ಕಳೆದ ಸುಮಾರು ಮುವತ್ತು ವರುಷಗಳಿಂದ ನಾನು ಬಲ್ಲ ಸುಬ್ಬಣ್ಣ, ನಿಧಾನಕ್ಕೆ ಬೆಳೆದು ತನ್ನಷ್ಟಕ್ಕೆ ತಾನೇ ಎಂಬಂತೆ ಅರಳಿ ಲೋಕಕ್ಕೆ ಮಾದರಿಯಾಗಿ ನೀನಾಸಂ ಸಂಸ್ಥೆಯ ಹಿಂದಿನ ಚೇತನ ಶಕ್ತಿ ಸುಬ್ಬಣ್ಣ. ಇನ್ನು ಇಲ್ಲ ಎಂದಾಗ ಹೇಳಲಾಗದ ತಳಮಳ, ಸಂಕಟ, ಏನೋ ಮಹತ್ತರವಾದದ್ದನ್ನು ಕಳಕೊಂಡಂತೆ ನೋವು.
ಸುಬ್ಬಣ್ನನವರ ಆವರಿಸುವ ಈ ಶಕ್ತಿ ಏನು ಎಂದು ನಾನು ಅನೇಕ ಸಲ ಚಿಂತಿಸಿದ್ದಿದೆ. ತಾನು ಇರುವಲ್ಲೆ ತನ್ನ ಬದುಕು ಹಾಗೂ ಜೊತೆಗಿರುವವರ ಬದುಕು ಹಸನಾಗಲು, ಮಾನಸಿಕವಾಗಿ ಮಾಗಲು ಸಮುದಾಯದಲ್ಲಿ ತಾನು ಏನೆಲ್ಲಾ ಮಾಡಬಹುದು ಎಂಬ ಅರ್ಥಪೂರ್ಣವಾದ ಹುಡುಕಾಟವೆ ಅವರ ಈ ವಿಶೇಷ ವ್ಯಕ್ತಿ. ಸುಬ್ಬಣ್ಣನವರ ತತ್ವಗಳು ಸರಳ ಹಾಗೂ ನೇರ. ಸುಬ್ಬಣ್ಣನವರ ಸಾಮಾಜಿಕ ವ್ಯಕ್ತಿತ್ವ, ಬರಹಗಳು, ನಾಟಕ, ಸಿನಿಮಾ ಇತ್ಯಾದಿ ಚಟುವಟಿಕೆಗಳು ಹಾಗೂ ಜೀವನಕ್ರಮ ಇವುಗಳ ಒಳಗೆ ಪರಸ್ಪರ ಪೂರಕವಾದ ಸಂಬಂಧಗಳಿವೆ. ಬದುಕು, ಬರಹ, ಚಿಂತನೆ, ಕಾರ್‍ಯಕ್ಷೇತ್ರಗಳೆಲ್ಲ ಸಂಬಂಧಗಳಿಲ್ಲದ ಪ್ರತ್ಯೇಕ ವಿಚಾರಗಳಲ್ಲ, ಅವರಲ್ಲಿ ಅವೆಲ್ಲ ಒಂದು ಇನ್ನೊಂದರೊಡನೆ ಸುಳ್ಳಾಡದ ಸಂಬಂಧ ಹೊಂದಿದೆ.
ಜಾತಿಯಿಂದ ಹವ್ಯಕ ಬ್ರಾಹ್ಮಣರಾಗಿ ಅಡಿಕೆ ಕೃಷಿಕರಾದ ಕುಂಟಗೋಡು ವಿಭೂತಿ ಸುಬ್ಬಣ್ಣ ೧೯೮೨ರಲ್ಲಿ ಅಖಿಲ ಹವ್ಯಕ ಮಹಾ ಸಮ್ಮೇಳನವನ್ನು ಒಪ್ಪದೆ, ಆ ಸಂದರ್ಭದಲ್ಲಿ ಒಂದು ಕರಪತ್ರ ಮುದ್ರಿಸಿ ಹಂಚಿದರು. ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಹೆಚ್ಚಾಗಿ ಕಲಂಕವನ್ನೇ ಹಚ್ಚುತ್ತಾ ಬಂದಿರುವ ಜಾತಿ ಪದ್ಧತಿಯನ್ನು ಹೊಸ ನಾಗರಿಕತೆಯ ಹೊಸ ಬದುಕಿನ ಹಿನ್ನೆಲೆಯಲ್ಲಿ ವಿರೋಧಿಸುವ ಮಾತು ಸಾಲದು. ನಾವು ಹೇಳುವುದರ ಬಗ್ಗೆ ತ್ರಿಕರಣಪೂರ್ವಕ ನಡೆದುಕೊಳ್ಳಲು ಶ್ರಮಿಸಬೇಕು ಎಂಬುದು ಅವರ ಮಾತಿನ ತಿರುಳು. ಜಾತಿ ಸಂಘಟನೆಗಳ ಸಮರ್ಥನೆ ಮಾಡಿಕೊಳ್ಳುವವರಿಗೆ ಆ ಬಗ್ಗೆ ಅನೇಕ ತರ್ಕಗಳನ್ನು ಮುಂದಿಟ್ಟು ಸಮರ್ಥಿಸಿಕೊಳ್ಳುವವರಿಗೆ ಸುಬ್ಬಣ್ಣ ಹೇಳಿದ ಮಾತು: “ಬದುಕು ಬರೀ ಚಾತುರ್ಯದಿಂದ ಬೆಳೆಸಿಕೊಳ್ಳುವಂಥದ್ದಲ್ಲ. ಅದು ಮುಖ್ಯವಾಗಿ ಆಂತರಿಕ ಅಭಿವ್ಯಕ್ತಿಯಾಗಬೇಕು.\’\’
ಹವ್ಯಕ ಬ್ರಾಹ್ಮಣ ಜಾತಿ ಸಂಘಟನೆಯನ್ನು ವಿರೋಧಿಸುತ್ತಾ ಕೊನೆಯಲ್ಲಿ ಅವರು ಹೇಳಿದ ಮಾತು “ಸಾಮಾನ್ಯವಾಗಿ ಎಲ್ಲರೂ ಬೌದ್ಧಿಕವಾಗಿ ಒಪ್ಪಿಕೊಂಡಿರುವ ಅಂಶವೊಂದನ್ನು ನಾವು ಹೇಗೆ ಆಚರಣೆಯಲ್ಲಿ ತರುತ್ತಿಲ್ಲ ಎಂಬುದು ಇಲ್ಲಿನ ಸಂಗತಿ. ಉತ್ತರ ಶೋಧಿಸಲು ಚಾತುರ್ಯವನ್ನು ಅವಲಂಬಿಸುವ ಆಂತರ್ಯವನ್ನು ಅವಲಂಬಿಸಿ.\”
ಸುಬ್ಬಣ್ಣ ಎಂದೂ ಚಾತುರ್ಯವನ್ನು ಅವಲಂಬಿಸಿದವರಲ್ಲ. ಅವರ ಎಲ್ಲಾ ಕ್ರಿಯೆಗಳ ಹಿಂದೆಯೂ ಅವರು ಆಂತರ್ಯವನ್ನೇ ಅವಲಂಬಿಸಿದವರು. ಆದ್ದರಿಂದಲೇ ಅವರಿಗೆ ಕ್ರಾಂತಿಯ ಮುಖವಾಡದ ಅಥವಾ ಮರುಳು ಮಾಡುವ ಮಾತಿನ ಅವಶ್ಯಕತೆ ಕಾಣಲೇ ಇಲ್ಲ. ತಾನು ಈ ಜಗತ್ತನ್ನು ತಿಳಿಯುವ ಹಾದಿಯನ್ನು ಕಂಡದ್ದನ್ನು ತನ್ನ ಸುತ್ತಲಿನ ಜನರಿಗೆ ಕಾಣಿಸುತ್ತಾ ಹೋದರು. ಅದು ಅವರಿಗೆ ಸಹಜ ಬದುಕು ತನ್ನ ಸುತ್ತಮುತ್ತಲಿನ ಊರು, ಹಳ್ಳಿಗಳ ಅನೇಕ ಜನರು, ಅವರ ಆಸಕ್ತಿ ಕುತೂಹಲಗಳಲ್ಲಿ ಸೇರಿಕೊಳ್ಳುತ್ತಾ ಹೋಗಿ ಸಾಂಸ್ಕೃತಿಕ ವಿಕೇಂದ್ರಿಕರಣ ದೊಡ್ಡ ಮಾದರಿಯಾಗಿ ನೀನಾಸಂ ಬೆಳೆಯಿತು.
ಈ ಬೆಳವಣಿಗೆಯ ಹಿಂದೆ ಸುಬ್ಬಣ್ಣನವರ ಚಿಂತನೆಯ ಪ್ರಖರತೆ ಇದೆ. ೧೯೫೮ರಷ್ಟು ಹಿಂದೆ ಅವರು ಕನ್ನಡಕ್ಕೆ ಅನುವಾದಿಸಿದ ಧನಂಜಯನ ದಶರೂಪಕ ಕೃತಿಯ ಅರಿಕೆಯಲ್ಲಿ ಸುಬ್ಬಣ್ಣ “ಸ್ವ ಪರಂಪರೆಯನ್ನವಲಂಬಿಸದ ಬೆಳವಣಿಗೆ ಸಹಜವಾಗದು, ಸುಷ್ಠುವಾಗದು. ಅಂತೆಯೇ ಲಲಿತ ಕಲಾ ಶಾಸ್ತ್ರದ ನಮ್ಮ ಪೂರ್ವಪರಂಪರೆಯನ್ನು ತಿಳಿದಲ್ಲದೇ ನಮಗೆ ಇಂದು ಅಗತ್ಯವಾದ ನೂತನ ಕಲಾ ಶಾಸ್ತ್ರ ಸಹಜ ಅರಳಿದಂತೆ, ಹುಟ್ಟಿ ಬೆಳೆಯಲಾರದು” ಎಂದು ಹೇಳಿದರು. ವಸಾಹತೋತ್ತರ ಚಿಂತನೆ, ಡಾ.ಗಣೇಶದೇವಿಯವರು ಪ್ರತಿಪಾದಿಸಿದ ಪರಂಪರೆಯ ಮರೆವು (ಅಮ್ನೇಶಿಯಾ) ಮೊದಲಾದ ಅನೇಕ ತಾತ್ವಿಕ ಪ್ರತಿಪಾದನೆಗಳಿಗೆ ಎಷ್ಟೋ ತಾತ್ವಿಕ ಪ್ರತಿಪಾದನೆಗಳಿಗೆ ಎಷ್ಟೋ ಮೊದಲು ಸುಬ್ಬಣ್ಣ ಸ್ವ ಪರಂಪರೆಯ ಅರಿವಿನ ಬಗೆಗೆ ಕಾಳಜಿ ಹೊಂದಿದ್ದರು. ಆದರೆ ಅದೆಂದೂ ಒಂದು ಅಂದನಾನುಕರಣೆಯಾಗಲಿ, ಪುನರುತ್ಥಾನವಾದದ ಪ್ರತಿಪಾದನೆಯಾಗಲಿ ಆಗಿರಲಿಲ್ಲ.
೧೯೮೦ನೇ ಇಸವಿ ಹಿಂದು ಮುಂದುಗಳಲ್ಲಿ ಹೆಗ್ಗೋಡಿನಲ್ಲಿ ಚಲನಚಿತ್ರ ಸಂಸ್ಕೃತಿ ಶಿಬಿರ ಪ್ರಾರಂಭವಾದ ಹೊಸದು. ಕನ್ನಡಕ್ಕೆ ಚಲನಚಿತ್ರಗಳ ಬಗ್ಗೆ ಅನೇಕ ಕೃತಿಗಳನ್ನೂ ಅನುವಾದಗಳನ್ನೂ ಸುಬ್ಬಣ್ಣ ತಂದರು. ಆಗೆಲ್ಲ ಕಾಲೇಜುಗಳಲ್ಲಿ ಸಾಹಿತ್ಯ ಓದಿನ ಮತ್ತಿನಲ್ಲಿದ್ದವರಿಗೆ ಜನ ಜೀವನದ ಭಾಗವಾಗಿ ಹೊಸ ಚಿಂತನೆ ಹಬ್ಬುವ ಪ್ರಾಯೋಗಿಕ ಕ್ಷೇತ್ರದಲ್ಲಿ ಹೆಗ್ಗೋಡು ಕಾಣುತ್ತಿತ್ತು. ರಾತ್ರಿ ಮಲಗಲು ವಿದ್ಯುಚ್ಛಕ್ತಿ ಇಲ್ಲದ ಶಾಲೆಯ ಹಜಾರಗಳು, ಸ್ನಾನ, ಶೌಚಗಳಿಗೂ ಅತಿ ಕನಿಷ್ಟ ಅನುಕೂಲತೆ, ಇವೆಲ್ಲದರ ನಡುವೆ ರಾಜ್ಯದ ಅನೇಕ ಕಡೆಗಳಿಂದ ಬಂದವರು ಅಲ್ಲಿ ಸೇರಿದ್ದರು. ಸುಬ್ಬಣ್ಣ ಅನನುಕೂಲತೆಗಳನ್ನು ಆದಷ್ಟು ಕಮ್ಮಿ ಮಾಡಲು ಶ್ರಮಿಸುತ್ತಾ ಎಲ್ಲರೊಡನೆ ಮಾತಾಡುತ್ತ ತನ್ನ ವೀಳ್ಯದೆಲೆಯ ರಂಗಿನಲ್ಲಿ ನಗುತ್ತ ಓಡಾಡು ಉತ್ತೇಜಿಸುತ್ತಿದ್ದ ಕ್ರಮ ಇನ್ನೂ ಕಣ್ಣ ಮುಂದಿದೆ. ಅಂತಹ ಯಾವುದೋ ಒಂದು ಕ್ಷಣದಲ್ಲಿ ಅವರು ನನ್ನ ಮೊದಲ ವಿಮರ್ಶಾ ಸಂಕಲನ ‘ಮನೋಗತ’ವನ್ನು ಅಕ್ಷರ ಪ್ರಕಾಶನ ಪ್ರಕಟಿಸಬಹುದಲ್ಲಾ ಎಂದು ಹೇಳಿದ್ದು ಅಲ್ಲಿ ಇಲ್ಲಿ ಬರೆಯುತ್ತಿದ್ದವರನ್ನು ಹೀಗೆ ಹೆಕ್ಕಿ ಗುರುತಿಸುವುದೂ ಅವರ ಅಕ್ಷರ ಪ್ರಕಾಶನದ ಕ್ರಮಗಳಲ್ಲಿ ಒಂದು.
‘ಶ್ರೇಷ್ಠತೆಯ ವ್ಯಸನ’ ಎಂಬುದು ಸುಬ್ಬಣ್ಣನವರ ಬಹು ಮುಖ್ಯವಾದ ಚಿಂತನೆಯನ್ನು ಹೇಳುವ ಒಂದು ಲೇಖನ. ವೈಯಕ್ತಿಕವಾಗಿ ಸುಬ್ಬಣ್ಣ ಶ್ರೇಷ್ಠತೆಯ ವ್ಯಸನವಿಲ್ಲದ ಶ್ರೇಷ್ಠರು. ಅವರು ನಂಬಿದ ಸಹಕಾರ ತತ್ವ, ಸಮಾಜವಾದದ ಸಮಾನತೆ, ವಿಕೇಂದ್ರೀಕರಣ ಎಲ್ಲದಕ್ಕೂ ತಾತ್ವಿಕ ತಳಹದಿಯಂತಿರುವ ಲೇಖನವದು. ಅತಿ ಶ್ರೇಷ್ಠವಾದ್ದು ಮಾತ್ರ ಈ ಜಗತ್ತಿಗೆ ಬೇಕಾದ್ದಲ್ಲ. ಶ್ರೇಷ್ಠವಾದ್ದು ಮಾತ್ರ ಮಾನ್ಯತೆಗೆ ಅರ್‍ಹವಾದ್ದು ಎಂಬ ವ್ಯಸನ ಸರಿಯಲ್ಲ. ಬದುಕು ಮುಖ್ಯವಾದ್ದು, ಅದರ ಅರ್ಥಪೂರ್ಣತೆಯ ಅನೇಕ ಹುಡುಕಾಟಗಳನ್ನು ನಾವು ಕಾಣಬೇಕೇ ಹೊರತು ಅದರಲ್ಲಿ ಶ್ರೇಷ್ಠವಾದ್ದು ಮಾತ್ರ ಅರ್‍ಹವಾದ್ದು ಎಂಬ ವ್ಯಸನವನ್ನು ಅವರು ಒಪ್ಪಿಕೊಂಡವರಲ್ಲ.
ಪಾಶ್ಚಿಮಾತ್ಯ ಹಾಗೂ ಇನ್ನೂ ಅನೇಕ ದೇಶಗಳ ಶ್ರೇಷ್ಠ ನಾಟಕ, ಸಿನಿಮಾಗಳನ್ನು ನೀಡಿ ಚರ್ಚಿಸುವ ಆಸಕ್ತಿಯಲ್ಲೇ ಅವರು ತನ್ನ ಊರಿನ ಹುಡುಗರ ನಾಟಕಗಳನ್ನೂ ನೋಡಿ ಚರ್ಚಿಸುತ್ತಿದ್ದರು. ತನ್ನ ಊರಿನ ಸುತ್ತಿನ ಸಮುದಾಯದ ಜನ, ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ಜೊತೆಯಾಗಿ ಒಂದು ನಾಟಕವಾಡಿದರೆ ಅವನ್ನು ಸದಾ ಶ್ರೇಷ್ಠತೆಯ ಪರಿಕಲ್ಪನೆಯಲ್ಲೆ ಯಾಕೆ ಪರಿಭಾವಿಸಬೇಕು? ಹಾಗೆಯೇ ಅವತ್ತಿನ ಶ್ರೇಷ್ಠವಾದ್ದು ತನಗೂ ತನ್ನವರಿಗೂ ಸಿಗಬೇಕೆಂಬುದೇ ಅವರ ಆಸೆ. ಫ್ರಿಟ್ಸ್ ಬೆನವಿಟ್ಸ್ ನಂತಹ ನಾಟಕ ನಿರ್ದೇಶಕರು ನೀನಾಸಂನಲ್ಲಿ ನಾಟಕ ನಿರ್ದೇಶಿಸಿದ್ದು, ಮೇರಿ ಸೇಟನ್‌ನಂತಹ ಚಲನಚಿತ್ರ ವಿಮರ್ಶಕಿ ಹೆಗ್ಗೋಡಿಗೆ ಬಂದದ್ದು ಎಲ್ಲವೂ ಜಗತ್ತಿನ ಅತ್ಯುತ್ತಮವಾದುದನ್ನು ತನ್ನ ಸುತ್ತಲಿನ ಜನರಿಗೂ ಕಾಣಿಸುವ ಅವರ ಆಸಕ್ತಿಯ ಫಲ, ಆದರೆ ಶ್ರೇಷ್ಠತೆ ಎಂದೂ ಅವರ ವ್ಯಸನವಲ್ಲ.
ಯಾವುದೇ ಪೂರ್ವಾಗ್ರಹಗಳಿಲ್ಲದೆ, ಮಾನವ ಸಂಬಂಧಗಳನ್ನೂ ತತ್ವ ವಿಚಾರಗಳನ್ನೂ ಅವರು ಶೋಧಿಸಬಲ್ಲವರಾಗಿದ್ದರು. ಅವರಿಗೆ ಹೊರಗೊಂದು ಒಳಗೊಂದು ಮಾಡುವ ಸ್ವಭಾವವೇ ಇರಲಿಲ್ಲ. ತನ್ನ ಸುತ್ತಲಿನ ಜನರಿಗೆ ಸಹಾಯವಾಗುವ ತೀರಾ ದೈನಂದಿನ ಕೆಲಸಗಳಲ್ಲೂ ಅವರು ತೊಡಗಿಕೊಂಡದ್ದನ್ನು ನಾನು ಕಂಡಿದ್ದೇನೆ. “ಓ ಇಂತಹ ಹುಡುಗನಿಗೆ ನಮ್ಮ ಊರಿನ ಹುಡುಗಿಯೊಬ್ಬಳನ್ನು ಮಾತಾಡಿಸುತ್ತಿದ್ದಾರೆ. ಸ್ವಲ್ಪ ಆ ಹುಡುಗನ ಬಗ್ಗೆ ತಿಳಿಸಬಹುದೇ? ನಮ್ಮ ಊರಿನ ಸಂಬಂಧ ಮಾಡಬಹುದೇ?” ಇಂತಹ ಇಂತಹ ದಿನನಿತ್ಯದ ಕಾಯಕದ ಅನೇಕ ವಿಚಾರಗಳನ್ನೂ ಅವರು ನನ್ನಲ್ಲಿ ಪ್ರಸ್ತಾಪಿಸಿದಿದೆ.
ಕಳೆದ ತಿಂಗಳು ಸಿದ್ದಾಪುರಕ್ಕೆ ನಮ್ಮ ಸಂಬಂಧದ ಮದುವೆಗೆ ಹೋಗಿದ್ದವ, ಬರುವಾಗ ದಾರಿಯಲ್ಲಿ ಸಂಜೆ ಒಂದು ಗಂಟೆ ಕಳೆಯಲು ಹೆಗ್ಗೋಡಿಗೆ ಹೋಗಿದ್ದೆ. ಶಿವಮೊಗ್ಗ ರೈಲಿಗಾಗಿ ತುಸು ಬೇಗ ಹೊರಟಾಗ ಸ್ವಲ್ಪ ಆ ಕಡೆ ಇದ್ದ ಕಾರಿನವರೆಗೂ ಬಂದು ಬೀಳ್ಕೊಟ್ಟರು. ಆರೋಗ್ಯ ಚೆನ್ನಾಗಿತ್ತು. ಹೀಗೆ ಇಷ್ಟು ಬೇಗ ಹೋದಾರೆಂದು ಅನಿಸಲೇ ಇಲ್ಲ.
ಕಾಳಿದಾಸ ಸಮ್ಮಾನ, ಮ್ಯಾಗ್ನೆಸೇ ಪ್ರಶಸ್ತಿ, ಅಕಾಡೆಮಿ ಮತ್ತಿತರ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಅನುವಾದಗಳು, ಸಿನಿಮಾ, ನಾಟಕಗಳು, ಲೇಖನಗಳು, ಹೀಗೆ ಇನ್ನೂ ಅನೇಕ ಅವರ ಪ್ರಕಟಿತ ಕೃತಿಗಳನ್ನೂ ಅವರು ಬಿಟ್ಟು ತೆರಳಿದ್ದಾರೆ. ಆದರೆ ಸುಬ್ಬಣ್ಣನನ್ನು ಬಲ್ಲವರಿಗೆ ಅವರ ಜೀವನವೇ ಒಂದು ಮಹಾಕೃತಿ. ತಮ್ಮ ಬದುಕೇ ಒಂದು ಕೃತಿಯಾಗಿ ಮಹಾತ್ಮಾಗಾಂಧಿ ಬದುಕಿದರು. ಸಾಂಸ್ಕೃತಿಕ ವಿಕೇಂದ್ರೀಕರಣದ ಹರಿಕಾರರಾದ ಕೆ.ವಿ..ಸುಬ್ಬಣ್ಣನವರಿಗೆ ಗಾಂಧೀಜಿಯೇ ಆದರ್ಶ, ಅಗಲಿದ ಚೇತನಕ್ಕೆ ಗೌರವಪೂರ್ವ ವಂದನೆಗಳು.
*****
ಕೃಪೆ: ಉಷಾಕಿರಣ