ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ ಇರುತ್ತಿದ್ದರು. ದಿಲ್ಲಿಗೆ ಬಂದ ಎರಡು ವರ್ಷಗಳಲ್ಲಿಯೇ ಅವರ ಅದ್ಭುತ ಗಾಯನಕಲೆ ಅರಸನ ಕಿವಿಯವರೆಗೆ ಮುಟ್ಟಿ ಅವರು ದರಬಾರೀ ಗಾಯಕರಾಗಿದ್ದರು. ದಿಲ್ಲಿಯಲ್ಲಿ ಅವರಿಗೆ ಈಗ ಮೂವರು ಹೆಂಡಂದಿರು, ಮೂರು ಬೇರೆ ಬೇರೆ ಮನೆಗಳಲ್ಲಿ ಅವರ ವಾಸ. ಮೂರು ಮನೆಗಳಲ್ಲಿ ಅವರಿಗೆ ದಿವಾನಖಾನೆ, ಜಾಜಮು, ತಕ್ಕೆ, ತಂಬೂರಿ, ಸಾರಂಗಿ, ತಬಲಗಳ ವ್ಯವಸ್ಥೆ ದರಬಾರದಿಂದಲೇ ಆಗಿತ್ತು. ಒಬ್ಬ ಹೆಂಡತಿ ತಾವೇ ಮಾಡಿಕೊಂಡಿದ್ದು. ಒಬ್ಬಳನ್ನು ಬಾದಶಹನ ಊಳಿಗದಿಂದ ಕೇಳಿತಂದಿದ್ದರು. ಮೂರನೆಯವಳು ಬಾದಶಹರೇ ಕೊಟ್ಟ ಕಾಣಿಕೆ. ರಾಜಪುತ್ರ ಸಲೀಮನ ಲಗ್ನದಲ್ಲಿ ಆದ ಬೈಠಕಿನಲ್ಲಿ ತಾನಸೇನ ಹಾಡಿದ ದರಬಾರಿ ಕಾನ್ಹರಾ(ಕಾನಡಾ) ರಾಗಕ್ಕೆ ಮೆಚ್ಚಿಕೊಂಡು ಅರಸ ಕೊಟ್ಟ ಅನೇಕ ಕಾಣಿಕೆಗಳಲ್ಲಿ ಈ ಮಹಿಳೆಯೂ ಒಬ್ಬಳು. ಮೊದಲ ಹಳ್ಳಿಯ ಹೆಂಡತಿ ಹಮೀದಾಳಿಂದ ಒಬ್ಬನೇ ಮಗ ಬಿಲಾಸಖಾನ. ದಿಲ್ಲಿಯಲ್ಲಿ ಎರಡನೆಯ ಹೆಂಡತಿಯ ಹೊಟ್ಟೆಯಿಂದ ಮೂರು ಮಕ್ಕಳು, ಮೂರನೆಯವಳ ಹೊಟ್ಟೆಯಿಂದ ಮೂರು, ನಾಲ್ಕನೆಯವಳಿಂದ ಇಬ್ಬರು. ಮಿಯಾಸಾಹೇಬರ ಗಂಡು ಕಲೆಯ ಲಕ್ಷಣವಾಗಿ ಅವರಿಗೆ ಹುಟ್ಟಿದ ಮಕ್ಕಳಲ್ಲಿ ಗಂಡುಗಳೇ ಹೆಚ್ಚು. ಆದರೆ ನಾಲ್ಕನೆಯವಳ ಹೊಟ್ಟೆಯಲ್ಲಿ ಹುಟ್ಟಿದ ಮೊದಲನೆಯ ಮಗು ಹೆಣ್ಣು. ಅದಕ್ಕಾಗಿ ಮಗಳ ಮೇಲೆಯೂ, ಆ ಕಾರಣ ಆಕೆಯ ತಾಯಿಯ ಮೇಲೂ ಮಿಯಾಸಾಹೇಬರಿಗೆ ಎಲ್ಲಿಲ್ಲದ ಅಚ್ಚುಮೆಚ್ಚು. ನಾಲ್ಕನೆಯ ಹೆಂಡತಿಯ ಮನೆಗೆ ಬರುವದೂ ಹೆಚ್ಚು. ಅದು ಮುಖ್ಯವಾಗಿ ಮಗಳ ಮುಖ ನೋಡುವದಕ್ಕೆ. ಇದರ ಪೂರ್ಣ ಲಾಭವನ್ನು ನಾಲ್ಕನೆಯ ಹೆಂಡತಿ ಸಕೀನಾಬೇಗಂ ಪಡೆಯುತ್ತಿದ್ದಳು. ಏನೊಂದು ನೆಪಮಾಡಿ, ಮಗಳಿಂದ ಹೇಳಿಸಿ, ರಾತ್ರಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದಳು. ‘ಮಾಲಕಂಸ’ ಹಾಡಿದರೆ ಮಗಳು ನಿದ್ರೆ ಹೋಗುತ್ತಾಳೆಂದು ಹೇಳಿ, ಮಿಯಾಸಹೇಬರಿಂದ ಮಾಲಕಂಸ ಹಾಡಿಸುತ್ತಿದ್ದಳು. ಮಾಲಕಂಸ ಹಾಡಿದರೆ ಮಕ್ಕಳು ನಿದ್ರೆ ಹೋಗುವದೂ ನಿಜವೇ. ಮಗಳನ್ನು ಕೂಡಿಸಿಕೊಂಡು, ತಂಬೂರಿ ಶ್ರುತಿ ಮಾಡಿ ತಾನಸೇನರು ರಾಗಾಲಾಪನೆ ಮಾಡತೊಡಗಿದ ಮೇಲೆ, ಸಕೀನಾಬೇಗಂ ಕಿಟಕಿಯ ತೆರೆಗಳನ್ನು ಓಸರಿಸಿ ಹೊರಗೆ ಹಣಿಕಿ ನೋಡುತ್ತಿದ್ದಳು-ಬೀದಿಯಲ್ಲಿ ಹಿರಿಯ ಹೆಂಡತಿ ಗಂಗಾರಾಣಿಯ ಗುಪ್ತಚರ ಕಾಶೀನಾಥನೂ ಮತ್ತೊಬ್ಬ ಹೆಂಡತಿಯ ಶರಣದಾಸಿಯ ಗುಪ್ತಚರ ರಃಈಮನೂ ನಿಂತಿದ್ದಾರೋ ಇಲ್ಲೋ ನೋಡಲಿಕ್ಕೆ. ಮಗಳು ನಿದ್ರೆಹೋದಮೇಲೆ, ದೀಪ ಆರಿಸಿ, ತನ್ನ ಕೋಣೆಯೊಂದರಲ್ಲೇ ದೀಪವಿಟ್ಟು, ತಾನಸೇನರನ್ನು ಬರನಾಡಿಕೊಂಡು, ಇನ್ನೊಮ್ಮೆ ಹಣಿಕಿ ನೋಡಿ, ದೀಪವಾರಿಸುತ್ತಿದ್ದಳು. ತಾನಸೇನರು ಹೊರಗೆ ಬರಲಿಲ್ಲ, ರಾತ್ರಿ ಅಲ್ಲಿಯೇ ಕಳೆದರು ಎಂಬ ವಾರ್ತೆ ಕೋಡಲೇ ಆ ಈರ್ವ ಹೆಂಡಂದಿರಿಗೂ ಮುಟ್ಟುತ್ತಿತ್ತು. ‘ರಸಮಿಲನ’ವಾದ ಮೇಲೆ, ತಾನಸೇನರು ನಿದ್ರೆ ಹೋಗಿದ್ದು ನೋಡಿ, ಇನ್ನೊಮ್ಮೆ ಸಕೀನಾ ಕಿಟಿಕಿಯ ಹೊರಗೆ ಇಣಕಿ, ಇಬ್ಬರೂ ಗುಪ್ತಚರರು ಮಾಯವಾದ ಖಾತ್ರಿ ಮಾಡಿಕೊಂಡು, ಸಮಾಧಾನದ ನಿಟ್ಟುಸಿರೆಳೆದು, ಆ ಹೆಂಡಂದಿರು ಹೇಗೆ ಕೈಕೈ ಹಿಸುಕಿ ಕೊಂಡಿದ್ದಾರೆಂಬುದನ್ನು ಕಲ್ಪಿಸುತ್ತ ತಾನೂ ನಿದ್ರೆಹೋಗುತ್ತಿದ್ದಳು.
ಇಷ್ಟಾದರೂ ಮಿಯಾಸಾಹೇಬರ ನ್ಯಾಯಬುದ್ದಿಗೇನೂ ಕಲಂಕಬಾರದು. ವಾರಕ್ಕೊಮ್ಮೆ, ಕನಿಷ್ಠ ಹದಿನೈದು ದಿವಸಕ್ಕೆ ಎರಡು ಬಾರಿ ಇತರರಿಗೆ ಸರದಿ ಬರುವಂತೆ ತಮ್ಮ ದಿನಚರಿ ಇಟ್ಟುಕೊಂಡಿದ್ದರು. ಆ ಹೆಂಡಂದಿರೂ ಕೂಡ ಮಿಯಾಸಾಹೇಬರ ಮಗಳ ಪ್ರೇಮವನ್ನು ಅನುಲಕ್ಷಿಸಿ, ಈ ಬಾರಿ ನಮಗೂ ಮಗಳನ್ನು ದಯಪಾಲಿಸಬೇಕೆಂದು ಪತಿಯನ್ನು ಪ್ರಾರ್ಥಿಸುತ್ತಿದ್ದರು. ‘ಭಗವಾನ್ ಕರೇ’ ಎಂದಿಷ್ಟೇ ಮಿಯಾಸಾಹೇಬರು ಹೇಳುತ್ತಿದ್ದರಾದರೂ, ಅವರಿಗೆ ದೊರಕಿದ್ದು ಗಂಡು ಸಂತಾನವಷ್ಟೆ !
ಈ ಆಂತರಿಕ ತುಮುಲದಿಂದ ಹೊರಗೆ ಉಳಿದವರೆಂದರೆ ಅತ್ರೌಳಿಯ ಹಮೀದಾಬಾನು ಒಬ್ಬಳೆ.
ದಿಲ್ಲಿಯ ಸುದ್ದಿಗಳೆಲ್ಲಾ ಒಂದೆರಡು ತಿಂಗಳಲ್ಲಿ ಆಕೆಗೆ ಬಂದು ತಲುಪುತ್ತಿದ್ದವು. ಮೊದಮೊದಲು ನೋವಾಯಿತು. ಮೊದಲೆರಡು ವರ್ಷ ಮಿಯಾಸಾಹೇಬರು ಹೆಂಡತಿ-ಮಗ-ತಾಯಿಯರನ್ನು ಕಾಣಲಿಕ್ಕೆ ವರ್ಷಕ್ಕೆರಡು ಬಾರಿ ಬಂದು ಹೋಗುತ್ತಿದ್ದರು. ದರಬಾರದ ಸೇವೆ ಶುರುವಾದ ಮೊದಲಲ್ಲಿ ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದರು. ಹೀಗೆರಡು ವರ್ಷ ಕಳೆದವು. ನಂತರ ಬರುವುದೂ ನಿಂತು ಹೋಯಿತು. ಆದರೂ ಮಿಯಾಸಾಹೇಬರು ಪತ್ರಗಳನ್ನು ಬರೆಯುತ್ತಿದ್ದರು-ತಾಯಿಗೆ, ಹೆಂಡತಿ-ಮಗಳ ಕ್ಷೇಮವನ್ನು ಕೇಳಲಿಕ್ಕೆ. ಕಳೆದ ಆರು ವರ್ಷಗಳಲ್ಲಿ ಪತ್ರಲೇಖನವೂ ವರ್ಷಕ್ಕೊಮ್ಮೆ. ಅದೂ ದಸ್ತೂರರ ಮುಖಾಂತರ. ಕೆಳಗೆ ಸಹಿ ಮಾತ್ರ ಮಿಯಾಸಾಹೇಬರದು. ಅತ್ರೌಳಿಯಿಂದಲೇ ಕರೆದೊಯ್ದ ಮಿಯಾ ರಹಮತಖಾನ್ ಪಖಾವಜಿ(ಪಖ್ವಾಜ-ಮೃದಂಗ ಬರಿಸುವವ) ತಿಂಗಳು-ಎರಡು ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ. ಅವನೇ ಮಿಯಾಸಾಹೇಬರ ಪತ್ರಗಳನ್ನು ಬರೆಯುವವ. ದಿಲ್ಲಿಯಲ್ಲಿ ಅವನಿಗೆ ಒಬ್ಬ ಹೆಂಡತಿ, ಅತ್ರೌಳಿಯಲ್ಲಿ ಒಬ್ಬ ಹೆಂಡತಿ ಇದ್ದರು. ಇದಲ್ಲದೆ, ನೃತ್ಯಕ್ಕೆ ಕೂಡ ಆತ ಪಖ್ಹವಜ ಬಾರಿಸುವ ಮೂಲಕ ಸಾಕಷ್ಟು ಗಣಿಕೆಯರ ಸಂಗವೂ ಇತ್ತು. ಕಟ್ಟುಮಸ್ತಾದ ಆಳು. ಗಣಿಕೆಯರು ತಾವಾಗಿಯೇ ಇವನ ಬಳಿ ಸಾರುತ್ತಿದ್ದರು. ಆದರೂ ಹಳ್ಳಿಯ ಹೆಂಡತಿಯೆಂದರೆ ಅವನಿಗೆ ಪ್ರೇಮ. ಇಬ್ಬರು ಮಕ್ಕಳು ಅತ್ರೌಳಿಯಲ್ಲೇ ಇದ್ದರು. ಅವರೊಡನೆ ಬಿಲಾಸಖಾನ ಆಟವಾಡುತ್ತ ಬೆಳೆದಿದ್ದ.
ಈ ಬಾರಿ ರಹಮತ್ ಖಾನ್ ದಿಲ್ಲಿಯಲ್ಲೇ ಒಂದು ಪುಟ್ಟಮನೆ ಕೊಂಡುಕೊಂಡು ತನ್ನ ಬೇಗಂ ಮತ್ತು ಪುತ್ರರನ್ನು ಕರೆದೊಯ್ಯಲಿಕ್ಕೆ ಬಂದ.
ಆವಾಗ ಬಿಲಾಸಖಾನ್ ಅವರ ಜೊತೆಗೆ ತಾನೂ ದಿಲ್ಲಿಗೆ ಹೋಗುವೆನೆಂದು ಹಟಹಿಡಿದು ಕುಳಿತ. ರೊಯ್ಯನೆ ಅಳುತ್ತ ಕುಳಿತ ಬಾಲಕನನ್ನು ತಾಯಿ-ಅಜ್ಜಿ ಕಳಿಸಲೇಬೇಕಾಯಿತು.
*
*
*
ತಾನಸೇನ್ ಸಾಹೇಬರು ಹೆಣ್ಣುಗರುಳಿನ ಮನುಷ್ಯರು ಎಂದು ನೋಡಿದ್ದೇವೆ. ರಹಮತ್ ಖಾನ್ ಅತ್ರೌಳಿಗೆ ಹೊರಡುವ ಒಂದು ವಾರ ಮುಂಚೆ ತಾನಸೇನರಿಂದ ಒಂದು ಅಚಾತುರ್ಯ ಘಟಿಸಿಹೋಗಿತ್ತು.
ರಾಜಪುತ್ರ ಶಹಾಝಾದೆ ಸಲೀಮನಿಗೂ, ಮಿಯಾ ತಾನಸೇನರಿಗೂ ಒಂದು ಅಸ್ಪಷ್ಟ, ನಿಷ್ಕಾರಣ, ಅಸ್ಪುಟ ದ್ವೇಷವು ಬೆಳೆದುಬಂದಿತ್ತು. ಸಲೀಮನು ಚೆಲುವ, ಅಷ್ಟೇ ದುರಾಗ್ರಹಿ. ದಿಲ್ಲಿಯಲ್ಲಿಯ ಹೆಣ್ಣು ಮಕ್ಕಳೆಲ್ಲ ತನ್ನ ಮೈಮೇಲೆ ಮುಕುರುತ್ತಿದಂತೆ ಅವನು ಕಲ್ಪಿಸಿಕೊಂಡಿದ್ದ. ತನ್ನ ತಂದೆಯ ಧರ್ಮಸಹಿಷ್ಣುತೆ ಅವನಲ್ಲಿ ಎಳ್ಳಷ್ಟೂ ಇರಲಿಲ್ಲ. ಮುಸ್ಲಿಂ ಹೆಂಗಸರು ಘೋಷಾದಲ್ಲಿ ಇರುವ ಮೂಲಕ, ಓಣಿಯಲ್ಲಿಯ ಎಲ್ಲ ಹಿಂದೂ ಸ್ತ್ರೀಯರು ಅವನಿಗೆ ಒಲಿದಿರುವ ಕಲ್ಪನೆ ಅವನಲ್ಲಿತ್ತು. ಹಲವಾರು ಔತ್ತರೇಯ ಹಿಂದು ಸುಂದರಿಯರು ಅವನನ್ನು ಆಃವಾನಿಸಿದ್ದೂ ನಿಜ. ಕೆಲವರನ್ನು ಅವನೇ ತಿರಸ್ಕರಿಸಿದ್ದ. ಆದರೆ ಎಲ್ಲ ಹಿಂದೂ ಗಂಡಸರು ನಪುಂಸಕರೆಂದೂ, ಅಂತೆಯೇ ಅವರ ಹೆಂಡಂದಿರು ತನಗಾಗಿ ಕಚ್ಚಾಡುತ್ತಿರುವರೆಂದೂ, ಅವನ ಕಲ್ಪನೆಯಾಗಿ ಹಿಂದೂ ಜನರ ತಿರಸ್ಕಾರ ಅವನಲ್ಲಿ ಹುಟ್ಟಿತು. ವಯೋಧರ್ಮದ ಮೇರೆಗೆ ಅಷ್ಟು ಆಳವಾಗಿ ವಿಚಾರ ಮಾಡುವವನೂ ಅಲ್ಲ.
ಮಿಯಾ ತಾನಸೇನರು ಮೂಲ ಅವಧು (ನಾಥ-ಅವಧೂತ) ಸಂಪ್ರದಾಯದವರು. ತಂದೆ ಮುಸ್ಲಿಂ ಧರ್ಮ ಸ್ವೀಕರಿಸಿದ್ದರು. ಆದರೆ ಮೂಲ ಸಂಪ್ರದಾಯವನ್ನು ಬಿಟ್ಟುಕೊಟ್ಟಿರಲಿಲ್ಲ. ಅವಧೂತ ಸಂಪ್ರದಾಯದವರು ಮುಕ್ತ ಜೀವಿಗಳು. ಅವರೇ ಹೇಳುವಂತೆ ‘ಪಂಚಮಾಶ್ರಮಿ’ಗಳು. ಅವರಿಗೆ ಎಲ್ಲ ಮನೆಗಳಲ್ಲೂ ಪ್ರವೇಶ, ಆದರ ಸತ್ಕಾರ. ಎಲ್ಲ ಧರ್ಮಗಳನ್ನು ಮನ್ನಿಸುವವರು. ಧರ್ಮ-ಧರ್ಮಗಳಲ್ಲಿ ವ್ಯತ್ಯಾಸ-ವಿವೇಕವನ್ನು ಅರಿಯರು. ತಾನಸೇನರು ಉದ್ದುಕೂದಲು ಬಿಟ್ಟುಕೊಂಡು, ಧೋತರ ಉಟ್ಟುಕೊಂಡು, ಕೊರಳಲ್ಲಿ ತುಳಸೀಮಾಲೆ, ಕಿವಿಯಲ್ಲಿ ಮಲ್ಲಿಗೆ ಮೊಗ್ಗು ಧರಿಸುತ್ತಿದ್ದರು. ಹಿಂದೂ ಹಬ್ಬ-ಹರಿದಿನಗಳಲ್ಲಿ ಹಣೆಯಮೇಲೆ ಗಂಧ, ಶಿವರಾತ್ರಿಯಾದರೆ ವಿಭೂತಿ ಧರಿಸುವದನ್ನು ಬಿಟ್ಟಿರಲಿಲ್ಲ. ಇತ್ತ ಸ್ವಾಮಿ ಹರಿದಾಸರ ಶಿಷ್ಯರಾಗಿ ಭಜನೆ ನಡೆಸುತ್ತಿದ್ದರು. ಶುಕ್ರವಾರಕ್ಕೊಮ್ಮೆ ನಮಾಜು ಮಾಡಿ ಕಲ್ಮಾ ಓದುತ್ತಿದ್ದರು. ಮಾಂಸಾಹಾರ ಮಾಡಿದರೂ, ಏಕಾದಶಿ ವ್ರತದ ಮೇರೆಗೆ ಅಂದು ನಿರಾಹಾರವಿರುತ್ತಿದ್ದರು. ಎಲ್ಲಜಾತಿಯವರಿಗೂ ಪ್ರೀಯರಾಗಿದ್ದರು. ಆದರೆ ಅವರ ಈ ದ್ವಿಧಾವರ್ತನೆ ಸಲೀಮನಿಗೆ ಎಳ್ಳಷ್ಟೂ ಮಾನ್ಯವಿರಲಿಲ್ಲ. ಇದಕ್ಕಾಗಿ ಅವರನ್ನು ಹಾಸ್ಯ-ಗೇಲಿಗಳಿಗೆ ಒಳಪಡಿಸಿ ನಾಲ್ಕು ಜನ ಪ್ರತಿಷ್ಠಿತರೆದುರು ಅವರಿಗೆ ಅವಮಾನ ಮಾಡಿದ್ದ. ‘ಎಲ್ಲ ಶಹಝಾದೆಗಳ ಹಣೆಯಬರಹವೇ ಇಷ್ಟು’ ಎಂದು ತಾನಸೇನರು ಅದನ್ನು ಸಹನೆಯಿಂದಲೇ ಸ್ವೀಕರಿಸಿದ್ದರು.
ಮುಂದೆ ಒಂದು ದಿನ ಬಾದಶಹನು ಹಾರ್ಯಾಣಾದ ಗೋರಖ ಮಠಕ್ಕೂ ಗೋರಖಪುರದ ನಾಥ-ಅವಧೂತ-ಕಾನಫಟಾ ಮಠಕ್ಕೂ ಹೊಸ ಉಂಬಳಿ ಹಾಕಿಕೊಟ್ಟ ಸುದ್ದಿ ಹರಡಿತು. ಇದರ ಹಿಂದಿನ ಅಗ್ರೇಸರ ವ್ಯಕ್ತಿ ಮಿಯಾ ತಾನಸೇನರೇ ಎಂದು ಸಲೀಂ ನಂಬಿಬಿಟ್ಟ.
ತಾನಸೇನರಿಗೆ ಈ ಮಠಗಳ ಬಗ್ಗೆ ಭಕ್ತಿ ಇದ್ದದ್ದು ನಿಜ. ಆದರೆ ಉಂಬಳಿ ಕೊಡುವ ಉಪದೇಶ ಮಾಡಿದವನು ಬಾದಶಹರ ಹತ್ತಿರದ ವಿಶ್ವಾಸಿಗ ಮಂತ್ರಿ ಅಬುಲ್ ಫಜಲ್. ಅಬುಲ್ ಫಜಲ್ ಉರ್ದು, ಹಿಂದಿ, ಸಂಸ್ಕೃತಗಳಲ್ಲಿ ಪಾರಂಗತ. ಬಾದಶಹ ಸ್ಥಾಪಿಸಿದ ಅಕಬರೀ ಧರ್ಮವನ್ನು ನಿಜವಾಗಿ ಆಚರಣೆಯಲ್ಲಿ ತರುವವರು ನಾಥ-ಅವಧೂತ-ಕಾನಫಟಾ ಯೋಗಿಗಳೇ ಎಂದು ಗುರುತಿಸಿ, ಅವರ ಮಠಗಳಿಗೆ ಉಂಬಳಿ ಹಾಕಿಕೊಡಬೇಕೆಂದು ಬಾದಶಹನಿಗೆ ಸೂಚನೆ ಕೊಟ್ಟ. ಭಾರತಕ್ಕೆ ಇಸ್ಲಾಂ ಬಂದ ಹೊಸತರಲ್ಲಿ ಈ ಜಾತಿಯ ಅನೇಕ ಯೋಗಿಗಳು ಇಸ್ಲಾಂ ಸ್ವೀಕರಿಸಿದುದು; ಖುದ್ದ ಬಾಬಾ ಹಾಜೀ ರತನನೇ ಇಂಥ ಯೋಗಿಯೆಂಬುದನ್ನು ಅಭ್ಯಸಿಸಿದ ಅಬ್ದುಲ್ ಫಜಲ್ ಪಂಡಿತನಿಗೆ ಇಂಥ ಉಪದೇಶ ಕೊಡುವವರಲ್ಲಿ ಏನೂ ಸಂಕೋಚವಿರಲಿಲ್ಲ. ಅಕಬರ ಬಾದಶಹನ ಪಟ್ಟಾಭಿಷೇಕ ಸಮಯದಲ್ಲಿ ಈ ಯೋಗಿಗಳೇ ವೈದಿಕ ಛಂದಸ್ಸಿನಲ್ಲಿ ‘ಅಲ್ಲೋಪನಿಷತ್’ ರಚಿಸಿ, ಸಭೆಯಲ್ಲಿ ಹೇಳಿ ಬಾದಶಹನಿಗೆ ಆಶೀರ್ವಾದ ಮಾಡಿದ್ದರು. ಬಾದಶಹನ ನಲುಮೆಯ ಮಹಿಷಿ ದೇವಿ ಚೌಧುರಾಣಿ ಈ ಮಂತ್ರದಿಂದಲೇ ತುಲಸೀಪೂಜೆ ಮಾಡಿ ಬಾದಶಹನ ಆಯುರಾರೋಗ್ಯಗಳಿಗೆ ಪರಮಾತ್ಮನನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಳು. ಈ ಯೋಗಿಗಳೇ ರಚಿಸಿದ ‘ಹಠಯೋಗ ಪ್ರದೀಪಿಕಾ’ ಗ್ರಂಥವನ್ನು ಓದಿದ ಅಬುಲ್ ಫಜಲ್ ಇದೇ ಸಂಪ್ರದಾಯದ ದಕ್ಷಿಣ ದೇಶದ ಒಬ್ಬ ಯೋಗಿಯ ಹೆಸರು ಅಲ್ಲಮಾ(ಅಲ್ಲಮ ಪ್ರಭು:‘ಅಲ್ಲಾಂಓ ಪ್ರಭುದೇವಶ್ಚ’,ಹ. ಯೋ. ಪು) ಎಂದು ಇದ್ದುದನ್ನು ಬಾದಶಹನಿಗೆ ಅರುಹಿದ್ದನು. ಬಾದಶಹನು ತನ್ನ ರಾಜ್ಯದಲ್ಲಿಯ ಎಲ್ಲ ನಾಥಾಶ್ರಮಗಳಿಗೂ, ಉಂಬಳಿ ಹೆಚ್ಚುಗೊಳಿಸಿದ್ದ. ದಿಲ್ಲಿಯ ಸಮೀಪವರ್ತಿ ಮಠಗಳೆಂದರೆ ಇವರಡು-ಅವುಗಳಿಗೆ ಉಂಬಳಿ ಹೆಚ್ಚಾದದಕ್ಕಾಗಿ ಸಲೀಮ ಸಿಡಿಮಿಡಿಗೊಂಡ. ತಾನಸೇನನ ಬಗ್ಗೆ ಬಾದಶಹನ ಎದುರು ಚಾಡಿ ಒಯ್ಯುವದನ್ನು ನಿಶ್ಚಯಿಸಿಕೊಂಡ.
ಚಾಡಿಗೆ ಬೇಕಾದ ವಸ್ತು ಸಾಕಷ್ಟು ಇತ್ತು. ಆದರೆ ಅದರಲ್ಲಿ ದರ್ಬಾರದ ಮಾನಕ್ಕೆ ಧಕ್ಕೆ ಬರುವ ವಸ್ತುವನ್ನೇ ಮೇಲಿಟ್ಟುಕೊಂಡ.
“ಮಿಯಾ ತಾನಸೇನ ದರ್ಬಾರದ ಗಾಯಕನಾಗಿ ಉಂಬಳಿ ಉಣ್ಣುತ್ತಾನೆ. ಜೊತೆಗೆ, ವೈಶ್ಯೆಯರ ಮನೆಯಲ್ಲಿ ಬೈಠಕ್ ಮಾಡುತ್ತಾನೆ. ಇದರಿಂದ ದರ್ಬಾರದ ಮರ್ಯಾದೆ ಕಾಸಿಗೆ ಪಂಛೇರಾಗಿಬಿಟ್ಟಿದೆ” ಎಂದು ಸಲೀಂ ಊಟವಾದ ಮೇಲೆ ಅಪ್ಪನ ಕಾಲಬಳಿ ಕೂತುಕೊಂಡು ತಕರಾರು ಹೇಳಿದ.
ಅಕಬರ ಬಾದಶಹ ಚತುರ. ಇನ್ನನೇಕ ಬಾರಿ ಸಲೀಮನು ತಾನಸೇನನ ಗೇಲಿ ಮಾಡುವದನ್ನು ಕೇಳಿದ. ವಿಷಯಕ್ಕೆ ಸಂಬಂಧಿಸಿದ ಮಾತನ್ನಷ್ಟೇ ಕೇಳುವವರಂತೆ ನಟಿಸಿದ.
“ಇವನೊಬ್ಬ ಗಾಯಕನೇ ವೈಶ್ಯೆಯರ ಬೈಠಕ್ಕು ಮಾಡುತ್ತಾನೋ, ಇಂಥವರು ಇತರರು ಇದ್ದಾರೋ?”
“ಇತರರ ಬಗ್ಗೆ ಗೊತ್ತಿಲ್ಲ, ಎಲ್ಲಕ್ಕೂ ಮೇಲ್ತರಗತಿಯೆಂದು ಖ್ಯಾತಿವೆತ್ತ ಇವನು ಹಾಗೆ ಬೀದಿಗಾಯಕನಾಗುವದು ನನಗೆಷ್ಟೂ ಸೇರುವದಿಲ್ಲ. ”
“ಯಾ ಬೀದಿ?”
ವೈಶ್ಯಯರಿದ್ದ ಕೆಲವು ಬೀದಿಗಳನ್ನು ಸಲೀಮ ಹೆಸರಿಸಿದ.
“ಯಾ ವೈಶ್ಯೆಯರು. . . . ”
ಸಲೀಮ ಉಚ್ಚಪ್ರತಿಯ ಮೂರು ವೈಶ್ಯೆಯರ ಹೆಸರು ಹೇಳಿದ. ಮೂವರೂ ಹಿಂದೂ ವೈಶ್ಯೆಯರು. ಪರಮಧಾರ್ಮಿಕರೆಂದು ಹೆಸರು ಪಡೆದವರು. ಅವರಲ್ಲಿ ವಾರಕ್ಕೊಮ್ಮೆ ಭಜನೆ ನಡೆಯುತ್ತಿತ್ತು-ಸೋಮವಾರದ ದಿವಸ. ಧಾರ್ಮಿಕರಾದ ತಾನಸೇನ ಮಹರಾಜರೂ ಕೋಠಿಯ ಅಧಿಕಾರಿಗೆ ತಿಳಿಸಿಯೇ ಕೆಲವೊಮ್ಮೆ ಭಜನೆಯಲ್ಲಿ ಭಾಗವಹಿಸಿದ್ದರು. ಈ ವೈಶ್ಯೆಯರು ಪರಮ ಸುಂದರಿಯರು. ; ನೃತ್ಯ ಕಲಾ ಪವೀಣರು; ಇವರ ಮೆಹೆಫಿಲಿನ ಬೆಲೆಯೂ ದುಬಾರಿ. ಒಮ್ಮೆ ಒಬ್ಬನನ್ನೇ ಸ್ವೀಕರಿಸುವವರು. ಬಾದಶಹನಿಗೆ ಈ ವಿಷಯ ಗೊತ್ತಿತ್ತು. ಅಲ್ಲದೆ, ರಾಜಪುತ್ರರಾರೂ ವೈಶ್ಯಾಗೃಹಕ್ಕೆ ಹೋಗಬಾರದೆಂದು ಕಟ್ಟಪ್ಪಣೆ ವಿಧಿಸಿದ್ದ. ಬೇಕಾದ ರಾಜಪುತ್ರರು ಇಂಥವರನ್ನು ಮನೆಗೇ ಕರೆಸಬಹುದು.
ಬಾದಶಹ ಒಮ್ಮೆಲೆ ಸಲೀಮನ ಮುಖದಲ್ಲಿ ಕಣ್ಣಿಟ್ಟು, ‘ಇದು ನಿನಗೆ ಹೇಗೆ ಗೊತ್ತಾಯಿತು !’ ಎಂದು ನಿಖರವಾಗಿ ಕೇಳಿಬಿಟ್ಟ.
ಸಲೀಮ ಅವಕ್ಕಾದ, ಝರ್ರನೆ ಬೆವೆತ, ತತ್ತರಿಸುತ್ತ, ‘ನನ್ನ ಸ್ನೇಹಿತರು ಹೇಳಿದರು’ ಎಂದ.
“ಅವರಿರುವ ಓಣಿಯ ಹೆಸರನ್ನು ಅವರು ಹೇಳಲಾರರು. ನೀನೇ ಅಲ್ಲಿಗೆ ಹೋಗಿರಬೇಕು. ಈಗ ವಿಶ್ರಮಿಸು, ಹೋಗು. ಇನ್ನು ಮೇಲೆ ಬೀದಿಬೀದಿ ಅಡ್ಡಾಡುವದು ಬೇಡ. ”
ಸಲೀಮನ ಚಾಡಿ ಅವನಿಗೇ ಮುಳುವಾಯಿತು. ಮುಂದೆ ಮೂರುದಿನಗಳಲ್ಲಿ ರಾಜಪುತ್ರ ಸಲೀಮನು ಉಪವರನಾಗಿರುವನೆಂದೂ, ಅವನಿಗೆ ತಕ್ಕ ವಧುವನ್ನು ಆಯ್ದು ತರಬೇಕೆಂದೂ ಮಾನಸಿಂಹ, ಜಯಸಿಂಹ, ದಿಲೇರಖಾನ್, ಅಫಝಲ್ ಖಾನರಂಥ ಸೇನಾನಿಗಳಿಗೆ ಬಾದಶಹ ಕರೆದು ಹೇಳಿಬಿಟ್ಟ. ಮಾನಸಿಂಹ ಆರಿಸಿದ ಒಬ್ಬ ರಜಪೂತ್ ಸುಂದರಿಯೊಡನೆ ವೈಭವದಿಂದ ಲಗ್ನವೂ ಆಯಿತು-ಒಂದು ತಿಂಗಳಿನಲ್ಲಿ. ಸಲೀಮ ಆ ಚೆಲುವೆಯನ್ನು ಕಣ್ಣೆತ್ತಿಸಹ ನೋಡಲಿಲ್ಲ. ತನ್ನ ಸಂಚಿನ ವಿಫಲತೆಯ ಫಲವಾಗಿ ಆಕೆ ಅರಮನೆಯನ್ನು ಸೇರಿದಳು.
*
*
*
ತಾನಸೇನ ಮಹಾರಾಜರೋ ಶ್ರೇಷ್ಠ ಗಾಯಕರು, ನಿಜ. ಆದರೆ ನಾಯಕ(ವಾಗ್ಗೆಯಕಾರ)ರೆಂದು ಹೇಳಲಿಕ್ಕೆ ಬಾರದು. ಅಂದಿನ ಮಿತಿಗೆ ತಾವೇ ರಚಿಸಿಕೊಂಡು ಹಾಡುವದು ಅವರಿಗೆ ಗೊತ್ತಿರಲಿಲ್ಲ. ತಾವು ಕಲಿತ ಅನೇಕ ಧ್ರುಪದ-ಧಮಾರಗಳನ್ನು ರಾಜಾ ಮಾನಸಿಂಹನಿಗೆ ಹೇಳಿ ಬರೆಸಿಬಿಟ್ಟರು. ಯಾವ ಗಾಯಕನಲ್ಲಿ ಯಾವ ಚೀಜುಗಳು, ಯಾವ ‘ಆನವಟ’(ಅಜ್ಞಾತ) ರಾಗಗಳು ಇರಬಹುದೆಂದು ಯಾದಿಯನ್ನೂ ಕೊಟ್ಟರು. ಆದರೆ ಸ್ವಂತ ಮಾಡಿದ್ದೊಂದೂ ಚೀಜ ಅವರ ಬಳಿಯಲ್ಲಿ ಇರಲಿಲ್ಲ.
ಸಲೀಮನ ಲಗ್ನದ ಮುನ್ನಾದಿನ ಬಾದಶಹ ಕರೆದು “ಶಾದಿ ಮುಬಾರಕ್ ಆಗುವಂಥ ನಿನ್ನದೇ ಆದ ಚೀಜು ಹಾಡು. ಹಳೆಯ ಸಂಸ್ಕೃತ ಅವಧಿ ಹಾಡುಗಳನ್ನು ಕೇಳಿ ಕೇಳಿ ಬೇಜಾರಾಗಿದೆ. ನಿನ್ನ ಹೆಸರಿಗೆ ಭೂಷಣವಾಗುವಂತೆ ಕರಾಮತ್ ತೋರಿಸು. ” ಎಂದು ಹೇಳಿದ. ನಾನು ಹಾಡುತ್ತೇನೆ, ಸವಿ ಮಾಡಿಕೊಳ್ಳುವದು ಹುಜೂರರಿಗೆ ಸೇರಿದ್ದು ಇಷ್ಟೇ ಹೇಳಿ ಅಲ್ಲಿಂದ ಕಾಲ್ತೆರೆದರು ಮಿಯಾ ತಾನಸೇನ್.
“ಇದೀಗ ಬಿಗಿ ಬಂದಿತು. ಇಷ್ಟು ದಿವಸ ದರ್ಬಾರದ ಪ್ರಥಮ ಗಾಯಕನೆಂದು ದಶದಿಕ್ಕುಗಳಲ್ಲಿ ಹೆಸರಾದರೂ, ಇನ್ನೂ ಸ್ವಂತದ ಕೃತಿಮಾಡಿ ಮಹಾರಾಜರಿಗೆ ಗೊತ್ತಿರಲಿಲ್ಲ. ಸುದೈವದಿಂದ ಬಾದಶಹರು ಹೊಸ ರಾಗ ಮಾಡಲಿಕ್ಕೆ ಹೇಳಲಿಲ್ಲ. ನಮ್ಮ ಪುಣ್ಯ. ಬರಿ ಹೊಸ ಚೀಜು (ಹಾಡು) ಮಾಡಲಿಕ್ಕೆ ಹೇಳಿದ್ದರೆ. ” ಎಂದುಕೊಳ್ಳುತ್ತ ಚಿಂತಾತುರರಾಗಿ ರಹಮತ್ ಖಾನನ ಬಳಿಗೆ ಹೋದರು. ಇಬ್ಬರೂ ತಿಣುಕಾಡಿ, ಬಾದಶಹನ ಮತನ್ನೇ ಚೀಜ ಆಗಿ ರಚಿಸಿಕೊಂಡರು. ತಾವು ಹಾಡಬೇಕೆಂದು ಒಂದು ವಾರದವರೆಗೆ ರಿಯಾಝ (ಪ್ರಾಕ್ಟೀಸ್) ಮಾಡುತ್ತಿದ್ದ ದರಬಾರೀ ರಾಗದ ಸ್ವರಗಳ ಪ್ರಾರಂಭ, ಬೆಳವಣಿಗೆ, ಮುಕ್ತಾಯಕ್ಕೆ ಅನುಗುಣವಾಗುವಂತೆ ಹರಕು ಮುರುಕು ಅರ್ಥಹೀನ ಶಬ್ದಗಳನ್ನು ಕೂಡಿಸಿ, ತಾಳಕ್ಕೆ ಹೇಗೆ ಕೋಡಿಸಿಕೊಳ್ಳಬೇಕೆಂಬುದನ್ನು ಮಾತಾಡಿ ನಿರ್ಣಯಿಸಿದರು. ಈಗ ಸುಪ್ರಸಿದ್ಧವಾದ ಚೀಜ ಅದು.
ಸೊ ಸೊ ಮುಬಾರಕ ಬಾದಿಯಾ| ಶಾದಿಯಾ|
ಐಸೆ ಶಾದಿ ಹೋ|ಲಾಖೋ ಹಝಾರ| ಸೊ
ಸೊ ಮುಬಾರಕ|
‘ಲಗ್ನದ ನೂರು ನೂರು ಶುಭಾಶಯಗಳು. ಇಂಥವೇ ಲಕ್ಷಸಾವಿರ ಲಗ್ನಗಳಾಗಲಿ. ’
ವಿವಾಹ ಮಹೋತ್ಸವಕ್ಕೆ ತಕ್ಕದಾದ ರಚನೆ, ಅರ್ಥ ಮಾತ್ರ ಶುಂಠಿ. (ಟಿಪ್ಪಣಿ ೧)
*
*
*
ಲಗ್ನದ ದಿವಸ ಮೌಲ್ವಿಗಳು ಬಂದು ಕುರಾನ್ ಪಠಿಸಿದರು. ಪಂಡಿತರು ಬಂದು ವೇದ ಪಠಿಸಿದರು. ಸಲೀಮನಿಗೆ ಇತ್ತ ಲಕ್ಷ್ಯವೇ ಇದ್ದಿಲ್ಲ. ಹೆಂಡತಿಯ ಕಡೆಗೆ ಕಣ್ಣೆತ್ತಿ ಸಹ ನೋಡಲಿಲ್ಲ. ಎಲ್ಲ ಲಕ್ಷ್ಯಮೇಜವಾನಿಯ ಕಡೆಗೆ. ಅಂದು ಬೆಳಿಗ್ಗೆ ‘ಖಾನಸಮಾ’ (ಅಡಿಗೆಯವ) ನನ್ನು ಕರೆದು ಅವನ ಕಡೆಗೆ ಸಲೀಮ ಒಂದು ಸಿಂಧೂರದ ಚೀಟನ್ನು ಕೊಟ್ಟು, ಯಾವ ಅಡಿಗೆಯ ಪದಾರ್ಥದಲ್ಲಿ ಸಿಂಧೂರ ಹಾಕಿದರೆ ಬಣ್ಣ ಕಾಣುವದಿಲ್ಲ ಎಂದು ಕೇಳಿ, ಅದರಲ್ಲಿ ಮಿಯಾ ತಾನಸೇನನಿಗಷ್ಟೇ ಸಿಂಧೂರ ಮಿಶ್ರಿತ ಆಹಾರವನ್ನು ಹಾಕಬೇಕೆಂದು ಹೇಳಿದ್ದ. ಜಿಲೇಬಿಗಳಲ್ಲಿ, ಕಾಯಿರಸದಲ್ಲಿ, ಬಿರ್ಯಾಣಿಯಲ್ಲಿ, ಅವನಿಗಷ್ಟೇ ಬೇರೆ ಮಿಶ್ರಿತ ಅಡಿಗೆ ಮಾಡಲಾಗಿತ್ತು. ‘ಇಂದು ರಾತ್ರಿ ಮಿಯಾ ಸಾಹೇಬರು ಹಾಡುವವರಿದ್ದಾರೆ. ಅದಕ್ಕಾಗಿ ಅವರಿಗೆ ಬೇರೆ ಅಡಿಗೆ’ ಎಂದು ನೆಪ ಹೂಡಿ ಬೇರೆ ಎಲೆ ಹಾಕಿದ್ದ. ಆದರೆ ಎಲೆ ಹಾಕುವಾಗ, ‘ಜರಾಸಂಭಾಲಕ’ (ಎಚ್ಚರು) ಎಂದು ಮೆಲುದನಿಯಲ್ಲಿ ಹೇಳಿಹೋಗಿದ್ದ.
ಸಲೀಮ ಅತಿಥಿಗಳಿಗೆ ಆಗ್ರಹ ಮಾಡುತ್ತ ಬಂದು, ತಾನಸೇನರ ಎಲೆ ನೋಡಿ, ‘ಕ್ಯೊ, ಪಂಡಿತ ಮಹಾರಾಜ, ಜಲೇಬಿಕೊ ಕ್ಯೊ ಹಾತ್ ನಹೀ ಲಗಾಯೆ?’ ಎಂದು ಕೇಳಿದ.
‘ದೇಖಿಯೆ, ಶಹಝಾದೆ, ಮೂಹ ಮೀಠಾ ಕಿಯಾ!’ ಎಂದು ಕಡಿಮೆ ಕೆಂಪಗಾದ ಒಂದು ತುಂಡನ್ನು ಬಾಯಲ್ಲಿ ಹಾಕಿಕೊಂಡರು.
ಸಲೀಮ ಎರಡನೇ ಸುತ್ತು ತಿರುಗುವಷ್ಟರಲ್ಲಿ ತಾನಸೇನ ಸಾಹೇಬರ ಜಿಲೇಬಿ ಜಹಾಂಗೀರುಗಳೆಲ್ಲ ಎಲೆಯ ಬುಡದಲ್ಲಿ ಮಾಯವಾಗಿದ್ದವು. ಇಷ್ಟು ಬೇಗ ಹೇಗೆ ತಿಂದಿರಬಹುದೆಂದು ಸಂಶಯದಿಂದ ಸಲೀಮ ಬೇರೊಂದು ಉಪಾಯ ತೆಗೆದ.
ಊಟವಾದ ಮೇಲೆ, ಇವರ ಬೀಡಾದಲ್ಲಿ ಒಂದು ಚಿಮಟಿಗೆ ಸಿಂಧೂರ ಸೇರಿಸಿಕೊಡಲಾಯಿತು. ಅದನ್ನು ತಾನಸೇನರು ಚೆನ್ನಾಗಿ ನುರಿಸಿ ತಿಂದುಬಿಟ್ಟರು!
ಸಿಂಧೂರ ತನ್ನ ಕೆಲಸ ಮಾಡಿತು. ಸಂಜೆ ರಹಮತ್ ಖಾನರ ಮನೆಯಲ್ಲಿ ಮುಕ್ತಕಂಠ ಶ್ರುತಿ ಹುಟ್ಟದಾಯಿತು. ಗಾಯಕನ ಧ್ವನಿಯ ಮೇಲೆ ಸಿಂಧೂರ ಮಾಡುವ ಪರಿಣಾಮವಿದು.
ಇನ್ನೇನು ಮಾಡುವದು? -ಅಲ್ಲಾನನ್ನು, ಶ್ರೀಹರಿಯನ್ನು, ಗುರುಗಳನ್ನು ಸ್ಮರಿಸುತ್ತ ನಾಲ್ಕುಗಂಟೆ ಹೇಗೋ ನೂಗಿಸಿದರು. “ಬಂದದ್ದು ಬರಲಿ, ಶ್ರೀಹರಿಯ ದಯವೊಂದಿರಲಿ” ಎಂಬುವದೇ ಕೊನೆಯ ಉಪಾಯ.
*
*
*
ಶ್ರೀಹರಿಯ ಕೃಪೆಯೋ, ಅಲ್ಲಾನ ಅಭಯವೋ ಅಂದು ರಾತ್ರಿ ಕಂದು ಶ್ರುತಿಯಲ್ಲೇ ಶುರುವಾದ ‘ದರ್ಬಾರಿ ಕಾನಡಾ’ ರಾಗವು ವಿಶೇಷ ಕಳೆಗಟ್ಟಿತು.
ಕಂದು ಶ್ರುತಿಯ ಷಡ್ಜವೇ ದರಬಾರಿ ಕಾನಡ ರಾಗಕ್ಕೆ ಯುಕ್ತ. ಎಲ್ಲ ರಾಗಗಳಿಗೂ ಒಂದೇ ಬಗೆಯ ಷಡ್ಜ ಇರುತ್ತದೆಯೆಂದು ಸಾಮಾನ್ಯವಾಗಿ ಎಲ್ಲ ಸಂಗೀತಗಾರರೂ ತಿಳಿಯುತ್ತಾರೆ. ಇದು ತಪ್ಪು. ಪ್ರತಿಯೊಂದು ರಾಗಕ್ಕೂ ವಿಭಿನ್ನ ರೀತಿಯ ಷಡ್ಜ ಹತ್ತುತ್ತದೆಯೆಂದು ಭರತಮುನಿ ಹೇಳಿದ್ದಾನೆ. ಆದರೆ ನಂತರ ಬೆಳೆದ ಪರಂಪರೆಯಲ್ಲಿ ಷಡ್ಜ ಅಚಲವೆಂಬ ಭಾವನೆ ಬೆಳೆದುಬಂತು. (ಟಿಪ್ಪಣಿ ೨) ಆದರೆ ಅವು ವಿಭಿನ್ನವಾಗುತ್ತವೆ.
ಇದು ತಾನಸೇನರಿಗೂ ಗೊತ್ತಿರಲಿಲ್ಲ. ಕಂದು ಶ್ರುತಿಯೆಂದು ತಲೆ ಜಾಡಿಸಿಕೊಳ್ಳುತ್ತಲೇ ಹಾಡಿದರು. ಕಂದು ಶ್ರುತಿಯ ಮೂಲಕವೇ ದರಬಾರಿ ರಾಗ ಅಂದು ಅದ್ಭುತವಾಗಿ ರೂಪುಗೊಂಡಿತು. ಅಸಮಾಧಾನದಿಂದ ಶುರುವಾದದ್ದು ತಮಗೂ ದರ್ಬಾರಕ್ಕೂ ಹರ್ಷವನ್ನೊದಗಿಸಿತು. ಕ್ಷಣಕ್ಷಣಕ್ಕೆ ಮನಂಬುಗುವ ಸ್ವರಪುಂಜಗಳಿಂದ, ಅನಪೇಕ್ಷಿತ ತಿರುವು-ಮುರುವಿನಿಂದ, ಬೆಂದು, ಸುಳಿವು, ಹೊಳವುಗಳಿಂದ, ಅಲೌಕಿಕ ಗಾಂಭೀರ್ಯದಿಂದ, ‘ವಾಹವ್ವಾ!’, ‘ಶಹಬ್ಬಾಸ’, ‘ಕ್ಯಾ ಬಾತ ಹೈ!’, ‘ಕಮಾಲ ಕಿಯಾ’ ಎಂಬ ಉದ್ಗಾರಗಳು ಶ್ರೋತೃಗಳಿಂದ ಬರುತ್ತ, ರಾಗ ‘ತಿಹಾಯಿ’ಯಿಂದ ಕೊನೆಗೊಂಡಾಗ ಪ್ರಚಂಡ ಕರತಾಡನವಾಯಿತು. ಬಾದಶಹರು ಸಿಂಹಾಸನದಿಂದ ಇಳಿದು ಬಂದು ಮಿಯಾ ತಾನಸೇನರನ್ನು ಅಪ್ಪಿಕೊಂಡರು. ತಮ್ಮ ಕೈಯಿಂದ ಅವರ ಬಾಯಲ್ಲಿ ಬೀಡಾ ಹಾಕಿದರು.
ದರ್ಬಾರದಲ್ಲಿ ಕುಳಿತ ಇಬ್ಬರು ತಾನಸೇನ ಮಹಾರಾಜರಿಗೆ ವಿಶೇಷ ಸ್ಪೂರ್ತಿಯೊದಗಿಸಿದ್ದರು.
ತಾನಸೇನರ ಗಾಯಕಿಯಿಂದ ಹರ್ಷಚಿತ್ತಳಾಗಿ ಕುಳಿತ ರಾಮಪ್ಯಾರಿಬಾಯಿ ಸೆರಗಿನಿಂದ ತನ್ನ ಹರ್ಷಾಶ್ರುಗಳನ್ನು ಒರೆಸುತ್ತಲೆ ಕುಳಿತಿದ್ದಳು. ತಾನಸೇನರು ಸಾವಿರಾರು ಹೆಣ್ಣುಮಕ್ಕಳಲ್ಲಿ ಈಕೆಯ ಕಡೆಗೇ ನೋಡುತ್ತ ಹಾಡಿದ್ದು ಸಲೀಮನ ಹೊಟ್ಟೆಕಿಚ್ಚನ್ನು ಇನ್ನಷ್ಟು ಭುಗಿಲ್ಲನೆ ಹೊತ್ತುವಂತೆ ಮಾಡಿತು. ರಾಮಪ್ಯಾರಿ ಸಲೀಮನಿಗೆ ‘ಪ್ಯಾರಿ’ ಮಾತ್ರ. ಈಕೆ ರೂಪಸಿ. ಬೇಕಂತಲೇ ತುಸು ಎದುರಿಗೆ ಸಮ್ಮುಖವಾಗಿ ಬೆಳಕಿನಲ್ಲಿ ಕುಳಿತಿದ್ದಳು. ಆಕೆಗೆ ತಾನಸೇನರನ್ನು ನೋಡುವಷ್ಟು ಕೂಡ ಧೈರ್ಯವಿರಲಿಲ್ಲ. ಅವರ ಮುಖ ಆಕೆಯತ್ತ ತಿರುಗಿದಾಗ ಮುಖ ಕೆಳಗೆ ಹಾಕುತ್ತಿದ್ದಳು. ಆದರೆ ಆಕೆಯ ಕಂಬನಿಗಳು ಧಾರಾಕಾರವಾಗಿ ಹನಿಯುತ್ತಿದ್ದವು. ಹೀಗಾಗಿ, ತಮಗೆ ಒಲಿದ ಸಹೃದಯ ಶ್ರೋತೃವಿನ ಕಡೆಗೆ ಗಾಯಕ ಧೈರ್ಯಕ್ಕಾಗಿ ನೋಡುವಂತೆ ಆಕೆಯ ಕಡೆಗೇ ನೋಡುತ್ತ ಹಾಡಿದರು. ಆಕೆಯ ಪರಿಚಯ ಮಿಯಾಸಾಹೇಬರಿಗೆ ನಿನ್ನೆ ಮೊನ್ನೆಯದಲ್ಲ. ಆಕೆಯ ಸೋಮವಾರದ ಭಜನೆಗೆ ಅನೇಕ ಬಾರಿ ಹೋಗಿಬಂದಿದ್ದರು. ತಾವು ಹಾಡಿದ್ದರು. ನೀಲಕಂಠ ಭಟ್ಟನೆಂಬ ಕಾಶಿ ಬ್ರಾಃಮಣ ಆಕೆಯ ಮನೆಯ ಪೂಜಾರಿ, ಆಶ್ರಿತ. ಇಷ್ಟೇ ಇಲ್ಲ, ಆಕೆಯ ನಂರ ವಿಟಪುರುಷನೂ ಹೌದು. ಸೋಮವಾರ ಶಿವನವಾರ. ಆ ದಿನ ನಾಲ್ಕು ಗಂಟೆಗೆ ಊಟ, ಸಂಜೆ ಭಜನೆ, ರಾತ್ರಿ ಬ್ರಃಮಚರ್ಯೆ, ವ್ರತ, ಆಕೆ ಜನ್ಮದಾದ್ಯಂತವೂ ಪಾಲಿಸುತ್ತಿದ್ದಳು. ಕಳೆದ ಒಂದು ವರ್ಷ ಆಕೆ ಸಲೀಮನ ಆಶ್ರಯದಲ್ಲಿ ಇದ್ದಳು. ಆದರೆ ಸೋಮವಾರ ಸಲೀಮನಿಗೂ ರಜಾ ವಿಧಿಸಲ್ಪಟ್ಟಿತ್ತು. ಎರಡು ಬಾರಿ ಮಾತ್ರ ರಾಮಪ್ಯಾರಿ ಸೋಮವಾರ ವ್ರತದ ಭಂಗವನ್ನು ಅನುಮೋದಿಸಿದ್ದಳು. ಕಾಶಿಯಿಂದ ಬಂದ ಮತ್ತು ಆಕೆಗೆ ಗಂಗಾಜಲವನ್ನು ಕೊಟ್ಟ ಬ್ರಾಃಮಣ ಮರುದಿವಸವೇ ಊರು ಬಿಡುವ ಪ್ರಸಂಗ ಬಿದ್ದಾಗ ತನಗೆ ಭೋಗದಾನವನ್ನು ನೀಡಬೇಕೆಂದು ಬೇಡಿಕೊಂಡ ಒಂದು ಪ್ರಸಂಗ; ನಾಸಿಕದಿಂದ ಬಂದ ನಾಥಪಚಮಾಶ್ರಮಿಯು ಒಂದಕ್ಕಿಂತ ಹೆಚ್ಚು ದಿನ ಒಂದೇ ಸ್ಥಳದಲ್ಲಿ ನಿಲ್ಲಬಾರದೆಂಬ ತನ್ನ ವ್ರತದಂತೆ ಮರುದಿವಸವೇ ಆಕೆಯ ಮನೆ ಬಿಡಬೇಕೆಂದಾಗ ಒಂದು ಪ್ರಸಂಗ. ‘ಯಾರು ಬಲ್ಲರು, ಪರಶಿವನೇ ನನ್ನಲ್ಲಿಗೆ ಬಂದಿರಬಾರದೇಕೆ? ಎಂಬ ಧರ್ಮಬುದ್ಧಿಯಿಂದಲೇ ವ್ರತಭಂಗವನ್ನು ಸ್ವೀಕರಿಸಿದ್ದಳು. ಇದೀಗ ಸಲೀಮನ ಲಗ್ನದಿಂದ ಅವನ ಆಶ್ರಯ ತಪ್ಪಿದ ದಿವಸ! ಒಂದು ರೀತಿಯಿಂದ ಆಕೆಗೆ ಸ್ವಾತಂತ್ರ್ಯ ಸಿಕ್ಕ ದಿವಸವೂ ಹೌದು. ಇದೇ ಅರ್ಥದಿಂದ, ದುಹ್ಖಾಶ್ರುವೂ-ಹರ್ಷಾಶ್ರುವೂ ಜೊತೆಜೊತೆಯಾಗಿಯೇ ಹೊರಹೊಮ್ಮಿದ್ದವು. ನೀಲಕಂಠ ಭಟ್ಟನ ಜೊತೆಗೆ ಎರಡು ಬಾರಿ ಸ್ಪಷ್ಟೋಕ್ತಿಗಳಲ್ಲಿ ಮಿಯಾಸಾಹೇಬರಿಗೆ ಹೇಳಿಕಳಿಸಿದ್ದಳು. ಮೂರನೇ ಬಾರಿ ನೀಲಕಂಠ ಭಟ್ಟ ಒಂದು ಹೆಜ್ಜೆ ಮುಂದೆ ಹೋಗಿದ್ದ. ‘ನೀವೆಂಥ ಅವಧೂತರು ರೀ! ಒಂದು ಹೆಣ್ಣು ಕಾಲಿಗೆ ಬಿದ್ದಾಗ ಉದ್ಧಾರ ಮಾಡಲಾರದವರಿಗೆ ಅವಧೂತರೇಕೆನ್ನಬೇಕು? ನಿಮ್ಮ ಗೋರಖನಾಥನು ಇಂಥ ಪ್ರಸಂಗದಲ್ಲಿಏನು ಮಾಡಿದ? ಒಬ್ಬ ನೇಕಾರ ಹೆಣ್ಣು ಅವನನ್ನು ಅಂಗಲಾಚಿದಳು. ಬುದ್ಧಿ ಹೇಳುವಷ್ಟು ಹೇಳಿದ. ಬಗೆಹರಿಯಲಿಲ್ಲ. ಕೊನೆಗೆ ಆಕೆಗೆ ಭೋಗ ನೀಡಿ, ನಂತರ ಭೋಗದ ಮುಖಾಂತರವೇ ಅವಳನ್ನು ವಿಮಲ ಮಹಾಶಕ್ತಿಯನ್ನಾಗಿ ಮಾಡಲಿಲ್ಲವೇ? ನೀವು ಅವಧೂತರೇ ಅಲ್ಲ’ ಎಂದು ಜರೆದು ನುಡಿದ. ಆಗ ನಿರಂಜನರಾದ ತಾನಸೇನರು ತಮ್ಮ ಗುಟ್ಟು ಹೇಳಿದರು: ‘ರಾಮಪ್ಯಾರಿ ಸಲೀಮನ ಪ್ರೇಯಸಿ. ಏನು ಕಾರಣವೋ ಸಲೀಮ ನನ್ನನ್ನು ದ್ವೇಷಿಸುತ್ತಾನೆ. ಈಗ ನಾನು ರಾಮಪ್ಯಾರಿ ಬಳಿಗೆ ಹೋದರೆ ನನ್ನ ಜೀವಕ್ಕೆ ಅಪಾಯ. ನೀನೇ ಅವಳಿಗಷ್ಟು ವಿವರಿಸಿ ಹೇಳು!’ ಎಂದು.
ಅದಕ್ಕಾಗಿಯೇ ರಾಮಪ್ಯಾರಿ ಅಧೀರಳಾಗಿದ್ದಳು. ‘ಮುಬಾರಕ್ ಬಾದಿಯಾ! ಯೇ ಶಾದಿಯಾ’ ಸಲೀಮನಿಗೂ ಮುಬಾರಕ್ಕು: ತನಗೂ ಮುಬಾರಕ್ಕು; ಮಿಯಾ ತಾನಸೇನರಿಗೂ ಮುಬಾರಕ್ಕು. ತಾನಸೇನರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಿಲ್ಲ. ಅವರು ಆಚೆ ಈಚೆ ತಿರುಗಿದಾಗಷ್ಟೇ ಮುಖವೆತ್ತಿ ಅವರ ಮುಖವನ್ನು ನೋಡುವಳು, ತಲಮಲಗೊಳ್ಳುವಳು. ‘ಅತಿ ಸ್ನೇಹೋ ಪಾಪಶಾಂತಿ’ ಎಂದು ಕಾಳಿದಾಸ ಹೇಳಿಲ್ಲವೆ?
*
*
*
ಸಭೆಯಲ್ಲಿ ಬದಿಗೇ ಪಖಾವಜಿ ರಹಮತ್ ಖಾನರ ಬಳಿಗೇ ಕುಳಿತ ಹದಿನೈದು ವರ್ಷದ ಬಾಲಕನೊಬ್ಬ ತಮ್ಮ ಸಂಗೀತದಲ್ಲಿ ತಲ್ಲೀನನಾಗಿ ಹರ್ಷೋದ್ಗಾರ ಮಾಡುತ್ತಿದ್ದ, ತನ್ನ ತೆಳುದನಿಯಲ್ಲಿ. ರಹಮತ್ ಖಾನರ ಇಬ್ಬರು ಮಕ್ಕಳು ಗದ್ದಲದಲ್ಲಿ ಎಲ್ಲಿಯೋ ಕುಳಿತಿದ್ದರು. ಈ ಬಾಲಕ ಮಾತ್ರ ಧೈರ್ಯದಿಂದ ಪಖಾವಜಿಯ ಪಕ್ಕದಲ್ಲೇ ಕುಳಿತಿದ್ದ, ಅರ್ಧ ಸಮ್ಮುಖನಾಗಿಯೇ. ಅವನ ಕಣ್ಣಲ್ಲಿಯ ಹರ್ಷದ ಮಿನುಗೋ ಏನೋ, ಮಿಯಾಸಾಹೇಬರಿಗೆ ಅವನ ಬಗ್ಗೆ ಅಂತಹ್ಕರಣ ಉಕ್ಕಿ ಬಂದಿತು. ಮುಖ ನೋಡಲಿಕ್ಕೆ ಹದಿನೈದು ವರ್ಷವೆಂದು ಸ್ಪಷ್ಟ. ಆದರೆ ಅವನ ಆಕೃತಿ ಮಾತ್ರ ೧೨ ವರ್ಷದವನ ಹಾಗೆ ಚಿಕ್ಕದು, ಕೃಶವಾದುದು. ಸರಿಯಾಗಿ ಹಾಲು ಆಹಾರ ತಿನ್ನದ ಹಸುಳೆ. ಸ್ವಲ್ಪ ಹೊತ್ತಿನಲ್ಲಿ ಅವನಲ್ಲಿದ್ದ ಆತ್ಮೀಯ ಸದಭಿಮಾನದ ವಿದ್ಯುತ್ತು ತಾನಸೇನರನ್ನು ಅವ್ಯಕ್ತವಾಗಿ ಆವರಿಸಿ, ಯಾವುದೋ ಒಳಗಿನ ತಂತಿ ಮೀಟತೊಡಗಿತು. ಬೈಠಕ್ಕು ಮುಗಿದೊಡನೆ, ‘ನೀನಾರು’ ಎಂದು ಕೇಳಿಯೇ ಬಿಡಬೇಕೆಂಬ ಲವಲವಿಕೆ ತಾನಸೇನರಲ್ಲಿ ಹುಟ್ತತೊಡಗಿತು. ಈ ವಿಶಾಲ ಸಭೆಯಲ್ಲಿ-ಈ ವಿಶಾಲ ವಿಶ್ವದಲ್ಲಿ ಯಾರಿಗೆ ಯಾರು?-ಆದರೂ ಮುಂಚೆಲ್ಲಿಯೋ ನೋಡಿದಂತೆ ಅಸ್ಪಷ್ಟ ನೆನಪು. ಆದರೆ, ಎಲ್ಲಿ ತಿಳಿಯಲೊಲ್ಲದು.
ಪಾಪ ತಾನಸೇನರೇನು ಬಲ್ಲರು? ಬಿಲಾಸ್ ಖಾನ ಅತ್ರೌಳಿ ಬಿಡುವ ಮುನ್ನ ತಾಯಿ ಹಾಗು ಅಜ್ಜಿ ಅವನಿಗೆ ಆಣೆ ಮಾಡಿ ಹೇಳಿದ್ದರು: ನಿನ್ನ ಗುರುತು ಮಿಯಾಸಾಹೇಬರಿಗೆ ಹೇಳಿಗೀಳೀಯೆ! ಅವರು ಈಗ ನಮ್ಮನ್ನು ತೊರೆದಿದ್ದಾರೆ. ಮರೆತಿದ್ದಾರೆ. ನಿನಗೆ ಅವರು ಮರ್ಯಾದೆ ಕೊಡಲಾರರು. ಕೇಳಿದರೆ, ರಹಮತ್ ಖಾನರ ಬಳಗ ಎಂದು ಹೇಳು. ಬೇಕಾದರೆ ಸಂಗೀತ ಕೇಳು, ಕಲಿ; ಆದರೆ ನಿನ್ನ ಗುರುತು ಹೇಳಬೇಡ.
ದಿಲ್ಲಿಗೆ ಬಂದಮೇಲೆ ಬಿಲಾಸಖಾನನ ಸಂಗೀತಾಭ್ಯಾಸ ಶುರುವಾಗಿತ್ತು-ಶ್ರವಣೇಂದ್ರಿಯದಿಂದಲೇ. ಅವನನ್ನು ಯಾರೂ ಮುಂದೆ ಕರೆಯಲಿಲ್ಲ. ಸಾರಿಗಮ ಹೇಳಿಕೊಡಲಿಲ್ಲ. ವಿವಾಹದ ಬೈಠಕಿಗಾಗಿ ಮಿಯಾಸಾಹೇಬರು ರಿಯಾಝಿಗೆ ಕೂಡುತ್ತಿದ್ದರು ರಹಮತ್ ಖಾನನ ಎದುರು. ರಹಮತ್ ಖಾನ ಪಖಾವಜದ ಸಾಥಿ ರಿಯಾಝಕ್ಕೆ ಕೂಡುತ್ತಿದ್ದ. ದಿನದಿನವೂ ದರಬಾರೀ ರಾಗ, ಏಕತಾಳ. ಕೊನೆಯ ದಿನ ಮಾತ್ರ ಚೀಜ ಬದಲಿಸಿ ಅದೇ ರಾಗದಲ್ಲಿ ಮುಬಾರಕ್ ಬಾದಿಯಾ ಹಾಡು. ಇದಕ್ಕೆ ಶಿಕ್ಷಣ-ಶಿಕ್ಷೆ-ವಿನಯ ಏನಾದರೂ ಕರೆಯಬಹುದು. ರಹಮತ್ ಖಾನರ ಮಕ್ಕಳು ಆಟಕ್ಕೆ ಹೋಗುತ್ತಿದ್ದರು. ಬಿಲಾಸಖಾನ ಬಾಗಿಲಮರೆಗೆ ಕುಳಿತುಕೊಂಡು ತಂದೆಯ ಗಾಯನವನ್ನು ಕೇಳುತ್ತಿದ್ದ. ಅವರು ಹೊರಗೆ ಬರುವಾಗ ಸರಿದು ಮರೆಯಾಗುತ್ತಿದ್ದ. ಬೈಠಕಿನ ದಿನ ಮಾತ್ರ, ಎಲ್ಲಿಲ್ಲದ ಧೈರ್ಯ ತೆಗೆದುಕೊಂಡು, ಏನೋ ನೆವ ಮಾಡಿ, ರಹಮತ್ ಖಾನರ ಬದಿಯಲ್ಲೇ ಜಾಗ ಹಿಡಿದು ಕುಳಿತುಕೊಂಡ. ತಂದೆಯನ್ನು ಮುಖಾಮುಖಿ ನೋಡಿದ, ಕೇಳಿದ. ತನ್ನ ಅಂತರಂಗದ ಆತ್ಮೀಯ ವಿದ್ಯುತ್ಪ್ರವಾಹದಿಂದ ಅವರನ್ನು ಸೆರೆಹಿಡಿದ. ಆದರೆ ತನ್ನ ಗುಟ್ಟು ಬಿಟ್ಟುಕೊಡಲಿಲ್ಲ. ‘ಅಪ್ಪಾ’ ಎಂದು ಕರೆಯಲಿಲ್ಲ. ಕರೆಯುವ ಪ್ರಸಂಗವೂ ತಪ್ಪಿತು.
ಬಾದಶಹರು ಸಿಂಹಾಸನ ಬಿಟ್ಟು ತಾನಸೇನರನ್ನು ಅಪ್ಪಿಕೊಳ್ಳಲು ಎದ್ದಾಗ, ಸೇನಾನಿ-ಮಂತ್ರಿ-ದಣ್ಣಾಯಕರ ಸಾಲಿಗೆ ಸಾಲೇ ಈ ದೃಶ್ಯವನ್ನು ನೋಡಲಿಕ್ಕೆ ತಾನಸೇನರನ್ನೂ, ಬಾದಶಹರನ್ನೂ ಸುತ್ತುಗಟ್ಟಿದರು. ರಹಮತ್ ಖಾನ ಅಪ್ರತಿಭನಾದ. ಇಷ್ಟು ಮಂದಿ ಪ್ರತಿಷ್ಠಿತರು ಒಂದುಗೂಡಿದಾಗ ಅವನೆಲ್ಲಿ ಹೋಗಬೇಕು? ಅಷ್ಟರಲ್ಲಿ ಅವನ ಇಬ್ಬರು ಮಕ್ಕಳು ಓಡಿಬಂದು ಅವನ ಕಾಲನ್ನು ಅಪ್ಪಿಕೊಂಡರು. ಆ ಆಶ್ರಯವೂ ಬಿಲಾಸಖಾನನಿಗೆ ಇರಲಿಲ್ಲ. ತನ್ನ ತಂದೆಯಾದರೋ ಅವರಿಂದ ಸುತ್ತುವರಿಯಲ್ಪಟ್ಟಿದ್ದ. ಬಿಲಾಸಖಾನ ಅತ್ತಿತ್ತ ನೋಡಿ, ಮತ್ತೆ ರಹಮತ್ ಖಾನರ ಸಮೀಪದಲ್ಲಿ ಹೋಗಿ ನಿಂತ. ರಹಮತ್ ಖಾನ್ ತನ್ನನ್ನು ಯಾರಾದರೂ ಮಾತಾಡಿಸಬಹುದೆಂದು ತುಸು ಹೊತ್ತು ಕಾಯ್ದು ನಿಂತ. ಆದರೆ ಎಲ್ಲರೂ ಅವನ ಕಡೆಗೆ ಬೆನ್ನು ಮಾಡಿ ನಿಂತಿದ್ದರು. ಅವನತ್ತ ಒಬ್ಬರೂ ಹೊರಳಿ ನೋಡಲಿಲ್ಲ. ರಹಮತಖಾನ ತುಸು ಬೇಸರದಿಂದ ‘ಆವೊ ಬೇಟೆ’ ಎಂದು ತನ್ನ ಮಕ್ಕಳ ಕೈಹಿಡಿದು ಕರೆದುಕೊಂಡು ನಡೆದ. ಬಿಲಾಸಖಾನನಿಗೆ ತನ್ನ ತಂದೆ ತನ್ನನ್ನು ಮಾತನಾಡಿಸುವರೆಂದೇ ನಿಶ್ಚಯವಾಗಿ ಅವನ ಅಂತರಂಗ ನುಡಿಯುತ್ತಿತ್ತು. ಅಲ್ಲೇ ಒಂದು ಕ್ಷಣ ಕಾಲು ಕೀಳದವನಂತೆ ನಿಂತುಕೊಂಡ. ಅವನು ಅಲ್ಲೇ ನಿಂತದ್ದು ರಹಮತ್ ಖಾನನಿಗೆ ನೆನಪೇ ಇರಲಿಲ್ಲವೆಂದು ತೋರುತ್ತದೆ. ಸೀದಾ ಜನಜಂಗುಳಿಯಲ್ಲಿ ಕಣ್ಮರೆಯಾದ. ಬಿಲಾಸಖಾನ್ ಕೈಯಲ್ಲಿ ಸಿಕ್ಕ ರವದೆಯನ್ನು ಸಮುದ್ರದಲ್ಲಿ ಬಿಡಕೂಡದೆಂದು ಅವರ ಹಿಂದೆ ಧಾವಿಸಿನೋಡಿದ. ಸುತ್ತಲೂ ಜನರ ಗುಂಪೇ, ಎಲ್ಲರೂ ರಹಮತ್ ಖಾನರಂಥವರೇ, ಹತಾಶನಾಗಿ ನಿಂತಲ್ಲೇ ನಿಂತ ಅಷ್ಟೊತ್ತಿಗೆ ರಹಮತಖಾನನ ಹಿರಿಯ ಮಗ, ‘ಬಿಲಾಸ ಎಲ್ಲಿ?’ ಎಂದು ತಂದೆಯ ಅವಧಾನವನ್ನು ಎಳೆದನೆಂದು ತೋರುತ್ತದೆ. ರಹಮತ್ ಖಾನ ತಿರುಗಿ ಬಂದು, ‘ಓ ಹೈ ಬಡಾ, ದರವಾಜೆ ಕೆ ಪಾಸ್’ ಎಂದು ಹೇಳಿ, ಅವನನ್ನೂ ಮನೆಗೆ ಕರೆದೊಯ್ದ.
ಈ ಎಲ್ಲ ಮಂಗಲ ಸಮಾರಂಭದಲ್ಲಿ ಕಿಡಿ ಕಿಡಿ ಹಾಯುತ್ತ ಕುಳಿತವನೆಂದರೆ ಸಲೀಮ ಶಹಝಾದೆ ಒಬ್ಬನೇ.
ಅವನ ಎಲ್ಲ ಯೋಜನೆಗಳಿಗೂ ವಿಫಲಗೊಂಡಿದ್ದವು.
ಜೊತೆಗೆ ತನಗೆ ಬೇಡವಾದ ಹೆಂಡತಿ ಕೊರಳಲ್ಲಿ ತೂಗುಮಣೆಯಂತೆ ತೂಗುತ್ತಿದ್ದಳು.
ಇಷ್ಟೇ ಅಲ್ಲ-
ಶಬ್ದಾರ್ಥಕ್ಕೆ ಉರ್ದುವಿನಲ್ಲಿ ಒಂದು ಅರ್ಥಪೂರ್ಣ ಶಬ್ದವಿದೆ-‘ಮತಲಬ’. ಇದನ್ನು ಸಾಮಾನ್ಯಾರ್ಥವೆಂದಾಗಲಿಯೂ ತಿಳಿದುಕೊಳ್ಳಬಹುದು; ವ್ಯಂಗ್ಯಾರ್ಥವೆಂದೂ ತಿಳಿಯಬಹುದು; ಗೂಢಾರ್ಥವೆಂದೂ ತಿಳಿಯಬಹುದು.
ತಾನಸೇನನು ರಚಿಸಿದ ಕಾಟಕಳೆಯುವ ಸಪ್ಪನೆ ಕೃತಿಯಲ್ಲಿ ಸಲೀಂ ಕಂಡದ್ದು ವ್ಯಂಗ್ಯಾರ್ಥವೊಂದನ್ನೆ.
ಸೋ ಸೋ ಮುಬಾರಕ ಬಾದಿಯಾ| ಎ ಶಾದಿಯಾ|
ಐಸಿ ಶಾದಿ ಹೋ| ಲಾಖೋ ಹಜಾರ|
ತನಗೆ ಬೇಡಾದ ಹೆಂಡತಿಯನ್ನು ಕಟ್ಟಿಕೊಂಡವನಿಗೆ ಇದರ ಬಗ್ಗೆ ಯಾವ ಕುಕಲ್ಪನೆಗಳು ಹೊಳೆಯುವವೆಂಬುದನ್ನು ಆತನಿಗೇ ಕೇಳಿ ನೋಡಿರಿ.
ತಾನಸೇನ ತನ್ನನ್ನು ಹಾಸ್ಯ ಮಾಡುತ್ತಿದ್ದಾನೆಯೆಂದೇ ಸಲೀಮನಿಗೆ ಭಾವನೆ. ‘ಐಸಿ ಶಾದಿ ಹೊ! ಹೀಗೇ ಆಗಬೇಕು ನಿನಗೆ! ಇಂಥ ಲಕ್ಷ ಮದುವೆಗಳನ್ನು ನೋಡಿದ್ದೇನೆ ನಾನು. ಲಗ್ನಮಾಡಿಕೊಂಡು ಮುಗುದಯ್ಯನಾಗು. ’
*
*
*
ಬಾದಶಹನ ಗೃಃಯ ಹೊಣೆಗಳನ್ನೆಲ್ಲಾ ಹೊತ್ತ ಚೌಧುರಾಣಿ, ಸಲೀಮನ ಫಲಶೋಭನ ಮುಹೂರ್ತವನ್ನು ಜೋಯಿಸರ ಸಹಾಯದಿಂದ ಗೊತ್ತುಮಾಡಿದಳು. ಪುಷ್ಯ ಮಾಸ-ರಾಹುಕಾಲ ಇತ್ಯಾದಿಗಳನ್ನು ತಪ್ಪಿಸುತ್ತ, ಮೂರು ತಿಂಗಳುಗಳ ಮೇಲೆ. ಎರಡೇ ದಿನಗಳಲ್ಲಿ ಪತಿಯ ಪರಾನ್ಮುಖತೆಯನ್ನು ಅರಿತ ಸೊಸೆ ತನ್ನವರ ಜೊತೆಗೆ ತವರೂರಿಗೆ ಹೋಗುವೆನೆಂದು ಹೇಳಿದಳು. ಚೌಧುರಾಣಿ ಬೇಡೆನ್ನಲಿಲ್ಲ. ಸಲೀಮನು ಅಷ್ಟೇ ಸಾಕೆಂದು ತನ್ನ ‘ಪ್ಯಾರಿ’ಯ ಮನೆಯಲ್ಲಿ ರಾತ್ರಿ ಕಳೆಯತೊಡಗಿದ. ರಾಮಪ್ಯಾರಿ ಹತಾಶಳಾದಳು.
ಇತ್ತ ರಹಮತ್ ಖಾನರ ಮನೆಯಲ್ಲಿದ್ದ ಬಿಲಾಸಖಾನನ ಪರದೇಸಿತನ ಮುಂದುವರಿಯಿತು. ಒಂದು ವಾರ ಬೈಠಕ್ಕಿನ ರಿಯಾಝಿಗಾಗಿ ಬರುತ್ತಿದ್ದ ಅಪ್ಪ ಬೈಠಕ್ಕಿನ ಮರುದಿನದಿಂದಲೇ ಬರುವುದನ್ನು ನಿಲ್ಲಿಸಿಬಿಟ್ಟರು. ರಹಮತ್ ಖಾನರೇ ಒಮ್ಮೆ ಹೋದಾಗ, ‘ನಿನ್ನ ಜೊತೆಗಿದ್ದ ಹುಡುಗನಾರು?’ ಎಂದು ಕೇಳಿದರಷ್ಟೆ. ‘ತನ್ನ ಬಳಗದವ’ ಎಂದಿಷ್ಟೇ ಹೇಳಿ ರಹಮತ್ ಖಾನ ಪಾರಾದರು. ಕೇಳಿದ ಸುದ್ದಿಯನ್ನು ಮನೆಯಲ್ಲಿ ಬಿಲಾಸಖಾನನಿಗೆ ಹೇಳಲಿಲ್ಲ ಕೂಡ. ‘ತನ್ನ ತಂದೆ ಈಗೇಕೆ ಬರುವದನ್ನು ನಿಲ್ಲಿಸಿದ್ದಾರೆ? ಎಂದು ಬಿಲಾಸಖಾನ ಕೇಳಿಯೇ ಬಿಟ್ಟ. ‘ಬರುತ್ತಾರೆ ನಿಲ್ಲು. ಮುಂದಿನ ಬೈಠಕ್ ಒಂದು ವಾರವಿರುವ ಮುಂಚೆ ಬರುತ್ತಾರೆ, ರಿಯಾಝಿಗಾಗಿ. ಅಲ್ಲಿಯವರೆಗೆ ಕಾಲ ಕಳೆಯಲಿಕ್ಕೆ ಅವರಿಗೆ ಇನ್ನೆಂಟು ಮಕ್ಕಳು’-ತಬಲಜಿಯವರ ಬಿರುಸಿನಿಂದಲೇ ರಹಮತ್ ಖಾನ್ ಉತ್ತರಕೊಟ್ಟ.
ಅವರ ಹೆಂಡತಿ: ‘ಹೀಗೇಕೆ ಆ ಪರದೇಸಿ ಮಗುವಿಗೆ ಬಿರುಸು ಆಡುತ್ತೀರಿ? ಎಂದು ಕೇಳಿದಳು.
“ಅದು ಆಗುವದೇ ಹೀಗೆ, ಪಖಾವಜಿಯನ್ನು ಯಾರು ಕೇಳುತ್ತಾರೆ. ಎರಡು ಬಾರಿ ಅವರ ಲಯ ಸಂಭಾಳಿಸಿದೆ. ನನಗೇನು ಸಿಕ್ಕಿತು? ಎಲ್ಲರೂ ಮಿಯಾ ಸಾಹೇಬರನ್ನು ಹೊಗಳಿದರು. ನನ್ನನ್ನು ಮಾತಾಡಿಸಲಿಲ್ಲ. ಉಳಿದವರು ಹಾಳಾಗಲಿ, ‘ನೀನು ನನ್ನನ್ನು ಸಂಭಾಳಿಸಿದೆಯಪ್ಪಾ!’ ಎಂಬ ಎರಡು ಮುತ್ತು ತಾನಸೇನ ನಿರಂಜನ ಅವಧೂತನಿಂದ ಉದುರಬಾರದೆ? ಇನ್ನು ಮುಂದಿನ ದರಬಾರಿ ಬೈಠಕ್ಕು ಬರುವವರೆಗೆ ಅವರಾಯಿತು, ಅವರ ಹೆಂಡಂದಿರಾಯಿತು, ಅವರ ಮುದ್ದು ಮಗಳಾಯಿತು. ಇತ್ತ ಏಕೆ ಬರಬೇಕು ಅವರು?”
“ನಿಮ್ಮ ಮಗ ನಮ್ಮ ಮನೆಯಲ್ಲಿದ್ದಾನೆ ಎಂದು ಒಂದು ಮಾತು ನೀವು ಅವರೆದುರಿಗೆ ಹೇಳಬಾರದೇಕೆ?”
” ಅವರ ಅವ್ವ-ಹೆಂಡತಿ ನನಗೆ ಆಣೆ-ಚೂರಿ ಇಟ್ಟುಕೊಂಡಿದ್ದರೆ. ನಾನು ಹೇಳಿದರೆ ಇಲ್ಲ ಅವರು ಸಾಯಬೇಕು, ಇಲ್ಲ ನಾ ಸಾಯಬೇಕು. ”
ರಹಮತ್ ಖಾನರ ಪತ್ನಿ ಕಿವಿಮೇಲೆ ಕೈಯಿಟ್ಟು ಕೊಂಡಳು.
ಮುಂದೆ ಮೂರುತಿಂಗಳು ಅಂಥ ದರ್ಬಾರಿ ಬೈಠಕ್ ಆಗಲಿಲ್ಲ. ತಾನಸೇನ್ ಇತ್ತ ಬರಲಿಲ್ಲ.
ಮೊದಮೊದಲು ಬಿಲಾಸಖಾನ ಒಬ್ಬನೇ ಕುಳಿತು ತಂದೆ ತನ್ನನ್ನು ಮಾತಾಡಿಸಿದಂತೆ, ತಾನು ಉತ್ತರ ಕೊಟ್ಟಂತೆ ಕಲ್ಪಿಸಿಕೊಳ್ಳುತ್ತ ಸ್ವಗತ ಸಂಭಾಷಣೆ ಮಾಡತೊಡಗಿದ. ಆಟ-ಪಾಟಗಳಲ್ಲಿ ಅವನ ಉತ್ಸಾಹವೇ ಅಳಿಯಿತು.
ನಂತರ ಊಟವೂ ರುಚಿಸದಾಯಿತು, ಎಲೆಯ ಮುಂದೆ ವಿಷಣ್ಣನಾಗಿ ಕುಳಿತುಕೊಳ್ಳತೊಡಗಿದ.
ತಂದೆಯ ಭೇಟಿಯಾಗದ ಕಳವಳದಲ್ಲಿ ರಾತ್ರಿ ಸ್ವಲ್ಪ ಜ್ವರ ಏರತೊಡಗಿತು. ಮನೆಗೆ ಬಂದ ವೈದ್ಯರು ‘ವಿಷಮಶೀತ ಜ್ವರ’ವೆಂದು ಹೇಳಿ ಔಷಧಿ ಕೊಟ್ಟರು. ಆದರೂ ರಹಮತ್ ಖಾನರಿಗೆ ಚಿಂತೆಯಾಯಿತು. ಅಲ್ಲಿಂದ ಅವನು ಅತ್ರೌಳಿಗೆ ಪ್ರಯಾಣಮಾಡಿ ಒಂದೆರಡು ದಿವಸ ಇದ್ದು ಹಮೀದಾಬಾನುವನ್ನು ಕರೆತಂದ.
ಅಷ್ಟೊತ್ತಿಗೆ ಜ್ವರವೇರಿ, ಜ್ವರದ ಸಂಕಟದಲ್ಲಿ ಬಿಲಾಸಖಾನ ಬಡಬಡಿಸತೊಡಗಿದ. ತಾಯಿಯ ಆಗಮನದಿಂದ ತುಸು ಆರೈಕೆ, ಮಾನಸಿಕ ಸ್ವಾಸ್ಥ್ಯ ಬಂದೊದಗಿತು.
ಇನ್ನು ತನ್ನ ಹೊಣೆ ತೀರಿತೆಂದು ರಹಮತ್ ಖಾನ್ ಸಮಾಧಾನದ ನಿಟ್ಟುಸಿರೆಳೆದ.
*
*
*
ರಾಮಪ್ಯಾರಿಗೆ ಸಲೀಮನ ಕಾಟ ಅಸಃಯವಾಗತೊಡಗಿತು. ಜೊತೆಗೆ ತಾನಸೇನರ ಬಗ್ಗೆ ಹುಟ್ಟಿದ ಹಸಿವು ಆ ಬೈಠಕ್ ನಂತರ ಹೆಚ್ಚು ಉಲ್ಬಣವಾಗಿತ್ತು.
ಸಲೀಮ ಪೀಡಿಸುತ್ತಲೇ ಇದ್ದ.
“ಅಂದು ನಿನ್ನ ಪ್ರೀತಿಯ ಅವಧೂತನ ಕಡೆಗೆ ನೋಡಿದಂತೆ ನನ್ನ ಕಡೆಗೆ ಏಕೆ ನೋಡುವದಿಲ್ಲ? ಬೇಕಾದರೆ ನಾನೂ ತುಳಸಿ ಮಾಲೆ ಹಾಕಿಕೊಳ್ಳುತ್ತೇನೆ?”
“ನಾನು ಹೇಗೆ ನೋಡಿದೆ?”
ಇಷ್ಟೆಂದದ್ದಕ್ಕೆ ಅವಳು ಒರೆಸಿಕೊಂಡ ಕಣ್ಣೀರು, ಬಿಕ್ಕಳಿಕೆ, ‘ವಾಹವ್ವಾ’ಗಳ ಅಣಕು ಮಾಡಿ ತೋರಿಸಿದ.
“ಸಾಧು ಮಹಾರಾಜ ನಿನ್ನತ್ತ ನೋಡುತ್ತಲೇ ಹಾಡಿದ” ಎಂದು ವಿಕಾರವಾಗಿ ತಾನಸೇನರ ಹಾವಭಾವ ಅಣಕಿಸಿದ.
“ನೀವು ಎತ್ತರದವರು, ನಿಮ್ಮ ಕಡೆಗೆ ಸಾಧು ಮಹಾರಾಜ ಹೇಗೆ ನೋಡಿಯಾನು? ನಾನು ನೆಲದ ಮೇಲೆ ಕುಳಿತಿದ್ದೆ. ನನ್ನ ಕಡೆಗೆ ನೋಡಿರಬಹುದು. ”
“ನೀನು ನೆಲದ ಮೇಲೆ ಮಲಗಿದ್ದರೆ ಇನ್ನಷ್ಟು ನೋಡುತ್ತಿದ್ದ. ” ಎಂದು ಕೆನ್ನೆಗೆ ಹೊಡೆಯುವ. ಅವಳ ಕೆನ್ನೆ ಕೆಂಪಾದಾಗ, ‘ಅಂದೂ ನಿನ್ನ ಕೆನ್ನೆ ಇಷ್ಟೇ ಕೆಂಪಾಗಿತ್ತು’ ಎಂದು ಗಲ್ಲ ಹಿಂಡುವ.
ಹೀಗೆ ಮೂರು ತಿಂಗಳು ಕಳೆಯಿತು. ತನಗಾದ ವ್ಯಥೆಯನ್ನು ಮಿಯಾ ಸಾಹೇಬರಿಗೆ ಹೇಳಿಕಳಿಸಿದಳು. ತಾನು ಸೋಮವಾರ ವ್ರತ ಬಿಟ್ಟಿರುವೆನೆಂದೂ ಹೇಳಿಕಳಿಸಿದಳು. ಇಷ್ಟು ಜನ ವೇಶ್ಯೆಯರನ್ನು ಪಾದಸ್ಪರ್ಶದಿಂದ ಉದ್ಧಾರ ಮಾಡಿದ ನೀವು ನನ್ನನ್ನು ಏಕೆ ಉದ್ಧಾರ ಮಾಡುವದಿಲ್ಲ? ಎಂದು ಪ್ರಶ್ನೆ ಹಾಕಿದಳು. ನೀಲಕಂಠಭಟ್ಟ ತನ್ನ ಚಾತುರ್ಯವನ್ನೂ ಸಮೀಕರಿಸಿ ಅವಳ ಅಭಿಲಾಷೆಯನ್ನು ಮಿಯಾಜೀಯವರಿಗೆ ತಿಳಿಸಿದ. ಮಿಯಾಜಿ ಝಪ್ಪೆನ್ನಲಿಲ್ಲ. ‘ನನ್ನ ಹೆಂಡಂದಿರನ್ನು ಆಳುವದೇ ನನಗೆ ಭಾರವಾಗಿದೆ. ಸಲೀಮನ ಹೆಣ್ಣನ್ನು ಮತ್ತೆಲ್ಲಿ ಹೊರಲಿ?’ ಎಂದು ಹೇಳಿಕಳಿಸಿದರು.
*
*
*
ಕೊನೆಗೂ ಬಂತು ಸಲೀಮನ ಶೋಭನಪ್ರಸ್ತದ ದಿನ. ಆವರೆಗೆ ಉದಾಸೀನನಾದ ಸಲೀಮ ಅವನ ಕೆಲವು ರಸಿಕ ಮಿತ್ರರ ಹೇಳಿಕೆಯ ಮೇರೆಗೆ ಹೊಸ ಬಗೆಯ ಸವಿಯನ್ನು ನೋಡಿಯೇ ಬಿಡಬೇಕೆಂದು ಬಗೆದ. ಆವರೆಗೆ ಅವನಿಗಿದ್ದ ಅನುಭವವು ಈಗಾಗಲೇ ಮೂಸಿದ ನಿರ್ಮಾಲ್ಯಗಳ ಮಟ್ಟಿಗೆ ಸೀಮಿತವಾದವು. ಅಲ್ಲಿರುವ ಪ್ರಭುತ್ವ ಇಲ್ಲಿಯೂ ಇತ್ತು. ಆದರೆ ಇದು ಅನಾಘ್ರಾತ ಪುಷ್ಫದ ಸೊಬಗು. ತಾನಸೇನನನ್ನು ಸಿಕ್ಕಿಸುವ ತನ್ನ ವಿಫಲ ಸಂಚಿನ ಫಲ ಗಡಿಬಿಡಿಯ ಮದುವೆಯೆಂದು ತಾತ್ಸಾರ ತಳೆದ ಸಲೀಮ ತನ್ನ ಹೆಂಡತಿಯನ್ನು ಸರಿಯಾಗಿ ನೋಡಿರಲಿಲ್ಲ. ಶೋಭನಪ್ರಸ್ಥದ ಎರಡು ದಿನದ ನಂತರ ಅವಳು ಆಗಮಿಸಿದಳು. ಕೋಣೆಯಲ್ಲಿ ಕುಳಿತಾಗ ಕದ್ದು ನೋಡಿದ ಸಲೀಮನಿಗೆ ಅವಳ ನೀಳವಾದ, ಕೇಶರಾಶಿ, ತೆಳ್ಳನೆಯ ನಡ, ತುಂಬಿದ ಯೌವ್ವನ ಬಲು ಸೊಗಸಾಗಿ ತೋರಿದವು. ಜೊತೆಗೆ ಕೌಮಾರ್ಯಹರಣದ ಹೊಸ ಪರೀಕ್ಷೆ ಬೇರೆ. ಈ ಅನುಭವವನ್ನು ಪಡೆದೇತೀರಬೇಕೆಂದು ನಿರ್ಧರಿಸಿ ಮುನ್ನಾದಿನ ರಾಮಪ್ಯಾರಿಯ ಬಳಿಗೆ ಹೋಗಲಿಲ್ಲ. ಅನಾವಿದ್ದ ರತ್ನಕ್ಕೇ ಧಾರ್ಯ ಮಾಡಬೇಕಾದರೆ ಮಂತ್ರ ಸಾಮಗ್ರಿ ಗಟ್ಟಿ ಬೇಕಲ್ಲವೇ?
ಫಲಶೋಭನದಲ್ಲಿ ಮನೆಯ ಹೆಣ್ಣುಮಕ್ಕಳ ಕೆಲಸವೇ ಹೆಚ್ಚು. ವ್ಯವಹಾರಕ್ಕೆ ಚೌಧುರಾಣಿ ಮನೆಯ ಮಂದಿಗಾಗಿ ಸಣ್ಣಪ್ರಮಾಣದ ಸಂಗೀತವಿಟ್ಟುಕೊಂಡಳು. ಅದಾರಂಗ-ಸದಾರಂಗರಿಗೆ ಜುಗಲಬಂದಿ ಆಮಂತ್ರಣ ಹೋಯಿತು. ಅವರ ತಬಲಜಿಯೇ ಬೇರೆ. ರಹಮತ್ ಖಾನನಿಗೂ ಆಮಂತ್ರಣ ಬರಲಿಲ್ಲ. ಎಲ್ಲವೂ ಖಾಸಗಿ ಕಾರ್ಯಕ್ರಮ. ಇಂಥದಕ್ಕೆ ಮಿಯಾ ತಾನಸೇನ ಬರುವದೆಂದರೆ ಉಚ್ಚ ಕಲಾವಿದನಿಗೆ ಅವಮರ್ಯಾದೆಯೇ ಸರಿ.
ಇದೆಲ್ಲವನ್ನು ತಿಳಿದ ರಾಮಪ್ಯಾರಿಬಾಯಿ ಮತ್ತೆ ನೀಲಕಂಠಭಟ್ಟನನ್ನು ಓಡಿಸಿದಳು. ‘ಈ ಫಲಶೋಭನ ಸಮಯದಲ್ಲಿ ಎಲ್ಲ ರೀತಿಯಿಂದಲೂ ಮುಕ್ತರಾದ ಮಿಯಾ ತಾನಸೇನ ಬಂದು ತನ್ನ ಅಭೀಷ್ಟವನ್ನು ಪೂರೈಸಬೇಕು. ಇನ್ನು ಸಲೀಮನ ಭಯ ತೊಲಗಿತು. ಆತ ನನ್ನನ್ನು ನಿಮಗಾಗಿ ಸಾಕಷ್ಟು ನೋಯಿಸಿದ್ದಾನೆ. ನೀವು ಅವಧೂತರೇ ಆಗಿದ್ದ ಪಕ್ಷದಲ್ಲಿ ಈ ಬಡಪಾಯಿಯ ಅಭೀಷ್ಟ ಪೂರೈಸಬೇಕು. ಇಲ್ಲವಾದರೆ, ತುಳಸಿ ಮಾಲೆಯನ್ನು ಬಿಸುಡಬೇಕು. ’ ಎಂದು ಆಃವಾನ ಹೋಯಿತು. ಬೇರೆ ಉಪಾಯಗಾಣದೆ ತಮ್ಮ ಧರ್ಮ ಪೂರೈಸುವದಾಗಿ ತಾನಸೇನರು ಒಪ್ಪಿಕೊಂಡರು. ಆದರೂ ಬೊಬ್ಬಾಟವಾಗದಂತೆ ಛದ್ಮವೀಷದಲ್ಲಿ ಬರುವದಾಗಿ ತಿಳಿಸಿದರು. ನಾಡಿದ್ದು ಆಗುವದು ನಾಳೆಯೇ ಏಕಾಗಬಾರದು, ಎಂದು ಗೊಣಗಿದಳು ರಾಮಪ್ಯಾರಿ. . . . ‘ಹೂ ಎಂದಿದ್ದಾರೆ. ನಾಳೇ ಆಗಲಿ, ನಾಡಿದ್ದೇ ಆಗಲಿ, ಕಲ್ಪಾಂತರದಲ್ಲೇ ಆಗಲಿ! ಹಾಗೆ ಉತಾವೀಳ ಆಗಬೇಡ!’ ಎಂದು ನೀಲಕಂಠಭಟ್ಟ ಸಮಾಧಾನ ಹೇಳಿದ.
*
*
*
ಅದಾರಂಗ-ಸದಾರಂಗರ ಸಂಗೀತ ಶುರುವಾದೊಡನೆ, ಸಲೀಮ ಎದ್ದು ಒಳಗೆಹೋಗಿ, ತನ್ನ ಸೇವಕರ ಮುಖಾಂತರ, “ನನ್ನ ಹೆಂಡತಿ ಈಗಲೇ ಈ ಕ್ಷಣವೇ ಬರಬೇಕು” ಎಂದು ಹೇಳಿಕಳಿಸಿದ. ಚೌಧುರಾಣಿ ತನ್ನ ಧರ್ಮದಂತೆ, ‘ಸಾಗಲಿ ನಿಮ್ಮ ಹಾಡು’ ಎಂದು ಹೇಳಿ ತನ್ನ ಊಳಿಗದವರನ್ನೂ, ಬ್ರಾಃಮಣರನ್ನೂ, ಸೊಸೆಯನ್ನೂ ಕರಕೊಂಡು, ಆರತಿ ಬೆಳಗುವದಕ್ಕಾಗಿ ಒಳಗೆ ನಡೆದಳು. ಮಹಾರಾಣಿಯ ನಿರ್ಗಮನದಿಂದ ಕಲಾವಿದರ ಮುಖ ತುಸು ಮ್ಲಾನವಾಯಿತು. ಆದರೂ ಅವರು ಆಲಾಪದ ಕೆಲಸ ಬೇಗ ಬೇಗ ಮುಗಿಸಿ ಚೀಜ ಎತ್ತಿಕೊಂಡರು. ತಬಲಾ ಠೇಕಾ ಶುರುವಾಯಿತು. ಇದನ್ನೇ ಸಲೀಮ ಎದುರು ನೋಡುತ್ತಿದ್ದ. ತಬಲಾ ಠೇಕಾದೊಡನೆ ಹೆಂಡತಿಯೊಂದಿಗೆ ರಾಸಕ್ರೀಡೆ ನಡೆಸಬೇಕೆಂದು ಅವನ ಕಲ್ಪನೆ. ಚೌಧುರಾಣಿಗೆ ಆರತಿ ಬೇಗ ಮುಗಿಸಬೇಕೆಂದು ಕೇಳಿಕೊಂಡ. ಆಕೆ ನಸು ನಗುತ್ತ ಒಂದೇ ಆರತಿ ಹಾಡಿಗೆ, ಒಂದೇ ಶೋಭಾನದ ಹಾಡಿಗೆ ಅನುಮತಿ ನೀಡಿದಳು. ಅದಾದೊಡನೆ, ವಧೂ-ವರರನ್ನು ಕೊಣೆಯೊಳಗೆ ಹಾಕಲಾಯಿತು.
ಒಳಗೆ ಆದದ್ದೇ ಬೇರೆ. ತನ್ನ ಚಾರರ ಮುಖಾಂತರ ರಾಮಪ್ಯಾರಿ-ಸಲೀಮರ ಸಂಬಂಧವನ್ನು ಅರಿತ ಪ್ರಭಾವತಿ ತಾನೇ ಮಾತಿಗೆ ಮೊದಲು ಮಾಡಿದಳು:
“ರಾಮಪ್ಯಾರಿ ನನಗಿಂತ ಚೆಲುವೆಯಲ್ಲವೇ?”
ಮರುಮಾತಾಡದೆ ಸಲೀಮ್ ಅವಳನ್ನು ಹಿಡಿಯಲು ಹೋದ. ಹುಲ್ಲೆಯಂತೆ ಚೆಂಗನೆ ನೆಗೆದು ಪ್ರಭಾವತಿ ಪಲ್ಲಂಗದ ಆ ಬದಿಗೆ ನಿಂತಳು.
“ನನ್ನ ಸವಾಲಿಗೆ ಜವಾಬು ಕೊಡಿರಿ ಮೊದಲು. ”
“ನಿನ್ನ ಮುಖವನ್ನೇ ನೋಡಿಲ್ಲ. ಹೇಗೆ ಹೇಳಬೇಕು. ”
“ಈಗ ನೋಡಿದಿರಲ್ಲಾ! ಈಗ ಹೇಳಿರಿ. ”
“ನೀ ಹತ್ತಿರ ಬಾ. ಹೇಳುತ್ತೇನೆ. ”
“ನಾಚಿಕೆಯಾಗುವದಿಲ್ಲವೆ! ಅಗ್ನಿಸಾಕ್ಷಿಯಾಗಿ ನನ್ನ ಕೈ ಹಿಡಿದು. . . . ”
“ಅಗ್ನಿ-ಗಿಗ್ನಿ ಎಲ್ಲ ಚೌಧುರಾಣಿಯ ಕಾರಭಾರು. ನಮಗೇನು ಸಂಬಂಧವಿಲ್ಲ. ನಾವು ಮುಸಲ್ಮಾನರು. ಹೆಂಡತಿಯನ್ನು ಹೆಂಡತಿಯೆಂದೇ ನೋಡುವವರು. ”
“ಹಾಗಾದರೆ, ರಾಮಪ್ಯಾರಿ ನಿಮ್ಮ ಹೆಂಡತಿಯೇನು? ಮೂರು ತಿಂಗಳು ಆಕೆಯನ್ನು ನೋಡಿದಿರಲ್ಲಾ?”
ಇಂಥ ಮಾತಿನ ಚಕಮಕಿಯಲ್ಲಿ ಒಂದು ಗಂಟೆ ಹೊರಟುಹೋಯಿತು. ಕೊನೆಗೊಮ್ಮೆ ಪ್ರಭಾವತಿ, ಸಲೀಮನ ಕೈಗೆಟುಕಿದಳು. ಆದರೆ ಅಷ್ಟೊತ್ತಿಗೆ ಅದಾರಂಗ-ಸದಾರಂಗ ತಮ್ಮ ಚಿಕ್ಕ ಕಾರ್ಯಕ್ರಮವನ್ನು ಮುಗಿಸಿ ಮಂಗಳ ಹಾಡಿದ್ದರು. ತನ್ನ ರಾಸಕ್ರೀಡೆಗಾಗಿ ತಬಲಾಸಾಥಿ ಇಲ್ಲವಲ್ಲಾ ಎಂದು ಸಲೀಮ್ ಮಿಡುಕಿದ.
ಮುಂದೆ ಒಂದು ಗಂಟೆ ಸಲೀಮ್ ಸಾಕಷ್ಟು ಕಷ್ಟಪಟ್ಟು ದಣಿವುಗೊಂಡ. ಗ್ಲಾನಿ ಬರತೊಡಗಿತೆಂದು ಅರ್ಧಗಂಟೆ ನಿದ್ರೆಮಾಡಿ ಎದ್ದ. ಬಾಗಿಲು ತೆರೆಸಿ, ಸೀದ ಕುದುರೆಯನ್ನು ತರೆಸಿ ಹೊರನಡೆದ.
ಪ್ರಭಾವತಿ ಹ್ಯಾಗಿದ್ದಳೋ ಹಾಗೆಯೇ ಉಳಿದಳು.
ಮಿಯಾ ತಾನಸೇನರು ಕೋಣೆಯೊಳಕ್ಕೆ ಬಂದೊಡನೆ ರಾಮಪ್ಯಾರಿ ಅವರನ್ನು ಅಪ್ಪಿಕೊಂಡು ಕಂಬನಿ ಸುರಿಸತೊಡಗಿದಳು. ‘ಎಷ್ಟು ದಿನ ಕಾಯಿಸಿದಿರಿ? ನಾನು ಏನು ತಪ್ಪು ಮಾಡಿದ್ದೆ? ದಿಲ್ಲಿಯಲ್ಲಿ ನಿಮ್ಮ ಪಾದಸೇವೆ ಮಾಡಿದ ಆರು ಗಣಿಕೆಯರಿದ್ದಾರೆ. ನನ್ನ ಮೇಲೆ ಏಕೆ ಈ ಕೋಪ? ನಾನು ಅವರಿಗಿಂತ ಕೆಟ್ಟವಳೇ. . . . ’ಎಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ಅವಳನ್ನು ಸಾಂತ್ವನ ಮಾಡುವದರಲ್ಲಿ ಮಿಯಾಸಾಹೇಬರಿಗೆ ಸಾಕುಬೇಕಾಯಿತು. ಮಿಯಾ ಸಾಹೇಬರು ಚತುರ ಶೃಂಗಾರಿತರಲ್ಲಾ; ಅವಳ ದುಹ್ಖವನ್ನು ಹಾಸ್ಯವಾಗಿ ಪರಿವರ್ತಿಸುವ ಕಲೆ ಅವರಲ್ಲಿಲ್ಲ. ಅವರು ಸರಳ ಜೀವಿಗಳು. ಕವಿ ಹೃದಯ, ರಸಿಕ ಚಾತುರ್ಯ, ಬಲ್ಲವರಲ್ಲ. ದೇವದತ್ತ ಕಂಠ, ಗಾಯನ, ವಿದ್ಯೆ, ವಿರಾಗ ಜೀವನ, ಇವಿಷ್ಟನ್ನೇ ಬಲ್ಲವರು. ‘ಭಗವಂತ ಕೊಡುತ್ತಾನೆ, ನಾವು ಸ್ವೀಕರಿಸುತ್ತೇವೆ’ ಇಷ್ಟೇ ಅವರ ಜೀವನದ ಗುಟ್ಟು.
ಇಂಥ ಪವಿತ್ರ ಜೀವಿಯನ್ನು ನಾನು ಚುಂಬಿಸಲಿ ಹೇಗೆ? ಆಲಿಂಗಿಸಲಿ ಹೇಗೆ?. . . . ಇಂಥ ಸಮಸ್ಯೆಗಳು ಮೊದಲು ಅವರನ್ನು ಕಾಡಿದವು.
ಅಷ್ಟೊತ್ತಿಗೆ ರಾಮಪ್ಯಾರಿಯ ಬಿಕ್ಕಳಿಕೆ ರೋದನ ನಿಂತವು. ಆಕೆ ಸ್ಪಷ್ಟ ಉಚ್ಚಾರಣೆಯ ಮಾತು ಆಡತೊಡಗಿದಳು. ಆದರೆ ಆ ಮಾತುಗಳು ಮತ್ತಷ್ಟು ಗೊಂದಲಕ್ಕೆ ಕಾರಣವಾದವು.
ರಾಮಪ್ಯಾರಿ ಅವರನ್ನು ಬಣ್ಣಿಸಿದ ಪರಿ ಹೀಗೆ: “ನೀವು ಪವಿತ್ರ ಜೀವಿಗಳು; ದೇವಭಕ್ತರು; ಅವಧೂತರು. ನಿಮ್ಮ ಭಜನೆ ಕೇಳಿ ನಾನು ಪುಳಕಿತನಾಗುತ್ತಿದ್ದೆ. ಒಮ್ಮೆ ನೆನಪಿದೆಯೇ? ಸೋಮವಾರದ ಭಜನೆ ಮುಗಿಸುವಾಗ ನಾನು ಮೀರಾ ಭಜನೆ ಹೇಳಿದೆ: ‘ಮತ ಜಾ,ಮತ ಜಾ, ಮತ ಜಾ ಜೋಗಿ!’ ಅದು ನಿಮ್ಮನ್ನು ಉದ್ದೇಶಿಸಿದ ಹಾಡು. ನಿಮಗೆ ಗುರುತಾಯಿತೇ? ನೀವು ಯೋಗಿಗಳು. ನಾದಬ್ರಃಮರು. ಪರಮಾತ್ಮನನ್ನು ಕಂಡವರು. ನನ್ನಂಥ ಅಜ್ಞ ಪಾಮರರನ್ನು ನೀವೇ ಉದ್ಧಾರ ಮಾಡಿರಿ. ನಿಮ್ಮ ಕಾಲಿಗೆ ಬೀಳುತ್ತೇನೆ. ನೀವು ನಾರದ ಮಹರ್ಷಿಗಳ ಅವತಾರವೆಂದೇ ನಾನು ತಿಳಿದುಕೊಂಡಿದ್ದೇನೆ…”
ತಾನಸೇನ ಮಿಯಾರಿಗೆ ನಗಬೇಕೋ ಅಳಬೇಕೋ ತಿಳಿಯದಾಯಿತು. ಮಹರ್ಷಿಗಳ ಶ್ರೇಣಿಗೆ ರಾಮಪ್ಯಾರಿ ತಮ್ಮನ್ನು ಏರಿಸಿದ ಮೇಲೆ, ಕೆಳಗೆ ಇಳಿದು ಅವಳೊಡನೆ ಸರಸಮಾಡುವುದೆಂತು!-ಆಗಲಿ; ಅವಳೇ ಇನ್ನಿಷ್ಟು ಕರಗಿ, ನಾನೂ ಸಾಮಾನ್ಯ ಮನುಷ್ಯನೇ ಎಂದು ಅರಿಯಲಿ, ಎಂದು ಸಮಯ ಕಾಯುತ್ತ ಕುಳಿತರು.
“ಅಂತೂ ಕೊನೆಗೆ ಬಂದಿರಿ. ನಿಮ್ಮ ಪಾದಧೂಳಿಯಿಂದ ನನ್ನ ಕೋಣೆ ಪವಿತ್ರವಾಯಿತು. ನನ್ನನ್ನು ಸಲೀಮರಂಥವರಿಗೆ ಬಿಸುಟಲು ನಿಮಗೆ ಹೇಗೆ ಮನಸ್ಸಾಯಿತು? ನಾನು ನಿಮ್ಮವಳು, ಕಾಯ, ವಾಚಾ, ಮನಸಾ ನಿಮ್ಮವಳು. ಇದು ತಿಳಿಯಲಿಕ್ಕೆ ಇಷ್ಟು ದಿನ ಹಿಡಿಯಿತೇ?. . . ”
ಮಹಾರಾಯ್ತಿ, ವಾಚಾ-ಮನಸಾ ಬಿಟ್ಟುಬಿಡು. ನಾನು ಕಾಯಕರ್ಮಕ್ಕಾಗಿ ಇಲ್ಲಿ ಬಂದವನು. ನನ್ನನ್ನು ದೇವತ್ವಕ್ಕೆ ಏರಿಸಿ ಹದಗೆಡಿಸಬೇಡ, ಎಂದು ಹೇಳಿಬಿಡಬೇಕೆಂದು ಮನಸ್ಸಾಯಿತು.
ಈಗಾಗಲೇ ಎರಡು ಗಂಟೆ ಆಗಿ ಹೋಗಿತ್ತು. ಸುದೈವದಿಂದ ರಾಮಪ್ಯಾರಿ ವಿಷಯಕ್ಕೆ ಬಂದಳು. ದೀರ್ಘ ಆಲಿಂಗನ-ದೀರ್ಘ ಚುಂಬನಕ್ಕೆ ಮೊದಲು ಮಾಡಿದಳು.
ಅಷ್ಟರಲ್ಲಿ ಹೊರಗೆ ಏನೋ ಸದ್ದಾಯಿತು.
ಆಕೆಯ ಮನೆಯ ಮುಸಲ್ಮಾನ ಕಾವಲುಗಾರ ಓಡುತ್ತಾ ಬಂದು, ಬಾಗಿಲ ಹೊರಗಿನಿಂದಲೇ ಹೇಳಿದ: ‘ಸಲೀಮ ಶಹಜಾದೆ ಕುದುರೆಗೆ ಹೇಳಿರುವರಂತೆ, ಇತ್ತ ಕಡೆಗೆ ಬರಬಹುದು. ’
ರಾಮಪ್ಯಾರಿ ಧಿಡೀರನೆ ಬಾಗಿಲು ತೆರೆದಳು.
“ನಿಮಗೆ ಬೇಕಾದರೆ ನನ್ನ ಹೆಂಡತಿಯ ಬುರಖಾ ಇದೆ. ಪಂಡಿತಜಿ ಅದನ್ನು ಹಾಕಿಕೊಂಡು ನಿರಾತಂಕ ಹೋಗಬಹುದು. ”
“ಎಲ್ಲಿ? ತಾ” ಎಂದಳು ರಾಮಪ್ಯಾರಿ.
ಕಾವಲುಗಾರ ಓಡುತ್ತ ತನ್ನ ಕೋಣೆಗೆ ಹೋದ. ಒಳಗೆ ಅವನ ಹೆಂಡತಿ ನಿದ್ರೆ ಮಾಡುತ್ತಿದ್ದಳು. ಅವಳನ್ನು ಎಬ್ಬಿಸುವದು ತುಸು ತಡವಾಯಿತು. ಆಗಲೇ ನಿಶ್ಯಬ್ದ ನೀರವ ರಾತ್ರಿಯಲ್ಲಿ ದೂರಿಂದ ಕುದುರೆಯ ಖುರಪುಟ ಕೇಳಿಸಿತು.
ಅವರಿಗೆ ಬುರುಖಿ ತೊಡಿಸಿ, ಧಾನ್ಯದ ಬಿದಿರಿನ ಕಣಜದಲ್ಲಿ ಕೂಡಿಸಲಾಯಿತು. ತಾನಸೇನರ ಎದೆ ಡವಡವ ಬಡಿದುಕೊಳ್ಳುತ್ತಿತ್ತು.
ರಾಮಪ್ಯಾರಿ ಕೋಣೆಯ ಅಸ್ತವ್ಯಸ್ತ ಸಾಮಾನುಗಳನ್ನು ಸರಿಪಡಿಸಿ, ಹಣೆಗೆ ಅಂಜನವನ್ನು ಹಚ್ಚಿಕೊಂಡು, ತಲೆನೋವು ಇದ್ದವರಂತೆ ಮಲಗಿಕೊಂಡಳು.
ಹೊರಬಾಗಿಲು ತೆರೆಯುತ್ತಲೇ, ಸಲೀಮ ಹಸಿದ ಹುಲಿಯ ಹಾಗೆ ಒಳಗೆ ಧುಮುಕಿದ. ಮೆಟ್ಟಿಲ ಮೇಲೆ ನೆಗೆಯುತ್ತ ರಾಮಪ್ಯಾರಿಯ ಕೋಣೆಯಲ್ಲಿ ನುಗ್ಗಿದ.
“ಪ್ಯಾರಿ, ತಲೆನೋವೆ? ನಿದ್ದೆ ಹತ್ತಿಲ್ಲವೇ?” ಎಂದು ಸಲೀಮನ ಧ್ವನಿ.
“ಈಗೆಕೆ ಬಂದಿರಿ? ಹೊಸ ಹೆಂಡತಿ ಮನೆಯಲ್ಲಿಲ್ಲವೆ? ಈಗ ಹಸೆ ಏರುತ್ತಿರುವ ಪತ್ನಿಯಿಂದ ಗಂಡನನ್ನು ಅಗಲಿಸಿದ ಪಾಪ ನನ್ನ ಕೊರಳಿಗೆ ಕಟ್ಟಲಿಕ್ಕೆ ತಾನೆ?”
“ಅವಳ ಮಾತನ್ನು ಬಿಡು. ನಿನಗೆ ತಲೆಶೂಲಿಯೆ? ನಿನಗೆ ಮೈಲಿ ಸರಿಯಿಲ್ಲವೆಂದು ಯಾರೋ ಹೇಳಿದರು. ಹೇಗಿದ್ದೀ? ನೋಡಲಿಕ್ಕೆ ಬಂದೆ. ”
ಈ ಧೂರ್ತನ ಮಾತನ್ನು ಕಣಜದಿಂದಲೇ ಕೇಳಿದ ಮಿಯಾ ತಾನಸೇನರಿಗೆ ಹೆಂಗಸರ ವಿಷಯದಲ್ಲಿ ತಾವು ಎಷ್ಟು ಅನಭಿಜ್ಞರು ಎನಿಸಿತು.
“ಬಿಡಿರಿ ಈ ಬಣ್ಣದ ಮಾತು. ನಿನ್ನೆ ನೀವು ಬಂದು ಎರಡು ಮುದ್ದಿನ ಮಾತು ಹೇಳಿಹೋಗಬೇಕಾಗಿತ್ತು! ನನ್ನ ಹೆಂಡತಿ ಬಂದಳು, ನನ್ನ-ನಿನ್ನ ಸಂಬಂಧ ಹರಿಯಿತು. ಇಷ್ಟು ದಿನ ನಾನು ನಿನಗೆ ಸುಖಕೊಟ್ಟೆ. ನೀನು ನನಗೆ ಸುಖಕೊಟ್ಟೆ. ಆ ಕತೆ ಮುಗಿಯಿತು. ಇಷ್ಟು ಹೇಳಿದ್ದರೆ ನಿಮ್ಮ ಕಲ್ಪನೆಯ ಬಾಯಿ ಒಡೆಯುತ್ತಿತ್ತೇ? ನಿಮ್ಮ ಪ್ರಸ್ತದ ವಿಷಯವನ್ನು ನಾನು, ನಾನು ರಾಮಪ್ಯಾರಿ, ಮೂರನೆಯವರಿಂದ ಕೇಳಬೇಕಾಯಿತಲ್ಲಾ, ಇದು ನಾಚಿಕೆಗೇಡಲ್ಲವೇ? ನನ್ನ ಮಾತಿಗೆ ಮೊದಲು ಉತ್ತರಕೊಡಿರಿ. ಆಮೇಲೆ ಈ ಪಲ್ಲಂಗದ ಮೇಲೆ ನೀವು ನ್ಯಾಯವಾಗಿ ಕೂಡಬಹುದು”.
“ಪ್ಯಾರಿ, ನನ್ನದು ಸರ್ವಸ್ವ ತಪ್ಪಾಯಿತು. ನಿನ್ನ ಕಾಲಿಗೆ ಬೀಳುತ್ತೇನೆ. ಸಿಟ್ಟಾಗಬೇಡ”
“ಸಿಟ್ಟಿನದೇನು ಬಂತು! ನಿಮ್ಮ ಲಗ್ನವಾದದ್ದನ್ನು ಬಲ್ಲೆ. ಇಂಥ ದಿನ ಫಲಶೋಭನವಿದೆಯೆಂದು ಹೇಳಲಿಕ್ಕೆ ನಾಚಿಕೆ ಏನು? ಜಗತ್ತಿನಲ್ಲಿ ಇಲ್ಲದ ಕೆಲಸವೇ?”
“ಹೌದು, ಆ ಹೆಣ್ಣನ್ನು ಇನ್ನು ಮುಟ್ಟಲಾರೆ. ಒಂದು ತಾಸಾಯಿತು. ನನ್ನ ಮೈಯ ಬೆವರು ಇಳಿಯಿತು. ಆದರೆ ಆಕೆ ಹೆಣ್ಣಾಗಲಿಲ್ಲ. ”
“ಅದಕ್ಕೆ ಇಲ್ಲಿ ಬಂದಿರಾ?-ಸುಮ್ಮನೆ ಹೋಗಿರಿ. ನಾಳೆ ಬಾದಶಹರಿಗೆ ತಿಳಿದರೆ ನನ್ನನ್ನು ಶೂಲಕ್ಕೇರಿಸುವರು. ”
“ಪ್ಯಾರಿ, ಇದೊಂದು ರಾತ್ರಿ-ಕೊನೆಯ ರಾತ್ರಿ!”
“ಒಂದೇ ರಾತ್ರಿ ತಾನೆ? ವಚನಕೊಡಿರಿ. ನನ್ನ ಜೀವಕ್ಕೆ ಅಪಾಯವಾದರೆ ತಿಂಗಳಿಗೊಮ್ಮೆ ಕೂಡ ನನ್ನ ನೋಡುವದು ಸಿಕ್ಕಲಿಕ್ಕಿಲ್ಲ, ಜೋಕೆ!”
ಬಾಗಿಲು ದೊಪ್ಪನೆ ಬಡಿದುಕೊಂಡಿತು. ಒಳಗೆ ಚಿಲಕದ ಸದ್ದು ಕೇಳಿಸಿತು.
*
*
*
ಮಿಯಾಸಾಹೇಬರು ಕಣಜದಿಂದ ಜೋಪಾನವಾಗಿ ಕೆಳಗಿಳಿದರು. ಕಾವಲುಗಾರ ತಲಬಾಗಿಲು ತೆಗೆಯುವದಕ್ಕೆ ಹೊರಟ. ಮಿಯಾ ಹಿತ್ತಲುಬಾಗಿಲ ಕಡೆಗೆ ಬೊಟ್ಟು ತೋರಿಸಿದರು. ಆದಷ್ಟು ಸದ್ದಿಲ್ಲದೆ ಹಿತ್ತಲ ಬಾಗಿಲು ತೆಗೆದ ಕತ್ತಲಲ್ಲಿ ಮಿಯಾಸಾಹೇಬರು ಕಪ್ಪು ಬುರ್ಖಾದಲ್ಲಿ ಪರಿವ್ರತರಾಗಿ ಮಾಯವಾದರು.
ಹಿತ್ತಲಲ್ಲಿ ನಾಯಿ ನಿಂತಿತ್ತು. ವೇಶ್ಯೆಯರ ಮನೆಯ ನಾಯಿಗಳೂ ಚತುರವಿರುತ್ತವೆ. ಕಾವಲುಗಾರನನ್ನು ನೋಡಿ ಮನೆಯ ಒಳಕ್ಕೆ ಸೇರಿಕೊಂಡಿತು. ಕಾವಲುಗಾರ ಬಾಗಿಲು ಮುಚ್ಚಿಕೊಂಡ.
ಗಾಢಾಂಧಕಾರದಲ್ಲಿ ತಾನಸೇನ ಮೆಲ್ಲನೆ ಹೆಜ್ಜೆ ಇಡತೊಡಗಿದರು. ಆ ಮನ:ಸ್ಥಿತಿಯಲ್ಲಿ ಅವರಿಗೆ ತಮ್ಮ ಎಡಗೈ ಯಾವುದು? ಬಲಗಾಲು ಯಾವುದು ತಿಳಿಯುವದು ಶಕ್ಯವಿದ್ದಿಲ್ಲ. ನಡೆಯುತ್ತ ಒಂದು ನೀರಿನ ಹರಿಯನ್ನು ದಾಟಿ, ಇಷ್ಟುದ್ದ ಹೆಜ್ಜೆ ಇಟ್ಟು, ಕೊನೆಗೆ ಸೆಗಣಿ ಕಿಟ್ಟದ ಮೇಲೆಯೇ ಕಾಲು ಊರಿದರು. ಕಾಲು ಸಿಕ್ಕಿಕೊಂಡಿತು. ಸುದೈವದಿಂದ ಅದರ ದಂಡೆಯ ಮೇಲಿನ ಬಳ್ಳಿ ಹಿಡಿದು ಕಾಲು ಮುಕ್ತಗೊಳಿಸಲು ನೋಡಿದರು. ಕಾಲು ಬಿಡಿಸಿತು, ಚಪ್ಪಲಿ ಮಾತ್ರ ಕಿಟ್ಟದ ಪಾತಾಳಕ್ಕೆ ಇಳಿಯಿತು. ಇನ್ನೊಂದು ಚಪ್ಪಲಿಯನ್ನೂ ಅಲ್ಲಿಯೇ ಒಗೆದರು. “ನನಗೆ ಈ ರಂಡಿಯ ಬುರುಖಾನಾದರೂ ಏಕೆ ಬೇಕು?” ಎಂದು ಬುರುಖಾ ಆ ಕಿಟ್ಟದ ಮೇಲೆ ಹಾಸಿ, ಅದರ ಮೇಲೆ ದಾಟಿದರು. ಬಳ್ಳಿ ಬಡಕಲುಗಳನ್ನು ಒಸರಿಸಿ, ಬೀದಿಗೆ ಸೇರಿಕೊಂಡರು. ಅತ್ತ ಇತ್ತ ನೋಡಿ, ಎಲ್ಲಿದ್ದೇನೆ ಎಂಬುದನ್ನು ವಿಚಾರ ಮಾಡತೊಡಗಿದರು.
ಇದೇ ಓಣಿಯ ಆ ತುದಿಗೆ ಹೀಗೇ ಹೋದರೆ ಅಗೋ ಅಲ್ಲಿ ಕಾಣಿಸುವದು ರಹಮತ್ಖಾನನ ಮನೆ ಎಂದು ಗುರುತಿಸಿದರು.
*
*
*
ಮಿಯಾ ತಾನಸೇನರು ರಹಮತಖಾನನ ಮನೆ ಮುಟ್ಟಿದಾಗ ರಾತ್ರಿ ಸುಮಾರು ಒಂದು ಹೊಡೆದಿರಬಹುದೇನೋ. ದಿಲ್ಲಿಯ ಕೊರೆಯುವ ಚಳಿ, ಸೂ ಎನ್ನುವ ಗಾಳಿ, ಮನೆಯಲ್ಲಿ ಎಲ್ಲರೂ ಮಲಗಿದ್ದರು. ಒಂದೇ ದೀಪ ಉರಿಯುತ್ತಿತ್ತು. ತಾನಸೇನರು ಬಾಗಿಲು ತಟ್ಟಿದರು. ಮನೆಯಲ್ಲಿ ಒಬ್ಬಳೇ ಮಗಳು ಎಚ್ಚರವಿದ್ದಳೇನೋ, ಬಾಗಿಲು ಬಡಿದ ಸದ್ದಿಗೆ ಓಡಿ ಬಂದು ಪಿಸುದನಿಯಲ್ಲಿ ‘ಯಾರು? ಬಾಗಿಲು ಬಡಿಯಬೇಡಿರಿ. ಮಗು ಈಗ ತಾನೇ ಮಲಗಿದೆ. ಖಾನಸಾಹೇಬರನ್ನು ಎಬ್ಬಿಸುತ್ತೇನೆ’ ಎಂದಳು.
“ಹಾಂ” ಎಂದಿಷ್ಟೇ ನುಡಿದರು ಮಿಯಾಸಾಹೇಬರು.
ಮಿಯಾಸಾಹೇಬರ ಮೊಳಕಾಲುಮಟ ಸುಖರಆಲು ಸೆಗಣಿಯಲ್ಲಿ ಮಿಂದಿತ್ತಾದರೂ ಅವರ ತುಟಿಗಳ ಮೇಲೆ, ಎದೆಯ ಮೇಲೆ, ರಾಮಪ್ಯಾರಿಯ ದೀರ್ಘ ಚುಂಬನ ಆಲಿಂಗನದ ಅನುಭವ ಅಚ್ಚೊತ್ತಿದಂತಿತ್ತು. ಗುಂಗು ಅಳಿದಿರಲಿಲ್ಲ.
ರಹಮತ್ ಖಾನ್ ಸಾಹೇಬ್ ಆಕಳಿಸುತ್ತ, ಒಡ್ಡು ಮುರಿಯುತ್ತ, ಬಂದು ‘ಯಾರು’ ಎಂದ.
“ನಾನು ಬಾಗಿಲ ತೆರೆ, ರಹಮತ್” ಎಂದರು ಮಿಯಾ.
ರಹಮತ್ ಖಾನ್ ಒಮ್ಮೆಲೇ ಗಡಬಡಿಸಿ, ಎಚ್ಚೆತ್ತು, ‘ಹಾಂ, ಮಿಯಾ, ಖೋಲತಾ ಹೂಂ’ ಎಂದು ಬಾಗಿಲು ತೆರೆದರು.
“ರಸ್ತೆಯ ಮೇಲೆ ಕಾಲು ಜರೆಯಿತು, ಸುರುವಾಲಿಗೆ ಸೆಗಣಿ ಮೆತ್ತಿಕೊಂಡಿದೆ. ಕಾಲು ತೊಳೆಯಲಿಕ್ಕೆ ನೀರು ಕೊಡು. ನಿನ್ನ ಸುರುವಾಲು ಇದ್ದರೆ ಕೊಡು” ಎಂದು ಪಿಸುಗುಟ್ಟಿದರು. ಆಗ ಕಾಲಲ್ಲಿ ಚಪ್ಪಲಿಯಿಲ್ಲದ್ದು ನೆನಪಾಗಿ, ’ನಿನ್ನ ಚಪ್ಪಲಿ ಕೂಡ ಕೊಡು. ಅಲ್ಲಿಯೇ ಬಿಟ್ಟುಬಂದೆ’ ಎಂದರು.
“ಹಾಂ, ಹಾಂ. ಒಳಗೆ ಬಚ್ಚಲಕ್ಕೆ ಬರ್ರಿ” ಎಂದ ರಹಮತ್ ಖಾನ್. ಮಿಯಾ ಸಾಹೇಬ ಒಳಗೆ ನಾಡೆದರು.
ಎಚ್ಚರವಿದ್ದ ಹೆಣ್ಣುಮಗಳು ಮಿಯಾಸಾಹೆಬನನ್ನು ನೋಡಿ ಎದ್ದು ನಿಂತಳು.
ಮಿಣಿಮಿಣಿ ದೀವಿಗೆಯ ಬೆಳಕು ಆಕೆಯ ಮುಖದ ಮೇಲೆ ಬಿತ್ತು.
“ಎಲ್ಲಿಯೋ ನೋಡಿದ ಹಾಗೆ ಇದೆಯಲ್ಲ!” ಎಂದುಕೊಳ್ಳುತ್ತ ಮಿಯಾ ಸಾಹೇಬರು “ಊರಿಂದ ನಿಮ್ಮ ಜನ ಬಂದಿದ್ದಾರೆಯೇ?” ಎಂದು ರಹಮತ್ ಖಾನನನ್ನು ಕೇಳಿದರು.
“ಹೌದು” ಎಂದ ರಹಮತ್, ತುಸು ಗಡಸಾಗಿ.
ಆ ಕೋಣೆಯ ದೀವಿಗೆಯನ್ನು ಎತ್ತಿಕೊಂಡು ರಹಮತ್ ಮುಂದೆ ನಡೆದ, ಬಚ್ಚಲು ತೋರಿಸಲು.
“ಹೌದು” ಎಂದ ಧ್ವನಿಯ ಗಡುಸೇ ತಾನಸೇನ ಸಾಹೇಬರ ವಿಚಾರವನ್ನು ಬದಲಿಸಿತು.
“ಬಾದಶಹರ ಕೋಠಿಯಿಂದ ನಿನಗೆ ಸಲ್ಲತಕ್ಕ ಹಣ ಸಂದಾಯವಾಯಿತೇ?” ಎಂದರು. ರಹಮತನ ಕಡೆಗೆ ತಾವು ಲಕ್ಷ್ಯ ಕೊಟ್ಟಿಲ್ಲವೆಂಬ ಅಳುಕು ಹುಟ್ಟಿತು. ಅದಕ್ಕೆಂದೇ ಈ ಗಡಸು ಧ್ವನಿ.
“ಕೋಠಿ ನವಾಬರು ಮುಂದಿನ ವಾರ ಕಳಿಸುತ್ತೇನೆ ಎಂದರು. ”
ಮಿಯಾ ಕಾಶಿಯ ಕೆಂಪು ಪಂಚೆಯನ್ನು ಅಡ್ಡ ಸುತ್ತಿಕೊಂಡರು. ಸುರವಾಲು ಅಲ್ಲಿಯೇ ಬಿಟ್ಟರು. ಬಚ್ಚಲಿನಲ್ಲಿ ಒಣ ಹಾಕಿದ ಇನ್ನೊಂದು ಸುರವಾಲನ್ನು ರಹಮತ ಒದಗಿಸಿದ. ಪಂಚೆಯಿಂದ ಕಾಲು ಒರಸಿಕೊಳ್ಳುತ್ತ ಆಳವಾದ ವಿಚಾರದಿಂದ ಎಚ್ಚತ್ತವರಂತೆ ಹೇಳಿದರು.
“ಮುಂದಿನ ವಾರವೂ ಸಂದಾಯವಾಗದಿದ್ದರೆ ನನ್ನ ಕಡೆಗೆ ಬಾ, ನನ್ನ ಕೈಲಾದ ಮಟ್ಟಿಗೆ ಸದ್ಯಕ್ಕೆ ಮುಂಗಡ ಕೊಡುತ್ತೇನೆ. ”
“ಹೂಂ. ”
“ನಿನ್ನ ಹಣ ಸಂದಾಯವಾದ ಮೇಲೆ ಮುಟ್ಟಿಸುವಿಯಂತೆ. ”
“ಹೂಂ, ಸರಿ. ”
“ಮನೆಯಲ್ಲಿ ಮಗೂಗೆ ಜಡ್ಡು ಎಂದು ಆ ಹೆಂಗಸು ಹೇಳಿತಲ್ಲಾ, ಹಕೀಮರಿಗೆ ಕೊಡಲಿಕ್ಕೆ ಈಗ ಸಾಕಷ್ಟು ಹಣವಿದೆಯೇ?”
“ಹೂಂ. ಅಷ್ಟು ಇದೆ!”
“ಹಕೀಮರು ಏನೆಂದರು?”
“ಔಷಧ ಕೊಟ್ಟಿದ್ದಾರೆ. ಮುಂದೆ ದೇವರ ಇಚ್ಛೆ, ಎನ್ನುತ್ತಾರೆ. ”
“ನಾಳೆ ಬಾ. ನಾನು ಒಂದು ಚೀಟಿ ಕೊಡುತ್ತೇನೆ. ರಾಜವೈದ್ಯರಿಗೆ ಕೊಡು. ಬಂದು ನೋಡುತ್ತಾರೆ. ”
ಹೊರಗೆ ಬರುವಾಗ ನಿಂತ ಹೆಣ್ಣುಮಗಳು ನಿಂತಲ್ಲಿಯೇ ನಿಂತಿದ್ದಳು ಗರ ಬಡಿದವರಂತೆ. ರಹಮತ್ ದೀವಿಗೆಯೊಡನೆ ಮುಂದೆ ಸಾಗಿದ.
“ಅಯ್ಯೋ ಪಾಪ! ಜಾಗರಣೆ ಮಾಡಿ ಕಣ್ಣು ಇಷ್ಟಗಲವಾಗಿದೆ. ಆ ಹುಡುಗನ ತಾಯಿಯೋ ಏನೋ!” ಎಂದು ವಿಚಾರ ಮಾಡುತ್ತ ಪಡಸಾಲೆಗೆ ಸಾಗಿದರು. ದೀವಿಗೆ ಹಿಡಿದುಕೊಂಡೇ ರಹಮತ್ ಹಿಂಬಾಲಿಸಿದ.
ಇಷ್ಟಾದರೂ ತಾವು ಒಂದು ಒಳ್ಳೆ ಮಾತು ರಹಮತನಿಗೆ ಆಡಿಲ್ಲವಲ್ಲಾ ಎಂಬ ಅಳುಕು ಉಳಿದಿತ್ತು.
“ನಾನು ಅರ್ಧ ಮಾತ್ರೆ ಬೇಗನೇ ಸಮ್ಮಿಗೆ ಬಂದಿದ್ದೆನೆಂದು ತೋರುತ್ತದೆ. ಅದನ್ನು ನೀನು ಬೇಗ ಸಂ ತೋರಿಸಿ ಸರಿಪಡಿಸಿಕೊಂಡೆಯೆಂದು ನನ್ನ ಭಾವನೆ. ಧ್ರುಪದದ ಲಯಕಾರಿ ಅರ್ಥ ಮಾಡಿಕೊಳ್ಳುವವರು ದಿಲ್ಲಿಯಲ್ಲಿ ಕಮ್ಮಿ. ಆದರೆ ಆ ಲುಚ್ಚ ಮಾನಸಿಂಗ ತೋಮರ ಗುರುತಿಸಿದನೆಂದು ತೋರುತ್ತದೆ. ಗಲ್ಲದಲ್ಲೆ ನಕ್ಕಂತೆ ಮಾಡಿದ. ನಂತರ ಆ ಲುಚ್ಚ ಬಂದು ‘ಕ್ಯಾ ಲಯಕಾರಿ ದಿಖಾಯಾ’ ಅಂದ. ”
“ಆಪಕಿ, ದುವಾ ಎಂದು ಹೇಳಿದೆ. ”
“ಹೌದೇ? – ನಾನು ಕೇಳಲಿಲ್ಲ. ”
“ಅದಕ್ಕೆ ನಿನ್ನನ್ನು ಹೊಗಳಬೇಕು. ನೀನು ಮುಂಧೋರಣೆಯಿಂದ ಬಾರಿಸಿದೆ. ವಜನು ಸಂಭಾಳಿಸಿಕೊಂಡೆ. ”
ಈ ಮಾತನ್ನು ಹೇಳಬೇಕಾದರೆ ತಾನಸೇನರ ಧ್ವನಿ ತುಸು ಏರಿತೆಂದು ತೋರುತ್ತದೆ.
ಹಾಸಿಗೆಯ ಮೇಲೆ ಮಲಗಿದ ಬಿಲಾಸ ಖಾನ ದಿಗ್ಗನೇ ಎದ್ದು ಕುಳಿತು “ಬಾಬಾ, ಬಾಬಾ” ಎಂದು ಅರಚಿಕೊಂಡ.
ತಾಯಿ ಅವನನ್ನು ಎದೆಗೆ ಅವಚಿಕೊಂಡು, “ಸೋ ಜಾ ಬೇಟೆ, ಸೋ ಜಾ” ಎಂದು ಮಲಗಿಸಿ ಚುಕ್ಕು ಬಡಿಯತೊಡಗಿದಳು.
“ಪಾಪ, ಸಣ್ಣಮಗು. ಜ್ವರದ ತಾಪದಲ್ಲಿ ತಂದೆಯನ್ನು ನೆನೆಯುತ್ತಿದೆ! ಈಗ ಅವನ ವಯಸ್ಸು ಏನಿರಬೇಕು?”
“ಹದಿನೈದು. ”
“ಪಾಪ, ಚಿಕ್ಕದು. ನಾಳೆ ಚೀಟಿಗಾಗಿ ಬಾ. ನನಗೆ ನಿನ್ನ ಚಪ್ಪಲು ಕೊಡು. ಸರಿಯಾಗಿ ಔಷಧ ಕೊಡಿಸು. ದುಡ್ಡಿಗಾಗಿ ಯವುದೂ ನಿಲ್ಲುವದು ಬೇಡ. ತಿಳಿಯಿತೇ?”
ಇಷ್ಟು ಹೇಳಿ ಮಿಯಾ ಸಾಹೇಬರು ಮನೆಗೆ ನಡೆದರು.
*
*
*
ಮರುದಿನ ಮುಂಜನೆ ಚುಮುಚುಮು ನಸುಕಿನಲ್ಲಿ ರಹಮತ್ ಸ್ಕೀನಾಬಾನುವಿನ ಮನೆಗೆ ಬಂದು, ಬಾದಶಹರು ನಿಮ್ಮನ್ನು ಕರೆಸಿದ್ದಾರೆ ಎಂದು ಎಬ್ಬಿಸಿದ. ಸಕೀನಾ ಹಾಗೆ ಏಳಗೊಡುವವಳಲ್ಲ. ಬಾದಶಹರ ಹೆಸರು ಕೇಲಿ ಎಬ್ಬಿಸಿದಳು. ಬೇಗ ಮೋರೆ ತೊಳೆದುಕೊಂಡು, ಬೇರೆ ಸುರುವಾಲು ಧರಿಸಿ ಮಿಯಾ ಹೊರಟರು. ದಾರಿಯಲ್ಲಿ ಬಂಡಿ ತೆಗೆದುಕೊಂಡರು. ದಿಶೆ ಬದಲಾದೊಡನೆ, ಮಿಯಾ ಕೇಳಿದರು.
“ಇತ್ತ ಎಲ್ಲಿ ಹೊರಟೆ?”
“ನಂ ಮನೆಗೆ. ”
“ಬಾದಶಹರು ಕರೆದರೆಒದು ಹೇಳಿದೆಯಲ್ಲ. ”
“ಅಲ್ಲಾ ಬಡ ಬಾದಶಾಹ್ ಹೈ. ಕೌನ್ ಜಾನತ ಉಸಕಾ ಖೇಲ್. ”
ಆಗ ಚಕ್ಕನೆ ಮಿಯಾರಿಗೆ ಹೊಳೆದಂತಾಯಿತು.
“ನಿನ್ನೆ ನೋಡಿದ ನಿನ್ನ ಮಗುಗೆ ಈಗ ಹೇಗಿದೆ?”
“ಅದು ನನ್ನ ಮಗು ಅಲ್ಲ. ನಿಮ್ಮ ಮಗು. ಬಿಲಾಸಖಾನ!”
“ನಿನ್ನೆ ಯಾಕೆ ಹೇಳಲಿಲ್ಲ?”
“ನಿಮ್ಮ ತಾಯಿ, ನಿಮ್ಮ ಹೆಂಡತಿ, ನನಗೆ ಆಣೆ ಹಾಕಿ ನನ್ನ ಬಾಯಿ ಕಟ್ಟಿದರು. ”
“ನಿನ್ನೆ ನಿಮ್ಮ ಮನೆಯಲ್ಲಿ ರಾತ್ರಿಯೆಲ್ಲಾ ಎದ್ದು ಕುಳಿತಿದ್ದಳಲ್ಲಾ. ”
“ಅವರು ಹಮೀದಾಬಾನು. ದಿಲ್ಲಿಗೆ ಒಂದು ವಾರದ ಕೆಳಗೆ ಕರೆದುಕೊಂಡು ಬಂದೆ. ”
ಮಿಯಾ ಗಂಭೀರರಾದರು.
“ಈಗ ಹೇಗಿದ್ದಾನೆ, ಬಿಲಾಸಖಾನ?”
“ಬೆಳಗಿನ ಜಾವಕ್ಕೆ ಬೆವರು ಬಂದಿತ್ತು. ಆದರೆ ನಾಡಿ ಮಂದವಾಗಿದ್ದವು. ”
ಮಿಯಾರಿಗೆ ನೆಲವೇ ಕುಸಿದಂತಾಯಿತು. ಕ್ಂಗೆಟ್ಟರು. ಒಮ್ಮೆಲೆ ಮುದುಕರಾದಂತೆ ಆದರು. ಸೀದರು. ಕಣ್ಣಿನಲ್ಲಿ ಧಾರಾಕಾರವಾಗಿ ಹರಿಯತೊಡಗಿತು.
“ಮನುಷ್ಯನು ಮನುಷ್ಯನಿಗೆ ಇಷ್ಟು ನಿರ್ದಯತೆ ತೋರಿಸಬಾರದು. . . ”
“ಯಾರು ಯಾರಿಗೆ ನಿರ್ಧಯತೆ ತೋರಿದರು?”
ಮಿಯಾ ಮೂಕರಾದರು.
“ಕೌನ ಜಾನತಾ ಉಸಕಾ ಖೇಲ್?” ಎಂದ ರಹಮತ್.
ಟಂಗಾ ಮನೆಗೆ ಮುಟ್ಟುವಷ್ಟರಲ್ಲಿ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ರೋದನ ಕೇಳಿಸಿಕೊಂಡಿತು.
ಬಿಲಾಸಖಾನ ಅಸುದೊರೆದು ಕಾಲು ಗಂಟೆಯಾಗಿತ್ತು.
ಒಂದು ಮೂಲೆಯಲ್ಲಿ ಅಳುತ್ತ ಹಮೀದಾಬಾನು, “ಇವನಿಗಾಗಿ ನಾನು ಬದುಕಿದ್ದೆ. ಅಲ್ಲಾ ಇವನನ್ನು ಸೆಳೆದೊಯ್ದ. ನಾನು ಏತಕ್ಕಾಗಿ ಬದುಕುವುದು? ಕೆರೆ ಬಾವಿ ಪಾಲಾಗುತ್ತೇನೆ. ಗಂಗಾಮಾತೆಯಂತೂ ಇದ್ದೇ ಇದ್ದಾಳೆ. ಬಿಡಿರಿ ನನ್ನನ್ನು’ ಎಂದು ರಹಮತ್ ಖಾನನ ಪತ್ನಿ ಮಾಮೂಲಾನ್ ಕೈಯಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಳು. ಮಿಯಾ ಬಂದಕೂಡಳೇ ತನ್ನ ರೋದನ ಬಿಟ್ಟು ಮೂಲೆಯಲ್ಲಿ ಹೋಗಿ ನಿಂತಳು.
ಒಳಗೆ ಬಂದು ತಾನು ಹತ್ತು ವರ್ಷ ಕಾಣದ ಮಗು ಬಿಲಾಸಖಾನನನ್ನು ನೋಡಿದರು.
ತಮ್ಮೇದುರೇ ಕುಳಿತು, ತಮ್ಮ ಕರುಳಿಗೆ ತನ್ನ ಅಸ್ಫುಟ ಅಂತರಂಗದ ಕರೆಯನ್ನು ಮೂಕವಾಗಿ ಮಿಡಿಯುವಂತೆ ಮಾಡಿದ ಬಾಲಕ.
ಅವನನ್ನು ಎತ್ತಿ ತೊಡೆಯಮೇಲೆ ಕರಕ್ಂಳ್ಳಲು ಪ್ರಯತ್ನಿಸಿದರು. ಹೆಣ ಭಾರವಾಗಿತ್ತು. ಅಲುಗಾಡಲೊಲ್ಲದು.
ಹದಿನಾರು ವಯಸ್ಸು. ಹನ್ನೆರಡು ವರ್ಷದ ಕೃಶ ಆಕ್ರುತಿ. . . ತಮ್ಮ ಎದುರೇ ಸಭೆಯಲ್ಲಿ ಕುಳಿತು, ಹೊರಗಿನ ಮೌನಾಗಿ ತಮ್ಮ ಅಂತರಂಗವನ್ನು ಕಲಕಿದ ಬಾಲಕ. ಇನ್ನೂ ಸಭೆಯಲ್ಲಿ ಕುಳಿತು ಅಭಿಮಾನದಿಂದ ತಂದೆಯನ್ನೇ ನಿರುಕಿಸುತ್ತ ಕೂತಂತೆ ಭಾಸವಾಗಿ, ಮಿಯಾ ಅವನ ಮೇಲೆ ಕುಪ್ಪಳಿಸಿದರು. ಆದರೆ ದೇಹ ಕಾಟಿಗೆ ಮೊಳೆ ಬಡಿದಂತೆ ಎಳ್ಳಷ್ಟೂ ಅಲುಗಲಿಲ್ಲ.
ಆಗ ಮಾಮೂಲಾ ಬೇಗಂ ಹೇಳಿದಳು: ಪ್ರಾಣ ಹೋಗುವ ಮೊದಲು ಬಿಲಾಸಖಾನ ಕಣ್ಣು ತೆರೆದು ಕೇಳಿದ:’ಬಾಬಾ ಎಲ್ಲಿ? ಅವರ ಹಾಡು ಕೇಳಬೇಕಾಗಿದೆ’ ಎಂದು. ಈಗ ಹಾಡಿರಿ. ನಿಮ್ಮ ಹಾಡಿನಲ್ಲಿ ಪ್ರಾಣಶಕ್ತಿ ಇದ್ದರೆ ಅವನು ಪುನ: ಜೀವಂತನಾಗಲೂಬಹುದು.
ವ್ಯರ್ಥ ಆಸೆ. ಆದರೆ ಆಸೆಗೆ ಕೊನೆಯೆಲ್ಲಿ?
ಕಣ್ಣು ತಿಕ್ಕಿಕೊಳ್ಳುತ್ತ ಮಿಯಾ ತಾನಸೇನ ಎದ್ದು ಅವನ ಹಾಸಿಗೆಯ ಮೇಲೆಯೇ ಕುಳಿತರು.
ರಹಮತಖಾನನ ಮನೆಯ ಸಣ್ಣ ತಾನಪುರಾ ಎತ್ತಿಕೊಂಡರು.
ಬೆಳಗಿನ ಜಾವವಾಗತೊಡಗಿತ್ತು.
ಶ್ರುತಿಮಾಡಿ, ತೋಡಿ ರಾಗದ ಆಲಾಪನೆ ಮಾಡತೊಡಗಿದರು.
ಮೊದಲಿನ ಎರಡು ಸ್ವರ ಮಾತ್ರ ತೋಡಿಯಂತೆ ಹುಟ್ಟಿದವು.
ಉಳಿದ ಎಲ್ಲ ಸ್ವರಗಳು ಬೇರೆಬೇರೆಯಾಗಿದ್ದವು. ಅಳಲನ್ನೇ ತೋಡಿಕೊಂಡು ಹೇಳುತ್ತಿದ್ದವು. ಅದಕ್ಕೆ ತಕ್ಕಂತೆ ಶಬ್ದಗಳೂ ಹುಟ್ಟಿಕೊಂಡವು.
ರಾಗ ಬಿಲಾಸಖಾನಿ ತೋಡಿ ಜನ್ಮ ತಾಳಿತು.
ಮಿಯಾ ತಾನಸೇನರ ಮೊದಲ ಸ್ವತಂತ್ರ ರಾಗ; ಮೊದಲ ಸ್ವತಂತ್ರ ಕೃತಿ.
ಬಿಲಾಸಖಾನ ಜೀವಂತವಾಗಿ ಮತ್ತೆ ಏಳಲಿಲ್ಲ.
ಅವನ ಶವವು ಹೂವಿನಂತೆ ಹಗುರವಾಗಿ ಮಿಯಾ ತಾನಸೇನರ ಕೈಯಲ್ಲಿ ಆಡತೊಡಗಿತು.
ಮಿಆರ ಮನೆಯ ಹೆಣ್ಣುಮಕ್ಕಳೆಲ್ಲ ಹಟದವರು. ಒಂದೇ ಪಟ್ಟಿನವರು. ಬಿಲಾಸಖಾನ್ ಕೂಡ ಹಾಗೇ ಆದ. ಹಮೀದಾಬಾನು ಮರುದಿನವೇ ಅತ್ರೌಳಿಗೆ ಹೊರಟುಹೋದಳು. , ಮಿಯಾ ತಾನಸೇನರ ಜೊತೆಗೆ ಒಂದೂ ಮಾತಿಲ್ಲದೆ.
ಟಿಪ್ಪಣಿ
(೧) ತಾನಸೇನರ ಜೊತೆಗೇ ಶ್ರೇಷ್ಠ ವಾಗ್ಗೇಯಕಾರರಾದ ಅದಾರಂಗ-ಸದಾರಂಗರು ಅಣ್ಣತಮ್ಮಂದಿರು. ದಕ್ಷಿಣದಿಂದ ವಲಸೆ ಹೋದ ಗೋಪಾಲ ನಾಯಕ ಅಕ್ಬರ ಬಾದಶಹನ ದರಬಾರದಲ್ಲಿಯೇ ಇದ್ದರು. ಗೋಪಾಲ ನಾಯಕರಂತೂ ’ನಾಯಕೀ ಕಾನಡಾ’ ಎಂಬ ಹೊಸ ಶ್ರೇಷ್ಠ ರಾಗದ ನಿರ್ಮಾಪಕರು. ಅದಾರಂಗ-ಸದಾರಂಗರ ಕೃತಿಗಳು ಈಗ್ಯೂ ಹಾಡಲ್ಪಡುತ್ತವೆ. ಹಿದೂಸ್ತಾನೀ ಗಾಯಕಿಯಲ್ಲಿ ದೊಡ್ಡ ಮೊತ್ತದ ಕೃತಿಗಳು ಇವರವೇ. ಆದರೆ ಇವರನ್ನು ಬೇಡಲು ತಾನಸೇನರಿಗೆ ಮರ್ಯಾದೆ ಸಾಲಲಿಲ್ಲ. ಸದ್ಯಕ್ಕೆ ಪ್ರಚಲಿತ ಕೆಲವು ರಾಗಗಳು ಮಿಯಾ ತಾನಸೇನರ ಹೆಸರಿಗೆ ಸ್ಂಲಗ್ನವಾಗಿವೆ. ಮಿಯಾಕಿ ತೋಡಿ, ಮಿಯಾ ಮಲ್ಹಾರ, ಮಿಯಾ ಸಾರಂಗ ಇವು ತಾನಸೇನ ರಚಿಸಿದ ರಾಗಗಳಲ್ಲ. ಮೂಲ ರಾಗಗಳೇ. ದರ್ಬಾರಿನಲ್ಲಿ ಹಾಡಿ ಅವುಗಳ ಸೌಂದರ್ಯವನ್ನು ತೋರಿಸಿಕೊಡುವದರಲ್ಲಿ ಮಿಯಾ ತಾನಸೇನನ ಕೆಲಸ ಹಿರಿದು. ಎರದು ತಂಬೂರಿಗಳಿಗೂ ಸಾಲದ ಕಂಠ. ಗಂಭೀರವಾಗಿ ದಶದಿಕ್ಕುಗಳನ್ನೂ ನಿನದಿಸುವ ಧ್ವನಿಯ ಜವಾರಿ, ಬೀನ(ರುದ್ರವೀಣೆ)ಗೆ ಸರಿಸಮಾನವಾದ ನೊಂತೊಂ ಆಲಾಪ, ಒಂದೊಂದೂ ಸ್ವರದ ಬಿಲಂಪತ ಕೆಲಸ, ಇಂಥ ವೈಶಿಷ್ಟ್ಯಗಳಿಂದ ಮಿಯಾ ತಾನಸೇನ ಮಹಾರಾಜರು ಬೀನನ್ನು ಕೂಡ ಹಿಂದಕ್ಕೆ ಒಗೆದುಬಿಟ್ಟರು. ಈ ವಿಷಯವನ್ನು ನನ್ನ ಅಪ್ರಕಟಿತ “ದಿ ಕಾಂಟ್ರಿಬೂಷನ್ಸ್ ಆಫ್ ಬೀನ್ ಅಂಡ್ ಸಿತಾರ್ ಟು ದಿ ಮೇಕಿಂಗ್ ಆಫ್ ಹಿಂದೂಸ್ತಾನೀ ಘರಾಣಾಸ್” ಲೇಖನದಲ್ಲಿ ಚರ್ಚಿಸಿದ್ದೇನೆ. ಈಗಿರುವ ಗಾಯಕಿ ಘರಾಣಾಗಳು ಮಿಯಾ ತಾನಸೇನರ ಪರಿಪೂರ್ಣ ಗಾಯಕಿಯ ಒಂದೊಂದು ಅಂಗವೆಂದೂ, ಬೀನಿನಲ್ಲಿ ಹೊರಡುವ ಎಲ್ಲ ಕೆಲಸಗಳನ್ನು ಕಂಠದಿಂದ ಅದರ ಪ್ರಚಾರವನ್ನು ಹಿಮ್ಮೋರು ಮಾಡಿದರೆಂದು ಪ್ರತಿಪಾದಿಸಿದ್ದೇನೆ. ಮಿಯಾ ತಾನಸೇನರು ಹಾಡಿದರೆಂದು ಹೆಸರಾದ ಹಿಂದೂಸ್ತಾನಿ ರಾಗಗಳನ್ನು – ಮಲ್ಹಾರ, ಸಾರಂಗ, ತೋಡಿ – ಪರೀಕ್ಷಿಸಿ ನೋಡಿದರೆ, ಮಿಯಾ ತಾನಸೇನರ ಧ್ವನಿ ಹೇಗಿರಬಹುದೆಂಬುದನ್ನು ನಿರ್ಣಯಿಸಲಿಕ್ಕೆ ಸಾಧ್ಯ. ಮೂರೂ ಗಂಭೀರ ರಾಗಿಣಿಗಳು. ಅವುಗಳ ಗಂಭೀರ ನಿಸ್ವನಗಳನ್ನು ಹುಟ್ಟಿಸಲಿಕ್ಕೆ ಯಾವ ಕಂಠ ಬೇಕು ಎಂಬುದನ್ನು ಕಲ್ಪಿಸಿದರೆ, ಅವರ ಗಾಯಕಿಯ ಗುಟ್ಟು ತಿಳಿಯುವದು. ಇನ್ನು ಕೆಲವು ಧ್ರುಪದ-ಧಮಾರಗಳನ್ನು ಅವರು ಹಾಡಿದರೆಂದು ತಿಳಿಯಲಾಗುತ್ತಿದೆ. ಅವುಗಳ ಶಬ್ದಸೌಷ್ಠವ-ಅರ್ಥಗೌರವಗಳೂ ಅಷ್ಟಕ್ಕಷ್ಟೇ. ’ಶಾಃಅ ಅಕಬರ ಛತ್ರಪತಿ ಮಹಾಭಾಗ, ಮಹಾಜ್ಞಾನಿ, ಮಹಾಯೋಗಿ’ – ಇನ್ನೂ ಇಪ್ಪತ್ತರಷ್ಟು ಮಹಾಗಳು ಬರುತ್ತವೆ, ‘ಸೋ ಸೋ ಮುಬಾರಕ್’ದಂತೆಯೇ. ಈ ಚೀಜುಗಳನ್ನು ಅದಾರಂಗ-ಸದಾರಂಗ ಚೀಜುಗಳಿಗೆ ಹೋಲಿಸಿದರೆ ಅರ್ಥದಮಟ್ಟಿಗೆ ತಾನಸೇನರು ಕವಿಗಳಲ್ಲವೆಂದೇ ಹೇಳಬೇಕು. ಅವರ ಮಹತ್ವ ಹಿಂದೂಸ್ತಾನಿ ಗಾಯಕೀ ಶೈಲಿಯ ಪ್ರಾಣಪ್ರತಿಷ್ಠಾಪನೆಯಲ್ಲಿ ಮಾತ್ರ.
(೨) ಈ ವಿಶೇಷ ಸಂಗತಿಯನ್ನು ನನಗೆ ಸೋದಾಹರಣಪೂರ್ವಕವಾಗಿ ಉಸ್ತಾದ ಫರೀದುದ್ದೀನಖಾನ್ ಡಾಗರ್ ಅವರು ತಿಳಿಸಿದರು. ಭರತ ಮುನಿಯ ಮೂಲ ಶ್ಲೋಕಗಳನ್ನೂ ಹೇಳಿದ್ದರು. ಇದರ ಬಗ್ಗೆ ವಿಶೇಷ ಸಂದರ್ಶನದ ವರದಿಯನ್ನು ೧೯೭೯ನೇ ಇಸ್ವಿಯಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ. ಕುತೂಹಲವಿದ್ದವರು ನೋಡಬಹುದು. ಖಾನ್ ಸಾಹೇಬರು ಆಗ ನನ್ನೆದುರು ಪ್ರದರ್ಶಿಸಿದ ರಾಗಗಳು ಎರಡು – ’ಬಿಹಾಗ’ ಮತ್ತು ’ದರಬಾರೀ ಕಾನಡಾ’. ಅವುಗಳ ಷಡ್ಜಗಳಲ್ಲಿದ್ದ ಅಂತರವನ್ನು ಎತ್ತಿ ತೋರಿಸಲಿಕ್ಕೆ ಅವರು ಒಂದು ಬಿಹಾಗದ ವರ್ಣ, ಒಂದು ದರಬಾರಿಯ ವರ್ಣ ಹಾಡಿ ತೋರಿಸಿದರು. ಎರಡೂ ಸ್ಪಷ್ಟವಾಗಿ ವಿಭಿನ್ನವಾಗಿದ್ದವು. ’ಗುರು ಮುಖೇನ’ ಎನ್ನುವದು ಇದಕ್ಕಾಗಿಯೇ ಎಂದು ವಿವರಿಸಿದರು.
*****