ವಿವೇಕ ಶಾನಭಾಗರೊಂದಿಗೆ ಸಂದರ್ಶನ

ಸಂದರ್ಶಕರು: ಸುದರ್ಶನ ಪಾಟೀಲ ಕುಲಕರ್ಣಿ, ರಾಘವೇಂದ್ರ ಉಡುಪ ಮತ್ತು ವಿನಾಯಕ ಪಂಡಿತ

ಕೆ.ಎಸ್.ಸಿ.: ತೀರಾ ಇತ್ತೀಚಿನವರೆಗೆ ಹೆಚ್ಚಾಗಿ, ಸಣ್ಣಕತೆಯೇ ನಿಮ್ಮ ಪ್ರಿಯವಾದ ಬರಹ ಮಾಧ್ಯಮವಾಗಿತ್ತು. ಈ ಪ್ರಕಾರಕ್ಕೆ ನಿಮ್ಮನ್ನು ಸೆಳೆದ ವಿಶೇಷ ಆಕರ್ಷಣೆ ಏನಾಗಿತ್ತು? ನಿಮ್ಮ ಬರವಣಿಗೆ ಬೆಳೆದು ಬಂದ ಕ್ರಮದ ಬಗ್ಗೆ ಹಿಂದಿರುಗಿ ನೋಡಿದಾಗ ನಿಮಗೇನನ್ನಿಸುತ್ತದೆ?

ವಿ.ಶಾ.: ಓದುವುದು ನನಗೆ ಬಾಲ್ಯದಿಂದಲೂ ಅತ್ಯಂತ ಪ್ರಿಯವಾದ ಸಂಗತಿ. ಇದೇ ನನ್ನನ್ನು ಬರವಣಿಗೆಗೆ ಪ್ರೇರೇಪಿಸಿತು. ಕವಿತೆ ಬರೆಯುವುದರಿಂದಲೇ ಆರಂಭಿಸಿದರೂ ಅದು ನನ್ನ ಕ್ಷೇತ್ರವಲ್ಲ ಎಂದು ಬಹಳ ಬೇಗನೇ ಗೊತ್ತಾಯಿತು. ನಾನು ಬರೆಯಲು ಆರಂಭಿಸಿದ ದಿನಗಳಲ್ಲಿ ನವ್ಯ ಚಳುವಳಿ ಪ್ರಭಾವಶಾಲಿಯಾಗಿತ್ತು. ಕನ್ನಡದ ಮುಖ್ಯ ಸಣ್ಣ ಕತೆಗಾರರೆಲ್ಲ ಆಗ ಕ್ರಿಯಾಶೀಲರಾಗಿದ್ದರು. ಅವರನ್ನು ಓದಿ ಇಷ್ಟಪಟ್ಟಿದ್ದೂ ಕೂಡ ನಾನು ಕತೆಯನ್ನೇ ಮಾಧ್ಯಮವಾಗಿ ಆಯ್ದುಕೊಳ್ಳಲು ಕಾರಣವಾಗಿರಬಹುದು.

ಸಣ್ಣಕತೆಯ ಮಾಧ್ಯಮ ಕನ್ನಡದಲ್ಲಿ ಎಷ್ಟು ಪಕ್ವ ಮತ್ತು ವೈವಿಧ್ಯಮಯವಾಗಿದೆಯೆಂದರೆ ಹೊಸ ಕತೆಗಾರರಿಗೆ ಇದನ್ನು ಮೀರಿ ಬರೆಯುವುದು ಬಹಳ ದೊಡ್ಡ ಸವಾಲು. ನಾನು ಬರೆಯಲು ಆರಂಭಿಸಿದಾಗ ನನ್ನ ಹತ್ತಿರದ ಸ್ನೇಹಿತರಿಬ್ಬರು ನನ್ನ ಮೊದಲ ಓದುಗರಾಗಿದ್ದರು. ಅವರ ಜೊತೆ ದಿನಗಟ್ಟಲೇ ಸಾಹಿತ್ಯದ ಚರ್ಚೆ ನಡೆಯುತ್ತಿತ್ತು. ಒಟ್ಟಿಗೇ ಓದುತ್ತಿದ್ದೆವು. ಅವರು ನನ್ನ ಕತೆಯನ್ನು ಕನ್ನಡದ ಉತ್ತಮ ಕೃತಿಗಳ ಜೊತೆ ಇಟ್ಟು ವಿಮರ್ಶಿಸುತ್ತಿದ್ದರೇ ಹೊರತು ಹೊಸಬನೆಂಬ ಯಾವ ರಿಯಾಯಿತಿಯನ್ನೂ ಕೊಡುತ್ತಿರಲಿಲ್ಲ. ನನ್ನೊಳಗಿನ ವಿಮರ್ಶಾ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಬೆಳೆಯಲು ಇದೆಲ್ಲವೂ ಬಹಳ ಸಹಾಯ ಮಾಡಿದೆ. ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಜೊತೆ ಕೊಂಡಿ ಹಾಕುವ ಕೆಲಸವನ್ನೂ ಮಾಡಿದೆ. ನನ್ನ ಹದಿನೇಳನೆಯ ವಯಸ್ಸಿಗೆ ನಾನು ಓದಲು ಮೈಸೂರಿಗೆ ಬಂದೆ. ಆಗ ಅಲ್ಲಿಯ ಲೇಖಕರೊಡನೆಯ ಸಂಪರ್ಕ ನನ್ನ ಹಲವು ನಂಬಿಕೆಗಳ ಮೇಲೆ ಪ್ರಭಾವ ಬೀರಿತು. ಇದನ್ನು ಹೀಗೆಯೇ ಎಂದು ಬೆರಳು ಮಾಡಿ ತೋರಿಸುವುದು ಸುಲಭವಲ್ಲ. ಆದರೆ ಒಳಗಿನ ಬದಲಾವಣೆ ನನ್ನ ಅರಿವಿಗಂತೂ ಬಂತು.

ಕೆ.ಎಸ್.ಸಿ.: ನಿಮ್ಮ ಮನಸ್ಸಿನಲ್ಲಿ ಕಥೆ ಬೆಳೆಯುವ ಧಾಟಿ ಮತ್ತು ಬರೆಯಲ್ಪಡುವ ಕ್ರಮದ ಬಗ್ಗೆ ಸ್ವಲ್ಪ ವಿವರಿಸುವಿರಾ? ನಿಮ್ಮ ಮೊದಲ ಓದುಗ ಯಾರು? ಬರೆದಾದ ನಂತರ ಮತ್ತೆ ನಿಮ್ಮ ಕತೆಗಳನ್ನು ಓದುತ್ತೀರ?

ವಿ.ಶಾ.: ಕತೆ ಮನಸ್ಸಿನಲ್ಲಿ ಪೂರ್ತಿಯಾಗಿದೆ ಎಂದು ಅನಿಸುವವರೆಗೂ ನಾನು ಬರೆಯಲು ತೊಡಗುವುದಿಲ್ಲ. ಇದರ ಅರ್ಥ ಮೊದಲಿನಿಂದ ಕೊನೆವರೆಗೂ ಬರೆಯುವ ಮುಂಚೆಯೇ ಸ್ಪಷ್ಟತೆಯಿರುತ್ತದೆಂದಲ್ಲ. ಆವರೆಗೂ ಅರಿವಿಗೆ ಬಂದಿರದ, ಬರೆಯುವಾಗಲೇ ಗೊತ್ತಾಗುತ್ತ ಹೋಗುವ ಸಂಗತಿಗಳಲ್ಲೇ ಬರವಣಿಗೆಯ ಸುಖ ಇರುವುದು. ಕತೆಯ ಹಲವಾರು ತುಣುಕುಗಳು ನನ್ನೊಳಗೆ ಇರುತ್ತವೆ. ಮತ್ತು ಒಂದಕ್ಕೊಂದು ಸೇರಿಕೊಳ್ಳುತ್ತ ಬೆಳೆಯುತ್ತ ಹೋಗುತ್ತವೆ. ಯಾವುದೋ ಒಂದು ಹಂತದಲ್ಲಿ ಇದು ಪೂರ್ತಿಯಾಯಿತು ಅನಿಸುತ್ತದೆ. ಅದು ಒಂದು ಹೊಸ ರೂಪಕ ದೊರೆತ ಗಳಿಗೆ ಇರಬಹುದು ಅಥವಾ ಕತೆಯ ಹೆಸರು ಹೊಳೆದ ಕ್ಷಣ ಇರಬಹುದು. ಅಥವಾ ಮೊದಲ ವಾಕ್ಯ ದೊರೆತ ರೋಮಾಂಚನವೇ ಇರಬಹುದು. ನನ್ನೊಳಗೆ ಇಂಥ ಒಂದು ಸಂಜ್ಞೆಗೆ ಕಾದ ಅದೆಷ್ಟೋ ಕತೆಗಳಿವೆ.

ನನ್ನ ಬಹುತೇಕ ಕತೆಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಸತತವಾಗಿ ಬರೆದು ಮುಗಿಸಿದ್ದೇನೆ. ನಂತರ ಒಂದೆರಡು ತಿಂಗಳವರೆಗೂ ಅದನ್ನು ಮತ್ತೆ ಓದಲು ಹೋಗುವುದಿಲ್ಲ. ಇದು ಕತೆಯನ್ನು ತಿದ್ದಲು ಅಗತ್ಯವಾದ ದೂರವನ್ನು ಒದಗಿಸುತ್ತದೆ ಎಂದು ನನ್ನ ನಂಬಿಕೆ. ಅದರ ನಂತರ ಕತೆಯನ್ನು ಪರಿಷ್ಕರಿಸುತ್ತೇನೆ. ಎಲ್ಲ ಕಲೆಗಳ ಹಾಗೆ ಬರವಣಿಗೆಯಲ್ಲಿಯೂ ಪರಿಶ್ರಮದ ಅವಶ್ಯಕತೆ ಇದೆ. ಇದು ಬರವಣಿಗೆಯನ್ನು ಚಂದ ಮಾಡುವುದಕ್ಕಲ್ಲ, ಸೂಕ್ತವಾಗಿಸುವುದಕ್ಕೆ. ಎಷ್ಟೋ ಸಲ ಆಕರ್ಷಕವಾಗಿರುವ ಹಲವು ಭಾಗಗಳನ್ನು ಕತೆಗೆ ಹೊಂದದಿದ್ದರೆ ಕೈಬಿಡಬೇಕಾಗುತ್ತದೆ. ಈ ಮೋಹ ಮೀರುವುದು ಕೂಡ ಬರವಣಿಗೆಯ ಪಾಠಗಳಲ್ಲಿ ಒಂದು. ಬರೆಯುವ ಹೊತ್ತಿಗೆ ಬಹಳ ಮಹತ್ವದ್ದೆಂದು ಅನಿಸುವ ಸಂಗತಿಗಳು ಕೆಲಕಾಲದ ನಂತರ ಅದೇ ತೀವ್ರತೆಯಲ್ಲಿ ಕಾಣದೇ ಇರಬಹುದು. ಇದೇ ಕಾರಣದಿಂದಾಗಿ ಬರೆದು ಮುಗಿಸಿದ ಕೆಲವು ಕತೆಗಳನ್ನು ನಾನು ಪ್ರಕಟಿಸದೇ ಬಿಟ್ಟಿದ್ದೇನೆ.

ಕೆ.ಎಸ್.ಸಿ.: ಸಣ್ಣಕತೆಗಳನ್ನು ನೀವು ಬರೆಯಲು ಪ್ರಾರಂಭಿಸಿದ್ದು ತೀರ ಕಿರಿಯ ವಯಸ್ಸಿನಲ್ಲಿ. ಸುಮಾರು ಎರಡು ದಶಕಗಳವರಗೆ ನೀವು ಆಯ್ದದ್ದು ‘ಸಣ್ಣಕತೆ’ಯ ಪ್ರಕಾರವನ್ನೆ. ಇತರ ಬರಹ ಮಾಧ್ಯಮಗಳ ಕಡೆಗೆ ನೀವು ಗಮನಹರಿಸಿದ್ದು, ತೀರಾ ಇತ್ತೀಚೆಗೆ. ಅಷ್ಟು ದೀರ್ಘಕಾಲ ಕಾದಂಬರಿ ಮತ್ತು ನಾಟಕಗಳತ್ತ ಗಮನ ಹರಿಸದೇ ಇರಲು ಕಾರಣ?

ವಿ.ಶಾ.: ಕಾದಂಬರಿ, ಒಂದು ಕಾದಂಬರಿಯಾಗಿಯೇ ಅಂದರೆ ಆ ಪ್ರಕಾರದಲ್ಲಿಯೇ ಮನಸ್ಸಿನಲ್ಲಿ ರೂಪತಾಳುತ್ತದೆಂದು ನನ್ನ ನಂಬಿಕೆ. ಕತೆಯೆಂದು ಬರೆಯಲು ಹೊರಟಿದ್ದು ಕಾದಂಬರಿಯಾಗುವುದಿಲ್ಲ. ಹಾಗೆ ಆದರೆ ಅದು ದೀರ್ಘ ಕತೆಯಗುತ್ತದೆ ಅಷ್ಟೆ. ಈ ಪ್ರಕಾರಕ್ಕೆ ಅದರದ್ದೇ ಆದ ಸಾಧ್ಯತೆ ಮತ್ತು ಗಡಿಗಳಿದ್ದಾವೆ. ಇವು ಕಥಾ ಮಾಧ್ಯಮಕ್ಕಿಂತ ಸ್ಪಷ್ಟವಾಗಿ ಭಿನ್ನವಾಗಿವೆ. ಇತ್ತೀಚಿನ ದಶಕಗಳಲ್ಲಿ ಕಥಾಮಾಧ್ಯಮಕ್ಕೆ ಹೋಲಿಸಿದರೆ, ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಶೀಲತೆ ಬಹಳ ಕಡಿಮೆಯೆಂದು ಹೇಳಬಹುದು. ವಾಸ್ತವವಾದಿ ಕಥನವೇ ಈವರೆಗಿನ ಮುಖ್ಯ ಮಾರ್ಗವಾಗಿದೆ. ವಸ್ತುವಿನ ಹರಹು ದೊಡ್ಡದಾದಾಗ ನಮ್ಮ ಲೇಖಕರು ಕಾದಂಬರಿಯನ್ನು ಆರಿಸುತ್ತಾರೆಯೇ ಹೊರತು ಆ ಮಾಧ್ಯಮದ ಸಾಧ್ಯತೆಗಳ ಬಗ್ಗೆ ಇರುವ ಆಕರ್ಷಣೆಯಿಂದಲ್ಲ ಎಂದು ಕೆಲವೊಮ್ಮೆ ಅನಿಸುತ್ತದೆ. ನಮ್ಮಲ್ಲಿ ಪ್ರಯೋಗಗಳೇ ನಡೆದಿಲ್ಲವೆಂದು ಈ ಮಾತಿನ ಅರ್ಥವಲ್ಲ. ಆದರೆ ಅದೊಂದು ಶಕ್ತ ಮಾರ್ಗವಾಗಿ ರೂಪುಗೊಳ್ಳುವಷ್ಟು ಹೊಸ ತಲೆಮಾರಿನವರು ಬರೆಯುತ್ತಿಲ್ಲ.

ಕೆ.ಎಸ್.ಸಿ.: ‘ಇನ್ನೂ ಒಂದು’ ಕಾದಂಬರಿಯ ವಸ್ತು ನಿಮ್ಮ ಮನಸ್ಸಿನಲ್ಲಿ ಮೂಡಿ ಕೃತಿಯಾಗಿ ಬೆಳೆದುದರ ಬಗ್ಗೆ ವಿವರಿಸುತ್ತೀರಾ? ಮೊದಲ ಕಾದಂಬರಿ ಬರೆಯುವಾಗ ಯಾವುದಾದರೂ ವಿಶೇಷ ಸಂಕಷ್ಟ, ಸವಾಲುಗಳನ್ನು ಎದುರಿಸಿದಿರಾ?

ವಿ.ಶಾ.: ಈ ವಸ್ತು ನನ್ನ ಮನಸ್ಸಿನಲ್ಲಿ ಹಲವು ಕಾಲದಿಂದ ಇತ್ತು. ಅದೊಂದು ಸುಲಭ ಸರಳ ಕಥನವಲ್ಲ ಅನ್ನುವುದು ಅಸ್ಪಷ್ಟವಾಗಿ ಗೊತ್ತಿತ್ತು. ತುಂಡುಗಳನ್ನು ಜೋಡಿಸಿದ ಕೊಲಾಜ್‌ನ ಹಾಗೆ ಅದರ ಸಂರಚನೆ ಇರುತ್ತದೆಂದು ಅಂದುಕೊಂಡಿದ್ದೆ. ತೀರ ಸರಾಗ ಕಥನವಿದ್ದುದಾದರೆ, ಅದು ಒಡೆದ ವ್ಯಕ್ತಿತ್ವ ಮತ್ತು ಛಿದ್ರ ಅನುಭವಗಳನ್ನು ಹೇಳುವುದಕ್ಕೆ ಅಡ್ಡಿಯಾಗಬಹುದು ಅನಿಸಿತ್ತು. ಬರೆಯುವ ಗಳಿಗೆಯವರೆಗೂ ಮೊದಲ ಅಧ್ಯಾಯ ಮನಸ್ಸಿನಲ್ಲಿರಲಿಲ್ಲ. ಅಂತೆಯೇ ಚಂದ್ರಹಾಸನ ಪಾತ್ರ ಮತ್ತು ಮೀನು ತುಂಬಿದ ಟ್ರಕ್ಕಿನಲ್ಲಿ ಮುಂಬೈಗೆ ಹೋಗುವುದು ಬರೆಯುವ ಕ್ಷಣದಲ್ಲಿಯೇ ಹುಟ್ಟಿದವುಗಳು.

ಕತೆಗೆ ಒಗ್ಗಿಹೋದ ಮನಸ್ಸಿಗೆ ಕಾದಂಬರಿಯ ಒಳಹೋಗಲು ಬೇರೆಯದೇ ರೀತಿಯ ತಯಾರಿ ಬೇಕಾಗುತ್ತದೆ. ಇದಕ್ಕೆ ಒಳಗಿನ ಅವಕಾಶದ ಮತ್ತು ಸಾವಧಾನದ ಅಗತ್ಯ ಇದೆ. ಕಾದಂಬರಿಗೆ ಬೇಕಾದ ಗ್ರಹಿಕೆಯ ಕ್ರಮವೇ ಬೇರೆಯಾದುದರಿಂದ ಈ ಸಾವಧಾನ ಇಲ್ಲದೇ ಇದ್ದರೆ ಅನುಭವದ ಸಂಪೂರ್ಣತೆಯತ್ತ ನೋಡುವುದು ಸಾಧ್ಯವಾಗುವುದಿಲ್ಲ. ಮೊದಲ ಕಾದಂಬರಿಯನ್ನು ಬರೆಯುವಾಗ, ನಾನು ಆವರೆಗೂ ಕಲಿತದ್ದನ್ನು, ರೂಢಿಸಿಕೊಂಡದ್ದನ್ನು ಕಳಕೊಳ್ಳಬೇಕಾಯಿತು. ಆ ಪ್ರಕ್ರಿಯೆಯಲ್ಲಿಯೇ ಕಾದಂಬರಿಗೆ ಮಾತ್ರ ಸಾಧ್ಯವಿರುವ ಹಲವು ಮಜಲುಗಳು ಅರಿವಿಗೆ ಬಂದವು. ನನ್ನ ಮಟ್ಟಿಗಂತೂ ಇದು ಬಹಳ ಆಕರ್ಷಣೀಯ ಮಾಧ್ಯಮವಾಗಿದೆ.

ಕೆ.ಎಸ್.ಸಿ.: ಕಾದಂಬರಿಗೆ ಮಾತ್ರ ಸಾಧ್ಯವಿರುವ ಹಲವು ಮಜಲುಗಳು ಅರಿವಿಗೆ ಬಂದವು ಎಂದಿರಿ. ವಿವರಿಸಿ.

ವಿ.ಶಾ.: ಶಾಂತಿನಾಥ ದೇಸಾಯಿಯವರು ಕಾದಂಬರಿ ಬರೆಯಲು ನನ್ನನ್ನು ಪ್ರೇರೇಪಿಸುತ್ತ ಒಂದು ಉದಾಹರಣೆ ಕೊಟ್ಟಿದ್ದರು. ಕಥೆಯೆಂದರೆ ಒಂದೇ ಒಂದು ಮರ ಹತ್ತಿ ಹಣ್ಣು ತಿಂದ ಹಾಗೆ. ಒಳ್ಳೆಯ ಹಣ್ಣು ಸಿಕ್ಕರೆ ಅದೃಷ್ಟ. ಕಾದಂಬರಿ ಹಾಗಲ್ಲ. ಅದು ತೋಟದಲ್ಲಿ ಅಡ್ಡಾಡಿ ಬೇಕಾದ ಮರ ಹತ್ತಿ, ಬೇಕಾದ ಹಣ್ಣು ತಿಂದ ಹಾಗೆ. ಇಷ್ಟವಾಗದಿದ್ದರೆ ಇಳಿದು ಇನ್ನೊಂದು ಮರ ಹತ್ತಬಹುದು. ಅದರ ಸಾಧ್ಯತೆಗಳು ಯಥೇಷ್ಟ. ಕಾದಂಬರಿಯಲ್ಲಲ್ಲದೇ ಬೇರೆ ಯಾವ ಪ್ರಕಾರದಲ್ಲಿಯೂ ಹಲವು ಕಥನಗಳನ್ನು ಇಷ್ಟು ಸಮರ್ಪಕವಾಗಿ ಏಕತ್ರ ಕೂಡಿಸಲು ಸಾಧ್ಯವಿರಲಿಲ್ಲ ಎಂದು `ಇನ್ನೂ ಒಂದು’ ಬರೆಯುವಾಗ ಅನಿಸಿತು. ಅದೇ ರೀತಿ ನಾಟಕ ಕೂಡ ನನ್ನನ್ನು ಕೆಣಕುವ ಮಾಧ್ಯಮವಾಗಿದೆ. ಈ ಪ್ರಕಾರ ಬೇಡುವ ಸೂಕ್ಷ್ಮ ಒಳ ಸುಳಿಗಳು ಮತ್ತು ಆ ಮೂಲಕ ಅದು ಒಡ್ಡುವ ಸವಾಲುಗಳು ಇದಕ್ಕೆ ಕಾರಣವೆಂದುಕೊಂಡಿದ್ದೇನೆ.

ಕೆ.ಎಸ್.ಸಿ.: ‘ಸಕ್ಕರೆ ಗೊಂಬೆ’ ಆಧುನಿಕ ಕೈಗಾರಿಕೆಯಲ್ಲಿ ತೊಡಗಿಸಿಕೊಂಡ ಪಾತ್ರಗಳ ಚಿತ್ರಣದ ದೃಷ್ಟಿಯಿಂದ ವಿಶಿಷ್ಟ ನಾಟಕ. ಕನ್ನಡದಲ್ಲಿ ಜಾನಪದ, ಪೌರಾಣಿಕ, ಐತಿಹಾಸಿಕ ವಸ್ತುಗಳನ್ನೇ ಆಧುನಿಕ ದೃಷ್ಟಿಗಳಿಂದ ನೋಡುವ ಪ್ರಯತ್ನಗಳಾದವೇ ಹೊರತು ಆಧುನಿಕ ಪ್ರಪಂಚದ ಆಧುನಿಕ ಸಮಸ್ಯೆಗಳನ್ನು ಕುರಿತ ಹೊಸ ನಾಟಕಗಳು (ಉದಾಹರಣೆಗೆ ನಗರದ ಸಮಸ್ಯೆಗಳಿಗೆ ಸಂಬಂಧಿಸಿದ ನಾಟಕಗಳು) ಏಕೆ ಹುಟ್ಟಲಿಲ್ಲ? ಹುಟ್ಟುತ್ತಿಲ್ಲ? ಒಟ್ಟಾರೆ ಆಧುನಿಕ ಕನ್ನಡ ರಂಗಭೂಮಿ ಏಕೆ ಬೆಳೆಯುತ್ತಿಲ್ಲ?

ವಿ.ಶಾ.: ಆಧುನಿಕ ಸಮಸ್ಯೆಗಳನ್ನು ನಾಟಕದಲ್ಲಿ ಹೇಗೆ ಒಳಗೊಳ್ಳುತ್ತೇವೆ ಅನ್ನುವುದು ಮುಖ್ಯವೇ ಹೊರತು ಅವುಗಳ ಭಿತ್ತಿ ಮಾತ್ರ ಮುಖ್ಯವಲ್ಲ. ಇಷ್ಟು ಹೇಳಿದರೂ, ನಿಮ್ಮ ಮಾತಿನ ಹಿಂದಿನ ಕಾಳಜಿಯನ್ನು ನಾನು ಕಡೆಗಣಿಸುತ್ತಿಲ್ಲ. ಇದು ಕನ್ನಡ ನಾಟಕದ ಒಂದು ಸಮಸ್ಯೆಯೆಂದೇ ಹೇಳಬಹುದು. ನವ್ಯರ ನಂತರ, ಅದರಲ್ಲೂ ಪಾಟೀಲ ಮತ್ತು ಲಂಕೇಶರ ನಂತರ ಈವತ್ತಿನ ವಸ್ತುಗಳನ್ನೆತ್ತಿಕೊಂಡು ಪರಿಣಾಮಕಾರಿಯಾಗಿ ನಾಟಕ ರಚಿಸಿದವರು ಬಹಳ ಕಡಿಮೆ. ಇದಕ್ಕೆ ಇಂಥದ್ದೇ ಕಾರಣವನ್ನು ಹುಡುಕಿ ಬೆರಳು ಮಾಡಿ ತೋರಿಸುವುದು ಕಷ್ಟ. ಆಧುನಿಕ ಕನ್ನಡ ರಂಗಭೂಮಿ ಬೆಳೆಯುತ್ತಿಲ್ಲ ಎಂಬ ಮಾತನ್ನು ಹೇಳುವ ಮಟ್ಟಿಗೆ ನಾವು ಸ್ಥಗಿತರಾಗಿಲ್ಲ. ಆಧುನಿಕ ಸಂದರ್ಭವನ್ನು ಭಿತ್ತಿಯಾಗಿ ಇಟ್ಟುಕೊಂಡ ನಾಟಕಗಳು ಬರುತ್ತಿಲ್ಲ ಅನ್ನಬಹುದು. ರಂಗಭೂಮಿಯ ಬೆಳವಣಿಗೆಗೆ ಕೇವಲ ನಾಟಕ ಬರೆಯುವವರು ಇದ್ದರೆ ಸಾಲದು, ಅದನ್ನು ಆಡಿಸುವ ಸಮರ್ಥ ನಿರ್ದೇಶಕರು ಬೇಕು. ಹಿಂದೆ ಕಾರಂತರು ಮತ್ತು ಅವರ ಜೊತೆಯವರು ಆ ಕೆಲಸ ಮಾಡಿದ್ದರು. ಈಗ ಹಲವು ವರ್ಷಗಳ ಅಂತರದ ನಂತರ ಮತ್ತೆ ಹೊಸ ಪ್ರತಿಭೆಗಳು ಬಂದಿವೆ ಎಂದು ನನಗನಿಸುತ್ತಿದೆ. ಇವರು ಕನ್ನಡ ರಂಗಭೂಮಿಗೆ ಹೊಸ ಚಾಲನೆ ನೀಡುವ ಹಾದಿಯಲ್ಲಿದ್ದಾರೆ ಎಂದು ನನ್ನ ಅಭಿಪ್ರಾಯ.

ಕೆ.ಎಸ್.ಸಿ.: ನೀವು ಬರೆಯುತ್ತಿರುವ ಹೊಸ ಕಾದಂಬರಿ ಬಾಲ್ಯದ ಮನಸ್ಸನ್ನು ಬರೀ ನೆನಪಿನ ಮುಗ್ಧತೆಯ ನಷ್ಟದ ಹಳಹಳಿಕೆಗಿಂತ ಭಿನ್ನವಾಗಿ ಗ್ರಹಿಸಲು ಪ್ರಯತ್ನಿಸುತ್ತದೆ ಎಂದು ಹಿಂದೆ ನೀವು ಹೇಳಿದಂತೆ ನೆನಪು. ಅದರ ಬಗ್ಗೆ ಹೇಳುವಿರಾ?

ವಿ.ಶಾ.: ನನ್ನ ಹೊಸ ಕಾದಂಬರಿಯ ನೆಲೆ ಇರುವುದು ಸುಮಾರು ಅರವತ್ತು ಎಪ್ಪತ್ತರ ದಶಕದ ಉತ್ತರ ಕನ್ನಡದಲ್ಲಿ. ಈಗ ಬಹುಪಾಲು ಕಣ್ಮರೆಯಾಗಿರುವ, ಒಂದು ಕಾಲದಲ್ಲಿ ನನ್ನ ಭಾಗವಾಗಿದ್ದ ಜೀವನಕ್ರಮವೊಂದನ್ನು ಬರೆಯುವಾಗ ಬಹಳ ಖುಷಿಪಟ್ಟಿದ್ದೇನೆ. ಕಾದಂಬರಿ ಮುಗಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲವಾದರೂ ಇನ್ನೂ ಪರಿಷ್ಕರಿಸಲು ಸಾಧ್ಯವಾಗಿಲ್ಲದ ಕಾರಣ ಪ್ರಕಟಿಸಿಲ್ಲ. ಮೊದಲ ಕಾದಂಬರಿಗೆ ಹೋಲಿಸಿದರೆ ಇದು ದೀರ್ಘ ಬರಹ.

ಕೆ.ಎಸ್.ಸಿ.: ನಿಮ್ಮ ಅಭಿಪ್ರಾಯದಲ್ಲಿ, ಬರಲಿರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಎದುರಿಸಬೇಕಾಗಿರುವ ಸಮಸ್ಯೆಗಳು/ಸವಾಲುಗಳು ಯಾವವು? ಅವುಗಳನ್ನು ಎದುರಿಸುವ ಕ್ಷಮತೆ ಇಂದಿನ ಕನ್ನಡ ಸಾಹಿತ್ಯ ಸಮುದಾಯಕ್ಕೆ ಇದೆಯೆ? ಇಲ್ಲವಾದಲ್ಲಿ, ಆ ಕ್ಷಮತೆಯನ್ನು ಬೆಳೆಸಿಕೊಳ್ಳಲು ಏನು ಮಾಡಬಹುದು?

ವಿ.ಶಾ.: ಆಧುನಿಕತೆಯನ್ನು ಎದುರಿಸಿ ನಿರ್ವಹಿಸುವ ಸವಾಲು ಮುಖ್ಯವಾದದ್ದೆಂದು ನನಗೆ ಅನಿಸುತ್ತದೆ. ಪಲ್ಲಟಗಳು ಹಿಂದೆಂದಿಗಿಂತಲೂ ಸ್ಪಷ್ಟವಾಗಿ ಕಣ್ಣಿಗೆ ಹೊಡೆಯುತ್ತಿರುವಾಗ ಅವುಗಳನ್ನು ಒಳಗೊಳ್ಳದೇ ಚಿತ್ರವನ್ನು ಪೂರ್ತಿಗೊಳಿಸುವುದು ಸಾಧ್ಯವಿಲ್ಲ. ಬದಲಾವಣೆಯ ವೇಗದ ನಡುವೆಯೂ ಸೃಜನಶೀಲತೆಗೆ ಅಗತ್ಯವಾದ ಅವಕಾಶ ಮತ್ತು ಸಾವಧಾನವನ್ನು ನಾವು ನಮ್ಮ ಭಾವಲೋಕದಲ್ಲಿ ಮತ್ತು ಸಾಹಿತ್ಯದಲ್ಲಿ ಸೃಷ್ಟಿಸಿಕೊಳ್ಳಬೇಕಾಗಿದೆ. ಆಧುನಿಕತೆಯನ್ನು ಎದುರಿಸುವ ಸವಾಲಿನ ಬಗ್ಗೆ ಮಾತಾಡುವುದಾದರೆ, ನಮಗೆ ಈ ಕಾಲದಲ್ಲಿ ಲಭ್ಯವಿರುವ ಸಲಕರಣೆಗಳ ಮೂಲಕ ಇದನ್ನು ಎದುರಿಸಬೇಕು ಎಂದು ನನ್ನ ಅಭಿಪ್ರಾಯ. ಅವು ಲಭ್ಯವಿಲ್ಲದಿದ್ದರೆ ದೊರಕಿಸಿಕೊಳ್ಳಬೇಕು. ದೇಸಿ ಸಂಸ್ಕೃತಿಯ ಪುನರುಜ್ಜೀವನ ಕೂಡ ಇಂಥ ಅಗತ್ಯವಾಗಿ ಕಂಡು ಬಂದಾಗ ತಾನಾಗಿಯೇ ಒಂದು ಪರ್ಯಾಯವಾಗಿ ಕಾಣಿಸಿಕೊಳ್ಳುತ್ತದೆ. ಎಲ್ಲಕ್ಕಿಂತ, ಪರಂಪರೆಯ ಸಾತತ್ಯದ ಅರಿವು ಆಧುನಿಕತೆಯನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪರಂಪರೆ ಅನ್ನುವುದು ನಮ್ಮಲ್ಲಿ ಬಹಳ ಅಪಾರ್ಥಕ್ಕೆಡೆ ಕೊಡುವ ಮತ್ತು ಕೇವಲ ಮುಖ್ಯ ಪ್ರವಾಹವನ್ನು ಪ್ರತಿನಿಧಿಸುವ ಶಬ್ದವಾಗಿದೆ. ಎಲ್ಲ ಸಣ್ಣ ಸಣ್ಣ ತೊರೆಗಳಿಗೂ ಇರುವ ಪರಂಪರೆಯ ಸಾತತ್ಯವನ್ನು ಗುರುತಿಸಿದಾಗ ವಿಭಿನ್ನ ಪ್ರಪಂಚಗಳೊಡನೆಯ ಸರಾಗ ಚಲನೆ ಸಾಧ್ಯವಾಗುತ್ತದೆ. ಸಲಕರಣೆ ಮತ್ತು ಪರಂಪರೆ ಈ ಎರಡೂ ಶಬ್ದಗಳನ್ನು ನಾನು ವಿಶಾಲವಾದ ಅರ್ಥದಲ್ಲಿ ಬಳಸಿದ್ದೇನೆ.

ಕನ್ನಡದಲ್ಲಿ ಜರುಗದ ಅನುಭವ ಕ್ಷೇತ್ರವನ್ನು ಸಾಹಿತ್ಯದೊಳಗೆ ತರುವ ಪ್ರಯತ್ನ ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಈಗ ನಡೆಯುತ್ತಿದೆ. ಹೊಸ ಅನುಭವ ಗ್ರಹಿಕೆಗೆ ಅಗತ್ಯವಾದ ನುಡಿಕಟ್ಟುಗಳು, ಭಾಷೆಯ ಸಶಕ್ತತೆ ಮತ್ತು ಕೃತಿ ಸಂರಚನೆಯ ದೃಷ್ಟಿಯಿಂದ ಇದು ಮುಖ್ಯವಾದದ್ದು. ಕನ್ನಡದ ಸ್ವೀಕಾರ ಶಕ್ತಿಯಂತೂ ಬಲವಾಗಿದೆ.

ಕೆ.ಎಸ್.ಸಿ.: ‘ಅನುಭವ’ದ ಮೂಲಕ ಬದುಕನ್ನು ಗ್ರಹಿಸುವ, ಹಾಗೂ ಅದನ್ನು ಓದುಗನಿಗೆ ದಾಟಿಸಿ ಆ ಮೂಲಕ ಅವನ ಬದುಕನ್ನೂ ಹದಗೊಳ್ಳಿಸಲು ನೆರವಾಗುವುದು, ಈ ಹಿಂದೆ ಕನ್ನಡ ಸಾಹಿತ್ಯದ ಪ್ರಮುಖ ಆಶಯವಾಗಿತ್ತು. ಆಧುನಿಕ, ಜಾಗತೀಕರಣದ ಸಂದರ್ಭದಲ್ಲಿನ ವಿಘಟಿತ ಸಮಾಜದಲ್ಲೂ, ಸಾಹಿತ್ಯ ಆ ಆಶಯವನ್ನು, ವ್ಯಾಖ್ಯಾನವನ್ನು ಉಳಿಸಿಕೊಳ್ಳಬಲ್ಲದೆ?

ವಿ.ಶಾ.: ಇತ್ತೀಚೆಗೆ, ನಮ್ಮ ಸುತ್ತಲಿನ ಬದಲಾವಣೆಯ ವೇಗಕ್ಕೆ ನಾವು ಸ್ತಂಭೀಭೂತರಾಗಿ, ಈ ವೇಗದಲ್ಲಿ ಎಲ್ಲವೂ ಕಳೆದುಹೋಗಿದೆ ಅಥವಾ ಹೋಗುತ್ತಲಿದೆ ಎಂದು ಭಾವಿಸಿದ್ದೇವೆ. ಯಾವುದೂ ಅಸಾಧ್ಯವಲ್ಲ ಎಂಬ ಉನ್ಮತ್ತ ವಾತಾವರಣದಲ್ಲಿ ನಾವಿದ್ದೇವೆ. ಮೇಲ್ನೋಟಕ್ಕೆ ಹಾಗೆ ಅನಿಸಿದರೂ ಈ ಯಾವುದೂ ಮನಸ್ಸಿನ ಮೂಲಭೂತ ಹಸಿವುಗಳನ್ನು ತಣಿಸಿಲ್ಲ. ಒಳಗಿನ ಈ ಅಗತ್ಯಗಳು ಇಷ್ಟು ಬೇಗ ಅಮೂಲಾಗ್ರವಾಗಿ ಬದಲಾಗುವುದೂ ಇಲ್ಲ. ಶತಮಾನಗಳ ಹಿಂದಿನ ಸಾಹಿತ್ಯ ಕೂಡ ಈವತ್ತಿನದು ಅನಿಸುವುದು ಇದೇ ಕಾರಣಕ್ಕಾಗಿ. ‘ಇದು ಯಾಕೆ ಹೀಗೆ ದೇವರೇ’ ಎಂದು ಕೇಳುವುದು ಉಳಿದಿರುವ ತನಕ, ಸಾಹಿತ್ಯದ ಮೂಲಕವೂ ಈ ಹುಡುಕಾಟ ಮುಂದುವರಿಯುತ್ತಲೇ ಇರುತ್ತದೆ. ಕೆಲವು ದಶಕಗಳಲ್ಲಿ ಅಳೆಯಬಹುದಾದ ಪಂಥಗಳಿಂದ, ಗ್ರಹಿಕೆಯ ಮತ್ತು ಅಭಿವ್ಯಕ್ತಿಯ ಹೊಸ ಸಲಕರಣೆಗಳು ದೊರೆತದ್ದರಿಂದ ಇದಕ್ಕೆಲ್ಲ ಉತ್ತರ ಸಿಕ್ಕೇ ಸಿಗುತ್ತದೆಂಬುದು ತತ್‌ಕ್ಷಣದ ಅಹಂಕಾರ ಅಷ್ಟೇ. ಆದ್ದರಿಂದಲೇ ಸಾತತ್ಯದ ಪ್ರಜ್ಞೆಯನ್ನು ಕಳೆದುಕೊಳ್ಳದಿರುವುದು ಮಹತ್ವದ್ದು. ಈವರೆಗಿನ ನಮ್ಮ ತಿಳವಳಿಕೆಗೆ ಈ ಹೊಸ ತೊರೆಯ ಮೂಲಕ ಏನನ್ನು ಮತ್ತು ಎಷ್ಟನ್ನು ಸೇರಿಸುತ್ತಿದ್ದೇವೆ ಅನ್ನುವುದರ ಅರಿವು ಇದ್ದಾಗ ವಿನಯ ತಾನಾಗಿಯೇ ಹುಟ್ಟುತ್ತದೆ. ಕೊನೆಗೂ ಇದೆಲ್ಲ ಗ್ರಹಿಕೆಯ ಸಂಕೀರ್ಣತೆ ಮತ್ತು ಅಭಿವ್ಯಕ್ತಿಯ ಸಮರ್ಪಕತೆಯನ್ನು ಸಾಧಿಸುವುದಕ್ಕೆ ಸಂಬಂಧಪಟ್ಟ ಪ್ರಶ್ನೆಗಳೇ ಹೊರತು ಜೀವನದೃಷ್ಟಿಯ ಸಿದ್ಧ ಚೌಕಟ್ಟುಗಳಲ್ಲ.

ಕೆ.ಎಸ್.ಸಿ.: ಬಿಗಡಾಯಿಸುತ್ತಿರುವ ರೈತನ ಸ್ಥಿತಿ, ಬಲಗೊಳ್ಳುತ್ತಿರುವ ವಿಕಾರ ಪಂಥಗಳು ಮತ್ತು ಆಧುನಿಕತೆ, ಜಾಗತೀಕರಣ ಇವುಗಳ ನಡುವಿನ ಸಂಬಂಧದ ಬಗ್ಗೆ ನಿಮ್ಮ ನಿಲುವೇನು?

ವಿ.ಶಾ.: ಜಾಗತೀಕರಣ ಹೊಸದಲ್ಲ. ಈಗ ನಾವು ಕಾಣುತ್ತಿರುವ ಅದರ ವೇಗ ಹೊಸತು. ಪರಿಸರದ ಸಹಜ ವೇಗವನ್ನು ಮೀರಿ ಯಾವುದೇ ಒಂದು ಭಾಗ ಅತಿಯಾಗಿ ಬೆಳೆದಾಗ ಉಂಟಾಗುವ ಸಮಸ್ಯೆಗಳೇ ಈಗ ಉದ್ಭವಿಸಿವೆ. ಕೇವಲ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈಗ ನಮಗೆ ಹಲವು ಅವಕಾಶಗಳು ತೆರೆದಿವೆ. ಮೊದಲ ಬಾರಿಗೆ ನಮ್ಮ ದೇಶದ ನಿಲುವುಗಳು, ವಿದ್ಯಮಾನಗಳು ಜಗತ್ತಿನ ಆರ್ಥಿಕ ಪರಿಸ್ಥಿತಿಯ ಮೇಲೆ ಸಣ್ಣ ಪ್ರಮಾಣದಲ್ಲಾದರೂ ಪರಿಣಾಮ ಮಾಡುತ್ತಿವೆ. ಹೀಗಿರುವಾಗ ಸರಕಾರ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಸ್ಪಷ್ಟ ಮತ್ತು ಅಗತ್ಯವಾದರೆ ಕಠಿಣವಾದ ನಿಲುವುಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಮಾರುಕಟ್ಟೆಯನ್ನು ಹಂಚಿಕೊಳ್ಳಬಯಸುವವರು ಅದರ ಜೊತೆ ಬರುವ ಸಾಮಾಜಿಕ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಬೇಕಾಗುತ್ತದೆ. ಸಂಪನ್ಮೂಲಗಳು ಅಸಮಾನ ವಿಂಗಡಣೆಯಾಗದಂತೆ ತಡೆಯಲು ಇದು ಅತ್ಯಗತ್ಯ. ಜಾಗತೀಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಅದನ್ನು ಎದುರಿಸಬೇಕು ಮತ್ತು ನಮ್ಮ ಅನುಕೂಲಕ್ಕೆ ಅದನ್ನು ಒಗ್ಗಿಸಬೇಕು. ಸಂಸ್ಕೃತಿ, ಕಲಿಕೆ, ಜ್ಞಾನಾರ್ಜನೆ, ಕಲೆ, ಧರ್ಮ – ಹೀಗೆ ಎಲ್ಲದರ ಮೇಲೂ ಇದು ನೇರವಾದ ಪರಿಣಾಮ ಬೀರುತ್ತಿರುವುದರಿಂದ ಈ ಬಗ್ಗೆ ಸ್ಪಷ್ಟವಾದ ಚಿಂತನೆಯ ಅಗತ್ಯ ಇದೆ. ಮುಖ್ಯವಾಗಿ, ಕಲೆ ಸಂಸ್ಕೃತಿಗಳನ್ನು ಒಂದಲ್ಲ ಒಂದು ರೀತಿಯಿಂದ ಪೋಷಿಸುತ್ತಿರುವ ಕಟ್ಟಡದ ಸಂರಚನೆಯೇ ಜಾಗತೀಕರಣದಿಂದಾಗಿ ಬದಲಾಗುತ್ತಿರುವುದರಿಂದ, ಈ ಕಟ್ಟಡಕ್ಕೆ ಪರ್ಯಾಯಗಳನ್ನು ಹುಡುಕಬೇಕು.

ಜಾಗತೀಕರಣದ ಸಂದರ್ಭದಲ್ಲಿ ನಾವೂ ಕೂಡ ಸಮಾನ ನೆಲದಲ್ಲಿ ನಿಂತು ವ್ಯವಹರಿಸುತ್ತಿದ್ದೇವೆ ಎಂದು ಮರೆಯಬಾರದು. ಈಗ ಬಿಟ್ಟರೆ ಇನ್ನು ಇದು ಸಿಕ್ಕದು ಎಂಬಂತೆ ಅವಕಾಶವನ್ನು ಹಪಾಪಿತನದಿಂದ, ಸಿಕ್ಕಷ್ಟೇ ಪುಣ್ಯ ಎಂಬಂತೆ ಬಾಚಿಕೊಳ್ಳುವ ಅಗತ್ಯವಿಲ್ಲ. ನಾವು ಜಾಗತೀಕರಣದಲ್ಲಿ ಭಾಗವಹಿಸುವ ಅಗತ್ಯ ಇತರರಿಗೂ ಇದೆ. ಇಂಥ ಒಂದು ಕೊಡಕೊಳ್ಳುವ ಸ್ಥಾನದಲ್ಲಿ ನಾವು ಇದ್ದೇವೆ ಎಂಬುದನ್ನು ಮರೆಯಬಾರದು.

ಬದಲಾವಣೆಯ ಈವತ್ತಿನ ವೇಗದಿಂದಾಗಿ ಆರ್ಥಿಕ ದೂರದೃಷ್ಟಿತ್ವವೂ ಕೇವಲ ದಶಕಗಳಿಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಮಾನವಿಕ ಪ್ರಕಾರಗಳೂ ಕೂಡ ಈ ಅವಧಿಯಲ್ಲಿ ಅವು ಒದಗಿಸುವ ‘ಪ್ರಯೋಜನದ’ ಮೇಲೆ ಅಳೆಯಲ್ಪಡುವ ಅಪಾಯದಲ್ಲಿ ಸಿಲುಕಿವೆ. ಕಲೆ ಸಾಹಿತ್ಯಗಳ ಬೆಳವಣಿಗೆಗೆ ಅಗತ್ಯವಾದ ನಿಸ್ವಾರ್ಥತೆ, ದೂರದರ್ಶಿತ್ವಗಳನ್ನು ತತ್‌ಕ್ಷಣದ ಅಗತ್ಯದಲ್ಲಿ ನಾವು ಕಡೆಗಣಿಸಬಾರದು.

ಯಾವ ಒತ್ತಡಕ್ಕೂ ಮಣಿಯದೇ ಆಹಾರೋತ್ಪನ್ನತೆಯಲ್ಲಿ ನಾವು ಸಾಧಿಸಿರುವ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಬೇಕೆಂಬುದು ನನ್ನ ನಿಲುವು. ಇದಕ್ಕೆ ಅಗತ್ಯವಾದುದನ್ನು, ಅದು ಎಷ್ಟೇ ಕಹಿಯಾದರೂ ಮಾಡಬೇಕು.

ಕೆ.ಎಸ್.ಸಿ.: ವಿಘಟಿತ ಸಮಾಜದಿಂದ ಅನುಭವ ಲೋಕವೂ ವಿಘಟಿತವಾಗುವುದರಿಂದ, ಅನುಭವನಿಷ್ಠ ಸಾಹಿತ್ಯ ಕೂಡ ಛಿಠಿಚಿಡಿಣಟಿಣಚಿಟಜ ಆಗಿ ಎಟುಕದಿರುವ ಅಪಾಯವಿದೆಯಲ್ಲವೆ? ನವ್ಯ ಸಾಹಿತ್ಯ ಸೀಮಿತ ವರ್ಗದ (ಆಧುನಿಕ ಶಿಕ್ಷಣ ಪಡೆದ ಮಧ್ಯಮವರ್ಗ) ಅನುಭವಗಳನ್ನು ಮಾತ್ರ ಚಿತ್ರಿಸಿದೆ ಎಂಬ ಆಕ್ಷೇಪ ಕನ್ನಡ ಸಾಹಿತ್ಯದಲ್ಲಿ ಇದ್ದೇ ಇದೆ.

ವಿ.ಶಾ.: ‘ಸೀಮಿತ ವರ್ಗ’ದ ಬಗ್ಗೆ ನೀವು ಹೇಳಿದ ಮಾತನ್ನು ನಾನು ಒಪ್ಪುವುದಿಲ್ಲ. ಪಾತ್ರಗಳು ಯಾವ ವರ್ಗಕ್ಕೆ ಸೇರಿದವು ಅನ್ನುವುದು ಕೃತಿಯ ಮಹತ್ವವನ್ನಾಗಲೀ ಅದು ನೀಡುವ ಅನುಭವವನ್ನಾಗಲೀ ನಿರ್ಧರಿಸುವುದಿಲ್ಲ. ಸಂಬಂಧಗಳ ಸಂಕೀರ್ಣತೆ, ಸೂಕ್ಷ್ಮ ಸಂವೇದನೆ ಮತ್ತು ತುಡಿತ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೇರಿದ್ದಲ್ಲ. ಒಳ್ಳೆಯ ಸಾಹಿತ್ಯಕ್ಕೆ ಈ ಯಾವುದೂ ಬೇಲಿಯಲ್ಲ. ಇವೆಲ್ಲ ಹೊರ ಆವರಣಗಳು, ಅಷ್ಟೆ. ಮನುಷ್ಯನ ಬಗ್ಗೆ ಹೇಳುವಾಗ, ಅನುಭವದ ಆಳವನ್ನು ಸ್ಪರ್ಷಿಸುವಾಗ ಇವು ಗೌಣವಾಗುತ್ತವೆ.

ಕೆ.ಎಸ್.ಸಿ.: ‘ನವ್ಯೋತ್ತರ’ದ ಮುಖ್ಯ ಲಕ್ಷಣ ಎಂದು ಏನನ್ನಾದರು ಬೆರಳು ಮಾಡಿ ಹೇಳುವುದಾದಲ್ಲಿ ಅದು ಏನಾದೀತು? ಸಾಹಿತ್ಯ ಕಾಲಕಾಲಕ್ಕೆ ತನ್ನ ವ್ಯಾಖ್ಯಾನವನ್ನು ಬದಲಿಸಿಕೊಳ್ಳುತ್ತದೆಯಾದರೆ, ‘ನವ್ಯೋತ್ತರ’ದ ವ್ಯಾಖ್ಯಾನವೇನು?

ವಿ.ಶಾ.: ಕನ್ನಡದ ಮಟ್ಟಿಗೆ ನವ್ಯೋತ್ತರವೆಂಬ ಸ್ಪಷ್ಟವಾದ ಗುರುತುಗಳಿನ್ನೂ ಊರಿದ್ದು ಕಾಣಿಸುತ್ತಿಲ್ಲ. ಇದನ್ನು ಸಾಮಾನ್ಯವಾಗಿ ನವ್ಯದ ನಂತರದವರು ಎಂದು ಕಾಲಮಾನವನ್ನು ಸೂಚಿಸುವ ಸಲುವಾಗಿ ಬಳಸಲಾಗುತ್ತಿದೆ. ಆದರೆ ಪೋಸ್ಟ್ ಮಾಡರ್ನ್ ಅನ್ನುವ ಪಾಶ್ಚಾತ್ಯ ಪರಿಕಲ್ಪನೆಗೆ ಸಂವಾದಿಯಾಗಿ ಹೇಳುವುದಾದರೆ ಅಂಥ ಪ್ರಯತ್ನಗಳು ಸ್ಪಷ್ಟವಾದ ಪಂಥವಾಗಿ ಬೆಳೆಯುವಷ್ಟು ಕನ್ನಡದಲ್ಲಿ ಇನ್ನೂ ನಡೆದಿಲ್ಲ. ಇದು ಒಂದು ಗ್ರಹಿಕೆಯ ಕ್ರಮವಾದುದರಿಂದ, ಮತ್ತು ಕಳೆದ ಒಂದು ದಶಕದಲ್ಲಿ ಜರುಗಿದ ಜಾಗತೀಕರಣದಂಥ ಬದಲಾವಣೆಗಳ ಪ್ರಭಾವ ಇನ್ನೂ ಸರಿಯಾಗಿ ಸ್ಪರ್ಶಗ್ರಾಹ್ಯವಾಗಿಲ್ಲದ್ದರಿಂದ, ನವ್ಯೋತ್ತರವೆಂಬುದು ಪಾಶ್ಚಾತ್ಯರಲ್ಲಿ ರೂಪಪಡೆದ ಕಲ್ಪನೆಯಂತೆ ಕನ್ನಡದಲ್ಲಿ ಬೆಳೆಯುವುದೆಂದು ನನಗೆ ಅನಿಸುತ್ತಿಲ್ಲ. ಇತ್ತೀಚಿನ ಮುಖ್ಯವಾದ ಬದಲಾವಣೆಗಳನ್ನು ನಾವು ಹೇಗೆ ಗ್ರಹಿಸಿ ಪ್ರತಿಕ್ರಿಯಿಸುತ್ತೇವೆ ಅನ್ನುವುದರ ಮೇಲೆ ಕೂಡ ಇದು ನಿಂತಿದೆ. ಜಾಗತೀಕರಣದಂಥ ಪ್ರಕ್ರಿಯೆಗೆ ಭೋಳೆಯಾದ, ಈ ಕಾಲದಲ್ಲಿ ಸಲ್ಲುವ ಸರಳ ಪ್ರತಿಕ್ರಿಯೆಗಳ ಆಚೆ ಹೋಗಿ ಸಂದರ್ಭದ ಸಂಕೀರ್ಣತೆಯನ್ನು, ಅದು ನಮ್ಮ ಒಳಜಗತ್ತಿನ ಮೇಲೆ ಮಾಡುವ ಪರಿಣಮವನ್ನು ನೋಡಬೇಕಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ಜ್ಞಾನಶಾಖೆಗಳು ಪುನರುಜ್ಜೀವಗೊಳ್ಳುವ ಸಾಧ್ಯತೆಯೂ ಬಲವಾಗಿದೆ. ಹೀಗಾಗಿ ಇದೆಲ್ಲವೂ ಸೇರಿಕೊಂಡ ಮಿಶ್ರಣವೊಂದು ಉಂಟಾಗುವ ಲಕ್ಷಣಗಳಿವೆ.

ಪ್ರತಿಯೊಂದನ್ನೂ ವ್ಯಾಖ್ಯಾನಿಸುವ ಹಂಗನ್ನು ಕಳೆದುಕೊಂಡು, ಒಂದೇ ಕೃತಿಯ ಹಲವು ಓದಿಗೆ ಅದರೊಳಗೆಯೇ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುವುದರಿಂದ ನವ್ಯೋತ್ತರ ಹೆಚ್ಚು ಬೀಸನ್ನು ಹೊಂದಿದೆ ಎಂದು ನನಗನಿಸುತ್ತದೆ.

ಕೆ.ಎಸ್.ಸಿ.: ಈ ಕಾಲದ ‘ಸಾಹಿತ್ಯ ಅಭಿವ್ಯಕ್ತಿ’ಯ ಹೊಸ ಸಲಕರಣೆಗಳನ್ನೇನಾದರು ಗುರುತಿಸಿದ್ದೀರಾ? ಓದುತ್ತಾ, ಬರೆಯುತ್ತಾ, ಅಂಥದ್ದೇನಾದರು ಅರಿವಿಗೆ ಬಂದಿದೆಯೆ?

ವಿ.ಶಾ.: ಪ್ರತಿ ಲೇಖಕನೂ ತನ್ನ ಕಾಲದಲ್ಲಿ ಇಂಥ ಒಂದು ಒದ್ದಾಟದಲ್ಲಿ, ಹುಡುಕಾಟದಲ್ಲಿ ತೊಡಗಿರುತ್ತಾನೆ. ಬೆರಳಿಟ್ಟು ತೋರಿಸುವಷ್ಟು ಸ್ಪಷ್ಟವಾಗಿ ಹೊಸ ಸಲಕರಣೆಗಳು ಸಿಗುವಂತಿದ್ದರೆ ಎಲ್ಲವೂ ಎಷ್ಟು ಸುಲಭವಾಗುತ್ತಿತ್ತು! ಒಬ್ಬ ಬರಹಗಾರನ ಒಟ್ಟಾರೆ ಬರವಣಿಗೆಯನ್ನು ನೋಡಿದಾಗ ಇಂಥದ್ದನ್ನು ಗುರುತಿಸುವುದು ಸಾಧ್ಯವಿದೆ. ಅದನ್ನು ಓದುಗರು, ವಿಮರ್ಶಕರು ಹೇಳಬೇಕು.

ಕೆ.ಎಸ್.ಸಿ.: ತೀವ್ರ ಬದಲಾವಣೆಗೆ ಒಳಗಾಗುತ್ತಿರುವ ಇಂದಿನ ದಿನಗಳಲ್ಲಿ ಓರ್ವ ಗಂಭೀರ ಲೇಖಕನ ಹೊಣೆಗಾರಿಕೆ ಅಪಾರವಾಗಿದೆ. ಗಟ್ಟಿ ನಿಲುವುಗಳ ದೊಡ್ಡ ಲೇಖಕನಾಗಿ ಬೆಳೆಯಲು ಇಂದು ಹಿಂದೆಂದಿಗಿಂತಲೂ ಹೆಚ್ಚು ಪರಿಶ್ರಮ, ಪ್ರತಿಭೆಯ ಅಗತ್ಯವಿದೆ ಎಂದೇನಾದರು ನಿಮಗೆ ಅನಿಸಿದೆಯೆ? ಕನ್ನಡ ಸಾಹಿತ್ಯ ಡಾಟ್‌ಕಾಂನ ಉದಯೋನ್ಮುಖ ಬರಹಗಾರರಿಗೆ ನಿಮ್ಮ ಕಿವಿ ಮಾತು ಏನು?

ವಿ.ಶಾ.: ನಮ್ಮ ಹಿರಿಯ ಲೇಖಕರು ತಮ್ಮ ಪ್ರತಿಭೆಯಿಂದ ಮತ್ತು ತಮ್ಮ ಸಾಹಿತ್ಯದಲ್ಲಿ ಒಳಗೊಂಡ ವಿಸ್ತಾರವಾದ ಅನುಭವ ಪ್ರಪಂಚದಿಂದ, ಸಾಹಿತ್ಯದ ಅಪೇಕ್ಷೆಯ ಮಟ್ಟವನ್ನು ಬಹಳ ಎತ್ತರಿಸಿದ್ದಾರೆ. ಕನ್ನಡ ಬರಹಗಳ ಸಾಧಾರಣ ಮಟ್ಟ ಹೆಚ್ಚಾಗಿರುವುದು ನೀವು ಪತ್ರಿಕೆಗಳನ್ನು ನೋಡಿದರೆ, ಸಾಪ್ತಾಹಿಕ ಪುರವಣಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಬಹುತೇಕ ಬರಹಗಾರರಿಗೆ ಒಳ್ಳೆಯ ಭಾಷೆ ಮತ್ತು ಶೈಲಿಯಿದೆ. ಆದರೆ ಬರಬರುತ್ತ ಇದೆಲ್ಲವೂ ಭೋಳೆಯಾಗುತ್ತ ಹೋಗುತ್ತದೆ. ಉದಾಹರಣೆಗೆ ಈಗಿನ ಕವಿತೆಗಳನ್ನೇ ನೋಡಿ. ಚುರುಕಾಗಿ ಬರೆದದ್ದೇ ಒಳ್ಳೆಯ ಕವಿತೆಯೆನಿಸಿಕೊಳ್ಳುತ್ತಿದೆ. ಓದುವ ಕ್ಷಣದಲ್ಲಿ ಹಿತವಾಗಿದ್ದರೂ, ಮತ್ತೆ ಮತ್ತೆ ಮರಳಿ ಹೋಗುವಷ್ಟು ಯಾವುದೂ ಗಾಢವಾಗಿರುವುದಿಲ್ಲ. ಸಂಬಂಧವಿಲ್ಲದ ಪ್ರತಿಮೆಗಳನ್ನು ಕೇವಲ ಪರಿಣಾಮಕ್ಕಾಗಿ ಒಂದರ ಪಕ್ಕದಲ್ಲೊಂದು ಇಡುವುದು, ತಾತ್ವಿಕ ಗಹನತೆಯ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಬಳಸುವ ಉಪಾಯವಾಗಿದೆ. ಬದುಕಿನ ವಿಪರ್ಯಾಸಗಳನ್ನು ಚಂದವಾಗಿ ಚುರುಕಾಗಿ ನೋಡುವುದು ಒಂದೆರಡು ಸಲ ಹಿತವಾಗಿರುತ್ತದೆ. ಆದರೆ ಅದೇ ಮಾದರಿಯಾದರೆ ಬೋರಾಗತೊಡಗುತ್ತದೆ. ಜೀವನ ಪ್ರೀತಿ, ಜನಸಾಮಾನ್ಯರನ್ನು ತಲುಪುವುದು, ಸಾಹಿತ್ಯವನ್ನು ಆನಂದಿಸುವುದು ಮುಂತಾದ ನುಣುಪಾದ ಮಾತುಗಳನ್ನು ಬಳಸಿ ನಮ್ಮ ಹಲವು ಲೇಖಕರು ಪರಿಶ್ರಮದ ಹಾದಿಯನ್ನು ತುಳಿಯುವುದರಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಮತ್ತು ಸಾಧಾರಣ ಭಾವುಕ ಬರಹಗಳನ್ನು ಓದುಗರಿಗೆ ದಾಟಿಸುತ್ತಿದ್ದಾರೆ. ಎಲ್ಲ ಕಲೆಗಳ ಹಾಗೆ ಸಾಹಿತ್ಯವನ್ನು ಗ್ರಹಿಸುವುದಕ್ಕೂ ಪರಿಶ್ರಮ ಬೇಕು. ಈ ಪ್ರಯತ್ನ ಪಡಲು ಸಿದ್ಧರಿಲ್ಲದವರನ್ನು ಒಲಿಸಲು, ಅವರ ದೌರ್ಬಲ್ಯಕ್ಕೆ ಸಮಜಾಯಿಶಿ ಕೊಡಲು, ಗಹನತೆ ಮತ್ತು ಗಂಭೀರತೆಗಳು ಜೀವನ ಪ್ರೀತಿಗೆ ವಿರೋಧಿಯೆಂಬಂತೆ ಬಿಂಬಿಸಲಾಗುತ್ತಿದೆ. ಕೇವಲ ಐಹಿಕದಲ್ಲಿಯೇ ನೆಟ್ಟ ಮನಸ್ಸು, ಸುಲಭದ ಮತ್ತು ಪರಿಶ್ರಮದ ಗರಜಿಲ್ಲದ ಅನುಕೂಲಗಳನ್ನು ಬಯಸುತ್ತದೆ. ಸ್ವತಃ ತೊಡಗಿಕೊಳ್ಳದೇ ಎಲ್ಲವೂ ತಾನಾಗಿ ಒದಗಿ ಬರಬೇಕೆಂದು ಅಪೇಕ್ಷಿಸುತ್ತದೆ. ಉತ್ತಮ ಅಭಿರುಚಿಯನ್ನು ಬೆಳೆಸುವುದರಿಂದ ಮಾತ್ರ ಇಂಥ ಅಪಾಯಗಳನ್ನು ನಿವಾರಿಸಬಹುದಾಗಿದೆ. ಉತ್ತಮ ಅಭಿರುಚಿಯೆಂದರೆ ಹುಬ್ಬು ಗಂಟಿಕ್ಕುವುದಲ್ಲ, ಅತಿ ಗಾಂಭೀರ್ಯದ ಸೋಗಲ್ಲ. ಸುತ್ತಲಿನ ಜೀವನಕ್ಕೆ ಸಹೃದಯತೆಯಿಂದ ಸ್ಪಂದಿಸುವುದು.

ಗಂಭೀರವಾದ ಸಾಹಿತ್ಯ ಕಾಲಯಾಪನೆಯಲ್ಲ. ಅಕ್ಷರ ಮಾಧ್ಯಮ ಮತ್ತು ಸಾಹಿತ್ಯ ಭಿನ್ನ ಕ್ಷೇತ್ರಗಳು. ಓದಲು ಬರುವವರನ್ನೆಲ್ಲ ತಲುಪಬೇಕೆಂಬ ಆಸೆಯನ್ನು ಬಿಟ್ಟು ಬರೆದಾಗ, ಕೆಲವೇ ಓದುಗರಿದ್ದಾಗಲೂ ಜವಾಬ್ದಾರಿಯಿಂದ, ಆತ್ಮವಿಶ್ವಾಸ ಮತ್ತು ಪ್ರೀತಿಯಿಂದ ಬರೆಯುವವರು ಇದ್ದಾಗ ಉತ್ತಮ ಸಾಹಿತ್ಯ ಹುಟ್ಟುತ್ತದೆ. ಸಾಹಿತ್ಯದ ಐಹಿಕ ಪ್ರಯೋಜನಗಳನ್ನು ನೋಡಲು ಆರಂಭಿಸಿದೊಡನೆಯೇ ಅಲ್ಲಿ ಕೊಳಕುತನ ಹುಟ್ಟಿಕೊಳ್ಳುತ್ತವೆ.

ನಿಮ್ಮ ಪ್ರಶ್ನೆಗೆ ಮರಳುವುದಾರೆ, ಈವತ್ತು ಬರೆಯುವವರಿಗೆ ಹಿಂದೆಂದಿಗಿಂತಲೂ ಹೆಚ್ಚು ಪರಿಶ್ರಮ ಮತ್ತು ಪ್ರತಿಭೆಯ ಅಗತ್ಯವಿದೆ. ಅಷ್ಟೇ ಅಲ್ಲ, ತಕ್ಷಣದ ಆಮಿಷಗಳನ್ನು ಮೀರುವ ಸ್ಥೈರ್ಯ ಮತ್ತು ಗುಣಮಟ್ಟದಲ್ಲಿ ನಂಬಿಕೆ ಇನ್ನಷ್ಟು ಗಾಢವಾಗಬೇಕಾದ ಅಗತ್ಯ ಇದೆ. ಕೇವಲ ಪ್ರತಿಭೆಯನ್ನೇ ಆಧರಿಸಿದ ಬರವಣಿಗೆ ಬಹು ಬೇಗ ಸೀಮಿತವಾಗುತ್ತದೆ. ವಿಸ್ತಾರವಾದ ಓದನ್ನೂ ಒಳಗೊಂಡಂತೆ, ಸಾಹಿತ್ಯ ಸೃಷ್ಟಿಗೆ ಅತ್ಯಗತ್ಯವಾದ ಶ್ರಮವನ್ನು ನಾವು ಮರೆಯಬಾರದು. ಉತ್ತಮ ಸಾಹಿತ್ಯ ಸೃಷ್ಟಿಗೆ ಇವೆರಡೂ ಬೇಕು. ಪ್ರತಿ ಬರವಣಿಗೆಯ ಹೊತ್ತಿಗೂ ತನ್ನೆಲ್ಲ ಶಕ್ತಿಯನ್ನೂ ಪಣಕ್ಕಿಟ್ಟು ಬರೆಯುವ ಜವಾಬ್ದಾರಿ, ಪರಿಶ್ರಮ ಮತ್ತು ಛಲ ಕನ್ನಡದ ಎಲ್ಲ ಶ್ರೇಷ್ಠ ಲೇಖಕರಿಗೂ ಇತ್ತು ಅನ್ನುವುದನ್ನು ನೆನಪಿಡೋಣ. ಇಂಥ ಬದ್ಧತೆಗೆ ಪರ್ಯಾಯವಿಲ್ಲ.

ಕೆ.ಎಸ್.ಸಿ.: ಕನ್ನಡದಲ್ಲಿ ಸಾಕಷ್ಟು ಹೊಸ ಬರಹಗಾರರು ಹುಟ್ಟಿಕೊಂಡಿದ್ದಾರೆ. ಹುಟ್ಟಿಕೊಳ್ಳುತ್ತಿದ್ದಾರೆ. ಹೊಸ ಕತೆ-ಕವನಗಳು ಹರಿದು ಬರುತ್ತಿವೆ. ಆದರೂ ಗಟ್ಟಿ-ಕಾಳುಗಳು ಅಂತ ಬಂದದ್ದು ಕಡಿಮೆ. ಹಾಗೆ ಬಂದ ಗಟ್ಟಿ ಕಾಳುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ವ್ಯವಸ್ಥೆಯೊಂದನ್ನು ರೂಪಿಸಲು ಸಾಧ್ಯವೆ?

ವಿ.ಶಾ.: ಒಂದು ವ್ಯವಸ್ಥೆ ಇಲ್ಲದೇ ಇದ್ದರೂ, ಈವರೆಗೂ ಕನ್ನಡ ಸಂವೇದನೆ ಮತ್ತು ವಿಮರ್ಶಾ ಪ್ರಜ್ಞೆ ಯಾವ ಗಟ್ಟಿ ಕಾಳುಗಳನ್ನೂ ಲಕ್ಷಿಸದೇ ಬಿಟ್ಟಿಲ್ಲ ಎಂದು ನನ್ನ ಅನಿಸಿಕೆ. ಕೆಲವೇ ಕೆಲವು ಕತೆಗಳನ್ನು ಬರೆದ ಖಾಸನೀಸ, ನೀರಮಾನ್ವಿ, ದೇವನೂರು ಮಹಾದೇವ, ಗಿರಿ, ಆಲನಹಳ್ಳಿ ಇವರೆಲ್ಲ ತಮ್ಮ ಮೊದಲ ಬರಹಗಳಿಂದಲೇ, ಬಹಳ ಕಡಿಮೆ ಬರೆದಿರುವಾಗಲೂ ಮುಖ್ಯರೆಂದು ಪರಿಗಣಿಸಲ್ಪಟ್ಟಿದ್ದರು. ಎಲ್ಲ ಕ್ಷೇತ್ರಗಳ ಹಾಗೆ ಸಾಹಿತ್ಯದಲ್ಲಿಯೂ ಸಾಧಾರಣ ಪ್ರತಿಭೆಯ ಲೇಖಕರು ವಿಮರ್ಶಕರನ್ನು ತೆಗಳುವುದು, ಯಶಸ್ವೀ ಲೇಖಕರ ಬಗ್ಗೆ ಕರುಬುವುದು, ಇಲ್ಲಿ ಪ್ರತಿಭೆಗೆ ಸ್ಥಾನವಿಲ್ಲ ಎಂದು ಗೋಳಾಡುವುದು ಇದ್ದದ್ದೇ. ಅಂತೆಯೇ ಎಲ್ಲ ಕ್ಷೇತ್ರಗಳ ಹಾಗೆ ಇಲ್ಲಿಯೂ ಹಲವಾರು ದಡ್ಡ ವಿಮರ್ಶಕರು, ಗೊಡ್ಡು ಲೇಖಕರು ಇದ್ದಾರೆ. ಯಾವುದನ್ನು ಎಷ್ಟು ಗಣಿಸಬೇಕು ಎಂಬ ಪರಿಜ್ಞಾನ ಇದ್ದು, ಒಟ್ಟಾರೆ ನೋಡಿದಾಗ ಪ್ರತಿಭೆಗೆ ಅನ್ಯಾಯವಾಗಿಲ್ಲ ಎಂಬುದು ನನ್ನ ಅಭಿಪ್ರಾಯ.

ಕೆ.ಎಸ್.ಸಿ.: ಹಿಂದಿನ ಪ್ರಶ್ನೆಗೆ ಸಂಬಂಧಿಸಿದ ಹಾಗೆ ಇನ್ನೊಂದು ಪ್ರಶ್ನೆ. ಆರೋಗ್ಯಕರ, ಸತ್ವಶಾಲಿ ಹಾಗೂ ಚೈತನ್ಯಪೂರ್ಣ ಸಾಹಿತ್ಯ ಸಮುದಾಯವನ್ನು ಹುಟ್ಟು ಹಾಕಿ ಪೋಷಿಸುವುದರ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಡಾಟ್‌ಕಾಂ ಏನು ಮಾಡಬೇಕಾಗಿದೆ?

ವಿ.ಶಾ.: ಇಂಟರನೆಟ್‌ನಿಂದಾಗಿ ಸಾಂಪ್ರದಾಯಿಕ ಸಂಘಟನೆಯ ಅಗತ್ಯವಿಲ್ಲದೇ ಸಮಾನ ಸಂವೇದನೆಯ ವ್ಯಕ್ತಿಗಳ ನಡುವಿನ ಸಂಪರ್ಕ ಸಾಧ್ಯವಾಗುತ್ತದೆ. ಊರು ದೇಶಗಳ ಮಿತಿಯಿಲ್ಲದ್ದರಿಂದ ಇದು ಸಂಖ್ಯೆಯಲ್ಲಿಯೂ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾದ ಸಂಘಕ್ಕಿಂತ ದೊಡ್ಡದಾಗಿರುತ್ತದೆ. ಆದ್ದರಿಂದ ಇದು ಪ್ರಭಾವ ಮಾಡಬಹುದಾದ ವಲಯವೂ ದೊಡ್ಡದು.

ಸಾಹಿತ್ಯವೊಂದನ್ನೇ ಕೇಂದ್ರವಾಗಿಟ್ಟುಕೊಂಡು, ದೊಡ್ಡ ಸಂಖ್ಯೆಯಲ್ಲಿ ಆಸಕ್ತರನ್ನು ಒಂದೆಡೆ ಕಲೆಹಾಕುವುದು ಸಾಧ್ಯವಾಗುವುದಾದರೆ ಅದು ಕಡಿಮೆ ಸಾಧನೆಯಲ್ಲ. ಕೃತಿಗಳ ಆಯ್ಕೆಯಲ್ಲಿ ಗುಣಮಟ್ಟ, ವೈವಿಧ್ಯ ಮತ್ತು ಪ್ರಯೋಗಶೀಲತೆಗಳೇ ಪರಿಮಾಣವಾಗಬೇಕು. ಬದಲಾಗುತ್ತಿರುವ ಸಂದರ್ಭದಲ್ಲಿ, ಕಸಾಕಾಂ ಮಾಡುತ್ತಿರುವ ಕೆಲಸ ಅಗತ್ಯವಾದುದು. ಇವೆಲ್ಲ ಕಠಿಣ ಯಾತ್ರೆಯ ಮೊದಲ ಹೆಜ್ಜೆಗಳು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.