ಕಲಾವಿದ ಪುಟ್ಟಣ್ಣ ಕಣಗಾಲ್

ಸಾಯುವ ಮುನ್ನ ಶ್ರೀ ಪುಟ್ಟಣ್ಣ ಕಣಗಾಲ್ ತಮ್ಮ ಆದರ್ಶದ ಕಲೆಯ ಹೀರೋನಂತೆ ತಾವೇ ಕಾಣುತ್ತಿದ್ದೀರು. ಹಾಗೇ ಆಗಿದ್ದರು ಕೂಡ-ಅವರನ್ನು ಬಲ್ಲವರು ಹೇಳುವಂತೆ. ದುಃಖದ ಉತ್ಕಟತೆಯಲ್ಲಿ ಬದುಕು ಅರ್ಥಗರ್ಭಿತವಾಗುತ್ತದೆ ಎಂಬ ವಿಚಾರವನ್ನೆ ತನ್ನ ತಿರುಳಾಗಿ ಪಡೆದುಕೊಂಡ ರಮ್ಯ ಸಂಪ್ರದಾಯಕ್ಕೆ ಸೇರಿದ್ದ ಪುಟ್ಟಣ್ಣನವರ ಯಶಸ್ಸು ಮತ್ತು ಸಾವು- ಎರಡೂ ನಮ್ಮ ಮನಸ್ಸನ್ನು ಕಲಕುವಂತಿವೆ. ಮಧ್ಯಮವರ್ಗದ ಪ್ರೇಕ್ಷಕರ ನೀರಸ ಬದುಕಿಗೆ ಕೆಲವು ಕ್ಷಣಗಳ ಉತ್ಕಟತೆಯ ಭ್ರಮೆಯನ್ನು ಉಂಟುಮಾಡುವುದಕ್ಕಾಗಿ ಮಾತ್ರ ಪುಟ್ಟಣ್ಣನವರ ಕಲೆಗಾರಿಕೆ ವ್ಯಯವಾದದ್ದು ಒಂದು ದುರಂತ. ಆದರೆ ತೆರೆಯ ಮೇಲೆ ತಮ್ಮ ಭಾವುಕತೆಯಲ್ಲಿ ಅವರು ಕಾಣಿಸುತ್ತಿದ್ದ ಶೋಕರಸವನ್ನು ತಮ್ಮ ಸ್ವಂತ ಜೀವನದ ಆರ್ಥಿಕ ಸೋಲುಗಳಲ್ಲೂ, ಪ್ರೇಮದಲ್ಲೂ- ದುರಂತದಲ್ಲೂ, ಅದೂ ಕೂಡಾ, ಪ್ರೇಕ್ಷಕರಿಗೆ ಕಾಣುವಂತೆ ಮತ್ತು ಪ್ರೇಕ್ಷಣಿಯವೂ ಆಗುವಂತೆ ಬದುಕಿ ಸತ್ತ ಪುಟ್ಟಣ್ಣಕಣಗಾಲ್ ತಮ್ಮದೇ ಬಗೆಯಲ್ಲಿ ತಾವು ನಂಬಿದ್ದನ್ನು ಅಧಿಕೃತಗೊಳಿಸಿಬಿಟ್ಟರು. ಕಲೆಯ ಪ್ರಪಂಚದಲ್ಲಿ ಪುಟ್ಟಣ್ಣನಂಥವರು ಒಂದು ರೀತಿಯ ಸ್ವಪ್ರತಿಷ್ಠೆಯ ಭಾವುಕ ಹೀರೋಗಳಾದರೆ, ಕಲೆಯ ಪರಿಪೂರ್ಣತೆಗಾಗಿ ತನ್ನನ್ನು ತಾನು ಸಂಪೂರ್ಣ ಸವೆಸಿಕೊಂಡು ಬಿಡುವ ಫ್ರೆಂಚ್ ಕಲಾವಿದ ಫ್ಲಾಬೆ ಇನ್ನೊಂದು ಬಗೆಯವನು: ತನ್ನ ಕೃತಿ ಮಾತ್ರ ಬೆಳಗುವಂತೆ ತಾನು ಮರೆಯಲ್ಲಿ ನಿಲ್ಲುವವನು.

ದಾರುಣವಾದ ದುಃಖ ಪ್ರೇಕ್ಷಣಿಯವಾಗಬೇಕೆಂಬ ಹೊಂಚು ಇದ್ದಲ್ಲೆಲ್ಲಾ ನಮ್ಮನ್ನು ಅದು ಸತ್ಯದರ್ಶನದ ದಿಗ್ಭ್ರಮೆಯಲ್ಲಿ ತೊಳಲಿಸುವುದಿಲ್ಲ. ಬದಲಾಗಿ ಆಪ್ಯಾಮನವಾಗಿ ಬಿಡುತ್ತದೆ. ಪ್ರೇಮವಂಚಿತನೊಬ್ಬ ಕಲಾಕೃತಿಯಲ್ಲಿ ನಾವು ಪರಮಾದರದಿಂದ ಆರಾಧಿಸುವ ಹೀರೋ ಆಗಬಹುದು.ನಿಜ ಜೀವನದಲ್ಲಿ ಅವನು ಕೊಂಚ ಹಾಸ್ಯಸ್ಪದನಾಗುತ್ತಾನೆ. ಇಂಥ ಅರಿವಿನಿಂದಲೇ ಹುಟ್ಟುವ ಕಲೆ ನಮ್ಮ ಅರಿವನ್ನು ಏರಿಸಿ ಒಪ್ಪಿಸಿಕೊಳ್ಳುತ್ತದೆ; ಇಳಿಸಿ ಮೆಚ್ಚಿಗೆಯ ಸಹಾನುಭೂತಿ ಪಡೆಯಲು ಹವಣಿಸುವುದಿಲ್ಲ. ಓದುಗನನ್ನು ಏಕಾಂಗಿಯಾಗಿ ಪಡೆದುಕೊಂಡ ಅವನ ಜೊತೆ ಮಾತಾಡುವ ಸಾಹಿತ್ಯದಲ್ಲೇ ಈ ಬಗೆಯ ಅರಿವು ದುರ್ಲಭವಾಗಿರುವಾಗ, ಅವನನ್ನು ಸಮೂಹದಲ್ಲಿರುವ ಸಾಮಾಜಿಕನನ್ನಾಗಿ ಪಡೆಯುವ ದುಬಾರಿ ಸಿನಿಮಾದಲ್ಲಂತೂ ಅದು ಅಸಾಧ್ಯವೇನೋ ಎನ್ನಿಸುವಂಥ ಸವಾಲಾಗಿಬಿಟ್ಟಿದೆ. ಪುಟ್ಟಣ್ಣ ಕಣಗಾಲ್ ತಾವು ಹಾಕಿಕೊಂಡ ಹಾದಿಯನ್ನು ತುಳಿಯಬಲ್ಲ ಕನ್ನಡದ ಶ್ರೇಷ್ಠ ನಿರ್ದೇಶಕರಾಗಿದ್ದರಿಂದ, ಅವರು ಅಂಥ ಸವಾಲನ್ನು ಎದುರಿಸುವ ಮೊದಲೇ ಸತ್ತರೆಂಬುದು ದುಃಖದ ಸಂಗತಿ.
*****
ರುಜುವಾತು. ೨೬, ಏಪ್ರಿಲ್-ಜೂನ್-೮೫

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.