ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ ಭಾವನೆಗಳನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಾನೆ. ಅವನ ದನಿಯ ಏರಿಳಿತದಲ್ಲಿ ಮುಖದ ಹಾವಭಾವದಲ್ಲಿ, ಒತ್ತುವ ವಿವರಗಳಲ್ಲಿ ಕೇಳುವವನ ಅಂತರಂಗವನ್ನು ವಶಪಡಿಸಿಕೊಳ್ಳುವ ಹೊಂಚಿಕೆಯಿರುತ್ತದೆ. ಮೋಸಗಾರನ ಹೊಂಚಿಕೆಗೂ, ಪ್ರಾಮಾಣಿಕನಲ್ಲಿ ನಮ್ಮನ್ನು ಸೆಳೆಯಬಲ್ಲಂತೆ ವ್ಯಕ್ತವಾಗುವ ಆರ್ತತೆಗೂ ನಡುವೆ ಸಾಮಾನ್ಯ ಅಂಶಗಳಿರುತ್ತವೆಂಬುದನ್ನು ನಾವು ಗಮನಿಸಿರುತ್ತೇವೆ. ಹೃತ್ಪೂರ್ವಕತೆಯನ್ನು ವ್ಯಕ್ತ ಮಾಡುವ ಒಬ್ಬನ ಮುಖದ ಹಾವಾಭಾವ ನಮಗೆ ಪ್ರಿಯವಾದರೂ, ಕಪಟಿಯಲ್ಲಿಅದೇ ಹಾವಭಾವ ಕಂಡಾಗ ನಾವು ಸಂಶಯಗ್ರಸ್ತರಾಗುತ್ತೇವೆ. ಆಗೀಗ ಮೋಸಹೊಗಿ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬ ವಿವೇಕದ ಅಗತ್ಯ ನಮಗೆ ಮನದಟ್ಟಾಗಿರುತ್ತದೆ. ಸುಳ್ಳು ಮಾತಿಗೂ ಕಲೆಯ ವಕ್ರತೆಗೂ ಹೀಗೆ ಸಂಬಂಧವಿದೆ. ಮಾತಿನ ಹಿಂದಿನ ಇಂಗಿತ ಎರಡಕ್ಕೂ ಮುಖ್ಯ. ಒಂದು ದೃಷ್ಟಿಯಲ್ಲಿ ನೋಡುವುದಾದರೆ ಶ್ರೇಷ್ಠಕಲೆ ಕೂಡ ಮಾತಿನ ಸಂಯೋಜನೆಯಲ್ಲೋ, ಬಣ್ಣದ ವಿನ್ಯಾಸದಲ್ಲೋ, ನಾದದ ಏರಿಳಿತದಲ್ಲೋ ಹೀಗೆಯೇ ನಮ್ಮ ಭಾವನೆಗಳನ್ನು ನುಡಿಸಿ ನಮ್ಮನ್ನು ತನ್ನ ವಶಕ್ಕೆ ಪಡೆಯಲು ಹವಣಿಸುತ್ತದೆ.
ನಮ್ಮನ್ನು ಒಲಿಸಿಕೊಳ್ಳುವ ಹೊಂಚುವ ಇಬ್ಬರಲ್ಲಿ ಯಾರು ಸಾಚ, ಯಾರು ಪಡಪೋಶಿ ಎಂಬುದನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ಆಗೀಗ ಪೆಟ್ಟು ತಿಂದ ನಾವು ಕಲಿಯುತ್ತಲೇ ಇರುತ್ತೇವೆ. ಆದರೆ ಮಾತ್ರ, ನಮ್ಮ ಅಂತರಂಗಕ್ಕೆ ಕೈಹಾಕುವ ಕಲೆಯಲ್ಲಿ ಯಾವುದು ಸಾಚ, ಯಾವುದು ಮೋಸ, ಯಾವುದು ಬರಿ ಕಣ್ಕಟ್ಟು ಎಂಬುದು ಕೂಡ ಇಂಥವೇ ವಿವೇಕಕ್ಕೆ ಸಂಬಂಧಿಸಿದ ಪ್ರಶ್ನೆಯಾದರೂ ನಮಗದು ತೀವ್ರವಾಗಿ ತಟ್ಟದೇ ಓಗಬದುದು. ಯಾಕೆಂದರೆ ಇಲ್ಲಿ ನಾವು ತಿನ್ನುವ ಪೆಟ್ಟು ನೇರವಲ್ಲ; ಹಗಲುಗನಸಿನ ಸುಖ ಬೇಕೆನ್ನಿಸುವುದು ಮನುಷ್ಯ ಸಹಜವಾದ್ದು; ನಿಜವನ್ನು ಪತ್ತೆಮಾಡುವುದು ಕೂಡ ಕಷ್ಟವೇ. ಸಮಾಜದಲ್ಲಿ ಬದುಕುವ ನಮ್ಮ ಮನಸ್ಸಿನ ಮೇಲೆ, ಸುಖದುಃಖಗಳಿಗೆ ಕಾರಣವಾದ ಭಾವಗಳ ಮೇಲೆ ಎಲ್ಲ ದಿಕ್ಕುಗಳಿಂದಲೂ ಆಕ್ರಮಣ ಪ್ರಯತ್ನ ನಡೆಯುತ್ತಲೇ ಇರುವುದರಿಂದ, ಕಲ್ಪನಾತ್ಮಕ ವಸ್ತುವಿಗೂ ಕಣ್ಕಟ್ಟಿಗೂ ತೋರಿಕೆಯ ಸಾಮ್ಯ ಬೇರೆ ಇರುವುದರಿಂದ, ಬದುಕಿನ ಅನುಭವದಿಂದ ಬರುವ ವಿವೇಕವನ್ನು ಕಲ್ಪನಾತ್ಮಕ ವಸ್ತುಗಳಿಗೂ ಅನ್ವಯಿಸುವುದನ್ನು ಕಲಿಸುವ ಕಷ್ಟಸಾಧ್ಯವಾದ ಮನಸ್ಸಿನ ಶಿಸ್ತೆಂದರೆ ವಿಮರ್ಶೆ. ನಮ್ಮ ಆಸಕ್ತಿಯನ್ನು ಕೆರಳಿಸಿ, ಒಂದು ಉದ್ದೇಶಕ್ಕೆ ಒಪ್ಪಿಕೊಳ್ಳುವಂತೆ ಭಾವಗಳನ್ನು ಸಂಯೋಜಿಸಲು ಯತ್ನಿಸುವ ಜಾಹೀರಾತಿನ ಹಿಂದಿರುವ ನಿಜ ಸುಳ್ಳು; ರಾಜಕಾರಣಿಯ ಭಾಷಣದ ಹಿಂದಿನ ಗುಪ್ತ ಉದ್ದೇಶ; ಎದುರು ತೋರುವ ಆರ್ತ ಮಾತಿನ ಹಿಂದಿರುವ ಪ್ರಾಮಾಣಿಕತೆ ಅಥವಾ ಮೋಸ; ಕಲೆಗೆ ನಾವು ನಮ್ಮ ಗಮನವನ್ನು ಕೊಟ್ಟಿದ್ದೆಷ್ಟು, ಪಡೆದಿದ್ದೆಷ್ಟು ಈ ಎಲ್ಲ ಪ್ರಶ್ನೆಗಳು ನಮ್ಮ ಜೀವಂತಿಕೆಯನ್ನು ನಿಜವಾದ್ದಕ್ಕೆ ಮಾತ್ರ ಒಡ್ಡಿಕೊಂಡು ಪೋಷಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಮುಖ್ಯವಾಗುತ್ತದೆ. ಅಬ್ಬರಕ್ಕೊಗ್ಗಿದ ಕಿವಿಗೆ ಸೂಕ್ಷ್ಮವಾದದ್ದು, ನಯವಾದ್ದು ಹಿಡಿಸುವುದಿಲ್ಲ; ಅದ್ಭುತರಮ್ಯದ ದುಂದಿಗೆ ಭಾವವನ್ನು ಒಡ್ಡಿ ಹಿಗ್ಗಾಮುಗ್ಗಾ ಎಳೆಸಿಕೊಂಡವನಿಗೆ ನೈಜವಾದ್ದು ಸಪ್ಪೆಯೆನಿಸೀತು. ಸಹನೆಯಾಗಲೀ ಏಕಾಗ್ರತೆಯಾಗಲೀ ಅಸಾಧ್ಯವಾಗುತ್ತ ಭಾವದ ಶಕ್ತಿ ಕ್ರಮೇಣ ಬತ್ತಿ ಹೋದೀತು. ನನ್ನ ಸ್ನೇಹಿತರೊಬ್ಬರು ಹೇಳುತ್ತಿರುತ್ತಾರೆ: ಸ್ಟಂಟ್ ಚಿತ್ರಗಳನ್ನು ನೋಡುವುದೇ ಹವ್ಯಾಸ ಮಾಡಿಕೊಂಡ ಯುವಕರಿದ್ದ ಊರಿಗೆ ಒಮ್ಮೆ ಸರ್ಕಸ್ ಕಂಪನಿ ಬಂತಂತೆ: ಆದರೆ ಸರ್ಕಸ್ಸಿನ ನಿಜವಾಗಿಯೂ ರೋಮಾಂಚಕಾರಿಯಾದ ಕೈಚಳಕವಾಗಲೀ ಕಸರತ್ತಾಗಲೀ ಈ ಹುಡುಗರಿಗೆ ಸಪ್ಪೆಯಾಗಿ ಕಂಡಿತಂತೆ. ಪತ್ತೇದಾರಿ ಕಾದಂಬರಿಗಳ ರುಚಿ ಹತ್ತಿದವನೊಬ್ಬನಿಗೆ ಯಾರು ಕೊಲೆಗಾರ ಎಂಬ ಸುಲಭ ಪ್ರಶ್ನೆ ಪತ್ತೆಯಾಗಲು ಐದು ಅಂಕಗಳು ಬೇಕಾದ ಮ್ಯಾಕ್‌ಬೆತ್ ನಾಟಕದ ಕಾವ್ಯ ಗೋಳು ಎನ್ನಿಸಬಹುದು. ಈ ಅಪಾಯವನ್ನು ಹತ್ತೊಂಬತ್ತನೇ ಶತಮಾನದಲ್ಲೇ ಗಮನಿಸಿದ ವರ್ಡ್ಸ್‌ವರ್ಥ್ ಕೆಟ್ಟ ಕಾದಂಬರಿಗಳಾದ ‘eಟಿಟಿeಡಿvಚಿಣe ’ ಆಗಿ ನಿಸರ್ಗಕ್ಕೆ ಸ್ಪಂದಿಸಲಾರದೆ ಹೋಗುತ್ತೇವೆಂದು ವಾದಿಸಿದ. ಎಲ್ಲವೂ ಆದಷ್ಟು ಬೇಗ ಖರ್ಚಾಗಬೇಕಾದ ಸರಕಾಗುತ್ತಿರುವ ಈ ಕಾಲದಲ್ಲಿ ಈ ಅಪಾಯ ಇನ್ನೂ ಹೆಚ್ಚು ಎನ್ನಬಹುದು.
ಈ ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ‘ನಾಗರಹಾವು’ ಚಿತ್ರ ನಮ್ಮ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಹೇಗೆ ಮಾಡಲು ಪ್ರಯತ್ನಿಸುತ್ತದೆ ಎಂಬುದನ್ನು ನೊಡೊಣ. ಈ ಚಿತ್ರ ನೋಡುವಾಗ ಕೆಲವು ಸಂದರ್ಭಗಳಲ್ಲಿ ನನಗೆ ಕಣ್ಣೀರು ಉಕ್ಕಿತೆಂಬುದನ್ನು ಹೇಳಲು ನಾಚಿಕೆಯಾದರೂ ಒಪ್ಪಿಕೊಳ್ಳುತ್ತೇನೆ. ಯಾರ ಜೊತೆ ಕೂತು ನಾವು ಒಂದು ಸಿನಿಮಾವನ್ನು ನೊಡುತ್ತೇವೆಂಬುದು ಮುಖ್ಯ. ‘ನಾಗರಹಾವು’ ನೊಡುವಾಗ ನನಗಿದು ಮನದಟ್ಟಾಯಿತು. ನನ್ನ ಜೊತೆ ಕೂತವರ ಭಾವನೆಗಳು ನನ್ನನ್ನೂ ಆಕ್ರಮಿಸಿದುವು. ಅದೇ ನನ್ನ ಜೊತೆ ಕೂತ ಪ್ರೇಕ್ಷಕರು ವಿಮರ್ಶಾತ್ಮಕ ಧೋರಣೆಯುಳ್ಳ ವಿವೇಕಿಗಳಾಗಿದ್ದಲ್ಲಿ ಈ ಚಿತ್ರದ ಭಾವಾತಿರೇಕಗಳು ನನಗೆ ಹಾಸ್ಯಾಸ್ಪದವಾಗಿ ಕಾಣಬಹುದಿತ್ತು. ಆದರೆ ನಾಗರಹಾವು ಚಿತ್ರವನ್ನು ನಾನು ನೋಡಿದಾಗ ನನ್ನ ಜೊತೆಗಿದ್ದ ಪ್ರೇಕ್ಷಕರ ಕೆಲವು ಮನಸ್ಸಿನ ಅಂಶಗಳು ನನ್ನವೂ ಆಗಿದ್ದುದರಿಂದಲೇ ಸ್ವಲ್ಪ ಮಟ್ಟಿಗೆ ವಿಮರ್ಶಾತ್ಮಕ ವಿವೇಕವನ್ನೂ ಬದಿಗಿಟ್ಟು ನಾನು ಚಿತ್ರಕ್ಕೆ ಸ್ಪಂದಿಸಿದೆ ಎನ್ನಬಹುದು. ಈ ಲೇಖನವನ್ನು ಬರೆಯುವಾಗ ಚಿತ್ರ ನೋಡಿದಾಗ ನನಗೆ ಅನ್ನಿಸಿದ ಉತ್ಕಟತೆಯನ್ನು ವಿಮರ್ಶೆಗೆ ಒಡ್ಡುವುದೇ ಈಗಿನ ನನ್ನ ಉದ್ದೇಶವೆನ್ನಬಹುದು. ಬೆಂಗಳೂರು ಮತ್ತು ಮೈಸೂರು ನಗರಗಳಂಥ ವಿಶೇಷವಾಗಿ ಮಧ್ಯಮವರ್ಗದ ನಮ್ಮಂಥವರು ಅಧಿಕವಾಗಿರುವ ಊರುಗಳಲ್ಲಿ ಜನಪ್ರಿಯವಾಗಿ, ಆ ಮೂಲಕ ಹೆಸರು ಮಾಡಿ, ಉಳಿದ ವರ್ಗಗಳಿದಲೂ ಮೆಚ್ಚಿಕೆ ಸಂಪಾದಿಸುವ ಈ ಸಿನಿಮಾವನ್ನು ವಿಶ್ಲೇಷಿಸುವ ಮುಖಾಂತರ ಚಿತ್ರಕ್ಕೆ ಯಶಸ್ಸನ್ನು ಗಿಟ್ಟಿಸಲು ಕಾರಣವಾದ ಕೆಲವು ಸಾಮಾಜಿಕ ಸತ್ಯಗಳನ್ನು ತಿಳಿಯಬಹುದೆಂದು ನನ್ನ ಭಾವನೆ. ನಾನು ಹೇಳುವುದೆಲ್ಲ ಚಿತ್ರ ನಿರ್ದೇಶಕರ ಸ್ಪಷ್ಟ ಉದ್ದೇಶವಾಗಿತ್ತೆಂದು ನಾನು ಭಾವಿಸುವುದಿಲ್ಲ. ಅವರ ಉದ್ದೇಶವನ್ನೂ ಮೀರಿದ ಚಿತ್ರದ ಪರಿಣಾಮ ನನಗೆ ಮುಖ್ಯ.
ಮಧ್ಯಮವರ್ಗದ ಪ್ರೇಕ್ಷಕನಾದ ನಮಗೆ ಮರ್ಯಾದೆಗೆಡದಂತೆ ಬದುಕುವ ಕಷ್ಟಸುಖಗಳ ಅನುಭವ ನಿತ್ಯ ಆಗುತ್ತಿರುತ್ತದೆ. ರಾಜಿ ಮಾಡಿಕೊಳ್ಳದೆ ನಾವು ಬದುಕಲಾರೆವು; ಎಂಥ ಸತ್ಯಸಂಧನೂ ಕೊನೆಗೆ ಸಮಾಜದ ಪ್ರತಿಷ್ಠರ ಜೊತೆ ರಾಜಿ ಮಾಡಿಕೊಂಡು ಹಣ್ಣಾಗಬೇಕಾಗುತ್ತದೆಂಬ ದುರಂತ ಪ್ರಜ್ಞೆ ನಮಗಿರುತ್ತದೆ. ನಾವು ಬಾಯಿಮಾತಿನಲ್ಲಿ ಏನೇ ಹೇಳುತ್ತಿರಲಿ, ಪ್ರತಿಷ್ಠಿತರನ್ನು ಎದುರುಹಾಕಿಕೊಳ್ಳುವ ತಮ್ಮನೋ, ಮಗನೋ, ಸ್ನೇಹಿತನೋ ನಮಗಿದ್ದರೆ ಅವನನ್ನು ಹದಕ್ಕೆ ತರಲು ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. ಈ ಪ್ರತಿಭಟನೆ ತಾತ್ವಿಕವಾಗಿ ಸರಿ ಎಂದು ನಮಗೆ ಗೊತ್ತು; ಆದರೆ ಕೆಡುಕಿನ ಜೊತೆ ಒಪ್ಪಂದ ಮಾಡಿಕೊಳ್ಳದ ಆಪ್ತನೊಬ್ಬ ಆದಷ್ಟು ಶೀಘ್ರವಾಗಿ ದಾರಿಗೆ ಬರುವುದೂ ನಮಗೆ ಬೇಕು. ಇಂಥ ಮನಸ್ಥಿತಿಯ ನಮಗೆ ರಾಮಾಚಾರಿಯಂಥ ದುಡುಕಿನ ಪ್ರಮಾಣಿಕ ಬಂಡಾಯಗಾರನೆಂದರೆ ಯಾಕೆ ಒಳಗೊಳಗೇ ಪ್ರಿಯನಾಗುತ್ತಾನೆಂದು ವಿವರಿಸಬೇಕಾಗಿಲ್ಲ. ರಾಮಾಚಾರಿ ಹಸಿ ಮನುಷ್ಯ – ನಿಜ. ಆದರೆ ನಾವು ಅವನ ಹಾಗಾಗಬಹುದಿತ್ತು ಎನ್ನಿಸುವುದರಿಂದಲೇ ಅವನು ನಮಗೆ ಆಪ್ತ. ಅವನ ಯಜಮಾನನಾದ ಮಂಡಿವರ್ತಕ ಅಲುಮೇಲುವನ್ನು ಭೋಗಿಸಲು ಪ್ರಯತ್ನಿಸುವುದನ್ನು ಅವನು ಹೇಗೆ ಒರಟಾಗಿ ವಿರೋಧಿಸುತ್ತಾನೆ, ನೋಡಿ. ಕಾಲೇಜಿಗೆ ಹೋಗುತ್ತಿರುವ ನಮ್ಮ ಮಗ ರಾಮಾಚಾರಿಯಂತೆ ಪ್ರಾಯಶಃ ಇದ್ದಾನೆ. ಸ್ವಲ್ಪ ದುಡುಕು; ಆದರೆ ಪ್ರಾಮಾಣಿಕ; ಚೆನ್ನಾಗಿ ಪಾಸುಮಾಡಿ ಮುಂದು ಬರುವುದರಲ್ಲಿ ನಿರಾಸಕ್ತ. ಈತ ಪೋಲಿಯಾಗಿ ಏನೂ ಸಂಪಾದನೆ ಮಾಡದೆ ಹೋಗಬಹುದೆಂದು ನಮಗೆ ಭಯ. ಆದರೂ ಪ್ರೀತಿ; ಗುಪ್ತವಾಗಿ ಗೌರವ ಕೂಡ. ಒಳಹೊಕ್ಕು ನೋಡಿದಲ್ಲಿ ಪ್ರತಿ ಕುಟುಂಬದಲ್ಲೂ ಪ್ರಾಯಶಃ ನಿಷ್ಕಪಟಿಯಾದ, ಆದರೆ ಪೋಲಿ ಬಿದ್ದು ನಿರುಪಯೋಗಿಯಾಗಿ ಬಿಟ್ಟ ಒಬ್ಬನಲ್ಲ ಒಬ್ಬ ಇರುತ್ತಾನೆ. ಪ್ರತಿ ಸಾಮಾಜಿಕ ವ್ಯವಸ್ಥೆಯೂ ಹೊಂದಿಕೊಳ್ಳಲಾರದವನನ್ನು ಹೀಗೆ ಕಸದಬುಟ್ಟಿಗೆ ಎಸೆಯುತ್ತದೆ. ಮಧ್ಯಮವರ್ಗದವನಾದ ಇವನ ಪ್ರತಿಭಟನೆ ಎಲ್ಲೂ ಊರಿ ಗಟ್ಟಿಯಾಗದೆ, ಯಾವ ಕೆಲಸಕ್ಕೂ ಅಂಟಿಕೊಳ್ಳಲಾರದ ಭ್ರಮಣೆಯಾಗಿ, ಕುಡಿತದಲ್ಲೊ ಪೋಲಿಯಲೆಯುವುದರಲ್ಲೊ ಕೊನೆಯದಾಗಿ ಸಂಬಂಧಪಟ್ಟವರಿಗೆಲ್ಲ ತಲೆಬೇನೆಯಾಗಿರುತ್ತದೆ. ಪ್ರತಿ ಮಧ್ಯಮವರ್ಗದ ಕುಟುಂಬವೂ ಅವಮಾನದಿಂದ ಮುಚ್ಚಿಟ್ಟುಕೊಳ್ಳಲು ಬಯಸುವ ಇಂಥ ಒಬ್ಬ ನಿರುಪಯೋಗಿಯನ್ನು ಪಡೆದಿರುತ್ತದೆ ಎಂದು ಊಹಿಸಬಹುದು. ನಮ್ಮ ಮೌಲ್ಯಗಳ ಪೊಳ್ಳನ್ನು ಬಯಲು ಮಾಡುವ ದುರ್ಬಲ ಜೀವಿಗಳು ಇವರು. ಇಂಥವರನ್ನು ನಾವು ಟೀಕಿಸಿದರೂ ಯಶಸ್ವಿಯಾದವರ ಬಗ್ಗೆ ಕೂಡ ನಮಗೆ ಅಂಥ ಗೌರವವೇನೂ ಇರುವುದಿಲ್ಲ. ಆಳುದ್ದ ಶರೀರವನ್ನು ಗೇಣುದ್ದ ಮಾಡಿಕೊಂಡೇ ಮುನ್ನುಗ್ಗಬೇಕಾದ ಮಧ್ಯಮ ವರ್ಗದ ಬವಣೆ ನಮಗೆ ಗೊತ್ತಿಲ್ಲವೆ? ಸಂಪಾದನೆ, ಮಹತ್ವಾಕಾಂಕ್ಷೆಗಳ ನಿಷ್ಠುರ ಲೋಕದಲ್ಲಿ ಪೊಳ್ಳಾಗುತ್ತಿರುವ ನಮಗೆ ರಾಮಾಚಾರಿಯಂಥ ದುಡುಕಿನ ಪ್ರಾಮಾಣಿಕನನ್ನು ರಜತಪರದೆಯ ಮೇಲೆ ಕಾಣುವ ಸುಖ ಬೇಕೆಂದು ಸಿನಿಮಾದ ದಿಗ್ದರ್ಶಕನಿಗೆ ಗೊತ್ತು. ಇದು ಕೂಡ ಲೆಖ್ಖಾಚಾರ ಹೇಗೆಂಬುದನ್ನು ಮುಂದೆ ನೋಡೋಣ.
ಹಿಡಿದಕ್ಕೆ ಸಿಕ್ಕದಂತೆ ಪೋಲಿಯಾಗಿ ಬಿಟ್ಟ ನಮ್ಮ ಮಗನೊ, ತಮ್ಮನೊ, ಗೆಳೆಯನೊ ಆಗಬಹುದಾಗಿದ್ದ ರಾಮಾಚಾರಿಯ ಪ್ರಾಮಾಣಿಕ ದುಡುಕು ವರ್ತನೆ ಸಂಪೂರ್ಣ ಸರಿಯೆನ್ನಿಸುವಂತೆ ಚಿತ್ರಿಸುವುದು ಕೂಡ ಲೆಖ್ಖಾಚಾರಕ್ಕೆ ಸಮರ್ಪಕವಾಗುವುದಿಲ್ಲ. ಯಾಕೆಂದರೆ, ಆಗ – ಈ ದುಡುಕು ಇನ್ನೂ ಆಳದ ಬಂಡಾಯವಾದಲ್ಲಿ – ನಮ್ಮ ಮೌಲ್ಯಗಳೆಲ್ಲ ಬುಡಮೇಲಾಗಬಹುದು. ರಾಮಾಚಾರಿಯ ತಾಪ, ದ್ವೇಷ ಸ್ವಂತ ಜೀವನದಲ್ಲಿ ದಮ್ಮಿಲ್ಲದ ನಮ್ಮನ್ನು ತಣಿಸುತ್ತದೆ; ಅಥವಾ, ನಮಗೆ ಆಪ್ತನಾದವನನ್ನು ಎಲ್ಲರೂ ನಿಂದಿಸುತ್ತಿದ್ದರೂ ಸಹ ಅವನ ಬಗ್ಗೆ ಪ್ರೀತಿಯುಳಿಸಿಕೊಳ್ಳಬೇಕೆಂಬ ನಮ್ಮ ಗುಪ್ತ ಆಸೆಗೆ ಇಂಬುಕೊಡುತ್ತದೆ. ಆದರೆ ರಾಮಾಚಾರಿಯಂಥ ಬಂಡಾಯಗಾರನೊಬ್ಬನಿಂದ ಮಾತ್ರ ನಮ್ಮ ಕೊರತೆಯನ್ನು ತುಂಬಿಕೊಳ್ಳುವ ಸುಖ ನಮಗೆ ಸಾಲದು. ಇವೆಲ್ಲ ಪೊಳ್ಳು ಎಂದು ದುಡುಕುವ ರಾಮಾಚಾರಿ ನಮಗೆ ಎಷ್ಟು ಬೇಕೊ, ಅಷ್ಟೇ ಇದೇ ಮೌಲ್ಯಗಳ ಸಾಚಾ ಪ್ರತಿನಿಧಿಯೂ ಒಬ್ಬ ನಮಗೆ ಬೇಕು. ಈ ಆಶಯವನ್ನು ಪೂರೈಸಲು ಬಿ ಮತ್ತು ಸಿ ಥಿಯೇಟರಿಗಾಗಿ ರಾಮಾಚಾರಿ ತಗ್ಗಿ ನಡೆಯುವ ಜಟ್ಟಿಯಾಗಿ ಬರುತ್ತಾನೆ * ನಮಗೂ ಮಂಡಿವರ್ತಕನನ್ನು ಹೆದರಿಸಬಲ್ಲ ಈ ಒರಟು ಪೈಲ್ವಾನ್ ಪ್ರಿಯನಾಗುತ್ತಾನೆ; ಆದರೆ ಇವನಿಗಿಂತ ಹೆಚ್ಚು ಪ್ರಿಯರಾಗುವವರು ಮೇಷ್ಟ್ರು. ನಿಜಜೀವನದಲ್ಲಿ ಮುಜುಗರದ ವಿಷಯವಾದ ಪ್ರತಿಭಟನೆ ರಾಮಾಚಾರಿಯಲ್ಲಿ ನಮಗೆ ಒಪ್ಪಿಗೆಯಾಗಬಲ್ಲ ಸುಖದ ಜೊತೆಗೆ, ಈ ಇನ್ನೊಂದು ಸುಖವನ್ನೂ ಕೊಡುವುದರಲ್ಲೆ ದಿಗ್ದರ್ಶಕನ ಲೆಖ್ಖಾಚಾರದ ಜಾಣತನವಿರುವುದು. ಎದುರುಬಿದ್ದವನು ಹೇಗೆ ನಮ್ಮವನೊ, ಹೊಂದಿಕೊಂಡು ಬದುಕುವ ಈ ಸದ್ಗೃಹಸ್ಥನೂ ನಮ್ಮವನೇ ಅಲ್ಲವೆ?
ಅಧಿಕಾರವನ್ನು ಪ್ರತಿನಿಧಿಸುವ ವ್ಯಕ್ತಿ ಈ ಮೇಷ್ಟ್ರು. ಚಿತ್ರದಲ್ಲಿ ಇವರಿಗೂ ರಾಮಾಚಾರಿಗೂ ಇರುವ ಆಪ್ತ ಸಂಬಂಧ ನಮ್ಮ ವಿರುದ್ಧ ಆಕಾಂಕ್ಷೆಗಳನ್ನು ಸುಳ್ಳು ಸಂಘರ್ಷಗಳಲ್ಲಿ ಉಜ್ಜಿ ಸುಖಕೊಡುವ ಕೇಂದ್ರವಾಗುತ್ತದೆ. ಅಧಿಕಾರಕ್ಕೂ ಬಂಡಾಯಕ್ಕೂ ನಡುವೆ ರುಚಿಕರವಾದ ಸಮನ್ವಯ ನಮಗೆ ಬೇಕು; ಅದನ್ನು ಈ ಇಬ್ಬರೂ ಸೇರಿ ಹೇಗೆ ಕೊಡುತ್ತಾರೆ ನೋಡಿ.
ರಾಮಾಚಾರಿಯ ಪ್ರತಿಭಟನೆಯಲ್ಲಿ ಮೇಷ್ಟ್ರಿಗೆ ಗುಪ್ತವಾದ ಸಹಾನುಭೂತಿಯಿದೆ; ಆದರೂ ರಾಮಾಚಾರಿಯನ್ನು ದಾರಿಗೆ ತರಲು ಹೊರಟವರು ಇವರು. ಎಲ್ಲರ ಮೇಲೂ ಎಗರುವ ರಾಮಾಚಾರಿ ಇವರ ಮೇಲೂ ಎಗರುತ್ತಾನೆ; ಆದರೂ ಹೆದರುತ್ತಾನೆ. ಈ ಸಂಬಂಧ ಹಗಲುಗನಸಿನಷ್ಟು ಹಿತಕರವಾಗಿದೆ. ರಾಮಾಚಾರಿ ಕಲ್ಲನ್ನು ಎತ್ತು ಮೇಷ್ಟ್ರನ್ನು ಹೊಡೆಯಲು ಹೋಗುವ ಘಟನೆಯನ್ನು ನೋಡೋಣ. ನಮಗೆ ಗೊತ್ತು: ಕೊನೆಗೆ ರಾಮಾಚಾರಿ ಮೇಷ್ಟ್ರಿಗೇ ವಿಧೇಯನಾಗಿ ನಡೆದುಕೊಳ್ಳುವುದು; ಮೇಷ್ಟ್ರು ಸಹ ಎಲ್ಲರಿಗಿಂತಲೂ ರಾಮಾಚಾರಿಯನ್ನೆ ಹೆಚ್ಚು ಪ್ರೀತಿಸುವುದು – ಈ ಸಂಬಂಧ ಇನ್ನೇನು ಒಡೆದು ಹೋಗಿಬಿಡುತ್ತದೆ ಎನ್ನುವ ಕಲ್ಲನ್ನು ಎತ್ತಿ ಹೊಡೆಯಲು ನಿಂತ ಈ ಉತ್ಕಟ ಕ್ಷಣ ಕೂಡ ಏನೇ ಆಗಲಿ ಅಂತ್ಯದಲ್ಲಿ ರಾಮಾಚಾರಿಯ ವಿಧೇಯತೆ ಶಾಶ್ವತವಾದ್ದು ಎನ್ನುವ ಸುಖವನ್ನು ಹೆಚ್ಚು ಮಾಡಲು ಬಂದಿರುವ ಘಟನೆ. ಇದು ಶಮನದ ಸೌಖ್ಯಕ್ಕೆಂದೇ ಕೆರಳಿಸುವ ನಾಟಕ. ಸ್ನಾನದ ಹೊತ್ತಿಗೆ ಮಾತ್ರ ತುರಿಸಿಕೊಳ್ಳುವ ಖುಷಿಗಾಗಿ ಮೈತುಂಬ ಕಜ್ಜಿ ಬೇಕೆಂದು ವರ ಪಡೆದ ರಾವಣನ ಸುಖದ ಹಾಗೆ ಈ ಉದ್ರೇಕ – ಶಮನದ ಸುಖ. ಯಾಕೆಂದರೆ ನಮಗೆ ಹೇಗೆಲ್ಲಾ ಅನ್ನಿಸುತ್ತದೆ ನೋಡಿ: ಅಂತೂ ರಾಮಾಚಾರಿಯನ್ನು ದಾರಿಗೆ ತರಬಲ್ಲವರು ಈ ಮೇಷ್ಟ್ರು ಒಬ್ಬರೇ ಅಲ್ಲವೆ? ಈ ನಮ್ಮ ಸಮಾಜದಲ್ಲಿ ಮೇಷ್ಟ್ರಂಥ ಮನುಷ್ಯರೂ ಇದ್ದಾರೆ ಅಲ್ಲವೆ? ಜಾತಿಬಿಟ್ಟು ಮದುವೆಯಾಗುವುದನ್ನು ಇಷ್ಟು ಸಂಪನ್ನರಾದ ಮೇಷ್ಟ್ರು ಒಪ್ಪುವುದಿಲ್ಲ ಅಲ್ಲವೆ?- ಇತ್ಯಾದಿಯಾಗಿ ನಾವು ನಮ್ಮ ವರ್ಗದ ಮೌಲ್ಯಗಳ ಬಗ್ಗೆ ಕೊನೆಗೂ ನಂಬಿಕೆ ಉಳಿಸಿಕೊಳ್ಳುವಂತೆ, ಉಳಿಸಿಕೊಂಡು ಕ್ಷೇಮವಾಗಿರುವಂತೆ ಮಾಡಬಲ್ಲ ವ್ಯಕ್ತಿ ಅವರು. (ಈ ಪಾತ್ರ ಮಾಡಿರುವ ಅಶ್ವತ್ಥರ ಮುಖ ಸ್ವಲ್ಪ ತೊರವಾದ ದೇಹ ‘ತೂಕದ ವ್ಯಕ್ತಿ’ ಎಂದು ಮೆಚ್ಚಿಕೆ ಗಳಿಸುವಂತೆ ಇವೆ. ರಾಮಾಚಾರಿ ಸ್ಪುರದ್ರೂಪಿಯಲ್ಲದೆ ನಕ್ಸಲೈಟ್ ಚಾರುಮಜಂದಾರ್‌ನಂತೆ ಒಣಗಿಕೊಂಡಿರುವವನಾಗಿದ್ದರೆ ನಮಗೇನು ಅನ್ನಿಸುತ್ತಿತ್ತು?) ರಾಮಾಚಾರಿಯ ಹೃದಯವಂತಿಕೆಯಲ್ಲಿ ನಂಬಿಕೆಯಿರುವ ಮೇಷ್ಟ್ರು ಅವನನ್ನು ದಾರಿಗೆ ತರಲು ಪ್ರಯತ್ನಿಸುವುದರಿಂದ ಎಲ್ಲೂ ಪ್ರೇಕ್ಷಕರಿಗೆ ಶಾಕ್ ಆಗದಂತೆ ಉದ್ರೇಕ-ಶಮನಗಳ ನಾಟಕವನ್ನು ನಡೆಸಿಕೊಂಡು ಹೋಗುವುದು ದಿಗ್ದರ್ಶಕರಿಗೆ ಸಾಧ್ಯವಾಗುತ್ತದೆ; ‘ಬಂಡಾಯದ ಮೇಲೆ ಆಸೆ, ಅಥಾರಿಟಿಮೇಲೆ ಇಷ್ಟ’ ಪಡುವ ನಮ್ಮ ಇಬ್ಬಂದಿ ಮನಸ್ಸನ್ನು ತಣಿಸುವುದಕ್ಕೆ ಈ ಸಂಬಂಧದ ನಾಟಕ ಹೀಗೆ ಕಾರಣವಾಗುತ್ತದೆ.
ದಿಗ್ದರ್ಶಕರ ಫಾರ್ಮುಲಾದ ಸಂವಹನಕ್ಕಾಗಿ ರಾಮಾಚಾರಿ ಮತ್ತು ಮೇಷ್ಟ್ರು ತೀರಾ ತೆಳುವಾದ ಪಾತ್ರಗಳಾಗಿ ಬರುತ್ತಾರೆ. ಇಷ್ಟು ತೆಳುವಾದವರನ್ನು ಯಾಕೆ ಇಷ್ಟು ಆಳವಾಗಿ ವಿಶ್ಲೇಷಿಸಬೇಕೆಂದು ಓದುಗರಿಗೆ ಅನ್ನಿಸಬಹುದು. ಆದರೆ ತೆಳುವಾದ ಪಾತ್ರಗಳು ಸಹ ಮಾಡಬಹುದಾದ (ಅದ್ದರಿಂದ ಅಪಾಯಕಾರಿ) ಪರಿಣಾಮದ ದೃಷ್ಟಿಯಿಂದ ನನ್ನ ವಿಶ್ಲೇಷಣೆ ಅಗತ್ಯವೆಂದು ನನ್ನ ಭಾವನೆ. ಅಲ್ಲದೆ ಉದ್ರೇಕದ ಕಥೆಗೆ ತೆಳು ಪಾತ್ರಗಳೇ ಅವಶ್ಯಕ.
ಈ ಎರಡೂ ಪಾತ್ರಗಳಲ್ಲಿರುವ ಅನ್ಯೋನ್ಯ ಪ್ರೀತಿ ಮತ್ತು ಗೌರವ ಶ್ರೇಷ್ಠ ಕಲೆಯ ವಸ್ತುವೂ ಆಗಬಹುದಿತ್ತೆಂಬುದು ನನ್ನ ಮುಖ್ಯವಾದ. ಅಂದರೆ, ಪ್ರೇಕ್ಷಕರ ಭಾವವನ್ನು ದೋಚುವ ಸಾಧನವಾಗದೆ ಒಂದು ಸಂಕೀರ್ಣ ಮನಃಸ್ಥಿತಿಯ ಶೋಧನೆಯಾಗಿ ಈ ಇಬ್ಬಂದಿತನ ಬಂದಿದ್ದರೆ ಆಗ ನಾವು ಸಿನಿಮಾದಿಂದ ಪಡೆಯುವ ಅನುಭವವೇ ಬೇರೆಯಾಗಬಹುದಿತ್ತು. ಅಲಮೇಲು ಸೂಳೆಯಾಗಬೇಕಾಗಿ ಬಂದಂಥ ಘಟನೆ ಇನ್ನಷ್ಟು ಕಠೋರವಾಗಿರುತ್ತಿತ್ತು. ಅವಳ ಫ್ಲಾಶ್‌ಬ್ಯಾಕ್ ಹಾಡಿನಲ್ಲಿ, ಅಶೋಕ ಹೋಟೆಲ್ಲಿನ ವೈಭವದ ರಮ್ಯ ಸೀನುಗಳಲ್ಲಿ ನಮ್ಮನ್ನು ತಣಿಸುವ ಅಗತ್ಯವಿರುತ್ತಿರಲಿಲ್ಲ. ಪ್ಯಾಕೆಟ್ಟಿನಲ್ಲಿ ಚಂದವಾಗಿ ಮಡಿಸಿಕೊಟ್ಟ ಹಾರರ್ ಇದು. ನಿಷ್ಠುರ ಸತ್ಯಗಳನ್ನು ನೋಡಬಲ್ಲ ನಮ್ಮ ಶಕ್ತಿಯ ಶೋಷಣೆಗೆ ಇಂಥವೇ ಅನೇಕ ಉದಾಹರಣೆಗಳು ಸಿನಿಮಾದಲ್ಲಿವೆ. ನಮ್ಮಲ್ಲಿರುವ ವಿರುದ್ಧ ಆಸೆಗಳನ್ನು ಸುಳ್ಳು ಸಂಘರ್ಷಕ್ಕೆ ಒಡ್ಡಿ ಕಣ್ಣೀರಿಗಾಗಿ ನಮ್ಮ ಗಮನವನ್ನು ದೋಚಿಕೊಳ್ಳುವ ‘ನಾಗರಹಾವು’ ಹೇಗೆ ಕೊನೆಯಾಗುತ್ತದೆಂಬುದು ನನ್ನ ವಿಚಾರವನ್ನು ಇನ್ನಷ್ಟು ಸ್ಪಷ್ಟ ಪಡಿಸೀತು.
ಸುಳ್ಳು ಸಮಾಜದಿಂದ ದೂರವಾಗುತ್ತ ಹೋಗುವ ರಾಮಾಚಾರಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗುತ್ತಾನೋ ಇಲ್ಲವೊ ಎನ್ನುವುದು ನಮ್ಮ ಕುತೂಹಲವನ್ನೆಲ್ಲ ಕೆರಳಿಸುವ ಪ್ರಶ್ನೆಯಾಗಿ ಕೊನೆಯಲ್ಲಿ ಬರುತ್ತದೆ. ರಾಮಾಚಾರಿಯನ್ನು ನಾವು ಕೊನೆ ಕೊನೆಗೆ ಹೆಚ್ಚಾಗಿ ನೋಡುವುದು ದುರ್ಗದ ಕೋಟೆಯಲ್ಲಿ, ಮೇಷ್ಟ್ರ ಹೇಳಿಕೆಯ ಪ್ರಕಾರ ಈ ಕೋಟೆ ಪ್ರಾಚೀನರ ಶಿಸ್ತು, ಸಂಯಮ, ತ್ಯಾಗಗಳ ಸಂಕೇತ. ಹಾಗೆಯೇ ನಾವು ಕಾಣುವಂತೆ ಸ್ವಜನರಿಂದ ಹೇಸಿದ ರಾಮಾಚಾರಿ ನಿರ್ಭಿಡೆಯಿಂದ ಪ್ರೀತಿಸುವ, ಬದುಕುವ ಜಾಗ. ಹೀಗೆ ವಿರೋಧ ಸಕೇತಗಳನ್ನು ಕೂಡಿಸುವುದನ್ನು ದಿಗ್ದರ್ಶಕರು ನವ್ಯ ಸಿನಿಮಾದಿಂದ ಕಲಿತಿರಬಹುದು. ಕೊನೆಯಲ್ಲಿ ಅಪಾಯಕಾರಿಯಾಗುವಷ್ಟು ಕಡಿದಾದ ಬೆಟ್ಟವನ್ನು ಹತ್ತುತ್ತ ರಾಮಾಚಾರಿ ಮತ್ತು ಮೇಷ್ಟ್ರು ಹೋರಾಡುವುದು ಅರ್ಥಪೂರ್ಣತೆಯ ಭ್ರಮೆ ಹುಟ್ಟಿಸುವ ಮೆಲೋಡ್ರಾಮ; ಈಚೆಗೆ ಅಗ್ಗವಾಗಿ ಹೋದ ಸಾಂಕೇತಿಕತೆ; ಭಾವನೆಗಳನ್ನು ಹೊಂಚಿಸಿ ಉದ್ರೇಕಿಸಿ ಶೋಷಿಸುವ ಸಿನೆಮಾಟಿಕ್ ಸಾಧನ. ಮಳೆ ಬಿರುಗಾಳಿಗಳ ರುದ್ರ ಸನ್ನಿವೇಶವನ್ನು ಸತ್ಯಜಿತ್ ರೇ ‘ ಪಥೇರ್ ಪಾಂಚಾಲಿ’ ಯಲ್ಲಿ ಉಪಯೋಗಿಸುವುದಕ್ಕೂ , ಇದಕ್ಕೂ ನಡುವೆ ನಡುವೆ ಇರುವ ಅಂತರ ನೈಜಕಲೆಗೂ, ಕಣ್ಕಟ್ಟಿಗೂ ಇರುವಂಥದು ಎರಡರ ಅಂತರವನ್ನು ತೋರಿಸಿ ಕೀಳು ಸಿನಿಮಾ ನಮ್ಮ ಭಾವವನ್ನು ಶೋಷಿಸದಂತೆ ಕಾಪಾಡುವುದೇ ವಿಮರ್ಶೆಯ ಕೆಲಸವೆನ್ನಬಹುದು. ‘ನಾಗರಹಾವು’ ಚಿತ್ರದ ಕೊನೆಯಲ್ಲಿ ಯಾವ ಬಗೆಯ ಸಸ್ಪೆನ್ಸ್ ನಾಟಕವಿದೆ ನೋಡೋಣ.ಮೇಷ್ಟ್ರನ್ನು ಧಿಕ್ಕರಿಸಿ ರಾಮಾಚಾರಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ ಬಿಡುತ್ತಾನೊ? ಅವರ ಮಾತನ್ನು ಕೇಳಿದ್ದರಿಂದಲೇ ಅಲುಮೇಲು ಸೂಳೆಯಾಗಬೇಕಾಯಿತೆಂದು ರಾಮಾಚಾರಿಯೇ ಹೇಳಿದ ನಂತರ ಇಬ್ಬರ ನಡುವಿನ ಸಂಘರ್ಷ ಒಬ್ಬರು ಸೋಲಲೇ ಬೇಕಾದ ಘಟ್ಟ ಮುಟ್ಟಿದಂತಲ್ಲವೇ?- ಶ್ರೇಷ್ಠ ನಾಟಕದಲ್ಲಿ ಕೂಡ ನಮಗೆ ಹೀಗೆ ಅನ್ನಿಸುವ ಸನ್ನಿವೇಶಗಳು ಬರುತ್ತವೆ. ಆದರೆ ರಾಮಾಚಾರಿಯ ಉದ್ವಿಗ್ನತೆಯನ್ನು ಲಾಭದಾಯಕವಾದ ಕ್ಲೈಮ್ಯಾಕ್ಸ್ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ದಿಗ್ದರ್ಶಕರು ಬೆಳೆಸಿದ್ದಾರೆಯೆ ವಿನಾ ಹೊಸದನ್ನು ಕಾಣಿಸುವ ಶೋಧನೆಯ ದೃಷ್ಟಿಯಿಂದಲ್ಲ ಎನ್ನುವುದು ಇನ್ನು ಕೆಲವೇ ನಿಮಿಷಗಳಲ್ಲಿ ರಜತ ಪರದೆಯ ಮೇಲೆ ಸ್ಪಷ್ಟವಾಗುತ್ತದೆ. ರಾಮಾಚಾರಿ ಕಲ್ಲನೆತ್ತಿ ನಿಂತ ಘಳಿಗೆಯಂತೆಯೇ ಈಗಲೂ… ಎಂದುಕೊಂಡೆ ನಾವು ಈ ಘರ್ಷನೆಯನ್ನು ನೋಡುತ್ತೇವೆ. ಅಲ್ಲದೆ ರಾಮಾಚಾರಿ ಮತ್ತು ಕ್ರಿಶ್ಚಿಯನ್ ಹುಡುಗಿಯ ಪ್ರಣಯ ನೀತಿಹೀನ ಸಿನಿಮಾದ ಹಾಗೂ ಇತ್ತು. ಆದ್ದರಿಂದ, ಮೇಷ್ಟ್ರ ಜೊತೆ ಸಂಬಂಧ ನೈತಿಕ ಜೀವನದ ಹಾಗೆ ಮಾತ್ರ ಇರುವುದರಿಂದ- ಚಿತ್ರದ ಕೊನೆ ಮೊದಲಿನಲ್ಲಿ ನಿಶ್ಚಯವಾಗಿದೆ. ನಮ್ಮ ಮನಸ್ಸಿನಲ್ಲಿ ಆಗುವ ಉತ್ಪಾತ ಬರಿ ‘ಸಿನಿಮ’ – ಅಷ್ಟೆ. ಹಗಲುಗನಸಿನ ಸುಖ ಕೊಡುತ್ತ ಹೋಗಲು ಮಧ್ಯೆ ಮಧ್ಯೆ ತೊಡಕುಗಳನ್ನು ನಾವೇ ಒಡ್ಡಿಕೊಂಡು, ನಾವೇ ಬಿಡಿಸಿ ಮುಂದುವರಿಯುತ್ತೇವಲ್ಲ ಹಾಗೆ.
ನಾವೆಲ್ಲ ಸಿನಿಮಾ ನೋಡುತ್ತೇವೆ,; ಸಿನಿಮ ಅದಿಂದ ಕಾಲ ಕೆಟ್ಟಿತು, ಜನ ನೀತಿಹೀನರಾದರು ಎನ್ನುತ್ತೇವೆ; ಜೊತೆಗೆ, ಈ ನೀತಿ ಬಾಹಿರ ಸನ್ನಿವೇಶಗಳಿರುವ ಸಿನಿಮಾ ಬೇಕೆಂದೂ ಆಶಿಸುತ್ತೇವೆ. ಆದ್ದರಿಂದ ಪೂರ್ಣ ಯಶಸ್ವಿಯಾಗುವ ಸಿನಿಮಾ ‘ಸಿನಿಮಾ’ ದ ಹಾಗೂ ಇರಬೇಕು; ಆದರೆ ಸಿನಿಮಾ ಮೌಲ್ಯಗಳ ವಿರುದ್ಧವೂ ಇರಬೇಕು. ‘ಸಿನಿಮಾ’ ರೀತಿಯ ಪ್ರಣಯ ಚಿತ್ರಿಸಲು ಹಿಂದೂ ಹುಡುಗಿಗಿಂತ ಕ್ರೈಸ್ತ ಹುಡುಗಿ ಹೆಚ್ಚು ಸಹಾಯಕಾರಿ; ಈ ಪ್ರಣಯ ‘ಸಿನಿಮಾ’ ದಂತಿದೆ. ಆದರೆ ಯಾರಿಗೂ ಬೇಡದ ರಾಮಾಚಾರಿ ಹೀಗೆ ಮಾಡುವುದರಲ್ಲಿ ತಪ್ಪೇನು? ಸರಿ, ಇಷ್ಟಿದ್ದೂ ಕ್ರಿಶ್ಚಿಯನ್ ಹುಡುಗಿಯನ್ನು ಅವನು ಮದುವೆಯ ಆಗದೆ ಹೊದಲ್ಲಿ ಮಾತ್ರ ‘ಸಿನಿಮಾ’ದ ಸುಖದ ಜೊತೆಗೆ ಸಿನಿಮಾವಾಲ್ಲದ್ದನ್ನೂ ನಾವು ಪಡೆದು ಸಂತೃಪ್ತಿಯಿಂದ ಹೊರಗೆ ಬರಬಹುದು. ಇಷ್ಟನ್ನೂ ‘ ನಾಗರಹಾವು’ ಚಿತ್ರದ ದಿಗ್ದರ್ಶಕರು ಎಷ್ಟು ಚಾಲೂಕಿನಿಂದ ನಿರ್ವಹಿಸಿದ್ದಾರೆ ಎನ್ನುವುದೇ ಒಂದು ಅದ್ಭುತ ಸಂಗತಿ.
ಅಂದರೆ, ಇಷ್ಟರ ತನಕ ಪ್ರೇಕ್ಷಕರ ಮನಸ್ಸಿನ ವಿರುದ್ದಾಕಾಂಕ್ಷೆಗಳನ್ನು ತಣಿಸುತ್ತ ಬಂದಿದ್ದ ಅಥಾರಿಟಿ ಮತ್ತು ಬಂಡಾಯದ ಸೌಹಾರ್ದ ಮುರಿಯುವ ಉತ್ಕಟತೆಗೆ ಬರುವುದು ಬೇಕು. ಅದರ ಈ ಸೌಹಾರ್ದ ಮುರಿಯಲೂ ಬಾರದು ಎನ್ನುವಂತಹ ಮಧುರ ಯಾತನೆಗೆ ಪ್ರೇಕ್ಷಕರನ್ನು ಹದಗೊಳಿಸಿ ‘ಸಿನಿಮಾ’ ದ ಜೊತೆಗೆ ಸಿನಿಮಾವಲ್ಲದ್ದನ್ನೂ ಕೊಟ್ಟು ದಿಗ್ದರ್ಶಕರು ನಮ್ಮನ್ನು ತಣಿಸುತ್ತಾರೆ. ಇನ್ನೇನು ಒಡೆದು ಹೋಗಿಬಿಡುತ್ತದೆ ಎನ್ನುವಷ್ಟರಲ್ಲಿ ಆಕಸ್ಮಿಕದಲ್ಲಿ ಮೇಷ್ಟ್ರು ಸಾಯುತ್ತಾರೆ; ಪ್ರೇಯಸಿಯ ಜೊತೆ ರಾಮಾಚಾರಿ ಆತ್ಮತ್ಯಾಗ ಮಾಡಿಕೊಳ್ಳುತ್ತಾನೆ; ನಮಗೆ ‘ಸಿನಿಮಾ ಪ್ರಣಯ’ದ ಬಹಿಷ್ಕೃತ ಸುಖ ಕೊಟ್ಟ ಹುಡುಗಿಯೂ ಒಳ್ಳೆಯವಳಾಗಿ ಬಿಡುತ್ತಾಳೆ. ಅಂದರೆ, ಕೆಟ್ಟವಳಂತಿದ್ದು ಪ್ರೇಮದಲ್ಲಿ ಒಳ್ಳೆಯವಳಾದಳು, ಕೊನೆಗೆ ಇನ್ನಷ್ಟು ಒಳ್ಳೆಯವಳಾಗಿ ಬಿಡುತ್ತಾಳೆ. ಸಿನಿಮಾ ಮಂದಿರದೊಳಗೆ ಸಿನಿಮಾ ಸುಖದ ಜೊತೆಗೆ ಚಿಟಿಣi-ಛಿiಟಿemಚಿ ಮೌಲ್ಯಗಳು ನಮಗೆ ಸಿಕ್ಕಂತಾಗಿ ನಮ್ಮ ಸಂತೋಷ ಪೂರ್ತಿಯಾಗುತ್ತದೆ. ಅಂತರ್ಜಾತೀಯ ಪ್ರೇಮ ಮದುವೆಯಲ್ಲಿ ಕೊನೆಯಾಗದೆ ತ್ಯಾಗದಲ್ಲಿ ಕೊನೆಯಾದಾಗ ನಮಗಾಗುವ ಸಂತೋಷ ಅಷ್ಟಿಷ್ಟಲ್ಲ.
ಶ್ರೇಷ್ಠ ಕಲೆ ಜೀವನ ಸನ್ನಿವೇಶವನ್ನು ಕಣ್ಣು ತೆರೆದು ನೊಡುತ್ತದೆ; ಹಗಲುಗನಸಿಗೆ ವಿರುದ್ಧವಾಗಿರುತ್ತದೆ; ಅಂದರೆ, ನಾವು ಅಪೇಕ್ಷಿಸುವುದಕ್ಕೆ ಹೊರತಾದ್ದನ್ನು ಹೇಳುವ ದೈರ್ಯ ಮಾಡುತ್ತದೆ. ಅಗ್ಗದ ಕಲೆ ಭಾವನೆಗಳನ್ನು ಕೆರಳಿಸಿ ನಮ್ಮಿಂದ ಕೇಳುವುದು ಹೆಚ್ಚು; ಕೊಡುವುದು ಕಡಿಮೆ. ನಮ್ಮನ್ನು ಉದ್ರೇಕಿಸಿ ಮಹತ್ತಾದ ಅನುಭವವನ್ನು ನಿರೀಕ್ಷಿಸುವಂತೆ ಮಡಿ, ನೈಜಕಲೆಯ ಬಹಿರಂಗ ವೇಷಗಳನ್ನು ತೊಟ್ಟು ಅಗ್ಗದ ಕಲೆ ನಮ್ಮನ್ನು ವಂಚಿಸುತ್ತದೆ.
ಗುದ್ದುವ ನೋಯಿಸುವ ಸಂಘರ್ಷದ ಸಂತೋಷ ಬೇಕು; ಆದರೆ ಆಯಸ್ಥಳಕ್ಕೆ ಏಟು ಬೀಳಬಾರದು- ಹೀಗೆ ನಮಗೆ ತೃಪ್ತಿಕೊಡುವ ಚಿತ್ರವಾದ್ದರಿಂದಲೇ ‘ನಾಗರಹಾವು’ ಯಶಸ್ವಿಯಾಗಿದೆಯೆಂದು ನನ್ನ ಭಾವನೆ. ವೈಚಾರಿಕವಾಗಿ ನಮ್ಮ ಮಧ್ಯಮವರ್ಗ ಜಾತಿಯನ್ನು ತಿರಸ್ಕರಿಸುತ್ತದೆ, ಪ್ರತಿಭಟನೆಯನ್ನು ಒಪ್ಪುತ್ತದೆ; ಆದರೆ, ಆಚರಣೆಯಲ್ಲಿ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಆದ್ದರಿಂದ, ಹುಸಿನಾಟಕದ ಕ್ಯಥಾರ್ಸಿಸ್ಸು ಇದಕ್ಕೆ ಬೇಕು; ಸಿನಿಮಾ ಮುಗಿದ ಮೇಲೆ ಸಂತೃಪ್ತಿಯಿಂದ ಬದಲಾಗುವ ಹಾಗೆ ಕಂಡು ಬದಲಾಗದೆ ಉಳಿಯುವ ವಾಸ್ತವಕ್ಕೆ ಹಿಂದಿರುಗಬಹುದಲ್ಲ?
ಕೀಳು ಸಿನಿಮಾಕ್ಕಿಂತ ಆಂತರಿಕ ತುಮುಲದ ಭ್ರಮೆ ಹುಟ್ಟಿಸುವ ‘ನಾಗರಹಾವು’ ಚಿತ್ರದಂಥ ಹೆಚ್ಚು ಅಪಾಯಕಾರಿಯೆಂದು ಇಷ್ಟೆಲ್ಲ ಉದ್ದವಾಗಿ ಬರೆಯಬೇಕಾಯಿತು.‘ನಾಗರಹಾವು’ ಒಡ್ಡೊಡ್ಡಾಗಿ ನಾನು ಹೇಳಿದ ಮೋಸ ಮಾಡುತ್ತದೆ; ಇದಕ್ಕೂ ಸೂಕ್ಷ್ಮವಾಗಿ ವಂಚಿಸುವುದು ಸಾಧ್ಯ. ನಮ್ಮ ಸಿನಿಮಾ ಈ ಸೂಕ್ಷ್ಮ ವಂಚನೆಯ ದಾರಿಯಲ್ಲಿದೆ ಎನ್ನಿಸಿದ್ದರಿಂದ ನಾಗರಹಾವಿಗೆ ಅವಶ್ಯವಾದ್ದಕ್ಕಿಂತ ಹೆಚ್ಚಿನ ಗಮನ ಕೊಡಬೇಕಾಗಿದೆ ಅಷ್ಟೆ.
ಹಾಗೆ ನೋಡಿದರೆ, ನಮ್ಮ ಲೇಖಕರಲ್ಲಿ ಹಲವರು ಈ ಉದ್ರೇಕ -ಶಮನದ ಹುಸಿ ಘರ್ಷಣೆಗಳನ್ನು ತಮ್ಮ ಕೃತಿಗಳಲ್ಲಿ ಹೊಸೆಯುತ್ತಿದ್ದಾರೆ ಎಂಬುದು ಸುಲಭವಾಗಿ ಕಾಣುವಂಥದ್ದಲ್ಲ. ನಮ್ಮ ಸಮಾಜದ ಆಚರಣೆಯಲ್ಲಿರುವ ಮೌಲ್ಯಗಳನ್ನು ಮೂಲಭೂತವಾಗಿ ಪ್ರಶ್ನಿಸಿದ ಲೇಖಕರು ನಮ್ಮ ನಡುವೆ ಎಷ್ಟಿದ್ದಾರೆ? ವ್ಯಂಗ್ಯ, ಐರನಿ, ಪೋಲಿತನ, ಕಿಲಾಡಿತನ, ಜಾನಪದ ಗಿಲೀಟು ಇತ್ಯಾದಿಗಳಿಂದ ರಸವತ್ತಾಗಿರುವ ನಮ್ಮ ಸಾಹಿತ್ಯದಲ್ಲಿ ಬಹಳ ಪಾಲು ಕೃತಿಗಳು ‘ನಾಗರಹಾವು’ ಚಿತ್ರಕ್ಕಿಂತಲೂ ಸೂಕ್ಷ್ಮವಾಗಿ ಯಥಾಸ್ಥಿತಿವಾದಿಗಳು, ಈಗಿರುವ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವುದಕ್ಕೆ ಪೂರ್ವಭಾವಿಯಾಗಿ ನಡೆಸುವ ಹುಸಿನಾಟಕಗಳು ಎನ್ನಬಹುದು. ( ಈ ಲೇಖನದ ಟಿಪ್ಪಣಿಯನ್ನು ನೋಡಿ)
ಟಿಪ್ಪಣಿ: ಭೈರಪ್ಪನವರ ಕಥನ ಕಲೆ
‘ನಾಗರಹಾವು’ ಚಿತ್ರದಲ್ಲಿಯಂತೆಯೇ, ಆದರೆ ಇನ್ನಷ್ಟು ಹೆಚ್ಚು ಸೂಕ್ಷ್ಮವಾಗಿ, ಈವರೆಗೆ ನಮ್ಮ ಹಲವು ವಿಮರ್ಶಕರಿಗೆ ಪತ್ತೆಯಾಗದಂತೆ ಭೈರಪ್ಪನವರ ಕಾದಂಬರಿಗಳಲ್ಲೂ ಕೃತಕವಾಗಿ ಜೋಡಿಸಿದ ಸನ್ನಿವೇಶಗಳ ಮುಖಾಂತರ ಮೆಲೋಡ್ರಾಮ ಕೆಲಸ ಮಾಡುತ್ತದೆ. ಉದಾಹರಣೆಗೆ: ಗ್ರಹಣ ಕಾದಂಬರಿ ತೋರಿಕೆಗೆ ಗಂಭೀರವಾದ ತಾತ್ವಿಕ ಅನ್ವೇಷಣೆ ಎನ್ನುವ ಭ್ರಮೆ ಹುಟ್ಟಿಸಿದರೂ, ನಿಜದಲ್ಲಿ ಲೇಖಕರ ಪ್ರತಿಭೆ ದುಡಿಯುವುದು ಕಥೆ ಕಟ್ಟುವುದಕ್ಕೆ; ಓದುಗನ ಕುತೂಹಲವನ್ನು ಕೆರಳಿಸಿ ತಣಿಸುವುದಕ್ಕೆ. ಬರವಣಿಗೆಯ ಕ್ರಮ, ಲೇಖಕರು ಉಪಯೋಗಿಸುವ ಭಾಷೆ ಓದುಗನನ್ನು ಕುತೂಹಲದಲ್ಲಿ ಮುಂದೆ ತಳ್ಳುವಂಥದು; ತಕ್ಷಣದ ಒಳಸುಳಿಗಳಲ್ಲಾಗಲೀ, ಪಾತ್ರಗಳ ಮನಸ್ಸಿನ ಒಳಸ್ವರಗಳಲ್ಲಾಗಲೀ ನಿಲ್ಲಿಸಿ ನೋಡುವಂಥದಲ್ಲ.
ಪರಿಚಿತ ವಾಸ್ತವ ಚಿತ್ರಣದಿಂದ ಜಡವಾದ ಮನಸ್ಸಿಗೆ ಆಚಿನದ್ದನ್ನು, ಈ ವರೆಗೆ ಕಾಣದ್ದನ್ನು ಹೊಳೆಸಲು ಲೇಖಕ ವಿಶೇಷವೆನ್ನಿಸುವ ಕಥೆ ಕಟ್ಟಬಹುದು; ಓದುಗನಿಗೆ ರೂಢಿಯಾಗಿಬಿಟ್ಟಿರುವ ಪ್ರತಿಕ್ರಿಯೆಗಳಿಗೆ ಅವಕಾಶ ಕೊಡದಂತೆ ಅವನ ಮನಸ್ಸನ್ನು ಆಳವಾದ್ದಕ್ಕೆ ಎಳೆಯಲೆಂದು, ಜೀವನದಲ್ಲಿ ತುಂಡುತುಂಡಾಗಿ ಮೂಡುವ ಅರಿವನ್ನು ಒಂದು ಪರಿಧಿಯಲ್ಲಿ ಏಕಾಗ್ರತೆಯಿಂದ ಫಲಿಸಿಕೊಳ್ಳಲೆಂದು ಕಟ್ಟುವ ಕಥೆ ಇದು. ಹೀಗೆ ಕಟ್ಟಿದ ಕಥೆ ಈ ಪರಿಚಿತ ಪ್ರಪಂಚದ ಪ್ರತಿಬಿಂಬದಂತಿರುವುದಿಲ್ಲ; ಈ ಪ್ರಪಂಚವನ್ನು ಇನ್ನಷ್ಟು ಹೆಚ್ಚು ಆಳವಾಗಿ ತಿಳಿಸುವ ಪ್ರತಿ ಪ್ರಪಂಚದಂತಾಗಿರುತ್ತದೆ. ಅಥವಾ, ಓದುಗನನ್ನು ರಂಜಿಸಲೆಂದೂ ವಿಶೇಷವೆನ್ನಿಸುವಂಥಹ ಕಥೆ ಕಟ್ಟಬಹುದು. ಒಂದರಲ್ಲಿ, ಕಟ್ಟಿದ ಕಥೆ ಓದುಗನ ಸಂವೇದನೆಗೆ ಹೊಸ ತಿರುವು ಕೊಡಲೆಂದು ಲೇಖಕ ಸೃಷ್ಟಿಸಿದ ವಿಶೇಷ ಚೌಕಟ್ಟಾಗುತ್ತದೆ; ಇನ್ನೊಂದರಲ್ಲಿ ಕಟ್ಟಿದ ಕಥೆಯ ಹಿಂದೆ ಗಹನವಾದ ಪ್ರೇರಣೆಗಳಿಲ್ಲದೆ, ದಟ್ಟ ಪ್ರತಿಪ್ರಪಂಚವಿಲ್ಲದೆ ಭ್ರಾಮಕವಾದ್ದನ್ನು ಓದುಗನಿಗೆ ನಿಜವೆನ್ನಿಸುವಂತೆ ಪುಸಲಾಯಿಸುವುದರಲ್ಲೇ ಲೇಖಕನ ಎಲ್ಲ ಶಕ್ತಿಗಳೂ ಕಳೆದುಹೋಗಿಬಿಡುತ್ತದೆ. ಆದ್ದರಿಂದ ಈ ಎರಡು ಬಗೆಯ ‘ಕಟ್ಟುಕಥೆ’ಗಳ ನಡುವಿನ ಅಪಾರವಾದ ವ್ಯತ್ಯಾಸವನ್ನು ಗಮನಿಸುವುದು ಮುಖ್ಯ.
ಗ್ರಹಣದ ಆರನೇ ಅಧ್ಯಾಯದಲ್ಲಿ ಯಜಮಾನ ಗೌಡರು ಸಾಯಬದುದಾದ ಸಂದರ್ಭದಲ್ಲಿ ಲೇಡಿ ಡಾಕ್ಟರ್ ಸರೋಜ, ಅವಳನ್ನು ಅದೇ ತಾನೆ ಮದುವೆಯಾಗಿ ನಿಷೇಕ ಮುಗಿಸಿದ ಸ್ವಾಮಿಗಳು, ಈ ಮದುವೆಯಿಂದ ಇಡೀ ಊರು ನಾಶವಾಗುತ್ತದೆಂದು ತಿಳಿದ ಹಿಮಗಿರಿಯ ಪ್ರಮುಖರು, ಸತ್ಯ ತಿಳಿಯಲು ಕಾತರರಾದ ಉದ್ರಿಕ್ತ ಜನಸಮೂಹ- ಇವರನ್ನೆಲ್ಲ ಲೇಖಕರು ಯಾವ ರೀತಿಯ ಒತ್ತಡ ಸೃಷ್ಟಿಸಿ ಬಳಸಿಕೊಳ್ಳುತ್ತಾರೆ ಗಮನಿಸಿ. ಹಿಂದೆ ಮನೋರೋಗದಿಂದ ನರಳುತ್ತಿರುವ, ಸ್ವಾಮಿಗಳು ಮದುವೆಯಾಗುತ್ತಾರೆಂದು ತಿಳಿದು ‘ಶ್ರದ್ಧಾಕೇಂದ್ರ’ ಒಡೆದು ಹೋದ ಅರೆ ಎಚ್ಚರದಲ್ಲಿ ಮಲಗಿದ ಯಜಮಾನರು, ಮುಂದೆ ತನ್ನ ಉತ್ತರ ನಿರೀಕ್ಷಿಸುವ ಜನಸಮೂಹ, ತಾನು ಮದುವೆಯಾಗಿದ್ದೇನೆಂದು ಒಪ್ಪಿಕೊಂಡರೆ ಯಜಮಾನರು ಸಾಯುತ್ತಾರೆ ಎನ್ನುವ ಭಯ (‘ಯಜಮಾನರು ಸತ್‌ರೆ ಅಭಿವೃದ್ಧಿ ಆಗೂದು ಹ್ಯಾಗೆ?’)- ಇದು ಸರೋಜ ಎದುರಿಸುವ ಸಂದರ್ಭ. ಈ ಸಂದರ್ಭ ರಂಜಕವಾದ ನಾಟಕವಾಗಲು ಯಜಮಾನ ಸಾಯಬಹುದು ಎಂಬುದು ಮೂಢನಂಬಿಕೆಯ ಹಿಮಗಿರಿಯವರಿಗೆ ಮಾತ್ರವಲ್ಲ, ವೈದ್ಯಳಾದ ಸರೋಜಳಿಗೂ ಮತ್ತು ಆಕೆಯ ಮೂಲಕ ನಮಗೂ ನಿಜವಗಬೇಕು. ಸರೋಜಳ ಮನಸ್ಸನ್ನು ಧರ್ಮಸಂಕಟಕ್ಕೆ ಗುರಿಮಾಡಿ ಗೆಲ್ಲಲು ಶಾಸ್ತಿಗಳು ಯಜಮಾನರ ಮನೋರೋಗವನ್ನು ಉಪಯೋಗಿಸಿಕೊಳ್ಳುವಂತೆ, ಲೇಖಕರು ಸಹ ಓದುಗನಿಗೆ ಸನ್ನಿವೇಶದ ರುಚಿ ಹತ್ತಿಸಲೆಂದು ಯಜಮಾನ ನಿಜವಾಗಿಯೂ ಸಾಯಬಹುದು ಎನ್ನಿಸುವಂತೆ ಅವನ ಬಾಯಲ್ಲಿ ನೊರೆ ಬರಿಸುತ್ತಾರೆ. ಆದರೆ ಸರೋಜ ಲೇಡಿ ಡಾಕ್ಟರ್ ಅಲ್ಲವೆ?, ಪರಿಸ್ಥಿತಿ ಎಷ್ಟು ವಿಷಮವಿದ್ದೀತೆಂದು ತಿಳಿದವಳಲ್ಲವೆ? ಹಿಮಗಿರಿ ಜನರ ಮೂಢನಂಬಿಕೆಗಳಿಗೆ ಸೊಪ್ಪುಹಾಕದ ದೃಢಮನಸ್ಸಿನವಳಲ್ಲವೆ? ಅಂಥವಳೂ ಯಜಮಾನ ಸಾಯಬಹುದೆಂದು ನಂಬಬೇಕಾದರೆ- ಹೀಗೆ ಸರೋಜಳ ವೈದ್ಯಜ್ಞಾನ, ವೈಚಾರಿಕತೆಗಳನ್ನು ನಮಗೆ ಯಜಮಾನ ಸಾಯಬಹುದೆಂದು ನಂಬಿಕೆ ಹುಟ್ಟಿಸಲು ಲೇಖಕರು ಉಪಯೋಗಿಸಿಕೊಂಡಿದ್ದಾರೆ. ಆದರೆ ಯಜಮಾನ ಸಾಯಬಹುದೆಂಬುದೇ ಕಾದಂಬರಿಯಲ್ಲಿ ಓದುಗನನ್ನು ಸೆಳೆದುಕೊಳ್ಳಲು ಲೇಖಕರು ಹೂಡಿದ ಕೃತಕ ತಂತ್ರ ಎಂದು ನಮಗನ್ನಿಸಿಬಿಟ್ಟರೆ, ವೈದ್ಯಳಾದ ಸರೋಜಳನ್ನೂ ನಂಬಿಸುವುದರ ಮೂಲಕ ನಮ್ಮನ್ನು ನಂಬಿಸುವ ಲೇಖಕರಬರವಣಿಗೆ ವಂಚನೆ ಎನ್ನಿಸುತ್ತದೆ; ನಮ್ಮ ಭಾವಗಳನ್ನು ದೋಚುವ ಕೃತಿಮತೆ ಎಂದು ಗೊತ್ತಾಗುತ್ತದೆ. ಇಂಥ ಹೊಂಚಿಕೆಯ ಹಿಂದಿರುವ ಉದ್ದೇಶವಾದರು ಏನೆಂದು ಕೇಳಬೆಕೆನ್ನಿಸುತ್ತದೆ.
ಇಲ್ಲಿ ಬರುವ ಪಾತ್ರಗಳು ತೆಳುಪಾತ್ರಗಳಾಗದೆ ತುಂಬು ಪಾತ್ರಗಳಾಗಿದ್ದಲ್ಲಿ, ಲೇಖಕರ ಭಾಷೆ ಪಾತ್ರಗಳ ಒಳಸ್ವರಗಳನ್ನು ಕೇಳಿಸಬಲ್ಲ ಸೂಕ್ಷ್ಮವನ್ನು ಪಡೆದುಕೊಂಡಿದ್ದಲ್ಲಿ ಕಥೆಗಾಗಿ ಅವರನ್ನು ಹೇಗೆ ಬೇಕೋ ಹಾಗೆ ಜಗ್ಗುವುದು ಲೇಖಕರಿಗೆ ಅಸಾಧ್ಯವಾಗುತ್ತಿತ್ತು. ಸರೋಜಳ ಮನಸ್ಸಿನ ಹೊಯ್ದಾಟದ ಭಾಷೆ ಯಾವ ಆಪ್ತತೆಯೂ ಇಲ್ಲದೆ ವರದಿಯಂತಿದೆ; ಓದುಗನಿಗೆ ಕೊಟ್ಟ ವಿವರಣೆಯಂತಿರುವ ಈ ಮಾತುಗಳನ್ನು ನೋಡಿ:
“ಆದರೆ ಈತನ ಉಳಿವು ಸ್ವಾಮಿಗಳ ಸನ್ಯಾಸವನ್ನೇಕೆ ಅವಲಂಬಿಸಬೇಕು? ಪ್ರಿನ್ಸಿಪಾಲರು ಹೇಳಿದ ಹಾಗೆ ಅದು ಇವರ ಶ್ರದ್ಧಾಕೇಂದ್ರವಾಗಿರಬಹುದು. ಇವರ ಶ್ರದ್ಧಾಕೇಂದ್ರ ತಪ್ಪಾಗಿರಬಹುದು. ಹಾಗೆಂದು ಇವರನ್ನು ಕೊಲೆ ಮಾಡಬಹುದೆ? ಆ ದಿನ ನಾನು ಜನರೆದುರಿಗೆ, “ ಹೌದು, ನನ್ನ ಸ್ವಾಮಿಗಳ ಮದುವೆಯಾಯಿತು” ಅಂದಿದ್ದರೆ ಇವರು ಅಲ್ಲೇ ಸಾಯುತ್ತಿದ್ದರು. ಇವರು ಸಾಯುವುದು ಧರ್ಮವಾಗುತ್ತದೆಯೆ? ತಾನು ಸ್ವಾಮಿಗಳನ್ನು ಮದುವೆಯಾಗಲು ಒಪ್ಪಿದುದೇ ಅಧರ್ಮವಾಯಿತೇನೋ ಎಂಬ ಸಂಶಯವು ಒಂದು ಸಲ ಮನಸ್ಸಿನಲ್ಲಿ ಸುಳಿಯಿತು. ಅದರೆ ಆ ವಿಷಯದಲ್ಲಿ ಅವಳ ಅಭಿಪ್ರಾಯವು ಗಟ್ಟಿಯಾಗಿತ್ತು. ಸನ್ಯಾಸ, ಪೀಠ, ಮಠಗಳಲ್ಲಿ ಅವಳಿಗೆ ಮೊದಲಿನಿಂದ ನಂಬಿಕೆ ಇರಲಿಲ್ಲ. ತನ್ನ ಮತ್ತು ಸ್ವಾಮಿಗಳ ಮದುವೆಯಲ್ಲಿ ಅವಳಿಗೆ ಎಂದೂ ತಪ್ಪು ಕಂಡಿರಲಿಲ್ಲ. ಆದರೆ ಈ ಮದುವೆಯ ಪರಿಣಾಮವು ಊರಿನ ಮಹಾದಾನಿಯ ಜೀವದ ಮೇಲೆ, ಮುಂದೆ ಈ ಸುತ್ತಿನಲ್ಲೇ ನಡೆಯಬೇಕಾದ ದಾನದ ಮೇಲೆ ಇಷ್ಟೊಂದು ದುಷ್ಪರಿಣಾಮವನ್ನು ಬೀರುತ್ತದೆಂಬುದು ಕಲ್ಪನೆಗೂ ಬಂದಿರಲಿಲ್ಲ…”
ಪುಟ -೧೮೨-೮೩
ಆತಂಕದಲ್ಲಿರುವ ಮನಸ್ಸು ಹೇಗಿರುತ್ತದೆಂಬ ಕಲ್ಪನೆಯಿರುವ ಲೇಖಕ ಹೀಗೆ ಜಡವಾಗಿ ಒಂದು ಮನಸ್ಸನ್ನು ವರ್ಣಿಸಲಾರ. ಭೈರಪ್ಪನವರಿಗೆ ನಿಜವಾಗಿಯೂ ಜಡಪ್ರಪಂಚ ಮಾತ್ರ ನಿಜ, ಈ ಪ್ರಪಂಚದ ಲೆಖ್ಖಾಚಾರಗಳೆಲ್ಲ ನಿಜ- ಆದರೆ ಅವರು ತಮ್ಮ ಪಾತ್ರಗಳ ಮನಸ್ಸಿನ ಗುಪ್ತ ಶ್ಥಳಗಳನ್ನು ತಿಳಿದಿದ್ದಾರೆಂದು ನಮಗನ್ನಿಸುವುದು ಕಡಿಮೆ. ಭೈರಪ್ಪನವರ ಹೆಚ್ಚು ಪಾತ್ರಗಳು ಆತ್ಮೀಯ ಸಮಾಜ ಜೀವಿಗಳೂ ಅಲ್ಲ, ಮನಸ್ಸಿನ ಕಂದಕಗಳನ್ನು ಅರಿಯುವ ಏಕಾಕಿಗಳೂ ಅಲ್ಲ; ಕೇವಲ ಬಹಿರಂಗ ಜೀವನ ಮಾತ್ರ ಇರುವ ಸಾಮಾಜಿಕರು. ಏಕಾಕಿಯಾದ ಗ್ರಹಣ ದ ಸ್ವಾಮಿಗಳು ನಿರ್ಭಾವದ ಯಾಂತ್ರಿಕ ವ್ಯಕ್ತಿ. ಇಂಥ ಪಾತ್ರಗಳ ವರ್ತನೆಗಳೆಲ್ಲ ಮನಃಶಾಸ್ತದ ಸಾಮಾನ್ಯ ಪಠ್ಯಪುಸ್ತಕದಲ್ಲಿ ವರ್ಣಿತವಾದಂಥವು. ಪ್ರಿನ್ಸಿಪಾಲರ ಹೆಂಡತಿ ಲಲಿತ ಸುಳ್ಳು ಬಸುರಾಗುವ ಸನ್ನಿವೇಶವನ್ನು ಲೇಖಕರು ನಿರ್ವಹಿಸಿದ ಕ್ರಮದಿಂದ ನನ್ನ ಈ ಮಾತುಗಳಿಗೆ ಸಮರ್ಥನೆ ದೊರೆಯಬಹುದು. ಯಾವುದನ್ನಾದರೂ ಒಳಗಿನಿಂದ ತಿಳಿಯುವುದು ಅಗತ್ಯವೆಂಬುದನ್ನು ಅರಿಯದ ಲೇಖಕ ಸ್ಯೂಡೋ ಸೈಕಾಲಜಿ, ಸ್ಯೂಡೋ ಸೊಶಿಯಾಲಜಿಯನ್ನು ಕಾದಂಬರಿ ರೂಪದಲ್ಲಿ ಬರೆಯುತ್ತಾನೆ.
ಮೆಲೋಡ್ರಾಮ ಓದುಗನ ಭಾವ ದೋಚುವ ಉಪಾಯವಾಗದೆ, ಓದುಗನ ವೀಕ್ಷಣೆಗೆ ಒಡ್ಡಿದ ಸನ್ನಿವೇಶಕ್ಕಾಗಿ ಅವನ ಅರಿವನ್ನು ಪ್ರಚೋದಿಸುವುದು ಸಾಧ್ಯ. ಆದರೆ ಭೈರಪ್ಪನವರ ಈ ಕಾದಂಬರಿಯಲ್ಲಿ ಪಾತ್ರಗಳು ರಟ್ಟಿನ ಬೊಂಬೆಗಳಾದ್ದರಿಂದ ಹೀಗಾಗುವುದು ಅಸಾಧ್ಯ. ವಂಶವೃಕ್ಷದಲ್ಲಿ ಶ್ರೊತ್ರಿಯವರು ಕಾಮವನ್ನು ಗೆಲ್ಲುವ ಸನ್ನಿವೇಶಕ್ಕೆ ವಿರುದ್ಧವೆನ್ನಿಸುವ ಗ್ರಹಣದ ಸರೋಜ ಸ್ವಾಮಿಗಳ ಸಂಭೋಗದ ಘಟನೆ ನಿಜಕ್ಕೂ ವಿರುದ್ಧವಲ್ಲ; ಎರಡರ ಹಿಂದೆಯೂ ಇರುವ ಲೇಖಕನ ಉದ್ದೇಶ ಒಂದೇ. ಈ ಉದ್ದೇಶ ಓದುಗನಿಗೆ ಬೇರೆ ಬೇರೆ ರೀತಿಯಲ್ಲಿ ಆಪ್ಯಾಮಾನವೆನ್ನಿಸುವಂತೆ ಹುಸಿ ನಾಟಕಗಳನ್ನು ರಚಿಸುವುದು. ಕಾಮವನ್ನು ಗೆಲ್ಲುವ ಶ್ರೋತ್ರಿ, ಕಾಮವನ್ನು ಒಪ್ಪಿಕೊಳ್ಳುವ ಸ್ವಾಮಿಗಳು-ಇಬ್ಬರೂ ಓದುಗರ ಸಮ್ಮತಿಗಾಗಿ ಹಾಗೆ ವರ್ತಿಸುತ್ತಾರೆಂದು ತಿಳಿದ ತಕ್ಷಣ ಕುಸಿದು ಬೀಳುತ್ತದೆ. ಇಬ್ಬರಲ್ಲೂ ಅಚಿಂತ್ಯವೂ, ಅಜ್ಞಾತವೂ ಆದ ಜೀವಂತಿಕೆಯಿಲ್ಲ. ಆದ್ದರಿಂದ ಎರಡು ಘಟನೆಗಳಲ್ಲೂ ಒದುಗನ ಮೇಲೆ ಸಸ್ಪೆನ್ಸ್ ಬರವಣಿಗೆ ಪರಿಣಾಮಕಾರಿಯಾಗಬೇಕೆಂಬುದೇ ಲೇಖಕರ ಉದ್ದೇಶವೇ ಹೊರತು ಈ ಎರಡೂ ಸನ್ನಿವೇಶಗಳನ್ನೂ ಒಳಹೊಕ್ಕು ತಿಳಿಯುವುದಲ್ಲ. ಭೈರಪ್ಪನವರ ಕಾದಂಬರಿಯಲ್ಲಿ ಯಜಮಾನ ಸಾಯಬಹುದಾದ್ದು ಸಸ್ಪೆನ್ಸ್‌ಗಾಗಿ, ಸರೋಜಳ ತುಮುಲ ಸಸ್ಪೆನ್ಸ್‌ಗಾಗಿ, ಶ್ರೊತ್ರಿಗಳು ಜಿತೇಂದ್ರಿಯರಾಗುವುದು ಸಸ್ಪೆನ್ಸ್‌ಗಾಗಿ, ಒಂದು ವೇಳೆ ಸರೋಜ ತಾನು ಸ್ವಾಮಿಗಳನ್ನು ಕೂಡಿದ್ದೇನೆಂದು ಒಪ್ಪಿಕೊಂಡರೂ ಯಜಮಾನ ಸಾಯಲಿಲ್ಲ ಎನ್ನಿ ಆಗ? ಆಗ ಕೂಡ ಕಾದಂಬರಿಯಲ್ಲಿ ಏನೂ ಆದಂತಲ್ಲ.
ಒಟ್ಟಿನಲ್ಲಿ ಆಕರ್ಷಕವಾದ ಕಥೆಯ ನಿರ್ವಹಣೆಗಾಗಿ ನಮ್ಮ ಭಾವನೆಗಳನ್ನು ಕೆರಳಿಸಿ, ದುಡಿಸಿಕೊಳ್ಳುವ ಜನಮಾನ್ಯ ‘ ನಾಗರಹಾವು’, ಭೈರಪ್ಪನವರ ಗ್ರಹಣ, ವಂಶವೃಕ್ಷ ಕಾದಂಬರಿಗಳು ಓದುಗರಿಂದ ಕೇಳುವುದು ಹೆಚ್ಚು; ಕೊಡುವುದು ಕಡಿಮೆ. ಆಧುನಿಕ ಎನ್ನಿಸುವ ಸಮಸ್ಯೆಗಳನ್ನು ಎತ್ತಿ, ಅವಕ್ಕೆ ನಮಗೆ ಪರಿಚಿತವಾದ ಸಾಂಪ್ರದಾಯಿಕ ನಿವಾರಣೆಗಳನ್ನು ಒದಗಿಸುವ ಭೈರಪ್ಪನವರ ಈ ಕೃತಿಗಳು ಯಾಕೆ ಇಷ್ಟು ಜನಪ್ರಿಯವಾಗಿವೆ ಎಂಬುದು ನಮ್ಮ ಸಂಸ್ಕೃತಿಯ ದೃಷ್ಟಿಯಿಂದ ಕುತೂಹಲಕರವಾದ್ದು. ಈ ಸಂದಿಗ್ಧಕಾಲದಲ್ಲಿ ನಮ್ಮ ಬುದ್ಧಿವಂತರೆನಿಸಿಕೊಂಡ ವಿಮರ್ಶಕರೂ ಹೇಗೆ ಕ್ಷೇಮದ ನೆಲೆಗೇ ಆತುಕೊಳ್ಳುತ್ತಾರೆ ಎಂಬುದಕ್ಕೆ ಭೈರಪ್ಪನವರ ಜನಪ್ರಿಯತೆ ದ್ಯೋತಕವಾಗಿದೆ. ಅನುಭವದ ವಂಚನೆ ಯಾವಾಗಲೂ ಹಿತಕರವಾಗಿರುತ್ತದೆ; ಸಮಸ್ಯೆಗಳನ್ನು ಎದುರಿಸುವ ಸೂಚನೆ ಕೊಟ್ಟು ಅವುಗಳನ್ನು ಪತ್ತೆಯಾಗದಂತೆ ಬದಿಗೆ ಸರಿಸುವ ಕಲೆ ಹೀಗೆ ವಂಚಿಸಿ ರಂಜಿಸುವ ಕಲೆ.
ಉತ್ತಮ ಕಲೆಯ ದ್ರವ್ಯಗಳು ಕೂಡ ಜನಪ್ರಿಯ ಲೇಖಕರ ಕೃತಿ ಸಂಯೋಜನೆಗೆ ಮಸಾಲೆಯಾಗಬಹುದೆಂಬುದನ್ನು ವಿಮರ್ಶಕ ಎಚ್ಚರದಿಂದ ಗಮನಿಸಬೇಕು. ನೂರಾರು ದುರಂತ ಜನಪ್ರಿಯ ಪ್ರೇಮಕಥೆಗಳಿಗೂ, ಟಾಲ್‌ಸ್ಟಾಯ್‌ನ ಅನ್ನಾಕರನೀನಾ ಕೃತಿಗೂ ತೊರಿಕೆಯಲ್ಲಿ ಸಾಮ್ಯವಿರುವಂತೆ ಕಾಣಬಹುದು. ಆದರೆ ಪ್ರೇಮದ ಕಥೆ ಟಾಲ್‌ಸ್ಟಾಯ್‌ನಲ್ಲಿ ಬದುಕಿನ ಹಲವು ಮಗ್ಗಲುಗಳನ್ನು ಶೋಧಿಸುತ್ತದೆ; ಉಳಿದವುಗಳಲ್ಲಿ ಮಸಾಲೆಯಾಗುತ್ತದೆ.
-೧೯೭೩
*(ಎ,ಬಿ,ಸಿ, ಮೂರು ಥಿಯೇಟರುಗಳಲ್ಲಿಯೂ ಯಶಸ್ವಿಯಾಗಬಲ್ಲ ಕಥೆ ಬೇಕೆಂದು ಹುಡುಕುತ್ತಿದ್ದ ನಿರ್ಮಾಪಕರೊಬ್ಬರಿಗೆ ನಾನು ಹಿಂದೊಮ್ಮೆ ತಮಾಷೆಗಾಗಿ ಸಾಯಿಬಾಬಾ ಮಹಾತ್ಮೆ ಮಾಡಬಹುದಲ್ಲ ಎಂದಿದ್ದೆ; ಯಾಕೆಂದರೆ ವೈಸ್ ಛಾನ್ಸಲರುಗಳಿಂದ ಹಿಡಿದು ಸಾಮಾನ್ಯನ ವರೆಗೆ ಕುತೂಹಲ, ಗೌರವ ಹುಟ್ಟಿಸಿದ ವ್ಯಕ್ತಿ ಈ ಕಾಲದಲ್ಲಿ ಸಾಯಿಬಾಬ ಮಾತ್ರ. ನಮ್ಮನ್ನು ಆಳುವ ವರ್ಗ ಮತ್ತು ಮಧ್ಯಮ ವರ್ಗಗಳ ಲೌಕಿಕ ಮತ್ತು ಪಾರಮಾರ್ಥಿಕ ಅಪೇಕ್ಷೆಗಳ ಮಟ್ಟ ಯಾವುದು ಎಂಬುದನ್ನು ಸಾಯಿಬಾಬರ ಜನಪ್ರಿಯತೆಯಿಂದ ತಿಳಿಯಬಹುದು. ಮನೆಯ ಒಳಗೆ ನಾವು ತೂಗು ಹಾಕುವ ದೇವರ ಪಟಗಳ ವೈಖರಿ, ನಾವು ಪೂಜಿಸುವ ಸಾಯಿಬಾಬ, ನಾವು ಮೆಚ್ಚುವ ಸಿನಿಮಾ, ನಾವು ಚಂದವೆಂದು ತಿಳಿಯುವ ದೆಹಲಿಯಲ್ಲಿರುವ ಬಿರ್ಲಾ ಕಟ್ಟಿಸಿದ ದೇವಸ್ಥಾನ – ಇವೆಲ್ಲವೂ ಒಂದಕ್ಕೊಂದು ಸಂಬಂಧವಿರುವ ನಮ್ಮ ಇಂದಿನ ಸಂಸ್ಕೃತಿಯ ವಾಸ್ತವಗಳು.)
*****
ಸಿನಿಮಾ ವಿಮರ್ಶೆ ಇಂದು ಯಾವುದೇ ರೀತಿಯ ಶಿಸ್ತು-ಕ್ರಮಬದ್ಧತೆಗೆ ಒಳಗಾಗದೆ ಪತ್ರಿಕೆಗಳಲ್ಲಿ, ಸಾಹಿತ್ಯ ಸಂಚಿಕೆಗಳಲ್ಲಿ ನಡೆಯುತ್ತಿದೆ. ಈ ಲೇಖನ ಸಿನಿಮಾ ವಿಮರ್ಶೆಯೇ ಅಲ್ಲದಿದ್ದರೂ ಸಿನಿಮಾ ಒಂದನ್ನು ಹೇಗೆ ವಿಮರ್ಶೆಗೊಳಪಡಿಸಬಹುದು ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಆದುದರಿಂದಲೇ ಇದನ್ನು ಸಿನಿಮಾ ವಿಭಾಗದಲ್ಲಿ ವರ್ಗೀಕರಿಸಿದ್ದೇನೆ- ಶೇಖರ್‌ಪೂರ್ಣ