ನಿದ್ರಾಹೀನ ರಾತ್ರಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ
ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ

ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ
ವಿರಹದ ವಿಷವುಂಡು ದಿವಂಗತವಾಗಿದೆ

ಮುಚ್ಚಬೇಕೆ ಶಾಶ್ವತವಾಗಿ ಔದಾರ್ಯದ ಬಾಗಿಲು?
ಕೊಡದಿದ್ದರೂ ಶುದ್ಧ ಮಧು, ಬೇಡವೆ ಒಂದು ಚಿಕ್ಕ ಒಳಲು?

ಎಲ್ಲ ದಿವ್ಯಾನಂದಗಳ ಸೆಲೆ ನೀನು, ದೇವ ಕೃಪೆ
ನಿನ್ನಾ ಮೂಲಕವೇ ಆ ನೆಲೆಗೆ ದಾರಿ, ನಿನ್ನ ಕೃಪೆ

ಪ್ರೇಮದ ದಾರಿಯ ಧೂಳಾದರೆ ನಾನು, ಕಡೆಗಣಿಸಿ ಬಿಡು
ಸಮಾಗಮದ ಬಾಗಿಲು ಬಡಿವ ನನ್ನ ಹೇಗೆ ಕಡೆಗಣಿಸುತ್ತಿ?

ಹಿಡಿದು ತಡವಿದರೆ ಕತ್ತಲಲ್ಲಿ ಪ್ರೇಮದ ಪಹರೆ
ಇದ್ದೇಯಿದೆ ಚಂದ್ರಮುಖದ ಎದೆಯಾಸರೆ

ನಿನ್ನ ಕರುಣೆಯಿಂದ ವಾಪಸಾದರೆ ಅಲೆಮಾರಿಯ ಹೃದಯ
ಅದು ರಾತ್ರಿಯ ಕಥೆ, ಚಂದ್ರನ ಕಥೆ, ಒಂಟೆಯ ಕಥೆ

ಈ ಲೋಕಕ್ಕೀಗ ಕೊರೆವ ಥಂಡಿ, ಎಲ್ಲವೂ ಹೆಪ್ಪು ಹೆಪ್ಪು
ದೇಹದೊಳಗಿನ ರಕ್ತ, ಜೀವಜಲ, ಎಲ್ಲ ಸಿಹಿ ಸಿಹಿ

ಹೆಪ್ಪಾಗದಿರಲಿ ಮಾತಿನ ಜಲ, ಬತ್ತದಿರಲಿ ಅದರ ಚಿಲುಮೆ
ಆ ಕಡೆಗೆ ರೇಷ್ಮೆ, ಈ ಕಡೆಗದು ದೇವವಸ್ತ್ರ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ