ಅದೃಷ್ಟ

ಬೆಟ್ಟದ ಮೇಲೆ ಹಿಂದೆ ತಲೆಯೆತ್ತಿ ಮೆರೆದು, ಇಂದು
ಹಾಳು ಬಿದಿರಿವಂಥ ಕೋಟೆ.
ಅಲ್ಲಿದ್ದನೊಬ್ಬ ಮುದುಕ, ಅವಗೊಬ್ಬನೇ ಮಗ
ಹೇಗೊ ಸಾಗಿಸುತ್ತಿದ್ದ ಬದುಕ.

ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾಯಿತು ಅವನ
ಕುದುರೆ, ಅವನಿಗಿದ್ದಾಸರೆ.
ಬೆಟ್ಟದ ಕೆಳಗೆ ಮನೆ ಕಟ್ತಿಕೊಂಡಿದ್ದ ಮಂದಿ
ಬಂದರು,ಮರುಕ ತೋರಿದರು:
‘ಪಾಪ, ದುರ್ದೈವ’ ಎಂದು.
ನಿರ್ಲಕ್ಷ್ಯದಿಂದಿದ್ದ ಮುದುಕ ಕೇಳಿದ:
“ಹೇಗೆ ಬಲ್ಲಿರಿ ಇದು ದುರ್ದೈವ ಎಂದು?”

ದಿನಗಳುರುಳಿದವು; ಅವರಷ್ಟಕ್ಕೆ ಅವರು,ಇವನಷ್ಟಕ್ಕೆ ಇವನು.
ಖರಪುಟದ ದನಿ ಕೇಳಿ ಒಂದು ದಿನ ಹೊರಬಂದ ಮುದುಕ-
ಹೌದು, ತನ್ನದೆ ಕುದುರೆ, ಜೊತೆಗೇ ಕಾಡುಕುದುರೆಗಳ ಹಿಂಡು,
ಬಂದರೋಡೋಡಿ ಕುದುರೆಗಳ ಕೆನೆತ ಕೇಳಿ ಅದೇ ನೆರೆಹೊರೆಯ ಮಂದಿ.

ಕೈಕುಲುಕಿ ಮುದುಕನ ತಬ್ಬಿ ಉದ್ಗರಿಸಿದರು; ‘ಎಂಥಾ ಸುದೈವ!’
ಹಿಂದೆ ಕೇಳಿದ್ದನಲ್ಲ, ಅದೇ ದನಿಯಲ್ಲಿ ನುಡಿದ ಮುದುಕ:
“ಹೌದೆ? ಹೇಗೆ ಹೇಳುವಿರಿ ಇದು ಸುದೈವವೆಂದು?”
ಉತ್ತರವು ಹೊಳೆಯದೆ ಅವರು ಮರಳಿದರು ಹಿಂದಿನಂತೆ.

ಒಂದಕ್ಕಿಂತ ಒಂದು ಸುಟಿಯಾದ ಕುದುರೆ, ಯಾವುದನು
ಹತ್ತಲಿ? ಯಾವುದ ಬಿಡಲಿ? ಎಂದು ತಕತಕ ಕುಣಿದ ಮಗ.
ದಿನಕ್ಕೊಂದು ಸವಾರಿ, ಕಾಡು-ಮೇಡು ಸುತ್ತಿ ಹೊಡೆದ ಫೇರಿ.
ದಡಕ್ಕನೊಂದು ದಿನ ಥಡಿಜಾರಿ ಬಿದ್ದ ಹುಡುಗ-
ಮುರಿದು ಬಿಟ್ಟಿತು ಅವನ ಬಲಗಾಲ ಮೂಳೆ.

ಮತ್ತೆ ಬಂದರು ಜನ ಯಥಾಪ್ರಕಾರ ವಿಷಾದಪಟ್ಟು
ಮುದುಕನ ಮಗನ ದುರದೃಷ್ಟಕ್ಕೆ:
ತೋಡಿಕೊಂಡರು ತಮ್ಮ ವಾಡಿಕೆಯ ಅನುಕಂಪ
ನಿರ್ಲಿಪ್ತ ಭಾವದಲಿ ಮುದುಕನೆಂದ:
“ಹೇಗೆ ಹೇಳುವಿರಪ್ಪ ಇದು ಅವನ ದುರದೃಷ್ಟವೆಂದು?”
ಒಬ್ಬರ ಮುಖವನ್ನೊಬ್ಬರು ನೋಡಿ ಹಿಂದಿರುಗಿದರು
ಏನು ಉತ್ತರಿಸಬೇಕೆಂಬುದೇ ಹೊಳೆಯದಾಗಿ.

ಮರುವರ್ಷವೇ ಬಂತು ಭೀಕರ ಯುದ್ಧ-

ಯುವಕರಿಗೆಲ್ಲ ತುರ್ತುಕರೆ.
ಮುದುಕನ ಮಗನು ಮಾತ್ರ ಸೇರಬೇಕಾಗಲಿಲ್ಲ ಸೈನ್ಯ-
ಅವನ ಬಲಗಾಲೆ ಊನ.
(ಒಂದು ಹಳೆಯ ಚೀನೀ ದೃಷ್ಟಾಂತ ಕಥೆ)
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ