ಅಮ್ಮಚ್ಚಿಯೆಂಬ ನೆನಪು

ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ ರೀತಿಯೇ ಅಂಥದ್ದು. ಆದುದರಿಂದ ಹೀಗೆ ಇಂಥದ್ದೇ ಹೇಳುತ್ತೇನೆ ಎಂಬ ಯಾವ ಹಠವೂ ಇಲ್ಲದೆ ಈಗ ಏನೇನು ಮನಸ್ಸಿಗೆ ಬರುತ್ತದೋ ಅದನ್ನೆಲ್ಲ ಆದಷ್ಟೂ ಸಣ್ಣದಾಗಿ ಹೇಳಿ ವಿರಮಿಸುತ್ತೇನೆ.

ಅವತ್ತು ವಾರೆ ಬೈತಲೆ ತೆಗೆದು ಎರಡು ಜಡೆ ಕಟ್ಟಿಕೊಂಡು ಹೊರಟಿದ್ದಳಲ್ಲ ಅಮ್ಮಚ್ಚಿ. ಅಲ್ಲೇ ಆಚೆಗೆ, ಶಂಭಟ್ಟರ ಮೆನೆಯ ಸತ್ಯನಾರಾಯಣ ಪೂಜೆಗೆ. ಅವಳು ಉತ್ಸಾಹದಿಂದ ಹೋಗುತ್ತಿದ್ದುದು ಹಾಗೆ ನೋಡಿದರೆ ಶಂಭಟ್ಟರೆ ಮನೆಗೇ ಎಂದು ಗೋಚರವಾಗಬೇಕಾದರೆ ನನಗೆ ಇಷ್ಟು ವರ್ಷವಾಗಬೇಕಾಯಿತು. ಅದಿರಲಿ. ಅಲ್ಲಿಗೆ ಹೋಗಿಯಾದರು ಅವಳು ಮಾಡುತ್ತಿದ್ದುದು ಏನಪ್ಪಾ ಅಂತ ನೆನೆಸಿಕೊಂಡರೆ ಏನೂ ಇಲ್ಲ. ತದೇಕವಾಗಿ ಎಲ್ಲವನ್ನೂ ಎಲ್ಲರನ್ನೂ ನೋಡುವುದು ನೋಡುವುದು. ಇಂದು ಸತ್ಯನಾರಾಯಣ ಪೂಜೆಗೂ ನಡೆಯುವ ವೈಭವವನ್ನು ನೋಡುತ್ತ ನೋಡುತ್ತ ಮರಗಟ್ಟಿದಂತೆ ಕಾಣಿಸುವುದು. ಮರಗಟ್ಟಿದಂತೆ ಕಾಣಿಸುವುದು ಮಾತ್ರ. ನಿಜವಾದ ಅಮ್ಮಚ್ಚಿಯೋ ಯಾರನ್ನಾದರೂ ಮರಗಟ್ಟಿಸಿಯಾಳು, ಕೈಯಲ್ಲಿ ಮೂರು ಕಾಸು ಇಲ್ಲದೆಯೂ. ಅಮ್ಮಚ್ಚಿಗೂ ನನಗೂ ಏನು ಸಂಬಂಧ, ಹೇಗೆ ಗೆಳೆತನ ಎಂಬುದು ಕೂಡ ಅನವಶ್ಯವಲ್ಲವೆ? ಅಮ್ಮಚ್ಚಿ ಮಾತಾಡುವ ಫೋರ್ಸಿಗೆ ಬಹುಶಃ ನಾನು ಮರುಳಾಗಿಬಿಟ್ಟಿರಬೇಕು. ಅವಳ ಬೀಸುಮಾತಿಗೆ ಎಲ್ಲರೂ ಹೆದರುವವರೇ. ಅವಳ ಓರಗೆಯವರಂತೂ ಹತ್ತಿರ ಕೂಡ ಸುಳಿಯುತ್ತಿರಲಿಲ್ಲ. ಸುಳಿದರೂ ಅವರವರ ಮನೆಯವರು ಬೈದು ಜಬ್ಬುಜರಿಸಿಕೊಡುತ್ತಿದ್ದರು. ಅದೃಷ್ಟಕ್ಕೆ, ಅವಳ ಜೊತೆಗೆ ನಾನಿದ್ದರೆ ನನ್ನನ್ನು ಮನೆಯಲ್ಲಿ ಯಾರೂ ಗದರಿಸಲಿಲ್ಲವಾದ್ದರಿಂದ ಬೇಸರವಾದಾಗಲೆಲ್ಲ ನನ್ನ ದೊಡ್ಡ ಗೆಳತಿಯೆಂದರೆ ಅಮ್ಮಚ್ಚಿ. ಅವಳ ಹಿಂದೆ ನಾನು ಅಥವ ಮುಂದೆ ನಾನು. ಅಥವಾ ಕೈಹಿಡಿದು ಅವಳ ಹೆಜ್ಜೆಯ ವೇಗಕ್ಕೆ ಸರಿದೂಗಿಸಲು ನಾಲ್ಕು ಹೆಜ್ಜೆ ಕುಣಿಯುತ್ತ ನಾಲ್ಕು ಹೆಜ್ಜೆ ನಡೆಯುತ್ತ ನಾನು, ಅವಳು ಏನು ಹೇಳುವವಳೋ ಅದು ಅರ್ಥವಾಗಬೇಕಂತಲೂ ಇಲ್ಲದೆ ಹೂಂಗುಡುವುದು ನಗುವುದು ‘ಹೋಗಲಿ ಬಿಡು’ ಎನ್ನುವುದು…….

ಹಾಂ. ಹಾಗೆ ಹೊರಟಳಲ್ಲ ಎರಡು ಜಡೆ ಬಿಟ್ಟುಕೊಂಡು ಅಮ್ಮಚ್ಚಿ, ಸತ್ಯನಾರಾಯಣ ಪೂಜೆಗೆ, ವೆಂಕಪ್ಪಯ್ಯ ದಾರಿಯಲ್ಲೇ ಸಿಕ್ಕಿದ. “ಏನಿಯ? ಇದೇನಿಯ ಯೇಸ. ಬೊಂಬಾಯಿ ಲೇಡಿಯ ಹಂಗೆ, ವಾರೆ ಬಕ್ತಲೆ! ಶಿ……ಶಿ……ನಡೆ ಮನೆಗೆ. ಸರಿಯಾಯಿ ಬಾಚಿಂಡು ಹೋವು” ಎಂದ. ಅದಕ್ಕೆ ಅಮ್ಮಚ್ಚಿ “ಹೋವುಯ, ನೀ ಮನೆಗೆ ಹೋವು. ಹೋಯಿದ್ದ್ ಗಡದ್ದು ಒಂದು ಲೋಟೆ ಚಾಯ ಕುಡಿ. ಅಮ್ಮನ ಹಕ್ಕೆ ಹೇಳ್, ಹಂಗೂ ಮಾಡಿ ಕೊಡ್‌ತ್ಲ್…. ನನ್ನ ಸುದ್ದಿಗೆ ಮಿನಿ ಬರಳೆ. ಬೋಳುಮಂಡೆ ಕಾಕ. ನಿಂಗೆ ವಾರೆ ಬಿಡು, ಯಾವ ಬಕ್ತಲೆಯೂ ತೆಗೆಯಗಾಗದ ಸಂಕಟಕ್ಕೆ ನಂಗೆ ಯಾಕೆ ಹೇಳ್ತೆ?” ಎಂದವಳು ನನ್ನ ಕೈ ಹಿಡಿದು “ಬಾಯಿ ಬೀಸ ನೀನು. ಮೆಲ್ಲ ನಡೆದ್ರೆ ಹಿಂಗೇ. ನಾಯಿ ಸಂತಾನಗಳೆಲ್ಲ ಎದುರಾತೋ.” ಎಂದು ಎಳೆದುಕೊಂಡು ಮುಂದೆ ನಡೆದೇಬಿಟ್ಟಳು! “ಸುಟ್ಟದ್ ಎಲ್ಲಿ ತಯಾರಾಯ್ತೋ ನಮ್ಮ ಮನೆಗೇ….” ಅಂತೆಲ್ಲ ಗೊಣಗುತ್ತ.

ಕಾನೂನಿನವಳೆಂದೇ ಎಲ್ಲ ಹೇಳುವ ಅಮ್ಮಚ್ಚಿಯ ಕಾನೂನು ಎಂದರೆ ಹೀಗೆಂದೇ – ವೆಂಕಪ್ಪಯ್ಯನಿಗೆ ಖಿಶಿಯಿಲ್ಲವೆಂದು ತಾನು ಯಾಕೆ ವಾರೆಬೈತಲೆ ತೆಗೆಯಬಾರದು? ಎಂಬಂಥದೇ. ದಾತಾರರೆಂಬುವರು ಇಲ್ಲದ ಸೀತತ್ತೆಯ ಒಬ್ಬಳೇ ಮಗಳು ಅಮ್ಮಚ್ಚಿ. ಮನೆಯಲ್ಲಿ ಬೇರೆ ‘ಗಂಡು ಬಲ’ ಎಂಬುದು ಇಲ್ಲ. ಸೀತತ್ತೆಯ ‘ಸ್ಥಿತಿ ಲಾಗಾಯ್ತಿನಿಂದ’ ವೆಂಕಪ್ಪಯ್ಯನೇ ಎಲ್ಲದಕ್ಕೂ ಓಡಾಡಿದ ಹುಡುಗನಂತೆ. ತಂದೆ ಸಾಯುವಾಗ ಅಮ್ಮಚ್ಚಿಗೆ ಇನ್ನೂ ಆರು ತಿಂಗಳಷ್ಟೇ ಅಂತೆ. ಹನ್ನೆರಡು ವರ್ಷದ ವೆಂಕಪ್ಪನನ್ನು ಸೀತತ್ತೆ ಅಲ್ಲಿ ಇಲ್ಲಿ ಓಡಲು, ಅದು ತರಲು ಇದು ತರಲು ಹೇಳುತ್ತಿದ್ದರು. ಯಾರಿಲ್ಲದವ ಮನೆಯೆಂಬಂತೆಯೆ ಇದ್ದುಬಿಟ್ಟ. ಹೀಗೆ ಒಳಬಂದ ವೆಂಕಪ್ಪ ಬೆಳೆಯುತ್ತ ಬೆಳೆಯುತ್ತ ವೆಂಕಪ್ಪಯ್ಯನಾದ. ಅಮ್ಮಚ್ಚಿಯ ಹಕ್ಕುದಾರನೂ ತಾನೇ ಎಂಬಂತಾದ. “ಅವಳನ್ನು ಮದುವೆಯಾಪುಗೆ ಇನ್ನು ಯಾವ ಪುಣ್ಯಾತ್ಮ ಬಪ್ಪ? ಮಗಳ ಚಿಂತೆ ನೀವು ಮಾಡಳೆ. ನಾನಿದ್ದೆ.” ಎಂದು ಸೀತತ್ತೆಯ ಹತ್ತಿರವೂ ಹೇಳುತ್ತ ಊರ ತುಂಬವೂ ಅದನ್ನೇ ತುಂಬಿಸುತ್ತ ಅಮ್ಮಚ್ಚಿಯ ಕಣ್ಣಲ್ಲಿ ದಿನದಿನವೂ ಅಸಹ್ಯವಾಗುತ್ತ ಇದ್ದ. “ಗದ್ದೆ ಉಳುಪ ಕೋಣವಾದರೂ ಇವನಿಗಿಂತ ಊಂಚು…ಒಡ್ಡ ಎಲ್ಲಿದೋ. ಕಾಣ್, ಅವ ನನ್ನ ಕಂಡರೆ ನಿನ್ನ ಕಂಡಂಗೆ ಆತ್.” ಎಂದು ಕುಟು ಕುಟು ನಗುತ್ತಿದ್ದಳು ಅಮ್ಮಚ್ಚಿ. ನೋಡಿದರೇ ವೆಂಕಪ್ಪಯ್ಯನೇನೂ ಒಡ್ಡನಲ್ಲ! ಏನೋ ಅಮ್ಮಚ್ಚಿಯ ಮಾತೇ ಅರ್ಥವಾಗದೆಯೂ ನಾನು ನಗುತ್ತಿದ್ದೆ. “ಓಯ್, ಸಾಣೆಮಂಡೆ ಯಂಕಪ್ಪಯ್ಯ, ನಿಮ್ಮ ಚೀಟಿ ಜಪಾನಿಗೆ ಹೋತುದ್ ಯಾವಾಗ?” ಎಂದು ಅವ ಆಚೀಚೆ ಹೋಗುವಾಗ ಅವನಿಗೆ ಕೇಳದಂತೆ ನನಗೆ ಮಾತ್ರ ಕೇಳುವಂತೆ ಅವಳು ಹೇಳಿದರೆ, ಇದಾದರೆ ಸೈ ಅರ್ಥವಾಗುವುದೆ. ಪಾಪ, ಘಳಘಳ ಹೊಳೆಯುವ ಅವನ ಬೋಳುಮಂಡೆ ಇದ್ಯಾವ ಗೋಚರವೂ ಇಲ್ಲದೆ ಅತ್ತ ಸಾಗಿದಾಗ ನಗದೇ ಇರುವುದಾದರೂ ಹೇಗೆ? ಮಾತಿಗೊಂದು ನಗೆಯ ಗ್ಯಾರೆಂಟಿ ಸಿಕ್ಕಿದರೆ ಮಾತಾಡುವವರಿಗೂ ಹುರುಪು ಬರುತ್ತದಷ್ಟೆ. ಅಮ್ಮಚ್ಚಿ ಮತ್ತು ನನ್ನ ಜೊತೆ ಹಾಗಿತ್ತು.
ಅವತ್ತೊಂದು ದಿನ –
“ಪೇಟೆಗೆ ಹೋಪಯ!” ಎಂದಳು ಅಮ್ಮಚ್ಚಿ.
“ಹೋ.”
“ಅಲ್ಲಿಂದ ದೇವಸ್ಥಾನಕ್ಕೆ ಹೋಪ.”
“ಹೋ.”
“ಅಲ್ಲಿಂದ….. – ಅಮ್ಮ, ಮನೆಗೆ ಏನಾರು ಸಾಮಾನು ಗೀಮಾನು ಬೇಕ?”
“ಬೇಕಾರೆ ನೀ ಯಂತಕ್ಕೆ ಕೊಂಡರ್ತದ್ ಈಗ? ಅದೇ ನೆಪಲೆ ಪೇಟೆ ಮೆರವಣಿಗೆ ಮಾಡುಗ? ಯಂಕಪ್ಪಯ್ಯ ತರ್ತ?”
“ಯಾಕೆ? ಯಾಕೆ ಅವಂಗೆ ಹೇಳ್ತ್‌ದ್? ಒಂದು ಕಾಲಲೆ ಅವ ಬೇಕಾಯ್ತ್, ಹೇಳಿಯಾಯ್ತ್, ತ್ರಿಸಿಂಡಾಯ್ತ್. ಇನ್ನೂ ಇನ್ನೂ ಯಾಕೆ ಅವ ನಮಗೆ? ನಾನಿಲ್ಲಯ? ನಂಗೆ ತೆಳಿತಿಲ್ಲಯ? ನಂಗೆ ಹೇಳಗಾಗದ?”
“ಹಂಗಂದ್ರೆ ಸೈ ಮಾರಾಯ್ತಿ, ಹೋವು ನೀನೇ” – ಅಂತ ಬೇಕಾದ ಸಾಮಾನುಗಳನ್ನು ಹೇಳಿದರು, ದುಡ್ಡು ಕೊಟ್ಟರು ಸೀತತ್ತೆ. ಏನು ಪುಣ್ಯವೋ ಅಷ್ಟು ಬೇಗ ಒಪ್ಪಿದ್ದು. ಅಮ್ಮಚ್ಚಿಯ ಮುಖ ಆಗಿದ್ದೆಂದರೆ! “ಬಾ ಬಾ ಬಾ ಹೊರಡುವ. ಎನ್ನು ಆ ಸನ್ನಿಮೀರಿದವ ಬಂದರೆ ಜಂಬರ ಎಲ್ಲ ಆಡಿಮೇಲು” – ಎಂದು ಅವಸರದಿಂದ ಒಳಗೆ ಓಡಿದಳು. ಜಡೆ ಬಿಚ್ಚಿ ತಲೆ ಬಾಚಿಕೊಂಡು, ಹೆಣೆಯದೆ ಹಾಗೆಯೇ ಕಟ್ಟಿಕೊಂಡಳು. ಅದು ರುಮು ರುಮು ಹಾರುವಾಗ “ ಹೆಂಗೆ ಕಾಣ್ತಿಯ? ನಂಗೆ ಒಂಬುತ?” ಎಂದು ಉತ್ಸಾಹ ತಾಳಿದಳು. ಖಾಲಿಯಾತುತ್ತ ಬಂದಿದ್ದ ಹಿಮಾಲಯನ್ ಬುಕೆಯ ಉದ್ದ ಕರಡಿಗೆ ಬುಡವನ್ನು ಬಡಿದು ಬಡಿದು ತನ್ನ ಪುಟ್ಟ ಡಬ್ಬಿಗೆ ಪೌಡರು ಉದುರಿಸಿಕೊಂಡಳು. ಒಂದು ಡಬ್ಬಿ ತೆಗೆದುಕೊಂಡರೆ ವರ್ಷವಿಡೀ ಸಾಕಂತೆ ಅವಳಿಗೆ. “ಅಮ್ಮ ಹೆಂಗೂ ಪೌಡರುಗಿವ್ಡರು ಹಚ್ಚಿಂತಿಲ್ಲೆ. ಅವಳು ಹಚ್ಚಿಂಡ್ರೆ ಆತೆಂತದೂ ಇಲ್ಲೆ. ಜಾಸ್ತಿಯೆಂದರೆ ಆಚೀಚೆ ಹೋಪ್ತಿಗೆ ಉಂಚ ಪರಿಮಳ ಬಕ್ಕು. ಅವಳಿಗೆ ಬೆಡ ಉಂಬ್ರು. ಯಾರಾರು ಏನಾರೂ ಹೇಳ್ತ್ ಅಂದ್ ಅಂಜಿಕೆ. ಆ ಹೇಳ್ತವ್ರು ಉಂಟಲ್ಲ, ಮೂರಿ ಬಂದರಾರೂ ಸೈಸಿಂತೊ. ಪರಿಮಳನ್ನ ಸೈಸಿಂತಿಲ್ಲೆ.” ಎನ್ನುತ್ತ ಮುಖಕ್ಕೆ ಬಡಬಡ ಪೌಡರು ಹೊಡೆದುಕೊಂಡು ತಿಕ್ಕಿ ಒರೆಸಿಕೊಂಡಳು. ನನ್ನ ಮುಖಕ್ಕೂ ಪೌಡರು ಹೊಡೆದು ಲಾಲಗಂಧ ಇಟ್ಟಳು. ಅಮ್ಮಚ್ಚಿ ಹೊರಡುವಾಗ ಹೀಗೆ, ಸಂಭ್ರಮವೇ ಹೊರಡುತ್ತದೆ! ಆದರೆ ಆಗಲೇ ಹೇಳಿದಂತೆ, ಹೊರಡುವುದಾದರೂ ಎಲ್ಲಿಗೆ ಅಂತ ಬೇಕಲ್ಲ? “ಅಪ್ಪ ಸತ್ತ ಮೇಲೆ ನಮ್ಮನ್ನು ಮೂಸಿದವರುಂಟ? ಆಚೆ ಅಪ್ಪನ ಕಡೆಂದಲೂ ಇಲ್ಲೆ. ಈಚೆ ಅಮ್ಮನ ಕಡೆಂದಲೂ ಇಲ್ಲೆ…… ಹೋತ್‌ದ್ ಬಪ್ಪನಾಡು ಜಾತ್ರೆಗೆ. ಆದೂ ಇಲ್ಲದ್ರೆ ಏನು ಮಾಡಗಿತ್ತು!” ಎಂದು ನಕ್ಕಳು. “ಯಾರು ಇಲ್ಲದ್ದಕ್ಕೆ ಈ ಯಂಕಪ್ಪಯ್ಯ ಸವಾರಿ ಮಾಡ್ತ. ಅವಂಗೆ ಸಾವೂ ಬರ್ತಿಲ್ಲೆ ಅಲ್ದ?” ಎನ್ನುತ್ತಾ ಸೀರೆ ಉಟ್ಟಳು. ಸೆರಗು ಪಟ್ಟಿ ಮಾಡಿಕೊಂಡಳು. ಎರಡೂ ಅಂಚುಗಳು ಸರಿಯಾಗಿ ಕಾಣುವ ಹಾಗೆ ಮೂರು ಪಟ್ಟಿ ಮಾಡಿಕೊಂಡಳು. “ನಿಂಗೆ ಪಿನ್ನು ಕುತ್ತ್‌ಗೆ ತೆಳಿತ? ಅದು ಒಂಚೂರು ಹಿಂದೆ ಕುತ್ತಗು. ಕಾಂಬ, ಕುತ್ತು.” – ನಾನು ಅವಳು ಹೇಳಿದಲ್ಲಿಗೆ ಪಟ್ಟಿಸೆರಗಿಗೂ ರವಕಿಗೂ ಹೊಂದಿಸಿ ಪಿನ್ನು ಕುತ್ತಿದೆ. “ಹ್ಞಂ! ಹಿಂಗೆ! ನೀನೊಬ್ಬಳು ನಂಗೆ ಸಾರಥಿ. ನೀನೂ ಇಲ್ಲದ್ರೆ ಏನ್ ಮಾಡಗಿತ್ತು ನಾನು?” ಎಂದಳು. ಇದ್ದದ್ದನ್ನು ಹೇಳುತ್ತ ‘ಇಲ್ಲದಿದ್ದರೆ’ ಎಂದು ಚಿಂತಿಸುವ ಅಮ್ಮಚ್ಚಿ! ನಕ್ಕರೆ ಅವಳ ಗೆರಸಿ ಮುಖ ‘ಅರಳಿದ ಕಮಲದ ಹಾಗೆ’ ಎನ್ನುತ್ತಾರಲ್ಲ ಅದೇ. ಗೆಲು ನಮಗೂ ಹರಡಿಕೊಳ್ಳುತ್ತದೆ. ಅವಳು ಒಂದು ನಕ್ಕರೆ ಎದುರಿಗಿರುವವರು ನಾಲ್ಕು ನಗಬೇಕು….. ಹಿತವಿದ್ದರೆ.
ಅಮ್ಮಚ್ಚಿ ಅಮ್ಮಚ್ಚಿ…..
ಸಣ್ಣ ಉರುಟು ಕನ್ನಡಿಯಲ್ಲಿ ಆಚೆ ಬಗ್ಗಿ ಈಚೆ ಬಗ್ಗಿ ಹಿಂದೆ ಹೋಗಿ ಚೂರು ಚೂರೇ ನೋಡಿಕೊಳ್ಳುತ್ತ “ಅಲ್ಲ, ಶಂಭಟ್ಟರ ಮನೆಲೆ ಗೊತ್ತುಂಟ? ಎಷ್ಟುದ್ದ ಕನ್ನಡಿ! ಮೇಲಿಂದ ಹಿಡಿದು ಕೆಳಗಿನವರೆಗೆ ಕಾಣ್‌ತ್!! ಇದಯ, ಎಲ್ಲಂತೆ? ಮಾಯಿಯ ಕೋಣೆಲೇ!! ಮಾಯಿಗೆ ಎಂಥಾ ಗಮ್ಮತ್ತು ಕಾಣ್!….
“ಎಂತ ಗಮ್ಮತ್ತು?”
“ಥೂ ನಿಂಗೆ ಗೊತ್ತಾತಿಲ್ಲೆ. ಉಂಚ ದೊಡ್ಡವಳಾಗ್ಗು…. ಅಲ್ಲ, ಅಷ್ಟು ದೊಡ್ಡ ಕನ್ನಡಿ ಮಾಯಿಗೆ ಬೇಕ? ಮೇಲಿಂದ ಕೆಳಗಿನವರೆಗೆ ಕಂಡಿಂತ್ರ ಹಂಗರೆ! ಕಂಡಿಂಬುಗೆ ಅವರಿಗೆ ಯಂತ ಉಳಿದಿಂತ್ ಅಂತ ಬೇಡ್ದ! ಆ ಕನ್ನಡಿ ನಂಗಾರೂ ಇದ್ದಿವ್ರೆ!” ಎಂದಳು.
ಹಾಂ ಅಂತೂ ಶೋಕು ಮುಗಿಯಿತು, ಇನ್ನೇನು ಹೊರಡಬೇಕು – ಬಂದೇಬಿಟ್ಟ ವೆಂಕಪ್ಪಯ್ಯ.
“ಬಂತಲ್ಲ ಯಂಕಪ್ಪಯ್ಯನ ಕೋಲ”
ಅಮ್ಮಚ್ಚಿಯ ಮುಖ ಕಂದಿದಂತೆ ಕಾಣಿಸಿ ನಾನೆಂದೆ, “ಯಂಕಪ್ಪಯ್ಯ ಅಲ್ಲ ಅವ – ಕುಂಕಪ್ಪಯ್ಯ” – ಸೈ, ಅಮ್ಮಚ್ಚಿ ಒಂದು ನಕ್ಕಿದ್ದೆಂದರೆ! ಬಿದ್ದು ಬಿದ್ದು ನಕ್ಕಳು, “ನೀನೊಬ್ಬಳೇ ಈ ಪ್ರಪಂಚಲೆ ಸಮ. ಮತ್ತೆ ಯಾರೂ ಸಮ ಇಲ್ಲೆ. ಕಾಣು, ಒಬ್ಬರಿಗಾದರೂ ಅವ ಕುಂಕಪ್ಪಯ್ಯನ ಹಂಗೆ ಕಾಣ್ತನ?….. ಎನ್ನುತ್ತ.
ಹಾಂಗಾದರೆ ಅಂದು ನಾನು ಒಟ್ಟಾರೆ ಹೇಳಿದ ‘ಕುಂಕಪ್ಪಯ್ಯ’ ಎಂಬುದಕ್ಕೆ ಏನೋ ವಿಶೇಷ ಅರ್ಥ ಇರಬೇಕಂತ ನಾನು ಎಷ್ಟು ದಿನ ಗಟ್ಟಿನಿಂಬಿಕೊಂಡಿದ್ದೆ.
ಹೂಂ…. ವೆಂಕಪ್ಪಯ್ಯ ಬಂದ “ಏನು ಏನು ಏನು! ಕೋಲ ಕಟ್ಟಿಂಡ್ ಹೊರಟ್‌ದ್ ಎಲ್ಲಿಗೆ ಮೆರವಣಿಗೆ?”
“ಟೋಕರ ಗುಡ್ಡೆಗೆ.”
“ಯಂತದಕ್ಕೆ ಹೊರಗೆ ಹೋತ್‌ದೀಗ?…..”
“ಸಂಕಪಾಸಣ ತಗಂಬುಗೆ. ದಾರಿ ಬಿಡಿಯ ನೀನು.”
ಆತ ದಾರಿ ಬಿಡದೆ “ಏನು ಯೇಸ ತಕಂಡು ಹೋತ ಪೇಟೆಯವ್ವ ಹಂಗೆ! ಶ್ಯೆಕ್ಕ್… ಎದೆ ಎರಡೂ ಕಾಣ್ತ ಹಂಗೆ ಪಟ್ಟಿ ಸೆರಗು ಹಾಸಿಂಡ್ ಹೊರಟೆಯಲ್ಲ! ಯಾರ ಮರ್ಯಾದೆ ತೆಗೆಗೆ?” ಎಂದ. ಅವ ಅಮ್ಮಚ್ಚಿಗೆ ಬೈದರೂ ಜೊತೆಗಿದ್ದ ನನಗೂ ಆ ಬೈಗುಳದ ಬಿಸಿಯನ್ನು ಹೇಗೆ ತಾಕಿಸುತ್ತಿದ್ದ! ಅಮ್ಮಚ್ಚಿ ದುರುಗುಟ್ಟಿ ಅವನನ್ನೇ ನೋಡುತ್ತ “ನೀ ಹೋವುಯಾ ಕೋಮಣ ಬಿಟ್ಟಿಂಡ್ ಎಲ್ಲಿಗೆ ಬೇಕಾರೂ. ನಾ ಕೇಣ್‌ತ್ನ? ನಾ ನಂಗೆ ಬೇಕಾದ ಹಂಗೆ ಹೊರಟರೆ ನಿಂಗೆ ಯಾಕೆ ಕಿಚ್ಚು?”
“ನಡೆ ಒಳಗೆ ಅಂದೆ.”
“ನೀ ಯಾರು ನಂಗೆ ಹೇಳುಗೆ ಅಂದೆ”
“ಕಾಲು ಮುರಿತೆ”
“ನಾನೇನು ಬಾಯಿಗೆ ಕಡ್ಲೆ ಕಾಳು ಬೀಸಿಂತ ಕುಳ್ಕಂತ್ನ?”
ವೆಂಕಪ್ಪಯ್ಯ ಸೀತತ್ತೆಯನ್ನು ಕರೆದ! “ಹಿಂಗೆಲ್ಲ ಮಾಡಿಂಡ್ ಇವಳು ಪೇಟೆಗೆ ಹೊರಡ್ತ್‌ದ್, ಬಾಸಾಯಿ ತಿಂತದ್, ಯಾಕೆ ಬೇಕಾಯಿ ಈಗ! ಪೇಟೆ ಸಾಮಾನು ಬೇಕಾರೆ ನಾನು ಕೊಣಂದ್ ಕೊಡ್ತಿಲ್ಲಯ?” ಮುಂತಾಗಿ ಹೇಳುತ್ತ ಹೇಳುತ್ತ ಕಡೆಯ ಬಾಣವಾಗಿ “ನಿಮಗೆ ಗೊತ್ತಿಲ್ಲೆ, ಇವಳು ಪೇಟೆ ಪೇಟೆ ಅಂದ್ ಹೋತ್‌ದ್ ಆ ಶಂಭಟ್ಟರಮನೆಗಲ್ದ? ಅವರ ಮನೆ ಜಗಲಿ ಕಾಸ್‌ತದ್, ಬಾಯಿ ಕಳ್ದ್ ನಗಾಡ್‌ತ್‌ದ್. ಅವು ಇವಳ ಹಲ್ಲೆಲ್ಲ ಲೆಕ್ಕ ಮಾಡಿಂತೋ.” ಸುಳ್ಳು. ಸುಳ್ಳು ಸೀತತ್ತೆ ಎಂದು ನಾನು ಕಷ್ಟಪಟ್ಟು ಕೂಗಿದ್ದು ಸೀತತ್ತೆಗೆ ಕೇಳಿಸುವುದೇ ಇಲ್ಲ. ಸುರುಮಾಡಿಯಾಯಿತು ಅವರು, “ಹೌದ್ದ ಹೆಣ್ಣೆ, ಹಿಂಗಾ ಇಚಾರ?….” ಅಂತೆಲ್ಲ ಇರುತ್ತಲ್ಲ?
“ಅವರ ಮನೆಗೆ ಹೋತಾರೆ ನಿಂಗೆ ಹೇಳಿಯೇ ಹೋಪೆ. ಸುಳ್ಳು ಹೇಳ್ತ ಗರ್ಜು ಇವತ್ತಿಗೆ ನಗಿಲ್ಲೆ. ಈ ಬಿರ್ಕನಕಟ್ಟೆ ದೈವದ ಮಾನು ಕೇಂಡ್‌ದ್ ನಂಗೆ ಯಾಕೆ ಬೈತೆ ನೀನು?”
ಸೀತತ್ತೆ ಸ್ಫೋಟವಾದರು. “ಅಯ್ಯೋ…. ಹೆಚ್ಚು ವಾದ ಮಾಡಳೆ ಮಾರಾಯ್ತೇ, ಇನ್ನು ಹೆಚ್ಚು ವಾದ ಮಾಡಳೆ. ಯೆಂಕಪ್ಪಯಾನು‌ಊ ಇಲ್ಲದೆ ಹೋದ್ರೆ ಆಗ ಗೊತ್ತಾಕ್ ನಿಂಗೆ ನಮ್ಮ ಅವಸ್ಥೆ ಏನ್ ಅಂದ್….” ಅಂತೆಲ್ಲ ಅವನ ಎದುರಿಗೆ ಕಿರುಚುತ್ತ, ಹೊರಟುನಿಂತ ಅಮ್ಮಚ್ಚಿಯನ್ನು ಅಕ್ಷರಶಃ ಒಳಗೆ ನೂಕಿದರು. ವೆಂಕಪ್ಪಯ್ಯ ನನ್ನನ್ನೂ ನುಂಗುವಂತೆ ನೋಡಿದ್ದೇ ನಾನು ಓಡಿಹೋಗಿ ಅಮ್ಮಚ್ಚಿಯನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಂಡೆ. ಕೈ ಬಿಡಿಸಿಕೊಂಡು ತಲೆ ನೇವರಿಸಿದಳು ಅಮ್ಮಚ್ಚಿ. “ಹೆದರಳೆ. ಅದು ಪೋಂಕು. ಪೋಂಕುಗಳಿಗೆಲ್ಲ ಹೆದರಗೇ ಆಗ. ಬಾ. ನಾವು ಮಡಲು ಹೆಣೆವ.” ಅವಳ ಸ್ವರ ಕಂಪಿಸುತ್ತಿತ್ತು. ಕಣ್ಣಲ್ಲಿ ಮಾತ್ರ ಒಂದು ಹನಿ ನೀರು ಕೂಡ ಇರಲಿಲ್ಲ. ಮಡಲು ನೆನೆಸಿದ ಕಟ್ಟೆಗೆ ನಡೆದಳು ಅಮ್ಮಚ್ಚಿ ತಣ್ಣಗೆ ಮಂಜುಗಡ್ಡೆಯಂತೆ. ನೆನೆದ ಒಂದು ದೊಡ್ಡ ಮಡಲನ್ನು ಎತ್ತಿ ಅಂಗಳಕ್ಕೆ ಹಾಸಿಕೊಂಡಳು. ನನಗೂ ಒಂದು ಚಿಕ್ಕ ಮಡಲು ಕೊಟ್ಟಳು. “ನಿಂಗೆ ಹೇಳಿ ಕೊಡ್ತೆ. ಕಲಿ. ಎಲ್ಲ ಇದ್ಯೆ ಬರಗು. ಯಾವ್ದೂ ಬರ್ತಿಲ್ಲೆ ಅಂತೆಳಿ ಇಪ್ಪುಗಾಗ.” ಒತ್ತಿಟ್ಟ ಹಾಗಿದ್ದ ಸ್ವರವನ್ನು ಸಹಜ ಮಾಡಿಕೊಂಡು ಸೋಲದಂತೆ ತನ್ನ ಸಧ್ಯವನ್ನು ನಿಭಾಯಿಸಲು ಹೊರಟಂತೆ ಮಾತು ಮುಂದುವರಿಸಿದಳು ಅಮ್ಮಚ್ಚಿ.
“ಇದ, ಈ ಗರಿ ಹಿಂಗೆ ಮುರಿ. ಹಿಂಗೆ ಹಿಮ್ಮಡ್ಚು. ಒಂದು ಬಿಟ್ಟು ಒಂದರ ಹಿಂದೆ ಒಂದು ಬಿಟ್ಟು ಒಂದರ ಹಿಂದೆ ಸೇರಿಸ್ತ ಬಾ. ಉಂಚ ಬಿಗೀ ಎಳಕೊ. ಇಲ್ಲದ್ರೆ ಚಡಿ ಬಿಡ್‌ತ್. ಚಾಪೆ ನೇಯ್ತ ಕ್ರಮವೂ ಹಿಂಗೇ. ನಂಗೆ ಮಡಲು ನೇಯ್ತ ಅಂದ್ರೆ ಸೈ” ಎಂದಳು. ಹಂಗೇ….. ಹಿಂಗೇ….. ಎಂದು ನಾನು ಹೆಣೆಯುತ್ತ ಬಂದ ಹಾಗೂ ರಾಗವೆಳೆದಳು. “ಸಾಬಾಸ್. ಇನ್ನು ಮೇಲೆ ದಿನಾ ಮೂರು ನಾಲ್ಕು ಮಡಲು ಹೆಣೆವೆನೆ? ಪಂಥ ಕಟ್ಟುವ. ಯಾರು ಹೆಚ್ಚ್ ಹೆಣೆತ್ರ್ ಅಂದ್. ಹೊತ್ತ್ ಹೋದ್ದೇ ತೆಳಿತಿಲ್ಲೆ…. ಮುಗಿತಾ? ಹಾಂ. ಬದಿಯ ಗರಿಯನ್ನೆಲ್ಲ ಒಟ್ಟು ಸೆರಿಸಿ ಅಂಚು ತಿಪ್ಪ್‌ತಾ ಬಾ. ಗಂಟೊ ಹಾಕು. ಹಣಣಣಗೆ…… ಅವಂಗೆ ಮಾಡ್‌ಸ್ತೆ ಬಗೆ. ನಾನು ಬಾಳ್ಪುತೆ ಅಂದ್ ಮಾಡಿದ. ಬಾಳ್ಪಿಯೇ ಬಿಟ್ಟೆನಾ ನಾನು? ಅವನ ಕಣ್ಣೆಲೆ ನೀರು ಬರಿಸ್ದೇ ಇದ್ರೆ ನಾನು ನನ್ನ ಹೆಸರಲ್ಲ….. ಯಾವುದಕ್ಕೂ ನಂಗೊಬ್ಬ ಗಂಡ ಬರಡು. ಮತ್ತೆ ಉಂಟು ಇವಂಗೆ ಕಂಬಳ….” ಅಮ್ಮಚ್ಚಿ ಅವಡುಗಟ್ಟಿ ಮಡಿಲಿನಂಚನ್ನು ತಿಪ್ಪುತ್ತಿದ್ದಳು. “ಹಿಂಗೇ ದಿವಸಾ ನೇಯ್ದರೆ ನಮ್ಮ ಮದುವೆಗೂ ನಾವು ಹೆಣೆದ ಮಡಲನ್ನೇ ಹಾಕಳಕ್ಕು. ಕಾಣೀಲ್ಲಿ ಎಷ್ಟಗಲ! ಅಂಕಣ ಚಾಪೆಗಿಂತ ಅಗಲ” ಎಂದು ನಕ್ಕಳು. ಕಣ್ಣಂಚು ಹೊಳೆಯುತ್ತಿತ್ತು. ನಗೆಗೂ ಅಳುವಿಗೂ ಸಿಟ್ಟಿಗೂ ಹೊಳೆದುಕೊಂಡೇ ಇರುವ ಕಣ್ಣಂಚಿನ ಅಮ್ಮಚ್ಚಿ.”ಅಮ್ಮ ನಾವು ದೇವಸ್ಥಾನಕ್ಕೆ ಹೋಯಿದ್ದ್ ಬರ್ತೊ.” ಎಂದು ನನ್ನನ್ನೂ ಕರೆದುಕೊಂಡು ಅಮ್ಮಚ್ಚಿ ಹೋದದ್ದು ಎಲ್ಲಿಗೆ ಎಂದರೆ ರಮಾ ಟೀಚರ್ ಮನೆಗೆ. “ಮತ್ತೆ? ಸೀದ ಹೇಳ್ತವರಿಗೆ ಕಾಲ ಅಲ್ಲಯ ಇದು. ಸತ್ಯ ಹೇಳಿದ್ರೆ ಬಿಡದ್ರ ಮೇಲೆ ಸುಳ್ಳು ಹೇಳಗೇ ಆಯ್ತ?” ಎಂದು ನನ್ನ ಆಶ್ಚರ್ಯ ತಿಳಿಯಿತೆಂಬಂತೆ ತಾನಾಗೇ ಹೇಳಿದಳು. ರಮಾ ಟೀಚರ್ ಹೊಲಿಗೆಯವರು. ಅಮ್ಮಚ್ಚಿಗೆ ಹಿಂದುಗುಬ್ಬಿಯ ರವಕೆ ಬೇಕಂತ ಉಂಟು.. ಶಂಭಟ್ಟರ ಮನೆಗೆ ಬರುವ ಹುಡುಗಿಯರು ಕೆಲವರು ಹಿಂದುಗುಬ್ಬಿಯ ತೊಟ್ಟದ್ದು ಕಂಡಿದ್ದಳಂತೆ.
“ನೀನು ಕಂಡಿದ್ದೆಯ?”
“ಇಲ್ಲಪ್ಪ”
“ಅದೆಲ್ಲ ನಿಂಗೆ ಕಾಣ್ತಿಲ್ಲೆ…. ಹಿಂದುಗಿಬ್ಬಿ ರವಕೆನ್ನ ರಮಾಟೀಚರ್ ಚಂದ ಹೊಲೀತ್‌ರಂಬ್ರು. ಅಲ್ಲಯ, ನಾನು ಹೊಲಿಸಿಂಡ್ರೆ ಹಿಂದಿನಿಂದ ನೀನು ಗುಬ್ಬಿ ಹಾಕ್ತೆಯಲ್ಲ….. ನಾನು ಅಭ್ಯಾಸ ಮಾಡಿಂತವರೆಗೆ?”
“ಒಹೊ. ನಾನೇ ಹಾಕ್ತೆ.”
“ನೀನು ಹಾಕ್ತ್‌ದ್ ಅಂದ್ ಮತ್ತೆ ಯಾರ ಹಾಕ್ಯೈಯೂ ಹೇಳಗಾಗ?”
“ಹೇಳ್‌ತಿಲ್ಲಪ್ಪ.”
ಹೊಲಿಗೆ ಮಿಶನ್ನಿನ ಮೇಲೆ ಕೆಲಸದಲ್ಲಿದ್ದ ರಮಾಟೀಚರ್ ಮಿಶನು ನಿಲ್ಲಿಸಿ ನಮ್ಮತ್ತ ನೋಡಿದರು. ಏನು ಬಂದಿರಿ ಎಂಬಂತೆ ಅರ್ಧ ಹೊಲೆಯುತ್ತಿರುವ ಬಟ್ಟೆಯನ್ನೂ ಅರ್ಧ ನಮ್ಮನ್ನೂ ನೋಡುತ್ತ ಹುಬ್ಬೇರಿಸಿ ಇಳಿಸಿದರು. ರವಕೆ ಬಟ್ಟೆಯನ್ನು ರಮಾಟೀಚರ್‌ಗೆ ಕೊಟ್ಟಳು ಅಮ್ಮಚ್ಚಿ. “ಹಿಂದುಗುಬ್ಬಿ ಇಡಿ ಟೀಚರ್. ಅಮ್ಮನಿಗೆ ಹೇಳುವುದು ಬೇಡ. ಅದರ ವಿಚಾರ ನಾನು ನೋಡಿಕೊಳ್ಳುತ್ತೇನೆ.” ಎಂದಳು. ಮನೆಯಿಂದ ಹೊರಗೆ ಬಂದಳೆಂದರೆ ಅಮ್ಮಚ್ಚಿ ಮಾತಾಡುವುದು ‘ಕರ್ನಾಟಕ’! ಕೊಂಕಣಿ ಜಾತಿಯ ರಮಾಟೀಚರೂ ಹೊರಗಿನವರೊಡನೆ ಮಾತಾಡುವುದು ‘ಕರ್ನಾಟಕ’ವೇ. ರಮಾಟೀಚರ್ ಟೇಪು ಬಿಚ್ಚಿ ಅಳತೆ ತೆಗೆದುಕೊಳ್ಳುತ್ತಿದ್ದರೆ ಅದರ ಜೊತೆಜೊತೆಗೇ ಒಳಗೇ ನಗುತ್ತಿದ್ದಾರೆ ಅಂತಲೂ ಕಂಡಿತು. ಅಮ್ಮಚ್ಚಿ ಹಿಂದುಗುಬ್ಬಿಯ ರವಕೆ ಆಸೆಪಟ್ಟರೆ ಏನೋ ತಮಾಷೆ ಕೇಳಿದ ಹಾಗೆ ರಮಾಟೀಚರ್ ಯಾಕೆ ನಗಬೇಕು?

ಎಲ್ಲ ಮುಗಿದ ಮೇಲೆ “ಅಲ್ಲವನ ಅಮ್ಮಚ್ಚಿ, ಬ್ಯಾಕ್ ಬಟನ್ ಬ್ಲೌಸ್ ಹೊಲಿಯಬಹುದು. ಕಷ್ಟವಲ್ಲ. ಆದರೆ ವೆಂಕಪ್ಪಯ್ಯ ಕೊನೆಗೆ ನನಗೆ ಬಂದು ಗಲಾಟೆ ಮಾಡಿದರೆ? ಅವನಿಗೆ ಇದೆಲ್ಲ ಖುಶಿ ಇದ್ದ ಹಾಗೆ ಕಾಣುವುದಿಲ್ಲ….” ಎಂದರು!
ಹಳಬೆ ರಮಾಟೀಚರ್‌ಗೆ ಊರಿನ ಎಲ್ಲರೂ ಗೊತ್ತು. ಎಲ್ಲರ ಮನೆ ವಿಚಾರವೂ ಗೊತ್ತು. ಎಲ್ಲರಿಗೂ ರಮಾಟೀಚರ್ ಗೊತ್ತು. ಆದರೆ ಅಮ್ಮಚ್ಚಿ ಅಷ್ಟಕ್ಕೆ ಹೆದರುವವಳೇ?
“ಹ್ಞಾಂ! ಏನಂದಿರಿ ಟೀಚರ್? ಅವ ಯಾವ ದೊಡ್ಡ ಗುರಿಕಾರ ನಿಮಗೆ ಗಲಾಟೆ ಮಾಡಲಿಕ್ಕೆ! ಇದು ನನ್ನ ರವಕೆ. ನನಗೆ ಬೇಕಾದ ಹಾಗೆ ಹೊಲೆಯಿರಿ.” ಅವಳ ಆಜ್ಞೆಯ ದನಿ ಕೇಳಿ ರಮಾಟೀಚರ್‌ಗೆ ಮತ್ತಷ್ಟು ಮುಸಿ ನಗೆ! ಅಮ್ಮಚ್ಚಿ ಹೇಳುವಷ್ಟು ಹೇಳಿ ಒಂದು ನಿಟ್ಟುಸಿರು ಬಿಟ್ಟು ಅಲ್ಲಿಂದ ಎದ್ದಳು. ದಾರಿಯಲ್ಲಿ ಮೌನವಾಗಿಯೇ ಸಾಗುತ್ತ ಸುಮಾರು ಹೊತ್ತಿನ ಮೇಲೆ “ಏನು ಹಾಂಕಾರಿ! ನಾನು ಹೇಳ್ತ್‌ದ್ ಬೇಡ ಆ ಟೀಚರ್ತಿಗೆ ಯಂಕಪ್ಪಯ್ಯ ಉಂಬ್ರು…. (ಚಾಳಿಸಿ) ಯಂ….ಕಪ್ಪಯ್ಯ. ಅಂವ ಯಾರು ಹೇಳುಗೆ?” – ಅವಳ ಏನಂತಿ ಏನಂತಿ? ಎಂಬುದಕ್ಕೆ ಹೂಂಗುಡಲು ನಾನಿದ್ದೆ.
ಶಂಭಟ್ಟರ ಮನೆ ದೂರದಿಂದ ಕಾಣಿಸಿತು. “ಹೋಗಳಾಯಿಪ್ಪು ಅಲ್ಲಿಗೆ. ಕಸ್ತಲಾಪುಗೆ ಇನ್ನೂ ಸುಮಾರು ಹೊತ್ತು ಉಂಟು…. ಬೇಡ. ಈಗ ಬೇಡ…. ಎಲ್ಲಾದರೂ ಆ ಕುದ್ರಾಳು ಹಾವು ಕಾಂಬು…. ಶಂಭಟ್ಟರ ಮಗ ಬರ್ತ ಅಂಬ್ರಲ್ದ? ಗೊತ್ತುಂಟು ನಿಂಗೆ? ಅವ ಇದ್ಯೆ ಕಲಿತು ಮುಗಿತುಂಬ್ರು. ಇನ್ಮೇಲೆ ತೋಟ ಕಂಡಿಂತ ಉಂಬ್ರು…… ಅವಂಗೆ ಹಳ್ಳಿ ಹುಡುಗಿನ ಮದುವೆ ಮಾಡಿದ್ದು ಮನೆಲೇ ಕೂಡಿಸ್ತ ಅಂದಾಜುಂಬ್ರಲ್ಲ? ಅದೇ ಒಳ್ಳೇದು ಅಲ್ಲಯ?… ಆದರೆ ಅವನ ಅಬ್ಬೆ ಉಂಟಲ್ಲ ದೊಡಾ….. ಗಜಾಲಿ. ಗಂಡಂಗೆ ಬೇಕಾರೆ ನಾಕು ಹಾಕುಗೂ ರೆಡಿಯಂಬ್ರು! ಕೇಣಿಯ! ಹ್ಹ! …. ಕಂಡಿದ್ದೆಯಾ ಅವನ್ನ? ಶಂಭಟ್ಟರ ಮಗನ್ನ? ಅವ ಬಂದ ಮೇಲೆ ಒಮ್ಮೆ ಹೋಪ. ಏನಾರು ನೆಪ ಮಾಡಿಂದ್. ನಿಂಗೆ ತೋರಿಸ್ತೆ. ಅವ ಮಾತಾಡ್ತ ಅಪ್ಪ, ಎಷ್ಟು ಬೇಕಾರೂ ಮಾತಾಡ್ತ. ಹಮ್ಮುಗಿಮ್ಮು ಒಂಚೂರೂ ಇಲ್ಲೆ…..”

ಹೀಗೇ ಮನೆ ಮುಟ್ಟಿದೆವು.ರಮಾಟೀಚರು ಈ ಸಲ ರವಕೆಯನ್ನು ವೆಂಕಪ್ಪಯ್ಯನ ಹತ್ತಿರ ಮೆನೆಗೇ ಕಳಿಸಿಕೊಟ್ಟರು! ಅಮ್ಮಚ್ಚಿ ಪೆಕೇಟು ತೆಗೆದುಕೊಂಡು ಹೇಗಾಗುತ್ತದೆ ಎಂದು ನೋಡುವ ಅಂತ ಒಳಗೆ ಹೋಗುವ ನೀರಿನಲ್ಲಿ ನೆನೆನ್ಸಿದ ಒಣ ಬಾಳೆಸಿಪ್ಪೆಯಿಂದ ಹಗ್ಗ ಸಿಗಿಯುತ್ತ ಪಿಂಡೆ ಕಟ್ಟುತ್ತ ಇದ್ದ ಸೀತ್ತತ್ತೆಯನ್ನು ನೋಡಿ ವೆಂಕಪ್ಪಯ್ಯ ಮೆಲು ನಕ್ಕ. ಅವ ನಕ್ಕದ್ದು ನನ್ನ ಕಣ್ಣಿಗೆ ಬಿತ್ತೆಂದು ನನ್ನನ್ನೊಮ್ಮೆ ಅಪರಾಧಿಯಂತೆ ನೋಡುವಂತೆ ನೋಡಿ “ಮಾಲಶ್ಮಿ ಮಾಯಿಗೆ ಹೇಳಗು. ಅಮ್ಮಚ್ಚಿಯ ಸಂಗಡ ನಿಮ್ಮ ಮಗಳನ್ನು ಹೆಚ್ಚು ಬಿಡಳೆ. ಅವಳೂ ಹಾಳಾತ್ಲ್ ಅಂದ್.” ಎಂದು ನನಗೆ ಕೇಳುವಂತೆ ನುಡಿದು ಸೀತ್ತತ್ತೆಗೆ ಕಾಣದಂತೆ ಕಣ್ಣಲ್ಲೆ ಹೆದರಿಸಿದ. ನಾನು ಅಲ್ಲಿಂದ ಮೆಲ್ಲ ಎದ್ದು ಅಮ್ಮಚ್ಚಿ ಇದ್ದಲ್ಲಿಗೆ ಹೋಗುವ ತವಕದ ಹೆಜ್ಜೆ ಇಟ್ಟಿದ್ದೇನಷ್ಟೆ –
ಚೀತ್ಕರಿಸಿದಳು ಅಮ್ಮಚ್ಚಿ ಒಳಕೋಣೆಯಿಂದ. ದಂಗಾಗಿ ನೋಡಿದರೆ ಸೀತತ್ತೆ ಮತ್ತು ವೆಂಕಪ್ಪಯ್ಯ ಸದ್ದಿಲ್ಲದೆ ನಗುತ್ತಿದ್ದರು. ಅಮ್ಮಚ್ಚೀ….
ಅಮ್ಮಚ್ಚಿ ಕೋಣೆಯಿಂದ ಹೊರಬಂದಳು. ಏನೂ ನಡೆದೇ ಇಲ್ಲವೆಂಬಂತೆ “ಯಂತಯ? ಯಾಕೆ ಕರೆದೆ?” ಎನ್ನುತ್ತ ವೆಂಕಪ್ಪಯ್ಯ ಮತ್ತು ಸೀತತ್ತೆ ಕೂತಲ್ಲಿಗೇ ಬಂದು ಹಗ್ಗ ಸೀಳುತ್ತ ತಾನೂ ಪಿಂಡೆ ಸುತ್ತ ತೊಡಗಿದಳು. ಸೀತತ್ತೆ ನಗೆ ಕಳಕಿದ ದನಿಯಲ್ಲಿ “ಏನಿಯ! ಹೆಂಗಾತ್ ರವಕೆ?” ಎಂದರೆ “ಫಸ್ಟ್‌ಕ್ಲಾಸ್! ಆಗದೆ? ಇದು ಹೊಲ್‌ದ್‌ದ್ ಯಾರು? ರಮಾಟೀಚರ್ ಅಲ್ದ?” ಎಂದಳು ಅಮ್ಮಚ್ಚಿ ವೆಂಕಪ್ಪಯ್ಯನಿಗೆ ಈ ಉತ್ತರ ಎಂಬಂತೆ. ಅವನತ್ತ ತಿರುಗಿ ಹಗ್ಗವನ್ನು ಬಾಯಿಂದ ಕಚ್ಚಿ ತುಂಡು ಮಾಡಿ, ಬಾಯಿಗೆ ಏನೋ ಸಣ್ಣ ಕಸ ಸಿಕ್ಕಿದರೆ ತ್ಸು ಎಂದು ಉಗಿದಂತೆ ಅವನೆದುರಿಗೇ ತ್ಸು ಎಂದು ಉಗಿಯುತ್ತ……ಎಂಟು ದಿನ ವೆಂಕಪ್ಪಯ್ಯ ಇರಲಿಲ್ಲ. ತಿರುಪತಿಗೆ ಹೋದದ್ದಂತೆ. ವರ್ಷಂಪ್ರತಿ ತಿರುಪತಿಗೆ ಹೋಗುವವ. ಇಂಥವರನ್ನೆಲ್ಲ ನೋಡಬೇಕಲ್ಲ. ಆ ತಿರುಪತಿ ದೇವರು! ಅವಂಗೆ ಕಷ್ಟ. ನಮಗೆಲ್ಲ ಎನ್ನುವಳು ಅಮ್ಮಚ್ಚಿ. “ಈ ಒಡ್ಡನಿಗೆ ಅವ ಶಾಪ ಕೊಡಗು. ಊರಿಗೆ ಹೋದದ್ದೇ ಸುಟ್ಟು ಬೂದಿಯಾಗು ಅಥವಾ ಆ ಪರಶುರಾಮ ಕ್ಷೇತ್ರದಲ್ಲಿ ಎಂಜಲು ಹೆಕ್ಕುವ ಹಾಗೆ ಆಗು ಅಂದ್. ಅಷ್ಟು ಮಾಡಿರೆ ನಾನೂ ವರ್ಷಂಪ್ರತಿ ತಿರುಪತಿಗೆ ಹೋಪೆ – ಆದರೆ ದೇವರಿಗೆ ಬುದ್ಧಿ ಇರಗಲ್ಲ! ಇಂಥವರಿಗೂ ವರ ಕೊಡ್ಡ. ಯಾರಿಗೆ ನಾಮ ಹಾಕಿರೂ ಪಾಪ ಬರದ ಹಂಗೆ…..” ಎನ್ನುವಳು. “ಅವ ಹೆಂಗೂ ಇಲ್ಲೆ. ಬಾ. ಆ ಕುದ್ರಾಳಿನ ಕೋಣೆಗೆ ಹೋಪ. ಏನೆಲ್ಲ ಬೇತಿದ ಕಾಂಬ……” ಎಂದು ಪಿಸುವಾಗಿ ಕರೆದು ನನ್ನನ್ನು ಅವನ ಕೋಣೆಗೆ ಹೋದಳು ಅಮ್ಮಚ್ಚಿ. ಅಲ್ಲಿ ಏನು ಇತ್ತು, ಏನು ಇಲ್ಲ ಕಂಡವರು ಯಾರು? ಕಣ್ಣಿಗೆ ಮೊದಲು ಬಿದ್ದದ್ದೆ ಅವನ ಶರ್ಟು. ಗೂಟದ ಮೇಲೆ ನೇತಾಡುತ್ತಿತ್ತು. “ಹೋ. ಯಂಕಪ್ಪಯ್ಯ ಎರಡೂ ಕೈ ಅಲ್ಲಾಡಿಸಿಂಡ್ ಗೂಟಲೆ ನೇತಾಡ್ತ್‌ದ್ ಕಾಣಿಯ” ಎಂದು ನಕ್ಕಳು. ಶರ್ಟನ್ನು ಮುಟ್ಟಲೇ ಅಸಹ್ಯವೆಂಬಂತೆ ದೂರದಿಂದ ಕೈನೀಡಿ ಅಲ್ಲಿಂದ ತೆಗೆದಳು. “ಓಡು. ಅಮ್ಮಂಗೆ ಕಾಣದ ಹಂಗೆ ಕತ್ತರಿ, ಸೂಜಿ, ನೂಲು ತಾ” ಎಂದಳು. ಮಧ್ಯಾಹ್ನ ಮೂರು ಗಂಟೆ. ಸೀತತ್ತೆ ಮಲಗಿದ್ದರು. ನಾನು ಗಾಳಿ ಹೊಕ್ಕಿದಂತೆ ಹಾರಿ ಹೋಗಿ ಎಲ್ಲ ತಂದು ಕೊಟ್ಟೆ. ಅಮ್ಮಚ್ಚಿ ಕರಕ್ಕನೆ ಶರ್ಟಿನ ಹಿಂಭಾಗ ಕೊಯ್ದಳು. ಮುಂಭಾಗ ಹೊಲಿದಳು. ಮುಂಭಾಗದ ಗುಂಡಿಗಳನ್ನು ಹಿಂಭಾಗಕ್ಕೆ ಹೇಗೆ ಹೇಗೋ ಇಟ್ಟಳು. “ಇದ! ರೆಡಿ! ಕೋಡಂಗಿ ಶರ್ಟು. ತಿರುಪತಿಯಿಂದ ವಾಪಸು ಬಂದವಂಗೆ ಪೆಶಲ್…..!” ಎಂದು ಪುನಹಃ ಗೂಟಕ್ಕೆ ಹೇಗಿತ್ತೋ ಹಾಗೆ ತೂಗು ಹಾಕಿದಳು. “ನನ್ನ ರವಕೆಗೆ ರಮಾಟೀಚರ್ ಹತ್ರ ಹೋಗಿ ಮಸಲತ್ತು ಮಾಡ್ತ್‌ದ್ ಅಂದ್ರೆ ಅಷ್ಟು ಸುಲಭ ಅಂದ್ ಮಾಡಿಯ ಯಂಕಪ್ಪಯ್ಯ ನೀನು?” ಎಂದು ಹಲ್ಲು ಕಡಿದು ನನ್ನತ್ತ ತಿರುಗಿ “ಅಮ್ಮಂಗೆ ಹೇಳಡ. ಹೇಲಿರೆ ಕಾಣ್. ತನ್ನಂತೆ ಗೊತ್ತಾರೆ ಆಗಡ್. ನಾ ಹೆದರ್ತಿಲ್ಲೆ.” ನಾನು ಹೇಲುವುದಿಲ್ಲ ಎಂದು ತಿಳಿದೂ ಅವಳದೇ ಸ್ವಂತ ಧೈರ್ಯಕ್ಕೆ. ನಾನು ಹೇಳುವುದಿಲ್ಲ ಎಂದು ಆಣೆ ಹಾಕಿದೆ.ತಿರುಪತಿಯಿಂದ ಬಂದ ವೆಂಕಪ್ಪಯ್ಯ. ಹಾ ಹೂ ಹೊ ಎನ್ನುತ್ತ ಮೆಟ್ಟಿಲು ಹತ್ತಿದ. ಅಲ್ಲಿನ ವಡೆ, ಲಾಡು, ಮೊಸರನ್ನ ವರ್ಣನೆ ಮಾಡಿದ. “ಮಂಡೆ ಬೋಳ್ಸಿಂಬ ಕೆಲ್ಸವೇ ಇಲ್ಲೆ ಇವಂಗೆ” ಎಂದು ಅಮ್ಮಚ್ಚಿ ತನ್ನ ತೃಪ್ತಿಗೆ ತನ್ನೊಳಗೇ ಛೇಡಿಸಿ ಹಿಲಾಲು ಹಿಡಿಯುವುದರ ಗೋಚರವೇ ಆಗದೆ, ಆವೇಶದಿಂದ ಅಲ್ಲಿಯೇ ಹತ್ತಿರ ತಾನೊಂದು ಹೊಟೇಲು ಇಡುವ ಸುದ್ದಿಯನ್ನೂ ತಿಳಿಸಿದ. “ಅಯ್ಯ ದೇವರೆ ಅಷ್ಟಪ್ಪ ದೂರ!” ಎಂದು ಸೀತತ್ತೆ ಉದ್ಗರಿಸಿದರೆ “ಹೂಂ. ಇಟ್ಟರೆ ದೂರ ಇಡಗು. ದುಡ್ಡು ಮಾಡಿದ ಮೇಲೆಯೇ ಊರಿಗೆ ಬರಗು” ಅಂತೆಲ್ಲ ತಿಳುವಳಿಕೆ ಹೇಳುವ ಧಾಟಿಯಲ್ಲಿ ತನ್ನ ‘ಭಯಂಕರ’ ಪ್ಲಾನು ವಿವರಿಸಿದ. “ಅಬ್ಬ! ಅಂತೂ ಭಂಡಾರ ಹೋತು ಅಂತಾಯಿತು” ಎಂದಳು ಅಮ್ಮಚ್ಚಿ. ಪ್ರಸಾದದ ಗಂಟು ಬಿಚ್ಚಿ ಸೀತತ್ತೆಯ ಕೈಗೆ ಕೊಟ್ಟು “ಎಲ್ಲ ತಕಣಿ. ಉಂಚ ಬುದ್ಧಿ ಸಮಾ ಆತ ಕಾಂಬ” ಎಂದು ಅಮ್ಮಚ್ಚಿಯನ್ನು ನೋಡಿ ಹೇಳಿ ಸ್ನಾನಕ್ಕೆ ಹೊರಟುಹೋದ. ಸ್ನಾನ ಮುಗಿಸಿ ಬಂದು “ಇನ್ನು ಊಟ ಊಟ ಊಟ. ಯಂಥಾ ಹಸಿತ್ ಅಂದ್ರೆ! ಈಗ ಬಂದೆ ಶಟರು ಹಾಕಿಂಡ್….” ಎನ್ನುತ್ತ ಕೋಣೆಗೆ ಹೋದ.
ಹೊರಗೆ ಬಂದದ್ದು – ರಾವಣಾಸುರ!
“ಎಲ್ಲಿ ಆ ಸೂಟೆ. ಆ ಮಾರಿ…. ಹಾಂಕಾರಿ…. ಅವಳ ಸತ್ಯನಾಶ ಮಾಡಿಬಿಡ್ತೆ…..”
ಕೂಗಿಗೆ ಹೆದರಿ ಉಪ್ಪರಿಗೆ ಮೆಟ್ಟಿಲಿನ ಮೂಲೆಗೆ ಓಡಿ ಕುಳಿತುಕೊಂಡ ನನ್ನನ್ನು ಅನಾಮತ್ತು ಎತ್ತಿ “ಎಲ್ಲಿ……ಹೇಳು. ಹೇಳ್‌ತಿಯಾ ಇಲ್ಲ ಎರಡು ಬಾರ್ಸಗ?” ಸೀತತ್ತೆ ಗಾಬರಿಯಿಂದ “ಏನು? ಏನಾಯ್ತಿಯ? ಏನಾಯ್ತೀಗ…. ಬರ್ತಲೊಳಗೆ. ರಂಡೆ ಏನ್ ಮಾಡ್ತ್?” ಎಂದರೆ ಅದಕ್ಕುತ್ತರಿಸದೆ ಹಿಡಿತ ಇನ್ನಷ್ಟು ಬಿಗಿ ಮಾಡಿ “ಹೇಳ್, ಎಲ್ಲಿ ಅದ್…..” ಎಂದು ಮತ್ತೆ ಕೂಗಿದ.
“ಅಮ್ಮಚ್ಚೀ…..”
ಅಮ್ಮಚ್ಚಿ ಬಂದು ತಳಿಕಂಡಿಗೊರಗಿ ಕಿಲಿಕಿಲಿ ನಗುತ್ತ ನಿಂತದ್ದು ಕಾಣಿಸಿತು. “ಏನು, ತಿರುಪತಿಗೆ ಹೋದ್ದೇ ಕಣ್ಣು ಮೇಲಾಯ್ತ? ನಾನು ಇಲ್ಲೇ ಇದ್ದೆ. ಕಾಣ್ತಿಲ್ಲಯ? ಆ ಮಗುನ್ನ ಯಾಕೆ ಹಿಂಸೆ ಮಾಡ್ತೆ?” ಆಗ ವೆಂಕಪ್ಪಯ್ಯ ನನ್ನನ್ನು ಅಲ್ಲಿಯೇ ಧಡಕ್ಕ ಹೊತ್ತು ಹಾಕಿ “ಏನಂದೆ ಏನಂದೆ” ಎನ್ನುತ್ತ ಅವಳತ್ತ ನುಗ್ಗಿ, ಅವಳ ಜಡೆ ಬುಡಕ್ಕೆ ಕೈ ಹಾಕಿ ದರದರನೆ ಎಳೆಯುತ್ತ ಸೀದ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. “ಅಯ್ಯೋ ಅಯ್ಯೋ! ಏನಪ್ಪಾ ಇದೆಲ್ಲ….. ನಂಗೆ ಕಾಂಬ್‌ಗೇ ಆತಿಲ್ಲೆ. ಯೇ ಯಂಕಪ್ಪಯ್ಯ ಯಂಕಪ್ಪಯ್ಯ ಬಾಗಿಲು ತೆರೆ….. ಯಂಕಪ್ಪಯ್ಯ ಅಯ್ಯೋ ಮಾರಿ ಹೆಣ್ಣೇ…..” ಎಂದು ಎದೆ ಹೊಡೆದಂತೆ ಕೂಗಿಕೊಂಡರು ಸೀತತ್ತೆ.
ಕ್ಷ್ಣದಲ್ಲಿ ಕೋಣೆಯ ಬಾಗಿಲು ತೆರೆಯಿತು. ಅಮ್ಮಚ್ಚಿ ಹೊರಗೆ ಬಂದಳು. ಮುಖ ಧಗಧಗಿಸುತ್ತಿತ್ತು. ತುಟಿ ಒಡೆದು ರಕ್ತ ವಸರುತ್ತಿತ್ತು.
“ಅಮ್ಮಚ್ಚೀ…. ರಕ್ತ!” ಹೆದರಿ ಹೆಪ್ಪಾದ ದನಿಯಲ್ಲಿ ಕೂಗಿಕೊಂಡರೆ ಅದು ಕೇಳೇ ಇಲ್ಲವೆಂಬಂತೆ ನಿಧಾನವಾಗಿ ಒಳಕೋಣೆಯತ್ತ ನಡೆಯುತ್ತಿದ್ದ ಅಮ್ಮಚ್ಚಿ ಸೀತತ್ತೆಯ ಕಡೆಗೆ ತಿರುಗಿ “ನೀ ಸಾಯಿ. ನೀ ಯಾಕೆ ಇರ್ತ್‌ದ್? ನನ್ನ ಕೊಲ್ಲ್‌ಗಾ? ಎನ್ನುತ್ತಾ ಬಾಗಿಲು ಹಾಕಿಕೊಂಡಳು.
ವೆಂಕಪ್ಪಯ್ಯ ಕೋಣೆಯೊಳಗೇ ಗುಮ್ಮ ಕುಳಿತ. ಸತ್ತೇಹೋದವರಂತೆ ಕಂಬಕ್ಕೊರಗಿದ್ದ ಸೀತತ್ತೆಯನ್ನು ಕಂಡು ಇನ್ನಷ್ಟು ಭಯವಾಯಿತು.
“ಸೀತತ್ತೇ.”

  • ಸೀತತ್ತೆ ನಂದಿದ ದನಿಯಲ್ಲಿ “ಹೋ ಮಗ. ನೀ ಮನೆಗೆ ಹೋವು…. ಇಲ್ಲಿ ಕಂಡದ್ದು ಎಲ್ಲಿಯೂ ಹೇಳಡ….. ಅಕ್ಕಾ? ಹೇಳಗಾಗಾ?”
    ಇಲ್ಲ ಇಲ್ಲ. ಖಂಡಿತ ಹೇಳುವುದಿಲ್ಲ. ಎಂದಿದ್ದರೂ ಯಾರ ಹತ್ತಿರರವೂ ಒಂದು ಶಬ್ದ ಕೂಡ ಹೇಳದಿದ್ದರೂ ಮಾರನೆಯ ದಿನ ಮಾತ್ರ ಊರ ತುಂಬಾ ಅದೇ! ಅದು ಹೇಗೆ? ನನಗಾದ ಆಶ್ಚರ್ಯಕ್ಕೆ ಅಂದು ಮಿತಿಯೇ ಇರಲಿಲ್ಲ. ಕೆಲವರು ನನ್ನ ಬಾಯಿ ಬಿಡಿಸಲು ಪರಿಪರಿಯಾಗಿ ಯತ್ನಿಸಿದರೂ ನಾನು ಎನೂ ಗೊತ್ತಿಲ್ಲವೆಂದು ಎಷ್ಟು ಚೆನ್ನಾಗಿ ನಟಿಸಿದೆ! ಮಕ್ಕಳಿಗೆ ನಟನೆ ಬರುವುದಿಲ್ಲವೆನ್ನುತ್ತಾರೆ. ಹಾಗೇನಿಲ್ಲ. ಒಂದು ಬಗೆಯಲ್ಲಿ ನೋಡಿದರೆ ನಾವು ಚೆನ್ನಾಗಿ ನಟಿಸುವುದು ಚಿಕ್ಕಂದಿನಲ್ಲಿಯೇ.
    ಮತ್ತೆ ಆದದ್ದಿಷ್ಟೇ……
    ವೆಂಕಪ್ಪಯ್ಯ ತಿರುಪತಿಯಲ್ಲಿ ಹೊಟೇಲಿಟ್ಟ. ಅಮ್ಮಚ್ಚಿಗೂ ವೆಂಕಪ್ಪಯ್ಯನಿಗೂ ಮದುವೆಯಾಯಿತು. ಅಮ್ಮಚ್ಚಿ ತಿರುಪತಿಗೆ ಹೊರಟುಹೋದಳು. “ಜೀವ ಇದ್ರೆ ಮತ್ತೆ ಕಾಣ್‌ತೆ ನಿನ್ನ. ಬೇಜಾರು ಮಾಡಿಣ್ಣಳೆ. ಶಾಲೆಗೆ ಹೋಗಿ ಪಾಠ ಓದಿ ಹುಸಾ……ರಾಗ್ಗು. ದೋಡ್ಡ ಜನ ಆಗ್ಗು ನೀನು. ತೆಳಿತಾ?” ಎನ್ನುತ್ತ ತಲೆ ನೇವರಿಸಿ ಹೊರಟೇಹೋದಳು. ಇಲ್ಲಿಗೆ ಮುಗಿಯಿತು ಎಂಬಂತೆ.

ನಾನು ಅಂತೆಯೇ ಎಣಿಸಿಕೊಂಡಿದ್ದೆ.ಶಾಲೆ – ಮನೆಯ ನಡುವೆ ದಿನ ಹೋದದ್ದೇ ತಿಳಿಯುವುದಿಲ್ಲ. ಒಂದು ದಿನ ನೋಡುತ್ತೇನೆ, ಅಮ್ಮಚ್ಚಿ ಬರುತ್ತಿದ್ದಾಳೆ! ಅಮ್ಮಚ್ಚಿ ಅಮ್ಮಚ್ಚಿ! ಕಿಟಕಿ ದಂಡೆಯಿಂದ ಒಮ್ಮೆಲೇ ಹಾರಿ ಹೊರಗೋಡಿ ಅವಳ ಬೆನ್ನುಹಿಡಿದೆ ನಾನು. ಕೈ ಚೀಲ ತೆಗೆದುಕೊಂಡೆ. ಅವಳೂ ಟ್ರಂಕು ಹಿಡಿದು ಮುಂಚಿನಂತೆಯೇ ಏನೂ ಆಗದ ಹಾಗೆ ರೈಲು ಬಸ್ಸು ತಿರುಪತಿ, ತಿರುಪತಿ ದೇವರ ಕೈ, ನಾಮ, ತಮ್ಮ ಹೊಟೆಲ್ಲು, ದೋಸೆ, ಪೂರಿ, ಇಡ್ಲಿ, ಒಡೆ ಇತ್ಯಾದಿ ಮಾತಾಡುತ್ತ ಮುಂದೆ ನಡೆದಳು. ಅವಳಿಗೆ ಹೇಳಲು ನನ್ನ ಬಳಿ ಒಂದು ಸುದ್ದು ಇತ್ತು. ಹುರುಪಿನಿಂದ ನುಡಿದೆ. “ಅಮ್ಮಚ್ಚಿ, ಶಂಭಟ್ಟರ ಮಗ ಸೇಸ ಬಂದಿದ್ದ. ನಾಲ್ಕು ದಿನ ಆಯ್ತು. ಇನ್ನು ಅವ ಇಲ್ಲೇ ಇರ್ತ ಉಂಬ್ರು. ಮಾಯಿ ಹೇಳಿರ್.” ನಡೆಯುತ್ತಿದ್ದ ಅಮ್ಮಚ್ಚಿ ನಿಂತಳು. ಹಿಂದಿರುಗಿ ನನ್ನನ್ನು ನೋಡಿದಳು – ಏನು ಹೇಳಿದಳೆಂದು ಪುನಃ ಮರುಕಳಿಸಿಕೊಳ್ಳುವಂತೆ. ನನ್ನನ್ನೇ ನೋಡುತ್ತ “ಸಾಯಡ್. ಎಲ್ಲ ಸಾಯಡ್. ಸತ್ತ್ ಮಣ್ಣ್ ತಿನ್ನಡ್” ಎಂದಳು. ಅರ್ಥವಾಗದೆ ಪಿಳಿಪಿಳಿ ನೋಡಿದ ನನ್ನನ್ನು ತಬ್ಬಿಕೊಂಡು “ಎಲ್ಲರೂ ಸಾಯಡಿಯ. ನಾವಿಬ್ಬರೇ ಇಪ್ಪ. ನಾ ಮಾತಾಡುಗೆ. ನೀ ನೆಗಾಡುಗೆ.” ಶಿಲೆಕಲ್ಲಿನಂತೆ ಕಂಡಳು ಅಮ್ಮಚ್ಚಿ. ನಗುವುದಿರಲಿ, ನಗೆಯೆಂಬುದು ಮೂಲದಲ್ಲಿಯೇ ಸುರುಟಿ ಹೋಗಬೇಕು – ಹಾಗೆ.

ಅಂತೂ ಮನೆ ಬಂತು. ಸೀತತ್ತೆ ಓ ಅಷ್ಟು ದೂರದಿಂದಲೇ ಅವಳನ್ನು ಕಂಡವರೇ ಬೆನ್ನಿಗೆ ಕೈಕೊಟ್ಟು ಹಿಮ್ಮುಖ ಬಾಗಿ ಬಾಯಿ ಕಳೆದು ನಿಂತೇಬಿಟ್ಟರು. ಹತ್ತಿರ ಬರುತ್ತಲೇ “ಏನು ರಂಡೆ ಒಬ್ಬಳೇ! ಯಂತ ಕತೆ ಮಾಡಿಂಡೆ?” – ಎಂದರು ಗುಮಾನಿ ಬಂದಂತೆ. “ಒಬ್ಬಳೇ ಬರದೆ ಮತ್ತೆಂತ ಮಾಡ್ತ್‌ದ್ ಅಲ್ಲಿದ್ದ್? ನಿನ್ನ ಯಂಕಪ್ಪಯ್ಯ ನೇಣು ಹಾಕಿಂಡ” – ಎಂದಳು ಅಮ್ಮಚ್ಚಿ. ಸೀದ ಕಲ್ಲುಮರಿಗೆ ಇದ್ದಲ್ಲಿಗೆ ಹೋಗಿ ನೀರನ್ನು ಮುಖಕ್ಕೆ ಬೀಸಿ ಬಡಿದುಕೊಳ್ಳುತ್ತ ತಿರುಗಿ ತಾಯಿಯನ್ನು ನೋಡಿದಳು. ಸೆರಗಿಂದ ಮುಖವರೆಸಿಕೊಳ್ಳೂತ್ತ ಎಡೆಯಲ್ಲಿ ನನ್ನನ್ನು ನೋಡಿ ನಕ್ಕಳು!

ಯಾಕೋ ತಟಕ್ಕನೆ ನಾನು ವಾಚಾಮಗೋಚರಚಾಗಿ ಬೈಗುಳ ಸುರುಮಾಡಿದ್ದ ಸೀತತ್ತೆಯ ಮುಖ ನೋಡಿದೆ. ಅವರ ಕಣ್ಣುಗಳಲ್ಲಿ ಆ ಬೈಗುಳದ ಗಾವು ಇರಲೇ ಇಲ್ಲ. ಅರೆ ಚೋದ್ಯವೆ! ಈಗಲೂ ನೆನೆಸಿಕೊಳ್ಳುತ್ತೇನೆ ಆ ಕಣ್ಣುಗಳನ್ನು….. ಮತ್ತೇನಾದರೂ ಕಾಣುತ್ತದೆಯೇ? ಇಲ್ಲ, ಇಲ್ಲ….. ಈಗ ನಾನು ಏನು ಕಂಡರೂ ಅದು ಇವತ್ತಿನ ನನ್ನ ಹಂಬಲಕ್ಕೆ ಅನುಸಾರವಾಗಿಯೇ ಇರುವುದರಿಂದ ಹಾಗೆ ಇಣುಕುವುದನ್ನು ನಿಲ್ಲಿಸುತ್ತೇನೆ. ಸೆರಗಿನಿಂದ ಮುಖ ಒರೆಸಿಕೊಳ್ಳುತ್ತ ಎಡೆಯಲ್ಲಿ ಮಿಣಕ್ಕನೆ ಮುಚ್ಚಿತೆರೆದು ನಕ್ಕ ಅಮ್ಮಚ್ಚಿಯ ಕಣ್ಣುಗಳನ್ನೇ ನೆನೆಯುತ್ತೇನೆ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.