ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ
ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು-
‘ನಾವು ರಾಯನ ಅರಸಿಯರು
ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ,
ಕಳೆದುಹೋದ ಪೀತಾಂಬರ
ಮಕರಿಕಾ ಪತ್ರದ ಮೇಲೆ ರಾಯ ತಾನೇ
ಬರೆದ ಪ್ರೀತಿ ಮಾತುಗಳು,
ಕಳೆದುಕೊಂಡ ಸಾಮ್ರಾಜ್ಯ’
‘ಬಂದು ಹೋಗುತ್ತಾರೆ ಮಂದಿ,
ನಕ್ಷೆಯೊಳಗಿನ ಬೆತ್ತಲೆ ಸುಂದರಿಯರ ಮೈದಡವಿ,
ಅಂತಃಪುರದ ನಮ್ಮನ್ನು ಒಮ್ಮೆಯೂ
ನೆನೆಯದೆ ಹೊರಟು ಹೋಗುತ್ತಾರೆ’.
ತುಂಬಿ ಹರಿಯುತ್ತಿದ್ದಾಳೆ ತುಂಗಭದ್ರೆ
ಅವಳಿಗೋ, ಮೈಯ್ಯೆಲ್ಲಾ ಸುಳಿ,
ಇವಳ ಪ್ರವಾಹದ ಮುಂದೆ
ಮೋಹಿಸಿ ಬಂದರೆ ಸಾಕು,
ಹತ್ತಿರ ಸೆಳೆದು, ತಬ್ಬಿ, ಕೊಂದುಬಿಟ್ಟಾಳು!
ಕೊಚ್ಚಿ ಹೋಗುವ ಹಾಗೆ ನೆನಪುಗಳು,
ಜನ, ಮನ, ಕಾಲ-ದೇಶಗಳು.
ತುಂಗಭದ್ರೆ ತೆರೆದಿಟ್ಟ ತಾವು-
ನೆಲ
ಜಲ
ಸಮಾಧಿ
ಶಿಥಿಲ ಸ್ಥಳ
ಯಾರಿಗೇನು ಬೇಕೊ ಎಲ್ಲವೂ ಇದೆ ಇಲ್ಲಿ
ಭಿಕ್ಷುಕ-ಭೈರಾಗಿ ಸಂತ-ಸಾಮ್ರಾಟರ
ಹೇಮಕೂಟ.
*****
ಕೀಲಿಕರಣ: ಕಿಶೋರ್ ಚಂದ್ರ