೧೯೯೭ ನವೆಂಬರ್ನಲ್ಲಿ ಬೆಂಗಳೂರಲ್ಲಿ ನಡೆಸಬೇಕೆಂದಿರುವ ‘ಜಾಗತಿಕ ಸೌಂದರ್ಯ ಸ್ಪರ್ಧೆ’ಯನ್ನು ನಾವು ಎರಡು ನೆಲೆಗಳಲ್ಲಿ ಪ್ರತಿಭಟಿಸಬೇಕಾಗಿದೆ. ಮೊದಲನೆಯದಾಗಿ, ನಮ್ಮ ಸರ್ಕಾರವು ಈ ಕಾರ್ಯಕ್ರಮದ ಜೊತೆ ಶಾಮೀಲಾಗಿ ಅದಕ್ಕೆ ಕುಮ್ಮಕ್ಕು ಕೊಡುತ್ತಿರುವುದು ದೊಡ್ದ ತಪ್ಪು; ಅದಕ್ಕಾಗಿ ಸರ್ಕಾರವನ್ನು ಖಂಡಿಸಿ ಮಣಿಸಬೇಕಾಗಿದೆ. ಎರಡನೆಯದಾಗಿ ‘ಸೌಂದರ್ಯ ಸ್ಪರ್ಧೆ’ಯೆಂಬ ಈ ವಿಶ್ವ – ವಾಣಿಜ್ಯ ಚಟುವಟಿಕೆಯು ಪ್ರಸ್ತುತದಲ್ಲಂತೂ ನಮಗೆ ಅಪಾಯಕಾರಿ; ಅದಕ್ಕಾಗಿ ನಾವು ನಮ್ಮಲ್ಲೇ ನಮ್ಮ ಅಂತರಂಗದಲ್ಲೇ ಇದ್ದಿರಬಹುದಾದ ಅಲ್ಪಚಪಲವನ್ನು ಸ್ವತಃ ಪ್ರತಿಭಟಿಸಿಕೊಂಡು ಗೆದ್ದುಕೊಳ್ಳಬೇಕಾಗಿದೆ.
ಖಾಸಗಿ ವಿಶ್ವವಾಣಿಜ್ಯಕೂಟವೊಂದು ವ್ಯಾಪಾರ ಪ್ರವರ್ತನೆಯ ಸಾಧನವಾಗಿ ಯೋಜಿಸಿರುವ ಈ ಸ್ಪರ್ಧೆಯನ್ನು ಭಾರತದಲ್ಲಿ ಅಂಥದೇ ಒಂದು ಖಾಸಗಿ ಸಂಸ್ಥೆಯು ಮೂವತ್ತು ಕೋಟಿ ರೂಪಾಯಿಗಳಿಗೆ ವ್ಯಾಪಾರ ಗುತ್ತಿಗೆ ಹಿಡಿದು ನಡೆಸಲಿದೆ. ಈ ಗುತ್ತಿಗೆದಾರರು ಅದರ ಪ್ರಚಾರಕ್ಕಾಗಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಬೇಕೆಂದಾಗ, ಸರ್ಕಾರಕ್ಕೆ ಅಥವಾ ಪ್ರಜಾಸಮುದಾಯಕ್ಕೆ ಯಾವುದೇ ನೇರ ಸಂಬಂಧವಿಲ್ಲದ ಈ ಚಿಲ್ಲರೆ ವ್ಯವಹಾರಕ್ಕೆ ರಾಜಧಾನಿಯ ರಾಜ್ಯ ಶಕ್ತಿಕೇಂದ್ರವೆಂಬಂತಿರುವ ವಿಧಾನಸೌಧದಲ್ಲಿ ಅವಕಾಶವನ್ನು ಒದಗಿಸಿಕೊಡಲಾಯಿತು. ಈ ಹಿಂದೆ ಯಾವತ್ತೂ ವಿಧಾನಸೌಧದ ಸಭಾಂಗಣವನ್ನು, ಇಂಥ ಖಾಸಗಿ ಅಪ್ರಸ್ತುತ ಕಾರ್ಯಕ್ರಮವಿರಲಿ, ಕನ್ನಡ ಸಾಹಿತ್ಯ ಪರಿಷತ್ತಿನಂಥ ನಮ್ಮದೇ ಒಂದು ಉನ್ನತ ಸಂಸ್ಥೆಯ ಕಾರ್ಯಕ್ರಮಕ್ಕೆ ಕೂಡಾ ಒದಗಿಸಿಕೊಟ್ಟಿದ್ದಿಲ್ಲ. ಇದರ ಮೇಲೆ, ನಮ್ಮ ರಾಜ್ಯಗೌರವದ ಪ್ರತಿನಿಧಿಗಳಾದ ಮುಖ್ಯಮಂತ್ರಿಗಳೇ ಆ ಪತ್ರಿಕಾಗೋಷ್ಠಿಯಲ್ಲಿ ಖುದ್ದಾಗಿ ಹಾಜರಿದ್ದು ಈ ಚಟುವಟಿಕೆಯನ್ನು ಬಾಯ್ತುಂಬಿ ತುಳುಕುವಷ್ಟು ಹೊಗಳಿ ಅದಕ್ಕೆ ಸರ್ಕಾರದ ಮುಕ್ತ ಸಹಾಯ ಸಹಕಾರಗಳನ್ನು ಘೋಷಿಸಿದರು.
ಎರಡು ವರ್ಷ ಮಿಕ್ಕು ಆಡಳಿತ ನಡೆಸಿರುವ ನಮ್ಮ ಈ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡ ಆಶ್ವಾಸನೆಗಳಲ್ಲಿ ಯಾವುದೊಂದನ್ನೂ, ಕಿಂಚಿತ್ತಾದರೂ ಸಾಧಿಸಲಿಕ್ಕೆ ಸಾಧ್ಯವಾಗದೆ ನಿಷ್ಕ್ರಿಯವಾಗಿದೆ. ನಮ್ಮ ರಾಜಕಾರಣದ ಬಹುಮೌಲಿಕ ಸಂಗತಿಯಾದ ಪಂಚಾಯತಿ ರಾಜ್ಯ ಪ್ರವರ್ತನೆಯ ಸಂಬಂಧದಲ್ಲಿ ಈ ಸರ್ಕಾರವೂ ಇನೂ ಸಮಿತಿ – ವರದಿ – ಸಲಹೆಗಳೆಂದು ತೊದಲುತ್ತ ದಿವ್ಯ ನಿರ್ಲಕ್ಷ್ಯದಲ್ಲಿ ದಿನ ಕಳೆಯುತ್ತಿದೆ. ತನ್ನದೇ ಪಕ್ಷದ ಸರ್ಕಾರವು ಹಿಂದೆ ಜಾರಿಗೆ ಕೊಟ್ಟು ಇಡೀ ರಾಷ್ಟ್ರದಲ್ಲೇ ಗಣ್ಯವೆನಿಸಿದ್ದ ಮತ್ತು ಕಾರ್ಯತಃ ಯಶಸ್ಸು ಕಂಡಿದ್ದ ಪಂಚಾಯತಿ ರಾಜ್ಯ ವ್ಯವಸ್ಥೆಯನ್ನು ಮುಂದೆ ಬಂದ ಸರ್ಕಾರವು ರದ್ದುಗೊಳಿಸಿತಷ್ಟೆ? ಈಗಿನ ಸರ್ಕಾರವು ಆ ಹಿಂದಿನ ವ್ಯವಸ್ಥೆಯನ್ನು ಇದ್ದುದಿದ್ದ ಹಾಗೆಯೇ ಆದರೂ ಪುನಃ ಜಾರಿಗೊಳಿಸುವಂತೆ ಒಂದು ಸುಲಭ ನಿರ್ಧಾರ ಕೈಗೊಂಡಿದ್ದರೂ ದೊಡ್ಡ ಕೆಲಸ ಮಾಡಿದಂತಾಗುತ್ತಿತ್ತು. ಅದನ್ನೂ ಮಾಡಲಿಲ್ಲ. ಇಂಥ ಸಂದರ್ಭದಲ್ಲಿ, ಅಪ್ರಸ್ತುತವೂ ಅಸಂಬದ್ಧವೂ ಮಾದ ‘ಸೌಂದರ್ಯ ಸ್ಪರ್ಧೆ’ಯಂಥ ಮೋಜಿನ ಕಾರ್ಯಕ್ರಮ ಕುರಿತು ಈ ಸರ್ಕಾರವು ಅಪರೂಪವಾದ ಉತ್ಸಾಹವನ್ನಿ ವಿಜೃಂಭಿಸತೊಡಗಿದರೆ ಜನರು ಏನೆಂದು ಭಾವಿಸಬೇಕು? ತನ್ನ ನಿಷ್ಕ್ರಿಯತೆಯನ್ನು ಮುಚ್ಚಿಹಾಕಿ, ಜನರ ಗಮನವನ್ನು ಮತ್ತಾವೊದೋ ಚಿಲ್ಲರೆ ಲೋಭದ ಕಡೆಗೆ ಸೆಳೆದು, ತನ್ನನ್ನು ತತ್ಕಾಲ ಬಚಾವು ಮಾಡಿಕೊಳ್ಳಲಿಕಾಗಿ ಸರ್ಕಾರವು ಈ ಕಚಗುಳಿ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದೇ ಜನರು ಭಾವಿಸುತ್ತಾರೆ.
ಕೊಜೆಂಟ್ರಿಕ್ಸ್ ಸ್ಥಾವರವೇ ಮುಂತಾದ ಹತ್ತಾರು ಮುಖ್ಯ ವಿಷಯಗಳಿಗೆ – ಜನರ ಬದುಕು ಸಾವಿನ ಪ್ರಶ್ನೆಗಳಿಗೆ – ಸಂಬಂಧಿಸಿ ವ್ಯಾಪಕ ಪ್ರತಿಭಟನೆಗಳು ನಡೆದವು. ಕೃಷ್ಣಾ ಅಣೆಕಟ್ಟು ವಿವಾದ, ಕಾವೇರಿ ನೀರಿನ ಪ್ರಶ್ನೆ ಮುಂತಾದವುಗಳಿಗೆ ಸಂಬಂಧಿಸಿ ಏನು ನಡೆದಿದೆಯೆನ್ನುವುದು ತಿಳಿಯದೆಯೇ ಜನರು ಕತ್ತಲಲ್ಲಿ ತಲ್ಲಣಿಸುತ್ತಿದ್ದಾರೆ. ಈ ಯಾವ ಸಂಗತಿಯ ಬಗ್ಗೆಯಾಗಲಿ, ಸರ್ಕಾರದ ವತಿಯಿಂದ ವಿವರಣೆ ಸಮಾಧಾನಗಳನ್ನು ಒದಗಿಸಬೇಕು ಎನ್ನುವ ಜವಾಬ್ದಾರಿಯು ನಮ್ಮ ಸರ್ಕಾರದ ಅರಿವಿಗೆ ಬರಲೇ ಇಲ್ಲ. ನಿಜವಾಗಿ, ಆ ಸಂಗತಿಗಳ ಬಗ್ಗೆ ನಮ್ಮ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಕರೆದು ಜನಕ್ಕೆ ಸೂಕ್ತ ವಿವರಣೆಗಳನ್ನು ನೀಡಬೇಕಿತ್ತು. ನಮ್ಮ ಸರ್ಕಾರವು ಒಂದು ಕಡೆ ಅಕರ್ತವ್ಯದ ದೋಷಕ್ಕೆ ಪಕ್ಕಾಗಿದೆ, ಇನ್ನೊಂದು ಕಡೆ ನಿಜ – ಕರ್ತವ್ಯದ ಲೋಪಕ್ಕೆ ಇಳಿದುಕೊಂಡಿದೆ.
ಜನಸರ್ಕಾರವು ಸದಾ ಪಾರದರ್ಶಕವಾಗಿ ಕಾಣಿಸಿಕೊಳ್ಳಬೇಕಾದ್ದು ಅಗತ್ಯವೆಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಸರ್ಕಾರವನ್ನು ಹೊಸದಾಗಿ ರಚಿಸಿರುವ ಜನತಾದಲ ಪಕ್ಷವು ಪಾರದರ್ಶಕ ಸರ್ಕಾರವನ್ನು ನೀಡುವುದನ್ನು ತಾನೇ ತನ್ನ ಪ್ರಣಾಳಿಕೆಯಲ್ಲಿ ಜನತೆಗೆ ವಚನಕೊಟ್ಟಿದೆ. ಈ ಸೌಂದರ್ಯಸ್ಪರ್ಧೆಯ ಸಂಬಂಧದಲ್ಲಿ ಸರ್ಕಾರವು ಪಾರದರ್ಶಕತೆಯೆಂಬ ಸಂಗತಿಯನ್ನೇ ಮರೆತುಬಿಟ್ಟಿದೆ. ಬದಲು, ಜನರಲ್ಲಿ ಅನೇಕ ಸಂದೇಹಗಳನ್ನೂ ತವಕವನ್ನೂ ಉಂಟುಮಾಡಿದೆ. ಸೌಂದರ್ಯಸ್ಪರ್ಧೆಯ ಇಲ್ಲಿನ ಪ್ರವರ್ತಕ ಸಂಸ್ಥೆಗೆ ಯಜಮಾನರಾದ ಅಮಿತಾಬ್ ಬಚ್ಚನ್ ಪಾರದರ್ಶಕ ವ್ಯಕ್ತಿತ್ವವುಳ್ಳವರಲ್ಲ. ಅವರ ಮತ್ತು ಅವರ ಸಹೋದರರ ಹೆಸರು ಬೊಫೋರ್ಸ್ ಹಗರಣದಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿತ್ತು. ಅದರಲ್ಲಿ ಸತ್ಯಾಸತ್ಯತೆಗಳೇನೆಂಬುದು ಇನ್ನೂ ತೀರ್ಮಾನವಾಗಿ ತಿಳಿದಿಲ್ಲ. ಇದೇ ಈಗ ಬೋಫೋರ್ಸ್ ರಹಸ್ಯ ದಾಖಲೆಗಳು ಭಾರತ ಸರ್ಕಾರಕ್ಕೆ ಲಭ್ಯವಾಗಲಿವೆ. ಆ ವಿವರಗಳು ಪ್ರಕಟವಾಗುವ ತನಕ ಅಮಿತಾಭರ ಹೆಸರಿನ ಸುತ್ತ ಸಂದೇಹಗಳಿದ್ದೇ ಇರುತ್ತವೆ.
ಇದಲ್ಲದೆ, ಬೆಂಗಳೂರು ಪತ್ರಿಕಾಗೋಷ್ಠಿಗೆ ಕೆಲವೇ ದಿನ ಮುಂಚೆ, ನಮ್ಮ ಪ್ರಧಾನಿಗಳು ಸ್ವತಃ ಹೋಗಿ ಅವರ ನಿವಾಸದಲ್ಲಿ ಭ್ಟ್ಟಿಯಾಗಿದ್ದರು, ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಅದೇ ಸಂದರ್ಭದಲ್ಲಿ ಮುಂಬೈನ ಶಿವಸೇನೆಯ ಮುಖ್ಯಸ್ಥ, ವಿವಾದಾಸ್ಪದ ವ್ಯಕ್ತಿ ಬಾಳಾಠಾಕರೆ ಕೂಡ ಹಾಜರಿದ್ದರು. ಈ ಸಮ್ಮಿಲನದ ಬಗ್ಗೆ ದೇಶಾದ್ಯಂತ ಬಹಳ ಸಂಶಯಗಳೆದ್ದಿದ್ದವು ಮತ್ತು ಆ ಬಗೆಗಿನ ಸಂದೇಹಗಳು ಸಂಪೂರ್ಣವಾಗಿ ನಿವಾರಣೆಯಾಗಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ, ಅನೇಕ ಸಂಶಯಗಳಿಗೆ ಮೂಲವಾಗಿರುವ ಅಮಿತಾಭರ ಜತೆ ನಮ್ಮ ಸರ್ಕಾರವು ಅದಾವ ಬಗೆಯ ಸಂಬಂಧವನ್ನು ಏರ್ಪಡಿಸಿಕೊಂಡಿತು ಅಂತ ಜನರು ಸಹಜವಾಗಿಯೇ ಶಂಕಿತರಾಗುತ್ತರೆ. ಸರ್ಕಾರಕ್ಕೆ ಪಾರದರ್ಶಕವಾಗಿರಬೇಕೆನ್ನುವ ಆಸ್ಥೆಯಿದ್ದರೆ ಅದು ಇಂಥ ಶಂಕಾಸ್ಪದ ವ್ಯವಹಾರಗಳಿಗೆ ಅವಕಾಶ ಕೊಡಬಾರದಿತ್ತು; ಅಮಿತಾಭರ ಪತ್ರಿಕಾಗೋಷ್ಠಿಯನ್ನಾಗಲೀ, ಸ್ಪರ್ಧಾ ಚಟುವಟಿಕೆಗಳಲ್ಲಾಗಲೀ ತಾನಂತೂ ಖಂಡಿತವಾಗಿ ಪಾಲುಗೊಳ್ಳದೆ ಉಳಿಯಬೇಕಿತ್ತು.
ಇಷ್ಟಾದಮೇಲೆ, ರಾಜ್ಯದ ಎಲ್ಲಾ ಕಡೆಗಳಿಂದ ಪ್ರತಿಭಟನೆಗಳು ವ್ಯಕ್ತವಾದಾಗ ನಮ್ಮ ಮುಖ್ಯಮಂತ್ರಿಗಳು ಜವಾಬ್ದಾರಿಯುತವಾಗಿ ಸಮಜಾಯಿಷಿ ಮತ್ತು ನಿಜವಿವರಗಳನ್ನು ಕೊಡುವ ಬದಲು ತಮಾಷೆಯಾಗಿ ವ್ಯಂಗ್ಯವಾಗಿ ಲೇವಡಿಯ ಮಾತುಗಳನ್ನಾಡಿದರು. ಜನಕ್ಕೆ ಜವಾಬ್ದಾರರಾಗಿರುವ, ಜನಸರ್ಕಾರದ ಮುಖ್ಯರು ಹೀಗೆ ಮಾಡಿದ್ದು ದೊಡ್ಡ ಪ್ರಮಾದ. ಅವರು ತಮ್ಮ ದೃಷ್ಟಿಕೋನವನ್ನು ಗಂಭೀರ ಮಾತುಗಳಲ್ಲಿ ವಿವರಿಸಿ ಹೇಳಬಹುದಿತ್ತು. ಆದರೆ, ಅಂತಿಮವಾಗಿ ಜನರ ಆದೇಶವನ್ನು ಶಿರಸಾ ಪಾಲಿಸಬೇಕಾದ್ದು ಅವರ ಅನಿವಾರ್ಯ ಕರ್ತವ್ಯ. ಇಷ್ಟರಮೇಲೆ, ಜನರ – ಅವಿದ್ಯೆ – ಅವಿವೇಕ – ಅಸಂಸ್ಕೃತಿಗಳೇ ಈ ಪ್ರತಿಭಟನೆಗೆ ಕಾರಣ ಅಂತ ಅವರು ಪ್ರಾಮಾಣಿಕವಾಗಿಯೇ ನಂಬುತ್ತಾರೆ ಎನ್ನೋಣ. ಆಗ ಏನು ಮಾಡಬೇಕು? ಆಗಲೂ ಅವರು ತಮ್ಮ ಅಭಿಪ್ರಾಯವನ್ನು ತಮ್ಮಲ್ಲಿ ಕಾಪಾಡಿಕೊಂಡು, ಜನರ ಆದೇಶಕ್ಕೆ ತಲೆಬಾಗಬೇಕು. ಜನರನ್ನು – ವಿದ್ಯಾವಂತ – ವಿವೇಕಿ – ಸುಸಂಸ್ಕೃತರನ್ನಾಗಿಸಲೇಬೇಕೆಂಬ ನಿಜವಾದ ಹಟವೇ ಇದ್ದರೆ, ಆಗ ಅವರು ತಮ್ಮ ಪಕ್ಷದ ವೇದಿಕೆಗಳ ಮೂಲಕವಾಗಿ ಅಂಥ ಜನಶಿಕ್ಷಣ ಕಾರ್ಯಕ್ರಮವನ್ನು ಕೈಗೊಳ್ಳಬಹುದು. ಮುಖ್ಯಮಂತ್ರಿಯಾಗಿ ಅವರು ಜನಾದೇಶಕ್ಕೆ ಬಾಗದೆ ಬೇರೆ ದಾರಿಯಿಲ್ಲ. ಅದನ್ನು ಬಿಟ್ಟು ಜನಾದೇಶವನ್ನು ಕಡೆಗಣಿಸುತ್ತೇನೆ ಮತ್ತು ಜನರಿಗೆ ಬುದ್ಧಿ ಹೇಳುತ್ತೇನೆ ಅಂತ ಹೊರಟರೆ ಅದು ಪ್ರಜಾಪ್ರಭುತ್ವದ ಧಿಕ್ಕರವಾಗುತ್ತದೆ; ಜನಧಿಕಾರವನ್ನು ಸ್ವಯಮಾಧಿಕಾರವಾಗಿ ಮಾರ್ಪಡಿಸಿಕೊಳ್ಳುವ ಮಹಾವಂಚನೆಯಾಗುತ್ತದೆ.
ಒಟ್ಟಿನಲ್ಲಿ, ನಮ್ಮ ಸರ್ಕಾರವು ಈ ಖಾಸಗಿ ಮತ್ತು ತನಗೆ ಅಸಂಗತವಾದ ಕಾರ್ಯಕ್ರಮದಲ್ಲಿ, ಯಾವುದೇ ಹಂತದಲ್ಲೂ ಎಷ್ಟೇ ಕಿಂಚಿತ್ತಾದರೂ ಪಾಲ್ಗೊಳ್ಳುವುದು ಪ್ರಮಾದವೇ. ಸರ್ಕಾರವು ಇಲ್ಲಿ ಸಾಮಾನ್ಯವಾಗಿ ತಟಸ್ಥವಾಗಿರಬೇಕು ಮತ್ತು ಜನತೆಯು ಈ ಕಾರ್ಯಕ್ರಮದ ವಿರುದ್ಧ ಅಹಿಸಾತ್ಮಕ ಸಾರ್ವಜನಿಕ ಪ್ರತಿಭಟನೆಯನ್ನು ನಡೆಸುತ್ತದೆಯೆಂದಾದರೆ, ಆಗ ಸರ್ಕಾರವು ಅಹಿಸಾತ್ಮಕ ಪ್ರತಿಭಟನಾಕಾರರ ಬಗ್ಗೆಯೇ ಸಹೃದಯತೆಯನ್ನು ತೋರಿಸಬೇಕು. ಇದು ಪ್ರಜಾಪ್ರಭುತ್ವದ ದಾರಿ.
ಇನ್ನು, ಎರಡನೆಯ ನೆಲೆಯಲ್ಲಿ ನಾವು ‘ಸೌಂದರ್ಯಸ್ಪರ್ಧೆ’ಯೆಂಬ ಈ ಕಲ್ಪನೆ – ಕಾರ್ಯಕ್ರಮವನ್ನೇ ಮೂಲತಃ ವಿರೋಧಿಸಬೇಕು. ಆ ಬಗ್ಗೆ ನಮ್ಮಲ್ಲೇ ಇರಬಹುದಾದ ದ್ವಂದ್ವ ಶಂಕೆಗಳನ್ನು ನಿವಾರಿಸಿಕೊಳ್ಳಬೇಕು. ಏಕೆಂದರೆ – ಮೊದಲನೆಯದಾಗಿ, ಇದು ಆರ್ಥಿಕ ಶೋಷಣೆಯ ಸಾಧನವಾಗಿದೆ; ಎರಡನೆಯದಾಗಿ ಇದು ಸಾಂಸ್ಕೃತಿಕ ವಿನಾಶಕ್ಕೆ ಕಾರಣವಾಗುತ್ತದೆ.
ಈ ‘ಜಾಗತಿಕ ಸೌಂದರ್ಯಸ್ಪರ್ಧೆ’ಯೆನ್ನುವುದು ಪ್ರಸ್ತುತದಲ್ಲಿ, ಅಂತರಾಷ್ಟ್ರೀಯ ವಾಣಿಜ್ಯ ವಂಚನೆಯ ಆಕ್ರಮಣ ರಾಜಕಾರಣದ ಕಡುಪಿನ ರೇಸಿಮೆಬಲೆಗಳಲ್ಲಿ ಒಂದಾಗಿದೆ. ಸುಮಾರು ನಲವತ್ತು ವರ್ಷಗಳ ಹಿಂದೆ ಇದು ಬಿಳಿಯರ ರಾಷ್ಟ್ರದಲ್ಲಿ ಒಂದು ಮೋಜಿನ ಚಟುವಟಿಕೆಯಾಗಿ ಪ್ರಾರಂಭವಾಯ್ತು. ಬಹುಕಾಲ ಇದು ಬಿಳಿಯರ ರಾಷ್ಟ್ರಗಳಲ್ಲೇ ವಿಸ್ತರಿಸಿಕೊಳ್ಳುತ್ತ ಅಲ್ಲೇ ಕೇಂದ್ರೀಕೃತವಾಗಿತ್ತು. ಈಚಿನ ಹತ್ತಾರು ವರ್ಷಗಳಲ್ಲಿ ಅದು ಇದ್ದಕ್ಕಿದ್ದಂತೆ ಬಣ್ಣವಂತ ರಾಷ್ಟ್ರಗಲ ಕಡೆಗೆ ಕೇಂದ್ರೀಕೃತವಾಗತೊಡಗಿದೆ. ನಡೆಸುವವರು ಅಲ್ಲಿನವರೇ, ನಡೆಯುವುದು ಈಚೆಗೆ ಹೆಚ್ಚಾಗಿ ಈ ದಕ್ಷಿಣ ಗೋಲದ ರಾಷ್ಟ್ರ ಕೇಂದರಗಳಲ್ಲಿ. ಮೊದಲು ಸೌಂದರ್ಯ ಪ್ರಶಸ್ತಿಯೆಂಬುದು ಕೇವಲ ಬಿಳಿಯರಿಗೆ ಮಾತ್ರ ಮೀಸಲೆಂಬಂತೆ ಸಲ್ಲಿತ್ತಿತ್ತು. ಈಚಿನ ವರ್ಷಗಳಲ್ಲಿ ಅದು ಹೆಚ್ಚಾಗಿ ಬಣ್ಣವಂತರಿಗೆ ಸಲ್ಲತೊಡಗಿದೆ. ಯಾಕೆ? ಈಚಿನ ವರ್ಷಗಳಲ್ಲಿ ದಕ್ಷಿಣಗೋಲದ ಬಡಬಣ್ಣವಂತ ಜನಾಂಗಗಳಲ್ಲೇ ವಿಶ್ವಸೌಂದರ್ಯದ ಅವಿರ್ಭಾವವಾಗುತ್ತಿದೆಯೆಂದು ತಿಳಿಯೋಣವೆ? ವಸ್ತುಸ್ಥಿತಿ ಅದಲ್ಲ, ಬೇರೆ. ಒಂದು ಅಂತಾರಾಷ್ಟ್ರೀಯ ತಜ್ಞ ಅಂದಾಜಿನಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ, ಈ ಬಡ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ವಿದೇಶಿ ಸೌಂದರ್ಯವರ್ಧಕ ಸರಕುಗಳ ಮಾರಾಟವು ಒಂದರಿಂದ ಮೂವತ್ತೆರಡು ಪಟ್ಟು ಹೆಚ್ಚಿದೆಯಂತೆ. ಇಂಥ ಮಾರಾಟದ ಉತ್ಕರ್ಷವನ್ನು ಸಾಧಿಸಿಕೊಳ್ಳಲಿಕ್ಕೆ ಸೌಂದರ್ಯಸ್ಪರ್ಧೆಯೆನ್ನುವುದು ಒಂದು ಸಾಧನವಾಗಿದೆ. ಅಂದರೆ, ಅನಗತ್ಯವಾದ ಸುಖಸರಕುಗಳನ್ನು ಇಲ್ಲಿಗೆ ಸಾಗಿಸಿ ಮಾರಾಟಮಾಡಿ ನಫೆಯನ್ನು ಕಮಾಯಿಸಿಕೊಳ್ಳಲು ಬಹುರಾಷ್ಟ್ರೀಯ ವಾಣಿಜ್ಯವು ಹಬ್ಬಿಸಿರುವ ಒಂದು ಮಾಯಾಜಾಲ ಇದು. ಇಂಥ ಸ್ಪರ್ಧೆಗಳಿಂದ ಬರುವ ಲಾಭಾಂಶದಲ್ಲಿ ದೊಡ್ಡಪಾಲನ್ನು ಜನಕಲ್ಯಾಣಕ್ಕೆ ದಾನ ಮಾಡುವುದೂ ಉಂಟು. ಇಂಥ ಕಾರುಣ್ಯದ ಕೊಕ್ಕೆಗಳೆಲ್ಲ ಅಂತಿಮವಾಗಿ ಲಾಭದ ಮೀನುಗಳನ್ನು ಸೆಳೆಯಲಿಕ್ಕೇ.
ನಮ್ಮ ಸರ್ಕಾರೀ ಆರ್ಥಿಕ ತಜ್ಞರು, ಯೋಜನಾ ಪರಿಣತರು ಉಪದೇಶ ಮಾಡುವ ಪ್ರಕಾರ, ವಿದೇಶಿ ಉದ್ಯಮ ಮತ್ತು ಬಂದವಾಳಗಳ ನೆರವಿಲ್ಲದಿದ್ದರೆ ನಮ್ಮಲ್ಲಿ ವಿದ್ಯುತ್ ಗಣಿಗಾರಿಕೆ ಮುಂತಾದ ಬೃಹತ್ ಉದ್ಯಮಗಳು ತುರ್ತಿನಲ್ಲಿ ಬೆಳೆಯುವುದಿಲ್ಲ; ಈ ಉದ್ಯಮಗಳು ತುರ್ತಿನಲ್ಲಿ ಬೆಳೆಯದೆ ಹೋದರೆ ನಮ್ಮ ದೇಶವು ಹಿಂದುಳಿಯುತ್ತ ಹಿಂದುಳಿಯುತ್ತ ನಾಶವಾಗಿ ಹೋಗುತ್ತದೆ. ಆಯ್ತು, ಇರಲಿ. ಬೃಹತ್ ಉದ್ಯಮಗಳೇ ಅಲ್ಲದೆ ವಿದೇಶಿ ಕೆಂಟುಕಿ ಚಿಕನ್, ಹಟ್ ಪಿಜ್ಜಾಗಳಿಗೂ ನಮ್ಮ ಸರ್ಕಾರಗಳು ಬಾಗಿಲು ತೆರೆದು ಸ್ವಾಗತಿಸಿ ಆನಂತರ ವಿಶೇಷ ರಕ್ಷಣೆಯನ್ನೊದಗಿಸಲು ಮುಂದಾಗುತ್ತವಲ, ಯಾಕೆ? ವಿದೇಶಿ ಚಿಕನ್ ಮತ್ತು ಪಿಜ್ಜಾಗಳಂತ ಅಲ್ಪಚಪಲಗಳಿಂದ ತೊಡಗದಿದ್ದರೆ ಜನರು ಸುಲಭಕ್ಕೆ ಸೋಲುವುದಿಲ್ಲ. ಮೊದಲು, ಗೊತ್ತಾಗದ ಹಾಗೆ ಸೂಜಿಮೊನೆಯಷ್ಟು ಎಡೆ ದೊರಕಿಸಿಕೊಳ್ಳಬೇಕು, ಆಮೇಲೆ ತಾನಾಗಿಯೇ ಸೋರಿನ ದಾರಿ ಸುಲಭವಾಗುತ್ತದೆ. ಇದನ್ನು ವಾಣಿಜ್ಯ ಲಾಭಕೋರರು ಬಲ್ಲರು. ನಮ್ಮ ಸರ್ಕಾರಗಳಿಗೂ ಅದನ್ನವರು ಮೊದಲಿಗೇ ಕಲಿಸಿಕೊಂಡಿರುತ್ತಾರೆ.
ಇನ್ನು ‘ಸಾಂಸ್ಕೃತಿಕ ವಿನಾಶ’ವೆಂಬ ಮಾತು. ಇದು ಕೊಂಚ ಸೂಕ್ಷ್ಮವಾದ ಅಮೂರ್ತವಾದ ಸಂಗತಿ. ನಾವೆಲ್ಲರೂ ಒಬ್ಬರಿಂದೊಬ್ಬರು ಭಿನ್ನರಾಗಿರುತ್ತೇವೆ. ಒಬ್ಬನಿದ್ದಂತೆ ಇನ್ನೊಬ್ಬನಿರುವುದಿಲ್ಲ. ದೇಹಾಕೃತಿ ಮಾತ್ರವಲ್ಲ, ಮನಸ್ಸು – ಭಾವ – ಬುದ್ಧಿ – ಚಿಂತನ ಇತ್ಯಾದಿ ಆಂತರಂಗಿಕ ಆಕೃತಿಗಳಲ್ಲೂ ನಾವು ಒಬ್ಬರಿಂದೊಬ್ಬರು ಭಿನ್ನರು, ಅನನ್ಯರು. ಹೀಗೆ ಒಂದೊಂದು ಸಮುದಾಯಕ್ಕೂ ಅದರದ್ದೇ ಆದ – ಅನನ್ಯವಾದ – ಬಹಿರಂಗ ಅಂತರಂಗ ಆಕೃತಿಗಳಿರುತ್ತವೆ. ಇದರಿಂದಲೇ ಒಬ್ಬೊಬ್ಬ ವ್ಯಕ್ತಿಯೂ ಅನಂತರ ಒಂದೊಂದು ಸ್ಥಳಸಮುದಾಯವೂ ರಾಜ್ಯ ರಾಷ್ಟ್ರ ಸಮುದಾಯಗಳೂ ವಿಶಿಷ್ಟವಾಗಿ ಅನನ್ಯವಾಗಿ ಕಾಣಿಸುತ್ತವೆ. ಈ ವಿಶಿಷ್ಟತೆಯೇ ನಮಗೆ – ವ್ಯಕ್ತಿಗಳಿಗೂ ಸಮುದಾಯಗಳಿಗೂ – ‘ನಾನು’ ಎಂಬ ಅಹಂತೆಯ ಅಭಿಜ್ಞಾನವನ್ನು, ಅನನ್ಯತೆಯ ವಿಶ್ವಾಸವನ್ನು ಮತ್ತು ಈ ಅಹಂ ಜ್ಞಾನಕ್ಕೆ ಹೊಂದಿ ಆತ್ಮಗೌರವವನ್ನೂ ಕೊಟ್ಟಿರುತ್ತದೆ. ಇಂಥ ‘ತನ್ನತನ’ ಮತ್ತು ಆತ್ಮಗೌರವದಿಂದಾಗಿ, ಯಾವುದೇ ವ್ಯಕ್ತಿ ಅಥವಾ ಸಮುದಾಯವು ತನ್ನಮೇಲೆ ಇನ್ನೊಂದು ವ್ಯಕ್ತಿ ಅಥವಾ ಸಮುದಾಯದ ಆಕ್ರಮಣವನ್ನು, ಆ ಮೂಲಕ ‘ತನ್ನತನ’ದ ವಿನಾಶವನ್ನು ಸಹಿಸಿಕೊಳ್ಳಲಾರದು. ಅದೇ ‘ಸ್ವಾತಂತ್ರ್ಯ’ವೆಂಬುದು. ಮತ್ತು ವಿವೇಕಿಯಾದವನು, ತನಗಿರುವ ವೈಶಿಷ್ಟ್ಯವೇ ಇನ್ನೊಬ್ಬನಿಗೂ ಇರುವುದನ್ನು ಪರಿಗಣಿಸಿಕೊಂಡು, ಆತನ ಸ್ವಾತಂತ್ರ್ಯ ಆತ್ಮಗೌರವಗಳನ್ನೂ ತನ್ನದರ ಹಾಗೇ ಗೌರವಿಸುತ್ತಾನೆ. ಇದೇ ‘ಸ್ವಾತಂತ್ರ್ಯ’ವೆಂಬುದಕ್ಕೆ ಅವಳಿಯಾಗಿರುವ ‘ಸಮಾನತೆ’ಯೆಂಬ ಕಲ್ಪನೆಯನ್ನು ಹುಟ್ಟಿಸಿಕೊಡುತ್ತದೆ. ಈ ಬಗೆಯ ‘ಸ್ವಾತಂತ್ರ್ಯ’ ಮತ್ತು ‘ಸಮಾನತೆ’ಗಳು ಹದಗೊಂಡಿರುವ ಸಮುದಾಯದಲ್ಲಿ ಜೀವನವು ‘ಸಮತ್ವ’ವುಳ್ಳದ್ದಾಗಿರುತ್ತದೆ. ಮೇಲೆ ಹೇಳಿದಂತೆ ವ್ಯಕ್ರಿಗೂ ಸಮುದಾಯಕ್ಕೂ ಇರುವ ಅನನ್ಯತೆಯಿಂದಾಗಿ, ಆದದ್ದು ರೂಪಿಸಿಕೊಳ್ಳುವ ಜೀವನಶೈಲಿಗಳೂ ವಿಶಿಷ್ಟವಾಗಿರುತ್ತವೆ. ಇಂಥ, ವಿಶಿಷ್ಟತೆಯಲ್ಲರಳಿದ ಅನನ್ಯ ಜೀವನಶೈಲಿಯನ್ನೇ ನಾವು ಸ್ಥೂಲವಾಗಿ ‘ಸಂಸ್ಕೃತಿ’ ಎನ್ನಬಹುದು.
ಒಬ್ಬನು ಇನ್ನೊಬ್ಬನ ಮೇಲೆ ಅಥವಾ ಒಂದು ಸಮುದಾಯವು ಇನ್ನೊಂದರ ಮೇಲೆ ಆಕ್ರಮಣ ಮಾಡಲು ಹೊರಟಾಗ ಅದಕ್ಕೆ ಪ್ರತಿಭಟನೆ ಬರುವುದು ಮೇಲೆ ಹೇಳಿದ ‘ಸ್ವಯಂಪ್ರಜ್ಞೆ’ ಮತ್ತು ‘ಆತ್ಮಗೌರವ’ (ಸ್ವಾತಂತ್ರ್ಯ)ಗಳಿಂದ. ನಾನು ವಿಶಿಷ್ಟ, ನನ್ನ ಸಮುದಾಯವು ವಿಶಿಷ್ಟ, ನನ್ನ ಸಂಸ್ಕೃತಿಯು ವಿಶಿಷ್ಟ ಎನ್ನುವಂಥ ನಂಬಿಕೆಯನ್ನು, ಅರ್ಥಾತ್ ಆತ್ಮಗೌರವ – ಸ್ವಾತಂತ್ರ್ಯದ ಪ್ರಜ್ಞೆಯನ್ನು ನಾಶಮಾಡಿದರೆ ಆಕ್ರಮಣಕ್ಕೆ ತಡೆಯೆಂಬುದಿರುವುದಿಲ್ಲ, ಆಕ್ರಮಣದ ದಾರಿ ಸುಗಮವಾಗುತ್ತದೆ.
ಜಡವಸ್ತುಗಳನ್ನು ಅಳೆದು ತೂಗಿ ಅದರ ಮೊತ್ತ ಮೊಬಲಗುಗಳನ್ನು ಕರಾರುವಕ್ಕಾಗಿ ಹೆಲಲು ಸಾಧ್ಯ ಅಂತ ನಾವು ತಿಳಿದಿದ್ದೇವೆ. ಅದೇ ರೀತಿ, ಮನುಷ್ಯನನ್ನೂ ಇಷ್ಟಿಷ್ಟು ರಕ್ತಮಾಂಸಮಜ್ಜೆ ಎಲುಬು ನರಚರ್ಮವೆಂದು ಮತ್ತು ಇಷ್ಟು ಅಂಕದ ಬುದ್ಧಿ (ಐ.ಕ್ಯು)ಯೆಂದು ಅಳೆದು ಹೇಳಬಹುದೆನ್ನುವ ನಂಬಿಕೆಯನ್ನು ನಾಟಿಸಲು ಸಾಧ್ಯವಾದರೆ ಮತ್ತು ಸತ್ಯ – ಶೌಚ – ಸೌಂದರ್ಯ ಇತ್ಯಾದಿ ಮೌಲ್ಯಗಳನ್ನು ಅಳೆಯಲಿಕ್ಕೆ ಬಾರದಂಥವು ‘ಸುಳ್ಳು’ ಎಂದೂ ವಿಶ್ವಾಸ ಹುಟ್ಟಿಸಲು ಸಾಧ್ಯವಾದರೆ, ಆಗ, ಅನನ್ಯತೆ – ಆತ್ಮಗೌರವ – ಸ್ವಾತಂತ್ರ್ಯಗಳೆಂಬುವಕ್ಕೆ ಅರ್ಥವಿರುವುದಿಲ್ಲ. ಆಕ್ರಮಣವಿರೋಧಿ ಶಕ್ತಿಗಳಾದ ಅವು ಮೂಲೋತ್ಪಾಟನಗೊಳ್ಳುತ್ತವೆ.
ಸತ್ಯ – ಶೌಚ – ಸೌಂದರ್ಯ ಇತ್ಯಾದಿಯಾಗಿ ಅನೇಕ ಮೌಲ್ಯಗಳನ್ನು ಹೇಳುತ್ತೇವಲ್ಲ, ಅವೆಲ್ಲವೂ ಸಂಸ್ಕೃತಿಯಲ್ಲಿಯ ಅಮೂರ್ತಗಳು. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಬದುಕಿನ ಸಂದರ್ಭದಲ್ಲಿ, ನಮ್ಮ ನಮ್ಮ ವಿಶಿಷ್ಟತೆಯಲ್ಲಿ ವಿಶಿಷ್ಟವಾಗಿ ಅದನ್ನು ಮೂರ್ತಗೊಳಿಸಿಕೊಳ್ಳಲು ಪ್ರಯತ್ನಿಸಿಕೊಳ್ಳುತ್ತ ಇರುತ್ತೇವೆ. ಅವುಗಳ ಅಂತಿಮ ಸಾಕ್ಷಾತ್ಕಾರವೆಂಬುದಿಲ್ಲ. ಅವು ಯಾವತ್ತೂ ಸಾಧಕನ ಆದರ್ಶಗಳು, ಯಾವತ್ತು ಕೂಡ ಸಿದ್ಧಿಗೊಂಡು ಸ್ಥಗಿತವಾಗುವಂಥದಲ್ಲ. ಈ ಆದರ್ಶಗಳೇ ಸಂಸ್ಕೃತಿಯ ಚಾಲಕಶಕ್ತಿಗಳು. ಅವುಗಳನ್ನು ಮೂರ್ತವಾಗಿ ಗ್ರಹಿಸಿ ಮಾಪನಮಾಡಬಲ್ಲೆವು ಎಂಬ ಸೊಕ್ಕು ಬೆಳೆದುಬಿಟ್ಟರೆ ಮುಂದೆ ಸಂಸ್ಕೃತಿಗೆ ಚಾಲನೆಯಿಲ್ಲ. ಅದು ಸ್ಥಗಿತಗೊಳ್ಳುತ್ತದೆ. ಅದೇ ಸಂಸ್ಕೃತಿಯ ವಿನಾಶ ಮತ್ತು ಪರ್ಯಾಯವಾಗಿ, ಆಕ್ರಮಣವಿರೋಧಿ ಶಕ್ತಿಗಳ ವಿನಾಶ.
‘ಸೌಂದರ್ಯಸ್ಪರ್ಧೆ’ಯೆನ್ನುವುದು ಇದೇ ಕೆಲಸವನ್ನು ಮಾಡಬಲ್ಲುದು. ‘ಸೌಂದರ್ಯ’ವೆಂಬುದು ಹದಿಹರೆಯದ (ವಯೋಮಿತಿಯ) ಹೆಣ್ಣಿನ ಅಳತೆ ತೂಕಗಲಲ್ಲಿ, ನುಡಿ ನಗೆ ನವಿರುಗಳ ಕರಾರುವಾಕ್ಕು ಮಾಪನದಲ್ಲಿ ಕೈಗೆ ಸಿಗುವ ವಸ್ತು ಮತ್ತು ಇಂಥ ಮಾಪನದಿಂದ ಯಾವಳಲ್ಲಿ ವಿಶ್ವದಲ್ಲೇ ಗರಿಷ್ಠ ಬೇರೇಜು ಮೊಬಲಗಿನ ಸೌಂದರ್ಯವುಂಟೆಂಬುದನ್ನು ಕರಾರುವಕ್ಕಾಗಿ ತೀರ್ಮಾನಿಸಲು ಸಾಧ್ಯ ಎಂದು ಈ ಸ್ಪರ್ಧೆಯು ನಮ್ಮನ್ನು ನಂಬಿಸುತ್ತದೆ; ಅಮೂರ್ತ ಆದರ್ಶಗಳೆಲ್ಲವನ್ನೂ ನಮ್ಮ ಮನಸ್ಸಿನಿಂದ ಗುಡಿಸಿ ಹೊರಗಾಕಿ ತಲೆಯನ್ನು ತೊಳೆದಿಡುತ್ತದೆ. ನಮ್ಮನ್ನು ಸುಲಭ – ಆಕ್ರಮಣ – ಸಾಧ್ಯರನ್ನಾಗಿ ಮಾಡುತ್ತದೆ.
ಸದ್ಯದ ಜಗತ್ತಿನಲ್ಲಿ ಆಕ್ರಮಣವೆಂಬುದು ಮುಖ್ಯವಾಗಿ ಇಮ್ಮೊಗವುಳ್ಳದ್ದು, ಒಂದು, ಅಧಿಕಾರಗಳಿಕೆಗಾಗಿ ನಡೆಸುವ ರಾಜಕೀಯ ಆಕ್ರಮಣ; ಇನ್ನೊಂದು, ಅರ್ಥಲಾಭಕ್ಕಾಗಿ ನಡೆಸುವ ವಾಣಿಜ್ಯ ಆಕ್ರಮಣ. ಪರರ ಅನನ್ಯತೆ ಸ್ವಾಭಿಮಾನ ಇತ್ಯಾದಿಗಲನ್ನು ನಾಶಪಡಿಸಿ ಪರರನ್ನು ತನ್ನತನಕ್ಕೆ ಗುಲಾಮರನ್ನಾಗಿಸಿಕೊಳ್ಳುವ ಮತ್ತು ಹಾಗೆ ವಶವಾಗುವ ಜನಗಳ ಮೇಲೆ ಪ್ರಭಾವ ಚೆಲ್ಲಿ ವ್ಯಾಪಕವಾಣಿಜ್ಯ ಜಾಲದ ಮೂಲಕ ಶೋಷಿಸಿ ಲಾಭವನ್ನು ಕಮಾಯಿಸಿಕೊಳ್ಳುವ – ಈ ಎರಡೂ ಬಗೆಯ ಆಕ್ರಮಣಗಳೂ ತಮ್ಮ ಕಾರ್ಯಸಾಧನೆಗಾಗಿ ಮೊದಲಿಗೆ, ವಿಶಿಷ್ಟತೆಯೆಂಬುದನ್ನು ನಾಶಮಾಡಲು ತೊಡಗುತ್ತವೆ. ಆನಂತರ ಎಲ್ಲವಕ್ಕೂ ಒಂದು ‘ಸರ್ವತ್ರಮಾಪನಸೂತ್ರ’ವನ್ನು ತಯಾರಿಸುತ್ತದೆ. ವಾಣಿಜ್ಯ ಅಥವಾ ಆರ್ಥಿಕ ಆಕ್ರಮಣವು ಮುಂದುವರಿದು, ಈ ಸರ್ವತ್ರಮಾಪನವನ್ನು ಅರ್ಥಮಾಪನಕ್ಕೆ ಪರಿವರ್ತಿಸುತ್ತದೆ. ಅಂದರೆ, ಭೌತವಸ್ತುಗಳಿರಲಿ ಅಮೂರ್ತ ಭಾವನೆ – ಚಿಂತನೆ – ಕಲ್ಪನೆಗಳಿರಲಿ ಎಲ್ಲವನ್ನೂ, ಇಂಥಿಂಥದಕ್ಕೆ ಇಷ್ಟು ಬೆಲೆ ಎಂದು, ಡಾಲರ್ – ಪೌಂಡ್ ರೂಪಾಯಿಗಳಲ್ಲಿ, ಬೆಲೆ ಕಟ್ಟಿಡುತ್ತದೆ. ಚಿಂತನೆ – ಭಾವನೆ – ಕಲ್ಪನೆ – ಭೌತವಸ್ತುಗಳ ಥರದಲ್ಲೇ ಮಾರಬಲ್ಲ ಮತ್ತು ಕೊಳ್ಳಬಲ್ಲ ‘ಸರಕು’ಗಳಾಗುತ್ತವೆ.
‘ಸ್ಪರ್ಧೆ’ಯೆಂಬ ಕಲ್ಪನೆಯ ಬಗ್ಗೆಯೂ ಕೊಂಚ ಆಲೋಚಿಸಬೇಕು. ಪರಸ್ಪರ ‘ಸ್ಪರ್ಧೆ’, ಅದರಲ್ಲಿ ಗೆಲ್ಲುವುದು ಎನ್ನುವುದರಿಂದಲೇ ‘ಪ್ರಗತಿ’ಯುಂಟಾಗುತ್ತದೆ ಎನ್ನುವುದು ಬಹುಶಃ ಆಧುನಿಕ ಪಾಶ್ಚಿಮಾತ್ಯ ವೈಜ್ಞಾನಿಕ ನಾಗರಿಕತೆಯ ಪ್ರತಿಪಾದನೆ ಎಂಬ ಡಾರ್ವಿನ್ ಸೂತ್ರವೂ ಕೂಡ ಈ ಕಲ್ಪನೆ ಸಮರ್ಥನೆ ಕೊಟ್ಟಿರಬೇಕು. ಆದರೆ, ಇನ್ನಿತರ ಬೇರೆ ಬೇರೆ ಜನಾಂಗಗಳಲ್ಲಿ ಈ ಬಗೆ ಭಿನ್ನವಾದ ಕಲ್ಪನೆಗಳಿವೆ. ನಮ್ಮ ಭಾರತೀಯ ಸಮುದಾಯಗಳಲ್ಲಿ ಈ ಬಗ್ಗೆ ಇದ್ದ ಪಾರಪರಿಕ ಕಲ್ಪನೆಗಳನ್ನು ಆಧರಿಸಿ ಗಾಂಧೀಜಿ, ಸ್ಪರ್ಧೆ – ಪ್ರಗತಿಗಳೆಂಬುದಕ್ಕೆ ಬದಲಾಗಿ ‘ಸಹಕಾರ – ಸರ್ವೋದಯ’ಗಳ ಸೂತ್ರವನ್ನು ಎತ್ತಿ ಹೇಳಿದರು.ಪರಂಪರೆಯ ಮಾತಷ್ಟೇ ಅಲ್ಲ, ಇವತ್ತು ಇಲ್ಲಿ ನಾವು ರೂಢಿಸಿಕೊಳ್ಳಲು ಹೆಣಗುತ್ತಿರುವ ನಮ್ಮದೇ ಬಗೆಯ ಪ್ರಜಾಪ್ರಭುತ್ವ ಜೀವನಕ್ರಮವನ್ನು ರೂಪಿಸಿಕೊಳ್ಳಲಿಕ್ಕೆ ‘ಸಹಕಾರ – ಸರ್ವೋದಯ’ ಸೂತ್ರವೇ ಬೇಕು. ಸ್ಪರ್ಧೆ – ಪ್ರಗತಿಗಳೆಂಬ ಕಲ್ಪನೆಯು ನಮ್ಮ ಪ್ರಜಾಪ್ರಭುತ್ವ ಪ್ರಯತ್ನವನ್ನು ನಾಶಮಾಡುವಂಥದು ಮತ್ತು ‘ಸ್ಪರ್ಧೆ’ಯೆಂಬುದು ಮೂಲತಃ, ‘ಆಕ್ರಮಣ’ವೆನ್ನುವುದನ್ನು ಅಧಿಕೃತಗೊಳಿಸುವ, ನಾಯಾಯಬದ್ಧವೆನ್ನಿಸುವ ಅಪಾಯಕಾರಿ ಕಲ್ಪನೆ. ಆದ್ದರಿಂದ, ಈ ‘ಸ್ಪರ್ಧೆ’ಯೆಂಬ ಕಲ್ಪನೆಯನ್ನೇ ನಾವು ಕಿತ್ತೊಗೆಯಬೇಕಾಗಿದೆ.
ಒಟ್ಟೂ – ಈ ಸೌಂದರ್ಯಸ್ಪರ್ಧೆಯನ್ನು ಪ್ರತಿಭಟಿಸುವುದು, ಕೆಲವರು ತಪ್ಪು ತಿಳಿಯುವ ಹಾಗೆ ಸಂಕುಚಿತ ಮನಸ್ಕರಾಗಿಯಲ್ಲ. ಅದು ಮನುಷ್ಯರನ್ನೂ, ಸಮುದಾಯಗಳನ್ನೂ ರಾಷ್ಟ್ರವನ್ನೂ ಸಂಕೋಚಗೊಳಿಸಿಬಿಡುತ್ತದೆ, ಜನರನ್ನು ಕೇವಲ ಆಳ್ವಿಕೆಗೆ ಬಾಗಿಕೊಳ್ಳುವ ಆಳುಗಳನ್ನಾಗಿ, ವಾಣಿಜ್ಯ ತಲೆಗಳಿಗೆ ಲಾಭಕರೆಯುವ ಪಶುಗಳನ್ನಾಗಿಸುತ್ತದೆ; ನಾವು ಹಾಗಾಗುವುದಿಲ್ಲ ಎಂಬ ಛಲಕ್ಕಾಗಿ.
ಈ ಸೌಂದರ್ಯಸ್ಪರ್ಧೆಯು ಬೆಂಗಳೂರೆಂಬ ಮಹಾನಗರದಲ್ಲಿ ನಡೆಯುವ ಏನೋ ಒಂದು, ನಮಗೆ ಸಂಬಂಧವಿಲ್ಲದ ಮೋಜಿನ ಮೇಲಾಟ ಅಂತ ಕನ್ನಡದ ಜನತೆ ಭಾವಿಸಬಾರದು. ಕನ್ನಡದ ರಾಜ್ಯೋತ್ಸವದ ದಿನ ಉದ್ಘಾಟನೆಗೊಂಡು, ರಾಜ್ಯೋತ್ಸವದ ತಿಂಗಳಲ್ಲೇ, ನಮ್ಮ ಸಾಂಕೇತಿಕ ಅಧಿಕಾರಕೇಂದ್ರವಾದ ಕನ್ನಡ ರಾಜಧಾನಿಯಲ್ಲಿ, ನಮ್ಮ ಸರ್ಕಾರದ ರಕ್ಷೆಯಲ್ಲಿ ನಡೆಯಬೇಕೆಂದಿರುವ ಇದು ಕನ್ನಡ ಶ್ರೀಮಂತಿಕೆಯ ವಿನಾಶಕ್ಕೆ ಎತ್ತುವ ಮೊದಲ ವೀಳ್ಯ. ಈ ಸವಾಲನ್ನು ನಾವು
*****
