ಸ್ಫೂರ್ತಿ

ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ
ಜೀವದುಸಿರಾಡಿಸುವ ಸ್ಫೂರ್ತಿಕನ್ನೆ,
ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ
ದೇಹ ರೋಮಾಂಚಿತವು ಎದೆಯ ರನ್ನೆ.

ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು
ಕುಡಿದು ಜೊನ್ನದ ಸೆಲೆಯ ಅಮೃತವನ್ನೆ;
ಬೇರಿಂದ ಕೊನೆವರೆಗು ರಸವೀಂಟಿ ಹಬ್ಬುವದು
ನಿನ್ನ ಪ್ರೇರಣೆ ಕರುಣೆ-ಕಣ್ಣ ಸನ್ನೆ,

ನಿನ್ನ ಕಣ್ಣೆರಡರಲಿ ಸೃಷ್ಟಿ ಮರುಬಿಂಬಿಸಿದೆ
ಬೆಳಕಿನೈಸಿರಿಯಲ್ಲಿ ಸೆರೆಯಾಗಿದೆ;
ಮುತ್ತುರತ್ನದ ಕಾಂತಿ, ಬಾನ ನೀಲಿಮೆ- ಶಾಂತಿ
ನವಿಲುಗರಿ ಎವೆಗಳಲಿ ಮರೆಯಾಗಿದೆ.

ಶಶಿಕಾಂತ ಮೇಘದೊಲು ಕವಿಬದುಕ ಸಿಂಗರಿಸಿ
ಎದೆಯೊಲುಮೆ ತಂಪೆರೆಯೆ ಸಮ್ಮೋಹದಿ,
ಅವನ ಬಾಳಿನ ನೋವು ನಲಿವುಗಳೆ ಹಾಡಾಗಿ
ಜೇನಾಗಿ ಪುಟಿಯುವವು ನವರಾಗದಿ.

ಅವನ ಪ್ರತಿಭೆಯ ಹೂವನರಳಿಸುವ ಬೆಳಕಾಗಿ
ಅವನ ದುಃಖದ ಕಡಲ ನಾವೆಯಾಗಿ,
ಅವನ ನೈರಾಶ್ಯದಾಕುಂಚನಕೆ ಮಿಂಚಾಗಿ
ಅವನದೆಲ್ಲಕು ನೀನ ಸ್ಫೂರ್ತಿಯಾಗಿ-

ನಿನ್ನ ಬಿಗಿಯಪ್ಪುಗೆಗೆ ದೈತಭಾವವನುಳಿದು
ನಿನ್ನಧರ ಜೇನುಂಡು ಮತ್ತನಾಗಿ,
ಭಾವರತಿ ಸೌಖ್ಯಪೀಯೂಷರಸವಶನಾಗಿ
ವಿಶ್ವಗೀತವನುಲಿವ ಹಕ್ಕಿಯಾಗಿ.

ಎಂದಾದರೊಮ್ಮೆ ನೀ ಬಂದು ಮರೆಯಾಗುತಿಹೆ
ಸಂಜೆ ಮುಗಿಲಿನ ಸ್ವರ್ಣವರ್ಣದಂತೆ;
ಬಂದೆದೆಯ ಕದ ತೆರೆವೆ ಚೇತರಿಸಿ ಹಾಡಿಸುವೆ
ಕಳೆಗೂಡುವೆ ಹೊಸಮಳೆಯ ಸಳಕಿನಂತೆ.

ಹೂತಳೆದ ಬಳ್ಳಿಗೊನೆ, ನಳನಳಿಪ ಅರಳಿಯೆಲೆ
ಗಾಳಿಯೂದಲು ತಾನೆ ಪಟಪಟಿಸುವಂತೆ,
ನಿನ್ನ ಬರವಿಗೆ ಹೃದಯ ವೀಣೆ ತಂತಿಗಳೆಲ್ಲ
ಮಿಡಿದು ನುಡಿಗೊಳ್ಳುವವು ಎಂದಿನಂತೆ.

ಭಾವಗಡಲಿನ ತೆರೆಗಳೋಳಿಯಲಿ ಕಲ್ಪನೆಯ
ಕಿರಣನಟಿ ಕುಣಿದು ಕುಪ್ಪಳಿಸುತಿರಲು
ರಾಗರಸಪಾಕದಲಿ ಛಂದೋವಿಲಾಸದಲಿ
ಕಮನೀಯ ಕವಿತೆ ತಾ ಕಣ್ಣೆರೆವಳು.

ಲಕ್ಷನಕ್ಷತ್ರಗಳ ಥಾಳಥಳ್ಯವ ಹಿಡಿದು
ಬಿರುಗಾಳಿ ಜಲಪಾತದಬ್ಬರವ ಸೆಳೆದು,
ಜೀವನದ ಕುಲಿಮೆಯಲಿ ಕಿಲ್ಮಿಷಾಮಿಷ ಸುಟ್ಟು
ರನ್ನಪುತ್ಥಳಿಯಾಗಿ ಎರಕಹೊಯ್ದು –

ಸುಖದುಃಖ ಆಸೆ ಆಕಾಂಕ್ಷೆಗಳ ಜೇವೊಡೆದು
ಬಾಳಹೊಂಗನಸಿನಲಿ ರೂಹುವಡೆದು,
ಮೋಡಗಳ ಕರುಮಾಡದಲ್ಲಿ ದಿವ್ಯಾತ್ಮದಲಿ
ಕರೆಯುವನು ಕವಿ ಜನದ ಮೇಲೆ ವಡೆದು.

ಸ್ಫೂರ್ತಿಸುಂದರಿ ರಸೋನ್ಮಾದಿನಿಯು, ಚಂಚಲೆಯು
ಕಟ್ಟುಕಟ್ಟಳೆಗೆಲ್ಲ ಸಿಲುಕದವಳು;
ಜೀವನದ ವಿವಿಧಾಂಗ ರಂಗದಲಿ ಮೈಮರೆತು
ನಿಂತಿರಲು ಅರಿಯದೆಯೆ ಮಿಂಚಿ ಬಹಳು.
*****