ಸಿಂಗಾರೆವ್ವ ಮತ್ತು ಅರಮನೆ – ೨

ಆಗಂತೂ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಹಿತ್ತಲಿಗೋಡಿ ಕೈಕೈತಟ್ಟಿ ಕುಣಿದಾಡಿದೆವು. ಎಷ್ಟುಬೇಗ ಹೊರಟೇವೋ ಎಂದು ನಾವು ಆತುರರಾದದ್ದು ನಿಜ. ಆದರೆ ನಮ್ಮ ಆತುರವನ್ನೂ ಮೀರಿ ಗಾಡಿ ತಯಾರಿಸಿದ್ದರು. ಗೌಡ ತನ್ನ ಜೋಡು ನಳಿಗೆಯ ಬಂದೂಕನ್ನು ಗಾಡಿಯಲ್ಲಿ ಹಾಕಿದ. ಹೆಂಗಸರಿಗೆ ಇದು ಸರಿಬರಲಿಲ್ಲ. ದೇವರು ದಿಂಡಿರೆಂದರೂ ಯಾವುದಕ್ಕೂ ಒಂದು ತಯಾರಿ ಬೇಡವೇ? ಬೇಡವೆಂದೇ ಗೌಡ ಹೇಳಿದ. “ಒಂದಿತ್ತು, ಒಂದಿಲ್ಲ. ಮೊದಲ ಗಾಡಿ ಹತ್ತರಿ” ಎಂದು ಹೇಳಿದ. ಗೌಡನಿಗೆ ಎದುರಾಡುವ ಶಕ್ತಿ ಯಾರಿಗಿತ್ತು? ಮನಸ್ಸಿನಲ್ಲಿಯೇ ಅದು ಇದು ಹೇಳಿಕೊಳ್ಳುತ್ತ ಗಾಡಿ ಹತ್ತಿದರು. ಗೌಡ ಮೊದಲೇ ಹೇಳಿದ್ದಿರಬೇಕು. ಮಠದ ಜಂಗಮ ಅಜ್ಜಯ್ಯನೂ ಗಾಡಿ ಹತ್ತಿದ. ಗಾಡಿ ಹೊಂಟಾಗ ಮಟಮಟ ಮಧ್ಯಾಹ್ನವಾಗಿತ್ತು.

ಗೌಡ ಗಡಿಯ ಮುಂದೆ ಮುಂದೆ ನಡೆದದ್ದರಿಂದ ಒಳಗಿದ್ದ ಹೆಂಗಸರ ವಟವಟ ನಡದೇ ಇತ್ತು. ಅದೇನೆಂದು ತಿಳಿಯುವ ಗೋಜಿಗೆ ನಾವು ಹೋಗಲೇ ಇಲ್ಲ. ಅಜ್ಜಯ್ಯ ಆಗಾಗ ಬಾಯಿ ಹಾಕುತ್ತಿದ್ದ. ನಮಗೋ ರೆಕ್ಕೆ ಮೂಡಿದ್ದವು. ಹೊಸ ಸೀಮೆ, ಹೊಸನೆಲ, ಹೊಸಗುಡ್ಡ ಬೆಟ್ಟಗಳನ್ನು ಕಣ್ಣರಳಿಸಿಕೊಂಡು ನೋಡುತ್ತ ಹತ್ತಿದ ಊರು ಹೆಸರುಗಳ ಕೇಳುತ್ತ ಖುಶಿಖುಶಿಯಾಗಿದ್ದೆವು. ಗುಡ್ದಬೆಟ್ಟಗಳನ್ನು ಇದೇ ಮೊದಲ ಬಾರಿಯೆಂಬಂತೆ, ದಾರಿಗೆ ಯಾರೆದುರಾದರೂ ಮನುಷ್ಯರನ್ನೇ ಕಾಣದವರಂತೆ ಕುತೂಹಲದಿಂದ ನೋಡುತ್ತಿದ್ದೆವು.

ಹೊತ್ತು ಮುಳುಗುವ ಮುನ್ನ ದಾರಿಯಲ್ಲಿ ಸಿಕ್ಕ ಹಳ್ಳದಲ್ಲಿ ಊಟ ಮಾಡಿ ಮತ್ತೆ ಅವಸರದಿಂದ ಗಾಡಿ ಬಿಟ್ಟರು. ಕತ್ತಲಾದಮೇಲೆ ಬಹಳ ಹೊತ್ತು ಎಚ್ಚರಿರಲಾಗಲಿಲ್ಲ. ತನ್ನ ತಾಯಿಯ ತೊಡೆಯ ಮೇಲೆ ಸಿಂಗಾರೆವ್ವ ನಿದ್ದೆ ಹೋದಳು. ನಾನೂ ಕೂತಲ್ಲೇ ಕಣ್ಣು ಮುಚ್ಚಿದೆ.

ಆಮೇಲೆ ನನಗೆ ಎಚ್ಚರವಾದದ್ದು ಬಡಿದು ಎಬ್ಬಿಸಿದಾಗಲೇ, ಸಿಂಗಾರೆವ್ವನಿಗಿನ್ನೂ ಎಚ್ಚರವಾಗಿರಲಿಲ್ಲ. ಅವರವ್ವ ಅವಳನ್ನು ಅರೆನಿದ್ದೆಯಲ್ಲೇ ಎಳೆದುಕೊಂಡೇ ನಡೆದಳು. ಒಂದು ಮನೆಯನ್ನು ಹೊಕ್ಕೆವು. ಚಿಮಣಿ ದೀಪದಲ್ಲಿ ಕೂಡ ಅದೊಂದು ದೊಡ್ಡ ಮನೆಯೆಂದು ತಿಳಿಯುತ್ತಿತ್ತು. ಅಲ್ಲಿದ್ದ ಐದಾರು ಮಂದಿ ನಮ್ಮ ದಾರಿಯನ್ನೇ ಕಾಯುತ್ತಿದ್ದವರಂತೆ, ನಮ್ಮ ವ್ಯವಸ್ಥೆಯನ್ನೆಲ್ಲ ಮೊದಲೇ ಲೆಕ್ಕ ಹಾಕಿದ್ದಂತೆ ಕಂಡರು. ದೊಡ್ಡ ಪಡಸಾಲೆಯಲ್ಲಿ ನಮ್ಮನ್ನೆಲ್ಲ ಇಳಿಸಿ, ಜಳಕ ಮಾಡಬೇಕೆಂದು ಬಚ್ಚಲು ಮನೆ ತೋರಿಸಿದರು. ಇಂಥ ರಾತ್ರಿಯಲ್ಲೇಕೆ ಜಳಕ ಎಂದು ನನಗರ್ಥವಾಗಲಿಲ್ಲ. ನಾವಿಳಿದು ಅರೆಘಳಿಗೆ ಕೂಡ ಆಗಿರಲಿಲ್ಲ. ಸಿಂಗಾರೆವ್ವನ ತಾಯಿ ಅಳುವುದೂ, ಉಳಿದವರು ಅವಳ ದುಃಖದಲ್ಲಿ ಪಾಲ್ಗೊಳ್ಳುವುದೂ ಕೇಳಿಸಿತು. ನಿಂಗವ್ವ ಗೌಡ್ತಿ ಸಿಂಗಾರೆವ್ವನನ್ನು ತಬ್ಬಿಕೊಂಡು “ಮಗಳಽ ಮಗಳಽ!” ಎಂದು ಅಳುತ್ತಿರುವುದನ್ನು ಕೇಳಿ ಸಿಂಗಾರೆವ್ವನಿಗೇನಾಯಿತೆಂದು ನನಗೆ ಹೆದರಿಕೆಯಾಯಿತು. ಸಿಂಗಾರೆವ್ವ ಈಗ ಪೂರ್ತಿ ಎಚ್ಚರವಾಗಿದ್ದಳು. ಇದೇನೆಂದು ಗೆಳತಿಯನ್ನು ಕೇಳುವಂತಿರಲಿಲ್ಲ. ಹೆಂಗಸರ ಶಾಪ, ಬೈಗಳ, ಅಸಮಧಾನದ ಮಾತುಗಳಿಂದ ನನಗೆ ತಿಳಿಯಿತು: ನಾವು ಎಲ್ಲವ್ವನ ಗುಡ್ಡಕ್ಕೆ ಬಂದಿರಲಿಲ್ಲ, ಶಿರಟ್ಟಿಗೆ ಸಿಂಗಾರೆವ್ವನ ಮದುವೆಗೆ ಬಂದಿದ್ದೆವು-ಎಂದು.

ಇರುವ ಒಬ್ಬಳೇ ಮಗಳ ಮದುವೆಯನ್ನು ಎಂಥಾ ಅದ್ದೂರಿಯಿಂದ ಮಾಡಬೇಕು; ಅದು ಬಿಟ್ಟು ಕಳ್ಳತನದಲ್ಲಿ ಮಾಡುವುದೆಂದರೇನು? ಸ್ವಂತ ಮಗಳ ಮದುವೆ ನಿಬ್ಬಣವನ್ನು ಕಳ್ಳತನದಲ್ಲಿ ಹೊರಡಿಸಬೇಕೆ? ಅದೂ ಅಕ್ಕ ಪಕ್ಕದ ಅವ್ವಕ್ಕಗಳಿಲ್ಲ, ಊರವರಿಲ್ಲ, ಕೇರಿಯವರಿಲ್ಲ; ಒಂದು ಬಾರಿಸುವರಿಲ್ಲ ಊದುವವರಿಲ್ಲ-ಹೋಗಲಿ ಎಲ್ಲವ್ವನ ಗುಡ್ಡಕ್ಕೆಂದು ಕರೆತಂದು, ಮಧ್ಯೆ ದಾರಿ ತಪ್ಪಿಸಿ ಶಿರಟ್ಟಿಗೆ ಕರೆತಂದು ಸ್ವಂತ ಹೆಂಡತಿಗೇ, ಸ್ವಂತ ಮಗಳಿಗೇ ಈರೀತಿ ಮೋಸ ಮಾಡುವುದೇ? ಗೌಡನ ಮಗಳ ಮದುವೆಯೆಂದರೆ ಊರಿಗೂರೇ ಸಡಗರ ಮಾಡಬೇಕು. ಇಲ್ಲಿ ನೋಡಿದರೆ ಊರವರೇನು ಬಂತು? ಇದ್ದ ಮನೆಯವರೂ ಸಂತೋಷವಾಗಿರಲಿಲ್ಲವೆಂದರೆ ಅದೆಂಥ ಮದುವೆ? ಇದನ್ನೇ ಆಡಿಕೊಂಡು ಹೆಂಗಸರು ಹಾಡಿಕೊಂಡು ಅಳುತ್ತಿದ್ದರು. ಅವಳ ತಾಯಿ ಅಳುತ್ತಿದ್ದುದರಿಂದ ಸಿಂಗಾರೆವ್ವನೂ ಅಳುತ್ತಿದ್ದಳು. ಇದರಲ್ಲೇನೋ ಮೋಸ ಇರಬೇಕೆಂದು ಅವರೆಲ್ಲ ಆಡಿಕೊಂಡರು. ಆಡಿಕೊಂಡರಷ್ಟೆ; ಗೌಡನೆದುರಿಗೆ ಹೇಳಬೇಕಲ್ಲ? ಯಾರೂ ಹೇಳಲಿಲ್ಲ. ಯಾಕೆಂದರೆ ಅಷ್ಟರಲ್ಲಿ ಎಲ್ಲೇ ಎಲ್ಲಿಯೋ ಹೋಗಿದ್ದ ಗೌಡ ಸುಂಟರಗಾಳಿಯಂತೆ ಒಳಬಂದು “ಯಾರಾದ್ರೂ ತುಟಿಪಿಟಕ್ಕೆಂದರ ಚರ್ಮ ಸುಲದ ತೂಗ ಹಾಕತೀನಿ!” ಎಂದು ಹೇಳಿ, ನಿಜವಾಗಿ ಸುಲಿಯುವನೋ ಎಂಬಂತೇ ಅಲ್ಲೇ ತೂಗಹಾಕಿದ್ದ ಒಂದು ಕತ್ತಿ ತಗೊಂಡು ಜಳಪಿಸಿ “ಹುಷಾರ್!” ಎಂದು ಗರ್ಜನೆ ಮಾಡಿದ.

ಎಲ್ಲರ ನಿಟ್ಟುಸಿರು ಹಾರಿ ಹೋದವು. ಕಣ್ಣೀರು ಇದ್ದಲ್ಲೇ ಇಂಗಿದವು. ಸಿಂಗಾರೆವ್ವನ ತಾಯಿ ಕುಸಿದವಳು ಮೇಲೇಳಲು ಒಪ್ಪಲೇ ಇಲ್ಲ. ಆ ಮನೆಯ ಒಬ್ಬಿಬ್ಬರು ಹೆಂಗಸರೂ ನೆರವಿಗೆ ಬಂದರು. ಆಗಲೇ ಬೆಳ್ಳಂಬೆಳಕಾಗಿತ್ತು. ಹಾಹಾ ಎನ್ನುವುದರೊಳಗೆ ಸಿಂಗಾರೆವ್ವನಿಗೆ ಜಳಕ ಕೂಡ ಮಾಡಿಸದೆ ಸೀರೆ ಉಡಿಸಿದರು. ಅವಸರದಲ್ಲಿ ತಲೆಬಾಚಿ ಮೈ ತುಂಬ ಆಭರಣ ತೊಡಿಸಿದರು, ಕೈತುಂಬ ಬಳೆ ಇಡಿಸಿದರು. ಸಿಂಗಾರೆವ್ವ ಆಗ ಎಷ್ಟು ಚಂದ ಕಾಣುತ್ತಿದ್ದಳೆಂದರೆ ಸಿಂಗರಿಸುತ್ತಿದ್ದ ಆ ಹೆಂಗಸರೂ ಕಣ್ಣೀರು ಸುರಿಸಿದರು. ಪುಣ್ಯಾತ್ಮ ಅದಕ್ಕಾದರೂ ಅವಕಾಶ ಕೊಟ್ಟನೇ?- ಓಡ್ಯೋಡಿ ಬಂದು ಸಿಂಗರಿಸುತ್ತಿದ್ದವರ ಕೈಯಲ್ಲಿದ್ದ ಕೂಸನ್ನು ಕಸಿದುಕೊಂಡು ಹೋಗೇಬಿಟ್ಟ! ಅಮಂಗಳ ಆಡಬಾರದು, ಆದರೂ ಹೇಳುತ್ತೇನೆ-ಅವನು ಸಿಂಗಾರೆವ್ವನನ್ನು ಎತ್ತಿಕೊಂಡು ಹೋದೊಡನೆ ಸುಡುಗಾಡಕ್ಕೆ ಒಯ್ಯುವ ಹೆಣದ ಹಿಂದೆ ಧಾವಿಸುವಂತೆ ಹೆಂಗಸರು ಬೆನ್ನುಹತ್ತಿ ಹೋದರು. ನಾನೂ ಓಡಿಹೋದೆ.

ಅಲ್ಲಿ ನೋಡಿದರೆ, ಬಾಜಾಬಜಂತ್ರಿಯೇ, ಒಂದು ಹಾಡೇ, ಒಂದು ಬೀಗರೇ, ಒಂದು ಧಾರೆಯೇ, ಏನಿದೆ? ಒಬ್ಬ ಫೋಟೋ ಹಿಡಿಯೋನು, ಅವನ ಯಂತ್ರ, ಅದರೆದುರಿಗೆ ಒಂದುಹಿಂಡು ಜನ, ಅವರ ಮಧ್ಯೆ ಬಾಸಿಂಗ ಕಟ್ಟಿಕೊಂಡ ವರ, ಅವನ ಎಡಗಡೆ ಸಿಂಗಾರೆವ್ವನನ್ನು ಕೂರಿಸಿದ್ದರು. ಗೌಡ ತನ್ನ ಕೈಯನ್ನು ವರನ ಕೈಗೆ ಆಧಾರವಾಗಿ ಕೊಟ್ಟು ಸಿಂಗಾರೆವ್ವನ ಕೈ ಹಿಡಿಯುವಂತೆ ಮಾಡಿದ್ದ. ಅವಸರದಲ್ಲಿ ಎರಡು ಫೋಟೋ ಹಿಡಿದರು. ಆಯ್ತಲ್ಲ, ಮದುವೆ ಮುಗಿಯಿತು!

“ನೀ ನಂಬತೀಯೇನಪ್ಪ, ಮದಿವಿ ಖರೆ ಖರೇನಽ ಮುಗೀತು!”

-ಈ ಮಾತು ಹೇಳುತ್ತ, ನನ್ನನ್ನೇ ನೋಡುತ್ತ ಶೀನಿಂಗವ್ವ ಗೋಡೆಗೊರಗಿದಳು. ನಾನು ಬೆಕ್ಕಸ ಬೆರಗಾಗಿದ್ದೆ. ಕಂಡು ಕೇಳರಿಯದ ಇಂಥ ಮದುವೆಯಿಂದ ಯಾರಿಗೆ ಹೊಯ್ಕಾಗುವುದಿಲ್ಲ? ಏನು, ಎತ್ತ, ಹ್ಯಾಂಗೆಂದು ಕಣ್ಣರಳಿಸಿ ಕೇಳುತ್ತಿದ್ದಂತೆ ನನ್ನ ಪ್ರಶ್ನೆಗಳನ್ನೆಲ್ಲ ಮಧ್ಯದಲ್ಲೇ ಕತ್ತರಿಸಿ ಹೇಳಿದಳು:

“ಇಷ್ಟಕ್ಕಽ ಕಣ್ಣ ಕಿಸಿದರ ಹೆಂಗಪಾ? ಇಲ್ಲಿ ಕೇಳು, ಮಗಳ ಮದಿವೀ ಹೆಣದ ಜೋಡೀ ಮಾಡಿದ್ದ!”

ಈ ಮಾತಿನಿಂದ ನನಗೆ ಆಘಾತವಾಗಿದ್ದಿತೆಂದು ಮುದುಕಿಗೂ ಗೊತ್ತಿತ್ತು. ತುಂಟತನದಿಂದ ತುಸು ನಕ್ಕಳು ಕೂಡ. ನನಗೆ ಆಘಾತ ಮಾಡುವುದಕ್ಕಾಗಿಯೇ ಹೀಗೆ ಹೇಳಿರಬಹುದೇ-ಎಂದೂ ಅನ್ನಿಸಿತು. ಅವಳೋ ಇಂಥ ಅಘಟಿತಗಳನ್ನು ಅನುಭವಿಸಿ ಹಣ್ಣಾದವಳು. ನಾನೋ ಸಾಹಿತ್ಯದ ಕೃತಿಗಳಲ್ಲಿ ಕೂಡ ಇಂಥ ಘಟನೆಗಳನ್ನು ಓದಿದವನಲ್ಲ. ತುಸು ಹೊತ್ತು ನನ್ನ ಮುಖಭಾವಗಳನ್ನು ನೋಡಿ ಮನಸ್ಸಿನಲ್ಲೇ ತುಸು ಆಟ ಆಡಿ, ಮುದಿಕಿ ಮತ್ತೆ ಕಥೆ ಮುಂದುವರಿಸಿದಳು:

“ಮದುವೆಯಾದ ಕೂಡಲೇ ಅವಸರದಲ್ಲಿ ಊಟದ ಶಾಸ್ತ್ರ ಮುಗಿಸಿ ನಮ್ಮನ್ನು ಮತ್ತೆ ಗಾಡಿಯೊಳಗೆ ತಳ್ಳಿ ಎತ್ತಿನ ಕೊರಳು ಕಟ್ಟಿದರು. ಯಾರ ಮುಖದಲ್ಲೂ ಗೆಲುವಿರಲಿಲ್ಲ. ಗೌಡ್ತಿ ಸುಮ್ಮನೆ ಕಣ್ಣೀರು ಸುರಿಸುತ್ತಿದ್ದಳು. ಸಿಂಗಾರೆವ್ವ ತನ್ನ ತಾಯಿಯನ್ನೊಮ್ಮೆ, ನನ್ನನ್ನೊಮ್ಮೆ ನೋಡುತ್ತ ಖಿನ್ನಳಾಗಿ ಕೂತಿದ್ದಳು. ಮದುವೆಯ ಉಡುಪಿನಲ್ಲೇ ಅವಳನ್ನು ಗಾಡಿಗೇರಿಸಲಾಗಿತ್ತು. ಮೈತುಂಬ ಆಭರಣಗಳಿದ್ದವು. ಅಂಥ ಉಸಿರು ಕಟ್ಟುವ ವಾತಾವರಣದಲ್ಲೂ ಅವಳ ಚೆಲುವನ್ನು ನಾನು ಗಮನಿಸದಿರಲು ಸಾಧ್ಯವಾಗಲಿಲ್ಲ. ಅವಳು ಹೆಣದ ಜೊತೆಗೆ ಮದುವೆಯಾದದ್ದು ನಮಗಿನ್ನೂ ಗೊತ್ತಾಗಿರಲಿಲ್ಲ. ವರ ಬಿಳಿಚಿಕೊಂಡಿದ್ದ. ಮುಚ್ಚಿ ಹೇಳುವುದೇನು ಬಂತು, ಹೆಣದ ಹಾಗೇ ಇದ್ದ. ಮೈಯ್ಯಲ್ಲಿ ಹುಷಾರಿರಲಿಲ್ಲವಲ್ಲ, ಅದಕ್ಕೇ ಹಾಗಿದ್ದಿದ್ದಾನು. ಮುಂದೆ ಇದೆಲ್ಲ ಒಂದಿಲ್ಲೊಂದು ದಿನ ಸರಿಹೋಗುವಂಥಾದ್ದು. ಮದುವೆ ಅವಸರದಲ್ಲಾಯಿತು. ಬಂಧು ಬಳಗ ಕೂಡಲಿಲ್ಲ, ಅದ್ದೂರಿಯಾಗಿರಲಿಲ್ಲ-ಎನ್ನುವುದನ್ನು ಬಿಟ್ಟರೆ ಉಳಿದಂತೆ ನನಗೆ ಆನಂದವೇ ಆಗಿತ್ತು; ಆನಂದವೇನು ಅಸೂಯೆ ಕೂಡ. ಆ ಹುಡುಗ ಗೌಡನ ಒಬ್ಬನೇ ಮಗ. ಎಷ್ಟೊಂದು ಆಸ್ತಿ, ಎಂಥ ದೊಡ್ಡ ಮನೆ, ಎಷ್ಟು ಆಭರಣ ಹಾಕಿದ್ದರು!…..ಇತ್ಯಾದಿ. ಆದರೆ ಮುಂದೆ ಗಾಡಿಯನ್ನು ತುಸು ಮುಂದೆ ಕಳಿಸಿ ಗೌಡ ತಿರುಗಿ ಶಿರಹಟ್ಟಿಗೇ ಹೋದ. ಆಗ ಎಲ್ಲರಿಗೂ ಉಸಿರು ಬಂತು. ಅಜ್ಜಯ್ಯ ಮೆಲ್ಲಗೆ ಬಾಯಿ ಬಿಟ್ಟ. ಮದುವೆಯ ಪೌರೋಹಿತ್ಯ ಆತನದೇ ತಾನೆ? ಅವನಿಗೆಲ್ಲ ಗೊತ್ತಾಗಿತ್ತು. ನಡೆದಿದ್ದನ್ನೆಲ್ಲ ಒಂದೂ ಬಿಡದೆ ಹೇಳಿದ. ಅದನ್ನು ಕೇಳಿ ಹೆಂಗಸರು ಹೆಣದ ಮುಂದೆ ಅತ್ತಂತೆ ಸಿಂಗಾರೆವ್ವನನ್ನು ತಬ್ಬಿಕೊಂಡು ಅತ್ತರು. ಅಳುತ್ತಲೇ ಊರು ಸೇರಿದೆವು. ಅದು ನಡೆದದ್ದು ಹೀಗೆ:

ಶಿರಹಟ್ಟಿ ಗೌಡ ಸತ್ತಿದ್ದ. ಅವನಿಗೆ ಒಬ್ಬನೇ ಮಗ. ವಯಸ್ಸಿನ್ನೂ ಹದಿನೆಂಟಾಗಿರಲಿಲ್ಲ. ಕ್ಷಯರೋಗಕ್ಕೆ ತುತ್ತಾದ. ನಾಡಿನ ಎಲ್ಲಾ ಮದ್ದುಮಾಡಿಸಿದಾಯ್ತು. ಅದೇನು ಗುಣವಾಗಲಿಲ್ಲ. ಆ ಹುಡುಗ ನಮ್ಮ ಗೌಡನ ತಂಗಿಯ ಮಗ. ಅಂದರೆ ಗೌಡನಿಗೆ ಸೋದರಳಿಯನಾಗಬೇಕು. ಅಣ್ಣ-ತಂಗಿ ಸೇರಿ ಅದೇನೇನು ಹೊಂಚಿದರೋ, ಅಥವಾ ಅದ್ಯಾವ ಪರಿಯಲ್ಲಿ ಗೌಡ ತನ್ನ ತಂಗಿಯನ್ನು ಒಪ್ಪಿಸಿದನೋ, ಆ ಸಾಯಲಿರುವ ಹುಡುಗನಿಗೇ ತನ್ನ ಮಗಳನ್ನು ಮದುವೆ ಮಾಡಿಕೊಡುವುದೆಂದು ತೀರ್ಮಾನಿಸಿ ಗೌಡ ಊರಿಗೆ ಬಂದ. ಗುಡ್ಡದೆಲ್ಲಮ್ಮನ ಹೆಸರಲ್ಲಿ ನಿಬ್ಬಣ ಹೊರಟ. ನಮ್ಮ ಸವಾರಿ ಶಿರಹಟ್ಟಿಗೆ ತಲುಪುವಷ್ಟರಲ್ಲಿ ಹುಡುಗ ಸತ್ತುಹೋಗಿದ್ದ. ಗೌಡ ಇದನ್ನೆಲ್ಲ ಮುಂದಾಗಿ ತಿಳಿದೇ ಶಿರಹಟ್ಟಿಯಲ್ಲಿ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟಿರಲು ತನ್ನವರನ್ನು ನಿಯಮಿಸಿ ಬೆಳಗಾವಿಯಿಂದ ಫೋಟೋ ಹಿಡಿಯೋರನ್ನೂ ಕರೆಸಿದ್ದ. ಮುಂದೆ ಮದುವೆ ನಡೆದು ಹೋಯ್ತಲ್ಲ. ವರ ಸತ್ತದ್ದನ್ನು ನಾವು ಈ ಕಡೆ ಬಂದ ಮೇಲೆ ಸಾರಲಾಯಿತು. ಗೌಡನ ತಂಗಿಗೆ ಕೂಡ ಮಗ ಸತ್ತದ್ದನ್ನು ಮದುವೆಯ ನಂತರವೇ ಹೇಳಿದರಂತೆ! ಗೌಡ ಹೀಗ್ಯಾಕೆ ಮಾಡಿದ ಗೊತ್ತ? ಹ್ಯಾಗೂ ಹುಡುಗ ಸಾಯುತ್ತಾನೆ. (ಸತ್ತೇ ಹೋಗಿದ್ದನಲ್ಲ!) ಅವ ಸತ್ತರೆ ಅವನ ಆಸ್ತಿಯೆಲ್ಲ ಅವನ ಹೆಂಡತಿಗೆ ಅರ್ಥಾತ್ ತನ್ನ ಮಗಳಿಗೆ ಸೇರಬೇಕು! ಮನುಷ್ಯನಲ್ಲಿ ಇಂಥಾ ಅಮಿಷ ಹಾಕುವ ದೇವರು ಸಣ್ಣವ ಹ್ಯಾಗಾದಾನು? ನೀನೂ ಎಷ್ಟೋ ಆಸೆಬುರುಕರನ್ನು ನೋಡಿರಬೇಕು, ಇಂಥವರನ್ನು ಕಂಡಿದ್ದೀಯೇನಪ್ಪ? ಅದೂ ಎಂಥಾ ಆಸೆ, ಕರುಳಿನ ಕುಡಿ ಕೂಡ ಕಾಣಿಸುವುದಿಲ್ಲವೆಂದರೆ?

ದೇವರು ಯಾವಾಗಲೂ ಕಣ್ಣು ಮುಚ್ಚಿಕೊಂಡಿರುತ್ತಾನೆನ್ನುವುದೂ ತಪ್ಪೇ! ಶಿರಟ್ಟಿಯ ಗೌಡನಿಗೆ ಬೇರೆ ಹೆಂಡತಿಯರೂ ಇದ್ದರು. ಇದು ಅನ್ಯಾಯದ ಮದುವೆಯೆಂದು ಕೋರ್ಟಿನಲ್ಲಿ ನ್ಯಾಯ ಹೂಡಿದರು. ಕೇಸು ಮುಂಬೈ ತನಕ ಹೋಯಿತು. ನಿಕಾಲಿಯಾಗುವುದಕ್ಕೆ ಐದಾರು ವರ್ಷಗ್ಳೇ ಹಿಡಿದವು.ಕೊನೆಗೂ ನಮ್ಮ ಗೌಡನೇ ಕೇಸಿನಲ್ಲಿ ಗೆದ್ದ ಅಂತಿಟ್ಟುಕೋ. ಫೋಟೋದಲ್ಲಿದ್ದ ಮದುವೆಯನ್ನೇ ಜಜ್ಜಿ ಸಾಹೇಬರು ಖರೇ ಮದುವೆಯೆಂದಿದ್ದರು! ಆಸ್ತಿಯೇನೋ ಬಂತು. ಆದರೆ ಅದರ ದುಪ್ಪಟ್ಟು ತಿಪ್ಪಟ್ಟು ಖರ್ಚು ಮಾಡಬೇಕಾಯ್ತು. ಮನೆಯಲ್ಲಿದ್ದ ಚಿನ್ನ ಬೆಳ್ಳಿಯೆಲ್ಲವೂ ಕರಗಿಹೋಯ್ತು. ಸಾಲದ್ದಕ್ಕೆ ಊರಿನ ಹೊಲ ಮನೆಗಳನ್ನೂ ಅಡವಿಡಬೇಕಾಯಿತು.

ಹೆಣಕ್ಕೆ ಮಗಳನ್ನು ಕೊಟ್ಟ ಗೌಡನಿಗೆ ಊರೆಲ್ಲ ಛೀ ಥೂ ಹಾಕಿದರು. ಆದರೆ ಗೌಡನ ಎದುರಿನಲ್ಲಿ ಯಾರೂ ಉಗುಳಲಿಲ್ಲವಲ್ಲ. ಎದುರಿಗೇ ಉಗುಳಿದ್ದರೆನ್ನೋಣ. ಗೌಡನ ಸ್ವಭಾವ ಗೊತ್ತೇ ಇದೆ: ಆತನಿಗೆ ನಾಚಿಕೆಯೆಂಬುದೇ ಇರಲಿಲ್ಲ. ಸಾಲದ್ದಕ್ಕೆ ಅಧಿಕಾರವಿತ್ತು. ದರ್ಪ ಇತ್ತು. ಅಥವಾ ಇದ್ದದ್ದಕ್ಕಿಂತ ಹೆಚ್ಚಾಗಿಯೇ ದರ್ಪ ಉಪಯೋಗಿಸಿ ಸದ್ದಡಗಿಸಬಲ್ಲವನಾಗಿದ್ದ. ಗೌಡನ್ನ ಕಂಡಾಗಂತೂ ನನ್ನ ಮೈಯೆಲ್ಲ, ಉರಿದುರಿದು ಬೀಳುತ್ತಿತ್ತು. ಇಡೀ ಜಗತ್ತಿನಲ್ಲಿ ಅವನಂಥ ಚಂಡಾಲ ಇರೋದು ಸಾಧ್ಯವಿಲ್ಲವೆಂದೇ ನನ್ನ ತೀರ್ಮಾನವಾಗಿತ್ತು. ಮತ್ತು ಅವ ಎಂದು ಸತ್ತಾನೋ ಎಂದು ತಪಿಸುತ್ತ, ಅವ ಸತ್ತ ದಿನ ಹಾಲು ಕುಡಿಯಬೇಕೆಂದೂ ನಿಶ್ಚಯಿಸಿಕೊಂಡಿದ್ದೆ.

ಈ ಮಧ್ಯೆ ನಾನು ಮತ್ತು ಸಿಂಗಾರೆವ್ವ ಇಬ್ಬರೂ ಮೈನೆರೆದು ಹೆಂಗಸರಾಗಿದ್ದೆವು. ಮದುವೆಯಾಗಿ ಬಂದಮೇಲಂತೂ ಸಿಂಗಾರೆವ್ವ ಯಾರೊಂದಿಗೂ, ನನ್ನೊಂದಿಗೂ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಸಾಲೆ ಬಿಟ್ಟಿದ್ದಳು. ಸದಾ ತನ್ನಮ್ಮನ ಕತ್ತಲು ಕೋಣೆಯಲ್ಲೇ ಕೂತಿರುತ್ತಿದ್ದಳು. ಮೈನೆರೆದ ಹುಡುಗಿಯರು ಹುಡುಗಾಟ ಬಿಡುವುದು ಸರ್ವೇಸಾಮಾನ್ಯವಾದರೂ ಸಿಂಗಾರೆವ್ವನ ವಿಷಯ ಹಾಗಿರಲಿಲ್ಲ. ಮದುವೆಯ ಮೊದಲೇ ಅವಳು ವಿಧವೆಯಾಗಿದ್ದಳು. ಹಾಗಂತ ಯಾರನ್ನೂ ದೂರುವ ಪೈಕಿ ಅಲ್ಲ ಅವಳು. ಇದೆಲ್ಲ ಪೂರ್ವ ಜನ್ಮದ ಫಲ ಎಂದು, ಅನುಭವಿಸಿಯೇ ತೀರಬೇಕು ಎಂದು ಅವಳ ಒಟ್ಟು ಧೋರಣೆಯಾಗಿತ್ತು. ಯಾರೇನು ತಪ್ಪಿಸಲಾಗುತ್ತಿತ್ತು? ಅಪ್ಪ ಎಂಬುವನೋ ಮಾಡಬಾರದ್ದನ್ನು ಮಾಡಿ, ಮಾಡಿದ್ದನ್ನು ದಕ್ಕಿಸಿಕೊಳ್ಳುವುದಕ್ಕಾಗಿ ಕೋರ್ಟುಕಛೇರಿ ಅಲೆದಾಡುತ್ತಿದ್ದ. ಹೆಂಗಸರೋ ಬಾಯಿಮಾತ್ರ ಇದ್ದ ಅಬಲೆಯರು. ತಾವು ಬಲ್ಲ ಬೈಗುಳಗಳಲ್ಲಿ ಗೌಡನ್ನ ಕದ್ದು ಶಪಿಸಬಲ್ಲವರು. ಎಶ್ಟು ದಿನ ಅಂತ ಅವರಾದರೂ ಶಪಿಸುತ್ತಾರೆ? ಮೈಗೆ ಒಗ್ಗಿದ ಮೇಲೆ ಅವರೂ ಸುಮ್ಮನಾದರು. ಊರ ಹೆಂಗಸರು, ಗೌಡನಿಲ್ಲದಾಗ ಬಂದು ಸತ್ತವರ ಬಂಧುಗಳನ್ನು ಸಮಾಧಾನ ಮಾಡುವ ಹಾಗೆ ಮಾತಾಡಿಕೊಂಡು ಹೋಗುತ್ತಿದ್ದರು.

ನನಗೊಂದೇ ಸಮಾಧಾನವೆಂದರೆ ಗೌಡನನ್ನು ಮರಪ್ಪ ಇನ್ನಷ್ಟು ತೀವ್ರವಾಗಿ ದ್ವೇಷಿಸುತ್ತಿದ್ದ. ತನ್ನ ಗಡುಸಾದ ದನಿಯಿಂದ ಅಸಹ್ಯ ಬೈಗುಳಗಳನ್ನು ಒಂದೊಂದು ಬೈಗಳನ್ನು ಹಲ್ಲಿನಿಂದ ಕಚ್ಚಿಕಚ್ಚಿ ಉಗುಳಿದಂತೆ ಬೈಯುತ್ತಿದ್ದ. ಕೋಪಿಸಿಕೊಂಡಾಗ ಇವನೆಲ್ಲಿ ಗೌಡನನ್ನು ಕೊಂದು ಹಾಕುತ್ತಾನೋ ಎಂಬಂಥ ಆವೇಶ ಅವನ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಸಿಂಗಾರೆವ್ವನನ್ನು ನೋಡುವುದಕ್ಕಾಗಿ ಅವನೆಷ್ಟೋ ಪ್ರಯತ್ನಪಟ್ಟ. ಆಕೆ ಹಿಂದೆ ಬಯಸುತ್ತಿದ್ದ ಅಪರೂಪದ ಪದಾರ್ಥಗಳನ್ನು ತಂದು ಆಕೆಗೆ ಕೊಡೆಂದು ನನ್ನ ಕೈಗೆ ಕೊಟ್ಟ. ನನಗೆ ಸಿಂಗಾರೆವ್ವನ ಸ್ವಭಾವ ಗೊತ್ತು. ಅವಳ್ಯಾವುದನ್ನೂ ಮುಟ್ಟಲಿಲ್ಲ. ದೀಪ ಮುಟ್ಟಿ ಆಣೆ ಮಾಡಿ “ನಾ ಆಕಿಗೇನೂ ಮಾಡಾಣಿಲ್ಲ, ಆಕೀನೊಮ್ಮಿ ಕೊಟ್ಟಿಗೀ ಹಂತ್ಯಾಕ ಕರಕೊಂಬಾ” ಎಂದು ಅನೇಕ ಸಲ ಅಂಗಲಾಚಿದ. ಅಂದು ರಾತ್ರಿ ನಾನು ಮತ್ತು ಸಿಂಗಾರೆವ್ವ ಅಕ್ಕಪಕ್ಕ ಬೈಲುಕಡೆ ಕೂತಿದ್ದೆವು. ಹೆಂಗಸರ್‍ಯಾರೂ ಬಳಿ ಇರಲಿಲ್ಲವಾದ್ದರಿಂದ ಮರೆಪ್ಪ ಅಂಗಲಾಚಿದ್ದನ್ನು ಹೇಳಿದೆ. ಆಕೆಗೇನು ನೆನಪಾಯಿತೋ. ಬೈಲಕಡೆ ಕೂತವಳು ಹಾಗೇ ಮುಖ ಮುಚ್ಚಿಕೊಂಡು “ನನ್ನ ನಶೀಬ ಏನಾತಽ ಶೀನಿಂಗೀ” ಎಂದು ಸಣ್ಣ ದನಿ ತೆಗೆದು ಅತ್ತೇಬಿಟ್ಟಳು. ಕರಳು ಕತ್ತರಿಸಿದಂತಾಗಿ ನಾನೂ ದನಿ ತೆಗೆದು ಅತ್ತೆ.

ಮನೆಗೆ ವಾಪಸ್ ಬಂದಾಗ ತೊಲೆಬಾಗಿಲ ಬಳಿ, ಚಪ್ಪಲಿ ಕಳೆಯುವಲ್ಲಿ ಮರೆಪ್ಪ ನಿಂತಿದ್ದ. ಇಬ್ಬರೂ ನೋಡಿದೆವು. ಸಿಂಗಾರೆವ್ವ ಏನೇನೂ ತೋರದೆ ಒಳಗೆ ಹೋದಳು. ಅವನು ಉತ್ತರಕ್ಕಾಗಿ ಕಾಯುತ್ತಿದ್ದನೆಂದು ನನಗೆ ಗೊತ್ತು. ಹೋಗಿ ಚರಿಗೆ ತೊಳೆದಿಟ್ಟು, ಕೈಕಾಲಮೇಲೆ ನೀರು ಚೆಲ್ಲಿಕೊಂಡು ಕೊಟ್ಟಿಗೆಗೆ ಬಂದೆ.

ದೀಪದ ಮುಂದೆ ಮರೆಪ್ಪ ಮೊಳಕಾಲಲ್ಲಿ ತಲೆ ಹುದುಗಿ ಕುಂತಿದ್ದ. “ಮರ್‍ಯಾ” ಎಂದೆ. ಮುಖ ಎತ್ತಿ ನೋಡಿದ. ನೋಡಿದರೆ ಕಣ್ಣು ಅತ್ತು ಕೆಂಪಗಾಗಿದ್ದವು. ಈ ಹುಡುಗನ ಮುಂದೆ ಗೌಡ ಲುಚ್ಚಾ ಎನ್ನಿಸಿತು. ಅವನ ಮುಖಭಾವ ನೋಡಿ ಅವನ ಬಗ್ಗೆ ಗೌರವ ಭಾವನೆ ಮೂಡಿತು. ಸುಮ್ಮನೆ ತಿರುಗಿ ಬಂದೆ.

ಈ ಸ್ಥಿತಿ ನಾಕೈದು ವರ್ಷ ಹೀಗೇ ಇತ್ತು. ಈ ಮಧ್ಯೆ ಸಿಂಗಾರೆವ್ವನಂತೂ ನನ್ನ ಸಹವಾಸ ಬಿಟ್ಟುಬಿಟ್ಟಿದ್ದಳು. ಇನ್ನು ಇದ್ದವನು ಮರ್‍ಯಾ ಒಬ್ಬ. ಸಿಂಗಾರೆವ್ವನ ಬಗ್ಗೆ ಮಾತಾಡುವ ನೆಪ ಮಾಡಿಕೊಂಡು ಕದ್ದು ಕದ್ದು ಕೊಟ್ಟಿಗೆಗೆ ಹೋಗುತ್ತಿದ್ದೆ. ಒಂದು ದಿನ ಮರ್‍ಯಾನಿಗೆ ಹೇಳಲೇಬೇಕಾದ ವಿಷಯವಿತ್ತು. ಶಿರಟ್ಟಿಯ ಆಸ್ತಿ ಗೌಡನಂತಾಗಿತ್ತು. ಇತ್ತ ಗೌಡ್ತಿ ಮಗಳ ಏಕಾಂಗಿತನ ಸಹಿಸದೆ ಇನ್ನೊಂದು ಮದುವೆ ಮಾಡುವಂತೆ ಗೌಡನಿಗೆ ಹೇಳಿ ಅತ್ತಿದ್ದಳು, ಅದನ್ನು ಕೇಳಿ ನನ್ನ ಗೆಳತಿಯೂ ಅತ್ತಿದ್ದಳು. ಮರ್‍ಯಾ ಯಾವಾಗ ಬಂದಾನೋ ಯಾವಾಗ ಇದನ್ನೆಲ್ಲಾ ಹೇಳೇನೋ ಎಂದು ತವಕಿಸುತ್ತಿದ್ದೆ. ಕೊನೆಗೊಮ್ಮೆ ಮರ್‍ಯಾ ತೋಟದಿಂದ ಬಂದ.

ಕೊಟ್ಟಿಗೆಯಲ್ಲಿ ಎತ್ತುಕಟ್ಟಿ ಮೇವು ಕೊರೆದು ಹಾಕಿದ್ದ. ನಾನು ಹೋದೆ. ದೀಪ ಹಚ್ಚುವುದಕ್ಕೆ ಕಡ್ಡೀಪೆಟ್ಟಿಗೆ ತೆಗೆದು ಕೊರೆಯಬೇಕೆಂದಿದ್ದ. ನಾನು ಅವನ ಪಕ್ಕಕ್ಕೇ ಹಾರಿ ಅವನ ಕಿವಿಯ ಬಳಿ ಬಾಯಿ ತಂದು ನಡೆದುದ್ದನ್ನೆಲ್ಲ ಹೇಳಿದೆ. ಹೇಳುತ್ತ ಹೋದಂತೆ ಈತ, ಆ ದಿನ ಸಿಂಗಾರೆವ್ವನನ್ನು ಹಿಡಿದು ಕೆನ್ನೆ ಕಚ್ಚಿದ ಹಾಗೆ ನನಗೂ ಮಾಡಿದರೇನು ಗತಿ ಎಂದುಕೊಂಡೆ. ಮೈ ಝುಂ ಎಂದಿತು. ನನ್ನ ಎದೆ ಅವನ ಬೆನ್ನಿಗೆ ತಾಕುತ್ತಿತ್ತು. ಅವನ ಬೆನ್ನಿಗೇನಾದರೂ ಬುದ್ಧಿ ಇದ್ದಿದ್ದರೆ ನನ್ನ ಎದೆ ಹ್ಯಾಗೆ ಹಾರಿಹಾರಿ ಅದನ್ನರಿಯುತ್ತಿತ್ತು ಎಂದು ತಿಳಿಯಬಹುದಾಗಿತ್ತು. ಹಾಗೇನಾದರೂ ಅವನು ಕೆನ್ನೆ ಕಚ್ಚಿದರೆ…..ಕಚ್ಚಲೆಂದೇ ಅಂದುಕೊಂಡೆ. ಅಯ್ಯೋ ಇವನ್ಯಾಕೆ ಕಚ್ಚುತ್ತಿಲ್ಲ ಎಂದೂ ಅನ್ನಿಸಿತು. ನನ್ನ ಬಿಸಿ ಉಸಿರಾಟ ನನಗೇ ಕೇಳಿಸುತ್ತಿತ್ತು. ಮುಂದೆ ಬಂದು ಅವನ ಕೈ ಹಿಡಿದುಕೊಂಡೆ. ಹಸೀ ಮರದ ಹಾಗೆ ತಂಪಾಗಿತ್ತು. ಆತನಿಗೂ ಗೊತ್ತಾಗಿ ಹೋಯಿತೋ ಏನೋ, ಕಡ್ಡೀಗೀರಿ ನನ್ನ ಮುಖಕ್ಕೇ ಅದರ ಉರಿ ಹಿಡಿದ. ಅವನ ಕಣ್ಣಲ್ಲಿ ಎರಡು ಕೊಳ್ಳಿ ಕಂಡವು. ನನ್ನ ಉಸಿರಿಂದ ಅದು ಆರಿತೋ, ಅಥವಾ ಊದಿ ಆರಿಸಿದನೋ ಅಂತೂ ಕಡ್ಡಿ ಆರಿತು. ಹಾಗೇ ಅವನ ಕೈಹಿಡಿದುಕೊಂಡು ನನ್ನ ಎದೆಗೆ ಒತ್ತಿಕೊಂಡೆ. ಅವನು “ಥೂ ಹಾದರಗಿತ್ತೇ” ಎಂದು ಹೇಳಿ, ನನ್ನನ್ನ ದೂಕಿ ಇನ್ನೊಂದು ಕಡ್ಡಿ ಕೊರೆದು ದೀಪ ಹಚ್ಚಿದ ಅಲ್ಲಿ ನಿಲ್ಲದೆ ನಾನು ಓಡಿ ಓಡಿ ಬಂದೆ.

ಬಂದ ಮೇಲೆ ನನಗೆ ನಾಚಿಕೆಯಾಯಿತು. ಒಬ್ಬರ ಬಾಯಿಂದ ಹಾದರಗಿತ್ತೆ ಎಂದು ಅನ್ನಿಸಿಕೊಳ್ಳುವುದು ನನಗೆ ಅಗ್ಗದೀ ಮಾತು. ಆದರೆ ಅದೇನು ಒತ್ತಡವೋ ಆ ಗಳಿಗೆಯಲ್ಲಿ ಹಾಗಾಗಿದ್ದೆ. ಆದರೆ ನಡೆದದ್ದನ್ನು ಬೈಲ ಕಡೆ ಹೋದಾಗ, ಸಿಂಗಾರೆವ್ವ ಒಂಟಿಯಾಗಿ ಸಿಕ್ಕಿದಾಗಲೂ ಹೇಳಲಿಲ್ಲ. ಅಥವಾ ಅವಳೆದುರಿದ್ದಾಗ ಈ ಘಟನೆ ನೆನಪಾದರೆ ಮನಸ್ಸು ಹುಳ್ಳಗಾಗುತ್ತಿತ್ತು. ಒಂದು ಧೈರ್ಯವೆಂದರೆ ಮರೆಪ್ಪ ಇದನ್ನು ಬೇರೆಯವರ ಮುಂದೆ ಆಡಿಕೊಂಬುವವನಲ್ಲ ಎಂಬುದೇ.

ಸಿಂಗಾರೆವ್ವನ ಮರುಮದುವೆಯ ಬಗ್ಗೆ ಮನೆಯಲ್ಲಿ ವಾದವಿವಾದ ಎದ್ದಿತ್ತು. ಕೋರ್ಟಿನಲ್ಲಿ ಕೇಸು ಗೆಲ್ಲುವುದಕ್ಕಾಗಿ ತನ್ನ ಆಸ್ತಿ ಕರಗಿದ್ದೋ, ಸಿಂಗಾರೆವ್ವನ ಬಗೆಗಿನ ಕರುಣೆಯೋ ಕಾರಣವಾಗಿ ಗೌಡ ಕರಗಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಮನೆಯಲ್ಲಿ ಶಿವಾಪುರ ದೇಸಾಯರ ವರ್ಣನೆ ಮಾಡಿದ. ಒಬ್ಬನೇ ಹುಡುಗನೆಂದೂ, ಅತ್ತೆಯೊಬ್ಬಳನ್ನು ಬಿಟ್ಟು ಮನೆಯಲ್ಲಿ ಇನ್ಯಾರೂ ಇಲ್ಲವೆಂದೂ, ಅಂಥಾ ದೊಡ್ಡ ಅರಮನೆಗೆ ಸಿಂಗಾರೆವ್ವನೇ ದೊರೆಸಾನಿಯೆಂದೂ ಬಾಯಿತುಂಬಾ ಹೇಳಿದ. ಗೌಡ್ತಿ ಈ ಮಾತು ಕೇಳಿ “ಈ ಸಲ ಆದರೂ ಮದಿವ್ಯಾಗೂ ಮುನ್ನ ಸತ್ತಿರೋದಿಲ್ಲ, ಹೌಂದಲ್ಲೊ?” ಎಂದು ಕೇಳಿದಳು. ಅದು ಅವಳ ಸಂಕಟದ ಮಾತು. ಅಮಂಗಲ ಆಡಬೇಡವೆಂದೂ ಹುಡುಗ ಚೆನ್ನಾಗಿದ್ದಾನೆಂದೂ ಗೌಡನೇ ಹೇಳಬೇಕಾಯಿತು. ಅದರ ಮಾರನೇ ದಿನವೇ ಮರ್‍ಯಾ ತನ್ನ ತಾಯಿಯನ್ನು ಕೊಂದು ಪರಾರಿಯಾದ.

ಈ ತನಕ ನಾನು ಸ್ವಾಭಾವಿಕವಾಗಿ ಸತ್ತವರ ಹೆಣ ಕಂಡವಳೇ ಹೊರತು ಖೂನಿಯಾದ ಹೆಣಗಳನ್ನಲ್ಲ. ಎಷ್ಟು ಭಯಾನಕವಾಗಿತ್ತಪ್ಪ ಅದು! ನೆನೆದರೀಗಲೂ ಕಣ್ಣಿಗೆ ಕಟ್ಟುತ್ತದೆ. ಯಾರಂತ ನೆನಪಿಲ್ಲ, ಆ ದಿನ ಊರೊಳಕ್ಕೆ ಹೋಗಿದ್ದೆ. ತಿರುಗಿ ಬರುತ್ತಿರುವಾಗ ಗದ್ದಲ ಕೇಳಿಸಿತು, ಮರ್‍ಯಾ ತನ್ನ ತಾಯಿಯನ್ನು ಕೊಂದನಲ್ಲ,-ಕೊಂದು ಓಡಿಹೋದನೆ? ಪುಣ್ಯಾತ್ಮ ಹೆಣ ಹೊತ್ತುಕೊಂಡು ಊರೊಳಕ್ಕೇ ಬಂದನೇ! ಚಾವಡೀತನಕ ಹೆಗಲಮೇಲೆ ಅವಳ ಹೆಣ ಹೊತ್ತುಕೊಂಡು ಬಂದದ್ದನ್ನು ಸೊಥಾ ನಾನೇ ಕಣ್ಣಾರೆ ಕಂಡಿದ್ದೇನೆ. ರಸ್ತೆ ತುಂಬ ಜನ ಸೇರಿದ್ದರು. ಅವನ ಮೈತುಂಬ ನೆತ್ತರು ಸೋರ್‍ಯಾಡುತ್ತಿತ್ತು. ಕಣ್ಣು ಕೆಂಪಗೆ ಮಾಡಿಕೊಂಡು ರೌದ್ರಾವೇಶ ತಾಳಿದ್ದ. “ಆ ಗೌಡ ಸೂಳೀಮಗ ಎಲ್ಲಿದ್ದರೂ ಬಿಡಾಣಿಲ್ಲ”ಎಂದು ಮರ್‍ಯಾ ಗುಡುಗಿ ಹೆಣವನ್ನು ಚಾವಡಿಯಲ್ಲಿ ಚೆಲ್ಲಿ ಗೌಡನ ಮನೇ ಕಡೆ ಓಡಿದ. ಓಡಿದಾಗ ಇನ್ನೇನು ಗೌಡ ಸತ್ತನೆಂದೇ ತಿಳಿದು ಗಡಗಡ ತೊಡೆ ನಡುಗಿ ನಡೆಯಲಾರದವಳಾಗಿದ್ದೆ. ಅಷ್ಟು ಜನ ಸೇರಿದ್ದರಲ್ಲ, ಒಬ್ಬರೂ ಮರ್‍ಯಾನನ್ನು ಹಿಡಿಯಲಾಗಲಿಲ್ಲ. ಅವನು ಗೌಡನ ಮನೇಕಡೆ ಓಡಿದಾಗ ದೂರದಿಂದ ಎಲ್ಲರೂ ಅವನ ಬೆನ್ನು ಹತ್ತಿದರೇ ವಿನಾ ಒಂದೂ ಮಾತಾಡಲಿಲ್ಲ. ಜನ ಅಷ್ಟು ಗಾಬರಿಯಾಗಿದ್ದರು. ಅವನ ತಾಯಿಗಾಗಿ ಹೆಂಗಸರು ಮಕ್ಕಳು ಕಣ್ಣೀರು ಸುರಿಸಿದರೇ ಹೊರತು ದನಿಮಾಡಿ ಅಳುವ ಧೈರ್ಯ ಮಾಡಲಿಲ್ಲ. ಒಬ್ಬಿಬ್ಬರು ಕಿರಿಚಿದರಷ್ಟೆ. ಆದರೆ ಮರ್‍ಯಾನ ಚೂರೀ ದೃಷ್ಟಿ ಈ ಕಡೆ ತಿರುಗಿದೊಡನೆ ಹೆಣ್ಣುನಾಯಿಗಳ ಹಾಗೆ ಒಂದೆರಡು ಬಾರಿ ಕುಂಯ್‌ಗುಟ್ಟಿ ಸುಮ್ಮನಾದರಷ್ಟೆ. ಜನ ಆತನ ಹಿಂದೆ ಓಡಿದರಲ್ಲ, ನನಗೆ ಸಾಧ್ಯವಾಗಲಿಲ್ಲ. ಪಕ್ಕದ ಮನೆಯ ಕಟ್ಟೆಯ ಮೇಲೆ ಕುಸಿದುಬಿಟ್ಟೆ. ಸಾವರಿಸಿಕೊಂಡು ವಾಡೆಗೆ ಬಂದಾಗ ಮರ್‍ಯಾ ಆಗಲೇ ಪರಾರಿಯಾಗಿದ್ದ.

ವಾಡೆಗೆ ಹೋದರೆ ತೊಲೆಬಾಗಿಲು ಭದ್ರಮಾಡಿ ಒಳಗಿನಿಂದ ಅಗಳಿ ಜಡಿದು ಬಿಟ್ಟಿದ್ದರು. ಹೀಗಾಗಿ ಅದು ತೆಗೆಯುವತನಕ ನಾನು ಹೊರಗೇ ಕಾಯಬೇಕಾಯಿತು. ಅಲ್ಲೂ ಜನ ಸೇರಿದ್ದರು. ತಂತಮ್ಮಲ್ಲಿ ಪಿಸುಗುಡುತ್ತಿದ್ದರೇ ಹೊರತು ದನಿ ಮಾಡಿ ಯಾರೂ ಮಾತಾಡುತ್ತಿರಲಿಲ್ಲ. ಹಿಂಡನಗಲಿದ ಕರುವಿನಂತೆ, ಯಾರಾದರೂ ನನ್ನನ್ನು ನನ್ನ ಬಳಗ ಸೇರಿಸುವಿರಾ, ಎಂಬಂತೆ-ಅವರಿವರ ಮುಖಗಳನ್ನು ಪಿಳಿಪಿಳಿ ನೋಡುತ್ತ ಅಳಲಾರದೆ ಅಳುತ್ತ ನಿಂತೆ. ನನ್ನ ಬಗ್ಗೆ ಯಾರೂ ಕಾಳಜಿ ತೋರಿಸಲಿಲ್ಲ. ಅಳೋಣವೆನ್ನಿಸುತ್ತಿತ್ತು ದನಿಮಾಡಿ. ಆದರೆ ಅಲ್ಲಿದ್ದ ಮೌನ ಅದಕ್ಕೆ ಅನುಕೂಲವಾಗಿರಲಿಲ್ಲ. ಬಹಳ ಹೊತ್ತಾದ ಮೇಲೆ ಕುಲಕರ್ಣಿ ಬಂದ. ಮರ್‍ಯಾ ಪರಾರಿಯಾಗಿದ್ದಾನೆಂದೂ ಬಾಗಿಲು ತೆರೆಯಬೇಕೆಂದೂ ಆತ ವಾಡೆಯ ತೊಲೆ ಬಾಗಿಲಲ್ಲಿ ನಿಂತು ಅನೇಕ ಬಾರಿ ಕೂಗಿದ. ತೆರೆಯಿತು. ಕುಲಕರ್ಣಿ ಜೊತೆಗೇ ನಾನೂ ಒಳಗೆ ನುಗ್ಗಿದೆ.

ಒಳಗೆ ನೋಡಿದರೆ ಗೌಡನ ಮನೆಯವರೆಲ್ಲ ಎಷ್ಟು ಗಾಬರಿಯಾಗಿದ್ದರು ಶಿವನೆ! ಹೆಂಗಸರೆಲ್ಲ ನಡುಮನೆಯ ಒಂದು ಮೂಲೆಯಲ್ಲಿ ಕೂಡುಬಿದ್ದಿದ್ದರು. ಅವರ ನಡುವೆ ಸಿಂಗಾರೆವ್ವ ಇದ್ದಳು. ನಾನು ಅವರಲ್ಲಿ ಇಲ್ಲದ್ದನ್ನಾಗಲೀ, ಈಗ ಬಂದು ಸೇರಿಕೊಂಡದ್ದನ್ನಾಗಲೀ ಯಾರೂ ಗಮನಿಸಲೇ ಇಲ್ಲ. ಯಾವಾಗ ಮರ್‍ಯಾ ನುಗ್ಗಿ ಗೌಡನ ಖೂನಿ ಮಾಡುತ್ತಾನೋ ಎಂದು ಅವರೆಲ್ಲ ತಂತಮ್ಮ ಜೀವಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಒದರಲಾರದೆ, ಅಳಲಾರದೆ, ಗಪ್‌ಚಿಪ್ ಕೂತಿದ್ದರು. ಗೌಡನನ್ನು ದೇವರ ಕೋಣೆಯಲ್ಲಿ ಅಡಗಿಸಿ ಕೀಲಿ ಹಾಕಿದ್ದರು. ಕುಲಕರ್ಣಿ ಬಂದದ್ದರಿಂದ ಕೀಲೀ ತೆಗೆಸಿ ಗೌಡ ಹೊರಬಂದ. ಆಗಲೂ ಆತ ಜೋರಿನಿಂದ ಮಾತಾಡಲಿಲ್ಲ. ಕುಲಕರ್ಣಿ ಜೊತೆ ಹೊರಗೆ ಹೋದ. ಹೋಗುವಾಗ ಈ ಸಲ ಗೌಡ ತನ್ನ ಬಂದೂಕನ್ನೂ ಜೊತೆಗೊಯ್ದ.

ಖೂನಿ ಹ್ಯಾಗಾಯ್ತೆಂದು. ಗೌಡ ಹ್ಯಾಗೆ ಪಾರಾದನೆಂದು ನನಗೆ ಆಮೇಲೆ ತಿಳಿಯಿತು. ಗೌಡ ಮರೆಪ್ಪನ ತಾಯಿಯನ್ನು ಇಟ್ಟುಕೊಂಡಿದ್ದ ನಿಜ. ಅದು ಮರ್‍ಯಾನಿಗೆ ಗೊತ್ತಾಗಿ, ಇಂಥ ಸಲುಗೆ ಸಲ್ಲದೆಂದು ಅನೇಕ ಬಾರಿ ತಾಯಿಗೆ ತಾಕೀತು ಮಾಡಿದ್ದ. ಆ ಬಗ್ಗೆ ಅವಳಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದ. ಸಾಲದ್ದಕ್ಕೆ ಗೌಡ ಮರ್‍ಯಾನ ಹೊಲವನ್ನೂ ಆಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದ. ಇದೇ ನೆಪ ಮಾಡಿಕೊಂಡು ಗೌಡ ಮರ್‍ಯಾನನ್ನು ಹೊರಗಟ್ಟಬಹುದಿತ್ತು. ಆದರೆ ಅವನಿಗೆ ಮರ್‍ಯಾನ ತಾಯಿಯೂ ಬೇಕಿದ್ದಳು. ಜೊತೆಗೆ ಮರ್‍ಯಾ ಹುಂಬ ಬೇರೆ. ಅವನನ್ನು ಉಪಾಯದಿಂದ ನಿವಾರಿಸಬೇಕಿತ್ತು. ಅದಕ್ಕಾಗಿ ಗೌಡ ಕಾಯುತ್ತಿದ್ದ. ಆದರೆ ಅದು ಆದದ್ದೇ ಬೇರೆ.

ಆದಿನ ಅವರಿಬ್ಬರೂ ಜೋಳದ ಹೊಲದಲ್ಲಿ ಆಸುಪಾಸು ಯಾರಿಲ್ಲವೆಂದು ಖಾತ್ರಿ ಮಾಡಿಕೊಂಡು ಸೇರಿದರು. ಏನು ಮಾಡುವುದು, ಅವಳ ದಿನ ಮುಗಿದು ಬಂದಿದ್ದವು. ಮರ್‍ಯಾ ಇದನ್ನು ಕಂಡ. ಚೂಪುಗೊಡಲಿ ಹಿಡಿದು ಆವೇಶದಿಂದ ಅವರಿದ್ದಲ್ಲಿಗೇ ನುಗ್ಗಿದ. ಗರಿಯ ಸಪ್ಪಳಕ್ಕೆ ಗೌಡ ಎಚ್ಚರಗೊಂಡು ಸತ್ತೆನೋ ಬದುಕಿದೆನೋ ಎಂದು ವಾರೆಯಾಗಿ ಬೀಳಲಿದ್ದ ಏಟಿನಿಂದ ಪಾರಾದ. ಅಂಗಾತ ಬಿದ್ದಿದ್ದ ಇವನ ತಾಯಿ ಎದ್ದೇಳುವಷ್ಟರಲ್ಲಿ ಅವಳ ಹೊಟ್ಟೆಗೇ ಏಟು ಬಿತ್ತು. ಗೌಡ ಸತ್ತು ಕೆಟ್ಟು ಓಡಿಬಂದ. ತಾಯಿ ಹಾ ಎಂದು ಹಾಗೇ ಕೆಡೆದಳು. ಮರ್‍ಯಾ ಓಡ್ಯೋಡಿ ಗೌಡನನ್ನು ಹುಡುಕಿದ. ಸಿಕ್ಕಲಿಲ್ಲ. ಆಮೇಲೆ ನೋಡಿಕೊಂಡರಾಯ್ತೆಂದು ಬಂದು ಹೆಣವನ್ನು ಹೆಗಲಮೇಲೆ ಹೊತ್ತುಕೊಂಡು ಚಾವಡಿಗೆ ಬಂದ. ಮುಂದಿನದು ನಿನಗೆ ಗೊತ್ತೇ ಇದೆ.

ನಾನೆಷ್ಟೋ ಖೂನಿ ನೋಡಿದ್ದೇನೆ, ಹೆಣ ನೋಡಿದ್ದೇನೆ, ಇದರಂಥಾದ್ದನ್ನು ನೋಡಲೇ ಇಲ್ಲ ಬಿಡು. ಹೆಣದ ಕರುಳು ಹೊರಬಂದು ಹೊಟ್ಟೆಗಂಟಿ ನೇತಾಡುತ್ತಿತ್ತು. ನನಗೆ ಎಂಟೆಂಟು ದಿನ ಊಟ ಮಾಡಲಾಗಲಿಲ್ಲ. ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಮಲಗಿದರಾಯ್ತು, ಆ ಹೆಣವೇ ಎದುರು ಬಂದು ತಬ್ಬಿಕೊಳ್ಳಲು ಹಾತೊರೆದ ಹಾಗಿರುತ್ತಿತ್ತು. ರಾತ್ರಿ ಬೈಲ ಕಡೆ ಹೋಗೋದನ್ನು ನಿಲ್ಲಿಸಿದೆ. ಒಂದ ಮಾಡಹೋದಾಗಂತೂ ಹೇಳುವುದೇ ಬೇಡ, ಇನ್ನೇನು ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾಳೆಂದು ಪ್ರತಿ ಗಳಿಗೆಯೂ ಅನ್ನಿಸುತ್ತಿತ್ತು. ನಾಕೆಂಟು ಬಾರಿ ಆ ಹೆಣ ಕನಸಿನಲ್ಲೂ ಬಂದು ಹೆದರಿಸಿತ್ತು. ಅದಾಗಲೇ ದೆವ್ವವಾಗಿ ಊರ ತುಂಬ ಅಳುತ್ತ ಅಲೆಯುವುದು ನನಗೆ ಗೊತ್ತಾಗಿತ್ತು. ಅಮಾವಾಸ್ಯೆಯ ರಾತ್ರಿ ಅದು ನಮ್ಮ ಮನೆಯ ತೊಲೆ ಬಾಗಿಲಲ್ಲಿ ನಿಂತು “ಗೌಡಾ ಗೌಡಾಽಽ!” ಎಂದು ನರಳಿದ್ದನ್ನು ನಾನೇ ಕಿವಿಯಾರೆ ಕೇಳಿದ್ದೇನೆ.

ಇಡೀ ತಿಂಗಳು ಊರ ಬಾಯೊಳಗೆಲ್ಲ ಮರ್‍ಯಾನ ಮಾತೇ ಮಾತು. ಆತ ತಾಯಿಯ ಖೂನಿ ಮಾಡಿದ್ದು ಅನೇಕರಿಗೆ ಸರಿಬಂದಿರಲಿಲ್ಲ, ನನಗೂ. ತಾಯಿ ತಪ್ಪು ಮಾಡಿದಳೆಂದೇ ಇಟ್ಟುಕೊಳ್ಳೋಣ. ಆದರೂ ಮಗನಾದವನು ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿಯನ್ನ ಖೂನಿ ಮಾಡುವುದು ದೇವರು ಒಪ್ಪದ ಮಾತು. ಆದರೇನು ಅವ ಎಲ್ಲರ ಕಣ್ಣಲ್ಲಿ ಧೀರನಾಗಿಬಿಟ್ಟಿದ್ದ. ಇಡೀ ಊರಿನಲ್ಲಿ ಒಬ್ಬನಾದರೂ ಅವನೆದುರು ನಿಲ್ಲುವಂಥ ಧೈರ್ಯ ತೋರಿರಲಿಲ್ಲ. ಹೋಗಲಿ, ಹಾಡಾಹಗಲಲ್ಲಿ ಇಡೀ ವಾಡೆ ತೊಲೆಬಾಗಿಲು ಮುಚ್ಚಿಕೊಳ್ಳುವ ಹಾಗೆ ಮಾಡಿದ್ದನಲ್ಲ, ಅದೇನು ಸಣ್ಣ ಮಾತೆ? ಗೌಡನಂಥ ಗೌಡ ಗಡಗಡ ನಡುಗಿ ಹೆಣ್ಣುನಾಯಿಯ ಹಾಗೆ ಅವಿತುಕೊಂಡಿದ್ದನೆಂದರೆ! ಮರ್‍ಯಾ ಯಾವಾಗ ಪ್ರತ್ಯಕ್ಷನಾಗಿ ತನ್ನನ್ನು ಮುಗಿಸುತ್ತಾನೆಂದು ಗೌಡನಿಗೆ ಖಾತ್ರಿಯಿರಲಿಲ್ಲ. ಆಮೇಲೆ ಕೂಡ ಗೌಡ ಶಿರಟ್ಟಿಯ ಆರೇಳು ಪೈಲ್ವಾನರನ್ನು ಕರೆಸಿ ಅವರ ಮಧ್ಯದಲ್ಲಿದ್ದುಕೊಂಡೇ ಹೊರಗೆ ಅಡ್ಡಾಡುತ್ತಿದ್ದ. ಬಂದೂಕಿಲ್ಲದೆ ಬೈಲಕಡೆ ಕೂಡ ಹೋಗುತ್ತಿರಲಿಲ್ಲ ಅಂತೀನಿ! ಇದರ ಮೇಲೆ ಅವ ಎಷ್ಟು ಹೆದರಿದ್ದ ಅಂತ ಅಂದಾಜು ಮಾಡಿಕೊ! ಆದರೆ ಗೌಡನ ಸ್ವಭಾವ ಗೊತ್ತೇ ಇದೆ; ಅವ ನರಿಯಂಥವನು. ಹ್ಯಾಗೋ ಪತ್ತೆ ಮಾಡಿ ಪೋಲೀಸರಿಂದ ಮರ್‍ಯಾನನ್ನು ಹಿಡಿಸಿಯೇ ಬಿಟ್ಟ. ಕೇಸೂ ಆಯಿತು. ಸುದೈವದಿಂದ ಮರ್‍ಯಾನಿಗಿನ್ನೂ ಹದಿನೆಂಟು ವರ್ಷ ತುಂಬಿರಲಿಲ್ಲ. ಜಜ್ಜ ಸಾಹೇಬ ಅದೇ ಆಧಾರದ ಮೇಲೆ ಕೇಸು ಖುಲಾಸೆ ಮಾಡಿಬಿಟ್ಟ. ಆಮೇಲೆ ಮರೆಪ್ಪ ಮಾತ್ರ ಊರಿಗೆ ಹಿಂದಿರುಗಲೇ ಇಲ್ಲ. ಗೌಡ ಪೈಲವಾನರಿಂದ ಕೊಲ್ಲಿಸಿದನೆಂದೂ ಕೆಲವರು ಹೇಳಿದರು. ಖರೆಯೆಷ್ಟೋ ಸುಳ್ಳೆಷ್ಟೋ ಎಂದು ಸುಮ್ಮನಾದೆವು. ಮರೆಪ್ಪ ಮರೆಯಾದನೆಂದು ಖಾತ್ರಿಯಾದಾಗ ಅಪ್ಪಾಸಾಬ ದೇಸಾಯರ ಜೊತೆ ಸಿಂಗಾರೆವ್ವನ ಮದುವೆಯಾಯಿತು.”

-ಎಂದು ಹೇಳಿ ಕಥೆಯ ಒಂದು ಭಾಗ ಮುಗಿಯಿತೆಂಬಂತೆ ಶೀನಿಂಗವ್ವ ತನ್ನ ನಿರೂಪಣೆಗೆ ವಿಶ್ರಾಂತಿ ಕೊಟ್ಟಳು. ನನಗೆ ಈ ಮದುವೆಯ ಬಗ್ಗೆಯೂ ಅನುಮಾನಗಳಿದ್ದವು. ಅಪ್ಪಾಸಾಬ ದೇಸಾಯಿ ನಾನು ಕಂಡಂತೆ ರೋಗಿಷ್ಟ. ಬ್ಲಡ್‌ಪ್ರೆಷರ್ ಮತ್ತು ಮೂರ್ಛೆರೋಗ ಇತ್ತು. ಸಿಂಗಾರೆವ್ವ ಮಹಾಚೆಲುವೆ. ಮೇಲಾಗಿ ಗೌಡನ ಒಬ್ಬಳೇ ಮಗಳು. ಹೀಗಿದ್ದೂ ಅವಳು ಇಂಥವನನ್ನು ಮದುವೆಯಾಗಲು ಒಪ್ಪಿದಳೇ?-ಎಂದು ಕೇಳಿದೆ.

“ಮಾಡ್ಕೋತೀನಿ, ಬಿಡತೀನಿ ಅಂತ ಹೇಳಾಕ ಹೆಂಗಸರಿಗೆ ಅಧಿಕಾರ ಎಲ್ಲಿದಪ? ಅಷ್ಟಾಗಿ ಗಂಡಸರು ಇವರ ಮನಸಿನಾಗ ಏನೈತಿ ಅಂತ ಕೇಳಿದರಲ್ಲೇನ ಹೇಳೋದು? ಸಿಂಗಾರೆವ್ವನ ಸೊಭಾನವೂ ಹಂಗಽ ಅಂತಿಟ್ಟಕ. ಮೊದಲನೇ ಮದಿವ್ಯಾಗಽ ಬಾಯಿ ಕಳಕೊಂಡಿದ್ದಳು. ಹೆಚ್ಚು ಮಾತಾಡುತ್ತಿರಲಿಲ್ಲ. ಹಾ ಅಂದರ ಹಾ; ಹೂ ಅಂದರ ಹೂ. ಎಷ್ಟು ಬೇಕೋ ಅಷ್ಟ.”
“ಅಲ್ಲಬೇ, ಗೌಡಗಾದರೂ ದೇಸಾಯಿ ರೋಗಿಷ್ಟನ್ನೋದ ತಿಳೀಬಾರದ? ತಿಳಿದೂ ಮಗಳ್ನ ಇಂಥವನ ಕೊರಳಿಗಿ ಕಟ್ಟೋದಂದರ…?
-ಎಂದು ನನ್ನ ಸಂಶಯ ತೋಡಿಕೊಂಡೆ. ಮುದಿಕಿ ಸುಸ್ತಾಗಿದ್ದಳು. “ನಾಳೆ ಬಾ, ಎಲ್ಲಾ ಹೇಳತೀನಿ” ಅಂದಳು. ಆಗಲೇ ಊರ ಜನ ಉಂಡು ಮಲಗುತ್ತಿದ್ದರು. ನಾನೂ ಮತ್ತು ಶಿರಸೈಲ ಮನೇಕಡೆ ಬಂದೆವು.

ಐದು

ಮಾರನೇ ದಿನ ತುಸು ಬೇಗನೇ ಹೋದೆವು. ಈ ಮೊದಲೇ ಶೀನಿಗವ್ವನಿಗೆ ಹರಕೆ ತಲುಪಿಸಿದ್ದಾಗಿತ್ತು. ನಿನ್ನೆಗಿಂತ ಈದಿನ ಹೆಚ್ಚು ಹುರುಪಿನಲ್ಲಿದ್ದಳು. ಹೋದ ತಕ್ಷಣ ಕಥೆ ಸುರುಮಾಡಲಿಕ್ಕಾಗುವುದಿಲ್ಲವಲ್ಲ, ಆ ಈ ಮಾತಾಡುತ್ತ ನಾನು ದೇಸಾಯಿಯನ್ನು ನೋಡಿದ್ದಾಗಿ ಹೇಳಿ ಅವನ ವರ್ಣನೆ ಮಾಡಿದೆ. ಅವಳೂ ಒಂದಷ್ಟು ವಿಷಯ ಹೇಲಿದಳು. ಕೊನೆಗೆ ಆತನ ಸ್ವಭಾವವನ್ನು ನಾನು ಭಾಗಶಃ ಸರಿಯಾಗಿ ತಿಳಿದಿದ್ದೇನೆಂದು ಒಪ್ಪಿಕೊಂಡಳು. ಇಲ್ಲಿ ವಾಚಕರ ಕ್ಷಮೆ ಕೋರಿ, ಅವಳ ಕಥೆ ತುಸು ನಿಲ್ಲಿಸಿ ಸಿಂಗಾರೆವ್ವನ ಎರಡನೇ ಗಂಡನಾದ ಅಪ್ಪಾಸಾಬ ದೇಸಾಯಿಯ ಉರ್ಫ್ ಸರಗಂ ದೇಸಾಯಿಯ ‘ಭಾಗಶಃ’ ಪರಿಚಯ ಮಾಡಿಕೊಡುತ್ತೇನೆ.

ಚಿಕ್ಕವನಿದ್ದಾಗ ನಾನು ಅವನನ್ನು ಕಂಡಿದ್ದೆ. ಒಂದೇ ಮಾತಿನಲ್ಲಿ ವರ್ಣಿಸಬೇಕೆಂದರೆ ಒಟ್ಟಾರೆ ವಾತಾವರಣದಲ್ಲಿ ಅವನೊಬ್ಬ ಮಿಸ್‌ಫಿಟ್ ಆಗಿದ್ದ. ಸಜ್ಜನನೇ, ಆದರೆ ಆತನಲ್ಲಿ ಹೇಳಿಕೊಳ್ಳುವಂಥ ದೋಷಗಳೂ ಇದ್ದವು. ಶೀನಿಂಗವ್ವ ಹೇಳುವ ಹಾಗೆ ಅವನು ಜನರನ್ನು ಅತಿಯಾಗಿ ನಂಬುತ್ತಿದ್ದ. ಮಿತಿಮೀರಿ ಧಾರಾಳಿಯಾಗಿದ್ದ. ಇವು ನನ್ನ ಪ್ರಕಾರ ದೋಷಗಳೇ ಅಲ್ಲ. ಆತನ ಶರೀರ ಸಣಕಲಾಗಿದ್ದರೂ, ಗಂಭೀರವಾಗಿರುತ್ತಿದ್ದ. ಆದರೆ ಬಯಲಾಟದ ರಿಹರ್ಸಲ್ ಮಾಡುವಾಗ ಮಾತ್ರ ಭಾರೀ ಹಾಸ್ಯಾಸ್ಪದನಾಗಿ ಕಾಣುತ್ತಿದ್ದ. ಆಗ ಮಾತ್ರ ಯಾವುದು ಲಘು ಯಾವುದು ಗಂಭೀರ ಎನ್ನುವುದನ್ನು ನಿರ್ಧರಿಸಲು ಅಸಮರ್ಥನಾಗುತ್ತಿದ್ದ. ಇಂಥ ಇನ್ನೂ ಎರಡು ಸಂದರ್ಭಗಳಿವೆ. ಅವನ್ನು ಮುಂದೆ ಶೀನಿಂಗವ್ವ ಹೇಳುತ್ತಾಳೆ.

ಅವನಿಗೆ ಬಯಲಾಟದ ಭಾರೀ ಖಯಾಲಿ ಇದ್ದಿತಲ್ಲ, ಹಾಡಬೇಕಾದಾಗ ಪ್ರತಿ ಆರಂಭವನ್ನು “ಸರಿಗಮ ಪದನಿಸ ಸನಿದಪ ಮಗರಿಸ”ಎಂದು ಹೇಳಿ ಸುರುಮಾಡುತ್ತಿದ್ದ. ಅದಕ್ಕೇ ಅವನಿಗೆ ಆ ಹೆಸರು ಬಂದದ್ದು. ಅವನ ಹೆಸರಿದ್ದುದು ಅಪ್ಪಾಸಾಹೇಬ ದೇಸಾಯಿ ಎಂದು. ಆದರೆ ಜನ ಸರಗಂ ದೇಸಾಯಿ ಎಂದೇ ಕರೆಯುತ್ತಿದ್ದರು. ಮತ್ತು ಹಾಗೆ ಹೇಳಿದಾಗ ಅವನಿಗೆ ಸಂತೋಷವೇ ಆಗುತ್ತಿತ್ತು. ಪಾಪ ಬಯಲಾಟದವರಿಗೆ ಸರಿಗಮಪದನಿ ಎಂದರೇನು ಗೊತ್ತು? ಸಾಮಾನ್ಯವಾಗಿ ಅವರು ಪದಗಳನ್ನು ಹಾಡುತ್ತಿರಲಿಲ್ಲ, ಒದರುತ್ತಿದ್ದರು. ಹಿಂದೊಮ್ಮೆ ಕಲಿಸಲಿಕ್ಕೆ ಬಂದ ಒಬ್ಬ ಮಾಸ್ತರನು ಇವರ ದನಿಗಳಿಗೆ ಸರಿಗಮಪದನಿಯ ದೀಕ್ಷೆ ಕೊಡಹೋಗಿ ಸೋತು, ಇವರು ಒದರಿದ್ದೇ ಸರಿ ಎಂಬಂತೆ-ಅವನೇನೋ ನುಡಿಸಿ, ಇವರೇನೋ ಹಾಡಿ-ಅಂತೂ ಆ ಸಲ ಬಯಲಾಟ ಮುಗಿಸಿದ್ದರು. ಅವನು ಹಾರ್‍ಮೋನಿಯಂ ನುಡಿಸುತ್ತಿದ್ದಾಗ, ಇವರು ಹಾಡುವಾಗ ಬೇಸೂರಂತೂ ಕಟ್ಟಿಟ್ಟಿದ್ದು ತಾನೆ?- ಪಾಪ, ಆಗವನ ಕರುಣಾಜನಕ ಮುಖ ನೋಡಬೇಕಿತ್ತು. ಆತ ಸಹಜವಾಗಿಯೇ ಬಯಲಾಟದ ಈ ನಟಭಯಂಕರರ ಬಗ್ಗೆ ತಾತ್ಸಾರ ಭಾವನೆಯಿಂದ ಇದ್ದ. ಈ ತಾತ್ಸಾರವನ್ನು ಸರಗಂ ದೇಸಾಯಿ ಗಮನಿಸಿ ತನ್ನ ಮನೆಗೆ ಅವನನ್ನು ಊಟಕ್ಕೆ ಕರೆದು ಸಂಗೀತ ವಿದ್ಯೆಯ ರಹಸ್ಯ ಹೇಳಿಕೊಡಬೇಕೆಂದು ಕೇಳಿದ್ದನಂತೆ. ಮಾಸ್ತರನು ಉಂಡ ಕೂಳಿನ ಋಣಕ್ಕೆ ಸರಿಗಮಪದನಿ ಎಂಬ ಸಪ್ತಾಕ್ಷರೀ ಮಂತ್ರವನ್ನು ಕಲಿಸಿದ. ಆಶ್ಚರ್ಯವೆಂದರೆ ಆ ಸರಿಗಮಪದನಿ ಎಂಬ ಮಂತ್ರ ಬಾಯಿಗೆ ಬಂತಲ್ಲ,-ಇಡೀ ಸಂಗೀತ ವಿದ್ಯೆಯೇ ತನ್ನ ಕೈವಶವಾಯಿತೆಂದು ಸರಗಂ ತಿಳಿದುಬಿಟ್ಟ! ಯಾವುದೇ ಹಾಡಿನ ಆರಂಭದಲ್ಲಿ ಸರಿಗಮಪದನಿ ಸನಿದಪಮಗರಿಸ ಎಂದು ಹೇಳಿ ಸುರುಮಾಡಿದರೆ ಅದು ಬೇಸೂರಾಗಲೀ, ತಪ್ಪುವುದಾಗಲೀ ಸಾಧ್ಯವೇ ಇಲ್ಲವೆಂದು ಆತ ನಿಜವಾಗಿ ನಂಬಿಬಿಟ್ಟಿದ್ದ. ಅಲ್ಲದೆ ಆ ಮಂತ್ರ ಹೇಳಿ ಎಲ್ಲರನ್ನೂ ತಬ್ಬಿಬ್ಬಾಗಿಸುತ್ತಿದ್ದನೆಂದೂ, ಎಲ್ಲರೂ ತಪ್ಪಿದರೂ ತನ್ನ ಹಾಡು ತಪ್ಪುತ್ತಿಲ್ಲವೆಂದೂ ಅವನಿಗೆ ವಿಶ್ವಾಸ ಮೂಡಿತ್ತು. ಸರಗಂ ಸಾಬ ಹ್ಯಾಗೆ ಹಾಡುತ್ತಿದ್ದನೆಂಬ ಬಗ್ಗೆ ಮುಂದೆ ಹೇಳುತ್ತೇನೆ; ಈಗ ನೀವು ಇಷ್ಟು ತಿಳಿದರೆ ಸಾಕು: ಆತ ಸಂಗೀತ ವಿದ್ಯೆ ಅರಿಯದ ಆ ಹಳ್ಳಿ ಮುಕ್ಕರ ಬಗ್ಗೆ ಸಹಾನುಭೂತಿಪರನಾಗಿದ್ದ, ಇಂಥವರನ್ನು ಕಟ್ಟಿಕೊಂಡು ತನ್ನಂಥ ಕಲಾವಿದ ಬಯಲಾಟ ಮಾಡಬೇಕಿದೆಯಲ್ಲ ಎಂದು ತನ್ನ ಬಗ್ಗೆ ತಾನೇ ಮರುಗುತ್ತಿದ್ದ. ಬಂದ ಮಾಸ್ತರನು ಯಾರಿಲ್ಲದಾಗ ಇವನನ್ನು ಹುಟ್ಟು ಕಲಾವಿದನೆಂದು ಕರೆದಿದ್ದನಂತೆ. ಇನ್ನು ಕೇಳಬೇಕೆ?

ನನ್ನ ಅಣ್ಣ ಸರಗಂ ದೇಸಾಯಿಯ ಜೊತೆ ನಟನಾಗಿದ್ದುದರಿಂದ ಚಿಕ್ಕಂದಿನಲ್ಲಿ ಅವರ ರಿಹರ್ಸಲ್‌ಗಳನ್ನು ನೋಡುವುದಕ್ಕೆ ನಾನೂ ಹೋಗುತ್ತಿದ್ದೆ. ಬಯಲಾಟ ಯಾವುದೇ ಇರಲಿ, ಅದರ ಖರ್ಚು ವೆಚ್ಚಗಳನ್ನು ದೇಸಾಯಿಯೇ ನೋಡಿಕೊಳ್ಳುತ್ತಿದ್ದುದರಿಂದ ಸ್ವಾಭಾವಿಕವಾಗಿ ನಾಯಕನ ಪಾತ್ರವನ್ನು ಅವನೇ ವಹಿಸುತ್ತಿದ್ದ. ಅವೆಲ್ಲ ಸಾಮಾನ್ಯವಾಗಿ ರಾಜನ ಪಾತ್ರಗಳು. ಉಳಿದವರು ತಂತಮ್ಮ ಉಡುಪುಗಳನ್ನು ಬಾಡಿಗೆಗೆ ತರುತ್ತಿದ್ದರೆ ದೇಸಾಯಿ ಮಾತ್ರ ಪ್ರತಿಯೊಂದು ರಾಜಪಾತ್ರಕ್ಕೆ ವಿಶಿಷ್ಟವಾದ ಉಡುಪುಗಳನ್ನು ಹೊಸದಾಗಿಯೇ ತಯಾರಿಸಿಕೊಳ್ಳುತ್ತಿದ್ದ. ಅವರ ಮನೆತನದ್ದೇ ಒಂದು ಬೆಳ್ಳಿಯ ಖಡ್ಗವಿತ್ತು. ಭಾರೀ ಹಣ ಖರ್ಚು ಮಾಡಿ ಭುಜ ಕಿರೀಟಗಳನ್ನು ತಾನೇ ಮಾಡಿಸಿಕೊಂಡಿದ್ದ. ಯಾಕೋ ಏನೋ ಕಿರೀಟವೊಂದನ್ನು ಮಾಡಿಸಿಕೊಂಡಿರಲಿಲ್ಲ.

ಆತ ರಾಜನ ಪಾತ್ರಗಳನ್ನೇ ಯಾಕೆ ಮಾಡುತ್ತಿದ್ದನೆಂದು ನನಗೆ ಈಗೀಗ ಅರ್ಥವಾಗುತ್ತಿದೆ. ನಮ್ಮೂರ ದೇಸಗತಿಯೆಂದರೆ ನಾಡಿನ ಆ ಭಾಗಕ್ಕೆಲ್ಲಾ ಒಂದು ಕಾಲಕ್ಕೆ ಪ್ರಸಿದ್ಧವಾದುದ್ದು. ಮೈಸೂರು ಮಹಾರಾಜರು ನಮ್ಮ ಹಿಂದಿನ ದೇಸಾಯರನ್ನು ದಸರಾ ಕಾಲದಲ್ಲಿ ಆಹ್ವಾನಿಸಿ, ತಮ್ಮ ಆಸನದ ಮೇಲೆ ಕೂರಿಸಿಕೊಂಡಿದ್ದರೆಂದು ಹೆಂಗಸರು ಹೇಳುವುದನ್ನು ಕೇಳಿದ್ದೇನೆ. ಬಹುಶಃ ಇದರಲ್ಲಿ ಅತಿಶಯೋಕ್ತಿ ಇದೀತು. ಅಂತೂ ಒಂದುಕಾಲಕ್ಕೆ ವೈಭವದಿಂದ ಮೆರೆದ ದೆಸಗತಿಯೆನ್ನುವುದರಲ್ಲಿ ಸಂದೇಹವೇ ಬೇಡ. ಬೇರೆ ದೇಸಗತಿಗಳಿಗೆ ಒಂದೆರಡು ಊರಿದ್ದಾವು. ನಮ್ಮೂರಿನ ದೇಸಗತಿಗೆ ಹದಿನಾಲ್ಕು ಊರು! ಈಗ ಸರಗಂ ದೇಸಾಯಿಯ ಪಾಲಿಗೆ ಎಷ್ಟೇ ಉಳಿದಿರಲಿ; ಆ ಹಳೆಯ ವೈಭವದಲ್ಲೇ ಇರಬೇಕೆಂಬ, ಅದರ ಪ್ರಭಾಮಂಡಲವನ್ನು ಮತ್ತೆ ತರಬೇಕೆಂಬ ಭಾರೀ ಆಸೆ ಆತನಿಗಿತ್ತು. ಆದರೆ ಜನ ಬದಲಾಗಿದ್ದರು. ಯಾರೂ ಮೊದಲಿನ ಹಾಗೆ ದೇಸಗತಿಗೆ ಹೆದರುತ್ತಿರಲಿಲ್ಲ. ಹೀಗಾಗಿ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ದೇಸಾಯಿಗೆ ಕೊನೆಗೂ ಸಾಧ್ಯವಾಗಿರಲಿಲ್ಲ. ಆತ ಎಲ್ಲಿದ್ದರೂ ಪರಕೀಯನಾಗಿ, ಇವನು ಅಲ್ಲಿ ಕೂಡಿದವರ ಪೈಕಿ ಅಲ್ಲ ಎಂದು ಯಾರಿಗಾದರೂ ಅನ್ನಿಸುವಂತೆ ಇರುತ್ತಿದ್ದ. ಆದರೆ ಅವನ ದುರಾದೃಷ್ಟಕ್ಕೆ ತನ್ನ ದೊಡ್ಡ ಮನೆಯ ಒಟ್ಟಾರೆ ಚಿತ್ರದಲ್ಲೂ ಆತ ಹೊಂದುತ್ತಿರಲಿಲ್ಲ. ಯಾವನೋ ಒಬ್ಬ ನಾಟಕದ ಪಾತ್ರಧಾರಿ ದೇಸಾಯಿಯ ಉಡುಪಿನಲ್ಲಿದ್ದಂತೆ ಕಾಣಿಸುತ್ತಿತ್ತು. ಈ ಅರ್ಥದಲ್ಲಿ ಅವನು ಹುಟ್ಟು ನಟನೆ ಹೌದು. ಈ ಕೊರತೆ ದೇಸಾಯಿಯ ವ್ಯಕ್ತಿತ್ವದ ಆಳದಲ್ಲೆಲ್ಲೋ ಕೊರೆಯುತ್ತಿದ್ದಿತೆಂದು ತೋರುತ್ತದೆ. ಅದಕ್ಕೆ ಆತ ಬಯಲಾಟಗಳಲ್ಲಿ ರಾಜನಾಗಿ ಅದನ್ನು ಭರ್ತಿ ಮಾಡಿಕೊಳ್ಳುತ್ತಿದ್ದ. ಅವನು ಕುಡಿದಾಗ ಅರೆಹುಚ್ಚನಂತಿರುತ್ತಿದ್ದನಲ್ಲ, ಈ ಕಾರಣಕ್ಕೇ ಹಾಗಾಗಿರಬೇಕೆಂದು ನನಗೆ ಅನುಮಾನವಿದೆ. ಯಾಕೆಂದರೆ ಕುಡಿದಾಗ ಬಯಲಾಟದ ಮಾತುಗಳನ್ನು ನಿಜಜೀವನದಲ್ಲೂ, ನಿಜ ಜೀವನದ ಮಾತುಗಳನ್ನು ಬಯಲಾಟದಲ್ಲಿಯೂ ಆಡುತ್ತಿದ್ದ. ಎರಡರ ಧಾಟಿ ಒಂದೇ, ಅಂದರೆ ಅದೆ-ನಾಟಕದ ರಾಜರದು. ಆದ್ದರಿಂದ ಮುಂದೆ ನಮ್ಮ ಕಥೆಯಲ್ಲಿ ನಮ್ಮೀ ಕಥಾನಾಯಕನ ರಾಜಠೀವಿಯಲ್ಲಿ ಗಹಗಹಿಸಿ ನಕ್ಕು ಗುಡುಗಿದರೆ ನಮ್ಮ ವಾಚಕರು ಅನ್ಯಥಾ ಭಾವಿಸಬಾರದೆಂದು ವಿನಂತಿಸಿಕೊಳ್ಳುತ್ತೇನೆ.

ಇನ್ನವನ ಹಾಡುಗಾರಿಕೆ: ನಾನೆ ಸ್ವತಾ ಕಂಡಿದ್ದೇನಲ್ಲ,-ಹಾಡುವುದೆಂದರೆ ಅವನಿಗೆ ಭಾರೀ ವ್ಯಾಮೋಹ. ಸರಿಗಮಪದನಿಯ ಮಂತ್ರದಿಂದ ಅವನಿಗೆ ಸಂಗೀತವಿದ್ಯೆ ಕೈವಶವಾಗಿತ್ತೋ ಇಲ್ಲವೋ ನನಗೆ ತಿಳಿಯದು. ಅದು ಅವನಿಗೆ ಹುಚ್ಚನ್ನಂತೂ ಹಿಡಿಸಿದ್ದು ನಿಜ. ಉಳಿದವರು ಹಾಡುವುದಕ್ಕೆ ಅಶ್ಟಾಗಿ ಇಷ್ಟಪಡುತ್ತಿರಲಿಲ್ಲ. ಆದರೆ ಬಯಲಾಟವೆಂದಮೇಲೆ ಹಾಡಲೇ ಬೇಕಲ್ಲ, ಆದ್ದರಿಂದ ಬಾಯಿ ತೆರೆಯುತ್ತಿದ್ದರು. ಒಮ್ಮೆ ಬಾಯಿ ತೆರೆದರೆ ಅದು ಕೇಳುವವರ ದೈವವನ್ನು ಅವಲಂಬಿಸುವಂಥಾದ್ದು, ದೈವ ಚೆನ್ನಾಗಿದ್ದರೆ ಹಾಡು ಚೆನ್ನಾಗೇ ಬರಬಹುದು. ಅಂತೂ ಅದು ತಮ್ಮ ಕೈಯಲಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಂಡಿದ್ದರು. ದೇಸಾಯಿಯ ಮಾತು ಹಾಗಲ್ಲ. ದೈವ ಇಲ್ಲಿಯೂ ಆತನಿಗೆ ಕೈಕೊಟ್ಟಿತ್ತು. ತೆಳ್ಳಗೆ ಬೆಳ್ಳಗೆ ಉದ್ದಕ್ಕೆ ಕೋಲಿನಂಥ ಶರೀರ ಅವನದು. ಗರುಡನಂಥ ಚೂಪುಮೂಗು ಮೇಲ್ದುಟಿಯ ಮೇಲೊರಗಿತ್ತು. ನೀಟಾಗಿ ಕೊರೆದಂಥ ಹುಬ್ಬು, ಅಗಲವಾದ ಹಣೆ, ಈಗಷ್ಟೇ ಮೂಡಿದಂತಿದ್ದ ಒಂದೆರಡು ಹರಕು ಗಡ್ಡಮೀಸೆ. ಹುಲುಸಾಗಿ ಬರುತ್ತಿರಲಿಲ್ಲವಾದ್ದರಿಂದ ಅವನ್ನು ಬೋಳಿಸುತ್ತಿದ್ದ. ಇವನು ಸ್ತ್ರೀ ಪಾತ್ರಕ್ಕೇ ಲಾಯಖ್ಕಾದವನೆಂದು ಯಾರು ನೋಡಿದರೂ ಹೇಳುತ್ತಿದ್ದರು. ಇಂಥ ಕೋಮಲ ದೇಹಕ್ಕೆ ಒರಟು ದನಿ. ಹೀಗಾಗಿ ಅವನು ಹಾಡಿದರೂ ಅವನೊಳಗಿಂದ ಇನ್ಯಾರೋ ಹಾಡಿದಂತೆ ಕೇಳಿಸುತ್ತಿತ್ತು.

ಆತನ ಹಾಡುಗಾರಿಕೆಯನ್ನು ನೀವೇ ಕೇಳಬೇಕು. ಸರಿಗಮಪದನಿ ಸನಿದಪಮಗರಿ ಎಂದು ಮಂತ್ರದ ಹಾಗೆ ಭಯಭಕ್ತಿಯಿಂದೊಮ್ಮೆ ಹೇಳಿ, ತಕ್ಷಣ ಹಾಡನ್ನು ತಾರಕದಲ್ಲಿ ಸುರು ಮಾಡುತ್ತಿದ್ದ. ತಾರಕದಲ್ಲೇ ಸುರುವಾದ ಹಾಡಿಗೆ ಇನ್ನೊಂದು ತಾರಕ ಎಲ್ಲಿ ಸಿಕ್ಕೀತು? ಆದ್ದರಿಂದ ಕಂಠ ಮಧ್ಯೆ ಗದ್ಗದವಾಗಿ ವಿಚತ್ರ ಸಪ್ಪಳ ಮಾಡುತ್ತಿತ್ತು. ಕೆಲವೊಮ್ಮೆ ಕೇಳುವವರಲ್ಲಿ ಅವನ ಜೀವದ ಬಗ್ಗೆ ಭಯ ಉಂಟುಮಾಡುವಂಥ ಕಂಪನಗಳುಂಟಾಗುತ್ತಿದ್ದವು. ಆದರೂ ಗಟ್ಟಿ ಆಸಾಮಿ. ಹಿಡಿದ ಸ್ವರವನ್ನು, ಅಂದರೆ ಅದೇ ತಾರಕವನ್ನು ಬಿಡುತ್ತಿರಲಿಲ್ಲ. ಹ್ರಸ್ವ ದೀರ್ಘ ಸ್ವರಗಳನ್ನು ಎತ್ತೆತ್ತಿ ಅವು ಹಾದಿಗೆಡದಂತೆ ಕಂಪನಗಳಿಂದ ಬೆದರಿಸಿ, ಹಿಂದೆಮುಂದೆ ಮಾಡಿ, ತಿರುವಿ ತಿರುವಿ ಹಾಡುತ್ತಿದ್ದ. ಹಾಡುವಾಗಿನ ಭಂಗಿಯೂ ಅವನದೇ, ಜಿಗ್ಗಾಲು ಕೊಟ್ಟು, ಆಳ ಬಾವಿಯೊಳಗಿನ ಬಂಡೆಯನ್ನೆತ್ತುವಂತೆ ಸ್ವರಕ್ಕೆ ಕುಮ್ಮಕ್ಕು ಕೊಟ್ಟು ಅದು ನುಣುಚಿಕೊಳ್ಳದಂತೆ ಹೊಂಚಿ ಹಿಡಿಯುವ ಹಾಗೆ ಹಸ್ತಾಭಿನಯ ಮಾಡುತ್ತಾ ಅದೊಂದು ಸುಖದ ನೆಲೆ ತಲುಪಿತೆಂದು ಖಾತ್ರಿಯಾದಾಗ ಐಷಾರಾಮಾಗಿ ಕಣ್ಣು ಮುಚ್ಚುತ್ತಿದ್ದ. ತನ್ನ ಹಾಡಿನ ಗುಂಗುನಲ್ಲೇ ಇರುವ ಮಹಾ ಕಲಾವಿದನಂತೆ ತುಸು ಹೊತ್ತು ಹಾಗೇ ಕಣ್ಣು ಮುಚ್ಚಿಕೊಂಡಿದ್ದು ಆಮೇಲೆ ನಿಧಾನವಾಗಿ ಕಣ್ಣು ತೆರೆಯುತ್ತಿದ್ದ. ‘ಹಾಡುಗಾರಿಕೆಯೆಂದರೆ ಇದು’ ಎಂದು ಹೇಳುವಂತೆ ಎಲ್ಲರ ಮುಖವನ್ನೊಮ್ಮೆ ಹೆಮ್ಮೆಯಿಂದ ದಿಟ್ಟಿಸುತ್ತಿದ್ದ. ಅವನು ಇಲ್ಲದೇ ಇದ್ದಾಗ ನಮ್ಮಣ್ಣ ಅವನಿಗೆ ತಾರಕಾಸುರ ಎಂದು ಹೇಳುತ್ತಿದ್ದ.

ನನಗೆ ಅನ್ನಿಸುವಂತೆ ದೇಸಗತಿಯ ಕೆಟ್ಟಗಳಿಗೆಯಲ್ಲಿ ಈ ದೇಸಾಯಿ ಹುಟ್ಟಿದ. ಇವನಪ್ಪ ಮಹಾ ಲಂಪಟ. ಅವನ ಇಬ್ಬರು ತಂಗಿಯರು, ಅವರ ಗಂಡದಿರ ದೇಸಗತಿಯನ್ನು ಲೂಟಿ ಮಾಡಿ ಮೋಜು ಮಾಡಿದರು. ಕೈಗೆ ಬಂದಷ್ಟು ಹಣಕ್ಕೆ ಆಸ್ತಿ ಮಾರಿದರು. ದೊಡ್ಡ ದೇಸಾಯಿಯ ಕಚ್ಚೆ ಹರುಕುತನ, ಅವನ ತಂಗಿಯರ ಹಡಬಿಟ್ಟತನ, ಅವರ ಗಂಡಂದಿರ ಬೇಜವಾಬ್ದಾರಿತನ….ಎಲ್ಲೆಲ್ಲೋ ಹೋಗಿ, ಏನೇನೋ ರೋಗ ಅಂಟಿಸಿಕೊಂಡು ಬಂದು ಪ್ರತಿಯೊಬ್ಬರೂ ಒಂದೊಂದು ಥರ ನರಳಿ ಸತ್ತರು. ಪ್ರತಿಯೊಬ್ಬರ ಮನಸ್ಸುಗಳು ವಿಕೃತವಾಗಿದ್ದವು. ಇವರು ಸತ್ತಾಗ ಆಸ್ತಿಯ ಬಹುಪಾಲು ಹೋಗಿತ್ತಲ್ಲ, ಜೊತೆಗೇ ಸಾಲ ಬಂದಿತ್ತು; ಇವರ ರಕ್ತ ಹಂಚಿಕೊಂಡು, ಇವರ ಮಧ್ಯೆ ಹುಟ್ಟಿ ಬೆಳೆದವನು ದೇಸಾಯಿ. ಗುಣಗಳನ್ನಲ್ಲದಿದ್ದರೂ ಅವರ ರೋಗಗಳನ್ನಂತೂ ತನ್ನ ಜೊತೆಗೇ ತಂದಿದ್ದ. ಇದ್ದ ಬಿದ್ದ ಆಸ್ತಿಯನ್ನು ಮಾರಿ ಹಿಂದಿನವರ ಸಾಲ ತೀರಿಸಿ ಉಳಿದ ಅಷ್ಟಿಷ್ಟನ್ನು ಆಗೀಗ ಮಾರುತ್ತ ಬದುಕಿದ್ದ.

ದೇಸಾಯಿಯ ಔದಾರ್ಯದ ಬಗ್ಗೆ ಇಡೀ ಊರಿನಲ್ಲಿ ದುಸರಾ ಮಾತಿಲ್ಲ. ಇವನಿಗೆ ಬಯಲಾಟ ಕಲಿಸಿದ್ದ ಮಾಸ್ತರ ಬಂದು “ಮಗಳ ಮದುವೆ ಮಾಡ್ಬೇಕು. ಮಾರಾಜ್ರ, ತಾವು ಕೈ ಹಚ್ಚಬೇಕು, ತಮ್ಮ ಹೆಸರ್‍ಹೇಳಿ ಮದವಿ ಮಾಡ್ತೀನಿ”- ಎಂದಾಗ ದೇಸಾಯಿ ತನ್ನ ಕತ್ತಿನಲ್ಲಿದ್ದ ಎರಡೆಳೆ ಚಿನ್ನದ ಸರವನ್ನು ಹಾಗೇ ಹರಿದು ಅವನ ಕೈಗಿತ್ತನೆಂದು ನಮ್ಮಣ್ಣ ಹೇಳಿದ್ದ. ಒಬ್ಬ ಹರಿಜನ ಹುಡುಗ, ನನ್ನ ಓರಗೆಯವನು, ಕಾಲೇಜು ಕಲಿಯುತ್ತಿದ್ದಾಗ ತುಂಬ ತೊಂದರೆಯಾಗಿ ಶಿಕ್ಷಣ ಮುಂದುವರಿಸದೆ ವಾಪಸ್ಸು ಬಂದ. ವಿಷಯ ದೇಸಾಯಿಗೆ ಗೊತ್ತಾಗಿ ಅವನನ್ನು ಮನೆಗೆ ಕರೆಸಿ ಐನೂರು ರೂಪಾಯಿ ಕೊಟ್ಟದ್ದನ್ನು, ಆ ಹುಡುಗ ದೇಸಾಯಿಯ ಸಹಾಯದಿಂದಲೇ ಶಿಕ್ಷಣ ಮುಂದುವರೆಸಿದ್ದನ್ನು ಈಗಲೂ ಸ್ಮರಿಸಿಕೊಳ್ಳುತ್ತಾನೆ. ಆತನ ಔದಾರ್ಯವನ್ನು ಹೇಳುವ ಇಂಥ ನಾಕೆಂಟು ಘಟನೆಗಳನ್ನು ನಾನೇ ಕಂಡಿದ್ದೇನೆ. ಆದರೆ ಅವನ ಔದಾರ್ಯವನ್ನು ಜನ ಒಬ್ಬರೂ ಮೆಚ್ಚಿ ಹೊಗಳಿದ್ದನ್ನು ನಾ ಕಾಣೆ. ಬಹುಶಃ ಕ್ರೂರಿಯಾದ ಇವರಪ್ಪನ ಮೇಲಿನ ಸೇಡಿನಿಂದಲೋ ಅಥವಾ ಇವರ ಶ್ರೀಮಂತಿಕೆಗೆ ಸೋರಿಹೋದದ್ದರಿಂದಲೋ ನಮ್ಮೂರ ಜನ ಈ ದೇಸಾಯಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ದೇಸಗತಿಯ ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಇತ ಧಾರಾಳಿಯಾಗಿದ್ದಾನೋ ಎಂದು ಅನೇಕರು ಸಂಶಯ ವ್ಯಕ್ತಪಡಿಸಿದ್ದುಂಟು. ಪಂಚಾಯ್ತಿ ಎಲೆಕ್ಷನ್ನಿಗೆ ದೇಸಾಯಿ ಹಳೇ ಜನರದೊಂದು ತಂಡ ಕಟ್ಟಿಕೊಂಡು ನಿಂತನಲ್ಲ, ನೀರಿನಂತೆ ಹಣ ಸುರಿದ. ಮನೆಮನೆಗೆ ಹೋಗಿ ಎಲ್ಲರನ್ನೂ ತನಗೇ ಓಟು ಬರೆಯುವಂತೆ ಕೇಳಿದ. ಊರುಗಾರಿಕೆ ಸಹಾಯ ಮಾಡಿದ್ದಿತ್ತು, ಧಾರಾಳಿಯಾಗಿ ಅವರಿವರ ಕುಟುಂಬಗಳನ್ನು ನಿಲ್ಲಿಸಿದ್ದಿತ್ತು, ಆದರೂ ಜನ ಪ್ರಚಂಡ ಬಹುಮತದಿಂದ ಅವನನ್ನೂ ಅವನ ತಂಡವನ್ನೂ ಸೋಲಿಸಿದರು. ಇದರಿಂದ ದೇಸಾಯಿಗೆ ಭಾರೀ ನಿರಾಶೆಯಾಗಿತ್ತು. ಅಥವಾ ಯಾರಿಗೆ ಆಗುವುದಿಲ್ಲ? ಹಾಗಂತ ಊರವರ ಮೇಲೆ ಕೋಪಗೊಂಡವನಲ್ಲ, ಸೇಡು ತೀರಿಸಿಕೊಳ್ಳಲು ಹೊಂಚಿದವನಲ್ಲ. ತನ್ನ ಪಾಡಿಗೆ ತಾನು ಅರಮನೆಯಾಯಿತು, ಆಗಾಗ ಬಯಲಾಟವಾಯಿತು, ನಿತ್ಯದ ಕುಡಿತವಾಯಿತು-ಇದ್ದ. ಮಾತಾಡಿಸಿದರೆ ನಗುನಗುತ್ತಲೇ ಮಾತಾಡುತ್ತಿದ್ದ. ಯಾವನಾದರೂ ಬಂದು ಹೊಗಳಿದರೆ ಆತನ ಮನಸ್ಸಿನಲ್ಲೇನೋ ಸಹಾಯ ಕೇಳುವುದಿದೆ, ಅದಕ್ಕೆ ಹೀಗೆ ಹಲ್ಲುಗಿಂಜುತ್ತಿದ್ದಾನೆಂದು ಅವನಿಗೆ ಗೊತ್ತಾಗುತ್ತಿತ್ತು. ಆದರೂ ಅವನಿಗೆ ಸಹಾಯ ಮಾಡುತ್ತಿದ್ದ. ಇನ್ನೇನು, ಅವನಿಗಿನ್ನೊಂದು ಭಯಂಕರ ರೋಗವಿತ್ತು. ಅದನ್ನು ಮುಂದೆ ಶೀನಿಂಗವ್ವ ವಿವರಿಸುತ್ತಾಳೆ.
ಇನ್ನು ಶೀನಿಂಗವ್ವ ಹೇಳುವ ಕಥೆ ಕೇಳಿರಿ:

ಆರು

“ಈ ವರನನ್ನು ಗೊತ್ತು ಮಾಡಿದವನೂ ಗೌಡನೇ. ನಿಶ್ಚಯಕಾರ್ಯದಲ್ಲಿ ಹೆಂಗಸರು ಭಾಗವಹಿಸಿದ್ದರಾದರೂ ಗೌಡನಿಗೆ ಎದುರಾಗಿ ಮಾತಾಡುವ ಧೈರ್ಯ ಯಾರಿಗೂ ಇರಲಿಲ್ಲ. ಈ ಸಲದ ಮದುವೆ ಅದ್ದೂರಿಯಿಂದಲೇ ಆಯಿತು. ಸಿಂಗಾರೆವ್ವನಿಗೆ ಮೈತುಂಬ ಆಭರಣ ಹಾಕಿದ್ದರೂ ವರನನ್ನು ನೋಡಿ ಹೆಂಗಸರ್‍ಯಾರಿಗೂ ನೆಮ್ಮದಿಯಾಗಲಿಲ್ಲ. ಗೌಡ ಇಲ್ಲಿಯೂ ಏನೋ ಹೊಂಚಿದ್ದಾನೆಂದು ಊರವರೆಲ್ಲ ಆಡಿಕೊಂಡರು. ಸಿಂಗಾರೆವ್ವನ ಬಗ್ಗೆ ಸಹಾನುಭೂತಿ ತೋರಿಸಿದರು. ಮದುವೆ ಆದಮೆಲೆ ಯಾರೇನು ಮಾಡಲಾದೀತು? ಅನೇಕರು ಆಡಿಕೊಂಡ ಹಾಗೆ ಒಂದೇ ಒಂದು ನೆಮ್ಮದಿಯೆಂದರೆ ‘ಈ ಸಲದ ವರ ಜೀವಂತ ಇದ್ದ.’

ಮದುವೆಯಾಗಿ ಒಂದು ತಿಂಗಾಳಾದ ಮೇಲೆ ಸಿಂಗಾರೆವ್ವ ‘ನಡೆಯಲಿಕ್ಕೆ’ ಗಂಡನ ಮನೆಗೆ ಬಂದಳು. ಅವಳನ್ನು ಕಳಿಸಲಿಕ್ಕೆ ಬಂದವರಲ್ಲಿ ನಾನೂ ಇದ್ದೆ. ಕಳಿಸಿ ಉಳಿದವರೆಲ್ಲ ತಿರುಗಿ ಹೋಗುವಾಗ “ಸಿಂಗಾರೆವ್ವ ಒಬ್ಬಾಕೀನಽ ಆಗ್ತಾಳ, ತುಸು ದಿನ ನೀನೂ ಆಕೀ ಜೊತೆಗಿರು” ಎಂದು ಹೇಳಿ ನನ್ನನ್ನು ಇಲ್ಲೇ ಬಿಟ್ಟು ಹೋದರು. ಆಗ ಬಂದಿವಲ್ಲ, ಅದೇಕಡೆ, ಆಮೇಲೆ ನಾನು ನಂದಗಾವಿಗೆ ಹೋಗಲೇ ಇಲ್ಲ. ತೌರುಮನೆ ಎಂಬ ಜೈಲಿನಿಂದ ಒಮ್ಮೆ ಹೊರಬಂದರೆ ಸಾಕೆಂದು ಸಿಂಗಾರೆವ್ವನಿಗೆ ಅನಿಸಿರಬೇಕು; ಅದಕ್ಕೇ ಆಮೇಲೆ ತೌರಿನಿಂದ ಯಾರು ಕರೆಯಬಂದರೂ ಹೋಗಲಿಲ್ಲ. ತಾಯಿಯನ್ನು ನೋಡಬೇಕೆನಿಸಿದಾಗ ಅವಳನ್ನು ಇಲ್ಲಿಗೇ ಕರೆಸುತ್ತಿದ್ದಳು.

ನಾವು ಅರಮನೆಯ ಬಗ್ಗೆ ಎಷ್ಟೆಲ್ಲ ಕನಸು ಕಂಡಿದ್ದೆವು. ಇಡೀ ಶಿವಾಪುರ ಊರಿನ ಅರ್ಧದಷ್ಟಿರುವ ಅರಮನೆ, ಮನೆತುಂಬಿ ತುಳುಕುವ ಶ್ರೀಮಂತಿಕೆ, ಕೈಗೊಂದಾಳು, ಕಾಲಿಗೊಂದಾಳು, ದೊರೆಸಾನಿಗೆ ಪಲ್ಲಕ್ಕಿ ಸೇವೆ-ಅಬ್ಬಾ ಸಡಗರವೇ ಎಂದು ಬಂದರೆ-ಇಲ್ಲೇನಿದೆ? ಸಿಂಗಾರೆವ್ವನಿಗೆ ಮೈತುಂಬ ಆಭರಣ ಹಾಕಿದ್ದರಲ್ಲ, ಅವನ್ನು ಭದ್ರವಾಗಿ ಇಡುತ್ತೇವೆಂದು ಹೇಳಿ, ಕೈಯಲ್ಲಿಯ ಅವರೆಡು ಬಂಗಾರದ ಬಳೆ, ಅದೊಂದು ತಾಳಿ ಬಿಟ್ಟು ಉಳಿದುವೆಲ್ಲವನ್ನೂ ಕಸಿದುಕೊಂಡರು. ಆಮೇಲೆ ನಮಗೆ ಗೊತ್ತಾಯಿತು: ಅವನ್ನು ಊರಿನ ಪರಮಶೆಟ್ಟಿಯಿಂದ ಕಡ ತಂದಿದ್ದರು ಎಂದು! ಸಾಕೇನಪ್ಪ ದೇಸಗತಿಯ ಸಡಗರ?

ಇನ್ನು ಅರಮನೆಯ ಸ್ಥಿತಿಗತಿಗಳೋ ಸ್ವಾಮಿ ಶಿವಲಿಂಗನೇ ಕಾಪಾಡಬೇಕು! ನೀನೇ ನೋಡೀಯಲ್ಲ. ಅರಮನೆ ಎಷ್ಟು ದೊಡ್ಡದು ಅಂತ. ಇಂಥಾ ಅರಮನೆಗೆ ಸಾವಿರ ಜನ ಆದರೂ ಸಾಲದು. ಆದರೆ ಇಲ್ಲಿದ್ದವರು ಇಬ್ಬರು ಗಂಡಾಳು, ಇಬ್ಬರು ಹೆಣ್ಣಾಳು. ಗಂಡಾಳುಗಳು ಮುಂಜಾನೆ ನ್ಯಾರೆ ಮಾಡಿ ತೋಟಕ್ಕೆ ಹೋದರೆ ತಿರುಗಿ ಬರುವುದು ಸಂಜೆಯೇ. ಆದ್ದರಿಂದ ಅರಮನೆಯಲ್ಲಿ ಅವರ ಉಲಿವೇ ಇರುತ್ತಿರಲಿಲ್ಲ. ಸಂಜೆ ಬಂದವರು ದನಗಳಿಗೆ ಮೇವು ಹಾಕಿ, ಊಟಮಾಡಿ, ಒಬ್ಬ ತೊಲೆಬಾಗಿಲ ಬಳಿ ಮಲಗಿದರೆ ಇನ್ನೊಬ್ಬ ಕೊಟ್ಟಿಗೆಯಲ್ಲಿ ಮಲಗುತ್ತಿದ್ದ. ಆ ಇಬ್ಬರೂ ಏಳುವುದು ಬೆಳಿಗ್ಗೆಯೇ. ಆ ಇಬ್ಬರೂ ಗಂಡಾಳು-ಗಳಿದ್ದರಲ್ಲ ಭಾರೀ ಧಿಮಾಕಿನವರು. ಒಂದು ಎಮ್ಮೆ ಹಿಂಡಿಕೊಡುತ್ತಿರಲಿಲ್ಲ, ಒಂದೆರಡು ಕೊಡ ನೀರು ತರುತ್ತಿರಲಿಲ್ಲ. ಆ ದೊಡ್ಡ ಅರಮನೆಯ ಕಸವನ್ನಾದರೂ ಗುಡಿಸುತ್ತಿದ್ದರೇ ಎಂದರೆ ಅದೂ ಇಲ್ಲ. ತೋಟದಲ್ಲಿ ಅದೇನು ಕೆಲಸ ಮಾಡುತ್ತಿದ್ದರೋ, ಭಾರೀ ದಣಿದವರ ಹಾಗೆ ಬಂದು ಬತ್ತೀ ಸೇದುತ್ತಾ ಕೂತುಬಿಡುತ್ತಿದ್ದರು. ಹೆಂಗಸರ ಬಗ್ಗೆ ಅವರಲ್ಲಿ ಸದಭಿಪ್ರಾಯ ಬೇಡ, ಅವರೂ ಮನುಷ್ಯರೆಂಬ ಭಾವನೆಯೂ ಇದ್ದಂತಿರಲಿಲ್ಲ. ತಾವು ದುಡಿದು ತರುವವರು, ನಾವು ಕೂತುಕೊಂಡು ತಿನ್ನುವವರು-ಎಂಬಂಥ ಧೋರಣೆಯವರು. ಏನಾದರೊಂದು ಮಾತಾಡಬೇಕಾದಾಗಲೂ ಅನುಗ್ರಹಿಸುವವರ ಹಾಗೆ ಅವರ ಮಾತಿನ ಧಾಟಿ ಇರುತ್ತಿತ್ತು.

ಒಂದು ದಿನ ನೀರಿನ ಸೀತಿ ಹೊಟ್ಟೆನೋವೆಂದು ಬರಲಿಲ್ಲ. ದನಕರು ನೋಡಿಕೊಳ್ಳುತ್ತಿದ್ದ ನಿಂಗಪ್ಪನಿಗೆ ‘ಹೋಗಿ ಒಂದೆರಡು ಕೊಡ ನೀರು ತಗಂಬಾ’ ಎಂದರೆ ಅವನು ದುರುಗುಟ್ಟಿ ನನ್ನಕಡೆ ನೋಡಿ ಸುಮ್ಮನಾದ. ನನಗೆ ಅವಮಾನವಾಯಿತು. ಮತ್ತೊಮ್ಮೆ ಅದೇ ಮಾತು ಹೇಳಿದೆ. “ಈ ಹೆಂಗಸರಿಗೆ ಗಂಡಸರೆಂದರ ಕಿಮ್ಮತ್ತಽ ಇಲ್ಲಲಾ. ಹತ್ತಾಳಿನ ಕೆಲಸ ನಾ ಒಬ್ಬನಽ ನೋಡಿಕೋತೀನಿ, ಇವರಿಗೆ ಗೊತ್ತಾಗೋದಽ ಇಲ್ಲ”-ಎಂಬಿತ್ಯಾದಿ ಏನೇನೋ ಗೊಣಗಿ ಮಹಾ ನಟ್ಟು ಕಡಿದವರ ಹಾಗೆ ನನ್ನ ಮುಂದೆ ಹಾದು, ನನ್ನ ಕಡೆ ಕೂಡ ನೋಡದೆ ಹೋಗಿಬಿಟ್ಟ. ನನಗೆ ಸಿಟ್ಟು ತಡೆಯಲಾಗಲಿಲ್ಲ. ಹೋಗಿ ಸಿಂಗಾರೆವ್ವನಿಗೆ ಹೇಳಿದೆ. ಅವಳು ದೇಸಾಯಿಗೆ ಹೇಳಿದಳು. ದೇಸಾಯಿ ವಿಚಲಿತನಾಗಲೇ ಇಲ್ಲ. ಇದೆಲ್ಲ ಇಲ್ಲಿ ಮಾಮೂಲಿ ಎಂಬಂತೆ “ತರಿಸೋಣ, ತರಿಸೋಣ” ಎಂದು ಹೇಳಿ, ಅಲ್ಲಿದ್ದ ಕಾಳ್ಯಾನಿಗೆ ಹೇಳಿದ, ಅವನು ಹಾ ಹೂ ಎನ್ನದೆ ತನ್ನ ಪಾಡಿಗೆ ತಾನಿದ್ದುಬಿಟ್ಟ! ನನ್ನ ಚಡಪಡಿಕೆ ನೋಡಲಾರದೆ ಇನ್ನೊಬ್ಬ ಹೆಣ್ಣಾಳು ನಂಜಿ ಹೋಗಿ ನೀರು ತಂದಳು.

ಇನ್ನು ಹೆಣ್ಣಾಳುಗಳು: ಇವರು ಗಂಡಸರಿಗಿಂತ ಒಳ್ಳೆಯವರೇನೋ ನಿಜ. ಯಾಕೆಂದರೆ ಗೊಣಗಿಕೊಳ್ಳುತ್ತಿರಲಿಲ್ಲ. ಇಬ್ಬರಲ್ಲಿ ಒಬ್ಬಳು ಕಸಮುಸುರೆ ಮಾಡಿ ನೀರು ತಂದರೆ ಇನ್ನೊಬ್ಬಳು ಅಡಿಗೆ ನೋಡಿಕೊಳ್ಳುತ್ತಿದ್ದಳು. ಪ್ರತಿ ವಾರಕ್ಕೊಮ್ಮೆ ಈ ಕೆಲಸ ಅದಲುಬದಲು ಮಾಡಿಕೊಳ್ಳುತ್ತಿದ್ದರು. ಮುಂಜಾನೆ ಸಂಜೆಗಳಲ್ಲಿ ತಮ್ಮ ಕೆಲಸ ಮುಗಿಯಿತೆಂದರೆ ಹೇಳದೆ ಕೇಳದೆ ತಮ್ಮ ಮನೆಗಳಿಗೆ ಹೊರಟುಬಿಡುತ್ತಿದ್ದರು. ಆದರೆ ಇವರೂ ಮೈಗಳ್ಳರೆ. ಒಮ್ಮೆ ಅಡಿಗೆ ಮನೆಗೆ ಹೋದೆ. ಸೀತಿ ಅಡಿಗೆ ಮಾಡುತ್ತಿದ್ದಳು. ಪಾಪ ಒಬ್ಬಳೇ ಇದ್ದಾಳಲ್ಲಾ, ನಾನೂ ಸ್ವಲ್ಪ ನೆರವಾಗೋಣವೆಂದು ಸೌಟು ಹಿಡಿದು ಒಲೆಮೇಲಿನ ಪಾತ್ರೆಯಲ್ಲಿ ಹಾಕಿದ್ದೇ ತಡ, ಇಡೀ ಅಡಿಗೆಯ ಭಾರ ನನಗೇ ಬಿಟ್ಟು ಬುಟ್ಟಿಯೊಳಗಿನ ಐದಾರು ರೊಟ್ಟಿ ಹಿರಿದು, ಪಲ್ಯ ಹಾಕಿಕೊಂಡು ಮಡಿಚಿ ಕಟ್ಟಿಕೊಂಡು ತನ್ನ ಮನೆಗೆ ಹೋಗೇಬಿಟ್ಟಳು. ಅಂದು ಬುದ್ಧಿ ಕಲಿತವಳು ಆಮೇಲೆ ಉಸ್ತುವಾರಿ ಮಾತ್ರ ಮಾಡತೊಡಗಿದೆ. ಆದರೆ ದೇಸಾಯಿಗೂ ಹಿರಿಯ ದೊರೆಸಾನಿಗೂ ನಾನೇ ಊಟ ಬಡಿಸುತ್ತಿದ್ದೆ. ಆಮೇಲೆ ಸಿಂಗಾರೆವ್ವನ ಜೊತೆಯಲ್ಲೇ ಊಟ ಮಾಡುತ್ತಿದ್ದೆ.

ಅಂತೂ ಆಳು ಮತ್ತು ಅರಮನೆಯ ಸಂಬಂಧ ಹಿತಕರವಾಗಿಲ್ಲವೆಂದೆನಿಸಿತು. ಗೌಡರ ಮನೆಯಲ್ಲೇ ಹುಟ್ಟಿ ಬೆಳೆದವಳು, ನನಗೆ ಗೊತ್ತಿಲ್ಲವೇ? ನಂದಗಾವಿಯ ಗೌಡ ಎಂಥವನೇ ಇರಲಿ, ಅವನನ್ನು ಕಂಡರೆ ಆಳುಗಳು ಹೆದರಿ ನಡುಗುತ್ತಿದ್ದರು. ಹೆಣ್ಣಾಳುಗಳಂತೂ ಅವನ ಮುಖ ನೋಡಿದವರೇ ಅಲ್ಲ; ಇನ್ನು ಮುಖಕ್ಕೆ ಮುಖ ಕೊಟ್ಟು ಮಾತಾಡುವುದೆಲ್ಲಿಂದ ಬಂತು? ಅದೆಲ್ಲ ಇಟ್ಟುಕೊಳ್ಳುವವರ ಧಿಮಾಕನ್ನು ಅವಲಂಬಿಸಿರುತ್ತೆಂದು ಕಾಣುತ್ತದೆ. ಅಂಥ ಧಿಮಾಕು, ಜೋರು ದೇಸಾಯಿಯಲ್ಲಿರಲಿಲ್ಲ.

ಇನ್ನು ನಮ್ಮ ಸರಗಂ ದೇಸಾಯಿ : ಒಟ್ಟು ವಾತಾವರಣದಲ್ಲಿ ಸರಿಹೊಂದದ ಮನುಷ್ಯನಾಗಿ ಕಾಣುತ್ತಿದ್ದ. ಆತ ಸೋತವನಂತೆ, ಆದರೆ ಮತ್ತೆ ಗೆಲ್ಲುವೆನೆಂಬ ಆತ್ಮವಿಶ್ವಾಸವಿಲ್ಲದೆ ಸದಾ ಹತಾಶ ಮನೋಭಾವನೆಯಲ್ಲೇ ಇರುತ್ತಿದ್ದ. ಆದರೆ ತಾನು ದೇಸಾಯಿಯೆಂಬ, ಈ ಅರಮನೆಯ ಯಜಮಾನನೆಂಬ, ಒಂದು ಕಾಲದ ವೈಭವಕ್ಕೆ ಮಾಲೀಕನೆಂಬ ಹೆಮ್ಮೆ ಒಳಗೊಳಗೇ ಇತ್ತು. ಸಾಧ್ಯವಿದ್ದಿದ್ದರೆ ಅದನ್ನು ಚಲಾಯಿಸಲು ಈಗಲೂ ಸಿದ್ಧನೇ. ಆದರೆ ಅದರ ಪ್ರಭಾವದಿಂದ ಏನನ್ನೂ ಸಾಧಿಸಲಿಕ್ಕೆ ಆಗುವುದಿಲ್ಲ ಎಂಬ ಕೊರಗು ಮಾತ್ರ ಆತನ ಮುಖದಲ್ಲಿ ಕಾಣುತ್ತಿತ್ತು. ಹೀಗಾಗಿ ಚಲಾವಣೆಯಿಲ್ಲದ ನಾಣ್ಯಗಳ ದೊಡ್ಡ ನಿಧಿಯ ಯಜಮಾನನಂತಿದ್ದ.

ಕಾಲಮೇಲೆ ಕಾಲು ಹಾಕಿ ಆತ ಕೂತಾಗ ದೇಸಗತಿಯ ಧಿಮಾಕೇನೋ ಆ ಭಂಗಿಯಲ್ಲಿರುತ್ತಿತ್ತು. ಆದರೆ ಅವನು ಹಾಗೂ ಕೂರುತ್ತಿರಲಿಲ್ಲ. ಮೊಳಕಾಲಿಗೆ ಎರಡೂ ಕೈ ಸುತ್ತುತ್ತಿದ್ದ. ಆದ್ದರಿಂದ ಮೈಗಳ್ಳರಂತೆ ಕಾಣುತ್ತಿದ್ದ. ಆಕಳಿಕೆಯಿಂದ ತುಂಬಿಕೊಂಡಿರುತ್ತಿದ್ದ ಸಣ್ಣ ಕಣ್ಣು, ಉದ್ದಕ್ಕೆ ಚಾಚಿ ಮೇಲ್ದುಟಿಯ ಮೇಲೆ ಬಿದ್ದ ಚೂಪು ಮೂಗು, ಸಣಕಲು ದಂಟಿನಂಥ ದೇಹ-ನಡೆಯುವಾಗಲೂ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದುದರಿಂದ-ಯಾವುದೇ ಗತ್ತು ಗಮ್ಮತ್ತುಗಳಿಗೆ ಅವಕಾಶವೇ ಇರುತ್ತಿರಲಿಲ್ಲ.

ಸಾಮಾನ್ಯವಾಗಿ ಗೌಡ, ದೇಸಾಯಿ, ಕುಲಕರ್ಣಿ ಮುಂತಾದವರು ಕಷ್ಟಪಟ್ಟಾದರೂ ಗಂಭೀರವಾಗಿ ಕಾಣುವಂತೆ ಶ್ರೀಮಂತ ಉಡುಪು ಧರಿಸುವುದು ವಾಡಿಕೆ. ಈತನ ಉಡುಪು ಸ್ವಚ್ಛವಾಗಿರುತ್ತಿದ್ದಿತಾದರೂ ಅದರಲ್ಲಿ ದೇಸಗತಿಯ ಛಾಪಿರುತ್ತಿರಲಿಲ್ಲ, ಬೇಕಾದಷ್ಟು ನಿರ್ಲಕ್ಷತನ ಇತ್ತು. ಆದರೆ ರುಂಬಾಲನ್ನು ಮಾತ್ರ ಪಾರಿಜಾತದ ಕೃಷ್ಣನ ಹಾಗೆ ಒಪ್ಪವಾಗಿ ಸುತ್ತಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಕೆಳಗಿನ ಅಸ್ತವ್ಯಸ್ತ ಧೋತ್ರ ಅಂಗಿಗೂ, ತಲೆಯ ಮೇಲಿನ ಭಾರೀ ಬೆಲೆಯ ಜರತಾರಿ ರುಂಬಾಲಿಗೂ ತಾಳೆಯಾಗುತ್ತಿರಲಿಲ್ಲ. ಆದರೆ ಆ ಬಗ್ಗೆ ಅವನೆಂದೂ ತಲೆಕೆಡಿಸಿಕೊಂಡವನೇ ಅಲ್ಲ. ಅವನು ನಿಲ್ಲುವ ನಿಲುವಿಗಾಗಲೀ, ಕೂರುವ ಭಂಗಿಗಾಗಲೀ, ನಡೆಯುವ ರೀತಿಗಾಗಲೀ ಆ ಉಡುಪು ಸಮವಲ್ಲವೆಂದೇ ನನ್ನ ಅನಿಸಿಕೆಯಾಗಿತ್ತು.

ಆದರೆ ಹೇಳಿಕೊಳ್ಳುವಂಥ ಸ್ನೇಹಿತರೂ ಅವನಿಗಿರಲಿಲ್ಲ. ಎಷ್ಟೊಂದು ದಿನಗಳಿಂದ ನೋಡುತ್ತಿದ್ದೇನೆ, ಅರಮನೆಯ ಕಡೆಗೆ ಊರವರ ಸುಳಿವೇ ಇರುತ್ತಿರಲಿಲ್ಲ. ಆಗಾಗ ತಲೆ ಹಾಕುವವನೆಂದರೆ ಪರಮಶೆಟ್ಟಿ ಒಬ್ಬನೇ. ಎತ್ತರವಾಗಿ, ಕರ್ರಗಿನ ಆಕೃತಿಯ ಶೆಟ್ಟಿ ನೋಡಿದರೆ ಗೌರವ ಬರುವಂತೆ ಸುಲಭವಾಗಿ ಗಂಭೀರನಾಗಿರಬೇಕಿತ್ತು. ಬಂದವನು ಆಕಡೆ ಈ ಕಡೆ ನೋಡಿ, ಆಸುಪಾಸು ಯಾರೂ ಇಲ್ಲವೆಂದು ಖಾತ್ರಿಯಾದಾಗ ಮಾತ್ರ ದೇಸಾಯಿಯ ಕಿವಿಯಲ್ಲಿ ಏನೇನೋ ಪಿಸುಗುಟ್ಟುತ್ತಿದ್ದ. ಇವರಿಬ್ಬರೂ ಮಾತಾಡುವ ರೀತಿ ಕಂಡವರಿಗೆ ಇವರ ಮಧ್ಯದಲ್ಲೇನೋ ಕಳ್ಳವ್ಯವಹಾರವಿದೆಯೆಂದು ತಕ್ಷಣ ಗೊತ್ತಾಗುತ್ತಿತ್ತು. ಹೆಂಗಸರ ಮುಂದೆ ಮಾತ್ರ ಶೆಟ್ಟಿ ಮುಖಕ್ಕೆ ಬಿಗಿ ತಂದುಕೊಂಡು ಗಂಭೀರವಾಗಿರುವುದಕ್ಕೆ ಪ್ರಯತ್ನಿಸುತ್ತಿದ್ದ. ಹಾಗೂ ಹೆಂಗಸರು ತನ್ನ ಬಗ್ಗೆ ತುಂಬ ಗೌರವ ಭಾವನೆಯಿಂದಿರಬೇಕೆಂದು ಅವನ ಅಪೇಕ್ಷೆಯಾಗಿತ್ತು.

ಮುಂಜಾನೆ ಎದ್ದು ಸ್ನಾನ, ನ್ಯಾರೆ ಮಾಡಿ ತನ್ನ ರುಂಬಾಲು ಸುತ್ತಿಕೊಂಡು ಹೋಗಿ ದೇಸಾಯಿ ಆಲದ ಕಟ್ಟೆಯ ಮೇಲೆ ಬೀಡಿಸೇದುತ್ತ ಕೂರುತ್ತಿದ್ದ. ಹೆಂಗಸರು ನೀರಿಗೆ ಹೋಗುವುದಕ್ಕೂ ಜನ ಹೊಲಗಳಿಗೆ ಹೋಗುವುದಕ್ಕೂ ಅದೇ ಮುಖ್ಯ ರಸ್ತೆಯಾದ್ದರಿಂದ ಸದಾಕಾಲ ಜನಗಳ ಓಡಾಟದಿಂದ ತುಂಬಿರುತ್ತಿತ್ತು. ಆದರೆ ಆ ಯಾವ ಮಂದಿಗೂ ದೆಸಾಯಿ ಕೂತ ಪರಿವೆ ಇರುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು ಬರುತ್ತಿದ್ದರು. ಅವರಲ್ಲಿ ಒಬ್ಬಿಬ್ಬರು, ಅದೂ ಇದೂ ಮಾತಾಡುವ ಚಟದವರು ಮಾತ್ರ “ಏನ್ರೀ ಮಾರಾಜ್ರ, ಕುಂತ್ರಿ?”-ಎಂದು ಹೇಳಿದರೆ ಅದೇ ಹೆಚ್ಚು. ಅವರೂ ಉತ್ತರಕ್ಕಾಗಿ ಕಾಯುತ್ತಿರಲಿಲ್ಲ. ದೇಸಾಯಿಗಿದು ಗೊತ್ತು. ಬರೀ ಮುಗುಳುನಗುತ್ತಿದ್ದನಷ್ಟೆ.

ದೇಸಾಯಿ ಮಧ್ಯಾಹ್ನ ಊಟ ಮಾಡಿ ಮಲಗಿದರೆ ಮತ್ತೆ ಏಳುವುದು ಇಳಿಹೊತ್ತಿಗೇನೇ. ಎದ್ದು ಊರಿನಲ್ಲಿ ಮಾಯವಾಗುತ್ತಿದ್ದ. ಆಮೇಲೆ ಬರುವುದು ಮಧ್ಯರಾತ್ರಿಗೇನೇ. ಕುಡಿದ ಅಮಲಿನಲ್ಲೇ. ಒಮ್ಮೊಮ್ಮೆಯಂತೂ ಅವನನ್ನು ಹೊತ್ತುಕೊಂಡೇ ಬರುತ್ತಿದ್ದರು. ಅಂದರೆ ರಾತ್ರಿಮಾತ್ರ ಕುಡಿಯುತ್ತಾನೆಂದಲ್ಲ, ಅಥವಾ ಮಧ್ಯರಾತ್ರಿಗೇ ಮನೆಗೆ ಬರುತ್ತಾನೆಂದೂ ಅಲ್ಲ. ಒಮ್ಮೊಮ್ಮೆ ಮನೆಯಲ್ಲೇ ಕುಡಿಯುತ್ತಿದ್ದ, ಮುಂಜಾನೆ ಕೂಡ. ಕುಡಿದಾಗ ಮಾತ್ರ ದೇಸಾಯಿಯನ್ನು ನೋಡಲಾಗುತ್ತಿರಲಿಲ್ಲ. ಅರೆಹುಚ್ಚನಾಗುತ್ತಿದ್ದ. ಬಯಲಾಟದ ಮಾತುಗಳನ್ನು ಒದರಿ ಒದರಿ ಪಕ್ಕದಲ್ಲಿ ಯಾರಿದ್ದರೆ ಅವರಿಗೇ ಹೇಳುವುದು, ತಾರಕದಲ್ಲಿ ಹಾಡುವುದು, ಅಭಿನಯಿಸುವುದು ಸುರುವಾಗುತ್ತಿತ್ತು.

ಬಂದ ಹೊಸದರಲ್ಲಿ ಒಮ್ಮೆ, ನನಗಿನ್ನೂ ನೆನಪಿದೆ: ಕುಡಿದು ಮುಸ್ಸಂಜೆಯ ಹೊತ್ತಿಗೆ ಅರಮನೆಗೆ ಬಂದ. ಅರಮನೆಗೆ ಸಾವಿರ ಕಂಬಗಳು, ಇಕಾ ಕಾಣುತ್ತವಲ್ಲ. ಇಲ್ಲಿ ಎಷ್ಟು ಕಂದೀಲಿಟ್ಟರೂ ಈ ಕಂಬಳಿಗಳಿಂದಾಗಿ ಬೆಳಕು ಸಾಲುವುದೇ ಇಲ್ಲ. ರಾತ್ರಿ ನಾನು ಮತ್ತು ಸಿಂಗಾರೆವ್ವ ದರ್ಬಾರಿಗೆ ಕಾಲಿಡುತ್ತಲೇ ಇರಲಿಲ್ಲ. ಧಡೂತಿ ಕಂಬಗಳು ದಪ್ಪ ನೆರಳು ಚೆಲ್ಲಿಕೊಂಡು ಭೂತಗಳ ಹಾಗೆ ನಿಂತಿರುತ್ತಿದ್ದವು. ನಿಂತು ಮಾತಾಡಿದರೆ ಮಾತಾಡುತ್ತಿರುವವರು ನಾವೋ ಅಥವಾ ಈ ಕಂಬಗಳೋ ಎಂದು ಅನುಮಾನ ಮೂಡಿ ಅಂಜಿಕೆಯಾಗುತ್ತಿತ್ತು. ದೇಸಾಯಿ ಕುಡಿದು ಮತ್ತನಾಗಿದ್ದನಲ್ಲ, ಈ ಕಂಬಗಳ ಜೊತೆ ಮಾತಾಡುತ್ತ, ಪ್ರಾಸ ಹೇಳುತ್ತ, ತಾರಕ ಒದರುತ್ತ ಒಬ್ಬನೇ ಅಲೆದಾಡುತ್ತಿದ್ದ. ದೇಸಾಯಿಯ ಮಾತಿನ ಪ್ರತಿಧ್ವನಿಯಾಗುತ್ತಿತ್ತು. ಆಗ ಈ ಕಂಬಗಳು ಅವನೊಂದಿಗೆ ಗಹಗಹಿಸಿ ನಗುತ್ತಿರುವಂತೆ ಇಲ್ಲವೇ ಗಂಭೀರವಾಗಿ ಅಳುತ್ತಿರುವಂತೆ ಭಾಸವಾಗುತಿತ್ತು. ದಟ್ಟವಾದ ಕಾಡಿದೆ ಅಂದುಕೋ, ಅಮಾವಾಸ್ಯೆಯ ಕತ್ತಲೆ, ಒಂದೇ ಒಂದು ಹಾಳು ದೇವಾಲಯ, ಅದೆಷ್ಟು ಹಾಳಾಗಿದೆಯೆಂದರೆ ಈಗ ಉಳಿದಿರುವುದು ಬರೀ ಕಂಬಗಳು. ಆ ಕಂಬಗಳ ಮಧ್ಯೆ ಒಂದು ದೆವ್ವ ಕಿರುಚುತ್ತ ಓಡ್ಯಾಡಿದರೆ ಹ್ಯಾಗಿರುತ್ತದೆ: ಹಾಗಿತ್ತು ಆ ದೃಶ್ಯ. ಆಳದಲ್ಲಿ ಆತನಿಗೇನೋ ಭಾರೀ ದುಃಖವಿದೆಯೆಂದು ನನಗಾಗಲೇ ಹೊಳೆಯಿತು. ನಮಗೆ ಕಾಣುವ ಈತನ ಪಾತಳಿ ಇವನಲ್ಲ. ಅವನ ಒಳಗಿನ ಈ ವೇದನೆ ಅವನಿಗೇ ಗೊತ್ತಾಗದ ರೀತಿಯಲ್ಲಿ ಅವನನ್ನು ಮೀರಿ ಹೊರಗೆ ಬರುತ್ತದೆಂದು ಅನ್ನಿಸಿತು.

ಆದರೆ ಹೆಂಗಸರನ್ನು ನೋಡಿದಾಗ ದೇಸಾಯಿಯ ಕಣ್ಣುಗಳು ಹೊಳೆಯುತ್ತಿದ್ದವು. ಲಂಪಟನ ಹಾಗೆ ಅವರನ್ನು ನೋಡುತ್ತಿದ್ದ. ನೋಡಿ ನೋಡಿ ಮುಖ ಕೆಂಜಗಾಗಿ ಆಕಳಿಕೆ ಬರುತ್ತಿತ್ತು. ಆಗ ಅವನ ಕಣ್ಣು ಎಣ್ಣೆಣ್ಣೆಯಾಗಿ ಒದ್ದೆಯಾಗುತ್ತಿದ್ದವು.

ಇಲ್ಲಿಗೆ ಬಂದಿವಲ್ಲ, ಸಿಂಗಾರೆವ್ವ ‘ಹೊಸಮನೆಗಿತ್ತಿ’ ತನವನ್ನು ಅನುಭವಿಸಲೆ ಇಲ್ಲ. ಮಾರನೇ ದಿನವೇ ಇಂಥ ಇಡೀ ದೊಡ್ಡ ಅರಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಬಂದ ದಿನದಿಂದಲೇ ಹೊಸ ಸೊಸೆಗೆ ಮನೆತನದ ಹುವೇನವೇ ಕಾರುಭಾರ ಯಾರು ಕೊಡುತ್ತಾರೆ? ಆದರೆ ನಿಭಾಯಿಸಲಿಕ್ಕೆ ಮನೆಯಲ್ಲಿ ಬೇರೆ ಯಾರಾದರೂ ಇದ್ದರಲ್ಲವೇ? ಹಿರಿಯ ದೊರೆಸಾನಿ ಅಂದರೆ ಸಿಂಗಾರೆವ್ವನ ಅತ್ತೆ ಹಣ್ಣುಹಣ್ಣು ಮುದುಕಿ, ಹಾಸಿಗೆ ಹಿಡಿದಿದ್ದಳು. ಇತ್ತ ದೇಸಾಯಿ ಮನೆಕಡೆ ಎಂದೂ ಲಕ್ಷ್ಯ ಕೊಟ್ಟವನೇ ಅಲ್ಲ. ನನಗೆ ಆಶ್ಚರ್ಯವಾದದ್ದು ಇಷ್ಟು ದಿನ ಈ ಮನೆತನ ಹ್ಯಾಗೆ ತಡೆದಿದೆ -ಎಂದು.

ನಮ್ಮ ಸಿಂಗಾರೆವ್ವ ಬಹಳ ಜಾಣೆ. ಎಷ್ಟೆಂದರೂ ಗೌಡನ ರಕ್ತ ನೋಡು. ಬಂದ ಒಂದು ತಿಂಗಳಲ್ಲೆ ಇದನ್ನೊಂದು ‘ಮನೆತನ’ ಅಂತ ಮಾಡಿದಳು. ನಾನೂ ನೆರವಾದೆ ಅಂತಿಟ್ಟಿಕೋ. ನನ್ನಂಥವಳ ನೆರವು ಅಂಥಾ ದೊಡ್ಡ ಮನೆಯ ಯಾವ ಮೂಲೆಗಾದೀತು? ಅಂತೂ ಒಂದು ತಿಂಗಳಲ್ಲಿ ಖರೆಖರೆ ದೊರೆಸಾನಿಯಾಗಿ ಬಿಟ್ಟಳು.

ಇನ್ನವಳ ಅತ್ತೆ,- ಅವಳದೂ ವಿಚತ್ರ ಸ್ವಭಾವವೇ. ಅವಳ ಸೇವೆಯನ್ನು ಖುದ್ದಾಗಿ ನಾನೇ ಮಾಡುತ್ತಿದ್ದೆ. ಸಿಂಗಾರೆವ್ವನೂ ಸಹಕರಿಸುತ್ತಿದ್ದಳು. ಹೆಸರು ನಾಗಮ್ಮ ಎಂದು. ವಯಸ್ಸು ಹತ್ತಿರ ಹತ್ತಿರ ನೂರಿದ್ದೀತು. ಒಂದೂ ಹಲ್ಲಿರಲಿಲ್ಲ. ಬೂದು ಬಣ್ಣದ ಚಿಕ್ಕಚಿಕ್ಕ ಕಣ್ಣುಗಳು, ಬಿಳಿ ಮುಖದಲ್ಲಿ ಸುಕ್ಕಿನ ಗೆರೆಗಳು ಗೋಣೀಚೀಲದ ಹಾಗೆ ಹೆಣೆದುಕೊಂಡಿದ್ದವು. ಅವಳು ಹಾಸಿಗೆಬಿಟ್ಟು ಈಚೆಗೆ ಬರುವಂತಿರಲಿಲ್ಲ. ಊಟೋಪಚಾರಗಳೆಲ್ಲಾ ಹಾಸಿಗೆಯ ಮೇಲೇ ಆಗಬೇಕು. ಜಳಕ ಎಂದರೇ ಆ ಮುದುಕಿಗಾಗದು. ತಿಂಗಳಿಗೊಮ್ಮೆಯಾದರೂ ನಾನೇ ಜಳಕ ಮಾಡಿಸುತ್ತೇನೆಂದರೂ “ಬ್ಯಾಡ ತಾಯಿ, ನಿನ್ನ ಕಾಲ ಬೀಳತೀನು” ಎಂದು ಹೇಳುತ್ತಿದ್ದಳು. ಎಷ್ಟು ದಿನಗಳಿಂದ ಹಾಗೇ ಇದ್ದಳೋ, ಸಮೀಪ ಹೋದರೆ ಮುಗ್ಗುಲು ಜೋಳದ ಹಾಗೆ ನಾರುತ್ತಿದ್ದಳು. ಕಡ್ಡಿಯಂಥ ಕೈಕಾಲು-ಒಂದು ಕಾಲಕ್ಕೆ ಮೈ ತುಂಬಿಕೊಂಡಿದ್ದಳೆಂದು ಹೇಳುವುದಕ್ಕೆ ಮೂಳೆಗಂಟಿದ್ದ ಅವಳ ಬಿಳಿ ಚರ್ಮ ಹೊಟ್ಟೆ ಮತ್ತು ಸೊಂಟದಲ್ಲಿ ಜೋತುಬಿದ್ದಿತ್ತು. ಆದರೆ ಯಾವಾಗಲೂ ಅಂದರೆ ಮಲಗಿದಾಗಲೂ ಮುದುಕಿಯ ಒಂದು ಕೈ ಸೊಂಟದ ಮೇಲಿರುತ್ತಿತ್ತು. ನಾನೇನಾದರೂ ಸಮೀಪ ಹೋದರೆ ಸಾಕು. ಸರ್ರನೆ ಕೋಲು ಹಿಡಿದುಕೊಂಡು “ಯಾರವರ?” ಎನ್ನುತ್ತಿದ್ದಳು. ನಾನು ನನ್ನ ಹೆಸರು, ಗುರ್ತು ಹೇಳಿದರೂ ಅವಳ ಬಳಿ ಕುಳಿತುಕೊಳ್ಳುವ ಹಾಗಿರಲಿಲ್ಲ. ಹಾಗೇನಾದರೂ ಕೂತರೆ ದೂಕಿ ದೂರ ಸರಿಸುತ್ತಿದ್ದಳು. ಆ ವಾಸನೆಯಿಂದಾಗಿ ನಾನೂ ಅವಳ ಸಮೀಪಕ್ಕೆ ಹೋಗುತ್ತಿರಲಿಲ್ಲವೆನ್ನು. ಆದರೆ ಅವಳ್ಯಾಕೆ ಈ ಥರ ಮನುಷ್ಯರನ್ನು ದೂರವಿಡುತ್ತಾಳೆಂದು ಬಹಳ ದಿನ ನನಗೆ ಗೊತ್ತಾಗಲೇ ಇಲ್ಲ. ಊಟಕ್ಕೆ ಹಾಕುವಾಗ ಅವಳನ್ನೆಬ್ಬಿಸುವ ಮೊದಲು ತಾನೇ ಕಷ್ಟಪಟ್ಟು ಎದ್ದು ಕೂರುತ್ತಿದ್ದಳು. ಮಲಮೂತ್ರ ಮಾಡಿಸುವಾಗ ಮಾತ್ರ ಅವಳು ನಿಸ್ಸಹಾಯಕಳಾಗುತ್ತಿದ್ದಳು. ಆದರೂ ಕೂಡ ಅವಳ ರಟ್ಟೆಯಲ್ಲೇ ಕೈಹಾಕಿ ಎಬ್ಬಿಸಬೇಕು, ಮಂಚದ ಕೆಳಗೇ ಕೂರಿಸಬೇಕು. ಆಗ ಸೊಂಟದ ಕಡೆಗೇನಾದರೂ ನಮ್ಮ ಕೈ ತಪ್ಪಿಹೋಯಿತೆನ್ನು, ಅದಿನ್ನೂ ಸೊಂಟ ಮುಟ್ಟುವ ಮೊದಲೇ ಅವಳಿಗೆ ಗೊತ್ತಾಗಿ ಮೊಳಕೈಯಿಂದ ಗುದ್ದುತ್ತಿದ್ದಳು. ನನಗೆ ಅದೇನೆಂದು ತಿಳಿಯುವ ಕುತೂಹಲ. ಸಿಂಗಾರೆವ್ವ “ಮುದುಕೇರೆಲ್ಲ ಹಾಂಗಽ ಇರತಾರ ಬಿಡು” ಎಂದು ನಿರ್ಲಕ್ಷಿಸಿದ್ದಳು.

ಬರಬರುತ್ತ ಆ ಮುದುಕಿಗೂ ನನಗೂ ಸಲುಗೆ ಬೆಳೆಯಿತು. ನಾನು ಅವಳ ಕೋಣೆಗೆ ಹೋದರೆ, ಈಗ ಮೊದಲಿನಂತೆ ಕೋಲು ತಗಂಡು “ಯಾರವರ?” ಎನ್ನುತ್ತಿರಲಿಲ್ಲ. “ಶೀನಿಂಗೇನ? ಬಾ ಬಾ” ಎನ್ನುತ್ತಿದ್ದಳು. ನಾನು ಹೋದಾಗೆಲ್ಲ ಆ ಮುದುಕಿ ತನ್ನ ಬೊಚ್ಚು ಬಾಯಿ ಬಿಟ್ಟು ಕೇಳುತ್ತಿದ್ದುದು ಒಂದೇ ಪ್ರಶ್ನೆ: “ಸಿಂಗಾರಿ ಬಸರಾದ್ಲ?”ಅದಕ್ಕೇ ಸಿಂಗಾರೆವ್ವ ಅವಳ ಹತ್ತಿರ ಹೋಗುವುದನ್ನು ಕಡಿಮೆ ಮಾಡಿದ್ದಳು. ಅತ್ತೆಯೆಂಬ ಅಕರ್‍ತಿಯಿಂದ ಹೋದರೆ, ಹೋದೊಡನೆ ಅವಳ ಹೊಟ್ಟೆಗೇ ಕೈಹಾಕಿ “ಬಸಿರಾದಿ?” ಎಂದು ಕೇಳುತ್ತಿದ್ದರೆ ಹ್ಯಾಗೆ ಹೋಗುವುದು? ಒಮ್ಮೆ ಇದೇ ಬಗ್ಗೆ ನನಗೂ ಅವಳಿಗೂ ಕೊಂಚ ಮಾತಾಯಿತು.
“ಬಸರ ಬಸರಂದರೇನು, ಶೀರೀ ನಿರಿಗಿ ಅಂತ ತಿಳಿಕೊಂಡ್ಯೇನು, ಬೇಕಾದಾಗ ಹಾಕಿಕೊಳ್ಳಾಕ, ಬ್ಯಾಡೆಂದಾಗ ಬಿಚ್ಚಾಕ? ತುಸು ದಿನ ತಡಿ”-ಅಂದೆ.
“ಇನ್ನಽ ಎಷ್ಟುದಿನ ಬೇಕ? ನನ್ನಂಥಾ ನನಗ ಈಗ ಬೇಕಾದರೂ ಗಂಡು ಸಿಗಲಿ, ಹಾ ಅನ್ನೋದರಾಗಽ ನಾಕ್ಹಡೀತೇನ. ಈಕಿಗೇನ ಧಾಡಿ?”
ಭಲೇ ಮುದುಕು ಅಂದುಕೊಂಡೆ, ನಗೆ ತಡೆಯುತ್ತಾ,
“ಹುಳುಕ ದಂಟಿನಂಥಾ ಮಗನ್ನ ಕೊಟ್ಟೀದಿ, ಅವನ್ನ ಕಟ್ಟಿಕೊಂಡು ದಿನಕ್ಕೊಂದು ಹಡ್ಯಕಾದಿತ?”-ಅಂದೆ.
“ಏ ಬಸರಾಗಾಕ ಒನಿಕೀ ಆಗಬೇಕಂತಿಲ್ಲಗಽ, ಉಚ್ಚೀ ದಾಟಿದರ ಸಾಕು. ಉಚ್ಚೀ ಹೊಯ್ತಾನೋ ಇಲ್ಲೋ? ಅದ್ಹೇಳು.”
ಈಗ ಮಾತ್ರ ನನಗೆ ನಗೆ ತಡೆಯಲಿಕ್ಕಾಗಲಿಲ್ಲ. ನಕ್ಕೆನಲ್ಲ, ಮುದುಕಿ ತಾನೂ ಹಾಸಿಗೆಯ ಮೇಲೆ ಕುಪ್ಪಲಿಸುತ್ತ ಬೊಚ್ಚಬಾಯಿ ತೆಗೆದು ನಾನು ನಗುವುದನ್ನೇ ಅಣಕಿಸತೊಡಗಿದಳು.
ಅವಳು ಒಮ್ಮೊಮ್ಮೆ ಖುಶಿ ಬಂದಾಗ ದನಿ ತೆಗೆದು ಹಾಡುತ್ತಿದ್ದಳು. ಆದರೆ ಆ ಹಾಡು ಕೇಳಿದಾಗ ನಮ್ಮಿಬ್ಬರಿಗೂ ಸಂತೋಷವಾಗುತ್ತಿರಲಿಲ್ಲ. ಅದು, ಎಲ್ಲೋ ದೂರದಲ್ಲಿ ಒಂದು ನೊಂದ ಹೆಣ್ಣು ನಾಯಿ ಒದರಿ ಅಳುತ್ತಿದ್ದಂತೆ ಕೇಳಿಸುತ್ತಿತ್ತು. ಆ ಹಾಡು ಕೂಡ ಯಾವಾಗಲೂ ಒಂದೇ ನುಡಿ,-

ಚಿನ್ನದ ನಡಪಟ್ಟಿ ರನ್ನದ ನಡಪಟ್ಟಿ
ಚಿನ್ನರನ್ನದ ನಡಪಟ್ಟಿ||ಸೋ||
ಚಿನ್ನರನ್ನದ ನಡಪಟ್ಟಿ ಕೊಡುವೇನ
ಮೊಮ್ಮಗನ ಹಡದ ಸೊಸಿಮುದ್ದಿಗೆ||ಸೋ||

ನಮ್ಮ ಸಲಿಗೆ ಜಾಸ್ತಿಯಾದಂತೆ ನನಗೇನಾದರೂ ಅವಳು ಒರಟಾಗಿ ಮಾತಾಡಿದರೆ “ನಿನ್ನ ಸೊಂಟ ಹಿಡಿತೇನ್ನೋಡು” ಎಂದು ಹೇಳುತ್ತಿದ್ದೆ. ಅವಳು “ಬ್ಯಾದ ತಾಯೀ, ಬ್ಯಾಡ” ಎಂದು ಕೋಲು ಅಡ್ಡಹಿಡಿದು ತಡೆಯುತ್ತಿದ್ದಳು.

ನಡೆಯಲಿಕ್ಕೆ ಬಂದ ಮೊದಲನೇ ದಿನ ಆ ಮುದುಕಿ ಸೊಸೆಯ ತಲೆಮೇಲೆ ಅಂತಃಕರಣಪೂರ್ವಕ ಕೈಯಿಟ್ಟು “ಲಗೂ ಗಂಡುಮಗನ್ನ ಹಡಿ ಮಗಳಽ” ಎಂದಿದ್ದಳು. ಆಗಾಗ ನನ್ನನ್ನು ಕರೆದು ಕಿವಿಯಲ್ಲಿ “ಈ ತಿಂಗಳೂ ಸಿಂಗಾರಿ ಮುಟ್ಟಾದಳ?” ಎಂದು ಕೇಳುತ್ತಿದ್ದಳು. ಮತ್ತು ಸೊಸೆಯೊಬ್ಬಳ ಮುಖ್ಯ ಕರ್ತವ್ಯವೆಂದರೆ ಅದೇ ಎಂದೂ ಹೇಳುತ್ತಿದ್ದಳು. ಒಂದು ಸಲ ಅವಳು ಬಸಿರಾಗಿ ಹಡೆದಳೋ ಆಮೇಲೆ ತೌರುಮನೆಯ ಆಸೆ ತಾನೇ ಮಾಯವಾಗಿ ಆಗ ಮಾತ್ರ ಈ ಮನೆಯನ್ನು ನಿಜವಾಗಿ ನಂಬುವಳೆಂದು ಅವಳ ಭಾವನೆಯಾಗಿತ್ತು.

ಒಮ್ಮೆ ನನ್ನನ್ನು ಕರೆದು ಹಾಸಿಗೆಯ ಮೇಲೆ ತನ್ನ ಬಳಿಯೇ ಕೂರಿಸಿಕೊಂಡಳು. ತಡಕಾಡಿ ನನ್ನ ಕೈಹಿಡಿದುಕೊಂಡು ಅದನ್ನೊಯ್ದು ಈವರೆಗೆ ನಾನು ಅವಳ ಯಾವ ಸೊಂಟವನ್ನು ಮುಟ್ಟಲಾಗಿರಲಿಲ್ಲವೋ ಆ ಸೊಂಟಕ್ಕೆ ಅಂಟಿಸಿಕೊಂಡಳು. ನಾನು ಕೈಯಾಡಿಸಿದೆ. ಏನೂ ಅರ್ಥವಾಗಲಿಲ್ಲ. “ಇಕಾ ನಡಪಟ್ಟಿ, ಕೈಗಿ ಹತ್ತಿತಲ್ಲ?” ಅಂದಳು. ಹೌದು, ಅವಳ ನಡುವಿನಲ್ಲಿ ನಡುಪಟ್ಟಿ ಇತ್ತು ನಿಜ. ಅವಳೇ ಅದರ ಸುತ್ತ ನನ್ನ ಕೈ ಆಡುವ ಹಾಗೆ ಮಾಡಿದಳು. ಆಮೇಲೆ ಇನ್ನೂ ನನ್ನ ಹತ್ತಿರಕ್ಕೆ ಸರಿದು ಕಿವಿಯಲ್ಲಿ ದೊಡ್ಡ ಗುಟ್ಟು ಹೇಳುವ ಹಾಗೆ,-“ಚಿನ್ನದ್ದಽ ಅದು, ಹದಿನೆಂಟ ತೊಲಿ ಐತಿ. ತಿಳೀತಲ್ಲ?” ಎಂದಳು. ನನಗೇನೂ ತಿಳಿಯಲಿಲ್ಲ. ಅದ್ಯಾಕೆ ಈ ಮುದುಕಿ ಹೀಗೆ ಮಾಡುತ್ತಿದ್ದಾಳೆಂದೂ ಬಗೆಹರಿಯಲಿಲ್ಲ. ನಾನೂ ಗುಟ್ಟಾಗೇ “ಅದಕ್ಕ ನಾ ಏನ ಮಾಡಲಿ?” ಎಂದು ಕೇಳಿದೆ. ಈಗ ಮಾತ್ರ ಮುದುಕಿ ತನ್ನ ಬೊಚ್ಚು ಬಾಯನ್ನು ಅಗಲವಾಗಿ ತೆಗೆದು ಮುಸಿಮುಸಿ ನಕ್ಕಳು. ಮತ್ತೆ ಪಿಸುದನಿಯಲ್ಲಿ “ಸಿಂಗಾರಿಗೆ ಹೇಳು, ಲಗು ಗಂಡಮಗನ್ನ ಹಡಿ ಅಂತ. ಆಕಿ ಹಡದರ ಈ ಚಿನ್ನದ ನಡಪಟ್ಟಿ ಆಕೀಗೇ ಕೊಡತೀನಿ” ಎಂದು ಹೇಳಿದಳು. ಈ ಮುದುಕಿ ಮೊಮ್ಮಗನನ್ನು ಕಾಣುವುದಕ್ಕಾಗೇ ಜೀವ ಹಿಡಿದ ಹಾಗೆ ಚಡಪಡಿಸುವುದನ್ನು ಕಂಡು ನನಗೆ ಮೋಜೆನಿಸಿತು.

ಈ ಮೋಜಿನ ಸಂಗತಿಯನ್ನು ಸಿಂಗಾರೆವ್ವನಿಗೆ ಹೇಳಬೇಕೆಂದು ಮನಸ್ಸಾಯಿತು. ಆದರೆ ಅವಳು ವಿರಾಮವಾಗಿ ಸಿಕ್ಕುವುದೇ ಅಪರೂಪ.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.