ಕಳೆದ ವಾರ ಉದಯ ಟಿವಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಫೋನ್ ಇನ್ ಕಾರ್ಯಕ್ರಮವಿತ್ತು. ಅದನ್ನು ತಮ್ಮಲ್ಲಿ ಬಹಳಷ್ಟು ಮಂದಿ ನೋಡಿರಬೇಕು. ಪತ್ರಿಕೆಗಳಲ್ಲಿ ಬಂದ ‘ಜಮೀನ್ದಾರ್ರು’ ಚಿತ್ರ ವಿಮರ್ಶೆ ಕುರಿತ ಟೀಕಾಪ್ರಹಾರಗಳೇ ಅಂದು ಅತಿಯಾಗಿದ್ದವು. ನಿಜಕ್ಕೂ ಇದೊಂದು ಅಪರೂಪದ ವಿಚಿತ್ರ ಬೆಳವಣಿಗೆ. ವಿಮರ್ಶೆ ಬರೆದ ಪತ್ರಿಕೆಗಳಲ್ಲಿಯೂ ಚಿತ್ರ ರಸಿಕರ ಅಭಿಪ್ರಾಯಕ್ಕೆ ಅವಕಾಶವಿದ್ದರೂ ಪತ್ರಿಕಾ ಮಾಧ್ಯಮಕ್ಕೆ ಟಿವಿ ಚಾನೆಲ್ಲುಗಳ ಮೂಲಕ ಗೂಬೆ ಕೂರಿಸುವ ಪ್ರಯತ್ನ ಎಷ್ಟರ ಮಟ್ಟಿಗೆ ಸರಿ ಎಂಬುದನ್ನೀಗ ಗಂಭೀರವಾಗಿ ಚಿಂತಿಸಬೇಕಿದೆ.
‘ಜಮೀನ್ದಾರ್ರು’ ಅಂಥ ಸೊಗಸಾದ ಚಿತ್ರಕ್ಕೆ ಇಂಥ ಕೆಟ್ಟ ವಿಮರ್ಶೆಯೇ? ‘ಏಕಾಂಗಿ’ಯನ್ನು ಪತ್ರಕರ್ತರು ಹೊಗಳಿ ಬರೆದರು. ಅದೂ ನಿಜವೆಂದು ನಂಬಿ ಹೋಗಿ ಅರ್ಧಕ್ಕೆ ಎದ್ದು ಬಂದೆ. ಮಗುವಿನ ಅಳು ಕೇಳಿದಾಗ ತಾಯಿಗೆ ಹಾಲುಕ್ಕುವುದು ಸಹಜವಲ್ಲವೇ. ಅಂಥ ಒಂದು ಹೃದಯಸ್ಪರ್ಶಿ ದೃಶ್ಯದ ಜಮೀನ್ದಾರ್ರುದಲ್ಲಿದೆ. ಅಂಥವನ್ನು ಹೀಗಳೆದು ಬರೆದದ್ದು ಸರಿಯೇ?
ಎಂಬರ್ಥ ಬರುವ ಪ್ರಶ್ನೆಗಳ ಸರಮಾಲೆ ಅಂದಿನ ಫೋನ್‌ಇನ್ ಕಾರ್ಯಕ್ರಮದಲ್ಲಿತ್ತು. ಅವರೇನಾದರೂ ಬರೆದುಕೊಳ್ಳಲಿ ನಿಮಗಿಷ್ಟವಾಯಿತಲ್ಲ. ಅದು ನನಗೆ ಮುಖ್ಯ ಎಂಬುದು ವಿಷ್ಣು ಅವರ ಉತ್ತರವಾಗಿತ್ತು. ಸಿನಿಮಾ ನೋಡುಗರ ಮತ್ತು ಪತ್ರಿಕೆಯ ಓದುಗರ ಪ್ರಶ್ನೆಗಳ ಕಳಕಳಿ ಒಪ್ಪೋಣ. ಪ್ರಶ್ನೆ ಕೇಳುವುದು ಮತ್ತು ಕೇಳಿಕೊಳ್ಳುವುದು ಬೆಳವಣಿಗೆಯ ಲಕ್ಷಣ ಎಂಬುದರಲ್ಲಿ ಅನುಮಾನವಿಲ್ಲ. ನಮ್ಮ ಟಿವಿ ನೋಡುಗರು ಪ್ರಶ್ನಿಸುವುದರಲ್ಲಿ ಈ ಎತ್ತರಕ್ಕೆ ಬೆಳೆದಿರುವುದೇ ನಿಜವಾದಲ್ಲಿ ಮುಂದಿನ ಫೋನ್ ಇನ್ ಕಾರ್ಯಕ್ರಮಗಳಲ್ಲಿ ನಿರ್ಮಾಪಕ ನಟ-ನಟಿ ನಿರ್ದೆಶಕರನ್ನು ಈ ಬಗೆಯ ಪ್ರಶ್ನೆಗಳನ್ನೂ ಕೇಳಬಹುದಲ್ಲವೇ?
‘ನೀವೇಕೆ ಇಂಥ ದರಿದ್ರ ಚಿತ್ರ ತೆಗೆದಿರಿ? ಇಂಥ ಅಸಭ್ಯ ಅಶ್ಲೀಲ ಚಿತ್ರ ಬರಲಿಲ್ಲವೆಂದು ಕನ್ನಡಮ್ಮ ಅಳುತ್ತಿದ್ದಳೆ?’
‘ಹೆಣ್ಣನ್ನು ಹೀಗೆ ಬೆತ್ತಲಾಗಿ ಚಿತ್ರಿಸಿ-ಭೋಗದ ವಸ್ತುವೆಂದೇಕೆ ತೋರಿದಿರಿ?’
‘ಹಾಸ್ಯದ ಹೆಸರಿನಲ್ಲಿ ಕಪಿಚೇಷ್ಟೆ ಚಿತ್ರಿಸಿ ಇದು ಕನ್ನಡಿಗರ ಅಭಿರುಚಿ ಎಂದೇಕೆ ತೋರಿಸುತ್ತೀರ?’
‘ಕನ್ನಡ ಹೋರಾಟಗಾರರಾದ ತಮಗೆ ಪರಭಾಷಾ ನಟಿಮಣಿಯೇ ನಾಯಕಿಯಾಗಿರಬೇಕೆ?’
‘ಪಡ್ಡೆ ಹುಡುಗರನ್ನು ದಾರಿ ತಪ್ಪಿಸುವ ಇಂಥ ಚಿತ್ರದಿಂದೇನು ಲಾಭ?’
ಶಾಂತಿ ಸಹನೆಯ ಮಾತು ಎಲ್ಲೆಲ್ಲೂ ಕೇಳಿಬರುತ್ತಿರುವಾಗ ರೌಡಿಯಿಸಂನ ಗ್ಲಾಮರಸ್ ಮಾಡಿ ಅವರನ್ನೊಬ್ಬ ಹೀರೋ ಮಾಡಿ ತೋರುವುದು ಮಾಸ್ ಮೀಡಿಯಾದ ಮೋಸವಲ್ಲವೆ?
‘ಮನೆಮಂದಿ ಎಲ್ಲ ಒಟ್ಟಿಗೆ ಕುಳಿತು ನೋಡುವಂಥ ಚಿತ್ರ ತೆಗೆಯಬಾರದೆ? ಎಂಬಂಥ ಪ್ರಶ್ನೆಗಳೂ ಫೋನ್ ಇನ್ ಕಾರ್ಯಕ್ರಮದಲ್ಲಿ ತೂರಿಬರುತ್ತವೆ ಎಂದು ಗೊತ್ತಾದಾಗ ಕಾರ್ಯಕ್ರಮಕ್ಕೆ ಬರುವವರು ಎಚ್ಚರದಿಂದಿರುತ್ತಾರಲ್ಲವೆ?
ತೆರೆಗೆ ಬಂದ ಎಲ್ಲ ಚಿತ್ರಗಳೂ ಎಲ್ಲ ಮಂದಿಗೂ ಪ್ರಿಯವಾಗುತ್ತವೆ ಎಂದು ಹೇಳುವಂತಿಲ್ಲ. ಕೆಲವರಿಗೆ ಆಕ್ಷನ್ ಫಿಲಂಗೆ ಪ್ರಿಯವಾದರೆ, ಹಲವರಿಗೆ ಸೆಂಟಿಮೆಂಟ್ ಚಿತ್ರಗಳು ಇಷ್ಟ ಮತ್ತೆ ಕೆಲವರಿಗೆ ಕತೆ, ಕಾದಂಬರಿ ಆಧಾರಿತ ಚಿತ್ರಗಳು ಅಚ್ಚುಮೆಚ್ಚು. ನನಗೆ ಕಾಮೆಡಿಗಳೇ ಪ್ರಿಯ ಎನ್ನವವರೂ ಇದ್ದಾರೆ. ರಂಜನೀಯ ಜತೆಗೊಂದು ಪುಟ್ಟ ಮೆಸೇಜೂ ಇರಬೇಕಲ್ಲವೇ ಯುವ ಜನತೆಗೆ ಎನ್ನುವವರೂ ಇದ್ದಾರೆ.
ಅದರಿಂದಲೇ ವಿಮರ್ಶೆಗಳಲ್ಲೂ ಬಗೆ ಬಗೆ. ಚಲನಚಿತ್ರವೊಂದರ ಮುಹೂರ್ತದಿಂದ ಬಿಡುಗಡೆಯವರೆಗೆ ಅವರು ಹೇಳಿದ ಸುಳ್ಳು-ನಿಜಗಳ ಎಲ್ಲ ಹೇಳಿಕೆಗಳನ್ನು ಚಿತ್ರದ ಪ್ರಗತಿ ಸೂಚಿಸುವ ರೋಚಕ ಸುದ್ದಿಗಳೊಂದಿಗೆ ರಂಗುರಂಗಿನ ಚಿತ್ರಗಳನ್ನು ಅಚ್ಚಿಸುತ್ತಾ ಚಿತ್ರದ ಬಗ್ಗೆ ಕಾತರ-ನಿರೀಕ್ಷೆ ಮೂಡುವಂತೆ ಮಾಡಿದ ಪತ್ರಿಕೆಗಳವರಿಗೆ ಚಿತ್ರ ನೋಡಿದ ನಂತರ ತಮಗೆ ಅನಿಸಿದ ಪ್ರಾಮಾಣಿಕ ವಿಮರ್ಶೆ ಬರೆಯುವ ಹಕ್ಕು ಇಲ್ಲದಿದ್ದರೆ ಹೇಗೆ? ಚಿತ್ರರಂಗದವರು ಜಾಹೀರಾತು ಹೀಗೆ ಹಾಕಿ ಎನ್ನಬಹುದೇ ಹೊರತು ವಿಮರ್ಶೆ ಹೀಗೆ ಬರೆಯಿರಿ ಎಂದು ಹೇಳುವುದು ಸಾಧ್ಯವೇ?
ಚಿತ್ರ ಚೆನ್ನಾಗಿದೆ. ಚೆನ್ನಾಗಿಲ್ಲ. ಸುಮಾರಾಗಿದೆ, ಕೆಟ್ಟದಾಗಿದೆ ಎಂದು ಹೇಳುವಾಗ ಒಬ್ಬೊಬ್ಬರು ಒಂದೊಂದು ರೀತಿ ವಿಮರ್ಶೆ ಬರೆಯುತ್ತಾರೆ.
ಕರ್ನಾಟಕ ಪ್ರಹಸನ ಪಿತಾಮಹ ಟಿ.ಪಿ. ಕೈಲಾಸಂ, ಶ್ರೀರಂಗರ (ಜಾಗೀರದಾರ್) ನಾಟಕಗಳ ಬಗ್ಗೆ ಹೇಳುತ್ತ ‘ನಾನು ಭಾಷಣ ಮಾಡ್ತೀನಂತ ನಾಟಕ ಬರೆದೆ, ‘ನಾಟಕ ಬರೀತೀನಂತ ಭಾಷಣ ಬರೆದ’ ಎಂದರು. ಅದೂ ಅವರ ಕೃತಿ ರಚನೆ ಬಗ್ಗೆ ವಿಮರ್ಶೆ ಅಲ್ಲವೆ?’
ಮೂವರು ಗೆಳೆಯರು ಒಮ್ಮೆ ನಾಟಕಕ್ಕೆ ಹೋದಾಗ ಒಬ್ಬಾತ ಮಲಗಿ ನಿದ್ರೆ ಹೊಡೆದನಂತೆ. ‘ಇದೇನಯ್ಯ ಇವನು ನಾಟಕಕ್ಕೆ ಬಂದು ಮಲಗಿ ಗೊರಕೆ ಹೊಡೀತಿದ್ದಾನೆ’ ಎಂದಾಗ ಇನ್ನೊಬ್ಬ ‘ಹಾಗೆಲ್ಲ ಅನ್ನಬೇಡ ಅವನ್ನ’ ಅದು ನಾಟಕದ ಬಗೆಗಿನ ‘ವಿಮರ್ಶೆ’ ಅವಂದು ಎಂದನಂತೆ.
ಕೆಲವು ಚಿತ್ರಗಳಲ್ಲಿ ಹಾಡಿನ ದೃಶ್ಯ ಬಂದಾಗ ಎದ್ದು ಟಾಯ್ಲೆಟ್‌ಗೆ ಹೊರಡುತ್ತಾರೆ. ಅದೂ ಮೌನಿಯೊಬ್ಬನ ಮಹತ್ತರ ವಿಮರ್ಶೆ ಎಂದರೂ ತಪ್ಪಲ್ಲ.
ಟಿವಿ ಚಾನೆಲ್‌ನವರಿಗೂ ಸಿನಿ ಪತ್ರಕರ್ತರಿಗೂ ಪ್ರತಿ ಪ್ರೆಸ್ ಮೀಟ್‌ನಲ್ಲೂ ಕಿರಿಕಿರಿ ಇದ್ದೇ ಇರುತ್ತದೆ. ಪ್ರೆಸ್‌ಮೀಟ್‌ಗೆ ಬಂದಾಗ ಚಾನೆಲ್‌ನವರು ಮೈಕ್‌ಗಳನ್ನಿಟ್ಟುಬಿಡುತ್ತಾರೆ. ಬೇರೆ ಬೇರೆ ಪತ್ರಿಕೆಗಳವರು ಪ್ರಶ್ನೆ ಕೇಳುತ್ತಾರೆ. ಅದು ಅಚ್ಚಾಗುವ ಮುನ್ನವೇ ಚಾನೆಲ್‌ಗಳಲ್ಲಿ ಅವು ತೇಲಿ ಬಂದು ಪತ್ರಿಕೆಯಲ್ಲಿ ಅಚ್ಚಾಗುವ ಹೊತ್ತಿಗೆ ಬಿಸಿ ಬಿಸಿ ಸುದ್ದಿ ಹಳಸಲು ಸುದ್ದಿಯಾಗಿರುತ್ತದೆ.
ಇದೀಗ ಎಲ್ಲ ಚಾನೆಲ್‌ಗಳವರೂ ಫಿಲಂ ಓರಿಯೆಂಟೆಡ್ ಕಾರ್ಯಕ್ರಮಗಳೇ ಜಾಸ್ತಿ ಮಾಡುತ್ತಿರುವುದರಿಂದ ಅವರಿಗೆ ಫೋನ್ ಇನ್ ಕಾರ್ಯಕ್ರಮಕ್ಕೆ ನಟ-ನಟಿಯರು ನಿರ್ದೇಶಕರು ಬೇಕೆ ಬೇಕು. ಅವರನ್ನು ಆಹ್ವಾನಿಸಿದಾಗ ಪತ್ರಿಕಾ ವಿಮರ್ಶೆಗಳ ಮೇಲೆ ಸೇಡು ತೀರಿಸಿಕೊಳ್ಳವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಚಿತ್ರ ರಸಿಕರೂ ಚಿಂತಿಸಬೇಕು. ಇನ್ನು ಮುಂದಾದರೂ ಫೋನ್ ಇನ್ ಕಾರ್ಯಕ್ರಮಗಳು ಒಂದು ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿ-ಆರೋಗ್ಯಕರ ಚರ್ಚೆ ಸಂವಾದಕ್ಕೆ ಕಾರಣವಾದೀತೆಂದು ಆಶಿಸೋಣ.
*****
(೧೯-೦೪-೨೦೦೨)