ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕ
ಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ.
ಬೆಳಗು ಮುಂಜಾವದಲಿ ಕೇಳಿಸಿದ ಹಾಡು
ಇದರದೇ ಇರಬಹುದು, ಎಲ್ಲಿದರ ಗೂಡು?
ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,
ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ.
ತಾ ನನಗು ಒಂದಿಷ್ಟು ಈ ಬೊಗಸೆಯೊಳಗೆ
ಹಗುರಾಗಿ ಹಿಡಿಯುವೆನು ಹಸುಗೂಸಿನಂತೆ.
ಹವಳದಂತಹ ಕಣ್ಣು, ಆಹಾ ಬೆಳ್ಳಿ ಚುಂಚು!
ನೋಡಿಲ್ಲಿ ಕಾಲಿನಲಿ ಉಂಗುರದ ಮಿಂಚು.
ಯಾರನೋ ಹುಡುಕಿ, ದುಡುಕಿ ಬಂದಿರಬಹುದೆ ತಂಗಿ?
ಹಾಗೆಯೇ ತೋರುವುದು ನೋಡದರ ಭಾವಭಂಗಿ.
ತಮ್ಮೊಳಗೇನೊ ಮಾತಾಡಿಕೊಳುತಿಹರಲ್ಲ ಅಪ್ಪ ಅವ್ವ?
ನಮ್ಮ ಮೂವರ ನಡುವೆ ಬೆಳುದಿಂಗಳಿನ ಟಿಂವಕ್ಕಿ ಚಕ್ಕಚವ್ವ.
ಚಂದ್ರ ಹೊರಬಂದನದೊ ಕುತೂಹಲದಿ ಮೋಡದಾಚೆಯಿಂದ
ಹಾರಿಸಿಬಿಡೋಣ, ಹೋಗಿ ಮುಟ್ಟಲಿ ಅವಗು ನಮ್ಮ ಆನಂದ.
(ಎಂ.ಜಿ.ಬಂಗ್ಲೆವಾಲೆಯವರ ವರ್ಣಚಿತ್ರದಿಂದ ಪ್ರೇರಿತ)