ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ:
ರಭಸದ ತಾಂತ್ರಿಕತೆ-
ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, ಪಲ್ಲಟಗಳು, ಆರ್ಥಿಕ ವಿಭಜನೆ- ಕಂದರ ಇವ್ಯಾವುಗಳನ್ನು ಗಮನಿಸಲಾಗದಷ್ಟು ರಭಸ. ಈ ರಭಸ ಎಷ್ಟರ ಮಟ್ಟಿಗಿನದೆಂದರೆ ಇದನ್ನು ಗ್ರಹಿಸಿ ಸೃಜನಶೀಲವಾಗಿ ಕೃತಿಗಳಲ್ಲಿ- ಆಲೋಚನೆಗಳಲ್ಲಿ- ಕ್ರಿಯಾತ್ಮಕತೆಯಲ್ಲಿ ಬಳಸಲಾಗದಂತಹ ದೌರ್ಬಲ್ಯಕ್ಕೆ – ಎಂತಹ ಪ್ರಜ್ಞೆಯನ್ನೂ ನೂಕಿಬಿಡುವಷ್ಟು ಶಕ್ತಿಶಾಲಿಯಾದ ರಭಸ.
ಈಗಿರುವ ಎಲ್ಲ ಸಾಹಿತ್ಯವನ್ನು ಹಠ ಹಿಡಿದು, ಬರೆದದ್ದೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತುತಕ್ಕೆ ತಳಕು ಹಾಕಿಬಿಡಬಹುದು. ತಾರ್ಕಿಕವಾಗಿ ವಾದಿಸಿಬಿಡಬಹುದು. ಅಭಿನಂದನೆ-ಮೆಚ್ಚುಗೆಯ ವಿಮರ್ಶೆ ಎಲ್ಲವನ್ನು ಪಡೆದುಬಿಡಬಹುದು. ಆದರೆ ಮೂಲ ಆಶಯದಲ್ಲಿ, ಪ್ರಜ್ಞಾಪೂರ್ವಕವಾದ ಪ್ರಯತ್ನವಿಲ್ಲದಿದ್ದರೆ ಎಷ್ಟು ಪ್ರಸ್ತುತವಾಗಿ ಉಳಿಯುತ್ತದೆ. ಇದು ನಿಜವಾಗಿ ನಮ್ಮ ಮನಸ್ಸುಗಳನ್ನು ಕಾಡಬೇಕಾದ ಪ್ರಶ್ನೆ. ಲೇಖಕರನ್ನು, ಚಿಂತಕರನ್ನು ಕಾಡಬೇಕಾಗಿರುವ ಪ್ರಶ್ನೆ. ಕನ್ನಡದಲ್ಲಿ ಇಂತಹ ಪ್ರಯತ್ನಗಳು ನಡೆದಿವೆಯೆ? – ಕೃತಿಗಳು ಬಂದಿವೆಯೆ? ಎಂಬ ಪ್ರಶ್ನೆಯನ್ನು, ಇತ್ತೀಚೆಗೆ ಬೆಂಗಳೂರಿನ ಸಮಕ್ಷಮ ದಲ್ಲಿ ವಿವೇಕ ಶಾನಭಾಗರು ಸಿಕ್ಕಿದಾಗ ಅವರ ಮುಂದಿಟ್ಟಿದ್ದೆ: ವಿವೇಕರ ಉತ್ತರ ಭರವಸೆ ನೀಡುವಂತದ್ದಾಗಿರಲಿಲ್ಲ. ಅಂತಹ ಸಾಮರ್ಥ್ಯ ಇನ್ನೂ ಗಳಿಸಬೇಕಾಗಿದೆ ಎಂಬ ಅರ್ಥದಲ್ಲಿ ಮಾತನಾಡಿದರು. ಇದು ನಿಜಕ್ಕೂ ಶೋಚನೀಯ ಸ್ಥಿತಿ. ಅದೆ ಸಂದರ್ಭದಲ್ಲಿ ಬಂದ ಪ್ರಶ್ನೆಗೆ ಅವರು ತಾಂತ್ರಿಕತೆಯ ಬಳಕೆ ‘ಸಹಜ’ವಾಗ ಬೇಕೆಂದರು. ಅದಾಗುವುದು ಬಹುಶಃ ದೂರದ ಮಾತು. ಅದಕ್ಕಿಂತಲೂ ಮುಂಚೆ ತಾಂತ್ರಿಕತೆಯನ್ನು ‘ಕನ್ನಡಕ್ಕೆ, ನಮ್ಮ ಅರ್ಥಿಕ ಪರಿಸರಕ್ಕೆ, ಸಂಸ್ಕೃತಿಗೆ ಒಗ್ಗಿಸುವ ಬಗ್ಗಿಸುವ’ ದಿಕ್ಕಿನಲ್ಲಿ ವಿವೇಕರಂತಹ, ಕನ್ನಡಸಾಹಿತ್ಯ.ಕಾಂ ಸುತ್ತಲೂ ವ್ಯಾಪಿಸಿರುವ ಯುವ ಜನಾಂಗ ಆಲೋಚಿಸಬೇಕಿದೆ. ಇಲ್ಲದಿದ್ದರೆ ತಾಂತ್ರಿಕ ವ್ಯಾಪ್ತಿಯ ಪರಿಸರದಲ್ಲಿ ನಮಗೆ ನಾವೇ ಅನ್ಯರಾಗಿ ಬಿಡುವ, ಒಬ್ಬಂಟಿಗಳಾಗಿಬಿಡುವ. ಅಪ್ರಾಮಾಣಿಕರಾಗಿಬಿಡುವ ಅಪಾಯ ತಪ್ಪಿದ್ದಲ್ಲ. ಇದು ಹೇಗಾಗಬಲ್ಲದು ಎಂಬುದಕ್ಕೆ ದೃಷ್ಟಾಂತವಾಗಿ ನಮ್ಮ ಸುದರ್ಶನ ಪಾಟೀಲ ಕುಲಕರ್ಣಿಯವರು ‘ಬರಹ’ದ ವಾಸುರವರ ಬಗೆಗೆ ಬರೆದಿರುವ ಸಣ್ಣ ಟಿಪ್ಪಣಿಯನ್ನು ನೋಡಿ.
ಇಂತಹ ಅಪಾಯಗಳ ಸೂಚನೆಗಳ ಮಧ್ಯದಲ್ಲಿ ಎರಡು ಸಂತೋಷದ ಮಾತುಗಳು. ನುಡಿಯ ಬಗೆಗೆ. ಕನ್ನಡ ಗಣಕ ಪರಿಷತ್ ನುಡಿ- ೪ ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಇರುವ ಮೈಕ್ರೊಸಾಫ್ಟ್ ಆಫೀಸ್‌ನ ಮ್ಯಾಕ್ರೋ ದಲ್ಲಿರುವ ಸಣ್ಣ ಪುಟ್ಟ ದೋಷಗಳು ಇದ್ದೇ ಇರುತ್ತವೆ. ಅವೆಲ್ಲ ಬಳಕೆಯ ವ್ಯಾಪ್ತಿ ಹೆಚ್ಚಾಗುತ್ತಿದ್ದಂತೆಯೇ ನಿವಾರಿಸಬಹುದಾದಂತಹವು. ಸಂಭ್ರಮಿಸಬೇಕಾದ ಸಂಗತಿಯೆಂದರೆ ಅದರಲ್ಲಿ ‘ಸ್ಪೆಲ್ ಚೆಕ್ಕರ್’ ಇರುವುದು. ಸುಮಾರು ೪೩,೦೦೦ ಪದಗಳಿಗಿಂತಲು ಅಧಿಕವಾಗಿರುವ ಸ್ಪೆಲ್ ಚೆಕ್ಕರ್. ಜೊತೆಗೆ ಡಿಕ್ಷನರಿ ಎಡಿಟರ್ ಸಹ ಇದೆ. ಇದನ್ನು ಬಳಸಿ ಅವರವರಿಗೆ ಬೇಕಾದಂತಹ ನಿಘಂಟನ್ನು ನಿರ್ಮಿಸಿಕೊಳ್ಳಬಹುದು. ಇಲ್ಲದಿದ್ದರೆ ಮತ್ತೊಂದು ನಿಘಂಟಿಗೆ ಪದಗಳನ್ನು ಸೇರಿಸುತ್ತಾ ಹೋಗಬಹುದು. ಲಿನಕ್ಸ್ ಆಪರೇಟಿಂಗ್ ಸಿಸ್ಟಂನಲ್ಲಿ ಕನ್ನಡವನ್ನು ಬಳಸುವಂತಹ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಣಕ ಪರಿಷತ್ ಹೊರಟಿರುವುದು ನಿಜಕ್ಕೂ ಪ್ರಶಂಸನೀಯ. ಸಾದ್ಯವಾದಷ್ಟೂ ಬೇಗ ನುಡಿಯ ಲಿನಕ್ಸ್ ಆವೃತ್ತಿ ಬಿಡುಗಡೆಯಾಗಲಿ. ಅಲ್ಲೂ ಟಿಟಿಏಫ್ ಹಾಗು ಓಟಿಎಫ್ ಫಾಂಟ್‌ಗಳಿಗೂ ಅವಕಾಶವಿರುವಂತಾಗಲಿ. ಇದರೊಂದಿಗೆ ಬರಹದ ವಾಸುರವರು ಮುಂದಿನ ಬರಹ ಆವೃತ್ತಿಯನ್ನು ತಮಿಳು ತೆಲುಗಿಗೂ ವಿಸ್ತರಿಸಲಿದ್ದಾರೆ. ಇದೂ ಸಹ ಸಂಭ್ರಮಿಸಬೇಕಾದ ವಿಷಯ.
ಜೊತೆಗೆ, ಈ ಬಾರಿ ಕನ್ನಡಸಾಹಿತ್ಯ.ಕಾಂ ನುಡಿ ಫಾಂಟ್‌ಗಳಿರುವವರಿಗೂ ಲಭ್ಯವಿದೆ. ನುಡಿ ಅಥವ ಬರಹ ಯಾವುದೇ ಇದ್ದರೂ ಕನ್ನಡಸಾಹಿತ್ಯ.ಕಾಂ ಪುಟಗಳನ್ನು ಓದಬಹುದು. ನುಡಿ ನಾಲ್ಕರ ಆವೃತ್ತಿಯನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಂತರ್ಜಾಲದ ಉಪಯುಕ್ತತೆಗೆ ಅನುಕೂಲಕರವಾಗಿರುವಂತೆ ಬರಹ ಹಾಗು ನುಡಿಯನ್ನು ಬೆಳೆಸಬಹುದು ಎಂಬ ಆಶಯಗಳೊಂದಿಗೆ ಈ ಕೆಳಕಂಡಂತೆ ಕೆಲವು ಅಂಶಗಳನ್ನು ಪಟ್ಟಿ ಮಾಡಿದ್ದೇನೆ:
೧. ಎಚ್‌ಟಿಎಮ್‌ಎಲ್ ಪುಟಗಳನ್ನು ಅಲ್ಲೇ ಎಡಿಟ್ ಮಾಡುವಂತಹ ಅನುಕೂಲವಿರಬೇಕು. ಈಗ ‘ಬೈ ಡಿಫಾಲ್ಟ್’ ಅವು ಕೊಡುವ ಪುಟಗಳು ಯಾವುದೆ ನಿಗದಿತ ಶಿಫಾರಸ್ಸಿನನ್ವಯವಿಲ್ಲ. ಅಂದರೆ ನಮಗೆ ಬೇಕಾದ ಕೋಡ್-ಟ್ಯಾಗ್ಸ್, ಆಟ್ರಿಬ್ಯೂಟ್ಸ್‌ಗಳನ್ನು ನಾವೇ ಕೊಡುವಂತಿರಬೇಕು. ಸ್ಟೈಲ್ ಶೀಟ್‌ಗಳನ್ನು ಬರಹದ/ನುಡಿ ಕಡತಕ್ಕೆ ಹೊಂದಿಸುವಂತಿನ ಅನುಕೂಲವಿರಬೇಕಾದ್ದು ಬಹಳ ಮುಖ್ಯ. ತಾಂತ್ರಿಕ ಕಷ್ಟಗಳ ಅರಿವಿಲ್ಲದೆ ಹೆಚ್ಚು ಬಯಸುತ್ತಿದ್ದೇನೆಯೆ ಎಂಬುದು ನನಗೆ ತಿಳಿಯದು. ಆದರೆ ಪ್ರಾರಂಭದಲ್ಲಿಯೇ ಇವುಗಳತ್ತ ಗಮನ ನೀಡುವುದು ಸೂಕ್ತವೆಂದೆನ್ನಿಸುತ್ತದೆ. ಬರಿಯ ಎಚ್‌ಟಿಎಂಎಲ್ ಮಾತ್ರವಾದರೆ ಸಾಲದು- ಎಕ್ಸ್‌ಎಚ್‌ಟಿಎಮ್‌ಎಲ್ ಹಾಗು ಕೆಲವು ತಿಂಗಳಲ್ಲೇ ಎಕ್ಸ್‌ಎಮ್‌ಎಲ್ ಬಳಕೆಗೆ ಬರುತ್ತದೆ ಎನ್ನುವುದರತ್ತಲೂ ಗಮನ ಕೊಟ್ಟರೆ ಒಳ್ಳೆಯದು. ಕಡತಗಳನ್ನು ನೋಟ್‌ಪ್ಯಾಡ್‌ನಲ್ಲಿ ತೆಗೆದು ಬೇಕಾದ್ದನ್ನು ಮಾಡಬಹುದು ಎಂಬ ವಾದ ಸರಿಯಾದ್ದಲ್ಲ.
ಟಿಪ್ಪಣಿ ಮುಗಿಸುವ ಮುನ್ನ ಈ ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನಮ್ಮ ಕೆ ವಿ ಸುಬ್ಬಣ್ಣನವರಿಗೆ ನೀಡಲಾಗಿದೆ. ಈ ಸಂಚಿಕೆ ಸಂದರ್ಭೋಚಿತವಾಗಿ ಹಿಂದೆ ಕನ್ನಡಸಾಹಿತ್ಯ.ಕಾಂ ಪ್ರಕಟಿಸಿದ್ದ ಸುಬ್ಬಣ್ಣನವರ ಲೇಖನಗಳನ್ನು ಮುಂದಿನ ಪುಟಕ್ಕೆ ತರಲಾಗಿದೆ. ಜೊತೆಗೆ ಅವರ ‘ಕವಿರಾಜ ಮಾರ್ಗ ಹಾಗು ಕನ್ನಡ ಜಗತ್ತು’ ಕೃತಿಯ ಎಲ್ಲ ಲೇಖನಗಳು ಸೇರಿವೆ. ಕವಿರಾಜ ಮಾರ್ಗ ಸುದೀರ್ಘವಾದ ಪ್ರಬಂಧ/ಲೇಖನ. ಅದರ ನಲವತ್ತು ಪುಟಗಳನ್ನು ನೀಡಲಾಗಿದೆ. ಉಳಿದ ನಲವತ್ತು ಪುಟಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ಹಳೆಯ ಸಂಚಿಕೆ ವಿಭಾಗದಲ್ಲಿನ ಸಣ್ಣಕತೆಗಳನ್ನು ಸೇರಿಸಲಾಗಿದೆ. ಹೀಗೆಯೇ ಲೇಖನಗಳನ್ನು, ಕವನಗಳನ್ನು ಕಾಲಾನುಕ್ರಮದಲ್ಲಿ ಸೇರಿಸುತ್ತ ಹೋಗುತ್ತೇನೆ.
ಶೇಖರ್‌ಪೂರ್ಣ
೦೭-೦೧-೨೦೦೪