ಅನುಭಾವಿ ಅಕ್ಕ

ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, ಅಲ್ಲಮ, ಚನ್ನಬಸವ, ಸಿದ್ಧರಾಮ ಮತ್ತು ಮಡಿವಾಳ ಮಾಚಯ್ಯ ಅಕ್ಕನ ವ್ಯಕ್ತಿತ್ವವನ್ನು ತಮ್ಮ ರಚನೆಗಳಲ್ಲಿ ರೂಪಿಸಿದ್ದಾರೆ. ಇಂಥ ವಚನಗಳನ್ನು ಒಟ್ಟಾಗಿ ನೋಡುವುದರಿಂದ ಅಕ್ಕನ ಸಮಕಾಲೀನರು ಅಕ್ಕನನ್ನು ಕಂಡ ಬಗೆ ತಿಳಿಯುತ್ತದೆ. ನಾವು ಇಂದು ಅಕ್ಕನನ್ನು ಆಕೆಯೊಬ್ಬ ಬಂಡಾಯಗಾರ್ತಿ, ಭಾವಗೀತೆಗಳ ಕವಿ ಎಂದೆಲ್ಲ ಕಂಡು ಮೆಚ್ಚಿದ್ದರೆ ಅವಳ ಸಮಕಾಲೀನರು ಆಕೆಯ ಆಧ್ಯಾತ್ಮಿಕ ಸಾಧನೆಯನ್ನು ಮಾತ್ರ ಮೆಚ್ಚಿದ್ದಂತೆ ಕಾಣುತ್ತದೆ. ಅಕ್ಕನ ವ್ಯಕ್ತಿತ್ವವನ್ನು ವಿವರಿಸುವಾಗ ಈ ಎಲ್ಲ ವಚನಕಾರರೂ ಬಹುಮಟ್ಟಿಗೆ “ಇಲ್ಲ”, “ನೀಗಿಕೊಂಡ”, “ಕಳೆದುಕೊಂಡ”, ಮುಂತಾದ ನಿಷೇಧವಾಚಕಗಳನ್ನೇ ಬಳಸಿ ಮಾತನಾಡಿರುವುದು ಗಮನಾರ್ಹ. ಅಕ್ಕ ಏನಲ್ಲ, ಅವಳಲ್ಲಿ ಏನಿಲ್ಲ ಎಂಬುದನ್ನು ವಿವರಿಸುತ್ತಾ ಅವಳು ಏನು, ಎಂಥವಳು ಎಂಬುದನ್ನು ಕಾಣಿಸಲು ಪ್ರಯತ್ನಿಸುತ್ತಾರೆ.

– ೧ –

ಬಸವಣ್ಣ ಅಕ್ಕನನ್ನು ಮೆಚ್ಚಿಕೊಂಡಾಡುವುದಕ್ಕೆ ಮೂರು ಕಾರಣಗಳಿವೆ. ಅಕ್ಕ ನಾಚಿಕೆಗಳು ಇಲ್ಲದವಳು, ಯಾವ ಹೊರೆಯೂ ಇಲ್ಲದವಳು ಮತ್ತು ಅವಳ ಭಾಷೆ ಪರಿಶುದ್ಧವಾದದ್ದು.

ಬಸವಣ್ಣ ಮೂರು ಬಗೆಯ ನಾಚಿಕೆಗಳನ್ನು ಕುರಿತು ಮಾತನಾಡಿದ್ದಾನೆ. ಮೊದಲನೆಯದು ಕಾಯದ ಲಜ್ಜೆ. ಇದು ಕೇವಲ ಕಲ್ಪಿತವಾದದ್ದು ಎನ್ನುತ್ತಾನೆ. ಗಂಡು ಹೆಣ್ಣಿನ ದೇಹದ ಕೆಲವು ಭಾಗಗಳು ನಾಚಿಕೆಯನ್ನು ಹುಟ್ಟಿಸುತ್ತವೆ, ಹುಟ್ಟಿಸಬೇಕು ಎಂಬ ಧೋರಣೆ; ಅಥವ ಹಾಗೆ ಬಚ್ಚಿಟ್ಟುಕೊಂಡ ಭಾಗಗಳು ಕಾಮಪ್ರಚೋದಕ ಎಂಬ ತಿಳಿವು ಇವೆಲ್ಲ “ನಿಜ” ಅಲ್ಲ, ಕಲ್ಪಿತಗಳು. ಎರಡನೆಯ ನಾಚಿಕೆ ಜೀವಕ್ಕೆ ಸಂಬಂಧಿಸಿದ್ದು. ಇದನ್ನು ಅವನು ಮೋಹವೆನ್ನುತ್ತಾನೆ. ಬದುಕಿಗೆ ಅಗತ್ಯವೆಂದು ಭಾವಿಸಿ ಮೋಹವನ್ನು ಹುಟ್ಟಿಸಿಕೊಂಡಿರುವ ವಸ್ತುಗಳೆಲ್ಲ ಜೀವದ ಲಜ್ಜೆಗೆ ಕಾರಣವಾಗುತ್ತವೆ. ಮೂರನೆಯ ನಾಚಿಕೆ ನೆನಪಿಗೆ ಸಂಬಂಧಿಸಿದ್ದು. ನೆನಪೂ ನಾಚಿಕೆಗೆ ಕಾರಣವಲ್ಲವೆ. ನೆನಪು ಎಂಬುದು ಮರೆವಿನ ಇನ್ನೊಂದು ಮುಖತಾನೇ? ಆ ನೆನಪು ಮತ್ತು ಮರೆವನ್ನು ಸುಟ್ಟುಬಿಟ್ಟರೆ ಮನದ ಲಜ್ಜೆ ಇಲ್ಲವಾಗುತ್ತದೆ. ಅಕ್ಕಮಹಾದೇವಿ ಹೀಗೆ ಕಾಯ, ಜೀವ ಮತ್ತು ಮನಸಿನ ಲಜ್ಜೆಗಳು ಇಲ್ಲದವಳು. ಅಕ್ಕನಲ್ಲಿ “ತವಕ”ವಿಲ್ಲ, “ಸ್ನೇಹ”ವಿಲ್ಲ,”ವ್ಯವಹಾರ”ವೂ ಇಲ್ಲ. ತವಕವಿಲ್ಲವೆಂದರೆ ಆಸೆ, ಹಂಬಲ, ಆತುರ ಇತ್ಯಾದಿಗಳಿಲ್ಲದವಳು; ಸ್ನೇಹವೆಂದರೆ ಯಾವುದೇ ಬಗೆಯ ಜಿಡ್ಡು ಇಲ್ಲದವಳು; ಕೊಡುವ ಕೊಳ್ಳುವ, ತಾನೇನೋ ಕೊಡಬೇಕು ಮತ್ತು ಕೊಟ್ಟು ಏನನ್ನೋ ಪಡೆಯಬೇಕು ಎಂಬ ವ್ಯವಹಾರಧೋರಣೆಯೂ ಅಕ್ಕನಲ್ಲಿ ಇಲ್ಲ ಎಂದು ಬಸವ ಅವಳನ್ನು ಮೆಚ್ಚಿದ್ದಾನೆ.(ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೩)

ಬಸವಣ್ಣ ಅಕ್ಕನನ್ನು ಮೆಚ್ಚುವುದಕ್ಕೆ ಇನ್ನೊಂದು ಕಾರಣವಿದೆ. “ಮಹದೇವಿ ಎಂಬ ಭಕ್ತೆಗೆ ಆವ ಹೊರೆಯೂ ಇಲ್ಲ” ಎಂಬುದು ಅವನ ಮೆಚ್ಚುಗೆಗೆ ಕಾರಣವಾಗಿದೆ. ರೂಪ ಇರುವ ಮನುಷ್ಯರನ್ನು ಒಲಿದರೆ ಆಗ ಒಲುಮೆಯನ್ನು ಉಳಿಸಿಕೊಳ್ಳುವುದಕ್ಕೆ ತನ್ನ ತನುವನ್ನು ಸುಂದರವಾಗಿಟ್ಟುಕೊಳ್ಳುವ ಹೊರೆ ಇರುತ್ತದೆ. ಆದರೆ ಅಕ್ಕ ರೂಪಿಲ್ಲದವನನ್ನು ಒಲಿದವಳು. ಆದ್ದರಿಂದ ತನ್ನ ತನುವಿನ ಹಂಗಿನ ಭಾರ ಕಳೆದುಕೊಂಡವಳು. ಮನಸ್ಸಿರುವ ಮನುಷ್ಯನನ್ನು ಒಲಿದರೆ ತನ್ನ ಮತ್ತು ಆತನ ಅಭಿಮಾನವನ್ನು ಕಾಪಾಡಿಕೊಳ್ಳಬೇಕಾದ ಹಂಗಿನ ಭಾರ ಇರುತ್ತದೆ. ಆದರೆ ಅಕ್ಕ ಮನವಿಲ್ಲದವನನ್ನು ಒಲಿದವಳು. ಆದ್ದರಿಂದಲೇ ಅಭಿಮಾನದ ಹೊರೆಯನ್ನು ಜೋಪಾನಮಾಡಿಕೊಳ್ಳಬೇಕಾದ ಭಾರ ಕಳೆದುಕೊಂಡವಳು. ಅಕ್ಕ ಯಾರನ್ನು ಒಲಿದಳೋ ಅವನು ದಿಗಂಬರನಾದ್ದರಿಂದ ತಾನೂ ಕೌಪೀನದ ಹಂಗಿನ ಭಾರ ಕಳೆದುಕೊಂಡವಳು. ಈ ಭಕ್ತೆ ಯಾವ ಹೊರೆಯೂ ಇಲ್ಲದೆ ಎಷ್ಟು ಲಾಘವದಿಂದ ಇದ್ದಾಳಲ್ಲ ಎಂಬುದು ಬಸವನ ಮೆಚ್ಚುಗೆಗೆ ಕಾರಣ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೪)

ಬಸವ ಅಕ್ಕನನ್ನು ಮೆಚ್ಚುವುದಕ್ಕೆ ಮೂರನೆಯ ಕಾರಣ ಅವಳು ತನ್ನಲ್ಲಿ ತಾನು ನಿಶ್ಚಯಗೊಂಡವಳು, ಆದ್ದರಿಂದ ಅವಳ ಭಾಷೆ ಬೀಸರವೋಗಿಲ್ಲ, ಎಂದರೆ ಮೀಸಲಳಿದಿಲ್ಲ, ಅಶುದ್ಧವಾಗಿಲ್ಲ ಎನ್ನುತ್ತಾನೆ. ಬಸವ ನಡೆ ಮತ್ತು ನುಡಿಗಳ ಪರಿಶುದ್ಧತೆಗೆ ಗಮನಕೊಟ್ಟವನಲ್ಲವೆ? ಆದ್ದರಿಂದಲೇ ಅಕ್ಕನ ಪರಿಶುದ್ಧಭಾಷೆ ಅವನ ಮೆಚ್ಚುಗೆಗೆ ಕಾರಣವಾಗಿದೆ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೫) ನಮ್ಮಲ್ಲಿ ಅನುಭಾವ ಎಂಬ ಮಾತನ್ನು ಮೌನ ಎಂಬುದರೊಡನೆ ಸಮೀಕರಿಸುವ ತಪ್ಪು ಕಲ್ಪನೆಯೊಂದಿದೆ. ವಚನಕಾರರು ನಿಶ್ಶಬ್ದದ ಬಗ್ಗೆ ಹೇಳುತ್ತಾರೆ, ಮಾತನ್ನು ಸೂತಕ ಎನ್ನುತ್ತಾರೆ ಇತ್ಯಾದಿಗಳೆಲ್ಲ ನಿಜ. ಆದರೆ ವಚನಗಳನ್ನು ನೋಡಿದರೆ ಅನುಭಾವ ಎಂಬ ಮಾತನ್ನು ಸಮಾನ ಮನೋಧರ್ಮಿಗಳ ನಡುವಿನ ಸಂವಾದ ಎಂಬ ಅರ್ಥದಲ್ಲೂ ಬಳಸಿರುವುದು ಕಾಣುತ್ತದೆ. ಅಕ್ಕನ ಭಾಷೆ ಪರಿಶುದ್ಧವಾದದ್ದು ಎನ್ನುವಾಗ ಅವಳ ಮಾತಿನಲ್ಲಿ ಮಾತು-ಅರ್ಥಗಳ ನಡುವೆ, ಭಾವ-ಭಾಷೆಗಳ ನಡುವೆ ಸಂದಿಲ್ಲ, ಅವಳ ಮಾತು ಜ್ಯೋತಿರ್ಲಿಂಗದಷ್ಟು ಶುದ್ಧಪ್ರಭೆಯನ್ನುಳ್ಳದ್ದು ಎಂದೇ ಬಸವಣ್ಣ ಹೇಳುತ್ತಿರುವಂತಿದೆ. ಎಷ್ಟು ಬೇಕೋ ಅಷ್ಟು ಮಾತನಾಡುವ ಅಕ್ಕನ ಸ್ವಭಾವವನ್ನು ಕುರಿತು ಹೇಳುತ್ತ ಚನಬಸವಣ್ಣ “ಒಂದನಾಡಹೋಗಿ ಒಂಬತ್ತನಾಡುವವರೆಲ್ಲ” ಹಿರಿಯರೆ ಎಂದು ಕೇಳುವ ಮೂಲಕ ಅಕ್ಕನ ಭಾಷೆಯ ಶಕ್ತಿಯನ್ನು ಕೊಂಡಾಡುತ್ತಾನೆ.ಅಕ್ಕನದು ಬೆರೆಸಿ ಬೇರಿಲ್ಲದ ಹಿರಿತನ, ಅವಳು ಸುಮ್ಮನೆ ವಯಸ್ಸಾದವಳಲ್ಲ ಎಂದು ಚನ್ನಬಸವಣ್ಣ ಅಕ್ಕನ ಹಿರಿಮೆಯನ್ನು ಗುರುತಿಸುತ್ತಾನೆ. ಅನುಭಾವಿಗಳಾಗಿದ್ದೂ ತಮ್ಮ ಒಳಗನ್ನು ಅಕ್ಕನ ಹಾಗೆ ಮಾತಿನಲ್ಲಿ ಹೇಳಬಲ್ಲವರು ವಿರಳ. ಆದ್ದರಿಂದಲೆ ಅವಳ ಒಂದು ವಚನಕ್ಕೆ ಇರುವ ಶಕ್ತಿ ಆದ್ಯರ ಅರುವತ್ತು,ಬಸವಣ್ಣನ ಇಪ್ಪತ್ತು, ಅಲ್ಲಮಪ್ರಭುವಿನ ಹತ್ತು ಮತ್ತು ಅಜಗಣ್ಣನ ಐದು ವಚನಗಳಿಗೆ ನಿರ್ವಚನವಾಗಬಲ್ಲದು ಎಂದು ಸಿದ್ಧರಾಮ ಹೇಳುತ್ತಾನೆ.

ಕಲಿದೇವ ಎಂಬ ಅಂಕಿತದ ಮಡಿವಾಳ ಮಾಚಯ್ಯ ಅಕ್ಕನ ವ್ಯಕ್ತಿತ್ವದ ವಿರೋಧಾಭಾಸಗಳನ್ನು ಗುರುತಿಸಿ, ಮೆಚ್ಚಿದ್ದಾನೆ. ಅಕ್ಕ ಕಾಮಿಯಾಗಿದ್ದು ನಿಃಕಾಮಿ, ಅವಳು ಸೀಮೆಯಲ್ಲಿದ್ದು ನಿಸ್ಸೀಮೆ, ಭವಿಯ ಸಂಗ ತೊರೆದು ಭವಬಾಧೆ ಹರಿದವಳು (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೧) ಮತ್ತು ಅಕ್ಕನಲ್ಲಿ ಹೆಂಗೂಸೆಂಬ ಭಾವ ಬಯಲ ಬೆರೆಸಿತ್ತು (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೧೧). ಅಕ್ಕನ ವಚನಗಳಲ್ಲಿರುವ ಲೈಂಗಿಕ ಪ್ರತಿಮೆಗಳ ಬಗ್ಗೆ ಕನ್ನಡ ನವ್ಯ ವಿಮರ್ಶೆ ಪ್ರಧಾನವಾಗಿ ಚರ್ಚಿಸಿತು. ಆದರೆ ಅಕ್ಕ ನಿಃಕಾಮಿ ಅಷ್ಟೇ ಅಲ್ಲ ಆಕೆ ಹೆಂಗುಸೆಂಬ ಭಾವವನ್ನೇ ಇಲ್ಲವಾಗಿಸಿಕೊಂಡಿದ್ದವಳು ಎಂಬುದು ಅವಳ ಸಮಕಾಲೀನರ ಧೋರಣೆಯಾಗಿರುವಂತಿದೆ. ಭಾಷೆಯ ಮಟ್ಟದಲ್ಲಿ ತನ್ನ ಭಾವ ತೀವ್ರತೆಯನ್ನು ತಿಳಿಸಲು ಲೈಂಗಿಕ ಪ್ರತಿಮೆಗಳನ್ನು ಬಳಸಿದರೂ ಅವಳ ಮನಸ್ಸಿನಲ್ಲಿ ಅಂಥ ಆಸೆ ಇರಲ್ಲಿಲ್ಲ; ಕಾಮದ ಅತಿ ಹಂಬಲ ಅಥವ ಅದರ ನಿರಾಕರಣೆ, ಎರಡೂ ವ್ಯಕ್ತಿತ್ವದ ದೃಷ್ಟಿಯಿಂದ ಆತಂಕಗಳನ್ನು ಹುಟ್ಟಿಸಬಲ್ಲುದು. ಕಾಮವನ್ನು ಸಹಜವೆಂದು ತಿಳಿಯುವುದು ಸಮತೋಲನದ ನಿಲುವು. ಚೆನ್ನಮಲ್ಲಿಕಾರ್ಜುನನನ್ನು “ಸಹಜಮಿಥುನರೂಪ” ಎಂದು ಕರೆಯುವಾಗ ಅಕ್ಕ ಕಾಮವನ್ನು ಸಹಜವೆಂದು ನೋಡಿದ್ದು ಸ್ಪಷ್ಟವಾಗಿದೆ. ಯಾವ ವಿಕಾರಗಳೂ ಇಲ್ಲದಿರುವುದೇ ಸಹಜತೆ. ಅಕ್ಕ ಹಾಗೆ ಸಹಜವಾಗಿದ್ದಳು. ಹೆಣ್ಣುತನ ಮತ್ತು ಗಂಡುತನಗಳೆಂಬ ಕಲ್ಪನೆಗಳು ಸಮಾಜ ಸಂಸ್ಕೃತಿಯ ಕಾರಣದಿಂದ ವ್ಯಕ್ತಿಯ ಮನಸ್ಸಿನಲ್ಲಿ ಬೇರೂರುತ್ತವೆ. ನಿಜವಾಗಿ ಹೆಂಗುಸುತನವೆಂಬುದು ಒಂದು ಸಾಮಾಜಿಕ ಚಹರೆ. ಅದರೊಡನೆ ಹೆಂಗುಸು ಹೀಗಿರಬೇಕು, ಬಾರದು ಎಂಬೆಲ್ಲ ಕಲ್ಪಿತಗಳ ಸರಣಿಯೇ ಹುಟ್ಟಿಕೊಳ್ಳುತ್ತದೆ. ಅಕ್ಕ ಹೆಂಗೂಸೆಂಬ ಭಾವವನ್ನು ಬಯಲಾಗಿಸಿಕೊಂಡಿದ್ದವಳು ಎನ್ನುವುದು ಬಹುದೊಡ್ಡ ಮಾತು. ನಮ್ಮನಮ್ಮೊಳಗಿರುವ ಗಂಡು ಅಥವ ಹೆಣ್ಣುತನ “ನಿಜ”ವಲ್ಲ, ಅದು ಕೇವಲ “ಭಾವ”, ಆರೋಪಿತ ಎಂಬ ಅರಿವು ಪಡೆಯುವುದು ಬಹುದೊಡ್ಡ ಸಾಧನೆ. ಅದು ಅಕ್ಕನಿಗೆ ಸಾಧ್ಯವಾಗಿತ್ತು ಎಂಬುದು ಮಾಚಯ್ಯನ ದೃಷ್ಟಿಯಾಗಿದೆ.

ವಚನಕಾರರು ನೆನಪು ಮತ್ತು ಮರೆವುಗಳ ಸಂಬಂಧವನ್ನು ಕುರಿತು ಗಾಢವಾಗಿ ಆಲೋಚಿಸಿದ್ದಾರೆ. ನಾವು ಯಾವುದನ್ನು ನಮ್ಮ ವ್ಯಕ್ತಿತ್ವ ಎಂದುಕೊಳ್ಳುತ್ತೇವೆಯೋ ಅದು ಬಹುಮಟ್ಟಿಗೆ ನೆನಪುಗಳನ್ನು ಆಧರಿಸಿಯೇ ರೂಪುಗೊಂಡಿರುತ್ತದೆ. ವರ್ತಮಾನಕ್ಕೆ ನಾವು ತೋರುವ ಪ್ರತಿಕ್ರಿಯೆಗಳಲ್ಲೆವೂ ನೆನಪಿನಿಂದಲೇ ಮೂಡುತ್ತವೆ. ಮರೆವು ನೆನಪಿನದೇ ಇನ್ನೊಂದು ಮುಖ. ಲೌಕಿಕ ವ್ಯವಹಾರ ಸುಸೂತ್ರವಾಗಿ ನಡೆಯಲು ನೆನಪು ಅಗತ್ಯವೇ ಆದರೂ ಆಧ್ಯಾತ್ಮಿಕ ಪ್ರಗತಿಗೆ ಹಳೆಯ ನೆನಪುಗಳು ಪ್ರತಿಬಂಧಕವೇ ಹೌದು. ಅಂತೆಯೇ ನಮ್ಮ ನಿಜವನ್ನು ನಾವು ಮರೆತು, ನಮ್ಮ ಬಗ್ಗೆ ನಾವು ಕಟ್ಟಿಕೊಂಡಿರುವ ಕಲ್ಪನೆಗಳಿಗೆ ಬದ್ಧರಾಗಿರುವುದೂ ಆಧ್ಯಾತ್ಮಿಕ ವಿಕಾಸಕ್ಕೆ ತೊಂದರೆಯನ್ನು ಒಡ್ಡುತ್ತದೆ. ಅಕ್ಕ ಮರೆವಿಲ್ಲದವಳು. ಅಂದರೆ ತನ್ನ ನಿಜವೇನು ಎಂಬುದರ ಅರಿವನ್ನು ಮರೆಯದೆ ಇದ್ದವಳು. ಆದ್ದರಿಂದಲೇ ನಾವು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುವ ಲೌಕಿಕ ನೆನಪುಗಳ ಬಂಧನಕ್ಕೆ ಸಿಲುಕದವಳು. ಲೌಕಿಕ ಜೀವನ ನಮ್ಮಲ್ಲಿ ರೂಪಿಸುವ ಗತಕಾಲದ ನೆನಪುಗಳು ಹಿರಿದು-ಕಿರಿದು, ಮಹತ್ವದ್ದು-ಕ್ಷುಲ್ಲಕವಾದದ್ದು ಎಂಬಂಥ ಕಲ್ಪಿತ ಬಂಧನಗಳನ್ನು ರೂಪಿಸುತ್ತವೆ. ಅಕ್ಕ ನೆನಪುಗಳಿಂದ ಪಾರಾಗಿದ್ದವಳು, ಮರೆವು ಇಲ್ಲದೆ ತನ್ನ ಅರಿವನ್ನು ಉಳ್ಳವಳು. ಆದ್ದರಿಂದಲೇ ಅವಳು ಹಿರಿದು-ಕಿರಿದು ಇತ್ಯಾದಿ ಅಳತೆಗಳನ್ನು ಮೀರಿದವಳು. ಸಾವು ಎಂಬುದೂ ಕೂಡ ನೆನಪಿನಿಂದಲೇ ಪ್ರೇರಿತವಾಗುವ ಭಯ. ಹುಟ್ಟಿದ್ದೇವೆ ಎಂಬ ನೆನಪು ಇರುವವರೆಗೂ ಸತ್ತೇವು ಎಂಬ ಭಯ ಇರುತ್ತದೆ. ಸತ್ತರೆ ನಮ್ಮೊಡನೆ ನಮ್ಮ ಎಲ್ಲ ನೆನಪುಗಳೂ, ನಾವು ಪ್ರೀತಿಯನ್ನು ಬೆಳೆಸಿಕೊಂಡಿರುವ ಸಂಗತಿಗಳೆಲ್ಲವೂ, ಕೊನೆಗೆ ನಾವು ಯಾವುದನ್ನು ನಮ್ಮ ವ್ಯಕ್ತಿತ್ವ ಎಂದುಕೊಂಡಿದ್ದೇವೆಯೋ ಅದೂ ಮರೆವೆಗೆ ಸಂದುಬಿಡುತ್ತದೆ ಎಂಬ ಭಯ ನಮ್ಮನ್ನು ಕವಿಯುತ್ತದೆ. ಹುಟ್ಟು ಮತ್ತು ಸಾವುಗಳು ವಿರುದ್ಧ ಧೃವವಾಗಿ ಕಂಡು ಒಂದು ಬಯಸಬೇಕಾದದ್ದು ಇನ್ನೊಂದು ತಿರಸ್ಕರಿಸಬೇಕಾದದ್ದು ಎಂಬ ಧೋರಣೆ ನಮ್ಮಲ್ಲಿ ಬೆಳೆಯುತ್ತದೆ. ಅಕ್ಕ ಹುಟ್ಟು ಸಾವುಗಳ ಕಲ್ಪಿತ ಭಯದಿಂದ ಪಾರಾಗಿದ್ದವಳು. ದೇಹ ಪಡೆದು ಹುಟ್ಟುವ ಹುಟ್ಟು ಮಾತ್ರವೇ ಹುಟ್ಟಲ್ಲ, ನಾನು ಎಂದೆಂದಿಗೂ ಇರುವವಳೇ ಎಂಬ ನಿಲುವಿನವಳು. ಆದ್ದರಿಂದ ಅವಳು ಅಜಾತಳು. ಆಜಾತಳಾದ್ದರಿಂದಲೇ ಅವಳಿಗೆ ಸಾವಿನ ಭಯವಿಲ್ಲ ಎಂದು ಸಿದ್ಧರಾಮ ಹೊಗಳುತ್ತಾನೆ.

ಅಲ್ಲಮ ಅಕ್ಕನ ಕಾಲಾತೀತ ಗುಣದ ಬಗ್ಗೆ ನುಡಿದಿದ್ದಾನೆ. ಆದಿ ಮತ್ತು ಅಂತ್ಯ, ಅನಾದಿ ಮತ್ತು ಅನಂತ ಇವೆಲ್ಲ ನಮ್ಮ ಕಾಲದ ಕಲ್ಪನೆಯನ್ನು ಸೂಚಿಸುವ ಪದಗಳು. ಇಂಥ ಕುರುಹುಗಳಿಲ್ಲದೆ ನಮ್ಮ ದಿನ ನಿತ್ಯದ ವ್ಯವಹಾರ ಸಾಗದು, ನಿಜ. ಆದಿ ಶಕ್ತಿ ಎಂದು ಯಾವುದನ್ನು ಗುರುತಿಸುತ್ತಾರೋ ಅದು ಕೇವಲ ನಮ್ಮ ಭಾಷೆಯ ಒಂದು ಪದ, ಒಂದು ಕುರುಹು. ಹಾಗೆಯೇ ಅನಾದಿ ಎಂಬುದು ಕೂಡ ಒಂದು ಹೆಸರು. ನಾವು ಏನೇನನ್ನು ಹೆಸರಿಟ್ಟು ಗುರುತಿಸುತ್ತೇವೆಯೋ ಅವೆಲ್ಲ ಪರಿಮಿತಿಗೆ ಒಳಪಟ್ಟುಬಿಡುತ್ತವೆ. ಅಕ್ಕ ಹಾಗೆ ಕುರುಹುಗಳಿಗೆ, ಹೆಸರಿನ ಮಿತಿಗಳಿಗೆ ಒಳಗಾದವಳಲ್ಲ. ಅವಳೊಂದು ಬೆಳಕು. ಅಂತರಂಗ ಮತ್ತು ಬಹಿರಂಗ ಎಂಬ ವ್ಯತ್ಯಾಸಗಳಿಲ್ಲದೆ ಅಂತರಂಗದ ಬೆಳಕು ಬಹಿರಂಗದಲ್ಲೂ ವ್ಯಾಪಿಸಿಕೊಂಡಂತೆ ಇರುವವಳು ಅಕ್ಕ ಎಂದು ಅಲ್ಲಮ ಹೇಳುತ್ತಾನೆ.

ಅಕ್ಕ ಇಂಥ ಬೆಳಕು ಹೇಗಾದಳು ಎಂಬುದನ್ನು ಅಲ್ಲಮ ಹೇಳಿದ್ದಾನೆ. ನಾನೆಂದರೆ ದೇಹ ಮಾತ್ರ ಎಂದುಕೊಂಡಿರುವವರೆಗೂ ಸತ್ಯ ಎಂಬುದು ಅರಿವಿಗೆ ಬರಲಾರದು. ವಚನಕಾರರು ಈ ಸತ್ಯವನ್ನು ಲಿಂಗ ಎಂದೂ ಕರೆದಿದ್ದಾರೆ. ಅಕ್ಕ ತಾನೆಂದರೆ ಕೇವಲ ದೇಹ, ಅಥವ ಹೆಣ್ಣುದೇಹ ಎಂಬ ಕಲ್ಪನೆಗೆ ಸಿಲುಕಿದವಳಲ್ಲ. ಅವಳಲ್ಲಿ ತನುಗುಣವಿಲ್ಲದ್ದರಿಂದ ಆಕೆ ಲಿಂಗಸಂಗಿ. ನಾವು ಯಾವುದನ್ನು ನಮ್ಮ ಮನಸ್ಸು ಎನ್ನುತ್ತೇವೆಯೋ ಅದು ನೆನಪುಗಳ ಪ್ರಭಾವದಿಂದ ರೂಪುಗೊಂಡದ್ದು, ಇಷ್ಟ ಮತ್ತು ಅನಿಷ್ಟಗಳೇ, ನನಗೆ ಬೇಕು ನನಗೆ ಬೇಡ ಎಂಬಂಥ ನಿಲುವುಗಳೇ ಪ್ರಮುಖವಾಗಿರುವಂಥದ್ದು. ಮನೋಗುಣ ಮುಖ್ಯವಾಗಿಬಿಟ್ಟರೆ ಆಗ ಇರುವ ಸತ್ಯ ನಮಗೆ ಕಾಣದೆ ಮನಸ್ಸು ಏನನ್ನು ಬಯಸುತ್ತದೆಯೋ ಅದು ಮಾತ್ರ ಕಾಣತೊಡಗುತ್ತದೆ. ಮನಸ್ಸೇ ಮುಖ್ಯ ಎಂದುಕೊಂಡವರಿಗೆ ಸತ್ಯವಾಗಲಿ, ಸತ್ಯದ ಅರಿವಾಗಲೀ ದೊರೆಯದು. ಅಕ್ಕ ಮನೋಗುಣವಿಲ್ಲದವಳು ಆದ್ದರಿಂದ ಸದಾ ಅರಿವುಸಂಗಿ ಎಂದು ಅಲ್ಲಮ ಹೇಳುತ್ತಾನೆ. ನಮಗೆ ಭಾವಗಳೇ ಮುಖ್ಯವಾದರೆ ಆಗ ಸರಿ ಮತ್ತು ತಪ್ಪು, ಒಳಿತು ಮತ್ತು ಕೆಡುಕು ಎಂಬಂಥ ತೀರ್ಮಾನಗಳ ಬಲೆಯಲ್ಲಿ ಸಿಲುಕಿ ಭಾವದ ಕತ್ತಲಲ್ಲಿ ತಡಕಾಡಬೇಕಾಗುತ್ತದೆ. ಅಕ್ಕನಲ್ಲಿ ಈ ಮೂರುಗುಣಗಳೂ, ಅಂದರೆ ದೇಹಗುಣ, ಮನೋಗುಣ ಮತ್ತು ಭಾವಗುಣ ಇಲ್ಲ. ಆದ್ದರಿಂದ ಅವಳು ಸದಾ ಲಿಂಗಸಂಗಿ, ಅರಿವು ಸಂಗಿ ಮತ್ತು ಮಹಾಪ್ರಭೆ ಎಂದು ಅಲ್ಲಮ ಗುರುತಿಸುತ್ತಾನೆ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೮)

ನೋಟವೆ ತಾನಾದವಳು, ತನ್ನ ತಾನರಿದ ನಿಜಶಕ್ತಿ, ಭಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ ಎಂದವನು ಅಲ್ಲಮ. ಅಕ್ಕನ ವ್ಯಕ್ತಿತ್ವ ಅಖಂಡವಾದದ್ದು. ಅಂದರೆ ಅವಳಲ್ಲಿ ತಾನು ಬೇರೆ, ಈ ಲೋಕ ಬೇರೆ ಎಂಬ ನಮ್ಮೆಲ್ಲರಲ್ಲು ಸಾಮಾನ್ಯವಾಗಿರುವ ದೃಷ್ಟಿ ಇರಲಿಲ್ಲ. ಅವಳ ಬುದ್ಧಿ, ಮನಸ್ಸು, ದೇಹಗಳು ಬೇರೆ ಬೇರೆ ದಾರಿಗಳಲ್ಲಿ ಸಾಗುತ್ತ ಅಂತರಂಗದ ತೊಳಲಾಟಕ್ಕೆ ಕಾರಣವಾಗಿರಲಿಲ್ಲ. ತಾನು ಬೇರೆ ಲೋಕ ಬೇರೆ ಎಂಬ ದ್ವಂದ್ವ ಅವಳಲ್ಲಿ ಇಲ್ಲವಾದ್ದರಿಂದಲೆ ಅವಳದು ಭಿನ್ನವಿಲ್ಲದ ಅರಿವು. “ನಾನು” ಎಂಬುದೂ ಇಲ್ಲದೆ, ನಾನು ನೋಡುತ್ತಿರುವ ವಸ್ತು ತನ್ನಿಂದ ಬೇರೆ ಎಂಬ ಖಂಡ ದೃಷ್ಟಿಯೂ ಇಲ್ಲದೆ ನೋಟವೇ ತಾನು ಎಂಬ ಸ್ಥಿತಿಯನ್ನು ಪಡೆದುಕೊಂಡವಳು. ಆದ್ದರಿಂದಲೇ ಅವಳದು ತಾನರಿದ ನಿಜ ಶಕ್ತಿ. ಅವಳಿಗೆ ಇಂಥ ಅಖಂಡತೆ ಇದ್ದದ್ದರಿಂದಲೇ ಲೋಕದಿಂದ, ಇತರರಿಂದ ಮನ್ನಣೆಯನ್ನು ಪಡೆಯಬೇಕೆಂಬ ಮಮಕಾರವೂ ಇರಲಿಲ್ಲ. ಅಂತೆಯೇ ಅವಳು ಮಹದೇವಿ ಎಂದು ಅಲ್ಲಮ ನುಡಿಯುತ್ತಾನೆ. ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೭)

ತನ್ನ ನಿಲುಕಡೆಯನಿಜವ ತಾನರಿಯದವಳು. ನುಡಿಗೆ ಎಡೆಗೊಡದ ಘನವ ಹಿಡಿದವಳು. ಎಡೆ ಇಲ್ಲದ ಪರಿಪೂರ್ಣದೊಳಗೆ ನಡೆ ನುಡಿ ಕೆಟ್ಟವಳು. ಅಕ್ಕ ಅಖಂಡವಾದವಳು ಆದ್ದರಿಂದಲೇ ಅವಳಿಗೆ ತಾನು ಯಾವ ನಿಲುಕಡೆಯನ್ನು ಪಡೆದಿದ್ದೇನೆ ಎಂಬ ಅರಿವು ಇಲ್ಲ. ಹಾಗೆ ಗೊತ್ತಿದ್ದಿದ್ದರೆ ಅವಳ ವ್ಯಕ್ತಿತ್ವ ಭಿನ್ನವಾಗಿಬಿಡುತ್ತಿತ್ತು. ಗೊತ್ತಿದೆ ಎಂದರೆ ತನಗಿಂತ ಬೇರೆಯಾವುದೋ ಇದೆ, ಅದು ಗೊತ್ತಿದೆ ಎಂದರ್ಥವಲ್ಲವೆ? ಅಕ್ಕ ಹಾಗೆ ತನಗೆ ಗೊತ್ತಿದೆ, ಗೊತ್ತಿಲ್ಲ ಎಂಬ ದ್ವಂದ್ವಗಳಿಲ್ಲದವಳು. ಹೀಗಾಗಿ ಅವಳು ಘನ, ಘನವನ್ನು ಹಿಡಿದವಳು ಅಥವ ಘನವೇ ಅವಳನ್ನು ಹಿಡಿದು ಘನದ ಹಿಡಿತಕ್ಕೆ ಒಳಗಾದವಳು. ಅವಳು ನುಡಿಗೆ ಎಡೆ ಇಲ್ಲದ ಪರಿಪೂರ್ಣದೊಳಗೆ ಇರುವವಳು. ಅಂಥ ಸ್ಥಿತಿಯಲ್ಲಿ ಮಾತು ಬೇಕಾಗಿಲ್ಲ. ಮಾತು ಎಂಬುದು ನಮ್ಮನ್ನು ನಿಜದಿಂದ ಬೇರೆ ಮಾಡುವ ಮಾಧ್ಯಮ. ಅಕ್ಕ ನುಡಿಗೆಟ್ಟವಳು, ಅಂದರೆ ನುಡಿಯ ಹಂಗು ಇಲ್ಲದವಳು. ನುಡಿಯ ಅಗತ್ಯವೇ ಇಲ್ಲದೆ ನುಡಿ ಕೆಟ್ಟು, ಇಲ್ಲವಾದ ಸ್ಥಿತಿ ಅವಳದು. ನಡೆಗೆಟ್ಟವಳೂ ಹೌದು. ಈ ಮಾತುಗಳನ್ನು ಕೊಂಚ ವಿವರಿಸುವುದು ಅಗತ್ಯವಿದೆ. ನಾವು ಇಂದು ಕೇಡು, ಕೆಟ್ಟ ಎಂಬ ಮಾತುಗಳನ್ನು ಒಳ್ಳೆಯ ಅರ್ಥದಲ್ಲಿ ಬಳಸುವುದೇ ಇಲ್ಲ. ಆದರೆ ವಚನಕಾರರಲ್ಲಿ ಅನೇಕ ಬಾರಿ ಕೆಡು, ಕೆಟ್ಟ ಎಂಬ ಮಾತುಗಳು ಧನಾತ್ಮಕ (ಪಾಸಿಟಿವ್) ಅರ್ಥದಲ್ಲಿ ಬಳಕೆಯಾಗಿರುವುದು ಕಾಣುತ್ತದೆ. ” ಸತ್ಯದ ಬಲದಿಂದ ಅಸತ್ಯದ ಕೇಡು,” ” ಜ್ಯೋತಿಯ ಲದಿಂದ ತಮಂಧಡ ಕೇಡು” ಎಂಬಂಥ ಮಾತುಗಳಲ್ಲಿ ಕತ್ತಲೆಯು ಕೆಟ್ಟರೆ ತನ್ನ ಅದು ಬೆಳಕಾಗುತ್ತದೆ, ಅಸತ್ಯ ಕೆಟ್ಟರೆ ಅದು ಸತ್ಯವಾಗುತ್ತದೆ ಎಂಬ ಅರ್ಥ ಹೊಳೆಯುತ್ತದೆಯಲ್ಲವೆ? ಹಾಗೆಯೇ ನುಡಿಯು ಕೆಟ್ಟರೆ ಅದು ಮೌನವಾಗುತ್ತದೆ. ನಡೆ ಕೆಟ್ಟರೆ ನಿಶ್ಚಲತೆಯಾಗುತ್ತದೆ. ಅಕ್ಕನದು ನುಡಿಯು ಮೌನವಾದ ನುಡಿ, ಗಮನವಿಲ್ಲದ ನಿರ್ಗಮನ ಎಂದು ಅಲ್ಲಮ ಹೇಳುತ್ತಿರುವಂತಿದೆ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೧೨)

ಇನ್ನೊಂದು ರೀತಿಯಿಂದ ನೋಡುವುದಾದರೆ ಲೌಕಿಕ ನೀತಿಯ ದೃಷ್ಟಿಯ ಸರಿ ತಪ್ಪುಗಳ ನಡೆ ಕೂಡ ಅವಳದಲ್ಲ. ಯಾವುದನ್ನು ಶೂನ್ಯ ಸಂಪಾದನೆ ಎಂಬ ಕೃತಿ “ಶೂನ್ಯ”ವೆಂದು ಕರೆಯುತ್ತದೆಯೋ ಅದನ್ನು ಸಂಪಾದಿಸಿಕೊಂಡಿದ್ದವಳು. ಅಲ್ಲಮ ಅದನ್ನು ಗುರುತಿಸಬಲ್ಲ. ಆದರೆ ಅವನು ಇನ್ನೂ ತನ್ನ ಶೂನ್ಯವನ್ನು ಸಂಪಾದಿಸಿಕೊಳ್ಳಬೇಕಿದೆ. “ಶೂನ್ಯ ಸಂಪಾದನೆ” ಕೃತಿಯಲ್ಲಿ ಅಕ್ಕನ ಪ್ರಸಂಗದ ನಂತರ ಅಲ್ಲಮನೂ ತನ್ನ ಅಂತಿಮ ಪಯಣಕ್ಕೆ ತೊಡಗಿದ ಪ್ರಸಂಗ ಬರುತ್ತದೆ. ಮತ್ತೆ ಕಲ್ಯಾಣಕ್ಕೆ ಬರುವ ಸಂಗತಿಯೂ ಬರುತ್ತದೆ. ಅಲ್ಲಮ ಹಾಗೆ ಕಲ್ಯಾಣಕ್ಕೆ ಬಂದಾಗ ಅವನು ಹೇಗಿದ್ದ ಎಂಬ ವರ್ಣನೆ ಇದೆಯಲ್ಲ ಅದು ಅಲ್ಲಮನ ಶೂನ್ಯ ಸಂಪಾದನೆ ಪೂರ್ಣವಾದದ್ದನ್ನು ಸೂಚಿಸುತ್ತದೆ. ಲೋಕದ ಕಣ್ಣಿಗೆ ಉನ್ಮತ್ತನಂತೆ, ಬಾಲಕನಂತೆ, ಹುಚ್ಚನಂತೆ ಕಾಣುವ ಆದರೆ ಎರಡಳಿದ ಸ್ಥಿತಿಯಲ್ಲಿದ್ದ ಅಲ್ಲಮನ ವರ್ಣನೆ ಬಹಳ ಉಜ್ವಲವಾದದ್ದು. ಅಕ್ಕ ಕಲ್ಯಾಣಕ್ಕೆ ಬರುವ ವೇಳೆಗಾಗಲೇ ಅಂಥ ಎತ್ತರವನ್ನು ತಲುಪಿದ್ದವಳು. ಇನ್ನುಳಿದದ್ದು ಅವಳು ತನುವೆಂಬ ಕದಳಿಯಲ್ಲಿ, ಮನವೆಂಬ ಕದಳಿಯಲ್ಲಿ ಕರ್ಪೂರದಂತೆ ಕರಗುವುದು ಮಾತ್ರ. ಅವಳ ಆಧ್ಯಾತ್ಮಿಕ ಹಿರಿಮೆಯನ್ನು ಅವಳ ಸಮಕಾಲೀನ ವಚನಕಾರರು ಹೀಗೆ ಕೊಂಡಾಡಿದ್ದಾರೆ.

– ೨ –

ಅಕ್ಕನ ಸಮಕಾಲೀನ ವಚನಕಾರ್ತಿಯರು ಯಾರೂ ಅಕ್ಕನನ್ನು ಸ್ಮರಿಸಿರುವುದು, ಕೊಂಡಾಡಿರುವುದು ಗಮನಕ್ಕೆ ಬಂದಿಲ್ಲ. ಅಕ್ಕನನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖೆಯ ವಚನಗಳು ದೊರೆತಿರುವುದು ಅಕ್ಕಮನದು. ಆಕೆಯಂತೂ “ಸೀಮೆವಂತ ” ಎಂಬ ಮಾತನ್ನು ಮತ್ತೆ ಮತ್ತೆ ಬಳಸುತ್ತ ತಾನು ತನ್ನ ಕುಟುಂಬ, ವ್ರತ, ಮನೆಗೆಲಸ ಇತ್ಯಾದಿಗಳ ಸೀಮೆಗಳೊಳಗೇ ಇದ್ದು ಸಾಧನೆ ಮಾಡಬಯಸುವವಳು ಎಂದಿದ್ದಾಳೆ. ಅವಳ ಧೋರಣೆ ಅಕ್ಕನ ನಿಲುವಿಗೆ ವಿರುದ್ಧವಾದದ್ದಾಗಿ ಕಾಣುತ್ತದೆ. ಕೇವಲ ಅಕ್ಕ ಮಾತ್ರವಲ್ಲ, ಮುಕ್ತಾಯಕ್ಕನ ದುಃಖವನ್ನು ಕಟುವಾಗಿ ವಿಮರ್ಶಿಸುವ ವಚನಕಾರ್ತಿಯರೂ ಇದ್ದಾರೆ. ನಾವು ಇಂದು ಅಷ್ಟೊಂದು ಮೆಚ್ಚುವ ಅಕ್ಕ ಅಥವ ಮುಕ್ತಾಯಕ್ಕರನ್ನು ಏಕೆ ಸಮಕಾಲೀನ ವಚನಕಾರ್ತಿಯರು ನೆನೆಯುವುದೂ ಇಲ್ಲ, ಆದರೆ ಬಸವ ಮುಖ್ಯನಾಗಿ ಇತರ ಅನೇಕ ವಚನಕಾರರನ್ನು ಪ್ರೀತಿ ಭಕ್ತಿಗಳಿಂದ ಸ್ಮರಿಸುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ.

ಈ ಪ್ರಶ್ನೆಗೆ ಎರಡು ಸಮಾಧಾನಗಳಿರುವುದು ಸಾಧ್ಯ. ವಚನಕಾರ್ತಿಯರು ಬರೆದ ಎಲ್ಲ ವಚನಗಳೂ ಸಿಕ್ಕಿಲ್ಲ ಎಂದುಕೊಳ್ಳಬಹುದು. ಆದರೆ ಇದು ತೃಪ್ತಿಕರ ಉತ್ತರವಲ್ಲ. ಇನ್ನೊಂದು ಆ ಕಾಲದ ಸ್ತೀಯರ, ಸಾಮಾಜಿಕ ವಾಸ್ತವ ಪ್ರೇರಿತ ದೃಷ್ಟಿಕೋನ ಕಾರಣ ಎನ್ನಬಹುದು. ಅಕ್ಕ ತುಳಿದ ದಾರಿ ಎಲ್ಲ ಲೌಕಿಕ ಮಹಿಳೆಯರಿಗೆ ಆದರ್ಶವಾಗುವುದು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಿರಬಹುದೆ? ಅಥವ ಎಲ್ಲ ವಚನಕಾರ್ತಿಯರ ರಚನೆಗಳಲ್ಲಿ ವ್ರತ, ನೇಮ ಪೂಜೆಗಳೇ ಬಹುಭಾಗ ಆಕ್ರಮಿಸಿರುವುದನ್ನು ಕಂಡರೆ ಮಹಿಳೆಯ ಆಧ್ಯಾತ್ಮಿಕ ಸಾಧನೆಗೆ ಪುರುಷ ದೃಷ್ಟಿಕೋನ ಕೆಲವು ಮಿತಿಗಳನ್ನು ವಿಧಿಸಿತ್ತೆಂದು ಊಹಿಸಬಹುದೆ? ನಿಸ್ಸೀಮರಾಗುವುದು, ಬಯಲನ್ನು ಗಳಿಸುವುದು, ಇತ್ಯಾದಿ ಆಧ್ಯಾತ್ಮಿಕ ಎತ್ತರಗ್‌ಳೆಲ್ಲ ಪುರುಷರಿಗಷ್ಟೆ, ಪುರುಷ ಮನೋಧರ್ಮಕ್ಕಷ್ಟೆ ಸಾಧ್ಯ ಎಂಬ ಮನೋಧರ್ಮ ಕೆಲಸಮಾಡಿದೆಯೇ?

ಈ ಪ್ರಶ್ನೆಗಳು ಆಧ್ಯಾತ್ಮಿಕ ಪ್ರಶ್ನೆಗಳಲ್ಲ, ಸಾಮಾಜಿಕ ಪ್ರಶ್ನೆಗಳು. ಬಹುಶಃ ಅಕ್ಕ ಕೂಡ ಆಧ್ಯಾತ್ಮಿಕತೆಯ ಈ ಪುರುಷ ಪ್ರಾಧಾನ್ಯವನ್ನು ಒಪ್ಪಿಕೊಂಡಿರಬಹುದು ಎಂಬ ಭಾವ ಅವಳ ಕೆಲವು ವಚನಗಳನ್ನು ಓದಿದಾಗ ಬರುತ್ತದೆ. “ನಾಮದಲ್ಲಿ ಹೆಂಗೂಸೆಂಬ ಹೆಸರಾದರೇನು, ಭಾವಿಸಲು ಗಂಡುರೂಪು,” “ಮುಂಗೈಯಲ್ಲಿ ವೀರಗಂಕಣವನಿಕ್ಕಿ, ಮುಂಗಾಲಲ್ಲಿ ತೊಡರುಬಾವುಲಿಯ ಕಟ್ಟಿದೆ, ಗಂಡುಡಿಗೆಯನ್ನುಟ್ಟೆನೆಂಬ ಮಾತಿನ ಬಿರಿವ ನುಂಗಿದೆನು”, ಎಂಬಂಥ ಮಾತುಗಳು ಮತ್ತು ಅಘಟಿತ ಘಟಿತನ ಒಲವಿನ ಶಿಶು ಎಂದು ಆರಂಭವಾಗುವ ಅಕ್ಕನ ವಚನ ಇವನ್ನು ಈ ಮಾತಿಗೆ ನಿದರ್ಶನವಾಗಿ ನೋಡಬಹುದು (ಶಿವ ಶರಣೆಯರ ವಚನಗಳು, ಕರ್ನಾಟಕ ಸಂಸ್ಕೃತಿ ಇಲಾಖೆ, ಸಂ.ವೀರಣ್ಣ ರಾಜೂರ, ಕ್ರಮವಾಗಿ ವಚನ ಸಂಖ್ಯೆ ೧೩೦, ೨೨೮ ಮತ್ತು ೧೨)

ಅನುಭಾವವೆಂಬುದು ಕಾಲವೆಂಬ ಕಲ್ಪನೆಯನ್ನು ಮೀರುವ ಅಪೇಕ್ಷೆ, ಅದೊಂದು ಕಾಲಾತೀತ ಸ್ಥಿತಿ; ಆದರೆ ಅದನ್ನು ಭಾಷೆಯಲ್ಲಿ ವ್ಯಕ್ತಪಡಿಸಿದಾಗ ಕಾಲಧರ್ಮ, ಕಾಲಧರ್ಮವು ರೂಪಿಸುವ ಸಾಮಾಜಿಕ ಮಾನಸಿಕ ಮನ್ಧರ್ಮಗಳಿಗೆ ಒಳಪಡದೆ ವಿಧಿಯಿಲ್ಲ. ಅಕ್ಕನ ಸಮಕಾಲೀನ ವಚನಕಾರರು ಅವಳ ಆನುಭಾವಿಕತೆಯನ್ನು ಮೆಚ್ಚಿದರೂ ಸಮಕಾಲೀನ ಶರಣೆಯರು ಅಕ್ಕನ ಬಗ್ಗೆ, ಮತ್ತು ತಮ್ಮ ಇತರ ಒಡನಾಡಿ ವಚನಕಾರ್ತಿಯರ ಬಗ್ಗೆ ಮೌನವಹಿಸಿರುವುದು; ಅಕ್ಕನಲ್ಲಿ ಮತ್ತು ಇತರ ವಚನಕಾರ್ತಿಯಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುವ ಪೌರುಷ ಮನೋಧರ್ಮ ಇವನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ. ಅಕ್ಕನ ವಚನಗಳನ್ನು ಈಗ ನಡೆದಿರುವುದಕ್ಕಿಂತ ಇನ್ನೂ ಹೆಚ್ಚು ವಿವರವಾಗಿ ಅಕ್ಕನೇ ರೂಪಿಸಿಕೊಂಡಿರುವ ಪರಿಣಾಮಿ, ಧಾವತಿ, ಮುಂತಾದ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ, ಆಕೆ ಬಳಸುವ ಹೋಲಿಕೆ ರೂಪಕಗಳಿಗು ತಾತ್ವಿಕ ವಿಚಾರಗಳಿಗೂ ಇರುವ ಸಂಬಂಧವನ್ನು ಅನುಲಕ್ಷಿಸಿಕೊಂಡು ಪರಿಶೀಲಿಸುವುದು ಅಗತ್ಯವಾಗಿದೆ. ಅದು ಇನ್ನೊಂದೇ ವಿಸ್ತೃತ ಅಧ್ಯಯನ ವಸ್ತುವಾಗುತ್ತದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.