ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿಯ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ ಆಡುವುದಕ್ಕಾಗಿ ಒಂದು ಆಟ ಕಲಿಯುತ್ತಿದ್ದರು. ಆ ಸುದ್ದಿ ಕೇಳಿ ಇವನ ಮನಸ್ಸು ಆವಿಶ್ರಾಂತವಾಯಿತು.
ಪಂಚಾಯ್ತಿ ಆಫಿಸಿಗೆ ಪಾಪ ಮಾಸ್ತರನನ್ನು ಕರೆಸಿದ. ಚತುಷ್ಟಯರೂ ಹಾಜರಾದರು. ‘ಕಾರ ಹುಣ್ಣಿವೀ ದಿನ ಆಡಾಕ ಒಂದು ಆಟ ಕಲಸಿರಿ’ ಎಂದು ಕಣ್ಣಂಚಿನಲ್ಲಿ ಕನಸು ತುಳುಕುತ್ತ ಆಜ್ಞೆ ಮಾಡಿದ. ಪಾಪ ಮಾಸ್ತರ ಎಂದೂ ನಾಟಕ ಮಾಡಿದವನಲ್ಲ, ಬಹಳವಾದರೆ ತನ್ನ ಜೀವಮಾನದಲ್ಲಿ ನಾಕೈದು ನಾಟಕ ನೋಡಿದ್ದನಷ್ಟೆ. ಅಲ್ಲದೆ ಅವನ ವಯಸ್ಸೂ ಇಂಥ ಖುಶಿ ಮೋಜಿಗೆ ಮೀರಿದ್ದಾಗಿತ್ತು. “ಅದೆಂಗಾದೀತರಿ? ಆಗೋಣಿಲ್ಲ” ಅಂದ.ತನಗೆಂಥ ನಾಟಕ ಬಂದೀತು? ಬರೋಣಿಲ್ಲವೆಂದ. ಪರಿಪರಿಯಾಗಿ ಹೇಳಿದ, ಅಂಗಲಾಚಿದ. ಆದರೆ ಮಾಸ್ತರ ಆಗೋಣಿಲ್ಲ ಎಂದರೆ ನಾಟಕವಾಡುವ ತಮ್ಮ ಅವಕಾಶ ತಪ್ಪುವುದಲ್ಲಾ ಎಂದು ಚತುಷ್ಟಯರ ತವಕ. ಆದರೂ ಒತ್ತಾಯ ಮಾಡಿದರು. ಬೇಡಿದರು. ಕೊನೆಗೆ ಉಪಾಯ ಗೊತ್ತೇ ಇದೆ-‘ಸ್ವಥಾ ಸರಪಂಚ ಸಾಹೇಬರ ಕೇಳತಾರೆಂದರ ಕಿಮ್ಮತ್ತಿಲ್ಲೇನ? ಇಂದಽ ಮ್ಯಾಲಿನವರಿಗೆ ಬರದ ಹಾಕಿದರ ನಿಮ್ಮ ಗತಿ ಏನಾದೀತು?’ ಏನಾಗುತ್ತಿತ್ತೋ, ಪಾಪ ಮಾಸ್ತರನಂತೂ ಹೆದರಿದ.
ಅವರನ್ನು ಕೂರಿಸಿಕೊಂಡೇ ‘ಸೀತಾಪಹರಣ’ ನಾಟಕವಾಡುವುದೆಂದು ತೀರ್‍ಮಾನಿಸಿದರು. ಬೆಳಗಾವಿಯಿಂದ ವಿದ್ಯುದ್ದೀಪ, ಅಲಂಕಾರ, ವೇಷಭೂಷಣಗಳನ್ನು ಬಾಡಿಗೆ ತರಿಸುವುದೆಂದು ಮಾತಾಯ್ತು. ರಾವಣನ ಆಸ್ಥಾನದಲ್ಲಿ ಒಂದು ‘ಡ್ಯಾನ್ಸು ಹಾಕಿ, ಅದಕ್ಕಾಗಿ ಬೆಳಗಾವಿಯಿಂದ ಚಿಮಣಾಳನ್ನು ತರಿಸುವುದೆಂದಾಯಿತು. ಸ್ಥೂಲವಾಗಿ ಪಾತ್ರಗಳ ಹಂಚಿಕೆಯೂ ಆಯ್ತು. ಗುಡಸೀಕರ ಯಾವ ಪಾತ್ರವನ್ನೂ ವಹಿಸಲಿಲ್ಲ. ರಾವಳನ ಪಾತ್ರಕ್ಕೆ ಕಳ್ಳನನ್ನು ಬಿಟ್ಟರೆ ಯಾರಿದ್ದಾರೆ? ರಾವಳನ ಪಾತ್ರ ತನಗೆ ಖಚಿತವಾದ ಕೂಡಲೇ ಕಳ್ಳ ಸೀತೆಯ ಪಾತ್ರಕ್ಕೆ ನಿಂಗೂನನ್ನು ಶಿಫಾರಸ್ಸು ಮಾಡಿದ. ಗುಡಸೀಕರ ಒಪ್ಪಲಿಲ್ಲ. ರಮೇಸನೇ ಸೀತೆಯಾದ. ನಾರದ ಹಾಗೂ ಹನುಮಂತ-ಈ ಎರಡೂ ಪಾತ್ರಗಳನ್ನು ಮೆರಮಿಂಡ ವಹಿಸಿಕೊಂಡ. ಸಾತೀರ ಶಿವನಾದ. ಉಳಿದ ರಾಮ ಲಕ್ಷ್ಮಣ ಇತ್ಯಾದಿ ಪಾತ್ರಗಳನ್ನು ಊರಲ್ಲಿಯ ತಮಗೆ ಅನುಕೂಲದ ಹುಡುಗರಿಗೆ ಹಂಚಿದರು. ಪಾಪ ಮಾಸ್ತರನಿಗೂ ಒಂದು ಪಾತ್ರ ಕೊಡಬೇಕೆಂದು ಸೂಚನೆ ಬಂತು. ತಕ್ಷಣವೇ ಆತ ಎದ್ದು ಕೈಮುಗಿದು ಬೇಡವೆಂದ. ಬಿಟ್ತರು. ಹೀಗೆ ನಾಟಕದ ವಿಚಾರ ಒಂದು ಗಟ್ಟಿ ಮುಟ್ಟ ಹಂತಕ್ಕೆ ಬಂದಾಗ ನಾಯೆಲ್ಯಾ ಬಂದ.
ಗುಡಸೀಕರನ ದಯದಿಂದ ನಾಯೆಲ್ಯಾ- ಒಂದು ಕುರಿ ದಂಡ ಕೊಟ್ಟನಲ್ಲ, ಮಾದಿಗರು ಇಂದೇ ಅದರ ಹಬ್ಬ ಇಟ್ಟುಕೊಂಡಿದ್ದರು. ಅದು ಕುಲದವರ ಹಬ್ಬವಾದುದರಿಂದ ಗುಡಸೀಕರ ಅಲ್ಲಿಗೆ ಹೋಗಬೇಕಾದ ಅಗತ್ಯವಿರಲಿಲ್ಲ. ಆದರೆ ಕುರಿ ಕೊಟ್ಟವನ ತಾನೆಂದು, ಅದೂ ಗೌದನ ಆಳು ಮನುಷ್ಯನಿಗೆ ಕೊಟ್ತವನೆಂದೂ ಕೂಡಿದ ಮಂದಿ ಔದಾರ್‍ಯದ ಕಟ್ಟಿನಲ್ಲಿ ತನ್ನ ರೂಪ ನೋಡಲೆಂದೂ ತಾನೂ ಬರುವುದಾಗಿ ಹೇಳಿದ್ದ. ನಾಯೆಲ್ಯಾ ದಂಡ ತೆತ್ತನಾದ್ದರಿಂದ ಮಾಂಸದಲ್ಲಿ ಅವನಿಗೂ ಒಂದು ಪಾಲು ಸಿಕ್ಕುವುದಿತ್ತು. ಮಂದಿ ಹಬ್ಬ ಮಾಡಿದರೇ ಕಾಲು ನೋಯುವ ಹಾಗೆ ಕುಣಿಯುವವನು. ಇನ್ನು ಈಗ ಕೇಳಬೇಕೆ? ಬಹಳ ಉತ್ಸಾಹದಿಂದಲೇ ಕರೆಯಬಂದ. ಓಡೋಡಿ ಬಂದಿದ್ದನೆಂದು ತೋರುತ್ತದೆ, ತೇಗುತ್ತ.
“ಸಾಹೇಬರ, ಎಲ್ಲಾ ತಯಾರಾಗೇತಿ ಬರಬೇಕ್ರಿ”
ಅಂದ. ಅವನನ್ನು ನೋಡಿದೊಡನೆ ಚತುಷ್ಟಯರಿಗೆ ಮತ್ತೆ ನಗು ಬಂತು., ಸಾತೀರ ನಗುತ್ತ-
“ನಾಯೆಲ್ಯಾ ಮನ್ನಿ ಫಾರಿನ್ ಭಿರಂಡಿ ಕುಡದಲ್ಲ ಮಗನ, ಹೆಂಗ್ಹೆಂಗ ಆತೊ?”
-ಅಂದ. ಆ ಘಟನೆ ನೆನಪಿಸಿಕೊಳ್ಳುವುದೂ ಬೇಡವಾಗಿತ್ತು. ಅವಮಾನಿತನಂತೆ ನಾಚಿಕೊಂಡು,
“ಎಲ್ಲಾ ಹುದಲಾ ಬಿದ್ಧಾಂಗಿತ್ತ ಬಿಡರಿ”
“ಇನ್ನ ಮ್ಯಾಲ ಭಿರಂಡಿ ಕುಡಿಯಾಣಿಲ್ಲ ಅಂತ ಕರಿಮಾಯಿ ಆಣಿ ಮಾಡಿದೀಯಂತಲ್ಲ. ಹೌಂದೇನ?”
-ಅಂದ ಮೆರಮಿಂಡ.
“ಹೌಂದ್ರಿ ಗೌಡ್ರು ಆಣಿ ಮಾಡಿಸ್ಯಾರ”
“ಯಾರ ಕೊಟ್ಟರೂ ಕುಡಿಯಾಣಿಲ್ಲಾ?”
“ಒಟ್ಟ ಆ ಭಿರಂಡಿ ಸುದ್ದಿ ಎತ್ತಬ್ಯಾಡ್ರಿ ನನ್ನ ಮುಂದ”
-ಅಂದ. ಗುಡಸೀಕರ ಮೆಲ್ಲಗೆ ನಾಯೆಲ್ಯಾನಿಗಾಗಿಯೇ ತೆಗೆದಿರಿಸಿದ್ದ ಬ್ರಾಂದಿ ಬಾಟ್ಲಿ ತೆಗೆದು, ಎತ್ತಿ ಮುಖದ ಮುಂದೆ ತೂಗುತ್ತ-
“ನೋಡ್ಲೆ ಮಗನ”
-ಅಂದ. ಪಾಪ ಮಾಸ್ತರನಿಗೆ ಅದೆಲ್ಲಿಂದ ವಾಸನೆ ಬಂತೋ, ಕೂಡಲೇ ಧೋತರದಿಂದ ಮೂಗು ಮುಚ್ಚಿಕೊಂಡ. ನಾಯೆಲ್ಯಾನ ಮನಸ್ಸು ಆಗಲೇ ಕರಗಿ ಬಾಟ್ಲಿಯ ಭಿರಂಡಿಯಷ್ಟೇ ತೆಳ್ಳಾಗಾಗಿತ್ತು. ಆದರೆ ಬಾಯಿಬಿಟ್ಟು ಹೇಳಲಾರ. ಮನಸ್ಸು ನಿಯಂತ್ರಿಸಿಕೊಳ್ಳುವವನಂತೆ, ಕಣ್ಣುಮುಚ್ಚಿ ತಂತಾನೇ ಮಾತಾಡಿಕೊಳ್ಳುವವನಂತೆ ಗೋಣು ಹಾಕಿ “ಛೇಛೇ ಶಕ್ಯೆ ಇಲ್ಲ ತಗೀರಿ” ಅಂದ. ಗುಡಸೀಕರ ಸುಮ್ಮನಾಗಬಹುದಿತ್ತು. ಆದರೆ ಗೌಡನ ಎದುರಿನಲ್ಲಿ ಆಣೆ ಮಾಡಿದ್ದನಲ್ಲ, ಅದು ಅವನ ಹೊಟ್ಟೆಯೊಳಗೆ ಚಿಮಣಿಯೆಣ್ಣೆ ಸುರಿದಂತಾಯ್ತು. ನೊಂದುಕೊಂಡ ಕೂಡ ಅಷ್ಟರಲ್ಲಿ ಪಾಪಮಾಸ್ತರ ಬಾಯಿಹಾಕಿದ-
“ಅಧೆಂಗ ಕುಡೀತಾನ್ರಿ? ಗೌಡ್ರ ಮುಂದ ಆಣೆ ಪ್ರಮಾಣ ಮಾಡ್ಯಾನಂತಲ್ಲ, ಬಿಟ್ಟಿದ್ದ ಪಾಡ ಆಗಲಿಲ್ಲ? ಆಗದೇನು? ಬಡವ, ಹೇಂತಿ ಮಕ್ಕಳದಾವಲ್ಲ? ಹೌಂದು. ಅದಕ್ಕ ಕುಡೀಬ್ಯಾಡಪಾ”
-ಅಂದ, ನಾಯೆಲ್ಯಾ ಗುಡಸೀಕರ ಇಬ್ಬರನ್ನೂ ಟಕಮಕ ನೋಡುತ್ತ.
“ಛೇ, ಆ ಮಗ್ಗ ಎಂಥಾ ಆಣಿ ತಗೀರಿ” -ಅಂದ ಕಳ್ಳ
“ನೀವಽ ಕೊಡಾಕ ನಿಂತರ ಗೌಡರ ಆಣಿ ಯಾಕ ತಡದೀತ? ಗೌಡರೇನ ಇಲ್ಲಿ ನೋಡಾಕ ಬರತಾರ? ಯಾರ ನಶೀಬ ಯಾರ ಕಂಡಾರ? ಕುಡಿಕುಡಿಯೋ ಮಗನಽ”-ಅಂದ ಕಳ್ಳ ಆ ಭಾಗ್ಯ ತನಗಿಲ್ಲವಲ್ಲಾ ಎಂದು ಕೊರಗುತ್ತ. ಪಾಪ ಮಾಸ್ತರನಿಗೆ ಸಹಿಸುವುದಾಗಲಿಲ್ಲ.
“ನ್ಯಾಯೆಲ್ಯಾ ಏನಂತಾನ? ಒಲ್ಲೆ ಅಂತಾನ. ಮತ್ತ ಜೋರ ಯಾಕ ಮಾಡತೀರಿ? ಬ್ಯಾಡ ಬಿಡಿರಿ”
ಗುಡಸೀಕರ ಛಟ್ಟನೆ ಮೇಲೆದ್ದು-
“ಮಾಸ್ತರ, ಈಗ ನ್ಯಾಯೆಲ್ಯಾ ಕುಡದರ ಏನ ಜಿದ್ದ ಕಟ್ಟತೀರಿ”
ಹೇಳಿದ. ಮಾಸ್ತರ ದಂಗಾದ “ಏನ ಕೊಟ್ಟೇನು? ಏನೂ ಇಲ್ಲರಿ” ಎಂದುಕೊಂಡು ಸುಮ್ಮನಾದ.
ಗುಡಸೀಕರ ಬಾಟ್ಲಿ ತೆಗೆದು ಪಾಪ ಮಾಸ್ತರನ ಕಡೆ ನಡೆದ. “ನಾ ಇನ್ನ ಹೋಗಲೇನ್ರಿ? ಹೋಗತೇನ್ರಿ?” ಎಂದು ಕೈಮುಗಿದು ಎದ್ದು ನಿಂತ. ಗುಡಸೀಕರ “ನಿಲ್ಲಿರಿ” ಎಂದು ಚೀರಿ ಮಾಸ್ತರನ ಸಮೀಪ ಹೋದ. ಮಾಸ್ತರ ಮತ್ತೆ ಮೂಗು ಮುಚ್ಚಿಕೊಂಡ. “ಕೈ ಬಿಡಿರಿ” ಎಂದು ಗದರಿ ಹಿಡೀರೆಂದು ಒತ್ತಾಯದಿಂದ ಬಾಟ್ಲಿ ಅವರ ಕೈಗಿಟ್ಟ. ಮಾಸ್ತರ ಗಡಗಡ ನಡುಗತೊಡಗಿದ್ದ. ‘ನಾ ನಿಮಗ ಕಲಿಸಿದ ಮಾಸ್ತರ ಅಲ್ಲರೆ? ಬ್ಯಾಡ್ರಿ’ ಎಂದು ಬೆಬೆಬೆ ಹೇಳುತ್ತಿರುವಷ್ಟರಲ್ಲಿ ಗುಡಸೀಕರ ಮತ್ತೆ ಗದರಿದ.
“ನಿಮಗಲ್ಲ. ಹೋಗಿ ನ್ಯಾಯೆಲ್ಯಾಗ ಹಣಸಿರಿ. ಕುಡೀತಾನ. ನ್ಯಾಯೆಲ್ಯಾ ಬಗಸೀ ಒಡ್ಡಿ ಕುಡಿಯೋ ಮಗನ, ಇದೊಂದು ದಿನಾ” ಎಂದ. ನ್ಯಾಯೆಲ್ಯಾ ಧರ್‍ಮಸಂಕಟದಿಂದಲೆಂಬಂತೆ-ಅಥವಾ ಹೆಂಗೊ ಸಿಕ್ಕೇ ಸಿಗುತ್ತಾದ್ದರಿಂದ ಇನ್ನಷ್ಟು ಒತ್ತಾಯ ಮಾಡಿಸಿಕೊಂಡರೆ ಇನ್ನಷ್ಟು ಹೆಚ್ಚು ದಕ್ಕೀತೆಂಬ ಉದ್ದೇಶದಿಂದಲೋ, ಆದರೆ ಎರಡನೇ ಉದ್ದೇಶವೇ ಗುಡಸೀಕರನಿಗೆ ಖಾತ್ರಿಯಾಗುವಂತೆ ಅಭಿನಯಿಸುತ್ತ “ಬ್ಯಾಡ್ರೀಯೆಪ” ಎಂದು ಹಲ್ಲುಕಿರಿದ. ಗುಡಸೀಕರ ನ್ಯಾಯೆಲ್ಯಾನ ಬಗ್ಗೆ ಬಹಳ ಮಿದುವಾಗಿದ್ದಂತೆ ಕಂಡಿತು-
“ನ್ಯಾಯೆಲ್ಯಾ, ಮಗನೇ, ನನ್ನ ಮಾನ ದೊಡ್ದದೋ ನಿನ್ನ ಆಣಿ ದೊಡ್ದದೋ? ಕುರಿ ಕೊಟ್ಟ ಉಪಕಾರ ಮರಿತೀದಿ ಏನೋ?”-ಎಂದ. ‘ನನ್ನ ಮಾನ ಎನ್ನುವಾಗ ಒಂದೆರಡು ಬಾರಿ ಎದೆಯನ್ನು ದಂದಂ ಗುದ್ದಿಕೊಂಡ. ಕೂಡಲೇ ನ್ಯಾಯೆಲ್ಯಾ-“ಬಿಡರೀಯೆಪ, ನೀವ್ಯಾಕಷ್ಟ ಮನಸಿಗಿ ಹಚ್ಚಿಕೋತೀರಿ? ತತರ್ರಿ” ಎಂದು ಬೊಗಸೆಯೊಡ್ಡಿದ. ಮಾಸ್ತರ ಗುಡಸೀಕರನ್ನೊಮ್ಮೆ, ನ್ಯಾಯೆಲ್ಯಾನನ್ನೊಮ್ಮೆ ನೋಡುತ್ತ ಭೂತ ಕಂಡ ಮಕ್ಕಳಂತೆ ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿದ್ದ. “ಹೂಂ ಮಾಸ್ತರ ಹನಸಿರಿ” ಎಂದು ರಮೇಸ ಆಜ್ಞೆಮಾಡಿದ. ಮಾಸ್ತರ ಇನ್ನೂ ತನ್ನ ಕರ್‍ಮ ಹಳೆದುಕೊಳ್ಳುತ್ತಾ ನಿಂತಾಗ ಗುಡಸೀಕರ “ಹೇಳಿದ್ದ ಕೇಳಿಸಲಿಲ್ಲೇನ್ರಿ?” ಅಂದ. ಪಾಪ ಮಾಸ್ತರ ಧಡಪಡಿಸಿ ಓಡಿಹೋಗಿ ಗಡಗಡ ನಡುಗುತ್ತ ಹನಿಸತೊಡಗಿದ. ಬಾಟ್ಲಿ ನಡುಗಿ ನ್ಯಾಯೆಲ್ಯಾನ ಅಂಗಿಯ ಮೇಲೆ ಬಿದ್ದಿತು. ನ್ಯಾಯೆಲ್ಯಾ ಅಂಗಿಯನ್ನೇ ನೆಕ್ಕಿಕೊಂಡ. ಏನು ರುಚಿ! ಆತ ಹಾಗೆ ಮುಂಗೈ, ಅಂಗಿ ನೆಕ್ಕಿಕೊಂಡುದನ್ನು ನೋಡಿ ಗುಡಸೀಕರನಿಗೆ ಎಷ್ಟು ಆನಂದವಾಯಿತೆಂದರೆ ಓಡಿಹೋಗಿ ಮಾಸ್ತರನ ಕೈಯಲ್ಲಿಯ ಬಾಟ್ಲಿ ತಾನೇ ಕಸಿದುಕೊಂಡು “ಆಽ ಅನ್ನಲೇ” ಅಂದ. ನ್ಯಾಯೆಲ್ಯಾ ಮುಖ ಮೇಲೆ ಮಾಡಿ ಬಾಯಿ ತೆರೆದ. ಚತುಷ್ಟಯರು ಜೊಲ್ಲು ಸುರಿಸುತ್ತಿರಲಾಗಿ, ಗುಡಸೀಕರ ದಿಗ್ವಿಜಯದಿಂದೆಂಬಂತೆ ಖೊಖ್ಖೊಖ್ಖೊಕ್ ನಗುತ್ತಾ ನಾಯೆಲ್ಯಾನ ಬಾಯಲ್ಲಿ, ಮುಖದಲ್ಲಿ, ಮೈಮೇಲೆ ಅಂಗಿಯ ಮೇಲೆ ಹನಿಸಿದ. ನ್ಯಾಯೆಲ್ಯಾ ಹಸೀ ಹಸೀ ಭಿರಂಡಿಯನ್ನು ಹಾಗೇ ಕರುಳು ಚುರ್ರೆನ್ನುವಂತೆ ಕುಡಿದ. ಮೈಮೇಲಿನ ಅಂಗಿ ಒದ್ದೆಯಾಗಿತ್ತು. ಅದನ್ನೂ ನೆಕ್ಕಿಕೊಂಡ. ನೆಲಕ್ಕೆ ಬಿದ್ದಿತ್ತು. ಅಂಗೈಯಿಂದ ಸವರಿ ನೆಕ್ಕಿಕೊಂಡ. ಅವನು ಈ ಥರ ನೆಕ್ಕುತ್ತಿರುವುದನ್ನು ನೋಡಿ ಇಲ್ಲಿ ಬಿದ್ದಽತೆಽ ನೆಕ್ಕಲೇ ಎಂದು ಗುಡಸೀಕರ ತನ್ನ ಪಾದ ಒಡ್ಡಿದ. ನ್ಯಾಯೆಲ್ಯಾ ಅದನ್ನೂ ನೆಕ್ಕಿದ. ಉಳಿದವರೆಲ್ಲ ನಗುತ್ತಿದ್ದರು. ಕಳ್ಳ ರಾವಳನಂತೆ ನಗುವುದನ್ನು ಈಗಿನಿಂದಲೇ ತಾಲೀಮು ನಡೆಸಿದ. ಒಬ್ಬರಿಗಿಂತ ಒಬ್ಬರು ಹುಚ್ಚುಹುಚ್ಚಾಗಿ ನಗುತ್ತಿರುವುದನ್ನು ನೋಡಿ ಮಾಸ್ತರನಿಗೆ ಗಾಬರಿಯಾಗಿ ಯಾರಿಗೂ ಗೊತ್ತಾಗದಂತೆ ಓಡಿಹೋದ. ಗೌಡನ ಮುಂದೆ ಆಣೆಮಾಡಿದ್ದು ನೆನಪಾಗಿ ಅದನ್ನು ಮರೆಯಲೆಂದೋ, ಗಾಬರಿಯಿಂದಲೋ ನ್ಯಾಯೆಲ್ಯಾ ತಾನೂ ಎಲ್ಲರ ಜೊತೆ ನಗತೊಡಗಿದ. ಮೆರಮಿಂಡನಿಗೆ ಅದೇನು ಹುರುಪು ಬಂತೋ, ಎದ್ದು ನಿಂತು ವೀರಾವೇಶದಿಂದ:
“ಗುಡಸೀಕರರಿಗೆ ಜಯವಾಗಲಿ, ಜೈಹಿಂದ್!” ಅಂದ. ಉಳಿದ ಮೂವರೂ ಜೈಹಿಂದ್ ಅಂದರು. ನ್ಯಾಯೆಲ್ಯಾ ‘ಕರೀಮಾಯಿ’ ಅಂದ. ಗುಡಸೀಕರ “ಈಗಿಂದೀಗ ಬರತೀವು, ಮುಂದ ನಡಿ ಮಗನಽ” ಅಂದ. ನ್ಯಾಯೆಲ್ಯಾ ಓಡಿದ.
ತೋಟದ ಗುಡಿಸಲ ಮುಂದಿನ ಚಕ್ಕಡಿಯಲ್ಲಿ ಗೌಡ ಕಂಬಳಿ ಚೆಲ್ಲಿಕೊಂಡು ಅಂಗಾತವಾಗಿ, ಎರಡೂ ಕೈ ತಲೆಗಿಂಬು ಮಾಡಿಕೊಂಡು ಮಲಗಿದ್ದ. ಶಿವಸಾನಿ ಕಾಲು ತಿಕ್ಕುತಿದ್ದಳು. ಭೂಮಿ ನಿಟ್ಟುಸಿರು ಬಿಟ್ಟಂತೆ ಬೇಸಿಗೆಯ ಗಾಳಿ ಬಿಸಿಯಾಗಿತ್ತು. ಚಿಕ್ಕೆಯ ಮಂದ ಬೆಳಕಿನಲ್ಲಿ ಭೂಮಿ ನಿದ್ರಿಸಲಾರದೆ, ಎಚ್ಚರಿರಲಾರದೆ ಒದ್ದಾಡಿದಂತೆ ಗಿಡಮರ ಚಲಿಸುವ ಸದ್ದು ಆಗಾಗ ಕೇಳಿಸುತ್ತಿತ್ತು. ಅಷ್ಟರಲ್ಲಿ ಊರಿನಲ್ಲಿ ಗಂಡುಹೆಣ್ಣುಗಳೆಲ್ಲ ಕಿಟಾರನೆ ಕಿರುಚಿದ ದನಿ ಕೇಳಿಸಿತು. ಗೌಡ ಕಣ್ಣು ತೆರೆದ. ನಿಜವೋ, ಸುಳ್ಳೋ ಎಂದು ಕಿವಿಗೊಟ್ಟು ಕೇಳಿದ. ಶಿವಸಾನಿಯೂ ಕೇಳಿದಳು. ಹೌದು ಯಾರೋ ಕಿರುಚುತ್ತಿದ್ದರು. ಥಟ್ತನೆ ಕಂಬಳಿ ಹೆಗಲಿಗೇರಿಸುತ್ತಲೇ ಓಡಿದ. ಸೀದಾ ಮಾದರ ಹಬ್ಬವಾಗುವಲ್ಲಿಯೇ ಹೋದ. ಅಂಗೀಯೆಲ್ಯಾನ ಹೆಂಡತಿ ಮೈಮೇಲಿನ ಸೀರೆಯ ಖಬರಿಲ್ಲದೇ ಎದೀದೆ ಬಡಿದುಕೊಂಡು ಅಳುತ್ತಿದ್ದಳು. ಮಕ್ಕಳು ಕಿರುಚುತ್ತಿದ್ದವು. ಸೇರಿದ್ದ ಜನ ಖಬರತಪ್ಪಿ ಬಿದ್ದ ಅಂಗಿಯೆಲ್ಯಾನ ಮೈಮೇಲೆ ಮಣ್ಣು ಗೊಜ್ಜುತ್ತಿದ್ದರು. ಲಗಮವ್ವ ಗುಡಸೀಕರನ ವಂಶಾವಳಿ ಉದ್ಧರಿಸುತ್ತಿದ್ದಳು. ಆಗಲೇ ಯಾರೋ ದತ್ತಪ್ಪನ ಬಳಿಗೂ ಓಡಿಹೋಗಿದ್ದರು. ಅಂಗೀಯೆಲ್ಯಾನ ಮೈ ಸುಟ್ಟುಹೋಗಿ ಎಡಭಾಗದ ಮೈಚರ್‍ಮ ಸುಲಿದು ಬಿದ್ದಿತ್ತು. ಇಡೀ ಮೈ ಬೆಂದ ಮಾಂಸದ ಹಾಗೆ ಬಿದ್ದಿತ್ತು. ನ್ಯಾಯೆಲ್ಯಾ ಅಗಾಗ ಬಾಯಿ ಬಾಯಿ ಬಿಡುತ್ತಿದ್ದುದರಿಂದ ಮಾತ್ರ ಜೀವವಿದೆಯೆಂದು ತಿಳಿಯಬೇಕಷ್ಟೆ. ಅಷ್ಟರಲ್ಲಿ ದತ್ತಪ್ಪನೂ ಓಡಿಬಂದ. ಮೊದಲು ಅವನನ್ನು ಗುಡಸಲಿಗೆ ಸಾಗಿಸಲಿಕ್ಕೆ ಹೇಳಿದ. ಹುಡುಗರಿಬ್ಬರು ಮೆಲ್ಲಗೆ ನ್ಯಾಯೆಲ್ಯಾನನ್ನು ಎತ್ತಿ ಅವನ ಗುಡಿಸಲ ಕಡೆ ನಡೆದರು. ಗೌಡನೂ ಬೆನ್ನುಹತ್ತಿಹೋದ. ಅವರಿವರಿಂದ ವಿಷಯ ತಿಳಿಯಿತು:
ನ್ಯಾಯೆಲ್ಯಾ ಇಂದು ವಿಪರೀತ ಕುಡಿದಿದ್ದನೆಂದೂ, ಸರಪಂಚ ಹಾಗೂ ಮೆಂಬರರು ಕುರಿಹಬ್ಬ ನೋಡಲು ಬಂದಾಗ ತಾನೇ ಹಲಗೆ ಬಾರಿಸುವುದಾಗಿ ಕಸಿದುಕೊಂಡು ತೂರಾಡುತ್ತಾ ಬಾರಿಸತೊಡಗಿದನೆಂದೂ, ಗುಡಸೀಕರ ನಾಕಾಣೆ ಎಸೆದಾಗ, ಬಾರಿಸುತ್ತ ಅದನ್ನು ಹಣೆಗಂಟಿಸಿಕೊಳ್ಳಲು ಹೋದಾಗ ಅಲ್ಲೇ ಪಕ್ಕದಲ್ಲೇ ಇದ್ದ ಬೆಂಕಿಯಲ್ಲಿ ಬಿದ್ದನೆಂದೂ, ಎಷ್ಟೇ ಅವಸರದಲ್ಲಿ ಹೊರತೆಗೆದರೂ ಅಂಗಿ ಸೆರೆಯಲ್ಲಿ ತೊಯ್ದಿದ್ದರಿಂದ ಬೇಗನೇ ಆರಿಸಲಾಗಲಿಲ್ಲವೆಂದೂ ಹೇಳಿದರು. ಅವರವರ ಕರ್‍ಮ; ಗೌಡ ಸುಮ್ಮನೇ ಕೂತ.
ದತ್ತಪ್ಪ ಮಾಡುವ ಔಷಧಿಯನ್ನೆಲ್ಲ ಪೂರೈಸಿದ ಮೇಲೆ ಹೊರಗೆ ಬಂದ. ಮಾತಿಲ್ಲದೆ ಮುಂದೆ ಮುಂದೆ ನಡೆದ. ಗೌಡ ಹಿಂದಿನಿಂದ ಬಂದ. ದತ್ತಪ್ಪ ಏನಾದರೂ ಹೇಳುತ್ತಾನೆಂದು ಗೌಡನ ನಿರೀಕ್ಷೆ. ಹೊರಳು ದಾರಿ ಬಂದೊಡನೆ ಗೌಡನಿಗೆ ನಿರಾಸೆಯಾಯ್ತು. ಗೌಡ “ದತ್ತೂ” ಅಂದ. ದತ್ತಪ್ಪ ತಿರುಗಿನಿಂತ. ಪಕ್ಕದಲ್ಲಿದ್ದ ಒಂದು ಬಂಡೆಯ ಮೇಲೆ ದತ್ತಪ್ಪ ಹೋಗಿ ಕೂತ. ಗೌಡನೂ ಕಂಬಳಿ ಚೆಲ್ಲಿಕೊಂಡು ಮೊಳಕಾಲಿಗೆ ಕೈಸುತ್ತಿ ಕೂತ. ಅವನೇ ಮಾತಾಡಲೆಂದು ದತ್ತಪ್ಪ ಕೂತ. ಏನು ಮಾತಾಡುವುದೆಂದು ಗೌಡ ಕೂತ. ಬಹಳ ಹೊತ್ತಿನ ತನಕ ಇಬ್ಬರೂ ಸುಮ್ಮನೇ ಕೂತರು. ಆ ಸಮಯದಲ್ಲಿ ಯಾರಾದರೂ ಹೆಂಗಸರು ಹೊರಗೆ ಬಂದು ಇವರನ್ನು ಕಂಡಿದ್ದರೆ ಭೂತಗಳೆಂದು ಖಂಡಿತ ಹೆದರುತ್ತಿದ್ದರು. ಅಷ್ಟೇ ಯಾಕೆ ಕಂಡವರು ಯಾರಾದರೂ ‘ನಿನ್ನೆ ರಾತ್ರಿ ಈ ಬಂಡೇ ಮೇಲೆ ಗೌಡ, ದತ್ತಪ್ಪ ಕೂತಿದ್ದರೆಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ.
ಬಹಳ ಹೊತ್ತಾದ ಬಳಿಕ ದತ್ತಪ್ಪ ಬಾಯಿಬಿಟ್ಟ.
“ಗೌಡಾ, ಊರಾಗ ಮಾರಿ ಹೊಕ್ಕಽದಲ್ಲೋ”
ಗೌದ ಸುಮ್ಮನಾದ.
“ನಾಳಿ ಮುಂಜಾನೆ ಅವನ ಮನೀಗಿ ಹೋಗಿ, ಪಂಚಾಯ್ತಿಗೆ ರಾಜಿನಾಮೆ ಕೊಡಂತ ಹೇಳಿಬರ್‍ತೀನಿ”
-ಅಂದ. ಗೌಡ ಇನ್ನೂ ಸುಮ್ಮನಿದ್ದ.
“ಏನಾರ ಮಾತಾಡೊ”
ಗೌಡ ನಿಧಾನವಾಗಿ ತುಟಿಬಿಚ್ಚಿದ:
“ಜರಾ ವಿಚಾರಮಾಡೊ ದತ್ತೂ. ಅವನ ಕೈಯಿಂದ ಪಂಚಾಯ್ತಿ ತಗೊಂಡರೇನ ಬಂತು? ತಗೊಳ್ಳಾಕ ಅದೆಲ್ಲಿ ಐತಿ? ಒಂದು ವೇಳೆ ಕಸಗೊಂಡಿ ಅಂತ ತಿಳಿ; ಅವರೈದೂ ಮಂದಿ ಕೂರುತಾರ, ಮನ್ಯಾಗ ಕುಡೀತಾರ, ತಾವೂ ಕೆಡತಾರ, ಊರ್‍ನೂ ಕೆಡಸ್ತಾರ. ಊರಾಗ ಪಂಚಾಯ್ತಿ ಇಲ್ಲಾಪಾ. ಗುಡಸ್ಯಾಗ ದುಡ್ಡ ಐತಿ. ಮದ ಐತಿ, ಆ ಹುಡಗನ್ನ ಹಾದಿಗಿ ತರಾಕ ಏನಾರ ಹಾದಿ ಹುಡುಕು.”
ಗೌಡನ ಮಾತೂ ನಿಜವೇ. ನಿಜ ಹೇಳೋದಾದರೆ ಪಂಚಾಯ್ತಿ ಕಸಿದುಕೊಂಡರೆ ಅವನ ಹುಳ ತಗ್ಗಬಹುದು. ಅವಮಾನವಾಗಿ ಹಾದಿಗೆ ಬರಬಹುದು ಅಥವಾ ಏನಿಲ್ಲೆಂದರೂ ಈಗುಳಿದ ಹಾದಿಯಂತೂ ಅದೊಂದೇ. ತಾವಿಬ್ಬರೂ ಸತ್ತಮೇಲೆ ಏನೋ, ಎಂತೋ, ಅಂತೂ ಜೀವಂತವಿದ್ದಾಗಲಾದರೂ ಊರು ಹಾಳುಗೆಡವಬಾರದೆಂದುಕೊಂಡರು. ಎದ್ದರು. ಅಷ್ಟರಲ್ಲಿ ಹೊಲಗೇರಿಯಿಂದ ಮತ್ತೆ ಕಿರಿಚಾಟ ಕೇಳಿಸಿತು. ನ್ಯಾಯೆಲ್ಯಾ ಸತ್ತಿದ್ದ!
ಮುನಿಯೆಲ್ಯಾ, ಮಾರಾಯ, ಕುಡಿದ, ತಿಂದ, ಬದುಕನ್ನು ಬಳಿದುಂಡ, ಕರಿಮಾಯಿಯನ್ನು ಕಂಡ, ಭೂತಗಳನ್ನು ಕಂಡ. ಕಂಡದ್ದನ್ನು ಕಥೆಮಾಡಿದ. ತಾನೇ ಕಥೆಯಾಗಿ ಊರವರ ನೆನಪಿಗೊಂದು ನೋವಾದ. ಮಾಯದ ಗಾಯವಾದ. ಕರಿಮಾಯಿಗೆ ಹೆಸರಿಟ್ಟ, ಹೆಂಡತಿಗೆ ಹೆಸರಿಟ್ಟ, ಸ್ವಯಂ ಮೂರು ಹೆಸರಿನಿಂದ ಹೆಸರುವಾಸಿಯಾದ. ಕರಿಮಾಯಿಯ ಆಣೆ ತಪ್ಪಿದರೆ ಏನಾಗುವುದೆಂಬುದಕ್ಕೆ ಉದಾಹರಣೆಯಾದ. ಅವನಿಗೆ ಗಣಪದವಿ ದಯಪಾಲಿಸಲೆಂದು ಕರಿಮಾಯಿಗೆ ಶರಣೆನ್ನೋಣ.
ಉದ್ಯೋಗಪರ್ವ
ಮಾರನೇ ದಿನ ದತ್ತಪ್ಪ, ಕೈಮಾರು ಹೊತ್ತೇರಿರಬೇಕು, ಗುಡಸೀಕರನ ಮನೆಗೆ ಬಿಜಯಂಗೈದ. ಗುಡಸೀಕರ ಮಹಡಿಯ ಮೇಲೆ ಕೂತು ದನಿ ಮಾಡಿ ಇಂಗ್ಲಿಷ್ ಓದುತ್ತಿದ್ದ. ಅವನ ತಾಯಿಗೂ ತಂಗಿಗೂ ಆಶ್ಚರ್‍ಯವಾಯಿತು; ದತ್ತಪ್ಪ ತಮ್ಮ ಮನೆತನಕ ಬರುವುದೆಂದರೇನು? ಗಿರಿಜ ಮಹಡಿ ಹತ್ತಿ ದತ್ತಪ್ಪ ಬಂದುದನ್ನು ತಿಳಿಸಿಬಂದಳು. ಒಳಗಿನಿಂದ ಗೌರವ ಸಂಭ್ರಮದಿಂದ ಮುದುಕಿಹೊರಗೆ ಬಂದಳು. “ಬರ್ರಿ ಬರ್ರೀಯೆಪ” ಎನ್ನುತ್ತ ಜಮಖಾನ ಹಾಸಿದಳು. ದತ್ತಪ್ಪ “ಹೂಂ ಮಗಳು ವಯಸ್ಸಿಗೆ ಬಂದಾಳ; ಚೆಲೋ ವರ ಕೊಡಬೇಕಿಲ್ಲೊ” ಎನ್ನುತ್ತ ಕೂತ. ಗಿರಿಜಾ ನಾಚಿ ಒಳಗೋಡಿದಳು. “ನೀವಽ ನೋಡಿ ಅದರದ್ದೊಂದ ಮದವೀ ಮಾಡಿಬಿಡಿರಿ” ಎಂದು ಮುದುಕಿ ಹೇಳುತ್ತಿದ್ದಂತೆ ಗುಡಸೀಕರ ಕೆಳಗಿಳಿದು ಬಂದ! ತಾಯಿ ಒಳಗೆ ಹೋದಳು.
“ಏನು? ದತ್ತಪ್ಪನವರು ಮನೀತನಕ ಬಂದಿರಿ?” ಎನ್ನುತ್ತ ಗಡಂಚಿಯ ಮೇಲೆ ಕೂತ. ದತ್ತಪ್ಪ ಬಂದುದಕ್ಕೆ ತಾಯಿ, ತಂಗಿ ಸಡಗರ ಮಾಡಿದ್ದು ಸರಿಬರಲಿಲ್ಲ. ಹಾಗೆಂದು ಬಾಯಿಬಿಟ್ಟು ಹೇಳಲಾರ. ಆದರೆ ಆತ ಬಂದುದಕ್ಕೆ ಏನೋ ಮಹತ್ವದ ಕಾರಣ ಇರಬೇಕೆಂದು ಊಹಿಸಿದ. ಬಹುಶಃ ನಿನ್ನೆ ನಾಯೆಲ್ಯಾ ಸೆರೆಕುಡಿದು ಸುಟ್ಟುಕೊಂಡು ಸತ್ತದ್ದು, ಇದಕ್ಕೆಲ್ಲ ತಾನೇ ಹೊಣೆಯೆಂದು, ಆ ತಪ್ಪೆಲ್ಲ ತನ್ನ ಮೇಲೇ ಹೊರಿಸಲು ಬಂದಿರಬಹುದು ಎಂದುಕೊಂಡ. ಸ್ವಲ್ಪ ಅಧೀರನೂ ಆದ. ಜಾರಿಕೊಳ್ಳಲು ಕೊಡಬೇಕಾದ ಜವಾಬುಗಳನ್ನೆಲ್ಲ ತಯಾರು ಮಾಡಿಕೊಂಡ. ಹ್ಯಾಗೆ ಸುರುಮಾಡೋದು ಎಂದು ದತ್ತಪ್ಪ ಕೂತ. ಈ ಹುಡುಗ ತಮ್ಮ ಪೈಕಿ ಅಲ್ಲ ಅನ್ನಿಸಿತು. ಹಾಗೇ ಎಷ್ಟಂತ ಕೂರುತ್ತಾನೆ?
“ತಮ್ಮಾ ನಿನ್ನ ಜೊತಿ ಒಂದಷ್ಟ ಮಾತಾಡೋದಿತ್ತಲ್ಲ”
“ಅದೇನ ಇಲ್ಲೇ ಆಗಲೆಲ್ಲ.”
“ನೋಡಪಾ, ನಾವೆಲ್ಲಾ ಹಿರೇರು ಕೂಡಿ ಪಂಚಾಯ್ತಿ ಮಾಡಿಕೊ ಅಂತ ನಿನ್ನ ಕೈಯಾಗ ಕೊಟ್ಟಿವಿ. ಊರಿಗೇನಾರ ಹೊತ ಮಾಡ್ತಿ ಅಂತಂದ್ವಿ. ಅದೇನೂ ಆಗಲಿಲ್ಲ. ಊರವರೆಲ್ಲಾ ತಿರುಗಿ ನೀವಽ ತಗೊಳ್ರಿ ಅಂತ ನಮಗ ಹೇಳಾಕ ಹತ್ಯಾರ. ಅದಕ್ಕ ನೀನಽ ಮುಂದಾಗಿ ಕೊಟ್ಟುಬಿಡು.”
ಗುಡಸೀಕರ ಇದನ್ನು ನಿರೀಕ್ಷಿಸಿರಲಿಲ್ಲ. ಈಗ ಸರಿಯಾಗಿ ಉತ್ತರ ಕೊಡದಿದ್ದರೆ ತಾನು ಸೋತಂತೆ.
“ನೋಡ್ರಿ, ಬೇಕಾದಾಗ ಕೊಡಾಕ, ಬ್ಯಾಡೆಂದಾಗ ತಗೊಳ್ಳಾಕ ಪಂಚಾಯ್ತಿಯೇನೂ ನಿಮ್ಮ ಮನಿ ಆಸ್ತಿ ಅಲ್ಲ, ಅದು ಊರುಗಾರಿಕೆ ವಿಷಯ. ಪಂಚಾಯ್ತಿ ಜಾರಿಗಿ ಬರಬೇಕಾದರೂ ಒಂದಷ್ಟ ನೇಮ ಅದಾವ, ಕಾಯ್ದೆ ಕಾನೂನು ಅದಾವ. ಅದರ ಪ್ರಕಾರ ಆಗೇತಿ. ಈಗ ತತಾ ಅಂದರ ಎಲ್ಲಿಂದ ಕೊಡೋಣು? ಇನ್ನ ಆರೆಂಟ ತಿಂಗಳಿಗಿ ಇಲೆಕ್ಷನ್ ಬರತೈತಿ. ನೀವೂ ನಿಂತಕೊಳ್ರಿ, ನಾವೂ ನಿಂತಕೋತೀವಿ.”
“ಖರೆ”-ಅಂದ ದತ್ತಪ್ಪ.
“-ನನ್ನ ಮನಿ ಆಸ್ತಿ ಅಲ್ಲ, ನಿನ್ನ ಮನೀದೂ ಅಲ್ಲ. ಕಾಯ್ದೆ ಕಾನೂನಂದಿ; ಅದ್ಯಾವ ಕಾಯ್ದೆ ಕಾನೂನಿಲ್ಲದಽ ನಿನ್ನ ಕೈಗೆ ಕೊಟ್ಟಿವಿ. ಆಗ್ಯಾಕ ನಿನಗ ಕಾಯ್ದೆ ಕಾನೂನು ನೆನಪಾಗಲಿಲ್ಲಪಾ?”
ದತ್ತಪ್ಪನ ಆಕ್ರಮವಾದಕ್ಕೆ ಎದುರುತ್ತರ ಕೊಡುವುದು ಕಷ್ಟವೇ.
“ಊರವರೆಲ್ಲಾ ಕೂಡಿ ಕೊಟ್ಟಿರಿ; ಅದಕ್ಕ ಅದು ಕಾಯ್ದೆಶೀರ ಆತು. ಈಗ ನೀವೊಬ್ಬರಽ ಕೇಳಾಕ ಬಂದಿರಲಾ. ಅದಕ್ಕ ಕಾಯ್ದೆ ನೆನಪಾತು.”
“ಹಂಗಾದರ ಈಗೂ ಊರಮಂದಿನೆಲ್ಲಾ ಕೂಡಿಸಿ ಈ ಮಾತ ಹೇಳಸಂತೀಯೇನು?”
ದತ್ತಪ್ಪನಿಗಿದು ಅಸಾಧ್ಯವಲ್ಲ. ಊರ ಮಂದಿ ಕೂಡಿ ಒತ್ತಾಯ ಮಾಡಿದರೆ ತಾನು ಹಿಂದೆ ಸರಿಯಲೇಬೇಕಾಗಬಹುದು. ಅಲ್ಲದೆ ಊರಿನಲ್ಲಿ ತನ್ನ ಬೆನ್ನುಕಟ್ಟುವ ಜನ ಈ ನಾಲ್ಕು ಜನ ಮೆಂಬರರನ್ನು ಬಿಟ್ಟರೆ ಯಾರೂ ಇರಲಿಲ್ಲವೆನ್ನುವುದೂ ಅವನಿಗೆ ಗೊತ್ತು. ಅದೆಲ್ಲಿಂದ ಈ ಪೀಡೆ ಗಂಟುಬಿತ್ತೋ ಎಂದುಕೊಂಡ.
“ನೋಡ್ರಿ, ನಿಮಗ್ಯಾಕ ಪಂಚಾಯ್ತಿ ಮ್ಯಾಲ ಕಣ್ಣು ಬಿದ್ದಾವಂತ ಗೊತ್ತಾಗೇತಿ. ಮೊದಲ ಪಂಚಾಯತಿ ಬಂದಾಗ ಅದೇನಂತ ನಿಮಗ ಗೊತ್ತಿರಲಿಲ್ಲ. ಬಿಟ್ಟಕೊಟ್ಟಿರಿ. ಈಗ ನಾವಷ್ಟು ಊರಾಗ ಮುಂದ ಬರಾಕ ಹತ್ತಿದೇವಲ್ಲ. ಅದಕ್ಕ ಹೊಟ್ಟೀಕಿಚ್ಚ ಸುರುವಾಗೇತಿ. ನಮಗಿದೆಲ್ಲಾ ತಿಳಿಯೋದಿಲ್ಲನ್ನಬ್ಯಾಡ್ರಿ.”
ಹುಡುಗನ ಭ್ರಮ ಕೇಳಿ ದತ್ತಪ್ಪ ಮನಸ್ಸಿನಲ್ಲೇ ಬಾಯಮೇಲೆ ಬೆರಳಿಟ್ಟುಕೊಂಡು ಭಲೇ ಅಂದ.
“ಹೌಂದಪಾ, ನೀ ಮುಂದ ಹೊಂಟೀದಿ, ನಾವು ಹಿಂದ ಉಳದೀವಿ. ನಾವಷ್ಟ ಮುಂದ ಬರಾಕ ನಮ್ಮ ಕೈಗೀ ಪಂಚಾಯ್ತಿ ಕೊಡತೀಯೇನು?”
ಮಾತಿನ ವ್ಯಂಗ್ಯವನ್ನು ತಂತಾನೇ ಸಂತೋಷಿಸುತ್ತ ಕೇಳಿದ ದತ್ತಪ್ಪ. ಇನ್ನೂ ಏನೇನು ಹೇಳುತ್ತಿದ್ದನೋ, ಅಷ್ಟರಲ್ಲಿ ಗುಡಸೀಕರ ಭಾರೀ ಜಗಳವಾದಂತೆ-ಏರುದನಿಯಲ್ಲಿ ಅವನ ಮಾತನ್ನು ಕತ್ತರಿಸಿದ-
“ಅಧೆಂಗರಿ? ಹೇಳಲಿಲ್ಲಾ ಇಲೆಕ್ಷನ್ ಬರಲೆಂತ? ಆಳಬೇಕಂತ ಹೇಳಿ ಊರಗಾರಿಕಿ ಗುತ್ತಿಗಿ ತಗೊಂಡಿದಿರೇನ? ಇಷ್ಟದಿನ ಆಳಿದಿರಿ, ಸಾಕಾಗಲಿಲ್ಲ? ಇನ್ನ ಹೊಸಬರಿಗಷ್ಟ ಚಾನ್ಸ್ ಕೊಡಿರಿ.”
“ಚಾನ್ಸ್ ಕೊಟ್ಟಿವಲ್ಲಪಾ, ಕೊಟ್ಟಿದ್ದಕ್ಕ ಊರಿಗೇನ ಹಿತ ಮಾಡಿದಿ?”
“ಇಷ್ಟದಿನ ಹೇತ ರಟ್ಟಿ ಮಾಡೀರಿ. ಅದನ್ನ ತೊಳ್ಯಾಕ ಒಂದಷ್ಟ ದಿನ ಬ್ಯಾಡ?” ಗುಡಸೀಕರನ ಏರುದನಿ ಕೇಳಿ ಜಗಳವಾಡುತ್ತಿದ್ದಾರೆಂದು ಅವನ ತಾಯಿ ಒಳಗಿನಿಂದ ಬಂದಳು. ಗಿರಿಜಾ ದೂರ ನಿಂತು ಕೇಳುತ್ತಿದ್ದಳು. ಆಸುಪಾಸು ಹಾದುಹೋಗುತ್ತಿದ್ದವರು ಹೊರಬಾಗಿಲಲ್ಲಿ ನಿಂತು ಇದೇನೆಂದು ಕೇಳುತ್ತಿದ್ದರು. ಗುಡಸೀಕರನಿಗೆ ಭಂಡ ಧೈರ್ಯ ಬಂತು. ಬಾಯಿಗೆ ಬಂದ ಹಾಗೆ ಮಾತಾಡತೊಡಗಿದ. ಹೊರಗೆ ನಿಂತ ಒಬ್ಬ ಹುಡುಗನಿಗೆ ಪಂಚಾಯ್ತಿ ಮೆಂಬರರನ್ನು ಕರೆತರಲಿಕ್ಕೆ ಹೇಳಿದ. ತಾನು ಊರಿಗೆ ಎಷ್ಟೆಲ್ಲ ಹಿತ ಮಾಡಬೇಕೆಂದರೂ ಹಳೇ ಹದ್ದುಗಳು ಅಡ್ಡಿಬರುತ್ತವೆಯೆಂದ; ಈ ಊರಾಗಲೇ ಬೆಳಗಾವಿಯಾಗಿರುತ್ತಿತ್ತು- ಎಂದ ಪೋಜುದಾರನ ಎದುರಿಗೆ ಅವಮಾನ ಮಾಡಿದ್ದಕ್ಕೆ ಅಂದ. ಹೀಗೆ ಬಿಟ್ಟೂ ಬಿಡದೆ ಮಾತಾಡುವುದಕ್ಕೆ ಕಾರಣ ಹೀಗೇ ಚತುಷ್ಟಯರು ಬರುವ ತನಕ ನಡೆಸಿ ಅವರು ಬಂದರೋ ತಲೆಗೊಬ್ಬ ಒಂದೊಂದು ಮಾತಾಡಿದರೂ ದತ್ತಪ್ಪನ ಬಾಯಿ ಕಟ್ಟಿಹೋಗುತ್ತದೆ-ಎಂದು ಹೊಂಚಿದ್ದ.
ಅವನೆಂದುಕೊಂಡಿದ್ದಂತೆ ಚತುಷ್ಟಯರೂ ಬಂದರು. ಮನೇ ಮುಂದೆ ಆಗಲೇ ಹಿಂಡು ಜನ ಸೇರಿದ್ದರು. ಏನು ಯಾಕೆ-ಯಾರಿಗೂ ತಿಳಿಯುತ್ತಿರಲಿಲ್ಲ. ಬರೇ ಗುಡಸೀಕರನ ಬಾಯಿ ಕೇಳಿಸುತ್ತಿತ್ತು. ದತ್ತಪ್ಪ ಅವನ ಚಿಕ್ಕತನದ ವಾಚಾಳಿತನದೊಂದಿಗೆ ಆಟವಾಡುತ್ತ ಕೂತುಬಿಟ್ಟ. ಬಂದ ಚತುಷ್ಟಯರು ದತ್ತಪ್ಪನಿಗೆ ನಮಸ್ಕಾರ ಮಾಡಿ ಮೂಲೆ ಸೇರಿದರು. ಆಗಾಗ ಹಲ್ಲು ಕಿಸಿದರು; ಹಸ್ತ ಹೊಸೆದರು. ಅವರನ್ನು ಕೆಣಕುತ್ತ, “ಕೇಳಿದಿರೇನ್ರೋ? ನಾವೆಲ್ಲ ಸೇರಿ ಊರ ಹಾಳುಮಾಡಿದಿವಂತ. ಅದಕ್ಕ ಪಂಚಾಯ್ತಿ ಬಿಟ್ಟಕೊಡಿರಿ ಅಂತ ಹೇಳಾಕ ಬಂದಾನ” ಎಂದು ಹೇಳಿ ದತ್ತಪ್ಪನ ಕಡೆಗೂ ತಿರುಗಿ “ಹೋಗ್ರಿ; ಎಲೆಕ್ಷನ್ ಆಗಲಿ; ಅಲ್ಲೇ ತೀರ್ಮಾನವಾಗಲಿ” ಎಂದ. ಕೂಡಿದವರಿಗೆ ವಿಷಯವೇನೆಂದು ತಿಳಿಯಿತು. ಚತುಷ್ಟಯರು ಉತ್ತರ ಹೊಳೆಯದೆ ಸಾಲೆ ಮಕ್ಕಳಂತೆ ಸುಮ್ಮನೆ ಕೈಕಟ್ಟಿಕೊಂಡು ನಿಂತರು. ಕೂಡಿದವರಲ್ಲೊಬ್ಬ “ಹೌಂದಪಾ, ಹಿರೇರ ಹೇಳಿಧಾಂಗ ಕೇಳಬೇಕು” ಅಂದ. ಗುಡಸೀಕರನಿಗೆ ಇನ್ನೂ ಸಿಟ್ಟುಬಂತು- “ಹಿರೇತನ ಮಾಡಾಕ ನಾ ನಿನ್ನ ಕರಸಲಿಲ್ಲಪಾ; ಮೊದಲ ನನ್ನ ಮನೀ ಬಿಟ್ಟು ಹೊರಬೀಳು” ಅಂದ.
ತಕ್ಷಣ ದತ್ತಪ್ಪ ಎದ್ದು ಹೊರನದೆದುಬಿಟ್ಟ. ಮಂದಿಗೆ ಗುದಸೀಕರ ದತ್ತಪ್ಪನಿಗೇ ಮನೆಬಿಟ್ಟು ಹೊರಬೀಳೆಂದು ಹೇಳಿದಂತೆನಿಸಿತು. ಅವರೂ ಸಿಟ್ಟಾಗಿ ತಲೆಗೊಂದು ಮಾತಾಡುತ್ತ ಚೆದುರಿದರು. ಚತುಷ್ಟಯರು ಮಾತಾಡದ್ದೊಂದು ಕಡೆ. ಮಂದಿಯಲ್ಲೊಬ್ಬ ನಡುವೆ ಬಾಯಿಹಾಕಿದ್ದಿನ್ನೊಂದು ಕಡೆ, ಇನ್ನಷ್ಟು ಮಾತಾಡಿಸಿಕೊಳ್ಳಲು ದತ್ತಪ್ಪ ಕೂರಲಿಲ್ಲದ್ದು ಮತ್ತೊಂದು ಕಡೆ-ಎಲ್ಲ ಕೂಡಿ ಗುಡಸೀಕರನ ತಲೆ ಕಾವೇರಿತು. ಅವನ ತಾಯಿಗೂ ಅಸಮಧಾನವಾಯ್ತು; ದತ್ತಪ್ಪ ಮನೆಗೆ ಬಂದಾಗ ಗೌರವದಿಂದ ಮಗ ನಡೆದುಕೊಳ್ಳಲಿಲ್ಲವಲ್ಲಾ, ಇದ್ಯಾಕೆ ಹೀಗೆ ಮಾಡಿದನೆಂದು ಬಗೆಹರಿಯಲಿಲ್ಲ. ಅಲ್ಲದೆ ದತ್ತಪ್ಪ ಶಾಂತವಾಗೇ ಮಾತಾಡಿದ್ದ. ಎದುರಿನ ಕಣ್ಣುಗಳನ್ನು ಎದುರಿಸಲಾರದೆ, ಅಟ್ಟ ಹತ್ತಿ ತನ್ನ ಬಿಟ್ಟು ಉಳಿದೆಲ್ಲ ದತ್ತಪ್ಪ ಇಲ್ಲವೆ ಗೌಡನೆಂಬಂತೆ ಬಾಯಿ ತುಂಬ ಬೈಯುತ್ತ ಅಡ್ಡಾಡತೊಡಗಿದ.
ನಿಜ ಹೇಳಬೇಕೆಂದರೆ ಗುಡಸೀಕರ ಖಳನಾಯಕನಲ್ಲ. ಕಲಿತದ್ದರ ಬಗ್ಗೆ ಒಂದಿಷ್ಟು ಧಿಮಾಕಿತ್ತು. ಕಲಿತವರೇ ಇಲ್ಲದಲ್ಲಿ ಅದು ಹೆಚ್ಚಲ್ಲ. ಪ್ರಾಯದ ಮದ ಇತ್ತು; ಆ ವಯಸ್ಸಿಗೆ ಅದೂ ಹೆಚ್ಚಲ್ಲ. ಅಪ್ಪ ಗಳಿಸಿದ ದುಡ್ಡಿತ್ತು; ಆದರೆ ಧಾರಾಳತನವೂ ಇತ್ತು. ಜನ ಅವನನ್ನೆಂದೂ ತಮ್ಮ ಶತ್ರುವೆಂದು ಭಾವಿಸಲಿಲ್ಲ. ಗೌಡನಿಗೂ ಅವನಿಗೂ ವಿರೋಧವಿದೆಯೆಂದು ತಿಳಿಯಲಿಲ್ಲ. ಹೆಚ್ಚೇನು, ಚತುಷ್ಟಯರೂ ಹಾಗೆ ನಂಬಲಿಲ್ಲ.
ಕಲಿತ ಪ್ರಾಯದ ಎಲ್ಲ ಹುಡುಗರಂತೆ ಅವನೂ ಆದರ್ಶದ ಬೆಂಕಿಯನ್ನು ಪದರಿಗೆ ಕಟ್ಟಿಕೊಂಡ. ಬೆಂಕಿಯ ಬೆಳಕಿನಲ್ಲಿ ಕನಸು ಕಂಡ. ಅದರ ಕಾವಿನಲ್ಲಿ ಹುರುಪುಗೊಂಡ. ಪ್ರಾಯದ ಎಳೆಯರನ್ನು ಲಗಮವ್ವ “ಇಸಾಮಿತ್ರನ್ಹಾಂಗ” ಎಂದಿದ್ದಾಳೆ, ತನ್ನ ಹಾಡಿನಲ್ಲಿ. ಅದು ನಿಜವೆ: ಇದ್ದ ವ್ಯವಸ್ಥೆಯ ಅರೆಕೊರೆ ಸರಿಪಡಿಸುವ ಆಸೆ; ಪುನಃ ಸೃಷ್ಟಿಸುವ ಬಯಕೆ. ಊರಿಗೆಲ್ಲ ತಾನೊಬ್ಬನೇ ಸುಶಿಕ್ಷಿತನಾದ್ದರಿಂದ, ಬೆಳಗಾವಿಯ ಲೋಕಜೀವನ ಕಂಡವನಾದ್ದರಿಂದ ತನ್ನ ಪಾಲಿನ ಹೊಣೆಗಾರಿಕೆ ಜಾಸ್ತಿಯೆಂದು ಮನಗಂಡಿದ್ದ. ದೇಶಕ್ಕೆ ದೇಶವನ್ನೇ ಬದಲು ಮಾಡುವುದು ತನ್ನಿಂದಾಗಲಿಕ್ಕಿಲ್ಲ ಖರೆ; ಕಲಿತವರಿಗೆ ಗಾಂಧೀಜಿ ಹೇಳಲಿಲ್ಲವೆ? ಹಳ್ಳಿಗಳಿಗೆ ಹೋಗಿರಿ-ಎಂದು. ಸರಿ, ತನ್ನ ಪಾಡಿಗೆ ತಾನು ತನ್ನ ಹಳ್ಳಿ ಸುಧಾರಿಸಿದರೆ ಸಾಕು, ಇದಕ್ಕಿಂತ ಸಾರ್ಥಕವಾದ ಕೆಲಸ ಇನ್ನೇನಿದೆ? ಚಳವಳಿ ಸೇರಲಿಲ್ಲ; ಆದರೆ ಗಾಂಧಿ ಹೇಳಿದಂತೆ ಖಾದಿ ಉಟ್ಟ; ತೊಟ್ಟ, ಇನ್ನೇನು, ಸ್ವಲ್ಪ ಕುಡಿಯುವ ಚಟ ಇತ್ತು. ಹಳ್ಳಿಗರ ಕಣ್ಣಲ್ಲಿ ಅದೊಂದು ದುಶ್ಚಟವೂ ಅಲ್ಲ. ಬಹುಶಃ ಗಾಂಧೀ ಬಂದು ಏನು ಕೇಳಿದರೂ ಇವನಲ್ಲಿ ಉತ್ತರಗಳಿದ್ದವು. ಆದರೆ ‘ಯಾಕೋ ಗುಡಸೀಕರ ಕುಡಿಯುತ್ತಿ?’ಎಂದು ಕೇಳಿದ್ದರೆ ಮಾತ್ರ ನಿರುತ್ತರನಾಗುತ್ತಿದ್ದ. ಒಮ್ಮೊಮ್ಮೆ ಕರುಳಿಗಿಳಿದ ಚಟ ಬಿಡಲಾರದೆ ಅದಕ್ಕೂ ನೆಪ ಹುಡುಕುತ್ತಿದ್ದ. ಅದು ದೊಡ್ಡದಲ್ಲ, ಅವನ ಪ್ರಾಯದ ಮುಖದಲ್ಲಿಯ ಮೊಡವೆಯಂತೆ ಕಂಡೀತಷ್ಟೆ.
ಕೈಯಲ್ಲಿ ಗಾಂಧೀಫೋಟೋ, ತಲೆಯಲ್ಲಿ ಹಳವಂಡ ಹೊತ್ತುಕೊಂಡು ಹಳ್ಳಿಗೆ ಬಂದ. ಆದರೆ ಹಳ್ಳಿಯಲ್ಲಿ ಜನ ಕಾಣಿಸಲಿಲ್ಲ; ಪ್ರಾಣಿಗಳಿದ್ದವು.ಅಂಕುಡೊಂಕಾದ ರಸ್ತೆಗಳು; ಗಟಾರಿಲ್ಲದ ಓಣಿಗಳು, ಕೊಳೆತು ಎಲ್ಲೆಂದರಲ್ಲಿ ನಾರುವ ತಿಪ್ಪೆಗಳು, ಧೂಳಿನಲ್ಲಿ ಉರುಳಾಡುವ ಕೂಸುಗಳು, ಕುನ್ನಿಗಳು, ಬೇಕಾಬಿಟ್ಟಿ ಅಡ್ಡಾಡುವ ನಾಯಿಗಳು, ದನಗಳು, ಜನಗಳು-ಕಂಡು ಅಪಾರ ಕರುಣೆ ಬಂತು. ಕೊಳೆ ತೊಳೆಯಬೇಕಾದ್ದೇ ಮೊದಲ ಕೆಲಸವೆಂದುಕೊಂಡ. ಅದಕ್ಕೆ ಅವಕಾಶವೂ ಸಿಕ್ಕಿತು.
ಪಂಚಾಯ್ತಿಯಾಯಿತು; ತಾನೇ ಸರಪಂಚನಾದ. ಸಭೆ ಮಾಡಿದ. ಅವನ ಸಭೆಗಳಿಗಾದ ಗತಿ ಹಿಂದೆ ನೋಡಿದ್ದೀರಿ. ಆದರೆ ನಿಂಗೂನ ಕೇಸಿನಲ್ಲಿ ಆಘಾತವೇ ಆಯ್ತು ಗುಡಸೀಕರನಿಗೆ. ಕಾಣಾಕಾಣಾ ಆದ ಖೂನಿಯನ್ನು ಹಾಡುಹಗಲೇ ಮುಚ್ಚುವುದೆಂದರೆ! ಖೂನಿಯೆಂದರೆ ಖೂನಿಯೇ. ಹೆಚ್ಚಲ್ಲ, ಕಮ್ಮಿಯಲ್ಲ. ಅದರ ತೀರ್‍ಮಾನ ಕೋರ್ಟಿನಲ್ಲೇ ಆಗಬೇಕು. ಕಾಯ್ದೆ ಹಳ್ಳಿಗೊಂದು, ಶಹರಕ್ಕೊಂದು ಇರುವುದಿಲ್ಲ. ಊರ ಗೌಡ, ಕುಲಕರ್‍ಣಿ ಈ ರೀತಿ ತಾವೇ ಕಾನೂನನ್ನು ಕೈಗೆ ತಕ್ಕೊಂಡರೆ ನ್ಯಾಯ ಉಳಿದೀತೆ? ಛೇ ಛೇ ಇದನ್ನು ಯೋಚಿಸುವುದೇ ಅಸಾಧ್ಯ. ಈ ತನಕ ಅವನಿಗೆ ಗೌಡ, ದತ್ತಪ್ಪನ ಬಗ್ಗೆ ಗೌರವ ಭಾವನೆ ಇರಲಿಲ್ಲ. ಅಸಮಧಾನವೂ ಇರಲಿಲ್ಲ. ಆದರೆ ಈಗ ಮಾತ್ರ ಕೋಪ ಬಂತು. ಕಾಪಾಡುವ ಹೆಸರಿನಲ್ಲಿ ಊರನ್ನು ಹಾಳು ಮಾಡುವವರು ಇವರೇ-ಎಂದುಕೊಂಡ. ಸಾಲದ್ದಕ್ಕೆ ಎಲ್ಲ ಕೂಡಿ ಪೋಜುದಾರನ ಎದುರಿಗೆ ಅವರಂತೇ ಮಾತಾಡಿದ್ದರು. ಜನ ಎಷ್ಟೆಲ್ಲ ಅಜ್ಞಾನದಲ್ಲಿದ್ದರೆ ಅಷ್ಟಷ್ಟು ಇವರಿಬ್ಬರೂ ದೇವತೆಗಳಾಗುತ್ತಾರೆ. ಅದಕ್ಕೆ ಇವರಿಗೆ ಜ್ಞಾನದ ಮಾತಾಡುವವರು ಬರ್ಷಣವಾಗುತ್ತಾರೆ. ತಾನು ಮುಂದೆ ಬಂದರೆ ಜನಕ್ಕೆ ತಿಳಿವಳಿಕೆ ಕೊಟ್ತರೆ ಇವರ ಮಹಿಮೆ ನಂದುವುದಲ್ಲಾ, ಅದಕ್ಕೇ ಇವರಿಗೆ ತನ್ನ ಬಗ್ಗೆ ಅಸೂಯೆ ಎಂದುಕೊಂಡ.
ಇವತ್ತೂ ಅಂಥದೇ ಆಘಾತವಾಗಿತ್ತು. ಎಲೆಕ್ಷನ್ನಿಲ್ಲದೆ ಹಿರಿಯರು ಪಂಚಾಯ್ತಿ ತನ್ನ ಕೈಗಿಟ್ಟದ್ದು ನಿಜ. ಆದರೆ ಅದಕ್ಕೆ ಕಾರಣ ಬೇರೆ. ಕಲಿತವರಿರಲ್ಲ; ಪಂಚಾಯ್ತಿ ಅಂದರೇನೆಂದು ಗೊತ್ತಿಲ್ಲ. ಬೇರೆ ದಿಕ್ಕಿಲ್ಲದೆ ತಟ್ಟೆಯೊಳಗಿಟ್ಟು ಕೈಗಿತ್ತರು. ಈಗ ತಿರುಗಿ ಕೇಳಿದರೆ?- ಹೊಸದಾಗಿ ಕಲಿತವರು ಬಂದರೋ? ದತ್ತಪ್ಪ ಊರವರನ್ನೆಲ್ಲ ಕೂಡಿಸಿ ಪಂಚಾಯ್ತಿ ಕೇಳಿದ ಎನ್ನೋಣ. ಗೌಡನಿಗೆ ಹೆದರಿ ಮಂದಿ ಕೈ ಎತ್ತಲೂಬಹುದು. ಹಾಗಾದರೆ ಅದು ಪಂಚಾಯ್ತಿ ಆಯ್ತೆ? ಊರಿನ ಪ್ರತಿಯೊಬ್ಬನಿಗೂ ಆಯ್ಕೆಮಾಡುವ ಸ್ವತಂತ್ರ ಹಕ್ಕಿದೆ. ಇವರಿಗೆ ಅದು ಬೇಕಿಲ್ಲ.
ಹೀಗೆ-
ಹಲವು ಹದಿನೆಂಟು ಥರ ಯೋಚಿಸಿದ. ಯಾವ ಮಗ್ಗುಲಿನಿಂದ ತಿಳಿದು ನೋಡಿದರೂ ತನ್ನದೇ ನಿಜ ಅನ್ನಿಸಿತು. ಒಂದಂತೂ ಅವನಿಗೆ ಖಾತ್ರಿಯಾಯ್ತು; ಹಿಂದಿನಂತೆ ಈ ಸಲ ಪಂಚಾಯ್ತಿಯನ್ನ ಅವರು ತಟ್ಟೆಯೊಳಗಿಟ್ಟು ಕೊಡೋದಿಲ್ಲ. ಎಲೆಕ್ಷನ್ ಗ್ಯಾರಂಟಿ. ಆದರ ತಯಾರಿ ಈಗಿನಿಂದಲೇ ಸುರುಮಾಡಬೇಕೆಂದ. ಕಾರಹುಣ್ಣಿವೆ ದಿನ ನಾಟಕವಾಡುತ್ತೇವಲ್ಲಾ ಅದು ಎಲೆಕ್ಷನ್ ಗೆಲುವನ್ನು ಹತ್ತಿರ ತರಬೇಕು ಎಂದುಕೊಂಡ.
ಸೀತಾಪಹರಣ
ನಾಟಕದ ತಯಾರಿ ಅದ್ದೂರಿಯಿಂದ ನಡೆಸಿದರು. ಕಾರಹುಣ್ಣಿವೆಯ ದಿನ ಸಮೀಪಿಸಿದಂತೆ ಹುಡುಗರ ಗಡಿಬಿಡಿ ಅತಿಯಾಯ್ತು. ಇವರಾಡುವ ನಾಟಕ ಜನರ ಕಿವಿ, ಬಾಯಿಗೆ ಸುದ್ದಿಯಾಯ್ತು. ಬಾಲೆಯರು ನೀರು ತರುವ ದಾರಿಯ ಮಾತಿಗೆ ಕಥೆಯಾಯ್ತು. ದಿನಾ ಅದರ ತಾಲೀಮು (ರಿಹರ್ಸಲ್), ನೋಡುವುದಕ್ಕೇ ಹಿಂಡು ಹಿಂಡು ಜನ ಸೇರುತ್ತಿದ್ದರು. ಮುಂದೆ ಏನಾದರಾಗಲಿ, ತಾಲೀಮುಗಳ ಆ ಸಡಗರ, ಆ ಸಂಭ್ರಮ, ಆ ವೈಯಾರ, ಛೇ ನಾಟಕದ ಹುಡುಗರು ಅಷ್ಟೂ ದಿನ ನೆಲಕ್ಕೆ ಕಾಲೂರಲೇ ಇಲ್ಲ.
ಕಳ್ಳ ರಾವಳನಾಗಿದ್ದನಲ್ಲವೆ?- ಕಲ್ಲೀ ಮೀಸೆ ಬಿಟ್ಟು ದಿನಾ ಎಣ್ಣೆ ಹಚ್ಚಿ ಉಜ್ಜಿದ್ದೇ -ಸಂಭಾಷಣೆ ಕಂಠಪಾಠ ಮಾಡಲಿಕ್ಕೆ ಹೋಗಿ ಬಂದಲ್ಲಿ ಆ ಮಾತು ಒದರಿದ್ದೇ , ನಿಂಗೂ ಸಿಕ್ಕರೆ ಅವನೇ ಸೀತೆಯೆಂದು ಎಳೆದೆಳೆದು ಗಂಟಲ ನರ ಹರಿಯೋ ಹಾಗೆ ಕಾಡು ಕಿರಚಿದ್ದೇ-ಸುಳ್ಳಲ್ಲ, ಈಗ ಯಾರೊಂದಿಗೆ ಏನು ಮಾತಾಡಿದರೂ ರಾವಳನ ಧಾಟಿಯಲ್ಲೇ ಮಾತಾಡುತ್ತಿದ್ದ. ಅವನ ನಡಿಗೆಯ ರೀತಿ ಕೂಡ ಬದಲಾಗಿ ಕಿಸುಗಾಲು ಹಾಕಿ ನಡೆಯುತ್ತಿದ್ದ.
ಇತ್ತ ರಮೇಸನ ಸೀತೆಯ ಸಡಗರ ಹೇಳತೀರದು. ಗೇಣುದ್ದ ಕೂದಲ ಬಿಟ್ಟು, ಸೋರುವ ಹಾಗೆ ಎಣ್ಣೆ ಹಚ್ಚಿಕೊಂಡು, ಪೇಟೆಯ ಸೂಳೆಯರಂತೆ-ತಲೆ ಬಾಚಿಕೊಂಡು, ಮೂಗು ಮುರಿಯುವ ವೈಯಾರವೇ, ಕೈ ತಿರುಗಿಸುವ ಅಭಿನಯವೇ, ಹುಬ್ಬು ಹಾರಿಸಿ ತುಟಿ ಕಚ್ಚಿಕೊಳ್ಳುವ ಸೃಂಗಾರವೇ, ಆಹಾ ನಿಂಗೂನ ಹೃದಯದಲ್ಲಿ ಸವತಿ ಮತ್ಸರ ಹುಟ್ಟಿಸಿದ್ದು ಹೆಚ್ಚಲ್ಲ. ಹುಡುಗಿಯರೂ ಇವನನ್ನು ನೋಡಿ ಕರುಬುವಂತಾಯಿತು. ಆಂಜನೇಯನಾದ ಮೆರಮಿಂಡ ಈಗ ನೆಗೆಯುತ್ತಲೇ ನಡೆದಾಡುತ್ತಿದ್ದ. ಇವರ ಉರವಣಿ ನೋಡಿ ಊರ ಹುಡುಗರು ನಾಟಕದಲ್ಲಿ ಪಾತ್ರ ಸಿಕ್ಕವರೇ ನಶೀಬವಂತರೆಂದು ಅಸೂಯೆಪಟ್ಟರು.
ನಾಟಕ ನೋಡುವುದಕ್ಕೆ ಜನ ದಿನದಿನಕ್ಕೆ ಹೆಚ್ಚು ಹೆಚ್ಚು ಕೌತುಕ ತಾಳುತ್ತಿದ್ದರೆ ನಿಂಗೂ ಮಾತ್ರ ಹೆಚ್ಚು ಹೆಚ್ಚು ಹೊಟ್ಟೆಕಿಚ್ಚಿನಿಂದ ಉರಿದ. ತನಗೆ ಸೀತೆಯ ಪಾತ್ರ ಕೊಡಲಿಲ್ಲವಲ್ಲಾ ಎಂದು ತಳಮಳಿಸಿದ. ತಾನು ಸೀತೆಯಾಗಿದ್ದರೆ ಹೇಗೆ ನಿಲ್ಲುತ್ತಿದ್ದೆ. ಹ್ಯಾಗೆ ಕುಣಿಯುತ್ತಿದ್ದೆ, ಹ್ಯಾಗೆ ಹಾಡುತ್ತಿದ್ದೆ. ಹ್ಯಾಗೆ ಅಭಿನಯಿಸುತ್ತಿದ್ದೆ. ಕಳ್ಳ ಎದುರು ಬಂದಾಗ ಹ್ಯಾಗಿರುತ್ತಿದ್ದೆ, ಎಳೆದಾಗ ಹ್ಯಾಗೆ ಒಳಗಾಗುತ್ತಿದ್ದೆ, ಹೊತ್ತಾಗ ಹ್ಯಾಂಗೆ ಅನುಕೂಲಳಾಗುತ್ತಿದ್ದೆ-ಇತ್ಯಾದಿ ಕಲ್ಪಿಸಿ ಇನ್ನಷ್ಟು ಅಸೂಯೆಪಟ್ಟ. ತಾನು ನಪುಂಸಕನಾಗಿದ್ದು ವ್ಯರ್ಥವೆನಿಸಿತು. ಹ್ಯಾಗೆ ನಾಟಕ ಮಾಡುತ್ತಾರೋ ನೋಡೇ ಬಿಡುತ್ತೇನೆಂದುಕೊಂಡ.
ಸುದ್ದಿ ಸುತ್ತ ಹದಿನಾಕು ಹಳ್ಳಿಗೆ ಹಬ್ಬಿತು. ಬೆಳಗಾಂವಿಯಿಂದ ಚಿಮಣಾ ಬರುತ್ತಾಳೆಂದು, ಡ್ಯಾನ್ಸು ಮಾಡುತ್ತಾಳೆಂದು, ವಿದ್ಯುದ್ದೀಪ ತರಿಸುತ್ತಾರೆಂದು ಮೊದಮೊದಲಿದ್ದರೆ, ಆಮೇಲೆ ಅದಕ್ಕೆ ಕೈಕಾಲು ಮೂಡಿ ಕಳ್ಳ ರಂಗತಾಲೀಮಿನಲ್ಲಿ ಕಿರಿಚಿದಾಗ ಪಕ್ಕದ ಮನೆಯ ಬಸರಿ ಹಲಿವುಳ್ದಳೆಂದು, ಮೆರಮಿಂಡನ ಮೈಯಲ್ಲಿ ಸ್ವಥಾ ಆಂಜನೇಯ ತುಂಬುವನೆಂದು ಹಬ್ಬತೊಡಗಿದವು. ಸೀತೆಯಾದ ರಮೇಸ ಈಗೀಗ ಹೆಂಗಸರಂತೆ ತಿಂಗಳಿಗೊಮ್ಮೆ ಮುಟ್ಟಾಗುವನೆಂದೂ ನಿಂಗೂ ಹೇಳಿದ. ಇಂಥ ಸುದ್ದಿ ಪಾತ್ರಧಾರಿಗಳ ಕಿವಿಗೆ ಬಿದ್ದಾಗಲಂತೂ ಒಬ್ಬೊಬ್ಬ ಒಂದೊಂದು ರೀತಿ ಪುಳಕಗೊಳ್ಳುತ್ತ ಅದು ನಿಜವೆಂಬಂತೆ ಅಭಿನಯಿಸುತ್ತಿದ್ದ. ನಾಟಕದ ದಿನ ಯಾವಾಗ ಬಂದೀತೋ ಎಂದು ಪ್ರತಿ ಜೀವ ಚಡಪಡಿಸುತ್ತಿತ್ತು. ಸಧ್ಯ ಆ ದಿನವೂ ಬಂತು.
ಆ ದಿನ ಗೌಡ ಆರು ತಾಸಿನ ಮಧ್ಯಾಹ್ನ ಗುಡಿಸಲ ಮುಂದಿನ ಮರದಡಿ ಕೂತು ಕೂರಿಗಿ ಜೋಡಿಸುತ್ತಿದ್ದ. ತೋಟದ ಅಂಚಿನಲ್ಲಿ ಶಿವನಿಂಗ ಮೇವು ಮಾಡುತ್ತಿದ್ದವನು ಅಲ್ಲೇ ನಿಂತುಕೊಂಡು ಊರಿನ ಕಡೆಗೆ ನೋಡುತ್ತಿದ್ದ. ಅವನನ್ನು ಗಮನಿಸಿ ಗೌಡ ತಾನೂ ಊರ ಕಡೆ ನೋಡಿದ. ದೂರದಲ್ಲಿ ದತ್ತಪ್ಪ, ಲಗಮವ್ವ ಅವರೊಂದಿಗೆ ಇನ್ನಿಬ್ಬರು, ಪರವೂರಿನವರು ಗುಡಿಸಲಕಡೆಗೇ ಬರುತ್ತಿದ್ದರು. ಇಂಥ ಅಪವೇಳೆಯಲ್ಲಿ ದತ್ತಪ್ಪ ಬರೋ ಪೈಕಿ ಅಲ್ಲ, ಯಾಕಿರಬಹುದೆಂದು ಗೌಡನಿಗೂ ಆಶ್ಚರ್‍ಯವಾಯಿತು. ಹಾಗೇ ನೋಡುತ್ತ ನಿಂತ.
ಗೌದನಿಗೆ ಉಳಿದಿಬ್ಬರು ನಮಸ್ಕಾರ ಮಾಡಿದರು. ಆಗಂತುಕರ ಉದ್ದ ಕೂದಲು, ಅವನ್ನು ಮುಚ್ಚುವಂತೆ ಹಾಕಿದ ಕರಿಈಟೊಪ್ಪಿಗೆ-ಇವುಗಳಿಂದ ಆಟದವರೇ-ಎಂದು ಖಚಿತವಾಯ್ತು. ಪಡಸಾಲೆಯಲ್ಲಿ ಎಲ್ಲರೂ ಕೂತರು. ಪಕ್ಕದ ಹಳ್ಳಿಯವರು ಪಾರಿಜಾತ ಕಲಿತಿದ್ದಾರೆ, ಆಡೋದಿಕ್ಕೆ ಬಂದಿದ್ದಾರೆಂದು ದತ್ತಪ್ಪ ವಿಷಯ ಹೇಳಿದ. ಕಾರಹುಣ್ಣಿವೆ ಒಂದರ್ಥದಲ್ಲಿ ಗೌಡನ ಮನೆಯ ಹಬ್ಬ, ಕರಿ ಹರಿಯುತ್ತಿರಲಿಲ್ಲ. ಯಾಕೆಂದರೆ ವರ್ಷಗಳ ಹಿಂದೆ ಕರಿ ತಪ್ಪಿಸಿಕೊಂಡು ಪರವೂರಿಗೆ ಹೋಗಿತ್ತು. ಈ ದಿನ ರಾತ್ರಿ ಕರಿಮಾಯಿ ಶಿಶು ಮಕ್ಕಳು ಸಮೇತ ಗೌಡನ ಮನೆಗೆ ಬಂದು, ಬೇಟೆಯ ಬಿನ್ನಾಯ ಮಾಡಿ, ಆಟ, ಮೋಜು ನೋಡಿ ಬೆಳಿಗ್ಗೆ ಗುಡಿಗೆ ಹೋಗುವುದು ಪದ್ಧತಿ. ಊರಿನಲ್ಲಿ ಈ ದಿನವೇ ಗುಡಸೀಕರನ ಮಂಡಳಿ ನಾಟಕ ಆಡುವವರಿರುವಾಗ ಇನ್ನೊಂದನ್ನು ಆಡಿಸುವುದು ಗೌಡನಿಗೆ ಒಪ್ಪಾಗಿ ತೋರಲಿಲ್ಲ. ಆದರೆ ಬಂದವರು ಕೇಳಲಿಲ್ಲ. ನೀವೇ ನೋಡದಿದ್ದರೆ ನಾವೇನು ಕಲಿತಂತಾಯಿತೆಂಬಥ ಮಾತಾಡಿದರು. ಅದು ಆ ಭಾಗದ ಕಲಾವಿದರಿಗೆ ಸಹಜ. ಗೌಡನ ಅಭಿರುಚಿ ಅಂಥದ್ದು, ಹಾಡುಗಾರಿಕೆಯಿರಲಿ, ಕುಣಿತವಿರಲಿ, ಮಾತುಗಾರಿಕೆಯಿರಲಿ- ಅದರ ಹೆಚ್ಚುಗಾರಿಕೆಯನ್ನು ಗುರುತಿಸಬಲ್ಲವನಾಗಿದ್ದ. ಆಡಂಬರದ ಕಲೆಯಿಂದ ಅದನ್ನು ಬೇರ್ಪಡಿಸಬಲ್ಲವನಾಗಿದ್ದ. ಅಂತೂ ಗೌಡನಿಂದ ಭೇಷ್ ಅನ್ನಿಸಿಕೊಳ್ಳದವನು ಕಲಾವಿದನೇ ಅಲ್ಲ ಎಂಬಂಥ ಗುಂಗು ಕಲಾವಿದರಲ್ಲಿತ್ತು.
ಗೌಡನ ಹುಚ್ಚೇನು ಕಮ್ಮಿಯಲ್ಲ. ಕೌಜಲಗಿ ನಿಂಗವ್ವನಿಗೆ ಭೇಷ್ ಅಂದವನು, ಶಿವಗುರೆಪ್ಪನಿಗೆ ಭಲೆ ಅಂದವನು. ಖುಷಿ ಬಂದಾಗ ಗೌಡನ ಕೊಡುಗೈ ತಡೆಯುವವರೇ ಇಲ್ಲ. ಅದೇನು ಹುಚ್ಚೋ, ಕಲೆಯ ಜೊತೆ ವಿಚಿತ್ರ ತಾದಾತ್ಮ ಹೊಂದುತ್ತಿದ್ದ. ಹಿಂದೊಮ್ಮೆ ಸ್ವತಃ ನಿಂಗವ್ವ ಸತ್ಯಭಾಮೆಯಾಗಿ ಭಕ್ತಿ, ಸೇಡು, ಅನುರಾಗಗಳ ಸುಳಿಗೆ ಸಿಕ್ಕು “ಕೃಷ್ಣಾ” ಎಂದು ಆರ್ತಳಾಗಿ ಹಾಡಿದಾಗ ಆ ದಿನ ಗೌಡ ಮುದಿ ಹೆಂಗಸಿನಂತೆ ಅತ್ತುಬಿಟ್ಟಿದ್ದ. ಕಲಾವಿದರೂ ಹಾಗಿದ್ದರು. ಅದೇ ನಿಂಗವ್ವನನ್ನು ದತ್ತಪ್ಪ ಮುಂಗೈ ಹಿಡಿದು ಏನು ಕೇಳುತ್ತಿ ಕೇಳು ಎಂದಿದ್ದ. “ಕೃಷ್ಣ ಕುಡದ ಹಾಲಿನ ಗಡಿಗ್ಯೊ ಇದು. ಇದನ್ಯಾಕ ಮುಟ್ಟತಿ” ಎಂದಿದ್ದಳು. ದತ್ತಪ್ಪ ಕೂಡಲೇ ಅವಳ ಕಾಲು ಮುಟ್ಟಿ ನಮಸ್ಕರಿಸಿದ್ದ. ಆ ಕಲಾವಿದರು, ಅವರ ಕಲೆಗಳು ಬದುಕಿನ ಗೂಢಗಳನ್ನು ಝುಮ್ಮುದಟ್ಟಿಸುವಂತೆ ಚುಚ್ಚಿದ್ದವು. ಆ ಅನುಭವದಿಂದ ಇವರು ಧನ್ಯರಾಗಿದ್ದರು.
ಆದರೆ ಈ ದಿನ ಆ ಅನುಭವ ಬೇಡವಾಗಿತ್ತು. ಚೆಲುವಾದ ಹಾಡುಗಾರಿಕೆಗೆ ಮೈ ಪುಳಕಗೊಳ್ಳುವ ದಿನ ಅಲ್ಲ ಇದು, ಮಾತುಗಾರಿಕೆಯ ಚಕಮಕಿಯ ಕಿಡಿ ಈ ದಿನ ತಲೆಯಲ್ಲಿ ಬೆಳಕು ಚೆಲ್ಲುವಂತಿರಲಿಲ್ಲ. ಕುಣಿತಕ್ಕೆ ಕಣ್ಣು ಹಿಗ್ಗುವ ಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಗುಡಸೀಕರನ ನಾಟಕದಿಂದಾಗಿ ಬಂದವರೆದುರು ಊರ ಹುಳುಕುಗಳನ್ನು ಹೇಗೆ ತೋಡಿಕೊಳ್ಳುವುದು? ಅಷ್ಟು ದೂರದಿಂದ ಬಂದವರನ್ನು ಹೇಗೆ ನಿರಾಸೆಗೊಳಿಸುವುದು? ಅಷ್ಟರಲ್ಲಿ ಶಿವನಿಂಗ ದೂರ ನಿಂತಿದ್ದವನು “ಅವರೂ ಮಾಡಿಕೊಳ್ಳೋದಾದರ ಆಡಲಿ; ನಾವ್ಯಾಕ ನಮ್ಮ ಪದ್ಧತಿ ಬಿಡಬೇಕು?” ಅಂದ. ಬೇರೆ ಸಂದರ್ಭದಲ್ಲಾದರೆ ಗೌಡ ಈ ಮಾತು ಮೆಚ್ಚುತ್ತಿದ್ದನೋ ಏನೊ” ಅದೇನು ಮಾಡ್ತೀಯೊ ನೀನ ಮಾಡಿಕೊ ಮಾರಾಯ” ಎಂದುಬಿಟ್ಟ ದತ್ತಪ್ಪನಿಗೆ. ದತ್ತಪ್ಪನಿಗೆ ಅಷ್ಟು ಸಾಕಾಗಿತ್ತು ಕಲಾವಿದರನ್ನು ಎಬ್ಬಿಸಿಕೊಂಡು ಹೊರಟ.
ಊರಿನ ಇನ್ನೊಂದು ಭಾಗದಲ್ಲಿ ವಿಚಿತ್ರ ಲವಲವಿಕೆ ತುಂಬಿತ್ತು. ಸ್ಟೇಜು ಕಟ್ಟುವ ಸೀನು ಸೀನರಿಯ ಪರದೆ ಕಟ್ಟುವ ನಾ ಮುಂದು, ನೀ ಮುಂದು ಜನಗಳ ಉತ್ಸಾಹ ಹೇಳತೀರದು. ನಾಟಕವಿನ್ನೂ ರಾತ್ರಿ ಉಂಡು ಮಲಗೋ ಹೊತ್ತಿಗೆ ಸುರುವಾಗೋದು. ಜನ ಆಗಲೇ ಸ್ಟೇಜಿನ ಬಳಿ ಗಂಡು ಹೆಣ್ಣೆನ್ನದೆ, ಕಿರಿ ಹಿರಿಯರೆನ್ನದೆ ಸೇರಿಬಿಟ್ಟಿದ್ದರು. ನಾಟಕದ ಪ್ರತಿಯೊಬ್ಬ ಪಾತ್ರಧಾರಿ ಮದುವೆಯ ವರನಂತೆ, ಕೂಡಿದವರು ತನ್ನ ಮದುವೆಗೇ ಬಂದವರೆಂಬಂತೆ ಸಡಗರದಿಂದ ನೋಡುತ್ತ ನೋಡಿಸಿಕೊಳ್ಳುತ್ತ ಆ ಕಡೆ ಈ ಕಡೆ ಓಡಾಡುತ್ತಿದ್ದ. ಅವರಿಗೆ ಮುಗಿಲು ಮೂರೇ ಗೇಣು ಉಳಿದಿತ್ತು. ಸೇರಿದವರಿಗೆ ತಾನು ಪಾತ್ರಧಾರಿಯೆಂದು ತಿಳಿಯಬೇಕಲ್ಲ? ತನ್ನ ಪಾತ್ರದ ಮಾತುಗಳನ್ನು ಜನರ ಗುಂಪಿನಲ್ಲೇ ಬಾಯಿಪಾಠ ಮಾಡುತ್ತ ಅಡ್ಡಾಡುತ್ತಿದ್ದ. ಪಕ್ಕದ ಹಳ್ಳಿಗಳ ಹೈಕಳು ಆಗಲೇ ರಾತ್ರಿಯ ಬುತ್ತಿ ಕಟ್ಟಿಕೊಂಡು ಬಂದಿದ್ದರು. ವಿದ್ಯುದ್ದೀಪದ ಬಗ್ಗೆ, ಚಿಮಣಾ ಬಗ್ಗೆ ಎಲ್ಲರೂ ತಮತಮಗೆ ತಿಳಿದ ಕಥೆಗಳನ್ನು ಎಷ್ಟು ಹೇಳಿ ಕೇಳಿದರೂ ತೃಪ್ತಿಯಿಲ್ಲ.
ಚಿಮಣಾ ಗುಡಸೀಕರನ ಮನೆಯಲ್ಲಿದ್ದಳು. ಅವನ ಮನೆಯ ಮುಂದೊಂದು ಹಿಂಡು ಹುಡುಗರು ನಿಂತಿದ್ದರು. ಅಪ್ಪಿತಪ್ಪಿ ಚಿಮಣಾ ಉಗುಳೋದಕ್ಕಾದರೂ ಹೊರಗೆ ಬಂದರೆ ಆಗಲೇ ನೋಡಬೇಕೆಂಬ ತವಕ ಪ್ರತಿಯೊಬ್ಬನಿಗೆ. ಒಳಗೆ ಮಾತಾಡುವವರ ದನಿ ಹೊರಗಿನವರಿಗೆ ಹೆಣ್ಣುದನಿಯಾಗಿ ಕೇಳಿಸುತ್ತಿತ್ತು. ಗಿರಿಜಳ ಓಡಾಟ ಹೇಳತೀರದು. ಪರಿಚಿತ ಹುಡುಗರನ್ನೋ, ಪಾತ್ರಧಾರಿಗಳನ್ನೋ ಕರೆದು ಏನೇನೋ ಕೆಲಸ ಹೇಳುತ್ತ ಗಾಳಿ ತುಂಬಿದ ಎಳೆಗರುವಿನಂತೆ ಒಳಗೊಮ್ಮೆ, ಹೊರಗೊಮ್ಮೆ ವಿನಾಕಾರಣ ಓಡಾಡುತ್ತ ತನ್ನ ಪ್ರತಿಷ್ಠೆ ಪ್ರದರ್ಶಿಸುತ್ತಿದ್ದಳು.
ಆ ದಿನ ಊರಿನಲ್ಲಿ ನಾಟಕವಿದ್ದ ವಿಷಯ ಬಯಲಾಟದ ಕಲಾವಿದರಿಗೂ ಗೊತ್ತಿತ್ತು. ತಮ್ಮ ಬಯಲಾಟಕ್ಕೆ ಜನ ಸೇರುವುದಿಲ್ಲವೆಂದೂ ಗೊತ್ತಿತ್ತು. ನಿರಾಸೆಯೂ ಆಗಿತ್ತು. ಆದರೂ ಗೌಡ, ಹಿರಿಯರೂ ನೋಡುತ್ತಾರಲ್ಲಾ, ಸಾಕೆಂದು ಸುಮ್ಮನಾದರು.
ಊರಿನ ಬಯಕೆ ಹಣ್ಣಾದಂತೆ ಹೊತ್ತು ಮುಳುಗಿತು. ಕತ್ತಲಾಗುವುದರೊಳಗೇ ಹೊಸ ನಾಟಕದವರು ವಿದ್ಯುದ್ದೀಪ ಹಚ್ಚಿಬಿಟ್ಟರು. ಕೇಳಬೇಕೆ? ಜನ ಅವಸರವಸರವಾಗಿ ಊಟ ಮಾಡಿ, ಸ್ಟೇಜಿನ ಮುಂದೆ ಅನುಕೂಲ ಜಾಗ ಹಿಡಿದುಕೊಂಡು ನಾ ಮುಂದೆ ತಾ ಮುಂದೆಂದು ಜಗಳಾಡುತ್ತ ಕೂತುಬಿಟ್ಟರು.
ಪ್ರೇಕ್ಷಕರಲ್ಲಿ ಒಡೆದು ಕಾಣುತ್ತಿದ್ದವಳೆಂದರೆ ಗಿರಿಜಾ. ಅವಳಿಗೆ ಹೆಮ್ಮೆ, ತಾನು ಗುಡಸೀಕರನ ತಂಗಿಯಾದದ್ದಕ್ಕೆ, ಚಿಮಣಾ ತಮ್ಮ ಮನೆಯಲ್ಲಿ ಇಳಿದುಕೊಂಡಿದ್ದಕ್ಕೆ. ಎಲ್ಲರೂ ತನ್ನ ಮಾತು ಕೇಳುತ್ತಿರುವರೆಂಬ ಜೋರು ದನಿಯಲ್ಲಿ ಮಾತಾಡುತ್ತಿದ್ದಳು. ಅವಳ ಸುತ್ತ ಹತ್ತಾರು ಸಮವಯಸ್ಸಿನ ಹುಡುಗಿಯರು ಬಿಟ್ಟ ಕಣ್ಣು ಬಿಟ್ಟಹಾಗೆ, ತೆರೆದ ಬಾಯಿ ತೆರೆದ ಹಾಗೇ, ಆಕೆ ಹೇಳುವುದನ್ನೆಲ್ಲ ಭಯ, ಭಕ್ತಿ ಬೆರಗಿನಿಂದ ಕೇಳುತ್ತ ಕುಳಿತಿದ್ದರು. ಚಿಮಣಾಳನ್ನು ಎಷ್ಟು ವರ್ಣಿಸಿದರೂ ಆ ಹುಡುಗಿಯ ಬಾಯಿಗೆ ಸೋಲಿರಲಿಲ್ಲ.
“ಚಿಮಣಾ ಅಂದರ ಏನಂತ ತಿಳಿದಿರೆ? ಅಂಗಡ್ಯಾಗಿನ ಗೊಂಬ್ಯಾಗ್ಯಾಳ! ಪತ್ತಲ ಉಟ್ಟಾಳ ಖರೆ, ನಮ್ಹಾಂಗ ಸೆರಗ ತಲೀಮ್ಯಾಲ ಹೊರೊಣಿಲ್ಲ. ಹಾರೂರ್‍ಹಾಂಗ ಹೆಗಲ ಮ್ಯಾಲ ಹಾಕತಾಳ. ದೊಡ್ಡ ಸಾವ್ಕಾರಂತ! ನಿಂತ ನೋಡಿದರ ತಲೀ ಮ್ಯಾಗಿನ ರುಂಬಾಲ ಕೆಳಗ ಬೀಳಬೇಕ, ಅಷ್ಟೆತ್ತರ ಬಂಗ್ಲೆ ಐತಂತ; ಆರ ಮಂದಿ ಹೆಂಗಸರ ಬರೀ ಆಕೀ ಸೀರಿ ಒಗ್ಯಾಕ ಇದ್ದಾರಂತ! ಮತ್ತ ಹಾಸಿಗಿ ಹಾಸವಾಕಿ ಬ್ಯಾರೆ! ಅಡಿಗೀ ಮಾಡುವಾಕೀ ಬ್ಯಾರೇ, ಊಟ ನೀಡುವಾಕಿ ಬ್ಯಾರೇ, ಊಟದ ಮ್ಯಾಲ ಎಲಡಿಕಿ ಮಡಿಚಿ ಕೊಡುವಾಕಿ ಬ್ಯಾರೆ! ನಮ್ಹಾಂಗ ಬುಟ್ಟಿ ತಿಂದ ತೊಟ್ಟಿ ಹೇತಾಳಂದೀ! ನಮ್ಮ ಮನ್ಯಾಗ ಊಟ ಮಾಡೋವಾಗ ನಾನಽ ನೋಡೇನಲ್ಲ-ಈಟ ಈಟ ಅನ್ನ, ಇಷ್ಟ ಸಾರ, ಹಾಲ ತುಪ್ಪ! ಮೂರ ತುತ್ತು ಊಟ ಮಾಡತಾಳ, ಕೈ ತೊಳೀತಾಳ ಅಷ್ಟ. ಕುಬಸದಾಗಿನ ಬಾಡೀ ಹೆಂಗೈತಂದಿರೇ? ದಿನಕ್ಕ ಮೂರು ಬಾಡಿ ತೊಡತಾಳ! ಬಾಡೀಗೀ ಸೈತ ನಾರೂ ಎಣ್ಣಿ ಹಚ್ಚಿರತಾಳ….” ಇತ್ಯಾದಿ ಇತ್ಯಾದಿ ಈ ಮಾತು ಕೇಳಿ ಪಾಪ ಒಂದು ಅರಿಯದ ಬಾಲೆ “ಆಕೀನೂ ನಮ್ಹಾಂಗ ಹೂಂಸ ಬಿಡತಾಳು?” ಎಂದು ಕೇಳಿತು. ಆಶ್ಚರ್ಯವೆಂದರೆ ಈ ಪ್ರಶ್ನೆಗೆ ಯಾರೂ ನಗಲಿಲ್ಲ. ಇದಕ್ಕೂ ಗಿರಿಜಾ ಗಂಭೀರವಾಗಿಯೇ ಉತ್ತರಕೊಟ್ಟಳು.
ನಾಟಕ ಸುರುವಾಗೋತನಕ ಗಿರಿಜಾ ಒಂದಿಲ್ಲೊಂದು ಇಂಥ ಸಂಗತಿ ಹೇಳುತ್ತಲೇ ಇದ್ದಳು. ಉಳಿದವರು ಕೇಳುತ್ತಲೇ ಇದ್ದರು. ಹೇಳಿ ಅವಳು ದಣಿಯಲಿಲ್ಲ, ಕೇಳಿ ಅವರು ದಣಿಯಲಿಲ್ಲ. ಇಂಥ ಹರಿಕಥೆಗಳು ಪ್ರೇಕ್ಷಕರಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇದ್ದವು. ಗೌಡನ ಮನೇ ಮುಂದೆ ಬಯಲಾಟವಾಗಲೇ ಸುರುವಾಗಿತ್ತು.
ಇವರ ನಾಟಕ ಸುರುವಾಯ್ತು. ಪ್ರಾರಂಭಕ್ಕೆ ಗುಡಸೀಕರ ರಂಗದ ಮೇಲೆ ಬಂದು ನಾಟಕ ಕಲೆಯ ಬಗ್ಗೆ ಒಂದು ಉಪನ್ಯಾಸ ಬಿಗಿದ. ಯಾರಿಗೂ ಭಾಷಣ ತಿಳಿಯಲಿಲ್ಲ. ಆದರೆ ಯಾರೂ ಗದ್ದಲ ಮಾಡಲಿಲ್ಲ. ಭಾಷಣದ ಅಂತ್ಯಕ್ಕೆ ಪಾಪಮಾಸ್ತರ ಬಂದು ಅವನಿಗೊಂದು ಮಾಲೆ ಹಾಕಿ “ನಮ್ಮ ಊರಿನಲ್ಲಿ ಗುಡಸೀಕರ ಜಗತ್ಪ್ರಸಿದ್ಧರಾಗಿದ್ದಾರೆ” ಎಂಬಂಥ ಏನೇನೋ ಒದರಿದ. ಗುಡಸೀಕರ ಹೋಗಿ ಪ್ರೇಕ್ಷಕರಲ್ಲಿ ತನಗಾಗಿ ಹಾಕಿದ್ದ, ಸಾಲೆಯಿಂದ ತಂದಿರಿಸಿದ್ದ, ನಾಲ್ಕೂ ಕಾಲು ಸರಿಯಾಗಿದ್ದ ಕುರ್ಚಿಯಲ್ಲಿ ಠೀವಿಯಿಂದ ಕೂತ. ಪರದೆ ಎದ್ದಿತು.
ಪಾರ್ವತಿ ಪರಮೇಶವರರ ಸಭೆಯಿಂದ ನಾಟಕ ಸುರುವಾಯಿತು. ಲೋಕದ ತಂದೆತಾಯಿಗಳಾದ ಅವರು ಜಗತ್‌ಕಲ್ಯಾಣ ಮರೆತು ಸರಸದಲ್ಲಿ ತೊಡಗಿದ್ದಾಗ ನಾರದನ ಪ್ರವೇಶವಾಗಬೇಕು. ಅವನ ಪ್ರವೇಶ ಹಳ್ಳೀಯ ಮಂದಿಗೆ ಅಕ್ಷರಶಃ ರೋಮಾಂಚನವೆಬ್ಬಿಸಿತು. ಜೋತುಬಿದ್ದ ಹಗ್ಗದ ತುದಿಯ ಕುಣಿಕೆಯಲ್ಲಿ ಕಾಲೂರಿ ನಾರದ ಉರ್ಫ್ ಮೆರಮಿಂಡ ನಾರಾಯಣನ ನಾಮಸ್ಮರಣೆ ಮಾಡುತ್ತ ಮೇಲ್ಭಾಗದಿಂದ ಮಧ್ಯ ರಂಗದವರೆಗೆ ಇಳಿದ. ಭಾವುಕ ಮಂದಿಗೆ ನಾರದ ಆಕಾಶದಿಂದ ಅವತರಿಸುತ್ತಿರುವನೋ ಏನೋ ಎಂಬಂತಾಯ್ತು. ಬೆಕ್ಕಸ ಬೆರಗಾಗಿ ಬಾಯಲ್ಲಿ ಗುಂಗಾಡು ಹೊಕ್ಕು ಹೊರಬಂದರೂ ಖಬರಿಲ್ಲದೆ ಕೂತರು.
ನಾರದ ಮಹರ್ಷಿ “ಎಲೈ ಜಗನ್ನಿಯಾಮಕನಾದ ಪರಮಾತ್ಮನೇ” ಎನ್ನುತ್ತ ಜಿಗಿಯಬೇಕು. ಹಾಗೆ ಜಿಗಿಯಹೋದರೆ ಕುಣಿಕೆ ಬಿಗಿಯಾಗಿ ಕಾಲು ಹೊರಬರಲೇ ಇಲ್ಲ! ಜೋಲಿ ತಪ್ಪಿದ ಮಹರ್ಷಿ ಕೈಬಿಟ್ಟ. ಸುದೈವಕ್ಕೆ ಕಾಲ ಕುಣಿಕೆ ಹಾಗೇ ಬಿಗಿಯಾಗೇ ಇದ್ದುದರಿಂದ ನೆಲಕ್ಕೆ ಅಪ್ಪಳಿಸಲಿಲ್ಲ. ನಾರದನ ಕಾಲು ಕುಣಿಕೆಯಲ್ಲಿ ಸಿಕ್ಕು ಕೆಳಕ್ಕೂ ಬೀಳದೆ, ನಿಲ್ಲಲಿಕ್ಕೂ ಆಗದೆ ತಲೆಕೆಳಕಾಗಿ ತೂಗಾಡತೊಡಗಿದ! ಜನ ಹೋ ಎಂದು ನಗತೊಡಗಿದರು. ಕೆಲವರು ಇದೂ ನಾಟಕವೇ ಇರಬಹುದೆಂದು ಸ್ವಲ್ಪ ಹೊತ್ತು ಸುಮ್ಮನಿದ್ದರು. ಆದರೆ ನಾರದನ ಚಡಪಡಿಕೆ ನೋಡಿ ಅವರಿಗೂ ಅರ್ಥವಾಯಿತು.
ಗುಡಸೀಕರ ಎದ್ದು “ಪರದೇ ಬಿಡೋ” ಎಂದು ಕೂಗಿದ. ಶಿವ ಗಾಬರಿಯಾಗಿ ಒಳಗೋಡಿದ. ಗುಡಸೀಕರ ಮತ್ತೆ ಕೂಗಿದ. ಪಾಪ ಪಾರ್ವತಿಗೆ ಕೂಗಾಡುವ ಜನರನ್ನು ತೂಗಾಡುವ ನಾರದನನ್ನು ಹೇಗೆ ಎದುರಿಸಬೇಕೆಂದು ತಿಳಿಯದೆ ತಾನು ಬಾಯಿಪಾಠ ಮಾಡಿದ್ದ ಹಾಡನ್ನು ಅಭಿನಯಸಮೇತ ಕೀರಲು ದನಿಯಲ್ಲಿ ಒದರುತ್ತ, ಸೊಂಟದ ಮೇಲೆ ಎರಡೂ ಕೈ ಊರಿ ಕುಣಿಯತೊಡಗಿದ. ಜನಕ್ಕೆ ನಗೆಯಿಂದ ಹುಚ್ಚು ಹತ್ತುವುದೊಂದು ಬಾಕಿ. ತೂಗಾಡುವ ನಾರದನನ್ನು ನೋಡುವುದೇ? ಕುಣಿಯುವ ಪಾರ್ವತಿಯನ್ನು ನೋಡುವುದೇ? ಕಿರಿಚಾಡುವ ಗುಡಸೀಕರನನ್ನು ನೋಡುವುದೇ? ಕೊನೆಗೆ ಗುಡಸೀಕರ ಎದ್ದು ಒಳಗೆ ಹೋದ.
ಒಳಗಿದ್ದ ಕಳ್ಳ ರಾವಳನಿಗಾಗಲೇ ನೆತ್ತಿಗೇರುವಷ್ಟು ನಶೆಯೇರಿತ್ತು. ರಂಗದ ಮೇಲೆ ಆಗಲೇ ಆಂಜನೇಯ ಬಂದು ತೂರಾಡುತ್ತಿದ್ದಾನೆಂದು ಭಾವಿಸಿ ಓಡಿಬಂದು “ಎಲವೆಲವೋ ದುಷ್ಟ ಕಪಿಯೇ” ಎಂದು ನಿಲ್ಲಲಾರದೆ ಜೋಲಿ ತಡೆಯಲಾರದೆ ಗದೆ ಎತ್ತಿ ತೂಗುವ ನಾರದನನ್ನು ಹೊಡೆಯಹೋಗಿ ಕರೆಂಟಿನ ಪೆಟ್ಟಿಗೆಗೆ ಜೋರಿನಿಂದ ಅಪ್ಪಳಿಸಿದ. ಕರೆಂಟು ಹೋಗಿ ವಿದ್ಯುದ್ದೀಪಗಳೆಲ್ಲಾ ಆರಿಹೋಗಿ ಜನ ಹೋ ಎಂದು ಎದ್ದುಬಿಟ್ಟರು. ಮಕ್ಕಳು, ಹೆಂಗಸರು ಕಿರಿಚಾಡತೊಡಗಿದರು. ಜನಕ್ಕೆ ಈಗ ಪಾರಿಜಾತದ ನೆನಪಾಯಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡಿದ್ದು ಆ ಕಡೆ ನುಗ್ಗಿದರು.
ಎಲ್ಲ ಎದ್ದುಹೋದರು. ರಂಗಭೂಮಿ ಸ್ತಬ್ಧವಾಗಿತ್ತು. ಗುಡಸೀಕರ ಬ್ಯಾಟ್ರಿ ಹಿಸುಕಿ ಎಲ್ಲರನ್ನೂ ಹೆಸರುಗೊಂಡು ಕರೆಯುತ್ತ ಹುಡುಕಿದ. ಪರದೆಯ ಹಿಂದೆ ಕಳ್ಳ ಮೂಲೆಯಲ್ಲಿ ಕಾಲೆತ್ತೋ, ಕೈಯೆತ್ತೋ ಬೇಹೋಶ್ ಆಗಿ ಒಣಗು ಹಾಕಿದ ಬಟ್ಟೆಯ ಹಾಗೆ ಬಿದ್ದುಬಿಟ್ಟಿದ್ದ. ಹೋಗಿ ಎಬ್ಬಿಸಿ ನೋಡಿದ. ನಶೆಯೇರಿದ್ದು ಸ್ಪಷ್ಟವಾಯಿತು. ಸಮೀಪದಲ್ಲಿ ಸೀತೆ ಮುರಿದ ಗೊಂಬೆಯ ಹಾಗೆ ಬಿದ್ದುಬಿಟ್ಟಿದ್ದಳು. ಉಳಿದವರೆಲ್ಲ ಫರಾರಿ. ಹಾಗೇ ನೋಡುತ್ತ ಬಂದಾಗ ಚಿಮಣಾ ಪಿಳಿಪಿಳಿ ಕಣ್ಣು ಬಿಡುತ್ತ ಸಂಕುಚಿತವಾಗಿ ಉಡುಗಿದ್ದಳು. ಕೋಪ, ತಾಪ, ನಿರಾಸೆಗಳಿಂದ ಮೊದಲೇ ಸುಡುತ್ತಿದ್ದವನಲ್ಲಿ ಸೊಂಟದ ಬೆಂಕಿ ಭುಗಿಲ್ಲೆಂದು ಹೊತ್ತಿಕೊಂಡು ಉರಿಯಿತು. ತನಗೇ ಗೊತ್ತಿಲ್ಲದಂತೆ ಹೋಗಿ ಅವಳನ್ನು ತಬ್ಬಿಕೊಂಡ.
ನಿಂಗೂ ಚೆಲೋದಾಗಿ ಸೇಡು ತೀರಿಸಿಕೊಂಡಿದ್ದ. ಮುಟ್ಟಿ ನೋಡಿಕೊಳ್ಳುವ ಹಾಗೆ ಬರೆ ಎಳೆದಿದ್ದ. ತಿಂದರೆ ತುಟಿ ಕೆಂಪಗಾಗುತ್ತವೆಂದು ಪುಸಲಾಯಿಸಿ ರಾವಳ ಉರ್ಫ್ ಕಳ್ಳನಿಗೂ ಸೀತೆ ಉರ್ಫ್ ರಮೇಸನಿಗೂ ಎಲಡಿಕೆ ಮಡಚಿ ಕೊಟ್ಟಿದ್ದ. ಅದರಲ್ಲಿ ಮತ್ತುಬರುವ ಗಿಡಮೂಲಿಕೆ ಇಟ್ಟಿದ್ದ. ಗುಡಸೀಕರನ ಭಾಷಣ ಮುಗಿಯೋ ಹೊತ್ತಿಗೆ ರಾವಳನ ತಲೆತಿರುಗಿ ಎದುರು ನಿಂತವರು ಎರಡೆರಡಾಗಿ ಕಾಣತೊಡಗಿದರು. ಜಗಿಯುತ್ತ ತುಟಿಸವರಿಕೊಳ್ಳುತ್ತ ಮೂಲೆಗೊರಗಿದ್ದ ಸೀತೆ ಮೇಲೇಳಲೇ ಇಲ್ಲ. ಕಳ್ಳನಿಗೆ ಜೊಂಪು ಕೂಡ ಹತ್ತಿತು. ಅಷ್ಟರಲ್ಲಿ ಜನರ ಹಾಹಾಕಾರ ಕೇಳಿಸಿ ಎಚ್ಚೆತ್ತು ನೋಡಿದ. ನಾರದ ತೂಗಾಡುತ್ತಿದ್ದನಲ್ಲಾ, ಓಹೋ ಹನುಮಂತನ ಪ್ರವೇಶವಾಗಿದೆಯೆಂದು ಭಾವಿಸಿ ಓಡಿಹೋದ. ಹೊಡೆಯುವುದಕ್ಕೆ ಹೋಗಿ ನಾರದನ ಬದಲು ಕರಂಟ್ ಡಬ್ಬಿಗೆ ಹೊಡೆದ. ಮುಂದಿನ ಕಥೆ ನಿಮಗೆ ಗೊತ್ತೇ ಇದೆ. ಕತ್ತಲಲ್ಲಿ ಜನರ ಹಾ ಹೋ ನಡೆದು ನಟರು ಗಾಬರಿಯಿಂದ ಬೆದರಿದ ಕುರಿಗಳಂತೆ ದಿಕ್ಕುಪಾಲಾಗಿ ಸತ್ತೆವೋ, ಬದುಕಿದೆವೋ ಎಂದು ಓಡಿಹೋದರು.
ಆದರೆ ಯಾರಿಂದ ಹೀಗಾಯಿತೆಂದು ಕೊನೆಯ ತನಕ ಯಾರಿಗು ತಿಳಿಯಲೇ ಇಲ್ಲ. ತನಗೆ ಯಾರೋ ಮದ್ದು ಮಾಟ ಮಾಡಿರಬೇಕೆಂದು ಕಳ್ಳ ನಂಬಿದರೆ, ತನಗೆ ದೃಷ್ಟಿಯಾಗಿ ಹೀಗಾಯಿತೆಂದು ಸೀತೆ ನಂಬಿದ. ಕರಿಮಾಯಿಯಿಂದಲೇ ಹೀಗಾಯಿತೆಂದು ಜನ ನಂಬಿದರು. ಯಾಕೆಂದರೆ ಇದು ವಿನಾಕಾರಣ ನಂಬಿಕೆಯಲ್ಲ.
ಇಲ್ಲಿ ಗುಡಸೀಕರನ ನಾಟಕ ನಡೆದಿದ್ದರೆ ಗೌಡನ ಮನೆಯ ಮುಂದೆ ಪಾರಿಜಾತ ನಡೆದಿತ್ತಲ್ಲವೆ? ದೇವರೇಸಿ ಅಲ್ಲೇ ಕೂತು ಆಟ ನೋಡುತ್ತಿದ್ದ. ಸರಿಸುಮಾರು ಇಲ್ಲಿ ನಾರದ ತೂಗಾಡುತ್ತಿದ್ದಾಗ ಅಲ್ಲಿ ದೇವರೇಸಿ ಒಂದೆರಡು ಸಲ ಬಿಕ್ಕಿದನಂತೆ. ಇಲ್ಲಿ ತಾಯಿ ಬಿಕ್ಕುವುದಕ್ಕೂ ಅಲ್ಲಿ ಕರಂಟು ಹೋಗುವುದಕ್ಕೂ ಸಮವಾಯಿತು. ತಾಯಿ ಇಲ್ಲೀ ತನಕ ಹರಿಯುವ ನೀರು ತರುಬಿದ್ದಳು. ಬಿಳಿ ಮೋಡದಿಂದ ಮಳೆ ಬರಿಸಿದ್ದಳು. ಆದರೆ ವಿದ್ಯುದ್ದೀಪ ಕಳೆಯಬಲ್ಲಳೆಂದು ಯಾರಿಗೂ ತಿಳಿದಿರಲಿಲ್ಲ. ಮಾರನೇ ದಿನವೇನೋ ಕಾರಾರು ರೀತ್ಯ ಗುಡಸೀಕರ ವಿದ್ಯುದ್ದೀಪದವನಿಗೆ ಹಣಕೊಟ್ಟು ಕಳಿಸಿದ್ದ. ಆದರೆ ಅವನ ಕಣ್ಣು ಹೋದವೆಂದೂ, ಅವನು ಅಳುತ್ತ ಇನ್ನೊಬ್ಬರ ಕೈಹಿಡಿದುಕೊಂಡು ಹೋದನೆಂದೂ ಸುದ್ದಿ ಅಥವಾ ನಂಬಿಕೆ ಹಬ್ಬಿತು. ಹೆಚ್ಚೇನು, ಗೌಡ, ದತ್ತಪ್ಪ ಕೂಡ ಇದನ್ನು ನಂಬಿದರು.
ಈ ನಂಬಿಕೆಗಳಿಂದ ಚತುಷ್ಟಯರೂ ಅಧೀರರಾದರು. ಆದರೆ ಗುಡಸೀಕರ ಮಾತ್ರ ಎಳ್ಳಕಾಳು ಮುಳ್ಳ ಮೊನೆಯಷ್ಟೂ ವಿಚಲಿತನಾಗಲಿಲ್ಲ. ಚಿಮಣಾಳ ಸಂಗಸುಖದಲ್ಲಿ ಹುಡುಗ ಒಳಗೊಳಗೇ ಆಳದಲ್ಲಿ ಅಳ್ಳಕಾಗಿದ್ದ. ನಾಟಕ ಕೆಟ್ಟುದಕ್ಕೆ ಕಾರಣ ಕೆದರಿ ತಿಳಿಯುವ ಗೋಜಿಗೆ ಅವ ಹೋಗಲೇ ಇಲ್ಲ.
ನಾಟಕವಾದ ಎರಡು ಮೂರು ದಿನ ಊರಿನ ಮನಸ್ಸು ಕದಡಿಬಿಟ್ಟಿತ್ತು. ಊರ ಬಾಯೊಳಗೆಲ್ಲ ಕರಿಮಾಯಿಯ ಸುದ್ದಿಯೇ. ಚಿಮಣಾಳ ಸುದ್ದಿಯೇ. ನಾಟಕದ ಸುದ್ದಿಯೇ. ಗುಡಸೀಕರ ಈಗ ಗೌಡನ ಎದುರಾಳಿಯಾಗಿದ್ದ. ಗೌಡ ತಾನೇ ಮುಂದಾಗಿ ಪಂಚಾಯ್ತಿ ಕೊಟ್ಟದ್ದನ್ನು, ಈತ ಎಲ್ ಎಲ್. ಬಿ. ಪಾಸಾದಾಗ ಸಕ್ಕರೆ ಹಂಚಿದ್ದನ್ನು ಜನ ಸ್ಮರಿಸಿದರು. ಆದರೆ ಹುಡುಗಿಯರ ಕಲ್ಪನೆಗಳಿಗೆ ರೆಕ್ಕೆ ಮೂಡಿ ಸಿಕ್ಕಾಪಟ್ಟೆ ಹಾರಾಡಲು ಇರೋ ಮುಗಿಲು ಸಾಲದೆನಿಸಿ, ಹಳೇ ಮುದುಕಿಯರು ಕಾಶಿ ಕೈಲಾಸದ ಕನಸು ಕಂಡಂತೆ ಇವರು ಬೆಳಗಾವಿಯ ಕನಸು ಕಾಣತೊಡಗಿದರು.
ಈಗ ಊರಲ್ಲಿ ಚಿಮಣಾ ಇದ್ದಳು. ಅವಳೊಂದಿಗೆ, ಅವಳ ಜೊತೆ ಬಂದಿದ್ದ ಇನ್ನೊಬ್ಬ ನಮ್ಮ ಕಥೆಯಲ್ಲಿ ಕಾಲಿರಿಸಿದ. ಅವನೇ ಬಸವರಾಜು. ಗುಡಸೀಕರ ಮತ್ತೆ ಚೇತರಿಸಿಕೊಂಡ. ಚತುಷ್ಟಯರನ್ನು ಕರೆಸಿದ. ಅವರೋ ನಾಟಕ ತನ್ನಿಂದಲೇ ಕೆಟ್ಟಿತೆಂದು ಪ್ರತಿಯೊಬ್ಬನೂ ಒಳಗೊಳಗೇ ಹುಳುಹುಳು ಮಾಡುತ್ತಿದ್ದ. ಈ ಮೂರು ದಿನವೆಲ್ಲ ಅವರು ತಮ್ಮ ಮೇಲಿನ ತಪ್ಪು ಜಾರುವಂಥ ನೆಪ ಸೃಷ್ಟಿಸಿರುವುದರಲ್ಲೇ ಕಾಲ ಕಳೆದಿದ್ದರು. ಕರೆಸಿದ್ದಕ್ಕೆ ಅಂಜುತ್ತ ಹೋದರೆ ಆಶ್ಚರ್‍ಯ ಕಾದಿತ್ತು. ಗುಡಸೀಕರ ನಾಟಕದ ಸುದ್ದಿ ಎತ್ತಲೇ ಇಲ್ಲ.
“ಯಾಕ್ರೋ? ಚಾದಂಗಡಿ ವಿಚಾರ ಮರತಬಿಟ್ಟರೇನ್ರೋ? ಹೋಗ್ರಿ, ಹೋಗ್ರಿ, ಊರ ಹೊರಗ ಹೊಲಗೇರಿ ಹಂತ್ಯಾಕ ನಮ್ಮ ಜಾಗಾ ಐತಲ್ಲ, ಅಲ್ಲೊಂದು ಗುಡಸಲಾ ಹಾಕ್ರಿ. ನಾಳಿ ಚೆಲೋ ದಿನ ಐತಿ. ಸುರುಮಾಡೋಣು, ನಡೀರಿ.”
ಬಾರೋ ಬಾರೋ ನಮ್ಮಯ್ಯಾ
ಕೇಳಬೇಕೇ? ಮಾರನೇ ದಿನ ಸೂರ್‍ಯ ನೆತ್ತಿಗೆ ಬರುವುದರೊಳಗಾಗಿ ಹೊಲಗೇರಿಯಾಚೆ, ಲಗಮವ್ವನ ಗುಡಿಸಲದಿಂದ ಸ್ವಲ್ಪ ದೂರದಲ್ಲೇ ಹೊಸ ಗುಡಿಸಲೆದ್ದಿತು. ಸ್ವತಃ ಗುಡಸೀಕರನೇ ಮುಂದೆ ನಿಂತು ಅದರ ಹುವೇನವೇ ನೋಡಿಕೊಂಡ. ಒಂದಿಬ್ಬರು ಆಳುಗಳನ್ನು ಹೆಚ್ಚಾಗಿ ಹಚ್ಚಿಸಿ ಹಸನು ಮಾಡಿಸಿದ. ಜನ ಇದನ್ನು ಅಷ್ಟಾಗಿ ಗಮನಿಸಲಿಲ್ಲ. ದುರ್ಗಿ ಮಾತ್ರ ಲಗಮವ್ವನ ಕಣ್ಣು ತಪ್ಪಿಸಿ ಆಗಾಗ ಏನೋ ನೆಪಗಳಿಂದ ಹೊರಬಂದು ಗುಡಸೀಕರನನ್ನೇ ಆಸೆಬುರುಕಿಯಾಗಿ ನೋಡುತ್ತಿದ್ದಳು. ತನ್ನ ಕಡೆ ಒಂದು ಸಲವಾದರೂ ನೋಡಲೆಂದು ಹಿಂದೆ ಮುಂದೆ ಸುಳಿದಾಡಿದಳು. ಹಾದುಹೋಗುತ್ತಿದ್ದ ಅವ್ವಕ್ಕಗಳನ್ನು ಸ್ವಲ್ಪ ಏರುದನಿಯಲ್ಲೇ ಮಾತಾಡಿಸಿ ವಿನಾಕಾರಣ ಕುಲುಕುಲು ನಕ್ಕಳು. ಇವಳ ಈ ಹಗುರನಡೆ ಲಗಮವ್ವನಿಗೆ ತಿಳಿದು ಗದರಿಕೊಂಡಳು. ದುರ್ಗಿ ವಿಧಿಯಿಲ್ಲದೆ ಒಳಸೇರಬೇಕಾಯ್ತು.
ಬಂದಂದಿನಿಂದ ಚಿಮಣಾ ಹಾಗೂ ಬಸವರಾಜು ಗುಡಸೀಕರನ ತೋಟದಲ್ಲೇ ಇದ್ದರು. ಈಗ ಅವರ ಬಿಡಾರ ಸಿದ್ಧವಾಯಿತಲ್ಲ. ಮಧ್ಯಾಹ್ನದ ಉರಿಬಿಸಿಲು, ಮೃಗ ಮಳೆಯ ಗುರುತು ಒಡೆದಿರಲಿಲ್ಲ. ದನಕರುಗಳು ಮರದ ನೆರಳಿಗೆ ನಿಂತು ಬಾಯಿಬಿಡುತ್ತಿದ್ದವು. ಕೆರೆಯಲ್ಲಿ ಈಜು ಬಿದ್ದ ಮಕ್ಕಳು ದನಗಳ ಹಾಗೆ ಅಲ್ಲೇ ಆಡುತ್ತ ಹೊರಗೆ ಬರಲು ನಿರಾಕರಿಸುತ್ತಿದ್ದವು. ಭಾವುಕ ಭಕ್ತರೀಗ ಗುಡಿಗೆ ಹೋಗಿದ್ದರೆ ಕರಿಮಾಯಿಯ ಮುಖದಲ್ಲೂ ತಿಳಿ ಬೆವರು ಕಾಣಬಹುದಿತ್ತು. ಅರ್ಥಾತ್ ಅಂಥಾ ಬಿಸಿಲಿತ್ತು. ಇಂಥಾ ಉರಿ ಉರಿ ಬಿಸಿಲಿನಲ್ಲಿ ತೋಟದಿಂದ ಚಿಮಣಾ ಮತ್ತು ಬಸವರಾಜು ಕಳ್ಳನ ನೇತೃತ್ವದಲ್ಲಿ ಬಂದು ತಮಗಾಗಿ ತಯಾರಾಗಿದ್ದ ಗುಡಿಸಲು ಹೊಕ್ಕರು.
ಅವರು ಬಂದು ಹೊಕ್ಕದ್ದರಿಂದ ಕೆಲವು ಚಿಮಣಾ ಭಕ್ತರು ಬಂದರು. ಯಾರೂ ಬೆದರಿಸಲಿಲ್ಲವಾದ್ದರಿಂದ ಅಲ್ಲೇ ನಿಂತರು. ಗುಡಸೀಕರ ಇನ್ನೂ ದೇಖರೇಖಿ ಮಾಡುತ್ತ ನಿಂತಿದ್ದಾನೆ. ಚತುಷ್ಟಯರು ಓಡಾಡುತ್ತಿದ್ದಾರೆ. ಭಕ್ತರು ಜೋಡಿಯಾಗಿ ಪರಸ್ಪರ ಭುಜಗಳ ಮೇಲೆ ಕೈಯೂರಿ ಜೊಲ್ಲು ಸುರಿವ ಮಾತಾಡುತ್ತಿದ್ದಾರೆ. ಅಷ್ಟರಲ್ಲಿ ಗುಡಿಸಲ ಒಳಗಿನಿಂದ ಸಂಗೀತ ಕೇಳಿಸಿತು. ಹೊರಗಿನ ಎಲ್ಲರ ಕಿವಿ ನಿಮಿರಿದವು. ಕೆಲಸ ಮಾಡುತ್ತಿದ್ದವರು ಗಪ್‌ಚಿಪ್, ಗೊಂಬೆಗಳ ಹಾಗೆ, ಕುತೂಹಲದಿಂದ ಸ್ತಬ್ಧರಾದರು. ಹೋಗಿ ನೋಡೇವೆಂದರೆ ಗುಡಸೀಕರ ಇರೋವಾಗ ತಾವು ಒಳಗೆ ಹೋಗೋದು ಹ್ಯಾಗೆ, ಇದ್ದುದರಲ್ಲಿ ಗುಡಸೀಕರನೊಬ್ಬನಿಗೇ ಅದೇನೆಂದು ಗೊತ್ತಿತ್ತು. ಅಷ್ಟರಲ್ಲಿ ಒಳಗಡೆಯಿಂದ ಚಿಮಣಾ ಬಂದು ಚಾದಂಗಡಿಯ ಬಾಗಿಲಲ್ಲಿ ನಿಂತಳು.
ನಮ್ಮ ಕಥೆಯಲ್ಲಿ ಕಾಲಿಟ್ಟ ಹೊಸ ನಾಯಕಿಯನ್ನು, ಕರಿಮಾಯಿಗೆ ಕೈಮುಗಿದು ಸ್ವಾಗತಿಸೋಣ. ಊರಿನಲ್ಲಿ ಹೊಸಗಾಳಿ ಸುಳಿಯಲೆಂದು, ಆರೋಗ್ಯ ಕೆಡದಿರಲೆಂದು, ಹಚ್ಚಿದ ಎಳೆ ದೀಪ ಕಳೆಯದಿರಲೆಂದು ಹಾರೈಸೋಣ.
ಬಂದಳಲ್ಲ; ನೋಡಿದರೆ ಎಂಥ ಅಪರೂಪದ ರೂಪ! ದಟ್ಟವಾಗಿ ಕಾಡಿಗೆ ಹಚ್ಚಿದ ಬಟ್ಟಲಗಣ್ಣು; ಎಸಳು ಮೂಗು, ನಕ್ಕು ನಕ್ಕು ಈಗಷ್ಟೇ ಸುಮ್ಮನಾದ, ಇಲ್ಲವೇ ನಗಲಿದ್ದಾಳೆನಿಸುವಂಥ ತುಟಿಗಳು, ಚೂಪುಗದ್ದ, ಮೇಲೆ ಎಳೆ ಬೆವರಿನಿಂದ ಹಣೆಗಂಟಿದ ಸುರುಳಿ ಸುರುಳಿ ಮುಂಗುರುಳು-ಒಮ್ಮೆ ನೋಡಿದರೆ ಸಾಕು ಕಣ್ಣು ತುಂಬುತ್ತವೆ; ಎದೆ ಕೂಡ, ಸಧ್ಯಕ್ಕೆ ಒಂದೇ ಒಂದು ಸಣ್ಣ ಹೋಲಿಕೆಯಿಂದ ಆಕೆಯ ವರ್ಣನೆಯನ್ನು ಮುಗಿಸಬಹುದು; ಬಂಗಾರದ ಮುಖ ಹಾಕಿದಾಗಿನ ಕರಿಮಾಯಿಯ ವಿಗ್ರಹ ಇದೆಯಲ್ಲ;- ನೀವು ಭಾವುಕರಾಗಿ ನೋಡಿದರೆ ಚಿಮಣಾ ಹಾಗೆ ಕಾಣಿಸುತ್ತಿದ್ದಳು. ಆದರೆ ಆ ಊರಿನ ಯಾರಿಗೂ ಈ ಹೋಲಿಕೆ ಹೊಳೆಯುವುದು ಸಾಧ್ಯವಿರಲಿಲ್ಲ.
ಚಿಮಣಾಳ ಹಿಂದಿನಿಂದ ಬಸವರಾಜು, ಅವಳೊಂದಿಗೆ ಬಂದಿದ್ದವನು, ಎಡಗೈಯಲ್ಲಿ ಸಣ್ಣ ರೇಡಿಯೊ ಹಿಡಿದುಕೊಂಡು ಹೊರಬಂದ. ಬಣ್ಣಬಣ್ಣದ ಉದ್ದ ತೋಳಿನ ಅಂಗಿ ತೊಟ್ಟಿದ್ದ. ಕೆಳಗೆ ಸೊಂಟದಿಂದ ಅಂಗಾಲಿನ ತನಕ ಇನ್‌ಶರ್ಟ್ ಮಾಡಿ ಪ್ಯಾಂಟು ಹಾಕಿದ್ದ. ಪದ ಮುಚ್ಚುವ ಹಾಗೆ ಬೂಟು ಹಾಕಿದ್ದ. ಎಡಗೈಯಲ್ಲಿ ರೇಡಿಯೋ ಇತ್ತು. ಬಲಗೈಯಲ್ಲಿ ಸಿಗರೇಟಿತ್ತು. ಸೇದುತ್ತ ಆಗಾಗ ಮೂಗು ಬಾಯಿಗಳಿಂದ ನಾಜೂಕಾಗಿ ಹೊಗೆಬಿಡುತ್ತಿದ್ದ. ಹಾಗೆ ಬಿಟ್ಟಾಗ ಹೊಗೆ ಚಕ್ರಗಳ ಸಣ್ಣ ದೊಡ್ಡ ಸರಪಳಿ ಹೊರಬರುತ್ತಿತ್ತು. ಈಗ ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆಂದು ಅವನಿಗೆ ಗೊತ್ತಿತ್ತು. ತಾನು ಎಲ್ಲಿಗೆ ಹೋದರೆ ಅಲ್ಲಿ ಬೆನ್ನು ಹತ್ತುತ್ತಾರೆಂದು ಅವನಿಗೆ ಗೊತ್ತಿತ್ತು. ಅದಕ್ಕೇ ಆತ ಎದುರಿನ ಗುಡಸೀಕರನನ್ನು ಮಾತಾಡಿಸಲಿಲ್ಲ. ತನ್ನ ಪಾಡಿಗೆ ತಾನು ರೇಡಿಯೋ ಹಾಡು ಕೇಳುತ್ತ ಊರು ನೋಡುವವನಂತೆ ಹೊರಟ. ಅಲ್ಲಿದ್ದವರು ಬೆರಗೋ, ಹೊಯ್ಕೋ ಹೋ ಎನ್ನುತ್ತ ವಶೀಕರಣಕ್ಕೆ ಒಳಗಾದವರಂತೆ ಬೆನ್ನುಹತ್ತಿದರು.
ಮಂದಿಯ ಕಲ್ಪನೆಗೆ ದೊಡ್ಡ ಆಘಾತವಾಗಿತ್ತು. ಸಣ್ಣ ಪೆಟ್ಟಿಗೆ ಇಷ್ಟು ಚೆನ್ನಾಗಿ ಹಾಡುವುದೆಂದರೇನು ಕೆಲವರು, ಪೆಟ್ಟಿಗೆಯಲ್ಲಿ ಕಿರುಬೆರಳು ಗಾತ್ರದ ಜನ ಇದ್ದಾರೆಂದು ಹುಡುಗರು, ಇದೆಲ್ಲ ಯಂತ್ರವೆಂದು ಬಲಿತವರು, ಹೌಂದು, ಮಲೆನಾಡಿನಲ್ಲಿ ಯಂತ್ರ ಮಂತ್ರ ಮಾಡುವವರಿರುತ್ತಾರೆಂದು, ಇದು ಅವರ ಕರಾಮತ್ತು ಎಂದು ಇನ್ನು ಕೆಲವರು, ಇಂಗರೇಜಿಯವರ ಜಾದೂಗಾರಿಕೆಯೆಂದು ತಿಳಿದವರು- ಒಂದೇ ಎರಡೇ ಹತ್ತು ಹೆಜ್ಜೆ ಬೆನ್ನುಹತ್ತುವುದರೊಳಗೆ ಒಬ್ಬೊಬ್ಬನ ತಲೆಯಲ್ಲಿ ಕನಿಷ್ಠ ಹತ್ತೆಂಟು ಕಲ್ಪನೆ ಹುಟ್ಟಿ ತೇಲಿ ಮುಳುಗತೊಡಗಿದವು. ಎಲ್ಲರ ಕಲ್ಪನೆಗಳು ಎಕದಂ ಕ್ರಿಯಾಶೀಲವಾದುವು. ಎಲ್ಲರೂ ಈಗ ಎರಡಾಗಿದ್ದರು: ರೇಡಿಯೋ ಕೇಳಲು ಕಿವಿಯಾದರು, ಬಸವರಾಜನನ್ನು ನೋಡಲು ಕಣ್ಣಾದರು.
ಸನ್ನಿವೇಶದ ಸರಿಯಾದ ಲಾಭ ಪಡೆದವರು ಚತುಷ್ಟಯರು. ಎಷ್ಟೆಂದರೂ ಬಸವರಾಜು ತಾವು ಕರೆತಂದವನಲ್ಲವೆ? ಅವನ ಬಗ್ಗೆ ಎಲ್ಲಿಲ್ಲದ ಅಭಿಮಾನ ಮೂಡಿತು. ಕಲ್ಳ ಒಂದೆರಡು ಸಲ, ಹೋಗುತ್ತಿದ್ದ ಬಸವರಾಜನ ಭುಜದ ಮೇಲೆ ಕೈಹಾಕಲು ನೋಡಿದ. ಅದು ಸಾಧ್ಯವಾಗದ್ದಕ್ಕೆ ತಂತಾನೆ ‘ನಮ್ಮ ದೋಸ್ತಿ’ ಎಂದು ಹೇಳಿಕೊಂಡು ನಕ್ಕ. ಜನರ ಅಜ್ಞಾನಕ್ಕೆ ಚತುಷ್ಟಯರಿಗುಂಟಾದ ಮರುಕ ಅಷ್ಟಿಷ್ಟಲ್ಲ. ಏನೇನೋ ಮಾತಾಡಿಕೊಂಡು, ಕಲ್ಪನೆಗಳನ್ನೋಡಿಸಿಕೊಂಡು ಹೋಗುತ್ತಿದ್ದ ಜನರಿಗೆ ಅವರೇ ತಿಳುವಳಿಕೆ ಹೇಳಬೇಕಾಯಿತು. ಗುಡಸೀಕರನ ಹಿಂದೆ ಇದನ್ನು ವರ್ಣಿಸಿ ಇದರ ಹೆಸರು ‘ರೇಡವೇ’ ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡು, ಆ ಜ್ಞಾನವನ್ನು ಎಲ್ಲರಿಗೂ ಅಭಿಮಾನಪೂರ್ವಕವಾಗಿ ಹಂಚುತ್ತಿದ್ದರು. ಅಲ್ಲದೆ ಬೆಂಬತ್ತಿದ ಗುಂಪಿನಲ್ಲಿ ಹೆಜ್ಜೆಗೊಬ್ಬೊಬ್ಬ ಹೊಸಬ ಸೇರಿಕೊಳ್ಳುತ್ತಿದ್ದ. ಹೆಜ್ಜೆಗೊಮ್ಮೊಮ್ಮೆ ಹೊಸದಾಗಿ ವಿವರಿಸುತ್ತಿದ್ದರು. ಆಶ್ಚರ್ಯವೆಂದರೆ ಉದಾರಿಯಲ್ಲದ ಮೆರಮಿಂಡ ಈ ದಿನ ಪುಷ್ಕಳ ಉದಾರಿಯಾಗಿಬಿಟ್ಟ. ಗುಂಪಿನ ಇಬ್ಬರಿಗೆ ಸಿಗರೇಟಿನ ತುಂಡು ಕೊಟ್ಟು ಹತ್ತಿಸಿಕೊಳ್ಳಲು ಕಡ್ಡೀಪೆಟ್ಟಿಗೆ ಕೂಡ ಕೊಟ್ಟ.
ಆಕಸ್ಮಾತ್ ಘಟಿಸಿದ ಹಾವಿನ ಸುದ್ದಿಯಷ್ಟೇ ತೀವ್ರವಾಗಿ ಬಸವರಾಜೂನ ‘ರೇಡವೇ’ ಸುದ್ದಿ ಊರಲ್ಲಿ ಹಬ್ಬಿತು. ಹುಡುಗರು, ಹುಡುಗಿಯರು, ತರುಣರು, ಮುದುಕರು ಹೀಗೆ ಮೊದಮೊದಲು ಹತ್ತಿಪ್ಪತ್ತಿದ್ದ ಗುಂಪು ಬರುಬರುತ್ತ ನೂರಾರಾಯ್ತು. ಬಸವರಾಜನಿಗೆ ಪ್ರಾರಂಭದಲ್ಲಿ ದಿಗಿಲಾಯಿತಾದರೂ ಮುಂದೆ ವಿಚಿತ್ರ ಖುಷಿಯಾಗತೊಡಗಿತ್ತು. ಸಿಗರೇಟು ಹೆಚ್ಚಾಗಿಯೇ ಸೇದಿದ. ಇನ್ನಷ್ಟು ಹೊಗೆ ಚಕ್ರ ಬಿಟ್ಟ. ಅದು ಅದೃಶ್ಯ ಯಂತ್ರವೊಂದರ ಉರುಳುವ ಚಕ್ರಮಾಲೆಯಂತೆ ಕಾಣುತ್ತಿತ್ತು. ಊರು ಸುತ್ತಿ ಗುಡಿಸಲಿಗೆ ಬಂದ. ಅಂತೂ ಹೊಸ ಚಹದಂಗಡಿಯ ನವೀನ ಪ್ರಾರಂಭ ಈ ರೀತಿ ಆಯ್ತು.
ಅದು ಅಡ್ಡವಾರವಾದುದರಿಂದ, ಕರಿಮಾಯಿ ಮೈತುಂಬ ಬೇಕಾಗಿದ್ದಿರಲಿಲ್ಲ. ಆದರೆ ಆ ದಿನ ಸಂಜೆ ಕರಿಮಾಯಿ ಮೈತುಂಬಿದಳು. ಕೂಡಲೇ ಗೌಡನಿಗೆ, ಹಿರಿಯರಿಗೆ ಕರೆಹೋಯಿತು. ಎಲ್ಲ ಬಂದರು. ತಾಯಿ ವಿಚಿತ್ರವಾಗಿ ಬಿಕ್ಕುತ್ತಿದ್ದಳು. ಬಿಕ್ಕುತ್ತ ಸಂಕಟಪಡುತ್ತಿದ್ದಳು. “ತಾಯೀ ಯಾಕ ಅಳಾಪ ಮಾಡತಿ? ಅದೇನೈತಿ ನಿನ್ನ ಮಕ್ಕಳ ಮುಂದ ಹೇಳಬಾರದ?” ಎಂದ ಗೌಡ. ಆದರೂ ತಾಯಿ ಬಾಯಿ ಬಿಡಲಿಲ್ಲ. ಬರೀ ದುಃಖ ಮಾಡಿದಳು. ಬಿಕ್ಕಿದಳು. ಕಣ್ಣೀರು ಸುರಿಸಿದಳು, ಬಾಯಿ ಬರಲೆಂದು ಬಂಡಾರೆಸೆದರು. ಒಂದೆರಡು ಸಾರಿ ಅಳುವ ಮುದುಕಿ ಹಾಗೆ ದನಿತೆಗೆದಳು. ಮತ್ತೆ ಕಣ್ಣೀರು ಸುರಿಸಿದಳು, ಬಿಕ್ಕಿದಳು. ಬಾಯಿ ಮಾತ್ರ ಬಿಡಲಿಲ್ಲ. ಗೌಡ ದಿಂಡುರುಳಿ ಕಾಲು ಹಿಡಿದ. ಹಿರಿಯರೂ ಹಿಡಿದರು. ಹರಕೆ ಕೂಡ ಹೊತ್ತರು. ಅಂತೂ “ಹರಕಿ ಹೊತ್ತವರ ಹೊತ್ತೀಗಿ ಆಗಾಕಿ” ಎಂಬ ತಾಯಿಯ ವರ್ಣನೆ ಇಂದು ಹುಸಿಯಾಯಿತು.
ಮೃಗಯಾ ವಿಹಾರ
ಚಹದಂಗಡಿಯ ಅದ್ದೂರಿಯ ಆರಂಭ ನೋಡಿದಿರಲ್ಲ. ವ್ಯಾಪಾರ ವೃದ್ಧಿಯಾಗಲಿಲ್ಲ. ಜನ ಆ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ. ತಿರುಗಾ ಮುರುಗಾ ಗುಡಸೀಕರನೇ ಹೋಗಿ ಚಹ ಕುಡಿಯುತ್ತಿದ್ದ. ಚತುಷ್ಟಯರು, ಅದೂ ಪುಕ್ಕಟ್ಟೆ ಸಿಕ್ಕರೆ ಆಗಾಗ ಒಂದೊಂದು ಗುಟುಕು ಕುಡಿಯುತ್ತಿದ್ದರು. ಅವರಿಗೆ ಸಿಕ್ಕುತ್ತಿದ್ದುದು ಕೂಡ ನಾಲ್ಕು ಜನಕ್ಕೆ ಕೂಡಿ ಒಂದು ಕಪ್ಪಿನಲ್ಲೇ ಹಂಚಿಕೊಂಡು ಕುಡಿದವರಿಗೆ ಅದೇನು ಚಟ ಹತ್ತೀತು? ಕುಡಿದರೆ ಅದು ನಶೆಯಾಗುವ ಬಾಬತ್ತಲ್ಲ. ಆದ್ದರಿಂದ ಅದು ಸಿಕ್ಕರೂ ಸೈ, ಬಿಟ್ಟರೂ ಸೈ; ಸಿಕ್ಕಾಗ ಉಬ್ಬಲಿಲ್ಲ; ಸಿಗದಾಗ ಸೊರಗಲಿಲ್ಲ, ಹಾಗಿದ್ದರು.
ವ್ಯಾಪಾರವಾಗಲಿಲ್ಲವಾದ್ದರಿಂದ ತಾವೇಕೆ ಇಲ್ಲಿರಬೇಕೆಂದು ಚಿಮಣಾಳಿಗೂ ಅನ್ನಿಸಲಿಲ್ಲ. ಬಸವರಾಜನಿಗೂ ಅನ್ನಿಸಲಿಲ್ಲ. ಆದರೆ ಗುಡಸೀಕರ ಹಾಗೂ ಚಿಮಣಾಳ ಸಂಬಂಧ ರಹಸ್ಯವಾಗಿ ಉಳಿಯಲಿಲ್ಲ. ಗುಡಸೀಕರ ಹಾಗೆ ಬಯಸಿದರೂ ಆಡಿಕೊಳ್ಳುವವರು ಆಡಿಕೊಂಡರು. ಬಾಯಿ ಸೋತು ಸುಮ್ಮನಾದರು. ಗುಡಸೀಕರನ ತಾಯಿಗೆ ಇದರಿಂದ ಚಿಂತೆಯಾಯಿತಷ್ಟೇ. ಒಂದೆರಡು ಸಲ ತಾನೇ ಬುದ್ಧಿ ಹೇಳಿ ನೋಡಿದಳು. ಆಗೆಲ್ಲ ಗುಡಸೀಕರ ಸಿಡಿಯುತ್ತಿದ್ದ. ಹಿರಿಯರಿಲ್ಲದ ಮನೆ, ಮಗ ಹಾಳಾದನಲ್ಲಾ ಎಂದು ಆ ಮುದುಕಿ ಕೊರಗಿತು. ಮಗನಿಗೆ ಬುದ್ದಿ ಹೇಳಿರೆಂದು ಗೌಡನಿಗೂ, ದತ್ತಪ್ಪನಿಗೂ ಕೈಮುಗಿದಳು. ಈಗವನು ತಮ್ಮನ್ನು ಮೀರಿದವನೆಂದು ಅವರು ಹೇಳುತ್ತಲೂ ತನ್ನ ನಶೀಬನ್ನೇ ಬೈದುಕೊಂಡು ಸುಮ್ಮನಾದಳು.
ಈಗ ಮೀಟಿಂಗಿನ ಸ್ಥಳ ಬದಲಾಗಿತ್ತು. ಸರಿರಾತ್ರಿಯ ತನಕ ಗುಡಿಸಲಲ್ಲೇ ಮೀಟಿಂಗ್ ಮಾಡಿ, ಚತುಷ್ಟಯರು ಮನೆಗಳಿಗೆ ಹೋಗುತ್ತಿದ್ದರು. ಬಸವರಾಜು ಮುಂಚಿನ ಪಂಚಾಯ್ತಿ ಆಫೀಸಿನಲ್ಲಿ ಒಬ್ಬನೇ ಮಲಗುತ್ತಿದ್ದ. ಬೆಳಿಗ್ಗೆ ಸೂರ್ಯೋದಯದ ಮುಂಚೆಯೇ ಎದ್ದು ಗುಡಿಸಲಿಗೆ ಹೋಗುತ್ತಿದ್ದ. ಅಷ್ಟರಲ್ಲೇ ಗುಡಸೀಕರ ಮನೆಗೆ ಹೋಗಿರುತ್ತಿದ್ದ.
ಗುಡಸೀಕರನಿಗೆ ಮುಂಚಿನ ಮೂರು ತಿಂಗಳು ಒಟ್ಟಾರೆ ನಿರಾಸೆಯಾಗಿತ್ತು. ಗೌಡನ ಬಗೆಗಿನ ಅಸಮಧಾನದಿಂದ ನಾಟಕವನ್ನಾಡಿಸಿದ್ದ ನಿಜ. ಆದರೆ ಅದರಲ್ಲಿ ಆ ಮೂಲಕ ಹಳ್ಳಿಗರ ಮನಸ್ಸನ್ನು ಗೆದ್ದು ತನ್ನ ಸುಧಾರಣೆಗಳನ್ನು ತರಬೇಕೆಂದು, ಹಳ್ಳಿಗರ ಕಲಾಭಿರುಚಿ ಸುಧಾರಿಸಬೇಕೆಂದು ಹಂಬಲವಿತ್ತು. ಚಹದಂಗಡಿ ಸುರುಮಾಡೋದಂದರೆ ತನ್ನ ಹಳ್ಳಿಯನ್ನು ಬೆಳಗಾವಿಯಾಗಿಸುವ ಪ್ರಥಮ ಹೆಜ್ಜೆಯೆಂದು ನಂಬಿದ್ದ. ಚಿಮಣಾ ಹರಿಜನಳೆಂಬುದು, ಚಿಮಣಾವೃತ್ತಿ ಹರಿಜನರದೆಂದು ಅವನಿಗೂ ತಿಳಿದ ವಿಚಾರವೇ. ಆದರೆ ಹರಿಜನಳಾದ ಲಗಮವ್ವ ಸೆರೆ ಕೊಟ್ಟರೆ ಕುಡಿಯುವ ಜನ, ಚಿಮಣಾ ಚಹ ಕೊಟ್ಟರೆ ಯಾಕೆ ಕುಡಿಯಬಾರದು? ಜನ ಕುಡಿಯಲಿಲ್ಲ. ಅದಕ್ಕೆ ಕಾರಣ ಗುಡಸೀಕರನ ಯೋಚನೆಯಂತಲ್ಲ; ಜನ ಆ ಚಟಕ್ಕೆ ಬೀಳಲಿಲ್ಲ. ಅಷ್ಟೇ. ಗುಡಸೀಕರನ ನಿರಾಸೆಗೆ ಇದೂ ಕಾರಣವಾಗಿತ್ತು.
ಜನಕ್ಕೆ ಬೇಡದ ಸುಧಾರಣೆಗಳನ್ನು ತಂದೇನು ಪ್ರಯೋಜನ? ಈ ಹುಂಬರ ಜೊತೆ ಎಷ್ಟಂತ ಕೆಸರಲ್ಲಿ ಗುದ್ದಾಡೋದು? ಎಂದೂ ಅನಿಸುತ್ತಿತ್ತು. ಅದಕ್ಕೆ ತಕ್ಕಂತೆ ಚತುಷ್ಟಯರೂ ನಿರೀಕ್ಷೆಯಷ್ಟು ನಡೆಯಬಲ್ಲವರಾಗಿರಲಿಲ್ಲ. ಆದರೆ ಬರಬರುತ್ತ ಹೊಸ ಆಶಾಕಿರಣ ಮೂಡತೊಡಗಿತ್ತು. ತನ್ನ ಹಾಗೂ ಚಿಮಣಾಳ ಸಂಬಂಧದ ಬಗ್ಗೆ ಜನ ಆಡಿಕೊಳ್ಳುವುದು ಅವನಿಗೂ ಗೊತ್ತಿತ್ತು. ಆದರೆ ಅನೇಕರು ಭಾವಿಸುವಂತೆ ಅವನಿಗೂ ಆ ಬಗ್ಗೆ ಅಭಿಮಾನ ಮೂಡಿತ್ತಷ್ಟೆ. ಅಲ್ಲದೆ ಯಾರೋ ಒಬ್ಬಿಬ್ಬರು ಈ ಬಗ್ಗೆ ಹಗುರಾಗಿ ಮಾತಾಡಿದಾಗ ಗೌಡ “ಗಂಡಸು ಮಾಡಿದ್ದರೂ ಮಾಡಿದ್ದಾನ ಬಿಡ್ರೊ” ಎಂದಿದ್ದನಂತೆ. ಅದು ಇವನ ಕಿವಿಗೆ ಬಿದ್ದು ಕಿವಿಯ ಬಳಿ ಒಂದೆರಡು ಕೊಂಬು ಮೂಡಿದ ಅನುಭವವಾಗಿತ್ತು. ಅವನ ಭುಜಕ್ಕೆ ಶಕ್ತಿ ಬಂದದ್ದು, ನಿಜ ಹೇಳಬೇಕೆಂದರೆ ಚಿಮಣಾಳಿಂದಲ್ಲ, ಬಸವರಾಜೂನಿಂದ.
ಅವನ ದುರ್ಬಲ ಕ್ಷಣಗಳಲ್ಲೆಲ್ಲ ಬಸವರಾಜು ಪಕ್ಕಕ್ಕಿರುತ್ತಿದ್ದ. ಅವನ ವ್ಯಕ್ತಿತ್ವದ ಖಾಲಿ ಸ್ಥಳವನ್ನು ಹೊಗಳಿಕೆಯಿಂದ ಭರ್ತಿಮಾಡಿದ್ದ. ಸೊಲುಗಳನ್ನು ಗೆಲುವಾಗಿಸುತ್ತಿದ್ದ. ಬಸವರಾಜು ಎಷ್ಟು ಕಲಿತಿದ್ದನೋ ಗೊತ್ತಿಲ್ಲ: ಅಂತೂ ಇಬ್ಬರೂ ಸಹಪಾಠಿಗಳಷ್ಟು ಹತ್ತಿರವಾದರು. ಹಳ್ಳಿ ಸುಧಾರಣೆಯ ಬಗ್ಗೆ ಇಬ್ಬರ ಆದರ್ಶ, ಅಭಿಪ್ರಾಯಗಳು ಒಂದೇ ಆಗಿದ್ದವು. ಅಥವಾ ಪರಸ್ಪರರು ಹೊಂದಾಣಿಕೆ ಮಾಡಿಕೊಂಡರೋ ಕೆಲವೇ ದಿನಗಳಲ್ಲಿ ಇಬ್ಬರೂ ಒಂದಾಗಿದ್ದರು. ಕುಡಿದಾಗಂತೂ ಇಬ್ಬರೂ ತಬ್ಬಿಕೊಳ್ಳುವುದೇನು, ಒಬ್ಬನ ಎಂಜಲು ಇನ್ನೊಬ್ಬನು ತಿನ್ನುವುದೇನು! ಈ ತನಕ ಗುಡಸೀಕರನಿಗೆ ಇಂಥ ಒಬ್ಬ ಸೇಹಿತನೂ ಸಿಕ್ಕಿದ್ದಿಲ್ಲ.
ಬಸವರಾಜುನಿಂದಾಗಿ ಈಗ ಗುಡಸೀಕರನಿಗೆ ಎಲೆಕ್ಷನ್ನಿನಲ್ಲಿ ಹೊಸ ಕುತೂಹಲ ಹುಟ್ಟಿತು. ಬಸವರಾಜು ಮಹಾ ಮಾತುಗಾರ. ಈ ಎಲೆಕ್ಷನ್ ಗೆಲವು ಹೇಗೆ ತಮ್ಮ ಆದರ್ಶಗಳ ಗೆಲುವಾಗುವುದೆಂದು ಭಾಷಣ, ಸಂಭಾಷಣ, ತರ್ಕಗಳಿಂದ ಖಾತ್ರಿಮಾಡಿದ. ಗಾಂಧೀಜಿಯವರಂಥ ಆದರ್ಶಗಳು ಗೌಡ, ದತ್ತಪ್ಪನಿಗೆ ಕನಸು ಮನಸ್ಸಿನಲ್ಲಿಯಾದರೂ ಹೊಳೆಯುವುದು ಸಾಧ್ಯವೆ? ಹೋಗಲಿ, ಆ ಹೆಸರಾದರೂ ಕೇಳಿಬಲ್ಲರೆ ಇವರು? ಒಬ್ಬನಿಗೊಂದು “ಸೀರಿಯಸ್ ಅಜಾರಿ” ಆಯಿತೆನ್ನೋಣ; ಕರಿಮಾಯಿಯ ಭಂಡಾರ ಬಳಿದುಕೊಂಡರೆ ಹೋಗುತ್ತದೋ? ಒಬ್ಬ ಬಸುರಿಯ ಹೆರಿಗೆ ಕಷ್ಟವಾಯಿತೆನ್ನೋಣ; ಕರಿಮಾಯಿ ಉಳಿಸಬಲ್ಲಳೋ? ಮೂಢನಂಬಿಕೆಗಳಿಂದ ಯಾರಾದರೂ ಬದುಕಿದ್ದು ಉಂಟೋ? ಛೇ ಛೇ ಇದೆಲ್ಲ ಆಗೋ ಮಾತಲ್ಲ, ಹೋಗೋ ಮಾತಲ್ಲ. ಊರೆಂದಮೇಲೆ ಒಂದು ಆಸ್ಪತ್ರೆ, ಒಂದು ಹೈಸ್ಕೂಲು ಬೇಡವೋ? ಹೆಬ್ಬೆಟ್ಟೊತ್ತುವ ಗೌಡನಿಂದ ಇವನ್ನು ತರುವುದು ಸಾಧ್ಯವೋ? ಬೆಳಗಾವಿಯನ್ನು ನೋಡಬಾರದೆ? ಇಂದಿದ್ದ ಬೆಳಗಾವಿ ನಾಳಿಗಿಲ್ಲ. ಆ ಥರಾ “ಡೆವಲಪ್” ಆಗ್ತಾ ಇದೆ. ಬೆಳಗಾವಿ ಎತ್ತ ಹೋಗುತ್ತಿದೆ, ಈ ಜನ ಎತ್ತ ಹೋಗುತ್ತಿದ್ದಾರೆ? ಜನಕ್ಕೇನು, ಹೇಳಿ ಕೇಳಿ ಮೂಢನಂಬಿಕೆಯವರು. ಮೊದಮೊದಲು ಡೆವಲಪ್ಪಿನ ಅಗತ್ಯ ತಿಳಿಯಲಿಕ್ಕಿಲ್ಲ. ಬರಬರುತ್ತ ಅವರಿಗೇ ಗೊತ್ತಾಗುತ್ತದೆ. ಹಾಗಂತ ಅವರಿಗೇ ಗೊತ್ತಾಗಲೆಂದು ಬಿಟ್ಟರೆ ಹೇಗೆ? ಗೊತ್ತಾಗೋ ಹಾಗೆ ಮಾಡಬೇಕು. ಈ ಎಲೆಕ್ಷನ್ ಗೆದ್ದರೆ ಇದನ್ನೆಲ್ಲ ತಾವು ಮಾಡಿ ತೋರುತ್ತೇವೆಂದು ಹೇಳಬೇಕು-ಇತ್ಯಾದಿ.
ಇಂಥ ಮಾತು ಕೇಳಿದರೆ ಗುಡಸೀಕರನಿಗೆ ಹೇಗಾಗಬೇಡ? ಆಳದಲ್ಲಿ ಹುದುಗಿದ ಆದರ್ಶಗಳನ್ನೆಲ್ಲ ಹೊಡೆದೆಬ್ಬಿಸಿ ಹೊರಕ್ಕೆ ತಂದ. ಸೊಲು ಆದರ್ಶವಾದಿಗಲ್ಲದೆ ಇನ್ನಾರಿಗೆ ಬರಬೇಕು? ಗಾಂಧೀಜಿ ಎಷ್ಟು ಸಲ ಸೋತಿಲ್ಲ? ಈಗ ಎಲೆಕ್ಷನ್ ಗೆಲ್ಲಲೇ ಬೇಕೆಂದು ತೀರ್ಮಾನಿಸಿದ.
ಬಸವರಾಜೂನ ಪೂರ್‍ವಾಶ್ರಮ ಏನಿತ್ತೋ ಗೊತ್ತಿಲ್ಲ. ಚಳುವಳಿಯಲ್ಲಿದ್ದವನೆಂದು ಅವನೇ ಹೇಳಿಕೊಂಡಿದ್ದನಷ್ಟೆ. ಈ ಊರಿನಲ್ಲಿ ಮಾತ್ರ ಪಸಂದಾಗಿ ಹೊಂದಿಕೊಂಡುಬಿಟ್ಟ. ಕಪ್ಪು ಚಾಳಿಸಿನೊಳಗಿಂದಲೇ ಜನರ ಗುಟ್ಟುಗಳನ್ನು ಗಮನಿಸಿದ್ದ, ದೌರ್ಬಲ್ಯಗಳನ್ನು ಪತ್ತೆಹಚ್ಚಿದ್ದ. ಅವರನ್ನು ಸಂತೋಷಗೊಳಿಸುವ ಮಾತು, ವಿಧಾನಗಳನ್ನು ಕಂಡುಕೊಂಡಿದ್ದ. ಎಲ್ಲರನ್ನೂ ದೊಡ್ಡವರೋ, ಚಿಕ್ಕವರೋ ಬಹುವಚನದಲ್ಲಿ ಮಾತಾಡಿಸುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಗುಡಸೀಕರನಿಗೆ ಗೊತ್ತಾಗದ ಒಂದು ರಹಸ್ಯ ದೌರ್ಬಲ್ಯ ಅವನಿಗೆ ತಿಳಿದಿತ್ತು! ಈ ಜನಗಳ ಜೀವಕೇಂದ್ರ ಕರಿಮಾಯಿ-ಎಂದು.
ಬಸವರಾಜೂನ ರೇಡವೇ ಜನಪ್ರಿಯವಾಗಿತ್ತು. ಹಾಗೇ ಅವನ ಉಡುಪೂ, ನಡೆನುಡಿಯೂ. ಮಾತುಗಾರ ಬೇರೆ. ಬೆಳಗಾವಿಯನ್ನು ರಸವತ್ತಾಗಿ ಕೇಳಿದವರ ಬಾಯಲ್ಲಿ ನೀರು ಸೋರುವ ಹಾಗೆ ವರ್ಣನೆ ಮಾಡುತ್ತಿದ್ದ. ಹೋಟಲಂತೆ, ತಮಾಷಾ ಅಂತೆ, ಸಿನಿಮಾ ಅಂತೆ, ಕಾಲೇಜು ಹುಡುಗಿಯರಂತೆ, ಇಂಗರೇಜಿ ಮಡ್ಡಮ್ಮಗಳಂತೆ-ಛೇ, ಛೇ ಇದನ್ನು ಕೇಳಿದ ಎಳೆಯರಿಗೆ ತಮ್ಮ ಊರು ಬೆಳಗಾವಿಯಾಗುವ ತನಕ ಕಾಯುವುದು ಅಸಾಧ್ಯವೆಂದು ತೋರಿತು. ಬರೀ ಭೂತಗಳ ಕಥೆ ಕೇಳಿದ್ದ ಜನಕ್ಕೆ ಬೆಳಗಾವಿ ಕಣ್ಣಮುಂದೆ ಥಳ ಥಳ ಹೊಳೆದಂತಾಗುತ್ತಿತ್ತು. ಹೆಚ್ಚೇನು ಆತ ತರುಣರಿಗೆ ಮಾದರಿಯಾದ. ನಿಂಗೂನಂಥ ನಿಂಗೂ ಕೂಡ ಮನಸ್ಸಿನಲ್ಲೇ ಇವನನ್ನು ಕೂಡುತ್ತಿದ್ದ.
ಬಸವರಾಜು ತನಗಾದ ವೀಡಿ ರೋಗದ ಬಗ್ಗೆ ಒಮ್ಮೆ ಮಾತಾಡಿದ. ಚತುಷ್ಟಯರು ವೀಡಿ ಅಂದರೆ ಬಹಳ ದೊಡ್ಡ ಮಂದಿಗೆ ಆಗುವ ರೋಗವೆಂದು ಬಗೆದು, “ಅಯ್ಯೋ ಆ ರೋಗ ನಮಗೆ ಬರಬಾರದೆ?” ಎಂದು ಹಳಹಳಿಸಿದರು. ಬೇಕೆಂದೇ ಕೆಮ್ಮಿ “ಯಾಕೋ ಕೆಮ್ಮುತ್ತಿ?” ಎಂದು ಯಾರಾದರೂ ಕೇಳಿದರೆ “ಹಿಂಗ, ನನಗ ಸೊಲ್ಪ ವೀಡಿ ಆಗೇತಪಾ” ಎಂದು ಸುಳ್ಳು ಸುಳ್ಳೇ ಹೇಳುತ್ತಿದ್ದರು. ಅಷ್ಟಕ್ಕೇ ಬಿಡದೆ, ಬಸವರಾಜು ಹೇಳಿದ ರೋಗಗಳನ್ನು ಎಂಟೆಂಟು ದಿನ ಅಭಿನಯಿಸುತ್ತಿದ್ದರು.
ಗುಡಸೀಕರನಂತೂ ಬಸವರಾಜುವನ್ನು ದುಡ್ಡಿನಷ್ಟೇ ಗತ್ಟೀಯಾಗಿ ನಂಬಿದ್ದ. ಆದ್ದರಿಂದ ಸಹಜವಾಗಿಯೇ ಬಸವರಾಜೂನಿಗೆ ಆ ಮನೆಯ ಬಳಕೆ ಜಾಸ್ತಿಯಾಯ್ತು. ವಾರದಲ್ಲಿ ಮೂರು ನಾಕು ಸಲ ಊಟಕ್ಕೆ ಹೋಗುತ್ತಿದ್ದ. ಮಗನ ಮೇಲಿನ ಇವನ ಪ್ರಭಾವ ನೋಡಿದ ಮುದುಕಿ “ಮದುವೆಯ ಬಗ್ಗೆ ನೀನಾದರೂ ಹೇಳಪ್ಪಾ!” ಎಂದು ಬಸವರಾಜನಿಗೇ ಹೇಳಿದಳು. ಇವನೂ ಹೇಳಿದ. ಏನೂ ಆಗಲಿಲ್ಲ. ಕೊನೆಗೆ ಹೋಗಲಿ, ಮನೆಯಲ್ಲಿ ಬೆಳೆದುನಿಂತ ತಂಗಿಯ ಮದುವೆಯನ್ನಾದರೂ ಮಾಡಲಿಕ್ಕೆ ಹೇಳಪ್ಪಾ” ಎಂದಳು.
ಅದೂ ನಿಜ. ಮದುವೆಯ ಅಗತ್ಯ ಗುಡಸೀಕರನಿಗಿಂತ ಗಿರಿಜಳಿಗೆ ಹೆಚ್ಚಾಗಿತ್ತು. ಕೊಯ್ಲಿಗೆ ಬಂದ ಫಸಲಿನಂತೆ ಬೆಳೆಯುವುದಕ್ಕೆ ಬಯಲೆನ್ನದೆ ಇಕ್ಕಟ್ಟೆನ್ನದೆ ಸಿಕ್ಕ ಸಿಕ್ಕಲ್ಲಿ ಅವಕಾಶವಾದಲ್ಲೆಲ್ಲ ನೋಡಿದವರ ಕಣ್ಣು ತುಂಬುವಂತೆ ಬೆಳೆದು ತುಂಬಿಕೊಂಡಿದ್ದಳು. ಆ ಹುಡುಗಿಗೆ ಮೊದಲೇ ಬೆಕ್ಕಿನ ಕಣ್ಣು ಬೇರೆ. ಆಕಾರದಲ್ಲಿ ಚಿಕ್ಕವು. ಅರೆದೆರೆದ ಆ ಮಾದಕ ಕಣ್ಣುಗಳಿಂದಾಗಿ ಸದಾ ಹರೆಯದ ನಶೆಯಲ್ಲಿದ್ದಂತೆ ತೋರುತ್ತಿದ್ದಳು. ಹುಡುಗರ ದೃಷ್ಟಿ ಕೂತರೂ ಸಾಕು, ಗಿಣಿ ಕೂತ ಜೋಳದ ತೆನೆಯಂತೆ ಮೈತೂಗಿ ತೂಗಿ ತುಳುಕಾಡುತ್ತಿದ್ದಳು. ಅದೆಂಥ ಹೊಸ ಹಂಬಲ ಮೈಯಲ್ಲಿ ಹುಟ್ಟಿಕೊಂಡಿತ್ತೋ, ಅಷ್ಟು ದೂರದಲ್ಲಿ ಹುಡುಗರು ಹಾದುಹೋಗುತ್ತಿದ್ದರೆ ಕಣ್ಣಿಗಿಂತ ಮುನ್ನ ಮೈಗೆ ಕಾಣಿಸಿ, ಮೈತುಂಬಾ ಮುಳ್ಳೆದ್ದು ಇಕ್ಕಟ್ಟಿನ ಆಸೆಗಳು ಒಡಮುರಿದು ಹರಿದಾಡಿ ಈ ಸಣ್ಣ ಹುಡುಗಿಯನ್ನು ನಡುಗಿಸಿ ಘಾಸಿಮಾಡುತ್ತಿದ್ದವು. ಬಸವರಾಜುವಿನ ಒಡನಾಟ ಆ ಮನೆಗೆ ಜಾಸ್ತಿಯಾಯಿತಲ್ಲ. ಸಹಜವಾಗಿಯೇ ಇವನ ಮೈಯ ಅತ್ತರೆಣ್ಣೆಯ ವಾಸನೆ ಅವಳ ಮೈ ಪುಳಕಕ್ಕೆ ಮಂದಾನಿಲದಂತೆ ಹಿತಕರವಾಗಿತ್ತು. ಇದೆಲ್ಲ ಅವಳ ಅರಿವಿಗೆ ಗೊತ್ತಿಲ್ಲದೆ ಮೈ ಕೊಬ್ಬಿಗೆ ಮಾತ್ರ ಗೊತ್ತಾಗಿ ಆದದ್ದು.
ಮೊದಲೇ ಹಾಡಲೋ ಹಾದರ ಮಾಡಲೋ ಎಂಬಂಥ ವಯಸ್ಸು. ಸ್ವಲ್ಪ ಹೆಚ್ಚಾಗಿಯೇ ನಗುತ್ತಿದ್ದಳು; ವಿನಾಕಾರಣ ಬಳುಕುತ್ತಿದ್ದಳು. ಈತ ತೋಟದ ಕಡೆ ಬಂದರೆ ಅವಳು ಬರುತ್ತಿದ್ದಳು. ಕಣ್ಣಿಂದ ತಿಳಿದವಳಂತೆ ನೋಡುತ್ತಿದ್ದಳು. ಒಂದು ದಿನ ಒಬ್ಬ ಹೆಣ್ಣಾಳನ್ನು ಕಳಿಸಿ ಇವನ ರೇಡವೇ ಇಸಿದುಕೊಂಡು ಕೇಳಿದಳು. ಬೇಟೆಗಾರನಿಗೆ ಪ್ರಾಣಿಗಳ ಸ್ವಭಾವ, ಹಂಗಾಮಿಗೆ ತಕ್ಕ ಅವುಗಳ ಚಲನವಲನ ತಿಳಿದಂತೆ ಅವನಿಗೆ ಅವಳ ಮೈಮನಸ್ಸಿನ ತುದಿಬುಡ ತಿಳಿದಿತ್ತು. ಜಾತ್ಯಾ ಬೇಡನಂತೆ ಅವನೂ ಹೊಂಚುತ್ತಿದ್ದ.
ಒಂದು ದಿನ ಮಧ್ಯಾಹ್ನ ಬಸವರಾಜು ಗುಡಸೀಕರನೊಂದಿಗೆ ಊಟಮಾಡಿ ಅವರ ಮನೆಯಲ್ಲಿಯೇ ಮಲಗಿದ್ದ. ಅಷ್ಟರಲ್ಲಿ ಎಲ್ಲಿಂದಲೋ ಮುದ್ದೆ ಮಾಡಿದ ಕಾಗದದ ಉಂಡೆಯೊಂದು ಅವನ ಮೇಲೆ ಬಿತ್ತು. ತಕ್ಷಣ ಎದ್ದುಕೂತ, ಗುಡಸೀಕರನ ಕಡೆ ನೋಡಿದ. ಅವ ಪಲ್ಲಂಗದ ಮೇಲೆ ಗೊರಕೆ ಹೊಡೆಯುತ್ತಿದ್ದ. ಮೇಲಿದ್ದವನಿಗೆ ಈ ಕೆಳಗಿನ ವ್ಯಾಪಾರ ತಿಳಿಯುವಂತೆಯೂ ಇರಲಿಲ್ಲ. ಬಸವರಾಜು ಕಳ್ಲಬೆಕ್ಕಿನಂತೆ ಸುತ್ತ ಕಣ್ಣಾಡಿಸಿದ. ಜಿನೆಯ ಮೇಲೆ ಬರೀ ಮುಖ ಮಾತ್ರ ತೋರುತ್ತ ನಿಂತಿದ್ದ ಗಿರಿಜಾ ಕಿಲಕ್ಕನೇ ನಕ್ಕು ಕೆಳಗಿಳಿದಳು. ಬೇಟೆ ಸಿಕ್ಕಿತೆಂದುಕೊಂಡ. ಕೆಳಕ್ಕಿಳಿದುಬಂದ. ಕೆಳಗೆ ಹೊರಬಾಗಿಲಲ್ಲಿ ಗಿರಿಜಾ ನಿಂತಿದ್ದಳು. ಮುದುಕಿಯಿರಲಿಲ್ಲ. “ತೋಟದ ಕಡೆ ಹೋಗ್ತೀನೀಂತ ಗುಡಸೀಕರಗ ಹೇಳ್ರಿ” ಎಂದು ಹೇಳುತ್ತ ಕಣ್ಣು ಹೊಡೆದು ನಡೆದ. ಗಿರಿಜಾಳ ಎದೆ ನಗಾರಿಯಂತೆ ಬಡಿದುಕೊಳ್ಳಲಾರಂಭಿಸಿತು.
ನಾಗರಪಂಚಮಿ ಹಬ್ಬವಾಗಿ ಹೋಗಿತ್ತು. ಚಿಗುರಲೋ ಎಲೆಬಿಡಲೋ ಎಂಬಂತೆ ಎಲ್ಲ ಕಡೆ ಹಸಿರು ಹುಚ್ಚುಚ್ಚಾಗಿ ಹಸರಿತ್ತು. ಮೈಕೈ ಭಾರವಾಗಿ ಕಣ್ಣಂಚಿನಲ್ಲಿ ಕನಸು ಕಾಣುವ ಚಿಕ್ಕ ಪ್ರಾಯದ ಎಳೆಯರಂತೆ ಭೂಮಿ ಕಾಣುತ್ತಿತ್ತು. ಒಂದೇ ಒಂದು ದೇಟು ಮುಟ್ಟುವ ಮನಸ್ಸಾಗುವುದಿಲ್ಲ ಈಗ. ಎಸಳನ್ನು ಎಷ್ಟು ಹಿಡಿದರೆ ಅಷ್ಟು ಬಾಡುತ್ತದೆ. ಹುಲ್ಲಿನ ಮೇಲೆ ಕಾಲಿಟ್ಟು ನಡೆಯಬೇಕಲ್ಲಾ ಎಂಬ ಕೊರಗು. ಬೇಲಿಯ ಮೇಲಿನ ಬಣ್ಣಬಣ್ಣದ ಹೂಗಳೆದು ಕುಣಿದಾಡುವಂತೆ ಚಿಟ್ಟೆಗಳು ಹುಟ್ಟಿ ಹಾರಾಡುತ್ತಿದ್ದವು. ಹಸರಿನ ಈ ಸಮೃದ್ಧಿಯನ್ನು ನೋಡಿದರೆ ಈಗ ಕಲ್ಲೆದೆ ಮೃದುವಾಗುತ್ತದೆ. ಮನಸ್ಸು ಬೆರಗಾಗುತ್ತದೆ. “ಛೇ ಕರಿಮಾಯಿ ದೊಡ್ಡವಳು” ಎನಿಸುತ್ತದೆ. ಒಬ್ಬ ಜನಪದ ಕವಿ ಹಾಡಿದಂತೆ ಸಾಯುವುದೇ ನಿಜವಾದರೆ ಸಾವು ಈಗಲೆ ಇಲ್ಲೇ ಬರಲಿ -ಎನಿಸುತ್ತದೆ.
ಸೊಂಟದೆತ್ತರ ಇಂಥ ಬೆಳೆ ಹಸುರಿನಲ್ಲಿ ಗಿರಿಜಾ ಹಿಂಡನಗಲಿದ ಜಿಂಕೆಯಂತೆ, ಹೆಜ್ಜೆ ಸಪ್ಪಳಕ್ಕೂ ಕಣ್ಣಗಲಿಸಿ, ಹೆದರುತ್ತ ತೋಟದ ಕಡೆ ಹೊರಟಿದ್ದಳು. ಇನ್ನೂ ಕೈ ಮಾರುಹೊತ್ತಿತ್ತು. ಹೊಲದಿಂದ ಬರುವ ದನಕರುಗಳ ಕಾಲಧೂಳಿ ಸೂರ್ಯಕಿರಣದಲ್ಲದ್ದಿ ಕರಿಮಾಯಿಯ ಬಂಡಾರೆಸೆದಂತೆ ಕಾಣುತ್ತಿತ್ತು. ಮೇದು ಬಂದು ಗೂಡು ಸೇರುತ್ತಿದ್ದ ಗುಬ್ಬಿಗಳ ಹಿಂಡು ಗಿಡಗಿಡಕ್ಕೆ ಮರ ಮರಕ್ಕೆ ಗುಂಪು ಗುಂಪಾಗಿ ಮುತ್ತಿ, ತಮ್ಮ ಸ್ಥಳವನ್ನು ಇನ್ನೊಬ್ಬರು ಆಕ್ರಮಿಸಿದ್ದಕ್ಕೋ, ಹಸರಿನ ಸಂಭ್ರಮಕ್ಕೋ ಯದ್ವಾತದ್ವಾ ಕಿರುಚುತ್ತಿದ್ದವು.
*****
ಮುಂದುವರೆಯುವುದು