೧
ದಿನದಿನವು ಮೂಡಣದ ಬಾನ ಕರೆಯಂಚಿನಲಿ
ಚೆಂಬೆಳಕು ಉಬ್ಬರಂಬರಿಯುತಿಹುದು;
ನೂರು ಕಾರಂಜಿಗಳು ತೆಕ್ಕನೆಯೆ ಪುಟಿದಂತೆ
ಲೋಕಲೋಕಂಗಳನು ತೊಳೆಯುತಿಹುದು.
೨
ಬೊಗಸಗಂಗಳ ತೆರೆದು ಮೊಗೆಮೊಗೆದು ಕುಡಿದರೂ
ಈ ಪುರಾತನ ದಾಹ ತೀರದಲ್ಲಾ!
ಏನೊ ಅಸಮಾಧಾನ ಹೃದಯಾಂತರಾಳದಲಿ
ಬಾಯ್ದೆರೆದು ಹೀರುತಿರೆ ತೃಪ್ತಿಯಿಲ್ಲ.
೩
ಬಣ್ಣ ಬಣ್ಣದ ಬೆಳಕ ಕಡಲಿನೊಡಲೊಳಗಲ್ಲಿ
ಕಲ್ಲುಸಕ್ಕರೆಯಂತೆ ಕರಗಿ ಬಿಡಲೆ?
ಇಲ್ಲದಿರೆ ಎಲ್ಲವನು ಒಂದ ಬೊಗಸೆಯೊಳಾಂತು
ಆ ಅಗಸ್ತ್ಯನ ತೆರದಿ ಕುಡಿದು ಬಿಡಲೆ?
೪
ಹೊಗೆನಟ್ಟು ಹೋಗಿರುವ ಮನದ ಮನೆ ಗೋಡೆಗಳು
ಸುಣ್ಣ ಬಣ್ಣವನೆಂದು ಕಾಣಬಹುದು?-
ಇಲ್ಲಣವು ಜೋತಿರುವ ಜೇಡಬಲೆ ನೂತಿರುವ
ಬೆಳಕಿಂಡಿಯಲಿ ಬೆಳಕದೆಂತು ಬಹುದು?
೫
ಪಂಚ ಭೂತಗಳೆಲ್ಲ ಮಾನವನ ದೇಹದಲಿ
ಹೊಂಚು ಹಾಕುತ ದಾರಿ ಕಾಯುತಿಹವು;
ಕಿಂಚಿತಾದರು ಕರುಣೆ ಕೊನರೊಡೆದು ಬಾರದಿರೆ
ಈ ಪ್ರಪಂಚವೆ ಚಿತೆಯನೇರಲಿಹುದು!
೬
ಕಿಟಕಿಗಳನರೆತೆರೆದು ಕಟಕಿಯಾಡುವ ಗಾಳಿ
ಮಾಡು ನಿನ್ನಯ ದಾಳಿ ಇಂದು ಇಂದೇ!
ಜಗದೆಲ್ಲ ಪುಷ್ಪಗಳ ಪೈರುಗಳ ಪರಿಮಳದ
ಪನ್ನೀರುಗಳನೆರೆದು ಮೀಯಿಸಿಂದೇ!
೭
ಜಗವ ತುಂಬಿದ ಬೆಳಕು ನಮಗೇಕೊ ಸಾಲದಿದೆ
ಎನಿತು ಮಾನವನೆದೆಯ ಆಳ ಅಗಲ!
ಬಂದಷ್ಟು ಇಂಗುತಿದ ಮತ್ತೆ ಬರಿದಾಗುತಿದೆ
ಎಷ್ಟು ಸೆಲೆಯೊಡೆದರೂ ವಿಫಲ ವಿಫಲ!
*****