದವನು ಬೆಳಿಗ್ಗೆ ಏಳದೆ ಕತ್ತಲಿನೊಂದಿಗೇ ಲೀನವಾಗಿಹೋಗುವ ಸುಖವಾದ ಸಾವು ಅದು. ಪ್ರತಿ ರೋಗ ಲಕ್ಷಣಗಳಿಗೊಂದು ರೋಗವನ್ನು ಹೆಸರಿಸಿಕೊಂಡು ಕೈಕಾಲ ನಾಡಿಗಳಲ್ಲಿ, ಗಂಟಲಲ್ಲಿ, ಮೂಗುಬಾಯಿಗಳಲ್ಲಿ ಟ್ಯೂಬುಗಳನ್ನು ಇರಿಸಿಕೊಂಡು ಕೆಲಕಾಲ ಬದುಕನ್ನು ಬಾಡಿಗೆಗೆ ಪಡೆದುಕೊಂಡು ನೋಡಿರೋ ಸಾಯುವುದೆಂದರೆ ಇದು ಎಂದು ಪ್ರಾಣಬಿಡುವುದು ಇದು. ಈ ಅಮೆರಿಕಾದಲ್ಲಂತೂ ಹೀಗೆಯೇ ಸಾಯಬೇಕು. ಸುಮ್ಮಸುಮ್ಮನೇ ಮನೆಯಲ್ಲಿ ಧಿಡೀರ್ ಎಂದು ಸತ್ತುಬಿಟ್ಟರೆ ನಿಮ್ಮ ಡಾಕ್ಟರರು ಒಳ್ಳೆ ಕೆಲಸ ಮಾಡಿಲ್ಲವೆಂದು ಬೇಕಾದರೆ ಕೋರ್ಟಿಗೆ ಹೋಗಬಹುದು. ಯೋಗಣ್ಣ ಅರ್ಥಾತ್ ಯೋಗಾನರಸಿಂಹ ಯಾ ಡಾ. ಯೋಗಿ ಯೋಚಿಸುತ್ತಲೇ ಇದ್ದ. ಈ ಯೋಚನೆಗಳು ರಕ್ತಬೀಜಾಸುರನಂತವು. ಒಂದರ ಹೊಟ್ಟೆಯನ್ನು ಸೀಳಿ ಇನ್ನೊಂದು ಬರುತ್ತಲೇ ಇರುತ್ತವೆ. ಅವಕ್ಕೇನು ತರ್ಕ ಇರಬೇಕೆಂದಿಲ್ಲ. ಅಲ್ಲ, ಇಷ್ಟು ಮಾತನಾಡುತ್ತಾರಲ್ಲ ಈ ಬಿಳಿಯಜನ, ಇವರಿಗ್ಯಾಕೆ ಇಷ್ಟೊಂದು ಆಸಕ್ತಿ ನಮ್ಮ ಸಂಸ್ಕೃತಿಯ ಮೇಲೆ. ನಮ್ಮ ಬದುಕು ಸಾವು ಎಲ್ಲವೂ ಬರೇ ಫಿಸಿಕಲ್ ಆಗಿದ್ದು, ಬೇಕಾದಲ್ಲಿ ನಿಮ್ಮದೇ ಪ್ರತಿರೂಪವನ್ನು ಕ್ಲೋನು ಮಾಡಿ ನಿಮ್ಮನ್ನು ಅಮರನನ್ನಾಗಿ ಮಾಡಬಲ್ಲ ಈ ಮಹಾಮೇಧಾವಿಗಳಿಗ್ಯಾಕೆ ಬೇಕು, ಈ ಹಠಯೋಗ, ಪ್ರಾಣಾಯಾಮ. ಒಟ್ಟಿನಲ್ಲಿ ಏನಪ್ಪಾ ಅಂದರೆ ಇವರೇ ಹೇಳುವಹಾಗೆ “ಬಾಟಂ ಲೈನ್”- ನಾವು ಮಾಡುವ ಕೆಲಸದ ಮೇಲೆ ನಮಗೆ ನಂಬಿಕೆ ಇಲ್ಲ. ದಿನಬೆಳಗಾದರೆ ಕಂಪ್ಯೂಟರಿನ ಮುಂದೆ ಕುಳಿತು ಸಿಸ್ಟಮ್ಮುಗಳನ್ನು ಅನಲೈಜ್ ಮಾಡುವವ ಕಂಪೆನಿ ಪಬ್ಲಿಕ್ಕಿಗೆ ಹೋಗುವ ಮುನ್ನ ದೇವರಿಗೆ ಹಣ್ಣುಕಾಯಿ ಮಾಡಿಸುವುದು, ನಮ್ಮ ರಾಜಾರಾಮಣ್ಣ ಆಕಾಶಕ್ಕೆ ಶಟಲ್ ಹಾರಿಸುವುದಕ್ಕೆ ರಾಹುಕಾಲ ಗುಳಿಕಕಾಲ ನೋಡಿದಂತಲ್ಲವೇ. ನಮ್ಮಲ್ಲೇ ಇದೆ ಈ ದ್ವಂದ್ವ, ಆಷಾಢಭೂತಿತನ. ಇಲ್ಲದಿದ್ದರೆ ಯಾಕೆ ಹೇಳಿ ನಮ್ಮ ಆಯುರ್ವೇದವನ್ನು, ವಾತ,ಪಿತ್ಥ, ಕಫವನ್ನು ವ್ಯಾತ, ಪೀತ್ತ, ಕ್ಯಾಫ ಎಂದು ನಾಲಿಗೆ ಹೊರಳಿಸಿ ಹೇಳಿ ದುಡ್ಡುಮಾಡಿದ ದೀಪಕ್ ಚೋಪ್ರ. ನಮ್ಮ ಹಿಂದೂಸ್ತಾನಕ್ಕಿಂತಲೂ ಚೆನ್ನಾಗಿ ಬೆಳೆಯುತ್ತಿರುವುದು ಇಲ್ಲಿನ ರಾಮಕೃಷ್ಣ, ಚಿನ್ಮಯ ಮಿಶನ್ನುಗಳು. ಯೋಗಣ್ಣ ಮರ್ಸೀಡಿಸನ್ನು ಆಸ್ಪತ್ರೆಯ ಪಾರ್ಕಿಂಗ್ ಲಾಟಿನೊಳಗೆ ತಂದ. ಕನ್‌ಫ್ಯೂಶನ್ ಕಳೆದು ಮನಸ್ಸು ತಿಳಿಯಾಗಲೆಂದು ಕೈಗೆ ಸಿಕ್ಕಿದ ಸೀಡಿಯನ್ನು ಹಾಕಿದ. ರಿಕ್ಕಿ ಮಾರ್ಟಿನ್ ಹಾಡಲು ಶುರುಮಾಡಿದ್ದ. ಹೌದು, ಹೀಗೆ ಕೆಪೋಚಿನೋ ಕುಡಿಯುತ್ತಾ ಎರಡು ರಿಕ್ಕಿಮಾರ್ಟಿನ್ನನ ಹಾಡುಗಳ ಮಧ್ಯೆ ವಿಷ್ಣುಸಹಸ್ರನಾಮ ಕೇಳಿದರೆ ಸರಿಯೇ? ಏನೂ ತಪ್ಪಿಲ್ಲ. ಶುಭಕಾರ್ಯಗಳಲ್ಲಿ ಕೇಳುವಂತೆ ಶ್ರಾದ್ಧಾದಿ ಅಪರಕರ್ಮಗಳಲ್ಲಿಯೂ ಕೇಳಬಹುದಾದ ಈ ಪವಿತ್ರವಾದ ಸ್ತೋತ್ರವನ್ನು ತಾನು ಕಾಫಿಕುಡಿಯುತ್ತಾ ಈ ಏಸಿ ಕಾರಿನಲ್ಲಿ ಕೇಳಿದರೆ ತಪ್ಪೇನಿದೆ? ಈ ವಾತ, ಪಿತ್ಥ ಕಫಗಳನ್ನು ಎಷ್ಟು ನಂಬುತ್ತೇವೆಯೋ ಅಷ್ಟೇ ನಂಬುತ್ತೇವೆ ಈ ನಮ್ಮ ಸಾಕ್ಷ್ಯಾಧಾರಿತ ವೈದ್ಯವನ್ನು. ಅಥವಾ ಹೀಗೂ ಹೇಳಬಹುದು- ಈ ವಾತ ಪಿತ್ಥಾದಿಗಳನ್ನು ಎಷ್ಟು ನಂಬುವುದಿಲ್ಲವೋ ಅಷ್ಟೇ ನಂಬುವುದಿಲ್ಲ ಈ ನಮ್ಮ ಎವಿಡೆನ್ಸ್ ಬೇಸ್ಡ್ ಮೆಡಿಸನ್ನನ್ನೂ. ಕರಾಲರಿ ಥಿಯರಿ. ಕಳೆದ ಎಂಟು ವರ್ಷದಿಂದ ಒಂದು ದಿನವೂ ತಪ್ಪಿಲ್ಲ. ಮನೆಯಿಂದ ಆಸ್ಪತ್ರೆಗಿರುವ ಒಂದು ಗಂಟೆಯ ದೂರದಲ್ಲಿ ಮುಕ್ಕಾಲು ವಿಷ್ಣುಸಹಸ್ರನಾಮದ ಕೆಸೆಟ್ ಕೇಳುವುದರಲ್ಲೇ ಕಳೆದುಹೋಗುತ್ತದೆ. ಮೊದಲ ಮೂರುವರ್ಷ ಬರೇ ಸ್ತೋತ್ರ ಮಾತ್ರ ಕೇಳುವುದು. ಅರ್ಥ ಕಿಂಚಿತ್ತೂ ಆಗದಿದ್ದರೂ ಕೇಳದಿದ್ದರೆ ತಳಮಳ. ಏನೋ ತೊಂದರೆ ಆಗಬಹುದೆಂಬ ಭಯ. ಕೇಳಿ ಉಪಯೋಗವಾಗಲಿ ಬಿಡಲಿ, ಕೇಳದೇ ತೊಂದರೆಯಾಗಿಬಿಟ್ಟರೆ? ಒಂದು ದಿನದ ಮಟ್ಟಿಗೆ ತನಗೆ ತಾನೇ ಮೋಸ ಮಾಡಿಕೊಂಡರೆ ಹೇಗೆ? ಕೆಲಸದ ಮೇಲೆ ಅಥವಾ ಪ್ರವಾಸದಲ್ಲಿದ್ದಾಗ ಹೇಳಿಕೊಳ್ಳದೇ ಇದ್ದ ದಿನಗಳು ಬೇಕಾದಷ್ಟಿವೆ. ಆದರೆ ಆಗೆಲ್ಲ ಶ್ರೀ ರಾಮ ರಾಮ ರಾಮೇತಿ ಹೇಳಿ ತಪ್ಪಾಯಿತು ಎಂದು ಕೆನ್ನೆ ಬಡಿದುಕೊಂಡಿದ್ದಾನೆ. ಹೇಳಲು ಅವಕಾಶವಿದ್ದೂ ಹೇಳಿಕೊಳ್ಳದಿದ್ದಾಗ ಮಾತ್ರ ಮೋಸ ಮಾಡಿದಂತಾಗುತ್ತದೆ ಅಲ್ಲವೇ. ಇರಲಿ, ನೋಡೋಣ. ನಾಳೆ ಏನೂ ಕಡಿಯುವ ಕೆಲಸವಿಲ್ಲ. ಬೆಳಿಗ್ಗೆ ಬರೇ ರೌಂಡ್ಸ್ ಅಷ್ಟೇ. ಯಾರಿಗೂ ತಂತಿ ಹಾಕುವ ಕೆಲಸವಿಲ್ಲ. ಬರಬೇಕಾದರೆ ಬಾನ್ ಜೋವಿಯದೋ, ಬೀ ಬೀ ಕಿಂಗಿನದೋ ಹೊಸ ಸೀಡಿ ಪೂರಾ ಕೇಳಿಕೊಂಡು ಬರಬೇಕು, ಬಾಯಲ್ಲಿ ಚ್ಯೂಯಿಂಗ್ ಗಮ್ ಅಗಿಯುತ್ತಾ. ಒಂದು ದಿನ ಬಿಡುವು ಕೊಡೋಣ ಇವೆಲ್ಲವಕ್ಕೂ. ಭಕ್ತಿ ಮನಸ್ಸಿನಲ್ಲಿ ಇರಬೇಕು. ಬರೀ ಮಂತ್ರ ಸ್ತೋತ್ರ ಕೇಳಿಬಿಟ್ಟರೆ ಸಾಲದು. ” ಎಲ್ಲಿದ್ದಿ ಇಲ್ಲಿ ತನಕ ಯೋಗೀ, ಕ್ಯಾತ್ ಲ್ಯಾಬಿನಿಂದ ನಾಲ್ಕು ಸರಿ ಬೀಪ್ ಮಾಡಿದ್ದೆವು” ಆಸ್ಪತ್ರೆ ಒಳಗೆ ಬಂದೊಡನೆ ಬಂತು ಸ್ವಾಗತ. ಯಾರೋ ನಲವತ್ತೆರಡು ವರ್ಷದವನಿಗೆ ಹಾರ್ಟ್ ಅಟ್ಯಾಕಂತೆ. ತುರ್ತಾಗಿ ಆಂಜಿಯೋಗ್ರಾಮಿಗೆ ತೆಗೆದುಕೊಂಡಿದ್ದರು. ಸರಸರನೆ ಬಟ್ಟೆ ಬದಲಾಯಿಸಿ ಒಳಬರುತ್ತಾನೆ ಯೋಗಣ್ಣ. ’ಲುಕ್ಸ್ ಲೈಕ್ ಅ ಕಾಂಪ್ಲಿಕೇಟೆಡ್ ಒನ್, ಯೋಗಿ ನೀನು ಬಂದದ್ದು ಒಳ್ಳೆಯದಾಯಿತು. ಇದು ನಿನ್ನದೇ ಪೇಷೆಂಟು. ಮೊನ್ನೆ ಕ್ಲಿನ್ನಿಕ್ಕಿನಲ್ಲಿ ನೋಡಿದ್ದೆಯಂತೆ. ಇವತ್ತು ಬೆಳಿಗ್ಗೆ ಎಮರ್ಜೆನ್ಸಿ ರೂಮಿಗೆ ಎದೆ ನೋವೆಂದು ಬಂದ. ದೊಡ್ಡ ಕ್ಲಾಟು. ಉಳಿದಿದ್ದೇ ಹೆಚ್ಚು. ಎರಡು ಮೂರು ಸ್ಟೆಂಟು ಬೇಕಾಗಬಹುದು. ಇಲ್ಲಿಂದ ನೀನು ಕಂಟಿನ್ಯೂ ಮಾಡು. ನನಗೆ ಇನ್ನೊಂದು ಕೇಸಿದೆ” ಯೋಗಣ್ಣ ಬರುವುದನ್ನೇ ಕಾಯುತ್ತಿದ್ದಂತೆ ಹೇಳಿದ ಗೆಳೆಯ, ಪಾರ್ಟ್ನರ್ ಜಾನತನ್. ಕೈ ಯಾಕೋ ನಡುಗುತ್ತಿತ್ತು ಯೋಗಿಗೆ. ಛೆ! ಎಂದೂ ಹೀಗಾಗಿರಲಿಲ್ಲವಲ್ಲ. ಇಂದೇಕೆ ಮೈ ಬೆವರುತ್ತಿದೆ. ಉಸಿರು ಮೇಲೆ ಬರುತ್ತಿದೆ.ಎದೆ ಡವಡವಗುಟ್ಟುತ್ತಿದೆ. ಕೈ ತೊಳೆಯುತ್ತಿದ್ದಾಗ ಸೋಪು ಜಾರಿ ಬಿತ್ತು. ಮನಸ್ಸಿನಲ್ಲೇ ಯೋಚನೆ ಮುಂದುವರಿಯಿತು. ಪಾಪ ಇನ್ನೂ ನಲವತ್ತೆರಡು. ಸ್ವಲ್ಪ ತಾನು ಕೈ ತಪ್ಪಿದರೂ ಜೀವವನ್ನೇ ಕಳೆದುಕೊಳ್ಳಬಹುದಲ್ಲವೇ ಈತ. ಛೆ, ಹಾಗಾಗಲಿಕ್ಕಿಲ್ಲ. ಅಕಸ್ಮಾತ್ ಹಾಗಾದರೂ ಅವೆಲ್ಲ ಸಹಜವಲ್ಲವೇ. ಏನಾದರೂ ಹೆಚ್ಚುಕಮ್ಮಿಯಾದರೆ ಬೈಪಾಸ್ ಮಾಡಿಸಿದ್ರಾಯಿತು. ಎರಡಾದರೂ ಸ್ಟೆಂಟ್ ಬೇಕೆನ್ನುತ್ತಾನೆ ಜಾನತನ್. ತಾನು ಮಾಡದೆ ಇರುವುದೇನೂ ಅಲ್ಲ. ಆದರೂ ತೊಂದರೆಯಾಗಿಬಿಟ್ಟರೆ? ಮೊಟ್ಟಮೊದಲ ಬಾರಿಗೆ ಯಾವುದೋ ಒಂದು ಜೀವದ ರಕ್ಷಣೆಯ ಹೊಣೆ ತನ್ನ ಕೈಯಲ್ಲಿದೆ ಅನ್ನಿಸಿತು. ಏನೂ ಆಗುವುದಿಲ್ಲ. ” ಬೆಟ್ಟಿ, ಜಾನತನ್ ಬಿಟ್ಟು ಬೇರೆ ಯಾರಾದರೂ ಇದ್ದಾರ ಸ್ವಲ್ಪ ನೋಡು. ಐ ಥಿಂಕ್ ಐ ಕೆನ್ ಯೂಸ್ ಅನದರ್ ಪೇರ್ ಆಫ್ ಹ್ಯಾಂಡ್ಸ್.” ” ಬೇರೆ ಯಾರೂ ಇಲ್ಲ. ಕ್ರಿಸ್ ಮೆಕ್ಸಿಕೋದಲ್ಲಿದ್ದಾನೆ. ಕೂಮಾರ್ ಕ್ಲಿನಿಕ್ಕಿನಲ್ಲಿದ್ದಾನೆ. ಜಾನತನ್ ಆಗಲೇ ಕೇಸ್ ಶುರು ಮಾಡಿದ್ದಾಯಿತು. ಲುಕ್ಸ್ ಲೈಕ್ ಯು ಆರ್ ಆನ್ ಯುವರ್ ಓನ್” ಚ್ಯುಯಿಂಗ್ ಗಂ ಅಗಿಯುತ್ತಾ ಹೇಳಿದಳು. ಹೌದು ಐ ಆಂ ಆನ್ ಮೈ ಓನ್. ಯಾಕಿಂದು ಈ ಒಂಟಿತನ ಕಾಡುತ್ತಿದೆ. ಇನ್ನೂ ಕೇಸೇ ಶುರುಮಾಡಿಲ್ಲ. ಆಗಲೇ ಸೋತುಹೋಗಿರುವ ಭಾವನೆ. ತುಂಬಾ ಆಪ್ತರಾಗಿರುವವರನ್ನು ಕಳೆದುಕೊಂಡಂತೆ ಮನಸ್ಸಿನೊಳಗೆ ತಳಮಳ. ” ಒಂದು ನಿಮಿಷ ಬಂದೆ” ಸ್ಕ್ರಬ್ಸ್ ನಲ್ಲೇ ಹೊರಗೆ ಹೊರಟ. ” ಯೋಗೀ , ವಿ ಆರ್ ಆಲ್ ರೆಡಿ” ಕಿರಿಚುತ್ತಿದ್ದಳು, ಬೆಟ್ಟಿ. ಬಂದೇಬಿಟ್ಟೆ ಎಂದು ಕಾರಿನ ಬಳಿಗೆ ಬಂದ. ಕ್ಯಾತ್ ಲ್ಯಾಬಿನಲ್ಲಿ ಟೇಪ್ ರಿಕಾರ್ಡರ್ ಹುಡುಕಿ ಕ್ಯಾಸೆಟ್ ಹಾಕಿದ. ” ವಿಶ್ವಂ ವಿಷ್ಣುರ್ವಷಟ್ಕಾರೋ” ಸುಬ್ಬಲಕ್ಷ್ಮಿ ಹಾಡುತ್ತಿದ್ದಳು. “ನೌ ಯು ನೀಡ್ ಸಂ ಇನ್ಪಿರೇಷನಲ್ ಮ್ಯೂಸಿಕ್, ಈಸ್ ಇಟ್?” ಪ್ರಶ್ನಾರ್ಥಕವಾಗಿ ನೋಡಿದಳು ಬೆಟ್ಟಿ. ” ಜಸ್ಟ್ ಅನ್ ಎಟಿಮಾಲಜಿ” ಅಂದು ನಕ್ಕ ಯೋಗಣ್ಣ. ನಾಳೆ ಹೇಗೂ ಕೇಳುತ್ತಿಲ್ಲವಲ್ಲ, ಇವತ್ತು ಎರಡು ಬಾರಿ ಕೇಳಿದರೆ ತಪ್ಪೇನಿಲ್ಲ ಅಲ್ಲವೇ ಅಂದುಕೊಂಡ.
ಆಗಸ್ಟ್ ೧೮,೨೦೦೧
ಕೀ ಇನ್ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ ೦೮-೧೨-೨೦೦೫