ಕಾಗದದ ಪುಟ್ಟ ದೋಣಿಯ
ಈ ತುದಿಯಲ್ಲಿ ನಾನು
ಆ ತುದಿಯಲ್ಲಿ ನೀನು
ನಿನ್ನ ಕಣ್ಣ ನಿಮ್ನ ನೋಟದಲಿ
ಮುಳುಗಿದ ನನ್ನೀ ಮೌನ
ಒಳಕ್ಕೂ ಹೊರಕ್ಕೂ ನಮ್ಮಿಬ್ಬರ
ನಡುವೆ ತಿರುವು ಮುರಿವಿನ
ಡೊಂಕು ಡೊಂಕಿನ ನದಿಯ ಹಾದಿ-
ಯಲ್ಲಿ ದೂರತೀರದಯಾನ ಹುಚ್ಚಿನ
ಹೊಳೆಯಲ್ಲಿ ಮಂಥನದ ರಭಸಕ್ಹುಟ್ಟಿದ
ಬಿಳಿನೊರೆಯ ಹೊನಲಲ್ಲಿ ಹಾಯಿಗಡವಿಲ್ಲದ
ಮಧ್ಯಮದಲ್ಲಿ ನೂರೆಂಟು ದೋಣಿಯ
ಕದನವದಲ್ಲಿಂದ ದೂರ ದೂರವಿಲ್ಲಿ
ನಾನು-ನೀನು ದಡದ ಬದಿಯಲ್ಲಿ
ತೀರದ ಜೊತೆ ಜೊತೆಯಲ್ಲಿ
ದಂಡೆಯ ಸಮೀಪದಲ್ಲಿ ಆಗೊಮ್ಮೆ
ಈಗೊಮ್ಮೆ ಕಡಲ ತಳದ
ನಿಶ್ಚಲದಲ್ಲಿ ಮೋಹದ ಸುಳಿ
ಸೆಳೆಯುವಲ್ಲಿ ಹುಳು ಕಚ್ಚಿದೆಲೆಯಡಿಯ
ಮಸುಕಾದ ನೆರಳಲ್ಲಿ ದಡದಡಿಯ
ತಣ್ಣನ ಮಣ್ಣಲ್ಲಿ ಬಲಿತ
ಬೇರಿನ ನಡುವಲ್ಲಿ ಮೊನಚಾದ
ಹಲ್ಲಿಗೆ ತುತ್ತಾಗುವಲ್ಲಿ ಹೆಬ್ಬಾವು
ಬಿದ್ದ ಕವಲೊಡೆದ ಟೊಂಗೆಗಳಡಿಯಲ್ಲಿ
ಬಿರುಗಾಳಿಗೆ ಸಿಕ್ಕ ಹಕ್ಕಿಯಂತೆ
ನಡುಗಿ ನನ್ನೀ ಮನ ಕಿಟ್ಟೆಂದು
ಕೂಗಿದ ನಿಶ್ಯಬ್ದದಲ್ಲಿ ನಾನು-ನೀನು
ಸಾಗಿರೆ ಮುಂದೆ ದೋಣಿ ತಿರುಗಿದ
ತಿರುವಿನಾಚೆ ಕಾಣದಲೆಯೊಂದೆದ್ದು ಬಳಿಗೆ
ಬಂದು ನಿನಗೇತರ ಭಯವೋ
ನಿನಗೆಲ್ಲಿಯಾ ಸಾವೋ ಹರಿವ ನದಿಯ
ಯಕ್ಷಪ್ರಶ್ನೆಯೋ ಇದು ಶೇಷಪ್ರಶ್ನೆಯೋ
ತಿಳಿಯದನಾತಿಳಿದವನೀನೆಂಬರಿವಲ್ಲಿ
ನೋಡಲುನೀನಗುತಲಿಟ್ಟನಿನ್ನಕೈಬೆರಳ
ಸ್ಪರ್ಶಕ್ಕೆ ಉಕ್ಕುಕ್ಕಿ ಹರಿದ
ಪ್ರವಾಹದಲ್ಲಿ ಜಗದ ಜನ್ಮ
ಜನ್ಮಾಂತರದ ಹೆಜ್ಜೆಗುರುತುಗಳಳಿಸಿ ಯುಗ
ಯುಗಾಂತರದ ಹಾದಿಗಳು ಕೊಚ್ಚಿಹೊದಲ್ಲಿ
ಕೃಷ್ಣರಾಜಸಾಗರದ ಈ ಒಳಹಾದಿ-
ಯೊಂದುಳಿದು ಗುಪ್ತಗಾಮಿನಿಯಂತೆ
ಹರಿವ ನೀರಲ್ಲಿ ನಾನು-ನೀನು
ಒಂದಾಗಿ ಸೇರುವ ಸಂಗಮದಲ್ಲಿ
ನಮ್ಮಿಬ್ಬರ ಯಾನ ದೂರ
ದೂರಕೆ ದಿಗಂತದಲಿ ರವಿ
ಮುಳುಗುವ ದೂರ ತೀರಕೆ
*****
೪-೧೧-೨೦೦೩