ಕವಿ ಪತ್ನಿ

ಪದ್ಯ ಗಿದ್ಯ ಎಂದು ಮೈ ಮರೆತು
ಸ್ಕೂಟರ್ ಕೊಳ್ಳಲಿಲ್ಲ,
ಸ್ವಂತ ಮನೆ ಮಾಡಿಕೊಳ್ಳಲಿಲ್ಲ,
ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ
ಎಂದೇನೇನೋ ಗೊಣಗುತ್ತಿದ್ದವಳು –
ಸರ್ಕಸ್ಸಿನ ಒಂಟೆಯ ಬಳಿ
ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ
ಕುರುಡು ಹಸುಳೆಯ ಕಂಡು
ಹಠಾತ್ತನೆ ತನ್ನ ಶ್ರೀಮಂತಿಕೆಯ ಅರಿವಾದಂತೆ
ಮಗನ ತಲೆ ನೇವರಿಸಿ
ತೆಪ್ಪಗಾದಳು.
*****