‘ಯುಗಾದಿ’ ಸಂಭ್ರಮ ಹತ್ತಿರವಾದರೆ ಸಾಕು ರೇಡಿಯೋ, ಟಿವಿಗಳಲ್ಲಿ ದ.ರಾ. ಬೇಂದ್ರೆ ಅವರ ಯುಗಯುಗಾದಿ ಕಳೆದರು ಹಾಡು ತೇಲಿ ಬರುತ್ತಿದೆ. ಎಷ್ಟೇ ನೋವು- ಸಂಕಟ-ಹಿಂಸೆಗಳಿದ್ದರೂ ನಾವು ಸಾಲ-ಸೋಲ ಮಾಡಿ ಹಬ್ಬದಂದು ಮುಖವಾಡ ತೊಟ್ಟು ಕಿಲಕಿಲ ನಗುವ ನಾಟಕವಾಡುತ್ತೇವೆ.
ಮಾರನೇ ದಿನದಿಂದ ‘ಮತ್ತದೇ ಬೇಸರ, ಅದೇ ಸಂಜೆ – ಅದೇ ಏಕಾಂತ’ ಎಂದು ಹಾಡುತ್ತ ವಿಷಾದದ ನಗೆ ನಕ್ಕು ದಿನದೂಡುತ್ತೇವೆ. ಒಳ್ಳೆ ದಿನ ಬಂದೀತೆಂದು ಕನಸುತ್ತೇವೆ.
ಆ ಕಾರಣಕ್ಕೆ ಈ ಬಾರಿ ಹಬ್ಬಕ್ಕೆ ಮುನ್ನವೇ ಡಾ.ಜಿ.ಎಸ್.ಶಿವರುದ್ರಪ್ಪನವರ ಸಮಗ್ರ ಕಾವ್ಯ ತಿರುವಿ ಹಾಕುತ್ತಾ ಕೂತೆ. ಸ್ವವಿಮರ್ಶೆ ಮಾಡಿಕೊಳ್ಳಬಲ್ಲ ವ್ಯಕ್ತಿಗಳಿಗಾಗಿ ಎಂಥ ಸೊಗಸಾದ ಕಿವಿಮಾತುಗಳನ್ನು ಹೇಳಿದ್ದಾರೆ ಕವಿ. ‘ಬಣ್ಣ ಬಣ್ಣದಾ ಈ ಲೋಕ’ ಕುರಿತು ಎನಿಸಿತು.
ನಿಮ್ಮ ಬಣ್ಣಗಳನ್ನು ಕುರಿತು
ನಾನು ಮಾತಾಡಿದರೆ
ನಿಮಗೆ ಕೋಪ
ಬಹುಶಃ ನಿಮ್ಮ ಬಣ್ಣ ಬಯಲಾದೀತೆಂಬ
ಭಯ ನಿಮಗೆ,
ನನಗೆ ಆ ಭಯವಿಲ್ಲ
ಈ ಬಣ್ಣಗಳ ಮೂಲವನ್ನೇ ಕೆದಕಿ ನೋಡುವ ಆಸೆ
ನನಗೆ.
ನನ್ನ ಬಣ್ಣವನು ಕುರಿತು ನಾನು ಬಿಚ್ಚುವ ಹಾಗೆ
ಬಿಚ್ಚಲಾರಿರಿ’ ನೀವು ನನಗೆ ಗೊತ್ತು:
ನಾನೇದರೂ ನಿಮ್ಮ ಬಣ್ಣಗಳ ಬಗ್ಗೆ ಮಾತಾಡಿದರೆ, ನಿಮ್ಮ ಬಣ್ಣಗಳ ಬಗ್ಗೆ ಮಾತಾಡಿದರೆ, ನಮ್ಮ ನಿಮ್ಮ ನಡುವೆ ದಟ್ಟಡವಿಯೆದ್ದು, ಆ ಜಗದ ಮೌನ! ಆದರೆ, ನೋಡಿ
ನಾವೂ ನೀವೂ ಮುಕ್ತವಾಗಿ ಈ ಬಣ್ಣಗಳ ಬಗ್ಗೆ
ಈ ಬಣ್ಣಗಳ ಹಿಂದಿರುವ ಅಕರಾಳ, ವಿಕರಾಳಗಳ ಬಗ್ಗೆ
ಬಣ್ಣಗಳ ಹೆಸರಿನಲ್ಲಿ ನಡೆದಿರುವ ಅಮಾನವೀಯ
ಅನ್ಯಾಯ ಹಾಗೂ ಶೋಷಣೆಯ ಬಗ್ಗೆ
ಮಾತಾನಾಡುತ್ತ ಪರಸ್ಪರ ತೊಳೆದುಕೊಳ್ಳುತ್ತ
ತಿಳಿದುಕೊಳ್ಳುತ್ತ ಬದುಕದಿದ್ದರೆ
ಸುಮ್ಮನೆ ಬೆಳೆಯುತ್ತದೆ
ನಮ್ಮ ನಿಮ್ಮ ನಡುವಿನಡವಿಯ ತುಂಬ
ಸಂಶಯದ ಹುತ್ತ.
ಯುಗಾದಿ ಹಬ್ಬದ ಸಂಭ್ರಮದ ನಡುವೆಯೂ ಅಗತ್ಯ ಒಂದು ಕ್ಷಣ ಕುಳಿತು ಎಲ್ಲ ರಂಗದವರೂ ಚಿಂತಿಸಲೇ ಬೇಕಾದ ಅರ್ಥಪೂರ್ಣ ಸಾಲುಗಳೆನಿಸಿತು ಇವು. ಯೋಚಿಸುತ್ತ ಹೋದರೆ ಯುಗಾದಿ ಒಬ್ಬೊಬ್ಬರಿಗೆ ಒಂದೊಂದು ಅರ್ಥ ಹೊಳೆಯಿಸುತ್ತದೆ
ಇಗೋ ಬಂತು ಹೊಸವರುಷವು, ಮರಮರದಲಿ
ಹೋ ಚಿಗುರಿನ ಹಿಗ್ಗು
ಹಗಲಿರುಳಿನ ಬಾಗಿಲ ಬಳಿ ನಾ ಬಿದ್ದಿರುವೆನು
ಕಾಲೊರೆಸುವ ರಗ್ಗು!
ಶ್ರೀಮಂತಿಕೆಯ ಅಟ್ಟಹಾಸದಲ್ಲಿ ಮೆರವ ಮಂದಿಯಂತೆ, ಧಿಮಾಕಿನ ಬದುಕು ಸಾಗಿಸುವ ಖ್ಯಾತ ನಟ-ನಟಿಯರೂ ನಮ್ಮಲ್ಲಿದ್ದಾರೆ. ಅವಕಾಶಕ್ಕೆ ಹಪಹಪಿಸಿ ರಗ್ಗಿನಂತೆ ಬದುಕುತ್ತಿರುವ ಬಡಮಂದಿಯೂ ನಮ್ಮಲ್ಲಿದ್ದಾರೆ. ಅವರವರ ಯೋಗ್ಯತಾನುಸಾರ ಎಲ್ಲ ಯುಗಾದಿ ಆಚರಿಸುತ್ತಾರೆ. ಹಲವರು ನಗುನಗುತ್ತಾ, ಕೆಲವರು ಒಳಗೊಳಗೆ ಕೊರಗುತ್ತ ಎಂಬುದಂತೂ ನಿಜ.
ದುಡಿಮೆಯೇ ಜೀವನ, ಕಾಯಕವೇ ಕೈಲಾಸ ಎಂಬ ಸಾಲುಗಳನ್ನು ಎಲ್ಲ ಬಲ್ಲರು.
‘ಎಲ್ಲಾರು ಮಾಡುವುದು ಹೊಟ್ಟೆಗಾಗಿ-ಗೇಣು ಬಟ್ಟೆಗಾಗಿ’ ಎಂಬುದರಲ್ಲಿ ಅನುಮಾನವೇ ಇಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಹಗಲು-ರಾತ್ರಿ-ವಾರ-ತಿಂಗಳು-ವರ್ಷ ಹೀಗೆ ಉರುಳುತ್ತಲೇ ಹೋಗುತ್ತದೆ. ಕ್ಯಾಲೆಂಡರ್ ಹಾಳೆಗಳನ್ನು ನಾವು ಹರಿಯುತ್ತ ಹೋಗುತ್ತೇವೆ. ಬದುಕಿನುದ್ದಕ್ಕೂ ದುಡಿಯುತ್ತಲೇ ಹೋಗುತ್ತೇವೆ. ಈ ದುಡಿಮೆ-ಯಾರಿಗೆ ಯಾತಕ್ಕೆ?… ಒಂದು ಕ್ಷಣ ಚಿಂತಿಸಿ.
ಗಾಣವಾಡುವುದು ಗಡಿಯಾರ
ನಿಮಿಷದಿಂದ ನಿಮಿಷಕ್ಕೆ
ದಿನದಿಂದ ದಿನಕ್ಕೆ
ಮಾಸದಿಂದ ಮಾಸಕ್ಕೆ
ಯುಗಾದಿಯಿಂದ ಯುಗಾದಿಗೆ
ನಮ್ಮನ್ನರೆದು ರುಬ್ಬುತ್ತ, ಎಣ್ಣೆ ತೆಗೆಯುತ್ತ
ಯಾವುದೋ ದೀಪ ಉರಿಸಲಿಕ್ಕೆ
-ಹೀಗೆ ದುಡಿದವರ ಬಗ್ಗೆ ಆ ದೀಪಕ್ಕೆ ಕೃತಜ್ಞತೆ ಇದೆಯೇ? ಚಾಡಿ ಚುಚ್ಚುವ ಮತ್ತೊಬ್ಬ ನಯವಂಚಕ ಬಂದಾಗ ಹಗಲಿರುಳು ದುಡಿದ ವ್ಯಕ್ತಿ ಕಾಲೊರೆಸುವ ರಗ್ಗೆ.
ಹೀಗಾದಾಗಲೇ ಅಲ್ಲವೇ ಪ್ರತಿ ವ್ಯಕ್ತಿಯ ಬದುಕಿನಲ್ಲಿಯೂ ಏನೇನೋ ಕನಸುಗಳು- ನೋವುಗಳು ಹತಾಶೆಗಳು
ಬಾರದ ಕೆಣಕುವ ಕನಸುಗಳು
ಎಲ್ಲೋ ಯಾಕೋ ಏನೋ
ಮಾತಾಡುವ ಬಾಯಿಗಳು
ಏನೇನೋ ನೆನಪುಗಳು
ಯುಗಾದಿಯಂದು ಹಳೆಯದೆಲ್ಲ ಮೆಲುಕು ಹಾಕಿ ಏನೇನಾಗಬೇಕೋ ಅವೆಲ್ಲ ಆಗಿಯೇ ಆಗುತ್ತದೆ ಎಂಬ ವಿಧಿವಾದ ನಂಬುವವರೂ ನಮ್ಮಲ್ಲಿದ್ದಾರೆ.
ಬೆಲ್ಲಕ್ಕಿಂತಲೂ ಬೇವೇ ಮಿಗಿಲು-ನಮ್ಮೆದುರಿನ ಈ ತಟ್ಟೆಯಲ್ಲಿ
ಏನು ಮಾಡುವುದು ಹೀಗೆ ಬರೆದಿದೆ ಈ ವರ್ಷದ ಪಂಚಾಂಗದಲ್ಲಿ
ಎಂದು ತಮ್ಮನ್ನ ತಾವೇ ಸಮಾಧಾನ ಮಾಡಿಕೊಳ್ಳುವವರನ್ನು ನಾವು ಕಾಣುತ್ತೇವೆ.
ಯುಗಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ ಎಂಬುದೀಗ ಮಾಮೂಲಾಗಿ ಹೋಗಿದೆ. ಆದರೆ ನಾವೆಲ್ಲಿದ್ದೇವೆ?
ಆನೆಯನೇರಿಕೊಂಡು ಹೋದಿರಿ ನೀವು
ಕುದುರೆಯನೇರಿ ಹೋದಿರಿ ನೀವು
ದಂಡು ದಾಳಿಯನೆತ್ತಿ ಬಾಜಾ ಭಜಂತ್ರಿಯಲ್ಲಿ ಮೆರವಣಿಗೆ ಹೋದಿರಿ ನೀವು
ಹಿಂದೆದ್ದ ಧೂಳಿನಲಿ ಉಳಿದವರು ನಾವು
ಎಂಬಂತಾಗಿದೆ ಇಂದಿನ ದಿನಗಳು.
ಎಷ್ಟಾದರೂ ಆಶಾವಾದಿಗಳಾದ ನಾವು ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತೇವೆ
ನೀಡು ಬಾ, ನೀಡು ಬಾ
ಹೊಸ ವರ್ಷಕ್ಕೆ ಹೊಸ ಕೊಡುಗೆಯ
ಈ ನಾಡಿಗೆ ನೀಡು ಬಾ
ಎಂದು ಹಾಡುತ್ತ
*****
(೧೨-೦೪-೨೦೦೨)