ಛೇದ – ೩

ವಾಸುದೇವನ್ ಬೆಹರಾಮನ ಮನೆಗೆ ಕೊನೆಗೂ ಹೋದ-ಅವನಿಗೆ ಹೋಗಲು ಸಾಧ್ಯವಾದ-ಗಳಿಗೆ ಅವನು ಎಂದಿನಿಂದಲೂ ಹಾದಿ ನೋಡಿದ್ದಾಗಿತ್ತು. ಕರುಣಾಕರನ್ ಅಲ್ಲಿಗೆ ಬರುತ್ತಾನೆಂದು ನಿನ್ನೆ ಬೆಳಿಗ್ಗೆ ಪಾರ್ವತಿಯಿಂದ ತಿಳಿದಾಗಿನಿಂದ, ಈಗಲಾದರೂ, ಕಳೆದ ಮೂರು ತಿಂಗಳಿಂದಲೂ ತನ್ನೊಡನೆ ತಪ್ಪುಗಂಟಾಗುತ್ತ ನಡೆದ ಹುಡುಗ ತನ್ನ ದೃಷ್ಟಿಗೆ ಬಿದ್ದಾನು ಎಂದುಕೊಂಡು ಪುಲಕಿತನಾಗಿದ್ದ. ಕಳೆದ ಮೂರು ವರ್ಷಗಳಲ್ಲಿ ಒಮ್ಮೆಯೂ ಕಂಡಿರದ, ಕಾಣಲು ಧೈರ್ಯವಾಗಿರದ ಅವನನ್ನು ಬೆಹರಾಮನ ಮನೆಯಲ್ಲೇ ಕಾಣಲು ಹೋಗಬೇಕಾಗಿ ಬಂದದ್ದು ಮನಸ್ಸಿನಲ್ಲಿ ಕ್ಷೋಭೆಗೆ ಎಡೆಮಾಡಿಕೊಟ್ಟಿತ್ತು. ಅಲ್ಲಿ ತಾನು ಕಾಣಲಿದ್ದವನು ತನ್ನ ತಮ್ಮನೇ ಎಂಬ ವಿಶ್ವಾಸವೊಂದೇ ಬೆಹರಾಮನನ್ನು, ಅವನ ಕರುಣಾಮಯಿಯಾದ ಹೆಂಡತಿಯನ್ನು ಇದಿರಿಸುವಧೈರ್ಯ ತಂದುಕೊಟ್ಟಿತ್ತು. ಅವನು ತನ್ನ ತಮ್ಮನೇ ಹೌದಾದರೆ ಹತ್ತು ವರ್ಷಗಳ ಹಿಂದೆ ಕಂಡವನನ್ನು ಈಗ ಗುರುತು ಹಿಡಿಯಲು ಸಾಧ್ಯವಾಗಬಹುದೆ? ಆಗ ಕರುಣಾಕರನ್ ಕೇವಲ ಹದಿನೈದು ವರ್ಷದ ಹುಡುಗ. ಮೈಯಲ್ಲಾಗ ಬಡಕಾಟೆಯಾಗಿದ್ದರಿಂದ ಇನ್ನೂ ಸಣ್ಣವನಾಗಿ ಕಾಣುತ್ತಿದ್ದ. ಅವನ ಬಗ್ಗೆ ಕೇಳಿದ ಸಂಗತಿಗಳ ಪ್ರಕಾರ, ವಯಸ್ಸಿನಲ್ಲಾದರೂ ಅವನು ತನ್ನ ತಮ್ಮನಾಗಬಹುದಾದಷ್ಟು ದೊಡ್ಡವನೇ. ಪಾರ್ವತಿಗೆ ಅವನ ಹೆಸರು ಗೊತ್ತಿರಲಿಲ್ಲ. ತುಸುತುಸುವೇ ಕೇಳಿ ತಿಳಿದದ್ದಕ್ಕೆ ಮಸಾಲೆ ಹಚ್ಚಿ ಸಲ್ಲದ ಉತ್ಸಾಹದಿಂದ ರುಚಿಕಟ್ಟಾಗಿ ಹೇಳುತ್ತಿದ್ದಳೇ ಹೊರತು ಯಾವುದೂ ಸ್ಪಷ್ಟವಾಗುವಂತೆ ಹೇಳುತ್ತಿರಲೇ ಇಲ್ಲ. ಈವೊತ್ತು ಬೆಳಿಗ್ಗೆ, ಅವಳು ನಿನ್ನೆ ರಾತ್ರಿ ನಡೆದ ಘಟನೆಯನ್ನು ಹೇಳುವಾಗ ಕೂಡ ಇಂತಹದೇ ಉತ್ಸಾಹ ತುಂಬಿದ ಗೊಂದಲ. ಆದರೂ ವಾಸುದೇವನ್‌ಗೆ ಸಂಶಯ ಉಳಿಯಲಿಲ್ಲ-ಪಾರ್ವತಿಯ ಪಟಪಟ ಮಾತಿನಲ್ಲಿ ಮೂಡಿಬಂದ ಆ ನಾಲ್ವರು ನಿಜಕ್ಕೂ ಹುಡುಕುತ್ತಿದ್ದುದು ತನ್ನನ್ನು ಎಂದು! ಅವರು ತಮ್ಮ ಗ್ಯಾಂಗಿನಿಂದ ಪಿತೂರಿಯಾಗಿದ್ದಾನೆಂದು ಹೇಳಿದ ಹುಡುಗ ತಾನೇ ಎಂದು! ದೇವರೇ ಕಾಪಾಡಿದ ಅನ್ನಿಸಿತು. ಆದರೆ ತಾನು ಸಿಕ್ಕಿಕೊಂಡಂಥ ಈ ಪಾತಾಳಲೋಕದಲ್ಲಿ ಹೀಗೆ ಒಬ್ಬರಿಗೊಬ್ಬರು ತಪ್ಪುಗಂಟಾಗುವಷ್ಟೇ ಆಕಸ್ಮಿಕವಾಗಿ ಭೇಟಿಯಾಗುವುದೂ ಅಸಾಧ್ಯವಲ್ಲ; ಇನ್ನು ಬಹಳ ದಿನ ಇವರಿಂದ ತಪ್ಪಿಸಿಕೊಂಡಿರಲಾರೆನೇನೋ ಅನ್ನಿಸಿದಾಗ ಹೊಟ್ಟೆಯೊಳಗೆ ಮೆಲ್ಲಗೆ ನಡುಕ ಏಳಲು ತೊಡಗಿತು. ಅದೇ ಹೊತ್ತಿಗೆ, ನಿನ್ನೆ ಬಂದ ಹುಡುಗ ನಿಜಕ್ಕೂ ಹುಡುಕುತ್ತಿದ್ದದ್ದು-ಊರಲ್ಲಿ, ಮನೆಯಲ್ಲಿ ಎಲ್ಲರೂ ಕೊಲೆಯಾಗಿರುವನೆಂದೇ ತಿಳಿದಿರುವ-ತನ್ನನ್ನೇ ಇರಬಹುದೆಂಬ ಗುಮಾನಿಯೂ ಕೂಡ ರೋಮಾಂಚಕ್ಕೆ ಕಾರಣವಾಗುತ್ತ ಹೊಟ್ಟೆಯೊಳಗಿನ ನಡುಕವನ್ನೂ ತಡೆಯುತ್ತಿತ್ತು.

ತನ್ನ ಗುಡಿಸಿಲಿನ ಹೊರಗೆ ಚಾರಪಾಯಿಯ ಮೇಲೆ ಜಮಖಾನವೊಂದನ್ನು ಹಾಸಿ ಅಂಗತ್ತ ಮಲಗಿದ್ದ ವಾಸುದೇವನ್ ಮೇಲಿನ ಆಕಾಶದಲ್ಲಿಯ ಚುಕ್ಕೆಗಳನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಹಾಗೆ ಅತೀವ ವಿಹ್ವಲನಾದ: ತಮಗೆ ಈ ಕೆಲಸವನ್ನು ವಹಿಸಿಕೊಟ್ಟವರಿಗೆ ಬೇಕಾದವನು ಕರುಣಾಕರನ್ ಎಂದು ತಪ್ಪು ತಿಳಿದ ಆ ನಾಲ್ವರು ಅವನ ಬೆನ್ನುಹತ್ತಿರಲಾರರಷ್ಟೆ! ಕರುಣಾಕರನ್‌ನ ಜೀವಕ್ಕೆ ಸದ್ಯ ಅಪಾಯ ಹುಟ್ಟಿದ್ದು ಅವನು ನಡೆಸಿದ ತನಿಖೆಯಿಂದಾಗಿ ಅಲ್ಲವಾಗಿರದೆ ಅವನು ತಾನು ಎಂಬ ತಪ್ಪುಕಲ್ಪನೆಯಿಂದಾಗಿರಬಹುದು! ಒಬ್ಬರನ್ನೊಬ್ಬರು ಹುಡುಕುತ್ತಿದ್ದ ಅಣ್ಣತಮ್ಮಂದಿರೇ ಪರಸ್ಪರರ ಜೀವಕ್ಕೆ ಕುತ್ತಾಗಿ ಪರಿಣಮಿಸುತ್ತಿದ್ದ ರೀತಿ ವಾಸುದೇವನ್‌ನಲ್ಲಿ ಹುಟ್ಟಿಸಿದ ಭಾವನೆ ಅವನನ್ನು ಅಲ್ಲಾಡಿಸಿಬಿಟ್ಟಿತು.
ಮಧ್ಯರಾತ್ರಿ ಕಳೆದು ಬಹಳ ಹೊತ್ತಾಗಿತ್ತು. ‘ಡ್ರಾಯ್ವ್-ಇನ್’ ಥಿಯೇಟರಿನ ಬೃಹದಾಕಾರದ ತೆರೆ ಎಂದೋ ಕತ್ತಲಲ್ಲಡಗಿತ್ತು. ವಿಮಾನನಿಲ್ದಾಣಕ್ಕೆ ಹೋಗುವ, ಬಾಂದ್ರಾ ಮಾಹೀಮ್‌ಗಳ ಕಡೆಗೆ ಹೋಗುವ ಹೆದ್ದಾರಿಗಳಲ್ಲಿ ವಾಹನಗಳ ಓಡಾಟದ ಗದ್ದಲ ಕಡಿಮೆಯಾಗಿತ್ತು. ಸುತ್ತಲಿನ ಖಾಡಿಗಳ ದುರ್ವಾಸನೆ ಇದ್ದಕ್ಕಿದ್ದಹಾಗೆ ಹೆಪ್ಪುಗಟ್ಟಿ ಸದ್ದಾಗಿ ರೂಪಾಂತರಗೊಂಡಿತೇನೋ ಎಂಬಂತೆ, ಧಾರಾವಿಯ ಝೋಪಡಪಟ್ಟಿಯ ಉದ್ದಗಲಕ್ಕೂ ಹಬ್ಬಿಕೊಂಡ-ರಾಕ್ಷಸನೊಬ್ಬನ ಶ್ವಾಸೋಚ್ಛ್ವಾಸದ ಹಾಗೆ ಕೇಳಿಸುತ್ತಿದ್ದ-ಸದ್ದೊಂದು ಉಳಿದೆಲ್ಲ ಸದ್ದನ್ನೂ ಮುಳುಗಿಸಿ ಮೇಲಕ್ಕೆದ್ದಿತ್ತು. ಗಾಳಿಯಲ್ಲೀಗ ತುಸು ಚಳಿ ಸೇರಿಕೊಂಡಂತೆ ತೋರಿದರೂ ಹೊದಿಕೆಯನ್ನು ಮೈಮೇಲೆ ಎಳೆದುಕೊಂಡದ್ದು ಗುಂಗಾಡುಗಳ ಕಾಟಕ್ಕಾಗಿತ್ತು. ಆಕಾಶವನ್ನು, ಚುಕ್ಕೆಗಳ ಹೊಳಪಿನಲ್ಲಿ ಬಾಗಿ ನಿಂತ ಅದರ ಕಮಾನನ್ನು ನೋಡುತ್ತಿದ್ದಹಾಗೆ ಅಮ್ಮ-ಅಪ್ಪರ ನೆನಪಿನೊಡನೆ ತನ್ನ ಇಡೀ ಬಾಲ್ಯವೇ ಕಣ್ಣಮುಂದೆ ನಿಂತಂತಾಗಿ ಭಾವನಾವಶನಾದ. ಮಲತಾಯಿಯ ಕಾಟಕ್ಕೆ ತಾನು ಓಡಿಬಂದಿದ್ದರೂ ಈ ಗಳಿಗೆಯಲ್ಲಿ ಅವಳ ಬಗ್ಗೆ ಮನಸ್ಸಿನಲ್ಲಿ ಯಾವ ಬಗೆಯ ದ್ವೇಷದ ಭಾವನೆಯೂ ಇರಲಿಲ್ಲ. ಮನೆಯಲ್ಲಿ ಅಷ್ಟೊಂದು ಬಡತನ ಇದ್ದಿರಲಿಲ್ಲವಾದರೆ ಅವನು ತನ್ನನ್ನು ಹೀಗೆ ಓಡಿಸುತ್ತಲೇ ಇರಲಿಲ್ಲವೇನೋ. ಆದರೂ ಬೆಹರಾಮನ ಮನೆಯಲ್ಲಿ ಕೆಲಸಕ್ಕೆ ನಿಂತು ಮನೆಗೆ ಹಣ ಕಳಿಸುವಾಗ ಕಣ್ಣಮುಂದೆ ಸ್ಪಷ್ಟವಾಗಿ ನಿಲ್ಲುತ್ತಿದ್ದುದು ಅಪ್ಪನ ಮೋರೆ ಮಾತ್ರ. ತಮ್ಮತಂಗಿಯರ ಮೋರೆಗಳು ಅಸ್ಪಷ್ಟವಾಗಿಯಾದರೂ ಆಗೀಗ ಹೊಳೆಯುತ್ತಿದ್ದವು. ಆದರೆ ಮಲತಾಯಿ ಮಾತ್ರ ನೆನಪಿನಲ್ಲಿ ಮಸಕಾಗುತ್ತ ನಡೆದಳು. ಮುಂದೆ ಕೆಲವು ವರ್ಷಗಳ ನಂತರ ಮಲತಾಯಿಯ ತಮ್ಮನೊಬ್ಬ ದುಬಾಯಿಗೆ ಹೋಗಿ ಲೆಕ್ಕವಿಲ್ಲದಷ್ಟು ಹಣ ಗಳಿಸಿದನೆಂದೂ, ಕೇರಳದಲ್ಲಿ ಜಮೀನು ಕೊಂಡನೆಂದೂ, ಮನೆ ಕಟ್ಟಿಸಿದನೆಂದೂ, ತನ್ನ ಹತ್ತಿರದ ಸಂಬಂಧಿಗಳಿಗೆಲ್ಲ ಹಣ ಕಳಿಸುತ್ತಾನೆಂದೂ ಸುದ್ದಿ ಕೇಳುತ್ತಿದ್ದಾಗ, ತನಗೂ ದುಬಾಯಿ ಮಸ್ಕತ್ತುಗಳಿಗೆ ಹೋಗಿ ರಾಶಿಗಟ್ಟಲೆ ಹಣ ಮಾಡಿ ಶ್ರೀಮಂತನಾಗುವ ವಿಚಿತ್ರ ಆಸೆ. ಆಗಲೇ ದುಬಾಯಿ, ಮಸ್ಕತ್ತುಗಳಿಗೆ ಹೋಗುವುದು ಹೇಗೆಂದು ಅರಿಯದ ತಾನು ಈ ಠಕ್ಕರ ಗ್ಯಾಂಗಿನಲ್ಲಿ ಸಿಕ್ಕಿಕೊಂಡದ್ದು. ತನ್ನ ವಿಚಾರ ಇಲ್ಲಿಯವರೆಗೆ ಬಂದು ಮುಟ್ಟಿದಾಗ ಚಾರಪಾಯಿಯ ಮೇಲೆ ಅಂಗತ್ತ ಮಲಗಿದಲ್ಲೇ ‘ಅಮ್ಮಾ””’ ಎಂದು ನರಳಿದ. ಈತ ತನ್ನ ತಮ್ಮನೇ ಹೌದಾದರೆ ಅವನು ಕಲಿಯಲು ಸಾಧ್ಯವಾದದ್ದು ಕೂಡ ಈ ಸೋದರಮಾವನ ಹಣದಿಂದಾಗಿಯೇ. ತಮ್ಮ, ತಂಗಿ-ಇಬ್ಬರೂ ಕಲಿಯುತ್ತಿದ್ದಾರೆ ಎಂದು ಕೇಳಿದ್ದ.

ಮಗ್ಗುಲ ಗುಡಿಸಲಿನಲ್ಲಿ ಚೆಲ್ಲಾಟದ ಸದ್ದು. ಸೂಳೆಯನ್ನು ತಂದಿರಬೇಕು ಅನ್ನಿಸಿತು. ತನ್ನನ್ನು ಇಂಥ ಬದುಕಿನ ಜಾಲದಲ್ಲಿ ಸಿಕ್ಕಿಸಿದ ಆ ದುರ್ಘಟನೆ ನೆನಪಿನಲ್ಲಿ ಎದ್ದು ಬರುತ್ತಿದ್ದ ಹಾಗೆ ಮತ್ತೆ ಎಂದೆಂದೂ ಅದನ್ನು ನೆನೆಯಲಾರೆನೆಂದು ಪಣತೊಟ್ಟದ್ದೂ ನೆನಪಾಗಿ ಲಕ್ಷ್ಯವನ್ನು ಬೇರೆಯೆಡೆ ಹರಿಯಿಸಿದ. ಏನೇ ಆಗಲಿ, ಬೆಳಗಾದದ್ದೇ ಇನ್ನೊಮ್ಮೆ ಮುದುಕನ ಮನೆಗೆ ಹೋಗುತ್ತೇನೆ. ಅವರ ಮನೆ ಬಿಟ್ಟಂದಿನಿಂದ ನಡೆದದ್ದೆಲ್ಲವನ್ನೂ ಹೇಳಿ ಅವರ ವಿಶ್ವಾಸವನ್ನು ತಿರುಗಿ ಗಳಿಸುತ್ತೇನೆ. ಈಗ ತನ್ನ ಬದುಕಿಗೆ ಯಾವ ಅರ್ಥವೂ ಉಳಿದಿಲ್ಲ. ತನ್ನವರ ಬಗ್ಗೆ, ತನ್ನ ಬಾಲ್ಯದ ಬಗ್ಗೆ ಇತರರಿಗೆ ಹೇಳಲು ಆಗದ ಬದುಕು ಬದುಕೇ ಅಲ್ಲ. ಓಟವೇ ತನ್ನ ಪಾಲಿನ ಬದುಕಾಗಿದೆ. ಮತ್ತೊಮ್ಮೆ ಇಲ್ಲಿಂದ ಓಡಬೇಕಾಗಿದೆ. ಓಡುವ ಮೊದಲು ತಮ್ಮನನ್ನೊಮ್ಮೆ ಕಾಣಬೇಕು. ತಾನು ಇನ್ನೂ ಜೀವಂತನಿದ್ದೇನೆ ಎಂಬುದನ್ನು ತೋರಿಸಿಕೊಟ್ಟು ಅವನು ಮುಂಬಯಿ ಬಿಡುವಂತೆ ಮಾಡಬೇಕು. ತನ್ನಿಂದಾಗಿ ಅವನ ಜೀವಕ್ಕುಂಟಾದ ಗಂಡಾಂತರದಿಂದ ಅವನನ್ನು ಪಾರುಮಾಡಬೇಕು..

ರಾತ್ರಿಕಾಲದ ಕತ್ತಲೆ-ಬೆಳಕು, ಶಬ್ದ-ನಿಶ್ಶಬ್ದ ಮನಸ್ಸಿನ ಆಳಕ್ಕೆ ಇಳಿಯುತ್ತಿದ್ದ ಹಾಗೆ ಚಿತ್ರವಿಚಿತ್ರ ಆಕೃತಿಗಳು ಮುಚ್ಚಿದ ಕಣ್ಣುಗಳ ಇದಿರು ಕುಣಿಯತೊಡಗಿದುವು. ಬರಬರುತ್ತ ಆ ಎಲ್ಲ ಆಕೃತಿಗಳೂ ಕರಗಿ ಹೊಸತೇ ಒಂದು ಮೂಡಿಬರುತ್ತಿದ್ದಹಾಗೆ ಅದರ ಭೌಗೋಲಿಕ ಗಡಿಗಳೆಲ್ಲ ಮಾಯವಾಗಿ ಕೇವಲ ದಟ್ಟವಾದ ಜನಸಂದಣಿಯಾಗತೊಡಗಿತು. ಕೆಲಹೊತ್ತಿನ ಮೇಲೆ, ಆ ಸಂದಣಿಯೊಳಗಿಂದಲೇ ದಾರಿಮಾಡಿಕೊಳ್ಳುತ್ತ ಯಾರೋ ತನ್ನ ಕಡೆಗೇ ಬರುತ್ತಿದ್ದಹಾಗೆ ತೋರಿತು. ‘ಯಾರೋ’ ಎನ್ನುವುದಕ್ಕೆ, ‘ತನ್ನತ್ತವೇ ಬರುತ್ತಾರೆ’ ಎನ್ನುವುದಕ್ಕೆ ಕಾರಣವಾದದ್ದು: ಇತ್ತಲೇ ಚಲಿಸುತ್ತಿದ್ದ ಬೆಂಕಿಯ ಕಿಡಿಗಳಂಥ ಎರಡು ಕಣ್ಣುಗಳು. ಆ ಕಣ್ಣು ಹೊತ್ತವನ ಕೈಗಳಿರಬಹುದಾದ ಜಾಗದಲ್ಲಿ ಕಂಡಂತಾದ ಕಪ್ಪು ಹಿಡಿಕೆಯ ಇದಿರು ಝಳಪಿಸುತ್ತಿದ್ದ ಹರಿತವಾದ ಲೋಹದ ಮೊನೆ-ಅಷ್ಟೆ! ಹೊತ್ತು ಹೋದಹಾಗೆ, ಯಾರನ್ನೋ ಹುಡುಕುತ್ತಿದ್ದ ಆ ಯಾರೋ ಒಬ್ಬನೇ ಆಗಿ ಉಳಿಯಲಿಲ್ಲ. ಸಂದಣಿಯೊಳಗಿನ ಪ್ರತಿಯೊಬ್ಬನೂ ತನ್ನ ತನ್ನ ಸರದಿ ಬಂದಂತೆ ಇಲ್ಲ ಯಾರನ್ನೋ ಹುಡುಕುತ್ತಾನೆ, ಇಲ್ಲ ಯಾರದೋ ಹುಡುಕಾಟಕ್ಕೆ ಗುರಿಯಾಗುತ್ತಾನೆ. ಸಂದಣಿಯೆಂಬುದು ಅಂಥ ಚಲನೆಯುಳ್ಳ ಕಾಲುಗಳಾಗುತ್ತದೆ, ಕೈಗಳಾಗುತ್ತದೆ, ಝಳಪಿಸುವ ಮೊನೆಗಳಾಗುತ್ತದೆ. ಇಷ್ಟು ಮಾತ್ರ ಅಲ್ಲ ಎನ್ನುವುದಕ್ಕೆ ಹೊತ್ತು ಸರಿದ ಹಾಗೆ ತಕತಕನೆ ಹೊಳೆಯುವ ಹಾಗೆ ಬೋಳಿಸಿಕೊಂಡ ತಲೆಗಳೂ, ಉದ್ದುದ್ದ ಮೀಸೆಗಳೂ, ರೊಣೆ ತುಂಬಿದ ಮುಂಗೈಗಳೂ, ಕೆಸರು ಮೆತ್ತಿದ ಪಾದಗಳೂ ಆಗುತ್ತದೆ. ಆಮೇಲೆ, ತಕಪಕನೆ ಜಿನುಗುತ್ತ ಸದ್ದು ಮಾಡುವ, ದುರ್ಗಂಧ ಹೊರಡಿಸುವ ಕೆಸರು-ಬರೀ ಕೆಸರು. ನಿದ್ದೆಯಲ್ಲೂ ಹೊಟ್ಟೆ ಹೊರಳಿದಂತಾಗಿ ಎದ್ದು ಕೂರಬೇಕು ಎನ್ನುವಷ್ಟರಲ್ಲಿ ಓಕರಿಕೆ ಬಂದು ಚಾರಪಾಯಿಯ ಮಗ್ಗುಲಲ್ಲೇ ಕಾರಿಕೊಂಡುಬಿಟ್ಟ. ಹತ್ತಿರದ ಒಂದೆರಡು ಗುಡಿಸಲುಗಳಿಂದ-’ಯಾರದು?’ ಎಂದು ಹೊರಟ ಪ್ರಶ್ನೆಯಲ್ಲಿ, ’ನಿಲ್ಲಿಸು’ ಎಂಬ ಗದರಿಕೆಯ ಧ್ವನಿಯೇ ಸ್ಪಷ್ಟವಾಗಿ ಕೇಳಿಸಿದಾಗ ಕಾರಿಕೊಳ್ಳುವುದು ಗಪಕ್ಕನೆ ನಿಂತುಬಿಟ್ಟಿತು. ಮಡಕೆಯಲ್ಲಿ ತುಂಬಿಟ್ಟ ನೀರಿನಿಂದ ಬಾಯಿ ತೊಳೆದುಕೊಂಡ. ಚಾರಪಾಯಿಯ ಮೇಲೆ ಅಡ್ಡವಾಗಬೇಕು ಎನ್ನುವಷ್ಟರಲ್ಲಿ ಕೆಲಹೊತ್ತಿನ ಮೊದಲು ಕಂಡ ಆಯ-ಆಕಾರವಿಲ್ಲದ ಗೊಂದಲದೊಳಗಿಂದಲೇ ಹರಳುಗಟ್ಟಿ ಬರತೊಡಗಿದ ರೂಪದ ಗುರುತು ಸಿಕ್ಕಿದೊಡನೆ ನಿದ್ದೆ ಎಲ್ಲಿಂದ ಎಲ್ಲಿಗೋ ಹಾರಿಹೋಗಿತ್ತು. ಅಂಥ ಸ್ಥಿತಿಯಲ್ಲೇ ಮನಸ್ಸು ಗಟ್ಟಿಯಾದ ನಿರ್ಧಾರಕ್ಕೆ ಬಂದಿತ್ತು: ಇನ್ನು ಹೆದರುವ ಕಾರಣವಿಲ್ಲ. ಬೆಳಗಾದದ್ದೇ ಬೆಹರಾಮನ ಆಫ಼ೀಸಿಗೇ ಹೋಗುತ್ತೇನೆ. ಮುದುಕನಿಗೆ ಎಲ್ಲವನ್ನೂ ಹೇಳಿಬಿಡುತ್ತೇನೆ. ಸಾಧ್ಯವಾದರೆ ತಮ್ಮಿಬ್ಬರನ್ನೂ, ಇಲ್ಲವಾದರೆ ತಮ್ಮನೊಬ್ಬನನ್ನಾದರೂ ಬದುಕಿಸುವ ದಾರಿಯನ್ನು ಅವರೇ ತೋರಿಸಿಯಾರು. ದೇವರಂಥ ಮನುಷ್ಯ ಅವರು.

ಹಾಗೆ ಅಂದುಕೊಳ್ಳುವಾಗ ಮನಸ್ಸಿನ ಆಳದಲ್ಲಿ-ತಮ್ಮ ಹಳ್ಳಿಯೊಳಗಿನ ಹಾಳುಬಿದ್ದ ಈಶ್ವರ ದೇವಾಲಯ; ಪಾವಟಿಗೆಗಳೆಲ್ಲ ದಂಡೆಯಲ್ಲಿಯ ಅಶ್ವತ್ಥ ಮರದ ತರಗೆಲೆಗಳಿಂದ ಆಚ್ಛಾದಿತವಾದ, ನೀರು ಬತ್ತಿದ ತೀರ್ಥ; ಗದ್ದೆಗಳು; ಗೇರುಮರಗಳ ಹಕ್ಕಲುಗಳು; ಒಕ್ಕಲಿಗರು; ಚಾಪೆ ಬುಟ್ಟಿ ಕಟ್ಟುವವರು; ದನಕರುಗಳು; ನಡುವೆಯೇ ಅಮ್ಮ-ಅಪ್ಪ-ಚಿಕ್ಕಮ್ಮ-ತಂಗಿ-ಗೆಳೆಯರು; ಸ್ವಚ್ಛವಾದ ಬೆಳಕು, ಗಾಳಿ; ಹುಲ್ಲು ಹೂವುಗಳ ತಾಜಾತನದ ಗಂಧ; ಜೀವಕಳೆಯಿಂದ ನಳನಳಿಸುವ ನೀಲಿ ಆಕಾಶ; ಅದನ್ನು ಚುಚ್ಚುವಷ್ಟು ಎತ್ತರವಾದ ಅಡಕೆ, ತೆಂಗಿನ ಮರಗಳ ತಲೆಯ ಮೇಲಿಂದ ಎದ್ದುಬರತೊಡಗಿದ ಕೆಂಪು ಸೂರ್ಯನ ಗೋಲ! ಎಂಥದೋ ಖುಶಿಯಿಂದ, ನಿದ್ದೆಯಲ್ಲಿದ್ದ ವಾಸುದೇವನ್‌ನ ಮೋರೆಯ ಮೇಲೆ ಮುಗ್ಧ ಮಗುವಿನ ಮುಗುಳುನಗೆ ಪಸರಿಸಿತ್ತು. ಬೆಳಗಾಗುವಷ್ಟರಲ್ಲಿ ರಾತ್ರಿ ಕಂಡಂತಾದ ಕೂಪ ನೆನಪಿಗೆ ಬಂದು ಮುದುಕನನ್ನು ಕಾಣುವ ತನ್ನ ನಿಶ್ಚಯವೂ ನೆನಪಾಯಿತು. ಹೊರಟೆ ಎಂದುಕೊಂಡವನೇ ಚಾರಪಾಯಿ ಮೇಲೆ ಎದ್ದೇ ಕುಳಿತ. ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡಿರದ್ದು ಅರಿವಿಗೆ ಬರುವ ಮೊದಲೇ ನಿದ್ದೆ ಆವರಿಸಿ ಬಂದ ದೇಹ ತಂತಾನೆ ಜಮಖಾನಿಗೆ ಒರಗಿತು. ತಲೆಯವರೆಗೂ ಮುಸುಕೆಳೆದುಕೊಂಡವನಿಗೆ ಮತ್ತೆ ಎಚ್ಚರವಾದದ್ದು ಮಧ್ಯಾಹ್ನದ ಊಟದ ಹೊತ್ತಿಗೇನೆ! ಥತ್ತೇರಿ ಎಂದುಕೊಂಡ. ತಾನೇ ಅನ್ನ ಬೇಯಿಸುವ ಮನಸ್ಸಾಗಲಿಲ್ಲ. ಒಂದು ದಿನ ಹೊಟೆಲ್ಲಿಗೇ ಹೋದರಾಯಿತು ಎಂದುಕೊಳ್ಳುತ್ತ ಎದ್ದ.

ಪ್ರಾತರ್ವಿಧಿಗಳನ್ನು ಮುಗಿಸಿ ಯುನಿಫಾರ್ಮು ತೊಡುತ್ತ, ಊಟ ಬೇಗ ಮುಗಿಸಬೇಕು, ಒಂದು ಗಂಟೆಗೆ ತನ್ನ ಮಧ್ಯಾಹ್ನದ ಸರದಿಗೆ ಸುರು ಎಂದು ಯೋಚಿಸುತ್ತಿರುವಾಗ ಮುದುಕನನ್ನು ನಿನ್ನೆಯ ಹಾಗೆ ರಾತ್ರಿಗೇಕಾಣುವುದಾಗುತ್ತದೆಯೇನೋ ಅನ್ನಿಸಿತು. ಒಂದು ರೀತಿಯಲ್ಲಿ ಅದೇ ಒಳ್ಳೆಯದೇನೋ ಎಂದೂ ಹೊಳೆಯಿತು. ಈಹೊತ್ತು ಸೋಮವಾರ. ಮುದುಕ ಈಗಾಗಲೇ ಆಫೀಸಿಗೆ ಹೋಗಿರಬಹುದು. ಮಗಳು ಬಂದದ್ದರಿಂದ ರಜೆಯ ಮೇಲೆ ಇದ್ದರೂ ಇದ್ದಿರಬಹುದು. ಆದರೂ ತಾನು ತೊಡಗಿಸಿಕೊಂಡಂಥ ಕೆಲಸಕ್ಕೆ ರಾತ್ರಿಯ ಹೊತ್ತೇ ಉಚಿತವಾದದ್ದೇನೋ ಎಂದು ತೋರಿತು. ಅರೆ! ಇದೇಕೆ ಹೀಗೆ ತಾನು ಜೀವ ಕಾಪಾಡಿಕೊಳ್ಳುವ ಭಾಷೆಯಲ್ಲಿ ವಿಚಾರ ಮಾಡುತ್ತಿದ್ದೇನೆ ಎಂದು ಕೇಳಿಕೊಂಡರೂ ಅದೇನೂ ತಪ್ಪೆಂದು ಭಾವಿಸಲಿಲ್ಲ. ದುಡುಕದೆಯೆ ಕೆಲಸವಾಗುತ್ತಿದ್ದರೆ ಯಾಕೆ ಹಾಗೆಯೇ ಮಾಡಬಾರದು? ಕೊನೆಗೂ ಅವನು ತನ್ನ ತಮ್ಮನಿರಬಹುದು ಎಂಬುದು ಕೇವಲ ಊಹೆಯ ಮಾತು ತಾನೆ? ಅವನನ್ನು ಕಣ್ಣಾರೆ ಕಂಡು ಖಾತ್ರಿ ಮಾಡಿಕೊಳ್ಳುವ ಮೊದಲೇ ಹೀಗೆ ಭಾವನಾವಶನಾಗಿ ಮುದುಕನಿಗೆ ತನ್ನ ಬಗೆಗೆ ಎಲ್ಲವನ್ನೂ ಹೇಳಬೇಕೆ? ಈ ಪಾರ್ವತಿಯನ್ನೂ ನಂಬುವಹಾಗಿಲ್ಲ. ಮುದುಕನನ್ನು ಕೂಡಲೇ ಕಾಣಬೇಕು ಎನ್ನುವ ತನ್ನ ನಿರ್ಧಾರ ಹೀಗೆ ದಿನಬೆಳಗಾಗುವುದರಲ್ಲಿ ಕುಸಿಯುತ್ತಿರುವುದರ ಅರಿವಿನಿಂದ ವಾಸುದೇವನ್ ಕಳವಳಕ್ಕೆ ಒಳಗಾದ. ಇದೆಲ್ಲ ನಿನ್ನೆ ರಾತ್ರಿ ನಿದ್ದೆ ಸರಿಯಾಗಿರದಕ್ಕೇ ಇರಬೇಕು ಎಂದುಕೊಂಡರೂ ಕೆಲಸಕ್ಕೆ ಹೋಗುವ ತಯಾರಿಮಾಡುತ್ತಿದ್ದವನ ಮನಸ್ಸು ಚಂಚಲವಾಗತೊಡಗಿದ ಬಗೆ ಅವನಿಗೇ ಆಶ್ಚರ್ಯವನ್ನುಂಟುಮಾಡಿತ್ತು. ಡ್ರಾಯ್ವ್-ಇನ್ ಥಿಯೇಟರಿನ ವಠಾರದಲ್ಲಿ ಸಣ್ಣ ಇರಾನೀ ರೆಸ್ಟೊರೆಂಟಿಗೆ ಹೋಗಿ ಪಾವ್-ಭಾಜಿ, ಒಂದು ಗ್ಲಾಸು ಹಾಲು ತೆಗೆದುಕೊಳ್ಳಲೆಂದು ಅತ್ತಕಡೆಗೆ ಹೆಜ್ಜೆಹಾಕುತ್ತಿದ್ದವನು ಒಂದು ವಿಚಿತ್ರ ಭಾವನೆಗೆ ವಶನಾದ. ಯಾರುಯಾರಿಂದಲೋ ತಲೆತಪ್ಪಿಸಿಕೊಂಡಿದ್ದವನು ಈಗ ಮೊದಲ ಬಾರಿಗೇ ಕತ್ತಲೆಯ ಮುಸುಕನ್ನು ಬಿಸುಟಿ ಒಗೆದು ಹೊರಗೆ ಬಂದಿದ್ದೇನೆ, ರಾಜಾರೋಷವಾಗಿ ಬೆಳ್ಳಂಬೆಳಕಿನಲ್ಲಿ ತಿರುಗಾಡುತ್ತಿದ್ದೇನೆ ಎಂಬಂತಹ ಭಾವನೆಯಿಂದ ಕೈಕಾಲುಗಳಲ್ಲಿ ನಡುಕ ಸೇರಿಕೊಳ್ಳತೊಡಗಿತು. ಸಾಯುವುದು ಅಷ್ಟೊಂದು ಸುಲಭವಾದ ಕೆಲಸವಲ್ಲವೇನೊ! ರೆಸ್ಟೊರೆಂಟಿನಲ್ಲಿ ಪ್ರತಿಯೊಬ್ಬನ ದೃಷ್ಟಿಯೂ ತನ್ನ ಮೇಲೆಯೇ ಊರಿದಂತೆ ತೋರುತ್ತಿದ್ದುದು ಕೇವಲ ಭ್ರಮೆಯಾಗಿರಬಹುದೆ? ತನ್ನ ಚಟುವಟಿಕೆಗಳಲ್ಲಿ ಅಂಥ ದೊಡ್ಡ ಬದಲೇ ಆಗಿರುವಾಗ ಹೀಗೇಕೆ ಒಮ್ಮೆಲೇ ಧೈರ್ಯ ಕಳಕೊಳ್ಳುತ್ತಿದ್ದೇನೆ? ನಿನ್ನೆ ಮುದುಕನನ್ನು ಕಂಡದ್ದಕ್ಕೇ? ಎಲ್ಲರಿಂದಲೂ ತಲೆಮರೆಸಿಕೊಂಡವನು, ತಂದೆ-ತಾಯಿಗಳ ಪಾಲಿಗಂತೂ ಸತ್ತೇಹೋದವನು ಈಗ ಇದ್ದಕ್ಕಿದ್ದ ಹಾಗೆ ತನ್ನ ಪರಿಚಯ ಇದ್ದವರ ಕಣ್ಣುಗಳಲ್ಲಿ ಮತ್ತೆ ಹೊಸತಾಗಿ ಹುಟ್ಟಿಬರುವ ಈ ಸಂದರ್ಭ ಈ ಮೊದಲು ಊಹಿಸಿದ ಭಯಕ್ಕೆ ಕಾರಣವಾಗುತ್ತಿರಬಹುದೆ? ವಾಸುದೇವನ್ ವಿಹ್ವಲನಾದ. ಅಡಗಿಕೊಳ್ಳಲು ಮುಂಬಯಿಯಂಥ ಊರು ಇನ್ನೊಂದಿರಲಾರದು ಎಂದುಕೊಂಡವನಿಗೆ ತನ್ನ ಬಟ್ಟೆಗಳನ್ನೆಲ್ಲ ಕಳಚಿ ಬಟಾಬಯಲಿನಲ್ಲಿ ಬಿಟ್ಟಂತಹ ಅನುಭವವಾಗತೊಡಗಿತು. ಕಣ್ಣು ಕುಕ್ಕಿಸುವ ಹೊರಗಿನ ಬಿಸಿಲು ತಾನು ಇದೀಗ ಎಷ್ಟೊಂದು ಆರಕ್ಷಿತನೆನ್ನುವುದನ್ನು ತೋರಿಕೊಡುತ್ತಿರುವ ಭಾಸವಾದಾಗ, ಈ ಒಂದು ದಿವಸ ಕೆಲಸಕ್ಕೇ ಹೋಗದಿದ್ದರೆ ಹೇಗೆ ಅನ್ನಿಸಿತು. ಕೂಡಲೇ ನೇರವಾಗಿ ಕೌಂಟರ್ ಮೇಲಿನ ಟೆಲಿಫೋನ್‌ಗೆ ಹೋಗಿ ತಾನು ಕೆಲಸ ಮಾಡುತ್ತಿದ್ದ ‘ಸೆಕ್ಯುರಿಟಿ ಏಜೆನ್ಸಿ’ಗೆ ಫೋನ್ ಮಾಡಿದ. ಸುಪರ್ವಾಯ್ಜರ್ ದುಬೆ ಅದಾಗಲೇ ಬಂದುಹೋಗಿಯಾಗಿತ್ತು. ಮಧ್ಯಾಹ್ನದ ಸರದಿಯ ಜನವನ್ನು ನಕ್ಕಿಮಾಡಿಯೇ ಹೋಗಿರಬೇಕು. ರಜೆ ಪಡೆಯುವುದಿದ್ದರೆ ಬೆಳಗಿಗೇ ಫೋನ್ ಮಾಡಬೇಕಿತ್ತು. ಫೋನ್ ತೆಗೆದುಕೊಂಡ ಹುಡುಗನನ್ನೇ ಕೇಳಿಕೊಂಡ-ತಾನು ಫೋನ್ ಮಾಡಿದ ಸುದ್ದಿಯನ್ನು ದುಬೆಗೆ ತಿಳಿಸುವಂತೆ. ದುಬೆ ಸಿಕ್ಕರೆ ಬರಿಯ ಒಂದು ದಿನದ ರಜೆ ಪಡೆಯುವ ಮನಸ್ಸಾಗಿತ್ತು. ಈಗ ಇದ್ದಕ್ಕಿದ್ದಹಾಗೆ ಎರಡು ದಿನಗಳ ರಜೆ ಪಡೆಯುವ ಮನಸ್ಸಾಯಿತು. ಸಾಧ್ಯವಾದರೆ ಇನ್ನೊಮ್ಮೆ ಫೋನ್ ಮಾಡುತ್ತೇನೆ, ಇಲ್ಲವಾದರೆ ನೀನೇ ತಿಳಿಸಿಬಿಡು ಎನ್ನುವಾಗಲೇ ಇನ್ನೊಮ್ಮೆ ಫೋನ್ ಮಾಡಲಾರೆನೆನ್ನುವ ನಿರ್ಧಾರಕ್ಕೆ ಬಂದು ಆಗಿತ್ತು. ಕಳೆದ ಒಂದು ವರ್ಷದಲ್ಲಿ ಒಂದೂ ದಿನ ಬಿಡದೆ ರಾತ್ರಿ ಸರದಿಯಲ್ಲಿ ಕೆಲಸ ಮಾಡಲು ತಕರಾರು ಮಾಡಿರದ ತನ್ನನ್ನು ಎರಡು ದಿನಗಳ ಗೈರುಹಾಜರಿಗಾಗಿ ಕೆಲಸದಿಂದ ತೆಗೆದುಹಾಕಲಾರ ದುಬೆ. ಹಾಗೆ ನೋಡಿದರೆ ದುಬೆ ಒಳ್ಳೆಯ ಮನುಷ್ಯ. ಮಿಲಿಟರಿಯಿಂದ ನಿವೃತ್ತನಾದವನಾದ್ದರಿಂದ ತುಂಬ ಕಟ್ಟುನಿಟ್ಟಾದ ಶಿಸ್ತಿನವನು. ಇಷ್ಟು ದಿವಸ ಮಲ್ಬಾರ್ ಹಿಲ್, ಬ್ಯಾಕ್‌ಬೇ ರಿಕ್ಲಮೇಶನ್, ಕುಲಾಬಾ ಮೊದಲಾದ ಕಡೆಗಳಲ್ಲಿಯ ಶ್ರೀಮಂತರ ವಸತಿಗಳ ದೊಡ್ಡದೊಡ್ಡ ಕಟ್ಟಡಗಳ ಪಹರೆಯ ಕೆಲಸ ಮಾಡುತ್ತಿದ್ದ ತಾನು ಇತ್ತೀಚೆಗಷ್ಟೇ ಬಾಂದ್ರಾಕ್ಕೆ ಬಂದಿದ್ದ. ಅಲ್ಲಿಯೂ ಕೂಡ ರಾತ್ರಿ ಪಾಳಿಯ ಕೆಲಸ ಮಾಡುತ್ತಿದ್ದವನು ಎರಡು ದಿನಗಳ ಹಿಂದಷ್ಟೇ ಮಧ್ಯಾಹ್ನದ ಪಾಳಿಗೆ ತನ್ನ ’ಡ್ಯೂಟಿ’ಯನ್ನು ಬದಲಿಸಿಕೊಂಡಿದ್ದ ಈಗ ತನ್ನ ಜೀವಕ್ಕಿರುವ ಕುತ್ತು ಲಕ್ಷ್ಯಕ್ಕೆ ಬಂದಾಗ ಮತ್ತೆ ರಾತ್ರಿಯ ಕೆಲಸಕ್ಕೇ ಹಿಂತಿರುಗುವ, ಸಾದ್ಯವಾದರೆ ಈ ವಸತಿಯಿಂದ ದೂರವಾದ ಜಾಗಕ್ಕೆ ವರ್ಗ ಮಾಡಿಸಿಕೊಳ್ಳುವ ಮನಸ್ಸಾಯಿತು. ಆತ್ಮಸಂರಕ್ಷಣೆಯ ಈ ವಿಚಾರಸರಣಿ ಅರಿವಿಗೆ ಬಂದಷ್ಟೂ ಇಷ್ಟು ದಿವಸವೇ ಮುಂಬಯಿಯನ್ನು ಹೇಗೆ ಬಿಟ್ಟುಹೋಗಲಿಲ್ಲ ಎಂಬುದರ ಬಗೆಗೆ ಆಶ್ಚರ್ಯವಾಗತೊಡಗಿತು. ಅದೇ ಹೊತ್ತಿಗೆ, ಅನ್ನ ವಸ್ತ್ರಗಳಿಸಲು, ತುಸು ಚೈನಿ ಮಾಡಲು, ಅವಶ್ಯಬಿದ್ದರೆ ಅಡಗಿಕೊಳ್ಳಲು ಮುಂಬಯಿಯಂಥ ಶಹರು ಇನ್ನೊಂದು ಇರಲಾರದೇನೋ ಎಂದು ತೋರಿತು.

ಪಾವ್-ಭಾಜಿ, ಹಾಲು ಮುಗಿಸಿ ಹಸಿವು ಹಿಂಗಿಸಿಕೊಂಡ ಹೊಟ್ಟೆ ಹೊಚ್ಚ ಹೊಸ ಧೈರ್‍ಯಕ್ಕೆ ಎಡೆಮಾಡಿಕೊಟ್ಟಾಗ ತನ್ನ ಈವರೆಗಿನ ವಿಚಾರಸರಣಿಯ ಬಗ್ಗೆ ಅಸಮಾಧಾನವೆನ್ನಿಸಿತು. ತನ್ನಿಂದಾಗಿಯೆ ಜೀವಕ್ಕೆ ಕುತ್ತನ್ನು ತಂದುಕೊಂಡ ತಮ್ಮನನ್ನು ಹುಡುಕಿ ತೆಗೆಯಬೇಕು. ಬಹುಶಃ ವಿಚಾರಮಾಡುವ ಮೊದಲೇ ತಾನು ಎರಡು ದಿನಗಳ ರಜೆ ಪಡೆದದ್ದು ಈ ಕೆಲಸಕ್ಕಾಗಿಯೆ ಇರಬೇಕು. ಅವನು ಸಿಕ್ಕರೆ, ಇಬ್ಬರೂ ಕೂಡಿಯೇ ಒಮ್ಮೆ ಹುಟ್ಟೂರಿಗೆ ಹೋಗಿ ಅಪ್ಪ, ಚಿಕ್ಕಮ್ಮ, ಲಲಿತಾರನ್ನೂ ಕಾಣಬೇಕು. ಈ ಆಸೆ ಹುಟ್ಟಿದ ಗಳಿಗೆಯಲ್ಲಿ ಕಣ್ಣಮುಂದೆ ನಿಂತ-ನಿನ್ನೆ ನಿದ್ದೆಗಣ್ಣಿನಲ್ಲೂ ತನ್ನ ಮನಸ್ಸನ್ನಾವರಿಸಿಬಿಟ್ಟ-ಹಳ್ಳಿಯ ವಿವರಗಳು ಎಷ್ಟೊಂದು ಬೆಚ್ಚಗಿನ ಭಾವನೆಗೆ ಎಡೆಮಾಡಿಕೊಟ್ಟವೆಂದರೆ, ತನ್ನ ಕೊಲೆಯನ್ನು ಕುರಿತು ಅಪ್ಪನಿಗೆ ತಾನೇ ಬರೆದ ಪತ್ರದ ಬಗ್ಗೆ ಆಶ್ಚರ್ಯವಾಗತೊಡಗಿತು. ಅಂತಹ ಆಶ್ಚರ್ಯದ ಭಾವನೆಯೊಳಗಿಂದಲೇ ಹುಟ್ಟಿಬಂದ ಹೊಸ ನಿರ್ಧಾರವನ್ನು ಕೃತಿಗೆ ಇಳಿಸಲು ತವಕಪಟ್ಟವನ ಹಾಗೆ ಲಗುಬಗೆಯಿಂದ ತಿಂಡಿಯ ಬಿಲ್ಲಿನ ಹಣವನ್ನು ಕೌಂಟರಿಗೆ ಒಪ್ಪಿಸಿ ರೆಸ್ಟೊರಂಟಿನ ಹೊರಗೆ ಬಿದ್ದು ಗುಡಿಸಲಿನ ಹಾದಿ ಹಿಡಿದ. ಹಾದಿಗುಂಟ ಬಣ್ಣಬಣ್ಣದ ಹಗಲುಗನಸುಗಳು.

ಗುಡಿಸಲನ್ನು ತಲುಪುವಷ್ಟರಲ್ಲಿ ವಾಸುದೇವನ್‌ನ ಯೋಜನೆಯಲ್ಲಿ ಮತ್ತೆ ಬದಲಾಗಿತ್ತು. ಕೆಲಹೊತ್ತಿನ ಮೊದಲಷ್ಟೇ ಬೆಹರಾಮನನ್ನು ತಾನು ರಾತ್ರಿಯ ಹೊತ್ತಿಗೆ ಭೇಟಿಯಾಗಲು ನಿಶ್ಚಯಿಸಿದ್ದೆ ಎಂಬುದು ಲಕ್ಷ್ಯಕ್ಕೆ ಬರುವ ಹೊತ್ತಿಗೆ ಅವನು ಚರ್ಚ್‌ಗೇಟ್ ತಲುಪಿ, ಸ್ಟೇಷನ್ನಿನ ಹೊರಗೆ ಬಿದ್ದು, ‘ಈರೊಸ್’ ಸಿನೇಮಾ ಥಿಯೇಟರಿನ ಹಿಂದೆ ಇದ್ದ ಬೆಹರಾಮನ ಆಫೀಸಿನ ಕಡೆಗೆ ಹೆಜ್ಜೆ ಇಟ್ಟಾಗಿತ್ತು. ಆಗಲೇ ಮಧ್ಯಾಹ್ನದ ಮೂರು ಗಂಟೆ. ಚರ್ಚ್‌ಗೇಟ್ ಸ್ಟೇಷನ್ ಹೊರಗಿದ್ದ ಚೌಕದಲ್ಲಿಯ ವಾಹನಗಳ, ಜನಗಳ ಓಡಾಟ ನೋಡುತ್ತಿದ್ದ ಹಾಗೆ ಅನೇಕ ತಿಂಗಳ ನಂತರ ತಾನು ಇತ್ತಕಡೆಗೆ ಬರುತ್ತಿದ್ದೇನೆ ಎಂಬುದು ಲಕ್ಷ್ಯಕ್ಕೆ ಬಂದು ಕಣ್ಣರಳಿಸಿದ. ಎಂತೆಂತಹವೋ ಆಸೆ ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಹೊತ್ತು ಸಾಗಿದ್ದ ಆ ಸಂದಣಿಯಲ್ಲಿ ಸೇರಿಹೋಗುವಾಗ ವಾಸುದೇವನ್ ಉತ್ಸಾಹಿತನಾದ. ಧಾರಾವಿಯ ಝೋಪಡಪಟ್ಟಿಯ ಜಗತ್ತಿನಿಂದ ತೀರ ಭಿನ್ನವಾದ ಜಗತ್ತು ಇದು. ಇಲ್ಲಿಯ ಗಾಳಿಬೆಳಕುಗಳಿಗೂ ಬೇರೆಯೆ ಒಂದು ಡೌಲು, ದರ್ಪ. ಮುದುಕನನ್ನು ಅವನ ಆಫೀಸಿನಲ್ಲೇ ಕಾಣುವ ತವಕದಲ್ಲಿ ತಾನು ಉಟ್ಟ ಡ್ರೆಸ್ಸು ಈಗ ಮೊದಲ ಬಾರಿಗೇ ಲಕ್ಷ್ಯಕ್ಕೆ ಬಂದಾಗ ಮನಸ್ಸಿಗೆ ಬಹಳ ಗೆಲುವಾಯಿತು. ಕಪ್ಪು ಟೆರ್ರಿವೂಲ್ ಪ್ಯಾಂಟು, ಅಚ್ಚಬಿಳಿಯ ಟೆರ್ರಿಲೀನ್ ಶರ್ಟು. ಪ್ಯಾಂಟಿಗೆ ಸರಿಹೋಗುವ ಕಪ್ಪು ಬಣ್ಣದ ಬೂಟುಗಳು. ಮುದುಕನು ಕೂಡ ಅವನನ್ನು ಬಹಳ ಖುಶಿಯಿಂದಲೇ ಬರಮಾಡಿಕೊಂಡು, “ಇಲ್ಲಿ ಆಫೀಸಿನಲ್ಲಿ ಬೇಡ. ಹೊರಗೇ ಹೋಗೋಣ,” ಎಂದು ಹತ್ತಿರದ ‘ಏಶಿಯಾಟಿಕ್’ ರೆಸ್ಟೊರಂಟಿಗೆ ಕರೆದೊಯ್ದು ಚಹ ಕುಡಿಯುವಾಗ ಅವನ ಡ್ರೆಸ್ಸಿನ ಬಗೆಗೆ ಸಂತೋಷ ವ್ಯಕ್ತಪಡಿಸಿಯೇ ಮಾತಿಗೆ ಆರಂಭಿಸಿದ್ದ.

ಬೆಹರಾಮನ ಮನೆಗೆ ಬಂದ ಹುಡುಗನ ಹೆಸರು ಕೊನೆಗೂ ಕರುಣಾಕರನ್ ಹೌದು ಎಂದು ತಿಳಿದಾಗ ವಾಸುದೇವನ್‌ಗೆ ಆದ ಉಲ್ಲಾಸ ಅಷ್ಟಿಷ್ಟಲ್ಲ. ಬೆಹರಾಮನಿಗೆ ಆ ಬಗ್ಗೆ ನೆರವಾಗಿ ಪ್ರಶ್ನೆ ಕೇಳಿ ಅವನಿಂದ ಬರಬಹುದಾದ ಉತ್ತರವನ್ನು ಉಸಿರು ಬಿಗಿಹಿಡಿದ ಕುತೂಹಲದಿಂದ ಕಾಯುತ್ತಿರುವಾಗ ಕಿವಿಯ ಮೇಲೆ ಬಿದ್ದ ಹೆಸರು ಹೃದಯ ಒಂದು ಬಡಿತ ತಪ್ಪಿತೆನ್ನುವ ಭಾವಕ್ಕೆ ಕಾರಣವಾಯಿತು. ಆದರೆ ಮುದುಕ ಮಾತ್ರ ಈ ಆಕಸ್ಮಿಕಕ್ಕೆ ವಿಶೇಷ ಮಹತ್ವ ಕೊಟ್ಟಂತೆ ತೋರಲಿಲ್ಲ. ‘ಕರುಣಾಕರನ್’-ಇದು ಕೇರಳೀಯರಲ್ಲಿ ಸಾಮಾನ್ಯವಾದ ಹೆಸರು. ಕೇವಲ ಹೆಸರ ಮೇಲಿಂದ ತನ್ನ ಮನೆಗೆ ಬಂದ ಕರುಣಾಕರನ್ ಹಾಗೂ ವಾಸುದೇವನ್ ಹುಡುಕುತ್ತಿದ್ದ ಕರುಣಾಕರನ್ ಒಬ್ಬನೇ ಎಂದು ನಂಬಲು ಅವನು ಸಿದ್ಧನಿರಲಿಲ್ಲ.
“ಸರ್, ಅವನು ನನ್ನ ತಮ್ಮ. ಅವನು ಹುಡುಕುತ್ತಿದ್ದದ್ದು ನನ್ನನ್ನೇ.”
ಇದು ತನ್ನ ಬಾಯಿಯಿಂದಲೇ ಹೊರಟ ಮಾತು ಎಂಬುದರ ಮೇಲೆ ಸ್ವತಃ ವಾಸುದೇವನ್‌ಗೇ ವಿಶ್ವಾಸ ಮೂಡಲಿಲ್ಲ. ಬಾಯಿಂದ ಹೊರಟದ್ದು ಶಬ್ದಗಳಾಗಿ ತೋರುವ ಬದಲು ಗಾಳಿಯಲ್ಲಿ ತೂರಿಬಂದ ಕಾಗದದ ತುಂಡುಗಳಂತಹದು ಎನೋ ತಮ್ಮ ಕಡೆಗೇ ಬರುವಷ್ಟರಲ್ಲಿ ಅದೃಶ್ಯವಾದಂತೆ ಕಂಡದ್ದು ಬರಿಯ ಭ್ರಮೆಯಲ್ಲ ಎನ್ನುವುದನ್ನು ಮುಂದೆ ಕುಳಿತ ಬೆಹರಾಮನ ಮೋರೆಯೂ ಸಾರುತ್ತಿತ್ತು. ಬಾಯಿಬಿಟ್ಟು ಹೇಳದಿದ್ದರೂ ಅವನ ಮೇಲೆ ತನ್ನ ಮಾತು ಎಳ್ಳಶ್ಟೂ ಪರಿಣಾಮ ಮಾಡಿಲ್ಲ ಎನ್ನುವುದಕ್ಕೆ ಅವನ ಮೋರೆಯ ಮೇಲೆ ಮೂಡಿದ ಅಪನಂಬಿಕೆಯ ಛಾಯೆಯೇ ಸಾಕ್ಷಿಯಾಗಿತ್ತು. ಕಣ್ಣುಗಳೆರಡೂ ತನ್ನ ಮೇಲೆ ಊರಿಯೂ ಅವು ತನ್ನನ್ನು ನೋಡುತ್ತಿಲ್ಲ ಎನ್ನುವ ಅನಿಸಿಕೆ ಹುಟ್ಟಿಸುತ್ತಿದ್ದ ನೋಟದಲ್ಲಿ; ತುಟಿಗಳ ಅಂಚಿನಲ್ಲಿ ಕಂಡಂತಾದ ವಿಚಿತ್ರ ಮುಗುಳುನಗೆಯಲ್ಲಿ; ಚಕ್ಕನೆ ಬದಲುಗೊಂಡ ಮೋರೆಯ ತ್ವಚೆಯ ಕಾಂತಿಯಲ್ಲಿ; ಎಲ್ಲೋ ಹೇಗೋ, ಅಂತೂ: ‘ಇಂಥ ಒಂದು ಊಹೆಯ ಭರದಲ್ಲಿ ನಿನ್ನೆ ಅಷ್ಟೆಲ್ಲ ಉದ್ವೇಗಕ್ಕೆ ಒಳಗಾಗಿದ್ದೆಯಾ?’ ಎಂದು ಕೇಳುವಂಥ ಮುಖಭಾವ ವಾಸುದೇವನ್ನನನ್ನು ಸಂಪೂರ್ಣವಾಗಿ ಧೃತಿಗೆಡಿಸಿಬಿಟ್ಟಿತು. ಕರುಣಾಕರನ್ ಬಂದದ್ದು ಮೂರು ವರ್ಷಗಳ ಹಿಂದೆ ನಡೆದ ಕೊಲೆಯ ಬಗೆಗೆ ತಿಳಿಯಲು ಎಂಬುದನ್ನು ಬೆಹರಾಮ್ ದೃಢವಾಗಿ ನಂಬಿದ್ದಾನೆನ್ನುವುದು ವಾಸುದೇವನ್ ಬಲ್ಲ. ಆದರೆ ಕರುಣಾಕರನ್‌ಗೆ ಆ ಕೊಲೆಯಲ್ಲಿ ಆಸ್ಥೆ ಹುಟ್ಟಿದ್ದು ಕೊಲೆಯಾದವನು ಅವನ ಅಣ್ಣನಾದ ತಾನು ಎಂಬ ತಪ್ಪು ತಿಳಿವಳಿಕೆಯಿಂದ ಎಂಬುದಾಗಲಿ, ಆ ತಪ್ಪು ತಿಳಿವಳಿಕೆ ಹುಟ್ಟಿದ್ದು ತನ್ನ ಕೊಲೆಯನ್ನು ತಾನೇ ಚಿತ್ರಿಸಿದ ಒಂದು ವಿಚಿತ್ರ ಪತ್ರದಿಂದ ಎಂಬುದಾಗಲಿ ಈ ಮುದುಕನಿಗೆ ಗೊತ್ತಿಲ್ಲ. ಅದೆಲ್ಲವನ್ನೂ ತಿಳಿಸಲೆಂದೇ ಬಂದ ವಾಸುದೇವನ್‌ಗೆ ಈಗ ಯಾವುದರ ಬಗೆಗೂ ಉತ್ಸಾಹವೇ ಉಳಿಯಲಿಲ್ಲ. ಕಣ್ಣು ಕುಕ್ಕಿಸುವಂತೆ ಬೆಳಕು ಝಝಗಿಸುವ, ಜನರ ಗದ್ದಲ ತುಂಬಿದ ರೆಸ್ಟೊರಂಟು ತಾನು ಬಂದಂಥ ಕಾರ್ಯಕ್ಕೆ ತಕ್ಕ ಜಾಗವಾಗಿ ತೋರಲಿಲ್ಲ. ಬಾಯಿಂದ ಆಡಿದ ಮಾತುಗಳಿಂದ ಮುಂದೆ ಕೂತವನ ಅಂತಃಕರಣ ಹೊಗಬಹುದೆಂಬ ಧೈರ್ಯವೂ ಹುಟ್ಟದಾಯಿತು. ಎಲ್ಲಕ್ಕೂ ಮಿಗಿಲಾಗಿ, ಅವನ ಮೋರೆಯಲ್ಲಿ ಕಂಡ ‘ಏನೋ’ ಈ ಕರುಣಾಕರನ್ ತನ್ನ ತಮ್ಮನೆಂಬುದರ ಬಗೆಗೇ ಸಂಶಯ ಹುಟ್ಟಿಸಹತ್ತಿತು. ಅತ್ತುಬಿಡಬೇಕು ಅನ್ನಿಸಿತು. ತಾನು ಸತ್ತದ್ದು ಕೊನೆಗೂ ನಿಜವೆಂದೇ ಮನೆಯವರೆಲ್ಲ ನಂಬಿರುವಾಗ ಮೂರು ವರ್ಷಗಳ ಹಿಂದೆ ಬೆಹರಾಮನ ಮನೆ ಬಿಟ್ಟಂದಿನಿಂದ ತಾನು ಪಟ್ಟ ಯಾತನೆಗೆ ಈಗ ಯಾವ ಅರ್ಥವೂ ಉಳಿಯಲಿಲ್ಲ. ಬೆಹರಾಮನಿಗೆ ಅದೆಲ್ಲವನ್ನೂ ಈಗ ಹೇಳುವುದು ನಿರರ್ಥಕವೆನಿಸಿತು. ಇಷ್ಟು ಮಾತ್ರ ನಿಜ: ತಮ್ಮನಾದವನು ತಾನು ಸತ್ತ ಬಗೆಯನ್ನು, ಅಥವಾ ತಾನು ಇನ್ನೂ ಜೀವಂತ ಇರುವುದನ್ನು ಪತ್ತೆ ಮಾಡುತ್ತಿದ್ದಾನೆ ಎಂಬ ಕಲ್ಪನೆಯೇ ಎಷ್ಟೊಂದು ರೋಮಾಂಚಕಾರಿಯಾಗಿತ್ತೆಂದರೆ, ತನ್ನಿಂದಾಗಿಯೇ ಕರುಣಾಕರನ್‌ನ ಪ್ರಾಣಕ್ಕೆ ಉಂಟಾದ ಅಪಾಯದಿಂದ ಅವನನ್ನು ರಕ್ಷಿಸುವುದರಲ್ಲಿ ತನ್ನ ಬದುಕು ಹೊಸ ಅರ್ಥ ಕಂಡುಕೊಳ್ಳತೊಡಗಿದೆ ಅನ್ನಿಸಿತ್ತು. ಎದೆಯುಬ್ಬಿತ್ತು.

ವಾಸುದೇವನ್ನನ ಮೋರೆಯನ್ನು ನೋಡುತ್ತ ಕುಳಿತುಬಿಟ್ಟ ಬೆಹರಾಮನಿಗೆ ಅದೇನಾಯಿತೋ-ಸರಕ್ಕನೆ, ವಾಸುದೇವನ್‌ನ ಭುಜ ತಟ್ಟಿ, ಹತ್ತಿದ ತಂದ್ರಿಯಿಂದ ಎಚ್ಚರಿಸುವ ಹಾಗೆ, ‘ನೋಡು ವಾಸುದೇವನ್, ನಿನಗೆ ಇದೆಲ್ಲದರ ಬಗೆಗೆ ಇಷ್ಟೊಂದು ಬಲವಾದ ಭಾವನೆಗಳಿವೆಯೆಂದಮೇಲೆ ಕರುಣಾಕರನ್ ನಿನ್ನ ತಮ್ಮನಿದ್ದರೂ ಇರಬಹುದು; ನೀನು ಹೇಳಿದ ಕಾರಣಕ್ಕಾಗಿ ಅಲ್ಲದಿದ್ದರೂ ಒಂದು ದಿವ್ಯ ಆಕಸ್ಮಿಕವಾಗಿರಬಹುದು. ಅವನು ಹುಡುಕುತ್ತಿದ್ದುದು ತನ್ನ ಆಣ್ಣನನ್ನು ಎಂಬುದರಲ್ಲಿ ನನಗೂ ವಿಶ್ವಾಸವಿದೆ. ಆ ಅಣ್ಣ ನೀನೇ ಆದರಂತೂ ಅದರಷ್ಟು ಸುಖದಾಯಕ ಸಂಗತಿ ಇನ್ನೊಂದಿರಲಾರದು. ಇದನ್ನು ಗೊತ್ತುಪಡಿಸುವುದು ಅಷ್ಟೊಂದು ಕಷ್ಟದ ಕೆಲಸವಲ್ಲ. ನೀವಿಬ್ಬರೂ ಪರಸ್ಪರರನ್ನು ಭೇಟಿಯಾದಿರೆಂದರೆ ಎಲ್ಲ ಗೊತ್ತಾಗುತ್ತದೆ. ಸದ್ಯಕ್ಕೆ ಅವನ ಜೀವಕ್ಕುಂಟಾದ ಗಂಡಾಂತರವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತುಸು ಸಾವಧಾನದಿಂದ ವರ್ತಿಸೋಣ. ದುಡುಕುವುದು ಬೇಡ. ನಾನೇ ಅವನನ್ನು ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ. ಆಮೇಲೆ ನಮ್ಮ ಮನೆಯಲ್ಲಿ ಇಲ್ಲವಾದರೆ ಇನ್ನು ಎಲ್ಲಿಯಾದರೂ ಸುರಕ್ಷಿತವಾದ ಜಾಗದಲ್ಲಿ ಕೂಡೋಣ. ನಮ್ಮ ಪಾರ್ವತಿಯಿಂದಲೇ ಹೇಳಿ ಕಳುಹಿಸುತ್ತೇನೆ. ಈಗ ನಿಶ್ಚಿಂತವಾಗಿರು.’-ಇಲ್ಲ, ಬೆಹರಾಮನಿಂದ ಹೀಗೆ ಮಾತನಾಡುವುದು ಆಗಲೇ ಇಲ್ಲ. ವಾಸುದೇವನ್‌ನನ್ನು ಸಂತಯಿಸುವಂತಹದು ಏನನ್ನಾದರೂ ಮಾತನಾಡಬೇಕು ಅನ್ನಿಸಿದ್ದರೂ ಕರುಣಾಕರನ್‌ನ ಅಣ್ಣನೀತನೆಂದು ನಂಬಲು ಸಾಧ್ಯವಾಗದಾದ ತನ್ನ ಮಾತುಗಳು ಅಪ್ರಾಮಾಣಿಕವಾಗುವ ಭಯವಾಯಿತು. ತುಟಿ ಬಿಚ್ಚುವುದೇ ಕಷ್ಟವಾಗಹತ್ತಿದಾಗ ಭುಜದ ಮೇಲೆ ಇರಿಸಿದ ಕೈಯ ಸ್ಪರ್ಶದಲ್ಲಿ ಕೂಡ ಯಾಂತ್ರಿಕತೆ ಸೇರಿಕೊಳ್ಳತೊಡಗಿದ ಅರಿವು ಬಂದು ಸರಕ್ಕನೆ ತನ್ನ ಕೈಯನ್ನು ಹಿಂತೆಗೆದುಕೊಂಡ. “ನೋಡು ವಾಸು, ನಿನ್ನೆ ಇಡೀ ರಾತ್ರಿ ಸರಿಯಾಗಿ ನಿದ್ದೆ ಆಗಿರದಕ್ಕೋ ಏನೋ ತುಂಬ ದಣಿವು ಆಗತೊಡಗಿದೆ. ತಪ್ಪು ತಿಳಿಯಬೇಡ. ಇನ್ನೊಮ್ಮೆ ಮನೆಗೇ ಬಾ, ನಿನ್ನ ಹಕೀಕತ್ತನ್ನೆಲ್ಲ ಹೇಳುವೆಯಂತೆ. ಕೂಡಿಬಂದರೆ ಕರುಣಾಕರನ್ನನನ್ನೂ ಕಾಣುವೆಯಂತೆ” ಎಂದ. ‘ನಾಳೆ ಕರುಣಾಕರನ್‌ನನ್ನು ನಾನು ಅವನ ಆಫೀಸಿನಲ್ಲಿಯೆ ಭೇಟಿಯಾಗುವ ಶಕ್ಯತೆಯಿದೆ,’ ಎನ್ನಬೇಕೆಂದು ಅನ್ನಿಸಿತ್ತು. ಕೊನೆಯ ಗಳಿಗೆಯಲ್ಲಿ ಬೇಡವೆನಿಸಿತು.

ವಾಸುದೇವನ್‌ಗೆ ಸನ್ನಿವೇಶದ ಅರ್ಥ ಹೊಳೆಯಲು ತಡವಾಗಲಿಲ್ಲ. ಮುದುಕ ಕೊನೆಗೂ ತನ್ನನ್ನು ನಂಬುತ್ತಿಲ್ಲ. ಕರುಣಾಕರನ್‌ನನ್ನು ಅವನು ಹಚ್ಚಿಕೊಂಡ ರೀತಿಯಿಂದ ಪುಲಕಿತನಾದರೂ ಅವನನ್ನು ತನ್ನಿಂದಲೂ ರಕ್ಷಿಸುವ ಅವಶ್ಯಕತೆ ತೋರಿದ ಸನ್ನಿವೇಶದಿಂದ ಅಷ್ಟೇ ಮಾನಸಿಕ ಕ್ಷೋಭೆಗೂ ಒಳಗಾದ.

ವಾಸುದೇವನ್‌ಗೆ ತಾನು ಇನ್ನೂ ಹೆಚ್ಚು ಹೊತ್ತು ಅಲ್ಲಿ ಕುಳಿತರೆ ಅತ್ತೇ ಬಿಡುವೆನೆನ್ನುವ ಭಯವಾಯಿತು. ತಟ್ಟನೆ ಕುಳಿತಲ್ಲಿಂದ ಎದ್ದು ನಿಂತು ಮುದುಕನಿಂದ ಬೀಳ್ಕೊಳ್ಳುತ್ತ: “ನನ್ನ ತಮ್ಮ ಭೇಟಿಯಾದರೆ ಹೇಳಿ-ನಿಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಹುಡುಗ ನಾನೇ ಎಂದು. ಮೂರು ವರ್ಷಗಳ ಹಿಂದೆ ಸಹಿ ಇರದ ಪತ್ರವನ್ನು ಬರೆದವನೂ ನಾನೇ ಎಂದು.” ಇಷ್ಟು ಹೇಳಿ, ಹೊರಟು ನಿಂತವನು, ಹೇಳಲೋ ಬಿಡಲೋ ಎಂದು ಅನುಮಾನಿಸುತ್ತ “ನಿಮ್ಮ ಮನೆಗೆ ನಿನ್ನೆ ಬಂದವರಿಗೆ ಬೇಕಾದವನು ನಾನಿರಬಹುದು. ತಪ್ಪಿ ಅವನ ಬೆನ್ನು ಹತ್ತಿರಬಹುದು. ಅವನನ್ನು ಕಾಪಾಡಿರಿ,” ಎಂದವನೇ ಅಲ್ಲಿಂದ ಹೆಜ್ಜೆ ಕಿತ್ತು ಅವಸರ ಅವಸರವಾಗಿ ರೆಸ್ಟೊರಂಟಿನಿಂದ ಹೊರಬಿದ್ದ.

ತಾನು ಆಡಿದ ಮಾತುಗಳು ಮುದುಕನ ಕಿವಿಯ ಮೇಲೆ ಬಿದ್ದು, ಮೆದುಳು ತಲುಪಿ ಅರ್ಥವುಳ್ಳ ಸಂದೇಶವಾಗುವ ಮೊದಲೇ ವಾಸುದೇವನ್ ಭರಭರನೆ ಹೆಜ್ಜೆ ಇಡುತ್ತ ಚರ್ಚ್‌ಗೇಟ್ ಇದಿರಿನ ಜನಸಂದಣಿಯಲ್ಲಿ ಸೇರಿಯಾಗಿತ್ತು. ತನ್ನಿದಿರಿನ ವ್ಯಕ್ತಿಯನ್ನು ಯಾಂತ್ರಿಕವಾಗಿ ಹಿಂಬಾಲಿಸುತ್ತ ನಡೆದವನಿಗೆ ತನಗೆ ಹತ್ತಿದ ಗುಂಗಿನೊಳಗಿಂದ ಹೊರಗೆ ಬರಲು ಬಹಳ ಹೊತ್ತು ಹಿಡಿದಿತ್ತು. ಅಷ್ಟರಲ್ಲಿ ಅವನು ಫ್ಲೋರಾಫೌಂಟನ್ನಿನ ಪ್ರಖ್ಯಾತ ಚೌಕಕ್ಕೆ ಬಂದು ಮುಟ್ಟಿದ್ದ. ಚೌಕಕ್ಕೆ ಹೆಸರು ಕೊಟ್ಟ-ಹೆಣ್ಣು ಶಿಲಾಮೂರ್ತಿಯ ಆಕಾರದ-ದೊಡ್ಡ ಕಾರಂಜಿಯ ನೀರು ಎರಡು ಆಳು ಎತ್ತರಕ್ಕೆ ಪುಟಿಯುತ್ತ ಐದು ಗಂಟೆಯ ಬಿಸಿಲಲ್ಲಿ ಹೊಳೆಯುವ ಬಗೆ ನೋಡುವವರ ಕಣ್ಣುಗಳಿಗೆ ಹಬ್ಬವಾಗಿತ್ತು. ಹತ್ತಿರದ ಗಾಳಿಯಲ್ಲಿ ನೀರ ಹನಿಗಳ ತಂಪು ವಾಸನೆ. ವಾಸುದೇವನ್‌ಗೆ ಮಾತ್ರ ಇದು ಯಾವುದೂ ಕಾಣುತ್ತಿರಲಿಲ್ಲ. ಕಾರಂಜಿಯನ್ನು ಬಲಕ್ಕೆ ಹಾಕಿ ಕುಲಾಬಾಕ್ಕೆ ಹೋಗುವ ರಸ್ತೆಗೆ ಹೊರಳುವಾಗ, ಅಂಥ ದಿವ್ಯದೃಶ್ಯದ ಇದಿರಿನಲ್ಲೂ, ಮಬ್ಬುಗತ್ತಲೆ ತುಂಬಿದ ಗುಹೆಯೊಳಗೇ ಅಡ್ಡಾಡುತ್ತಿರುವ ಭಾವನೆ. ಇಂಥ ಭಾವನೆ ವಾಸುದೇವನ್‌ಗೆ ಹುಟ್ಟಿದ್ದು ಇದೇ ಮೊದಲ ಸಾರೆ ಅಲ್ಲವಾಗಿತ್ತು. ಮೂರು ವರ್ಷಗಳ ಹಿಂದೆ ಬೆಹರಾಮನ ಮನೆಯನ್ನು ಬಿಟ್ಟುಹೋದಂದಿನಿಂದ ಎಷ್ಟೆಲ್ಲ ಸಂದರ್ಭಗಳಲ್ಲಿ ಹಠಾತ್ತನೆ ಹುಟ್ಟಿ ಮನಸ್ಸನ್ನು ವ್ಯಾಪಿಸಿಬಿಟ್ಟಿದೆ. ಈಗಲೂ ಅಂಥ ಭಾವನೆಯ ಹಿಡಿತದಲ್ಲಿದ್ದಾಗ, ಎಷ್ಟು ಹೊತ್ತು, ಎಷ್ಟು ದೂರ ತಾನು ಈ ಕತ್ತಲೆ ತುಂಬಿದ ಗುಹೆಯಲ್ಲಿ ನಡೆದುಹೋಗಿದ್ದೆ ಎಂಬುದು ವಾಸುದೇವನ್‌ಗೆ ಗೊತ್ತಾಗಲಿಲ್ಲ. ಹಿಂದೆ, ಎಂದೋ ಒಮ್ಮೆ ಕಂಡು ತುಂಬ ಮೆಚ್ಚಿಕೊಂಡ ಕನಸೊಂದನ್ನು ತಾನಾಗಿಯೇ ಈಗ ಮತ್ತೆ ಹೊಗುತ್ತಿದ್ದೇನೆ ಎಂಬಂಥ ಬೆಚ್ಚಗಿನ ಭಾವನೆಯ ಹಿಡಿತದಲ್ಲಿದ್ದವನಿಗೆ ತಾನು ಹಿಡಿದ ರಸ್ತೆಯಾಗಲಿ ಅದರ ಎರಡೂ ಬದಿಗಳಲ್ಲಿ ನಿಂತ ಕಟ್ಟಡಗಳಾಗಲಿ ಲಕ್ಷ್ಯಕ್ಕೆ ಬರುತ್ತಿರಲಿಲ್ಲ. ಹೆಜ್ಜೆಗಳು ಮಾತ್ರ ಒಂದು ನಿರ್ದಿಷ್ಟ ದಿಕ್ಕಿನಲ್ಲೇ ಬೀಳುತ್ತ ಪೂರ್ವಧೇನಿತ ಗುರಿಯನ್ನು ಮುಟ್ಟುವ ತವಕದಲ್ಲಿ ಇದ್ದಂತಿದ್ದುವು: ಕಾಳಾಘೋಡಾ, ರೀಗಲ್ ಸಿನೇಮಾ ದಾಟಿ ನೇರವಾಗಿ ಕುಲಾಬಾದ ಮುಖ್ಯ ಬೀದಿಯೊಂದನ್ನು ಹಿಡಿದು ಸಾಗಿದ್ದ. ಇಕ್ಕೆಲಗಳಲ್ಲಿ ತರತರದ ಅಂಗಡಿಗಳು ತೆರೆದುಕೊಂಡಿದ್ದುವು. ಕಲ್ಲು ಹಾಸಿದ ಫೂಟ್‌ಪಾಥ್ ಮೇಲೆ ತನ್ನ ಕಾಲಿನ ಬೂಟುಗಳೇ ಸದ್ದು ಮಾಡತೊಡಗಿದ್ದು ಕೇಳುತ್ತ, ರಾಶಿಗಟ್ಟಲೆ ಚಪ್ಪಲಿಗಳನ್ನು ತೂಗುಹಾಕಿದ ಒಂದು ಅಂಗಡಿಯನ್ನು ದಾಟುವಾಗ ಚರ್ಮದ ವಾಸನೆ ಘಮ್ ಎಂದು ಮೂಗಿಗೆ ಬಡೆದ ಕೂಡಲೇ ಒಂದು ಅರೆಕ್ಷಣದಮಟ್ಟಿಗೆ ತನಗೆ ಹತ್ತಿದ ತಂದ್ರಿಯಿಂದ ಹೊರಗೆ ಬಂದ. ತಾನು ಯಾರನ್ನೋ ಹುಡುಕಿ ಹೊರಟಿದ್ದೇನೆ, ಸಿಕ್ಕರೆ ಸಾಕು ಎಂಬ ಪ್ರಾರ್ಥನೆ ಮನಸ್ಸಿನಲ್ಲಿ ಹೊಳಹು ಹಾಕಿತು. ಆಗ ಅವನು ಸಸ್ಸೂನ್ ಡಾಕ್ಸ್ ಹತ್ತಿರ ಬಲಕ್ಕೆ ಹೊರಳಿ ಕಫ್ ಪರೇಡ್ ಕಡೆಗೆ ಹೆಜ್ಜೆ ಇಡತೊಡಗಿದ್ದ. ವುಡ್‌ಹೌಸ್ ರೋಡಿನ ಎರಡೂ ಮಗ್ಗಲುಗಳಲ್ಲಿ ಬೆಳೆದ, ನೀರಹಲಸಿನ ಮರಗಳ ಹಾಗೆ ಕಾಣುವ, ದೊಡ್ಡದೊಡ್ಡ ಎಲೆಗಳುಳ್ಳ ಸಾಲುಮರಗಳ ದಟ್ಟ ನೆರಳನ್ನು ಹಾದುಹೋಗುವಾಗ ಮನಸ್ಸು ಅಸ್ಪಷ್ಟ ಹಳಹಳಿಗೆ ಒಳಗಾಗಿತ್ತು. ರಸ್ತೆಯ ಕೊನೆಗೆ ಬಂದು ಮುಟ್ಟಿದ್ದೇ ಎದೆ ಉಬ್ಬಿಸಿ, ಕಂಠ ತೆರೆದು ಉದ್ಘೋಷಿಸುವ ಸಮುದ್ರ! ಜಲರಾಶಿಯ ಆಚೆಯ ಅಂಚಿನಲ್ಲಿ ವರ್ಣಿಸಲು ಅಸಾಧ್ಯವಾದ ಬಣ್ಣದ ಬೆಳಕಿನಿಂದ ಹೊಳೆಯುತ್ತಿದ್ದ ಸೂರ್ಯ ಬಿಂಬ! ಸಮುದ್ರದ ದಂಡೆಗುಂಟ ಹರಿದ ರಸ್ತೆಯ ತಡಿಗೆ ಸಿಮೆಂಟಿನಲ್ಲಿ ಕಟ್ಟಿಸಿದ ಗಿಡ್ಡ ಪಾಗಾರವನ್ನು ಹತ್ತಿ ಕುಳಿತು ಸೂರ್ಯಗೋಲವನ್ನೂ, ಅದರ ಅಲೌಕಿಕ ಕಾಂತಿಯಿಂದ ಪ್ರಜ್ವಲಿಸಿದ ಆಕಾಶವನ್ನೂ, ಅದನ್ನು ತನ್ನ ಹೊಟ್ಟೆಯಲ್ಲಿ ಪ್ರತಿಫಲಿಸಿದ ಉಲ್ಲಾಸದಲ್ಲಿದ್ದ ಸಮುದ್ರದ ನೀರನ್ನೂ ನೋಡುತ್ತ ಕುಳಿತುಬಿಟ್ಟ. ನೀರಿನಿಂದ ತುಂಬಿಕೊಳ್ಳುತ್ತಿದ್ದ ಕಣ್ಣುಗಳಲ್ಲಿ ಹತ್ತು ವರ್ಷಗಳಿಂದ ನೋಡಿರದ ತನ್ನ ಮನೆ, ಹುಟ್ಟೂರು ಆಕೃತಿಗೊಳ್ಳುತ್ತಿರುವಾಗ: ಮುದುಕ ಏನೇ ಹೇಳಲಿ, ಅವನ ದರ್ಪದ ಮಗಳಿಗೆ ಏನೇ ಅನ್ನಿಸಲಿ. ಅವರ ಮನೆಗೆ ಬಂದೂ ನನಗೆ ಕೆಲವೇ ಕ್ಷಣಗಳಿಂದ ತಪ್ಪುಗಂಟಾದ ಹುಡುಗ ನನ್ನ ತಮ್ಮನೇ! ಮೊದಮೊದಲು ಗಟ್ಟಿಯಾದ ಆತ್ಮವಿಶ್ವಾಸವಾದದ್ದು ಬರಬರುತ್ತ ಒಂದು ಪ್ರಾರ್ಥನೆಯ ರೂಪ ಧರಿಸಹತ್ತಿತು: ದೇವರೇ ಅವನು ನನ್ನ ತಮ್ಮನೇ ಆಗಿರಲಿ, ಆದರೆ ಯಾವ ಅಪಾಯಕ್ಕೂ ಬರದಿರಲಿ-ಎನ್ನುತ್ತ ಭರದಿಂದ ನೀರನ್ನು ಹೊಕ್ಕಹತ್ತಿದ ಸೂರ್ಯನಿಗೆ ಕೈಮುಗಿದ. ಪ್ಯಾಂಟಿನ ಕಿಸೆಯಿಂದ ಕರ್ಚೀಫ್ ಹೊರತೆಗೆದು ಕಣ್ಣು, ಮೋರೆ ಒರೆಸಿಕೊಳ್ಳುತ್ತಿದ್ದಾಗ ಕಫ್ ಪೆರೇಡಿನ ಸಮುದ್ರದಂಡೆಯ ಮೇಲೆ ಮಬ್ಬುಗತ್ತಲೆ ಇಳಿಯಹತ್ತಿತ್ತು, ರಸ್ತೆಯಂಚಿನ ನಿಯಾನ್ ದೀಪಗಳು ಹೊತ್ತಿಕೊಂಡುವು.

ಕೂತಲ್ಲಿಂದ ಎದ್ದು, ವಾಸುದೇವನ್ ಭರಭರನೆ ಹೆಜ್ಜೆ ಇಡುತ್ತ ತಾನು ಇಂದಿನ ರಾತ್ರಿ ಕಳೆಯಲು ಬಂದಂಥ ಜಾಗವನ್ನು ಹುಡುಕಿ ನಡೆಯಹತ್ತಿದ. ಕೊನೆಕೊನೆಗೆ ಓಡಿಯೇ ತನಗೆ ಬೇಕಾದ ಗುಡಿಸಲಿನ ಎದುರು ಬಂದು ನಿಂತ. ಏದುತ್ತ ನಿಂತವನಿಗೆ ಒಳಗೆಲ್ಲೊ ಆತಂಕ: ಯಾರೂ ಇದ್ದಂತಿಲ್ಲ. ಇನ್ನೂ ದೀಪ ಹಚ್ಚಿಲ್ಲ. ಈ ಜಾಗ ಬಿಟ್ಟುಹೋದರೂ ಹೋಗಿರಬಹುದು, ತಾನು ಇಲ್ಲಿ ಬರದೆ ಎಷ್ಟು ಕಾಲವಾಯಿತು! ತನ್ನನ್ನು ಮರೆತೇಹೋಗಿರಬಹುದು-ಎಂದು ಅಂದುಕೊಳ್ಳುವಷ್ಟರಲ್ಲಿ ಗುಡಿಸಲಿನ ಒಳಗೆ ದೀಪ ಬೆಳಗಿಕೊಂಡಿತು. ಮಿಣಿಮಿಣಿ ಉರಿಯುವ ಬಲ್ಬಿನ ಬೆಳಕಿನಲ್ಲಿ ತನ್ನ ಪರಿಚಯ ಹಿಡಿಯಲು ಪ್ರಯತ್ನಿಸುತ್ತಿದ್ದ ಹುಡುಗಿಯನ್ನು ನೋಡುತ್ತಲೇ ಹೃದಯದಲ್ಲಿ ಖುಶಿ ಉಕ್ಕಿ ಬಂದು-“ಸರಸ್ವತೀ, ನಾನು ವಾಸೂ,” ಎಂದ. “ಅಪ್ಪ ಇಲ್ಲವಾ?” ಎಂದು ಕೇಳುವಷ್ಟರಲ್ಲಿ ಒಳಗಿಂದ “ಯಾರು?” ಎಂಬ ಪ್ರಶ್ನೆಯಿಂದ ಸರಸ್ವತಿಯ ಅಪ್ಪ ತನ್ನ ಹಾಜರಿ ಕೊಟ್ಟ. ಅದಾಗಲೇ ಅದಿಬದಿಯ ಝೋಪಡಿಗಳ ಹಲವು ಜನ ಇವನನ್ನು ನೋಡಿ ಪರಿಚಯದ ಮುಗುಳುನಗೆ ಮಿಂಚಿಸಿದ್ದರು. ಇನ್ನೊಮ್ಮೆ ಮನುಷ್ಯನಾಗುತ್ತಿದ್ದೇನೆ ಎಂಬಂಥ ಖುಶಿಯಲ್ಲಿ ಸ್ಪಷ್ಟವಾದ ಕಂಠದಲ್ಲಿ “ನಾನು ವಾಸು” ಎಂದು ದೊಡ್ಡಕ್ಕೆ ಸಾರುತ್ತ ಗುಡಿಸಲ ಒಳಕ್ಕೆ ನಡೆದ.

ಭಾಗ: ಮೂರು
ಅಧ್ಯಾಯ ಏಳು

ವಾಸುದೇವನ್ ಕಫ್ ಪರೇಡಿನ ಸಮುದ್ರದಂಡೆಯ ಪಾಗಾರವನ್ನು ಹತ್ತಿ ಕೂತು ಸೂರ್ಯಾಸ್ತವನ್ನು ನೋಡುವುದರಲ್ಲಿ ತನ್ಮಯನಾಗಿದ್ದ ಹೊತ್ತಿಗೇ ಬೆಹರಾಮ್ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತು ಅದೇ ಸೂರ್ಯಾಸ್ತವನ್ನು ನೋಡತೊಡಗಿದ್ದ. ಮಧ್ಯಾಹ್ನ, ವಾಸುದೇವನ್ ರೆಸ್ಟೊರಂಟನ್ನು ಬಿಡುವ ಮೊದಲು ಆಡಿದ ಮಾತುಗಳ ಪರಿಣಾಮದಿಂದ ಚೇತರಿಸಿಕೊಳ್ಳಲು ಅವನಿಗೆ ಕೂಡಲೇ ಸಾಧ್ಯವಾಗಲಿಲ್ಲ. ರೆಸ್ಟೊರಂಟಿನಿಂದ ನೇರವಾಗಿ ಮನೆಗೇ ಹೋಗುವ ಮನಸ್ಸಾಗಿತ್ತು. ರೆಸ್ಟೊರಂಟಿನ ಇದಿರೇ ಚರ್ಚ್‌ಗೇಟ್ ಸ್ಟೇಶನ್. ಆದರೆ ಒಂದೆರಡು ಕಾಗದಪತ್ರಗಳ ಮೇಲೆ ಸಹಿ ಮಾಡುವುದಿತ್ತು. ಆ ಕೆಲಸವನ್ನು ಮುಗಿಸಿದಮೇಲೆ ಮಾತ್ರ ಆಫೀಸಿನಲ್ಲಿ ಕೂರುವ ಮನಸ್ಸಾಗದೆ ಬಾಂದ್ರಾಕ್ಕೆ ಹೊರಟೇಬಿಟ್ಟ. ಆದಷ್ಟು ಬೇಗ ಮನೆ ಸೇರಬೇಕು, ವಾಸುದೇವನ್‌ನನ್ನು ಚೆನ್ನಾಗಿ ಬಲ್ಲ ಹೆಂಡತಿಯೊಡನೆ ಈ ಹೊತ್ತು ನಡೆದದ್ದನ್ನು ಚರ್ಚಿಸಬೇಕು ಎನ್ನುವುದು ಅವನ ವಿಚಾರವಾಗಿತ್ತು.

ಬಾಂದ್ರಾ ಸ್ಟೇಶನ್ನಿನಲ್ಲಿ ಟ್ಯಾಕ್ಸಿ ಹತ್ತಿ ಮನೆಯನ್ನು ತಲುಪಿದಾಗ ಕದ ತೆರೆದವಳು ಶಿರೀನಳಾಗಿದ್ದಳು. ಅವಳನ್ನು ಬಿಟ್ಟು ಮನೆಯಲ್ಲಾಗ ಇನ್ನು ಯಾರೂ ಇದ್ದಂತಿರಲಿಲ್ಲ. ಹೆಂಡತಿ, ಮೊಮ್ಮಕ್ಕಳನ್ನು ಸೀತೆಯನ್ನು ಕರೆದುಕೊಂಡು ನೆರೆಮನೆಗೆ ಹೋಗಿರಬೇಕು, ಇಲ್ಲವೆ ಸಿನೇಮಾಕ್ಕೆ ಹೋಗಿರಬೇಕು ಎಂದುಕೊಂಡ. ಆ ಗಳಿಗೆಯಲ್ಲಿ ತನ್ನ ಮಾನಸಿಕ ಕ್ಷೋಭೆಗೆ ಕಾರಣವಾದದ್ದನ್ನು ಚರ್ಚಿಸಲು ಶಿರೀನ್ ತಕ್ಕ ವ್ಯಕ್ತಿಯಾಗಿ ತೋರಲಿಲ್ಲ. ಅವಳನ್ನು ಮಾತನಾಡಿಸುವ ಗೋಜಿಗೇ ಹೋಗದೆ ಸೀದಾ ತನ್ನ ಮಲಗುವ ಕೋಣೆಗೆ ಹೋಗಹತ್ತಿದ. ಅಪ್ಪನ ಮೂಡನ್ನು ಅರಿಯಲು ಶಿರೀನಳಿಗೆ ಹೊತ್ತು ಹಿಡಿಯಲಿಲ್ಲ. ಹಾಗೂ ಈ ಮೂಡಿಗೆ ಕಾರಣ ಯಾರು ಎಂಬುದನ್ನು ಊಹಿಸುವುದರಲ್ಲೂ ಅವಳು ತಪ್ಪಲಿಲ್ಲ. ವಾಸುದೇವನ್-ಕರುಣಾಕರನ್‌ರ ವಿಷಯದಲ್ಲಿ ಅವಳ ಮನಸ್ಸು ಇನ್ನಷ್ಟು ಕಠಿಣವಾಯಿತು. ಅಪ್ಪನ ಕೋಣೆಯ ಬಾಗಿಲ ಹೊರಗೆ ನಿಂತು ಅಳುಕುತ್ತ-“ಅಮ್ಮ ಮಕ್ಕಳೊಂದಿಗೆ ‘ಮೌಂಟ್ ಮೇರಿ’ಗೆ ಹೋಗಿದ್ದಾಳೆ. ಈಗ ಬರುವುದಾಯಿತು. ಚಹ ಮಾಡಿ ತರಲೆ?” ಎಂದು ಕೇಳಿದಳು. “ಹೌದು ಮಾಡು, ಬಾಲ್ಕನಿಗೇ ಬರುತ್ತೇನೆ,” ಎಂದು ಹೇಳಿ ಡ್ರೆಸ್ ಬದಲಿಸಹತ್ತಿದ. ಆಡಿದ ಮಾತಿನಲ್ಲಿ ನನಗೀಗ ಸುಮ್ಮನೆ ನನ್ನಷ್ಟಕ್ಕೇ ಕೂರಬೇಕಾಗಿದೆ ಎನ್ನುವ ಧಾಟಿ ಮೂಡಿತ್ತು. ಇದು ಶಿರೀನಳ ಲಕ್ಷ್ಯಕ್ಕೆ ಬರದೇ ಇರಲಿಲ್ಲ. ಆದರೂ ಚಹ ಮಾಡಲು ಹೊರಡುವ ಮೊದಲು, ಆಫೀಸಿಗೆ ಯಾರಾದರೂ ಬಂದಿದ್ದರೆ ? ಎಂದು ತಿಳಿಯುವ ಮನಸ್ಸಾಗಿ, “ಇವತ್ತು ಬೇಗ ಬಂದೆ ?” ಎಂದು ಕೇಳಿದಳು. ಬೆಹರಾಮ್ ಉತ್ತರ ಕೊಡಲಿಲ್ಲ.

ಮುಳುಗುತ್ತಿದ್ದ ಸೂರ್ಯನನ್ನು ನೋಡುತ್ತ ಚಹ ಕುಡಿಯುತ್ತಿರುವಾಗ ಹಠಾತ್ತನೆ ಸುಮಾರು ನಾಲ್ವತ್ತು ವರ್ಷಗಳ ಹಿಂದಿನ ಅನುಭವವೊಂದು ಪ್ರತಿಮೆಯಾಗಿ ಒಳಗಣ್ಣಿನ ಇದಿರು ನಿಂತಾಗ ಆಶ್ಚರ್ಯವಾಯಿತು. ಆ ಪ್ರತಿಮೆ ತನ್ನನ್ನು ಹಿಂದಕ್ಕೆಳೆದುಕೊಂಡು ಹೋದ ಕಾಲೇಜು ದಿನಗಳ ನೆನಪಿನಿಂದ ಸದ್ಯದ ಮೂಡಿನಲ್ಲೂ ಖುಶಿಯಾಗಿ ಸೌಮ್ಯ ಮುಗುಳುನಗೆ ಅವನ ಮೋರೆಯ ಮೇಲೆ ಪಸರಿಸಿತು : ವಿಲ್ಸನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಿನ ದಿನಗಳಲ್ಲಿ ಹಾಸ್ಟೆಲ್ ಕೋಣೆಯಲ್ಲಿ ಬೇಸರವಾದಾಗ ಆಡುವ ಆಟ ನೆನಪಿನ ಕೇಂದ್ರವಾಗಿತ್ತು: ಹಾಸಿಗೆಯ ಮೇಲೆ ಅಂಗತ್ತ ಮಲಗಿ ಕಾಲ ಬದಿಯ ಗೋಡೆಗೆ ರಬ್ಬರಿನ ಚೆಂಡನ್ನು ಎಸೆದು ಗೋಡೆಗೆ ಅಪ್ಪಳಿಸಿ ಹಿಂದಕ್ಕೆ ಪುಟಿದಾಗ ಮಲಗಿದ್ದಲ್ಲಿಂದಲೇ ಅದನ್ನು ಹಿಡಿಯುವುದು. ಗೋಡೆಯ ಮೇಲೆ ಹಲವು ಉಬ್ಬುತಗ್ಗುಗಳಿದ್ದುದರಿಂದ ಚೆಂಡು ತಾನು ಬಯಸಿದ ರೀತಿಯಲ್ಲಿ ಹಿಂತಿರುಗುತ್ತಿರಲಿಲ್ಲ. ಆಟದ ಗಮ್ಮತ್ತೇ ಚೆಂಡು ಕೈಗೆ ಹಿಂತಿರುಗುವ ದಿಕ್ಕಿನ ಅನೂಹ್ಯತೆಯಲ್ಲಿತ್ತು. ಎಸೆತದ ಎಣಿಕೆ ಒಂದಾಗಿದ್ದರೆ ಗೋಡೆಯ ಎಣಿಕೆ ಇನ್ನೊಂದೇ ಆಗುತ್ತಿತ್ತು.

ಈ ನೆನಪಿಗೆ ಪ್ರೇರಣೆಯಿತ್ತ ಸನ್ನಿವೇಶ ಮಾತ್ರ ಗಮ್ಮತ್ತಿನದಾಗಿರಲಿಲ್ಲ. ನಿನ್ನೆ ಯಾವುದೋ ಉದ್ವೇಗದ ಭರದಲ್ಲಿ ಅಗರವಾಲನಿಗೆ ಫೋನ್ ಮಾಡಿ ಕರುಣಾಕರನ್ ಮೂರು ವರ್ಷಗಳ ಹಿಂದೆ ಕೊಲೆಯಾದವನ ತಮ್ಮನೆಂದು ಹೇಳಿದ್ದೇ ತಪ್ಪಾಗಲಿಲ್ಲ ತಾನೆ ? ತಾನು ಬಯಸಿದ್ದು ಕರುಣಾಕರನ್ ಅಪಾಯದಿಂದ ದೂರವಿರಲಿ ಎಂದು; ಹಾಗೆಂದೇ ವಾಸುದೇವನ್ನನನ್ನು ಕೂಡ ಕೂಡಲೇ ನಂಬಲಿಲ್ಲ. ಅವನು ನಿಜಕ್ಕೂ ಕರುಣಾಕರನ್‌ನ ಅಣ್ಣನೇ ಆಗಿದ್ದರೆ ? ಏಕೋ ಕರುಣಾಕರನ್ ಹಾಗೂ ವಾಸುದೇವನ್‌ರ ಕ್ಷೇಮದ ಬಗ್ಗೆ ಪ್ರಾರ್ಥನೆ ಮಾಡುವುದನ್ನು ಬಿಟ್ಟು ಇನ್ನೇನೂ ಮಾಡಲಾರೆನೇನೋ ಅನ್ನಿಸಿದಾದ ಒಂದು ಬಗೆಯ ಹತಾಶಭಾವ ಮನಸ್ಸನ್ನಾವರಿಸಿಬಿಟ್ಟಿತು: ಮಾಡಲು ಹಚ್ಚುವ ವಾಸ್ತವವೇ ಗ್ರಹಿಕೆಗೆ ಸಿಗದೆ ಉಳಿದಾಗ ಮಾಡಬೇಕಾದ್ದರ ಆಕೃತಿ ಸ್ಪಷ್ಟವಾಗದಾಯಿತು.

ಆಗಿನಿಂದಲೂ ತಾನು ಶಿರೀನಳ ಜೊತೆಗೆ ಮಾತನಾಡುತ್ತಿದ್ದ ಹಾಗೂ ಹಾಗೆ ಮಾತನಾಡುತ್ತಿದ್ದಾಗ ತಪ್ಪಿದ ಎಳೆ ಈಗ ಸಿಕ್ಕಿತು ಎಂಬಂತಹ ಉತ್ಸಾಹದಲ್ಲಿ “ಶಿರೀನ್,” ಎಂದು ಮಗಳನ್ನು ಕರೆದ. ಅವನ ಮುಂದಿನ ಕುರ್ಚಿಯಲ್ಲಿ ಅದೇ ಕೂರತೊಡಗಿದ ಶಿರೀನ್-“ಇನ್ನಷ್ಟು ಚಹ ಬೇಕೆ ?” ಎಂದು ಕೇಳಿದಳು, ತನ್ನ ಹಾಜರಿ ಕೊಡುವ ಉದ್ದೇಶದಿಂದ. “ನೀನು ಏನೇ ಹೇಳು ಶಿರೀನ್, ವಾಸುದೇವನ್ ಕರುಣಾಕರನ್ನನ ಅಣ್ಣನೇ ಹೌದು,” ಎಂದು ಸಾರಿದ, ಬೆಹರಾಮ್. ಶಿರೀನ್ ಈ ಗಳಿಗೆಯನ್ನೇ ಕಾಯುತ್ತಿದ್ದಿರಬೇಕು : ‘ಹೌದಾಗಿರಬಹುದು. ಮುಂದೆ ?’ ಎನ್ನಲು ಹೊರಟವಳು ಅಪ್ಪನ ಮೋರೆಯ ಮೇಲಿನ ಉದ್ವೇಗವನ್ನು ನೋಡಿ, “ವಾಸುದೇವನ್ ಆಫೀಸಿಗೆ ಬಂದಿದ್ದನೆ ?” ಎಂದಿಷ್ಟೇ ಕೇಳಿದಳು. ಪಾರ್ವತಿಯಿಂದ ಈ ಮೊದಲು ಕರುಣಾಕರನ್ನನ ಬಗ್ಗೆ, ಇಂದು ಬೆಳಿಗ್ಗೆ ವಾಸುದೇವನ್ನನ ಬಗ್ಗೆ ಕೇಳಿದ್ದನ್ನು ಅಪ್ಪನಿಗೆ ತಿಳಿಸಲು ಇದು ಸರಿಯಾದ ಸಮಯವೆಂದೂ ಅನ್ನಿಸಲಿಲ್ಲ. ಹಾಗೆ ನೋಡಿದರೆ ಬೆಳಗಿನಿಂದಲೂ ಅಪ್ಪನ ಜೊತೆ ಮಾತನಾಡುವ ಹಲವು ಸನ್ನಿವೇಶಗಳನ್ನು ಕಲ್ಪಿಸಿಕೊಂಡಿದ್ದಳು. ಸನ್ನಿವೇಶ ಬದಲಾದ ಹಾಗೆ ಹೇಳಬೇಕೆಂದುಕೊಂಡಿದ್ದರ ಒಟ್ಟೂ ಆಕಾರವೇ ಬದಲಾಗುತ್ತಿತ್ತು. ಅದು ಬದಲಾದ ಹಾಗೆ ಅವರಿಬ್ಬರ ಬಗೆಗಿನ ಭಾವನೆಗಳು ಕೂಡ : ಸಹಾನುಭೂತಿ, ಅನುಕಂಪ, ಭಯ, ಜಿಗುಪ್ಸೆ. ಅಪ್ಪ ಅವರನ್ನು ಇಷ್ಟೊಂದು ಹಚ್ಚಿಕೊಳ್ಳುವಷ್ಟು ಸಂಭಾವಿತರು ಅವರು ಖಂಡಿತವೂ ಅಲ್ಲ. ಅಪ್ಪನ ಭಾವುಕತೆ ಯಾವಾಗಲೂ ಅತಿರೇಕದ್ದು. ಪಾರ್ವತಿಯಿಂದ ಅವಳಿಗೆ ತಿಳಿದದ್ದಿಷ್ಟು : ‘ಇಷ್ಟು’ ಎಂದುಕೊಳ್ಳುವಷ್ಟರಲ್ಲೇ ನೆನಪಿನಲ್ಲಿ ವ್ಯವಸ್ಥೆಗೊಳ್ಳಲು ತೊಡಗಿದ ಸಂಗತಿಗಳಲ್ಲಿಯ ಹಲವನ್ನು ಸದ್ಯ ಬಿಟ್ಟುಕೊಡಬೇಕಾಯಿತು. ಪಾರ್ವತಿ ವಾಸುದೇವನ್ ಬಗ್ಗೆ ಅವಳಿಗೆ ಹೇಳುತ್ತಿದ್ದಾಗ ಅಮ್ಮ ಮನೆಯಲ್ಲಿದ್ದಳು : ” ಈ ಪಾರ್ವತಿ ಹೇಳಿದ್ದೆಲ್ಲವನ್ನೂ ನಂಬಬೇಡ. ಮಾತು ಬಹಳ ಬೇಕು. ಊರಿನ ಎಲ್ಲ ಪಂಚಾತಿಕೆ ಬೇಕು. ಇಷ್ಟು ಗೊತ್ತಿದ್ದರೆ ಎಷ್ಟನ್ನೆಲ್ಲ ಸೇರಿಸಿ ಬಣ್ಣಕೊಟ್ಟು ಮಾತನಾಡುತ್ತಾಳೆ. ಒಮ್ಮೊಮ್ಮೆ ನನಗೆ ಸಂಶಯ ; ಈ ಹುಡುಗರ ಬೆನ್ನುಹತ್ತಿದವರೇ ಇವಳ ಮುಖಾಂತರ ಇಂತಹ ಸುದ್ದಿ ಹರಡಿಸುತ್ತಾರೋ ಎಂದು.” ಅಮ್ಮ ಇದನ್ನು ಎಷ್ಟು ಗಂಭೀರವಾಗಿ ಹೇಳಿದ್ದಳೋ ಅವಳು ಅರಿಯದಾದಳು. ಈಗ ಅಪ್ಪನ ಇದಿರು ಕೂತು ಅದನ್ನೆಲ್ಲ ನೆನೆಯುವಾಗ ಅವನಿಗೆ ಹೇಳಬೇಕೆಂದುಕೊಂಡದ್ದನ್ನು ಇನ್ನಷ್ಟು ಸಂಕ್ಷೇಪಗೊಳಿಸಿತ್ತು : ಕರುಣಾಕರನ್ ಹಾಗೂ ವಾಸುದೇವನ್ ಅಣ್ಣತಮ್ಮಂದಿರೆಂದು ನಕ್ಕಿಯಾಗಿ ಹೇಳುವುದು ಕಷ್ಟ. ಆದರೆ ಅಪ್ಪ ತಿಳಕೊಂಡಂತೆ ಪರಸ್ಪರರ ಶೋಧದಲ್ಲಿದ್ದವರಂತೂ ಅಲ್ಲ ; ಪರಸ್ಪರರಿಗೆ ಸಾಮೀಲಾದವರು. ನಿನ್ನೆ ದಿನ ಬಂದವರಿಗೆ ಬೇಕಾಗಿದ್ದವನು ವಾಸುದೇವನ್ನನೇ ಹೊರತು ಕರುಣಾಕರನ್ ಅಲ್ಲ. ಕರುಣಾಕರನ್ನನ ಮುಖಾಂತರ ಅವರಿಗೆ ತಲುಪಬೇಕಾದದ್ದು ವಾಸುದೇವನ್ನನನ್ನು. ಅವರ ಗ್ಯಾಂಗಿನಿಂದ ಪಿತೂರಿಯಾಗಿದ್ದಾನೆ ಎನ್ನಲಾದವನು ಕೂಡ ವಾಸುದೇವನ್ನನೇ. ವಾಸುದೇವನ್ ಮಸ್ಕತ್, ದುಬಾಯಿಗಳಿಗೆ ಹೋಗಿದ್ದ ಎನ್ನುವುದು ಸುಳ್ಳು. ಮೂರು ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ಕೊಲೆಯಲ್ಲಿ ಇವನ ಕೈಯಿತ್ತು. ಇದನ್ನು ಬಲ್ಲ ವ್ಯಕ್ತಿಯೊಬ್ಬ ಇವನನ್ನು ಕಳ್ಳಸಾಗಣೆದಾರರ ಗ್ಯಾಂಗಿನಲ್ಲಿ ಸೇರಿಸಿಕೊಂಡ. ಪೋಲೀಸರ ಕೈಯಿಂದ ರಕ್ಷಿಸುವ ಭರವಸೆ ಕೊಟ್ಟ. ಕೊಲೆ ಮಾಡಿದ ಗ್ಯಾಂಗಿನವರಿಗೆ ಇವನು ಮುಂಬಯಿಯಲ್ಲೇ ಇರುವುದರ ಸುಳಿವು ಹತ್ತಿದಾಗ ಎರಡೂ ಗ್ಯಾಂಗುಗಳ ಕಣ್ಣುತಪ್ಪಿಸಿ ಈಗಿನ ಕೆಲಸ ಸೇರಿದ್ದಾನಂತೆ. ರಾತ್ರಿ ಸರದಿಯನ್ನು ಬಿಟ್ಟು ಬೇರೆ ಸರದಿಗಳಲ್ಲಿ ಕೆಲಸಮಾಡಿದ್ದು ಅಪರೂಪವಂತೆ. ಕರುಣಾಕರನ್ನನ ತನಿಖೆ ಎಲ್ಲರಿಗಿಂತ ಹೆಚ್ಚಾಗಿ ಇವನನ್ನು ಹೆದರಿಸಿದೆಯಂತೆ. ಅವನು ತನ್ನ ಊರಿನ ಕಡೆಯವನು ಎಂದು ತಿಳಿದಾಗ ಅವನನ್ನು ಕಾಣಲು ಕಾತರಗೊಂಡಿರುವನಂತೆ. ಈ ಹೊತ್ತು ಕೆಲಸಕ್ಕೇ ಬಂದಿಲ್ಲವಂತೆ. ಅಪ್ಪನಿಗೆ ಹೇಳಬೇಕೆಂದು ಹೊರಟದ್ದು ಅವನ ಸದ್ಯದ ಮೂಡನ್ನು ನೋಡಿ ಎಷ್ಟೊಂದು ಸಂಕ್ಷಿಪ್ತವಾಗಿತ್ತೆಂದರೆ : ” ಮೂರು ವರ್ಷಗಳ ಹಿಂದೆ ನಡೆದ ಕೊಲೆಯಲ್ಲಿ ವಾಸುದೇವನ್ನನ ಕೈಯಿತ್ತು,” ಎಂದಳು.

ಬೆಹರಾಮನಿಗೆ ಈ ಮಾಹಿತಿಯ ಮೂಲ ಯಾವುದು ಎಂದು ತಿಳಿಯಲು ಹೊತ್ತು ಹಿಡಿಯಲಿಲ್ಲ. “ನಮ್ಮ ಅಗರವಾಲ ತನಗೆ ಬೇಕಾದ ಮಾಹಿತಿಗಾಗಿ ಈ ಪಾರ್ವತಿಯನ್ನೇ ಕೇಳಬೇಕು. ನೀನೇ ಒಮ್ಮೆ ಪರಿಚಯ ಮಾಡಿಕೊಡು,” ಎಂದವನು ತನ್ನ ಮಾತಿನಲ್ಲಿಯ ಅನವಶ್ಯಕವಾದ ವ್ಯಂಗ್ಯಕ್ಕೆ ತಾನೇ ನೊಂದು, “soಡಿಡಿಥಿ,” ಎಂದ. “ಈ ವಾಸುದೇವನ್ ಬಗ್ಗೆ ನೀನೇನೂ ಅರಿಯೆ, ಮಗೂ. ಮೂರು ವರ್ಷಗಳ ಹಿಂದಿನ ಕೊಲೆಯಲ್ಲಿ ಇವನ ಕೈಯಿತ್ತು ಎನ್ನುವುದು ನಿಜ. ಆದರೆ ಪಾರ್ವತಿ ನಿನಗೆ ಹೇಳಿರಬಹುದಾದ ಅಥವಾ ನೀನದನ್ನು ಅರ್ಥಮಾಡಿಕೊಂಡಿರಬಹುದಾದ ರೀತಿಯಲ್ಲಲ್ಲ. ಆ ಭೀಕರ ಕೊಲೆಯ ಒಂದು ಹಂತಕ್ಕೆ ಇವನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದ. ಅದೂ ಎಂಥ ರೀತಿಯಲ್ಲಿ ! ಅಮ್ಮನಿಗೆ ಕೇಳು, ಅವಳೇ ಹೇಳಲಿ. ಅವನಿಗೆ ಹುಚ್ಚುಹಿಡಿಯಲಿಲ್ಲ ಎನ್ನುವುದೇ ದೊಡ್ಡದು.” ಬೆಹರಾಮನಿಗೆ ಆ ಭೀಕರ ನೆನಪಿಗೆ ಹಿಂತಿರುಗುವ ಮನಸ್ಸು ಕೂಡಲೇ ಆಗದೆ-
“ನಾನೇ ಅವನಿಗೆ ಮಸ್ಕತ್ತಿಗೆ ಹೋಗುವ ಸೂಚನೆ ಮಾಡಿದೆ. ಆಗಲೇ ಅವನು ನಮ್ಮ ಮನೆಯನ್ನು ಬಿಟ್ಟು ಹೋದದ್ದು,” ಎಂದ.
“ಆದರೆ ಅವನು ಮಸ್ಕತ್ತಿಗೆ ಹೋಗಲಿಲ್ಲ.”
“ನನಗೀಗ ಅದೇ ಸಂಶಯ. ಪಾರ್ವತಿ ಹೇಳಿದಳೆ ?”
“ಮೊನ್ನೆ ಬಂದಿದ್ದರಲ್ಲ-ಅವರಿಗೆ ನಿಜಕ್ಕೂ ಬೇಕಾದವನು ವಾಸುದೇವನ್ನನಂತೆ.”
ಇಂದು ವಾಸುದೇವನ್ ಕೂಡ ಇದೇ ಮಾತನ್ನು ಹೇಳಿದ ಎನ್ನಬೇಕೆಂದು ಕೊಂಡವನು, “ಅವಳಿಗೆ ಇದೆಲ್ಲ ಹೇಗೆ ಯಾರಿಂದ ತಿಳಿಯುತ್ತದೆಯೋ,” ಎಂದ. ಈ ಪಾತಾಳಲೋಕದ ವೈಚಿತ್ರ್ಯವೇ ಇದು : ಹೇಳಿದ್ದು ಸತ್ಯವಾದರೆ ಯಾರು ಹೇಳಿದ್ದು ಎನ್ನುವುದು ಅಸ್ಪಷ್ಟ. ಸಂಬಂಧ ಇದೆ ಎನ್ನುವುದು ನಿಜವಾದರೆ ಎಂಥ ಸಂಬಂಧ ಎನ್ನುವುದು ಗೊತ್ತಿಲ್ಲ. ಇವರೆಲ್ಲರ ಹಿಂದೆ ರಾಜಕಾರಣಿಯಿದ್ದಾನೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿರುವಾಗಲೂ ಯಾರು? ಯಾಕೆ? ಹೇಗೆ?-ಯಾರೂ ತಿಳಿಯರು. ವಾಸುದೇವನ್ ಕೂಡ ಇಂಥ ಒಂದು ಜಗತ್ತಿನಲ್ಲಿ ಸಿಕ್ಕಿಕೊಂಡಿದ್ದಾನೆ ಅನ್ನಿಸುವುದಕ್ಕೂ ಪಾರ್ವತಿಗೆ ಗೊತ್ತಿದೆ ಎನ್ನುವುದಕ್ಕೊ ಸರಿಹೋಗಿತ್ತು. ಹೇಗೆ ಸಿಕ್ಕಿಕೊಂಡಿದ್ದಾನೆ ಎನ್ನುವುದು ಅವಳಿಗೂ ಗೊತ್ತಿರಲಾರದು-ಅಥವಾ ಗೊತ್ತಿದೆಯೆ? ಅದು ಮುಖ್ಯವೆನಿಸಲಿಲ್ಲ. ಒಟ್ಟಿನಲ್ಲಿ ಇಂದಿನ ಜಗತ್ತು ಬೆಳೆಯುವ ಹುಡುಗರಿಗೆ ಬಹಳ ತೊಡಕಿನದಾಗುತ್ತ ನಡೆದಿದೆ, ಅದು ಒಡ್ಡುತ್ತಿರುವ ಸತ್ವ ಪರೀಕ್ಷೆಯ ವಿಷಯಗಳು ತುಂಬ ಕ್ರೂರವಾಗುತ್ತಿವೆ ಅನ್ನಿಸಿತು. ಕೇವಲ ಬದುಕಿ ಉಳಿಯುವುದಕ್ಕೇ, ಜೀವ ಕಾಪಾಡಿಕೊಳ್ಳುವುದಕ್ಕೇ ಇಷ್ಟೆಲ್ಲ ಶಕ್ತಿಯನ್ನು ಹಾಳುಮಾಡಿಕೊಳ್ಳಬೇಕಾಗಿದೆಯೆಂದರೆ!
“ಅಪ್ಪಾ, ನೀನು ನನ್ನ ಜೊತೆ ಮಾತನಾಡುತ್ತಿಲ್ಲ,” ಎಂದು ಶಿರೀನ್ ಎಚ್ಚರಿಸಿದಾಗ, ಬೆಹರಾಮ್ ಗಾಢ ಕನಸೊಂದರಿಂದ ಎಚ್ಚತ್ತವನ ಹಾಗೆ ಮಾತಿಗೆ ತೊಡಗಿದ:
“ಅದೇ, ಏನು ಹೇಳುತ್ತಾ ಇದ್ದೆ? ಕುಲಾಬಾದಲ್ಲೋ ಅತ್ತಕಡೆಗೇ ಇನ್ನೆಲ್ಲೋ ಇವನ ಸಂಬಂಧಿಯೊಬ್ಬ ಇರಬೇಕು. ಆಗೀಗ ರಜೆ ಪಡೆದು ಅಲ್ಲಿಗೆ ಹೋಗುತ್ತಿದ್ದ. ಹೋಗುವಾಗಿನ ಉಮೇದು ನೋಡಿದರೆ ಅವನು ಮೆಚ್ಚಿಕೊಂಡ ಹೆಣ್ಣು ಒಂದು ಅಲ್ಲಿ ಇದ್ದರೂ ಇದ್ದೀತು. ನಿನ್ನ ಅಮ್ಮ ಚೇಷ್ಟೆ ಮಾಡಿ ಕೇಳಿದರೆ ಬರಿಯೆ ನಕ್ಕುಬಿಡುತ್ತಿದ್ದ. ತುಂಬ ತುಂಬ ಲವಲವಿಕೆಯ ಹುಡುಗ. ನಿನ್ನ ಅಮ್ಮನಿಗಂತೂ ಬಹಳ ಸೇರುತ್ತಿದ್ದ. ಒಂದು ದಿನ ಕುಲಾಬಾದಿಂದ ಬರುವಾಗ ಎಂದಿಗಿಂತ ಬಹಳ ತಡವಾಗಿತ್ತು. ‘ರಿಕ್ಲಮೇಶನ್’ ಮೈದಾನವನ್ನು ಹಾದು ಬರುವ ರಸ್ತೆ ಆಗಿನ್ನೂ ಸಿದ್ಧವಾಗಿರಲಿಲ್ಲ. ಆದರೂ ಝೋಪಡಪಟ್ಟಿಯ ಜನವೇ ಓಡಾಡಿ ಕಾಲುದಾರಿಯೊಂದನ್ನು ಸಿದ್ಧಪಡಿಸಿದ್ದರು. ರಾತ್ರಿ ಹೊತ್ತು ಮೀರಿದ್ದರಿಂದಲೋ ಏನೋ ‘ಮಾಹೀಮ್ ಬಸ್ ಟರ್ಮಿನಸ್’ದಲ್ಲಿ ಇಳಿದವನು, ಈ ಒಳದಾರಿಯಿಂದ ಬರುವಾಗ ಹತ್ತುವ ದೊಡ್ಡ ಬಾಳೆ ಹಿಂಡಿನ ಮರೆಯಲ್ಲಿ, ಹಾಳುಬಿದ್ದ ಗುಡಿಸಲೊಂದರ ಬಾಗಿಲ ಎದುರಿಗೆ ಯಾರೋ ಮೂರು ಮಂದಿ ಯಾರನ್ನೋ ಎತ್ತಿ ಟ್ಯಾಕ್ಸಿಯೊಂದರಲ್ಲಿ ಹಾಕುತ್ತಿದ್ದುದನ್ನು ಕಂಡ. ಆಸ್ಪತ್ರೆಗೆ ಸಾಗಿಸುತ್ತಿರುವರೇನೋ ಎಂದು ಬಗೆದು, ಇವನೂ ಅವರ ಸಹಾಯಕ್ಕೆ ಧಾವಿಸಿದ. ಸಾಗಿಸಲ್ಪಡುವವನ ಕಾಲುಗಳನ್ನು ಹಿಡಿದವನು ಅವುಗಳನ್ನು ಬಿಟ್ಟನಂತರವೇ ತಾನು ಕಂಡದ್ದರ, ಮಾಡಿದ್ದರ ಸಂಪೂರ್ಣ ಅರ್ಥವನ್ನು ಗ್ರಹಿಸಿದವನ ಹಾಗೆ, ‘ಕೋಯಿ ಬಚಾವ್’ ಎಂದು ಬೊಬ್ಬೆಯಿಡುತ್ತ ಓಟ ಕಿತ್ತಿದ್ದ. ಮೂವರಲ್ಲೊಬ್ಬನು ಬೆನ್ನುಹತ್ತಿದ್ದ. ಆದರೆ ಇವನು ಅವನ ಕೈಗೆ ಸಿಗಲಿಲ್ಲ. ಮನೆ ತಲುಪಿದಾಗ ಅವನ ಅವತಾರ ನೋಡಬೇಕಿತ್ತು ! ಎರಡು ಕಾಂಪೋಜ್ ಗುಳಿಗೆಗಳನ್ನು ಕೊಟ್ಟು ಮಲಗಿಸಬೇಕಾದರೆ ಸಾಕುಬೇಕಾಯಿತು. ಮುಂದೆರಡು ದಿನ ಮಾತನಾಡುವ ಶಕ್ತಿಯನ್ನೇ ಅವನು ಕಳಕೊಂಡಿದ್ದ. ಕಂಡದ್ದನ್ನು ವಿವರಿಸುವ ತಾಕತ್ತು ಬರಲು ಇನ್ನೂ ಒಂದು ದಿನ ಹಿಡಿಯಿತು. ಅಷ್ಟರಲ್ಲಿ ಇವನನ್ನು ಕಂಗೆಡಿಸಿದ ದೃಶ್ಯ ಪತ್ರಿಕೆಗಳಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಇವನು ಆ ರಾತ್ರಿ ಕುಡಿದು ಬಂದಿರಬೇಕು : ತಾನು ಕಾಲುಗಳನ್ನು ಹಿಡಿದು ಟ್ಯಾಕ್ಸಿಯಲ್ಲಿ ಹೊತ್ತು ಹಾಕಿದವನಿಗೆ ರುಂಡವೇ ಇರಲಿಲ್ಲ ಎನ್ನುವುದು ಆ ನಿರ್ಜನ ರಸ್ತೆಯ ಮಬ್ಬುಗತ್ತಲಲ್ಲೂ ಕಂಡಂತಾದವನಿಗೆ ಕರುಳೇ ಬಾಯಿಗೆ ಬಂದಂತಾಗಿತ್ತು. ರುಂಡವಿಲ್ಲದ ದೇಹ ಮುಂದೆ ಸಿಕ್ಕಿದ್ದು ಧಾರಾವಿಯ ಖಾಡಿಯಲ್ಲಿ, ರುಂಡ ಸಿಕ್ಕಿದ್ದು ೨೦ ಮೈಲಿಗಳಷ್ಟು ದೂರ ಠಾಣಾಕ್ಕೆ ಹತ್ತಿರ, ರೇಲುಹಳಿಗಳ ಬದಿಯಲ್ಲಿ. ವಾಸುದೇವನ್‌ನನ್ನು ಓಡುವಾಗ ನೋಡಿದ್ದ ಜನರಿದ್ದರು. ಗುರುತು ಹಿಡಿಯಲಾಗಿರದಿದ್ದರೂ ಓಡಿದ ದಿಕ್ಕನ್ನು ನೋಡಿದ್ದರು. ನಮ್ಮ ಕಟ್ಟಡದ ಪಹರೆಯ ಜನವಂತೂ ಇವನನ್ನು ಗುರುತಿಸುವುದರ ಜೊತೆಗೆ ಮನೆ ಸೇರುವಾಗಿನ ಅವನ ಸ್ಥಿತಿಯನ್ನೂ ಗಮನಿಸಿದ್ದರು. ನೆರೆಮನೆಗಳ ಜನಕ್ಕೂ ಅಸಾಧಾರಣವಾದದ್ದೇನೋ ನಡೆದಿದೆ ಎನ್ನುವಷ್ಟಾದರೂ ತಿಳಿದಿತ್ತು. ಇಂತಹದೇ ರೀತಿಯಲ್ಲೆಂದು ನಿಶ್ಚಿತವಾಗಿ ಹೇಳಲಾಗದಿದ್ದರೂ ವಾಸುದೇವನ್ನನಿಗೆ ಆದುದಕ್ಕೂ, ಪತ್ರಿಕೆಗಳಲ್ಲಿ ವರದಿಯಾದ ರುಂಡವಿಲ್ಲದ ದೇಹದ ಪ್ರಕರಣಕ್ಕೂ ಸಂಬಂಧವಿದೆ ಎಂದು ತರ್ಕಮಾಡಿದ್ದರು. ಪೋಲೀಸರನ್ನು ವಾಸುದೇವನ್ನನಿಂದ ದೂರವಿರಿಸಲು ಕಷ್ಟವಾಗಲಿಲ್ಲ. ಯಾಕೆಂದರೆ ಸ್ವತಃ ಅವರಿಗೇ ಸಮೀಪ ಬರುವುದು ಬೇಡವಾಗಿತ್ತು. ತಾನು ಗಟ್ಟಿಮನಸ್ಸು ಮಾಡಿ ಬಾಯಿ ಮುಚ್ಚಿಕೊಂಡರೆ ಸಾಕು: ವಾಸುದೇವನ್‌ಗೆ ಯಾವ ತೊಂದರೆಯೂ ಇಲ್ಲ. ಆದರೆ ವಾಸುದೇವನ್‌ಗೆ ಬಾಯಿ ಮುಚ್ಚಿಕೊಳ್ಳುವುದು ಸಾಧ್ಯವಾಗದಾಯಿತು. ಮುಚ್ಚಿಕೊಳ್ಳಲು ಪ್ರಯತ್ನ ಮಾಡಿದಷ್ಟೂ ತಂತಾನೆ ತೆರೆದುಕೊಳ್ಳುತ್ತಿತ್ತು. ನಮಗೆ ಹೇಳಿದ್ದೇ ದಿನಕ್ಕೊಂದು ರೂಪ ಧರಿಸಿತ್ತು. ಸಾಯ್ಕಾಲಾಜಿ ಓದಿದವಳು ನೀನು. ಹುಡುಗನ ಆಗಿನ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ನನಗಾಗ ಫೋನ್ ಮೇಲೆ ಬಂದ ಧಮಕಿಗಳು ಒಂದೆರಡಲ್ಲ. ಆದರೆ ವಾಸುದೇವನ್‌ನನ್ನು ನಾನು ಮಸ್ಕತ್ತಿಗೆ ಓಡಿಹೋಗುವ ಸೂಚನೆ ಮಾಡಿದ್ದು ಈ ಧಮಕಿಗಳಿಗೆ ಹೆದರಿ ಅಲ್ಲ. ಅವನು ತಾನು ಕಂಡ ದೃಶ್ಯವನ್ನು ನೆನೆಯುತ್ತ ಉಳಿದರೆ ಒಂದೇ ಅವನಿಗೆ ಹುಚ್ಚೇ ಹಿಡಿಯಬಹುದು, ಇಲ್ಲವೇ ಬಾಯಿಗೆ ಬಂದಂತೆ ಮಾತನಾಡಿ ಇಲ್ಲದ ಅಪಾಯಕ್ಕೆ ಒಳಗಾಗಬಹುದು. ನಮ್ಮ ಅಗರವಾಲ್ ನನ್ನ ಬೆನ್ನು ಹತ್ತಿದ್ದು ಈ ಸಂದರ್ಭದಲ್ಲಿ. ವಾಸುದೇವನ್‌ನನ್ನು ಖುದ್ದು ಭೇಟಿಯಾಗಿ ಮಾತನಾಡಿಸುವ ಮನಸ್ಸಿತ್ತು, ಅವನಿಗೆ. ಆಗ ನಮ್ಮಿಬ್ಬರ ನಡುವೆ ಆದ ಜಗಳದ ಬಗ್ಗೆ ಇನ್ನೊಮ್ಮೆ ಹೇಳಿಯೇನು. ಈಗ ಬೇಡ. ಬಹು ದೊಡ್ಡ-ಬಂಗಾರದ-ಸ್ಮಗ್‌ಲಿಂಗ್ ಪ್ರಕರಣದಲ್ಲಿ ಸುಮಾರು ಮುವ್ವತ್ತು ಲಕ್ಷ ರೂಪಾಯಿಯಷ್ಟು ದೊಡ್ಡ ರಕಮನ್ನು ಒಬ್ಬನೇ ದೋಚಿ ದುಬಾಯಿಗೋ ಇನ್ನೆಲ್ಲಿಗೋ ಪರಾರಿಯಾದವನ ಕರಾಮತಿಯಂತೆ ಈ ಕೊಲೆ. ಪರಾರಿಯಾಗುವ ಮೊದಲು ತನ್ನ ಇನ್ನಿಬ್ಬರು ಪಾಲುದಾರರ ಕಣ್ಣಲ್ಲಿ ಮಣ್ಣು ಎರಚಲು ತನ್ನ ವಯಸ್ಸಿನವನೇ ಆದ ಇನ್ನೊಬ್ಬನ ಕೊಲೆ ಮಾಡಿಸಿ ತಾನೇ ಕೊಲೆಯಾಗಿದ್ದೇನೆ ಎನ್ನುವಂಥ ವದಂತಿ ಹಬ್ಬಿಸುವ ಹಂಚಿಕೆಯಂತೆ ಇದೆಲ್ಲ-ಕನಿಷ್ಠ ಪತ್ರಿಕೆಯಲ್ಲಿ ವರದಿ ಮಾಡಿದವನು ತರ್ಕಮಾಡಿದ್ದು ಹಾಗೆ. ಇಂಥ ವರದಿಗಳ ಹಣೆಬರಹ ನಿನಗೆ ಗೊತ್ತಿದ್ದದ್ದೇ. ‘ಸೆನ್ಸೇಶನಲಿಜಮ್’ ಮೆಚ್ಚದವನು ವರದಿಗಾರ ಹೇಗೆ ಆದಾನು! ಇಷ್ಟೇ: ಈ ವರದಿಗಾರನ ತರ್ಕ ತಥ್ಯವಿಲ್ಲದ್ದಲ್ಲ ಎನ್ನುವಹಾಗೆ ಒಂದಕ್ಕೊಂದು ಪ್ರತಿಸ್ಪರ್ಧಿಯಾದ ಎರಡು ಗ್ಯಾಂಗುಗಳು ಮುಂಬಯಿಯ ಈ ಭಾಗದಲ್ಲಿ ಕೆಲಸ ಮಾಡಲು ತೊಡಗಿದ್ದು ಹಲವರ ಲಕ್ಷ್ಯಕ್ಕೆ ಬಂದ ಸಂಗತಿಯಾಗಿದೆ. ಈ ವ್ಯವಹಾರಗಳ ಖುಲಾಸೆಯಲ್ಲಿ ನಮ್ಮ ವಾಸು ಕೊಡಬಹುದಾಗಿದ್ದ ಮಾಹಿತಿ ಕೆಲಸಕ್ಕೆ ಬರಬಹುದಾಗಿತ್ತು ಎಂದು ನನಗಂತೂ ತೋರಲಿಲ್ಲ, ಈಗಲೂ ತೋರುತ್ತಿಲ್ಲ. ಆದರೆ ಅಗರವಾಲ ಮಾತ್ರ ಆಗ ನನ್ನೊಡನೆ ಕಟ್ಟಿಕೊಂಡ ಹಗೆತನವನ್ನು ಈವರೆಗೂ ಬಿಟ್ಟುಕೊಟ್ಟಂತಿಲ್ಲ: ಆಮೇಲೆ ಅವನು ಮತ್ತೆ ನನಗೆ ಫೋನ್ ಮಾಡಲಿಲ್ಲ. ನಮ್ಮಿಬ್ಬರ ಸಂಬಂಧ ಆಗಲೇ ಕಡಿದು ಬಿದ್ದಿತೆಂದು ತೋರುತ್ತದೆ. ಮೊನ್ನೆ ಒಂದು ಪ್ರಕ್ಷುಬ್ಧ ಮನಹ್ಸ್ಥಿತಿಯಲ್ಲಿ ಕರುಣಾಕರನ್ನನ ವಿಳಾಸದ ಸಲುವಾಗಿ ಫೋನ್ ಮಾಡುವ ಮೊದಲು ನಾನೂ ಅವನಿಗೆ ಫೋನ್ ಮಾಡಿರಲಿಲ್ಲ…”

ಬೆಹರಾಮನಿಗೆ ಮಾತನಾಡುವ ಭರದಲ್ಲಿ ಆಗಿನಿಂದಲೂ ತಾನು ಒಬ್ಬನೇ ಮಾತನಾಡುತ್ತಿದ್ದೇನೆ ಎಂಬುದು ಲಕ್ಷ್ಯಕ್ಕೇ ಬರಲಿಲ್ಲ. ಶಿರೀನಳನ್ನುದ್ದೇಶಿಸಿ ಮಾತನ್ನಾಡಿದ್ದರೂ ಕೊನೆಕೊನೆಯ ವಾಕ್ಯಗಳು ತನಗೂ ಸ್ಪಷ್ಟವಾಗಿ ಕೇಳಿಸಿರಲಿಲ್ಲ ಎಂಬುದನ್ನು ತೀರ ತಡವಾಗಿ ಮನಗಂಡವನ ಹಾಗೆ-“ಶಿರೀನ್, ಕರುಣಾಕರನ್ ತನ್ನ ಬಳಿಯಿದ್ದ ಸಹಿಯಿಲ್ಲದ ಪತ್ರವೊಂದನ್ನು ಉಲ್ಲೇಖಿಸಿದ್ದು ನೆನಪಿದೆಯೇ? ಆ ಪತ್ರ ಈ ವಾಸುದೇವನ್‌ನೇ ಬರೆದದ್ದಂತೆ. ನಂಬುವೆಯಾ ?” ಎಂದು ಸ್ಪಷ್ಟವಾಗಿ ಕೇಳಿದ.

ಶಿರೀನಳಿಗೆ ಯಾವುದರಲ್ಲೂ ನಂಬಿಕೆ ಹುಟ್ಟಲಿಲ್ಲ. ವಾಸುದೇವನ್ನನ ಬಗ್ಗೆ ಮೊದಲಿನಿಂದಲೂ ಇದ್ದ ಸಂಶಯ ಇನ್ನಷ್ಟು ಬಲಗೊಂಡಿತು, ಅಷ್ಟೆ. ಮಸ್ಕತ್ತಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ತಮ್ಮ ಮನೆ ಬಿಟ್ಟುಹೋದ ಹುಡುಗ ಕಳ್ಳಪೋಕರಿಗಳ ತಂಡ ಸೇರಿದ್ದಾನೆ. ಕೊಲೆಯಲ್ಲಿ ಕೈಯಿದ್ದವನ ಬಗ್ಗೆ ಅಪ್ಪ ಹೇಳಿದ ಕತೆ ಸ್ವತಃ ಅವನನ್ನೇ ಅಲುಗಾಡಿಸಿಬಿಟ್ಟಿದ್ದರೆ ಆಶ್ಚರ್ಯವಲ್ಲ: ಅವನ ಸ್ವಭಾವಕ್ಕೆ ವ್ಯತಿರಿಕ್ತವಾದದ್ದೇನಲ್ಲ, ಅದು. ಆ ಅಗರವಾಲ್: ಶುದ್ಧ ತಲೆತಿರುಕ. ಸೆನ್ಸೇಶನಲಿಜಮಕ್ಕೆ ಮಾರಿಕೊಂಡಿರುವ ಮೂರ್ಖ. ವಾಸುದೇವನ್ನನ ಬೆನ್ನುಹತ್ತಿದ ಕರುಣಾಕರನ್ನನನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾನೆ…ಬಾಯವರೆಗೆ ಬಂದ ಬೈಗುಳವನ್ನು ತಡೆದುಕೊಂಡಳು. ಅಮ್ಮನಿಲ್ಲದ ಹೊತ್ತಿನಲ್ಲಿ ಅಪ್ಪನನ್ನು ಕೆಣಕುವ ಧೈರ್ಯವಾಗಲಿಲ್ಲ. ಏನೇ ಆಗಲಿ, ನಮಗೆ ಸಂಬಂಧವೇ ಇಲ್ಲದ ಜಗತ್ತಿನಿಂದ ಧುತ್ ಎಂದು ಹೊರಟುಬಂದಂತೆ ಬಂದ ಈ ಇಬ್ಬರಿಂದ ಅಪ್ಪ-ಅಮ್ಮರ ರಜೆಯ ಯೋಜನೆಯನ್ನು ಮಾತ್ರ ಹಾಳುಗೆಡಹಲು ಬಿಡಲಾರೆ. ಇದು ನಿಶ್ಚಿತ. ಭಾವುಕತೆಗೂ ಒಂದು ಮಿತಿ ಇದೆ. ಮುಂಬಯಿ ಈಗ ಮೊದಲಿನ ಹಾಗೆ ಇಲ್ಲವೇ ಇಲ್ಲ. ಹಾಗೆ ನೋಡಿದರೆ ಯಾವ ನಗರವೂ ಇಲ್ಲ. ಯಾರು ಯಾವ ರೂಪದಲ್ಲಿ ಬರುತ್ತಾರೆ ಎಂದು ಹೇಳುವುದು ಕಷ್ಟ…

ಕದದ ಕರೆಗಂಟೆ ಸದ್ದು ಮಾಡಿದಾಗ ಶಿರೀನ್ ತನ್ನ ಭಾವನಾಲಹರಿಯಿಂದ ಎಚ್ಚರಗೊಂಡಳು. ಅಮ್ಮ ಬಂದಳೇನೋ ಎಂದುಕೊಳ್ಳುತ್ತ ಅಪ್ಪ ಚಹ ಕುಡಿದು ಖಾಲಿ ಮಾಡಿದ ಕಪ್ಪನ್ನು ಎತ್ತಿಕೊಂಡೇ ಕದ ತೆರೆಯಲು ನಡೆದಳು. ಕದ ತೆರೆದದ್ದೇ ತಡ, ಮೌಂಟ್ ಮೇರಿ ಚರ್ಚ್ ನೋಡಿ ಬಂದ ಖುಶಿಯಲ್ಲಿದ್ದ ಮೂರೂ ಮಕ್ಕಳು ಒಳಗೆ ಓಡಿಬಂದು ಅಜ್ಜನನ್ನು ಸುತ್ತುಗಟ್ಟಿ ಕುಣಿದಾಡುತ್ತ ತಾವು ನೋಡಿ ಬಂದ ದೃಶ್ಯವನ್ನು ತಮ್ಮ ಪುಟಾಣಿ ಮಾತುಗಳಲ್ಲಿ ಬಣ್ಣಿಸತೊಡಗಿದುವು. ಅವುಗಳ ಆ ಉತ್ಸಾಹದಲ್ಲಿ ಬೆಹರಾಮನ ಮನಸ್ಸಿನ ಬೇಸರ ಎಲ್ಲಿಂದೆಲ್ಲಿಗೊ ಹಾರಿಹೋಗಿ ಅದರ ಜಾಗದಲ್ಲಿ ಬೆಳಗಿನಿಂದಲೂ ಅನುಭವಿಸಿರದ ಖುಶಿ ತಂತಾನೆ ನೆಲಸಹತ್ತಿತು. ಆ ಖುಶಿಯ ಹೊಟ್ಟೆಯೊಳಗೇ ಸೂಕ್ಷ್ಮವಾದ ವಿಷಾದದಂಥ-ಈ ಪುಟಾಣಿಗಳ ಉತ್ಸಾಹ ಅರಳುವುದಕ್ಕೆ ಇಂದು ಎಂಥ ಅವಕಾಶವಿದೆ ಎನ್ನುವ ಪ್ರಶ್ನೆಯಾಗಬಹುದಾದಂಥ-ಭಾವನೆ ಮೆಲ್ಲಗೆ ಹುಟ್ಟಿಬರತೊಡಗಿತು. ಸುತ್ತುಗಟ್ಟಿ ನಿಂತ ಮಕ್ಕಳು ಅಲ್ಲಿಗೆ ಬಂದಷ್ಟೇ ವೇಗದಿಂದ ಉಕ್ಕಂದದ ಕೇಕೆ ಹಾಕುತ್ತ ತಮ್ಮ ಕೋಣೆಗೆ ಓಡಿಹೋದಮೇಲೆ ಬೆಹರಾಮ್ ಬಾಲ್ಕನಿಯಲ್ಲಿ ಕೂರುವುದೇ ಅಸಾಧ್ಯ ಎನ್ನುವಷ್ಟು ಬೇಚೈನುಗೊಂಡ. ಕೂತಲ್ಲಿಂದ ಎದ್ದು ಬಾಲ್ಕನಿಯ ಕಟಕಟೆಯ ದಡಿಯ ಮೇಲೆ ಎರಡೂ ಕೈಗಳನ್ನು ಆನಿಸಿ ಸಮುದ್ರವನ್ನು ನೋಡುತ್ತ ನಿಂತ. ದೂರ ದಿಗಂತರೇಖೆಯ ಮುನ್ನೆಲೆಯಲ್ಲಿ ಸಾಲಾಗಿ ಸಾಗಿದ ಹಾಯಿದೋಣಿಗಳನ್ನು ಮನಸ್ಸಿನಲ್ಲೇ ಎಣಿಸತೊಡಗಿದ. ಅಬ್ಜ ವರ್ಷಗಳ ಹಿಂದೆ ಈ ಪೃಥ್ವಿಯ ಮೇಲಿನ ಜೀವಕೋಟಿಗೆಲ್ಲ ಇದೇ ನೀರು ಜನ್ಮವಿತ್ತಿತಂತೆ! ಹರ್ಷ ಉಕ್ಕಿಸುವ ಜಲರಾಶಿಯ ಗಭೀರ ಉದ್ಘೋಷ ಕಿವಿಗಳನ್ನು ತುಂಬಿನಿಂತಾಗ, ಔದಾರ್ಯ ಘನತೆ ತುಂಬಿದ ನೀರಿನ ಈ ತಡಿಯಲ್ಲಿ-ಇಲ್ಲಿ ನಾವಿರುವಲ್ಲಿ-ಮಾತ್ರ ಇದೆಂತಹ ಕ್ಷುದ್ರ ಬದುಕು ಅನ್ನಿಸಿತು. ಹಿಂದೆ ಎಂದೂ ಅವನು ಇಳಿದಿರದ, ಒಂದು ರೀತಿಯಲ್ಲಿ ಅವನ ಸ್ವಭಾವಕ್ಕೆ ಸಹಜವಲ್ಲದ, ಚಿಂತನೆಯ ಆಳಕ್ಕೆ ಇಳಿದಾಗಲೂ ಮೇಲು ಮನಸ್ಸಿನ ಮೂಲೆಯಲ್ಲಿ ಕರುಣಾಕರನ್ ಹಾಗೂ ವಾಸುದೇವನ್ ಇಣಿಕಿದ್ದರು. ಅವರು ಯಾವ ಅಪಾಯಕ್ಕೂ ಬರದೆ ಇರಲಿ. ನನಗೆ ಸಾಧ್ಯವಾದುದಷ್ಟನ್ನು ಮಾಡುತ್ತೇನೆ. ಉಳಿದದ್ದೆಲ್ಲ ಗೌಣ, ನನಗೆ ಅರ್ಥವಾಗದ್ದು ಕೂಡ: ಎರಡೂ ಕೈಗಳನ್ನು ಜೋಡಿಸಿ ಬೆಹರಾಮ್ ಸಮುದ್ರಕ್ಕೆ ನಮಸ್ಕಾರ ಮಾಡಿದ.

ತನ್ನ ಕೋಣೆಗೆ ಹೋಗಿ ತುಸುಹೊತ್ತು ವಿಶ್ರಮಿಸುವ ಮನಸ್ಸಾಗಿತ್ತು. ಆದರೆ ಅಲ್ಲಿ ಸೇರಿದ ಶಿರೀನ್ ಹಾಗೂ ತನ್ನ ಹೆಂಡತಿ ಬಹುಶಃ ತನ್ನ ಬಗೆಗೇ ಮಾತನಾಡುತ್ತಿರಬಹುದು ಎಂದು ಅನುಮಾನವಾಗಿ ಬಾಲ್ಕನಿಯಲ್ಲಿ ನಿಂತೇ ಉಳಿದ. ಈ ಹೊತ್ತು ಇಲ್ಲ ನಾಳೆ ಇಲ್ಲ ನಾಡಿದ್ದು ಕರುಣಾಕರನ್ ಆಗಲೀ ವಾಸುದೇವನ್ ಆಗಲೀ ಮನೆಗೆ ಬರದೇ ಇರಲಾರ. ಕನಿಷ್ಠ ಫೋನ್ ಆದರೂ ಮಾಡಬಹುದು ಎಂದುಕೊಂಡ.

ಕತ್ತಲೆಯಾದರೂ ಮನೆಯಲ್ಲಿನ್ನೂ ದೀಪಗಳನ್ನು ಬೆಳಗಿರದ್ದು ಲಕ್ಷ್ಯಕ್ಕೆ ಬಂದು ಸೀತೆಯನ್ನು ಕರೆಯುವ ಮನಸ್ಸಾಯಿತು. ಆದರೆ ಆಗ ಓಡಿಬಂದ ಮಕ್ಕಳ ಗುಂಪಿನಲ್ಲಿ ಅವಳನ್ನು ಕಂಡಿರಲಿಲ್ಲ ಎಂಬುದು ನೆನಪಾಗಿ ಬಹುಶಃ ತಾಯಿಯ ಮನೆಗೆ ಹೋಗಿರಬೇಕು ಎಂದುಕೊಂಡು ತಾನೇ ಹೋಗಿ ಹಾಲು ಹಾಗೂ ಬಾಲ್ಕನಿಗಳಲ್ಲಿಯ ದೀಪಗಳನ್ನು ಹೊತ್ತಿಸಿದ. ಯಾವ ಸ್ಪಷ್ಟ ಕಾರಣವೂ ಇಲ್ಲದೇನೆ ಮನಸ್ಸು ಕಳವಳಕ್ಕೆ ಒಳಗಾಯಿತು. ಬೆಡರೂಮಿನಿಂದ ಹೊರಗೆ ಬಿದ್ದ ಹೆಂಡತಿ ಹಾಲಿಗೆ ಬರುತ್ತಲೇ “ಸೀತೆಯನ್ನು ಕಂಡಹಾಗಿಲ್ಲ,” ಎಂದು ಹೇಳಿದ, ಅವಳನ್ನು ಮಾತನಾಡಿಸುವ ಉದ್ದೇಶದಿಂದ. “ಇಲ್ಲ, ಮೌಂಟ್ ಮೇರಿಯ ಪಾವಟಿಗೆಗಳನ್ನು ಇಳಿದು ಬರುವಾಗ ಪಾರ್ವತಿ ಭೇಟಿಯಾದಳು. ಊರಿನಿಂದ ಯಾರೋ ಬಂದಿದ್ದಾರೆಂದು ನೆಪ ಹೇಳಿ ಒಂದು ಸಂಜೆಯಮಟ್ಟಿಗೆ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಕರಕೊಂಡು ಹೋದದ್ದು ಇಲ್ಲಿ ನಡೆದಿರಬಹುದಾದ ಮಾತುಕತೆಯ ಬಗ್ಗೆ ತಿಳಿಯಲು ಎಂದು ನಮ್ಮ ಶಿರೀನಳ ಸಂಶಯ. ಅದು ಅವಳ ಸ್ವಭಾವವೇ ಆಗಿಬಿಟ್ಟಿದೆ. ಮುಖ್ಯವಾಗಿ ಇದೆಲ್ಲದರಿಂದ ನೀವೆಲ್ಲಿ ಅಪಾಯಕ್ಕೆ ಬರುತ್ತೀರೋ ಎಂದು ಹುಡುಗಿ ಹೆದರಿಬಿಟ್ಟಿದ್ದಾಳೆ. ಅಂಥ ಛಾತಿ ಈ ಜನಕ್ಕಿಲ್ಲ ಎಂದು ನಾನೇ ಸಮಾಧಾನ ಹೇಳಿದ್ದೇನೆ. ವಾಸು ಬಂದಿದ್ದನಂತಲ್ಲ ಆಫೀಸಿಗೆ. ಕರುಣಾಕರನ್ ತನ್ನ ತಮ್ಮನಿರಬಹುದೆಂದು ಅನುಮಾನ ವ್ಯಕ್ತಪಡಿಸಿದನಂತೆ. ಇದ್ದರೂ ಇರಬಹುದು. ಸ್ವತಃ ಬಂದರಂತೂ ಸರಿಯೆ, ಇಲ್ಲವಾದರೆ ಫೋನ್ ಆದರೂ ಮಾಡದೇ ಇರಲಿಕ್ಕಿಲ್ಲ. ಇಬ್ಬರಿಗೂ ಕೆಲವು ದಿನಗಳ ಮಟ್ಟಿಗಾದರೂ ಮುಂಬಯಿ ಬಿಟ್ಟು ದೂರ ಹೋಗಲು ಹೇಳಿ. ಪಾರ್‍ವತಿ ಈ ಹೊತ್ತು ಶಿರೀನಳ ಇದಿರು ಏನೆಲ್ಲ ಹೇಳಿಹೋಗಿದ್ದಾಳೆ. ಎಷ್ಟು ಖರೆಯೋ ಎಷ್ಟು ಸುಳ್ಳೋ, ಖರೆಯೆಂದು ಗ್ರಹೀತ ಹಿಡಿದು ನಡೆಯುವುದೇ ಜಾಣತನ. ಅವಳ ಪ್ರಕಾರ ವಾಸುದೇವನ್ನನ ಜೀವಕ್ಕೆ ಕಂಟಕವಿದೆಯಂತೆ. ಅವನು ಇದಿರುಹಾಕಿಕೊಂಡ ಎರಡೂ ಗುಂಪುಗಳ ಜನ ಅವನ ತಲಾಸು ಮಾಡುತ್ತಿದ್ದಾರಂತೆ. ಇಬ್ಬರೂ ಹುಡುಗರ ಬಗ್ಗೆ ಪ್ರಾರ್ಥಿಸಿ ಮೇರಿಯ ಮುಂದೆ ಮೇಣಬತ್ತಿ ಹಚ್ಚಿಬಂದೆ,” ಎಂದಳು. ಅವಳು ಹಾಗೆ ಹೇಳುತ್ತಲೇ ಬೆಹರಾಮನಿಗೆ ತನ್ನ ಹೆಂಡತಿಯ ಬಗ್ಗೆ ಎಷ್ಟೊಂದು ಪ್ರೀತಿ ಉಕ್ಕಿಬಂದಿತೆಂದರೆ ಹತ್ತಿರ ಸರಿದು ಅವಳನ್ನು ಮುದ್ದಿಸಬೇಕೆನಿಸಿತು. ತನ್ನ ಹುಚ್ಚುತನಕ್ಕೆ ಮನಸ್ಸಿನಲ್ಲೇ ನಗುತ್ತ “ಇನ್ನೊಮ್ಮೆ ಚಹ ಮಾಡುತ್ತೀಯಾ ?” ಎಂದು ಕೇಳಿ ಮೆಲ್ಲಕ್ಕೆ ಅವಳ ಗಲ್ಲ ತಟ್ಟಿದ. ಅವಳು ಅಡುಗೆಯ ಮನೆಯತ್ತ ಸರಿದಾಗ: ಈ ಧಡ್ಡ ಪಾರ್ವತಿ ಏನೇ ಹೇಳಲಿ. ನಾಳೆನಾಡಿದ್ದರಲ್ಲಿ ಇಬ್ಬರೂ ಹುಡುಗರು ಪರಸ್ಪರ ಭೇಟಿಯಾಗುತ್ತಾರೆ. ಹೇಗೆಂದು ಹೇಳಲಾರೆ. ಅಂತೂ ಭೇಟಿಯಾಗುತ್ತಾರೆ. ಫೋನ್ ಮೇಲಾದರೂ ನನ್ನನ್ನು ಸಂಪರ್ಕಿಸುತ್ತಾರೆ. ಆಗ, ಹೆಂಡತಿ ಹೇಳಿದ ಹಾಗೆ ಮಾಡುತ್ತೇನೆ! ಸಣ್ಣ ಮಗುವಿನ ಹಾಗೆ ಕೇಕೆ ಹಾಕುವಷ್ಟು ಖುಶಿಯಿಂದ, ಸೋಫಾದಲ್ಲಿ ಕೂತು, ಹೆಂಡತಿ ಚಹ ತರುವುದರ ಹಾದಿ ಕಾಯಹತ್ತಿದ.

ಅಧ್ಯಾಯ ಎಂಟು

ಮುಂದಿನ ನಾಲ್ಕು ದಿನ, ಬೆಹರಾಮನ ಮನೆಯಲ್ಲಿ ವಾಸುದೇವನ್ನನ ಇಲ್ಲ ಕರುಣಾಕರನ್ನನ ಸುದ್ದಿಯೇ ಇಲ್ಲ. ಒಬ್ಬರೂ ಭೇಟಿಯಾಗಲು ಬರಲಿಲ್ಲ. ಫೋನ್ ಮಾಡಲಿಲ್ಲ. ಮನೆಯಲ್ಲಿಯೂ ಯಾರೊಬ್ಬರೂ ಅವರ ಬಗ್ಗೆ ಚಕಾರವೆತ್ತಲಿಲ್ಲ. ಇದ್ದಕ್ಕಿದ್ದ ಹಾಗೆ ಪ್ರಕಟವಾಗಿ, ಎಲ್ಲರ ಸಹನಶಕ್ತಿಯನ್ನು ಪರೀಕ್ಷೆ ಮಾಡಿ ನೋಡುವಷ್ಟು ಕೋಲಾಹಲವೆಬ್ಬಿಸಿ, ಈಗ ಅವರು ಬಂದದ್ದಾದರೂ ಹೌದೆ ? ಎನ್ನುವುದರ ಬಗೆಗೇ ಸಂಶಯ ಹುಟ್ಟಿಸುವಹಾಗೆ ಬೇಪತ್ತೆಯಾಗಿದ್ದರು. ಇದು ಮೊದಲು ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದರೂ ಬರಬರುತ್ತ ವಿಚಿತ್ರ ವಾತಾವರಣವೊಂದು ಮನೆಯಲ್ಲಿ ನೆಲಸಲು ಕಾರಣವಾಗತೊಡಗಿತು: ಪಾರ್ವತಿಯಂಥ ಪಾರ್ವತಿ ಕೂಡ ಇದೆಲ್ಲದರ ಬಗ್ಗೆ ಮೌನ ತಾಳಬೇಕೆಂದರೆ ಯಾರೋ ಸಂಚು ನಡೆಸಿರಬೇಕು! ಅಪ್ಪ-ಅಮ್ಮ ಹಾಗೂ ಪಾರ್ವತಿ, ಏನೆಲ್ಲ ನಡೆಯುತ್ತಿದ್ದಾಗಲೂ, ತನ್ನಿಂದ ಬಚ್ಚಿಡುತ್ತಿದ್ದಾರೆ ಎಂಬುದು ಶಿರೀನಳ ಗುಮಾನಿಯಾದರೆ, ಶಿರೀನ್-ಪಾರ್ವತಿ-ಹೆಂಡತಿಯ ಬಗ್ಗೆ ಬೆಹರಾಮನಿಗೆ ಅಂಥದೆ ಸಂಶಯ. ಆದರೂ ಯಾರೂ ಬಾಯಿಬಿಟ್ಟು ಕೇಳಲಿಲ್ಲ ; ಕೇಳುವ ಧೈರ್ಯವಾಗಲಿಲ್ಲ. ನಿಜಕ್ಕೂ ಏನೂ ನಡೆದಿರಲಿಕ್ಕಿಲ್ಲ, ಎಲ್ಲವೂ ತನ್ನಿಂದ ತಾನೇ ಸರಿಯಾಗಿರಬೇಕು. ಬಂದೊದಗಿದ ಕುತ್ತು ತನ್ನಿಂದ ತಾನೇ ದೂರವಾಗಿರಬೇಕು. ತಮ್ಮಿಂದ ನಿಶ್ಚಿತವಾಗಿ ಅಪೇಕ್ಷಿಸುತ್ತಿದ್ದುದಾದರೂ ಏನು ಎಂಬುದನ್ನು ಸ್ಪಷ್ಟಪಡಿಸಲು ನಿರಾಕರಿಸುತ್ತಿದ್ದ ಸನ್ನಿವೇಶ ಒಂದು ಬಗೆಯ ಉಸಿರುಗಟ್ಟಿಗೆ ಕಾರಣವಾಗುತ್ತಿದ್ದಾಗ ಈ ಹೊಸ ಬೆಳವಣಿಗೆಯಿಂದ ಎಲ್ಲರ ಅಂತಃಕರಣಗಳು ತಾತ್ಪೂರ್ತಿಕವಾಗಿ ನಿರಾಳವಾದುವು. ಆದರೂ ಸನ್ನಿವೇಶದಲ್ಲಿಯ ಅಸಹಜತೆಯಿಂದಾಗಿ ಮನಸ್ಸುಗಳು ಆತಂಕದ ಹಿಡಿತದಿಂದ ಸಂಪೂರ್ಣ ಬಿಡುಗಡೆ ಪಡೆಯದಾದುವು. ಮುಂದೊಂದು ದಿನ ಮಧ್ಯಾಹ್ನ ಮನೆಯಲ್ಲಿ ನೆಲಸಿದ ಈ ಮೌನಕ್ಕೆ ಕೊನೆ ತರುವಂಥ ಘಟನೆಯೊಂದು ನಡೆಯಿತು.

ಅಂದು ಶನಿವಾರ. ಬೆಹರಾಮನಿಗೆ ಆಫೀಸಿಗೆ ರಜೆ. ಪಾರ್ವತಿ ಕೂಡ ಮಧ್ಯಾಹ್ನದ ಮುಸುರೆಯ ಕೆಲಸಕ್ಕೆ ಬಂದವಳು, ಆಗ ಮನೆಯಲ್ಲಿದ್ದಳು. ಬೆಹರಾಮನ ಹೆಂಡತಿ ಚಹದ ಸಿದ್ಧತೆ ಮಾಡುತ್ತಿದ್ದಳು. ಆಗ, ಅಮೇರಿಕೆಯಿಂದ ಕೇಕಿಯ ಟೆಲಿಫೋನ್ ಕರೆ! ಅಮೇರಿಕೆಯಲ್ಲಾಗ ಬೆಳಗಿನ ಐದು ಗಂಟೆ. ಎಚ್ಚರವಾಗುತ್ತಲೇ ಅಪ್ಪ-ಅಮ್ಮರ ನೆನಪಾಯಿತಂತೆ. ಅಕ್ಕನ ಜೊತೆಗೂ ಮಾತನಾಡಬೇಕು, ಅವಳ ದನಿ ಕೇಳಬೇಕು ಅನ್ನಿಸಿತಂತೆ. ಹೆಂಡತಿ ತವರುಮನೆಗೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬಂಟಿಯಾಗಿದ್ದ ಹುಡುಗನಿಗೆ ಮನೆಯ ನೆನಪಾಗಿರಬೇಕು. ಸುಮಾರು ೯ ಮಿನಿಟುಗಳವರೆಗೆ ತುಂಬ ಭಾವನಾವಶನಾಗಿ ಪ್ರತಿಯೊಬ್ಬರ ಜೊತೆಗೆ ಮಾತನಾಡಿದ. ಅಮ್ಮನ ಜೊತೆಗೆ ಮಾತನಾಡುವಾಗ ಹಿಂದೆ ಎಂದೂ ಕೇಳಿರದ ಹಾಗೆ-“ನನ್ನ ದೋಸ್ತ್ ಹ್ಯಾಗಿದ್ದಾನೆ ? ಏನವನ ಹೆಸರು ? ವಾಸು ಅಲ್ಲವೆ ?” ಎಂದು ಕೇಳಿದ. ಕೇಕಿ ಅಮೇರಿಕೆಗೆ ಹೋಗುವ ಕೆಲವೇ ತಿಂಗಳ ಮೊದಲು ಕೆಲಸಕ್ಕೆ ಹತ್ತಿದ್ದ ವಾಸುದೇವನ್ ಕೇಕಿಗೆ ತುಂಬ ಬೇಕಾದವನಾಗಿದ್ದ. ಚಹ ಕುಡಿಯುವಾಗ ಶಿರೀನಳಿಗೆ ಕೇಕಿ ಕೇಳಿದ ಪ್ರಶ್ನೆಯ ಹಿನ್ನೆಲೆಯನ್ನು ವಿವರಿಸುತ್ತ “ಎಂಥ ಆಕಸ್ಮಿಕ ನೋಡು. ನೀನು ನಂಬಬೇಕು: ಚಹಕ್ಕೆ ಎಸರು ಇಡುವಾಗ ತಲೆಯಲ್ಲಿ ವಾಸುದೇವನ್ನನದೇ ವಿಚಾರ. ಕೇಕಿ ಎಲ್ಲರನ್ನು ಬಿಟ್ಟು ಅವನ ಬಗೆಗೇ ಕೇಳಬೇಕೆಂದರೆ!” ಎಂದಳು. ‘ನಾವು ಪರಸ್ಪರರ ಬದುಕಿನಲ್ಲಿ ಹೇಗೆ ಬರುತ್ತೇವೆ ? ಯಾಕೆ ಬರುತ್ತೇವೆ ? ಎನ್ನುವುದನ್ನು ವಿವರಿಸುವುದು ಕಷ್ಟ,’ ಎಂಬಂಥ ಭಾವನೆಯನ್ನು ವ್ಯಕ್ತಪಡಿಸುವ ಬಲ ಮಾತಿಗೆ ಸಾಲದೇ ಇರುವಾಗ, “ನಾಲ್ಕು ದಿನಗಳಿಂದ ಹುಡುಗರ ಸುದ್ದಿಯೇ ಇಲ್ಲ. ಸುಖರೂಪವಾಗಿರುವರೆಂದು ತಿಳಿಯುತ್ತೇನೆ,” ಎಂದಳು. ಅವಳ ಮಾತಿನಲ್ಲಿ ಒಳಗೆ ಪಾತ್ರೆಗಳನ್ನು ತಿಕ್ಕುವಾಗಲೂ ಕಿವಿಗಳನ್ನು ಇತ್ತವೇ ಇರಿಸಿದಂತಿದ್ದ ಪಾರ್ವತಿಯನ್ನು ಮಾತಿಗೆಳೆಯುವ ಉದ್ದೇಶವಿತ್ತು: ಪಾರ್ವತಿಯ ಅನಿರೀಕ್ಷಿತ ಮೌನ ಅವಳಿಗೂ ಕಳವಳವನ್ನುಂಟುಮಾಡಿತ್ತು. ಪಾರ್ವತಿ ಈ ಹೊತ್ತೂ ಮಾತನಾಡಲಿಲ್ಲ. ಅವಳು ಹೊರಟುಹೋದಮೇಲೆ ಈ ಸಂಗತಿಯೇ ಮಾತಿಗೆ ವಿಷಯವಾಯಿತು. ಒಂದು ಸಂಜೆಯಮಟ್ಟಿಗೆ ತಾಯಿಯ ಮನೆಗೆ ಹೋದ ಸೀತೆಯನ್ನು ಕೇಳುವುದು ಸರಿಯಾಗಿ ತೋರಲಿಲ್ಲ.

ಚರ್ಚೆಯಲ್ಲಿ ತೊಡಗಿದ ಮೂವರಿಗೂ ಮೂರು ಸಂಗತಿಗಳು ಸಾಧ್ಯವಾಗಿಕಂಡವು: ಕರುಣಾಕರನ್ ತಮ್ಮ ಮನೆಗೆ ಬಂದ ನಾಲ್ವರನ್ನು ನೋಡಿ ಹೆದರಿದವನು ಮುಂಬಯಿಯನ್ನು ಬಿಟ್ಟು ಹೋಗಿರಬಹುದು. ಇಲ್ಲವೆ ಅವನ ಡಾಯರಿಯಲ್ಲಿ ಅಂಥ ವಿಶೇಷವೇನೂ ನೋಡಲು ಸಿಗದೆ ಅವನ ಬೆನ್ನುಹತ್ತಿದವರೇ ಅವನ ದಾರಿಯಿಂದ ದೂರ ಸರಿದಿರಬಹುದು. ಇಲ್ಲವೆ ಕರುಣಾಕರನ್-ವಾಸುದೇವನ್ ಒಬ್ಬರನ್ನೊಬ್ಬರು ಭೇಟಿಯಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ದಾರಿ ಕಂಡುಕೊಂಡಿರಬಹುದು. ಈ ಸಾಧ್ಯತೆಗಳನ್ನು ಎಲ್ಲರಿಗಿಂತ ಹೆಚ್ಚು ಹುರುಪಿನಿಂದ ಅನುಮೋದಿಸಿದವಳು ಶಿರೀನಳೇ ಆಗಿದ್ದಳು : ಅಪ್ಪ ಆದಷ್ಟು ಬೇಗ ಈ ಜಂಜಾಟದಿಂದ ಮುಕ್ತವಾಗುವುದನ್ನು ಕಾಯುತ್ತಿದ್ದ ಅವಳಿಗೆ ಈ ಸಾಧ್ಯತೆಗಳು ತುಂಬ ಆಪ್ಯಾಯಮಾನವಾಗಿ ಕಂಡವು. ಆದರೆ ಅದೇ ಹೊತ್ತಿಗೆ ಒಳಗೆಲ್ಲೋ ಪಾರ್ವತಿಯ ನಿಗೂಢ ಮೌನ ಕಾಡದೇ ಇರಲಿಲ್ಲ. ತಾನಾಗಿಯೇ ಮಾತನಾಡಿಸೋಣವೆಂದರೆ ಅಪ್ಪ ಕೇಳಿಯಾನು ಎಂಬ ಭಯ. ಕೇಳಿದರೆ ಕಳೆದ ನಾಲ್ಕು ದಿನ ಮನೆಯಲ್ಲಿ ನೆಲಸಿದ ಶಾಂತಿ ಕೆಡದೇ ಇರುವುದು ಅಶಕ್ಯ. ಈ ಎಲ್ಲ ಆಗುಹೋಗುಗಳನ್ನು ಕುರಿತ ಭಾವನೆಗಳನ್ನು ತನಗೆ ತಾನೇ ಸ್ಪಷ್ಟಪಡಿಸಿಕೊಳ್ಳುವಾಗ ಅನ್ನಿಸಿತು: ಅಪ್ಪ-ಅಮ್ಮರಿಗೆ ಈ ಹುಡುಗರ ಬಗ್ಗೆ ಇರುವ ಭಾವನೆಗಳು ನನಗಿಲ್ಲ, ಒಪ್ಪುತ್ತೇನೆ. ಅವರು ನಮ್ಮ ಮನೆಗೆ, ಕೊಲೆಗಡುಕರು ತಮ್ಮ ಬೆನ್ನುಹತ್ತಿದ್ದಾರೆ, ತಮ್ಮನ್ನು ರಕ್ಷಿಸಿರಿ ಎಂದು ಕೇಳಿ ಬಂದದ್ದಲ್ಲ. ತಾವು ತಾವು ಸಿಕ್ಕಿಸಿಕೊಂಡ ಕೆಲಸಗಳ ಅಪಾಯಗಳನ್ನು ಅರಿಯದ ಕುಕ್ಕೂಬಾಳರೂ ಅವರಲ್ಲ. ಇಂದಿನ ಬದುಕಿನ ಕ್ರಮವೇ ಗೊಂದಲಮಯವಾಗುತ್ತ ನಡೆದಾಗ ಇಂಥ ಎಷ್ಟು ಹುಡುಗರನ್ನು ನಾವು ನಮ್ಮ ವೈಯಕ್ತಿಕ ಪ್ರಯತ್ನಗಳಿಂದ ಕಾಯಬಹುದು ? ಇಷ್ಟಕ್ಕೂ ಈ ಯಾವುದಕ್ಕೂ ಸಂಬಂಧವಿಲ್ಲದ ನಾವು ನಮ್ಮ ಜೀವಕ್ಕೆ ಧೋಕೆ ತಂದುಕೊಳ್ಳುತ್ತಿಲ್ಲ ಎಂದು ಹೇಗೆ ತಿಳಿಯಲಿ ? ಕೊನೆಯ ವಿಚಾರದಿಂದ ಕೈಯಲ್ಲಿ ಹಿಡಿದ ಕಪ್ಪು ಸಣ್ಣಗೆ ನಡುಗಿ ಸದ್ದುಮಾಡಿದಾಗ, ತಾನು ಈ ಮುಂಬಯಿಗೆ ಸಖ್ತು ಹೆದರಿದ್ದೇನೆ ಎಂದೂ ಒಪ್ಪಿಕೊಂಡಳು. ಈ ಎಲ್ಲ ಯೋಚನೆಗಳ ಕೇಂದ್ರದಲ್ಲಿ ತಾನು, ತನ್ನವರನ್ನು ಬಿಟ್ಟು ಉಳಿದವರಾರೂ ಇಲ್ಲವೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವಾಗಲೂ ಅದು ತಪ್ಪೆಂದು ಭಾವಿಸಲಿಲ್ಲ: ನಾನಾಗಿ ಇವರಾರಿಗೂ ಹಾನಿ ತಟ್ಟುವಂತೆ ಮಾಡಲಾರೆ. ಅದಕ್ಕಿಂತ ಹೆಚ್ಚಿನದು ನನ್ನ ಶಕ್ತಿಯನ್ನು ಮೀರಿದ್ದು; ದೇವರಿಗೆ ಬಿಟ್ಟದ್ದು. ಹೀಗೆ ಯೋಚಿಸುವಾಗ ಏನೋ ಕೆಟ್ಟದ್ದು ನಡೆದುಹೋಗಿಬಿಟ್ಟಿದೆ. ಮಾತ್ರವಲ್ಲ, ಅದು ಪಾರ್ವತಿಗೆ ಗೊತ್ತಿದೆ ಎನ್ನುವಂಥ ಭಾವನೆ ಮನಸ್ಸನ್ನು ವ್ಯಾಪಿಸಿ ನಿಂತ ರಭಸಕ್ಕೆ ಕೈಕಾಲು ಸೋತುಬಂದಂತಾಗಿ, ಮಕ್ಕಳ ಕೋಣೆಯಿಂದ ಯಾರೋ ಕರೆದಂತೆ ಕೇಳಿಸಿತು ಎಂಬ ನೆಪಮಾಡಿ ಅತ್ತ ಹೊರಟುಹೋದಳು. ಹೋಗುವಾಗ, ತನ್ನ ಪ್ರಜ್ಞೆಯನ್ನು ಮೀರಿದ ಈ ಭಾವನೆಯಿಂದ ಆಶ್ಚರ್ಯಪಟ್ಟಳು.

ಶಿರೀನಳ ವರ್ತನೆ ಬೆಹರಾಮನನ್ನು ಅಸ್ವಸ್ಥಗೊಳಿಸಿತು. ಇವರೆಲ್ಲರಿಗೆ ಏನೋ ತಿಳಿದಿದೆ, ತನ್ನಿಂದ ಅಡಗಿಸುತ್ತಿದ್ದಾರೆ ಅನ್ನಿಸಿ “ನೀವೆಲ್ಲ ನನ್ನಿಂದ ಏನೋ ಅಡಗಿಸುತ್ತಿದ್ದೀರಿ,” ಎಂದು ಹೆಂಡತಿಯನ್ನು ಕೇಳಿದ, ತಾನು ಕೇಳಲು ಸಿದ್ಧನಿದ್ದೇನೆ ಎನ್ನುವ ಧಾಟಿಯಲ್ಲಿ. ಹೋದ ನಾಲ್ಕು ದಿನಗಳಲ್ಲಿ ಏನೂ ನಡೆದಿಲ್ಲ ಎಂದು ನಂಬಲು ಅವನೂ ಸಿದ್ಧನಿರಲಿಲ್ಲ. ಕರುಣಾಕರನ್‌ನನ್ನು ಹಾಗೆ ನಾವು ಮನೆಯಿಂದ ಓಡಿಸಬಾರದಿತ್ತೇನೋ. ವಾಸುದೇವನ್ ಆಫೀಸಿಗೆ ಬಂದಾಗ ಅಷ್ಟೊಂದು ಅವಿಶ್ವಾಸದಿಂದ ವರ್ತಿಸಬಾರದಿತ್ತೇನೋ. ನಮ್ಮೊಡನೆಯ ಸಂಬಂಧವನ್ನು ಹೀಗೆ ಒಮ್ಮಿಂದೊಮ್ಮೆಲೇ ಕಡಿದುಕೊಳ್ಳಲು ನಮ್ಮ ಬಗೆಗಿನ ಅಸಮಾಧಾನ ಕಾರಣವಾಗಿದ್ದರೆ ಅಡ್ಡಿಯಿಲ್ಲ. ಯಾವುದೇ ರೀತಿಯಿಂದ ಅಪಾಯಕ್ಕೆ ಬಂದಿರದಿದ್ದರೆ ಸಾಕು. ಅಗರವಾಲನ ಆಫೀಸಿಗೆ ಹೋಗುವ ಮನಸ್ಸಾಗಿತ್ತು. ಕೊನೆಯ ಗಳಿಗೆಯಲ್ಲಿ ಧೈರ್ಯ ಕುಸಿಯುತ್ತದೆ: “ಪಾರ್ವತಿಗೆ ಗೊತ್ತಾಗಿದೆಯೆ ?” ಮೊದಲು ಕೇಳಿದ ಪ್ರಶ್ನೆಯನ್ನೇ ಇನ್ನೊಂದು ರೂಪದಲ್ಲಿ ಕೇಳಿದಾಗ, “ಪಾರ್ವತಿಗೂ ಏನೂ ಗೊತ್ತಾದಂತಿಲ್ಲ. ಅವಳು ಒಮ್ಮೆಲೇ ಮಾತು ನಿಲ್ಲಿಸಿದ್ದಕ್ಕೂ ಈ ಪ್ರಕರಣಕ್ಕೂ ಸಂಬಂಧವಿರಲಿಕ್ಕಿಲ್ಲ. ಊರಿನಿಂದ ಯಾರೋ ಬಂದಿದ್ದಾರೆ ಎನ್ನುತ್ತಿದ್ದಳು.” ಹೆಂಡತಿಯ ಮಾತಿನ ಧಾಟಿಯ ಸಹಜತೆಯಿಂದಾಗಿ ಬೆಹರಾಮನಿಗೆ ಧೈರ್ಯ ಮೂಡಿದರೂ ಸ್ವತಃ ಅದನ್ನು ಆಡಿದವಳಿಗೇ ಆ ಧೈರ್ಯವಿರಲಿಲ್ಲ. ಅವಳು ಚಹದ ಕಪ್ಪು-ಬಸಿಗಳನ್ನು ಒಳಗೆ ಒಯ್ಯಲು ಏಳುತ್ತಿದ್ದಾಗ, “ಅವುಗಳನ್ನು ಇಟ್ಟು ಬಾ. ಕೆಲಹೊತ್ತು ರಮ್ಮಿ ಆಡೋಣ, ಶಿರೀನಳನ್ನೂ ಕರೆ,” ಎಂದ. ಅವರು ತನ್ನ ಸೂಚನೆಗೆ ಒಪ್ಪುತ್ತಾರೆ ಎಂಬುದರಲ್ಲಿ ವಿಶ್ವಾಸ ಇದ್ದವನಹಾಗೆ ಕೂತಲ್ಲಿಂದ ಎದ್ದು ಹಾಲಿನ ಇನ್ನೊಂದು ಮೂಲೆಯಲ್ಲಿಯ ‘ಶೋಕೇಸ್’ ಮೇಲೆ ಇರಿಸಿದ್ದ ಇಸ್ಪೀಟು ಪೆಟ್ಟಿಗೆಯನ್ನು ಹುಡುಕಿ ತರಲು ಹೊರಟ. ಹೆಂಡತಿ ಹೋಗಿ ಒಳಗಿಂದ ಶಿರೀನಳನ್ನು ಕರೆತಂದಳು. ಮೂವರೂ ಸೋಫಾಗಳಲ್ಲಿ ಕೂತು ರಮ್ಮಿ ಆಡಹತ್ತಿದರು.

ಯಾವ ತಕರಾರೂ ಬೇಡ ಎನ್ನುವಂತೆ, ಆಟಕ್ಕೆ ಕೂತಾಗ ಪ್ರತಿಸಾರೆ ಮಾಡುವಂತೆ, ಆಟದ ನಿಯಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ: ಮೂರು ಎಲೆಗಳ ಒಂದು ‘ಸೀಕ್ವೆನ್ಸ್’ ಕಡ್ಡಾಯದ್ದು, ಇದರಲ್ಲಿ ಜೋಕರ್ ಇರಕೂಡದು. ಉಳಿದ ಸೆಟ್ಟುಗಳು ಸೀಕ್ವೆನ್ಸ್ ಆಗಬಹುದು ಇಲ್ಲವೇ ಒಂದೇ ತರದ ಮೂರು ಎಲೆಗಳದ್ದಾಗಬಹುದು. ಈ ಸೆಟ್ಟುಗಳಲ್ಲಿ ಬೇಕಾದರೆ ಜೋಕರ್ ಉಪಯೋಗಿಸಬಹುದು-ಯಾವುದೇ ಎಲೆಯ ಜಾಗದಲ್ಲಿ. ಆಟದ ಈ ಮಾಮೂಲು ನಿಯಮವನ್ನು ವಿವರಿಸುವಾಗ ವಿವರಿಸುವ ರೀತಿ ಎಲ್ಲೋ ಹೇಗೋ ಕರುಣಾಕರನ್-ವಾಸುದೇವನ್‌ರಿಂದಾಗಿ ತಾವು ಸಿಲುಕಿಕೊಂಡ ಸನ್ನಿವೇಶಕ್ಕೆ ಕೊಂಡಿ ಹಾಕಿಕೊಳ್ಳುತ್ತಿರುವುದು ಲಕ್ಷ್ಯಕ್ಕೆ ಬಂದಾಗ ಉಳಿದವರಿಗೆ ಅದನ್ನು ತಿಳಿಸುವ ಮನಸ್ಸಾದರೂ ಆಟವಾಡುವ ಉಮೇದಿನಿಂದ ಬಂದವರಿಗೆ ರಸಭಂಗವಾದೀತೆಂಬ ಭಯದಿಂದ ಅಂಥ ಪ್ರಯತ್ನವನ್ನು ಬಿಟ್ಟುಕೊಟ್ಟು ಶಿರೀನಳಿಗೆ ಎಲೆ ಹಂಚಲು ಹೇಳಿದ. ಕೆಲಹೊತ್ತಿನಲ್ಲೇ ಎಲ್ಲರೂ ಆಟದಲ್ಲಿ ತಲ್ಲೀನರಾದರು. ಎಂದಿನಂತೆಯೆ ಮುದುಕಿಯೇ ಎಲ್ಲರಿಗಿಂತ ಮೊದಲು ರಮ್ಮಿ ಮುಗಿಸುವ ಸ್ಥಿತಿಯಲ್ಲಿದ್ದಾಗ-“ಒಂದೇ ಒಂದು ಎಲೆ ಸಿಕ್ಕರೆ ಸಾಕು. ದೊಡ್ಡದೊಡ್ಡ ಎಲೆಗಳನ್ನು ಈಗಲೇ ಬಿಟ್ಟುಕೊಡಿ,” ಎಂದು ಎಚ್ಚರಿಕೆ ಕೊಡಲು ಶುರುಮಾಡಿದಳು. ಶಿರೀನಳಿಗೆ ಹೆದರಿಕೆ ಇರಲಿಲ್ಲ. ಕಡ್ಡಾಯದ ಸೀಕ್ವೆನ್ಸ್ ಹೇಗೂ ಮುಗಿದಿತ್ತು. ಸೋತರೂ ಹೆಚ್ಚು ‘ಪಾಯ್ಂಟ್ಸ್’ ಕೊಡಲಾರಳು. ಅಪಾಯವಿದ್ದದ್ದು ಬೆಹರಾಮನಿಗೇ: ಉಳಿದೆಲ್ಲ ‘ಸೆಟ್ಟು’ಗಳು ಪೂರ್ಣಗೊಂಡಿದ್ದರೂ ಕಡ್ಡಾಯದ ಸೀಕ್ವೆನ್ಸೇ ಮುಗಿದಿರಲಿಲ್ಲ. ಎರಡು ಜೋಕರ್ಸ್ ಇದ್ದರೂ ಸಂಪೂರ್ಣ ಸೋಲುವ ಭಯ, ಒಂದು ನಿರ್ದಿಷ್ಟ ಎಲೆ ಸಿಕ್ಕರೇನೇ ಸೀಕ್ವೆನ್ಸ್ ಆಗಬೇಕು. ಅದು ಆದರೆ ಆಟವನ್ನೇ ಗೆಲ್ಲಬಹುದು. ಆಟ ಈ ಹಂತವನ್ನು ತಲುಪಿದಾಗ ಆ ಎಲೆ ಸಿಗುವ ಶಕ್ಯತೆ ಕಡಿಮೆಯಾಗಿತ್ತು. ಈ ಸ್ಥಿತಿ ನಮ್ಮ ಪಾರ್ವತಿಯ ಮೌನದ ಹಾಗೆ: ಸ್ಪಷ್ಟ ಕಾರಣ ತಿಳಿದರೇನೇ ಅರ್ಥವಾಗಬಲ್ಲುದು; ಬರಿಯ ಊಹೆಯಿಂದಲ್ಲ. ಕಡ್ಡಾಯವಲ್ಲದ ಸೆಟ್ಟಿನೊಳಗಿನ ಜೋಕರ್ ಎಲೆ ಅಲ್ಲವದು. ಈ ಮೊದಲೇ ಎಚ್ಚರಿಕೆ ಇತ್ತಹಾಗೆ ಹೆಂಡತಿ ರಮ್ಮಿ ಮುಗಿದದ್ದನ್ನು ಸಾರುವ ಹೊತ್ತಿಗೆ ಬೆಹರಾಮ್ ಗಟ್ಟಿಯಾದ ನಿರ್ಧಾರಕ್ಕೆ ಬಂದಿದ್ದ: ಬಹುಶಃ ನಮ್ಮ ಶಿರೀನಳ ಇದಿರು ಆಡಲು ಆಗದ್ದು ಏನೋ ಇವಳಿಗೆ ಗೊತ್ತಿದೆ. ನಾಳೆ ಅವಳನ್ನು ಅವಳ ಗುಡಿಸಲಲ್ಲೇ ಭೇಟಿಯಾಗಿ ಮಾತನಾಡಿಸುತ್ತೇನೆ.

‘ಹ್ಯಾಂಡ್ ರಮ್ಮಿ’ ಆಗುವ ಶಕ್ಯತೆಯುಳ್ಳ ಆಟವನ್ನು ಒಂದೇ ಒಂದು ನಿರ್ದಿಷ್ಟ ಎಲೆಯಿಂದಾಗಿ ಕಡ್ಡಾಯದ ಸೀಕ್ವೆನ್ಸ್ ಸೆಟ್ ಆಗಿರದ ಕಾರಣ ಸೋತು ಬಹಳ ದೊಡ್ಡ ದೊಂಡ ತೆರಬೇಕಾದಾಗ ಬೆಹರಾಮ್ ಪಶ್ಚಾತ್ತಾಪ ಪಡಲಿಲ್ಲ. ಮುಂದಿನ ಆಟವನ್ನು ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆಯಿಂದ ಸಿದ್ಧಮಾಡಿಟ್ಟ ಕಾಗದದ ಮೇಲೆ ತಾನೇ ಮೂವರ ‘ಸ್ಕೋರು’ ಬರೆದಿಟ್ಟು ಮುಂದಿನ ಆಟಕ್ಕೆ ಎಲೆ ಹಂಚತೊಡಗಿದ. ಅಪ್ಪನ ಮೂಡಿನಲ್ಲಿ ಒಮ್ಮೆಲೇ ಆದ ಬದಲು ಶಿರೀನಳ ಸೂಕ್ಷ್ಮದೃಷ್ಟಿಯಿಂದ ತಪ್ಪಿಸಿಕೊಳ್ಳಲಿಲ್ಲ. ಕಾರಣ ಹುಡುಕುವ ಕುತೂಹಲವನ್ನು ತಡೆಹಿಡಿದು ಹೊಸ ಆಟದ ಎಲೆಗಳನ್ನು ಪರೀಕ್ಷಿಸಿ ಸಜ್ಜುಗೊಳಿಸತೊಡಗಿದಳು. ಆಟವನ್ನು ತನ್ಮಯತೆಯಿಂದ ಆಡುತ್ತಿದ್ದವಳು ಶಿರೀನಳ ತಾಯಿಯೊಬ್ಬಳೇ: “ಜೋಕೆ! ಹ್ಯಾಂಡ್ ರಮ್ಮಿ ಆಗುವ ಚಾನ್ಸ್ ಸ್ವಲ್ಪದರಲ್ಲಿ ತಪ್ಪಿದೆ. ಆದರೂ, ಹೆಚ್ಚೆಂದರೆ ಇನ್ನು ಎರಡು ಸುತ್ತುಗಳಲ್ಲಿ ಆಟ ಮುಗಿದ ಹಾಗೆಯೆ!” ಈ ಎಚ್ಚರಿಕೆ ಹುಸಿಯಾದುದಲ್ಲ ಎಂಬುದನ್ನು ಅನುಭವದಿಂದ ಬಲ್ಲ ಉಳಿದ ಇಬ್ಬರೂ ತಮ್ಮ ಲಕ್ಷ್ಯವನ್ನೆಲ್ಲ ಕೂಡಲೆ ಆಟದತ್ತ ಹರಿಯಿಸಿದರು.

ತಾವು ಎಷ್ಟು ಹೊತ್ತು ಹೀಗೆ ಆಡುತ್ತಿದ್ದೆವು ಎನ್ನುವುದು ಅವರಿಗೆ ಗೊತ್ತಾಗಲೇ ಇಲ್ಲ. ಟೆಲಿಫೋನ್ ಗಂಟೆ ಬಹಳ ಹೊತ್ತಿನಿಂದ ಬಾರಿಸುತ್ತಿದೆ ಎಂದು ಗೊತ್ತಾದದ್ದು ಕೂಡ ಸೀತೆ ಓಡಿಬಂದು ಎಚ್ಚರಿಸಿದಾಗ. ಶಿರೀನ್ ಓಡೋಡಿ ಹೋಗಿ ರಿಸೀವರ್ ಎತ್ತಿಕೊಂಡಾಗ ಕರೆಯುತ್ತಿದ್ದವನು ಎಕ್ಸ್‌ಪ್ರೆಸ್ ಪತ್ರಿಕೆಯ ಅಗರವಾಲ ಎಂದು ತಿಳಿಯಿತು. ಐದು ಮಿನಿಟುಗಳ ಮೊದಲೂ ಒಮ್ಮೆ ಫೋನ್ ಮಾಡಿದ್ದನಂತೆ. ಯಾರೂ ಎತ್ತಿರದಾಗ ಮನೆಯಲ್ಲಿ ಯಾರೂ ಇದ್ದಿರಲಿಕ್ಕಿಲ್ಲವೆಂದು ಅನ್ನಿಸಿದರೂ ಇನ್ನೊಮ್ಮೆ ಫೋನ್ ಮಾಡಿ ನೋಡುವ ಮನಸ್ಸಾಯಿತಂತೆ. ತಾನು ಯಾರೆಂದು ತಿಳಿಯುವ ಕುತೂಹಲವನ್ನು ಎಳ್ಳಷ್ಟೂ ತೋರಿಸದೆ, ನೇರವಾಗಿ ಅಪ್ಪನ ಕೂಡ ಮಾತನಾಡುವ ತರಾತುರಿಯಲ್ಲಿದ್ದವನ ಹಾಗೆ ಕೇಳಿಸಿದಾಗ ಕೆಟ್ಟಕೆಟ್ಟ ವಿಚಾರಗಳಿಂದ ಮನಸ್ಸು ತಲ್ಲಣಿಸಿತು. ‘ಅಗರವಾಲ್‌ಸಾಬ್, ಈ ಕೆಲವು ತಿಂಗಳಲ್ಲಿ ನೀನು ಅಪ್ಪನನ್ನು ನೋಡಿದಂತಿಲ್ಲ. ಅವನ ಒಳಗಿನದೇನೋ ಕಡಿದುಬಿದ್ದಹಾಗಿದೆ. ಒಮ್ಮೆಲೇ ಬಹಳ ವಯಸ್ಸಾದವನ ಹಾಗೆ ಕಾಣುತ್ತಾನೆ. ದಯಮಾಡಿ ಕಠಿಣವಾಗಿ ಮಾತನಾಡಬೇಡ,” ಎನ್ನಬೇಕೆಂದರೆ ಅಂಥ ಮಾತು ಅಪ್ಪ ಅದಾಗಲೇ ಅಷ್ಟು ಹತ್ತಿರ ಬಂದು ನಿಂತ ಗಳಿಗೆಯಲ್ಲಿ ಬಾಯಲ್ಲಿ ಹುಟ್ಟದಾಯಿತು. ಹುಬ್ಬಿನಿಂದಲೇ ಯಾರು ? ಎಂದು ಕೇಳಿದ ಪ್ರಶ್ನೆಗೆ ಶಿರೀನಳಿಂದ “ಅಗರವಾಲ್,” ಎಂದು ಪಿಸುದನಿಯ ಉತ್ತರ ಸಿಕ್ಕಾಗ ಬೆಹರಾಮ್‌ಗೆ ಟೆಲಿಫೋನ್ ಮೇಲೆ ಮಾತನಾಡುವ ಸ್ಥಿತಿಯಲ್ಲಿ ತಾನು ಇರುವಂತೆ ತೋರಲಿಲ್ಲ. ಹೋದ ನಾಲ್ಕು ದಿನಗಳಿಂದಲೂ ತನ್ನನ್ನು ಗಾಸಿಗೊಳಿಸುತ್ತಿದ್ದುದಕ್ಕೂ ಈ ಕರೆಗೂ ಸಂಬಂಧವಿದೆ ಎಂದು ಹೊಳೆದಾಗ-ಎನಿದ್ದರೂ ಈಗ, ಈ ಮೂರುಸಂಜೆಯ ಹೊತ್ತಿಗೆ, ಎಂಥ ಸುದ್ದಿಯೂ ಬೇಡ ಅನ್ನಿಸಿತು. ಅಪ್ಪನ ಮೋರೆ ನೋಡಿಯೆ ಸನ್ನಿವೇಶವನ್ನು ಅರ್ಥಮಾಡಿಕೊಂಡಂತಿದ್ದ ಶಿರೀನ್ ವೇಳೆ ಕಳೆಯದೆ ರಿಸೀವರ್‌ಅನ್ನು ತನ್ನ ಬಾಯ ಹತ್ತಿರ ಹಿಡಿದು, “ಅಗರವಾಲ್‌ಸಾಬ್, ನಾನು ಶಿರೀನ್, ಪೋಚಖಾನಾವಾಲಾನ ಮಗಳು. ಅಪ್ಪನಿಗೆ ಜೀವದಲ್ಲಿ ಸೌಖ್ಯವಿಲ್ಲ. ಹಾಸಿಗೆಯಲ್ಲಿ ಅಡ್ಡವಾದವನಿಗೆ ಇದೇ ಈಗ ತುಸು ಕಣ್ಣುಹತ್ತಿದೆ. ನಾಳೆ ಬೆಳಗಿಗೇ ಫೋನ್ ಮಾಡಲು ಹೇಳುತ್ತೇನೆ. ಆಗದೆ?” ಎಂದಳು. ತನ್ನ ದನಿಯಲ್ಲಿ ಮೂಡಿತ್ತು ಎಂದು ತೋರಿದ ದೈನ್ಯ ಅವಳಿಗೆ ಸೇರಲಿಲ್ಲ. ಅಂಥದ್ದೇನೂ ಅರ್ಜೆಂಟ್ ಇಲ್ಲ ತಾನೆ? ಎಂದು ಕೇಳುವ ಮನಸ್ಸಾಗಿದ್ದರೂ ಹಾಗೆ ಕೇಳುವ ಧೈರ್ಯವಾಗಲಿಲ್ಲ. ಆದರೆ ಆ ಬದಿಯಿಂದ ಬಂದ ಮಾತುಗಳೇ ಅವಳ ಊಹೆಯಲ್ಲಿ ಹುಟ್ಟಿದ ಭಯವನ್ನು ದೂರಮಾಡುವಂತಹವಾಗಿದ್ದುವು: “ನಥಿಂಗ್ ಅರ್ಜೆಂಟ್. ನಾಳೆ ಫೋನ್ ಮಾಡಲು ಹೇಳು. I ರಿusಣ ತಿಚಿಟಿಣeಜ ಣo ಛಿoಟಿgಡಿಚಿಣuಟಚಿಣe him. ಝೋಪಡಪಟ್ಟಿಗಳ ಮೇಲಿನ ರಿಪೋರ್ಟು ತುಂಬ ಕಾಂಪ್ರಿಹೆನ್ಸಿವ್ ಆಗಿದೆ. ಅಲ್ಲಿಯ ಬದುಕಿನ ಬಗ್ಗೆ, ಅವುಗಳಿಗೆ ಸಂಬಂಧಪಟ್ಟ ಪಾತಾಳಲೋಕದ ವ್ಯವಹಾರಗಳ ಬಗ್ಗೆ ಇಷ್ಟೊಂದು ವಿವರಗಳನ್ನು ಯಾರೂ ಒಟ್ಟುಮಾಡಿರಲಿಲ್ಲ-ಕನಿಷ್ಠ ಈ ರೀತಿ ರಿಪೋರ್ಟ್ ಮಾಡಿರಲಿಲ್ಲ. ಕರುಣಾಕರನ್ ನಿಜಕ್ಕೂ ತುಂಬ ಸ್ಮಾರ್ಟ್ ಹುಡುಗ. ರಿಪೋರ್ಟು ಮುದ್ರಣಕ್ಕೆ ಸಿದ್ಧವಾಗುತ್ತಾ ಇದೆ. ಹೋದ ಸಾರೆ ಬಹಳ ಕಠಿಣವಾಗಿ ಮಾತನಾಡಿದ್ದೆ. ಒಥಿ ಚಿಠಿoಟogies,” ಎಂದು ಹೇಳಿದ ಅಗರವಾಲ್ ಫೋನ್ ಕೆಳಗಿರಿಸಿದ್ದ.

ಅವನು ಹೇಳಿದ್ದನ್ನು ಚಾಚೂ ತಪ್ಪದೆ ಅಪ್ಪ-ಅಮ್ಮರ ಇದಿರು ಅರುಹುವಾಗ ಅನ್ನಿಸಿದ ನಿರಂಬಳತೆಯ ಹಿಂದೆಯೇ ಅರ್ಥವಾಗದ ದುಗುಡ ಮನಸ್ಸಿನಲ್ಲಿ ನೆಲಸಹತ್ತಿತು. ಈ ದುಗುಡಕ್ಕೆ ಮಾತು ಒದಗಿಸುತ್ತಿದ್ದವನ ಹಾಗೆ ಬೆಹರಾಮ್ ಹೇಳಿದ: “ಭೆಂಛೋದ್! ಇಲ್ಲಿಯೂ ತನ್ನ ಸ್ವಭಾವಸಹಜ ಕುತ್ಸಿತವನ್ನು ಬಿಟ್ಟುಕೊಡುತ್ತಿಲ್ಲ. ನಾನೇ ಈ ರಿಪೋರ್ಟಿಗೆ ಮಾಹಿತಿ ಒದಗಿಸಿದ್ದೇನೆ ಎಂದು ಸಾಬೀತುಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾನೆ.”
“ಅಪ್ಪಾ, ನನಗೆ ಮೊದಲಿನಿಂದಲೂ ಅದೇ ಸಂಶಯ: ಈ ಮಾರವಾಡಿಯೇ ಕರುಣಾಕರನ್‌ನನ್ನು ನಮ್ಮಲ್ಲಿಗೆ ಕಳಿಸಿದ್ದು. ಅವನು ನಮ್ಮ ಮನೆಗೆ ಬಂದದ್ದು ಆಕಸ್ಮಿಕವಲ್ಲ.”

ಬೆಹರಾಮನಿಗೆ ಮಗಳ ವಿಚಾರಸರಣಿಗೆ ಪ್ರತಿಕ್ರಿಯಿಸುವ ಮನಸ್ಸಿರಲಿಲ್ಲ. ಅಗರವಾಲ್ ಜೊತೆ ಮಾತನಾಡಬೇಕಾದ ಸಂದರ್ಭ ಸದ್ಯಕ್ಕಂತೂ ತಪ್ಪಿತು ಎಂಬುದರ ಜೊತೆಗೆ ಕರುಣಾಕರನ್ನನ ಜೀವಕ್ಕೇನೂ ಅಪಾಯ ಸಂಭವಿಸಿಲ್ಲ ಎಂಬ ಅರಿವಿನಿಂದ ಮನಸ್ಸಿಗೆ ಸಮಾಧಾನವಾಗಿತ್ತು. ಅಂಥ ಸಮಾಧಾನದ ಸ್ಥಿತಿಯಲ್ಲಿರುವಾಗ ಮಗಳಿಗೆ-“ಬಾ, ಬಾಲ್ಕನಿಯಲ್ಲಿ ಕೂತು ಹರಟೋಣ. ಈ ಅಗರವಾಲನ ಮಾತಿಗೆ ಸದ್ಯ ಯಾವ ಅರ್ಥವನ್ನೂ ಹಚ್ಚುವುದು ಬೇಡ. ನಿನಗಂತೂ ಗೊತ್ತಿದೆ: ರಿಪೋರ್ಟು ಚೆನ್ನಾಗಿದ್ದರೆ ಅದರ ಎಲ್ಲ ಶ್ರೇಯಸ್ಸೂ ಕರುಣಾಕರನ್ನನಿಗೇ ಸಲ್ಲಬೇಕು,” ಎಂದ.
“ಆದರೆ ಅದರಲ್ಲಿ ಉಲ್ಲೇಖವಾಗಿರಬಹುದಾದ ಸಂಗತಿಗಳು ಪ್ರಕಟನೆಗೆ ಯೋಗ್ಯವೋ ಅಲ್ಲವೋ ಎನ್ನುವುದಕ್ಕೆ ಮಾತ್ರ ನಿನ್ನ ಅನುಮೋದನೆ ಬೇಕು.”
ಬೆಹರಾಮನಿಗೆ ಮಾತು ಬೆಳೆಸಿ ತನ್ನ ಸದ್ಯದ ಮೂಡನ್ನು ಕೆಡಿಸಿಕೊಳ್ಳುವ ಮನಸ್ಸಾಗಲಿಲ್ಲ. “ಬಾ, ಕೂತುಕೋ. ಈಗ ಮತ್ತೆ ಅದೆಲ್ಲದರ ಬಗ್ಗೆ ಮಾತು ಬೇಡ. ನಾಳೆ ಸಹ ನಾನಾಗಿ ಫೋನ್ ಮಾಡಲು ಹೋಗಲಾರೆ,” ಎನ್ನುವಾಗ ಮಗಳು ಅಗರವಾಲನ ಫೋನ್ ಕರೆಯ ಉದ್ದೇಶವನ್ನು ಅರ್ಥಮಾಡಿಕೊಂಡ ರೀತಿ ಒಪ್ಪಿಗೆಯಾದಂತಿತ್ತು.

ರಸ್ತೆಯ ಮೇಲಿನ ಜನರ, ವಾಹನಗಳ ಓಡಾಟದ ಗದ್ದಲ ಈಗ ಬಹಳಷ್ಟು ಕಡಿಮೆಯಾಗಿತ್ತು. ಸಂಪೂರ್ಣವಾಗಿ ಕತ್ತಲಲ್ಲಡಗಿದ ಸಮುದ್ರದ ತೆರೆಗಳ ಮೇಲೆ ದೀಪ ಬೆಳಗಿಸಿಕೊಂಡ ಏಳೆಂಟು ಅಂಬಿಗರ ದೋಣಿಗಳು ಸದ್ದುಮಾಡದೆ ತೇಲುತ್ತಿದ್ದವು. ಅಪ್ಪ-ಮಗಳು ಒಮ್ಮೆಲೇ ಮಾತು ನಿಲ್ಲಿಸಿ ಸಮುದ್ರದ ನೀರಿನ ಮೇಲೆ ದೃಷ್ಟಿಯೂರಿ ಕುಳಿತರು. ಇದೇ ಹೊತ್ತಿಗೆ, ಮಕ್ಕಳ ಕೋಣೆಯಿಂದ ಹೊರಗೆ ಬಂದ ಶಿರೀನಳ ತಾಯಿ ಅಡುಗೆಯ ಮನೆಗೆ ಹೋಗುತ್ತಿರುವಾಗ ಬಾಲ್ಕನಿಯಲ್ಲಿ ಅಪ್ಪ-ಮಗಳು ಕೂತ ರೀತಿಯನ್ನು ನೋಡಿ ಆಶ್ಚರ್ಯಪಟ್ಟು-“ಇದೇಕೆ ಹೀಗೆ ಮೌನ ಧರಿಸಿ ಕುಳಿತಿದ್ದೀರಿ?” ಎಂದು ಕೇಳಿ ತಾನೂ ಒಂದು ಕುರ್ಚಿಯನ್ನೆಳೆದುಕೊಂಡಳು. ಕೂರುವಾಗ, “ನಮ್ಮ ಚಿಕ್ಕ ಸೀತೆ ದೊಡ್ಡ ಸುದ್ದಿ ತಂದಿದ್ದಾಳೆ,” ಎನ್ನುತ್ತ, ಬಾಲ್ಕನಿಯಲ್ಲಿ ನೆಲೆಸಿದ ಮೌನಕ್ಕೆ ಭಂಗ ತಂದಳು. ಪಾರ್ವತಿ ಮಧ್ಯಾಹ್ನದ ಮನೆಗೆಲಸವನ್ನು ಮುಗಿಸಿ ಮನೆಗೆ ಹೋಗಿಯಾದಮೇಲೆಯೆ, ಅವಳಿಗಾಗಿ ತೆಗೆದಿರಿಸಿದ ತಿಂಡಿಯನ್ನು ಮರೆತುಹೋದದ್ದು ಲಕ್ಷ್ಯಕ್ಕೆ ಬಂದಿತು. ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಸೀತೆಯ ಜತೆಗೆ ಕೆಲಹೊತ್ತಿನ ಮೊದಲಷ್ಟೇ ಮನೆಗೆ ಕಳಿಸಿದ್ದಳು. ಆಗ ಮನೆಯಲ್ಲಿ ಇಲ್ಲಿ ಬಂದವನ ಹಾಗೇ ಕಾಣುವ ವ್ಯಕ್ತಿಯೊಬ್ಬ ಅಮ್ಮನ ಹತ್ತಿರ ಮಾತನಾಡುತ್ತಿದ್ದನಂತೆ! ದೀಪ ಬೆಳಗಿಸಿರದ ಕಾರಣ ಮನೆಯ ಕತ್ತಲಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. ಮೇಲಾಗಿ, ಬಂದವನು ದಾಡಿ ಮೀಸೆ ಬೋಳಿಸಿಕೊಂಡು ತಲೆಗೂದಲನ್ನು ಹತ್ತವಾಗಿ ಕತ್ತರಿಸಿಕೊಂಡಿದ್ದನಂತೆ: “ಇಷ್ಟಾಗಿಯೂ ಮಗುವಿನ ಸೂಕ್ಷ್ಮದೃಷ್ಟಿಗೆ ಅವನು ವಾಸೂನ ಹಾಗೆ ಕಂಡಿರಬೇಕಾದರೆ ಅವನು ವಾಸೂನೇ ಇರಬೇಕು,” ಎಂದಳು ಮುದುಕಿ. ತುಸು ತಡೆದು, “ಯಾರಿಗೆ ಗೊತ್ತು, ಕರುಣಾಕರನ್ ಇದ್ದರೂ ಇದ್ದಾನು,” ಎಂದಳು. ಈ ಹೊಸ ಸಂಶಯ ಇದೀಗ ಗಂಡನ ಇದಿರು ಮಾತನಾಡುತ್ತಿರುವಾಗಲೇ ಮೊಳೆತಹಾಗಿತ್ತು. ಮುದುಕನ ಮನಸ್ಸಿನಲ್ಲಿ ಮಾತ್ರ ಬೇರೆಯೆ ಒಂದು ಸಂಶಯ ತಲೆಯೆತ್ತಿ ಕೆಲಹೊತ್ತಿನ ಮೊದಲಷ್ಟೇ ಮೂಡಿದ ಮನಃಶಾಂತಿಯನ್ನು ಮತ್ತೆ ಕದಡುವ ಭಯ ಹುಟ್ಟಿಸಿತು: ಬಂದವನು ಆ ನಾಲ್ವರಲ್ಲಿಯ ಒಬ್ಬನಲ್ಲ ತಾನೆ! ತನ್ನ ಭಯವನ್ನು ತಟಕ್ಕನೆ ಬಾಯಿಂದ ಆಡಿ ತೋರಿಸಿದನು ಕೂಡ. ಶಿರೀನ್ ಹಾಗೂ ಅವಳ ತಾಯ ಬಾಯಿಂದ ಒಂದೇ ಹೊತ್ತಿಗೆ-ಪಾರ್ವತಿ ಅಂಥ ಹೇಯ ಕೆಲಸ ಮಾಡುವವಳಲ್ಲ ಎಂಬರ್ಥದ ಮಾತು ಹೊರಟಿತು. ಅವರ ಮಾತಿನ ಇಂಗಿತವನ್ನು ಗ್ರಹಿಸಿದ ಬೆಹರಾಮ್-‘ಅವಳೇ ಕರೆದಿರಲಾರಳು. ಅವನೇ ತಾನಾಗಿ ಬಂದಿರಬಹುದು. ಪಾತಾಳಲೋಕದ ವ್ಯವಹಾರವೆಂದರೆ ಹಣದ ಆಮಿಷ ಒಡ್ಡುವಂಥದ್ದು.’ ಮನಸ್ಸಿನಲ್ಲಿ ಆಕಾರ ಪಡೆದ ಮಾತನ್ನು ಪ್ರತ್ಯಕ್ಷ ಆಡಲಾರದಾದ. ಸೀತೆಯನ್ನು ಕೇಳಿ ನೋಡೋಣವೆಂದರೆ ಅಷ್ಟು ಚಿಕ್ಕವಳನ್ನು ಇದರಲ್ಲಿ ಎಳೆದು ತರುವುದು ಅನುಚಿತವಾಗಿ ತೋರಿತು. “ನಾಳೆ ನಾನೇ ಹೋಗಿ ಪಾರ್ವತಿಯನ್ನು ಅವಳ ಮನೆಯಲ್ಲೇ ಕಂಡು ಮಾತನಾಡಿಸಿ ಬರುತ್ತೇನೆ,” ಎಂದ.
“ಅವಳ ಮನೆಯಲ್ಲೇಕೆ? ಇಲ್ಲೇ ಬಂದಾಗ ಕೇಳುವಿಯಂತೆ. ಎಂದೂ ಹೋಗದವನು ಈಗ ಏಕಾ‌ಏಕೀ ಹೋದರೆ ಅವಳ ಆಶ್ಚರ್ಯದಂತೆ ಉಳಿದವರ ಸಂಶಯಕ್ಕೂ ಕಾರಣವಾಗಬಹುದು,” ಎಂದಳು ಮುದುಕಿ.
“ನಮ್ಮ ಶಿರೀನಳ ಇದಿರು ಏಕೋ ಅವಳು ಬಾಯಿ ಬಿಡಲು ಅನುಮಾನಿಸುತ್ತಿದ್ದಂತಿದೆ,” ಎನ್ನುವಾಗ ತಾನು ದುಡುಕುತ್ತಿದ್ದೇನೇನೋ ಎಂದು ಆತಂಕವಾಯಿತು, ಬೆಹರಾಮನಿಗೆ.
ಶಿರೀನಳು ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. “ನನಗೂ ಹಾಗೆಯೆ ಅನ್ನಿಸಿದೆ. ನಾಳೆ ಅವಳು ಕೆಲಸಕ್ಕೆ ಬರುವ ಹೊತ್ತಿಗೆ ನಾನೇ ಹೊರಗೆ ಹೋಗಿರುತ್ತೇನೆ,” ಎಂದಳು. ತುಸು ತಡೆದು, “ಬೇಕಾದರೆ ಅಮ್ಮನೂ ನನ್ನ ಜೊತೆಗೆ ಬಂದಿರಲಿ,” ಎಂದಳು. ಈ ಸೂಚನೆ ಅಪ್ಪನಿಗೆ ಒಪ್ಪಿಗೆಯಾಗಿದೆಯೆಂದು ತೋರಿದಾಗ: “ಅಪ್ಪಾ, ಒಂದು ಮಾತು ಹೇಳುತ್ತೇನೆ, ನನ್ನ ಸಮಾಧಾನಕ್ಕೆ. ಕರುಣಾಕರನ್ ನಮ್ಮ ಮನೆಗೆ ಬಂದದ್ದು ಒಂದು ಕೊಲೆಯ ಬಗ್ಗೆ ಮಾಹಿತಿ ದೊರಕಿಸಲಿಕ್ಕೆ. ಆ ಮಾಹಿತಿ ನಿನ್ನಿಂದ ಸಿಗಲಿಲ್ಲವಾದರೂ ಅವನು ಬರೆಯಲು ಯೋಜಿಸಿಕೊಂಡ ರಿಪೋರ್ಟು ಸಿದ್ಧವಾಗಿದೆ. ವಾಸುದೇವನ್ ಬಂದದ್ದು ಕರುಣಾಕರನ್ನನನ್ನು ಸಂಪರ್ಕಿಸಲು. ಅವನು ಅಣ್ಣನೋ, ಹೆದರಿಕೊಂಡವನೋ, ಸಾಥೀದಾರನೋ ನಾವು ತಿಳಿಯುವುದು ಶಕ್ಯವೇ ಇಲ್ಲ. ಒಂದಕ್ಕೊಂದು ಸಂಬಂಧವೇ ಕೂಡಿ ಬಾರದ ಸಂಗತಿಗಳ ಮೂಲಕ ಪ್ರಕಟಗೊಂಡು ಬರಿಯ ದಿಗ್ಭ್ರಮೆಗೆ ಕಾರಣವಾಗುವ ವಾಸ್ತವದ ಬಗ್ಗೆ ಇಂದಿನ ಮನುಷ್ಯ ವೈಯಕ್ತಿಕವಾಗಿ ತಾನೇ ಏನು ಮಾಡಬಲ್ಲ? ಅವರು ಯಾವ ಉದ್ದೇಶದಿಂದಲೇ ಬಂದಿರಲಿ, ಆ ಉದ್ದೇಶ ಸಫಲವಾಗುವಂತೆ ನಾವು ಪ್ರಯತ್ನಮಾಡುತ್ತೇವೆ ಎಂದು ತಿಳಿಯುವುದೇ ಹಾಸ್ಯಾಸ್ಪದವಾದದ್ದು. ಅವರ ಜೀವಕ್ಕುಂಟಾದ ಗಂಡಾಂತರ: ಇದು ಯಾರನ್ನೂ ತಲ್ಲಣಗೊಳಿಸುವಂತಹದೇ. ಆದರೆ ಇಲ್ಲಿ ಕೂಡ ನಾವು ಅವರನ್ನು ಸಂರಕ್ಷಿಸುವಂತಹದೇನಾದರೂ ಮಾಡಬಲ್ಲೆವು ಎನ್ನುವುದು ಅಹಂಕಾರದ ಮಾತು. ಅವರು ತಮ್ಮತಮ್ಮ ರೀತಿಯಲ್ಲಿ ಸುರಕ್ಷಿತವಾಗಿದ್ದಾರೆ, ದೊಡ್ಡ ಅನಾಹುತ ಒದಗುವ ಮೊದಲೇ ಮುಂಬಯಿಯನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದರೆ ಮನಸ್ಸಿಗೆ ನಿರಂಬಳತೆ ಅನ್ನಿಸುತ್ತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಸಂಶಯನಿವಾರಣೆ ಈ ಎಲ್ಲ ಕೋಲಾಹಲಕ್ಕೆ ಕಾರಣರಾದ ಈ ಇಬ್ಬರು ತರುಣರಿಗೇ ಸಾಧ್ಯ: ಕನಿಷ್ಠ ಫೋನ್ ಮಾಡಬಹುದಿತ್ತು. ನಾವಾಗಿ ಅವರನ್ನು ಹುಡುಕಿ ಹೊರಟರೆ ಹುಡುಕುತ್ತಿದ್ದ ರೀತಿಯೇ ನಾವು ಭಯಪಟ್ಟಂಥ ಗಂಡಾಂತರಕ್ಕೆ ದಾರಿಯಾಗಬಹುದು. ಒಂದಕ್ಕೊಂದು ತಾಳಮೇಳವಿಲ್ಲದ ವ್ಯವಹಾರಗಳ ಲೋಕವಿದು.”

ಅಪ್ಪ-ಆಮ್ಮ ಇಬ್ಬರೂ ತನ್ನನ್ನು ಲಕ್ಷ್ಯಗೊಟ್ಟು ಕೇಳುತ್ತಿದ್ದಾರೆ ಎಂಬ ವಿಶ್ವಾಸ ಮೂಡಿದಾಗ ನಿಧಾನವಾಗಿ, ಪೂರ್ವಧೇನಿತ ವಿಚಾರಗಳಾಗಿರುವಾಗಲೂ ಅವರ ಇದಿರಿನಲ್ಲಿ ಕೂತಮೇಲೆಯೇ ಮೊಳೆಯತೊಡಗಿದವುಗಳು ಎನ್ನುವ ಗತಿಯಲ್ಲಿ, ಧಾಟಿಯಲ್ಲಿ ಶಿರೀನ್ ಆಡಿದ ಮಾತುಗಳು ಬೆಹರಾಮನ ಮೇಲೆ ಪರಿಣಾಮ ಮಾಡದೇ ಇರಲಿಲ್ಲ: ತನ್ನ ಭಾವನೆಗಳಿಗೆ ಬಿದ್ದ ಸಿಕ್ಕುಗಳನ್ನು ಬಿಡಿಸುವಂಥ ಮಾತುಗಳನ್ನು ಆಲಿಸುತ್ತಿದ್ದಾಗ ಬಿಗಿಗೊಂಡ ನರಗಳೆಲ್ಲ ಸಡಿಲಿಸಿಕೊಂಡ ಅನುಭವವಾಗಿ, ಖುಶಿಗೊಂಡು ಮಗಳ ಭುಜಕ್ಕೆ ಕೈಚಾಚಿ-ಹೌದು, ನನ್ನ ಜಾಣ ಮಗಳೇ ಎನ್ನುವಹಾಗೆ, ಮೃದುವಾಗಿ ತಟ್ಟಿದ.
“ನಾಳೆ ನಾನೇ ಅಗರವಾಲನಿಗೆ ಫೋನ್ ಮಾಡುತ್ತೇನೆ. ಕರುಣಾಕರನ್ ಸುಖರೂಪವಾಗಿ ಮುಂಬಯಿ ಬಿಟ್ಟುಹೋಗಿದ್ದಾನೆಂದು ತಿಳಿದರೆ ಸಾಕು. ರಿಪೋರ್ಟು ಬೇಕಾದ್ದಿರಲಿ, ನನಗೆ ಸಂಬಂಧವಿಲ್ಲದ್ದು. ಹಾಗೆಯೇ, ಪಾರ್ವತಿಯಿಂದ ಬಂದವನು ವಾಸುದೇವನ್‌ನೇ ಎಂದು ತಿಳಿದರೆ ಸಾಕು, ಸುರಕ್ಷಿತವಾಗಿದ್ದಾನೆ ಎಂದು ತಿಳಿದರೆ ಸಾಕು. ಯಾಕೆ ಬಂದಿದ್ದ? ಏನು ಹೇಳಿದ?-ಅಪ್ರಸ್ತುತವಾದದ್ದು. ಸೋಮವಾರದಿಂದ ಎಂಟು ದಿನ ಆಫೀಸಿಗೆ ಹೋಗುವುದಿಲ್ಲ. ನಿನ್ನ ಹಾಗೂ ಮಕ್ಕಳ ಜೊತೆಗೆ ಸುಖವಾಗಿ ಕಾಲ ಕಳೆಯುತ್ತೇನೆ: ಒಂದು ರೀತಿಯಲ್ಲಿ ನನ್ನ ನಿವೃತ್ತಿಯ ರಂಗತಾಲೀಮೂ ಆದೀತು.”

ಗಂಡನ ಮನಸ್ಸಿನ ಸಮಾಧಾನವನ್ನು ನೋಡಿ ಸಂತೋಷಪಟ್ಟ ಹೆಂಡತಿ, “ಅಪ್ಪ-ಮಗಳು ಮಾತನಾಡಿಕೊಳ್ಳಿ. ನಾನು ರಾತ್ರಿಯ ಊಟದ ತಯಾರಿಗೆ ಹೋಗುತ್ತೇನೆ. ನಿನ್ನೆ ಧನ್‌ಸಾಕ್ ಮಾಡಬೇಕೆಂದು ಯೋಜಿಸಿದ್ದೆ. ಈ ಹೊತ್ತು ಮಾಡುತ್ತೇನೆ,” ಎಂದು ಅಡುಗೆಯ ಮನೆಯತ್ತ ನಡೆದಳು.

ಹೆಂಡತಿ ಧನ್‌ಸಾಕ್‌ದ ಸುದ್ದಿ ಕೊಟ್ಟಾಗ ಹೊಳೆಯಿತೆಂಬಂತೆ-“ನೀನೊಂದು ಜಿನ್ ತೆಗೆದುಕೊಳ್ಳುತ್ತೀಯಾದರೆ ನಾನೊಂದು ಪಾರ್ಸೀ ಪೆಗ್ ವ್ಹಿಸ್ಕೀ ತೆಗೆದುಕೊಳ್ಳುತ್ತೇನೆ. ಐeಣ us ಛಿeಟebಡಿಚಿಣe ಣhe ತಿisಜom oಜಿ ಥಿouಡಿ ಟiಣಣಟe sಠಿeeಛಿh,” ಎನ್ನುತ್ತ ಬಹಳ ದಿನಗಳಿಂದ ಕೈಹಚ್ಚಿರದ ತನ್ನ ‘ಮಿನಿ ಬಾರ್’ ಕಡೆಗೆ ಹೆಜ್ಜೆ ಇಡತೊಡಗಿದ. ತುಸು ಬಾಗಿ ನಡೆಯುತ್ತಿದ್ದ ಅಪ್ಪನ ಬೆನ್ನಾಕೃತಿಯನ್ನು ನೋಡುತ್ತಿದ್ದಹಾಗೆ ಪ್ರೀತಿ ಉಕ್ಕಿಬಂದು ಕಣ್ಣು ತೇವಗೊಳ್ಳುತ್ತಿದ್ದಂತೆ: ಅಪ್ಪ ಹೇಗೆ ಇದ್ದವನು ಹೇಗೆ ಆಗಿದ್ದಾನೆ, ಯಾಕೆ ಆಗಿದ್ದಾನೆ ಎನ್ನುವುದು ನಮ್ಮ ಕೇಕಿಗೂ ಗೊತ್ತಾಗಿದ್ದರೆ! ಎಂದುಕೊಂಡಳು.

ಜಿನ್ ಹಾಗೂ ವ್ಹಿಸ್ಕಿಗಳ ಗ್ಲಾಸುಗಳನ್ನು ಬಾಲ್ಕನಿಯಲ್ಲಿನ ಸಣ್ಣ ಸ್ಟೂಲಿನ ಮೇಲಿರಿಸುತ್ತ, “Iಣ is ಣoo ಥಿouಟಿg ಚಿಟಿ ಚಿge ಜಿoಡಿ ಚಿಟಿಥಿboಜಥಿ ಣo ಜie,” ಎನ್ನುವಷ್ಟರಲ್ಲಿ ಏದುಸಿರುಹತ್ತಿತು. ಸೋಡಾ ಬಾಟಲಿಯೊಂದನ್ನು ತೆರೆಯುವಾಗ, ತನ್ನ ವಾಕ್ಯವನ್ನು ತಿದ್ದುವವನ ಹಾಗೆ “ಣo geಣ muಡಿಜeಡಿeಜ,” ಎಂದು ಸೋಡಾ ಅನ್ನು ಗ್ಲಾಸುಗಳಲ್ಲಿ ಸುರಿಯಹತ್ತಿದ. “ಲಾಯ್ಮ್ ಕೊರ್ಡಿಯಲ್ ಹಾಕಿದ್ದೇನೆ, ಸರಿಯಾಗಿದೆಯೋ ನೋಡು,” ಎಂದು ಶಿರೀನಳ ಗ್ಲಾಸನ್ನೆತ್ತಿ ಅವಳ ಕೈಗೆ ಕೊಟ್ಟು, ಆಮೇಲೆ ತನ್ನ ಗ್ಲಾಸನ್ನೆತ್ತಿಕೊಂಡು ಅವಳದಕ್ಕೆ ಮೆಲ್ಲಗೆ ತಾಗಿಸಿ-“ಚಿಯರ್ಸ್,” ಎಂದ. ತುಸು ತಡೆದು-“ಂಟಿಜ ಟoಟಿg ಟiಜಿe ಣo ಥಿouಟಿg ಏ ಚಿಟಿಜ ಗಿ,” ಎಂದ. ಆಮೇಲೆ-“ಅheeಡಿs ಣo ಣheiಡಿ hಚಿಠಿಠಿಥಿ meeಣiಟಿg,” ಎಂದ. ತಾನೂ “ಚಿಯರ್ಸ್,” ಎಂದ ಶಿರೀನ್ ಜಿನ್ ಹೀರುತ್ತ-ಇದು ಮಾತ್ರ ಅಪ್ಪಟ ನನ್ನಪ್ಪ ಎಂದುಕೊಳ್ಳುತ್ತ ಒಳಗಿಂದ ಹೊಮ್ಮಿದ ಸಮಾಧಾನದಿಂದ ಬೆಳಗಿದ ಅಪ್ಪನ ಮೋರೆಯನ್ನು ನೋಡುತ್ತ ಸುಖಪಟ್ಟಳು. ದೇವರೇ, ಇದು ಬಹುಕಾಲ ಬಾಳುವಂತಹದಾಗಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದಳು.

ಅಧ್ಯಾಯ ಒಂಬತ್ತು

ಅದೇ ದಿನ ರಾತ್ರಿ, ಶಿರೀನಳ ಪ್ರಾರ್ಥನೆಯ ಫಲವಾಗಿಯೆ ಎಂಬಂತೆ ಬೆಹರಾಮ್ ಇತ್ತೀಚಿನ ದಿನಗಳಲ್ಲಿ ಒಮ್ಮೆಯೂ ಮಾಡಿರದಷ್ಟು ಗಾಢವಾಗಿ ನಿದ್ದೆಮಾಡಿದ. ಆ ರಾತ್ರಿ ಯಾರಿಂದಲೂ ಟೆಲಿಫೋನ್ ಕರೆಗಳು ಬರಲಿಲ್ಲ. ಬಂದಿದ್ದರೂ ಅವನನ್ನು ಎಬ್ಬಿಸಲೇಕೂಡದೆಂದು ಅವನ ಹೆಂಡತಿ ಮಗಳು ಇಬ್ಬರೂ ನಿಶ್ಚಯಿಸಿಕೊಂಡಿದ್ದರು. ಮರುದಿನ ಬೆಳಗ್ಗೆ ದಿನಕ್ಕಿಂತ ಬೇಗ ಎದ್ದರೂ ಏಳುವಾಗ ಯಾವುದೇ ದುಗುಡ ದುಮ್ಮಾನಗಳು ಮನಸ್ಸನ್ನು ಕಾಡಿರಲಿಲ್ಲ. ಪ್ರಾತರ್ವಿಧಿಗಳನ್ನು ಮುಗಿಸಿ ಚಹ ಕುಡಿಯುತ್ತ ಬಾಲ್ಕನಿಯಲ್ಲಿ ಕುಳಿತಿರುವಾಗ ಮುಂಜಾವದ ಬೆಳಕಿನಲ್ಲಿ ಹೊರಗಿನ ಸೃಷ್ಟಿ ಇಷ್ಟೊಂದು ಅಲೌಕಿಕವಾದ ರೀತಿಯಲ್ಲಿ ಬೆಳಗಿ ನಿಂತದ್ದನ್ನು ಹಿಂದೆಂದೂ ಕಂಡೇ ಇರಲಿಲ್ಲ ಎನ್ನುವವನ ಹಾಗೆ ಕಣ್ಣರಳಿಸಿ ನೋಡುತ್ತಿದ್ದುದನ್ನು ದೂರದಿಂದಲೇ ನೋಡಿದ ಹೆಂಡತಿ ಮಗಳಿಬ್ಬರಿಗೂ ಖುಶಿಯಾಗಿತ್ತು. ಎಲ್ಲರೂ ಏಳುವ ಮೊದಲೇ ಸ್ನಾನ, ಪ್ರಾರ್ಥನೆ ಮುಗಿಸಿ, ಹೆಬ್ಬಾಗಿಲ ಹೊರಗೆ ರಂಗವಲ್ಲಿ ಬಿಡಿಸಿ ಬಂದ ಮುದುಕಿ ಲೋಭಾನದ ಹರಿವಾಣವನ್ನು ಹೊತ್ತುಬಂದು ಮನೆಯ ಮೂಲೆಮೂಲೆಯಲ್ಲೆಲ್ಲ ಗುಂಗು ಹಿಡಿಸುವ ವಾಸನೆಯುಳ್ಳ ಹೊಗೆಯನ್ನು ಹರಡಹತ್ತಿದಳು. ನಿನ್ನೆ ಮುದುಕಿಯ ಮಾತಿನಲ್ಲಿ ಕೇಳಿಸಿದ ತನ್ನ ಹೆಸರಿನ ಉಲ್ಲೇಖದಿಂದಲೇ ಅದರ ಸಂದರ್ಭವನ್ನು ಊಹಿಸಿಕೊಂಡಂತಿದ್ದ ಚಿಕ್ಕ ಸೀತೆ ಮುದುಕನ ಇದಿರು ಕಾಣಿಸಿಕೊಳ್ಳಲೂ ಹೆದರುತ್ತ ಸರಕ್ಕನೆ ಒಮ್ಮೆ ಬಂದು ಅವನು ಚಹ ಕುಡಿದು ಖಾಲಿಮಾಡಿ ಇಟ್ಟ ಕಪ್ಪನ್ನು ಎತ್ತಿಕೊಂಡವಳೇ ದುಡುದುಡು ಒಳಗೆ ನಡೆದುಬಿಟ್ಟಳು. ಸೀತೆಯನ್ನು ನೋಡಿದ ಬಳಿಕವೇ ನಿನ್ನೆ ಮಾತನಾಡಿಕೊಂಡದ್ದು ನೆನಪಾಯಿತೆನ್ನುವ ಹಾಗೆ, ಪಾರ್ವತಿ ಬರುವ ಮೊದಲೇ ಸ್ನಾನ ಮುಗಿಸುವುದು ಒಳ್ಳೆಯದು ಎಂದು ಯೋಚಿಸಿ ಕೂತಲ್ಲಿಂದ ಏಳುತ್ತಿರುವಷ್ಟರಲ್ಲಿ ಮುಂಜಾವದ ವಿಹಾರಕ್ಕೆಂದು ಹೊರಟ ಜನರ ಗುಂಪು ಒಂದು ಬಾಲ್ಕನಿಯಲ್ಲಿ ಮುದುಕ ಇಷ್ಟು ಬೆಳಗಿಗೇ ಎದ್ದು ಕೂತದ್ದನ್ನು ನೋಡಿ ಏಕಕಂಠವಾಗಿ “ಗುಡ್‌ಮಾರ್ನಿಂಗ್ ಮಿಸ್ಟರ್ ಪೋಚಖಾನಾವಾಲಾ,” ಎಂದು ಒದರಿ ಸಂತೋಷದ ದೊಡ್ಡ ಅಲೆ ಎಬ್ಬಿಸಿತು. “ನಮ್ಮ ಜತೆಗೆ ಯಾಕೆ ತಿರುಗಾಡಲು ಬರುವುದಿಲ್ಲ?” “ಒಬ್ಬರೇ ಕೂತು ಏನು ಮಾಡುತ್ತೀರಿ?” “ಈ ನಸುಕಿನ ಹವಾನಾದರೂ ನೋಡಿ”-ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹುರಿದುಂಬಿಸುವ ಮಾತನಾಡಿದರು. ಬೆಹರಾಮ್ ಎದ್ದುನಿಂತು ಮುಗುಳುನಗುತ್ತ, “ಒಬ್ಬರ ಹಾದಿ ಕಾಯುತ್ತಿದ್ದೇನೆ,” ಎಂದ. “I ಚಿm suಡಿe ನಿಮ್ಮ ಮಗನಾಗಲೀ ಮಗಳಾಗಲೀ ಇರಬೇಕು,” ಎಂದ ಒಬ್ಬ..”ಗುಡ್ ಲಕ್” ಎಂದು ಗಾಳಿಯಲ್ಲಿ ಕೈಬೀಸಿ ಮತ್ತೆ ಹಿಂತಿರುಗಿ ನೋಡದೆ ಎಲ್ಲರೂ ಹೊರಟು ಹೋದರು. ಜುಮ್ ಎಂದು ಮೈಯ ಕೂದಲು ನಿಮಿರಿದಾಗ ಬಾಯಿಂದ ಮಾತೇ ಹೊರಡದಾಯಿತು.

ಅದೇ ಹೊತ್ತಿಗೆ, ಬೆಳಗಿನ ಟಾಯ್ಮ್ಸ್ ಪತ್ರಿಕೆಯನ್ನು ಕೈಯಲ್ಲಿ ಹೊತ್ತು ಬಂದ ಶಿರೀನ್ ನಗುತ್ತ, “ನೀನು ನಿವೃತ್ತನಾದಮೇಲೆ ಈ ಗುಂಪಿನ ಸದಸ್ಯನಾಗುವುದು ಒಳ್ಳೆಯದು,” ಎಂದು ಪತ್ರಿಕೆಯನ್ನು ಅವನ ಕೈಗೆ ಒಪ್ಪಿಸಿದಳು. “ಸೀತೆಗೆ ನನ್ನ ಒಗೆದ ಬಟ್ಟೆಗಳನ್ನು ಬಚ್ಚಲುಮನೆಯಲ್ಲಿ ಇರಿಸಲು ಹೇಳು. ಪಾರ್ವತಿ ಬರುವ ಮೊದಲು ಸ್ನಾನ ಮುಗಿಸಿಯೆ ಕೂರುತ್ತೇನೆ,” ಎಂದಾಗ ಅಪ್ಪನ ಉತಾವಳಿಗೆ ನಗು ಬಂತು. “ಅವಳು ಬರಲು ಮೂರು ತಾಸುಗಳಾದರೂ ಇವೆ. ಮೊದಲು ಸ್ವಸ್ಥವಾಗಿ ಕುಳಿತು ಪೇಪರ್ ಓದು. ಆಮೇಲೆ ಸ್ನಾನ, ನಾಸ್ತಾ ಮುಗಿಸುವಿಯಂತೆ,” ಎಂದು ಹೇಳಿ ಒಳಗೆ ನಡೆದಳು. ಪತ್ರಿಕೆಯನ್ನು ಕೈಗೆತ್ತಿಕೊಂಡದ್ದೇ ಬೆಹರಾಮನಿಗೆ ಅಗರವಾಲನ ನೆನಪಾಯಿತು. ನೆನಪಾದದ್ದೇ ಶಾಂತಚಿತ್ತನಾಗಿ ಪತ್ರಿಕೆಯನ್ನು ಓದುವುದೇ ಅಸಾಧ್ಯವಾಯಿತು. ಇಲ್ಲ, ನಾನಾಗಿ (ಫೋನ್) ಮಾಡಲಾರೆ, ಎಂದು ತನ್ನಷ್ಟಕ್ಕೇ ಆಡಿಕೊಳ್ಳಲು ಬಯಸಿದ ಮಾತು ಅಡುಗೆಯ ಮನೆಯಲ್ಲಿದ್ದ ಹೆಂಡತಿಯ ಕಿವಿಯ ಮೇಲೂ ಬಿದ್ದಿತು. ಅವಳು, “ಕರೆದಿರಾ?” ಎಂದು ಕೇಳಿದಾಗ-“ಸ್ನಾನ ಮಾಡಿಯೆ ಪೇಪರ್ ಓದುತ್ತೇನೆ ಎಂದೆ,” ಎಂದ.

ಅಪ್ಪ ಸ್ನಾನಕ್ಕೆ ಹೋದಾಗ ಅವನು ಓದುವ ಮೊದಲೇ ಬಿಟ್ಟುಹೋದ ದಿನಪತ್ರಿಕೆಯನ್ನು ತೆರೆದು ಓದುತ್ತ ಶಿರೀನ್ ಹಾಲಿನಲ್ಲಿಯ ಸೋಫಾದಲ್ಲಿ ಕುಳಿತಳು. ಮೊದಲನೇ ಪುಟದ ಮೇಲಿನ ದಪ್ಪಕ್ಷರದ ಶೀರ್ಷಿಕೆಗಳ ಮೇಲೆ ಕಣ್ಣುಹಾಯಿಸಿ ಪುಟ ತಿರುವಿ ಮೂರನೇ ಪುಟದ ಮೇಲಿನ ಜಾಹೀರಾತು ಒಂದನ್ನು ಓದುತ್ತಿದ್ದಹಾಗೆ-ಅಮ್ಮನನ್ನು ಕರೆದು ತೋರಿಸಲೇ ಎನ್ನುವಷ್ಟು ಥಕ್ಕಾಗಿ ಹೋದಳು. ಅಪ್ಪ ಓದಿರಬಹುದೆ? ಇದನ್ನು ಓದಿಯೆ ಸ್ನಾನಕ್ಕೆ ಹೊರಡುವ ತ್ವರೆ ಮಾಡಿರಬಹುದೆ? ಇರಲಾರದು. ಏನೇ ಇರಲಿ, ಅವನಿಗೆ ತೋರಿಸುವುದು ಬೇಡ. ಪೇಪರ್ ಓದುವ ಅಭ್ಯಾಸ ಅವನಿಗೆ ಮೊದಲಿನಿಂದಲೂ ಇಲ್ಲ. ಪೇಪರ್ ಜನವೆಂದರೇನೆ ಒಂದು ಬಗೆಯ ಅಸಡ್ಡೆ. ನೋವಿನಂಥ ನೋವನ್ನು ಕೂಡ ಸುದ್ದಿ ಮಾಡಿ ಮಾರುತ್ತಾರೆ ಈ ಜನ, ಎಂದು ಅವನ ತಕರಾರು. ಅಮ್ಮನಿಗೆ ಹೇಳದೇ ಇರುವುದು ಅಸಾಧ್ಯವಾಗಿ ತೋರಿತು. ಹೇಳಿದರೆ ಈಗಲೇ ಹೇಳಬೇಕು, ಅಪ್ಪ ಬಚ್ಚಲುಮನೆಯಲ್ಲಿದ್ದಾಗ. ಪತ್ರಿಕೆಯನ್ನು ಮಲಗುವ ಕೋಣೆಯಲ್ಲಿರಿಸಹೋದಳು. ಮೂವರೂ ಮಕ್ಕಳು ಇನ್ನೂ ಎದ್ದಿರಲಿಲ್ಲ. ಅಲ್ಲಿಂದ ನೇರವಾಗಿ ಅಡುಗೆಯ ಮನೆಗೆ ಹೋದಳು. ಅಲ್ಲಿ ನಾಸ್ತಾದ ಕೆಲಸದಲ್ಲಿ ತೊಡಗಿದ ಅಮ್ಮನ ಜತೆಗೆ ಸೀತೆ ಇದ್ದುದನ್ನು ನೋಡಿ, ಇಂಗ್ಲಿಷ್‌ನಲ್ಲೇ ತಗ್ಗಿದ ದನಿಯಲ್ಲಿ ಹೇಳತೊಡಗಿದಳು: “ಇಂದಿನ ಪತ್ರಿಕೆಯಲ್ಲಿ ‘ಎಕ್ಸ್‌ಪ್ರೆಸ್’ನವರು ಜಾಹೀರಾತು ಕೊಟ್ಟಿದ್ದಾರೆ. ಮುಂದಿನ ಎರಡು ರವಿವಾರ ಮುಂಬಯಿಯ ‘ಸ್ಲಮ್ಸ್’ಗಳ ಬಗ್ಗೆ ಬರೆದ ವಿಶೇಷ ರಿಪೋರ್ಟು ಎರಡು ಕಂತುಗಳಲ್ಲಿ ಬರಲಿದೆಯಂತೆ. ಬರೆದವನ ಹೆಸರೂ ಕೊಟ್ಟಿದ್ದಾರೆ. ಇಲ್ಲಿ ಬಂದ ಹುಡುಗನೇ-‘ಕೇ’. ಅಲ್ಲಿ ನಡೆಯುವ ಅಮಾನುಷ ವ್ಯವಹಾರಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹಣದ ದುರ್ವ್ಯವಹಾರಗಳಿಂದಾಗಿ ನಡೆದ ಕೆಲವು ಹೀನಹತ್ಯೆಗಳ ತನಿಖೆಗೆ ನೆರವಾಗುವಂಥ ವಿವರಗಳಿವೆಯಂತೆ. ಕೊಲೆಯಾದವನ ತಮ್ಮನೇ ಬರೆದ ವರದಿಯ ರೂಪದಲ್ಲಿದ್ದ ರಿಪೋರ್ಟು ಇಂಥ ‘ಡೊಕ್ಯುಮೆಂಟರಿ’ ತರಹದ ಬರವಣಿಗೆಯಲ್ಲೇ ಅಪೂರ್ವವಾಗಿದೆಯಂತೆ. ಬಣ್ಣಗಳ ಚಿತ್ರಗಳಿವೆಯಂತೆ. ಅಪ್ಪ ಓದಿದರೆ ಎಷ್ಟು ಕ್ಷುದ್ರನಾಗುತ್ತಾನೋ ಎಂದು ಹೆದರಿ ಪತ್ರಿಕೆಯನ್ನು ಅಡಗಿಸಿ ಇಟ್ಟಿದ್ದೇನೆ,” ಎಂದಳು. ಮಗಳು ಇದನ್ನೆಲ್ಲ ಇಂಗ್ಲಿಷ್‌ನಲ್ಲೇ ಯಾಕೆ ಹೇಳುತ್ತಿದ್ದಾಳೆ ಎಂದು ಅರಿತ ಮುದುಕಿ “ಇನ್ನು ಬೇಕಾದರೆ ನೀನು ಬಾಲ್ಕನಿಯ ಗಿಡಗಳಿಗೆ ನೀರು ಹಾಕು, ಹೋಗು. ಕಪ್ಪು-ಬಸಿ ಪ್ಲೇಟುಗಳ ಕೆಲಸ ಆಮೇಲೆ ಮಾಡುವಿಯಂತೆ,” ಎಂದು ಸೀತೆಯನ್ನು ಹೊರಗೆ ಕಳಿಸಿದಳು. ಸನ್ನಿವೇಶದ ಅರ್ಥವನ್ನು ಗ್ರಹಿಸಿ ಒಳಗೊಳಗೇ ಬಿಗಿಗೊಳ್ಳತೊಡಗಿದ ಸೀತೆಗೂ ಅದುವೇ ಬೇಕಾದಂತಿತ್ತು: ಕೂಡಲೇ ಇನ್ನೊಂದು ಬಚ್ಚಲುಮನೆಗೆ ಹೋಗಿ ಬಕೆಟ್ಟಿನಲ್ಲಿ ನೀರು ತುಂಬಿ ಬಾಲ್ಕನಿಗೆ ನಡದೇಬಿಟ್ಟಳು. ಸೀತೆ ಹೊರಗೆ ಹೋದ ಕೂಡಲೇ-“ಪತ್ರಿಕೆಯನ್ನು ಅಡಗಿಸಿ ಇಡುವುದು ಬೇಡ. ಅಗರವಾಲ ಫೋನ್ ಮಾಡದೇ ಇರಲಾರ. ಮಾಡಿದಾಗ ಜಾಹೀರಾತಿನ ಬಗ್ಗೆ ಕೇಳದೇ ಇರಲಾರ. ಅವನು ಕೇಳಿದಮೇಲೆ ಓದುವುದಕ್ಕಿಂತ ಈಗ ಓದುವುದು ಒಳ್ಳೆಯದು. ನೀನಾಗಿ ತೋರಿಸಬೇಕೆಂದಿಲ್ಲ. ಅವನೇ ಓದುವಾಗ ಕಣ್ಣಿಗೆ ಬಿದ್ದರೆ ಬೀಳಲಿ. ನಂಬು ಶಿರೀನ್: ಅಪ್ಪ ಹಾಗೆ ನೋಡಿದರೆ ಬಹಳ ಗಟ್ಟಿ ಮನುಷ್ಯ. ನಿವೃತ್ತಿಯ ದಿನ ಹತ್ತಿರವಾಗುತ್ತಿದ್ದುದಕ್ಕೋ ಏನೋ ತುಂಬ ಭಾವುಕನಾಗಿಬಿಟ್ಟಿದ್ದಾನೆ. ಕರುಣಾಕರನ್ ಬಂದಂದಿನಿಂದ ಇನ್ನಷ್ಟು. ನಾವೆಲ್ಲರೂ ಕೂಡಿ ಒಂದು ಸಿನೇಮಾಕ್ಕೆ ಹೋಗೋಣ. ನೀನು ಬಂದು ಹೋದಮೇಲೆಯೆ ಕಾರು ಮಾರಬಹುದಾಗಿತ್ತೇನೊ. ಇಲ್ಲೇ ನ್ಯೂ ಟಾಕೀಜಿಗೇ ಹೋಗೋಣ. ಟ್ಯಾಕ್ಸಿ ಇಲ್ಲವೆ ಬಸ್ಸಿನಿಂದ ಕೂಡ ಹೋಗಬಹುದು. ಐದೇ ಮಿನಿಟಿನ ಹಾದಿ,” ಎಂದು ಮಗಳಿಗೆ ಸಮಾಧಾನ ಹೇಳಿದಳು, ಮುದುಕಿ. ಪತ್ರಿಕೆಯೊಳಗಿನ ಜಾಹೀರಾತಿಗೆ ಅಮ್ಮ ವಿಶೇಷ ಮಹತ್ವವನ್ನು ಕೊಡದೇ ಇದ್ದುದನ್ನು ಕಂಡು ಶಿರೀನಳಿಗೆ ಮನಸ್ಸು ನಿರಾಳವಾಯಿತು. ತಾನೇ ಆ ಜಾಹೀರಾತಿಗೆ ಅವಾಸ್ತವವಾದ ಮಹತ್ವವನ್ನು ಕೊಟ್ಟು ಹೆದರಿದೆನೇನೋ, ಅನ್ನಿಸಿತು. ಲಗುಬಗೆಯಿಂದ ಮಲಗುವ ಕೋಣೆಗೆ ಹೋಗಿ ಪತ್ರಿಕೆಯನ್ನು ಎತ್ತಿಕೊಂಡು ಬಂದು ಹಾಲಿನಲ್ಲಿ ಟೀಪಾಯಿಯ ಮೇಲೆ ಮೊದಲು ಇದ್ದಲ್ಲೇ ಇರಿಸಿದಳು. “ಮಕ್ಕಳನ್ನೆಬ್ಬಿಸು. ಅಜ್ಜನ ಜೊತೆಗೇ ನಾಸ್ತಾ ಮುಗಿಸಲಿ,” ಎಂದು ತಾಯಿ ಸೂಚಿಸಿದಾಗ ಹಾಗೇ ಮಾಡಲು ಮಕ್ಕಳು ಮಲಗಿದಲ್ಲಿಗೆ ಹೋದಳು.

ಬೆಹರಾಮ್ ಬಚ್ಚಲುಮನೆಯಿಂದ ಹೊರಗೆ ಬಂದವನು ನೇರವಾಗಿ ತನ್ನ ಮಲಗುವ ಕೋಣೆಗೆ ಹೋದ. ಕದ ಮುಂದೆ ಮಾಡಿಕೊಂಡು ಸಮುದ್ರದ ಕಡೆಯ ಕಿಡಕಿಯ ಬಾಗಿಲು ತೆರೆದ. ಬೆಳಗಿನ ಪ್ರಾರ್ಥನೆಗಾಗಿ ಉಪಯೋಗಿಸುವ ಸ್ಟೂಲನ್ನು ಕಿಡಕಿಯ ಹತ್ತಿರ ಇಟ್ಟು ಕಪಾಟಿನೊಳಗಿಂದ ಪ್ರಾರ್ಥನೆಯ ಪುಸ್ತಕವನ್ನು ಹೊರತೆಗೆದು ಸ್ಟೂಲಿನ ಮೇಲೆ ಸಮುದ್ರಕ್ಕೆ ಇದಿರಾಗಿ ಕೂತು-‘ಅಶೆಮ್ ವೋಹೂ’, ‘ಯಥಾ ಅಹೂ ವೈರ್‍ಯೋ’ ಹಾಗೂ ‘ಸ್ರೋಶ್ ಬಾಜ್’ ಈ ಮೂರೂ ಪ್ರಾರ್ಥನೆಗಳನ್ನು ಅವೆಸ್ತ ಭಾಷೆಯಲ್ಲೇ ಪಠಿಸಿದ. ಆಮೇಲೆ ಐದು ಮಿನಿಟುಗಳವರೆಗೆ ಸೃಷ್ಟಿಕರ್ತನಾದ ಅಹುರಮಝ್ದನನ್ನು ನೆನೆದು ಕಣ್ಣು ಮುಚ್ಚಿ ಕುಳಿತ.
ಪ್ರಾರ್ಥನೆಯನ್ನು ಮುಗಿಸಿ ಹೊರಗೆ ಬಂದ ಅಪ್ಪನ ಶಾಂತ ಮೋರೆ ಶಿರೀನಳಿಗೆ ತುಂಬ ಸುಂದರವಾಗಿ ಕಂಡಿತು. ಹಾಗೆ ಹೇಳಿಯೇಬಿಟ್ಟಳು ಕೂಡ. ಬೆಹರಾಮ್ “ಥ್ಯಾಂಕ್ಸ್,” ಎಂದ. ಆಗಲೆ ಎದ್ದು ಹೊಸ ದಿನದ ಧಾಂಧಲೆಗೆ ಸಿದ್ಧವಾಗುತ್ತಿದ್ದ ಮೊಮ್ಮಕ್ಕಳ ಜೊತೆಗೆ ನಾಸ್ತಾಕ್ಕೆ ಕೂತಾಗ ಪಾರ್ವತಿಗೆ ತುಸು ಬೇಗ ಬಾ ಎಂದು ಹೇಳಿಕಳುಹಿಸಿದರೆ ಹೇಗೆ ಎಂಬ ವಿಚಾರವನ್ನು, ಅದು ಮನಸ್ಸಿನಲ್ಲಿ ಮೊಳೆಯುತ್ತಿರುವಂತೆಯೆ, ತೆಗೆದುಹಾಕಿದ. ನಾಸ್ತಾ ಮುಗಿಸಿ ಆಗ ಓದಲು ಮನಸ್ಸು ಆಗಿರದ ಪತ್ರಿಕೆಯನ್ನೆತ್ತಿ ಸೋಫಾದಲ್ಲಿ ಕೂತು ಓದಲು ಶುರು ಮಾಡಿದ. ಮೊದಲನೇ ಪುಟವನ್ನು ಓದುತ್ತಿದ್ದಂತೆಯೆ ಬೇಸರ ಬಂದವನ ಹಾಗೆ-ಥತ್, ಈ ಸುದ್ದಿಪತ್ರಿಕೆಗಳ ಹಣೆಬರಹವೇ ಇಷ್ಟು: ತಲೆಬರಹಗಳ ಗಾತ್ರದಿಂದಲೇ ಸುದ್ದಿಯ ಮಹತ್ವವನ್ನು ತಿಳಿಸುವ ಸಂಭ್ರಮ, ಎಂದುಕೊಂಡ. ನಾಸ್ತಾಕ್ಕೆ ಕೂತಲ್ಲಿಂದಲೇ ಹೆಂಡತಿ-ಮಗಳು ಇಬ್ಬರೂ ತಾನು ಪೇಪರು ಓದುತ್ತಿದ್ದ ಪರಿಯನ್ನು ಅವಲೋಕಿಸುತ್ತಿದ್ದಾರೆ ಎಂಬುದು ಬೆಹರಾಮನಿಗೆ ಗೊತ್ತಾಗಲಿಲ್ಲ. ಆದರೂ ಅವರತ್ತ ಮೋರೆ ತಿರುವಿ: “ಶಿರೀನ್, ಹೇಳಲಿಕ್ಕೆ ಮರೆತೆ,” ಎಂದು ಆರಂಭಿಸಿದ. “ನಮ್ಮ ಆಫೀಸಿನಲ್ಲಿ ಸದ್ಯವೇ ಕೆಲಸಕ್ಕೆ ಸೇರಿದ ಒಬ್ಬ ತರುಣ ಮ್ಯಾನೇಜರನಿಗೆ ನನ್ನ ಹಾಗೆಯೆ ಈ ಪತ್ರಿಕೆಗಳೆಂದರೆ ಬದ್ಧ ದ್ವೇಷ ನೋಡು. ಅಂದಹಾಗೆ ಅವನ ಹೆಸರೇ ತರೂಣ್-ತರೂಣ್ ಶಹಾ ಎಂದು. ಗುಜರಾಥೀ ಹುಡುಗ. ತುಂಬ ಸ್ಮಾರ್ಟ್. ಇಂದಿನ ಮನುಷ್ಯನ ಸುದ್ದಿ ಸೇವಿಸುವ ಚಟವನ್ನು ಪೂರೈಸಲು ಜಗತ್ತಿನ ಅಡವಿಗಳಲ್ಲಿ ದಿನವೂ ಎಷ್ಟು ಲಕ್ಷ ಮರಗಳು ಜೀವ ಕೊಡುತ್ತವೆ. ನಮ್ಮ ಕಾರ್ಖಾನೆಗಳಲ್ಲಿ ಪಲ್ಪ್ ಆಗಿ ಕಾಗದವಾಗುತ್ತವೆ ಎನ್ನುವ ಬಗ್ಗೆ ಅವನ ಬಾಯಿಂದಲೇ ಕೇಳಬೇಕು.” ಅಪ್ಪ ಮಾತನಾಡುವ ಮೂಡಿನಲ್ಲಿದ್ದಾನೆ, ಆದರೆ ಏನೋ ಅಡ್ಡಬರುತ್ತಿದೆ ಎಂದು ಅರಿತ ಶಿರೀನ್, “ನೀನೇ ಹೇಳಲ್ಲ. ನಾವು ಕೇಳುತ್ತಾ ಇದ್ದೇವೆ,” ಎಂದಳು. “ಇನ್ನೊಂದು ಮಾತು. ಸೀತೆಯನ್ನು ಅಮ್ಮ ಮನೆಗೆ ಕಳುಹಿಸಿದ್ದಾಳೆ, ಸಾಧ್ಯವಿದ್ದರೆ ಪಾರ್ವತಿಗೆ ಬೇಗ ಬಾ ಎಂದು ಹೇಳಲು,” ಎಂದು ತಿಳಿಸುತ್ತ, ಡಾಯ್ನಿಂಗ್ ಟೇಬಲ್ ಬಿಟ್ಟು ಅಪ್ಪ ಕೂತ ಸೋಫಾಗೆ ಬರತೊಡಗಿದಳು. ಅದಾಗಲೇ ಪಾರ್ವತಿಯ ಆಗಮನವನ್ನು ಇದಿರುನೋಡತೊಡಗಿದವನ ಮನಸ್ಸು ತರುಣ ಶಹಾನನ್ನು ಪೂರ ಮರೆತಿತ್ತು. “ಪಾರ್ವತಿಗೆ ಸೀತೆಯ ಮೇಲೆ ಸಿಟ್ಟು ಬರದಿದ್ದರೆ ಸಾಕು. ಪಾಪ. ಹುಡುಗಿಗೆ ತಾನು ಕೊಟ್ಟ ಸುದ್ದಿಯ ಅರ್ಥ ಗೊತ್ತಿರಲಾರದು,” ಎಂದ.

ಮುಂದಿನ ಹದಿನೈದೇ ಮಿನಿಟುಗಳಲ್ಲಿ ಪಾರ್ವತಿ ಹಾಲಿನಲ್ಲಿ ಹಾಜರ್ ಆದಳೇ! ಮಗಳ ಮುಖಾಂತರ ಹೇಳಿಕಳುಹಿಸಿದ್ದು ಯಾಕೆ ಎನ್ನುವುದು ತನಗೆ ಗೊತ್ತಿದೆ ಎಂದು ಹೇಳುವ ಧಾಟಿಯಲ್ಲಿ-“ನಾನಾಗಿಯೇ ಬೇಗ ಬರುವವಳಿದ್ದೆ. ನಾನು ಹೊರಟು ನಿಂತಾಗಲೆ ಸೀತೆ ಬಂದಳು. ನಿನ್ನೆ, ನಿದ್ದೆ ಬಾರದೆ ಇಡೀ ರಾತ್ರಿ ಹಾಸಿಗೆಯಲ್ಲಿ ಹೊರಳಾಡಿದೆ,” ಎಂದಳು. ಇದಿರುಗೋಡೆಯಲ್ಲಿಯ ದೊಡ್ಡ ಕಂಬಕ್ಕೆ ಬೆನ್ನು ಆನಿಸಿ ನಿಂತವಳು, ಎರಡೂ ಕೈಗಳನ್ನು ಟೊಂಕದ ಮೇಲೆ ಊರಿ ಮಾತಿಗೆ ಆರಂಭಿಸಿದ ನಾಟಕೀಯ ರೀತಿ ಬೆಹರಾಮ್ ಹಾಗೂ ಅವನ ಹೆಂಡತಿಗೆ ಪರಿಚಯವಿಲ್ಲದ್ದಲ್ಲ. ಆದರೂ ಸದ್ಯದ ಸಂದರ್ಭದಲ್ಲಿ ದುಗುಡಕ್ಕೆ ಕಾರಣವಾಗದೇ ಉಳಿಯಲಿಲ್ಲ. ಶಿರೀನಳೇ ಮುಂದಾಗಿ-“ನಾಲ್ಕು ದಿನಗಳಿಂದ ನೀನು ಇಲ್ಲಿಯ ಯಾರೊಡನೆಯೂ ಸರಿಯಾಗಿ ಮಾತನಾಡಿದ್ದಿಲ್ಲ. ನಮಗೆಲ್ಲ ಇಲ್ಲದ ಸಂಶಯ. ನಿನಗೇನು ಗೊತ್ತಾಗಿದೆ ಹೇಳು,” ಎಂದು ಹೇಳುವಾಗ, ಅಪ್ಪನ ಮೇಲೆ ಆಘಾತ ಆಗದ ಹಾಗೆ ಹೇಳು ಎನ್ನುವುದನ್ನು ಸೂಚಿಸಲೆಂಬಂತೆ ಅಪ್ಪನ ಕಡೆಗೊಮ್ಮೆ ಅವಳ ಕಡೆಗೊಮ್ಮೆ ನೋಡಿ ಕಣ್ಣು ಮಿಟುಕಿಸಿದಳು. ಇದು ಬೆಹರಾಮನ ಗಮನಕ್ಕೆ ಬರದಿರಲಿಲ್ಲ. ಅವನು ಸರಕ್ಕನೆ ಹೆಂಡತಿ ಶಿರೀನಳತ್ತ ತೀಕ್ಷ್ಣವಾಗಿ ನೋಡಿ, ಇಂಗ್ಲಿಷ್‌ನಲ್ಲಿ-

“ನೀವು ನನಗೆ ಕೊಟ್ಟ ಮಾತನ್ನು ಮರೆತಹಾಗೆ ಕಾಣುತ್ತದೆ,” ಎಂದದ್ದೇ ತಾವು ಮಾಡಿದ ತಪ್ಪು ಲಕ್ಷ್ಯಕ್ಕೆ ಬಂದ ಹೆಂಗಸರಿಬ್ಬರೂ ಕೂತಲ್ಲಿಂದ ಎದ್ದು-“ಹೌದು, ನೀವಿಬ್ಬರೂ ಮಾತನಾಡಿಕೊಳ್ಳಿ. ನಾವು ಮಕ್ಕಳಿಗೆ ‘ಲ್ಯಾಂಡ್ಸ್ ಎಂಡ್’ ತೋರಿಸಿ ಬರುತ್ತೇವೆ,” ಎಂದು ಹಾಲಿನಿಂದ ಹೊರಟೇಬಿಟ್ಟರು.
ಬೆಹರಾಮ್-“ಕೂರು, ಪಾರ್ವತೀ. ಬಾಲ್ಕನಿಯೊಳಗಿನ ಸ್ಟೂಲು ಎಳೆದುಕೋ. ಹೇಳು: ನಿನ್ನೆ ಬಂದವನು ಕರುಣಾಕರನ್ನನೋ? ವಾಸುದೇವನ್‌ನೋ?” ಎಂದು ಕೇಳುವಾಗ ಬಂದವನು ಇವರಿಬ್ಬರಲ್ಲಿ ಒಬ್ಬನಾದರೆ ಸಾಕು ಎಂಬ ಧ್ವನಿ ಮೂಡಿತ್ತು.
*****
ಮುಂದುವರೆಯುವುದು