ಚರಮಗೀತೆ

ಇರುಳು ಹೊರಳಿತು ಜೀವ ನರಳಿತು ಕತ್ತಲೆಯೆ ಚೀರಿಟ್ಟಿತು.
ಏನ ಬಯಸಿದರೇನಿದಾಯಿತು – ಆಗಬಾರದುದಾಯಿತು;
ವಿಷಮ ಬಾಳಿಗೆ ವಿಷಮಜ್ವರವೇ ಹೊಂಚು ಹಾಕಿತು ಹಿಂಡಿತು
ಮಾನವನ ಇಷ್ಟಾರ್‍ಥ ಶಕ್ತಿಗು ಯುಕ್ತಿಗೂ ಕೈಮೀರಿತು.

ನಡುವರಯದಲ್ಲಿಂತು ಝಂಝಾವಾತವೇತಕೆ ಬೀಸಿತೊ
ಬಾಳಗಿಡ ಬುಡಮುಟ್ಟವಲುಗಿತು ಬೇರ್‍ವೆರಸಿ ಅಡಗೆಡೆಯಿತು
ಚಿಗುರು ಹೂ ಮಿಡಿ ಸಿಡಿದು ಚೆಲ್ಲಾಪಿಲ್ಲಿಯಾಯಿತು ಗೊಂಚಲು
ಎಂಥ ಗಂಡೆದೆಯಾದರೂ ತಲೆದಂಡ ವಿಧಿಗೆತ್ತತ್ತಲು!

ಜೀವ ಜೀವಕೆ ಬೆಸೆದುಕೊಂಡಿದ್ದವಗೆ ಕರುಣಾಮೂರ್‍ತಿಗೆ
‘ಮೂಜಗಕೆ ಮಾದರಿಯು ನಮ್ಮೀ ಒಲವು’ ಎನ್ನುವ ಜೀವಿಗೆ
ಇಂತು ಕೊನೆಯೇ ಶಿವಶಿವಾ! ಇನ್ನೆಂತು ಬದುಕುವ ರೀತಿಯು?
ಇದ್ದಕಿದ್ದೊಲೆ ಇಲ್ಲವೆನಿಪುದೆ ವಿಧಿಯ ನಿಷ್ಠುರ ನೀತಿಯು!

‘ನನ್ನವರು ನನ್ನವರು ಎಲ್ಲರು’ ಎಂಬುದೊಂದೇ ಚಿಂತನೆ
ಪರಹಿತದಿ ಪರಮಾತ್ಮಾನನ್ನೇ ಕಂಡು ಕೊಂಡಾಡಿದನೆನೆ
ತನ್ನ ಅಳಲಿಕೆ ತನ್ನ ಬಳಲಿಕೆ ಒಂದನಾದರು ನೆನೆಯದೆ
ಒಳಗೆ ಒಳಗೇ ನುಂಗಿ ನಗುತಿರಲಯ್ಯಾ ಮಿಂಚಿದೆ ಮೀರಿದೆ!

ಹೊರಗೆ ಹೋದರೆ, ಒಳಗೆ ಬಂದರೆ ನೀನೆ ನೀನೇ ಬಳಿಯಿರೆ
ಯಾವ ಪುಣ್ಯದ ಫಲವೊ ಸ್ನೇಹವು ನಮ್ಮ ಚಿರಬದುಕಾಗಿರೆ
ಎಂಥ ನೋವಿಗು ನರಳಿಕೆಗು ಗಳೆತನವೆ ತೈಲವನೆರೆಯಿತು
ಬಾಳಿನುದ್ದಕು ಅಮೃತವಾಹಿನಿ ಎದೆಗದೆಯ ಸಂಗಮಿಸಿತು.

ನಿನ್ನ ಹೃದಯದ ದೊಡ್ಡಿತೆಗೆ ನಮ್ರತೆಗೆ ಘನ ಔದಾರ್‍ಯಕೆ
ಕವಡು ಹೊದ್ದದ, ಕೃತಕವರಿಯದ ಮುಗ್ಧ ಮನ ಮಾಧುರ್‍ಯಕೆ
ಏನು ಕೊಟ್ಟರು ತೀರದಯ್ಯೋ ಏನು ಕೊಟ್ಟರು ಬಾರದು! ಪರಮ ಪ್ರೀತಿಗೆ ಪ್ರೀತಿಯೇ ಪ್ರತಿಫಲವು ಉಳಿದುದು ಸಲ್ಲದು.

ಒಂದೆ, ಎರಡೇ? ಗಣನೆಗರಿಯದು ನೀನು ಮಾಡಿದ ಉಪಕೃತಿ
ಹಾಡಿಕೊಂಡರು ತೋಡಿಕೊಂಡರು ಮರೆಯಲಾಗದ ಸಂಸ್ಕೃತಿ.
ಅಳಿಯಲಾರದು ಜೀವಜೀವಾಳದಲಿ ಜಿನುಗುವ ಝೇಂಕೃತಿ
ನೆನಹು ಗಂಧದ ಕರಡಿಗೆಯು ಮತ್ತದುವೆ ಚಿನುಮಯ ಮೂರುತಿ.

‘ಈಗ ಇಲ್ಲಿಯ ಹೋಗಿ ಬರುವೆನು’ ಎಂದು ಹೊರವಂಟಂತೆಯೆ
ದೂರ ದೂರದ ದಾರಿಯನು ನೀ ಹಿಡಿದು ಸಾಗಿದ ಅಂತೆಯೆ;
ಮರಳಿ ಬಾರದ ಭಾಗ್ಯವೇ ಇಂತಾಡಿಸಿತು ಏಡಿಸಿತಲಾ!
ಬಾಳು ಬಿತ್ತರಗೊಂಡ ನೀಲಾಂಬುಧಿಯ ತೆರೆಗೈ ಚೆಂಡಲಾ!

ಆಗ ಇದ್ದವನೀಗ ಇಲ್ಲಿನ ಬಾಯಿ ಬರದಂತಾಗಿದೆ
ಬಪ್ಪುದೆಲ್ಲವು ತಪ್ಪದೆಂದರು ಮನಕೆ ಒಪ್ಪದ ಹೋಗಿದೆ.
ನೆನೆಯಲೊಡನೆಯೆ ಧುಮುಧುಮಿಸಿ ದುಡುಕುವವು ಧಮನಿಯು ಧಮನಿಯು
ಜೀವರತ್ನವ ಕಳೆದುಕೊಂಡವರಂತೆ ಹುಡುಕುವೆ ಮೌನಿಯು.

ಸಂಜೆ ಮುಂಜಾವಿನಲಿ ಕೂಡಿಯೆ ಬೆಟ್ಟ ಬನಗಳನಲೆದೆವು
ಸೃಷ್ಟಿಹೃದಯದ ರೂಪರಸಗಂಧದಲಿ ನಮ್ಮನೆ ಮರೆದೆವು;
ಒಂದು ಚಿಕ್ಕೆಯೆ ಚಂದಿರನೆ ಕಿರುಮೋಡ ಬಣ್ಣದ ಹಕ್ಕಿಯೆ-
ಎಲ್ಲವೆಲ್ಲವು ಶೋಕಗೀತೆಯೊಳೇಕವಾಗಿಹವಿಲ್ಲಿಯೆ.

ನಾನು ಎಲ್ಲೋ ತೊದಲು ನುಡಿದರೆ ಅದನೆ ಕವಿತೆಯ ಮಾಡಿದೆ
ನಿನ್ನ ಮಹದನುಭೂತಿಯಲ್ಲಿಯೆ ನನ್ನ ಕಲ್ಪನೆ ಆಡಿದೆ.
ಎಲೆಯನುದುರಿಸಿ ಕೊಂಬೆಯಲಿ ಹಿಡಿ ಹೂವು ತಳೆದಿಹ ಕಣಗಿಲೆ
ಅಂತೆ ನಿನ್ನಯ ಬದುಕು; ಸ್ವಾರ್‍ಥದ ಸೊಗಡು ಹೊದ್ದದ ಚಿತ್ಕಳೆ.

ಸಾಕು ಸೂರ್‍ಯೋದಯವು ಚಂದ್ರೋದಯವು ನಿನ್ನಯ ನೆನಪಿಗೆ
ನಾಕದಲ್ಲಿಹ ಆತ್ಮಗಳ ಚೆಲ್ವೆಳಕು ಬೀರುವವಿಂದಿಗೆ-
ಅವರಿವರ ನಡೆನುಡಿಗಳಲ್ಲಿಯೆ ನಿನ್ನ ಭಂಗಿಯ ಕಾಣುತ
ನೀನೆ ಮೈವೆತ್ತಂತೆ ಭ್ರಾಂತಿಯೊಳಿರುವೆ ಮಮ್ಮಲ ಮರುಗುತ.

ಕಣ್ಣಿನರೆಬೆಳಕನ್ನು ಮುನ್ನವೆ ಕದ್ದ ಕಾಲಗೆ ಮತ್ಸರ
ಜಗಕೆ ಅರೆಗುರುಡಾಗಿ ಬಾಳುವೆನೆಂಬ ಚಿಂತೆಯ ಬೆಂತರ
ಇರವಿನಾಸೆಯ ಹಿಂಗಿಸಿತೆ, ನುಂಗಿಸಿತೆ ಜಗದಾನಂದವ?
ಒಂದು ಕೊಟ್ಟೊಂದನ್ನು ಕಸಿವುದು ಅವನ ನಿತ್ಯದ ಕೈತವ.

ತ್ಯಾಗಮಯ ಜೀವನಕೆ ಇದ್ದುದರಲ್ಲೆ ಒಂದಿನಿತಾದರೂ
ಶಾಂತಿ ದೊರೆವುದೆ? ದೊರೆವುದೆನ್ನಲು ಎಲ್ಲೊ ಅವರಿವರೊಬ್ಬರು-
ಅವರ ಬಾಳೇ ಕೃತಿಯು; ಪ್ರತಿಕೃತಿ ಕವಿಯ ಪ್ರತಿಮಾ ಸೃಷ್ಟಿಯು
ತನ್ನ ಪಾಲಿನ ಭಾಗ್ಯವನ್ನು ಹಲವರಿಗೆ ಹಂಚುವ ದೃಷ್ಟಿಯು.

ಹೆತ್ತ ಹೊಟ್ಟೆಯು ಕಕ್ಕುಳಂಗುದಿಕುದಿಯೆ ಬಿಸಿಗಂಬನಿಯಲಿ
ಆರು ಸಂತಯಿಸುವರು ಗೆಳೆಯಾ ತಾಯ ಕರುಳೇ ಬೆಂಬಳಿ,
ಅಕ್ಕರೆಯ ಸಕ್ಕರೆಯ ಸವಿಯೂಡಿಸುವ ಅಂತಃಕರಣವು
ಕರಗಿ ಕಂಬನಿಯಾಗಿ ಹರಿದರು ತಾಪಕಿಲ್ಲವೊ ಶಮನವು!

ಚಿಕ್ಕ ಮಕ್ಕಳ ಮಾತಿನಿಂದಾ ದುಃಖ ಮರುಕಳಿಸುತ್ತಿರೆ
ಕರುಳು ಕಿತ್ತೆಸೆದಂತೆ, ಜೀವಕೆ ಆರೆಮರುಳು ಬಡಿದಂತಿರೆ
ಅಂತು ಇಂತೂ ಅಳಲಬುತ್ತಿಯೆ ಜೀವನದ ಸೌಭಾಗ್ಯವೆ?
ಬಡಿದುಕೊಂಡರು ಬುದ್ಬುದವೆ ನಮ್ಮಾಯುಸಿನ ಸಾಫಲ್ಯವೆ?

ಜಾನಪದ ಜೀವನವನರಗಿಸಿಕೊಂಡು ಕೊನೆದಿಹ ಸತ್ಯವಿ
ಲೋಕಗೀತಕೆ ಮಾರುವೋಗಿರೆ ಮನಕೆ ಬಂದಿತೆ ಜೇನ್-ಸವಿ?
ಹಾಡು ಕೂಡಿಸಲೆಂದು ಓಡಿದ ಬೇಡಿ ಜನತಾ ಹೃದಯವ
ಯಾವ ತೃಪ್ತಿಯೊ ನಿನಗೆ ಹನಿ ಹನಿ ಹೀರಿಕೊಂಡಿರೆ ಸಾರವ!

ನಾಡ ತಿರುಗಿದನಂದು ಗುಡುಗಾಡಿದನು ಕವಿ ಸರ್‍ವಜ್ಞನು
ಕರದಿ ಕಪ್ಪರವಿಡಿದು ಕಂಬಳಿ ಹೊದೆದು ಜೀವನ ತೆಯ್ದನು.
‘ಭವತಿ ಭಿಕ್ಷಾಂದೇಹಿ’ ಕವಿಗಳ ಮಂತ್ರವೆಂದನು ಮುದ್ದಣ
ಅಶ್ವಮೇಧವೆ, ವಿಶ್ವಮೇಧವೆ – ಕವಿಗೆ ಕಂಬನಿ ಕಂಕಣ!

ಅರಿವು ಪಾರಾಯಣವ ನಡೆಸಿದೆ ಸಾವು ಮೀರಿದ ಸತ್ಯದ
ಇರವು ಬಂದುದ ಮೆಟ್ಟಿ ನಿಂದಿದೆ ತುತ್ತತುದಿಯಲಿ ಕರ್‍ಮದ!
ಜೀವ ಕೋಟಾಕೋಟಿ ಕೋಟಲೆಗೊಂಡರಿಲ್ಲವೊ ಬೆಂಬಲ
ನರನ ದುಃಖವು ನರಗೆ, ಹರನಿಗೆ ಮೂರು ಕಣ್ಣೂ ನಿಷ್ಫಲ!

ಕಣ್ಮರೆಯು ಮಣ್ಮರೆಯು ದೇಹವು ಎಂದು ತತ್ವವು ಸಾರಲಿ
ಇಂದೊ ನಾಳೆಯೊ ನಮ್ಮ ಪಾಲೂ ಸಲ್ಲುವದು ಎಂದೆನ್ನಲಿ,
ಆದರಾ ಚೈತನ್ಯಜೀವನದರ್‍ಶವಿಲ್ಲಿಯೆ ಉಳಿವುದು
ಒಳಿತಿನೊಡಲಲಿ ಮೊಳೆತು ಬೆಳ್ಜಸವಾಂತು ಬಳೆವುದು ಹೊಳೆವುದು.

ಶಿವಶಿವೇಶ್ವರ ನಿನ್ನ ರೂಪವೆ ನನ್ನ ಕಣ್ಣಲಿ ತುಂಬಿದೆ
ನಿನ್ನ ನೆನಹಿನ ಜೇನಿಗೆನ್ನಯ ಮನದ ಮೊನೆಯಲಿ ಇಂಬಿದೆ.
ಅಳಿದನಂದವರಾರು ಚಿಃ ನಮ್ಮಚ್ಚುಮೆಚ್ಚಿನ ಮೂರುತಿ
ಎದೆಯ ಹೊಂಬಟ್ಟಲಲಿ ಇದಿಗೋ ಬಾಷ್ಪಬಿಂದುವಿನಾರತಿ!

ನಿನ್ನ ಪ್ರೀತಿಯ ಹೂವು ಮಲ್ಲಿಗೆ ಚೆಲು ಗುಲಾಬಿಗಳಿಲ್ಲಿವೆ
ಸ್ನೇಹ ಸೌಗಂಧವನು ಹರಡಿವೆ ತೀಡುವೆಲರಿಗೆ ನೀಡಿವೆ.
ನಡುಗುತಿಹ ಪಕಳೆಯಲಿ ಮೌನದಿ ಬಾಷ್ಪದಂಜಲಿ ಪಿಡಿದಿವೆ
ಶಾಂತಿಪೊಂದಲಿ ಆತ್ಮ, ಓಂ ಶಿವ ಭಾವಚಿಂತಾರತ್ನವೆ!
*****